Friday, October 22, 2021

ಅನುಭೂತಿ

 "ಪ್ರಾಯಶ್ಚಿತ್ತಾನ್ಯ ಶೇಷಾಣಿ ತಪಃ ಕರ್ಮಾತ್ಮಕಾನಿ ವೈ ಯಾನಿ ತೇಷಾಮಶೇಷಾಣಾಂ ಕೃಷ್ಣಾನು ಸ್ಮರಣಂ ಪರಂ "   

    ಸಂಧ್ಯಾವಂದನೆಯ ಕೊನೆಯಲ್ಲಿ ಹೇಳುವ ಶ್ಲೋಕವಿದು. ತಪಸ್ಸಿನ ಪ್ರಾಯಶ್ಚಿತ್ತ ಮಾಡಿಯೂ ಇನ್ನು ಉಳಿದಂತಹ ಪಾಪ ಶೇಷವೂ ಸಂಪೂರ್ಣ ನಾಶವಾಗುವುದಕ್ಕೆ ಕೃಷ್ಣ ಸ್ಮರಣೆಯನ್ನು ಮಾಡುವುದು.  ಭಗವಂತನ ನಾಮಸ್ಮರಣೆಯ ಶಕ್ತಿಯನ್ನು ಮತ್ತದರ ಪ್ರಯೋಜನವನ್ನು ಈ ಶ್ಲೋಕ  ಹೇಳುತ್ತದೆ. ಕೇವಲ ನಾಮ ಸ್ಮರಣೆಯಿಂದ ಪಾಪ ಪರಿಹಾರದ ಪ್ರಾಯಶ್ಚಿತ  ಸಾಧ್ಯವಾಗುತ್ತದೆ. 


ಪರಮಾತ್ಮ ಅಥವಾ ದೇವರ ಮನುಷ್ಯ ಸಂಬಂಧ ಎಂಬುದು ತಾಯಿ ಮಗುವಿನ ಸಂಬಂಧದಂತೆ, ಇನ್ನು ಕೆಲವೊಮ್ಮೆ ಗಂಡ ಹೆಂಡತಿ ಸಂಬಂಧದಂತೆ ಅನ್ನಿಸುತ್ತದೆ. ಇವೆರಡೂ ದಿವ್ಯವಾದ ಸಂಬಂಧಗಳು. ಮಕ್ಕಳು ತಾಯಿಯಲ್ಲಿ ಏನು ಬೇಕೆಂದು ಕೇಳಿದರೆ ತಾಯಿಯಾದವಳು ಹೇಳುವುದು ಒಂದೇ , ಏನೂ ಬೇಡ. ಆಕೆಗೆ ಚಿನ್ನ ಬೇಡ, ಸೀರೆ ಬೇಡ ಸಂಪತ್ತು ಬೇಡ. ಹಾಗಾದರೆ ಮಕ್ಕಳು ಏನನ್ನು ಕೊಡಬೇಕು. ಅದು ಪ್ರೀತಿ. ತಾಯಿಯನ್ನು ದೇವರು ಅಂತ ಪೂಜಿಸುವ ಕಾರಣ ಇದೂ ಒಂದು. ಗಂಡನಾದವನು ಹೆಂಡತಿಗೆ ಸೀರೆ ಕೊಡಬಹುದು ಚಿನ್ನ ಕೊಡಬಹುದು ಇನ್ನೇನೋ ಕೊಡಬಹುದು, ಆದರೆ ಪ್ರೀತಿ ಕೊಡದೇ ಇದ್ದರೆ ಇದಾವುದಕ್ಕೂ ಅಸ್ತಿತ್ವ ಇರುವುದಿಲ್ಲ. ಗಂಡ ಹೆಂಡತಿಯ ನಡುವಿನ ಸಂಬಂಧ ನಿಂತಿರುವುದೇ ಪ್ರೀತಿಯಿಂದ. ಹೆಂಡತಿಗೆ ಏನು ಕೊಡದೇ ಇದ್ದರು ಹೆಂಡತಿಯ ಅಥವಾ ಗಂಡನ ಮೇಲೆ ಪ್ರೀತಿ ಇದ್ದಾಗ ಉಳಿದ ವಿಚಾರಗಳು ಅತ್ಯಂತ ಮಹತ್ವ ಎಂದೆನಿಸುವುದಿಲ್ಲ. ಇದರಿಂದಾಗಿಯೇ ಗೃಹಸ್ಥ ಜೀವನವೂ ಮನುಷ್ಯನ ಮೋಕ್ಷಪ್ರಾಪ್ತಿಯಲ್ಲಿ ಒಂದು ಅಂಗವಾಗಿರುತ್ತದೆ.  ಇದೇ ತತ್ವ ಪರಮಾತ್ಮನಲ್ಲೂ ಹೊಂದಿಸಿಕೊಳ್ಳುವಾಗ ಧ್ಯಾನದ ಮಹತ್ವ ಅರಿವಾಗುತ್ತದೆ. ಧ್ಯಾನ ಪರಮಾತ್ಮನ ಬಳಿಗೆ ಹೋಗುವ ಸರಳ ಹಾದಿ. ಇದಕ್ಕೆ ಚಿನ್ನ ಸಂಪತ್ತು ಧನ ಕನಕ ಯಾವುದೂ ಬೇಡ. ಹೂ ಹಣ್ಣುಭಕ್ಷ್ಯ ಪೂಜೆ ಯಾವುದೂ ಬೇಡ, ಕೇವಲ ಏಕಾಗ್ರತೆ ಇರುವ ಮನಸ್ಸು ಇದ್ದರೆ ಸಾಕು. ಉಳಿದ ಯಾವ ಕ್ರಿಯಯಲ್ಲೂ ಕಾಣದ ಪರಮಾತ್ಮ ಸ್ವರೂಪ ವ್ಯಕ್ತವಾಗುತ್ತದೆ. ಭಗವದ್ಗೀತೆಯಲ್ಲಿ ಹೇಳಿದಂತೆ, ಭಗವಂತನಿಗೆ ರೂಪವಿಲ್ಲ ಭಾವವಿಲ್ಲ. ನಿರ್ವಿಕಲ್ಪ. ಧ್ಯಾನದಲ್ಲಿ ಇದೆಲ್ಲ ಅರಿವಿಗೆ ಬರುತ್ತದೆ. ಸರಳವಾದ ಮಾಧ್ಯಮ ಅತಿ ಉತ್ಕೃಷ್ಟವಾದ ಗುರಿ.  ಪರಮಾತ್ಮ ಎಂದರೆ ಭಕ್ತಿಯ ನೆನಪಾಗುತ್ತದೆ. ಭಕ್ತಿ ಎಂದರೆ ಕಣ್ಣೀರು ಸುರಿಸುವುದಲ್ಲ.  ನಮ್ಮ ದಯನೀಯ ಸ್ಥಿತಿಯನ್ನು ತೋರಿಸುವುದೂ ಅಲ್ಲ. ಕಣ್ಣೀರು ಸುರಿಸುವವರನ್ನು ಮನುಷ್ಯರೇ  ಬಯಸುವುದಿಲ್ಲ ಇನ್ನು ದೇವರು ಬಯಸುತ್ತಾನೆಯೆ. ದೇವರ ಮುಂದೆ ನಿಂತಾಗ ನಾವು ಸಂತೃಪ್ತ ಭಾವನೆಯಿಂದ ನಿಂತು ಬಿಡಬೇಕು. ಮುಖದಲ್ಲಿ ಮಂದಹಾಸ ತುಂಬಿರಬೇಕು. ಯ ಭಕ್ತಿ ಎಂದರೆ ನವರಸದ ಒಂದು ರಸವಾಗಿ ಕಾಣುತ್ತಾರೆ. ನನ್ನ ಅನಿಸಿಕೆಯಂತೆ ಭಕ್ತಿಯೂ ಒಂದು ರಸವೆಂದು ಭಾವಿಸಲಾಗುವುದಿಲ್ಲ. ಭಕ್ತಿ ಎಂದರೆ ಅದೊಂದು ಸ್ಥಿತಿ.  ಯಾರೇ ಆದರೂ ನಮಗೊಂದು ವಸ್ತುವನ್ನು ಅಥವಾ ಪಾರಿತೋಷಕವನ್ನು ಕೊಡುವಾಗ ನಾವು ಕೇಳಿ ಕೊಡುವಂತಿರಬಾರದು. ನಮ್ಮನ್ನು ಅರಿತು ಕೊಡುವುದನ್ನು ನಾವು ಬಯಸುತ್ತೇವೆ. ನಾವು ಬೇಡಿಕೆ ಸಲ್ಲಿಸಿ ಕೊಡುವಲ್ಲಿ ಒಂದು ಸಣ್ಣ ಅತೃಪ್ತ ಭಾವ ಇರುತ್ತದೆ. ಅದೇ ಭಾವ ಭಗವಂತನಲ್ಲಿ ಮೂಡಬೇಕು. ಪರಮಾತ್ಮ ನಮ್ಮನ್ನರಿಯನೇ? ನಮ್ಮನ್ನು ಅರಿತು ದಯಪಾಲಿಸನೇ ಹಾಗಿರುವಾಗ ಬೇಡಿಕೆ ಯಾಕೆ. ನಮ್ಮ ಅಭೀಷ್ಟಗಳು ಸದಾ ನೆರವೇರುತ್ತದೆ ಎಂಬ ಆತ್ಮ ವಿಶ್ವಾಸದಲ್ಲಿ ಪರಮಾತ್ಮನ ದರ್ಶನ ಮಾಡುವಾಗ ಧ್ಯಾನ ಎಂಬುದು ಸುಲಭವಾಗುತ್ತದೆ. 

ನಿತ್ಯ ಮುಂಜಾನೆ ಬ್ರಾಹ್ಮೀ ಕಾಲದಲ್ಲಿ ಮಾಡುವ ಸಂಧ್ಯಾವಂದನೆ ನನಗೆ ಅತ್ಯಂತ ಪ್ರಿಯವಾಗಿ ತೃಪ್ತಿಕರವಾಗುವುದು ಇದೇ ಭಾವದಿಂದ. ಯಾವ ಪರಿಕರವೂ ಬೇಡ. ಬೊಗಸೆಯಷ್ಟು ನೀರು ಇದ್ದರೆ ಸಾಕು, ಭಗವಂತನ ದರ್ಶನ ಸಾಧ್ಯವಾಗುತ್ತದೆ. ಶಂಖ ಊದುವ ಅವಶ್ಯಕತೆ ಇಲ್ಲ. ಘಂಟಾ ನಾದ ಬೇಕಾಗುವುದಿಲ್ಲ. ಹೂವು ನೈವೇದ್ಯ ಹೆಚ್ಚೇಕೆ ಯಾವ ಮೂರ್ತಿಯೂ ಬೇಡ. ಎಲ್ಲಿದ್ದರೂ ಆಚರಿಸಬಹುದಾದ ಸಂಧ್ಯವಂದನೆಗೆ ಮಿಗಿಲಾದ ಆರಾಧನೆ ಇಲ್ಲ. 

ನನ್ನ ಹಿರಿಯರೊಬ್ಬರು ಸಹಜವಾಗಿ ಪ್ರತಿ ಸಲ ಕೇಳುವ ಪ್ರಶ್ನೆ ಇದೆ. ಧ್ಯಾನ ಏನು ಯೋಚನೆ ಇಲ್ಲದ ಸ್ಥಿತಿಯಲ್ಲಿ ಹೇಗೆ ಸಾಧ್ಯವಾಗುತ್ತದೆ? ಬೇಡದೇ ಇದ್ದರೂ ಯಾವುದೋ ಯೋಚನೆಗಳು ಮನಸ್ಸಿನಲ್ಲಿ ಬಂದು ಹೋಗುತ್ತವೆ. ಈ ಸಮಯದಲ್ಲಿ ಏಕಾಗ್ರತೆ ಅದು ಪರಿಚಯಕ್ಕೂ ಸಿಗುವುದಿಲ್ಲ. ಯಾವುದೇ ಯೋಚನೆ ಇಲ್ಲದ ಸ್ಥಿತಿ ಇರುವುದಕ್ಕೆ ಸಾಧ್ಯವೇ? 

ಆಗತಾನೆ ಹುಟ್ಟಿದ ಮಗು ಅಳುತ್ತದೆ ನಗುತ್ತದೆ. ಯಾಕಾಗಿ? ಆ ನಗುವಿನ ಹಿಂದಿನ ಭಾವವೇನು? ಪುಟ್ಟ ಮಗು ಹಾಗೆ ನಗುವಾಗ ಹೇಳುವುದುಂಟು ಅದು ಪರಮಾತ್ಮನನ್ನು ನೋಡಿ ನಗುತ್ತದೆ.  ಹುಟ್ಟಿದ ಕೂಡಲೇ ನಗುವ ನಗು ನಿಷ್ಕಲ್ಮಶವಾಗಿರುತ್ತದೆ. ಆ ಮಗು ಬೆಳೆಯುತ್ತಾ ಬೆಳೆಯುತ್ತಾ ನಿಷ್ಕಮಲದ ಸ್ಥಿತಿಯನ್ನು ಕಳೆಯುತ್ತಾ ಬರುತ್ತದೆ. ನಾವೂ ಮಗುವಿದ್ದಾಗ ಹೀಗೆ ನಕ್ಕಿರಬಹುದು. ಆದರೆ ಬೆಳೆದು ಲೌಕಿಕ ಪ್ರಪಂಚದ ವ್ಯವಹಾರದೊಂದಿಗೆ ಸೇರಿ ಹೋದಾಗ ಆ ನಿಷ್ಕಲ್ಮಶ ಸ್ಥಿತಿ ನಮಗೆ ಸಾಧ್ಯವಾಗುವುದಿಲ್ಲ. ಆ ಸಮಸ್ಯೆಯನ್ನು ನೀಗಿಸಿಕೊಂಡರೆ ಧ್ಯಾನ ಹಾದಿ ಸುಗಮವಾಗುತ್ತದೆ.  ಯಾವುದೇ ಲೌಕಿಕ ಯೋಚನೆ ಇಲ್ಲದ ಆ ನಗುವಿನ ಪ್ರೇರಣೆಯನ್ನು ನಾವೂ ಪಡೆಯಬೇಕು. ನಾವು ಶೈಶವದ ಸ್ಥಿತಿಗೆ ಬರಬೇಕು. ನಾವೂ ಮಗುವಿನಂತಾದಾಗ ನಮ್ಮ ಮನಸ್ಸು ಯೋಚನಾ ರಹಿತವಾಗುತ್ತದೆ. ಯಾವುದೇ ಯೋಚನೆಗಳು ಇರುವುದಿಲ್ಲ. 

ನಮ್ಮ ಯಾವುದೇ ವ್ಯವಹಾರಗಳಲ್ಲಿ ಪರಮಾತ್ಮ ದರ್ಶನ ಸಾಧ್ಯವಾಗುವುದಿಲ್ಲ. ಯಾವುದೋ ಪೂಜೆ ಪುನಸ್ಕಾರ ಮಾಡಬಹುದು. ಮೂರ್ತಿಗೆ ಬಗೆ ಬಗೆಯ ಅಲಂಕಾರ ಮಾಡಿ ದೇವರು ಅಂತ ಆರಾಧಿಸಬಹುದು. ಇಲ್ಲ ಯಾವುದೋ ಸಧ್ಬಾವನೆಯ ಕೆಲಸದಲ್ಲಿ ತೊಡಗಿ ಸತ್ಯ ಪ್ರಾಮಾಣಿಕತೆಯನ್ನೇ ಭಗವಂತ ಎಂದುಕೊಳ್ಳಬಹುದು. ಆದರೆ ಇವುಗಳಲ್ಲಿ ಪೂರ್ಣವಾದ ಭಗವಂತನ ದರ್ಶನ ಸಾಧ್ಯವಾಗುವುದಿಲ್ಲ. ಕೇವಲ ನಮ್ಮ ಮಾನಸಿಕ ತೃಪ್ತಿ ಮತ್ತು ನಮ್ಮ ನಿರ್ಣಯ ಮಾತ್ರ ಆಗಿರುತ್ತದೆ. ಹಾಗಾಗಿ ಪರಮಾತ್ಮ ಯಾವುದು? ಹೇಗೆ ? ಏನು? ಈ ಎಲ್ಲ ಸಂದೇಹಗಳು ಪೂರ್ಣವಾಗಿ ಪರಿಹರಿಸಲ್ಪಡುವುದು ಧ್ಯಾನದಲ್ಲಿ ಮಾತ್ರ. ಈ ಧ್ಯಾನಕ್ಕೆ ಯಾವ ಆಡಂಬರವೂ ಬೇಡ. ಯಾವ ಮಂತ್ರವೂ ಬೇಡ. ಯಾವ ತಂತ್ರವೂ ಬೇಡ. ಧ್ಯಾನ ಅತ್ಯಂತ ಸರಳವಾದ ಹಾದಿ. ಮತ್ತು ಯಾವ ಖರ್ಚು ವೆಚ್ಚ ಶ್ರಮ ಇಲ್ಲದ  ಸರಳವಾದ ಅನುಷ್ಠಾನ.


ನಮ್ಮ ಮನಸ್ಸು ಕೆಲಸ ಮಾಡುವಷ್ಟು ದೇಹ ದುಡಿಯುವುದಿಲ್ಲ. ಒಂದರ್ಥದಲ್ಲಿ ಮನಸ್ಸಿನ ದುಡಿಮೆ ಹೆಚ್ಚು.  ಆದರೂ ನಾವು ದೇಹಕ್ಕೆ ವಿಶ್ರಾಂತಿಯನ್ನು ಕೊಟ್ಟು ನಾವು ದಣಿವಾರಿಸಿಕೊಂಡೇವು ಎಂದು ಭಾವಿಸುತ್ತೇವೆ. ವಾಸ್ತವದಲ್ಲಿ ಮನಸ್ಸು ಮತ್ತೂ ದಣಿದಿರುತ್ತದೆ. ದೇಹ ದುಡಿಯದೇ ಸುಮ್ಮನಿರುವಾಗ ಮನಸ್ಸು ಎರಡು ಪಟ್ಟು ಕೆಲಸ ಮಾಡುತ್ತಿರುತ್ತದೆ. 

               ನಾವು ದಿನವಿಡೀ ದುಡಿಯುತ್ತೇವೆ. ವಿರಾಮವಿಲ್ಲದೇ ದುಡಿದೇ ದಿನ ಕಳೆಯುತ್ತೇವೆ. ದುಡಿದು ದಣಿವಾದಾಗ ವಿಶ್ರಾಂತಿ ಬಯಸುತ್ತೇವೆ. ಒಂದೋ ಸುಮ್ಮನೆ ಕುಳಿತು ಬಿಡುತ್ತೇವೆ. ಇನ್ನೂ ಮುಂದೆ ಹೋಗಿ ಮಲಗಿ ನಿದ್ರಿಸುತ್ತೇವೆ. ದೇಹ ದಣಿವಾರಿಸಿಕೊಳ್ಳಬಹುದು. ದಣಿವಾರಿದ ನಂತರ ಹೊಸ ಉಲ್ಲಾಸ ಮೂಡಬಹುದು. ಆದರೆ ದಣಿವಾರಿದ್ದು ಕೇವಲ ದೇಹಕ್ಕೆ ಮಾತ್ರ. ಮನಸ್ಸು ಇನ್ನೂ ದಣಿದಿರುತ್ತದೆ. ಮನಸ್ಸು ದಣಿದಿರುವುದು ಗಮನಕ್ಕೆ ಬರುವುದೇ ಇಲ್ಲ. ಮನಸ್ಸಿನ ದಣಿವು ಕೇವಲ   ನಿದ್ರಿಸಿದರೆ ಪರಿಹರಿಸಲ್ಪಡುವುದಿಲ್ಲ. ಯಾಕೆಂದರೆ ನಿದ್ದೆಯಲ್ಲಿ ಬೀಳುವ ಕನಸು ಮನಸ್ಸನ್ನು ಬಾಧಿಸುತ್ತದೆ. 

ಧ್ಯಾನ ಎಂಬುದು ಸುಲಭ. ಆದರೆ ಅದರ ಕಡೆಗಿರುವ ಹಾದಿ ಬಹಲ ಕಠಿಣ. ನಮ್ಮ ದಿನ ನಿತ್ಯದ ಬದುಕಿನ ನಮ್ಮ ವರ್ತನೆಯ ದಟ್ಟವಾದ ಪ್ರಭಾವ ಮನಸ್ಸಿನ ಮೇಲಾಗುತ್ತದೆ. ಬೇಡವೆಂದರೂ ಆ ಪ್ರಭಾವ ಮನಸ್ಸನ್ನು ಬಿಟ್ಟು ಹೋಗುವುದಿಲ್ಲ. ಹಾಗಾಗಿ ನಮ್ಮ ದೈನಂದಿನ ಜೀವನ ವ್ಯವಹಾರಗಳಲ್ಲಿ ನಾವು ನಿರಾಳತೆಯನ್ನು ನಿಷ್ಕಲ್ಮಷ ಪ್ರಾಮಾಣಿಕತೆಯನ್ನು ಹೊಂದಿರಬೇಕು. ಪರಹಿತ ಅಲ್ಲದಿದ್ದರೂ ಅಹಿತದ ಚಿಂತನೆ ಇರಬಾರದು. ನಮ್ಮ ಸನ್ಮನಸ್ಸು ಸದ್ಭಾವನೆ ಅದು ಪರರಿಗೆ ಹಿತಕೊಡುವುದಕ್ಕಿಂತಲೂ ಅಧಿಕ ನಮಗೆ ಪ್ರಯೋಜನವನ್ನು ಕೊಡುತ್ತದೆ. ಹಾಗಾಗಿ ನಮ್ಮ ಚಿಂತನೆಗಳು ಪರಿಶುದ್ಧವಾಗಬೇಕು. ಭೂಮಿ ಮೇಲೆ ಹುಟ್ಟಿ ಬರುವ ಪ್ರತಿಯೊಂದು ಜೀವಿಯೂ ಬದುಕುವುದಕ್ಕಾಗಿ ಹುಟ್ಟಿ ಬರುತ್ತವೆ.  ಈ ಭಾವ ಜಾಗ್ರತವಾಗಿರುವಾಗ ಪರದ್ವೇಷ  ವೈಮನಸ್ಯಕ್ಕೆ ಜಾಗವಿರುವುದಿಲ್ಲ. 

ನಾನು ಸಹನಾವಂತ ಸಹನ ಶೀಲ ಹೀಗೆ ತಮ್ಮ ಬಗ್ಗೆ ತಿಳಿಯುವವರು ಹಲವರಿರಬಹುದು. ಸಹನಾ ಮೂರ್ತಿ ಅಂತ ತೋರುವುದರಲ್ಲಿ ಭಾವಿಸುವುದರಲ್ಲಿ ಒಂದು ಅನುಕಂಪದ ನಿರೀಕ್ಷೆ ಇರುತ್ತದೆ. ಆದರೆ ಕಿಂಚಿತ್ತಾದರೂ ಅಸಹನೆ ಇಲ್ಲದಿದ್ದರೆ ಅದು ಮನಸ್ಸಾಗಿರುವುದಿಲ್ಲ. ನೀವು ಬಹಳ ಸಹನಾ ಮೂರ್ತಿಯಾಗಿರಬಹುದು. ಸಾವಧಾನದಿಂದ ಚಿಂತಿಸುವವರಾಗಿರಬಹುದು. ಆದರೂ ಅರಿವಿಲ್ಲದೇ ಅಸಹನೆ ಪ್ರಕಟವಾಗುತ್ತದೆ. ಹೀಗೆ ಪ್ರಕಟವಾಗುವ, ಅಥವಾ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುವ ಅವಧಿಯನ್ನು ಲೆಕ್ಕ ಹಾಕಬೇಕು. ಶಾಂತವಾಗಿದ್ದರೂ ಸುಪ್ತವಾದ ಅಶಾಂತಿಯನ್ನು ಪ್ರಾಮಾಣಿಕತೆಯಿಂದ ಕಾಣಬೇಕು. ಆಗ ನಮ್ಮ ಸಹನ ಶೀಲತೆ ಎಷ್ಟು ಅಂತ ಅರಿವಿಗೆ ಬರುತ್ತದೆ. ಸಹನೆಯಿಂದ ಕಂಡ ಅವಧಿಯನ್ನು ಬಿಟ್ಟು ಅಸಹನೆ ತುಂಬಿದ ಘಳಿಗೆಯನ್ನು ಅವಲೋಕಿಸಿದಾಗ ಆ ಅವಧಿಯನ್ನು ಕಡಿಮೆ ಮಾಡಿಕೊಳ್ಳುವ ಧ್ಯೇಯ ತಳೆಯಬೇಕು. ಆವಾಗಲೇ ಸಹನಾ ಮೂರ್ತಿಯೆಂದೆನಿಸುವುದಕ್ಕೆ ಸಾಧ್ಯವಾಗುತ್ತದೆ.  ದೈನಂದಿನ ಜೀವನದಲ್ಲಿ ಆತ್ಮವಂಚನೆಯಿಂದ ದೂರವಿದ್ದು ಮನಸ್ಸಿಗೆ ಪ್ರಾಮಾಣಿಕವಾಗಿರಬೇಕು. ಧ್ಯಾನಕ್ಕೆ ಶಕ್ತಿ ತುಂಬಬಲ್ಲ ಕ್ರಿಯೆ ಇದು. ಧ್ಯಾನದಲ್ಲಿ ಎಲ್ಲವೂ ನಾಶವಾಗಿ ಕೇವಲ ಉತ್ಕೃಷ್ಟ ಒಂದೇ ಕೊನೆಗೆ ಉಳಿದಿರುತ್ತದೆ. ಧ್ಯಾನದ ಸ್ಥಿತಿಯಲ್ಲಿ ಯಾವ ಬೇಡಿಕೆಯೂ ಇರುವುದಿಲ್ಲ. ಧನ ಬೇಕು, ಸಂಪತ್ತು ಬೇಕು, ಆಹಾರ ಬೇಕು,  ಹೀಗೆ ಯಾವ ಬೇಕುಗಳ ಉತ್ಪತ್ತಿಯಾಗುವುದಿಲ್ಲ. ನಿರಾಡಂಬರ ಸ್ಥಿತಿ. ಈ ಸಚ್ಚಿಂತನೆಯಿಂದ ಪ್ರಯತ್ನಿಸಿ ಉತ್ತಮ ಧ್ಯಾನದ ಹಾದಿ ನಮ್ಮದಾಗುತ್ತದೆ.