Sunday, March 31, 2024

ಶಾಲೆಯ ಸಜ್ಜಿಗೆಯ ನೆನಪು

  ಅಂದು ಪುಟ್ಟ ಬಾಲಕ ಪೈವಳಿಕೆ ಶಾಲೆಯ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದೆ. ಆದಿನ ಬಹಳ ಖುಷಿಯಲ್ಲಿ ಶಾಲೆಗೆ ಹೊರಟಿದ್ದೆ.  ಹೆಗಲಿಗೆ ನೇತಾಡಿಸಿದ ಬಟ್ಟೆ ಚೀಲದಲ್ಲಿದ್ದ ಸ್ಲೇಟು ಪುಸ್ತಕದ ನಡುವೆ ಇಟ್ಟಿದ್ದ ಸಣ್ಣ ಅಲ್ಯುಮಿನಿಯಂ ತಟ್ಟೆಯನ್ನು ಆಗಾಗ ತಡವಿ ನೋಡಿಕೊಳ್ಳುತ್ತಿದ್ದೆ.  . ಕಪ್ಪು ಕಪ್ಪಾದ ತಟ್ಟೆ. ಮನೆಯಲ್ಲಿ ಅದನ್ನು ಅಷ್ಟಾಗಿ ಉಪಯೋಗಿಸುತ್ತಿರಲಿಲ್ಲ.  ಆತಟ್ಟೆಯನ್ನು ಮನೆಯಿಂದ ಯಾರಿಗೂ ತಿಳಿಯದಂತೆ ಎತ್ತಿಟ್ಟಿದ್ದೆ.  ಆಗ ನನ್ನಂತೆ ಕೆಲವರು ನಮ್ಮ ಮನೆಯಿಂದ ಒಟ್ಟಿಗೇ ಹೋಗುತ್ತಿದ್ದೆವು. ಎಲ್ಲರೂ ನನ್ನಿಂದ ಹಿರಿಯರು. ತಟ್ಟೆಯ ವಿಚಾರ ತಿಳಿದರೆ ಖಂಡಿತ ಬೈಯುತ್ತಾರೆ.  

ಆದಿನ ಹನ್ನೊಂದುಘಂಟೆಯಾಗುವುದನ್ನೇ ಕಾಯುತ್ತಿತ್ತು ಮನಸ್ಸು. ಹನ್ನೊಂದು ಎರಡನೇ ಘಂಟೆ ಬಾರಿಸಿದ ಪೀಯೊನ್ ನಮ್ಮ ತರಗತಿಗೆ ಬಂದು ಸಜ್ಜಿಗೆ ತಿನ್ನಲು ಬನ್ನಿ ಎಂದು ಕರೆದ.  ಮಕ್ಕಳು ಎಲ್ಲರೂ ತಂದಿದ್ದ ತಟ್ಟೆಯನ್ನು ಎತ್ತಿಕೊಂಡು ಹೊರಟರು. ನಾನೂ ಹೊರಟೆ. ಎರಡು ದಿನ ನನಗೆ ಸಜ್ಜಿಗೆ ಸಿಗಲಿಲ್ಲ. ಕಾರಣ ತಟ್ಟೆ ಇಲ್ಲ. ಅದುವರೆಗೆ ಯಾವುದೋ ಕಾಗದದ ತುಂಡು ತೆಗೆದುಕೊಂಡು ಅದರಲ್ಲೇ ಹಾಕಿಸಿ ತಿನ್ನುತ್ತಿದ್ದೆವು. ಮೊನ್ನೆ ಪೇಪರ್ ಗೆ ಸಜ್ಜಿಗೆ ಬಡಿಸುವುದಿಲ್ಲ ಎಂದು ಹೇಳಿದ ನಂತರ, ತಿನ್ನದೇ ಹಾಗೇ ವಾಪಾಸು ಬಂದಿದ್ದೆ. ಅಂದಿನ ಹಸಿವಿಗೆ ಉತ್ತರವಿರಲೇ ಇಲ್ಲ. ಆದಿನದ ಸಂಭ್ರಮ ಸಜ್ಜಿಗೆ ತಿನ್ನುವುದರಲ್ಲಿತ್ತು. ಎಲ್ಲರ ಜತೆಗೆ ತಾನೂ ತಿನ್ನಬಹುದು ಎನ್ನುವ ಬಯಕೆ ಈಡೇರಿತ್ತು. ಮನೆಯಿಂದ ಕದ್ದು ತಂದಿದ್ದ ತಟ್ಟೆಯಲ್ಲಿ ಸಜ್ಜಿಗೆ ಹಾಕಿ ತಿಂದಾಗ ಜಗತ್ತನ್ನೇ ಗೆದ್ದ ಅನುಭವ ಆ ಪುಟ್ಟ ಮನಸ್ಸಿಗೆ ಆಗಿತ್ತು. ಶಾಲೆಯಲ್ಲಿ ಮಾಡುತ್ತಿದ್ದ ಸಜ್ಜಿಗೆ ತಿನ್ನುವುದಕ್ಕೆ ಮನೆಯಲ್ಲಿ ಬಿಡುತ್ತಿರಲಿಲ್ಲ. ಆದರೆ ನನ್ನ ಹಸಿವಿಗೆ ಉತ್ತರವಾಗಿ ಆ ಸಜ್ಜಿಗೆ ಇರುತ್ತಿತ್ತು. ಆದಿನ ಆ ತಟ್ಟೆಯನ್ನು ಶಾಲೆಯಲ್ಲೇ ಬಿಟ್ಟಿದ್ದೆ. ತರಗತಿಯ ಅಂಚಿಗೆ ಎರಡು ದೊಡ್ಡ ಕಪಾಟು ಇತ್ತು. ಅದರ ಅಡಿಗೆ ತಟ್ಟೆಯನ್ನು ಇಟ್ಟಿದ್ದೆ. ಮನೆಗೆ ಕೊಂಡು ಹೋದರೆ ಪುನಃ ತರುವ ಭರವಸೆ ಇರಲಿಲ್ಲ.   ಸಾಯಂಕಾಲ ಮನೆಗೆ ಹೋದಾಗ ಅಮ್ಮನಲ್ಲಿ ತಟ್ಟೆಯನ್ನು ಎತ್ತಿಕೊಂಡು ಹೋದ ವಿಷಯ ಹೇಳಿದೆ. ಪುಟ್ಟ ಬಾಲಕ ನನಗೆ ಮುಚ್ಚಿಡುವುದಕ್ಕೆ ಬರಲಿಲ್ಲ. ಅಮ್ಮ ಯಾಕೋ ಬೈಯಲಿಲ್ಲ. ಬೈಗುಳದ ನಿರೀಕ್ಷೆಯಲ್ಲಿದ್ದೆ. ಆದರೆ ಅಮ್ಮ ಕೇಳಿದರು ಸಜ್ಜಿಗೆ ತಿಂದಿಯಾ ಅಂತ?  ಮನೆಯಲ್ಲಿ ಆಕೆಗೆ ಮಾತ್ರ  ನನ್ನ ಹಸಿವಿನ ಅರಿವಿತ್ತು. ಹೆತ್ತಮ್ಮ ಅಲ್ಲವೇ? ಏನೂ ಬೈಯಲಿಲ್ಲ.

  ಪೈವಳಿಕೆ ನಗರದ ಪ್ರಾಥಮಿಕ ಶಾಲೆ ಮತ್ತು ಬಾಯಾರು ಸಮೀಪ  ಇದ್ದ ಗಾಳಿಯಡ್ಕದ ಶಾಲೆಯ ಬಳಿಯಲ್ಲೆ ಹಲವು ಸಲ ನಾನು ಹೋಗುತ್ತಿರುತ್ತೇನೆ. ಒಂದು ಕಾಲದಲ್ಲಿ, ಒಂದರಿಂದ ಎರಡನೆ ತರಗತಿಗೆ ಹೋದ ಪೈವಳಿಕೆ ಶಾಲಾ ದಿನದ ನೆನಪು ಹಾಗು ಗಾಳಿಯಡ್ಕ ಶಾಲೆಯ ಮೂರನೆಯ ತರಗತಿಯ ದಿನಗಳು ನೆನಪಾಗುತ್ತವೆ. ಸುಮಾರು ಎಪ್ಪತರ ದಶಕದ ಆರಂಭದ  ದಿನಗಳು ಅವು. ಪೈವಳಿಕೆ ಚಿಕ್ಕ ಹಳ್ಳಿಯಾದರೆ, ಗಾಳಿಯಡ್ಕದ ಶಾಲೆ ಜನ ವಸತಿಯೇ ಇಲ್ಲದ ಗುಡ್ಡದ ಬಯಲಿನಲ್ಲಿ ಇತ್ತು. ಈಗ ಅಲ್ಲಿ ಹಲವು ಜನವಸತಿಗಳಾಗಿ ಹೊಸ ಊರು ಸೃಷ್ಟಿಯಾಗಿದೆ. ಬಾಲ್ಯದಲ್ಲಿ ಅಲ್ಲಿ ಹಗಲಿನಲ್ಲಿ ಸುತ್ತಾಡುವುದಕ್ಕೂ ಭಯ ಪಡಬೇಕಿತ್ತು. ಈಗ ಇಲ್ಲೆಲ್ಲ ಸಂಚರಿಸುವಾಗ ಬಾಲ್ಯದ ಶಾಲಾ ದಿನಗಳು ನೆನಪಾಗುತ್ತವೆ ಎಂಬುದು ಹೌದಾದರೂ ಅಲ್ಲಿಯೂ ನನಗೆ ನೆನಪಿಗೆ ಬರುವುದು, ಈ ಶಾಲೆಯಲ್ಲಿ ಕಲಿತ ವರ್ಣಮಾಲೆಯ ಅಕ್ಷರಗಳಲ್ಲ. ಉರು ಹೊಡೆದ ಮಗ್ಗಿಯಲ್ಲ. ಅಥವಾ ಬಾಲ್ಯದಲ್ಲಿ ಆಡಿದ ಆಟಗಳಲ್ಲ. ಬದಲಿಗೆ ನೆನಪಿಗೆ ಬರುವುದು ಈ ಶಾಲೆಯಲ್ಲಿ ಮಾಡಿ ಬಡಿಸುತ್ತಿದ್ದ’ ಸಜ್ಜಿಗೆ’. ಒಂದು ಬದುಕಿನ ಪುಟಗಳಲ್ಲಿ ಅಳಿಸದ ನೆನಪುಗಳನ್ನು ಉಳಿಸಬೇಕಿದ್ದರೆ ಅದರ ಭಾವನಾತ್ಮಕ ನಂಟು ಅದಾವ ಬಗೆಯದಿರಬಹುದು? 

   ಸರಕಾರ ಶಾಲಾ ಮಕ್ಕಳಿಗೆ ಉಚಿತವಾಗಿ ಒದಗಿಸುತ್ತಿದ್ದ ಒಂದು ಬಗೆಯ ಸಜ್ಜಿಗೆ. ಸಜ್ಜಿಗೆ ಎಂದರೆ ಬನ್ಸಿರವೆ ಅಥವಾ ಖಂಡ್ವ ರವೆಯ ಉಪ್ಪಿಟ್ಟು ಖಾರಾ ಬಾತ್ ಅಲ್ಲ.  ಗೋಧಿಯನ್ನು ತರಿದು ಮಾಡಿದಂತೆ ಅನಿಸಿದರೂ ಅದು ಯಾವುದೋ ಒಂದು ಬಗೆಯ ಸಜ್ಜಿಗೆ. ಗೋಧಿಯ ಸಿಪ್ಪೆಗಳು ಒಂದಷ್ಟು ಇನ್ನಿತರ ಧಾನ್ಯಗಳ ಪುಡಿಯೂ ಇತ್ತು ಎಂದು ನನ್ನ ನೆನಪು.  ಆ ಕಾಲದಲ್ಲಿ ಅಮೇರಿಕದಿಂದ ಉಚಿತವಾಗಿ ಗೋಧಿ ಬರುತ್ತಿತ್ತು. ಅದನ್ನೇ ಸಜ್ಜಿಗೆ ಮಾಡಿ ಸರಕಾರ ಕೊಡುತ್ತಿತ್ತು ಎಂದು ಹೇಳುವುದನ್ನು ಕೇಳಿದ್ದೆ.  ಈ ಸಜ್ಜಿಗೆಗೆ ಉಪ್ಪು ಬಿಟ್ಟರೆ ಬೇರೆ ಎನೂ ಇರುತ್ತಿರಲಿಲ್ಲ. ಆದರೂ ಅದರ ಆಕರ್ಷಣೆ ಬಿಡದ ಮೋಹವಾಗಿತ್ತು.   ಈ ಸಜ್ಜಿಗೆ ನೆನಪಿಗೆ ಬರುವುದಕ್ಕೆ ಹಲವಾರು ಭಾವನಾತ್ಮಕ ಕಾರಣಗಳಿವೆ. ಮುಖ್ಯವಾಗಿ ಪೈವಳಿಕೆ ಶಾಲೆಯಲ್ಲಿ ನಾವು ಕದ್ದು ಮುಚ್ಚಿ ಮನೆಯವರಿಗೆ ತಿಳಿಯದಂತೆ ಸಜ್ಜಿಗೆ ತಿನ್ನುತ್ತಿದ್ದೆವು. ಶಾಲೆಯಲ್ಲಿ ಸಿಗುತ್ತಿದ್ದ ಈ ಸಜ್ಜಿಗೆ ತಿಂದರೆ ಸಹಜವಾಗಿ ಸಂಪ್ರದಾಯ ಬದ್ದರಾದ ನಮ್ಮ ಮನೆಯಲ್ಲಿ ಬೈಯುತ್ತಿದ್ದರು. ಸರಕಾರಿ ಸಜ್ಜಿಗೆ, ಅಲ್ಲಿ ಯಾರೋ ಮಾಡುತ್ತಾರೆ, ಅದರಲ್ಲಿ ಹುಳ ಎಲ್ಲ ಇರುತ್ತದೆ ಹೀಗೆ ನಮ್ಮನ್ನು ಹೆದರಿಸುತ್ತಿದ್ದರು. ಆದರೂ ನಾವು ಬೆಳಗ್ಗೆ ಶಾಲೆಗೆ ಹೋಗುವಾಗ ತಿನ್ನುವುದಿಲ್ಲ ಎಂದು ಯೋಚಿಸಿದರೂ ಸಜ್ಜಿಗೆ ಮಾಡಿ ಎಲ್ಲರನ್ನು ಕರೆಯುತ್ತಿರಬೇಕಾದರೆ ಸಹಪಾಠಿಗಳ ಜತೆಗೆ ಓಡಿ ಕುಳಿತು ಬಿಡುತ್ತಿದ್ದೆವು. ಮುಖ್ಯ ಕಾರಣ ಆಗ ಬಾಧಿಸುತ್ತಿದ್ದ ಹಸಿವು. ಹಸಿವು ಎಲ್ಲವನ್ನು ಮಾಡಿಸಿಬಿಡುತ್ತದೆ. ಅದೊಂದು ಶಾಲೆ ಕಲಿಸಿದ ಪಾಠ. 

ಹಸಿವು ಎಂದರೆ ಬಾಲ್ಯದ  ಆ ಹಸಿವಿಗೆ ಅದೊಂದು ಪ್ರಖರತೆ ಇತ್ತು. ಏನು ತಿಂದರೂ ಇಂಗದ ಹಸಿವು. ಬೆಳಗ್ಗೆ ಒಂದಷ್ಟು ತಿಳಿಗಂಜಿಯನ್ನು ತಿಂದು ಅದನ್ನೇ ಬುತ್ತಿ ಪಾತ್ರೆಗೆ ತುಂಬಿಸಿ ತಂದರೆ ಅದಕ್ಕಿಂತ ಈ ಸಜ್ಜಿಗೆಯ ಆಕರ್ಷಣೆ ಸಹಜವಾಗಿ ಅಧಿಕವಾಗಿತ್ತು. ಬಿಸಿ ಬಿಸಿ ಸಜ್ಜಿಗೆಯ ಪರಿಮಳವೇ ಅದ್ಭುತವಾಗಿತ್ತು. ಈಗ ಎಲ್ಲಬಗೆಯ ಪದಾರ್ಥಗಳನ್ನು ಹಾಕಿದ ಉಪ್ಪಿಟ್ಟಿನ ರುಚಿ ಆ ಸಜ್ಜಿಗೆ ಸಮಾನವಲ್ಲ ಅಂತ ಅನ್ನಿಸುತ್ತದೆ. ಬೆಳಗ್ಗೆ ಶಾಲೆ ಆರಂಭವಾಗುತ್ತಿದ್ದಂತೆ ಶಾಲೆಯ ಪಿಯೊನ್ ಅದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಎಲ್ಲಾ ತರಗತಿಯಿಂದ ಹಿರಿಯ ವಿದ್ಯಾರ್ಥಿಗಳನ್ನು ಸಹಾಯಕ್ಕೆ ಕರೆದು ಕೊಂಡು ಹೋಗಿ ಸಜ್ಜಿಗೆ ಪಾಕ ಸಿದ್ದ ಮಾಡಿಸುತ್ತಿದ್ದರು.  ಹನ್ನೊಂದು ಘಂಟೆಯಾಗುತ್ತಿದ್ದಂತೆ ಒಂದೊಂದೇ ಕ್ಲಾಸಿನಿಂದ ಮಕ್ಕಳನ್ನು ಕರೆದು ಸಜ್ಜಿಗೆ ಬಡಿಸುತ್ತಿದ್ದರು.  ಅವರ ಕರೆಗೆ ಮಕ್ಕಳು ಕಾದಿರುತ್ತಿದ್ದರು. ಸಜ್ಜಿಗೆ ತಿನ್ನುವುದಕ್ಕೆ ತಟ್ಟೆ ಮನೆಯಿಂದ ತರಬೇಕಿತ್ತು. ತಟ್ಟೆ ಇಲ್ಲದೆ  ನಾವು ಕೆಲವರು ಕಾಗದದ ಚೂರಲ್ಲೂ ಹಾಕಿಸಿ ತಿನ್ನುತ್ತಿದ್ದೆವು.  ಒಂದು ಬಾರಿ ಕಾಗದದಲ್ಲಿ ಸಜ್ಜಿಗೆ ಕೊಡುವುದಿಲ್ಲ ಎಂದಾಗ ನಾನು ಮನೆಯಿಂದ ಹಳೆಯ ಅಲ್ಯುಮಿನಿಯಂ ತಟ್ಟೆಯೊಂದನ್ನು ಯಾರಿಗೂ ತಿಳಿಯದಂತೆ ತೆಗೆದುಕೊಂಡು ಹೋಗಿದ್ದೆ. ಸಜ್ಜಿಗೆಯ ಆಕರ್ಷಣೆ, ಹಸಿವಿನ ಒತ್ತಡ ಇದಕ್ಕೆ ಪ್ರೇರೆಪಣೆ. 

ಹಸಿವಿನ ಅರೆ ಹೊಟ್ಟೆಗೆ ಏನು ಸಿಕ್ಕಿದರೂ ಗಬ ಗಬ ತಿನ್ನುವ ತುಡಿತ. ಸಜ್ಜಿಗೆ ಯಾರು ಮಾಡಿದರೇ ಏನು? ಅಥವ ಅದರಲ್ಲಿ ಏನಿದ್ದರೆ ಏನು? ಮನೆಯವರಿಗೆ ತಿಳಿಯದಂತೆ ಅದನ್ನು ತಿನ್ನುವುದರಲ್ಲೇ ಒಂದು ಆತ್ಮ ತೃಪ್ತಿ. ಜಗಲಿಯಲ್ಲಿ ಕುಳಿತು ತಟ್ಟೆ ಇಟ್ಟು ಎಲ್ಲರ ಜತೆಗೆ ಕುಳಿತು ತಿಂದು ಏಳುವಾಗ ಹಸಿವನ್ನು ಜಯಿಸಿದ ಆ ತೃಪ್ತಿ ಈಗ ಯಾವ ಭೋಜನ ಸವಿದರೂ ಸಿಗುತ್ತಿಲ್ಲ. ಶಾಲಾ ಜೀವನದ ಬಳಿಕ ಒಂದು ಬಾರಿ ಪೈವಳಿಕೆ ಶಾಲೆಗೆ ಹೋಗಿದ್ದೆ. ಆಗ ಸಜ್ಜಿಗೆ ಮಾಡುತ್ತಿದ್ದ ಜಾಗ, ನಾವು ತಿನ್ನಲು ಕುಳಿತುಕೊಳ್ಳುತ್ತಿದ್ದ ಜಗಲಿಯಲ್ಲಿ ಓಡಾಡಿದ್ದೆ. ಆ ಸಜ್ಜಿಗೆಯ ರುಚಿಯ ಸವಿನೆನಪು ಅದು ಎಂದಿಗೂ ಮಾಸದು. ಒಂದೆರಡು ಬಾರಿ ಮನೆಗೆ ಗೋಧಿಯನ್ನು ತಂದು ಪುಡಿಮಾಡಿ ಅದೇ ರೀತಿ ಸಜ್ಜಿಗೆ ಮಾಡಲು ನೋಡಿದ್ದೆ. ಆದರೆ ಆ ರುಚಿ ಮಾತ್ರ ಅನುಭವಿಸುವುದಕ್ಕೆ ಸಾಧ್ಯವಾಗಲಿಲ್ಲ. ಈಗಲೂ ಶಾಲೆಯ ಬಳಿಗೆ ಹೋದಾಗ ಸಜ್ಜಿಗೆಯ ನೆನಪಾಗುತ್ತದೆ. ಆ ಕಾಲದಲ್ಲಿ ಅನ್ನ ತಿನ್ನುವವರು ಭಾಗ್ಯವಂತರು. ನಮಗೋ ಒಂದು ಹೊತ್ತಿಗೆ ಅನ್ನ ಸಿಗುತ್ತಿತ್ತು. ಉಳಿದಂತೆ ಗೋಧಿಯ ದೋಸೆ, ಒಣ   ಮರಗೆಣಸನ್ನು ನೆನಸಿ ಅದರಿಂದ ತಯಾರಿಸಿದ ರೊಟ್ಟಿ ಪಲ್ಯ...ಹೀಗಿರುವಾಗ ಶಾಲೆಯ ಉಪ್ಪಿಟ್ಟು ಬಿಡುವುದಕ್ಕೆ ಮಕ್ಕಳಿಗೆ ನಮಗೆ ಮನಸ್ಸಾದರೂ ಹೇಗೆ ಬರಬೇಕು.

ನಮಗೆ ಬೇಕಾದದ್ದು ಬಯಸಿದ್ದೆಲ್ಲವನ್ನೂ ಕೈವಶ ಮಾಡುವ ಈ ಸಮಯದಲ್ಲಿ ಯಾವುದು ಸಿಕ್ಕರೂ ಅಂದು ಹಸಿವಿಗೆ ಎರವಾಗಿ ಒದಗಿ ಬರುತ್ತಿದ್ದ ಈ ಸಜ್ಜಿಗೆಗೆ ಸರಿಮಿಗಿಲು ಎನಿಸುವುದಿಲ್ಲ. ಅದರಲ್ಲೂ ಕಾಗದದ ಚೂರಿನಲ್ಲಿ ಸಜ್ಜಿಗೆ ಹಾಕಿಸಿ ತಿನ್ನುತ್ತಿದ್ದ ಆ    ದಿನಗಳು, ಆ ಸವಿನೆನಪನ್ನು ಮತ್ತೊಮ್ಮೆ ಅನುಭವಿಸುವುದಕ್ಕೆ ಆದರೂ ಒದಗಿ ಬರಬಾರದೇ ಅಂತ ಅನ್ನಿಸುವುದುಂಟು. 



Friday, March 29, 2024

ಅತಿಥಿ ಸತ್ಕಾರ

        ಒಂದು ಬಾರಿ ಉತ್ತರ ಭಾರತದ ಯಾರಾದರು ಒಬ್ಬರ ಮನೆಯ ಕಾರ್ಯಕ್ರಮಕ್ಕೆ ಹೋಗಿ ನೋಡಿ, ಅಲ್ಲಿ ನಮಗಾಗಿ ಅನ್ನ ಸಾಂಬಾರ್ ಮಾಡುವುದಿಲ್ಲ. ಬದಲಿಗೆ ಪೂರಿ ಕಚೋರಿ ರೋಟಿಯಷ್ಟನ್ನೇ ತಂದಿಡುತ್ತಾರೆ. ಸಾಂಬಾರ್ ಬದಲಿಗೆ ಸಬ್ಜಿ ಕರಿಗಳಷ್ಟೇ ಇರುತ್ತವೆ. ಆದರೆ ನಮ್ಮಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅವರೆಲ್ಲ ಒಬ್ಬಿಬ್ಬರು ಇದ್ದರೆ ಸಾಕು ಎಲ್ಲರಿಗೂ ಪೂರಿ ಪಲಾವ್ ತಿನ್ನಿಸಿಬಿಡುತ್ತೇವೆ. ಇದು ಅತಿಥಿ ಸತ್ಕಾರದ ಉತ್ತಮ ಗುಣವಿರಬಹುದು. ಆದರೆ ನಮ್ಮ ಪರಂಪರೆಯ ಭೋಜನ ಖಾದ್ಯಗಳು ನಮ್ಮ ನಡುವೇ ಇದ್ದು ಬಿಡುತ್ತದೆ. ನಮ್ಮ ಮಕ್ಕಳಿಗೇ ಅದು ಬೇಡವಾಗುತ್ತದೆ. 

ಈಗಿನ್ನು ಸಮಾರಂಭಗಳ ಸಮಯ. ಮದುವೆ ಮುಂಜಿ ಹೀಗೆ ಶುಭಕಾರ್ಯಗಳ ಸರದಿ. ಜತೆಗೆ ಅನಿರೀಕ್ಷಿತ ಎರಗುವ ಅಪರಕಾರ್ಯಗಳು. ಮತ್ತೆ ಎಂದಿನಂತೆ ವರ್ಷಾವಧಿ ಶ್ರಾಧ್ದ ಮುಂತಾದ ಅಪರ ಕಾರ್ಯಗಳು. ಹೆಚ್ಚಿನ ಕಾರ್ಯಕ್ರಮಗಳು ನಿರೀಕ್ಷಿತ. ಆಮಂತ್ರಣದ ಖಾತರಿ ಇದ್ದೇ ಇರುತ್ತದೆ. ಹೀಗಾಗಿ ಮೊದಲೇ ಸಿದ್ಧತೆಗಳು ಇದ್ದರೂ ಹೋಗುವುದಕ್ಕೆ ಬಹಳ ಕಷ್ಟ ಪಡಲೇ ಬೇಕಾದ ಅನಿವಾರ್ಯತೆ ಇದ್ದರೂ ,  ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಪ್ರತಿ ಕಾರ್ಯಕ್ರಮಕ್ಕೂ ಹಾಜರಾಗಲೇ ಬೇಕು ಎನ್ನುವ ಕಾಳಜಿಯಲ್ಲಿ ಹಾಜರಾಗುತ್ತಾರೆ.  ಇನ್ನು ಒಂದೆರಡು ಘಳಿಗೆಯಾದರೂ ಒಂದು ಸಲ ಮುಖ ತೋರಿಸಿ ಹಾಜರಾಗುವ ಹರಕೆಯನ್ನು ಸಲ್ಲಿಸುವವರು ಅಧಿಕ.ಹಲವು ಸಲ ಹಲವು ಕಾರ್ಯಕ್ರಮಗಳಿಗೆ ಒಂದೇ ದಿನ ಹಾಜರಾಗುವ ಇಕ್ಕಟ್ಟಿನ ಪರಿಸ್ಥಿತಿ. ಇದೆಲ್ಲದರ ನಡುವೆ ಕಾರ್ಯಕ್ರಮ ಹೋಗುವುದೆಂದರೆ ಈಗ ಯಾಂತ್ರಿಕತೆಯಾಗಿ ಬದಲಾಗಿದೆ. ಊಟದ ಒಂದೆರಡು ಘಳಿಗೆ ಮೊದಲು ಹೋಗಿ  ಸೌಖ್ಯವಾ?  ಆರಾಮಾನ? ಅಂತ ಕುಶಲ ಸಮಾಚಾರ ವಿಚಾರಿಸುವಷ್ಟು ಹೊತ್ತಿಗೆ ಊಟಕ್ಕೆ ಸಮಯವಾಗುತ್ತದೆ. ಇನ್ನು  ಊಟದ ಹರಕೆಯಾದ ಕೂಡಲೇ ಇನ್ನು ಕಾಣುವ ಅಂತ ಕಲ್ಯಾಣ ಮಂಟಪದವರು ಖಾಲಿ  ಮಾಡಿಸುವ ಮೊದಲೆ ಜಾಗ ಖಾಲಿ ಮಾಡಿ ಬಿಡುತ್ತೇವೆ. ಇಂದು ಕಾರ್ಯಕ್ರಮಗಳಲ್ಲಿ ಸಂಭ್ರಮ ಮರೆಯಾಗಿ ಯಾಂತ್ರಿಕತೆ ಹೆಚ್ಚು ಎದ್ದು ಕಾಣುತ್ತದೆ. ಈ ನಡುವೆ ಬಂದವರ ಬಗ್ಗೆ ವಿಚಾರಿಸುವ,  ಜತೆಗೆ ಯಾರು ಬರಲಿಲ್ಲ ಎಂದು ಗಮನಿಸುವ ಕೊಂಕುತನವೂ ಇಣುಕಿಬಿಡುತ್ತದೆ. ನಾವು ಹೋಗಿದ್ದೇವೆ ಅವರು ಬರಲಿಲ್ಲ ಎಂಬ ಲೆಕ್ಕಾಚಾರ ಕೂಡ ಆರಂಭವಾಗುತ್ತದೆ. ಕಾರ್ಯಕ್ರಮದ ಯಾಂತ್ರಿಕತೆ ಸರಿಯೋ ತಪ್ಪೋ ಅಂತೂ ನಮ್ಮ ಜೀವನ ಶೈಲಿಗಳಿಗೆ ಮತ್ತು ಮನೋಭಾವಕ್ಕೆ ಇದು ಅನಿವಾರ್ಯವಾಗಿದೆ.  ಕೊಡುವ ಕೊಳ್ಳುವ ತೂಕದ ಲೆಕ್ಕಾಚಾರದಲ್ಲಿ ನಮ್ಮ ಬಾಂಧವ್ಯ ಸ್ನೇಹ ಸಲುಗೆಗಳು ಕೇವಲ ಪ್ರಹಸನವಾಗಿಬಿಡುತ್ತದೆ. 

ತಮ್ಮ ತಮ್ಮ ಮನೆಯ ಕುಟುಂಬದ ಕಾರ್ಯಕ್ರಮದ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ನಿರೀಕ್ಷೆಗಳು ಇದ್ದೇ ಇರುತ್ತದೆ. ಸಾಕಷ್ಟು ಯೋಜನೆ ಮಾಡಿ ತಮ್ಮ ಕಾರ್ಯಕ್ರಮಗಳನ್ನು ಹೀಗೆಯೇ ಮಾಡಬೇಕು ಎನ್ನುವ ಕನಸನ್ನು ಕಟ್ಟಿಕೊಂಡಿರುತ್ತಾರೆ. ಬಂಧುಗಳನ್ನು ಹಿತೈಷಿಗಳನ್ನು ಮಿತ್ರರನ್ನು  ಸಾಕಷ್ಟು ಜ್ಞಾಪಿಸಿ  ಆಮಂತ್ರಣ ಕೊಡುತ್ತಾರೆ. ಬಂದವರನ್ನು ಮಾತನಾಡಿಸಿ ಉಪಚಾರ ಮಾಡಿ ಕಳುಹಿಸುವ ತನಕವೂ ಕಾರ್ಯಕ್ರಮದ ಒತ್ತಡ ಮುಗಿಯುವುದಿಲ್ಲ. ಅತಿಥಿ ಸತ್ಕಾರ ಎಂಬುದು ಯಾವುದೇ ಕಾರ್ಯಕ್ರಮದ ಅತಿ ಮುಖ್ಯ ಅಂಗವಾಗುತ್ತದೆ. ಪೂಜೆ ಪುನಸ್ಕಾರ, ವೈದಿಕ ಕ್ರಿಯಾಭಾಗಗಳು ಹರಕೆ ಸಲ್ಲಿಸುವ ಯಾಂತ್ರಿಕ ಕ್ರಿಯೆಯಾಗಿ ಬದಲಾದರೂ, ಅತಿಥಿ ಸತ್ಕಾರ ಹರಕೆ ಸಲ್ಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಯಾಕೆಂದರೆ ಇದೊಂದು ಪ್ರತಿಷ್ಠೆಯ ಪ್ರಶ್ನೆಯಾಗಿರುತ್ತದೆ. ಹಾಗಾಗಿ ಸತ್ಕಾರದ ಹಲವು ಮುಖಗಳನ್ನು ಕಾಣಬಹುದು. ಹಲವು ಸಲ ಪುರೋಹಿತರು ಗಂಟಲು ಶೋಷಣೆ ಮಾಡುವುದಷ್ಟೇ ಉಳಿದು, ಕರ್ತೃ ಅಥವಾ ಯಜಮಾನ ಅತಿಥಿಗಳ ನಡುವೆ ಇರಬೇಕಾದ ಅನಿವಾರ್ಯತೆ ಇರುತ್ತದೆ. 

ಅತಿಥಿ ಸತ್ಕಾರದಲ್ಲಿ ಅತಿ ಮುಖ್ಯ ಅಂಶವೆಂದರೆ ಭೋಜನ ಸತ್ಕಾರ. ಈಗೀಗ ಇದೊಂದು ಹೊಸ ಹೊಸ ಅವಿಷ್ಕಾರ ಪ್ರಯೋಗಗಳಿಗೆ ತುತ್ತಾಗುತ್ತಲೇ ಇದೆ. ಭೋಜನ ಆಹಾರ ಕ್ರಮ ಎಂಬುದು ದೇಶಾಚರದ ಜತೆಗೆ ಅದರಲ್ಲಿ ಒಂದು ಸಂಸ್ಕಾರ ಇರುತ್ತದೆ. ಇವತ್ತು ಈ ಸಂಸ್ಕಾರಗಳನ್ನುನಾವು ಮರೆಯುತ್ತಿದ್ದೆವೆ. ಮೊದಲೆಲ್ಲ ಹಳ್ಳಿಯ ಮನೆಗಳ ಕಾರ್ಯಕ್ರಮಗಳೆಂದರೆ ಒಂದು ಸಂಭ್ರವಿರುತ್ತಿತ್ತು. ಈಗ ಈ ಅವಿಷ್ಕಾರ ಪ್ರಯೋಗಗಳ ನಡುವೆ ಈ ಸಹಜವಾದ ಸಂಭ್ರಮ ಮರೆಯಾಗುತ್ತಿವೆ. ಅದಕ್ಕೆ ಹಲವಾರು ಕಾರಣಗಳಿವೆ ಅದು ಬೇರೆ. ಹಳ್ಳಿ ಹಳಿಯಲ್ಲಿಯೂ ಈಗ ಕಾರ್ಯಕ್ರಮಗಳು ಮನೆಯಂಗಳದಲ್ಲಿ ನಡೆಯುತ್ತಿಲ್ಲ.ಒಂದು ತಿಂಗಳ ಮೊದಲೇ ಕಾರ್ಯಕ್ರಮಕ್ಕೆ ಸಿದ್ದತೆ ಮಾಡುವಾಗ, ಮನೆಯಂಗಳವನ್ನು ಸಮತಟ್ಟು ಮಾಡಿ ಅಡಿಕೆ ಮರದ ಕಂಬ ನೆಟ್ಟು ಮಡಲು ಹಾಕಿ ಚಪ್ಪರ ಹಾಕುವಲ್ಲಿಂದ ತೊಡಗುವ ಸಂಭ್ರಮ ಮರೆಯಾಗಿದೆ.  ಮೊದಲೇ ಹಾಕುವ ಚಪ್ಪರದಲ್ಲಿ ಮನೆಯವರೆಲ್ಲ ಒಮ್ದೇ ಕಡೆ ಸೇರಿ ಅಲ್ಲೆ ಊಟ ಅಲ್ಲೆ ಜತೆಯಾಗಿ  ನಿದ್ರೆ ಅದೊಂದು ವಿಶಿಷ್ಟ ಸಂಭ್ರಮಗಳು ಇಂದಿನ ಜನಾಂಗಕ್ಕೆ ಅರಿವೆ ಇಲ್ಲ.  ಈಗಿನ ಮಕ್ಕಳಲ್ಲಿ ಹೇಳಿದರೆ ’ಹೌದಾ’  ಎಂದು ಉದ್ಗಾರ ತೆಗೆಯುತ್ತಾರೆ.  ಕಾರ್ಯಕ್ರಮದ ಮುನ್ನಾದಿನ ಪೆಂಡಾಲ್ ನವರು ಬಂದು ಶಾಮಿಯಾನ ಎಳೆದು ಬಿಗಿದರೆ ಚಪ್ಪರ ಸಿದ್ಧವಾಗಿಬಿಡುತ್ತದೆ. ಮರುದಿನ ಕಾರ್ಯಕ್ರಮದ ಗಡಿಬಿಡಿಯಲ್ಲಿ ಸಂಭ್ರಮಕ್ಕೆ ಸಮಯವೇ ಇರುವುದಿಲ್ಲ. 

  ಇಷ್ಟೆಲ್ಲ ಒಂದು ಬದಲಾವಣೆಯಾದರೆ ಆಹಾರ ಸತ್ಕಾರದ ರೂಪವೇ ಬದಲಾಗಿ ಹೋಗಿದೆ. ನಮ್ಮ ಸಾಂಪ್ರದಾಯಿಕ ಆಹಾರಗಳಾದ, ಅನ್ನ ಸಾರು ಪಲ್ಯ ಪಾಯಸಗಳು ನಾಮ್ಕೇ ವಾಸ್ತೆಯಾಗಿರುವುದು ಮಾತ್ರವಲ್ಲ ಹಲವು ಕಡೆ ಅದು ಮಾಯವಾಗಿದೆ. ಇಂದಿನ ಜನಾಂಗಕ್ಕೆ ಬಾಳೆ ಎಲೆಯಲ್ಲಿ ಪಾಯಸ ತಿನ್ನುವುದಕ್ಕೆ ಬರುವುದಿಲ್ಲ. ಅನ್ನ ಸಾಂಬಾರ್ ನ ಬದಲಾಗಿ ಇಂದು ಪಲಾವ್, ಪೂರಿ ಪರೋಟಗಳು  ರೋಟಿ ಇತರ ಉತ್ತರ ಭಾರತದ ತಿಂಡಿಗಳನ್ನು ಕಾಣಬಹುದು.  ಕುಳಿತು ತ್ ಇದಕ್ಕೆ ಕಾರಣ ಮೊದಲೆಲ್ಲ ನಮ್ಮೂರವರೇ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು. ಈಗ ಹಾಗಲ್ಲ ಉತ್ತರ ಭಾರತದವರು ಕೆಲವು ಮಂದಿಯಾದರೂ ಅವರಿಗೋಸ್ಕರ ಪೂರಿ ಪರೋಟಗಳನ್ನು ಮಾಡಿ ಅದನ್ನು ಉಳಿದವರಿಗೂ ಬಲವಂತದಿಂದ ತಿನ್ನಿಸುವುದನ್ನು ಕಾಣಬಹುದು. ಅಂದವಾಗಿ ಸಾವಕಾಶವಾಗಿ ಕುಳಿತು ಊಟ ಮಾಡುವ ಕ್ರಮ ಬದಲಾಗಿ ಒಂದು ಕೈಯಲ್ಲಿ ತಟ್ಟೆ ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದು ಸರ್ಕಸ್ ಮಾಡಿಕೊಂಡು ತಿನ್ನುವ ಪರಿಪಾಠ ಹೆಚ್ಚಾಗಿದೆ. ಇಂಥವರಿಗೆ ನೂರಾರು ಬಗೆಯ ಭಕ್ಷ್ಯ ತಿನಿಸುಗಳು. ಆಶ್ಚರ್ಯವಾಗುತ್ತದೆ.  ಈ ರೀತಿಯಲ್ಲಿ ನಮ್ಮದಲ್ಲದ ಸಂಸ್ಕಾರ, ಯಾವುದೋ ಊರಿನ ಆಹಾರ ಪದಾರ್ಥಗಳ ಬಳಕೆ ನಮ್ಮಲ್ಲಿ ಮಾತ್ರವೇ ಎಂದನಿಸುತ್ತದೆ. ಹಲವು ಸಲ ನಾನು ಗೋವ ಮುಂತಾದ ಕಡೆಗೆ ಹಲವು ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ನಾವು ದಕ್ಷಿಣ ಭಾರತದವರು ಅಂತ ಅಲ್ಲೇನು ನಮಗೆ ಪ್ರತ್ಯೆಕ ಅನ್ನ ಸಾಂಬಾರು ಮಾಡುವುದಿಲ್ಲ. ಅಲ್ಲಿನವರು ಏನು ವಾಡಿಕೆಯಲ್ಲಿ ತಿನ್ನುತ್ತಾರೋ ಅದನ್ನೆ ನಮಗೂ ಕೊಡುತ್ತಾರೆ. ಅಲ್ಲಿ ಕೊಡುವ ಸೂಪನ್ನು ಸಾರು ಅಂತ ತಿಂದು ತೃಪ್ತಿ ಪಟ್ಟುಕೊಂಡದ್ದೂ ಇದೆ. 

ಯಾವುದೋ ಊರಿನಿಂದ ಯಾರೋ ಬರುತ್ತಾರೆ, ಅತಿಥಿ ಸತ್ಕಾರದಲ್ಲಿ ಅವರಿಗೆ ಬೇಕಾದಂತೆ ಮಾಡಿ ಅವರನ್ನು ತೃಪ್ತಿಪಡಿಸಬೇಕು ಹೌದು, ಆದರೆ  ನಮ್ಮ ಆಹಾರ ಕ್ರಮಗಳನ್ನು ಸಂಪ್ರದಾಯಗಳನ್ನು ನಾವು ಅವರಂತೆ ಯಾಕೆ ತೋರಿಸುವುದಿಲ್ಲ?  ಎಲ್ಲದರಲ್ಲೂ ಅನುಕರಣೆ ಮಾಡಿ ನಮ್ಮತನವನ್ನು ನಾವೇಕೆ ದೂರ ಮಾಡಬೇಕು.? ಅದರಲ್ಲೂ ನಮ್ಮ ಬ್ರಾಹ್ಮಣರ ಊಟದದ ಅಪಸವ್ಯಗಳು ಬೇರೆ, ನಮ್ಮಲ್ಲಿ ಈರುಳ್ಳಿ ಬೆಳ್ಳುಳ್ಳಿ ಉಪಯೋಗಿಸುವುದಿಲ್ಲ.  ಹಾಗಾಗಿ ಅದೇ ಮುಖ್ಯವಾಗಿರುವ ಪಲಾವ್ ಮತ್ತು ಇತರ ಉತ್ತರದ ಕರಿಗಳು ಅದಿಲ್ಲದೇ ಮಾಡುವಾಗ ಇದನ್ನು ಯಾಕಾದರೂ ತಿನ್ನಬೇಕು ಎಂದು ಅನ್ನಿಸಿದರೆ ಅದು ದೌರ್ಭಾಗ್ಯ ಎನ್ನಬೇಕು. ಇಷ್ಟಾದರೂ ನಮ್ಮನ್ನು ನಾವು ಮೆಚ್ಚಿಕೊಳ್ಳಬೇಕು. ಇವುಗಳ ನಡುವೆಯು ಉತ್ತರ ಭಾರತದ ಶೈಲಿಯನ್ನು ನಾಚುವಂತೆ ನಮ್ಮದೇ ಸಂಪ್ರದಾಯಗಳನ್ನು ಪಾಲಿಸುವವರು ಅನೇಕರಿದ್ದಾರೆ. ಏನಿದ್ದರು ಬಂದ ಅತಿಥಿಗಳಿಗೆ ಅವರಿಗೆ ಬೇಕಾದ ಉತ್ತಮ ಆಹಾರ ಉಪಚಾರಗಳನ್ನು ಒದಗಿಸಿ ಅವರನ್ನು ತೃಪ್ತಿ ಪಡಿಸಬೇಕು, ಇದು ಉತ್ತಮ ಆತಿಥೇಯದ ಕರ್ತವ್ಯ. ನಮ್ಮಲ್ಲಿ ಬಂದು ಅವರು ಹಸಿದು ಹೋಗಬಾರದು ಎನ್ನುವುದು ನಿಜ. ಆದರೆ ನಮ್ಮದಲ್ಲದ ಅಹಾರಕ್ರಮಗಳನ್ನು ಪುರಸ್ಕರಿಸುವಾಗ ನಮ್ಮದೇ ಆದ ಆಹಾರ ಕ್ರಮಗಳಿಗೆ ತಿರಸ್ಕಾರ ಸಲ್ಲದು. ಅದನ್ನು ನಾವು ಗೌರವಿಸದೇ ಇದ್ದರೆ....ಮತ್ತೆ ಉತ್ತರದವರ ಅಭಿರುಚಿಗಳು ಮಾತ್ರವೇ ಉಳಿದುಕೊಳ್ಳಬಹುದು. 

        ಆದರು ನಮ್ಮಲ್ಲಿ ಉತ್ತಮ ರೀತಿಯ ಭೋಜನವನ್ನು ಉತ್ತಮ ಉಪಚಾರವನ್ನು ನೀಡಿ ಗೌರವಿಸುವವರು ಇದ್ದಾರೆ. ಅವರೆಲ್ಲ ಅನುಕರಣೀಯರು ಎಂಬುದರಲ್ಲಿ ಎರಡು ಮಾತಿಲ್ಲ. 


Friday, March 22, 2024

ಸುಪ್ರಜಾ ರಾಮ

                    ನಮ್ಮತಪ್ಪುಗಳನ್ನು, ನಮ್ಮ ಜವಾಬ್ದಾರಿಗಳನ್ನು ಮತ್ತೊಬ್ಬರ ಮೇಲೆ ನಾವು ನಮಗರಿಯದೇ ಹೊರಿಸಿಬಿಡುತ್ತೇವೆ. "ಕೌಸಲ್ಯಾ ಸುಪ್ರಜಾರಾಮ ಪೂರ್ವಾ ಸಂಧ್ಯಾ ಪ್ರವರ್ತತೆ. ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ"  ಈ ಶ್ಲೋಕದ ಅಂತರಾರ್ಥ  ಹಲವು ಇರಬಹುದು. ಆದರೂ ಕೌಸಲ್ಯಾ ಸುಪ್ರಜಾ ರಾಮ.... ಯೋಚಿಸಿ ರಾಮ ಅರಸನಾಗಿ ರಾಮ ರಾಜ್ಯದ ಒಡೆಯನಾಗಿ ಇರುವಾಗ ಅತನನ್ನು ಸುಪ್ರಜಾ ರಾಮ ಅಂತ ಕೊಂಡಾಡುವುದು ಅಲ್ಲೊಂದು ನಮ್ಮ ಜವಾಬ್ದಾರಿಯ ಉಲ್ಲೇಖವೂ ಸೂಕ್ಷ್ಮವಾಗಿ ಇದೆ. ಸುಪ್ರಜಾ ರಾಮ ಎನ್ನುವಾಗ ಅಲ್ಲಿ ರಾಮ ನೊಬ್ಬನೇ ಮಹಾ ಪುರುಷ ಅಲ್ಲ ಪ್ರಜೆಗಳೂ ಸುಪ್ರಜೆಗಳಾಗಿರುತ್ತಾರೆ. ರಾಮ ರಾಜ್ಯದಲ್ಲಿದ್ದ ಪ್ರಜೆಗಳೂ ಸುಪ್ರಜೆಗಳಾಗಿರುವಾಗ ಪರೋಕ್ಷವಾಗಿ ನಮಗೆ ರವಾನೆಯಾಗುವ ಸಂದೇಶವಾದರೂ ಏನು? ರಾಮನೊಬ್ಬ ಆದರ್ಶ ಪುರುಷನಾಗಿದ್ದ, ಜತೆಯಲ್ಲಿ ಪ್ರಜೆಗಳೂ ಸುಪ್ರಜೆಗಳಾಗಿದ್ದರು. ಅಂದರೆ ಈಗ ನಾವು ರಾಮ ರಾಜ್ಯ ಅಂತ ಬಯಸುತ್ತೇವೆ. ಅದೊಂದು ಆದರ್ಶ ರಾಜ್ಯ ಅಂತ ಯೋಚಿಸುತ್ತೇವೆ. ಆದರೆ ಅಲ್ಲಿ ನಾವು ಸುಪ್ರಜೆಗಳಾಗಿರುವ ಬಗ್ಗೆ ಯೋಚಿಸುವುದಿಲ್ಲ. ಕೇವಲ ಅರಸನೊಬ್ಬ ರಾಮನಂತೆ ಇದ್ದರೆ ಸಾಕು ಎಂದು ನಮ್ಮ ಚಿಂತನೆ ಸಂಕುಚಿತವಾಗಿಬಿಡುತ್ತದೆ. ಪ್ರಜೆಗಳು ಸುಪ್ರಜೆಗಳಾಗಿರುವಾಗ ರಾಜ್ಯವೂ ರಾಮ ರಾಜ್ಯವಾಗುತ್ತದೆ ಎಂಬುದು ಇಲ್ಲಿ ಪರೋಕ್ಷ ಸಂದೇಶ. 

                    ನಾವೊಬ್ಬರು ಉತ್ತಮರು ಮಿಕ್ಕವರೆಲ್ಲ ನಮ್ಮಷ್ಟು ಉತ್ತಮರಲ್ಲ. ನಾವು ಚಿಂತಿಸುವ ರೀತಿ ಇದು.   ನಮ್ಮ ದೌರ್ಬಲ್ಯಗಳನ್ನು ನಮ್ಮ ತಪ್ಪುಗಳನ್ನು ನಾವು ಆತ್ಮ ವಿಮರ್ಶೆ ಮಾಡುವ ಬದಲಾಗಿ ನಮ್ಮ ಎಲ್ಲ ಋಣಾತ್ಮಕ ವಿಷಯಗಳನ್ನು ಮತ್ತೊಬ್ಬರ ಮೇಲೆ ಹೊರಿಸಿ ನಾವು ಜವಾಬ್ದಾರಿಯಿಂದ ದೂರ ನಿಂತು ಬಿಡುತ್ತೇವೆ. ಕೇವಲ ರಾಮ ರಾಜ್ಯದ ಕಲ್ಪನೆಯಲ್ಲಿ ಆ ಕನಸಿನಲ್ಲಿ ನಾವು ಸುಪ್ರಜೆಗಳಾಗಬೇಕಾದ ಅನಿವಾರ್ಯತೆಯನ್ನು ಬದಿಗೆ ಸರಿಸಿ ರಾಮ ರಾಜ್ಯದ ಚಿಂತನೆಯನ್ನು ಮಾಡುವಾಗ ನಮ್ಮ ಜವಾಬ್ದಾರಿಗಳು ನಮಗೆ ಅರಿವಿಗೆ ಬರುವುದಿಲ್ಲ. ಸುಪ್ರಜೆಗಳ ಒಡೆಯ ರಾಮನನ್ನು ಎಚ್ಚರಿಸುವಾಗ  ಪೂರ್ವಾ ಸಂಧ್ಯಾ ಪ್ರವರ್ತತೆ ಎಂದು ಎಬ್ಬಿಸುವಾಗ, ಅಲ್ಲಿ ಸಂಧ್ಯೆ ಅಂದರೆ ಕತ್ತಲು ಮತ್ತು ಬೆಳಕಿನ ನಡುವಿನ ಸಮಯದಿಂದ ಮೊದಲಿನ ಕಾಲ ಪ್ರವರ್ತಿಸುವಾಗ ನಾವು ನಮ್ಮ ಕರ್ತವ್ಯವಾದ ನಿತ್ಯ ಆಹ್ನಿಕಗಳನ್ನು ಪೂರೈಸಿಕೊಳ್ಳಬೇಕು. ಆದರೆ ನಾವು ನಮ್ಮ ಕರ್ತ್ಯವ್ಯವನ್ನು ಮರೆತು ಯಾವುದೋ ಕಾಲದಲ್ಲಿ ಎದ್ದು ಉತ್ತಿಷ್ಠ ನರಶಾರ್ದೂಲ ಎಂದು ಪರಮಾತ್ಮನ ಮೇಲೆ ಜವಾಬ್ದಾರಿಯನ್ನು ಹೇರಿ ಆತನನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತೇವೆ. ಇಲ್ಲಿ ಪರಮಾತ್ಮನ ಎಚ್ಚರಕ್ಕಿಂತಲೂ ಮೊದಲು ನಮ್ಮದಾದ ಜವಾಬ್ದಾರಿಗಳನ್ನು ನಾವು ಮರೆಯುತ್ತಿದ್ದೇವೆ. 

                    ನಮ್ಮ ತಪ್ಪುಗಳು ನಮ್ಮ ಜವಾಬ್ದಾರಿಗಳು ಯಾವಾಗ ನಮಗೆ ಅರಿವಾಗುವುದಿಲ್ಲವೋ ಮತ್ತೊಬ್ಬರ ತಪ್ಪು ಜವಾಬ್ದಾರಿಗಳು ನಮಗೆ ಹೇಗೆ ಅರಿವಾಗಬೇಕು. ಹತ್ತಿರ ಇದ್ದ ಹೊಂಡ ಕಾಣದೇ ಇದ್ದರೆ ದೂರ ಇರುವ ಹೊಂಡ ಕಂಡರೂ ಫಲವೇನು. ಆ ಹೊಂಡದ ಬಳಿಗೆ ತಲುಪುವ ಮೊದಲು ಹತ್ತಿರದ ಹೊಂಡದಲ್ಲಿ ಬಿದ್ದು ಹೊರಳಾಡುತ್ತೇವೆ.  

Sunday, March 3, 2024

ಭಾರವಾಗುವ ಮತ್ಸರ



ಅತ್ಯಂತ ಭಾರವಾದ ಸರ ಯಾವುದು? ಹೀಗೊಂದು ಪ್ರಶ್ನೆಗೆ ಯಕ್ಷಗಾನದ ವಿದೂಷಕ, ಶ್ರೀ ನಯನ ಕುಮಾರ್ ಒಂದು ಕಡೆಯಲ್ಲಿ ಹೇಳಿದ್ದ ನೆನಪು, ಭಾರವಾದ ಸರ ಎಂದರೆ ಅದು ಗಂಗಸರ. ಅಂದರೆ ಸಾರಾಯಿ. ನಮ್ಮ ಊರ ಭಾಷೆಯಲ್ಲಿ ಸಾರಾಯಿ ಅಂದರೆ ಗಂಗಸರ ಹಾಕಿದರೆ ಅತ್ಯಂತ ಭಾರವಾಗಿರುತ್ತದೆ ಅಂತ ಬೇರೆ ಹೇಳಬೇಕಾಗಿಲ್ಲ. ಇದು ವಿಡಂಬನೆ ಅಥವಾ ಹಾಸ್ಯಕ್ಕೆ ಪರಿಗಣಿಸಿದರೂ ಅದರಲ್ಲಿ ಚಿಂತನೆಗಳಿವೆ. ಭಾರವಾದ ವಸ್ತು ನಮ್ಮ ತಲೆಯಲ್ಲಿ ತುಂಬಿದಾಗ ನಾವು ಆ ಭಾರವನ್ನು ಮಾತ್ರವೇ ಯೋಚಿಸುತ್ತೇವೆ. ಬೇರೆ ಯೋಚನೆ ಬರುವುದಿಲ್ಲ. ಅಥವಾ ಯಾವ ಯೋಚನೆಗಳಾದರೂ ಅದರಿಂದ ಪ್ರೇರೇಪಿಸಲ್ಪಡುತ್ತವೆ. ಒಂದು ಸಲ ಈ ಭಾರ ಇಳಿಸಿದರೆ ಸಾಕಪ್ಪ ಎಂದು ಅನಿಸಿದರೂ  ಮನುಷ್ಯ ಭಾರವನ್ನು ತನ್ನ ಮೇಲೆ ಎಳೆದುಕೊಳ್ಳುವ ಪ್ರವೃತ್ತಿಯೇ ಅಧಿಕ.  

ಹಾಸ್ಯಗಾರರು ಯಾವ ದೃಷ್ಟಿಕೋನದಲ್ಲಿ ಹೇಳಿದರೂ ಅದು ವಾಸ್ತವಕ್ಕೆ ಹತ್ತಿರವಾಗಿರುತ್ತದೆ. ಆದರೂ ನನ್ನ ಅನಿಸಿಕೆಯಂತೆ, ಅತ್ಯಂತ ಭಾರವಾದ ಸರ ಎಂದರೆ ಅದು ’ಮತ್ಸರ’  ಈ ಸರ ಧರಿಸಿರುವಷ್ಟು ಸಮಯ ನಮ್ಮ ಮನಸ್ಸು ಬೇರೆಯದನ್ನು ಯೋಚಿಸುವುದಿಲ್ಲ. ಮತ್ಸರ ಅಂದರೆ ನಮ್ಮ ಭಾಷೆಯಲ್ಲಿ ಮುಂದೆ ಹೋಗಲಾಗದೇ ಇದ್ದ ಸ್ಥಿತಿ. ಅದು ಇದ್ದಲ್ಲೇ ಇರುತ್ತದೆ. ಹಾಗಾಗಿ ಇದು ಇದ್ದಷ್ಟು ಹೊತ್ತು ನಮ್ಮ ಚಿಂತನೆಗಳು ಮುಂದೆ ಹೋಗುವುದಿಲ್ಲ. ಅದಕ್ಕೆ ಹೊಂದಿಕೊಂಡು ನಾವು ನಿಂತಲ್ಲೇ ನಿಂತುಬಿಡುತ್ತೇವೆ. ಮತ್ಸರ ಯಾವ ಮನಸ್ಸಿನಲ್ಲಿದೆಯೋ ಆ ಮನಸ್ಸು ಬೇರೆಯದನ್ನು ಚಿಂತಿಸುವುದಿಲ್ಲ. ಸವತಿ ಮಾತ್ಸರ್ಯವಾಗಬಹುದು, ಭಾತೃ ಮಾತ್ಸರ್ಯವಾಗಬಹುದು ಯಾವಾಗ ಮನಸ್ಸನ್ನು ಅವರಿಸಿಬಿಡುತ್ತದೆಯೋ ಅಲ್ಲಿ ಅನ್ಯರ ಬಗ್ಗೆ ಸಚ್ಚಿಂತನೆಗಳು ಹುಟ್ಟಿಕೊಳ್ಳುವುದಿಲ್ಲ. ಯಾರು ಏನು ಮಾಡಿದರೂ ಅದರಲ್ಲಿ ಕೆಡುಕನ್ನೇ ಹುಡುಕುವ ಕೊಂಕು ತನಕ್ಕೆ ಅದು ಪ್ರಚೋದನೆ ಕೊಡುತ್ತದೆ.  ಮನೆಗೆ ಬಂದಾಗ ಬಾಗಿಲು ಮುಚ್ಚಿದ್ದರೆ , ಮತ್ಸರದ ಮನಸ್ಸು ಯೋಚಿಸುತ್ತದೆ ಯಾಕೆ ಬಾಗಿಲು ಮುಚ್ಚಿದ್ದಾರೆ? ಸರಿ ಬಂದರು ಎಂದು ಬಾಗಿಲು ತೆರೆದರೆ, ಯಾಕೆ ಬಾಗಿಲು ತೆರೆದರು? ಹೀಗೆ ದ್ವಂದ್ವಮಯ ಚಿಂತನೆ ಮತ್ಸರ ಎಂಬ ಭಾರದಿಂದ ಪ್ರಚೋದಿಸಲ್ಪಡುತ್ತದೆ. 

ನಮ್ಮ ಸುತ್ತ ಮುತ್ತ ಕೆಟ್ಟವರು ಇರುತ್ತಾರೆ, ಒಳ್ಳೆಯವರೂ ಇರುತ್ತಾರೆ.  ಯಾವಾಗಲೂ ಎಲ್ಲವೂ ಒಳ್ಳೆಯದೇ ಎಂದು ನಿರೀಕ್ಷಿಸುವುದೂ ತಪ್ಪು. ಕೆಟ್ಟದ್ದು ಅಂತ  ಅದನ್ನು ಚಿಂತಿಸಿಕೊಳ್ಳುತ್ತಾ ಇರುವುದು ತಪ್ಪು. ಕೆಟ್ಟದ್ದನ್ನು ದೂರವಿಡುತ್ತ ಒಳ್ಳೆಯದರ ಬಗ್ಗೆ ಯೋಚಿಸುತ್ತಾ ಇದ್ದರೆ ಮನಸ್ಸು ಮತ್ತಷ್ಟು ವಿಶಾಲಾವಾಗುತ್ತದೆ. ಯೋಚನೆಗೆಳು ಹಗುರವಾಗುತ್ತದೆ. ಇಕ್ಕಟ್ಟಾದ ಕಣಿವೆಯಲ್ಲಿ ರಭಸವಾಗಿ ಹರಿದನೀರು, ವಿಶಾಲವಾದ ಬಯಲಿಗಿಳಿದಂತೆ ತನ್ನ ರಭಸವನ್ನು ಕಡಿಮೆ ಮಾಡಿಕೊಳ್ಳುತ್ತದೆ. ಅದರಂತೆ ನಮ್ಮ ಯೋಚನೆಗಳು, ಮನಸ್ಸಿನ ವಿಶಾಲತೆ ಕಡಿಮೆಯಾದಂತೆ ಚಿಂತನೆಗಳ ಒತ್ತಡ ಅಧಿಕವಾಗುತ್ತಾ ಹೋಗುತ್ತದೆ. ಮತ್ಸರ ತುಂಬಿದ ಮನಸ್ಸು ಸಂಕುಚಿತವಾಗುತ್ತಾ ಮನಸ್ಸಿನ ಒತ್ತಡ ಹೆಚ್ಚಿಸುತ್ತ ಹೋಗುತ್ತದೆ. ಒಂದು  ಸಲ ಮತ್ಸರದ ಭಾವವನ್ನು  ದೂರವಿಟ್ಟು ಚಿಂತಿಸಿದಾಗ ಮತ್ಸರದ ಭಾರ ಅರಿವಾಗುತ್ತದೆ. ನಮ್ಮೊಳಗಿನ ಮತ್ಸರ ಮೇಲ್ನೋಟಕ್ಕೆ ಹೊರಗಿನವರಿಗೆ ತೊಂದರೆ ಕೊಟ್ಟರೂ ಅದರಿಂದ ಹೆಚ್ಚಿನ ತೊಂದರೆ ಅನುಭವಿಸುವುದು ನಾವುಗಳೇ ಆಗಿರುತ್ತೇವೆ. ಮತ್ಸರವೆಂದರೆ ಅದು ರೋಗವಿದ್ದಂತೆ, ಈ ರೋಗ ಬಾಧೆ ಇರುವಷ್ಟು ದಿನ ಮನಸ್ಸು ಮುಂದಕ್ಕೆ ಯೋಚಿಸುವುದಿಲ್ಲ. ಮಾತ್ರವಲ್ಲ ನಮ್ಮ ಬೆಳವಣಿಗೆಯೂ ಸಾಧ್ಯವಾಗುವುದಿಲ್ಲ.