ಆಕೆ
ವಿಲಾಸಿನಿ. ದೂರ ದಿಗಂತದಿಂದ ಬರುವ ಒಂದೊಂದೇ
ಅಲೆಗಳನ್ನು ನೆಟ್ಟ ನೋಟದಿಂದ ನೋಡುತ್ತಾ ಹಾಗೆ ಕಡಲತಡಿಯ ಮರಳದಂಡೆಯಲ್ಲಿ ಕುಳಿತೇ ಇದ್ದಳು.
ಬದುಕನ್ನು ಮಹಾಶಯನೊಬ್ಬ ಸಾಗರಕ್ಕೆ ಹೋಲಿಸಿದ್ದಾನೆ. ಬಹುಶಃ ಈ ಅಲೆಗಳನ್ನು ನೋಡಿಯೇ ಇರಬೇಕು.
ಬದುಕಿನ ಏರು ಪೇರು ಅಲ್ಲೊಲ ಕಲ್ಲೋಲ, ಅಲ್ಲೊಮ್ಮೆ
ಇಲ್ಲೊಮ್ಮೆ ಶಾಂತ, ಎಲ್ಲವೂ ಅಸ್ಥಿರ. ಹೀಗೆ ಎಂದು ವಿಶ್ವಾಸದಿಂದ ಮನಸ್ಸನ್ನು
ಸ್ಥಿರವಾಗಿಸುವುದಕ್ಕೆ ಸಾಧ್ಯವಿಲ್ಲದಂತೆ ಈ ಕಡಲ
ಅಲೆಗಳು ಸಾಕ್ಷಿಯಾಗಿಬಿಡುತ್ತವೆ. ಸಮಸ್ಯೆ ಸಂಕಷ್ಟಗಳು ಕಡಲ ಅಲೆಗಳಂತೆ. ನೋಡಬಾರದೇ ದೂರದಲ್ಲಿ
ಚಿಕ್ಕದಾಗಿ ಹುಟ್ಟಿಕೊಳ್ಳುವ ಒಂದು ಸಣ್ಣ ಕಂಪನಕ್ಕೆ ಹೆದರಿ ನೀರು ಅಲೆಯಾಗಿ ಎದ್ದು ಬರುತ್ತದೆ.
ಚಿಕ್ಕದಾಗಿದೆ ಎಂದುಕೊಂಡರೆ ಅದು ಎಲ್ಲವನ್ನು ಹೊತ್ತುಕೊಂಡು ಬೃಹದಾಕಾರವಾಗಿ ಬಂದು ದಡಕ್ಕೆ
ಅಪ್ಪಳಿಸಿಬಿಡುತ್ತದೆ. ಏನು ಅಬ್ಬರ.? ಏದುಸಿರು ಬಿಡುತ್ತಾ ಇನ್ನು ತಾಳಲಾರೆ ಎಂದು ಅಬ್ಬರದಿಂದ ಬರುವಾಗ
ಪ್ರಸವ ವೇದನೆಯಂತೆ, ಈ ಕಂಪನವನ್ನು ಎಲ್ಲಿ ಅಡಗಿಸಿಬಿಡಲಿ ಎಂದುಕೊಳ್ಳುತ್ತಾ ದಡದತ್ತ
ಧಾವಂತದಿಂದ ಓಡಿ ಬಂದು ಒಮ್ಮೆಲೇ ಉಸಿರುಚೆಲ್ಲಿ ಅಬ್ಬಾ ಎಂದು ಮತ್ತೆ ಶಾಂತವಾಗಿಬಿಡುತ್ತದೆ. ಅದುವರೆಗೆ ಇದ್ದ ಎಲ್ಲ
ಉದ್ವೇಗವು ನಾಶವಾಗಿ ಸಾಕಪ್ಪ ಎನ್ನಿಸುವಂತೆ ಹೊರೆ ಇಳಿಸಿ ವಿಶ್ರಮಿಸಿದರೆ , ಅದರ ಹಿಂದೆ
ಮತ್ತೊಂದು ಏದುಸಿರು. ಇದು ನಿಲ್ಲದ ಚಕ್ರದಂತೆ.
ಬದುಕಿನಲ್ಲಿ ಸಮಸ್ಯೆಗಳು ಇದೇ ರೀತಿ. ಸಣ್ಣದಾಗಿ ಹುಟ್ಟಿ ಮತ್ತೆ ಬೃಹದಾಕಾರವಾಗಿ ಬೆಳೆದು
ಉಲ್ಭಣಿಸಿ ಪರಿಹಾರವೇ ಇಲ್ಲವೇನೋ ಎಂಬಂತೆ ಕೊನೆಗೆ ಸಮಸ್ಯೆ ಪರಿಹರಿಸಿಕೊಂಡೋ ಅಥವಾ ಪರಿಹರಿಸದೇ
ಸಮಸ್ಯೆಯೇ ಅಪ್ಯಾಯಮಾನವಾಗಿ ಮತ್ತೆ ಶಾಂತವಾದ ಅನುಭವ. ಯಾವುದೂ ಶಾಶ್ವತವಲ್ಲದ ಸ್ಥಾಯಿ ಎನಿಸದ
ವಾಸ್ತವ. ಮುಂದಿನ ಅಲೆಗಳನ್ನು ನೋಡಿ ಹಿಂದಿನ ಅಲೆ ಪಾಠ ಕಲಿಯುವುದಿಲ್ಲ. ಅದೂ ಎದ್ದು ಬಿದ್ದು ಓಡಿ
ಬರುತ್ತದೆ.
ಕಡಲ
ಅಲೆಗಳಂತೆ ನಮ್ಮ ಹೆಜ್ಜೆಗಳು. ಮುಂದಿಟ್ಟ ಪಾದವನ್ನು ಹಿಂದಿದ್ದ ಪಾದ ಕಾಣುವುದಿಲ್ಲ. ಮುಂದಿಟ್ಟ
ಹೆಚ್ಜೆ ಜಾರಿ ಸಮತೋಲನ ತಪ್ಪಿದರೆ ಹಿಂದಿನದ್ದೂ ಮುಗ್ಗರಿಸಿ ಬಿಡುತ್ತದೆ. ಆದರೂ ಮುಂದಿನದ್ದು ಮುಂದೆ ಉಂಟಲ್ಲಾ ಎಂದು ತಾನೂ ಮುಂದೆ
ಬಂದು ಬಿಡುತ್ತದೆ. ಅಷ್ಟರಲ್ಲಿ ಜಾರಿಯೋ ಮುಗ್ಗರಿಸಿಯೋ ನಂತರ ಸಾವರಿಸಿ ಬದುಕಂತೂ ಮುಂದೆ ಹೋಗಲೇ
ಬೇಕು.
ಇನ್ನೇನು
ಬೆಳಕು ಕಡಿಮೆಯಾಗುತ್ತಾ ಬಂತು. ಅದುವರೆಗೆ ಅಲ್ಲಿ ಇಲ್ಲಿ ಕಲರವ ಎಬ್ಬಿಸುತ್ತಿದ್ದ ಮಕ್ಕಳೂ ವೃದ್ದರು
ಒಬ್ಬೊಬ್ಬರಾಗಿ ಎದ್ದು ಹೋದರೆ. ದೂರದಲ್ಲಿ ಒಂದಷ್ಟು ಮರೆಯಾಗುವಂತೆ ಗಂಡು ಹೆಣ್ಣು ಜತೆಯೊಂದು ಇನ್ನೂ ಕುಳಿತಿತ್ತು. ಎಲ್ಲರೂ
ಹೋಗಿಬಿಟ್ಟರಲ್ಲಾ ಎಂದು ಅವರು ನಿರಾಳರಾಗಿರಬೇಕು. ಮಾತ್ರವಲ್ಲ ಸೂರ್ಯನು ಇನ್ನು ನೋಡಲಾರೆ ಎಂದು
ಕಣ್ಣು ಮುಚ್ಚುವಂತೆ ದೂರದಲ್ಲಿ ಮುಳುಗುತ್ತಿದ್ದ. ಅವರು ಇನ್ನೂ ಕುಳಿತೇ ಇದ್ದರು. ಅವರು ಏನು
ಮಾಡಬಹುದು? ಆಕೆಯಲ್ಲಿ ಯಾವ ಕುತೂಹಲವು ಉಳಿದಿಲ್ಲ. ಯಾಕೆಂದರೆ ಆಕೆಗೂ ಈ ತೆರೆಮರೆಯ
ಪ್ರಣಯದ ಅನುಭವವಾಗಿತ್ತು. ಇದೇ ಕಡಲ ತಡಿಯಲ್ಲಿ ಅದೆಷ್ಟು ಸಂಜೆಗಳನ್ನು ಕಳೆದಿಲ್ಲ?ಹುಣ್ಣಿಮೆಯ
ಬೆಳದಿಂಗಳನ್ನು ಕಡಲ ಅಬ್ಭರವನ್ನೂ ಕಂಡಿಲ್ಲ?
ಎಲ್ಲವೂ ಹೀಗೆ ಎಂದು ತಿಳಿಯುವಾಗ ಬದುಕು ಇದೇ ಕಡಲಿನಂತೆ ಅಲ್ಲೋಲ ಕಲ್ಲೋಲ ವಾಗಿತ್ತು.
ಮುಂದೇನು?
ಮನಸ್ಸು
ನಿರಾಳವಾಗಲಿ ಎಂದು ಇಲ್ಲಿ ಬಂದು ಕುಳಿತಿದ್ದಳು. ಆದರೆ ನಿರಾಳತೆ ಎಲ್ಲಿ? ಅದೂ ನಿತ್ಯ ಪ್ರಕ್ಷುಬ್ದವಾಗುವ ಕಡಲಿನ ಮುಂದೆ. ಹಾಗೇ ಕತ್ತಲಾವರಿಸುತ್ತಿದ್ದಂತೆ ಕಾರಿನ ಚಾಲಕ ಹತ್ತಿರ
ಬಂದು ಸಣ್ಣದಾಗಿ ಖೆಮ್ಮಿದ. ಇನ್ನು ಮನೆಯಕಡೆ ಹೋಗಬೇಕು. ಹಾಗೇ ಎದ್ದು ಕಡಲ ತಡಿಯಿಂದ
ದೂರದಲ್ಲಿರುವ ರಸ್ತೆಯಲ್ಲಿ ಕಾರು ನಿಲ್ಲಿಸಿದ ಕಡೆಗೆ ಹೆಜ್ಜೆ ಹಾಕಿದಳು. ನಾಳೆ ನ್ಯಾಯಾಲಯಕ್ಕೆ
ಹೋಗಬೇಕು. ಅದೇ ಕುಟುಂಬ ನ್ಯಾಯಾಲಯ. ಮೂವತ್ತು ವರ್ಷಗಳ ಹಿಂದೆ ಅದೇ ನ್ಯಾಯಾಲಯದ ಮೆಟ್ಟಲು
ಹತ್ತಿದ್ದಳು. ಇಂದು ಮತ್ತದೇ ಮಟ್ಟಲು ತುಳಿಯಬೇಕು. ವೆತ್ಯಾಸ ಇಷ್ಟೇ, ಅಂದು ಈಕೆ ದೂರು
ಕೊಟ್ಟಿದ್ದರೆ....ಇಂದು ಈಕೆ ಎದುರು ಕಕ್ಷಿಯಾಗಿ ಅರ್ಥಾತ್ ಅಪರಾಧಿಣಿಯಂತೆ ಹೋಗಿ ನಿಲ್ಲಬೇಕು.
ಮರೆತು ಬಿಡಬೇಕು ಎಂಬಂಥಹ ಆ ದಿನಗಳು, ಆ ಘಟನೆಗಳು ತಾನು
ಮರೆಯಲಿಲ್ಲ ಎಂಬುದಕ್ಕೆ ಸಾಕ್ಷಿ ಎಂಬಂತೆ ಆ ಕಥೆಗಳು ಮತ್ತೆ ನೆನಪಾಗತೊಡಗಿದೆ. ಅದೂ ಒಂದೂ
ಘಟನೆಯನ್ನು ಬಿಡದೆ. ಗೆಲುವು ಸೋಲು ಅದು ನಿರ್ಣಯವಾಗುವುದು ಅದು ನಡೆದ ಕ್ಷಣದಲ್ಲಿ ಅಲ್ಲ,
ತಾವೆಷ್ಟು
ಗೆದ್ದಿದ್ದೇವೆ, ತಾವೆಷ್ಟು ಸೋತಿದ್ದೇವೆ ಎಂದು ಅರಿವಾಗುವಾಗ ಕಾಲ ಬಹಳಷ್ಟು ಸರಿದು
ಹೋಗುತ್ತವೆ. ಗೆಲುವಿನ ನಗೆಯಲ್ಲೂ ಸೋಲು ಇರುತ್ತದೆ ಎಂಬುದು ಗೆಲ್ಲುವಾಗ ಅರಿವಿಗೆ ಬರುವುದಿಲ್ಲ.
ಸರಿ
ಸುಮಾರು ಕಾಲು ಶತಮಾನದ ಹಿಂದೆ ಅಂದರೆ ಮೂವತ್ತು ವರ್ಷಗಳು ಕಳೆಯಿತು, ಕುಟುಂಬ ನ್ಯಾಯಾಲಯದ ಜಗಲಿಯ
ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದ ದಿನಗಳು ಈಗಲೂ ಮರೆಯದೆ ಕಾಡುತ್ತಿದೆ. ಎಲ್ಲವನ್ನು ಮರೆತು
ಬಿಡಬೇಕು ಅಂತ ಬಗೆದರೂ ಅದನ್ನು ಮರೆಯುವುದು ಸಾಧ್ಯವಾಗಲಿಲ್ಲ. ಈಗ ಅದೇ ದಿನಗಳು ಮರುಕಳಿಸಿದಂತೆ ಆ
ದಿನಗಳು ಮತ್ತೆ ಬಂದು ಕಳೆದು ಹೋದ ಕಾಲ ಮತ್ತೆ
ಬಂದು ಕೆಣಕುತ್ತಿದೆ.
ಮೂವತ್ತು
ವರ್ಷಗಳ ಹಿಂದೆ ವಿಲಾಸಿನಿ ಹದಿ ಹರಯದ ಹಲವು ಕನಸುಗಳನ್ನು ಕಟ್ಟಿಕೊಂಡ ತರುಣಿಯಾಗಿದ್ದಳು. ವಯೋ
ಸಹಜ ಎಂಬಂತೆ ತನ್ನ ಇಷ್ಟವನ್ನು ಮಾತ್ರ ಯೋಚಿಸುತ್ತಾ ಅದನ್ನೇ ಸ್ವರ್ಗ ಸುಖವೆಂಬ ಕಲ್ಪನೆಯಲ್ಲಿ ಆ
ಕನಸುಗಳನ್ನು ಕಟ್ಟಿಕೊಂಡಿದ್ದಳು. ಕನಸುಗಳು ಇಷ್ಟಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತವೆ ಎಂದು
ಅರಿವಿಲ್ಲ. ಆದರೂ ತಮ್ಮ ಇಷ್ಟಗಳು ತಮ್ಮ ಆಸ್ತಿ ಎಂಬಂತೆ ವರ್ತಿಸುತ್ತಾರೆ. ಮದುವೆ ಮೊದಲು ಪರಸ್ಪರ
ಇಷ್ಟಗಳನ್ನು ಹೊಂದಿಸಿ ನೋಡುವುದರಲ್ಲೇ ಆಯ್ಕೆ
ಅವಲಂಬಿಸಿರುತ್ತದೆ. ಗಂಡು ಹೆಣ್ಣು ಪರಸ್ಪರ ಆಶೆಗಳು ಇಷ್ಟಗಳು ಹೊಂದಾಣಿಕೆಯಾಗಿ ಸಮಾನ ಅಭಿರುಚಿ ಇದ್ದರೆ ಆ ಬದುಕು ಸ್ವರ್ಗ ಎಂದು ತಿಳಿದಿರುತ್ತಾರೆ. ಬದುಕು
ಹೊಂದಿಕೊಂಡು ಹೋಗಬಹುದು, ತಮ್ಮದೇ ಇಷ್ಟದ ಸಂಗಾತಿ ಸಿಕ್ಕಿದರೆ ಅದೇ ಭಾಗ್ಯ ಎಂದು
ತಿಳಿದುಬಿಡುತ್ತಾರೆ. ಸಮಯ ಕಳೆದಂತೆ ಆಶೆಗಳು
ಇಷ್ಟಗಳು ಎಲ್ಲವೂ ಹಾಗೇ ಉಳಿದರೂ ಪರಿಸ್ಥಿತಿ ಮಾತ್ರ ಬದಲಾಗಿರುತ್ತದೆ. ಕ್ರಮೇಣ ಅವುಗಳೂ ಬದಲಾಗಿ
ಬಿಡುತ್ತದೆ. ಒಂದು ಕಾಲದ ನಮ್ಮ ಬಯಕೆಗಳು ಹೀಗೂ ಇತ್ತಾ ಎಂಬಷ್ಟರ ಮಟ್ಟಿಗೆ ಮನೋಭಾವ ಬದಲಾಗುವಾಗ
ಇಲ್ಲಿ ಸಮಾನ ಅಭಿರುಚಿಗೆ ಪ್ರಾಶಸ್ತ್ಯ ಎಲ್ಲಿರುತ್ತದೆ? ಹುಟ್ಟಿದ ಶಿಶುವಿಗೆ
ಬಾಲ್ಯದಲ್ಲಿದ್ದ ಅಭಿರುಚಿ ಯೌವನದಲ್ಲಿರುವುದಿಲ್ಲ. ಅಭಿರುಚಿ ಇಷ್ಟಗಳು ಒಂದೇ ಆಗಿದ್ದರೆ ಸಾಲದು,
ಮನಸ್ಸುಗಳು
ಒಂದಾಗಬೇಕು. ವಿಭಿನ್ನ ಅಭಿರುಚಿಗಳೂ ಜತೆಯಾಗುತ್ತವೆ, ಮುಕ್ತ ಮನೋಭಾವದಿಂದ ಅವುಗಳು
ಗೌರವಿಸಲ್ಪಟ್ಟಾಗ. ಅಭಿರುಚಿ ಒಂದೇ ಆಗಿದ್ದರೇನೆಂತೆ ಮನಸ್ಸು ಮನಸ್ಸಿನ ನಡುವೆ ಕಂದಕವಿದ್ದರೆ
ಆ ಅಭಿರುಚಿಗಳು ಎಂದಿಗೂ ಸೇತುವೆಯಾಗಲಾರದು.
ಇದೇ
ಸಮಾನ ಅಭಿರುಚಿಯ ಚಿಂತನೆಯಲ್ಲಿ ಆಕೆಗೆ ಒಬ್ಬ ಯುವಕ ಇಷ್ಟವಾದ. ಆತನಿಗೂ ಹಾಗೆ. ಇಬ್ಬರೂ
ಪ್ರೇಮಿಸಿದರು. ಎಲ್ಲ ಅಭಿರುಚಿಯನ್ನು ನೋಡಿ ಪ್ರೇಮ ಹುಟ್ಟಿಕೊಂಡರೂ ವಾಸ್ತವದಲ್ಲಿ ಪ್ರೇಮಕ್ಕೆ
ಕಣ್ಣಿರುವುದಿಲ್ಲ! ಕಣ್ಣಿದ್ದರೂ ಅದರ ದೃಷ್ಟಿ
ಮಂಕಾಗಿರುತ್ತದೆ. ತೀರ ಅನಿವಾರ್ಯಗಳು ಆ ಕಣ್ಣಿಗೆ
ಕಾಣಿಸುವುದಿಲ್ಲ. ಒಂದೆರಡು ವರ್ಷ ಅದೇ
ಪ್ರೇಮದಲ್ಲಿ ಇರುವಾಗ ಮನೆಯಲ್ಲಿ ಆಕೆಯ ಮದುವೆ ತೀರ್ಮಾನಿಸಲ್ಪಟ್ಟಿತು. ಈಕೆಯೂ ಮನೆಯಲ್ಲಿ ತನ್ನ
ಪ್ರೇಮವನ್ನು ಭಿನ್ನವಿಸುವ ಧೈರ್ಯವನ್ನು ತೋರಲಿಲ್ಲ. ಒಂದೆರಡು ವರ್ಷಗಳ ಹಿತವಾದ ಅನುಭವಗಳು ಅಷ್ಟೇ
ಸಾಕು ಎಂಬ ತೀರ್ಮಾನಕ್ಕೆ ಬಂದಳೋ? ಇಲ್ಲ
ಮನೆಯವರನ್ನು ಎದುರು ಹಾಕಿಕೊಳ್ಳುವ ಧರ್ಯವನ್ನು ತೋರದಾದಳೋ? ಅಂತೂ ಹಿರಿಯರು ತೋರಿಸಿದ ಗಂಡನ್ನು ಒಪ್ಪಿಕೊಂಡಳು. ಪ್ರೇಮ ಇನ್ನು
ನೆನಪಿನಲ್ಲೂ ಇರಬಾರದು ಎಂದು ತೀರ್ಮಾನಿಸಿಕೊಂಡರೂ....ಆ ಪ್ರೇಮ ಸುಪ್ತವಾಗಿತ್ತು ಎಂದು
ತಿಳಿಯುವುದಕ್ಕೆ ಸಮಯ ಬಹಳ ಬೇಕಾಯಿತು.
ಆಕೆಯನ್ನು
ಮದುವೆಯಾದ ಆತ ವೃತ್ತಿಯಲ್ಲಿ ವಕೀಲ. ಅಭಿಚಿತ್ ವಿನಯ ಮೂರ್ತಿ ಎಂಬ ಆಕರ್ಷಕವಾದ ಉದ್ದ ಹೆಸರು.
ಆತ ಆಗಷ್ಟೆ ಕಾನೂನು ಪದವಿ ಮುಗಿಸಿ ಯಾರ ಜತೆಯಲ್ಲೋ ವಕೀಲಿ ವೃತ್ತಿಯನ್ನು ನಡೆಸುತ್ತಿದ್ದ. ಆತನೇ ಹೇಳುವಂತೆ ಬಹಳ ಕಷ್ಟ ಪಟ್ಟು ಮುಂದೆ ಬಂದಿದ್ದ.
ಬಡತನದಲ್ಲೇ ಈತನನ್ನು ಬೆಳೆಸಿದ ಅಪ್ಪ ಅಮ್ಮ ಸಹೋದರ ಹೀಗೆ ಮಿತವಾದ ಕುಟುಂಬ. ಮದುವೆ ಕಳೆದು
ಒಂದೆರಡು ದಿನಗಳು ಅದೇ ಗಲಾಟೆಯಲ್ಲಿ ಕಳೆದು ಹೋಯಿತು. ಮತ್ತೆ ದಿನಚರಿ ಆರಂಭವಾಗಿ ನಿಜ ಜೀವನ
ಆರಂಭವಾಗುವಾಗ ಈಕೆಗೆ ಮರೆತು ಬಿಡಬೇಕು ಎಂದಿದ್ದ ಆ
ಹಳೆಯ ಪ್ರೇಮ ತನ್ನಲ್ಲಿನ್ನೂ
ಸುಪ್ತವಾಗಿದೆ ಎಂದು ಅರಿವಿಗೆ ಬಂದದ್ದು.
ಪ್ರತಿಯೊಂದರಲ್ಲೂ ತನ್ನ ಅಭಿರುಚಿಯ ಹೊಂದಾಣಿಕೆಯನ್ನು ತನ್ನ ಗಂಡನಲ್ಲಿ ಹುಡುಕಿದಳು. ಆ
ಅಭಿರುಚಿಯ ಹುಡುಕಾಟದಲ್ಲಿ ಆತನ ಮನಸ್ಸನ್ನು ಅರಿಯುವ ಗೊಡವೆಗೆ ಹೋಗಲಿಲ್ಲ. ಮಾತ್ರವಲ್ಲ ಅದು
ಆಕೆಗೆ ಬೇಕಾಗೂ ಇರಲಿಲ್ಲ. ಅನಿವಾರ್ಯತೆಗೆ ಈತನೊಡನೆ ಬದುಕಬೇಕಲ್ಲಾ ಎಂಬ ಒಂದೇ ಚಿಂತೆ ಗಾಢವಾಗುತ್ತಿತ್ತು. ಗಂಡನಿಗೆ
ತಿನ್ನಲಾಗದ ತುತ್ತನ್ನು ಬಲವಾಗಿ ಬಾಯಿಗೆ ತುರುಕಿದಂತೆ ಆಕೆಯ ವರ್ತನೆ. ಆತನಿಗೆ ಮೊದಲಿಗೆ ಅದು
ಅರಿವಿಗೆ ಬರಲಿಲ್ಲ. ಆದರೆ ಕ್ರಮೇಣ ಆತನಿಗೆ ರುಚಿಯಿಲ್ಲದ ತಿನಿಸು ಬಲವಂತದಲ್ಲಿ ಗಂಟಲಲ್ಲಿ
ಇಳಿಸಿದ ಅನುಭವವಾಗತೊಡಗಿತು. ಸಹಜವಾಗಿ ಇಳಿಯದ
ತುತ್ತು ಕೈಯಲ್ಲೇ ಉಳಿಯಿತು. ಆತನ ಕೌಟುಂಬಿಕ ಸ್ಥಿತಿ ಆ ಸುಖದ ಒಂದು ಮುಖವನ್ನು ಕಾಣದಂತೆ
ಮಾಡಿತ್ತು. ಕಷ್ಟದಲ್ಲಿ ಕೌಟುಂಬಿಕ ನೆಲೆಯನ್ನು ಕಟ್ಟಿ ಅದರ ನೆರಳಲ್ಲೇ ಅನಾಥತ್ವವನ್ನು
ಕಳೆಯುವವರಿಗೆ ಕಟ್ಟಿಕೊಂಡ ಬದುಕಿನ ಬಗ್ಗೆ ಅಗಾಧವಾದ ಅಭಿಮಾನವಿರುತ್ತದೆ. ಆತ್ಮಾಭಿಮಾನ, ತಾತ್ವಿಕ
ಚಿಂತನೆಗಳು, ಬಡತನದ ಜತೆಯಲ್ಲೇ ಹುಟ್ಟಿಕೊಳ್ಳುತ್ತವೆ. ಅಂತಹ ಸನ್ನಿವೇಶದಲ್ಲಿ ಕಟ್ಟಿಕೊಂಡ ಕೌಟುಂಬಿಕ
ಸೌಧವನ್ನು ಕುಸಿಯದಂತೆ ನೋಡಿಕೊಳ್ಳುವುದೇ ಅವರ ಪರಮ ಧ್ಯೇಯವಾಗಿರುತ್ತದೆ. ಹಾಗಾಗಿ ಉಳಿದ ಬಯಕೆಗಳು
ಕ್ಷುಲ್ಲಕವಾಗಿ ಕಂಡು ಅದರ ಬಗ್ಗೆ
ಯೋಚಿಸುವುದಕ್ಕಿಂತ ಕಟ್ಟಿದ ಬದುಕಿನ ಬಗ್ಗೆ
ಯೋಚಿಸಿದ. ಆದರೆ ಎಲ್ಲವೂ ವ್ಯವಸ್ಥಿತವಾಗಿ ಮುಂದುವರೆಯುವುದಿದ್ದರೆ ಅದು ಬದುಕಾಗಿ
ಉಳಿಯುವುದಿಲ್ಲ. ಶಿಸ್ತು ಬದ್ದ ಜೀವನಕ್ಕೆ
ಪ್ರತಿಕೂಲ ಪರಿಸ್ಥಿತಿಗಳು ಹೆಚ್ಚು ಒದಗಿಬರುತ್ತವೆ. ನಿಯಮಗಳು ಯಾವಾಗಲೂ ಸವಾಲುಗಳನ್ನು
ಎದುರಿಸುತ್ತವೆ. ಇದೆಲ್ಲ ಆಕೆ ಗಮನಿಸಿದರೂ ಆಕೆಗೆ ತನ್ನ ಮಹತ್ವಾಕಾಂಕ್ಷೆಯ ಸೌಧ ಕುಸಿದದ್ದು
ಹತಾಶೆಯನ್ನು ಸೃಷ್ಟಿಸಿತ್ತು.
ವಿನಯ
ಮೂರ್ತಿಯದ್ದು ಪುಟ್ಟ ಸಂಸಾರ. ತಂದೆ ತಾಯಿ ತಂಗಿ ಹೀಗೆ ಪುಟ್ಟ ಬಳಗ. ಆದರೂ ಆಕೆಗೆ ಅದು ಉಸಿರನ್ನು
ಬಿಗಿಹಿಡಿವಂತೆ ಮಾಡಿತ್ತು. ವಿನಯ ಮೂರ್ತಿಯದ್ದು ಉಲ್ಲೇಖಿಸಬಲ್ಲ ಕೆಟ್ಟ ಗುಣ ಒಂದೂ ಇರಲಿಲ್ಲ.
ನಗುತ್ತಾ ಸಂಸಾರದಲ್ಲಿ ಬೆರೆಯುತ್ತಿದ್ದ. ಸಹನೆ ಸದ್ಗುಣ ಸನ್ಮನಸ್ಸು ಸಹೃದಯತೆ ಎಲ್ಲವೂ ಇದ್ದರೂ
ಆಕೆ ಮಾತ್ರ ಶಿಲುಬೆಯನ್ನು ಕಂಡ ಪ್ರೇತಾತ್ಮದಂತೆ
ಸದಾ ತುಮುಲವನ್ನು ಅನುಭವಿಸುತ್ತಿದ್ದಳು. ಸನ್ಮನಸ್ಸು ಸದ್ಗುಣ ಸತ್ವಹೀನವಾಗಿ ಪ್ರತಿಕೂಲವೆಂಬಂತೆ
ಭಾಸವಾದಾಗ ಆ ಒಂದು ದಿನ ಎಲ್ಲವನ್ನೂ ಕಳಚಿ ಮನೆಯಿಂದ ಹೊರ ನಡೆದಳು. ಇಷ್ಟೆಲ್ಲ ನಿರಾಶೆಗಳ ನಡುವೆ
ಆಕೆ ತವರಿಗೆ ಬಂದಿದ್ದಳು. ಹೊರಡುವಾಗ ಅತ್ತೆ ಮಾವನ ಪಾದ ಮುಟ್ಟಿ ನಮಸ್ಕರಿಸಿದಳು. ಕೊನೆಯಲ್ಲಿ
ಈತನ ಕಾಲೂ ಹಿಡಿದಾಗ ಅಭಿಜಿತ್ ವಿನಯ ಮೂರ್ತಿ ಭಾವುಕನಾದ. ಹೊರಟು ನಿಂತ ಅವಳ ಮೇಲೆ ಹಲವು
ನಿರೀಕ್ಷೆಗಳು ಹುಟ್ಟಿಕೊಂಡವು. ದೂರದ ತವರಿಗೆ ಹೋಗುವುದಕ್ಕೆ, ಈತನ ಕಾರಲ್ಲಿ ಕರೆದುಕೊಂಡು ರೈಲು ನಿಲ್ದಾಣಕ್ಕೆ ತಂದು ಬಿಟ್ಟು ರೈಲು
ಹತ್ತಿಸಿ ಬೀಳ್ಕೊಟ್ಟ. ಯಾಕೋ ರೈಲು ಹೊರಟಾಗ ಅತ ನೋಡಿದ ನೋಟ ಇಂದಿಗೂ ಮರೆಯುವುದಕ್ಕಿಲ್ಲ.
ಮನಸ್ಸಿನ ನಿರೀಕ್ಷೆಗಳು ಕಣ್ಣಲ್ಲಿ ವ್ಯಕ್ತವಾಗುತ್ತಿತ್ತು. ಆದರೆ ಆಕೆ ಹಿಂದಿರುಗಿ ಬರುವುದಿಲ್ಲ ಎಂಬುದು ಕೇವಲ
ಆಕೆಯ ನಿರ್ಧಾರವಾಗಿತ್ತು. ಮತ್ತದು ಯಾರಿಗೂ ತಿಳಿದಿರಲಿಲ್ಲ. ಯಾರಲ್ಲಿ ಏನೂ ಹೇಳಲಿಲ್ಲ. ತವರು ಮನೆಯಲ್ಲಿ ಕೆಲವು ದಿನ
ಕಳೆದಳು ಅಷ್ಟೆ. ನಿತ್ಯ ನೋಡುತ್ತಿದ್ದ ಅಮ್ಮನಿಗೆ ತಿಳಿಯದೇ ಇರುವುದಿಲ್ಲ. ಕೊನೆಗೊಮ್ಮೆ ಹೇಳಿದಳು
ತಾನಿನ್ನು ಗಂಡನ ಮನೆಗೆ ಹೋಗುವುದಿಲ್ಲ.
ದಿನ
ಕಳೆದು ವಾರವಾಯಿತು, ಆಕೆಗೆ ಇನ್ನು ಆತನ ಬಳಿಗೆ ಹೋಗಬೇಕು ಎಂದನಿಸಲಿಲ್ಲ. ಪ್ರತಿಕ್ಷಣವೂ ವಂಚಿಸುತ್ತಾ ವಂಚಕಿಯಾಗಿ ಬದುಕಬೇಕು.
ಅದಕ್ಕೆ ಹಿಡಿವ ಹಾದಿ ವಂಚನೆಯ ಹಾದಿ. ಈತನೇ
ಕೊನೆಗೊಮ್ಮೆ ಕರೆ ಮಾಡಿದ. ಒಂದೆರಡು ಪ್ರಯತ್ನದ ನಂತರ ಆಕೆ ಮಾತನಾಡಿದಳು, ಅದೂ ಹಕ್ಕಿ ಕಾಳು
ಹೆಕ್ಕಿದಂತೆ...ಒಂದೆರಡು ಮಾತು. ಮಾತಾದರೂ ಯಾಕೆ ಬೇಕು? ಯಾರಿಗಾಗಿಯೋ ಮಾತನಾಡುವ ಮಾತು
ಅದು ಹೃದಯದ ಮಾತು ಆಗಲು ಸಾಧ್ಯವಿಲ್ಲ. ಮನೆಯಲ್ಲಿ
ಸದಾ ಒತ್ತಡ. ಆಕೆ ಯಾಕೆ ಗಂಡನಿಂದ ದೂರಾದಳು ಎಂಬ ಪ್ರಶ್ನೆಗಳು. ಕೊನೆಗೊಮ್ಮೆ, ಇಷ್ಟವಿಲ್ಲ ಎಂದು
ಬಿಟ್ಟಳು. ಹೆತ್ತವರಿಗೆ ಸಮಸ್ಯೆಯಾದಾಗ
ಹಲವರದ್ದು ಹತ್ತು ಚಿಂತನೆಗಳು. ಈಕೆಯದ್ದು ತಪ್ಪಿರಲಾರದು ಎಂದು ಊಹೆ ಕಲ್ಪನೆಯಲ್ಲೇ ಈಕೆಗೆ
ಇನ್ನೇನು ಗತಿ? ಆಗ ಆಕೆಯ ಸಂಭಂಧಿಯೊಬ್ಬನಿಗೆ
ಹೊಳೆದ ಉಪಾಯ. ಹೇಗಿದ್ದರೂ ಕೈಯಲ್ಲಿದ್ದ ಎಣ್ಣೆಯ ಪಾತ್ರೆ ಜಾರಿ ನೆಲದಲ್ಲಿ ಬಿದ್ದು
ಚೆಲ್ಲಿದಾಗ ಕೈಗೆ ಸಿಕ್ಕಷ್ಟು ಬಾಚಿಕೊಂಡು ಅದೇ ಲಾಭ ಎನ್ನುವಂತೆ, ಒಬ್ಬನೆಂದ ಕೇಸ್ ಹಾಕಿದರೆ ಒಂದಷ್ಟು ಪರಿಹಾರ ಲಾಭ ಮಾಡಿಕೊಳ್ಳಬಹುದು.
ಆಕೆಗಂತೂ ಅಲ್ಲಿಗೆ ಹೋಗದೇ ಉಳಿಯಬೇಕು ಅಷ್ಟಾದರೆ ಸಾಕು ಎಂಬ ಒಂದೇ ಯೋಚನೆ. ಆದರೆ ಕಾನೂನು ಎಂಬುದು ಮಹಿಳೆಯ ಪರವಾಗಿಯೇ ಇರುವುದು
ಆತನ ಅನುಭವ. ಅದೇ ರೀತಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದರು.
ನಮಗೆ
ಎಲ್ಲವೂ ಅವರೇ ಆಗಬೇಕೆಂದು ಬಯಸುತ್ತೇವೆ. ಆದರೆ ಅದರಲ್ಲಿ ಕೆಲವಾದರೂ ಆದರೆ ಸಾಕು ಅನ್ನಿಸುವುದು
ಸಾಂತ್ವಾನವಾಗಬಹುದು, ಆದರೆ ಎಲ್ಲವೂ ಎಂಬುದರಲ್ಲಿ ಏನೂ ಅಲ್ಲದಾಗವುದು ಹತಾಶೆಗೆ
ಕಾರಣವಾಗುತ್ತದೆ. ಆಕೆಯ ಪಾಲಿಗೆ ಅದೇ ಆಗಿ ಹೋಯಿತು. ಕೆಲವು ಸಹ ಆಗದೇ ಬದುಕು ಇಷ್ಟೆಯೇ ಎಂದು
ಹತಾಶೆಗೆ ಮೂಲವಾಗಿತ್ತು. ಆಕೆಯ ಹತಾಶೆಗೆ ಆತ
ಯಾವರೀತಿಯಲ್ಲೂ ಕಾರಣನಲ್ಲ. ಆದರೆ ಆತನೆ ಕಾರಣನಾಗಿ ಕಾಣುವುದು ದುರ್ದೈವ. ಈಕೆಯ ಮನಸ್ಸಿನ
ಅತೃಪ್ತಿಗೆ ಆತ ಕಾರಣ ಹೇಗಾಗುತ್ತಾನೆ? ಆದರೆ ಹೊರಜಗತ್ತಿಗೆ ಆತನೇ ಕಾರಣೀಭೂತನಾಗುವುದು ವಿಪರ್ಯಾಸ. ಪರಿಣಾಮ
ಅದೊಂದು ದಿನ ಆಕೆಯ ಊರಿನ ಪೋಲೀಸ್ ಠಾಣೆಯಿಂದ ಕರೆ ಬಂತು. ವಿಚಾರಣೆಗೆ ಬರುವಂತೆ ಕರೆ ಮಾಡಿದ್ದರು.
ಯಾಕೋ ಅದು ವರೆಗೂ ಬಿಗಿಯಾಗಿ ಹಿಡಿದುಕೊಂಡ ಹಗ್ಗ ತುಂಡಾದ ಅನುಭವ. ಸ್ವತಃ ವಕೀಲನಾದ ಆತನಿಗೆ ಗೊತ್ತು, ವಿಚಾರಣೆ ಎಂದರೆ
ಅದು ವಶಕ್ಕೆ ಪಡೆದಂತೆ. ಇಂತಹ ಸಮಯದಲ್ಲಿ ಸಹೋದ್ಯೋಗಿ ಸಹಾಯಕ್ಕೆ ಬಂದ. ಆತನ ಸ್ನೇಹಿತ ಅದೇ
ಊರಲ್ಲಿದ್ದ. ಆತನನ್ನು ಕರೆದುಕೊಂಡು ಠಾಣೆಗೆ ಹಾಜರಾದರೆ, ಪೋಲಿಸ್ ಇನ್ಸ್
ಪೆಕ್ಟರ್..." ಎನ್ರಿ ವಕೀಲ್ ಸಾಹೆಬರೆ, ನಿಮಗೂ ವಕೀಲರು ಬೇಕಾ? " ಅಂತ ವ್ಯಂಗವಾಡಿದ. ಮಿತ್ರ ಯಾರಿಂದಲೋ ಕರೆ ಮಾಡಿಸಿ ಅಂತೂ ಎರೆಸ್ಟ್
ಒಂದು ಆಗಲಿಲ್ಲ ಎಂಬುದಷ್ಟೇ ಸಮಾಧಾನ. ಇನ್ಸ್ ಪೆಕ್ಟರ್ ದೊಡ್ಡ ಉದಾರ ತೋರಿದಂತೆ, "ನಮ್ಮದೇನು
ಆಕ್ಷೇಪ ಇಲ್ಲ, ಹಿರಾಸ್ಮೆಂಟ್ ಡೌರಿ ಕೇಸ್...ಇನ್ನೂ ಕೇಸ್ ಬುಕ್ ಮಾಡಿಲ್ಲ. ನೀವೇ
ರಾಜಿ ಮಾಡಿಕೊಂಡು ಹೋಗಿ, ಒಟ್ಟಿನಲ್ಲಿ ಚೆನ್ನಾಗಿರಬೇಕು. " ಆತನ ಉದಾರತೆಗೆ ಕಾರಣ ಅದೇನು
ರಹಸ್ಯವಲ್ಲ. ಚೆನ್ನಾಗಿರುವುದು ಎಂದರೇನು? ಒಬ್ಬನ ಬದುಕು ಹೊತ್ತಿ ಉರಿಯುವಾಗ ಮತ್ತೊಬ್ಬ ಅದರಲ್ಲಿ
ಚಳಿಕಾಯಿಸಿದಂತೆ ಎಂದರೆ ಚೆನ್ನಾಗಿರುವುದು. ಅನುಭವಿಸುವವನಿಗೆ ಚೆನ್ನಾಗಿರಬೇಕು ಎನ್ನುವುದು
ಉಪದೇಶವಾದರೂ ಅದರ ಅವಕಾಶ ಇರುವುದು ನೋಡುವವನಿಗೆ. ಆತ ಚೆನ್ನಾಗಿರುತ್ತಾನೆ.
ಮರುದಿನ
ಆತ ಸ್ಥಳೀಯ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡ. ಒಂದು ಪತ್ರದ ಸುರಕ್ಷತೆ. ಆದರೆ ಬದುಕು ಮಾತ್ರ
ಅಸುರಕ್ಷಿತ ಅಂತ ಆತನಿಗೆ ಅನ್ನಿಸಿತು. ಕಾನೂನಿನ ಕಣ್ಣಿನಲ್ಲಿ ಆತನೂ ಒಬ್ಬ ಅರೆ ಅಪರಾಧಿ. ಹಲವರು
ರಾಜಿ ಮಾಡಿಕೊಳ್ಳುವುದಕ್ಕೆ ಸಲಹೆ ಕೊಟ್ಟರು ರಾಜಿ ಮಾಡಿಕೊಳ್ಳುವುದು ಅಂದರೇ ಯಾವುದರ ಜತೆಗೆ?
ಆತನನ್ನು ಬೇಡ
ಎಂದು ಹೋದ ಆಕೆಯ ಜತೆಗೆ? ಇಲ್ಲ ಬುದ್ಧಿತಿಳಿದಾಗಿನಿಂದ ಬದುಕಿನಲ್ಲಿ ಅಳವಡಿಸಿಕೊಂಡ ತತ್ವಗಳ
ಜತೆಗೆ? ಯಾವುದರ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು? ಆಕೆಯ ಮನೆಯಿಂದ ಚಿಕ್ಕಾಸು ಬೇಡ
ಎಂದ ತನ್ನ ಆತ್ಮಾಭಿಮಾನದ ಮೇಲೆ ಆತನಿಗೆ ಅತಿಯಾದ ಗೌರವವಿದೆ. ಅದುವರೆಗೆ ಯಾರ ಹಂಗೂ ಇಲ್ಲದೆ
ಆತನನ್ನು ಅಪ್ಪ ಸಾಕಿದ್ದ. ವಿದ್ಯೆ ಸಂಸ್ಕಾರ ಒದಗಿಸಿದ್ದ. ಪರಿಶ್ರಮದಿಂದ ಈತನು ಉತ್ತಮ ಎನ್ನುವ
ಸ್ಥಿತಿಗೆ ಏರಿದ್ದ. ಈಗ....ರಾಜಿ ಮಾಡಿಕೊಂಡರೆ ಅಪ್ಪನ ಪರಿಶ್ರಮದ ಪೋಷಣೆಗೆ ಗೌರವ ದೊರಕಿದಂತಾಯಿತೆ?
ಆತನ ಆತ್ಮ
ಸಾಕ್ಷಿಗೆ ಗೌರವ ದೊರಕಬಹುದೇ? ರಾಜಿ ಮಾಡಿಕೊಂಡರೂ ಮುಂದಿನ ಬದುಕಿನ ದಾರಿ ಹೇಗಿರಬಹುದು? ಆತನ ಮೇಲೆ ವಿಶ್ವಾಸವಿಲ್ಲದೇ ಆತನನ್ನು ತೊರೆದು ತೆರಳಿದ ಆಕೆಗೆ ಈ ಒಂದು ರಾಜಿಯಿಂದ ವಿಶ್ವಾಸ ಮೂಡಬಹುದೇ?
ಇಷ್ಟೆಲ್ಲ
ಪ್ರಾಮಾಣಿಕವಾಗಿ ಸಿಗಬಹುದು ಎಂದಾದರೆ ಆತ್ಮಾಭಿಮಾನ ಬದಿಗಿಟ್ಟು ರಾಜಿ ಎಂಬ ಮುಸುಕನ್ನು ಬದುಕಿಗೆ
ಎಳೆಯಬಹುದೋ ಏನೋ? ಆದರೆ ಅದು ಕೇವಲ ಬದುಕಿಗೆ ಮುಸುಕಾಗಬಹುದು. ಆ ಮುಸುಕಿನ ಒಳಗೆ
ಅವಿತಿಟ್ಟಿರುವ ವಾಸ್ತವದ ಸತ್ಯ ಎಂದಿಗೂ ಬಹಿರಂಗವಾಗದು. ಅದು ಅಂತರಂಗದಲ್ಲಿ ಕುದಿಯುತ್ತಲೇ
ಇರಬಹುದು. ರಾಜಿಯಿಂದ ನ್ಯಾಯಕ್ಕೆ ನ್ಯಾಯ ಒದಗಬಹುದೇ? ಒಂದು ವೇಳೆ ಸಿಕ್ಕರೂ ಆ ನ್ಯಾಯದ ರೂಪ ಏನಿರಬಹುದು?
ವರದಕ್ಷಿಣೆ
ಮೊಕದ್ದಮೆ ಮಾತ್ರವಲ್ಲ. ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದಾಗ...ವರದಕ್ಷಿಣೆ ಮೊಕದ್ದಮೆ ಕೇವಲ
ನೆವನ. ಬೇರೆಯಾಗುವ ಉದ್ದೇಶವಿದ್ದರೆ ಮೊದಲೇ ಬೇರೆಯಾಗಬಹುದಿತ್ತು. ಇಷ್ಟಕ್ಕೂ ಮದುವೆಯಾಗುವ
ಅವಶ್ಯಕತೆಯಾದರೂ ಏನು ಎಂದು ಯಾರೂ ಕೇಳಲಿಲ್ಲ.
ಕಾನೂನಿನಂತೆ
ಅವರೊಳಗೆ ಹಲವು ಸಲ ಸಮಾಲೊಚನೆಗೆಳು ನಡೆದುವು. ಹಲವರು ಸಲಹೆ ಸೂಚನೆ ಕೊಟ್ಟರು. ಆದರೇನು ಆಕೆ ಎಂದೋ
ನಿರ್ಧರಿಸಿದಂತೆ ಆ ನಿರ್ಧಾರ ಅಚಲವಾಗಿತ್ತು. ಒಂದು ಬಾರಿ ಆತ ಮುಖತಃ ಕೇಳಿದ
"ನೀನು ಮತ್ತೆ ಬಾ ನಾನು ನಿನ್ನನ್ನು ಚೆನ್ನಾಗಿ
ನೋಡಿಕೊಳ್ಳುತ್ತೇನೆ. ನನ್ನಲ್ಲಿರುವ ಕೊರತೆ ಏನಿದೆ ಹೇಳು. ಸರಿ ಪಡಿಸಿಕೊಳ್ಳುವುದಕ್ಕೆ
ಪ್ರಯತ್ನಿಸುತ್ತೇನೆ. ಡೈವರ್ಸ್ ಗೆ ನನ್ನ ಒಪ್ಪಿಗೆ ಇಲ್ಲ"
ಇಷ್ಟು
ವಿನಯ ಪೂರ್ವಕ ಮನವಿಗೆ ಆಕೆ ಸಮ್ಮತಿಸುವಂತೆ ಇದ್ದರೆ ಆಕೆ ಬಿಟ್ಟು ಹೋಗುತ್ತಿರಲಿಲ್ಲ. ಆದರೆ ಅತ
ಆತ್ಮ ತೃಪ್ತಿಗೆ ಕೇಳಿಕೊಂಡಿದ್ದ.
ಆಕೆಯದ್ದು ಒಂದೇ ಉತ್ತರ...." ನನ್ನನ್ನು ಬಿಟ್ಟು
ಬಿಡಿ. ನಾನು ಬರುವುದಿಲ್ಲ" ಯಾವ ಪ್ರಶ್ನೆ ಹೇಗೆ ಕೇಳಿದರೂ ಈ ಉತ್ತರ ಬಿಟ್ಟು ಬೇರೆ ಯಾವ
ಮಾತುಗಳು ಇಲ್ಲ. ಈ ಹೆಣ್ಣುಗಳು ಕೊಡುವ ಉತ್ತರ
ಸಾಮಾನ್ಯವಾಗಿ ಹೀಗೆ ಇರುತ್ತದೆ. ತಾವು ತಪ್ಪು ಮಾಡುತ್ತಿದ್ದೇವೆ. ತಮ್ಮ ನಿಲುವು ತಮ್ಮ ನಡೆಯಲ್ಲಿ
ನ್ಯಾಯವಿಲ್ಲ ಎಂದು ಹತಾಶರಾಗಿ ಹೋದಾಗ ಅವರಲ್ಲಿ ಬೇರೆ ಮಾತು ಇರುವುದಿಲ್ಲ. ಬಿಟ್ಟು ಬಿಡಿ ನಾನು
ಬರುವುದಿಲ್ಲ ಎಂದು ಬಿಟ್ಟರೆ ಬೇರೆ ಒಂದಕ್ಷರವೂ ಮಾತನಾಡದ ಮೊಂಡುತನ. ಯಾಕೆ ಹೀಗೆ
ಮಾತನಾಡುತ್ತಿರುವೆ ಎಂದು ಮಾಡುವುದು ಸರಿಯಾ ಎಂದು ಕೇಳಿದರೂ, "ಆಕೆಯ ಉತ್ತರ ಬಿಟ್ಟು ಬಿಡಿ ನಾನು ಬರುವುದಿಲ್ಲ" ,ಮುದ್ರಿಸಿಟ್ಟ
ಮಾತುಗಳು. ಆತ ಬಗೆ ಬಗೆಯಲ್ಲಿ ಕೇಳಿಕೊಂಡ,
" ಮದುವೆ ಮೊದಲೆ ನಿನಗೆ ಹೇಳಬಹುದಿತ್ತಲ್ಲ. ಈಗ
ನನ್ನ ಬದುಕಿಗೆ ಹೀಗೆ ಅನ್ಯಾಯ ಮಾಡುವುದು ಸರಿಯಾ? ನನ್ನ ಅಪ್ಪ ಅಮ್ಮ ನಿನ್ನ ಅಪ್ಪ ಅಮ್ಮನನ್ನು ಯೋಚಿಸು .
ಹೀಗೆ ಮಾಡುವುದು ಸರಿಯಾ?" ಆಗಲೂ ಉತ್ತರ ಅದೇ
"ಬಿಟ್ಟು ಬಿಡಿ ಬರುವುದಿಲ್ಲ."
ಆತನಲ್ಲಿ ಬೇರೆ ಮಾತಿಗೂ ಆಕೆಗೆ ಮನಸ್ಸಿಲ್ಲ ಎಂದಾದರೆ ಆಕೆ ಮತ್ತೆ ಬಂದು ಆತನಿಗೆ ಯಾವ
ಬದುಕನ್ನು ಒದಗಿಸಿಯಾಳು?
ಹಲವರು
ಹಲವು ಹೇಳಿದರು. ಹೇಳುವುದಕ್ಕೇನು? ಅವೆಲ್ಲ ಕೇವಲ ಸಲಹೆಗಳು. ಪ್ರವಾಹದಲ್ಲಿ ಮುಳುಗೇಳುವವನಿಗೆ ದಡದಲ್ಲಿ
ನಿಂತ ಮಂದಿ ಕೊಡುವ ಸಲಹೆಗಳಂತೆ. ಪ್ರವಾಹದ ಸುಳಿಯ ಸೆಳೆತ, ಜೀವ ಭಯ, ಪ್ರವಾಹದಲ್ಲಿ ಸಿಕ್ಕಿಕೊಂಡವನಿಗೆ ಮಾತ್ರ ಅರಿವಾಗುತ್ತದೆ. ಯಾರ
ಮಾತಿಗೂ ಒಪ್ಪಿಕೊಳ್ಳಲಿಲ್ಲ. ರಾಜಿ ಎಂದರೆ ಅದು ಒಂದು ಕಡೆಯ ಸೋಲು ಹೊರತು ಅಲ್ಲಿ ಗೆಲುವು
ಇರುವುದಿಲ್ಲ. ತೊರೆದು ಹೋದವಳು ಬರಬೇಕು. ಆತನ ಕೊರತೆಯನ್ನುಲೋಕದ ಮುಂದೆ ತೆರೆದಿಟ್ಟವಳ ಎದುರು
ರಾಜಿ ಎಂದು ಕೈಯೊಡ್ದಿದರೆ ಆಕೆ ಬರೆದ ಕೊರತೆ ಅಳಿಸಿ ಹೋಗುವುದಿಲ್ಲ. ಅದನ್ನು ಇಟ್ಟುಕೊಂಡು ಮತ್ತೆ
ಅವಳ ಜತೆಗೆ ಬದುಕು ಹೇಗೆ ಸಾಗಬಲ್ಲುದ? ಆಕೆ ಬರಲಿ. ಆಕೆ
ಬರೆದ ಕೊರತೆ ಆಕೆಯಿಂದಲೇ ತುಂಬಿಬರಲಿ. ಆತನ ನಿಲುವದು ಸ್ಪಷ್ಟ. ಬೇಡ ಎಂದವಳು ಅವಳು. ಈಗ ಬೇಕು
ಎನ್ನಬೇಕಾದವಳು ಅವಳು. ನಮ್ಮ ಬೇಡಿಕೆಗಳು ನಮ್ಮ
ಅವಶ್ಯಕತೆಗಳು ನಾವು ಕಿತ್ತು ಪಡೆಯುವ ಹಂತಕ್ಕೆ ಹೋಗುವುದು ಆತನಿಗೆ ಇಷ್ಟವಿಲ್ಲದ ವಿಷಯ. ಕಿತ್ತು
ಪಡೆದಾಗ ಅಲ್ಲೊಂದು ಅಸಹನೆ ಇದ್ದೆ ಇರುತ್ತದೆ. ಅದನ್ನು ಅನುಭವಿಸುವಲ್ಲಿ ಅದೊಮ್ದು ಅಸೌಕರ್ಯ
ಅನುಭವಕ್ಕೆ ಬರುತ್ತದೆ. ಆದರೆ ಪರಿಪೂರ್ಣ ಸಮ್ಮತಿಯಲ್ಲಿ ಬರುವ ಅವಕಾಶಗಳು, ಒದಗಿ ಬಂದು ತೀರುವ ಬಯಕೆಗಳು ಆತ್ಮ ತೃಪ್ತಿಯನ್ನು ಒದಗಿಸುತ್ತವೆ.
ಇದೀಗ ಆಕೆಗೆ ಮನಸ್ಸಿಲ್ಲ. ಆಕೆಯನ್ನು ಬಲವಂತವಾಗಿ ತರುವಲ್ಲಿ ಯಾವ ತೃಪ್ತಿ ಸಿಗಬಹುದು? ಹಾಗಾಗಿ ಆತ
ಅಕೆಯೊಂದಿಗಿನ ಬದುಕನ್ನು ತಿರಸ್ಕರಿಸಿದರೂ ಮನದಾಳದಲ್ಲಿ ಆಕೆ ಪೂರ್ಣ ಸಮ್ಮತಿಯಿಂದ ಬರಬಹುದೇ ಎಂಬ
ನಿರೀಕ್ಷೆಯಲ್ಲಿದ್ದ.
ಕಡಿದು
ಹೋದ ಮನಸ್ಸು ಮತ್ತೆ ಒಂದಾಗಲಿಲ್ಲ. ಅವರ ನಡುವೆ ಹಲವು ಸಮಾಲೋಚನೆಗಳು ಆಗಿ ಹೋದವು. ಯಾರದೋ
ತೃಪ್ತಿಗಾಗಿ ನಡೆದ ಸಮಾಲೋಚನೆಗಳು. ಬರುತ್ತಾಳೆ ಎಂಬ ವಿಶ್ವಾಸ ಆತನಿಗೂ ಇಲ್ಲ. ಹೋಗಲೇ ಬೇಕು ಎಂಬ
ಬದ್ದತೆ ಆಕೆಗೂ ಇಲ್ಲ. ಆಕೆಗೆ ಮತ್ತೊಂದು ಬದುಕು ಕಟ್ಟಿಕೊಳ್ಳುವ ತುಡಿತ. ಈತನಿಗೆ ಕುಸಿದು ಹೋದ
ಬದುಕಿನ ಸೌಧವನ್ನು ಕಟ್ಟಲಾಗದ ಅಸಹಾಯಕತೆ.
ಒಂದು
ದಿನ ತಡೆಯದೆ ತನ್ನ ಒಡಲ ಉರಿ ಅಧಿಕವಾದಾಗ ಒಂದು ಪತ್ರ ಬರೆಯುತ್ತಾನೆ.
" ನೀನು ಬರುವುದಿಲ್ಲ ಎಂದು ಅರಿವಿದೆ. ತವರಿಗೆ ಹೋಗಿಬರುತ್ತೇನೆ ಎಂದು ಹೇಳಿ ಹೋದ ಅಮಾಯಕತನ
ನಾನು ಮರೆಯುವುದಿಲ್ಲ. ನಾನು ನನ್ನ ಆತ್ಮವಂಚನೆ
ಬಿಟ್ಟು ವ್ಯವಹರಿಸುವುದಿಲ್ಲ. ಪ್ರಾಮಾಣಿಕವಾಗಿ ವ್ಯವಹರಿಸಿದ್ದೇನೆ. ನನ್ನನ್ನು
ಮದುವೆಯಾಗುವುದರಲ್ಲಿ ಇಷ್ಟವಿಲ್ಲದೇ ಇದ್ದರೆ ಮದುವೆಯಾಗುವ ಮೊದಲೇ ನೀನು ಬೇರೆ ಯಾಗಬಹುದಿತ್ತು.
ನಿನ್ನ ಬದುಕಿಗೆ ನೀನೆ ಅನ್ಯಾಯ ಮಾಡಿಕೊಂಡದ್ದು ಮಾತ್ರವಲ್ಲ, ನನ್ನ ಬದುಕನ್ನೂ ಬೆಂಕಿಗೆ
ಹಾಕಿಬಿಟ್ಟೆ. ನೀನು ಅದಾರನ್ನೋ ಮದುವೆಯಾಗಿ ಎಷ್ಟು ಸುಖವಾಗಿರುವೆಯೋ ತಿಳಿಯದು. ಆದರೆ ಈ ನನ್ನ
ಬದುಕನ್ನು ಹಾಳು ಗೆಡವಿದ ಈ ನನ್ನ ಜ್ವಾಲಾನಲದ ಉರಿಗೆ ನಿನ್ನ ಬದುಕು ತತ್ತರಿಸುತ್ತದೆ.
ನೆನಪಿರಲಿ. ಇದು ನಿನ್ನನ್ನು ಬಾಧಿಸದೆ ಬಿಡುವುದಿಲ್ಲ. "
ಕಡಲ ತಡಿಯಲ್ಲಿ
ಕುಳಿತು ಆಕೆ ಯೋಚಿಸಿದ್ದು ಇದನ್ನೇ, ಆತನ ಜ್ವಾಲಾನಲದ ಉರಿಯ ಬಿಸಿ ಹೀಗೆ ಸುಡಬಹುದೇ? ಆಕೆಯಲ್ಲಿ ಉತ್ತರವಿಲ್ಲ. ಪಶ್ಚಾತ್ತಾಪ ಪಟ್ಟರೂ ಅದು
ಪರಿಹಾರವಾಗುವುದಿಲ್ಲ. ಅಂದು ಹಾಗೆ ಆಗಿ ಹೋಯಿತು. ಅದಕ್ಕೆ ಕಾರಣರಾದವರು ಇಂದು ಯಾರೂ ಬದುಕಿಲ್ಲ.
ಅದಕ್ಕೆ ಸಾಕ್ಷಿಯಾಗಿ ಈಗ ಆಕೆ ಮಾತ್ರವೇ ಇದ್ದಾಳೆ. ಅದೂ ಏಕಾಂಗಿಯಾಗಿ.
ಆತನಿಂದ
ವಿಚ್ಚೇದನವಾಗಿ ಮೊದಲು ಬಯಸಿದವನ ಬಳಿಗೆ ಹೋಗಿ ಮದುವೆಯಾಗಿ ಹೊಸ ಬದುಕು ಕಟ್ಟಿಕೊಂಡಳು. ಆ
ದಿನಗಳಲ್ಲಿ ಇದುವೇ ಗೆಲುವು ಸಾಧಿಸಿದಂತೆ ಅನ್ನಿಸಿತ್ತು.
ಹೊಸದಾದ ಬದುಕಿನಲ್ಲಿ ಮಗ ಹುಟ್ಟಿ ಪುಟ್ಟ ಸಂಸಾರ ಸುಖದಲ್ಲಿ ಹಳೆಯದನ್ನು ಮರೆತರೂ ಈಗ
ಹಳೆಯ ಉರಿ ಮತ್ತೆ ಜ್ವಾಲೆಯನ್ನು ಕಕ್ಕತೊಡಗಿದೆ. ಕೈ ಹಿಡಿದ ಪ್ರೇಮಿ ಅನಾರೋಗ್ಯ ಬಾಧಿಸಿ
ನಡು ಬದುಕಿನಲ್ಲೇ ಏಕಾಂಗಿಯಾಗಿ ಬಿಟ್ಟು ಹೋಗಿದ್ದ. ಇದ್ದ ಒಬ್ಬ ಮಗನನ್ನು ಅಕ್ಕರೆಯಿಂದ ಬೆಳೆಸಿದ್ದಳು. ಆತನಿಗೆ
ವಿವಾಹವಾಗಿ ಒಂದು ವರ್ಷ ಕಳೆಯಿತಷ್ಟೇ...ಮದುವೆಯಾಗಿ ಬಂದ ಹುಡುಗಿ ಬಿಟ್ಟು ಹೋಗಿ ಈಗ
ವಿಚ್ಚೇದಕ್ಕೆ ಅರ್ಜಿ ಹಾಕಿದ್ದಳು. ಎಲ್ಲವು ಸರಿಯಿದೆ ಎಂಬ ಭ್ರಮೆಯಲ್ಲಿ ಬದುಕಿದವಳಿಗೆ ಈಗ ನಡೆಯುವ
ವಾಸ್ತವದ ಘಟನೆಗಳಿಗೆ ಕಾರಣ ಹುಡುಕುವ ಅನಿವಾರ್ಯತೆ ಕಾಣಲಿಲ್ಲ. ನಾಳೆ ಕುಟುಂಬ ನ್ಯಾಯಯಾಲಯದ
ಮೆಟ್ಟಲು ಹತ್ತಬೇಕು. ಅಂದಿನ ಪ್ರಶ್ನೆಗಳಿಗೆ ಈಗ ಉತ್ತರ ಕಂಡುಕೊಳ್ಳುವ ಅನಿವಾರ್ಯತೆ ಎದುರಾಗಿ
ಹೋಗಿದೆ.
ಮರುದಿನ
ಬೆಳಗ್ಗೆ ಎದ್ದು ಮಗನೊಂದಿಗೆ ಕೋರ್ಟ್ ಮೆಟ್ಟಲೇರಿದಳು. ನ್ಯಾಯಲಯ ಕಲಾಪ ಆರಂಭವಾಗುವುದಕ್ಕೆ ಇನ್ನೂ
ಸಮಯವಿತ್ತು. ಹೊರಗೆ ಬೆಂಚಿನಲ್ಲಿ ಕುಳಿತಿದ್ದಳು.
ಹಳೆಯ ಕಥೆಯ ದೃಶ್ಯಗಳು ಮರು ಸೃಷ್ಟಿಯಾದಂತೆ ಭಾಸವಾಯಿತು. ಹಳೆಯ ಕಥೆಗಳಿಗೆ ಕೇವಲ
ಅವಳೊಬ್ಬಳೇ ಸಾಕ್ಷಿಯಾಗಿದ್ದಳು. ಚಡಪಡಿಕೆ
ನಿಟ್ಟುಸಿರು ...ಅದನ್ನು ಯಾರಿಗೂ ವ್ಯಕ್ತ ಪಡಿಸುವಂತಿಲ್ಲ. ಮಗನ ಕುರಿತು ಯೋಚಿಸಬೇಕೆ? ತನ್ನ ಅಂತರಂಗದ ಪ್ರಶ್ನೆಗಳಿಗೆ
ಉತ್ತರಿಸಬೇಕೆ? ಒಂದೂ ತಿಳಿಯದ
ಚಡಪಡಿಕೆ. ಹೀಗೆ ಚಡಪಡಿಸಿ ಯಾವುದೋ
ಯೋಚನೆಯಲ್ಲಿದ್ದವಳಿಗೆ ಮಗ ಬಂದು ಎಚ್ಚರಿಸಿದ. ಒಳಗೆ ಕಟಕಟೆಯತ್ತ ಬರುವಂತೆ ಆಕೆಯ ವಕೀಲರು
ಕರೆದರು. ನಿಧಾನವಾಗಿ ಹೆಜ್ಜೆ ಇಟ್ಟು ಕಟಕಟೆ ಹತ್ತಿ ನ್ಯಾಯಾಧೀಶರಿಗೆ ನಮಸ್ಕರಿವುದಕ್ಕೆ ತಲೆ
ಎತ್ತಿ ನೋಡುತ್ತಾಳೆ ಗಾಬರಿಯಾಗಿ ಕುಸಿದು ಬೀಳುವ ಅನುಭವವಾಗುತ್ತದೆ. ಕಟೆಕಟೆಯನ್ನು ಗಟ್ಟಿಯಾಗಿ
ಹಿಡಿದು ಕೊಳ್ಳುತ್ತಾಳೆ. ನ್ಯಾಯಾಧೀಶರ ಮುಖ ನೋಡಿದರೆ ಮತ್ತದೇ ಮುಖ ಅದು ಬೇರೆ ಯಾರೂ ಅಲ್ಲ, ಬಾಗಿಲಲ್ಲಿದ್ದ ನಾಮ ಫಲಕದಲ್ಲಿ
ಹೆಸರು ಆಗ ತಾನೆ ಓದಿದ್ದಳು.. ಎ ವಿ ಮೂರ್ತಿ...! ಅದು ಬೇರೆ ಯಾರೂ ಅಲ್ಲ, . ಅಭಿಚಿತ್ ವಿನಯ ಮೂರ್ತಿ . ಮತ್ತದೇ ಪಾತ್ರ ಈಬಗೆಯಲ್ಲಿ
ಮುಂದೆ ಬಂದು ನಿಲ್ಲುತ್ತದೆ ಎಂದು ನಿರೀಕ್ಷೆ ಇರಲಿಲ್ಲ. ತಾನು ಯಾರಲ್ಲಿ ನ್ಯಾಯ
ಕೇಳಬೇಕಾಗಿರುವುದು? ಅಂದು
ವಕೀಲನಾದವನು ಇಂದು...ಈ ಮಟ್ಟಕ್ಕೆ ಏರಿ ತನಗೆ ಈ ಬಗೆಯಲ್ಲಿ ಸವಾಲಾಗಿ ಬಿಡುತ್ತಾನೆ ಎಂದು ಆಕೆ
ನಿರೀಕ್ಷಿಸಿರಲಿಲ್ಲ. ಆತನ ದೃಷ್ಟಿಯನ್ನು ಎದುರಿಸುವ ಬಲವನ್ನುಆತ್ಮ ಸ್ಥೈರ್ಯವನ್ನು ಎಲ್ಲಿಂದ
ತರಲಿ ಎಂದು ಆಕೆ ಯೋಚಿಸುತ್ತಾಳೆ. ಯೋಚಿಸುವುದು
ಹೇಗೆ ಸಾಧ್ಯ? ಆಕೆ ಕಲ್ಲಾಗಿ
ಹೋಗಿದ್ದಾಳೆ. ಮೊದಲೊಮ್ಮೆ ಮನಸ್ಸು ಕಲ್ಲಾಗಿದ್ದರೆ ಈಗ ಸಂಪೂರ್ಣ ದೇಹವೇ ಕಲ್ಲಾಗಿ ನಿಂತು
ಕೊಂಡಿದ್ದಾಳೆ. ಕಲ್ಲಾಗದೇ ಇದ್ದರೆ ಆಕೆ ಕುಸಿದು
ಬೀಳುತ್ತಿದ್ದಳೋ ಏನೋ...ಆದರೆ ಆಕೆ ಅಕ್ಷರಶಃ ಕಲ್ಲಾಗಿ ಹೋಗಿದ್ದಾಳೆ.
ಒಂದು ಕಾಲದಲ್ಲಿ ಸ್ವತಃ ತನಗೆ
ಕಾನೂನಿನಲ್ಲಿ ಸಿಗದ ನ್ಯಾಯಕ್ಕೆ ಇಂದು ಆತನೇ ನ್ಯಾಯಾಧೀಶ. ಇದೊಂದು ವಿಪರ್ಯಾಸ.
[ಮುಂದೆ? ನಿರ್ಣಯ ಹೇಗೂ ಇರಬಹುದು? ಆದರೆ ಸತ್ಯ ನ್ಯಾಯ ನೀತಿ
ಎಂದಿಗೂ ಗೆಲುವನ್ನು ಕಾಣಬೇಕು ಎಂಬುದು ತತ್ವ. ವಿನಯ ಮೂರ್ತಿ ಆತ್ಮ ವಂಚನೆ ಇಲ್ಲದೆ ಸತ್ಯ ನ್ಯಾಯಕ್ಕಾಗಿ ಸ್ಪಂದಿಸುವವನು. ತತ್ವ
ಸಿಧ್ದಾಂತಗಳ ವಿಶ್ವಾಸಿ. ಸತ್ಯ ನ್ಯಾಯದ ಹಿಂದೆ ಪ್ರಾಮಾಣಿಕತೆಯಲ್ಲಿ ಹೋದವನಿಗೆ ಮೊದಲು ಸತ್ಯ
ನ್ಯಾಯವೇ ಕಾಣಿಸುತ್ತದೆ. ಇದು ಆಕೆಯ ಅರಿವು ಮಾತ್ರವಲ್ಲ, ಆಕೆಯ ಅನುಭವ. ಹಾಗಾಗಿ
ಆತನೆದುರು ಅಂಗಲಾಚಬಹುದು. ಉನ್ನತ ತತ್ವಾದರ್ಶಗಳು ಸಮಾಜದಲ್ಲಿ ದೌರ್ಬಲ್ಯವಾಗುವುದು ಇಂತಹ
ಸನ್ನಿವೇಶದಲ್ಲಿ. ಅದು ಆಕೆಗೆ ಮತ್ತೊಮ್ಮೆ ಗೆಲುವನ್ನು ಕರುಣಿಸಬಹುದು. ಆದರೆ ಆತನ ಪಾಲಿಗೆ ನಂಬಿದ
ಅದೇ ತತ್ವ ಕರುಣಿಸಿದ ಸೋಲನ್ನು ಮರೆಯುವುದಕ್ಕೆ
ಸಾಧ್ಯವಿಲ್ಲ. ಅದಕ್ಕೊಂದು ಗೆಲುವು ಬೇಕು. ವಿನಯ ಮೂರ್ತಿಯ ತತ್ವಗಳು ಈ ವಾಸ್ತವದ ಸತ್ಯದಲ್ಲಿ
ಗೆಲ್ಲಬಹುದೇ? ನಿರ್ಣಯಿಸುವುದು
ಕಠಿಣ. ಒಂದು ಗೂಡಿಸುವ ವಿವಾಹಕ್ಕೆ ಅವಕಾಶವಿದ್ದಂತೆ, ವಿಚ್ಚೇದನಕ್ಕೂ ಹೆಚ್ಚು ಅವಕಾಶವಿರುತ್ತದೆ. ಇದು ನಮ್ಮ
ಸಮಾಜ. ಒಳ್ಳೆಯವರಿಗೂ ಕೆಟ್ಟವರಿಗೂ ಹುಟ್ಟು ಮತ್ತು ಸಾವಿನಲ್ಲಿ ಮಾತ್ರ ಸಮಾನತೆ ಇರುತ್ತದೆ.
ನಡುವೆ ಇರುವ ಸತ್ಯ ನ್ಯಾಯ ನೀತಿ ಎಲ್ಲವೂ ಅವಕಾಶಗಳಾಗಿಬಿಡುತ್ತವೆ. ಸತ್ಯ ಪ್ರಾಮಾಣಿಕತೆಯ ಸಿದ್ದಾಂತಗಳು ಗೆಲ್ಲಬೇಕು. ಅದು
ಅದರ ಅವಕಾಶ. ]