Monday, November 16, 2020

ನವರಸ ಬ್ರಹ್ಮ ಜಗತೀ ಶ್ರೀಕುಮಾರ್

 

ನಟನೆ,  ಜಗತ್ತಿನ ಅತ್ಯಂತ ದೊಡ್ಡ ಕಲೆ ಯಾವುದು ಅಂತ ಕೇಳಿದರೆ ಇದನ್ನೇ ಹೇಳಬಹುದೇನೋ. ಕಲೆ ಹಲವಿರಬಹುದು. ಅದರಲ್ಲಿ ಇದು ಮಿಳಿತವಾಗಿರುವುದೇ ಹೆಚ್ಚು.ಕೆಲವು ಕಲೆಯಲ್ಲಿ ಪ್ರಧಾನ ಅಂಗವೇ ಇದು. ನವರಸಗಳೇ ಈ ನಟನೆಯ ಪ್ರಧಾನ ಅಸ್ತ್ರಗಳು. ಯಾವ ನಟ ಈ ರಸದ ಅನುಭವವನ್ನು ಪಡೆಯುತ್ತಾನೋ ಆತ ಶ್ರೇಷ್ಠ ನಟನಾಗುತ್ತಾನೆ.

“ಉದಯನಾಣು ತಾರಂ” ಒಂದು ಜನಪ್ರಿಯ ಮಲಯಾಳಂ ಸಿನಿಮಾ. ಮೋಹನ್ ಲಾಲ್ ಪ್ರಧಾನ ನಟನಾಗಿರುವ ಈ ಸಿನಿಮಾದಲ್ಲಿ ಒಂದು ಸನ್ನಿವೇಶ ಇರುತ್ತದೆ. ಇಲ್ಲಿ ನಟನೆ ಎಂದರೇನೆಂದು ತಿಳಿಯದ ಮೂರ್ಖನಿಗೆ ನಟನೆ ಕಲಿಸುವುದಕ್ಕಾಗಿ ಒಬ್ಬ ಬರುತ್ತಾನೆ. ಆತ ಕ್ಷಣ ಮಾತ್ರದಲ್ಲಿ ನವರಸಗಳನ್ನು ಮುಖದಲ್ಲಿ ತೋರಿಸುವ ಸನ್ನಿವೇಶವಿದೆ. ಕೇವಲ ಕೆಲವೇ ಕ್ಷಣದಲ್ಲಿ ಅ ನವರಸಗಳನ್ನು ಒಂದಾದ ಮೇಲೊಂದರಂತೆ ತೋರಿಸುವ ಸನ್ನಿವೇಶವದು. ವಾಸ್ತವದಲ್ಲಿ ಹಾಸ್ಯ ಬಿಂಬಿಸುವ ಸನ್ನಿವೇಶವಾದರೂ ಆ ಹಾಸ್ಯಕಲಾವಿದನ ನವರಸ ಪ್ರಕಟನೆ ಮಾತ್ರ ಅಧ್ಬುತವಾಗಿರುತ್ತದೆ. ಸಾಲದೆಂಬಂತೆ ನವರಸಗಳು ಮುಗಿಸಿ ಹತ್ತನೆಯದ್ದು ನನ್ನದು ಅಂತ ವಿಭಿನ್ನ ಮುಖ ಭಾವವನ್ನು ತೋರಿದಾಗ ನಗದೇ ಇರುವ ಪ್ರೇಕ್ಷಕ ಇರುವುದಕ್ಕೆ ಸಾಧ್ಯವಿಲ್ಲ. ಹಲವು ಸಲ ನೋಡಿದರೂ ಒಂದು ಕಿರುನಗುವನ್ನಾದರೂ ತರಿಸುವ ಈ ಹಾಸ್ಯ ಮಯ ಸನ್ನಿವೇಶ ಆ ಸಿನಿಮಾದ ವಿಶೇಷಗಳಲ್ಲಿ ಒಂದು. ಆ ನವರಸವನ್ನು ತೋರಿಸಿದ ಮಹಾನ್ ನಟನೆಂದರೆ ಅದು ಸಿನಿಮಾ ಲೋಕ ಕಂಡ ಅದ್ಭುತ ಹಾಸ್ಯ ನಟ ಜಗತೀ ಶ್ರೀ ಕುಮಾರ್.

 ಜಗತೀ ಶ್ರಿಕುಮಾರ್ ಮಲಯಾಳಂ ಸಿನಿಮ ಕಂಡವರು ಈ ಹೆಸರನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಜಗತಿ ಎಂಬುದು ತಿರುವನಂತ ಪುರಂ ಸಮೀಪದ ಊರ ಹೆಸರು. ಆ ಊರಿಗೆ ಸಿನಿಮಾರಂಗದಲ್ಲಿ ಪ್ರಸಿದ್ಧಿಯನ್ನು ತಂದುಕೊಟ್ಟ ನಟ.

ನಾವು ನಮ್ಮ ಮನೆಯೊಳಗೆ ಸುತ್ತಾಡುವುದು ಸುಲಭ. ಅದರ ಸಂದುಗೊಂದುಗಳು ನಮಗೆ ಬೇಡವೆಂದರೂ ಚಿರಿಪರಿಚಿತ, ಆದರೂ ನಾವು ನಮ್ಮದೇ ಮನೆಯ ನೋಡದೇ ಇರುವ ಭಾಗ ಹಲವಿರಬಹುದು. ಅದನ್ನು ನೋಡುವ ತುಡಿತ ಒತ್ತಟ್ಟಿಗೆ ಇಟ್ಟು ಮತ್ತೊಬ್ಬರ ಮನೆಗೆ ಹೋಗುತ್ತೇವೆ. ಅಲ್ಲೆಲ್ಲ ಸುತ್ತಾಡುತ್ತೇವೆ. ಅಪರಿಚಿತ ಎನ್ನಿಸುವವುಗಳನ್ನು ಅರಿಯುವುದಕ್ಕೆ ಯತ್ನಿಸುತ್ತೇವೆ. ಇದು ಸಹಜ. ಹಾಗೆ ಮಲಯಾಳಂ ಚಿತ್ರಗಳು ನನಗೆ ಕೌತುಕವನ್ನು ಸೃಷ್ಟಿಸುತ್ತಾ ಹೋದವುಗಳು. ಆ ಕೌತುಕಗಳಲ್ಲಿ ಮಹಾ ಕೌತುಕವೆಂದರೆ ಈ ಜಗತೀ ಶ್ರೀ ಕುಮಾರ್ ನಟನ ಪಾತ್ರಗಳು.


ಚಾರ್ಲೀ ಚಾಪ್ಲಿನ್ , ಜಗತ್ತಿನ ಅತ್ಯಂತ ಶ್ರೇಷ್ಠ ನಟ. ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ನಟ ಯಾರೂಂತ ಕೇಳಿದರೆ ಹಲವು ಮಹನೀಯರು ಇದನ್ನೇ ಹೇಳುತ್ತಾರೆ. ಸಹಜ ಅಭಿನಯದ ಪರಾಕಾಷ್ಠೆಯದು. ಇಂದಿನ ಬಣ್ಣದ ಯುಗದಲ್ಲೂ ಆ ಕಪ್ಪು ಬಿಳುಪು ಕಾಲದ ನಟನನ್ನು ಹಿಂದಿಕ್ಕುವ ನಟ ಹುಟ್ಟಲಿಲ್ಲ ಎಂದರೆ ನಟನೆ ಎಂಬುದು ಇರುವುದು ಭಾಷೆಯಿಂದಲ್ಲ, ಆಡಂಬರದಲ್ಲಿ ಅಲ್ಲ. ಅದರ ಸಹಜತೆಯಲ್ಲಿ. ನೈಜ ನಟನೆ ಅಂತ ನಟನೆಯನ್ನು ಹೇಳುವುದಕ್ಕಿಲ್ಲ. ಯಾಕೆಂದರೆ ನಟನೆ ಎಂಬುದೇ ಕಪಟ. ಅಲ್ಲಿ ನೈಜತೆಯ ಸೃಷ್ಟಿಯಾಗಬೇಕಾದರೆ ಈ ಕಪಟತ್ವವನ್ನು ಅರಿಯಬೇಕು. ಚಾಪ್ಲೀನ್ ಪಾತ್ರಗಳು ಈ ಭ್ರಮೆಯನ್ನು ಸೃಷ್ಟಿಸುತ್ತವೆ. ಚಾಪ್ಲಿನ್ ಕಾಲ ಸಂದು ಹೋಯಿತು. ನನ್ನಲ್ಲಿ ಯಾರಾದರೂ ಶ್ರೇಷ್ಠ ನಟ ಯಾರೂ ಎಂದು ಕೇಳಿದರೆ ನಾನು ಹೇಳುವುದು ಜಗತಿ ಶ್ರೀಕುಮಾರ್. ಆ ಭ್ರಮೆಯನ್ನು ನನ್ನಲ್ಲಿ ಸೃಷ್ಟಿಸಿದ ಮಹಾನ್ ನಟ.

ಜಗತಿ ಅಭಿನಯಿಸದ ಪಾತ್ರಗಳಿರುವುದಕ್ಕೆ ಸಾಧ್ಯವೇ ಇಲ್ಲ. ಸುಮಾರು ಸಾವಿರಕ್ಕೂ ಮಿಕ್ಕಿ ಸಿನಿಮಾದಲ್ಲಿ ನಟಿಸಿದ ನಟ. ಅದರಲ್ಲು ಜಾಗತಿಕ ದಾಖಲೆಯನ್ನು ಬರೆದ ನಟ. ಇದು ಸಾರ್ವಕಾಲಿಕ ದಾಖಲೆ.  ಹಾಸ್ಯ ಒಂದು ರಸವಾದರೂ ಆ ಹಾಸ್ಯದಲ್ಲೇ ಎಲ್ಲವನ್ನು ತೋರಿಸುವ ನಟನಾ ಸಾಮಾರ್ಥ್ಯ ಈತನ ನಟನೆಯಲ್ಲಿದೆ. ಇಂತಹ ಪಾತ್ರ ಎಂದು ಈ ನಟನನ್ನು ವರ್ಗಿಕರಿಸುವುದಕ್ಕೆ ಸಾಧ್ಯವಿಲ್ಲದದಷ್ಟು ನಟನೆ ಬೆಳೆದು ಬಿಟ್ಟಿದೆ. ಪಾತ್ರ ಯಾವುದೇ ಇರಲಿ ಜಗತಿ ಶ್ರೀಕುಮಾರ್ ಅಭಿನಯ ಪ್ರತಿ ಪಾತ್ರವನ್ನು ಸೃಷ್ಟಿಮಾಡುತ್ತವೆ. 

ನಟನೆ ಎಂದಾಗ ಹಲವು ವ್ಯಾಖ್ಯಾನಗಳನ್ನು ಕೇಳಬಹುದು. ಒಬ್ಬ ನಟ ಒಳ್ಳೆಯ ಕಣ್ಣೀರು ಸುರಿಸಿ ಅಭಿನಯಿಸುತ್ತಿದ್ದರೆ ಅದನ್ನು  ಶ್ರೇಷ್ಠ ಅಭಿನಯ ಎಂದು ತಿಳಿಯುವವರಿದ್ದಾರೆ. ಆದರೆ ನಟನೆ ಎಂಬುದು ಕೇವಲ ಒಂದು ಭಾವಕ್ಕೆ ಸೀಮಿತವಾಗಿರುವುದಿಲ್ಲ ಎಂದು ಅರಿವಾಗಬೇಕಾಗದರೆ ಜಗತೀ ಪಾತ್ರಗಳನ್ನು ನೋಡಬೇಕು. ಆತನ ನಟನೆ ಎಂದರೆ ಏನು ಎಂಬುದರ ಪಾಠ ಇವುಗಳಲ್ಲಿ ಕಾಣಬಹುದು. ಹೀಗಾಗಿಯೆ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಹೇಳುವಂತೆ ಜಗತೀ ಕ್ಯಾಮೆರಾದ ಎದುರು ನಟಿಸುತ್ತಿದ್ದರೆ ನಾವು ನಮ್ಮ ನಿರ್ದೇಶನವನ್ನು ಕ್ಯಾಮೆರಾವನ್ನು ಮರೆತುಬಿಡುತ್ತೇವೆ. ಒಬ್ಬ ಸಮರ್ಥ ನಿರ್ದೇಶಕ ನಟನ ಸಂಪೂರ್ಣ ಪ್ರತಿಭೆಯನ್ನು ಉಪಯೋಗಿಸುವುದಕ್ಕೆ ಯತ್ನಿಸುತ್ತಾನೆ. ಆದರೆ ಜಗತಿಯ ಪೂರ್ಣ ಪ್ರತಿಭೆಯನ್ನು ಉಪಯೋಗಿಸುವುದು ಯಾರಿಂದಲೂ ಸಾಧ್ಯವಿಲ್ಲ.

ಸಾಮಾನ್ಯವಾಗಿ ಒಬ್ಬ ಸಿನಿಮಾ ನಟನ ಪಾತ್ರಗಳನ್ನು ನೋಡುವಾಗ ಕೆಲವೇ ಕೆಲವು ಮಾತ್ರ ಇಷ್ಟ ಅಂತ ಹೆಸರಿಸುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಜಗತಿಯ ಯಾವ ಪಾತ್ರವನ್ನೂ ಹೀಗೆ ವರ್ಗೀಕರಿಸುವುದು ಕಷ್ಟವಾಗುತ್ತದೆ. ಪ್ರತಿಯೊಂದರಲ್ಲೂ ಜಗತಿಯ ನೈಜತೆಯ ಭ್ರಮೆ ನಮ್ಮನ್ನು ಬಿಡುವುದೇ ಇಲ್ಲ. ಆದರೂ ಆತನ ಪಾತ್ರಗಳಲ್ಲಿ ನಮ್ಮ ಅಭಿರುಚಿಗೆ ತಕ್ಕಂತೆ ವರ್ಗೀಕರಿಸಿದರೂ ಅದು ಪರಿಪೂರ್ಣವಲ್ಲ, ಆದರೂ ಆತನ ಕೆಲವು ಪಾತ್ರಗಳನ್ನು ಉಲ್ಲೇಖಿಸಬಹುದು.  ವಿಕೀ ಪೀಡಿಯಾ ಕೂಡ ಆತನ ಸಂಪೂರ್ಣ ಪಾತ್ರಗಳನ್ನು ಹೇಳುವುದಕ್ಕೆ ಅಸಮರ್ಥವಾಗಿದೆ. ಅಷ್ಟೊಂದು ಸಿನಿಮಾಗಳು. ಮಲಯಾಳ ಚಿತ್ರರಂಗವನ್ನು ಈ ಬಗೆಯಲ್ಲಿ ವ್ಯಾಪಿಸಿದ ನಟ ಇನ್ನೊಬ್ಬ ಇರಲಾರ. ಬಹುಶಃ ಭಾರತೀಯ ಚಿತ್ರರಂಗದಲ್ಲೇ ಇರುವುದಕ್ಕೆ ಸಾಧ್ಯವಿಲ್ಲ.

ಕಿಲುಕ್ಕಂ ಚಿತ್ರದ ಫೋಟೋಗ್ರಾಫರ್ ಗೈಡ್ ನಿಶ್ಚಲ್, ಹಾಗೆ ಅವಿಟ್ಟಂ ತಿರುನಾಳ್ ಆರೋಗ್ಯ ಶ್ರೀಮಾನ್ ಸಿನಿಮಾದ ವಯೋವೃದ್ಧ ಅಚ್ಚುತ ಕುರುಪ್,ಕಾಬೂಲಿವಾಲದ ಕಡಲಾಸು, ಮಿಂಡಾ ಪೂಚಕ್ಕು ಕಲ್ಯಾಣಂ ನ   , ಹೆಂಡತಿ ಗುಲಾಮ ಇವುಗಳೆಲ್ಲ ಮತ್ತೊಬ್ಬ ನಟ ಹೀಗೆ ಅಭಿನಯಿಸುವುದಕ್ಕೆ ಸಾಧ್ಯವಿಲ್ಲ. ಯಾವುದೇ ಇಮೇಜ್ ಇಲ್ಲದ ಪಾತ್ರಗಳನ್ನು ಅಭಿನಯಿಸಿ ಸ್ವತಃ ಇಮೇಜ್ ಗಳಿಗೆ ಸವಾಲಾಗಿ ನಿಂತ ನಟ. ಒಬ್ಬ ನಟನಿಗೆ ಸಂಬಂಧಿಸಿದಂತೆ ಶರೀರ ಭಾಷೆ ಅತ್ಯಂತ ಪ್ರಧಾನವಾಗಿರುತ್ತದೆ. ಜಗತಿಯ ಪಾತ್ರಗಳು ಈ  ಶರೀರ ಭಾಷೆಯ ಆದ್ಯಾಕ್ಷರದಿಂದ ವ್ಯಾಕರಣದವರೆರೂ  ಪಾಠವನ್ನು ಕಲಿಸುತ್ತವೆ.

 ನಾವು ಸಿನಿಮಾವನ್ನು ಕಾಣುವಾಗ ಪಾತ್ರದ ಮುಖೇನ ಕಾಣಬೇಕು. ವ್ಯಕ್ತಿ ನಿಷ್ಠವಾಗಿ ಕಾಣಬಾರದು. ವ್ಯಕ್ತಿಯನ್ನು ಅಥವಾ ನಟನನ್ನು ಹೊಂದಿಕೊಂಡು ಪಾತ್ರ ಬೆಳೆಯಬಾರದು. ಪಾತ್ರವನ್ನು ಹೊಂದಿಕೊಂಡು ನಟ ಬೆಳೆಯಬೇಕು.  ಪಾತ್ರ ಪಾತ್ರದೊಳಗೆ ಆ ವ್ಯಕ್ತಿ ಗೋಚರವಾಗುತ್ತಾನೆ ಎಂದಾದರೆ ಅಲ್ಲಿ ನಟನೆ ಸೋಲುತ್ತದೆ ಎಂಬುದೇ ಅರ್ಥ. ಈ ವೆತ್ಯಾಸಗಳನ್ನು ಅರಿಯಬೇಕಾದರೆ ಜಗತಿಯ ಪಾತ್ರಗಳನ್ನು ನೋಡಬೇಕು. ಅಲ್ಲಿ ನಟನೆ ಇದೆ ಎಂದೇ ಅನಿಸುವುದಿಲ್ಲ. ಎಲ್ಲವು ಪರಕಾಯ ಪ್ರವೇಶದ ಸೀಮಾರೇಖೆಯನ್ನು ದಾಟುವ ಯತ್ನ ಮಾಡುತ್ತವೆ. ಒಬ್ಬ ನಟನಾದವನಿಗೆ ನವರಸಗಳೂ ಕೂಡ ಸವಾಲಾಗುತ್ತವೆ. ಯಾವುದೇ ಪಾತ್ರವನ್ನು ಪರಿಪೂರ್ಣವಾಗಿ ಅಭಿನಯಿಸುವ, ಅದು ಸಜ್ಜನ ನಾಯಕನಾಗಲೀ ಕಳ್ಳನಾಗಲೀ ಕುಡುಕನಾಗಲಿ ಸಮಾಜದ ಯಾವುದೇ ವ್ಯಕ್ತಿಯಾಗಲೀ ಎಲ್ಲ ಇಮೇಜ್ ಗಳನ್ನು ಮೀರಿ ಅಭಿನಯಿಸುವುದಕ್ಕೆ ಸಮರ್ಥನಾದರೆ ಮಾತ್ರ ಆತ ಪರಿಪೂರ್ಣನಾಗುತ್ತಾನೆ. ಹಾಗಾಗಿ ಜಗದೀಶ್ರೀಕುಮಾರನಂತೆ ಪರಿಪೂರ್ಣ ನಟ ಇನ್ನೊಬ್ಬ ಇರುವುದಕ್ಕೆ ಸಾಧ್ಯವಿಲ್ಲ ಎಂದನಿಸುತ್ತದೆ. ಈತನ ಪ್ರೈತಿಯೊಂದು ಪಾತ್ರಗಳು ಇದನ್ನು ಸಾರಿ ಹೇಳುತ್ತವೆ.

 

ಮಲಯಾಳಿಗರ ಪ್ರೀತಿಯ ಅಂಭಿಳಿ ಚೇಟ್ಟನ್ ಎಂದು ಕರೆಯಲ್ಪಡುವ ಜಗತೀ ಶ್ರೀಕುಮಾರ್ ಇತ್ತೀಚೆಗೆ ಕೆಲವು ವರ್ಷದಿಂದ ಸಿನಿಮಾದಲ್ಲಿ ನಟಿಸುತ್ತಿಲ್ಲ. ಒಂದು ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇದೀಗ ಈ ದುರಂತದಿಂದ ಗುಣ ಮುಖರಾಗಿ ಜಗತೀ ಪುನರಾಗಮನವಾಗುತ್ತಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಸಿನಿಮಾರಂಗ ಈ ಅದ್ಭುತನ ನಟನಿಗಾಗಿ ಕಾದು ಕುಳಿತಿದೆ ಎಂದರೂ ತಪ್ಪಾಗಲಾರದು.

ಭಾರತೀಯ ಚಿತ್ರರಂಗದ ಅತಿ ವಿಶಿಷ್ಟ ನಟ ಜಗತೀ ಮತ್ತೊಮ್ಮೆ ಬರಲಿ ಎಂಬ ಹಾರೈಕೆ.

Thursday, November 5, 2020

ಭೌತ ಶಾಸ್ತ್ರದ ಆ ಮೂರು ಅಂಕ.

 ...

ಕಥೆ : ಭೌತ ಶಾಸ್ತ್ರದ ಮೂರು ಅಂಕ
            ನಾನು ಪ್ರಣವನಿಗೆ  ಮೊಬೈಲ್ ಖರೀದಿಸುವಾಗಲೇ ಆಕೆ ಅಪಸ್ವರ ಎತ್ತಿದ್ದಳು. ಮಕ್ಕಳಿಗೆ ಏನಕ್ಕೆ ಮೊಬೈಲ್? ವಾಸ್ತವದಲ್ಲಿ ಆಕೆಯಲ್ಲಿದ್ದದ್ದು ಏಲ್ಲೋ ಬಿದ್ದಿರುತ್ತದೆ.  ಸಂದರ್ಭಾನುಸಾರ ಬೇಕಾಗುತ್ತದೆ ಅಂತ ಅವಳಿಗೂ ಒಂದು  ಕೊಡಿಸಿದ್ದೆ. ಹಲವು ಸಲ ಅನ್ನಿಸಿದ್ದಿದೆ ಅದು ಅಂಗಡಿಯಲ್ಲಾದರೂ ನೆಮ್ಮದಿಯಿಂದ ಇರುತ್ತಿತ್ತು. ಇಲ್ಲಿ ನನ್ನ ಕರೆಗೆ ಕಂಪಿಸಿ ಸುಸ್ತು ಹೊಡೆದಿದೆ. ಆಕೆಗೆ ಅದು ಅಗತ್ಯವಿದ್ದಂತಿಲ್ಲ. ಸಂದರ್ಭಾನುಸಾರ ಎಂಬುದು ಬರದೆ ಇರಲಿ ಎಂಬುದೇ ಅನಿಸಿಕೆ. ಹೋಗಲಿ ಮಗ ಬೆಳೆದು ನಿಂತ. ಇದೀಗ ಹತ್ತನೇ ತರಗತಿ. ಎಂಟು ಅಂಟುವಾಗಲೇ ಆತ ರಾಗ ಎಳೆದಿದ್ದ. ಹೋಗಲಿ  ಅಂತ ನನ್ನ ಹಳೆಯ ನೋಕಿಯ ಒಂದನ್ನು ಕೈಗೆ ಕೊಟ್ಟಿದ್ದೆ. ಅವನು ಅಷ್ಟೇ  ದನ್ನು ಬದಿಗಿಟ್ಟು ನನ್ನ ಸ್ಮಾರ್ಟ್ ಫೋನ್ ಎಲ್ಲಿ ಕೈಯಿಂದ ಕೆಳಗಿಡುತ್ತೆನೋ ಅಂತ ಕಾದು ನೋಡುತ್ತಾನೆ. ಇದೀಗ ಹತ್ತನೇ ತರಗತಿ. ಸ್ಮಾರ್ಟ್ ಫೋನ್ ಬೇಕೇ ಬೇಕು ಅಂತ ರಾಗ ಎಳೆದ. ಅದಿಲ್ಲದೇ ಹೋಗುವುದಿಲ್ಲ. ಹೌದು ಮಕ್ಕಳಿಗೆ ಮೊಬೈಲ್ ಕೊಡಲೇಬೇಕಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ತೀರ ಅವಶ್ಯಕ ಸಾಧನ. ಹಾಗಂತ ಹೇಳಿ ಹೊಸದಾದ ಸ್ಮಾರ್ಟ್ ಫೋನ್ ಕೊಡಿಸಿದೆ. ಆಕೆ ಅದನ್ನು ನೋಡಿದ್ದೇ ತಡ ಬೆಲೆ ಕೇಳಿ ಒಂದು ಸಲ ಹೌ ಹಾರಿದರೆ ಅವನಿಗೆ ಮೊಬೈಲ್ ಬೇಡವೇ ಬೇಡ ಮುಖ ಸಿಂಡರಿಸಿದಳು. ಆದರೆ ಅದನ್ನು ಕೇಳುವ ಸ್ಥಿತಿಯಲ್ಲಿ ನಾನೂ ಇಲ್ಲ ಪ್ರಣವ ಮೊದಲೇ ಇಲ್ಲ. ಮೊಬೈಲ್ ಕೊಡಿಸಿದೆ. ಈಗ ಕೊರೋನ ಸಮಯದಲ್ಲಿ ಮೊಬೈಲ್ ಬೇಕೇ ಬೇಕು. ಆನ್ ಲೈನು ಕ್ಲಾಸು ಅಂತ ಬೇಡದೇ ಇದ್ದದ್ದನ್ನು ಬಲವಂತವಾಗಿ ಕೊಡುವ ಅನಿವಾರ್ಯತೆ ಬಂದು ಬಿಟ್ಟಿದೆ. 



        ಒಂದು ದಿನ ಆಕೆ ಮತ್ತು ಆತನಿಗೆ ಜಗಳವೋ ಜಗಳ. ನನ್ನಲ್ಲಿ ಬಂದು ಒಂದೇ ರಾಗ ಮೊಬೈಲ್ ಯಾಕೆ ಕೊಟ್ಟದ್ದು. ಅವನು ಓದುವುದಿಲ್ಲ. ಟೀಚರ್ ಸದ್ದು ಕೇಳುವ ಬದಲು ಇನ್ನೇನೋ ಕೇಳುತ್ತಿರುತ್ತದೆ. ಅದರಲ್ಲಿ ಟೀಚರ್ ಮಾತು ಮಾತ್ರ ಕೇಳಬೇಕು. ಆಕೆಯ ವಾದ. ಹೌದು ಅವನು ಏನು ನೋಡುತ್ತಾನೋ? ಏನು ಮಾಡುತ್ತಾನೊ ?ಯಾರು ಗಮನಿಸಬೇಕು. ಆಗ ನಮಗಿರಬೇಕಾದದ್ದು ವಿಶ್ವಾಸ ಒಂದೇ. ಆದರೂ ವಿಶ್ವಾಸದ ಬುಡ ಅಲುಗಾಡುವ ಅನುಭವವಾಗುತ್ತದೆ. ಮಗ ಏನನ್ನೋ ನೋಡುತ್ತಾನೇ. ಯಾರಲ್ಲೋ ಮಾತನಾಡುತ್ತಾನೆ. ನಡು ರಾತ್ರಿಯಲ್ಲೂ ಮೊಬೈಲ್ ಸದ್ದು ಕೇಳುತ್ತದೆ. ಆತಂಕ ನನಗೆ. ಆಗ ನಾನು ಆತನನ್ನು ಹತ್ತಿರ ಕರೆದು ಹೇಳಿದೆ.
ಪ್ರಣವನಲ್ಲಿ ನಾನು ಸಹಜ  ಅಪ್ಪನಾಗಿ ವ್ಯವಹರಿಸುವುದಿಲ್ಲ. ನಾನು ಅಪ್ಪನೇ ಅಲ್ಲ ಎಂಬಂತೆ. ಆಗ ಆತ ಹೇಳುವುದುಂಟು ಅಪ್ಪನೆಂದರೆ ನನ್ನಪ್ಪನ ಹಾಗಿರಬೇಕು. ಅಪ್ಪ ಅಪ್ಪನಾಗಿರಬಾರದು. ಮತ್ತೇನು. ಹೋಗಲಿ ನಮ್ಮೊಳಗಿನ ಸಲುಗೆಯೇ ಅಂತಹುದು. ಆತನ ಅಂಗುಲ ಅಂಗುಲವೂ ಅರಿತವ ನಾನು. ಯಾವಾಗ ಹೇಗಿರುತ್ತಾನೆ ಕಣ್ಣಿಗೆ ಬಟ್ಟೆ ಕಟ್ಟಿ ಹೇಳಬಲ್ಲೆ. ಆತನು ಅಷ್ಟೇ ಅಪ್ಪನ ವಾಸನೆಯನ್ನು ಕ್ಷಣ ಮಾತ್ರದಲ್ಲಿ ಗ್ರಹಿಸಿಬಿಡುವವನು. ಈಗ ಈಕೆಯ ಮೊಬೈಲ್ ಗದ್ದಲ ಕೇಳಿ ಹತ್ತಿರ ಕರೆದೆ. ಕೇಳಿದೆ, ಮೊಬೈಲ್ ಮಧ್ಯ ರಾತ್ರಿಯೂ ಸದ್ದು ಮಾಡುತ್ತದಲ್ಲ. ಒಂದು ಸಣ್ಣ ಅನುಮಾನ ನನಗೂ ಇದ್ದರೆ ಅದು ತಪ್ಪಲ್ಲ. ಆತ ಹೇಳಿದ ಒಂದೆ ಮಾತು. 


“ ಅಪ್ಪ ನನ್ನಲ್ಲಿ ವಿಶ್ವಾಸ ಇಲ್ವಾ….ನಿಮ್ಮ ಮಗ ಇದು..ಹಾಗೆಲ್ಲ ಎನೂ ಇಲ್ಲ” ಅವನದ್ದು ಪ್ರಾಮಾಣಿಕ ಅನಿಸಿಕೆ. ನನ್ನಲ್ಲಿ ಆತನ ವ್ಯವಹಾರವೇ ಹಾಗೆ. ಮುಚ್ಚಿಡುವದ್ದು ಏನೂ ಇರುವುದಿಲ್ಲ. ಮುಚ್ಚಿಟ್ಟರೂ ಅದು ರಹಸ್ಯವಾಗಿ ಉಳಿಯುವುದಿಲ್ಲ. ಎಷ್ಟೋ ಸಲ ಹೇಳಿದ್ದೇ…ನೀನು ಏನೂ ಮಾಡು ಅಪ್ಪ ಅಮ್ಮನಿಗೆ ಪ್ರಾಮಾಣಿಕನಾಗಿರು. ನಾನು ನನ್ನ ಜೀವನದಲ್ಲಿ ಅತಿ ಹೆಚ್ಚು ಆದ್ಯತೆ ಕೊಟ್ಟದ್ದು ಎಂದರೆ ನನ್ನ ಪ್ರಾಮಾಣಿಕತೆಗೆ. ಈ ವಿಶ್ವಾಸ ಇಲ್ಲದೇ ಇದ್ದರೆ ನಾವುಗಳು ಬದುಕಿರುವುದಕ್ಕೆ ಅರ್ಥವಿಲ್ಲ. ನನ್ನ ಎದುರು ಎಲ್ಲ ಸರಿಯಾಗೇ ಇದ್ದರೂ ನನ್ನ ಹಿಂದೆ ಹೇಗೆ ಅಂತ ನಂಬುದುವುದು ಹೇಗೆ. ಹಾಗಾಗಿಯೇ ಆತನಿಗೆ ಮೊದಲಿನಿಂದಲೇ ಪ್ರಾಮಾಣಿಕತೆಯ ಉದಾತ್ತ ಧ್ಯೇಯವನ್ನು ತಿಳಿಸಿದ್ದೆ. ಇದೆಲ್ಲ ಆತನಿಗೆ ಅರಿವಿದೆ. ಆದರೂ ಇಂದು ಮತ್ತಷ್ಟು ಹೇಳಬೇಕು ಎನಿಸಿ ನನ್ನದೇ ಬದುಕಿನ ಕಥೆ ಹೇಳಿದೆ.
ನನ್ನಕೈಯಲ್ಲಿ ನನ್ನ ಹತ್ತನೇ ತರಗತಿಯ ಅಂಕ ಪಟ್ಟಿ ಇತ್ತು. ಇದನ್ನು ಹಲವು ಸಲ ಆತನೂ ನೋಡಿದ್ದ. ಅಪ್ಪನ ಶೇಕಡಾ ತೊಂಭತ್ತು ಅಂಕ ಆತನಿಗೆ ಹೆಮ್ಮೆಯ ವಿಚಾರ. ಇಂದು ಮತ್ತದೇ ಅಂಕ ಪಟ್ಟಿಯನ್ನು ತೋರಿಸಿ ಕೇಳಿದೆ. “ ನೋಡು ಅದರಲ್ಲಿ ಭೌತ ಶಾಸ್ತ್ರದ ಮಾರ್ಕ್ ಎಷ್ಟಿದೆ? “ ಹೌದು ಅದು ಐವತ್ತರಲ್ಲಿ ನಲ್ವತ್ತೇಳು... ಕೇವಲ ಮೂರು ಅಂಕಗಳ ಕೊರತೆ. ಅದು ಹೇಗೆ ಕಡಿಮೆ ಬಂತು? 


ನಾನು ಆ ಮೂರು ಅಂಕಗಳ ಕೊರತೆಯ ಕಥೆಯನ್ನು ಹೇಳುವುದಕ್ಕೆ ತೊಡಗಿದೆ. 


  ಅದು ಹತ್ತನೇ ತರಗತಿಯ ಕೊನೆಯ ಭೌತ ಶಾಸ್ತ್ರದ ಪರೀಕ್ಷೆ. ಐವತ್ತು ಅಂಕಗಳ ಎರಡು ಗಂಟೆಯ ಅವಧಿಯ ಪರೀಕ್ಷೆ. ಸಹಜವಾಗಿ ಶಾಲೆಯ ಪರಿಸರ ಶಾಂತವಾಗಿ ಮಧ್ಯಾಹ್ನದ ಗಾಳಿಯ ಸದ್ದಿಗೆ ಕಿವಿಯಾಗಿ ನಿಂತರೆ, ಮಕ್ಕಳ ಬಿಸಿ ಉಸಿರ ಸದ್ದೇ ಸುತ್ತಲಿನ ಬಿಸಿಯನ್ನು ಹೆಚ್ಚಿಸಿದಂತೆ ಬಿಸಿಲ ಸೆಖೆ. ಭೌತ ಶಾಸ್ತ್ರ್ರ ನನ್ನ ಪಾಲಿಗೆ ಬಹಳ ಸುಲಭದ ವಿಷಯ. ಪ್ರಶ್ನಾ ಪತ್ರಿಕೆಯ ಎಲ್ಲ ಪ್ರಶ್ನೆಗಳನ್ನು ಮೊದಲೇ ಅವಲೋಕನ ಮಾಡಿದ ನಂತರ ಮತ್ತಷ್ಟು ಉತ್ಸಾಹದಲ್ಲಿ ಉತ್ತರವನ್ನು ಬರೆಯುವುದರಲ್ಲಿ ಮಗ್ನನಾಗಿದ್ದೆ. ಸುತ್ತ ಮುತ್ತಲಿನ ಗಮನವೇ ಇಲ್ಲ. ಅಂದು ಪರಿಕ್ಷಾ ವೀಕ್ಷಕರಾಗಿ ಮೊದಲು ನಮ್ಮ ಶಾಲೆಯಲ್ಲಿ ಅಧ್ಯಾಪಕರಾಗಿದ್ದವರೇ ಪರೀಕ್ಷಕರಾಗಿ ಬಂದಿದ್ದರು. ಅಲ್ಲಿಂದಿಲ್ಲಿಗೆ ಇಲ್ಲಿಂದ ಅಲ್ಲಿಗೆ ಬಹಳ ನಿಶ್ಯಬ್ದವಾಗಿ ಕಾಲ ಹೆಜ್ಜೆಯ ಸಪ್ಪಳವಾಗದಂತೆ ಹಾಲ್ ತುಂಬ ಓಡಾಡುತ್ತಿದ್ದರು.  ನಮ್ಮೂರಿನ ವ್ಯಕ್ತಿ. ಮೊದಲಿನ ಪರಿಚಯ ಮಾತ್ರವಲ್ಲ ಒಂದು ರೀತಿಯ ಸಲುಗೆಯ ಸ್ನೇಹವೂ ಜತೆಗಿತ್ತು. ಹಾಗೆ ನೋಡಿದರೆ   ನಮ್ಮ  ಶಾಲೆಯ ಅಧ್ಯಾಪಕ ವೃಂದವೇ ಹಾಗೆ. ಮಕ್ಕಳ ಜತೆ ಹಲವರು ಮಿತ್ರರಂತೆ ಬೆರೆಯುತ್ತಿದ್ದರು. ನಾನು ಬೇರೆ,  ತರಗತಿಯ ಒಳ್ಳೆ ಕಲಿಯುವ ವಿದ್ಯಾರ್ಥಿ.  ಎಲ್ಲ ವಿಷಯದಲ್ಲೂ ಎಂಭತ್ತು ತೊಪ್ಪತ್ತು ಶೇಕಡಾ ಅಂಕ ಪಡೆಯುವವನು. ಸಹಜವಾಗಿ ಹಲವರ ಗಮನ ಇದ್ದೇ ಇರುತ್ತದೆ. 


     ಈ ಪರೀಕ್ಷಕ ಮಾಸ್ತರ್ ಕೂಡ  ನಮಗೆಲ್ಲ ಮಿತ್ರರಂತೆ. ಬಹಳ ಒಳ್ಳೆಯ ರೀತಿಯಲ್ಲಿ ಪಾಠ ಮಾಡುವ ಮಾಸ್ತರ್ ಅಂತನೇ ಜನ ಜನಿತವಾಗಿತ್ತು.   ಮೊದಲು ಅದೇ ಶಾಲೆಯಲ್ಲಿದ್ದು ನಮಗೆಲ್ಲ ಕಲಿಸಿದ್ದ ಪರಿಚಿತ  ಅಧ್ಯಾಪಕರು.  ಹಾಗಾಗಿ ಪರೀಕ್ಷಾ ಕೇಂದ್ರ ಆ ಅಮಟ್ಟಿಗೆ ಒತ್ತಡ ರಹಿತವಾಗಿತ್ತು.

ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಾ ನಮ್ಮನ್ನೆಲ್ಲ ಗಮನಿಸುತ್ತಿದ್ದವರು ಏಕಾ ಏಕಿ ನನ್ನ ಸುತ್ತವೇ ಸುತ್ತ ತೊಡಗಿದರು. ನನಗೆ ಯಾಕೋ ವಿಚಿತ್ರ ಅನಿಸಿತು. ಆದರೂ ಆತಂಕವಿಲ್ಲದೆ ನನ್ನ ಪಾಡಿಗೆ ಬರೆಯುತ್ತಿದ್ದೆ. ಹತ್ತಿರ ಬಂದವರೆ ನನ್ನ ಉತ್ತರ ಪತ್ರಿಕೆಯಲ್ಲಿ ಕೈ ಬೆರಳಲ್ಲಿ ಒಂದು ಉತ್ತರದತ್ತ ಬೆರಳು ಇಟ್ಟು ತಪ್ಪು ಅಂತ ಗೀಚಿದರು. ಅರೇ ನನಗೆ ಗೊತ್ತಿದ್ದ ಸುಲಭದ ಭೌತ ಶಾಸ್ತ್ರದ ಒಂದು ಲೆಕ್ಕದ  ಪ್ರಶ್ನೆ. ಬರೆದ ರೀತಿ ವಿಧಾನ ಎಲ್ಲವೂ ಸರಿಯಾಗೇ ಇತ್ತು. ಆದರೂ ತಪ್ಪು...!  ನೋಡಿದೆ ತಪ್ಪು ಯಾವುದೆಂದು ಅರ್ಥವಾಗಲೇ ಇಲ್ಲ. ಕೊನೆಯಲ್ಲಿ ನೋಡಿದರಾಯಿತು ಅಂತ ಉಳಿದೆಲ್ಲ ಪ್ರಶ್ನೆಗಳ ಉತ್ತರವನ್ನು ಬರೆದು ಮುಗಿಸಿದೆ. ಅಗಲೂ ಒಂದೆರಡು ಸಲ ಹತ್ತಿರ ಬಂದು ...." ಅದು ತಪ್ಪು ಮಾರಾಯ. ಸರಿ ಮಾಡು " ಅಂತ ಮೆತ್ತಗೆ ಯಾರಿಗೂ ಕೇಳದಂತೆ ಹೇಳಿದ್ದರು. ನನಗೆ ಆದರೂ ತಪ್ಪೇನು ಅರ್ಥವಾಗಲಿಲ್ಲ. ನಾನು ಅದೇ  ಪ್ರಶ್ನೆಯನ್ನೆ ಗಮನಿಸುತ್ತ ಇದ್ದೆ. ಹಲವು ಬಾರಿ ಮೇಲಿಂದ ಕೆಳಗೆ ನೋಡಿದೆ. ಇಲ್ಲ ತಿಳಿಯಲೇ ಇಲ್ಲ. ಬುದ್ಧಿಗೆ ಮಂಕು ಕವಿದಂತೆ.  ನಾನು ಉತ್ತರ ಸರಿಪಡಿಸದೇ ಇದ್ದದ್ದನ್ನು ಕಂಡ ಅವರು ಮತ್ತೂ ಮೆಲು ಧ್ವನಿಯಲ್ಲಿ ಹೇಳಿದರು 
" ನೀನು ಗುಣಿಸಿದ್ದು ತಪ್ಪಾಗಿದೆ. ಸರಿಯಾಗಿ ನೋಡು"

        ಹೌದು ನಾನು ಗುಣಿಸಿ ಬರೆದ ಉತ್ತರ ತಪ್ಪಾಗಿತ್ತು. ಅವಸರದಲ್ಲಿ ಉತ್ತರ ಗೊತ್ತಿದೆ ಎಂಬ ಉಡಾಫೆಯಲ್ಲಿ ನಾನು ತಪ್ಪಾಗಿ ಬರೆದಿದ್ದೆ. ಸಂದಿಗ್ಧದಲ್ಲಿ ಸಿಲುಕಿದೆ. ಛೇ ತಪ್ಪಾಗಿ ಹೋಯಿತು.  ಆಯಿತು ಹಾಗೆ ಸ್ವಲ್ಪ ಹೊತ್ತು ಕುಳಿತೆ. ಅಷ್ಟು ಹೇಳಿದ ಮಾಸ್ತರ್ ಮತ್ತೆ ತಮ್ಮ ಕುರ್ಚಿಯಲ್ಲಿ ಕುಳಿತು ಉತ್ತರ ಪತ್ರಿಕೆ ಬರೆದು ಇರಿಸಿ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಗಮನಿಸುತ್ತಿದ್ದರು. ಒಬ್ಬೊಬ್ಬರಾಗಿ ಹೋಗುತ್ತಿದ್ದರು. ನಾನೂ ಎದ್ದೆ  ಬರೆದ ಪತ್ರಿಕೆಯ ಜತೆಯಲ್ಲಿದ್ದ ಇತರ ಪುಟಗಳನ್ನು ದಾರದಿಂದ ಕಟ್ಟಿದೆ.  ಎದ್ದು ಕುಳಿತು ಹಾಗೇ ಎದ್ದು ಮಾಸ್ತರ ಎದುರಿನ ಮೇಜಿನ ಮೇಲಿದ್ದ ಉತ್ತರ ಪತ್ರಿಕೆಗಳ ಮೇಲೆ ನನ್ನದನ್ನು ಇರಿಸಿದೆ. ಮಾಸ್ತರ್ ಒಂದುಸಲ ನನ್ನ ಪತ್ರಿಕೆಯನ್ನು ತೆರೆದು ನೋಡಿದರು. ನಾನು ಅಷ್ಟರಲ್ಲೇ ಬಾಗಿಲ ಹತ್ತಿರ ಹೋದೆ. ಅವರು ಸದ್ದು ಮಾಡಿದರು. ತಿರುಗಿ ನೋಡಿದಾಗ ನನ್ನನ್ನು ಆತಂಕದಂದಲೇ ನೋಡಿದರು. ನಾನು ತಿರುಗಿ ಒಂದು ಕಿರು ನಗೆ ನಕ್ಕು ಬಾಗಿಲು ದಾಟಿ ಹೊರ ಬಂದೆ. ಅದಾಗಲೆ ಶಾಲೆಯ ಪ್ಯೂನ್ ಗಂಟೆಯನ್ನು ಬಡಿದಾಗಿತ್ತು.

         ಆ ಮಾಸ್ತರ್ ತನ್ನ ವೃತ್ತಿಧರ್ಮವನ್ನು ಬದಿಗಿಟ್ಟು ನನಗಾಗಿ ಅವರು ತಪ್ಪೆಸಗಿದ್ದರು. ಅವರು ಎಸಗಿದ್ದು ಹೇಗೇ ಇರಲ್ಲಿ ನಿಜಕ್ಕಾದರೂ ಅದು ಅಪರಾಧವೇ. ಆದರೂ ನನ್ನ ಬಗೆಗಿನ ಕಾಳಜಿ ಪ್ರೀತಿಯನ್ನು ತೋರಿಸಿದ್ದರು. ಆದರೆ ನನಗೆ ಯಾಕೋ ನಾನು ಗಳಿಸಿದ್ದು ಅದು ನನ್ನದೇ ಆಗಿ ಪರಿಪೂರ್ಣವಾಗಿರಬೇಕು. ಇಲ್ಲವಾದರೆ ಅದಕ್ಕೆ ನಾನು ಅರ್ಹನಲ್ಲ ಎಂಬ ಭಾವನೆ ಬಂದಿತ್ತು. ಆ ಉತ್ತರ ಸರಿಪಡಿಸುವುದು ದೊಡ್ಡ ವಿಚಾರವಲ್ಲ. ಅದೇ ಪ್ರಶ್ನೆಯ ಉಳಿದೆಲ್ಲವನ್ನೂ ಸರಿ ಬರೆದಿದ್ದೆ. ಈಗ ಸಂಧಿಗ್ಧ ನನ್ನನ್ನು ಕಾಡಿತು. ಆ ಸಂದಿಗ್ದತೆ ತುಸು ಹೊತ್ತು ಅಷ್ಟೆ. ಯೋಚಿಸಿದೆ ಈ ಸಂದಿಗ್ದತೆ ಅದರಲ್ಲು ಈ ಸಂದಿಗ್ಧತೆ  ಕಾಡುವುದೇ ಒಂದು ಅಪರಾಧ.   ಹಾಗಾಗಿ ಅದನ್ನೇ ಮಾಡಿದೆ.  ಹೌದು, ನಾನು  ತಪ್ಪಾಗಿದ್ದ ಉತ್ತರವನ್ನು ಸರಿಪಡಿಸಲೇ ಇಲ್ಲ. ಯಾಕೆಂದರೆ ನನಗೆ ಆತ್ಮವಂಚನೆ ಸಾಧ್ಯವಾಗಲೇ ಇಲ್ಲ. ಅದೇ ಮಾಸ್ತರಿಂದ ಹಲವು ಪ್ರಾಮಾಣಿಕತೆಯ ಬಗ್ಗೆ ಸತ್ಯದ ಬಗ್ಗೆ ಪಾಠ ಕೇಳಿದ್ದ ನನಗೆ ಅವರು ಹೇಳಿಕೊಟ್ಟ ಉತ್ತರವನ್ನು ಬರೆಯುವುದಕ್ಕೆ ಸಾಧ್ಯವಾಗಲಿಲ್ಲ. ಒಂದು ರೀತಿಯಲ್ಲಿ ನಾನು ಬರೆದೆನೆಂದರೆ ಎಷ್ಟೆಂದರೂ ನಾನು ಅವರ ಇದಿರಿಗೆ ಪ್ರತಿಶತ ನೂರು ಪ್ರಾಮಾಣಿಕನಲ್ಲ.  ಒಂದು ವೇಳೆ ಅವರು ನನ್ನನ್ನು ಪರೀಕ್ಷೆ ಮಾಡಲು ಹೇಳಿರ ಬಾರದೇಕೆ ಅಂತ ಒಮ್ಮೆ ಯೋಚಿಸಿದೆ.  ಒಂದು ವೇಳೆ ಬರೆದರೆ ಅದು ನನ್ನ ನಿಜವಾದ ಅಂಕವಲ್ಲ ಎಂಬ ಭಾವನೆ.  ನಾನು ತಪ್ಪು ಉತ್ತರವನ್ನು ಸರಿ ಮಾಡಿ ದೊಡ್ಡ ತಪ್ಪು ಮಾಡುತ್ತಿದ್ದೇನೆ ಎಂದನಿಸಿತು. ಹೋಗಲಿ. ಪ್ರಶ್ನೆಯ ಉತ್ತರ ಅದರ ವಿಧಿ ವಿಧಾನವನ್ನು ಸರಿಯಾಗಿ ಬರೆದಿದ್ದೆ. ಕೊನೆಯಲ್ಲಿ ಉತ್ತರದ ಎರಡು ಅಕ್ಷರ ತಪ್ಪಾಗಿತ್ತು. ನಾನು ಫೇಲ್ ಅಂತೂ ಆಗುವುದಿಲ್ಲ. ಅದು ಖಾತರಿ ಇತ್ತು. ಮತ್ತೆ ಯೋಚಿಸಲಿಲ್ಲ. ನನ್ನದಲ್ಲದ ಆ ಮೂರು ಅಂಕದ ಬಗ್ಗೆ ಮತ್ತೆ ಚಿಂತಿಸಲಿಲ್ಲ.  ಪ್ರಶ್ನೆ ಪತ್ರಿಕೆ ತಪ್ಪು ಉತ್ತರದಲ್ಲೇ ಇಟ್ಟು ಬಂದೆ. ಅತೃಪ್ತನಾದರು ಆ ಅತೃಪ್ತಿಯಲ್ಲಿ ಒಂದು ತೃಪ್ತಿಯನ್ನು ಅನುಭವಿಸಿದ್ದೆ. ಅದೇ ನನ್ನ ಪ್ರಾಮಾಣಿಕತೆ. ಹೊರಗೆ ಬಂದಾಗ ಮಿತ್ರ ಸಹಪಾಠಿ ಇದ್ದ. ಅವನಲ್ಲಿ ಸಂಗತಿ ಹೇಳಿದೆ. ಅವನು ವಿಚಿತ್ರವಾಗಿ ನನ್ನತ್ತ ನೋಡಿದ. ಆ ಪರೀಕ್ಷೆಯಲ್ಲಿ ಅಂಕ ಐವತ್ತರಲ್ಲಿ ನಲ್ವತ್ತೇಳು ಬಂದಿತ್ತು.  ಬಹುಶಃ ಆ ಕಡಿಮೆಯಾದ ಮೂರು ಅಂಕ ಅದೇ ಆಗಿರಬೇಕು. ನನ್ನ ಪ್ರಾಮಾಣಿಕತೆಯ ಬೆಲೆ ಅದು.  ಇದು ನನ್ನ ಬೆನ್ನನ್ನು ನಾನೇ  ಚಪ್ಪರಿಸಲು ಹೇಳುತ್ತಿಲ್ಲ.ಈಗ ಹೀಗೆ ಮಗನ ಮುಂದೆ ಹೇಳುವುದು ಆತ್ಮ ಸ್ತುತಿಯಾಗಬಹುದು.  ನಾನು ಉತ್ತಮನಾಗಿ ಆ ಮಾಸ್ತರನ್ನು ಕೆಟ್ಟವರನ್ನಾಗಿ ಚಿತ್ರಿಸಬಾರದು.  ವೃತ್ತಿಧರ್ಮ ಏನೇ ಇರಲಿ ಅದು ನನ್ನದಲ್ಲದ ನಿಯಮ. ಮೊದಲು ನನ್ನ ಪರಿಶುದ್ದಿ.   ಈಗ ಸಾಮೂಹಿಕವಾಗಿ ಕದ್ದು ನೋಡಿ ಬರೆಯುವಾಗ  ಹೀಗೂ ಆಗಲು ಸಾಧ್ಯವೇ ಅಂತ ಮಗನಿಗೂ  ಆಶ್ಚರ್ಯ. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಹಾಗೆ ಹೇಳಿಕೊಡುವುದು ನಿಯಮಾನುಸಾರ ತಪ್ಪಾಗಿರಬಹುದು. ಅವರು ಯಾವ ಉದ್ದೇಶದಲ್ಲಿ ಹೇಳಿರಲಿ ಅಲ್ಲಿ ಆ ತಪ್ಪು ಅಗಲಿಲ್ಲ.  ಈಗ ಹಿಗೆ ಹೇಳಿಕೊಟ್ಟು ದಕ್ಷಿಣೆ ಪಡೆಯುವವರು ಇದ್ದಿರಲೂ ಬಹುದು.

           ಸತ್ಯ  ಪ್ರಾಮಾಣಿಕತೆ ಸನ್ಮನಸ್ಸು ಇವುಗಳ ಲಾಭ ಅದನ್ನು ಹೊಂದಿರುವವನಿಗೆ ಆಗುವುದಕ್ಕೆ ಸಾಧ್ಯವಿಲ್ಲ. ಹಲವು ಸಲ ಅದು ಮೂರ್ಖತನವಾಗಿರಬಹುದು. ಆದರೆ ಸತ್ಯದ ಮೌಲ್ಯ ಮನಸ್ಸಿನ ವಿಶ್ವಾಸದ ಮೌಲ್ಯ. ಸತ್ಯದ ಎದುರು ಎಷ್ಟು ಶೂನ್ಯವನ್ನು ಸುತ್ತಿ ಅದರ ಮೌಲ್ಯ ಅಳೆಯಬಹುದು. ಅದು ನಾವು ಕಟ್ಟುವ ಮೌಲ್ಯವಾಗಬಹುದೇ ಹೊರತು ಸತ್ಯದ ಮೌಲ್ಯವಲ್ಲ. ಅದಕ್ಕಾಗೆ ಅದನ್ನು ಪರಮ ಸತ್ಯ ಎನ್ನುವುದು. ನಮ್ಮ ಪ್ರಾಮಾಣಿಕತೆಯಲ್ಲಿ ನಷ್ಟವಾಗುವದ್ದು ಹಲವಿರಬಹುದು. ಆದರೆ ಅದನ್ನು ನಾವು ಹೊಂದಿದ್ದೇ ವೆ ಎಂಬ ಒಂದು ಆತ್ಮ ತೃಪ್ತಿ ಸಾಕಾಗುತ್ತದೆ.

            ಮಗನಿಗೆ ಹೇಳಿದೆ ನಾನು ನಿನ್ನಿಂದ ಮೊಬೈಲ್ ಕಿತ್ತುಕೊಳ್ಳಬಹುದು. ಅದು ನನ್ನ ನಿನ್ನ ನಡುವಿನ ವಿಶ್ವಾಸವನ್ನು ಇಲ್ಲದಂತೆ ಮಾಡುತ್ತದೆ. ಅದು ನನ್ನಿಂದ ಸಹಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಇಲ್ಲಿ ವಿಶ್ವಾಸ ನೆಲೆ ನಿಲ್ಲುವುದಕ್ಕೆ ಪ್ರಾಮಾಣಿಕತೆ ಒಂದೇ ಆಯ್ಕೆ. ಮೊಬೈಲ್ ನಲ್ಲಿ ಪಾಠವನ್ನಷ್ಟೇ ಕೇಳಬೇಕೆಂದು ಹೇಳುತ್ತಿಲ್ಲ. ಏನೇ ಕೇಳು ಏನೆ ಮಾಡು ಅಪ್ಪ ಅಮ್ಮನಿಗೆ ಪ್ರಾಮಾಣಿಕನಾಗಿರು. ನಿನ್ನಿಂದ ಮೊಬೈಲ್ ಕಿತ್ತುಕೊಂಡು ಕೊರತೆಯಾದ ವಿಶ್ವಾಸದಲ್ಲಿ ನಂತರ ನೀನು ಓದುತ್ತಿ ಅಂತ ನಾನು ವಿಶ್ವಾಸ ಇಡಬೇಕು.

          ಮಗ ಒಂದು ಸಲ ನನ್ನತ್ತ ನೋಡಿದ. ಪ್ರಾಮಾಣಿಕತೆಯ ಬಗ್ಗೆ ಪಾಠ ಹೇಳುವ ಅಪ್ಪ ಸುಳ್ಳು ಹೇಳಲಾರ  ಎಂಬ ವಿಶ್ವಾಸ ಅಲ್ಲಿತ್ತು. ಬಹುಶಃ ನನ್ನಂತೆ ಅಪ್ಪ ಅಮ್ಮ ಎನಿಸಿಕೊಂಡವರು ಮಕ್ಕಳಿಂದ ಬಯಸಬೇಕಾಗಿರುವುದು ಇದನ್ನೆ. ನಮ್ಮ ಮಕ್ಕಳಲ್ಲಿ ಮೊದಲು ನಾವು ವಿಶ್ವಾಸ ಇಡಬೇಕು. ಆ ವಿಶ್ವಾಸ ಏನು ಎಂಬ ಅರಿವನ್ನು ಮೂಡಿಸಬೇಕು. ಅದಿಲ್ಲದೇ ಹೊದರೆ ಯಾವ ವಿಶ್ವ ವಿದ್ಯಾಲಯದ ಶಿಕ್ಷಣವಾದರೂ ಅದಕ್ಕೆ ಅರ್ಥವಿರುವುದಿಲ್ಲ.
 
      

      ಈಗ ಮಗನಿಗೆ ಅರ್ಥವಾಗಿದೆ. ಯಾಕೆಂದರೆ ಈಗ ಆತನ ಮೊಬೈಲ್ ಪಾಸ್ ವರ್ಡ್ ನನಗೆ ಗೊತ್ತಿದೆ. ಆತ ರಹಸ್ಯವಾಗಿ ಏನೇ ಮಾಡಿದರೂ ಅದು ನನ್ನಲ್ಲಿ ಬಹಿರಂಗವಾಗುತ್ತದೆ.  

      ಈಗಲೂ ಭೌತ ಶಾಸ್ತ್ರದ ಆ ಮೂರು ಅಂಕ ನನ್ನ ಪ್ರಾಮಾಣಿಕತೆಯ ಮೌಲ್ಯ.  ನನ್ನ  ಜೀವನ ಪರ್ಯಂತ ಮರೆಯುವುದಕ್ಕೆ ಸಾಧ್ಯವಿಲ್ಲ. ಪ್ರಾಮಾಣಿಕತೆ ಅದು ಮುಂದುವರೆಯಬೇಕು.  ಈ ಘಟನೆಯ ಮೂಲಕ ನನ್ನ ಮಗನಲ್ಲಿ ರವಾನಿಸಿದ್ದೇನೆ. ನನ್ನ ಮಗನಲ್ಲಿ ಅದು ಮುಂದುವರೆಯುವ ವಿಶ್ವಾಸವಿದೆ.

ಲೇಖಕರು: ಎಂ ರಾಜಕುಮಾರ್
ಪೈವಳಿಕೆ.