Thursday, December 28, 2023

ಕಿತ್ತು ಬಂದ ನೆನಪಿನ ಬೇರುಗಳು

        ಮಂಗಳೂರಿನ ಕೆಪಿಟಿಯ ತುದಿಯಿಂದ ಕೂಳೂರು ಪಣಂಬೂರು ಕಡೆಗೆ ಹೋಗು ರಾಷ್ಟ್ರೀಯ ಚತುಷ್ಪಥ ಹೆದ್ದಾರಿಯ ಪಕ್ಕದಲ್ಲೇ ದೇರೇಬೈಲುನ ನೆಕ್ಕಿಲಗುಡ್ಡೆ ಇದೆ. ಕುಂಟಿಕಾನ ಮೇಲು ಸೇತುವೆ ದಾಟಿ ಸ್ವಲ್ಪ ದೂರ ಹೋಗಬೇಕಾದರೆ ಬಲ ಬದಿಗೆ ಒಂದು ಸಪೂರ ರಸ್ತೆ ಇಳಿಯುತ್ತದೆ. ಅದೇ ನೆಕ್ಕಿಲಗುಡ್ಡೆಗೆ ಹೋಗುವ ದಾರಿ. ಆ ದಾರಿಯಲ್ಲಿ ಮುಂದೆ ಸಾಗಿದರೆ ಇರುವ ಸ್ಥಳಗಳ ಚಿತ್ರಗಳು ಇವು.  ಈ ಚಿತ್ರಗಳು ನನ್ನ ಪಾಲಿಗೆ ಸಾವಿರ ನೆನಪನ್ನು ಪುಂಖಾನು ಪುಂಖವಾಗಿ ತರುತ್ತವೆ. ಎಲ್ಲವೂ ಹೃದಯ ಸ್ಪರ್ಶಿ. ಕಳೆದ ಬಾಲ್ಯದ ಚಿನಕುರುಳಿ ದಿನಗಳು ನೆನಪಿಗೆ ಬಂದಾಗ ಹೃದಯ ಭಾರವಾಗಿ  ಕಣ್ಣಂಚಿನಲ್ಲಿ ತೇವ ಬೇಡದೇ ಇದ್ದರು ಒಸರಿಬಿಡುತ್ತದೆ. ಚಿತ್ರದಲ್ಲಿ ಒಂದು ಮರ ಬುಡ ಮಗುಚಿ ಕೇವಲ ಅಸ್ಥಿಪಂಜರವಾಗಿ ಬಿದ್ದದ್ದು ಕಾಣಬಹುದು. ಇದನ್ನು ಕಾಣುವಾಗ ಕರುಳು ಕಿತ್ತು ಬಂದ ಅನುಭವವಾಗುತ್ತದೆ. ಇದೊಂದು ದೊಡ್ಡ ಗೋಳಿ ಮರ. ಅದರ ತುದಿಯನ್ನು ನಾನು ನೋಡಿಲ್ಲ. ಆದರೆ ಈಗ ಅದರ ಬುಡವನ್ನು ಕಾಣುತ್ತೇನೆ. ಒಂದು ಗೋಲಿಯಾಕಾರದ ಹಣ್ಣಿನ ಚಿಕ್ಕ ಬೀಜದಿಂದ ಹುಟ್ಟಿದ ಈ ಮರ ನಾನು ಕಳೆದ ಇತಿಹಾಸವನ್ನೇ ಬಿಚ್ಚಿ ತೋರಿಸುತ್ತದೆ. ಬಹುಶಃ ನಾನು ಹುಟ್ಟುವ ಮೊದಲೇ ಇದರಲ್ಲಿ ಕಾಣುವ ತಾಯಿ ಬೇರು ಹುಟ್ಟಿರಬಹುದು. ಈಗ ಇದು ಜೀವ ಸೆಲೆ ಇಲ್ಲದೇ ನಿಶ್ಚಲವಾಗಿದೆ.  ಇದು ಇತ್ತೀಚೆಗಿನ ಚಿತ್ರ. ಗೂಗಲ್ ನಕ್ಷೆಯಲ್ಲಿ ಬಂದ ಉಪಗ್ರಹದ ಚಿತ್ರ.  ಯಾಕೋ ನನ್ನ ಬಾಲ್ಯದಲ್ಲಿ  ಓಡಾಡಿದ ಸ್ಥಳಗಳನ್ನು ಗೂಗಲ್ ನಕ್ಷೆಯಲ್ಲಿ ತಡಕಾಡುವಾಗ ಸಿಕ್ಕಿದ ಈ ಚಿತ್ರ ಹಲವು ನೆನಪುಗಳನ್ನು  ಮರದ ಬೇರು ಕಿತ್ತು ಬಂದಂತೆ ಕಿತ್ತು ತೋರಿಸಿತು.   







ಮಂಗಳೂರಿನ ದೇರೇಬೈಲು  ಗ್ರಾಮದ ನೆಕ್ಕಿಲ ಗುಡ್ಡೆ ಎಂಬ ಸ್ಥಳ ಇದು. ಹೆಸರೇ ಹೇಳುವಂತೆ ಆ ದಿನ ಇದು ದೊಡ್ಡ ಗುಡ್ಡೆಯೇ ಆಗಿತ್ತು. ಗುಡ್ಡೆಯ ತುದಿಯಲ್ಲಿ ನಮ್ಮ ಮನೆ. ಮನೆಯ ಹಿಂಬದಿಯಲ್ಲಿ ದೊಡ್ಡ ಮೈದಾನ. ಅದರ ಒಂದು ಅಂಚಿನಲ್ಲಿ ಈ ಗೋಳಿಮರ. ಆಗ ವಿಶಾಲಾವಾಗಿ ಬೆಳೆದಿತ್ತು. ಇದರಂತೆ ಅಲ್ಲಿ ಇನ್ನೂ ಎರಡು ಮೂರು ಗೋಳಿ ಮರ ಇತ್ತು. ಮೈದಾನದಲ್ಲಿ ಊರಿನ ಮಕ್ಕಳು ಬಂದು ಕ್ರಿಕೆಟ್, ವಾಲಿಬಾಲ್ ಆಟವಾಡುತ್ತಿದ್ದರು. ಎಲ್ಲಾ ದಿನವೂ ಸಾಯಂಕಾಲ ಮಕ್ಕಳ ಗದ್ದಲ ಸರ್ವೇ ಸಾಮಾನ್ಯ. ಅದೇ ಜಾಗದಲ್ಲಿ ಈಗ ಕಟ್ಟಡ ಸಮುಚ್ಚಯ ಬೆಳೆದು ನಿಂತದ್ದನ್ನು ಕಾಣಬಹುದು. ಇದರ ಒಂದು ತುದಿಗೆ ಕಾಣುವ ಕಟ್ಟಡದ ಬಳಿಯಲ್ಲೇ ನಮ್ಮ ಮನೆ ಇತ್ತು. ನನ್ನ ಬಹಳಷ್ಟು ಬಾಲ್ಯ ಮಾತ್ರವಲ್ಲ ಶೈಶವದ ದಿನಗಳೂ ಇಲ್ಲೇ ಕಳೆದಿದ್ದವು. ಹಾಗಾಗಿ ನೆಕ್ಕಿಲಗುಡ್ಡೆ ಎಂದರೆ  ನನ್ನ ಪಾಲಿಗೆ ಅದೊಂದು ನೆನಪಿನ ಗುಡ್ಡೆಯೇ ಆಗಿಹೋಗಿದೆ. 

ಮೈದಾನ ಅಂಚಿನಲ್ಲಿರುವ ಈ ಗೋಳಿ ಮರ ಬಾಲ್ಯದಲ್ಲಿ ನಮ್ಮ ಹಲವು ಆಟಗಳಿಗೆ ಸಾಕ್ಷಿಯಾಗಿದೆ. ಮೇಲಿನಿಂದ ಇಳಿದು ಬಿಟ್ಟ ಅದರ ಬಿಳಲುಗಳಲ್ಲಿ ನಾವು ಉಯಾಲೆಯಾಡಿದ್ದು ಮರೆಯುವುದಕ್ಕೆ ಹೇಗೆ ಸಾಧ್ಯ. ಹೆಣ್ಣು ನಾಯಿಯ ಕೆಚ್ಚಲಿಗೆ ಮರಿಗಳು ನೇತಾಡಿದಂತೆ, ಮರ ನಮಗೆ ತಾಯಿಯಂತೆ ಅದರೆ ತೋಳಿಗೆ ನಾವು ನೇತಾಡಿ ಉಂಡ ಸಂತೋಷಗಳು ಮರ ಸತ್ತು ಬಿದ್ದರೂ ನೆನಪುಗಳು ಜೀವಂತವಾಗಿದೆ. ಈ ಮರ ಬಸ್ಸು ಬಂಡಿ ಬಿಡುವ ಆಟವಾಡಿದಾಗ ಬಸ್ಸು  ನಿಲ್ದಾಣವಾಗಿದೆ, ಮನೆಯ ಆಟವಾಡುವಾಗ ಈ ಮರದ ಬುಡ ಮನೆಯಾಗಿದೆ. ಕಳ್ಳ ಪೋಲೀಸ್ ಆಟವಾಡುವಾಗ ಈ ಮರ ದೊಡ್ಡ ಕಾಡಿನಂತೆ ಉಪಯೋಗಿಸಿದ್ದೇವೆ.  ಮರದ ಬುಡದಲ್ಲಿ ಮಣ್ಣು ಸೊಪ್ಪು ಗುಡ್ಡೆ ರಾಶಿ ಹಾಕಿ ತಕ್ಕಡಿ ಕಟ್ಟಿ ಅಂಗಡಿಯ ಆಟವಾಡಿದ್ದೇವೆ.  ಮರದ ಬುಡದಲ್ಲಿ ಹಲವು ಬಗೆಯ ಆಟವಾಡಿದ್ದೇವೆಆಟದ ಮೈದಾನದಲ್ಲಿ ಆಟವಾಡಿ ದಣಿದಾಗ ಈ ಮರದ ನೆರಳಲ್ಲಿ ಹರಟೆ ಹೊಡೆದು ಕುಳಿತಿದ್ದೇವೆ. , ಆಲ್ಲಿ ಗೋಳಿಮರದ ಅಡಿಗೆ ಹೋಗಿ ಆಟವಾಡಬಾರದ ಎಂದು ಮನೆಯಲ್ಲಿ ತಂಟೆ ಜಗಳ ಮಾಡಿದಾಗ ಹಿರಿಯರು ಬೈಯ್ಯುತ್ತಿದ್ದರು. ಈ ಗೋಳಿಮರ ಎಂಬುದು ಆ ರೂಪದಲ್ಲಿ ಒಂದು ವಿಮೋಚನೆಯ ಸ್ಥಳವಾಗಿತ್ತು. .ನಮ್ಮ ಎಲ್ಲ ತಂಟೆ ಜಗಳವನ್ನೂ ಖುಷಿಯನ್ನೂ  ಸಹಿಸಿಕೊಂಡ ಈ ಮರ ಈಗ ಬದುಕುವುದಕ್ಕೆ ಸಾಧ್ಯವಿಲ್ಲದೇ ಧರಾಶಾಯಿಯಾಗಿದೆ.  ಪ್ರಪಂಚದಲ್ಲಿ ಆರಂಭವಾಗುವುದು ಅಂತ್ಯಕಾಣಲೇ ಬೇಕು. ಆದರಂತೆ ಮರವೂ ಅದಕ್ಕೆ ಎರವಾಗಿದೆ. ಆದರೆ ಆ ನೆನಪುಗಳನ್ನು ಕಿತ್ತು ಹಾಕಿ ಅದಕ್ಕೆ ಅಂತ್ಯವೇ ಇಲ್ಲದಂತೆ ಮಾಡಿದೆ. 

ಈ ಚಿತ್ರಗಳಲ್ಲಿ ಒಂದು ಮೂರು ರಸ್ತೆ ಕೂಡುವ ಚಿತ್ರವಿದೆ .  ಹತ್ತಿರದ ಉರ್ವಸ್ಟೋರ್ ಪೇಟೆಗೆ ಇದೇ ದಾರಿಯಲ್ಲಿ ಹೋಗಬೇಕು. ಅಲ್ಲಿಂದ ಕೂಗಳತೆ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಇದೆ. ಈಗ ಅದು ಚತುಷ್ಪಥವಾಗಿದೆ.    ನೆಕ್ಕಿಲ ಗುಡ್ಡೆಯ ಬುಡದಲ್ಲೇ ಇರುವ ಜಾಗವಿದು.  ಇದರ ಬುಡದಲ್ಲೆ ಒಂದು ನೀರಿನ  ನಳ್ಳಿ ಇತ್ತು. ನಗರ ಬೆಳೆಯುತ್ತಿದ್ದಂತೆ ಈ ಜಾಗದಲ್ಲಿ ನಳ್ಳಿ ಸಂಪರ್ಕ ಬಂದಿತ್ತು.  ಪೇಟೆಯಿಂದ ಬರುವಾಗ ಅಲ್ಲಿ ನೆರಳಲ್ಲಿ ಕುಳಿತು ಒಂದಷ್ಟು ನಳ್ಳಿ ನೀರು ಕುಡಿದು ದಣಿವಾರಿಸಿಕೊಳ್ಳುವ ಜಾಗವದು. ಅಲ್ಲೆ ಮೇಲೆ ಒಂದು ದೊಡ್ಡ ಬಾವಿ ಇತ್ತು. ಸದಾಕಾಲ ಅದರಲ್ಲಿ ನೀರಿದ್ದು ಸುತ್ತಮುತ್ತಲಿನವರು ಅಲ್ಲಿಗೆ ನೀರಿಗೆ ಬರುತ್ತಿದ್ದರು. ಈಗ ಅದೂ ಮುಚ್ಚಿ ಹೋಗಿರಬಹುದು. 

ನೆಕ್ಕಿಲ ಗುಡ್ಡೆ ಮೊದಲಿನ ಗುರುತೇ ಇಲ್ಲದಂತೆ ಬದಲಾಗಿ ಹೋಗಿದೆ. ನಾವುದ್ದಾಗ ಸೊಗಸಾದ ತೆಂಗಿನ ತೋಟವಿತ್ತು. ಹಲವಾರು ಕೃಷಿ ವ್ಯವಸಾಯದಿಂದ ಗುಡ್ಡೆ ಹಚ್ಚ ಹಸುರಾಗಿತ್ತು. ಈಗ ಇಲ್ಲಿ ಹಲವು ಅಂತಸ್ತುಗಳ ಬೃಹತ್ ಕಟ್ಟಡಗಳು ತಲೆ ಎತ್ತಿವೆ. ಗುಡ್ಡೆ ಹೋಗಿ ನಗರವಾಗಿ ಹೆಸರು ಕೂಡ ಬದಲಾಗಿ ಹೋಗಿದೆ.  ಬಹುಶಃ ಅಂದಿದ್ದ ಮನುಷ್ಯರೂ ಹೊಸಜನಾಂಗಕ್ಕೆ ಜಾಗ ಖಾಲಿ ಮಾಡಿಕೊಟ್ಟಿರಬಹುದು.  ಹಲವರು ಇಲ್ಲಿಂದ ಹೋಗಿರಬಹುದು. ಆದರೆ ಆ ನೆನಪುಗಳು ಇಲ್ಲೇ ಹುದುಗಿರುತ್ತವೆ. ಅದು ಈ ಮರದ ಬೇರಿನಂತೆ ಹಲವು ಸಲ ಕಿತ್ತು ಬರುತ್ತವೆ. ಒಣಗಿ ಹೋದ ಊರ ನಡುವೆ ನೆನಪುಗಳು ಹಚ್ಚ ಹಸುರಾಗಿ ಜೀವಂತವಾಗಿರುತ್ತವೆ. 


Monday, December 25, 2023

ಸ್ವಾಮಿಯೇ ಶರಣಂ

    ಚೆನ್ನಪ್ಪ (ಇದು ಕೇವಲ ಸಾಂಕೇತಿಕ ಹೆಸರು)  ಬೀದಿಯ ತುದಿಯಲ್ಲಿರುವ ಮನೆಯಲ್ಲಿ ವಾಸ. ಸಾಯಂಕಾಲ ಸೂರ್ಯಾಸ್ತವಾಗುವಾಗಲೇ ಈತ ರಂಗೇರಿಸಿಕೊಳ್ಳುತ್ತಾನೆ. ಹಾಗೆ ನೋಡಿದರೆ ಹಲವು ಸಲ ಮುಂಜಾನೆ ಐದು ಘಂಟೆಗೆ  ವೈನ್ ಶಾಪ್ ಎದುರಲ್ಲಿ ನಿಂತಿರುತ್ತಿದ್ದ. ಇವನಂತೆ ಹಲವರು ಬೆಳಗ್ಗಿನ ಜಾವ ತಮ್ಮ ದೌರ್ಬಲ್ಯಕ್ಕೆ ಪರಿಹಾರವನ್ನು ಅದೇ ಹೊತ್ತಿನಲ್ಲಿ ಅಲ್ಲಿಯೇ ಕಾಣುತ್ತಾರೆ. ಚೆನ್ನಪ್ಪ ಸಾಯಂಕಾಲ ಮನೆಯ ಎದುರು ಮೆಟ್ಟಲಲ್ಲಿ ಕುಳಿತು  ಗೊಣಗುತ್ತಾ ಹಲವು ಸಲ ಕಿರುಚಾಡುತ್ತಾ ಇರುತ್ತಾನೆ. ರಸ್ತೆಯಲ್ಲಿ ನಡೆದಾಡುವವರು ಸುಮ್ಮನೇ ಈತನನ್ನು ಒಂದು ಸಲ ನೋಡಿದರೆ ಸಾಕು ಕೆಟ್ಟ ಬೈಗುಳಗಳನ್ನು ಕೇಳಬೇಕಾಗುತ್ತದೆ. ಹಾಗೆ ನೋಡಿದವರು ಅಲ್ಲಿ ಹೋಗಿ ತಾಸು ಕಳೆದರೂ ಈತನ ಬೈಗುಳ ನಿಂತಿರುವುದಿಲ್ಲ. ಇಂತಹ ಚೆನ್ನಪ್ಪ ಎರಡು ದಿನದಿಂದ  ಮನೆಯ ಮುಂದೆ ಕಾಣುತ್ತಿಲ್ಲ. ಮೊದಲ ದಿನ ಎಲ್ಲಾದರೂ ಕುಡಿದು ಬಿದ್ದಿರಬಹುದು ಎಂದುಕೊಂಡೆ. ಆದರೆ ಎರಡು ದಿನ ನಂತರ ಬೆಲಗ್ಗೆ ನೋಡುತ್ತೇನೆ  ಮೈಮೇಲೆ ಭಸ್ಮ ಬಳಿದುಕೊಂಡು ಕಪ್ಪು ವಸ್ತ್ರ ಧರಿಸಿ ಕಂಡುಬರುತ್ತಾನೆ. ದಿನದ ಬಹುಪಾಲು ಸಮಯ ನಶೆಯಲ್ಲೇ ಇರುವ ಚೆನ್ನಪ್ಪ ಈಗ ಮಾಲಾಧಾರಿಯಾಗಿ ಗುಮ್ಮನೇ ಕುಳಿತಿದ್ದ. ಎರಡು ದಿನ ಅದಾಗಲೇ ಮದ್ಯವಿಲ್ಲದೆ ಕಳೆದಿದ್ದ. ಅಯ್ಯಪ್ಪನ ಮಹಿಮೆ ಈ ಮಟ್ಟಿಗಂತೂ ಅಪಾರ ಎಂದು ಒಪ್ಪಿಕೊಳ್ಳಲೇ ಬೇಕು. 

ಚಿತ್ರ ಕೃಪೆ ಅಂತರ್ಜಾಲದಿಂದ

ಚೆನ್ನಪ್ಪನದ್ದು ಪುಟ್ಟ ಸಂಸಾರ. ಗೂಡಿನಂತೆ ಇರುವ ಮನೆಯಲ್ಲಿ ವಾಸ. ಹೈಸ್ಕೂಲಿಗೆ ಹೋಗುವ ಹೆಣ್ಣು ಮಗಳೊಬ್ಬಳಿದ್ದಾಳೆ. ಯಾವುದೋ ಕೆಲಸಕ್ಕೆ ನಮ್ಮಲ್ಲಿಗೆ ಬಂದವಳಲ್ಲಿ ಒಂದು ದಿನ ಆಕೆಯ ಅಪ್ಪನ ಬಗ್ಗೆ ಕೇಳಿದ್ದೆ,  ಕುಡಿಯದೇ ಇದ್ದರೆ ಅಪ್ಪ ಒಳ್ಳೆಯವರು ಅಂತ ಆಕೆಯೇ ಹೇಳಿದ್ದಳು. ಏನು ಮಾಡುವ ಕುಡಿತ ಒಂದು ಇಲ್ಲದೇ ಇದ್ದರೆ ಅಪ್ಪ ಚಿನ್ನದಂತಹ ಮನುಷ್ಯ.  ಕುಡಿತಕ್ಕಾಗಿ ಒಳ್ಳೆಯತನವನ್ನು ಬಲಿಕೊಡುವ ಚೆನ್ನಪ್ಪನಂತಹ ವ್ಯಕ್ತಿಗಳು ನಮ್ಮ ಸುತ್ತ ಮುತ್ತ ಬಹಳಷ್ಟು ಮಂದಿ ಇದ್ದಾರೆ. ಅಂತಹ ಚೆನ್ನಪ್ಪ ಈಗ ಹೊಸ ಅವತಾರದಲ್ಲಿ ಕಂಡಿದ್ದಾನೆ. ಕಳೆದೆರಡು ದಿನ ಆತನ ಮನೆಯಲ್ಲಿ ಒಂದಷ್ಟು ಶಾಂತಿ ನೆಲಸಿದೆ. ದೈವ ಭಕ್ತಿ ಯಾವ ಪ್ರಚೋದನೆಯನ್ನು ಒದಗಿಸಿಬಿಡುತ್ತದೆ ಎಂದು ಅಚ್ಚರಿಯಾಗುತ್ತದೆ. 

ಈಗಿಗ ನಮ್ಮ ಸುತ್ತ ಮುತ್ತ ಬೆಳಗ್ಗೆ ಸಾಯಂಕಾಲ ಶರಣಮಯ್ಯಪ್ಪ ಎನ್ನುತ್ತಾ ಶರಣು ಕರೆಯುವುದು ಸರ್ವೇ ಸಾಮಾನ್ಯ. ಸಾಯಂಕಾಲ ಮೈಕ್ ಕಟ್ಟಿ ದೊಡ್ಡದಾಗಿ ಭಜನೆ ಮಾಡುವುದನ್ನು ಕಾಣಬಹುದು. ವಿಪರ್ಯಾಸ ಎಂದರೆ ಮಲೆಗೆ ಹೋಗಿ ಬಂದು ಮಾಲೆ ಕಳಚಿದ ಒಡನೆ ಅದುವರೆಗೆ ಇದ್ದ ಪರಮಾತ್ಮ ಎಲ್ಲಿ ಮಾಯವಾಗಿಬಿಡುತ್ತಾನೆ ಎಂದು ಅಚ್ಚರಿಯಾಗುತ್ತದೆ. ಮಾಲೆ ಧರಿಸಿ ಒಂದೆರಡು ದಿನಕ್ಕೆ ಸೀಮಿತವಾಗುವ ದೈವ ಭಕ್ತಿ ಮತ್ತೆ ಮಾಯವಾಗಿ ಯಥಾಪ್ರಕಾರ ತಾಮಸಗುಣ ತಾಂಡವವಾಗುತ್ತದೆ. ಶರಣಮಯ್ಯಪ್ಪಾ ಎಂದು ಪರಮ ಭಕ್ತಿಯಿಂದ ಶರಣು ಕರೆಯುವುದನ್ನು ಕಾಣುವಾಗ ಮನುಷ್ಯ ಬದಲಾಗಿ ಬಿಟ್ಟ ಎಂಬ ಭ್ರಮೆ ಹುಟ್ಟಿಸುತ್ತದೆ.  ಅದು ಕೇವಲ ಕ್ಷಣಿಕವಾಗಿಬಿಡುವಾಗ ಈ ಭಕ್ತಿಯಿಂದ ಏನು ಪ್ರಯೋಜನ  ಎಂದು ಚಿಂತಿಸುವಂತಾಗುತ್ತದೆ.  ಚೆನ್ನಪ್ಪ ಈಗ ಮಾಲೆ ಹಾಕಿದ್ದಾನೆ. ಕಪ್ಪು ವಸ್ತ್ರ ಧರಿಸಿದ್ದಾನೆ. ಕೆಲವು ದಿನ ಅಷ್ಟೆ ನಂತರ ಯಥಾ ಪ್ರಕಾರ ಆ ಜಗಲಿಯಲ್ಲಿ ಮತ್ತೆ ಬೈಗುಳದ  ಕಿರುಚುವಿಕೆ  ಕೇಳಿಸುತ್ತದೆ. 

ನಮ್ಮಲ್ಲಿ ಒಳ್ಳೆಯ ತನ ಎಂಬುದು ಕೇವಲ ಕೆಲವು ಘಳಿಗೆಗಳಿಗೆ ಸೀಮಿತವಾದರೆ ಸಾಕೇ? ನಮ್ಮ ಸದ್ವರ್ತನೆಗೂ ನಾವು ಅವಧಿಯನ್ನು ಮೀಸಲಿರಿಸುತ್ತೇವೆ ಎಂದರೆ ನಾವು ಕೆಟ್ಟವರಾಗಿ ಉಳಿದು ಅದೇ ನಮ್ಮ ಸಹಜಗುಣವಾಗಿ ಅದುವೇ  ಅಂತರಂಗದ ಬಯಕೆಯಾಗಿರ ಬೇಕು. ಒಳ್ಳೆಯವರಾಗುವ ಅವಕಾಶವಿದ್ದರೂ ನಾವು ಕೆಟ್ಟವರಾಗಿಯೇ ಇರುವುದನ್ನು ಬಯಸುತ್ತೇವೆ ಎಂದರೆ ಅದು ದುರ್ದೈವ.   ಇಲ್ಲವಾದರೆ ಅದಕ್ಕೆ ಅವಧಿಯಾದರು ಯಾಕೆ ಬೇಕು? ಸೂರ್ಯ ಉದಿಸಿ ಅಸ್ತಮಿಸುವಂತೆ ನಮ್ಮ ವ್ಯಕ್ತಿತ್ವವೂ ಉದಿಸಿ ಅಸ್ತಮಿಸುವ ಸ್ವಭಾವಕ್ಕೆ ಒಳಗಾಗುತ್ತದೆ. 

ನಮ್ಮ ಮನೆಯ ಸುತ್ತ ಮುತ್ತ ಈ ಚಳಿಗಾಲದ ಅವಧಿಯಲ್ಲಿ ಹಲವರು ಮಾಲೆ ಹಾಕಿ ವೃತ ನಿಷ್ಠರಾಗುತ್ತಾರೆ. ಬೆಳಗ್ಗೆ ಸಾಯಂಕಾಲ ದೇವರ ಭಜನೆ ಶರಣು ಕರೆಯುವುದು ಕೇಳುತ್ತಿರುತ್ತದೆ. ಅಬ್ಬಾ ಇಷ್ಟಾದರೂ ಸತ್ಕರ್ಮ ಮಾಡುವ ಪ್ರೇರಣೆ ಬರುತ್ತದಲ್ಲ ಎಂದು ಸಹಜವಾಗಿ ಅಂದುಕೊಳ್ಳಬೇಕು. ಅದೂ ಶಬರಿ ಮಲೆಯ ಆ ಜನಸಂದಣಿ ಕಾಣುವಾಗ  ಕೇವಲ ಕೆಲವು ಘಳಿಗೆಗಳ ಸುಖಕ್ಕೆ ಮನುಷ್ಯ ಇಷ್ಟೊಂದು ಹಾತೊರೆಯುತ್ತಾನಲ್ಲಾ ಅದೊಂದು ವಿಚಿತ್ರ. ನಾನಂತೂ ಆ ಜನ ಸಂದಣಿಯಿಂದ ಆದಷ್ಟೂ ದೂರವಿದ್ದು ಏಕಾಂತದಲ್ಲೇ ಪರಮಾತ್ಮನ ಅನುಭವವನ್ನು ಅನುಭವಿಸುವುದರಲ್ಲಿ ಆಸಕ್ತ. ಹಾಗಾಗಿ ಇದೆಲ್ಲ ವಿಚಿತ್ರವಾಗಿ ಕಾಣುತ್ತೇನೆ. ಜಾತಿ ಧರ್ಮ  ಧನಿಕ ಬಡವ ಎಲ್ಲ ಭಾವವನ್ನು ಬದಿಗಿಟ್ಟು ಕೇವಲ ತತ್ವಮಸೀ ಎಂಬ ಧ್ಯೇಯದಲ್ಲಿ ಕೆಲವು ದಿನಗಳ ಮಟ್ಟಿಗೆ ಎಲ್ಲ ಲೌಕಿಕ ಚಿಂತೆಯಿಂದ ದೂರವಿದ್ದು ವೃತ ನಿಷ್ಠರಾಗುವುದು ಎಂದರೆ ಮನುಷ್ಯನ ಅಂತರಂಗದಲ್ಲಿ ಸತ್ ಎಂಬುದು ಬರಿದಾಗಲಿಲ್ಲ ಎಂಬುದರ ಸಂಕೇತ. ಆದರೆ ಇದು ಕೇವಲ ಒಂದಿಷ್ಟು ಅವಧಿಗೆ ಸೀಮಿತವಾಗುವಾಗ ಹೀಗಿದ್ದರೆ ಸಾಕೇ ಎಂಬ ಯೋಚನೆಯೂ ಬಂದು ಬಿಡುತ್ತದೆ. 

ಶಬರಿ ಮಲೆಯ ವೃತದ ಅವಧಿಯಲ್ಲಿ ಪ್ರತಿ ನಿತ್ಯ ಅಲ್ಲಲ್ಲಿ ಸ್ವಾಮಿಯ ಶರಣು ಕರೆಯುವುದನ್ನು ಕೇಳುತ್ತೇವೆ. ಮುಂಜಾನೆ ಸ್ನಾನ ಮಾಡುವುದು ಒಂದೆಡೆಯಾದರೆ ಸಾಯಂಕಾಲ ಭಜನೆ ಪೂಜೆಯಲ್ಲಿ ವ್ಯಸ್ತರಾಗುವುದು ಇನ್ನೊಂದೆಡೆ. ಆದರೆ ಇವುಗಳೆಲ್ಲ ಕೆಲವು ದಿನಗಳಿಗಷ್ಟೇ ಸೀಮಿತ. ಮತ್ತೆ ಯಥಾಪ್ರಕಾರ ದೈವಿ ಭಾವ ಮಾಯವಾಗಿ ತಾಮಸೀ ಭಾವ ನೆಲೆಯಾಗುತ್ತದೆ.  ಈಗ ಕಾಣುವ ಶಿಸ್ತು ಆ ಸಂಸ್ಕಾರದ ನೆನಪು ಇಲ್ಲದಂತೆ ಮನುಷ್ಯ ಪಾತ್ರ ಬದಲಿಸಿ ಬಿಡುತ್ತಾನೆ. ಜೀವನ ಎಂಬುದು ನಾಟಕ ಎಂದು ಹೇಳುತ್ತಾರೆ. ಇದರಲ್ಲಿ ನಾಟಕ ಯಾವುದು ಎಂದು ಪ್ರಶ್ನೆ ಮೂಡುತ್ತದೆ. 

ದಿನಚರಿ ಎಂಬುದು ಮನುಷ್ಯನ ಸಂಸ್ಕಾರದ ಪ್ರತಿಬಿಂಬ. ಸತ್ ಸಂಸ್ಕಾರ ರೂಪುಗೊಳ್ಳುವುದು ಉತ್ತಮ ದಿನಚರಿಯಿಂದ. ಅಲ್ಲಿ ನಾವು  ಉತ್ತಮವಾದ ಕರ್ಮಗಳನ್ನುಎಷ್ಟು  ಅನುಷ್ಠಾನ ಮಾಡುತ್ತೇವೆಯೋ ಅದುವೆ ನಮ್ಮಲ್ಲಿ ಶಾಶ್ವತವಾಗಿ ನೆಲೆಯಾಗುತ್ತದೆ. ಕೆಲವು ದಿನಕ್ಕೆ ಮಾತ್ರ ಸೀಮಿತವಾಗುವ ಭಜನೆ ಪರಮಾತ್ಮನ ಆರಾಧನೆ ನಂತರ ಅದು ಇಲ್ಲ ಎಂದರೆ ಹರಿದ ತಂತಿಯ ಶ್ರುತಿಯಾಗುತ್ತದೆ. ಯಾವಾಗಲೋ ಒಂದು ದಿನ ಆಡಂಬರದಿಂದ ಅದ್ಧೂರಿಯಿಂದ ಆಚರಿಸುವ ಸತ್ಯನಾರಾಯಣ ವೃತಕ್ಕಿಂತ, ನಿತ್ಯ ಒಂದು ದೀಪ ಹಚ್ಚಿ ನಮೋ ನಾರಾಯಣ ಎನ್ನುವುದರಲ್ಲಿ ಹೆಚ್ಚು ಪ್ರಭಾವವಿದೆ. ಹೆಚ್ಚು ಶಕ್ತಿಯಿದೆ. ನಿತ್ಯವೂ ಪರಮಾತ್ಮನ  ಬಳಿಯಲ್ಲೇ ಇರುವ ಅವಕಾಶವಿರುತ್ತದೆ. ಪರಮಾತ್ಮನ ಪ್ರಭಾವಲಯದಿಂದ ಅದು ದೂರಕ್ಕೆ ಒಯ್ಯುವುದಕ್ಕೆ ಬಿಡುವುದಿಲ್ಲ.  ಆಡಂಬರದ ಆರಾಧನೆಯಲ್ಲಿ ಕೇವಲ ಅಡಂಬರದತ್ತ ಗಮನವನ್ನು ಹರಿಯುತ್ತದೆ. ಪರಮಾತ್ಮ ದೂರವೇ ಉಳಿದು ಬಿಡುತ್ತಾನೆ. ಸರಳವಾಗಿದ್ದಷ್ಟೂ ಪರಮಾತ್ಮನ ಮೇಲೆ ಗಮನ ಗಾಢವಾಗುತ್ತದೆ. ನಿಂತ ನೀರು ಕಲ್ಮಷವನ್ನೇ ತುಂಬಿಕೊಂಡಿದ್ದರೆ ಹರಿವ ನೀರು ಸದಾ ಶುದ್ದವಾಗಿರುತ್ತದೆ. ಈ ಹರಿಯುವುದಿಕೆ ಎಂಬುದು ಚೈತನ್ಯದ ಸಂಕೇತ. 

ಶಬರಿಮಲೆಗೆ ಹೋಗಿ ಬಂದು ವೃತ ಸಮಾಪ್ತಿ ಮಾಡಿ ಮಾಲೆ ಕಳಚಿದರೂ ಆ ಜೀವನ ಶೈಲಿಯಿಂದ ಹೊರ ಬಾರದ ಎಷ್ಟೋ ವ್ಯಕ್ತಿಗಳಿದ್ದಾರೆ. ಅವರು ಆ ಜೀವನದ ಮೌಲ್ಯವನ್ನು ಅರ್ಥಮಾಡಿಕೊಂಡಿರುತ್ತಾರೆ. ಆದರೆ ವೃತ ಎಂಬುದು ಹರಕೆ ಸಲ್ಲಿಸುವುದಕ್ಕೆ ಸೀಮಿತವಾಗುವಾಗ ಉತ್ತಮವಾದ ಅಂಶಗಳನ್ನು ನಾವು ಬದಿಗಿಟ್ಟು ಅದಕ್ಕೆ ತುಕ್ಕು ಹಿಡಿಸಿದಂತೆ, ಮತ್ತೆ ಅದು ಸವಕಲಾಗಿಯೆ ಇರುತ್ತದೆ. ವಾಸ್ತವದಲ್ಲಿ ಉತ್ತಮ ಕಾರ್ಯಗಳು ಅಷ್ಟಾದರೂ ನೆರವೇರುತ್ತದಲ್ಲಾ ಎಂಬ ಅಲ್ಪ ತೃಪ್ತಿಯಲ್ಲೇ  ಉಳಿದು ಬಿಡುತ್ತದೆ. ಆದರೆ ಆಡಂಬರ ಎಂಬುದು ಅಷ್ಟಾದರೂ ಎಂಬ ಪರಿಧಿಯಲ್ಲಿ ನಿಲ್ಲುವುದಿಲ್ಲ. ಅದಕ್ಕೆ ಪರಿಶ್ರಮ ಹೆಚ್ಚು ವಿನಿಯೋಗಿಸಲ್ಪಡುತ್ತದೆ. 

ಕೆಲವು ದಿನ ಕಳೆದು ನೋಡಿದರೆ ಚೆನ್ನಪ್ಪ ಮತ್ತೆ ನಶೆಯ ತೀರ್ಥಕ್ಕೆ ಶರಣಾಗುತ್ತಾನೆ, ವೃತದಲ್ಲಿ ಸೇವಿಸಿದ ತೀರ್ಥ ಮರೆತೇ ಹೋಗಿರುತ್ತದೆ. ಹಲವರು ಶಬರಿ ಮಲೆಗೆ ಹೋಗಿ ಬರುವಾಗ ಮಾಹೆ ಯಲ್ಲಿ ಒಂದು ಘಳಿಗೆ ವಿರಮಿಸಿದಂತೆ ಭಕ್ತಿ ಎಂಬುದು ಬೇಕಾದಾಗ ಚಲಾಯಿಸುವ ಯಂತ್ರದಂತೆ, ಅದು ಯಾಂತ್ರಿಕವಾಗಿಯೇ ಇರುತ್ತದೆ. ಅದು ಸಹಜವಾಗಿ ಹೃದಯಕ್ಕೆ ಹತ್ತಿರವಾಗುವುದಿಲ್ಲ. ಅಪ್ಪ ಹೊಸ ಉಡುಗೆಯನ್ನು ತಂದು ಕೊಟ್ಟಂತೆ ಭಗವಂತ ನಮಗ ಒಳ್ಳೆಯದಾಗುವ ಅವಕಾಶವನ್ನು ಕೊಡುತ್ತಾನೆ, ಆದರೆ ನಾವು ಅಪ್ಪ ಕೊಟ್ಟ ಅಂಗಿಯನ್ನು ವಿಶೇಷ ದಿನಕ್ಕೆ ತೆಗೆದು ಮೀಸಲಿರಿಸಿದಂತೆ...ಈ ಒಳ್ಳೆಯದಾಗುವ ಅವಕಾಶವನ್ನೂ ಮೀಸಲಿರಿಸಿಬಿಡುತ್ತೇವೆ. ನಿತ್ಯ ಮತ್ತೆ ಹರಿದ ಅಂಗಿಯನ್ನು ತೊಟ್ಟುಕೊಳ್ಳುತ್ತೇವೆ. ನಮಗೆ ಅದೇ ಸಹಜವಾಗಿ ಸೌಕರ್ಯವನ್ನು ಒದಗಿಸಿಬಿಡುತ್ತದೆ.  


Saturday, December 23, 2023

ವೈಕುಂಠ ದರ್ಶನ

         ಇಂದು ವೈಕುಂಠ ಏಕಾದಶಿ,  ಯಾವುದೋ ವಿಳಾಸ ಹುಡುಕುತ್ತಾ ಬೆಂಗಳೂರಿನ ಒಂದು ಕಡೆಯಲ್ಲಿ ರಸ್ತೆಯಲ್ಲಿ ಸುತ್ತಡುತ್ತಿರುವಾಗ ಒಂದು ದೇವಸ್ಥಾನ ಸಿಕ್ಕಿತು. ದೇವಾಲಯದ ಸುತ್ತ ಬಹಳಷ್ಟು ಜನಸಂದಣಿ ಇತ್ತು. ಕಾಲು ದಾರಿಯುದ್ದಕ್ಕೂ ಬಹಳ ದೂರದ ತನಕವು  ಸರದಿ ಸಾಲಿನಲ್ಲಿ ಜನಗಳು ನಿಂತಿದ್ದರು. ದೇವಸ್ಥಾನ ಹತ್ತಿರ ಬರುತ್ತಿದ್ದಂತೆ ಅಲ್ಲಿ ಇನ್ನೊಂದು ಫಲಕವಿತ್ತು. ಅದರಲ್ಲಿ ವಿಶೇಷ ಪ್ರವೇಶ...ನೂರು ರೂಪಾಯಿ ಅಂತ ಬರೆದಿತ್ತು. ಎಲ್ಲೋ ತಿರುಪತಿಯಂತಹ ದೇವಸ್ಥಾನಗಳಲ್ಲಿ ನೋಡಿದ್ದೆ, ಅದು ಇಲ್ಲಿಯೂ ಇರುವುದು ಕಂಡು ಅಚ್ಚರಿಯಾಯಿತು. ಅಷ್ಟು ಮಾತ್ರವಲ್ಲ, ಒಳಗೆ ಕಾಣಿಕೆ ಹಾಕುತ್ತಿದ್ದಂತೆ ಮೈಕ್ ನಲ್ಲಿ ಇಂಥವರಿಂದ ಇಷ್ಟು ಹಣ ಅಂತ ಪ್ರಕಟಣೆ ಕೇಳಿಬರುತ್ತಿತ್ತು.  ಭಗವಂತನ ಬಳಿಯಲ್ಲಿ ದೇವರ ಮಹಿಮೆಗಿಂತಲೂ ಕಾಂಚಾಣದ ಮಹಿಮೆ ದೊಡ್ಡದಾಯಿತೆ ಎಂದು ಕೊಂಡೆ. ದೇವಾಲಯದ ಹಣ ಸಂಗ್ರಹದ ಬಗ್ಗೆ ಅದನ್ನು ಸಲ್ಲಿಸುವ ಬಗ್ಗೆ ಆಕ್ಷೇಪವೇನೂ ಅಲ್ಲ, ಅವುಗಳೆಲ್ಲ ಅವರವರ ಖಾಸಗೀತನ ವಿಚಾರಗಳು. ನೂರು ರೂಪಾಯಿ ಸಲ್ಲಿಸಿದರೂ ಅದನ್ನು ಮೈಕ್ ನಲ್ಲಿ ಕೊಟ್ಟವರ ಹೆಸರಿನ  ಜತೆಗೆ ಕೂಗಿ ಹೇಳುತ್ತಿದ್ದರು.  ಅದನ್ನು ಕೇಳುವಾಗ ಕಡಿಮೆ ಕಾಣಿಕೆ ಹಾಕಿದವನಿಗೆ ಏನು ಅನ್ನಿಸಬಹುದು?  ಇಲ್ಲೂ  ಧನಿಕ ಬಡವ ಎಂಬ ಅಸಮಾನತೆ ದೇವಸ್ಥಾನದಲ್ಲಿದೆ.  ಅದು ಸರಿಯೋ ತಪ್ಪೋ ವಿಷಯವಲ್ಲ. ದೇವಸ್ಥಾನದ ಪ್ರವೇಶದಲ್ಲಿ ಜಾತಿಯ ಅಸಮಾನತೆ, ಎಲ್ಲರಿಗೂ ಸಮಾನವಾಗಿ ಪ್ರವೇಶ ಸಿಗಬೇಕು ಎಂಬ ಕೂಗು ಹೋರಾಟ ದಿನವೂ ಕಾಣುತ್ತೇವೆ. ಆದರೆ ಈ ಅಸಮಾನತೆಯ ಬಗ್ಗೆ ಹೋರಾಟ ಯಾಕಿಲ್ಲ ಎಂಬುದು ಯೋಚಿಸುವಂತಾಗುತ್ತದೆ. ಧರ್ಮ ಜಾತಿಯ ಬಗ್ಗೆ ಹೋರಾಡುವ ಹುಮ್ಮಸ್ಸು ಈ ಅಸಮಾನತೆಯಲ್ಲಿ ವ್ಯಕ್ತವಾಗುವುದಿಲ್ಲ.   ದೇವರ ಎದುರು ಎಲ್ಲರೂ ಸಮಾನರು. ಈ ತತ್ವದ ಬಗ್ಗೆ   ಚಿಂತನೆ ಹರಿಸಬೇಕು.  ಹಲವು ದೇವಸ್ಥಾನಗಳಲ್ಲಿ ವಿ ಐ ಪಿ ಗಳು ಬರುವಾಗ ಜನಸಾಮಾನ್ಯ ಸರದಿಯಲ್ಲೇ ಬಾಕಿಯಾಗಿಬಿಡುತ್ತಾನೆ. ಹಾಗೆ ಬಂದು ಹೀಗೆ ಹೋಗುವ ವಿ ಐ ಪಿಗಳನ್ನು ನೋಡುವಾಗ ಕೇವಲ ನಿಟ್ಟುಸಿರಿನ ಹಕ್ಕು ಮಾತ್ರ ಜನಸಾಮಾನ್ಯನಿಗೆ ಇರುತ್ತದೆ. 


ಈಗೀಗ ದೇವಸ್ಥಾನಕ್ಕೆ ಹೋಗುವ ಆಸಕ್ತಿ ನನ್ನಲ್ಲಿ ಕಡಿಮೆಯಾಗಿದೆ. ಅದಕ್ಕೆ ಕಾರಣಗಳು ವಿಶ್ಲೇಷಿಸುತ್ತಾ ಹೋದರೆ ಸಾಕಷ್ಟು ಸಿಗುತ್ತದೆ. ಹಾಗಾಗಿ ಏನಿದ್ದರೂ ಮನೆಯಲ್ಲೇ ಜಪ ತಪ ಧ್ಯಾನ ಇಷ್ಟಕ್ಕೇ ಸೀಮಿತವಾಗಿ ದೇವರನ್ನು ನಿತ್ಯ ಕಾಣುತ್ತೇನೆ.  ಇಲ್ಲಿ ಸಿಗುವ ಶಾಂತಿ ಅತ್ಯಂತ ಶ್ರೇಷ್ಠ ಎಂಬುದು ನನ್ನ ಭಾವನೆ.  ದೇವಸ್ಥಾನಕ್ಕೆ ಹೋದರೆ ಮನಃ ಶಾಂತಿಗಿಂತ ಮನಸ್ಸಿನ ನೆಮ್ಮದಿಯೇ ಹಲವು ಸಲ ಕಳೆದು ಹೋಗುತ್ತದೆ. ದೇವಸ್ಥಾನಕ್ಕೆ ಹೋದರೂ ಹೆಚ್ಚು ಜನಸಂದಣಿಯಿಲ್ಲದ  ಬಹಳ ಶಾಂತ ಪರಿಸರದ ದೇವಸ್ಥಾನಕ್ಕೆ ಹೋಗುವುದಕ್ಕೆ ಆದ್ಯತೆ ಕೊಡುತ್ತೇನೆ. ಊಟ ಪ್ರಸಾದ ಇದಾವುದರ ಬಗ್ಗೆಯೂ ನಿರೀಕ್ಷೆ ಇರುವುದಿಲ್ಲ. ಕೇವಲ ಶಾಂತ ಸ್ವರೂಪದ ಭಕ್ತಿ ಮಾತ್ರ.  ಹಲವು ಸಲ ಊರಿನ ದೇವಸ್ಥಾನದ ಭೇಟಿಯಲ್ಲಿ ಭಕ್ತಿಗಿಂತಲೂ  ಭಾವನಾತ್ಮಕ ಸಂಬಂಧಗಳೇ ನನಗೆ ಪ್ರಧಾನವಾಗುತ್ತವೆ. ಬಾಲ್ಯದಿಂದಲೂ ಸಂಬಂಧವಿರಿಸಿಕೊಂಡ ಕೆಲವೇ ಕೆಲವು ದೇವಸ್ಥಾನಗಳ ದರ್ಶನದಲ್ಲಿ ಭಕ್ತಿಗಿಂತಲು ಭಾವನೆಗಳೇ ಹತ್ತಿರವಾಗುತ್ತದೆ. ಹೀಗೆ  ಹಲವು ದೇವಸ್ಥಾನಗಳಿಗೆ ಹೋದರೂ ಕಾಣಿಕೆ ಹಾಕುವುದು ತೀರ ಅಪರೂಪ. ಯಾಕೆಂದರೆ ಕಾಣಿಕೆ ತಟ್ಟೆಗೆ ಹಾಕುವುದೋ ಇಲ್ಲ ಹುಂಡಿಗೆ ಹಾಕುವುದೋ ಎಂಬ ದ್ವಂದ್ವದಲ್ಲಿ ದೇವಸ್ಥಾನದಿಂದ ಹೊರಬಂದಾಗಿರುತ್ತದೆ. ನನಗೆ ಯಾವುದೇ ಕಾರ್ಯದಲ್ಲಿ ದ್ವಂದ್ವ ಕಾಡುತ್ತಿದ್ದರೆ ...ನಾನು ಆ ಕಾರ್ಯವನ್ನು ಮಾಡದೇ ಸುಮ್ಮನಿದ್ದು ಬಿಡುತ್ತೇನೆ. ನನಗೆ  ದ್ವಂದ್ವದ ತುಮುಲದಿಂದ ಹೊರಬರುವ ಸುಲಭ ದಾರಿ ಇದು. ದೇವಸ್ಥಾನಕ್ಕೆ ಹೋದದ್ದಕ್ಕೆ  ಏನಾದರೂ ಸೇವೆ ಮಾಡಬೇಕು. ಇಲ್ಲಿ ನಿಶ್ಚಿತ ಉದ್ದೇಶ ಏನೂ ಇರುವುದಿಲ್ಲ. ದೈವಾನುಗ್ರಹಕ್ಕೆ ಒಂದಿಷ್ಟಾದರೂ ನಿಷ್ಠೆ ಸಲ್ಲಿಕೆಯಾಗಬೇಕಲ್ಲ? ಹಾಗೆ ಸೇವಾದರದ ಪಟ್ಟಿ ನೋಡಿ ಒಂದು ವಿಶೇಷ ಸೇವೆಯ ರಶೀದಿಯನ್ನೇ ಪಡೆಯುತ್ತೇನೆ. ಈಗ ಕಟೀಲಿಗೆ ಹೋದರೆ ಹೂಪೂಜೆ, ಮಧೂರಿಗೆ ಹೋದರೆ ಉದಯಾಸ್ತಮಾನ ಹೀಗೆ ವಿಶೇಷ ಸೇವೆಗಳ ರಶೀದಿ ಪಡೆದು ಅಲ್ಲಿ ಸಂಕಲ್ಪ ಮಾಡುವಾಗ ಅರ್ಚಕರು ಕೇಳುತ್ತಾರೆ , ಏನು ಪ್ರಾರ್ಥನೆ?  ಆಗ ಏನೂ ಅಂತ ಪ್ರಾರ್ಥನೆ ಮಾಡಲಿ? ದೇವರಲ್ಲಿ ಬೇಡಿಕೆ ಸಲ್ಲಿಸುವುದಕ್ಕೆ ದೊಡ್ಡ ಪಟ್ಟಿಯೇ ಇರುತ್ತದೆ.  ಆ ಪಟ್ಟಿ ಬಹಳ ಕಾಲದಿಂದಲೂ ಹಾಗೆ ಇದೆ.  ಅದಕ್ಕೆ ಹಲವಾರು ಸಲ ಹರಕೆ ಸಲ್ಲಿಸಿಯಾಗಿರುತ್ತದೆ.  ಆದರೆ ಬಹಳಷ್ಟು ಬೇಡಿಕೆಗಳು ಈಡೇರದೆ ಹಾಗೇ ಉಳಿದುಕೊಂಡಿದೆ. ಯಾಕೋ ಆ ಬಗ್ಗೆ ದೈವಾನುಗ್ರಹದ ಕೊರತೆಯನ್ನು ಒಪ್ಪಿಕೊಂಡು ನಮ್ಮ ಕರ್ಮ ನಾವು ಮಾಡಬೇಕು ಎಂಬ ಭಾವದಲ್ಲಿ ಸಲ್ಲಿಸಿ ಪ್ರಸಾದ ಪಡೆಯುತ್ತೇನೆ.  ಹರಕೆಯ ಪಟ್ಟಿ ದೊಡ್ಡದಿದ್ದರೂ  ಅವೆಲ್ಲವನ್ನು ಒಂದೇ  ಸಲಕ್ಕೆ ಹೇಳುವುದಕ್ಕೆ ಸಾಧ್ಯವಿಲ್ಲ. ಕೊನೆಗೆ ಯಾವುದು ನೆನಪಾಗುತ್ತದೆ ಅದನ್ನು ಸಲ್ಲಿಸಿಬಿಡುತ್ತೇನೆ. ಈಗೀಗ ಪಟ್ಟಿಯ ಹಲವು ಬೇಡಿಕೆಗಳು ಮರೆತು ಹೋಗಿವೆ. ದೈವಾನುಗ್ರಹ ಇದ್ದರೆ ದೇವರು ಅದನ್ನು ಈಡೇರಿಸುತ್ತಾನೆ  ಎಂಬ ನಂಬಿಕೆ ಹಾಗೆ ಉಳಿದುಕೊಂಡಿದೆ.  ಈಗ ಹರಕೆ ಬೇಡಿಕೆಯ ಬಗ್ಗೆ ಚಿಂತಿಸುವುದನ್ನು ಬಿಟ್ಟು ಬಿಟ್ಟಿದ್ದೇನೆ. ಪ್ರಾಮಾಣಿಕವಾದ ಭಕ್ತಿಯಷ್ಟೆ ಆಧಾರವಾಗುತ್ತದೆ. ದಿನವು ಧ್ಯಾನದಲ್ಲಿ ವೈಕುಂಠ ದರ್ಶನವಾಗುವಾಗ....ಸಿದ್ದ ಪಡಿಸಿದ ಅನ್ನ ಆಹಾರ ಮನೆಗೆ  ಬಂದಂತೆ ಕೇವಲ ಭಕ್ತಿಯ ವಿನಿಯೋಗದಿಂದ ದೇವರು ಸದಾ ಮನಸ್ಸಿಗೆ ಹತ್ತಿರವಾಗಿರುತ್ತಾನೆ. ಇದಕ್ಕಿಂತ ಹೆಚ್ಚಿನ ಯಾವ ಬೇಡಿಕೆಯೂ  ನಿರೀಕ್ಷೆಯು ಇರುವುದಿಲ್ಲ. 

Sunday, December 17, 2023

ದೇವರು ಒಂದು ಸಮಸ್ಯೆ

 

"ದೇವರು ಎಂಬುದು ನಮ್ಮ ಅಹಂಕಾರವನ್ನು ದೂರ ಮಾಡುವುದಕ್ಕಿರುವ ಸಾಧನ. "

ಹಿಂದೆ ನಮ್ಮಜ್ಜನಲ್ಲಿ‌  ಅವರ ಜತೆ ಪೌರೋಹಿತ್ಯ ದ ಜೊತೆಯಲ್ಲಿ ಇರುವಾಗ ಒಂದು ಪ್ರಶ್ನೆ ಕೇಳಿದ್ದೆ. ಯಾವುದೇ ಪೂಜೆ ಹವನ ಸತ್ಕಾರ್ಯದಲ್ಲಿ  ಮೊದಲು ಗಣಪತಿ ಪೂಜೆ ಮಾಡುವುದು ಸಂಪ್ರದಾಯ. ತೆಂಗಿನ ಕಾಯಿ ಅಕ್ಕಿ ಇಟ್ಟು ಗಣಪತಿ ಅವಾಹನೆ ಮಾಡಿ  ಗಣಪತಿ ಪೂಜೆ ಮಾಡುವುದು ಶಾಸ್ತ್ರ ವಿಧಿ. ಗಣಪತಿ ಪೂಜೆಯಲ್ಲಿ ಮೂರ್ತಿ ಪ್ರತಿಷ್ಠೆ ಯಾಕಿಲ್ಲ? ಶಾಸ್ತ್ರೀಯವಾದ ಉತ್ತರ ಏನೋ, ಅದರೆ ಅವರು ಒಂದು ಸರಳವಾದ ಉತ್ತರ ಹೇಳಿದರು. ದೇವರು ಯಾವುದೇ ಆದರೂ ಅದು ವಿಸರ್ಜನೆಯಾಗಬೇಕು. ಅದರ ಆವಾಹನೆ ಅವಧಿ ಸೀಮಿತವಾಗಿರುತ್ತದೆ. ಅದರಿಂದ ಆಚೆಗೆ ಅದರ ಪ್ರಭಾವ ಶಕ್ತಿಯನ್ನು ತಡೆದುಕೊಳ್ಳುವ ಶಕ್ತಿ ಮನುಷ್ಯ‌ಮಾತ್ರರಿಗೆ ಸಾಧ್ಯವಿಲ್ಲ. ‌ಅದೊಂದು ಸಮಸ್ಯೆಯಾಗಿ ಪೀಡಿಸುತ್ತದೆ. 

ಅಜ್ಜನ ಉತ್ತರಕ್ಕೆ ವಿವರಣೆ ಕೊಡುವ ಅಥವಾ ಅದನ್ನು ಚರ್ಚಿಸುವ ತಿಳುವಳಿಕೆ ನನಗಿಲ್ಲ. ಆ ವಯಸ್ಸಿನಲ್ಲಿ ಅದನ್ನು ಅರ್ಥವಿಸುವ ಸಾಮಾರ್ಥ್ಯವೂ ಇಲ್ಲ. ಆದರೆ ದೇವರೂ ಒಂದು ಸಮಸ್ಯೆಯಾಗಿ ಬಿಡುತ್ತದೆ ಎಂಬುದು ಹಲವು ಅರ್ಥ ಆಯಾಮಗಳಿಗೆ ಎಡೆ ಮಾಡಿಕೊಡುತ್ತದೆ. ಯಾವುದೇ ವಿಷಯ ನಮಗೆ ಅದರ ಅರಿವಿಲ್ಲದೆ ಇದ್ದರೆ ಅದು ಪ್ರಶ್ನೆಯಾಗಿ ಸಮಸ್ಯೆಯಾಗಿಬಿಡುತ್ತದೆ.  ಸಮಸ್ಯೆಯನ್ನು  ಪರಿಹರಿಸಿಕೊಳ್ಳುವುದು ಸಹಜವಾಗಿ ಬದುಕಿನ ಗುರಿಯಾಗಿಬಿಡುತ್ತದೆ. ಹಲವು ಸಮಸ್ಯೆಗಳು ಪರಿಹರಿಸಿಕೊಂಡರೂ ಕೆಲವು ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಬಿಡುತವೆ. ಅದರಲ್ಲಿರುವ ಒಂದು ಸಮಸ್ಯೆಯೇ ದೇವರು ಎಂದು ಅಜ್ಜ ಹೇಳಿದುದರಲ್ಲಿ ಅತಿಶಯ ಏನೂ ಇರುವುದಿಲ್ಲ. ಯಾಕೆಂದರೆ ದೇವರು ಇದೊಂದು ಅರ್ಥಮಾಡಿಕೊಳ್ಳಲಾಗದ ಸಮಸ್ಯೆ.  ಬದುಕಿನುದ್ದಕ್ಕೂ ಇದರ ಬಗ್ಗೆ ಯೋಚಿಸಿದಷ್ಟೂ ಇದನ್ನು ಅರ್ಥವಿಸುವುದರಲ್ಲಿ ಎಡವಿಬೀಳುತ್ತೇವೆ. ಯಾವುದು ದೇವರು? ಕಣ್ಣಿಗೆ ಕಾಣದ ರೂಪವಿಲ್ಲದ ಭಾವವಿಲ್ಲದ ಗುಣಾವಗುಣಗಳಿಗೆ ಅತೀತವಾದ ಯಾವುದೂ ಅಲ್ಲದ ಯಾವುದೋ ಒಂದು ಆಗಿರುವ ಈ ವಿಸ್ಮಯ ವಸ್ತು ಎಲ್ಲೋ ಇದೆ ಎಂಬ ಅನುಭವದಲ್ಲಿ ಅದೊಂದು ಅರಿಯಲಾಗದ ಸಮಸ್ಯೆಯಾಗಿ ಬಿಡುತ್ತದೆ. ಯಾರದೋ ಒಂದು ವಸ್ತುವನ್ನು ಮನೆಯಲ್ಲಿಯೋ ಬಗಲಲ್ಲಿಯೋ ಇಟ್ಟುಕೊಂಡು ನಮ್ಮೊಂದಿಗೆ ಅವರೇ ಇದ್ದಾರೆ ಎಂದುಕೊಂಡು ತೃಪ್ತಿ ಪಡುವಂತೆ, ದೇವರನ್ನು ಯಾವುದೋ ರೂಪದಲ್ಲಿ ಕಂಡುಕೊಂಡು ಸಮಸ್ಯೆಯನ್ನು ಪರಿಹರಿಸುವ ತೃಪ್ತಿಯೊಂದಿಗೆ ಇದ್ದರೂ ಅಂತರಾತ್ಮ ಹೇಳುತ್ತದೆ. ಅದಲ್ಲ ಇನ್ನೊಂದು ಇದೆ ಮತ್ತೆ ಸಮಸ್ಯೆಯಾಗಿಯೇ ಉಳಿದು ಬಿಡುತ್ತದೆ. ಹಾಗಾಗಿ ಅಜ್ಜ ಹೇಳಿದ ಸರಳ ಉತ್ತರದಲ್ಲಿ ಅಗಾಧವಾದ ಅರ್ಥವನ್ನು ಅರ್ಥವಿಸಿಕೊಂಡಿದ್ದೇನೆ.  

ಜೀವನದಲ್ಲಿ ನಾವು ಬಹಳಷ್ಟನ್ನು ಗಳಿಸುತ್ತೇವೆ. ಸಂಪತ್ತು ಬಂಧುಗಳು ಸ್ನೇಹಿತರು ಶತ್ರುಗಳು...ಆದರೆ ಇದಾವುದನ್ನೂ ನಾವು ಉಳಿಸಿಕೊಳ್ಳುವುದಿಲ್ಲ. ಇದೆಲ್ಲವನ್ನು ಕಳೆದುಕೊಳ್ಳುತ್ತೇವೆ. ನಾವು ನಾವಾಗಿಯೇ ಉಳಿದುಬಿಡುತ್ತೇವೆ.  ಗಳಿಕೆ ಎಂದರೆ ಅದೊಂದು ಸಮಸ್ಯೆ.  ಸಮಸ್ಯೆಯನ್ನು ಕಳೆದುಕೊಳ್ಳಬೇಕು. ಬದುಕಿನ ತತ್ವ ಎಂದರೆ ಕಳೆದುಕೊಳ್ಳುವುದು. ಕಳೆದು ಕಳೆದು ಕ್ಷಯವನ್ನು ಅನುಭವಿಸುತ್ತಾ ಮೋಕ್ಷಗಮ್ಯವಾಗುದರಲ್ಲಿರುವ ತತ್ವವೆಂದರೆ ಅದು ಕಳೆದುಕೊಳ್ಳುವುದು. ಲೌಕಿಕ ಚಿಂತನೆಯಲ್ಲಿ ಎಲ್ಲವನ್ನೂ ಗಳಿಸುವತ್ತ ಗಮನಹರಿಸಿದರೆ ಗಳಿಸುತ್ತಾ ಗಳಿಸುತ್ತಾ  ಒಂದನ್ನು ಕೂಡಿಟ್ಟರೆ ಅದರಲ್ಲಿ ಮತ್ತೊಂದು ನಮಗರಿವಿಲ್ಲದೇ ನಾವು ಕಳೆದುಕೊಂಡುಬಿಡುತ್ತೇವೆ. ಗಳಿಸಿದ್ದನ್ನು ಕೂಡಿಡಬೇಕಿದ್ದರೆ ಮತ್ತೊಂದು ಕಳೆದುಕೊಳ್ಳಲೇಬೇಕು. ನಮಗೆ ಕೂಡಿಡಲು ಸೀಮಿತವಾದ ಜಾಗಮಾತ್ರ ಇರುತ್ತದೆ.  ಕ್ಷಯ ಎಂಬುದು ಬದುಕಿನ ಸಾರ್ವತ್ರಿಕ ತತ್ವ. ಎಲ್ಲವನ್ನು ಕಳೆದ ಮೇಲೆ ಸಿಗುವ ಒಂದು ಬಗೆಯ ಗಳಿಕೆ ಅದು ನಿರ್ದಿಷ್ಟವಾಗಿ ಅರಿವಿಲ್ಲದೇ ಇದ್ದರೂ ಎನೋ ಒಂದು ಗಳಿಸುತ್ತೇವೆ ಎಂಬ ನಂಬಿಕೆಯೇ ಬದುಕಿನ ಚೈತನ್ಯವಾಗಿರುತ್ತದೆ. ವರ್ತಮಾನದ ಒಂದೊಂದು ಘಳಿಗೆಗಳನ್ನು ಭೂತಕ್ಕೆ  ಸಲ್ಲಿಸಿ ಭವಿಷ್ಯದ ಅಂಗವನ್ನು ಗಳಿಸುತ್ತಾ ಸಾಗುವಾಗ ನಾವು ಕಳೆಯುವುದರ ಅರಿವೂ ಇರುವುದಿಲ್ಲ,  ಗಳಿಸಿದ ಅರಿವೂ ಇರುವುದಿಲ್ಲ ಮಾತ್ರವಲ್ಲ ವರ್ತಮಾನ ನಮ್ಮ ಕೈಯಲ್ಲಿಯೂ ಉಳಿಯುವುದಿಲ್ಲ. 

ದೇವೆರು ಎಂದರೆ ಕಣ್ಣಿಗೆ ಇಡುವ ಕನ್ನಡಕದಂತೆ. ಕಣ್ಣಿನ ಎದುರೇ ಇದ್ದರೂ ಅದು ಇಲ್ಲದ ಭ್ರಮೆಯನ್ನು ಸೃಷ್ಟಿಸುತ್ತದೆ. ಗಾಜಿನ ಬಣ್ಣ ಬದಲಾದಂತೆ ಕಾಣುವ ದೃಷ್ಟಿಯೂ ಬದಲಾಗುತ್ತದೆ. ನಮ್ಮಲ್ಲೇ ಇದ್ದರೂ ನಮ್ಮಲ್ಲಿ ಇಲ್ಲದ ಭ್ರಮೆಯನ್ನು ಸೃಷ್ಟಿಸುತ್ತದೆ.  ಮನಸ್ಸಿನಲ್ಲಿದ್ದ ದೇವರನ್ನು ನಾವು ಅರಿಯಬೇಕಾದರೆ ಎಲ್ಲವನ್ನೂ ಕಳೆದುಕೊಳ್ಳಬೇಕು. 

ಮೊದಲು ಋಷಿಗಳು ತಪಸ್ಸಿಗೆ ಕಾಡಿಗೆ ಹೋಗುತ್ತಿದ್ದರು. ಯಾಗ ಯಜ್ಞ ಪೂಜೆ ಹವನದಲ್ಲಿ ಕಾಣಿಸದ ದೇವರನ್ನು ಕಾಣುವುದಕ್ಕೆ ಕಾಡಿನಲ್ಲಿ ಹೋಗಿ ಏಕಾಂತದ ತಪಸ್ಸಿಗೆ ಕುಳಿತು ಬಿಡುತ್ತಿದ್ದರು. ಯಾಗ ಯಜ್ಞದಲ್ಲಿ ಸಿಗದ ಏಕಾಗ್ರತೆ ಕಾಡಿನ ಏಕಾಂತದಲ್ಲಿ ಸಿಗುತ್ತದೆ. ಯಾವ ನೈವೇದ್ಯ ಪೂಜೆ ಇಲ್ಲದೆ ಕೇವಲ ತಪಸ್ಸಿನಿಂದ ದೇವರನ್ನು ಕಾಣುತ್ತಾರೆ. ದೇವರು ಬಾಹ್ಯವಾದ ಯಾವ ಆಡಂಬರದಲ್ಲು ಇರುವುದಿಲ್ಲ, ಕೇವಲ ಅಂತರಂಗದ ಭಾವದಲ್ಲಿ ಆತನ ಅಸ್ತಿತ್ವ ಇರುತ್ತದೆ. ಪೂಜೆ ಪುನಸ್ಕಾರಗಳಲ್ಲಿ ಸಿಗದ ಏಕಾಗ್ರತೆ ಸುಮ್ಮನೆ ಕುಳಿತು ನಾಮಸ್ಮರಣೆ ಧ್ಯಾನದಿಂದ ದೇವರನ್ನು ಕಾಣುವುದಕ್ಕೆ ಸಾಧ್ಯವಿದೆ. ಇದರ ಅರ್ಥ ಪೂಜೆ ಪುನಸ್ಕಾರಗಳು ಅವಶ್ಯಕತೆ ಇಲ್ಲ ಎಂದಲ್ಲ, ಅವೆಲ್ಲ ಸಾಗುವ ಹಾದಿಯ ಪೂರಕ ಮಾಧ್ಯಮಗಳು ಅಷ್ಟೆ. ಬುಡದಲ್ಲಿ ವಿಸ್ತಾರವಾಗಿ ಹಬ್ಬಿದ ಮರ ಬೆಳೆದು ಬೆಳೆದು ತುದಿಯಲ್ಲಿ ಸಪುರವಾದಂತೆ ಕೊನೆಯಲ್ಲಿ ಉಳಿಯುವುದು ಒಂದೇ ತಪಸ್ಸು ಮಾತ್ರ.  ಪರೋಕ್ಷವಾಗಿ ಆಡಂಬರ ಇದ್ದಲ್ಲಿ ದೇವರ ಅಸ್ತಿತ್ವ ಇರುವುದಕ್ಕಿಂತಲೂ ಸರಳವಾಗಿ ಇರುವಲ್ಲಿ ದೇವರ ಅಸ್ತಿತ್ವ ಗಾಢವಾಗಿ ಅನುಭವಕ್ಕೆ ಬರುತ್ತದೆ. ಬದುಕಿನ ಸಂಧ್ಯೆಯ ರುಗ್ಣಾವಸ್ಥೆಯಲ್ಲಿ ಮಲಗಿದಾಗ ಎಲ್ಲವನ್ನು ಕಳೆದುಕೊಂಡು ಕೇವಲ ಪರಮಾತ್ಮ ಸಾನ್ನಿಧ್ಯ ಮಾತ್ರ ಉಳಿಸಿಕೊಂಡಿರುತ್ತೇವೆ. 

ಬಹಿರಂಗವಾಗಿ ನಾವು ನಾರಾಯಣ ಶಂಕರ ಗಣಪತಿ ದುರ್ಗೆ ಹೀಗೆ ನಮಗೆ ತೋಚಿದಂತೆ, ನಮ್ಮ ಭಾವದಲ್ಲಿ ಸೀಮಿತವಾಗಿ ಪರಮಾತ್ಮನ ನಾಮಸ್ಮರಣೆ ಉಚ್ಚರಿಸುತ್ತೇವೆ. ಬಹಿರಂಗದಲ್ಲಿ ವಿವಿಧ ಭಾವವಿದ್ದರೂ ಅಂತರಂಗದಲ್ಲಿ ಒಂದೇ ಭಾವ, ನಾವು ಯಾರನ್ನು ಶಂಕರ ಎನ್ನುತ್ತೇವೆಯೋ ನಾರಾಯಣ ಎನ್ನುವಾಗಲು ಅದೇ ಭಾವವನ್ನೇ ಕೂಗುತ್ತೇವೆ. ಬಹಿರಂಗದಲ್ಲಿ ವೆತ್ಯಾಸ ಇದ್ದರೂ ಅಂತರಂಗದಲ್ಲಿ ಅವೆಲ್ಲವೂ ಒಂದೇ ಆಗಿರುತ್ತದೆ. ಆದರೆ ಇವೆಲ್ಲವನ್ನು ಸ್ಮರಿಸುವಾಗ ಸಿಗದ ಏಕಾಗ್ರತೆ ಕೇವಲ ಓಂ ಕಾರದ ಉಚ್ಚಾರದಲ್ಲಿ ಸಿಗುತ್ತದೆ ಎಂದರೆ ದೇವರು ಸರಳವಾದ ಕ್ರಿಯೆಗೆ ಸ್ಪಂದಿಸುತ್ತಾನೆ.   ಆಡಂಬರ ಅಧಿಕವಾದಂತೆ ಏಕಾಗ್ರತೆ ಕುಂಠಿತಗೊಳ್ಳುತ್ತದೆ. ಇದು ನನ್ನ ಅನುಭವ.  ಸರಳತೆಯಲ್ಲಿ  ದೇವರು  ತನ್ನ ಅಸ್ತಿತ್ವವನ್ನು ತೋರಿಸಿಬಿಡುತ್ತಾನೆ. ಅವನು ಕಾಣುತ್ತಾನೆ ಎನ್ನುವುದಕ್ಕಿಂತ ನಮ್ಮ ಭಾವ ಸೂಕ್ಷ್ಮವಾದಷ್ಟೂ ಪ್ರಖರವಾಗುತ್ತದೆ. 

ಯಾವುದೆ ವಸ್ತು ಅಥವ ವ್ಯಕ್ತಿಯ ಬಗೆಗಿನ ಅರಿವು ಅದರಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ. ಒಬ್ಬರನ್ನು ಸಂಪೂರ್ಣ ಅರಿತಿದ್ದರೆ ಅವರ ಮೇಲಿನ ಪ್ರೀತಿ ಮತ್ತು ವಿಶ್ವಾಸವನ್ನು ಗಾಢವಾಗಿಸುತ್ತದೆ. ಅದೇ ರೀತಿ ಜ್ಞಾನ ಭಕ್ತಿಯ ದೃಢತೆಯನ್ನು ಹೆಚ್ಚಿಸುತ್ತದೆ.  ಅರಿವಿನಿಂದ ಅಥವಾ ಜ್ಞಾನದಿಂದ ಬರುವ  ಭಕ್ತಿ  ಶಾಶ್ವತವಾಗಿರುತ್ತದೆ. ಇನ್ನಿತರ ಪ್ರಭಾವದಿಂದ ಪ್ರಚೋದಿಸಲ್ಪಡುವ ಭಕ್ತಿ ತಾತ್ಕಾಲಿಕವಾಗಿರುತ್ತದೆ. ಹಾಗಾಗಿ ದೇವರು ಎಂಬ ಸಂಪೂರ್ಣ ಜ್ಞಾನ ಪರಮಾತ್ಮನ ಮೇಲಿನ ಭಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲಿ ಭಕ್ತಿ ಹೆಚ್ಚು ಸುರಕ್ಷಿತವಾಗಿರುತ್ತದೆ. ಮನಸ್ಸು ವಿಚಲಿತವಾಗುವುದಿಲ್ಲ. 

ಮನಸ್ಸು ಸ್ವಚ್ಛವಾಗಿದ್ದಷ್ಟು ಏಕಾಗ್ರತೆ ಸುಲಭವಾಗುತ್ತದೆ. ದೈವಾನುಭವಕ್ಕೆ ಈ ಏಕಾಗ್ರತೆ ಅತ್ಯವಶ್ಯ. ಮನಸ್ಸು ಸ್ವಚ್ಛವಾಗಿರಬೇಕು.  ಮನಸ್ಸಿನ ಸ್ವಚ್ಛತೆ ಅದು ನಮ್ಮ ಸ್ವ ಪ್ರಯತ್ನದಲ್ಲೇ ಇರುತ್ತದೆ. ಒಂದು ಮಾರ್ಜಕ ಅಥವಾ ಸಾಬೂನು ಮಲೀನವಾಗಿದ್ದರೆ ಸ್ವಚ್ಛಮಾಡುವುದಕ್ಕೆ ಇನ್ನೊಂದು ಸಾಬೂನಿನ ಅವಶ್ಯಕತೆ ಬೇಕಾಗುವುದಿಲ್ಲ. ನೀರಲ್ಲಿ ಕರಗುತ್ತಾ ಕರಗುತ್ತಾ ಸಾಬೂನು ತಾನೆ ಸ್ವಚ್ಛವಾಗುತ್ತದೆ. ಹಾಗೆ ಮನಸ್ಸು ಪರಮಾತ್ಮನ ಧ್ಯಾನದಲ್ಲಿ ಮನಸ್ಸು ಸ್ವಯಂ ಸ್ವಚ್ಛವಾಗುತ್ತದೆ.  ಧ್ಯಾನದಲ್ಲಿ ಎಲ್ಲವೂ ನಷ್ಟವಾಗುತ್ತದೆ. ಪರಿಸರ,  ಅಸ್ತಿತ್ವ , ನಮ್ಮದು ಎನಿಸಿಕೊಳ್ಳುವ ಪ್ರತಿಯೊಂದೂ ನಷ್ಟವಾಗುತ್ತದೆ. ಮುಖ್ಯವಾಗಿ ನಾನು ಎಂಬ ಅಹಂ ಕಳೆದುಹೋಗುತ್ತದೆ.  ಇಲ್ಲಿ ನಷ್ಟವಾಗುವಾಗ ಧ್ಯಾನದಲ್ಲಿ ಸಿಗುವ ಲಾಭ ಇದೆಲ್ಲವನ್ನು ಮೀರಿಸಿಬಿಡುತ್ತದೆ. ಹಾಗಾಗಿ ದೇವರು ಎಂದರೆ ಅದು ನಮ್ಮ ಅಹಂ ನ್ನು ಕಳೆಯುವ ಒಂದು ಸಾಧನ. ಜಗತ್ತಿನಲ್ಲಿ ಎಲ್ಲವೂ ನಮ್ಮದಾಗಿರಬಹುದು. ಅಥವಾ ನಮ್ಮ ಅಹಂಕಾರದಲ್ಲಿ ಎಲ್ಲವೂ ನಮ್ಮದು ಎಂದು ಕೊಳ್ಳಬಹುದು. ಆದರೆ ನಮ್ಮದಲ್ಲದ ಒಂದು ಒಂದು ಭಾವವೇ ದೇವರು. ದೇವರು ಎಂದರೆ ನಮ್ಮ ಅಹಂಕಾರವನ್ನು ದೂರ ಮಾಡುವ ವಸ್ತು.  ಇಲ್ಲಿ ನಾನು  ನನ್ನದು ಏನು ಅಲ್ಲ. ನನ್ನದಲ್ಲದ ಒಂದು ವಿಷಯವೇ ದೇವರು ಎಂಬ ಭಾವ ಬರುತ್ತದೆ.  ಕಾಮ ಕ್ರೋಧ ಮದ ಮೋಹ ಲೋಭ ಮತ್ಸರ ಎಂಬ ಷಡ್ವೈರಗಳು  ಬಾಧಿಸುವಾಗ  ಪರಮಾತ್ಮನ ನೆನಪೂ ದೂರವಾಗುತ್ತದೆ.  ಈ ಅಹಂಕಾರದಿಂದ ದೂರವಾಗಬೇಕು.     ಅಂತಿಮವಾಗಿ ನನ್ನದಲ್ಲದ ದೇವರೂ ಅದು ನನ್ನದು ಎಂದು ಪ್ರಚೋದನೆಯಾದರೆ ನಮ್ಮೊಳಗಿನ ಪರಮಾತ್ಮನ ಅಸ್ತಿತ್ವ ಅರಿವಿಗೆ ಬರುತ್ತದೆ. ನಾನು ಬೇರೆಯಲ್ಲ ದೇವರು ಬೇರೆಯಲ್ಲ ಎಂಬ ಅದ್ವೈತ ಭಾವ  ಪ್ರಚೋದನೆಗೊಳ್ಳುವಾಗ ಮನಸ್ಸಿನ ಅಹಂಕಾರ ದೂರವಾಗಿರುತ್ತದೆ.  

ನಮ್ಮೊಳಗಿನ ದೇವರ ಅಸ್ತಿತ್ವದ ಅರಿವಾದಾಗ ಬಾಹ್ಯವಾಗಿರುವ ಎಲ್ಲವೂ ನಾಶವಾಗುತ್ತದೆ. ಆಗ ಅಜ್ಜ ಹೇಳಿದಂತೆ ದೇವರನ್ನು ವಿಸರ್ಜಿಸಬೇಕು.  ಇಲ್ಲಿ ಎಲ್ಲವನ್ನು ಗಳಿಸುತ್ತೇವೆ. ಎಷ್ಟು ಗಳಿಸಿದರೇನು ಕಳೆದುಕೊಳ್ಳದ ಒಂದನ್ನೂ ನಾವು ಗಳಿಸುವುದಿಲ್ಲ.  ಒಂದನ್ನೂ  ನಮ್ಮಲ್ಲಿ ಉಳಿಸಿಕೊಳ್ಳಲಾಗದ ಅಸಮರ್ಥ ಸ್ಥಿತಿಯೂ ಇರುತ್ತದೆ. ಎಲ್ಲವನ್ನು ಕಳೆದುಕೊಳ್ಳುವಾಗ ನಮ್ಮಲ್ಲಿರುವುದೇನು ಎಂದು ಯೋಚಿಸಿದರೆ ಅದೊಂದೇ,  ಅದು ಪರಮಾತ್ಮ.  

Saturday, December 9, 2023

ಬಲ್ಲಿರೇನಯ್ಯ ಅಡುಗೆ ಮನೆಗೆ ಯಾರೆಂದುಕೊಳ್ಳಬಹುದು?

        ಮೊನ್ನೆ  ನನ್ನಲ್ಲಿ ಮಗಳು ಒಂದು ಪ್ರಶ್ನೆ ಕೇಳಿದಳು.  ಅವಳು ಅಂತ ಅಲ್ಲ ಹಲವರು ಕೇಳುತ್ತಾರೆ. ಲೇಖನಕ್ಕೆ ವಿಷಯಗಳು ಹೇಗೆ ಸಿಗುತ್ತವೆ? ಸರಳವಾದ ಉತ್ತರ ಚಿಂತನೆಯಿಂದ. ಮೊನ್ನೆ ಮಗಳು ಒಂದು ವಿಷಯ ಕೊಟ್ಟು ಬಿಟ್ಟಳು. ನಿಮ್ಮ ಅಡುಗೆ ಹವ್ಯಾಸದ ಬಗ್ಗೆ ಒಂದು ಲೇಖನ ಬರೆಯಿರಿ ನೋಡೋಣ.  ವಾಸ್ತವದಲ್ಲಿ ಯಾರೋ ಕೊಟ್ಟ ವಿಷಯಕ್ಕೆ ಶೀರ್ಷಿಕೆಗೆ ನಾನು ಲೇಖನ ಬರೆಯುವುದಿಲ್ಲ. ಇದೊಂದು ಕೇವಲ ಹವ್ಯಾಸಕ್ಕಷ್ಟೇ ಸೀಮಿತ. ಇಲ್ಲಿ ಸ್ಪರ್ಧಾತ್ಮಕ ಅಥವಾ ಇನ್ನಿತರ ಹೆಸರು ಹಣ ಬರುವ ಸ್ವಾರ್ಥ ಕಿಂಚಿತ್ತೂ ಇಲ್ಲ. ಹಾಗಾಗಿ ಈಗಲೂ ನಾನು ಬರೆಯುತ್ತಾ ಇದ್ದೇನೆ. ಒಂದು ಲೇಖನ ಬರೆದು ಹಂಚುವಾಗ ಅದೊಂದು ಅವ್ಯಕ್ತ ಅನುಭವ. ಒಂದು ನಿರಾಳ ಮನಸ್ಥಿತಿ. ಯಾರು ಓದಲಿ ಬಿಡಲಿ ಇಷ್ಟ ಪಡಲಿ.....ಅದು ನದಿಯಲ್ಲಿ ನೀರು ಹರಿದಂತೆ ಗಾಳಿ ಬೀಸಿದಂತೆ.  ಮಗಳು ಹೇಳಿದಂತೆ ಅಡುಗೆಯ ಕುರಿತು ಒಂದಷ್ಟು ಅನಿಸಿಕೆ.


ಆಡುಗೆ ಎಂಬುದನ್ನು ಕಲೆ ಎನ್ನುವುದಕ್ಕೂ ಬರುತ್ತದೆ, ಅನಿವಾರ್ಯ ಕೆಲಸ ಎನ್ನುವುದಕ್ಕು ಸಾಧ್ಯವಿದೆ. ಅದನ್ನು ಕಲೆ ಎಂದು ಪರಿಗಣಿಸಿದರೆ ಉಳಿದ ಕಲೆಗಳಂತೆ  ಅದು ಪ್ರಚಾರಕ್ಕೆ  ಸಿಗುವ ಕಲೆಯಲ್ಲ. ಅಡುಗೆ ಮಾಡುವುದು ಎಲ್ಲರಿಗೂ ಇಷ್ಟವಿರುವುದಿಲ್ಲ. ಆದರೆ  ಅದನ್ನು ಇಷ್ಟಪಡದವರು ಬದುಕುವುದಕ್ಕೆ ಅರ್ಹತೆಯನ್ನು ಕಳೆದುಕೊಂಡು ಬಿಡುತ್ತಾರೆ. ಕೆಲವರಿಗೆ ಮಾಡುವುದು ಇಷ್ಟವಿರಬಹುದು. ಕೆಲವರಿಗೆ ತಿನ್ನುವುದು ಇಷ್ಟವಿರಬಹುದು. ನಮ್ಮಮ್ಮನ ಹಾಗಿದ್ದವರಿಗೆ ಮಾಡುವುದೇ ಇಷ್ಟ ಹೊರತು ತಿನ್ನುವುದಲ್ಲ. ಎಲ್ಲವನ್ನು ಮಾಡುತ್ತಾರೆ ಅವರು ಮಾತ್ರ ಒಂದಷ್ಟು ಗಂಜಿ ಉಂಡು ತೃಪ್ತಿ ಪಡುತ್ತಾರೆ. ಪಾತ್ರೆಯ ತಳದಲ್ಲಿರುವುದನ್ನು ಕೆರೆಸಿ ತಿನ್ನುವುದರಲ್ಲೇ ತೃಪ್ತಿ. ಇಂತಹವರು ಎಲ್ಲಾ ಮನೆಯಲ್ಲೂ ಇರುತ್ತಾರೆ. ಇನ್ನು ಬಿಸಿ ಮಾಡಿ ಇಡಬೇಕಲ್ಲಾ ಎಂದು ಪಾತ್ರೆಯಲ್ಲಿ ಉಳಿದದ್ದನ್ನು ತಟ್ಟೆಗೆ ಹಾಕಿ ಬೇಡದೇ ಇದ್ದರೂ ತಿಂದು ಬಿಡುತ್ತಾರೆ.  ಅಡುಗೆ ಮನೆಯ ಶಾಸ್ತ್ರಗಳು ರಹಸ್ಯಗಳು ಹಲವು ಸಲ ಬಹಿರಂಗವಾಗುವುದೇ ಇಲ್ಲ. ಅದೊಂದು ವಿಶ್ವವಿದ್ಯಾನಿಲಯ ಇದ್ದಂತೆ. ಹಸಿವಾದರೂ ಅಡುಗೆ ಮನೆ, ರೋಗ ಬಂದರೂ ಅಡುಗೇ ಮನೆ. 

ನನಗೂ ಅಡುಗೆ ಒಂದು ಹವ್ಯಾಸ. ಹಲವರು ಮೂಗು ಮುರಿಯುತ್ತಾರೆ ಇದು ನನ್ನ ಅನುಭವ. ಗಂಡಸಾಗಿ ಅಡುಗೆ ಮಾಡುವುದಾ? ಅದು ಯಾವ ನಿಯಮವೋ ಗೊತ್ತಿಲ್ಲ. ಗಂಡು ಅಡುಗೆ ಮಾಡುವುದು ಜಗತ್ತಿನ ಅತ್ಯಾಶ್ಚರ್ಯದ ವಸ್ತುವಾಗಿ ಬಿಡುತ್ತದೆ. ನನ್ನ ಪ್ರಕಾರ ಕೊನೆ ಪಕ್ಷ ಅವರವರು ತಿನ್ನುವುದನ್ನಾದರೂ ರುಚಿಕಟ್ಟಾಗಿ ಮಾಡಿ ತಿನ್ನುವ ರೂಢಿ ಇರಬೇಕು. ತನ್ನ ಹೊಟ್ಟೆಗೆ  ತಿನ್ನುವುದಕ್ಕೂ ಯಾರನ್ನು ಅವಲಂಬಿಸಿರಬಾರದು. ಅದು ಇಂದಿನ ಜೀವನ ಶೈಲಿಯಲ್ಲಿಅತ್ಯಂತ  ಅರೋಗ್ಯದ ಲಕ್ಷಣ. ಹಲವರು ತಮಗಾಗಿ ಮಾಡಿ ತಿನ್ನುವುದಿದ್ದರೂ ಅದು ಕಾಟಾಚಾರಕ್ಕೆ , ಏನೋ ಒಂದು ಬೇಯಿಸಿ ತಿಂದರಾಯಿತು ಎಂಬ ಭಾವನೆ. 

ಹೆಣ್ಣು ನೋಡುವಾಗ ಕೇಳುವುದುಂಟು, ಅಡುಗೆ ಬರುತ್ತದಾ? ನಿಜಕ್ಕೂ ಹಾಸ್ಯಾಸ್ಪದ ವಿಡಂಬನೆಯ ಪ್ರಶ್ನೆಇದು. ಹಸು ಹಾಲು ಕೊಡುತ್ತದಾ ಎಂದು ಪ್ರಶ್ನೆ ಮಾಡಿದ ಹಾಗೆ. ಹಾಲು ಕೊಡದೇ ಇದ್ದರೆ ಅದು ಹಸು ಹೇಗಾಗುತ್ತದೆ? ತಾಯಿ ಮೊಲೆ ಉಣ್ಣಿಸದೇ ಇದ್ದರೆ ಆಕೆ ತಾಯಿ ಹೇಗಾದಾಳು?  ನದಿಯಲ್ಲಿ ನೀರು ಹರಿಯದೆ ಇದ್ದರೆ ಅದು ನದಿಯಾಗುವುದಿಲ್ಲ ಬಯಲಾಗುತ್ತದೆ.  ಹಾಗೆ ಅಡುಗೆ ಬರುತ್ತದಾ ಎಂದು ಕೇಳಿದಾಗ ಈಗಿನ ಹೆಣ್ಣು ಮಕ್ಕಳು ಹೇಳುವುದುಂಟು, ಅದು ಬರುತ್ತದೆ...ಜೋರಾಗಿಯೇ ಹೇಳಿಬಿಡುತ್ತಾರೆ.  ಬೇಕಿದ್ದರೆ ಅದು ಉದ್ದ ಪಟ್ಟಿ, ಮಸಾಲೆ ದೋಸೆ, ಉಪ್ಪಿಟ್ಟು ಅವಲಕ್ಕಿ, ಇನ್ನು ಸಿಹಿತಿಂಡಿ, ಮಾಂಸಾಹಾರ, ಉತ್ತರ ಭಾರತ ದಕ್ಷಿಣ ಭಾರತದ ತಿನಿಸುಗಳು.....ಪಟ್ಟಿಯಲ್ಲಿರುತ್ತವೆ. ಅದನ್ನೂ ನಾಚಿಕೆಯಿಲ್ಲದೆ ದೊಡ್ಡದಾಗಿ ಹೇಳಿಬಿಡುತ್ತಾರೆ.   ಯಾಕೆಂದರೆ ಗಂಡಿಗಿಂತಲೂ ಹೆಚ್ಚು ಲೋಕವನ್ನು ಕಂಡಿರುತ್ತಾರೆ. ಸರಿ ಮದುವೆ ಆದ ಮೇಲೆ  ಮಸಾಲೆ ದೋಸೆ ಬೇಕು ಎಂದು ಹೇಳಿದರೆ, ಮೊಬೈಲ್ ತೆಗೆದು ಜೊಮೋಟೊ ಸ್ವಿಗ್ಗಿ ಯಲ್ಲಿ ಆರ್ಡರ್ ಮಾಡುತ್ತಾರೆ. ಹೌದು ಮಸಾಲೆ ದೋಸೆ ಬರುತ್ತದೆ, ಮನೆ ಬಾಗಿಲಿಗೇ ಬರುತ್ತದೆ !

ಅಡುಗೆ ಎಂಬುದು ಮನ್ನಣೆ ಅಂಗೀಕಾರವಿಲ್ಲದ ಇಲ್ಲದ ಒಂದು ಕಲೆ.  ಬಂದ ನೆಂಟರು ತಿಂದು ತೇಗಿದರೂ ಅದನ್ನು ಯಾರು ಮಾಡಿದ್ದಾರೆ ಎಂಬುದೆ ಹಲವುಸಲ ಹೊರಗೆ ಬರುವುದಿಲ್ಲ. ಯಾರೋ ಮಾಡಿರುತ್ತಾರೆ ಇವರು ಪಟ್ಟಾಗಿ ತಿಂದು ಬಿಡುತ್ತಾರೆ.  ಮಲಯಾಳಂ ನಲ್ಲಿ ಒಂದು ಸಿನಿಮಾ ಬಂದಿತ್ತು. ಸಾಲ್ಟ್ ಎಂಡ್ ಪೆಪ್ಪರ್, ಉಪ್ಪು ಮತ್ತು ಕರಿಮೆಣಸು. ಅಡುಗೆಯೇ ಈ ಸಿನಿಮಾದ ಮುಖ್ಯ ವಸ್ತು. ಹೆಣ್ಣು ನೋಡುವುದಕ್ಕೆ ಹೋದವನು ಅಲ್ಲಿ ಅಡುಗೆ ಮಾಡುತ್ತಿದ್ದ ಅಡುಗೆ ಭಟ್ಟನನ್ನು ತನ್ನ ಜತೆ ಕರೆದುಕೊಂಡು ಬರುತ್ತಾನೆ. ಹಾಗಾಗಿ ಹೆಣ್ಣಿನ ಸ್ಥಾನ ಏನು?   ಅವಳ ಮಹತ್ವ ಏನು ಎಂದು ಪರೋಕ್ಷವಾಗಿ ಹೇಳಿದಂತೆ. ಹೆಣ್ಣು ಅಡುಗೆ ಮನೆಗೆ ಸೀಮಿತವಲ್ಲದೇ ಇದ್ದರೂ ಆಕೆ ಬದುಕಿನಲ್ಲಿ ಅನ್ನಪೂರ್ಣೆಯಾಗುವ ಆವಶ್ಯಕತೆ ಒಂದು ಅನಿವಾರ್ಯತೆಯಾಗಿದೆ. 

ಎಲ್ಲವನ್ನು ಹೆಣ್ಣಿನ ತಲೆ ಮೇಲೆ ಹಾಕುವುದಕ್ಕಿಂತಲೂ ಅವರವರ ಹೊಟ್ಟೆ ತುಂಬಿಸುವುದನ್ನು ಹೆಣ್ಣು ಗಂಡು ಭೇದವಿಲ್ಲದೇ ಅರಿಯಬೇಕು. ಅಡುಗೆ ನನಗೆ ಬಾಲ್ಯದಿಂದ ಹಲವು ಕಾರಣದಿಂದ ಅಂಟಿಕೊಂಡ ಕೆಲಸ. ಮೊದಲು ಯಾವುದೋ ಅನಿವಾರ್ಯತೆಯಿಂದ ಕೈ ಸುಟ್ಟುಕೊಂಡು ಮಾಡಿದರೆ ವೆತ್ಯಾಸ ಇಷ್ಟೇ,  ಈಗ ಅದೊಂದು ಹವ್ಯಾಸವಾಗಿ ಬೆಳೆದು ಬಂದಿದೆ.  ಯಾರಿಗೋ ಬೇಕಾಗಿ ಮಾಡುವುದಲ್ಲ. ಅದು ಸ್ವಯಂ ತೃಪ್ತಿಗೆ ಮಾಡುವಂತಹ ಕಾರ್ಯ. 

ಅಡುಗೆ ಅದು ಯಾವುದೇ ಆಗಿರಲಿ ಒತ್ತಡ ರಹಿತವಾಗಿ ಮಾಡಬೇಕು ಇದು ನನ್ನ ಪ್ರತಿಪಾದನೆ. ಅಡುಗೆ ಯಾವುದೇ ಆಗಿರಲಿ ವೇಗವಾಗಿ ಮಾಡಿಬಿಡುವ ಧಾವಂತ ನನ್ನದು. ಬೆಳಗ್ಗೆ ಎಂಟೂ ವರೆಗೆ ಉಪಹಾರವಾದರೆ, ಎಂಟುಗಂಟೆಗೆ ಹೊರಡುತ್ತೇನೆ. ಮೊದಲೇ ಮನಸ್ಸಿನಲ್ಲಿ ಇದು ಹೀಗೆ ಹೀಗೆ ಎಂಬ ಯೋಜನೆ ಸಿದ್ದವಾಗುತ್ತದೆ.  ಉದಾಹರಣೆಗೆ,  ಉಪ್ಪಿಟ್ಟು ಮಾಡುವುದಿದ್ದರೆ ಮೊದಲು ಬಾಣಲೆ ಬಿಸಿಗಿಟ್ಟು ಬಿಡುತ್ತೇನೆ. ಅದರಲ್ಲಿ ರವೆ ಹುರಿಯುತ್ತಿದ್ದರೆ, ಅದನ್ನು ಹುರಿಯುವ   ಜತೆಯಲ್ಲೇ ಅದಕ್ಕೆ ಹಾಕಬೇಕಾದ ನೀರು ಬಿಸಿಯಾಗಿರುತ್ತದೆ, ಬೇಕಾದ ಈರುಳ್ಳಿ ಮೆಣಸು ತರಕಾರಿ ಹೆಚ್ಚಿಯಾಗಿರುತ್ತದೆ. ಇದರಲ್ಲೂ ಯಾವುದು ಮೊದಲು ಹೆಚ್ಚಬೇಕು ಯಾವುದು ನಂತರ ಹೆಚ್ಚಿಕೊಳ್ಳಬೇಕು ಎಂಬ ಯೋಜನೆ ಮೊದಲೇ ಇರಬೇಕು.  ಇಷ್ಟಾದರೆ ಮತ್ತೆ ಐದೇ ನಿಮಿಷ ಉಪ್ಪಿಟ್ಟು ಸಿದ್ದ. ಹೀಗೆ ಪ್ರತಿಯೊಂದು ಕೆಲಸಕ್ಕೂ ಒಂದು ಯೋಜನೆ ಇರುತ್ತದೆ. ಹಾಗಾಗಿ ಒತ್ತಡವಿಲ್ಲದೇ ಅಡುಗೆ ಸಿದ್ಧವಾಗುತ್ತದೆ. ಮಧ್ಯಾಹ್ನ ಹನ್ನೆರಡು ವರೆಗೆ ಹಸಿವಾಗುವುದಕ್ಕೆ ಆರಂಭವಾಗುತ್ತದೆ, ನಂತರ ಇಂತಹದ್ದು ತಿನ್ನಬೇಕು ಎಂಬ ಬಯಕೆ ಹುಟ್ಟುತ್ತದೆ. ಸರಿ ಒಂದು ಘಂಟೆಗೆ ಹೊರಡುತ್ತೇನೆ. ಒಂದು ವರೆಗೆ ಅದಷ್ಟು ಸಿದ್ದವಾಗಿ ಊಟಕ್ಕೆ ಕುಳಿತು ಬಿಡುತ್ತೇನೆ. ಅದು ಅನ್ನ ಸಾಂಬಾರ್ ಆಗಿರಬಹುದು, ಪಲಾವ್ ಬಿಸಿ ಬೇಳೆ ಬಾತ್ ಯಾವುದೇ ಆಗಿರಲಿ...ಅದಕ್ಕೊಂದು ಯೋಜನೆ ಮೊದಲೇ ಸಿದ್ಧವಾಗುತ್ತದೆ. ಅಡುಗೆ ಕೆಲಸದಲ್ಲಿ ಯಾವುದು ಮೊದಲು ಮಾಡಬೇಕು ಅದನ್ನು ಮೊದಲು ಯೋಚನೆ ಮಾಡಬೇಕು. ಆಗ ಒತ್ತಡ ರಹಿತವಾಗಿ ಮಾಡುವುದಕ್ಕೆ ಸಾಧ್ಯವಾಗುತ್ತದೆ.  ಯೋಜನಾ ಬದ್ಧವಾಗಿ ಅಡುಗೆ ಮಾಡುವುದಿದ್ದರೆ ಅಲ್ಲಿ ಒತ್ತಡ ಇರುವುದೇ ಇಲ್ಲ.

ಮಾಡಿದ ಅಡುಗೆ ರುಚಿಯಾಗಿರಬೇಕು, ಎಲ್ಲರಿಂದ ಮೆಚ್ಚುಗೆ ಪಡೆಯಬೇಕು, ಈ ಮನೋಭಾವ ಅಡುಗೆ ಮಾಡುವವರಲ್ಲಿ ಸಹಜವಾಗಿರುತ್ತದೆ. ಇನ್ನು ಕೆಲವರಲ್ಲಿ ತಮ್ಮ ಮನೆಯ ಅದರಲ್ಲೂ ತಾವು ಮಾಡಿದ ಅಡುಗೆ ಮಾತ್ರ ಚೆನ್ನಾಗಿ ಇರುತ್ತದೆ ಎಂಬ ಅಹಂಭಾವವೂ ಇರುತ್ತದೆ.  ಹಲವು ಕಡೆಯಲ್ಲಿ ಮನೆಗೆ ಅತಿಥಿಗಳಾಗಿ ಹೋದಾಗ ಅಲ್ಲಿ ಮೊದಲು ಅವರು ಕೇಳುವುದು ಯಾವ ಅಡುಗೆ ಇಷ್ಟ. ಯಾವ ತಿಂಡಿ ಇಷ್ಟ. ಬಂದ ಅತಿಥಿಯ ಇಷ್ಟಾನಿಷ್ಟಗಳನ್ನು ನೋಡಿ ಅದರಂತೆ ಮಾಡಿ ಅತಿಥಿಯನ್ನು ತೃಪ್ತಿ ಪಡಿಸುವುದು ಮಾತ್ರವಲ್ಲ ಅತಿಥಿಯಿಂದ ಹೊಗಳಿಕೆ ಪಡೆಯುವ ಬಯಕೆ ಇರುತ್ತದೆ. ಬಂದ ಅತಿಥಿ ಹಲವು ಸಲ ದಾಕ್ಷಿಣ್ಯಕ್ಕೆ ಒಳ್ಳೆದಾಗಿದೆ ಎಂದರೂ ಅದನ್ನು ಹೆಗ್ಗಳಿಕೆಯಾಗಿ ಪರಿಗಣಿಸುವವರೂ ಇರುತ್ತಾರೆ. ಅದರೆ ನಾನು ನನಗೆ ಎನು ಇಷ್ಟ ಇದೆಯೋ ಅದನ್ನೇ ರುಚಿಯಾಗಿ ಮಾಡುವುದನ್ನು ಬಯಸುತ್ತೇನೆ. ಬಂದವರಿಗೆ ಇಷ್ಟವಾದ ವಿಭವಗಳು ಹಲವಾರು ಮಾಡುವುದಿದ್ದರೂ ಅದರಲ್ಲಿ ಯಾವುದಾದರೂ  ಒಂದು ತಿಂಡಿ ನನ್ನ ಇಷ್ಟದ್ದಾಗಿರುತ್ತದೆ. ಮತ್ತು ಅದನ್ನು ಬಂದವರು ರುಚಿಯಾಗಿದೆ ಎಂದು ಹೇಳಿ ಇಷ್ಟ ಪಟ್ಟರೆ ಬಹಳ ಸಂತಸವಾಗುತ್ತದೆ. ಅತಿಥಿಯರಿಗೆ ಅವರ ಇಷ್ಟವಾದ ತಿನಿಸು ಮಾಡಿ ಹಾಕಿ ಶಹಭಾಸ್ ಗಿರಿಯನ್ನು ಪಡೆಯುವುದು ದೊಡ್ಡದಲ್ಲ, ತಮಗಿಷ್ಟವಾದದ್ದನ್ನು ಮಾಡಿ ಹಾಕಿ ಅದು ಅವರಿಗೆ ಇಷ್ಟವಾಗುವಂತೆ ಮಾಡುವುದರಲ್ಲಿ ಅಡುಗೆಯವನ ಯಶಸ್ಸು ಇರುತ್ತದೆ. ಅದೊಂದು ದೊಡ್ಡ ಅಂಗೀಕಾರ.  ಎಲ್ಲರಿಗೂ ಇಷ್ಟವಾಗಿರುವುದನ್ನು ಮಾಡಿ ಮೆಚ್ಚುಗೆಯನ್ನು ಗಳಿಸುವುದು ದೊಡ್ಡದಲ್ಲ. ತಮಗೆ ಬೇಕಾದದ್ದನ್ನು ಮಾಡಿ ಮೆಚ್ಚುಗೆ ಗಳಿಸುವುದು ನಿಜವಾದ ಅಡುಗೆಯ ಚಾಕಚಕ್ಯತೆಯಾಗಿರುತ್ತದೆ. 

    ಅಡುಗೆ ಮಾಡುವುದಿದ್ದರು....ಇಂದು ತಿಂದ ಅಡುಗೆ ಕೊನೆ ಪಕ್ಷ ಒಂದು ವಾರದವರೆಗೆ ಪುನಃ ತಯಾರಿಸುವುದಿಲ್ಲ.  ಪದೇ ಪದೇ ಮಾಡಿದ್ದನ್ನೆ ಮಾಡುವುದು ಮತ್ತು ಅದನ್ನೇ ತಿನ್ನುವುದು ನನಗೆ ಇಷ್ಟವಿರುವುದಿಲ್ಲ. ದಿನವೂ ಒಂದು ವೈಶಿಷ್ಟ್ಯತೆ ಇರಬೇಕು. ಅದು ಹಸಿವನ್ನು ಕೆರಳಿಸುತ್ತದೆ. ಊಟ ತಿಂಡಿ ತಿನ್ನುವುದರಲ್ಲಿ ಅದು ಆಸಕ್ತಿಯನ್ನು ಉತ್ಸಾಹವನ್ನು ಹೆಚ್ಚಿಸುತ್ತದೆ. ಹಾಗಾಗಿ ಅಡುಗೆ ಎಂಬುದು ನನಗೆಂದೂ ಸಮಸ್ಯೆಯಾದದ್ದಿಲ್ಲ. ಇಂದು ಏನು ಮಾಡುವುದಪ್ಪ...? ಎಂದು ನನಗೆ ಬೇಸರವಾಗುವುದಿಲ್ಲ.  ಪ್ರತಿ ದಿನವೂ ಒಂದಾದರೂ ಹೊಸತನ್ನು ಮಾಡುವ ಸೃಜನ ಶೀಲತೆ ನನ್ನಲ್ಲಿದೆ. ಅದೇ ನನಗೆ ಅಡುಗೆಯಲ್ಲಿ ಉತ್ಸಾಹವನ್ನು ತುಂಬಿಸುತ್ತದೆ. ಅಡುಗೆ ಅದೊಂದು ಕೆಲಸ ಎಂದು ತಿಳಿಯಬಾರದು. ಅದೊಂದು ಹಸಿವಿನಂತೆ ಸಹಜ ಕ್ರಿಯೆ. ಒಂದು ರೀತಿಯಲ್ಲಿ ಪ್ರಕೃತಿಯ ಧರ್ಮ. 

    "ದ ಗ್ರೇಟ್ ಇಂಡಿಯನ್ ಕಿಚನ್" ಎಂಬ ಮಲಯಾಳಂ ಸಿನಿಮಾ ...ಅಡುಗೆ ಕೋಣೆಯ ಕೆಲಸವನ್ನು ಸವಿಸ್ತಾರವಾಗಿ ತೋರಿಸುತ್ತದೆ.  ಅಡುಗೆ ಯಾರೂ ಮಾಡಬಹುದು. ಆದರೆ ಅಡುಗೆ ಕೋಣೆಯನ್ನು ಅಚ್ಚುಕಟ್ಟಾಗಿ ಇರಿಸುವುದು ಅತೀ ಮುಖ್ಯ. ಅಡುಗೆ ಮಾಡಿ ತಿಂಡಿ ತಿನಸು ತಯಾರಿಯಾದಂತೆ ಜತೆಗೆ ಕಸವೂ ಸೃಷ್ಟಿಯಾಗುತ್ತದೆ. ಅಡುಗೆ ಕೋಣೆಯಲ್ಲಿ ಅದು ಎಲ್ಲೆಂದರಲ್ಲಿ ಬಿದ್ದುಕೊಂಡಿದ್ದರೆ ಅದು ಮನಸ್ಸಿಗೆ ಬಹಳ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಕೆಲಸದ ಶ್ರಮವನ್ನು ಆಯಾಸವನ್ನು ಹೆಚ್ಚಿಸುತ್ತದೆ. ನಾನು ಅಡುಗೆ ಮಾಡುವುದಿದ್ದರೆ ಇದರ ಬಗ್ಗೆ ಮೊದಲು ಗಮನ ಹರಿಸುತ್ತೇನೆ. ಯಾವುದು ಎಲ್ಲಿಡಬೇಕೋ ಕೆಲಸವಾದ ಕೂಡಲೇ ಅಲ್ಲಿಟ್ಟು ಬಿಡುತ್ತೇನೆ. ಚಾಕೂ ಪಾತ್ರೆ ಇತ್ಯಾದಿ. ತರಕಾರಿ ಹೆಚ್ಚಿದ ಕೂಡಲೆ ಅದರ ಸಿಪ್ಪೆ ಮತ್ತೀತರ ಎಸೆಯುವುದನ್ನು ಆಗಲೇ ಕಸದ ಬುಟ್ಟಿಗೆ ಎಸೆದು ಬಿಡುತ್ತೇನೆ. ಅಡುಗೆ ಆಗುವ ತನಕ ಅದನ್ನು ಉಳಿಸುವುದಿಲ್ಲ. ಆಡುಗೆ ಸಿದ್ಧವಾದ ಕೂಡಲೇ ಅಡುಗೆ ಮನೆಯೂ ಜತೆಯಲ್ಲೇ ಸ್ವಚ್ಛವಾಗಿ ಬಿಡಬೇಕು. ನನ್ನ ಪ್ರಯತ್ನ ಅದರಲ್ಲಿರುತ್ತದೆ. ಹಲವು ಸಲ ನಾನು ಏನು ಮಾಡಿದ್ದೇನೆ ಎಂದು ತಿಳಿಯಬೇಕಾದರೆ ಪಾತ್ರೆಯ ಮುಚ್ಚಳ ತೆಗೆದು ನೋಡಬೇಕು. ಆ ರೀತಿಯಲ್ಲಿ ಸ್ವಚ್ಛವಾಗಿರುತ್ತದೆ. ಸ್ವಚ್ಛವಾದ ಅಚ್ಚುಕಟ್ಟಾದ ಅಡುಗೆ ಮನೆ ಉತ್ತಮ ಅಡುಗೆಯ ಸಂಕೇತ. 

ಶಿಸ್ತುಬದ್ಧವಾಗಿ ಮಾಡಿದಾಗ ಅಡುಗೆ ಒಂದು ಕಲೆಯಾಗುತ್ತದೆ. ಅದೆಂದೂ ಪರಿಶ್ರಮದ ಕೆಲಸವಾಗುವುದಿಲ್ಲ. ಶಿಲ್ಪಿ ಶಿಲೆಯೆನ್ನು ಕೆತ್ತಿ ಪರಿಪೂರ್ಣ ಗೊಳಿಸಿ ಒಂದು ನಿಟ್ಟುಸಿರುಬಿಟ್ಟಂತೆ, ಅಡುಗೆ ಮಾಡಿ ಮುಗಿಸಿದಾಗ ಸಿಗುವ ತೃಪ್ತಿ ಯಾವ ಕಲಾವಿದನಿಗೂ ಕಡಿಮೆ ಇಲ್ಲ. ಅದೊಂದು ವಿಶಿಷ್ಟ ಅನುಭವ. 


Monday, December 4, 2023

ಪ್ರಜ್ಞಾಹೀನ


                ಮೊನ್ನೆ  ಕೆಲವು ಘಟನೆಗಳು ಸಾಮಾನ್ಯ ಎಂಬಂತೆ ನಡೆದು ಹೋಯಿತು. ಆದಿನ ಸಾಯಂಕಾಲ‌ ಮನೆಯವರನ್ನು ಮಂಗಳೂರು ರೈಲು ಹತ್ತಿಸಲು ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಹೋಗಿದ್ದೆ. ರೈಲು ಇನ್ನೂ ಬಂದಿರಲಿಲ್ಲ. ಹಾಗೆ ಅಲ್ಲಿದ್ದ ಆಸನಗಳಲ್ಲಿ ಕುಳಿತುಕೊಂಡೆವು. ಮೆಜೆಸ್ಟಿಕ್ ರೈಲು ನಿಲ್ದಾಣ ಮೊದಲಿನಂತಲ್ಲ. ಬಹಳ ಸ್ವಚ್ಛ ವಾಗಿತ್ತು. ಹೆಚ್ಚೆಂದರೆ ನಮ್ಮ ಮನೆಗಿಂತಲೂ ಸ್ವಚ್ಛವಾಗಿತ್ತು ಆದರೂ. ಕಸ ಗುಡಿಸುವಾಕೆ ಕಸಗುಡಿಸುತ್ತಾ ಬಂದಳು. ಆಗ ಅಲ್ಲೇ ಕಂಬದ ಸಂದಿಯಲ್ಲಿ ಯಾರೋ ಕಾಫಿ ಕುಡಿದು ಲೋಟವನ್ನು ಮುದ್ದೆ ಮಾಡಿ ಸಿಕ್ಕಿಸಿ ಇಟ್ಟಿದ್ದು ಗಮನಿಸಿದೆ. ಗುಡಿಸುವಾಕೆ ಅದನ್ನು ಕಷ್ಟಪಟ್ಟು ತೆಗೆದು ಸ್ವಚ್ಛ ಮಾಡಿ ತೆಗೆದಕೊಂಡು ಹೋದಳು. ಆಕೆ ಅತ್ತ ಹೋದ ಮೇಲೆ ಒಂದಿಬ್ಬರು ಅಲ್ಲಿ ಕುಳಿತವರು ಚಿಪ್ಸ್ ತಿನ್ನುತ್ತಾ ಖಾಲಿ ಕವರ್ ಅಲ್ಲೇ ಎಸೆದರು. ಕಂಬಕ್ಕೆ ಒಂದರಂತೆ‌ ಕಸದ ಬುಟ್ಟಿ ಇಟ್ಟಿದ್ದರೂ ಎಲ್ಲೆಂದರಲ್ಲಿ ಕಸ ಎಸೆದ ವರ್ತನೆ ಅಸಹ್ಯವಾಗಿ ಕಂಡಿತು. ಆಗತಾನೆ ಕಸ ಗುಡಿಸಿ ಹೋದರೂ ಅದರ ಬಗ್ಗೆ ಗೌರವ ಇಲ್ಲದ ಅನಾಗರಿಕರು. ನಾವು ಸಮಸ್ಯೆಗಳನ್ನು ಸೃಷ್ಟಿ ಮಾಡುವ ಸಂಖ್ಯೆ ಹೆಚ್ಚಿರುತ್ತಾರೆ. ಅದರೆ ಪರಿಹರಿಸಿಕೊಳ್ಳುವರು...ಕೇವಲ ಕೆಲವು ಜನಗಳು.

ಆನಂತರ  ರೈಲು ಹೊರಡುವಾಗ ಹೋಗುವವರಿಗೆ ವಿದಾಯ ಹೇಳಿ ನಾನೂ ಹೊರಟೆ. ರೈಲು ನಿಧಾನವಾಗಿ ಹೊರಟಿತು. ಹಾಗೆ ಪ್ಲಾಟ್ ಫಾರಂ ನಲ್ಲಿ ಹೊರಟ ರೈಲಿನ ಜೊತೆ ಹೆಜ್ಜೆ ಹಾಕುತ್ತಾ ಮುಂದೆ ಬರುತ್ತಿದ್ದೆ. ಒಬ್ಬಾತ ಏನೋ ಖರೀದುಸುವುದಕ್ಕೆ ರೈಲಿನಿಂದ‌ ಇಳಿದವನು ರೈಲು ಹೊರಟಿರುವುದನ್ನು ನೋಡಿ ಗಾಬರಿಯಿಂದ ಓಡಿದೆ. ಆದರೆ ರೈಲು ಅಷ್ಟೊತ್ತಿಗೆ ವೇಗ ಪಡೆದಾಗಿತ್ತು. ರೈಲಿನ‌  ಹಿಂದಿನ ಭೋಗಿಯಲ್ಲಿ ಲೈಟ್ ಹಿಡಿದು ಸಿಗ್ನಲ್ ಕೊಡುವಾತನಲ್ಲಿ ಬೊಬ್ಬಿಟ್ಟು ಗೋಗರೆದ, ರೈಲು ಮುಂದೆ ನಿಲ್ಲಬಹುದು ಎಂದುಕೊಂಡು ಹಿಂದೆ ಪ್ಲಾಟ್ ಫಾರಂ ತುದಿಯ ತನಕವೂ ಓಡಿದ, ರೈಲು ಆತನನ್ನು ಅಣಕಿಸುವಂತೆ ಮುಂದೆ ಮುಂದೆ ಹೋಗಿ ಮತ್ತೂ ವೇಗ ಪಡೆಯಿತು. ಆತನ ಮನೆ ಮಂದಿ ರೈಲಿನಲ್ಲಿ ಈತ ಇಲ್ಲಿ ಏಕಾಂಗಿ. ಆತ ಕೆಲವು ಘಳಿಗೆಗೆ ಸ್ವಯಂ ಪ್ರಜ್ಞೆ ಕಳೆದದ್ದು ಗಂಭೀರ ಸಮಸ್ಯೆಗೆ ಕಾರಣವಾಯಿತು. 


ರೈಲು ನಿಲ್ದಾಣದಿಂದ ಹೊರಟು ಸಿಟಿ ಬಸ್ಸು ನಿಲ್ದಾಣಕ್ಕೆ ಬಂದೆ. ಮಲ್ಲೇಶ್ವರಂ ಕಡೆ ಹೋಗುವ ಬಸ್ಸು ಇನ್ನೂ ಬಂದಿರಲಿಲ್ಲ. ಬಹಳಷ್ಟು ಮಂದಿ ಕಾಯುತ್ತಿದ್ದರು.  ಸುಮಾರು ಹದಿನೈದು ನಿಮಿಷ ಕಾಯಬೇಕಾಯಿತು. ಹದಿನೈದು ನಿಮಿಷದ ದೀರ್ಘ ಅವಧಿಯಾದುದರಿಂದ ಕೊನೆಗ ಸಾಕಷ್ಟು ಜನ ಜಂಗುಳಿಯಾಯಿತು. ಸರಕಾರಿ ಬಸ್ಸುಗಳೆಂದರೆ ಈಗಿನ ಮಳೆಯಂತೆ. ಅದರಲ್ಲೂ ಬೆಂಗಳೂರಿನ  ಬಿ ಎಂ ಟಿ ಸಿ ...ಯಾವಾಗ ಬರುತ್ತದೆ ಎಂದು ಊಹಿಸುವುದು ಕಷ್ಟ. ಇನ್ನು ಬಂದರೂ ಎರಡು ಮೂರು ಒಟ್ಟಿಗೆ ಬರುತ್ತವೆ. ನಾವು ಯಾಕಾಗಿ ಓಡುತ್ತೇವೆ ಎಂಬ ಪ್ರಜ್ಞೆ ಅದನ್ನು ಓಡಿಸುವವರಿಗೆ ಇರುವುದಿಲ್ಲ. ಹಾಗಾಗಿ ಕೊನೆ ಎರಡು ಬಸ್ಸು ಒಟ್ಟಿಗೆ ಬಂತು. ನಾನು ಹಿಂದಿನ ಬಸ್ಸಲ್ಲಿ ಹೋಗಿ ಮೊದಲು ಕುಳಿತೆ. ಹಾಗೆ ಹೊರಗೆ ನೋಡುತ್ತೇನೆ. ಎದುರಿನ ಬಸ್ಸು ಬಿಟ್ಟು ಸಾಕಷ್ಟು ಜನ ಈ ಬಸ್ಸಿಗೆ ಮುತ್ತಿಕೊಂಡರು. ಅಷ್ಟು ಹೊತ್ತಿನ ಕಾಯುವಿಕೆ ಹಲವರ ಸಹನೆಯನ್ನು ಕೆಡಿಸಿತ್ತು. ಅಷ್ಟೂ ಜನ ಹತ್ತುವಾಗ ಒಬ್ಬ ಗುಂಪಿನಿಂದ ಆಚೆಗೆ ಸರಿದು ಹೋದ. ಈ ಬಸ್ಸು ಜನರಿಂದ ತುಂಬಿ ಬಸ್ಸು ಗಡಿಬಿಡಿಯಿಂದ ಆಗಲೇ ಹೊರಟಿತು. ಇನ್ನೇನು ಬಸ್ಸು ಸ್ವಲ್ಪ ಮಂದೆ ಚಲಿಸಿರಬಹುದು.  ಒಬ್ಬ ಪಿಕ್ ಪಾಕೆಟ್ ಆಯಿತು ಎಂದು ಕಿರುಚಿದ, ಉಳಿದವರೆಲ್ಲರೂ ಮನೆಯೊಳಗೆ ಹಾವು ಎಂದು ಒಬ್ಬ ಕಿರುಚುವಾಗ ಉಳಿದವರು ಹೆದರಿ ಕುಪ್ಪಳಿಸುವಂತೆ.....ಎಲ್ಲರೂ ಕಳ್ಲ ಅಲ್ಲೇ ಇದ್ದಾನೆ ಎಂಬಂತೆ ತಮ್ಮ ಜೇಬು ಮುಟ್ಟಿ ನೋಡಿದರು. ಕಿರುಚಿದವ ಜೋರು ಅಳತೊಡಗಿದ. ಪಾಪ ಆತನ ಪರ್ಸ್ ಯಾರೋ ಎಗರಿಸಿದ್ದರು.  ಆತನ ಕಿರುಚಾಟಕ್ಕೆ  ಬಸ್ಸು ನಿಂತಿತು. ಆತ ಇಳಿದು ಹೋದ.  ಆಗ ಒಬ್ಬಾತ ಯಾಕೆ ಗುಂಪಿನಿಂದ ದೂರ ಸರಿದು ಹೊದ ಅಂತ ತಿಳಿಯಿತು. ಛೇ ಬಹಳ ನಿರಾಶೆಯಾಯಿತು. ಒಬ್ಬ ಕಳ್ಳ ನನ್ನ ಕಣ್ಣೆದುರೇ ಸರಿದು ಹೋದ. ಪಾಪ ಬಡಪಾಯಿಯೊಬ್ಬ ಪ್ರಜ್ಞೆ ಕಳೆದುಕೊಂಡ, ಅದು ಆತನ ಬದುಕಿನ ಮರೆಯಲಾಗದ ಘಟನೆಗೆ ಕಾರಣವಾಯಿತು. 

Saturday, December 2, 2023

ಸ್ವಾಭಿಮಾನ

        ಬೀರೂರಿನಿಂದ  ಶಿವಮೊಗ್ಗಕ್ಕೆ ಹೋಗುವ ಕರ್ನಾಟಕ ಸಾರಿಗೆ  ಬಸ್ಸಿನಲ್ಲಿ ಮುಂದಿನ ಭಾಗದಲ್ಲಿ ಕುಳಿತಿದ್ದೆ. ಪಕ್ಕದ ಸೀಟಿನಲ್ಲಿ ಅರುವತ್ತರ ವೃದ್ಧೆಯೊಬ್ಬಳು ಬಂದು ಕುಳಿತಳು. ಜತೆಗೆ ಪುಟ್ಟ ಹುಡುಗನೊಬ್ಬ ಇದ್ದ. ಕಂಡಕ್ಟರ್ ಟಿಕೇಟ್ ಗಾಗಿ ಹತ್ತಿರ ಬಂದ. ವೃದ್ದೆ ತರೀಕೆರೆ ಅಂತ ಹೇಳಿ ಕೈಯಲ್ಲಿದ್ದ ನೋಟೊಂದನ್ನು  ಕೊಟ್ಟಳು. ಆತ ಆಧಾರ್ "ವೋಟರ್ ಇಲ್ವೇನಮ್ಮ?" ಎಂದು ಗೊಣಗುತ್ತಾ ಹಣ ಪಡೆದು ಟಿಕೇಟ್ ಕೊಟ್ಟ. ನಾನು ಆಕೆಯಲ್ಲಿ ಕೇಳಿದೆ " ಅದೇನು ಇಲ್ಲ ಆಧಾರ್ ಇದ್ರೆ ಫ್ರೀಯಾಗಿ ಹೋಗಬಹುದಿತ್ತಲ್ವ?" 


    " ಹೌದು, ಆದರೆ ನನಗೆ ಫ್ರೀ  ಬೇಡ. ವಯಸ್ಸು ಇಷ್ಟಾಯಿತು. ಇದುವರೆಗೆ ನನಗೆ ಬೇಕಾದ್ದನ್ನು ದುಡಿದು ಮಾಡ್ತಾ ಇದ್ದೇನೆ. ಒಂದು ಬಸ್ಸಿನ ದುಡ್ಡೂ ಕೊಡುವಷ್ಟೂ ದುಡಿದು ಸಂಪಾದಿಸುವದಕ್ಕೆ ಸಾಧ್ಯವಿಲ್ಲದೇ ಇದ್ದರೆ ಈ ಜನ್ಮ ಏನಕ್ಕೆ ಬೇಕು? ಇಷ್ಟು ವರ್ಷ ದುಡ್ದುಕೊಡದೇ ಹೋಗಿಲ್ಲ ಈಗ ಯಾಕೆ ಹೋಗಬೇಕು? ಉಚಿತ ಎಲ್ಲವೂ ಸಿಗಬಹುದು ಆದರೆ,  ಒಂದು ತುತ್ತು ಅನ್ನ ಅದನ್ನು ಸ್ವಂತ ದುಡಿಮೆಯಿಂದ ತಿನ್ನುವುದಕ್ಕೆ ಸಾಧ್ಯವಿಲ್ಲದೇ ಇದ್ದರೆ ಈ ಮನುಷ್ಯ ಜನ್ಮ ಯಾಕೆ ಬೇಕು?   "

        ಆಕೆ ಹೇಳಿದ್ದನ್ನು ಕೇಳಿ ಗಾಬರಿಯಾಗುವ ಸರದಿ ನನ್ನದು.  ಸ್ವಂತ ದುಡಿಮೆಯ ರುಚಿ ಅದನ್ನು ಅನುಭವಿಸುವ ಆಕೆಯ ಸ್ವಾಭಿಮಾನ ಇಷ್ಟುವರ್ಷ ಅದನ್ನೇ ಪಾಲಿಸಿಕೊಂಡು ಬಂದ ನಿಷ್ಠೆ ಈಗ ಯಾವುದೋ ಕಾರಣಕ್ಕೆ ಉಚಿತವಾಗಿ ಸಿಗುತ್ತದೆ ಎಂದು ಅದನ್ನು ಅನುಭವಿಸುವುದಕ್ಕೆ ಅಕೆಯ   ಈ ಅಭಿಮಾನ ಅಡ್ಡಬಂತು. ಸರಳವಾಗಿ ಆಕೆ ಹೇಳಿದ್ದಳು. ನಮಗೆ ಬೇಕಾಗಿರುವುದನ್ನು ನಾವು ದುಡಿದು ಸಂಪಾದಿಸಬೇಕು. ಅದು ಸಾಧ್ಯವಿಲ್ಲದೇ ಇದ್ದರೆ ಅದೊಂದು ಜೀವನವಲ್ಲ. ದುಡಿಯುವುದಕ್ಕೆ ಆರಂಭಿಸುವಾಗ ನನ್ನದೇ ಒಂದು ಐದು ರೂಪಾಯಿ ನೋಟು ನನ್ನ ಕೈಗೆ ಸಿಕ್ಕಿದಾಗ ಆಗ ನಾನು ಅನುಭವಿಸಿದ ಸಂತೋಷ ನೆನಪಾಯಿತು. ನನ್ನದಲ್ಲದ ವಸ್ತುವನ್ನು ನಮಗೆ ಅನುಭವಿಸುವ ಹಕ್ಕು ನಮಗಿಲ್ಲ.  ಭಿಕ್ಷುಕನಿಗೆ ಅನುಕಂಪದಿಂದ ಕೊಡುವ ಭಿಕ್ಷೆಯೂ ಆತನನ್ನು ಸಾಲಗಾರನನ್ನಾಗಿ ಮಾಡುತ್ತದೆ. ಆತ ತೀರಿಸಲಿ ಬಿಡಲಿ...ಆತ ಅದರಿಂದ ಋಣ ಮುಕ್ತನಾಗುವುದಕ್ಕೆ ಸಾಧ್ಯವಿಲ್ಲ. ಉಚಿತವಾಗಿ ಎಲ್ಲವೂ ಸಿಗಬಹುದು, ಆದರೆ ಸ್ವಾಭಿಮಾನ ಅದು ಉಚಿತವಾಗಿ ಸಿಗುವುದಕ್ಕೆ ಸಾಧ್ಯವಿಲ್ಲ. ಇಂದು ಎಲ್ಲವೂ ಉಚಿತವಾಗಿ ಸಿಗಬಹುದು. ಅದನ್ನು ಅನುಭವಿಸುತ್ತಾ ಇರುವಾಗ ಮುಂದೊಂದು ದಿನ ಅದು ಸಿಗದಂತಹ ಪರಿಸ್ಥಿತಿ ಬರಬಹುದು. ಯಾಕೆಂದರೆ ಅದಕ್ಕೂ ಒಂದು ಪರಿಮಿತಿ ಇರುತ್ತದೆ. ಆಗ ಅದು ಸಿಗದೇ ಇದ್ದಾಗ ಕದಿಯುವುದಕ್ಕೆ ಕಸಿಯುವುದಕ್ಕೆ ತೊಡಗಬಹುದು. ಯಾಕೆಂದರೆ ದುಡಿಮೆಯನ್ನೇ ಮರೆತಿರುವಾಗ ಮತ್ತೆ ಪಡೆಯುವ ಬಗೆ ಹೇಗೆ? 

        ಮೊನ್ನೆ ಯಾರೋ ಒಬ್ಬರು ಹೇಳಿದರು.  ಮಹಿಳೆಯರ ಉಚಿತ ಪ್ರಯಾಣದ ಬಗ್ಗೆ ಆಕ್ಷೇಪಿಸಿದರೆ ಅದು ಸ್ತ್ರೀಯರಿಗೆ ಅವಮಾನ ಮಾಡಿದಂತೆ.  ಮಾನ ಎಂಬುದು ಕೇವಲ ಸ್ತ್ರೀಯರಿಗೆ ಸೀಮಿತವಾಗಿರುತ್ತದೆ ಎಂಬುದನ್ನು ಸುಸಂಸ್ಕೃತ ಸಮಾಜ ಒಪ್ಪುವುದಿಲ್ಲ. ಸ್ತ್ರೀಯಾಗಲೀ ಪುರುಷನಾಗಲೀ ಮಾನ ಅದು ಸಮಾನವಾಗಿರುತ್ತದೆ. ಯಾರು ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ. ಅದು ಅವರವರು ಉಳಿಸಿಕೊಂಡು ಅವರಿಗೆ ಅವರೇ ಮೌಲ್ಯವನ್ನು ತರುವಂತೆ. ಹೆಣ್ಣು ಪ್ರಕೃತಿ ಸಹಜ ಅಬಲೆಯಾಗಿರಬಹುದು, ಆದರೆ ಆಕೆ ಬುದ್ಧಿವಂತೆಯಾಗಿರುತ್ತಾಳೆ. ಅದು ಅನಿವಾರ್ಯ. 

ಅತೀ ಕೆಟ್ಟದ್ದನ್ನು ಸಹ  ಉಚಿತವಾಗಿ ಕೊಡಿ....ಅದಕ್ಕೆ ಹಾತೊರೆಯುತ್ತಾರೆ. ಒಳ್ಳೆ ಮೌಲ್ಯಯುತವಾದದ್ದನ್ನು ಯಾರೂ ಬಯಸುವುದಿಲ್ಲ


Sunday, November 12, 2023

ನಂಬಿಕೆಗಳು ಸಂಸ್ಕೃತಿಯೂ

ಮೊನ್ನೆ ನವರಾತ್ರಿ ಸಮಯದಲ್ಲಿ ಊರಿಗೆ ಹೋಗಿದ್ದೆ. ನಮ್ಮೂರು ತಲುಪಿದಂತೆ ಅಲ್ಲಲ್ಲಿ ಸಾರ್ವಜನಿಕ ಶಾರದೋತ್ಸವ ನಡೆಯುತ್ತಿರುವುದನ್ನು ನೋಡಿದೆ. ಬಹುಶಃ ಸಾರ್ವಜನಿಕ ಶಾರದೋತ್ಸವ ಆಚರಿಸುವ ಪರಿಪಾಠವಿರುವುದು ನಾನು ಕಂಡ ಹಾಗೆ ನಮ್ಮೂರಲ್ಲಿ ಮಾತ್ರ. ಎಲ್ಲದಕ್ಕೂ ಮಹತ್ವ ಕೊಡುವಾಗ ಇಲ್ಲಿವಿದ್ಯೆ ಜ್ಞಾನಕ್ಕೂ ಮಹತ್ವ ಕೊಡುವ ಬಗೆ ಇದು.  ಅದು ಗಣೇಶೋತ್ಸವ ಆಗಿರಲಿ ಶಾರದೋತ್ಸವ ಆಗಿರಲಿ ಇಲ್ಲಾ ಸಾರ್ವಜನಿಕ ಸಾಮೂಹಿಕ ಸತ್ಯನಾರಾಯಣ ಪೂಜೆಯೇ ಆಗಲಿ ಇಲ್ಲಿ  ಉತ್ಸವದ ಆಚರಣೆಯ ವೈಶಿಷ್ಟ್ಯಗಳು ಹಲವು. ಹಲವು ಕಡೆಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿರುತ್ತದೆ.   ಡಿ ಜೆ ಯಂತಹ ಪಾಶ್ಯಾತ್ಯ ಸಂಸ್ಕೃತಿಯ ಪ್ರಭಾವ ಇರುವುದಿಲ್ಲ. ಶಾಸ್ತ್ರೀಯ ಸಂಗೀತ ಭಜನೆ ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಇದಕ್ಕೆ ಪ್ರತೀಕ. ಹಲವು ಕಡೆಯಲ್ಲಿ ಒಂದು ಕಾರ್ಯಕ್ರಮ ಹೇಗೆ ಸಂಸ್ಕೃತಿಯನ್ನು ಪ್ರತಿನಿಧಿಸಬೇಕೋ ಆ ರೀತಿಯಲ್ಲೇ ಇರುತ್ತದೆ. ಪೂಜೆ ಪುನಸ್ಕಾರಗಳು ಜನರಲ್ಲಿ ಭಕ್ತಿಯನ್ನು ಜಾಗೃತಗೊಳಿಸಬೇಕು. ನಿಸ್ವಾರ್ಥ ಪ್ರೀತಿಯ ಸಂದೇಶವನ್ನು ಸಾರಬೇಕು. ಮುಖ್ಯವಾಗಿ ಹಿನ್ನೆಲೆಯ ಭಾವ ಉದಾತ್ತವಾಗಿರಬೇಕು. ಪೂಜೆ ಪುನಸ್ಕಾರ ಉತ್ಸವಾದಿಗಳು ಭಕ್ತರನ್ನು ಮೆಚ್ಚಿಸುವ ಬದಲಾಗಿ ಪರಮಾತ್ಮನನ್ನು ಮೆಚ್ಚಿಸುವ ಉದ್ದೇಶದಲ್ಲಿರಬೇಕು. ಆದರೆ ಇಂದು ಸಾರ್ವಜಿನಿಕ ಆಚರಣೆಗಳು ಭಕ್ತಿ, ಶ್ರದ್ಧೆಯ ಉದ್ದೇಶದಿಂದ ಬಹಳ ದೂರದಲ್ಲಿರುತ್ತದೆ ಎಂಬುದು ಅಷ್ಟೇ ಸತ್ಯ. 

ಇತ್ತೀಚೆಗೆ ಗಣೇಶೋತ್ಸವದ ಬಗ್ಗೆ ಸ್ವಾಮೀಜಿಯೊಬ್ಬರು ಹೇಳಿದ ಮಾತು, ಅವರು ಯಾಕೆ ಹಾಗೆ ಹೇಳಿದರು? ಅದರ ತಪ್ಪು ಒಪ್ಪುಗಳು ಏನು ಎಂಬುದರ ಬಗ್ಗೆಯಲ್ಲ. ಅವರ ಚಿಂತನೆಯ ಬಗ್ಗೆ ಅದನ್ನು ವಿಮರ್ಶಿಸುವುದರ ಬಗ್ಗೆ ನನಗೆ ಆಸಕ್ತಿ ಇಲ್ಲ. ಆದರೆ ಇದೇ ಬಗೆಯ ಸಾಧ್ಯತೆಗಳು ದಟ್ಟವಾಗಿದೆ. ನಮ್ಮಲ್ಲಿ ಮೌಢ್ಯಕ್ಕೂ ಸಂಸ್ಕೃತಿಗೂ ಪರಿಧಿ ಅತ್ಯಂತ ಸೂಕ್ಷ್ಮವಾಗಿದೆ. ಒಂದು ಕಾಲದಲ್ಲಿ ಸತೀ ಪದ್ದತಿ ಎಂಬುದು ಸಂಸ್ಕೃತಿಯಾಗಿತ್ತು .  ಅದು ಮೌಢ್ಯ ಎಂದು ಅರಿತಾಗ ಅದು ಸಮಾಜದಿಂದ ದೂರವಾಗಬೇಕಾಯಿತು.  ನಾವು ಜೀವನದ ಮೌಲ್ಯಗಳನ್ನು ನಂಬಿಕೆಗಳನ್ನು ಈ ದೃಷ್ಟಿಕೋನದಿಂದಲೇ ಗಮನಿಸಬೇಕು. ಜಾತಕ ನೋಡಿ ಮದುವೆಯಾಗಬೇಕು ಸತ್ಯ. ವಿಪರ್ಯಾಸ ಎಂದರೆ ಜಾತಕ ಹೊಂದಿಕೆಯಾಗದೇ ಬ್ರಹ್ಮಚಾರಿಗಳಾಗಿ ಉಳಿದವರ ದೊಡ್ಡ ಪಟ್ಟಿಯೇ ಸಿಕ್ಕಿಬಿಡುತ್ತದೆ. ಹಾಗಂತ ಜಾತಕನೋಡುವುದು ತಪ್ಪು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ವಾಸ್ತವ ಎಂಬುದು ಇದೆಲ್ಲದಕ್ಕಿಂತ ಮೀರಿ ನಿಲ್ಲುತ್ತದೆ.  ಮುಖ್ಯವಾಗಿ ನಮ್ಮ ನಂಬಿಕೆಗಳು ಮೌಢ್ಯವನ್ನು ಆಶ್ರಯಿಸುವಂತಾಗಬಾರದು. ಸತ್ಯ ಧರ್ಮ ನ್ಯಾಯ ಪ್ರಾಮಾಣಿಕತೆಯನ್ನು ಬದಿಗಿಟ್ಟು ವ್ಯವಹರಿಸಿದಾಗ ಅದು ಮೌಢ್ಯವಾಗುತ್ತದೆ. ಕಳ್ಳನೋ ಕೊಲೆಗಾರನೋ ಅಪರಾಧವನ್ನು ಮಾಡುವುದಕ್ಕೆ ಹೊರಟಾಗ ದೇವರಿಗೆ ಹರಕೆ ಹಾಕಿ ಪ್ರಾರ್ಥನೆ ಮಾಡಿ ಹೋದರೆ ಮಾಡುವ ದುಷ್ಕೃತ್ಯ ಸಮ್ಮತವಾಗುವುದಿಲ್ಲ. ನಿಜವಾದ ಸತ್ಯ ಏನು ಎಂದು ಆತನಿಗೆ ತಿಳಿಯುವುದಿಲ್ಲ. ದೇವರ ಬಗ್ಗೆ ಆತನಿಗೆ ಮೌಢ್ಯವೇ ಆವರಿಸಿರುತ್ತದೆ. ನಮ್ಮ ಅನ್ಯಾಯ ಅಪ್ರಾಮಾಣಿಕತೆ ವಂಚನೆ ಅಪರಾಧಗಳಿಗೆ ದೇವರು ಅನುಗ್ರಹಿಸಬೇಕು ಎಂಬುದು ಮೌಢ್ಯವಲ್ಲದೇ ಬೇರೆನೂ ಅಲ್ಲ. ದೇವರಲ್ಲಿನ ದೈವತ್ವವನ್ನು ಗೇಲಿ ಮಾಡುವ ಪ್ರವೃತ್ತಿ ಇದು. ಇದು ಪರಿಶುದ್ದ ಭಕ್ತಿಯಲ್ಲ. ಯಾವುದೆ ಪಾಪ ಕರ್ಮಗಳಿಗೆ ಅಪರಾಧಗಳಿಗೆ ಕ್ಷಮೆ ಎಂಬುದು ಇರುವುದಿಲ್ಲ. ಆಗಿ ಹೋದ ಅಪರಾಧಕ್ಕೆ ಪಶ್ಚಾತ್ತಾಪ ಪರಿಹಾರ ಎಂಬುದು ಕೇವಲ ನಮ್ಮ ನಂಬಿಕೆ. ಆದರೆ ಸತ್ಯ ಅದಲ್ಲ. ಅಪರಾಧ ಆದ ನಂತರ ಅದು ಅಪರಾಧವೇ. ಅದು ಸತ್ಕಾರ್ಯವಾಗುವುದಕ್ಕೆ ಅದನ್ನು ನಾಶ ಮಾಡುವುದಕ್ಕೆ ಸಾಧ್ಯವಿಲ್ಲ. 

ಈಗ ಗಣೇಶ ಎಂದ ತಕ್ಷಣ ಅದು ದೇವರಲ್ಲದೇ ಆಗುವುದಿಲ್ಲ. ಅಥವಾ ದೇವರು ಎಂಬುವುದು ಗಣೇಶ  ಎನ್ನುವುದಕ್ಕೆ ಅಷ್ಟೇ ಸೀಮಿತವಾಗುವುದಿಲ್ಲ. ರಾಮ ಶಿವ ಸುಬ್ರಹ್ಮಣ್ಯ ಕೃಷ್ಣ ಹೆಚ್ಚೇಕೆ ಅಲ್ಲಾ ಅಥವಾ ಏಸು ಎಲ್ಲವೂ ಒಂದೇ ಎನ್ನುವ ತತ್ವದಲ್ಲಿ ಹೆಸರಿಗೆ ಮಹತ್ವವೇ ಇರುವುದಿಲ್ಲ. ಹಾಗಿರುವಾಗ ಗಣೇಶ ಎನ್ನುವುದು ದೇವರಲ್ಲ ಎನ್ನುವುದು ಹೇಗೆ ಸಾಧ್ಯ?  ಅಕ್ಕಿಯನ್ನು ಅನ್ಯ ಭಾಷೆಯಲ್ಲಿ  ಚಾವಲ್ ರೈಸ್ ಎನ್ನುವ ಹಾಗೆ ಗಣೇಶ. ಅದೊಂದು ಹೆಸರಿನ ರೂಪ. ದೇವರನ್ನು ನಂಬುವಾಗ ಅಲ್ಲಿ ಆಸ್ತಿಕ ನಾಸ್ತಿಕ ಎನ್ನುವುದಷ್ಟೇ ಮುಖ್ಯವಾಗುತ್ತದೆ. 

ಹಿಂದೂ ಸಂಸ್ಕೃತಿಯಲ್ಲಿ ದೇವರು ಆರಾಧನೆ ಎಂಬುದರ ವ್ಯಾಪ್ತಿ ಅದರ ರೂಪ ಬಹಳ ವಿಶಾಲವಾಗಿದೆ. ಅತ್ಯಂತ ಸರಳವಾಗಿಯೂ ಅತ್ಯಂತ ಆಡಂಬರದಲ್ಲಿಯೂ ಇಲ್ಲಿ ಆರಾಧನೆ ಇರುತ್ತದೆ.  ಇಲ್ಲಿ ಭಾವನೆಗಳಿಗೆ ಮಾತ್ರ ಮಹತ್ವ. ದೇವರ ಪೂಜೆ ಎಂಬುದರಲ್ಲಿ ಕ್ರಿಯೆಯೂ ವಿಭಿನ್ನವಾಗಿ ಇರುವಾಗ ಹೆಸರು ಎಂಬುದು ಗೌಣವಾಗಿರುತ್ತದೆ. ಹಲವು ಕಡೆ ದೇವರು ಎಂದು ಅರಿತಾಗ ಅಲ್ಲಿ ಒಳಗೆ ಯಾವ ದೇವರು ಎಂದು ಯೋಚಿಸುವುದಿಲ್ಲ. ಅದಕ್ಕೆ ನಮಸ್ಕರಿಸುವುದು ಮಾತ್ರ ಮಹತ್ವವಾಗಿರುತ್ತದೆ. ದೇವರ ರೂಪ ಭಾವ ಹೆಸರು ಎಲ್ಲವೂ ಮನುಷ್ಯ ಕಲ್ಪನೆಗೆ ಸೀಮಿತ. ಕಾಂತಾರ ಸಿನಿಮಾದಲ್ಲಿ ದೈವವನ್ನು ನೋಡುವಾಗ ಅದು ಕೇವಲ ದೈವ ಬೂತವಾಗಿ ಕಾಣುತ್ತದೆ ಹೊರತು ಅಲ್ಲಿ ಹೆಸರಿನ ಬಗ್ಗೆ ಯೋಚಿಸುವುದಿಲ್ಲ.  ಆದರೆ ದೇವರು ಹೆಸರಿಗೆ  ಅಷ್ಟಕ್ಕೇ ಸೀಮಿತವಾದರೆ ಅದು ದೇವರಾಗುವುದಿಲ್ಲ. ಕಲ್ಪನಾತೀತ ಭಾವನಾತೀತ ಎಂಬುದು ದೇವರು. ಹಾಗಿರುವಾಗ ಇಲ್ಲಿ ಹೆಸರು ಎಂಬುದು ಗೌಣವಾಗಿರುತ್ತದೆ. ಯಾವುದೂ ಇಲ್ಲದೆಯೂ ದೇವರನ್ನು ಪೂಜಿಸುವುದಕ್ಕೆ ಭಜಿಸುವುದಕ್ಕೆ ಅವಕಾಶ ನಮ್ಮ ಸಂಸ್ಕೃತಿಯಲ್ಲಿದೆ. ಕೇವಲ ಬೆರಳ ತುದಿಯಲ್ಲಿ ಹಿಡಿದ ಅಕ್ಷತೆಯನ್ನು ಸಮರ್ಪಿಸಿ ಸರ್ವ ಸಮರ್ಪಣಾ ಭಾವದಿಂದ ಆರಾಧಿಸಿ ತೃಪ್ತರಾಗುವ ಅವಕಾಶವಿದೆ. ಒಂದು ತುಳಸೀ ದಳ ಅರ್ಪಿಸಿ ಶ್ರೀಕೃಷ್ಣನನ್ನು ಒಲಿಸಿಕೊಂಡ ಕಥೆ ಪುರಾಣದಲ್ಲಿದೆ. ನಾವು ಹೊರಾವರಣದಲ್ಲಿ ಏನು ಮುಖ್ಯ ಎಂದು ತಿಳಿದಿರುತ್ತೇವೆಯೋ   ದೇವರಿಗೆ ಅದು ಯಾವುದೂ ಮುಖ್ಯವಲ್ಲ. ಅದು ನಮ್ಮ ಭಾವನೆಗಳಿ ಮಾತ್ರ ಅವಶ್ಯಕವಾಗಿರುತ್ತದೆ.  ನಾವು ಹೆಸರಿಲ್ಲದೇ ಕೇವಲ ಓಂ ಕಾರದಿಂದ ದೇವರನ್ನು ಕಾಣುವಾಗ ಯಾವ ದೇವರನ್ನೂ ಕಲ್ಪಿಸಬಹುದು. ಓಂಕಾರದಲ್ಲೇ ಎಲ್ಲವನ್ನು ಕಾಣುವಾಗ ಗಣೇಶ ಕೃಷ್ಣ ದುರ್ಗೆ ಎಲ್ಲವು ಒಂದೇ ಆಗಿ. ದೇವರು ಹೆಣ್ಣೂ ಅಗಬಹುದು ಗಂಡು ಅಗಬಹುದು. ಅದು ಕೇವಲ ಮಾನಸಿಕ ತೃಪ್ತಿ. 

ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಗಮನಿಸಬೇಕು. ಋಷಿಗಳು ತಪಸ್ಸು ಮಾಡುವುದಕ್ಕೆ ಯಾಕೆ ಕಾಡನ್ನು ಆಯ್ಕೆ ಮಾಡುತ್ತಿದ್ದರು?  ಕೇವಲ ಅವರ ಏಕಾಗ್ರತೆಗಾಗಿ ಅಲ್ಲ. ಎಲ್ಲವನ್ನೂ ಬಿಟ್ಟು ಕೇವಲ ಮನಸ್ಸನ್ನು ಅರ್ಪಿಸುವುದಕ್ಕೆ ಕಾಡು ಪ್ರಶಸ್ತ. ಅವರ ತಪಸ್ಸಿನಿಂದ ಉಳಿದವರಿಗೆ ತೊಂದರೆಯಾಗುವುದಿಲ್ಲ. ಎಲ್ಲೋ ಒಂದು ಕಾಡಿನ ಭಾಗದಲ್ಲಿ ಅಲ್ಲಿರುವ ಪ್ರಾಣಿ ಪಕ್ಷಿ ಗಿಡ ಮರಗಳಿಗೂ ತೊಂದರೆಯಾಗದಂತೆ ಅವರು ತಪಸ್ಸು ಮಾಡುವ ಉದ್ದೇಶ ಸ್ಪಷ್ಟ ಯಾರಿಗೂ ತೊಂದರೆ ಕೊಡುವುದರಿಂದ ದೈವಾರಾಧನೆ ಸಾಧ್ಯವಾಗುವುದಿಲ್ಲ. ಯಾರಿಗೋ ತೊಂದರೆ ಕೊಟ್ಟು ಅವನ ಸಂಪತ್ತನ್ನು ಸೂರೆ ಮಾಡಿ ನಾವು ದೇವರನ್ನು ಪೂಜಿಸುತ್ತೇವೆ ಎಂದರೆ ಅದು ಮೌಢ್ಯದ ಭಕ್ತಿಯಾಗುತ್ತದೆ. ಸರ್ವೇಷಾಮ ಅವಿರೋಧೇನ ಎಂದು ಸಂಕಲ್ಪ ಮಾಡುವಾಗ ಪ್ರತಿಯೊಬ್ಬರ ಕ್ಷೇಮ ಸಮ್ಮತಿ ಅದಕ್ಕೆ ಸಂಪೂರ್ಣ ವಿನಿಯೋಗವಾಗಬೇಕು. ಅದಿಲ್ಲವಾದರೆ ಅದು ದೈವಾರಾಧನೆಯಾಗುವುದಿಲ್ಲ. 

ನಮ್ಮ ಮನಸ್ಸಿನ ಅಹಂಕಾರಗಳ ವಿಕಾರವನ್ನು ನಿಯಂತ್ರಿಸುವಾಗ  ಪರಿಪೂರ್ಣ ಪರಮಾತ್ಮ ಸ್ವರೂಪ ಅರಿವಿಗೆ ಬರುತ್ತದೆ. ಹಾಗಾಗಿ ಯಾರೋ ಒಬ್ಬರು ಗಣೇಶ ಕಾಲ್ಪನಿಕ ಎಂದು ಹೇಳುವಾಗ ಪರಮಾತ್ಮ ಸ್ವರೂಪ ಅರಿವಿದ್ದವನಿಗೆ ಏನೂ ಅನಿಸುವುದಿಲ್ಲ. ಯಾಕೆಂದರೆ ಅವನ ಮನಸ್ಸಿನಲ್ಲಿ ಗಣೇಶ ಎಂಬುದು ಕೇವಲ ಹೆಸರು ಮಾತ್ರ ಅದರಿಂದ ಆಚೆಗೆ ಪರಮಾತ್ಮ ಸ್ವರೂಪವಿದೆ. ಆತನಲ್ಲಿದ್ದ ಭಕ್ತಿ ಅದನ್ನು ತೋರಿಸುತ್ತಾ ಇರುತ್ತದೆ.  ದೇವರು ಪ್ರಸನ್ನನಾಗುವುದು, ಅಥವಾ ದೇವರು ದೇವರಾಗಿ ಉಳಿಯುವುದು ಭಕ್ತಿ  ಇದ್ದರೆ ಮಾತ್ರ. ಹಾಗಾಗಿ ಇಲ್ಲಿ ಎಲ್ಲದಕ್ಕೂ ಮೂಲವಾಗುವುದು ದೇವರನ್ನು ಏನು ಕರೆಯುವುದು ಎನ್ನುವುದಕ್ಕಿಂತಲೂ ಭಕ್ತಿಯೇ ಮುಖ್ಯವಾಗುತ್ತದೆ. ಭಕ್ತಿ ಇಲ್ಲದೇ ಇದ್ದರೆ ಉಳಿದವುಗಳಿಗೆ ಯಾವ ಪ್ರಾಶಸ್ತ್ಯವೂ ಇರುವುದಿಲ್ಲ. ಪುರಾಣದ ಬಗ್ಗೆ ಅರಿವಿಲ್ಲದವನಿಗೆ ಪುರಾಣದ ವ್ಯಕ್ತಿ ಪಾತ್ರಗಳು ಕೇವಲ ಹೆಸರಿಗಷ್ಟೇ ಸೀಮಿತವಾಗುತ್ತದೆ. ಹೆಸರು ಎಂಬುದು ಭಕ್ತಿಯ ಮುಂದು ಗೌಣವಾಗುತ್ತದೆ. 

ಗಣೇಶೋತ್ಸವವನ್ನು ಸಂಸ್ಕೃತಿಗೆ ತಳುಕು ಹಾಕಲಾಗುತ್ತದೆ. ಆದರೆ ಗಣೇಶೋತ್ಸವ ಹುಟ್ಟಿಕೊಂಡಿರುವುದು ಸಂಸ್ಕೃತಿಯಿಂದಲೇ ಹೊರತು ಅದುವೇ ಸಂಸ್ಕೃತಿಯಾಗುವುದಕ್ಕೆ ಸಾಧ್ಯವಿಲ್ಲ. ಅದಲ್ಲದೇ ಇದ್ದ ಸಂಸ್ಕೃತಿಗಳು ಬೇಕಾದಷ್ಟು ಇವೆ ಅದು ಎಷ್ಟು ಗೌರವಿಸಲ್ಪಟ್ಟಿದೆ ಎಂಬುದು ಮುಖ್ಯವಾಗುತ್ತದೆ. ಅದರಂತೆ ದೀಪಾವಳಿಗೆ ಪಟಾಕಿಯ ಆವಶ್ಯಕತೆ ಎಷ್ಟು ಎಂಬುದು ಕೂಡ ಪ್ರಶ್ನೆಯಾಗುತ್ತದೆ. ಅದನ್ನು ಬೇಡ ಎಂದರೆ ಸಂಸ್ಕೃತಿಗೆ ವಿರೋಧವಾಗುತ್ತದೆ ಎಂಬುದು ಸರಿಯಲ್ಲ. ದೀಪಾವಳಿಯಲ್ಲೇ ಇರುವ ಸಂಸ್ಕೃತಿ ನಮಗೆ ಬೇಡವಾಗಿ ಕೇವಲ ಪಟಾಕಿಯಷ್ಟೇ ದೀಪಾವಳಿಯಾದರೆ ಅದು ಸಂಸ್ಕೃತಿ ಹೇಗಾಗುತ್ತದೆ?  ನಮ್ಮ ರಸ್ತೆಯಲ್ಲಿ ಸುಮಾರು ಐವತ್ತು ಮನೆಗಳಿವೆ. ಅದರಲ್ಲಿ ಹೆಚ್ಚಿನ ಎಲ್ಲ ಮನೆಗಳು ಪಟಾಕಿ ಉರಿಸಿದರೆ, ಮನೆ ಎದುರು ದೀಪ ಹಚ್ಚಿಡುವ ಮನೆಗಳು ಒಂದೋ ಎರಡೋ  ಮನೆಗಳ ಮುಂದೆ ದೀಪ ಹಚ್ಚಿಡುತ್ತಾರೆ. ದೀಪಾವಳಿಯಲ್ಲಿ ಮುಖ್ಯವಾಗಿ ಹಚ್ಚಿಡಬೇಕಾದ ದೀಪಗಳು ಬೇಡ. ಪರಮಾತ್ಮನ ಭಜನೆ ಸ್ಮರಣೆಗಳು ಬೇಡ. ಇವುಗಳೆಲ್ಲ ಸಂಸ್ಕೃತಿಯ ಅಂಗಗಳು. ಅದು ಬೇಡದೆ ಕೇವಲ ಪಟಾಕಿ ಬೇಕು ಎನ್ನುವಾಗ ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ಯೋಚಿಸುವುದಿಲ್ಲ. ಪಟಾಕಿ ಬೇಡವೇ ಬೇಡ ಎಂದುಕೊಂಡು ಮನೆಯೊಳಗೆ ಕುಳಿತ ಅಮಾಯಕನ ಕಣ್ಣು ತೆಗೆದ ಪಟಾಕಿ ಬೇಕು ಎಂದರೆ ಶೋಚನೀಯ ಎನ್ನಬೇಕು. ಪಟಾಕಿಯ ಬಗ್ಗೆ ಪುಂಗಿ ಊದುವಾಗ ಕಣ್ಣು ಕಾಣುವುದಿದ್ದರೆ ಒಂದು ಸಲ ಕಣ್ಣಿನ ಆಸ್ಪತ್ರೆಗಳಿಗೆ ಭೇಟಿ ಕೊಡಿ. ಪಟಾಕಿಯಿಂದ ಕಣ್ಣು ಕಳೆದ ಮನೆಯಯವರನ್ನು ನೋಡಬೇಕು.  ಗಣೇಶೋತ್ಸವದಲ್ಲು ಹೀಗೆ ಬೇಡದೇ ಇರುವ ಅಂಶಗಳು ಸಾಕಷ್ಟು ಇವೆ. ಹಣ ಸಂಗ್ರಹಿಸುವಾಗ ದರೋಡೆ ಮಾಡಿದಂತೆ ಕಿತ್ತುಕೊಳ್ಳುವುದನ್ನೂ ಕಾಣಬಹುದು. ಇನ್ನು ಅಲ್ಲಿ ಉತ್ಸವದ ಹೆಸರಲ್ಲಿ ಆಗುವ ಅಪಸವ್ಯಗಳನ್ನು ನೋಡುತ್ತಾ ಹೋದರೆ ಅದು ಬೇಡವೇ ಬೇಡ ಎಂಬಂತಹ ಸನ್ನಿವೇಶವನ್ನು ಕಾಣಬಹುದು. ದೇವರ ಯಾವುದೇ ಕ್ರಿಯೆಗಳು ಯಾರಿಗೂ ತೊಂದರೆ ಕೊಡದೇ ಆಚರಿಸಲ್ಪಡಬೇಕು. ಹಾಗಿದ್ದರೆ ಮಾತ್ರ ಅದು ದೇವರ ಪೂಜೆಯಾಗುತ್ತದೆ.  

ನಮ್ಮ ರಸ್ತೆಯಲ್ಲಿ ಈಬಾರಿ ಮೂರು ಸಲ ಗಣೇಶ ಇಟ್ಟು ಐದಾರು ದಿನ ಪೂಜೆ ಮಾಡಿದ್ದಾರೆ. ಇನ್ನು ಪೂಜೆಯ ಪವಿತ್ರತೆ ನೋಡಿದರೆ ಗಣೇಶ ಇಷ್ಟು ಅಗ್ಗವಾಗಿ ಹೋದನೇ ಎಂದನಿಸುತ್ತದೆ. ನಮ್ಮದು ಒಂದು ಕಡೆ ಮಾತ್ರ ತೆರೆದುಕೊಂಡ ಏಕ ಮುಖ ರಸ್ತೆ. ನಡುವಿನಲ್ಲಿ ಚಪ್ಪರ ಹಾಕಿ ರಸ್ತೆ ತಡೆ ಮಾಡಿ ಪೂಜೆ ಮಾಡುವಾಗ ಒಂದು ಬದಿಯ ಒಂದಷ್ಟು ಮನೆಮಂದಿಗಳು ಪಡುವ ಕಷ್ಟ ಬೇರೆಯೇ ಆಗಿರುತ್ತದೆ. ಮನೆಯ ಯಾರೋ ಒಬ್ಬನಿಗೆ ಹೃದಯಾ ಘಾತವೋ ಮತ್ತೊಂದೋ ಆಗಿ ತುರ್ತು ಚಿಕಿತ್ಸೆ ಬೇಕು ಎನ್ನುವಾಗ ಮನೆ ಬಾಗಿಲಿಗೆ ವಾಹನವೇ ಬಾರದಂತಹ ಸ್ಥಿತಿ ಬಂದರೆ ಗಣೇಶನೇ ಕಾಪಾಡುತ್ತಾನೆ ಎಂದು ಕುಳಿತರೆ ಅದು ಮೌಢ್ಯವಾಗುತ್ತದೆ. 

    ಹಲವು ಕಡೆಯಲ್ಲಿ ಗಣೇಶೋತ್ಸವ ಮಾಡಿ ಗಣೇಶನ ಮೌಲ್ಯವನ್ನು ನಾವು ಕಳೆಯುತ್ತಿದ್ದೇವೆ ಎಂದನಿಸುತ್ತದೆ. ಭಕ್ತಿ ಇದ್ದರೆ ಮಾತ್ರ ಸಾಲದು ಭಕ್ತಿಯ ಸ್ವರೂಪವೂ ಅತೀ ಮುಖ್ಯ.  ಗರ್ಭದ ಗುಡಿಯ ಒಳಗೆ ಸರ್ಪ ಬಂದು ಕುಳಿತರೆ ಜೀವ ಭಯವೇ ಪ್ರಧಾನವಾಗುತ್ತದೆ. ಅಲ್ಲಿ ಸಂಸ್ಕೃತಿಗೆ ಯಾವ ಬೆಲೆಯೂ ಇರುವುದಿಲ್ಲ. ಸಂಸ್ಕೃತಿ ಎಂಬುದು ಉತ್ತಮ ಜೀವನವನ್ನು ಬಿಂಬಿಸುತ್ತದೆ. ಸತ್ಯ ಪ್ರಾಮಾಣಿಕತೆ ಮತ್ತು ಪಾವಿತ್ರ್ಯತೆ ಇದು ಇಲ್ಲದೇ ಇದ್ದರೆ ಯಾವ ಸಂಸ್ಕೃತಿಯೂ ಗೌರವಿಸಲ್ಪಡುವುದಿಲ್ಲ.

Monday, November 6, 2023

ಹೊಟ್ಟೆ ತುಂಬಿದರೂ ಇಂಗದ ಹಸಿವು

  ಪ್ರತೀ ಸಲ ನನಗೆ ಊಟ ಮಾಡಿ ಏಳುವಾಗ ಬೇಡವೆಂದರೂ ನಮ್ಮ ನಾರಾಯಣ ಎಂಬ ವೃದ್ದರ ನೆನಪಾಗುತ್ತದೆ.   ಈ ವೃದ್ದ ಹಣ್ಣು ಹಣ್ಣು ಮುದುಕ ಅಲ್ಲದೇ ಇದ್ದರೂ ಒಂದಷ್ಟು  ಪ್ರಾಯ ಸಂದು ಹೋಗಿತ್ತು.  ಅವರ ಊಟ ನನಗೆ ಹಲವಾರು ಅರ್ಥಗರ್ಭಿತ ವಿಷಯಗಳು ಅಡಕವಾಗಿದ್ದಂತೆ ಭಾಸವಾಗುತ್ತದೆ. ಇಂದು ಈ ಊಟವೆಂಬ  ಕ್ರಿಯೆ ಅದರ ಉದ್ದೇಶ ಕೇವಲ ಹಸಿವನ್ನು ನೀಗಿಸುವುದಕ್ಕೆ ಎಂದು ಅನಿಸುವುದಿಲ್ಲ. 


ಹಿಂದೆ ಮಂಗಳೂರಲ್ಲಿರುವಾಗ ಈ ವಯೋ ವೃದ್ಧರು ಊಟಕ್ಕೆ ಕುಳಿತರೆ ಅವರ ತನ್ಮಯತೆ ನಮಗೆ ಅಚ್ಚರಿಯನ್ನು ತರುತ್ತಿತ್ತು. ಆ ತನ್ಮಯತೆ  ಊಟದ ಮೇಲಿನ ಅತ್ಯಾಗ್ರಹವಾಗಿರಲಿಲ್ಲ.  ಬದಲಿಗೆ ಹಸಿವೆಯನ್ನು ತಣಿಸುವ ಒಂದು ಪವಿತ್ರ ಕಾರ್ಯವಾಗಿತ್ತು. ನಾರಾಯಣ ಕೂದಲು ನೆರೆಗಟ್ಟಿದ ಕೃಶ ಶರೀರದ ವ್ಯಕ್ತಿಯಾಗಿದ್ದರು. ಅವರು ನಮ್ಮಲ್ಲಿ ಅನಧಿಕೃತವಾಗಿ ಕೆಲಸಕ್ಕಿದ್ದರು. ಅವರು ಇದ್ದಾರೆ ಎಂದರೆ ನಮಗೆ ಕೆಲವೆಲ್ಲ ಕೆಲಸದಿಂದ ಮುಕ್ತಿಯಾಗುತ್ತಿತ್ತು. ಅದು ಯಾವ ಕೆಲಸವಾದರೂ ಸಮಯದ ಮಿತಿ ಇಲ್ಲದೆ ಮಾಡುತ್ತಿದ್ದರು. ನೀಳಕಾಯದ ವ್ಯಕ್ತಿಯಾಗಿದ್ದರು. ಅವರಿಗೆ ಕೌಟುಂಬಿಕವಾಗಿ ಮಗಳು ಮಗ ಸೊಸೆ ಎಲ್ಲರೂ ಅನುಕೂಲ ಸ್ಥಿತಿಯಲ್ಲಿದ್ದರೂ ಅವರು ನಮ್ಮ ಮನೆಯಲ್ಲಿ ಕೆಲಸಕ್ಕಿದ್ದರು. ಕಾರಣ ಸ್ವಾಭಿಮಾನ ಒಂದೆಡೆಯಾದರೆ ಕೌಟುಂಬಿಕ ಅಸಮಾಧಾನ ಇನ್ನೊಂದು. ಒಂದು ರೀತಿಯಲ್ಲಿ ವಿರಕ್ತಿಯಾಗಿ ಸನ್ಯಾಸಿಯಂತೇ ಬದುಕುತ್ತಿದ್ದರು. ನಮ್ಮ ಮನೆಯಲ್ಲಿ ಅದೂ ಇದೂ ಚಾಕರಿ ಮಾಡುತ್ತಾ ತನ್ನ ಹಸಿವನ್ನು ನೀಗುವ ದುಡಿಮೆ ಅವರದ್ದು. ಹಾಗೆ ನೋಡಿದರೆ ಒಂದು ಕಾಲದಲ್ಲಿ ಬಹಳ ಅನುಕೂಲವಂತರಾಗಿ ತುಂಬು ಕುಟುಂಬದೊಂದಿಗೆ ಇದ್ದರು.  ಅದು ಎಪ್ಪತ್ತರ ದಶಕ,  ಮಂಗಳೂರಿನ ರಥಬೀದಿ  (ಕಾರ್ ಸ್ಟ್ರೀಟ್) ಯಲ್ಲಿ  ಸ್ವಂತವಾದ ಒಂದು ಉದ್ಯಮದಲ್ಲಿ  ಚಕ್ಕುಲಿ ಮುಂತಾದ ತಿಂಡಿ ವ್ಯಾಪಾರವನ್ನು ಮಾಡುತ್ತಿದ್ದರು. ನಮ್ಮ ಮಾವಂದಿರು ಅವರ ಕೆಳಗೆ ಕೆಲಸಕ್ಕಿದ್ದರು. ಅದೇನು ಸಂಭವಿಸಿತೋ ಸರಿಯಾಗಿ ಗೊತ್ತಿಲ್ಲ , ನಂತರ ಎಲ್ಲವನ್ನು ಕಳೆದುಕೊಂಡ ಸನ್ಯಾಸ ಸ್ಥಿತಿಗೆ ತಲುಪಿದರು. ಅತ್ತ ಮನೆಯವರಿಂದ ದೂರಾಗಿ ಒಂದು ರೀತಿಯ ಅನಾಥತ್ವ.

ನಾರಾಯಣ ಅವರ ಮತ್ತೊಂದು ಗುಣವೆಂದರೆ ಎಲ್ಲೂ ಶಾಶ್ವತವಾಗಿ ನಿಲ್ಲುವ ವ್ಯಕ್ತಿಯಲ್ಲ. ಸದಾ ತಿರುಗಾಡುತ್ತಾ ಇರುವವರು. ಅದು ಯಾರದೋ ಮನೆಗಲ್ಲ, ಬದಲಿಗೆ ಪ್ರಸಿದ್ದ ತೀರ್ಥ ಕ್ಷೇತ್ರ ಪರ್ಯಟನೆ. ಭಾರತದಲ್ಲಿ ಅವರು ಹೋಗದ ಪ್ರಸಿದ್ಧ ಕ್ಷೇತ್ರಗಳೇ ಇಲ್ಲ . ಒಂದು ಜೋಳಿಗೆಯಂತಹ ಚೀಲ ಅದರಲ್ಲಿ ಒಂದೆರಡು ಅತ್ಯಾವಶ್ಯ ಪಂಚೆ ಅಂಗಿ  ಅದೂ ಕಾವಿ ಬಣ್ಣದ ವಸ್ತ್ರ ಇಷ್ಟೇ ಇರುತ್ತಿತ್ತು. ಅಗೀಗ ಬೀಡಿ ಎಳೆಯುವುದು ಬಿಟ್ಟರೆ ಅವರಿಗೆ ಬೇರೆ ದುಶ್ಚಟಗಳಿರಲಿಲ್ಲ. ಬಹುಶಃ ಕೈಯಲ್ಲಿ ಕಾಸಿಲ್ಲದೆಯೂ ರೈಲಿನ ಸಾಮಾನ್ಯ ಭೋಗಿಯ ಪ್ರಯಾಣ ಮಾಡುತ್ತಿದ್ದರು ಎಂದು ನನಗೆ ಅನುಮಾನ.  ಅತ್ತ ಉತ್ತರ ಭಾರತದ ಬದರಿನಾಥ ಕೇದಾರನಾಥ ಹರಿದ್ವಾರ ವಾರಣಾಸಿ ಗಯಾ ಪ್ರಯಾಗ ಪಂಡರಾಪುರ ರಾಮೆಶ್ವರ ಅಯೋಧ್ಯೆ  ಹೀಗೆ ಸುತ್ತಾಡುತ್ತಿದ್ದ ಪರಮ ದೈವ ಭಕ್ತ. ಸದಾ ಪರಮಾತ್ಮನ ನಾಮ ಸ್ಮರಣೆಯಲ್ಲಿ ತನ್ನ ಹೆಸರನ್ನೆ ಉಚ್ಚರಿಸುತ್ತಿದ್ದರು. ಮುಂಜಾನೆ ನಾಲ್ಕುಗಂಟೆಗೆ ಎಚ್ಚರವಾದರೆ ಇವರು ನಾರಾಯಣ ನಾರಾಯಣ ಹರೇ ರಾಮ ಎನ್ನುವ ನಾಮೋಚ್ಚಾರಣೆ ಕೇಳುತ್ತಿತ್ತು.  ಪಂಡರಾಪುರದ ಪಾಂಡುರಂಗನ ಅನನ್ಯ ಭಕ್ತ. ಸಾಯಂಕಾಲ ಪುರಂದರದಾಸರ ಭಜನೆಯನ್ನು ಹೇಳುವುದಲ್ಲದೆ ವರ್ಷಕ್ಕೆ ಒಂದು  ಬಾರಿಯಾದರೂ ಪಂಡರಾಪುರ ಹೋಗಿ ಬರುತ್ತಿದ್ದರು. ಹಾಗೆ ಹೋಗಿ ಬಂದಾಗ ತಂದ ಪುಂಡರಿಕಾಕ್ಷನ ಶಿಲಾ ವಿಗ್ರಹ ತಂದು ನಮ್ಮ ಮನೆಯಲ್ಲಿಟ್ಟಿದ್ದರು.  ಅಂತಹ ದೈವ ಭಕ್ತನ  ಊಟ ಪ್ರತಿ ಬಾರಿಯೂ ನೆನಪಿಗೆ ಬರುವುದಕ್ಕೆ ಒಂದು ವಿಶೇಷತೆ ಇದೆ. 

ನಾರಾಯಣ ಅಜ್ಜ....ನಾವು ಅವರನ್ನು ಕರೆಯುತ್ತಿದ್ದ ಹೆಸರು, ಅವರು ಯಾವ ಜಾತಿಯೋ ಗೊತ್ತಿಲ್ಲ. ಅವರು ನಮ್ಮ ಮನೆಯ ಜಗಲಿಯ ಒಂದು ಮೂಲೆಯಲ್ಲಿ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು.  ಅವರ ತನ್ಮಯತೆಯನ್ನು ನಾನು ಈಗ ನೆನಪಿಸಿಕೊಳ್ಳುತ್ತೇನೆ. ತಿನ್ನುವ ಪ್ರತಿಯೊಂದು ತುತ್ತೂ ಅವರಿಗೆ ಪರಮಾತ್ಮನ ಪ್ರಸಾದದಂತೆ ಭಾಸವಾಗುತ್ತಿತ್ತು. ಆ ಭಕ್ತಿ ಅವರ ಕಣ್ಣಿನ ನೋಟದಲ್ಲಿ ಮುಖದ ಭಾವನೆಯಲ್ಲಿ ವ್ಯಕ್ತವಾಗುತ್ತಿತ್ತು. ಊಟದ ಮೊದಲು ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸುತ್ತಿದ್ದರು. ಆನಂತರ ಒಂದು ತುತ್ತು ಅಂಗಳದಲ್ಲಿ ಕಾಗೆಗೆ ಇಡುತ್ತಿದ್ದರು. ಆನಂತರ ಏನು ಬಳಸಿದರೂ ಅದನ್ನು ಹಸಿವಾಗಿ ಊಟಮಾಡುತ್ತಿದ್ದರು. ಇಷ್ಟೇ ಅದರೆ ಅದರಲ್ಲಿ ವಿಚಿತ್ರವಿಲ್ಲ, ಊಟದ ಕೊನೆಯಲ್ಲಿ ತಟ್ಟೆಗೆ ಒಂದಷ್ಟು ನೀರನ್ನು ಸುರಿದು ಆ ತಟ್ಟೆಯನ್ನುಚೆನ್ನಾಗಿ ತೊಳೆದು ಅದನ್ನು ಕುಡಿದು ಬಿಡುತ್ತಿದ್ದರು. ಆಗ ನಮಗೆ ಇದೊಂದು ಅತಿಯಾಶೆಯಂತೆ ಹಾಸ್ಯವಾಗಿ ಕಂಡಿತ್ತು.ಆದರೆ ಈಗ ಅದರ ಮೌಲ್ಯ ಅನುಭವಕ್ಕೆ ಬರುತ್ತದೆ.  ಒಂದಿಷ್ಟನ್ನೂ ವ್ಯರ್ಥ ಮಾಡದ  ಆಹಾರದ ಮೇಲಿನ ಅವರ ಭಕ್ತಿ ನಿಜಕ್ಕೂ ಶ್ರೇಷ್ಠ. 

ಊಟ ಎಂದರೆ ಈ ವಯೋವೃದ್ಧನ ನೆನಪಾಗುವುದು ಇದಕ್ಕೆ. ನಾವು ಕೊನೆಯಲ್ಲಿ ಎಂಜಲು  ಮಾಡಿ ಎಸೆಯುವುದನ್ನು ಅವರು ತನ್ಮಯತೆಯಲ್ಲಿ ಸೇವಿಸುತ್ತಿದ್ದರು. 

ಮಧ್ಯಾಹ್ನ ದೇವಸ್ಥಾನಕ್ಕೆ ಹೋದರೆ  ಹಲವು ಸಲ ದರ್ಶನಕ್ಕಿರುವ ಮಹತ್ವಕ್ಕಿಂತಲೂ ಭೋಜನ ಪ್ರಸಾದಕ್ಕೆ ಆದ್ಯತೆ ನಮಗರಿವಿಲ್ಲದೇ ಒದಗಿಬರುತ್ತದೆ. ಯಾವಾಗ ದರ್ಶನ ಆಗಿಬಿಡುತ್ತದೋ, ಯಾವಾಗ ಭೋಜನ ಶಾಲೆಗೆ ಹೋಗಿಬಿಡುತ್ತೇವೆ ಎಂಬ ತವಕ ಉಂಟಾಗುತ್ತದೆ. ಭೋಜನ ಕೇವಲ ದೇವಸ್ಥಾನದಲ್ಲಿ ಮಾತ್ರ ಆದ್ಯತೆಯನ್ನು ಕಾಣುವುದಲ್ಲ....ಅದು ಎಲ್ಲ ಸಮಾರಂಭಗಳಲ್ಲೂ ಅತಿಥಿ ಸತ್ಕಾರದ ಬಹಳ ಮುಖ್ಯ ಅಂಗ. ಭೋಜನ ಸತ್ಕಾರ ಅತ್ಯಂತ ಗೌರವಯುತ ಸತ್ಕಾರ. ಯಾವ ಸಮಾರಂಭದಲ್ಲೂ ಊಟಕ್ಕೆ ಕೊಡುವ ಪ್ರಾಮುಖ್ಯತೆ ಹೆಚ್ಚು. ಊಟದ ಹೊತ್ತು ಸನಿಹವಾಗುವಾಗ ಅವಸರ ಅಸಹನೆ ತನ್ನಿಂತಾನೆ ಹುಟ್ಟಿಕೊಳ್ಳುತ್ತದೆ.  

ಇತ್ತೀಚೆಗೆ  ಕ್ಷೇತ್ರವೊಂದಕ್ಕೆ ಹೋಗಿದ್ದೆ. ಮಧ್ಯಾಹ್ನ ಊಟದ ಹೊತ್ತು. ಊಟಕ್ಕೆ ಕುಳಿತಾಗ ನನ್ನೆದುರು ಪುರೋಹಿತರೊಬ್ಬರು ಕುಳಿತಿದ್ದರು. ಅವರ ಉಡುಗೆ ತೊಡುಗೆ ನೋಡುವಾಗ ಹಾಗೇ ಅನಿಸಿತ್ತು.  ಮೊದಲಿನಿಂದಲೂ ನಾನು ಅವರನ್ನು ಗಮನಿಸುತ್ತಿದ್ದೆ. ದೇವರ ದರ್ಶನದಿಂದ ತೊಡಗಿ ಅವರ ಅವಸರ ಪ್ರವೃತ್ತಿ. ಊಟಕ್ಕೆ ಕುಳಿತಾಗಲೂ ಮುಂದುವರೆದಿತ್ತು. ಕೊನೆಗೆ ಬಂದ ಅನ್ನಾಹಾರವನ್ನು ಅವಸರದಲ್ಲೇ  ಊಟ ಮಾಡಿದರು.  ಊಟದ ನಡುವೆ ಸಾಂಬಾರ್ ಬಂತು. ಬಡಿಸುವವರು ಅವಸರವಸರದಿಂದ ಬಡಿಸಿ ಮುಂದೆ ಹೋದರು. ಇವರು ಮುಂದೆ ಹೋದ ಅವರನ್ನು ಹಿಂದೆ ಕರೆದು ಸಾಂಬಾರ್ ನ ಹೋಳು ಬಡಿಸುವಂತೆ ಬೇಡಿ ಹಾಕಿಸಿಕೊಂಡರು. ಆದರೆ ಆರಂಭದಲ್ಲಿ ಇದ್ದ ಆತ್ಯಾಗ್ರಹ ಕೊನೆಯಲ್ಲಿ ಇರಲಿಲ್ಲ. ಬಡಿಸಿದ ಅಷ್ಟೂ ಹೋಳುಗಳು ಮಾತ್ರವಲ್ಲದೆ ಒಂದಷ್ಟು ಅನ್ನ ಪಲ್ಯ ಪಾಯಸ ಬಿಟ್ಟು  ಊಟಮುಗಿಸಿ ಎದ್ದರು. ಅವರ ವರ್ತನೆ ಬಹಳ ಅಸಹನೆಯನ್ನು ಉಂಟು ಮಾಡಿತು. ನಾನೆಂದೆ ಏನು ಸ್ವಾಮಿ ಕೇಳಿ ಹಾಕಿದ್ದನ್ನೂ ಬಿಟ್ಟು ಎದ್ದಿರಲ್ಲ. ಅವರು ಕೇವಲ ನಕ್ಕರು.  ಇಂತಹ ವ್ಯಕ್ತಿಗಳಿಗೆ ಏನು ಹೇಳಬೇಕು. ನಾನು ಅಷ್ಟು ಕೇಳಿದ್ದೇ ಹೆಚ್ಚು ಅನಿಸಿತು.  ವಯಸ್ಸಾಗಿ ಹೋದರೂ ತಮ್ಮ ತಮ್ಮ ಹೊಟ್ಟೆಯ ಸಾಮಾರ್ಥ್ಯ ಅರಿವಾಗುವುದಿಲ್ಲ. ಹಸಿವಿನ ಪ್ರಮಾಣ ಗೊತ್ತಾಗುವುದಿಲ್ಲ. ಇವರೆಲ್ಲ ಊಟಕ್ಕೆ ಕುಳಿತರೆ ಸಾಕು ಬೇಕು ಎನ್ನುವುದಕ್ಕೆ ಅರ್ಥವೇ ಇರುವುದಿಲ್ಲ. ಸಾಕು ಎಂದು ಹೇಳುವುದಕ್ಕು ಬೇಕು ಎಂದು ಬೇಡುವುದಕ್ಕೂ ಅರ್ಹತೆಯೇ ಇಲ್ಲ. 

ಸಾಮಾನ್ಯವಾಗಿ ಸಮಾರಂಭಗಳಲ್ಲಿ  ನಾನು ಊಟಕ್ಕೆ ಕುಳಿತಾಗ ಗಮನಿಸುತ್ತೇನೆ. ಊಟದ ಆರಂಭದಲ್ಲಿ ಹಲವು ಭಕ್ಷ್ಯ ಆಹಾರಗಳನ್ನು ಬಡಿಸಿ ಎಲೆಯನ್ನು ಅಲಂಕರಿಸುತ್ತಾರೆ. ಎಲೆಯ ಅಲಂಕಾರಕ್ಕೆಂದೇ ಹಲವಾರು ತಿಂಡಿಗಳನ್ನು ಮಾಡುತ್ತಾರೆ. ಊಟದ ಆರಂಭದಲ್ಲಿ ಇವುಗಳಿಗೆಲ್ಲ ಎಷ್ಟು ಆಸಕ್ತಿ ವಹಿಸುತ್ತೇವೋ ಊಟದ ನಂತರ ಇವುಗಳು ಅದಕ್ಕಿಂತ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗುತವೆ. ನಾವು ಊಟಮಾಡಿದ ಬಾಳೆ ಎಲೆಯಾದರೂ ನಾವು  ಊಟ ಮಾಡಿ ಕುಳಿತಲ್ಲಿಂದ ಎದ್ದನಂತರ ಅದು ಹೇಸಿಗೆ ಎನಿಸುತ್ತದೆ. ಊಟದ ಆರಂಭದಲ್ಲಿ ಇದ್ದ ಆಗ್ರಹ ಊಟವಾದನಂತರ ಇರುವುದಿಲ್ಲ.  ತಿನ್ನುವ ಆಹಾರದಲ್ಲಿ ನಿರ್ಲಕ್ಷ್ಯ. ಕುಳಿತ ನೂರು ಮಂದಿಯಲ್ಲಿ ಎಲೆಯಲ್ಲಿ ಒಂದಗುಳೂ ಇಲ್ಲದಂತೆ , ಯಾವ ತಿಂಡಿ ಪದಾರ್ಥಗಳನ್ನೂ ಉಳಿಸದೆ ಊಟಮಾಡುವವರು ಕೇವಲ ಐದಾರು ಮಂದಿ. ಪ್ರತಿಯೊಬ್ಬರ ಎಲೆಯಲ್ಲೂ ಒಂದಲ್ಲ ಒಂದು ಆಹಾರ ಉಳಿಸಿ ಏಳುವಾಗ ಹಸಿವು ಮರೆತು ಹೋಗಿರುತ್ತದೆ.  ದಾನೆ ದಾನೆಪೆ ಲಿಖಾಹೈ ಖಾನೆವಾಲಾ ಕಾ ನಾಮ್  ಎಂದು ಹೇಳುತ್ತಾರೆ. ಪ್ರತಿಯೊಂದು ಧಾನ್ಯದಲ್ಲೂ ಭಗವಂತ ತಿನ್ನುವವರ ಹೆಸರನ್ನು ಬರೆದಿರುತ್ತಾನೆ. ಆದರೆ ಭಗವಂತನ ಕಲ್ಪನೆಯನ್ನು ಹುಸಿ ಮಾಡುವ ನಮ್ಮ ಪ್ರವೃತ್ತಿ ಇದೆಯಲ್ಲ,  ಭಗವಂತನ ಮೇಲಿನ ನಂಬಿಕೆಯನ್ನು ಹುಸಿಗೊಳಿಸುತ್ತದೆ. 

ವರ್ಷ ಸಂದು ಇಷ್ಟು ದೊಡ್ಡವರಾಗುತ್ತೇವೆ. ನಮ್ಮ ಹೊಟ್ಟೆಯ ಪ್ರಮಾಣ ನಮಗೆ ಅರಿವಿಲ್ಲ ಎಂದರೆ ವಿಚಿತ್ರಎನಿಸುತ್ತದೆ. ಆಹಾರವಿಲ್ಲದೇ ಸಾಯುವುದಕ್ಕಿಂತಲೂ ತಿಂದು ಸಾಯುವವರು ಹೆಚ್ಚಂತೆ. ನಮ್ಮ ನಡುವೆ ಇಂದು ತಿನ್ನುವುದಕ್ಕೆ ಹಲವು ಅರ್ಥಗಳು ಇರುತ್ತವೆ. ಪ್ರಾಣಿಗಳು ಕೇವಲ ಹಸಿವಿಗಾಗಿ ತಿನ್ನುತ್ತವೆ. ನಮಗದರೆ ಪರಿವೆ ಇಲ್ಲ. ಚಪಲಕ್ಕಾಗಿ ಹೊಟ್ಟೆ ತುಂಬಿದರೂ ಇಳಿಸಿಕೊಳ್ಳುತ್ತೇವೆ. ಕೆಲವೊಮ್ಮೆ ಆಹಾರ ಉಳಿತದೆ ಎಂದು ಕಸದ ಬುಟ್ಟಿಗೆ ಎಸೆಯುವುದನ್ನು ತಿಂದು ತೇಗುತ್ತೇವೆ. ಅರ್ಥಾತ್ ಕಸದ ಬುಟ್ಟಿ ನಮ್ಮ ಹೊಟ್ಟೆ.  ಹಲವು ಸಲ ನಾಗರಿಕ ಜೀವನ ಶೈಲಿಯಲ್ಲಿ ಹಿರಿಮೆಗಾಗಿ ತಿನ್ನುತ್ತೇವೆ. ಯಾರೋ ಒತ್ತಾಯ ಮಾಡಿ ಬಡಿಸಿದರೂ ಎಂದು ಬೇಡದೇ ಇದ್ದರೂ ಯಾರಿಗಾಗಿಯೋ ತಿಂದುಬಿಡುತ್ತೇವೆ. ಯಾರೋ ತಿನ್ನಬೇಕಾದ ಆಹಾರ ಬೇಡದೇ ಇದ್ದರೂ ನಮ್ಮ ಹೊಟ್ಟೆ ಸೇರುತ್ತದೆ. ಭೂಮಿ ಮೇಲೆ ಉಚಿತವಾಗಿ ಗಾಳಿ ಇದೆ. ನಮಗೆ ಎದೆ ತುಂಬ ಉಸಿರಾಡಬೇಕು ಎಂದನಿಸುವುದಿಲ್ಲ. ಆದರೆ ಆಹಾರ ಯಾಕೆ ತಿನ್ನಬೇಕು ಎಂದು ಅರ್ಥವಿಲ್ಲದೆ ತಿಂದು ತೇಗಿಬಿಡುತ್ತೇವೆ. 

ನಾನಂತೂ ಊಟಕ್ಕೆ ಕುಳಿತರೆ ಒಂದಗುಳೂ ಉಳಿಯದೇ ಊಟಮಾಡುತ್ತೇನೆ.  ಊಟದಲ್ಲಿ ಕೈ ನೀರು ತೆಗೆಯುವಾಗ ಚಿತ್ರಾವತಿ ಇಟ್ಟ ಒಂದೆರಡು ಕಾಳು ಬಿಟ್ಟರೆ ನಾನು ಯಾವುದೇ ಆಹಾರವನ್ನು ಉಳಿಸುವುದಿಲ್ಲ. ಎಷ್ಟು ಬೇಕೋ ಅಷ್ಟನ್ನೇ ಹಾಕಿಸಿಕೊಳ್ಳುತ್ತೇನೆ.  ಊಟದಲ್ಲಿ ಒತ್ತಾಯದ ಮೇಲೆ ಒತ್ತಾಯ ಮಾಡಿ ಬಡಿಸುವುದನ್ನು ಕಂಡರೆ ನನಗೆ ಸಿಟ್ಟು ಬರುತ್ತದೆ. ಎಷ್ಟು ಆತ್ಮೀಯರಾದರೂ ನನಗೆ ಅದು ಅಸಹನೆಯನ್ನು ತರುತ್ತದೆ. ನನಗೆ ಬೇಕೋ ಯಾವುದೇ ಸಂಕೋಚವಿಲ್ಲದೆ ಕೇಳಿ ತಿನ್ನುತ್ತೇನೆ. ಆದರೆ ಹೊಟ್ಟೆ ತುಂಬಿದರೂ ಸ್ವಲ್ಪ ಸ್ವಲ್ಪ ಎಂದು ಒತ್ತಾಯ ಮಾಡಿದರೆ ಬಹಳ ಅಸಹನೆಯಾಗುತ್ತದೆ. ಹಲವುಕಡೆ ನಾನು ಎಲೆ ಸ್ವಚ್ಛ ಮಾಡಿ ಏಳುವಾಗ ನನಗೆ ಬಡಿಸಿದ್ದು ಸಾಕಾಗಲಿಲ್ಲವೋ ಏನೋ ಎಂದು ಅನುಮಾನಿಸಿ ಎಲೆ ಖಾಲಿಯಾದ ತಕ್ಷಣ ಒತ್ತಾಯ ಮಾಡಿ ಪುನಃ ಬಡಿಸುವುದಕ್ಕೆ ಬರುತ್ತಾರೆ. ಎಲ್ಲವನ್ನೂ ತಿಂದರೂ ಕಷ್ಟ. ಎಲೆಯಲ್ಲಿ ಒಂದಷ್ಟು ಉಳಿಸಿಯೇ ಹೋದರೆ ಅದು ತೃಪ್ತಿಯ ಸಂಕೇತವಾಗುತ್ತದೆ.  ವಾಸ್ತವದಲ್ಲಿ ಹಾಗಲ್ಲ ಎಲೆ ಸ್ವಚ್ಛ ಮಾಡಿ ಊಟ ಮಾಡಿದರೆ ಅವರು ರುಚಿಯಿಂದಲೂ ಹಸಿವಿನಿಂದಲೂ ತೃಪ್ತರಾಗಿದ್ದಾರೆ ಎಂದರ್ಥ.  ಆಹಾರ ತಿನ್ನಬೇಕು. ಅದು ಆರೋಗ್ಯದ ಸಂಕೇತ. ಆಹಾರ ಸೇವಿಸಲು ಸಾಧ್ಯವಾಗದೇ ಇದ್ದರೆ ಅದು ರೋಗ ಲಕ್ಷಣ. ಹಾಗಿದ್ದು ಬೇಡದೇ ಇರುವುದನ್ನು ತಿನ್ನುವುದು ರೋಗಿಯಾಗುವ ಲಕ್ಷಣ. ಯಾರೇ ಆಗಲಿ ಅತಿಯಾಗಿ ಒತ್ತಾಯ ಮಾಡಿ ಬಡಿಸುವುದು ನನಗೆ ಸರಿಬರುವುದಿಲ್ಲ. ಒಂದು ತಪ್ಪಿದರೆ ಎರಡು ಸಲ ಕೇಳಬಹುದು.   ಆದರೆ ಬೇಡದೇ ಇದ್ದರೂ ಹಿಡಿಯದ ಚೀಲದಲ್ಲಿ ಸಾಮಾನು ತುಂಬಿಸಿದಂತೆ ಆಹಾರ ಇಕ್ಕುವುದು ಭಗವಂತನನ್ನು ಅಗೌರವಿಸಿದಂತೆ. ಅನ್ನ ಎಂದರೆ ಬ್ರಹ್ಮ. ಅದನ್ನುಬೇಡ ಎಂದು ಎಲೆಯಲ್ಲಿ ಬಿಟ್ಟು ಏಳುವುದು ಭಗವಂತನನ್ನು ತಿರಸ್ಕರಿಸಿದಂತೆ. ಊಟದ ಕೊನೆಯಲ್ಲಿ ಶ್ಲೋಕ ಹೇಳಿ ಭಗವಂತನನ್ನು ಸ್ಮರಿಸಿ ಮಾದೇವ ಎನ್ನುವುದಕ್ಕೆ ಅರ್ಥವಿಲ್ಲ. 

ಊಟದಿಂದ ಏಳುವಾಗ ಎಲ್ಲರ ಎಲೆಯನ್ನು ಗಮನಿಸುತ್ತೇನೆ. ಎಲ್ಲವನ್ನು ತಿಂದು ಏಳುವವರು ಬಹಳ ಕಡಿಮೆ. ಊಟಕ್ಕೆ ಕುಳಿತುಕೊಳ್ಳುವಾಗ ಇರುವ ಆಗ್ರಹ ಊಟದ ಕೊನೆಯಲ್ಲಿ ಇರುವುದಿಲ್ಲ. ಯಾರೂ ತಿನ್ನದ ಎಂಜಲನ್ನು ಸೃಷ್ಟಿ ಮಾಡಿ ಆಹಾರದ ಮೌಲ್ಯವನ್ನು ಮರೆತವರನ್ನು ಕಾಣುತ್ತೇನೆ. ಹೊಟ್ಟೆ ತುಂಬಿದರೂ ಇಂಗದ ಹಸಿವನ್ನು ಕಾಣುತ್ತೇನೆ. ಎಲ್ಲೆಂದರಲ್ಲಿ ಚಪಲಕ್ಕೋ ಇನ್ನಾವುದೋ ಕಾರಣಕ್ಕೋ ತಿನ್ನುವವರನ್ನು ಕಾಣುತ್ತೇನೆ.    ಆಗ ನನಗೆ ನಾರಾಯಣ ಎಂಬ ವೃದ್ದನ ನೆನಪಾಗುತ್ತದೆ. ಒಂದಗುಳು ಅನ್ನಕ್ಕೆ ಆ ಮುದುಕ ಕೊಟ್ಟ ಮೌಲ್ಯ ನೆನಪಾಗುತ್ತದೆ. ತಟ್ಟೆ ತೊಳೆದು ಆ ನೀರನ್ನು ಕುಡಿದು ತೃಪ್ತಿಯಿಂದ ತೇಗುವ ಅವರ ಸಂತೃಪ್ತ ಮುಖ ಕಣ್ಣೆದುರು ಬರುತ್ತದೆ. 





Saturday, November 4, 2023

ನಮ್ಮ ಚಿನ್ನು ಇನ್ನಿಲ್ಲ.

         ನಮ್ಮ ಚಿನ್ನು ಇನ್ನಿಲ್ಲ.  ಸುಮಾರು ಹನ್ನೆರಡು ವರ್ಷಗಳ ಹಿಂದೆ ನಮ್ಮ ಮನೆಗೆ ಬಂದ ಪುಟ್ಟ ಅತಿಥಿ.. ಚಿನ್ನು ಎಂಬ ಲಾಬ್ರಡರ್ ಹೆಣ್ಣು ನಾಯಿ. ಆದರೆ ಅದು ಕೇವಲ ನಾಯಿಯಾಗಿ ಅಲ್ಲ ಮನೆಯ ಚಿನ್ನುವಾಗಿ ಬೆಳೆಯಿತು. ಅವಳ ಚಟುವಟಿಕೆಗಳು ನಮ್ಮ ಚಟುವಟಿಕೆಗಳಾಗಿ  ಅವಳು  ನಮ್ಮೊಂದಿಗೆ ಬೆಳೆದು ಬಂದಳು.  ಆ ಚಿನ್ನು ಇನ್ನು ನೆನಪು ಮಾತ್ರ ಎನ್ನುವಾಗ ನಾವು ಗದ್ಗದರಾಗುತ್ತಿದ್ದೇವೆ. ಕಣ್ಣು ತೇವವಾಗುತ್ತದೆ. ಛೇ....ಸಂದು ಹೋಯಿತೇ? ಇನ್ನು ಬರಲಾರದೇ? 

            






    ಚಿನ್ನು  ಪುಟ್ಟ ಲಾಬ್ರಡರ್ ಮರಿಯನ್ನು ವರ್ಷಗಳ ಹಿಂದೆ ಮಗ ತಂದಾಗ ನಾವು ತಂದೆ ತಾಯಿಯರು ಸಾಕಷ್ಟು ಅಸಮಾಧಾನವನ್ನು ವ್ಯಕ್ತಪಡಿಸಿದ್ದೆವು. ಈ ನಗರದ ಸಂದಿಗೊಂದಿಯ ಮೂವತ್ತು ಚದರದಲ್ಲಿ ಅದಕ್ಕೂ ಒಂದು ಎಡೆಬೇಕಲ್ಲ? ಆದರೇನು ಮಗ ನಿಶ್ಚೈಯಿಸಿದ್ದ. ಇದು ತನ್ನೊಂದಿಗೆ ಇರುವುದೆಂದು ಸಾರಿ ಹೇಳಿದ. ನಮ್ಮ ಅಸಮಾಧಾನ ಕೇವಲ ಎರಡು ದಿನಕ್ಕೆ ಸೀಮಿತವಾಯಿತು. ಚಿನ್ನು ಮುದ್ದಾಗಿ ಬೆಳೆಯತೊಡಗಿದಳು. ಮಗನನ್ನು ಪ್ರೀತಿಸುವುದಾದರೆ ಅದನ್ನು ನಾವು ಇಷ್ಟಪಡಲೇ ಬೇಕು. ಮನೆಗೆ ಬಂದ ಸೊಸೆಯನ್ನು ಹೆತ್ತವರು ಅಂಗೀಕರಿಸುವಂತೆ  ಅವಳೊಂದು ಕುಟುಂಬದ ಸದಸ್ಯವಾಗಿ ಬದುಕು ಆರಂಭಿಸಿ ಬಿಟ್ಟಿಳು. ಪ್ರೀತಿ ಎಂಬುದರ ಪ್ರಭಾವ ಹಾಗಿರುತ್ತದೆ. ಆದರೆ ಚಿನ್ನು ಕೇವಲ ಆ ಅನಿವಾರ್ಯತೆಗೆ ಸೀಮಿತವಾಗಿಲ್ಲ. ಅದು ನಮ್ಮ ಮನಸ್ಸನ್ನೂ ಗೆದ್ದು ಬಿಟ್ಟಿತು. ಅದಕ್ಕೆ ಪಾಲಿನಂತೆ ಒಬ್ಬೂಬ್ಬರೂ ಕೈತುತ್ತು ಕೊಡುವುದಕ್ಕಾರಂಭಿಸಿದೆವು ಎನ್ನುವುದಕ್ಕಿಂತ ಅದು ತನ್ನ ಹಕ್ಕನ್ನು ಪ್ರೀತಿಯಿಂದ ಚಲಾಯಿಸತೊಡಗಿತು. ದಿನಾ ವಾಕಿಂಗ್ ಹೋಗುವಾಗ ಸಂಗಾತಿಯಾಯಿತೋ ಇಲ್ಲ ಅದನ್ನು ಕರೆದುಕೊಂಡು ಹೋಗುವುದರಲ್ಲಿ ಸಿಗುವ ಆನಂದವೋ ಅಂತೂ ಮನೆ ಮಂದಿಯ ದಿನಚರಿಯ ಒಂದು ಅವಿಭಾಜ್ಯ  ಅಂಗ ಚಿನ್ನುವಾದಳು.  ಆರಂಭದಲ್ಲಿ ಮನೆಯ ಹೊರಗಿನ ಹಜಾರದಲ್ಲಿಅವಳನ್ನು ಕಟ್ಟಿಹಾಕುತ್ತಿದ್ದರೆ ನಂತರ   ಅದು ಬಂಧನವಾಗಬಹುದು ಎಂದುಕೊಂಡಾಗ ಮನೆಯ ಒಂದು ಮಹಡಿ ಅವಳದ್ದೇ ಸಾಮ್ರಾಜ್ಯವಾಯಿತು. ಸುಸ್ತಾಗಿ ಕುಳಿತಾಗ ಅದು ಬಂದು ಉಪಚರಿಸುವಂತೆ ಮೈ ಮೇಲೆ ಹತ್ತಿ ಮುದ್ದಿಡುವಳು. ಅವಳ ಬೆಚ್ಚಗಿನ ಮೈ....ಚಳಿಗೆ ಬಿಸಿಯನ್ನು ಒದಗಿಸುತ್ತಿತ್ತು. ಸದಾ ಮಗನ ಜತೆಯಲ್ಲಿರುತ್ತಿದ್ದವಳು ಒಂದರ್ಥದಲ್ಲಿ ಅದು ಹೇಗೆ ಪ್ರೀತಿಸಬೇಕು ಎಂಬುದನ್ನು ತೋರಿಸಿಕೊಟ್ಟಿಳು. 

            ಚಿನ್ನು ನಮ್ಮೊಂದಿಗೆ ಈಗ ಇಲ್ಲ ಎಂದರೆ ಅದೊಂದು ಶೂನ್ಯತೆಯ ಅನುಭವ. ಮನೆಯ ಸಂದಿಗೊಂದಿಗಳಲ್ಲಿ ಆಕೆ ಇನ್ನೂ ಮುದುರಿ ಮಲಗಿದಂತೆ ಅನುಭವಾಗುತ್ತದೆ. ಆಕೆಯ ಬಿಸಿಯುಸಿರು ಇನ್ನೂ ಮಾರ್ದನಿಸುತ್ತದೆ. ಆಕೆಯ ಪ್ರೀತಿ ಸಲುಗೆ ಅದೊಂದು ಮರೆಯಲಾಗದ ಬಂಧನವಾಗುತ್ತದೆ. ಆಕೆಯ ಬಾಯಿಯಲ್ಲಿ ಕೈ ಇಟ್ಟರೂ ಸುಮ್ಮನಿರುತ್ತಿದ್ದ ಆಕೆಯ ಪ್ರೀತಿ ಮಮಕಾರ....ನೀ ಎನೂ ಮಾಡು ನಾನು ನಿನ್ನೊಂದಿಗೆ ಇರುತ್ತೇನೆ ಎನ್ನುವ ಅರ್ಪಣಾ ಭಾವ ಎಲ್ಲ ತಿರಸ್ಕಾರವನ್ನು ತಿರಸ್ಕರಿಸಿ ದೂರಮಾಡುವಂತೆ ಪ್ರೇರೆಪಿಸಿಬಿಡುತ್ತಿತ್ತು. ಆಕೆ ಕೈ ಬಿಟ್ಟು ಹೊದಳು ಎಂದರೆ ಹೃದಯದ ಒಂದು ಭಾಗ ಕಳಚಿಕೊಂಡಂತೆ.  ಮರೆಯಲಾಗದ ಈ ನೆನಪುಗಳನ್ನು ಹೇಗೆ ಮರೆಯಲಿ? ಆಕೆ ನಮಗಾಗಿ ಇದ್ದಳೋ ನಾವು ಆಕೆಗಾಗಿ ಇದ್ದೆವೋ ಒಂದೂ ಅರ್ಥವಾಗುವುದಿಲ್ಲ. ಆಕೆಯಿಂದ ಏನು ಪಡೆದಿದ್ದೇವೋ ಅವೆಲ್ಲವೂ ಭಾವನೆಗಳ ವ್ಯಾಪಾರ. ಲಾಭವಿಲ್ಲದ ವ್ಯಾಪಾರ. ಇಲ್ಲಿ ಪ್ರೀತಿ ಭಾವನೆಗಳೇ ಸರಕುಗಳು. ಅದಕ್ಕೆ ಮೌಲ್ಯ ತೂಕ ಯಾವುದು ನಿರ್ಧರಿಸಲಾಗುವುದಿಲ್ಲ. 

            ನನ್ನ ದೊಡ್ಡ ಮಗ ಆಗಿನ್ನು ವ್ಯಾಸಂಗ ಮಾಡುತ್ತಿದ್ದ, ಆತನ ಅತೀವ ಆಸಕ್ತಿಯ ಮುಖಾಂತರ ಈ ಅತಿಥಿ ಮನೆಯ ಸದಸ್ಯನಾಯಿತು. ಅವನೂ ಅಷ್ಟೇ ನಮ್ಮ ಮನೆಯ ಮೂರನೆ ಮಹಡಿಯಲ್ಲಿ ಅವಳಿಗಾಗಿ ಜಾಗವನ್ನು ಮೀಸಲಿರಿಸಿ ಅಲ್ಲಿ ಆತನದ್ದೇ ಸಾಮ್ರಾಜ್ಯ. ಚಿನ್ನುವಿನ ಬೆಳವಣಿಗೆ ಪ್ರತೀ ಹಂತವೂ ಆತನಿಗೆ ಒಂದು ಅಧ್ಯಯನವಾಗಿತ್ತು. ಅದು ಯಾವಾಗ ಎದ್ದು ಬರ್ತದೆ, ಅದು ಹೇಗೆ ನಿದ್ರೆ ಮಾಡುತ್ತದೆ, ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು, ಅದರ ಬಯಕೆಗಳು ಯಾವಾಗ ಯಾವರೀತಿ ಇರುತ್ತದೆ ಹೀಗೆ  ಅದರ ವರ್ತನೆಯನ್ನೆಲ್ಲಾ ಗೂಗಲ್ ಮಾಡಿ ಅಂತರ್ಜಾಲದಲ್ಲಿ ಜಾಲಾಡಿ ಅದನ್ನು ಅಳವಡಿಸಿಕೊಳ್ಳುತ್ತಿದ್ದ. ಮೊದಲ ದಿನ ಮೂರನೆ ಮಹಡಿಗೆ ಹೋದಾಗ  ಪುಟ್ಟ ಮರಿ ಚಿನ್ನು ಎಲ್ಲಾ ಕಡೆ ಉಚ್ಚೆ ಹೊಯ್ದು ಎಲ್ಲ ಕಡೆ ಅದರದ್ದೆ ವಾಸನೆ. ಆಗ ನಾವು ಹತಾಶರಾಗಿದ್ದೆವು. ಊರಲ್ಲಿಯಾದರೆ ಇಂತಹ ವಿಷಯಗಳಿಗೆ ಸಾಕಷ್ಟು ಸೌಕರ್ಯ ಇರುತ್ತದೆ. ಆದರೆ ಇಲ್ಲಿ ಮೂವತ್ತು ಚದರದಲ್ಲಿ ಇದನ್ನು ಸುಧಾರಿಸುವುದೆಂತು? ನಮ್ಮಲ್ಲಿ ಹಲವರಿಗಂತು ಚಿನ್ನುವಿನ ಆವಶ್ಯಕತೆ ಇರಲಿಲ್ಲ. ಆದರೆ ಮಗನ ಇರಾದೆ ಬೇರೆಯದೇ ಆಗಿತ್ತು. ಚಿನ್ನು ಅವನ ಕೈಯಲ್ಲಿ ಪಳಗತೊಡಗಿದಳು. ಮುದ್ದಾದ ಆಕೆ ಬುದ್ದಿ ಕಲಿಯತೊಡಗಿದಳು. ಮೊದಲೇ ಲಾಬ್ರಡಾರ್ ತಳಿ ಅದು ಮನೆಯವರಿಗೆ ಬೇಗ ಹೊಂದಿಕೊಳ್ಳುತ್ತದೆ. ಅದರಲ್ಲೂ ಮಕ್ಕಳ ಮನಸ್ಸನ್ನು ಸೆಳೆಯುವುದು ಅದರ ರಕ್ತಗತ ಗುಣ.  ಅದಕ್ಕೆ ನಿಗದಿತ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುವುದಕ್ಕೆ ಕಲಿಸಿದ. ಅಚ್ಚುಕಟ್ಟಾಗಿ ಊಟ ತಿಂಡಿಯನ್ನು ಒದಗಿಸಿದ. ಅದಕ್ಕಾಗಿ ರಾಯಲ್ ಚಿನ್ ಬಿಸ್ಕಟ್ ತರಿಸಿದ. ಹೀಗೆ ಅದರದ್ದೇ ಒಂದಷ್ಟು ವಸ್ತುಗಳು ಮನೆಯ ಅಂಗವಾಗಿ ಹೋದವು. 

            ಮಗನ ಭಾವನೆಯ ಮೌಲ್ಯಗಳನ್ನು ತೋರಿಸಿಕೊಟ್ಟವಳು ಚಿನ್ನು. ಆತನೊಂದಿಗಿನ ಅವಳ ಸಂಭಂಧದ ಆಳ ವಿಸ್ತಾರ ಕಲ್ಪಿಸುವುದಕ್ಕೆ ಸಾಧ್ಯವಿಲ್ಲ. ಮನೆಯ ರಸ್ತೆಯತುದಿಯಲ್ಲಿ ಆತನ ಬೈಕಿನ ಸದ್ದು ಕೇಳಿಸಿದರೆ ಮನೆಯ ಯಾವುದೋ ಮೂಲೆಯಲ್ಲಿದ್ದ ಇವಳ ಕಿವಿ ನಿಗುರಿ ಬಿಡುತ್ತಿತ್ತು. ಒಂದೇ ನೆಗೆತಕ್ಕೆ ಹೊರಬಂದು ಮೂರನೇ ಮಹಡಿಯಿಂದ ಕೆಳಗೆ ನೋಡಿ ಬೊಗಳತೊಡಗುತ್ತಿದ್ದಳು. ಆತ ಬರಬೇಕಾದರೆ ಆತನ ಭುಜದೆತ್ತರಕ್ಕೆ ಹಾರಿ ಆತನ ಮುಖವನ್ನೆಲ್ಲ ಮುದ್ದಿಸಿ ತೇವ ಮಾಡುತ್ತಿದ್ದಳು. ಆತ ಎಸೆದ ಚೆಂಡನ್ನು ಓಡಿ ಹೋಗಿ ಕಚ್ಚಿ ತಂದುಕೊಡುತ್ತಿದ್ದಳು. ಹಿಂದೆ ಅಲುಗಾಡುವ ಬಾಲ ಎಲ್ಲಿ ಕಳಚಿ ಬೀಳುವುದೋ ಎಂದನಿಸುತ್ತಿತ್ತು. 

                ಪ್ರಾಣಿಗಳಲ್ಲಿ ನಾಯಿ ಎಂಬುದು ಒಂದು ವಿಚಿತ್ರ ಸ್ವಭಾವದ ಪ್ರಾಣಿ. ಬಹುಶಃ ಭಾವನೆಗಳನ್ನು ಇದರಂತೆ ವ್ಯಕ್ತ ಪಡಿಸುವ ಪ್ರಾಣಿ ಬೇರೆ ಇಲ್ಲ. ನೋವು ನಲಿವು ಎಲ್ಲವನ್ನೂ ಬಹಿರಂಗ ಪಡಿಸುವ ನಾಯಿಗೆ ಮಾತು ಒಂದು ಬರುವುದಿಲ್ಲ....ಆದರೆ ಅದು ವ್ಯಕ್ತ ಪಡಿಸುವ ಭಾಷೆಗೆ ಮಾತಿನ ಅಗತ್ಯವೇ ಇರುವುದಿಲ್ಲ. ಕಣ್ಣು ಅಗಲಿಸಿ ಕಿವಿನಿಮಿರಿಸಿ ಬೇಕಾದಲ್ಲಿ ಬಾಲ ಅಲ್ಲಡಿಸಿ ಶರೀರವನ್ನು ಕುಣಿಸಿ...ಯಾವ ನಟ ಸಾರ್ವಭೌಮನಿಗೂ ಕಡಿಮೆ ಇಲ್ಲ ಜನ್ಮ ಜಾತ ಪ್ರತಿಭೆ. ಸ್ವಭಾವತಃ ನಾಯಿ ಅತ್ಯಂತ ಹೆದರಿಕೆಯ ಸ್ವಭಾವದ ಪ್ರಾಣಿ. ಪ್ರತೀಕ್ಷಣವೂ ಅದಕ್ಕೆ ಏನೋ ಆಗಿಬಿಡುತ್ತದೆ ಎಂಬ ಆತಂಕವಿರುತ್ತದೆ. ಹಾಗಾಗಿ ಹೊಸದು ಕಂಡಕೂಡಲೇ ಅದು ಜಾಗೃತವಾಗುತ್ತದೆ. ಬೊಗಳುತ್ತದೆ. ಆದರೆ ಅದು ತನ್ನದೂ ಎಂಬ ಭಾವನೆ ಬಂತೋ ಅದಕ್ಕಾಗಿ ಪ್ರಾಣ ಕೊಡಲೂ ಹಿಂಜರಿಯುವುದಿಲ್ಲ.  ಈ ಎಲ್ಲ ಸ್ವರೂಪಗಳು ಚಿನ್ನುವಿನಲ್ಲಿತ್ತು. ಈಕೆಯ ವಿಚಾರಗಳು ಹೇಳುವುದಕ್ಕೆ ತೊಡಗಿದರೆ ಸ್ವರ ಕಂಪಿಸುತ್ತದೆ. ಬೆರೆಯುವುದಕ್ಕೆ ತೊಡಗಿದರೆ ಕೈ ನಡುಗುತ್ತದೆ. ಭಾವನೆಗಳ ಮಹಾಪೂರ ಪುಟ್ಟ ಹೃದಯದಲ್ಲಿ ನಿಲ್ಲಲಾಗದೆ ಹೊರ ಚಿಮ್ಮುತ್ತದೆ. ಅದರಲ್ಲಿನ ಭಾವನೆಗಳನ್ನು ಹೆಕ್ಕಿ ತೆಗೆಯುವುದೇ ಒಂದು ಸಾಹಸ. 

            ವಾರಗಳ ಹಿಂದೆ ವಯೋ ಸಹಜವಾಗಿ ಆಕೆಯ ದೇಹ ಕೃಶವಾಗತೊಡಗಿದವು. ಮೊದಲಿನಂತೆ ಆಕೆ ಓಡಾಡುವುದನ್ನು ನಿಲ್ಲಿಸಿ ಬಹಳ ಸಮಯಗಳು ಕಳೆಯಿತು. ಹೆಚ್ಚಾಗಿ ಮಲಗಿಕೊಂಡೇ ಇರುತ್ತಿದ್ದಳು. ಮಗ ಬಿಟ್ಟರೆ ಪತ್ನಿ ಆಕೆ ಅತ್ಯಂತ ಹತ್ತಿರದ ಜೀವಗಳು. ಆಕೆಯಂತೂ ಅದರ ಚಾಕರಿಯಲ್ಲಿ ತನ್ನನ್ನೇ ತಾನು ತೇದುಕೊಂಡಳು. ಕೊನೆಯ ಉಸಿರಿನ ತನಕವೂ ಅದನ್ನು ಪ್ರೀತಿಯಿಂದ ಕಾಣಬೇಕು. ಸಾಧ್ಯವಾದಷ್ಟು ಉಪಚರಿಸಬೇಕು ಇದೊಂದೇ ನಿರ್ಧಾರ. ಒಂದು ತುತ್ತು ಆಹಾರ ತಿಂದರೂ ತೊಟ್ಟು ನೀರು ಕುಡಿದರೂ ತನ್ನ ದೇಹಕ್ಕೆ ಸೇರಿಬಿಟ್ಟಿತೋ ಎನ್ನುವ ತೃಪ್ತಿ ಅವಳದು. ದಿನಾ ಆಸ್ಪತ್ರೆಯ ಅಲೆದಾಟದಲ್ಲಿ ಬಸವಳಿದರೂ ಚಿನ್ನುಗಾಗಿ ಎಂಬ ಭಾವನೆ ದೃಢವಾಗಿರುತ್ತಿತ್ತು. ಅಲ್ಲಿ ದಣಿವೆಂಬುದು ಅರಿವಿಗೆ ಬರುತ್ತಿರಲಿಲ್ಲ. ಮೊನ್ನೆ ರಾತ್ರಿ ಹೋದಾಗಲೇ ವೈದ್ಯರು ಒಂದು ರಾತ್ರಿ ನಿಗಾವಹಿಸೋಣ ನಾಳೆ ಬೆಳಗ್ಗೆ ತೀರ್ಮಾನಿಸಿದರಾಯಿತು ಎಂದರು. 

            ನಿನ್ನೆ ವೈದ್ಯರು ಬೆಳಗ್ಗೆಯೇ ಹೇಳಿದ್ದರು ಇನ್ನು ಇದರ ಬಗ್ಗೆ ನಿರೀಕ್ಷೆ ಇಲ್ಲ.  ಯಾಕೆ ಅದಕ್ಕೆ ನರಕ ಯಾತನೆ , ಇಂಜಕ್ಷನ್ ಕೊಟ್ಟು ಮುಗಿಸಿ ಬಿಡೋಣ ಎಂದರು. ನಮಗಂತೂ ಹೃದಯವನ್ನೇ ಚುಚ್ಚಿದ ಅನುಭವ.  ಚುಚ್ಚಿ ಮುಗಿಸುವುದೆಂದರೆ ನಾವು ಚಿನ್ನುವನ್ನು ಬೇಡ ಎಂದಂತೇ ಅಲ್ಲವೇ? ಅದು ಹೇಗೆ ಸಾಧ್ಯ.  

            ಕೊನೆಗೆ ಸಮ್ಮತಿಸಬೇಕು. ಇನ್ನು ಆಕೆಗೆ ನರಕ ಯಾತನೆ ಯಾಕೆ. ಎಲ್ಲರೂ ನೀರು ಕುಡಿಸಿದೆವು. ಎಲ್ಲರೂ ಕೊಟ್ಟ ನೀರನ್ನು ಪ್ರಜ್ಞೆ ಇಲ್ಲದೇ ಇದ್ದರು ಆಕೆ ಕುಡಿದಳು.  ಅದು ವರೆಗೆ ಇದ್ದ ಮಗ ಮನೆಗೆ ಹೋಗಿದ್ದ. ನಾವೆಲ್ಲ ವೈದ್ಯರ ಬರುವುಕೆಯನ್ನು ಕಾಯುತ್ತಿದ್ದೆವು. ಚಿನ್ನು ಪ್ರಜ್ಞಾಹೀನಳಾಗಿ ಕೇವಲ ಏದುಸಿರುಬಿಡುತ್ತಾ ಮಲಗಿದ್ದಳು. ಮೊದಲಾದರೆ ನಾವು ಬಂದಾಗ ಏನಿಲ್ಲ ಎಂದರೂ ಬಾಲ ಅಲ್ಲಾಡಿಸಿಬಿಡುತ್ತಿದ್ದಳು. ಈಗ ಸಂವೇದನೆಯೇ ಇಲ್ಲ. ತಾಸು ಕಳೆದು ಮಗ ಹೆಂಡತಿ ಜತೆಗೆ ಬಂದ. ಆತ ಬಂದಾಗ ಹೊಸತೊಂದು ಚೆಂಡನ್ನು ಕೊನೆಯ ಕೊಡುಗೆಯಾಗಿ ಚಿನ್ನುವಿಗಾಗಿ ತಂದಿದ್ದ.  ಅದನ್ನು ಕೊಟ್ಟು ಮೈತಡವಿದ ಅದೊಮ್ಮೆ ಕಣ್ಣು ಬಿಟ್ಟಳು.  ಮಗನ ಜತೆಗಿನ ಬಾಂಧವ್ಯ ಅದನ್ನು ಎಚ್ಚರಿಸಿತ್ತು. ಆತ ನೀರು ಕುಡಿಸಿದ. ಕುಡಿದಳು. ಹಾಗೆ ಎತ್ತಿದ ಕೊರಳು ಬಾಗಿತು ಒಂದೆರಡು ನಿಡಿದಾದ ಉಸಿರು ಹೊರಹಾಕಿದಳು. ಕಣ್ಣು ಸುತ್ತಲೂ ತಿರುಗಿಸಿ ಕೊನೆಯ ಯಾತ್ರೆಯನ್ನು ಮುಗಿಸಿದಳು.   ಒಂದು ವಾರದ ನರಕ ಯಾತನೆ ಅನುಭವಿಸಿದಳು. ಆಸ್ಪತ್ರೆ ಬೆಡ್ ಮೇಲೆ ತನ್ನ ಉಸಿರನ್ನು ಚೆಲ್ಲಿ ಬಿಟ್ಟು ನಿಶ್ಚಲಳಾದಳು. ತಬ್ಬಿಕೊಂಡಾಗ ಬಿಸಿಯನ್ನು ಉಣಿಸುತ್ತಿದ್ದ ಆ ಮೈ ತಣ್ಣಗಾಯಿತು. ಚಿನ್ನು ಬಾರದ ಲೋಕಕ್ಕೆ ಸರಿದು ಹೋದಳು.  ಇನ್ನು ಚಿನ್ನು ನೆನಪು ಮಾತ್ರ ಎಂದುಕೊಂಡಾಗ ಹೃದಯ ಭಾರವಾಗುತ್ತದೆ. ಕಣ್ಣು ಮಂಜಾಗುತ್ತದೆ. ಆಕೆಯ ಪ್ರೀತಿ ಇನ್ನೆಲ್ಲಿ ಸಿಗಬಹುದು. ನಮಗೆಲ್ಲ ವಿದಾಯ ಹೇಳಿ ಸುಖವಾಗಿರಿ.....ನನ್ನನ್ನು ಅಗಾಗ ನೆನಪಿಸುತ್ತಾ ಇರಿ. ಮರೆಯಬೇಡಿ ಎಂದಂತೆ ಭಾಸವಾಗುತ್ತದೆ. ಆಕೆ ಕೊಟ್ಟ ಪ್ರೀತಿಗೆ ನಾವು ಅಷ್ಟಾದರೂ ಮಾಡಲೇಬೇಕು. ಚಿನ್ನು...ಮತ್ತೊಮ್ಮೆ ಹುಟ್ಟಿ ಬಂದರೆ.......ಈ ಹೃದಯಗಳಲ್ಲಿ ತುಂಬಿಕೊಳ್ಳುವುದಕ್ಕೆ  ಇನ್ನೂ ಜಾಗವಿದೆ. 





Sunday, October 29, 2023

ವೈದಿಕ ಭೋಜನ

  ಕಳೆದ ವಾರ ಜಯನಗರದಿಂದ ಮೆಟ್ರೋದಲ್ಲಿ ಬರುವಾಗ ಬಸವನಗುಡಿಯಿಂದ ಒಬ್ಬರು ವೃದ್ದರು ಹತ್ತಿದವರು ನನ್ನ ಬಳಿಯೇ ಕುಳಿತರು. ನೋಡಿದರೆ ಬ್ರಾಹ್ಮಣ ಎಂಬುದರಲ್ಲಿ ಅನುಮಾನವಿಲ್ಲ. ವೃದ್ಧರಾದರೂ ಶರೀರದಲ್ಲಿ ಬಹಳ ಕಾಠಿಣ್ಯ ವಿತ್ತು. ಒಂದು ರೀತಿಯ ದೃಢತೆ ಇತ್ತು. ಬಿಳಿ ಪಂಚೆ ಒಂದು ಶಲ್ಯ ಮುಸುಕಾದ ಒಂದು ಶರ್ಟು ಕೈಯಲ್ಲಿ ಒಂದು ಚಿಕ್ಕ ಚೀಲ ಇತ್ತು. ಬಳಿಯಲ್ಲಿ ಕುಳಿತ ನನ್ನಲ್ಲಿ ಮಾತನಾಡುವುದಕ್ಕೆ ತೊಡಗಿದರು. ಅದು ಪಿತೃ ಪಕ್ಷ, ಅದೇ ಕಾರ್ಯಕ್ರಮಕ್ಕೆ ಹೋಗಿ ಬರುತ್ತಿದ್ದರು. ಮೊದಲೆಲ್ಲ ಇಂತಹ ಕಾರ್ಯಕ್ರಮಕ್ಕೆ ಹೋದವರು ಒಂದು ರೀತಿಯ ತಾತ್ಸಾರವನ್ನು ಅನುಭವಿಸುವುದನ್ನು ಕಣ್ಣಾರೆ ಕಂಡಿದ್ದೇನೆ. ಮನೆಯ ಕತ್ತಲೆಯಲ್ಲಿ ಊಟ ಮಾಡಿ ಅಲ್ಲಿಂದಲೇ ಎಲ್ಲೋ ಕರಗಿ ಕಣ್ಮರೆಯಾಗುತ್ತಿದ್ದರು. ಒಂದು ರೀತಿಯಲ್ಲಿ ಮುಖ ತೋರಿಸುತ್ತಿರಲಿಲ್ಲ.  ಆದರೆ ಈಗ ಕಾಲ ಬದಲಾಗಿದೆ, ಅಂದರೆ ಗೌರವ ಸಿಗುತ್ತದೆ ಎಂದಲ್ಲ, ಹೀಗೆ ಹೋಗುವವರ ಸಂಖ್ಯೆ ಬಹಳಷ್ಟು ಲುಪ್ತವಾಗಿ ಇಲ್ಲವೇ ಇಲ್ಲ ಎನ್ನುವಂತಹ ಸ್ಥಿತಿ.  ಈಗ ಶಾಸ್ತ್ರಕ್ಕೆ ಏನೋ ಒಂದು ಪರಿಹಾರವನ್ನು ಕಂಡುಕೊಂಡು ಸೀಯಾಳ ಎಲೆ ವಸ್ತ್ರ ಇಟ್ಟು ಬ್ರಾಹ್ಮಣ ಆವಾಹನೆಯಾಗಿಬಿಡುತ್ತದೆ. 

  ನಮ್ಮ ಬಾಲ್ಯದಲ್ಲಿ ಯಾವುದಾದರೇನು ಹೊಟ್ಟೆ ತುಂಬ ಊಟ ಸಿಗುತ್ತದಲ್ಲಾ ಎಂದು ಮೈಲು ಗಟ್ಟಲೆ  ಇಂತಹ ಕಾರ್ಯಕ್ರಮಕ್ಕೆ ನಡೆದು ಹೋಗುತ್ತಿದ್ದದ್ದು ನೆನಪಾಗುತ್ತದೆ. ಅದೆಷ್ಟು ಸಲ ಗುಂಪೆ ಗುಡ್ಡೆ ಹತ್ತಿ ಇಳಿದಿದ್ದೇವೋ ಗೊತ್ತಿಲ್ಲ. ಬೆಳಗ್ಗೆ ಮನೆಯಲ್ಲಿ ಇದ್ದರೆ ಉಂಟು ಇಲ್ಲದಿದ್ದರೆ ಇಲ್ಲ ಎಂದು ಸಿಕ್ಕಿದ್ದು ತಿಂದು ನಡೆಯುವುದಕ್ಕೆ ತೊಡಗಿದರೆ ಮೈಲಿ ನಡೆದು ವೈದಿಕ ಕ್ರಿಯೆ ನಡೆಯುವಲ್ಲಿಗೆ ತಲಪುವಾಗ ಮಧ್ಯಾಹ್ನವಾಗುತ್ತಿತ್ತು. ನಾವು ಬಾಲಕರು. ಯಾರ ಪರಿಚಯವೂ ಇರುತ್ತಿರಲಿಲ್ಲ. ಸಮಯವಾದಾಗ ಎಲ್ಲರ ಜೊತೆ ಊಟಕ್ಕೆ ಕುಳಿತುಬಿಡುವುದು.  ಯಾರ  ಪರಿಚಯ ಇಲ್ಲದಿದ್ದರೆ ಏನು, ಹೊಟ್ಟೆ ತುಂಬ ಊಟದ ಪರಿಚಯವಂತೂ ಆಗಿಬಿಡುತ್ತಿತ್ತು. ಅದೂ ....ಸಾಕು ಸಾಕು ಎನ್ನುವಷ್ಟು ಊಟ. ಮತ್ತೆ ಕೈಯಲ್ಲಿ ಒಂದಷ್ಟು ಚಿಲ್ಲರೆ ನಾಣ್ಯಗಳು. ನಾವೆಲ್ಲಆ ಪ್ರಾಯದಲ್ಲಿ  ಕೈಯಲ್ಲಿ ನಮ್ಮದೇ ಆದ ಕಾಸು ಕಂಡವರೇ ಅಲ್ಲ. ಒಂದು ವೇಳೆ ಕೈಯಲ್ಲಿ ಹಣ ಇದ್ದರೆ ಅದು ಚಿಲ್ಲರೆ ಕಾಸಾದರೂ ಹಿರಿಯರ ತನಿಖೆ ಇರುತ್ತಿತ್ತು.  ಸರಕಾರ ಆದಾಯ ತೆರಿಗೆ ಪರೀಕ್ಷೆ ಮಾಡಿದ ಹಾಗೆ.  ಈ ಕಾಸು ಮನೆಗೆ ಬಂದು ಹಳೆಯ ಡಬ್ಬದಲ್ಲಿ ತೆಗೆದಿಟ್ಟು ದಿನಕ್ಕೆ ಹತ್ತು ಬಾರಿ ಎಣಿಕೆ ಮಾಡುತ್ತಿದ್ದೆವು. ಆದರೆ ಮೊದಲು ನಮಗೆ ಹೊಟ್ಟೆ ತುಂಬ ಆಹಾರವೇ ಪ್ರಧಾನವಾಗಿತ್ತು. ಆದರೂ ಎಡಕೈಗೆ ಸಿಗುವ ಚಿಕ್ಕಾಸು ನಾಣ್ಯ ಬಹಳ ಖುಷಿಯನ್ನುಕೊಡುತ್ತಿತ್ತು.  ಇತ್ತೀಚೆ ಯಾರದೋ ವೈದಿಕ ಕಾರ್ಯಕ್ರಮಕ್ಕೆ ಯಾವುದೋ ಕೈವಲ್ಯ ಧಾಮಕ್ಕೆ ಹೋಗಿದ್ದೆ. ಊಟ ಮಾಡಿ ಹೊರಗೆ ಬರುವಾಗ ಯಾರೋ ಒಬ್ಬರು ಹಲವರು  ಕೈ ಒಡ್ಡುತ್ತಿದ್ದರು. ಇಲ್ಲಿ ಊಟಕ್ಕಿಂತಲೂ ಕಾಸು ಪ್ರಧಾನವಾದಂತೆ ಅನಿಸಿತ್ತು. ಕ್ರಿಯಾ ಭಾಗದಲ್ಲಿ ಅಷ್ಟೋ ಇಷ್ಟೊ ದಾನ  ಸಿಕ್ಕಿದರೂ ಹೀಗೆ ಭಿಕ್ಷೆ ಬೇಡುವುದು ಕಾಣುವಾಗ ಭಿಕ್ಷೆ ದಾನವಾಗುವುದು ಹೇಗೆ ಎಂಬ ಯೋಚನೆ ಬರುತ್ತದೆ. 

ವೃದ್ದರಲ್ಲಿ ನನ್ನ ಅನುಭವ ಹೇಳಿದೆ. ಕಾಲ ಬದಲಾಗಿದೆ ಎನ್ನುವುದಕ್ಕಿಂತಲೂ ಮನುಷ್ಯ ಬದಲಾಗಿದ್ದಾನೆ ಎನ್ನುವುದು ಸರಿ. ಅವರು ಹೇಳಿದರು, ಬದಲಾಗಬೇಕು, ಎಲ್ಲವೂ ಅಂದರೆ ಎಲ್ಲವೂ  ಮೊತ್ತ ಬದಲಾಗಬೇಕು, ಯಾಕೆಂದರೆ ಈಗ ಉಳಿದಿರುವಂತಹುದು ಒಂದೂ ಇಲ್ಲ. ಎಲ್ಲವನ್ನು ನಾವು  ಕಳೆದುಕೊಂಡಾಗಿದೆ.  ಬದಲಾಗಬೇಕು ಎಂಬುದೇನೋ ಸತ್ಯ . ಆದರೆ ನಾವು ಹೇಗೆ ಬದಲಾಗಬೇಕು ಎಂಬುದೇ ಮರೆತು ಹೋಗಿದೆ. ಸ್ಮರಣೆಗೆ ಬರಲಾದಷ್ಟು ಬದಲಾಗಿ ಹೋಗಿದ್ದೇವೆ. ಮೊದಲು ಯಾವುದಾದರೇನು ಊಟ ಎಂದರೆ ಸಾಕು ಎಂದುಕೊಂಡಿದ್ದರೆ ಈಗ ಊಟದಲ್ಲೂ ಆಯ್ಕೆ ಮಾಡುತ್ತಿದ್ದೇವೆ. ವೈದಿಕವೋ ತೀರ ಹತ್ತಿರದ ಕುಟುಂಬದೊಳಗಿದ್ದರೆ ಮಾತ್ರ ಹೋಗುತ್ತಿದ್ದೇವೆ. ವಿಚಿತ್ರವೆಂದರೆ ಊಟದ ವೈವಿಧ್ಯತೆಯೋ ಹಸಿವಿನ ವೆತ್ಯಾಸವೋ ಅರಿವಾಗುವುದಿಲ್ಲ. 

Wednesday, October 4, 2023

ಭ್ರಮರಾಂಬಿಕೆಯ ಮಡಿಲಲ್ಲಿ ಭ್ರಮರವಾಗಿ

        ಬಹಳ ಸಮಯದಿಂದ ಬೆಂಗಳೂರಲ್ಲಿ ಕುಳಿತು ಯೋಚಿಸುತ್ತಿದ್ದೆ. ಊರಿಗೆ ಹೋದರೆ ಕಟೀಲು ಭ್ರಮರಾಂಬಿಕೆಯ ಸನ್ನಿಧಿಗೆ ಹೋಗಬೇಕು ಅಂತ. ಯಾಕೆಂದರೆ ಕಟೀಲು ದೇವಸ್ಥಾನದ ಜೊತೆಗಿರುವ ಭಾವನಾತ್ಮಕ ಸಂಬಂಧಗಳು ಹಲವಿದೆ. ಅದನ್ನೆಲ್ಲ ನೆನಪಿಸಿಕೊಳ್ಳಬೇಕು. ಆದರೆ ಪ್ರತಿ ಸಲ ಊರಿಗೆ ಹೋದಾಗ ಸಮಯ ಹೊಂದಾಣಿಕೆಯಾಗದೆ ಹೋಗುವ ಅವಕಾಶ ಸಾಧ್ಯವಾಗುತ್ತಿರಲಿಲ್ಲ.  ಆದರೆ ಈ ಸಲ ಎಲ್ಲ ಕೆಲಸದ ಜೊತೆಗೆ ಇದನ್ನೂ ಪ್ರಧಾನವಾಗಿಸಿ ಮಂಗಳೂರಿನಿಂದ ಕಟೀಲಿನ ಬಸ್ಸು ಹತ್ತಿದೆ. 

                                                     ಚಿತ್ರ ಕೃಪೆ: ವಿಕಿಪೀಡಿಯ

     ಬಸ್ಸು ನಗರದಾಟಿ ಕುಂಟಿಕಾನ ದೇರೇಬೈಲು ಚರ್ಚ್ ದಾಟುತ್ತಿದ್ದಂತೆ ಬಾಲ್ಯದ ನೆನಪುಗಳು ಒತ್ತೊತ್ತಿ ಬರುವುದಕ್ಕೆ ತೊಡಗಿತು. ದೇರೇಬೈಲಿನ ಸೋದರ  ಮಾವನ ಮನೆ ಎಂದರೆ ಅದು ನನ್ನ ಮನೆ ಎಂಬ ಪ್ರೀತಿ ಬಾಲ್ಯದಿಂದಲೇ ಬೆಳೆದು ಬಂದಿತ್ತು. ಇಲ್ಲಿರುವಾಗಲೇ ನನ್ನಮ್ಮ ನನ್ನನ್ನು ಹೆತ್ತದ್ದು. ಹೀಗೆ ದ್ವಾರಕೆ ನಂದಗೋಕುಲ ಇದ್ದಂತೆ ನನಗೆ ಪೈವಳಿಕೆ ಮತ್ತು ದೇರೇಬೈಲು.  ಎರಡು ಅವಿನಾಭಾವದ ಸಂಬಂಧಗಳು. 

        ದೇರೆಬೈಲಿನ ಗುಡ್ಡ ಇಳಿದು ಕೆಳಗೆ ಇಳಿದರೆ ಕೊಂಚಾಡಿ. ಚರ್ಚ್ ನಿಂದ ಒಂದು ತಿರುವು ಕೆಳಗೆ ಇಳಿಯುತ್ತಿದ್ದಂತೆ ಎರಡೂ ಕಡೆ ಚಾಚಿನಿಂತ ಗದ್ದೆ. ಸದಾ ಹಸಿರು ಪೈರನ್ನು ಹಾಸಿದ್ದು ಬೇಸಗೆಯಲ್ಲಿ ಬಯಲಾಟಗಳ ಮೈದಾನವಾಗುತ್ತಿದ್ದವು. ಒಂದು ಬದಿಗೆ ಮಾಂಕಾಳಿ ಸನ್ನಿಧಾನ ಅದರೊತ್ತಿಗೆ ಶ್ರೀ ರಾಮ ಭಜನಾಮಂದಿರ. ಕೊಂಚಾಡಿಯ ಗದ್ದೆಯ ಈ ತುದಿಯಲ್ಲಿ ನಿಂತರೆ ಅತ್ತ ಕೂಳೂರಿನ ತನಕ ಗೋಚರಿಸುತ್ತಿತ್ತು. ಗದ್ದೆಯ ನಡುವೆ ಸಾಲಾಗಿ ಬೆಳೆದು ನಿಂತ ತೆಂಗಿನ ಮರಗಳು. ಈ ಗದ್ದೆಗಳ ನಡುವೆ ಒಂದು ಕೆರೆ ಇತ್ತು. ಆ ಕೆರೆಯಲ್ಲಿ ಲಾಗ ಹಾಕುತ್ತಿದ್ದ ನೆನಪು, ಆದರೆ ಈಗ ಸಂಪೂರ್ಣ ಬದಲಾಗಿ ಹಲವಾರು ಬಡವಾಣೆಗಳು ನಗರ ಎಂಬ ಹೆಸರಿನೊಂದಿಗೆ ಕರೆಯಲ್ಪಡುತ್ತದೆ. ಕೊಂಚಾಡಿಯ ರಸ್ತೆಯ ಎರಡೂ ಬದಿಗೆ ಇದ್ದ ಮಾವು  ಹಲಸು ಗೋಳಿ ಮರಗಳು ಮರೆಯಾಗಿವೆ. 

        ಮೊದಲು ಮಂಗಳೂರಿನಿಂದ ಕಟೀಲಿಗೆ ಹನುಮಾನ್ ಅಥವಾ ಸಿಪಿಸಿ ಬಸ್ ಹತ್ತಿದರೆ ಸರಿ ಸುಮಾರು ಎರಡು ಘಂಟೆಯ ಪಯಣ.ಬಸ್ಸು ಕೂಡ ಕಿಕ್ಕಿರಿದು ತುಂಬಿರುತ್ತಿತ್ತು. ಪ್ರತಿ ಸ್ಥಳಗಳಲ್ಲಿ ಒಂದೈದು ನಿಮಿಷವಾದರೂ ಬಸ್ಸು ನಿಂತು ಬಿಡುತ್ತಿತ್ತು. ಸಾಮಾನ್ಯವಾಗಿ ಮಧ್ಯಾಹ್ನದ ನಂತರ ಬಸ್ಸು ಹತ್ತಿದರೆ ಮುಸ್ಸಂಜೆ ದಾಟಿ ಕಟೀಲು ತಲುಪುತ್ತಿದ್ದೆವು. ಅಲ್ಲಿ ಕಟೀಲಿನ ದೇವಾಲಯದ ಸುತ್ತ ಹರಿಯುವ ನದಿಯಲ್ಲಿ ಮುಳುಗಿ ಸ್ನಾನ ಮಾಡಿದ  ಆದಿನಗಳದ್ದೇ ಒಂದು ಸುಮಧುರ ನೆನಪು. ನದಿಯಲ್ಲಿ ಸ್ನಾನ ಮಾಡಿ ರಾತ್ರಿ ದೇವಾಲಯದ ಗೋಪುರದಲ್ಲಿ ಕುಳಿತು ಭಜನೆ ಪಾರಾಯಣ ಮಾಡಿದ ನೆನಪು ಇದೆ. 

        ನಿನ್ನೆ ಹಾಗೇ ಕಟೀಲು ಬಸ್ಸು ಹತ್ತಿದೆ ಕೇವಲ ನಲ್ವತ್ತು ನಿಮಿಷದಲ್ಲಿ ಕಟೀಲು ತಲುಪಿದಾಗ ಅಚ್ಚರಿಯಾಯಿತು. ಮೊದಲಿನ ಬಸ್ಸು ಪಯಣದ ಅನುಭವಕ್ಕೂ ಈಗಿನ ಅನುಭವಕ್ಕೂ ಅಜಗಜಾಂತರ . ಹಳೆಯ ಅನುಭವದ ನೆನಪಿಗೆ ಬಸ್ಸಿನ ಪ್ರಯಾಣದ ಪ್ರತೀ ಕ್ಷಣ ಸುತ್ತಲಿನ ಪರಿಸರವನ್ನು ನೋಡುತ್ತ ಸಾಗಿದೆ. ನಾಲ್ಕು ದಶಕಗಳ ಹಿಂದಿನ ರಸ್ತೆ ತಿರುವುಗಳು ಮರಗಿಡಗಳು ಎಲ್ಲವೂ ಬದಲಾಗಿ ಆ ನೆನಪುಗಳು ಮಾತ್ರ  ಬಹಳಷ್ಟು ಕಾಡಿತು.  ಮೊದಲಿಗಿಂತಲೂ ತೀರ ಭಿನ್ನವಾದ ಪರಿಸರ. ಕಟೀಲಿನ ದುರ್ಗಾ ಭವನ ಹೋಟೇಲಿನ ಜಾಗ ಈಗ ವಾಹನ ನಿಲುಗಡೆಗೆ ಎರವಾಗಿದೆ. ಶಾಲೆಯ ಮೈದಾನದ ಒಂದಷ್ಟು ಭಾಗವೂ ಮಾಯವಾಗಿದೆ. ದೇವಸ್ಥಾನದ ಹೊರಬಂದು ಮೆಟ್ಟಲು ಹತ್ತಿ ಶಾಲೆಯ ಜಗಲಿಯಲ್ಲಿ ಹಲವಾರು ಜನ ವಿಶ್ರಮಿಸುತ್ತಿದ್ದರು. ಹಲವು ಸಲ ನಾನೊಬ್ಬನೇ ಬಾಲ್ಯದಲ್ಲಿ ಕಟೀಲಿಗೆ ಹೋಗುತ್ತಿದ್ದೆ. ರಾತ್ರಿ ಅಲ್ಲಿ ಹರಿಯುವ ನದಿನೀರಲ್ಲಿ ಸ್ನಾನ ಮಾಡಿ, ದೇವರ ದರ್ಶನ ಪೂಜೆ ಮುಗಿಸಿ ಪ್ರಸಾದ ಉಂಡು ಈ ಶಾಲೆಯ ಜಗಲಿಯಲ್ಲಿ ಮಲಗಿ ರಾತ್ರೆಯನ್ನು ಕಳೆದು ಮರುದಿನ ಮುಂಜಾನೆ ಎದ್ದು ಸ್ನಾನ ಜಪ ಮುಗಿಸಿ ದೇವಾಲಯದ ಸುತ್ತ ಮುತ್ತ ಸುತ್ತಾಡುತ್ತಿದ್ದ ದಿನಗಳು ಮತ್ತೆ ಬರಲಾರದು.  ದೇವಸ್ಥಾನದ ಹೆಬ್ಬಾಗಿಲು ಕ್ರಮಿಸಿ ಒಳ ಪ್ರವೇಶಿಸುವಾಗ ಹೊಳೆಯನ್ನು ದಾಟುವುದಕ್ಕೆ ಎರಡು ಸೇತುವೆ. ಮೊದಲು ಈ ಸೇತುವೆ ನಡುವೆ ನಿಂತು ಕೆಳಗೆ ಭೋರ್ಗರೆದು ದುಮ್ಮಿಕ್ಕಿ ಹರಿಯುವ ನೀರಿನಲ್ಲಿ ಹಾರಿ ಹಾರಿ ಮೇಲೆ ಬರುತ್ತಿದ್ದ ಮೀನುಗಳನ್ನು ನೋಡುತ್ತಿದ್ದೆವು. 

        ದೇವಸ್ಥಾನದ ಒಳಾಂಗಣವನ್ನು ಪ್ರವೇಶಿಸಿದರೆ ಪ್ರಶಾಂತವಾದ ದೇವ ಸನ್ನಿಧಿ. ಹೊರಗೆ ನದಿ ಭೋರ್ಗರೆಯುವ ಶಬ್ದ  ಅದರೆ ಒಳಗೆ ಪ್ರಶಾಂತವಾದ ಘಂಟಾನಾದಾದದ ಕಲರವ ಎರಡನ್ನೂ ಜತೆಯಲ್ಲೇ ಅನುಭವಿಸುವ ಕಟೀಲಿನ ದುರ್ಗಾ ಪರಮೇಶ್ವರಿಯ ಪ್ರಸನ್ನ ಮುಖ ದರ್ಶನವಾದರೆ ಅದೊಂದು ವಿಸ್ಮಯ ಅನುಭವ. ದೇವಾಲಯ ಹಿಂಭಾಗದಲ್ಲಿ ಮೊದಲು ಪಂಜಕಜ್ಜಾಯ ಪ್ರಸಾದವನ್ನು ತಯಾರಿಸುತ್ತಿದ್ದರು. ಅದರ ಘಮ ಘಮ ಪರಿಮಳ ಚಿತೋಹಾರಿಯಾಗಿರುತ್ತಿತ್ತು. ಈಗ ಸಾಕಷ್ಟು ಬದಲಾಗಿದೆ. ದೇವಸ್ಥಾನದ ಒಳಗೋಪುರದ ಎಡಭಾಗದಲ್ಲಿ ಪುಟ್ಟ ಮೇಜು ಇಟ್ಟುಕೊಂಡು ನೆಲದಲ್ಲಿ ಕುಳಿತು ಪ್ರಸಾದ ರಶೀದಿಗಳನ್ನು ಕೊಡುತ್ತಿದ್ದರು. ಆನಂತರ ಅದು ದೊಡ್ಡದಾಗಿ ಹೊರಬಂದು ಈಗ ದೇವಸ್ಥಾನದ ರಸ್ತೆಯ ಬದಿಯಲ್ಲೇ ಇದನ್ನು ವ್ಯವಸ್ಥಿತವಾಗಿ ನಿರ್ಮಿಸಿದ್ದಾರೆ.  ಈಗ ಈ ಗೋಪುರದಲ್ಲಿ ಕುಳಿತುಕೊಳ್ಳುವುದಕ್ಕೂ ಅವಕಾಶವಿಲ್ಲ. ಕೊನೆ ಪಕ್ಷ ಇಲ್ಲಿ ಮಹಾಮಂಗಳಾರತಿ ತನಕು ಕುಳಿತುಕೊಳ್ಳುವ ಅವಕಾಶ ಭಕ್ತರಿಗೆ ಲಭ್ಯವಾಗಬೇಕು. ಗೋಪುರದಲ್ಲಿ ಕುಳಿತು ನಾಮಸ್ಮರಣೆ ಮಾಡುವ ಮಧುರವಾದ ಅವಕಾಶ ಇಲ್ಲವಾಗಬಾರದು.   ಇದೇ ಗೋಪುರದಲ್ಲಿ ಕುಳಿತು ಸಂಧ್ಯಾವಂದನೆ ಪಾರಾಯಣ ಮಾಡಿದ ದಿನಗಳು, ಇಲ್ಲೇ ಕುಳಿತು ಭೋಜನ ಪ್ರಸಾದ ಉಂಡ ನೆನಪುಗಳು ನಿನ್ನೆ ಮತ್ತೆ ಕಾಡಿತು. ಹಿರಿಯ ವೇದಮೂರ್ತಿ ಶ್ರೀ ಗೋಪಾಲ ಕೃಷ್ಣ ಅಸ್ರಣ್ಣರು ಕುಳಿತುಕೊಳ್ಳುತ್ತಿದ್ದ ಜಾಗ ಎಲ್ಲವೂ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತಿದ್ದವು.

        ದೇವಸ್ಥಾನದ ಒಳಾಂಗಣದಲ್ಲಿ ಸಾಕಷ್ಟು ಭಕ್ತರು ನೆರೆದಿದ್ದರು. ಈಗ ಕೆಲವರು ಭದ್ರತಾ ಸಿಬ್ಬಂದಿಗಳು ಭಕ್ತರಿಗೆ ಮಾರ್ಗ ದರ್ಶನ ಕೊಟ್ಟು ನಿಯಂತ್ರಿಸುತ್ತಿದ್ದರು.  ಮೊದಲಿನಂತೆ ಕುಳಿತುಕೊಳ್ಳುವುದಕ್ಕೆ ಸಾಧ್ಯವಾಗದೆ ಕೆಲವು ವೃದ್ದೆಯರೂ ಸಹ ಮಹಾಪೂಜೆಗೆ ನಿಲ್ಲಲಾಗದೆ ನಿಂತುಕೊಂಡಿದ್ದರು. ಅಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಬರುವ ಭಕ್ತರಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಅದರಲ್ಲೂ ಬಯಲು ಸೀಮೆ ಘಟ್ಟದ ಮೇಲಿನ ಭಕ್ತಗಣಗಳ ಸಂಖ್ಯೆ , ಪರ ಊರಿನವರ ಸಂಖ್ಯೆ ಕಟೀಲಿನ ಮಟ್ಟಿಗೆ ಬಹಳಷ್ಟು ಹೆಚ್ಚಾಗಿದೆ. ಮೊದಲು ಸುಬ್ರಹ್ಮಣ್ಯ ಧರ್ಮಸ್ಥಳ ಯಾತ್ರೆ ಮುಗಿಸಿ ಘಟ್ಟ ಹತ್ತುತ್ತಿದ್ದವರ  ಪಟ್ಟಿಯಲ್ಲಿಈಗ ಕಟೀಲು ಕೂಡ ಸೇರ್ಪಡೇಯಾಗಿದೆ. ಮಧ್ಯಾಹ್ನ ರಾತ್ರಿ ಎಲ್ಲಿ ಹೋದರೂ ಊಟ ಇದೆ ಎಂಬುದು ಹಲವರ ಸೌಕರ್ಯ. ಬೆಂಗಳೂರಲ್ಲಿ ಮೊನ್ನೆ ಮೊನ್ನೆ ನನ್ನ ಪರಿಚಿತರೊಬ್ಬರು ಕರಾವಳಿಯ ಯಾವ ದೇವಸ್ಥಾನಗಳಲ್ಲಿ ಊಟವಿದೆ ಎಂದು ಪಟ್ಟಿಮಾಡಿಕೊಂಡು ಹೋಗಿದ್ದರು. ಅದು ಯಾಕೆ ಎಂದು ಇಲ್ಲಿ ನೋಡಿದಾಗ ಅರಿವಾಯಿತು. ಮೊದಲು ಕಟೀಲಿನಲ್ಲಿ ಕೇವಲ ಇಲ್ಲಿನ ಸುತ್ತಮುತ್ತಲಿನವರು ಹೆಚ್ಚೆಂದರೆ ಉತ್ತರ ಕಾಸರಗೋಡಿನ ಕೆಲವರು ನಿಯಮಿತವಾಗಿ ಬರುತ್ತಿದ್ದರು. ಈಗ ಸುತ್ತಮುತ್ತಲಿನ ದೇವಸ್ಥಾನಗಳ ಆದಾಯ ವೃದ್ಧಿಗೆ ಇದೂ ಮುಖ್ಯ ಕಾರಣವಾಗಿದೆ. ನಿನ್ನೆ ಪೂಜೆ ಮುಗಿಸಿ ಗೋಪುರದ ಒಂದು ಬದಿ ನಿಂತುಕೊಂಡಿದ್ದೆ. ಆಗ ಇದೇ ಘಟ್ಟದ ಮೇಲಿನ ಒಬ್ಬರು ಬಂದು ಅವರ ಕೈಯಲ್ಲಿ ಗಂಧ ಪ್ರಸಾದ ಇತ್ತು. ಹಣೆಗೆ ಹಚ್ಚಿಕೊಂಡ ನಂತರ ಸಾಕಷ್ಟು ಉಳಿದಿತ್ತು. ಪುಣ್ಯಾತ್ಮ ಅದನ್ನು ಯಾವುದೇ ಕಂಬಕ್ಕೆ ಉಜ್ಜದೆ ನನ್ನ ಬಳಿಗೆ ಬಂದು ಕೇಳಿದ ಇದನ್ನು ಏನು ಮಾಡಬೇಕು? ಎಲ್ಲಿ ಎಸೆಯಬೇಕು? ಅವನಿಗೆ ಗಂಧಪ್ರಸಾದವೇ ವಿಚಿತ್ರವಾಗಿ ಕಂಡಿತ್ತು. ಯಾಕೆಂದರೆ ಹೂವಿನೊಂದಿಗೆ ಗಂಧಪ್ರಸಾದವನ್ನು ಕೊಂಡುವುದು ಕೇವಲ ದಕ್ಷಿಣ ಕನ್ನಡ ಹಾಗೂ ಕರಾವಳಿಯಲ್ಲಿ ಮಾತ್ರ. ಮಧೂರು ಉಳಿದಂತೆ ಕಾಸರಗೋಡಿನ ದೇವಸ್ಥಾನಗಳಲ್ಲೂ ಈ ಕ್ರಮವಿದೆ. ಆದರೆ ಉಳಿದಂತೆ ಘಟ್ಟದ ಮೇಲಿನ ದೇವಸ್ಥಾನಗಳಲ್ಲಿ ಇದು ಬಳಕೆಯಲ್ಲಿ ಇಲ್ಲ. ಹಾಗಾಗಿ ಆತನಿಗೆ ಇದು ವಿಚಿತ್ರವಾಗಿ ಕಂಡಿತು. ನಾನೆಂದೆ ಅಲ್ಲಿ ಅದಕ್ಕೆಂದು  ಕಾಗದದ ಚೂರುಗಳನ್ನು ಇಟ್ಟಿದ್ದಾರೆ ಕಟ್ಟಿಕೊಂಡು ಮನೆಗೆ ಹೋಗು ಸ್ನಾನ ಮಾಡಿ ಶುದ್ದ ನೀರು ಬೆರೆಸೆ ಮನೆಯ ಉಳಿದ ಮಂದಿಗಳಿಗೂ ಕೊಡಬಹುದು ಎಂದೆ. ಮತ್ತೂ ಎಚ್ಚರಿಸಿದೆ ಕಂಭಗಳಿಗೆ ಹಚ್ಚಬೇಡ. 

        ಕಟೀಲಿನ ಜತೆಗೆ ನನಗೆ ಅತ್ಯಂತ ಭಾವನಾತ್ಮ ಸಂಭಂಧ ಎಂದರೆ ಇಲ್ಲೇ ನನಗೆ ಬ್ರಹ್ಮೋಪದೇಶವಾಗಿತ್ತು. ಸುಮಾರು ನಲವತ್ತು ವರ್ಷಗಳ ಹಿಂದಿನ ನೆನಪು. ದೇವಾಲಯದ ಎದುರಿನ ಹೊರಾಂಗಣದಲ್ಲಿ ನದಿಯ ದಡದಲ್ಲಿ ಉಪನಯನ ಕರ್ಮಗಳಾಗಿತ್ತು. ಆಗ ಪ್ರತಿವರ್ಷವೂ ಸಾಮೂಹಿಕ ಬ್ರಹ್ಮೋಪದೇಶವಾಗುತ್ತಿತ್ತು.ಬೆಳಗ್ಗೆ ಹೋಗಿ ಒಂದು ಚೀಟು ಬರೆಸಿದರೆ ಉಪನಯಕ್ಕೆ ಬೇಕಾದ ವಸ್ತ್ರ ಹೋಮ ದ್ರವ್ಯ ಪುರೋಹಿತ ದಕ್ಷಿಣೆ ತನಕ ಎಲವನ್ನೂ ಒದಗಿಸಿಕೊಡುತ್ತಿದ್ದರು. ಆಗ ನನಗೆ ಒಂದು ಪಂಚೆ ಸಿಕ್ಕಿತ್ತು. ಬಹಳಷ್ಟು ಖುಷಿಯಾಗಿತ್ತು. ಸಾಮಾನ್ಯವಾಗಿ ಒಂದು ಚಡ್ಡಿ ತಪ್ಪಿದರೆ ಎರಡು ಎಂಬಂತೆ ಇದ್ದವನಿಗೆ ಈ ಪಂಚೆ ಉಟ್ಟುಕೊಳ್ಳುವುದಕ್ಕೆ ನಾಂದಿ ಹಾಡಿತ್ತು. ಅಂದಿನಿಂದ ದೊಡ್ಡವರಂತೆ ಪಂಚೆ ಉಟ್ಟು ತಿರುಗುವುದು ಬಹಳ ಹೆಮ್ಮೆ ಅನಿಸಿತ್ತು.  ನಂದಿನೀ ದಡದ ಮೇಲೆ ಸೋದರಮಾವನ ಮಡಿಲಲ್ಲಿ ಕುಳಿತು ಗುರು ಅಜ್ಜನ ಮುಖಾಂತರ ಉಪದೇಶವಾದ ಗಾಯತ್ರಿಮಂತ್ರ ನನ್ನ ಮಟ್ಟಿಗೆ ಭ್ರಮರಾಂಭಿಕೆಯ ಆಶೀರ್ವಾದ. ಈಗ ಪ್ರತಿಸಲ ಯಜ್ಞೋಪವೀತಕ್ಕೆ ಕೈ ಹಾಕುವಾಗ ಕಟೀಲಿನ ಅಮ್ಮ ನೆನಪಾಗುತ್ತಾಳೆ. ಮಾವನ ಮಡಿಲಲ್ಲಿ ಕುಳಿತ ಜಾಗದಲ್ಲಿ ಅದೇ ನೆನಪಿಗೋಸ್ಕರ ಒಂದಷ್ಟು ಹೊತ್ತು ಕುಳಿತೆ. ಆ ನೆನಪು ಮತ್ತೆ ಮತ್ತೆ ಬಂದು ಮೈ ಪುಳಕಗೊಂಡಿತು. ಇಂದಿಗೂ ಸಂಧ್ಯಾವಂದನೆ ಬಿಡದೆ ಅನುಷ್ಠಾನ ಗೊಳಿಸುವಾಗ ಕಟೀಲು ದುರ್ಗಾ ಪರವೇಶ್ವರಿಯ ಅನುಗ್ರಹವಾದಂತೆ ಭಾಸವಾಗುತ್ತದೆ. ಕಟೀಲಿನ ಸಾಮೂಹಿಕ ಬ್ರಹ್ಮೋಮದೇಶ ಎಂಬುದು ಇಲ್ಲದೇ ಇರುತ್ತಿದ್ದರೆ ನನಗೆ  ಬಡತನದ ಕಾರಣ ಉಪನಯನ ಎಂಬುದು ಆಗುತ್ತಲೇ ಇರುತ್ತಿರಲಿಲ್ಲವೇನೋ ಎಂದು ಅನ್ನಿಸುತ್ತದೆ. ಬಹಳಷ್ಟು ಮಕ್ಕಳಿಗೆ ನನ್ನ ಜತೆ ಬ್ರಹ್ಮೋಪದೇಶವಾಗಿತ್ತು. ಕೊನೆಯಲ್ಲಿ ಎಲ್ಲರೂ  ಶ್ರೀ ಗೋಪಾಲಕೃಷ್ಣ ಅಸ್ರಣ್ಣರ ಜತೆಯಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದೆವು. ಇದೇ ನೆನಪಿನಲ್ಲಿ  ಊಟವಾದರೂ ಬಹಳಷ್ಟು ಹೊತ್ತು ಕಟೀಲಿನಲ್ಲೇ ಉಳಿದೆ. ಸೇತುವೆ ನಡುವೆ ಬಂದು ನಿಂತು  ಹರಿಯುವ ನದಿಯನ್ನು ನೋಡುತ್ತಾ ಆ ಸದ್ದಿನಲ್ಲಿ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದೆ. ಕಟೀಲು ನನ್ನ ಪಾಲಿಗೆ ಕೇವಲ ದೇವಾಲಯವಲ್ಲ. ಬದುಕಿನ ಉತ್ಕರ್ಷಕ್ಕೆ, ಆಧ್ಯಾತ್ಮದ ಚಿಂತನೆಗೆ ನಾಂದಿ ಹಾಡಿದ ಪವಿತ್ರ ಕ್ಷೇತ್ರ. ಇಲ್ಲೇ ನನ್ನ ಬ್ರಹ್ಮ ಚರ್ಯ  ಆರಂಭವಾಯಿತು.    ಇಂದು ಎಲ್ಲವನ್ನು ಮರೆತು ಮುಂಜಾನೆ ಸೂರ್ಯನಿಗೆ ಅರ್ಘ್ಯ ಬಿಟ್ಟು ಪರಮಾತ್ಮನನ್ನು ಕಾಣುವುದಿದ್ದರೆ ಈ ಕ್ಷೇತ್ರದ ಅನುಗ್ರಹ ಮರೆಯುವಂತಹುದಲ್ಲ. ಆ ಒಂದು ಚೈತನ್ಯ ಬೆನ್ನ ಹಿಂದೆ ಸದಾ ಸತ್ಪ್ರೇರಣೆಯನ್ನು ಒದಗಿಸುತ್ತದೆ. 


ಓಂ ನಮೋ ಭ್ರಮರಾಂಬಿಕೆ. 



Wednesday, September 27, 2023

ಉಪವಾಸ ಶಾಂತಿ

ನಿನ್ನೆ ದಿನ ನಾನು ಸಂಪೂರ್ಣ ಉಪವಾಸವನ್ನು ಅನುಭವಿಸಿದೆ. ಇದೊಂದು ವಿಸ್ಮಯ ಅನುಭವ.  ಸಾಮಾನ್ಯವಗಿ ನಾನು ಮಧ್ಯಂತರ ಉಪವಾಸ (ntermittent fasting) ಕಳೆದ ಎರಡು ವರ್ಷದಿಂದ ಮಾಡುತ್ತಿದ್ದರೂ ಒಂದು ಪೂರ್ಣ ಪ್ರಮಾಣದ ಉಪವಾಸ ಮಾಡುವ ಆಸಕ್ತಿ ಉಂಟಾಯಿತು. ನೋಡಿಯೇ ಬಿಡೋಣ ಎಂದು ಕೊಂಡು, ಯಾವಾಗಲೂ ಸಾಯಂಕಾಲ ಐದು ಘಂಟೆಗೆ ಲಘು ಆಹಾರ ತಿಂದು ರಾತ್ರಿಯ ಊಟ ಮುಗಿಸುವ ನಾನು ಮೊನ್ನೆ ಸಾಯಂಕಾಲ ಆಹಾರ ಸೇವಿಸಿ ಆ ಘಳಿಗೆಯಿಂದ ಉಪವಾಸ ಆರಂಭಿಸಿದೆ. ರಾತ್ರಿ ಕಳೆದು ಬೆಳಗ್ಗೆ ಆದಾಗ ಯಾವಾಗಲೂ ಹೊಟ್ಟೆ ಖಾಲಿಯಾಗಿರುತ್ತದೆ. ಆದರೆ ನಿನ್ನೆ ಖಾಲಿಯ ಜತೆಗೆ ಇವತ್ತು ಉಪವಾಸ ಎನ್ನುವ ನಿರ್ಧಾರದಿಂದಲೇ ಹೊಸ ಅನುಭವ ಎದುರಾಯಿತು. ಎಂದಿನಂತೆ ಯೋಗಾಭ್ಯಾಸ ಉಳಿದೆಲ್ಲ ನಿತ್ಯಕಾರ್ಯಗಳು ಇದ್ದರೂ ಬೆಳಗ್ಗಿನ ಉಪಾಹಾರ ಸೇವಿಸದೇ ಇರುವುದು ಬೆಳಗ್ಗಿನ ಒಂದು ಘಂಟೆ ಮುಕ್ತವಾಗಿ ಒದಗಿತು. ಆಹಾರ ಸೇವಿಸುವುದಿಲ್ಲ ಎಂಬ ಯೋಚನೆ ಮೊದಲು ಮನಸ್ಸಿನಿಂದ ಹೊರ ಹಾಕಿದೆ. ಪದೇ ಪದೇ ಆಹಾರ ಸೇವಿಸಲಿಲ್ಲ ಎಂಬ ಯೋಚನೆ ಇದ್ದರೆ ಹಸಿವಿನ ಬಗ್ಗೆ ಹೆಚ್ಚು ಗಮನ ಹೋಗುತ್ತದೆ. ಅದು ಇನ್ನೂ ಪರೀಕ್ಷೆಗೆ ಒಡ್ಡುತ್ತದೆ. ಹಾಗಾಗಿ ದೈನಂದಿನ ಇತರ ಕಾರ್ಯಗಳಲ್ಲಿ ಗಮನ ಹರಿಸಿದೆ. ಒಂದು ಘಂಟೆ ಕುಳಿತು ಓದಿದೆ. ನಂತರ ಕಛೇರಿ ಕೆಲಸಗಳು, ಹೆಚ್ಚಿನ ಕೆಲಸ ನಾನು ಮನೆಯಿಂದಲೇ ಮಾಡುವ ಕಾರಣ ಬಾಕಿ ಉಳಿದ, ಮಾಡಬೇಕಾದ ಎಲ್ಲಾ ಕೆಲಸಗಳ ಪಟ್ಟಿ ಮಾಡಿ ಅದನ್ನು ಮುಗಿಸುವತ್ತ ಗಮನ ಹರಿಸಿದೆ. ಅಲ್ಲಿಂದ ತಿನ್ನುವ ಯೋಚನೆ ಹಸಿವಿನ ಯೋಚನೆ ದೂರವಾಯಿತು. ಕೇವಲ ನೀರು ಮಾತ್ರ ಆಹಾರವಾಗಿ ಪದೇ ಪದೇ ನೀರು ಕುಡಿಯುತ್ತಾ ದೇಹ ಕ್ಷೀಣವನ್ನು ದೂರ ಮಾಡಿದೆ. 

ಹಸಿವು ಮನುಷ್ಯನ ದೈಹಿಕ ಚಟುವಟಿಕೆಯಲ್ಲಿ ಅತೀ ಮುಖ್ಯ. ಬಹುಶಃ ಇವತ್ತು ಪ್ರಪಂಚದ ಚಟುವಟಿಕೆಗಳಿಗೆ ಮುಖ್ಯ ಕಾರಣ ಈ ಹಸಿವು. ಅದೊಂದು ಬಾಧೆ ಎಂದು ಪರಿಗಣಿಸಿದರೆ ಅದಕ್ಕೆ ಬೇರೆ ಔಷಧಿ ಇಲ್ಲ. ಕೇವಲ ಆಹಾರ.   ಮನುಷ್ಯನಿಗೆ ಹಸಿವು ಮತ್ತು ವಿಸರ್ಜನೆ ಇವೆರಡೂ ಆರೋಗ್ಯದ ಸಂಕೇತವಾಗಿದೆ. ರೋಗ ಇಲ್ಲದೇ ಇರುವುದೇ ಆರೋಗ್ಯ.  ಅನ್ನಂ ಬ್ರಹ್ಮಾ ರಸೋ ವಿಷ್ಣು ಹೇಳಿದಂತೆ ಅನ್ನ ಎಂಬುದು ಬ್ರಹ್ಮ ರೂಪವಾಗಿ ಬೃಹದಾಕಾರವಾಗುತ್ತದೆ. ನಾವೆಷ್ಟು ಭಾಗ್ಯವಂತರು?  ಅನ್ನದಲ್ಲೂ ಬ್ರಹ್ಮನನ್ನು ಕಾಣುವ ನಮ್ಮ ಸಂಸ್ಕಾರ ಅತ್ಯಂತ ಶ್ರೇಷ್ಠ.  ಆಹಾರದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಹೀಗೆ ತ್ರಿಮೂರ್ತಿಗಳು ಆವಾಹನೆಯಾಗಿರುತ್ತಾರೆ. ತ್ರಿಮೂರ್ತಿಗಳನ್ನು ದೇಹದಲ್ಲಿ ಐಕ್ಯಮಾಡುವುದಾದರೆ ದೇಹ ಶುದ್ದಿ ಜತೆಯಲ್ಲಿ ಹೃದಯ ಶುದ್ದಿಯಾಗಬೇಕು. ಹೀಗಾಗಿ ಒಂದಷ್ಟು ಉಪವಾಸ ವಿಧಿಗಳು ಎಲ್ಲಾ ಧರ್ಮಗಳಲ್ಲೂ ಇದೆ. ಒಂದು ರೀತಿಯಲ್ಲಿ ಉಪವಾಸ ಎಂದರೆ ನಾವು ಇದ್ದ ಹಾಗೆ ಇರದೇ ಬೇರೊಂದು ರೀತಿಯಲ್ಲಿರುವುದು. ಇದು ಮತ್ತೊಂದು ಜನ್ಮ ಎತ್ತಿದಂತೆ. ದೇಹ ಎಲ್ಲ ಬರಿದಾಗಿ ಅಲ್ಲಿ ತ್ರಿಮೂರ್ತಿ ದರ್ಶನವಾಗುವುದು ಹೀಗೆ ಪವಿತ್ರವಾದ ಭಾವನೆಗಳು ಒಂದಾದರೆ ದೇಹದ ಆರೋಗ್ಯಕ್ಕೆ ಸಂಭಂದಿಸಿ ಇನ್ನೂ ಏನೋನೋ  ಗುಣಗಳು ಲಭ್ಯವಾಗುತ್ತವೆ. 

ಮಧ್ಯಾಹ್ನದ ತನಕ ಒಂದಷ್ಟು ಹಸಿವು ಬಾಧೆಕೊಟ್ಟಿತು ನಿಜ. ಆದರೆ ನೋಡೋಣ ಎಂಬ ಕುತೂಹಲವೂ ಇದೆ. ಬಡತನದಲ್ಲಿ ಅನಿವಾರ್ಯವಾಗಿ ಅನುಭವಿಸಿದ ಹಸಿವಿನ ನೆನಪು ಹೇಗೂ ಇದೆ. ಎನೂ ಇಲ್ಲದಾಗ ಅನುಭವಿಸುವ ಹಸಿವಿಗೂ ಎಲ್ಲವೂ ಒದಗಿ ಬಂದರೂ ಅದನ್ನು ದೂರವಿಡುವ ಅನುಭವ ಒಂದು ಸುಖಾನುಭವವನ್ನು ಒದಗಿಸುತ್ತದೆ.  ಗಂಡ ಹೆಂಡತಿ ಪರಸ್ಪರ ಜಗಳಾಡಿ  ಊಟ ಬಿಟ್ಟು ಕುಳಿತುಕೊಳ್ಳುವುದು ಸಾಮಾನ್ಯ. ಯಾವುದೋ ಸಾಧನೆಗೆ ಗಾಂಧೀ ಮಾರ್ಗದಂತೆ ಉಪವಾಸ ಸತ್ಯಾಗ್ರಹ ಮಾಡುವುದನ್ನೂ ಕಾಣಬಹುದು. ಉಪವಾಸವೂ ಒಂದು ಸತ್ಯದ ಆಗ್ರಹವಾಗುತ್ತದೆ. ಅಲ್ಲೆಲ್ಲಾ ಮನಸ್ಸಿನಲ್ಲಿ ಒಂದು ಬಗೆಯ ಅತೃಪ್ತಿ ಅಸಹನೆ ರೋಷಾಗ್ನಿ ಇರುತ್ತದೆ.  ಯಾರದೋ ಮೇಲಿನ ಸಿಟ್ಟಿನಲ್ಲಿ ನಮ್ಮನ್ನು ನಾವೇ ಶಿಕ್ಷಿಸಿಕೊಳ್ಳುವುದು ಮನಸ್ಸಿನ ತೃಪ್ತಿ ಎಂದು ಕಂಡು ಕೊಂಡರೂ ಅದು ಮನಸ್ಸಿನ ಸ್ಥಿಮಿತವನ್ನು ನಾಶಮಾಡುತ್ತದೆ. 

        ಇದು ಮನಸ್ಸಿನಲ್ಲಿ ತುಮುಲವನ್ನು ಹೆಚ್ಚಿಸಿ ಮನಸ್ಸಿನ ಶಾಂತಿಯನ್ನು ಕದಡಿ ಬಿಡುತ್ತದೆ. ಪರಿಣಾಮ ದೇಹದ ಆರೋಗ್ಯವೂ ಬಿಗಡಾಯಿಸಬಹುದು. ಅದೇ ಉಪವಾಸ ನಿರ್ಮಲ ಮನಸ್ಸಿನಿಂದ ಆಚರಿಸಿದಾಗ ಒದಗಿ ಬರುವ ಶಾಂತಿ ಇದೆಯಲ್ಲ ಅದು ನಿನ್ನೆಯ ದಿನದ ಅನುಭವಗಳಲ್ಲಿ ಅತ್ಯಂತ ವಿಶಿಷ್ಟವಾಗಿ ಕಂಡಿತು. ಇಡೀ ದಿನ ನಾನು ಒಂದು ವಿಸ್ಮಯಕರವಾದ ಶಾಂತಿಯನ್ನು ಅನುಭವಿಸಿದೆ. ನಿಜಕ್ಕೂ ಅದೊಂದು ಶ್ರೇಷ್ಠ ಅನುಭವ. ದೈವಾರಾಧನೆಯಲ್ಲಿ ಉಪವಾಸ ಯಾಕಿರಬೇಕು ಎಂಬುದಕ್ಕೆ ಇದು ನಿದರ್ಶನ. ಮನಸ್ಸು ಶಾಂತವಾಗಿರುತ್ತದೆ. ಮಾಡುವ ಕೆಲಸದಲ್ಲಿ ಹೆಚ್ಚು ಗಮನ ಹರಿಯುತ್ತದೆ, ಏಕಾಗ್ರತೆ ಆಸಕ್ತಿ ಎರಡೂ ಮಾಡುವ ಕೆಲಸದಲ್ಲಿ ವಿಶಿಷ್ಟ ಫಲಗಳನ್ನು ಒದಗಿಸುತ್ತದೆ. ಇಡೀ ದಿನ ನಾನು ಅನುಭವಿಸಿದ ಈ ಶಾಂತಿ ಮತ್ತೊಮ್ಮೆ ನನಗೆ ಉಪವಾಸವನ್ನು ಆಚರಿಸುವ ಪ್ರೇರಣೆಯನ್ನು ಒದಗಿಸಿದೆ. 

ಉಪವಾಸ ಹಲವು ರೀತಿಯಲ್ಲಿದೆ. ದಿನ ಇಪ್ಪತ್ತನಾಲ್ಕು ಘಂಟೆಗಳಲ್ಲಿ ಕಡಿಮೆ ಅವಧಿಯಲ್ಲಿ ಆಹಾರ ಸೇವಿಸಿ ಉಳಿದ ಅಧಿಕ ಸಮಯದಲ್ಲಿ ಉಪವಾಸ ಇರುವ ಆರೋಗ್ಯ ಪದ್ಧತಿ ಆಚರಣೆಯಲ್ಲಿದೆ. ಅದೇ ಯೋಗಾಭ್ಯಾಸದ ನಿಯಮದಲ್ಲಿ ಇದು ಸಹಜವಾಗಿ ಆಚರಿಸಲ್ಪಡುತ್ತದೆ. ರಾತ್ರಿ ಸೂರ್ಯಾಸ್ತದ ಮೊದಲು ಆಹಾರ ಸೇವಿಸಿ ಮರುದಿನ ಉಪಾಹಾರದ ತನಕ ಸುಮಾರು ಹದಿನಾರು ಘಂಟೆ ಉಪವಾಸ ಇರುವ ಮಧ್ಯಂತರ ಉಪವಾಸದ ಕ್ರಮ ಒಂದು ರೀತಿ. ಇನ್ನು ಪೂಜಾವಿಧಾನಗಳಲ್ಲಿ ಕಟ್ಟುನಿಟ್ಟಿನ ಉಪವಾಸ ಇದ್ದುಕೊಂಡು ಒಂದು ಬಗೆಯಾದರೆ, ಕೇವಲ ಅನ್ನಾಹಾರವನ್ನು ದೂರವಿಟ್ಟು ಫಲಾಹಾರವನ್ನು ಸೇವಿಸುವ ಒಂದು ಕ್ರಮ ಇನ್ನೊಂದು ಬಗೆ. ಆದರೆ ಆಹಾರ ಸೇವಿಸದೇ ಕೇವಲ ನೀರನ್ನು ಮಾತ್ರ ಸೇವಿಸುವುದು ಬಹಳ ಕಠಿಣ ಉಪವಾಸ ಕ್ರಮ. ಇನ್ನು ಮುಸ್ಲಿಂ ರಲ್ಲಿ ರಂಜಾನ್ ಮಾಸದಲ್ಲಿ ಹಗಲೂ ನೀರನ್ನೂ ಸೇವಿಸದೆ ಉಪವಾಸ ಆಚರಿಸುವ ಕ್ರಮವೂ ಇದೆ. ಹೀಗೆ ಉಪವಾಸದ ಬಗೆಗಳು ಅದರ ಅನುಷ್ಠಾನಗಳು ಬೇರೆ ಬೇರೆ ಬೇರೆಯಾಗಿರುತ್ತದೆ. 

ಹೌದು ಮನುಷ್ಯ ಸದಾ ಅಹಾರವನ್ನು ಹಿಂಸಿಸಿ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಾನೆ. ಹಾಗಾಗಿ ಒಂದಷ್ಟು ಸಮಯ ಈ ಹಿಂಸೆಯಿಂದ ದೂರವಿದ್ದರೆ ಅದೊಂದು ವಿಶಿಷ್ಟ ಶಾಂತಿ ಲಭ್ಯವಾಗುತ್ತದೆ. ಅದೇ ಧ್ಯಾನದಲ್ಲಿ ನಾನು ಹಸಿವನ್ನು ದೂರ ಮಾಡಿದೆ. ಕೇವಲ ನೀರನ್ನು ಮಾತ್ರ ಸೇವಿಸಿದೆ. ಅದೂ ನಿನ್ನೆಯ ದಿನ ಸುಮಾರು ಎಳು ಲೀಟರ್ ಗಿಂತಲೂ ಅಧಿಕ  ನೀರು ಸೇವಿಸುವ ಪ್ರೇರಣೆಯಾಗಿ ಹೋದದ್ದು ನನಗೆ ವಿಚಿತ್ರ ಅನುಭವ.  ಬರೀ ನೀರನ್ನೇ ಸೇವಿಸಿ ದಿನ ಕಳೆಯಬಹುದು ಎಂಬ ಅನುಭವವೂ ಸಾಧ್ಯವಾಯಿತು. 

ನಿಯಮಿತವಾಗಿ ಉಪವಾಸ ಆಚರಿಸಬೇಕು. ಆದರೆ ಅದಕ್ಕೆ ದೇಹದ ಕ್ಷಮತೆ ಕೂಡ ಅನಿವಾರ್ಯ. ನಿಯಮಿತವಾಗಿ ಔಷಧಗಳನ್ನು ಸೇವಿಸುವವರಿಗೆ ಇದು ಸಾಧ್ಯವಾಗುವುದಿಲ್ಲ. ವಾಯು ಸಮಸ್ಯೆ ಇರುವವರು ನೀರನ್ನು ಸೇವಿಸುವಾಗ ಆದಷ್ಟು ಬಿಸಿ ನೀರನ್ನು ಸೇವಿಸಿದರೆ ಉತ್ತಮ. ಮೊನ್ನೆ ಐದು ಘಂಟೆಗೆ ಆರಂಭವಾದ ಉಪವಾಸ ಇಂದು ಬೆಳಗ್ಗೆ ಎಂಟು ಘಂಟೆಗೆ ಕಷಾಯ ಕುಡಿಯುವುದರೊಂದಿಗೆ ಮುಕ್ತಾಯಗೊಳಿಸಿದೆ. ಹೀಗೆ ಉಪವಾಸ ಒಂದು ದಿವ್ಯ ಅನುಭವ ಒದಗಿಸಿದ್ದು ಸುಳ್ಳಲ್ಲ. ಇದರ ನಡುವೆ ತೀರಾ ಖಾಲಿ ಹೊಟ್ಟೆಯಲ್ಲಿ  ಮುಂಜಾನೆಯ  ಯೋಗಾಭ್ಯಾಸ ಹೇಗಿರಬಹುದು ಎಂದು ತೀವ್ರವಾದ ಕುತೂಹಲವಿತ್ತು. ಕುತೂಹಲದಂತೆ ಅದೂ ಒಂದು ವಿಚಿತ್ರ ಅನುಭವವನ್ನು ಒದಗಿಸಿಕೊಟ್ಟಿದೆ. ಈ ಹೊಸ ಅನುಭವ ಹೊಸ ಉಪವಾಸಕ್ಕೆ ನಾಂದಿ ಹಾಡಿದೆ. 






Tuesday, September 26, 2023

ಸನಾತನ ಸಲ್ಲದು ಸಣ್ಣತನ

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಂ

ಧರ್ಮ-ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥


ಭೂಮಿಯ ಮೇಲೆ ಗಾಳಿ ಇಲ್ಲದೇ ಇದ್ದರೆ ಏನಾಗಬಹುದು? ಹೀಗೆ ಒಂದು ಪುಟ್ಟ ಮಗುವಿನಲ್ಲಿ ಕೇಳಿದರೆ ಅದರೆ ಉತ್ತರ "ಚಿಪ್ಸ್ ಪ್ಯಾಕೆಟ್ ನಲ್ಲಿ ಗಾಳಿಯೇ ಇರುತ್ತಿರಲಿಲ್ಲ"  ಎಂದು ಹೇಳಬಹುದು.  ಸಮಸ್ಯೆಯನ್ನು ಆ ಮಗು ಕಾಣುವ ರೀತಿಯದು. 

ತಾತ್ವಿಕ ವಿಚಾರಗಳ  ಮಂಡನೆಯಲ್ಲಿ ಮೇಲೆ ಹೇಳುವ  ಒಂದು ಶ್ಲೋಕ ಸಾಮಾನ್ಯವಾಗಿರುತ್ತದೆ. ಒಂದಷ್ಟು ಸಂಸ್ಕೃತ ಪದಗಳು ಸೇರಿಕೊಂಡರೆ ತಾತ್ವಿಕ ವಿಚಾರಗಳು ಗಂಭೀರವಾಗಿಬಿಡುತ್ತವೆ. ಅದು ಸಂಸ್ಕೃತದ ಶಕ್ತಿ . ಇಷ್ಟಿದ್ದರೂ ಸಂಸ್ಕೃತ ಎಂದೊಡನೆ ಒಂದು ಮಡಿವಂತಿಗೆ, ಹಳದಿ ದೃಷ್ಟಿ ಇದ್ದೇ ಇರುತ್ತದೆ. ಮೇಲೆ ಹೇಳಿದ ಭಗವದ್ಗೀತೆಯಲ್ಲಿ ಭಗವಂತ ಉಲ್ಲೇಖಿಸುವ ಧರ್ಮ ಯಾವುದು? ಹಾಗೆ ವಿಶ್ಲೇಷಣೆ ಮಾಡುತ್ತಿದ್ದರೆ, ಸಮಗ್ರ ಭಗವದ್ಗೀತೆಗೆ ಹಲವಾರು ಅರ್ಥಗಳು ಹುಟ್ಟಿಕೊಳ್ಳುತ್ತವೆ. ನೋಡುವ ದೃಷ್ಟಿಕೋನದಲ್ಲಿ ನಮ್ಮ ದೃಷ್ಟಿ ಸಾಮಾರ್ಥ್ಯ ಎಷ್ಟಿದೆಯೋ ಅದನ್ನು ಅವಲಂಬಿಸಿ ಅದು ವಿಶಾಲವಾಗುತ್ತಾ ಹೋಗುತ್ತದೆ. ಹಾಗೆ ಕಾಣಿಸಿಕೊಳ್ಳದೇ ಇದ್ದರೆ ಅದು ಭಗವದ್ಗೀತೆ ಎಂದಾಗುವುದಾದರೂ ಹೇಗೆ? ಆದರೂ ಧರ್ಮ ಎಂದು ಭಗವಂತ ಯಾವುದನ್ನು ಹೇಳಿರಬಹುದು. ಸಾಮಾನ್ಯ ತರ್ಕಕ್ಕೆ ಒಡ್ಡಿಕೊಳ್ಳುತ್ತಾ ಹೋದರೆ ಮಹಾಭಾರತದಲ್ಲಿ ಭಗವಂತನ ಅವತಾರ ಯಾವ ಧರ್ಮ ಉದ್ದರಿಸುವುದಕ್ಕೆ ಆಗಿರಬಹುದು? ಮಹಾ ಭಾರತದಲ್ಲಿ ಯಾವ ಧರ್ಮ ನಿರ್ದಿಷ್ಟವಾಗಿ ಸ್ಥಾಪನೆಯಾಯಿತು?  ಆ ಧರ್ಮ ನಾವು ಈಗ ಯಾವುದನ್ನು ಧರ್ಮ ಎಂದು ಕಾಣುತ್ತೇವೆಯೋ ಆ ಧರ್ಮ ಖಂಡಿತ ಆಗಿರಲಿಕ್ಕಿಲ್ಲ. ಮಹಾಭಾರತದಲ್ಲಿ ಭಗವಂತ ಉದ್ದರಿಸಿದ ಧರ್ಮ ಯಾವುದು? ಬ್ರಾಹ್ಮಣ ಧರ್ಮವೇ? ಕ್ಷಾತ್ರ ಧರ್ಮವೇ? ಅಥವಾ ಇನ್ನಿತರ ವರ್ಣರೂಪದ ಧರ್ಮಗಳೇ? ಯಾವ ಬ್ರಾಹ್ಮಣನನ್ನೂ ಭಗವಂತ ನಿರ್ದಿಷ್ಟವಾಗಿ ಉದ್ದರಿಸಲಿಲ್ಲ. ಒಂದು ವೇಳೆ ಭಗವಂತ ಬ್ರಾಹ್ಮಣಧರ್ಮವನ್ನು ಉದ್ದರಿಸುತ್ತೇನೆ ಎಂದಿದ್ದರೆ  ಈಗಿನ ವಿರೋಧಿ ಮನಸ್ಸುಗಳ ಪ್ರತಿಕ್ರಿಯೆಗಳು ಹೇಗಿರುತ್ತಿದ್ದವು?  ಅದರೂ ನಾವು ಒಂದು ಪೂರ್ವಾಗ್ರಹದ ಧರ್ಮದ ದೃಷ್ಟಿಕೋನದದಿಂದಲೇ ಭಗವದ್ಗೀತೆಯನ್ನು ಕಾಣುವಾಗ ಈ ಉತ್ತರ ಕೊಡಲಾಗದ ಪ್ರಶ್ನೆಗಳು ಎದುರಾಗುತ್ತವೆ. 

ಭಗವಂತ ಹೇಳಿದ ಧರ್ಮ ಯಾವುದು? ಅಥವ ಧರ್ಮ ಎಂಬುದರ ಅರ್ಥವೇನು? ಅದನ್ನು ಯೋಚಿಸದೇ ನಾವು ಧರ್ಮವನ್ನು ಯಾವ ದೃಷ್ಟಿಕೋನದಿಂದ ಕಾಣುತ್ತೇವೆಯೋ ಅದೇ ದೃಷ್ಟಿಯಲ್ಲಿ ನಂಬಿಬಿಡುತ್ತೇವೆ. ಮುಖ್ಯವಾಗಿ ನಮ್ಮ ಕಣ್ಣಿಗೆ ಬಣ್ಣದ ಪರೆಯನ್ನು ಹಿಡಿದು ಅದೇ ಬಣ್ಣದ ಬೆಳಕಿನಲ್ಲಿ ಧರ್ಮವನ್ನು ಕಂಡು ಅದೇ ಬಣ್ಣ ಎಂದು ಹೇಳುವ ಒಂದು ಬಗೆಯ ಪಾಮರ ಸ್ವಭಾವವನ್ನು ಪ್ರದರ್ಶಿಸುತ್ತೇವೆ.  ಭೂಮಿ ಮೇಲೆ ಗಾಳಿ ಎಂಬುದು ಇಲ್ಲದಿದ್ದರೆ ಏನಾಗಬಹುದು ಎಂದು ಈಗಿನ ಮಗುವಿನಲ್ಲಿ ಕೇಳಿದರೆ ಆ ಮಗು ಉತರಿಸುತ್ತದೆ, " ಗಾಳಿ ಇಲ್ಲದೇ ಇದ್ದರೆ ಚಿಪ್ಸ್ ಪ್ಯಾಕೆಟ್ ನಲ್ಲಿ ಗಾಳಿಯೇ ಇರುತ್ತಿರಲಿಲ್ಲ"  ಬಹಳ ವಿಡಂಬನೆಯಾಗಿರಬಹುದು ಈ ಉತ್ತರ. ಆ ಮಗುವಿನ ಅರಿವಿನ ಪ್ರಪಂಚದ ವಿಸ್ತಾರ ಅದು. ಹಾಗೆಂದು ಭೂಮಿಯ ಮೇಲಿನ ಗಾಳಿಯ ಅಸ್ತಿತ್ವದ ಬಗೆಗಿನ ಜ್ಞಾನ ಶೂನ್ಯವಾಗುವುದಿಲ್ಲ. ಆ ಮಗುವಿನ ದೃಷ್ಟಿ ಕೋನ ದೃಷ್ಟಿ ಸಾಮಾರ್ಥ್ಯ ಅಷ್ಟಕ್ಕೆ ಸೀಮಿತ. ಹಾಗಾಗಿ ಈಗ ಧರ್ಮ ಎಂಬುದು ಅನರ್ಥವನ್ನು ಕಲ್ಪಿಸಿಕೊಂಡಲ್ಲಿ ಧರ್ಮದ ಸ್ಥಾನ ಭ್ರಷ್ಟವಾಗುವುದಿಲ್ಲ, ಬದಲಿಗೆ ಮನುಷ್ಯನ ಬುದ್ಧಿ ಭ್ರಷ್ಟವಾಗುತ್ತದೆ. 

ಬೀಜ ಮೊಳಕೆಯೊಡೆಯುತ್ತದೆ, ಗಿಡವಾಗುತ್ತದೆ,ಮರವಾಗುತ್ತದೆ, ಹೂ ಅರಳುತ್ತದೆ, ಕಾಯಿ ಹಣ್ಣಾಗುತ್ತದೆ. ಇದು ಪ್ರಕೃತಿ ಧರ್ಮ.  ಈ ಜೀವರಾಶಿಗಳು ಚರಾಚರವಸ್ತುಗಳು ಸಹಜವಾದ ಒಂದು ಧರ್ಮದ ಅಸ್ತಿತ್ವವನ್ನು ಹೊಂದಿದೆ. ಆ ಆವರಣದ ಒಳಗೆ ಇರುವುದೇ ಜಗತ್ತು. ಈ ಸಹಜ ಧರ್ಮಗಳನ್ನು ಮೀರುವುದೇ ಧರ್ಮಗ್ಲಾನಿ ಎನಿಸಲ್ಪಡುತ್ತದೆ. ಪುರಾಣದಲ್ಲಿ ಶ್ರೀಕೃಷ್ಣ ಕಾಳಿಂಗ ಮರ್ದನ ಮಾಡುವ ಕಥೆ ಇದೆ. ಕಾಳಿಂಗ ಮರ್ದನ ಆತ ಮಾಡಿದ್ದಾನೆ ಎಂದರೆ ಇದ್ದ ಎಲ್ಲ ಸರ್ಪಗಳನ್ನು ಕೊಂದು ನಾಶ ಮಾಡಬೇಕೆಂದು ಅರ್ಥವಲ್ಲ. ಉಳಿದ ಜೀವಸಂಕುಲಗಳನ್ನು ಭಗವಂತ ಹೇಗೆ ಕಾಣುತ್ತಾನೋ  ಅದನ್ನೆ ಸರ್ಪದಲ್ಲು ಕಾಣುತ್ತಾನೆ. ಹಾಗಾದರೆ ಕಾಳಿಂಗ ಮರ್ದನ ಯಾಕಾಯಿತು? ಇದರ ಆಳವನ್ನು ತಿಳಿದರೆ ಧರ್ಮಾಧರ್ಮದ ಅರಿವು ಸಾಧ್ಯವಾಗುತ್ತದೆ. ಅಧರ್ಮ ಎಷ್ಟು ಆಳದಲ್ಲಿದ್ದರೂ ಭಗವಂತ ಅದರ ಅಸ್ತಿತ್ವವನ್ನು ಬಯಸುವುದಿಲ್ಲ. ಹಾಗಾಗಿ ಆಳದಲ್ಲಿದ್ದ ಸರ್ಪದ ಮರ್ದನವಾಗುತ್ತದೆ. 

ಧರ್ಮ ಎಂದರೆ ಏನು? ಸಕಲ ಜೀವರ ರಾಶಿಗಳಲ್ಲಿ ಶ್ರೇಷ್ಠ ಮನುಷ್ಯ. ಆತ ನಗುತ್ತಾನೆ, ಅಳುತ್ತಾನೆ, ಮಾತನಾಡುತ್ತಾನೆ. ಹೀಗೆ ಉಳಿದೆಲ್ಲ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಅದು ಧರ್ಮ.  ನಾಯಿ ನಿಕೃಷ್ಟವಾಗಿ ಹೇಳಿದರೂ, ಒಂದು ಬೀದಿ ನಾಯಿಕೂಡ ವ್ಯಕ್ತ ಪಡಿಸುವ ಭಾವನೆಯನ್ನು ಬೇರೆ ಪ್ರಾಣಿಗಳು ವ್ಯಕ್ತ ಪಡಿಸುವುದಿಲ್ಲ. ಸಂತಸವಾಗುವಾಗ ಬಾಲ ಅಲ್ಲಾಡಿಸುತ್ತದೆ. ಅದು ಅನುಭವಿಸುವ ಭಾವನೆಗಳನ್ನು ತನ್ನ ಕಣ್ಣು ಕಿವಿಯಿಂದ ಅದು ವ್ಯಕ್ತ ಪಡಿಸುವ ರೀತಿ ಬೇರೆ ಪ್ರಾಣಿಗಳಿಗೆ ಇರುವುದಿಲ್ಲ. ಹುಲಿ ಸಿಂಹ ಎಂದಾದರೂ ನಗುವುದನ್ನು ನೋಡುವುದಕ್ಕೆ ಸಾಧ್ಯವೇ? ಎಂತಹ ರುಚಿಕರ ಮಾಂಸಾಹರ ಸಿಕ್ಕರೂ ಅವುಗಳು ವ್ಯಗ್ರತೆಯಿಂದಲೇ ನೋಡುತ್ತದೆ. ಅದಕ್ಕೆ ಸಂತೋಷವಾದರೂ ಮುಖ ವ್ಯಗ್ರವಾಗಿಯೇ ಇರುತ್ತದೆ. ಅದು ಅದರ ಸಹಜ ಧರ್ಮ. ಒಂದು ವೇಳೆ ಅದು ನಗುವುದಕ್ಕೆ ತೊಡಗಿದರೆ ವಿಚಿತ್ರ ಎನಿಸಬಹುದು.   ಇದನ್ನೇ ಪ್ರಕೃತಿ ಧರ್ಮ ಎನ್ನುವುದು. ಈ ಪ್ರಕೃತಿ ಸಾರುವ ಧರ್ಮಕ್ಕೆ ಗ್ಲಾನಿಯಾಗುವಾಗ ಮೇಲೆ ಹೇಳಿದಂತೆ ಸಂಭವಾಮಿ ಯುಗೇ ಯುಗೇ ಎಂದಾಗುತ್ತದೆ. ನಾವು ಇವತ್ತು ಹುಲಿ ಸಿಂಹಗಳನ್ನು ನಗಿಸುವುದಕ್ಕೆ ಪ್ರಯತ್ನಿಸುತ್ತೇವೆ. ಪ್ರಕೃತಿಯ ಧರ್ಮಗಳನ್ನು ಮೀರಿ ಬದುಕುತ್ತೇವೆ. ಇಂತಹ ಜೀವನ ಕ್ರಮದಲ್ಲಿ ಸನಾತನ ಎಂಬುದು ರೋಗಗ್ರಸ್ಥವಾಗಿ ಕಾಣುತ್ತದೆ. ಅದು ಸನಾತನದ ದೋಷವಲ್ಲ. 

ಈ ಪ್ರಪಂಚದ ಉಗಮ ಅಸ್ತಿತ್ವ ಯಾವಾಗಿನಿಂದ ಆರಂಭವಾಯಿತು. ಈ ಭೂಮಿ ಈ ಬಾಹ್ಯಾಕಾಶ ಈ ಸೂರ್ಯನಂತೆ ಮತ್ತೊಂದು ಸೂರ್ಯ ಇದೆಯೋ ಇಲ್ಲವೋ ಎಂಬಷ್ಟರ ಮಟ್ಟಿಗೆ ತೆರೆದುಕೊಂಡ ಆ ಜ್ಞಾನದ ಹರಿವಿನ ಮೂಲದಲ್ಲೇ ಇದೆ ಸನಾತನ. ಅದು ಈಗ ತಿಳಿಯುವಂತೆ ಒಂದು ಧರ್ಮಕ್ಕೆ ಸೀಮಿತವಾಗಿ ಉಳಿದಿದೆ ಎಂದನಿಸುವುದಿಲ್ಲ. ಉಳಿದೆಲ್ಲ ಧರ್ಮಗಳಿಗೆ ಉಗಮದ ಕಲ್ಪನೆ ಇರಬಹುದು. ಆದರೆ ಈ ಸನಾತನ  ಇನ್ನೂ ನಿಗೂಢವಾಗಿರುವುದೇ ಅದರ ವೈಶಿಷ್ಟ್ಯ.  ಆ ಸನಾತನವನ್ನು ನಮ್ಮ ಅಳತೆಗೋಲಲ್ಲಿ ಅಳೆಯುವ ಪ್ರಯತ್ನ ಅದು ಮೂರ್ಖತನವಾಗುತ್ತದೆ.  ಜೇಸುದಾಸ್, ಬಾಲ ಮುರಳಿ ಕೃಷ್ಣ ಭೀಮಸೇನ ಜೋಷಿ ಹೀಗೆ ಸಂಗೀತರತ್ನಗಳ ಬಗ್ಗೆ ಹೇಳುವಾಗ ಅವರು "ಗಾಯಕ"  ಎಂದಷ್ಟೇ ಹೇಳಿದರೆ ಅದು ನಾವು ಕಂಡ ಅಳತೆ ಗೋಲಾಗುತ್ತದೆ. ಹೊರತು ನಿಜವಾದ ಮಾನದಂಡವಾಗುವುದಿಲ್ಲ. ಹಾಡುವವರೆಲ್ಲ ಗಾಯಕರು. ಆದರೆ ಈ ಪ್ರತಿಭೆಗಳು ಅಷ್ಟಕ್ಕೇ ಸೀಮಿತವಲ್ಲ. ಯಾವುದು ಹೇಗೆ ಹಾಡಿದರೂ ಆತ ಗಾಯಕ. ಹಾಗಿದ್ದರೆ ಇವರ ಸಾಧನೆ ಪ್ರತಿಭೆಗೆ  ಕೇವಲ ಗಾಯಕ ಎಂದರೆ ಸಾಕೇ?   ಸನಾತನ ಅರಿವು ಇರುವುದೇ ಇಂತಹ ಜ್ಞಾನದಲ್ಲಿ. ಅದನ್ನು ಅರಿಯಬೇಕಾದರೆ ಅದರ ಆಳವನ್ನು ಇಳಿಯಬೇಕು. 

ಭೋರ್ಗರೆಯುವ ಸಾಗರದ ಬದಿಯಲ್ಲಿ  ನಿಂತು ನೋಡಿದರೆ ಕೇವಲ ಕೆಲವು ಅಲೆಗಳನ್ನಷ್ಟೇ ನಾವು ಕಾಣಬಹುದು.  ದೂರದಿಂದ ಕಂಡವರು ಹೇಳಬಹುದು ಸಮುದ್ರ ಅದು . ಇಳಿಯಬೇಡ? ನಾಶವಾಗುತ್ತಿ. ಸಮುದ್ರ ಅದು ಮರಣ ಸದೃಶ.  ಹೀಗೆ ಭಯ ಹುಟ್ಟಿಸುವವರು ಇರಬಹುದು. ಆದರೆ ಸಾಧಕ ಸಾಗರದ ಆಳವನ್ನು ಅರಿಯುವ ಪ್ರಯತ್ನ ಮಾಡುತ್ತಾನೆ. ಆಳದ ಮುತ್ತು ರತ್ನಗಳನ್ನು ಗುರುತಿಸುತ್ತಾನೆ. ಸಾಗರ ಗರ್ಭದ ಪ್ರಪಂಚವನ್ನು ಕಾಣುತ್ತಾನೆ. ಮೇಲೆ ನಿಂತವನು ಅದು ಮರಣ ಸದೃಶ ಎಂದು ಹೇಳಿ ತನ್ನ ರೋಗ ಗ್ರಸ್ಥ ಮನಸ್ಸನ್ನು ಅಲ್ಲಿ ಆರೋಪಿಸುತ್ತಾನೆ.  ಸನಾತನ ಎಂದರೆ ಅದು ಸಾಗರದಂತೆ. ಅಳತೆ ಕಣ್ಣಿಗೆ ಕಾಣಬಹುದು. ಆದರೆ ಅದು ಸತ್ಯವಾಗುವುದಿಲ್ಲ. ಅದು ಅಂತಿಮವಾಗುವುದಿಲ್ಲ. ಇನ್ನೂ ಇದೆ ಭಾವವನ್ನು ಕೆರಳಿಸುತ್ತ ಪ್ರಚೋದಿಸುತ್ತಾ ಸಾಗುತ್ತದೆ. ಇದರ ಬಗ್ಗೆ ತಿಳಿಯದವರು ಅದನ್ನು ಢೆಂಗ್ಯೂ ಕೊರೋನಕ್ಕೆ ಹೋಲಿಸುತ್ತಾರೆ. ಆದರೆ ಸನಾತನ ತೋರಿಸಿಕೊಡುತ್ತದೆ ಈ ಸಾಂಕ್ರಾಮಿಕಗಳು ಕೇವಲ ದೇಹವನ್ನು ಬಾಧಿಸುತ್ತದೆ, ಅದಕ್ಕೆ ಮಿಕ್ಕಿದ ಭವರೋಗಗಳು ಇದೆ. ಆ ಭವರ ರೋಗವನ್ನು ಕಳೆಯುವ ಮಂತ್ರ ಇದ್ದರೆ ಅದು ಸನಾತನದಲ್ಲಿ.ಅಲ್ಲಿ ಕೇವಲ ಈ ಮಾರಕ ರೋಗಗಳಿಗೆ ಸೀಮಿತವಲ್ಲ. ಅದಕ್ಕೂ ಮಿಕ್ಕಿದ ಭವರೋಗದ ಅರಿವಾಗುವಾಗ ಸನಾತನ ಎಂಬುದು ರೋಗಗ್ರಸ್ಥ ಎಂದನಿಸುವುದಿಲ್ಲ. ದೇಹದ ಮೇಲೆ ಪ್ರೀತಿ ಇದ್ದವನಿಗೆ ಹಸಿವು ಎಂಬುದು ಬ್ರಹ್ಮಾಂಡ ಸಮಸ್ಯೆಯಾಗುತ್ತದೆ. ಆದರೆ ಅದನ್ನು ಮೀರಿದವನಿಗೆ ಹೊಟ್ಟೆಯ ಹಸಿವು ಹಸಿವಾಗಿ ಕಾಣುವುದಿಲ್ಲ. ಅದು ಪರೀಕ್ಷೆಯಾಗಿ ಕಾಣುತ್ತದೆ. ಕೇವಲ ಲೌಕಿಕ ಜ್ಞಾನದ ಪರಿಧಿಯಲ್ಲಿ ಹೊರಳಾಡುವವನು ಈ ಹಸಿವು ಮುಕ್ತವಾಗಬೇಕು ಎಂದು ಕನವರಿಸುತ್ತಾನೆ. ಇದೆಲ್ಲವನ್ನು ಮೀರಿದ ಹಸಿವು ಇದೆ ಎಂದು ತೋರಿಸುವುದೇ ಸನಾತನ. ಜಗತ್ತು ಇಂದು ಈ ಸನಾತನದ ಹಿಂದೆ ಓಡಿ ಬರುತ್ತದೆ. ಹಿಂದೂ ಸಂಸ್ಕೃತಿ ಇದನ್ನೇ  ಜಗತ್ತಿಗೆ ತೋರಿಸಿ ಕೊಡುತ್ತಿರುವುದು.  ಇದನ್ನು ರೋಗ ಗ್ರಸ್ಥ ಎಂದರೆ ಅದು ಕಾಣುವ ದೃಷ್ಟಿ ರೋಗಿಷ್ಠವಾಗಿರುತ್ತದೆ. 

ಕೇವಲ ಸನಾತನ ಎಂಬ ಶಬ್ದದ ಅರ್ಥ  ವಿವರಿಸಿದರೆ ಅದು ಅಷ್ಟಕ್ಕೇ ಸೀಮಿತವಾಗುವುದಿಲ್ಲ. ಸನಾತನ ಅದು ಮತ್ತೂ ವಿಶಾಲವಾಗಿದೆ. ಅದು ಎಷ್ಟು ಕಾಣಲು ಸಾಧ್ಯವಾಯಿತೋ ಅದು ನಮ್ಮ ದೃಷ್ಟಿಯ ಪರಿಧಿ. ಆದರೆ ಸನಾತನ ಅದು ಇನ್ನೂ ವಿಶಾಲವಾಗಿದೆ. ಸನಾತನದಲ್ಲಿ  ಜಾತಿ ಭೇದ, ಅಸ್ಪೃಶ್ಯತೆ ಕಂದಾಚಾರ ಮೂಢನಂಬಿಕೆ ಇಷ್ಟನ್ನು ಮಾತ್ರ ಕಾಣುವುದು ಅದು ಸಣ್ಣಮನಸ್ಸು. ಸನಾತನ ತೋರಿಸುವ ಆಧ್ಯಾತ್ಮ ಜಗತ್ತನ್ನು ಕಾಣಬೇಕಾದರೆ ಅದಕ್ಕೆ ನಿರಂತರ ಸಾಧನೆ ಅವಶ್ಯ. ಅದನ್ನು ಕಾಣುವುದಕ್ಕೆ ಕೈಲಾಗದವರು ಆಡುವ ಮಾತು ಅಲ್ಲಿ ಮೌಢ್ಯವಿದೆ, ವರ್ಣ ಭೇದವಿದೆ. ಆದರೆ ಆಧ್ಯಾತ್ಮದ ಹಾದಿಯಲ್ಲಿ ನಡೆದು ಹೋಗಬೇಕು ಆಗ ಅರಿವಿಗೆ ಬರುತ್ತದೆ ಅಲ್ಲಿ ಯಾವುದೇ ಧರ್ಮವಿಲ್ಲ. ಬ್ರಾಹ್ಮಣ, ಶೂದ್ರ ಈ ವೈಪರೀತ್ಯಗಳಿಲ್ಲ. ಪ್ರಪಂಚವೇ ಇಂದು ಈ ಆಧ್ಯಾತ್ಮಿಕ ಜ್ಞಾನಕ್ಕೆ ಬೆರಗಾಗಿ ಹೋಗಿದೆ. ಇಲ್ಲವಾದರೆ ಇಲ್ಲಿಯ ಯೋಗ ಧ್ಯಾನ ಈ ಜೀವನ ಯಾಕೆ ಜಗತ್ತು ಅಂಗೀಕರಿಸುತ್ತದೆ? ಪುರಾಣದ ಋಷಿಗಳ ತಪ್ಪಸ್ಸು ಗಮನಿಸಿದರೆ ಅರಿವಾಗುತ್ತದೆ. ಅವರು ಯಾಕಾಗಿ ತಪಸ್ಸು ಮಾಡುತ್ತಾರೆ? ಅದರ ಘನ ಉದ್ದೇಶ ಏನು? ಯಾವ ಮೂರ್ತಿಯನ್ನು ಇಟ್ಟು ಪೂಜೆ ಮಾಡುತ್ತಾರೆ? ಇದಕ್ಕೆಲ್ಲ ಉತ್ತರ ಕಾಣುತ್ತಾ ಹೋದರೆ ಈ ಜ್ಞಾನದ ಅರಿವಿನ ವಿಸ್ತಾರ ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಒಬ್ಬ ಋಷಿ ಅಥವಾ ಸನ್ಯಾಸಿ ತನಗಾಗಿ ಏನನ್ನು ಕೇಳುವುದಿಲ್ಲ. ಯಾಕೆಂದರೆ ಲೌಕಿಕವಾದ ಯಾವ ವಸ್ತು ಅವನು ಬಯಸಿದರೂ ಆತ ಸನ್ಯಾಸಿಯಾಗಲಾರ. ಯಾವುದೇ ಧರ್ಮಕ್ಕೆ ಸೀಮಿತವಾದರೂ ಆತ ಸನ್ಯಾಸಿಯಾಗಲಾರ. ಕೇವಲ ಕೃಪಣನಾಗುತ್ತಾನೆ. ಸನ್ಯಾಸಿ ಎಂಬ ಪದವಿಯ ಅರ್ಹತೆಯದು. ಕ್ಷತ್ರಿಯನಾಗಿ  ಬ್ರಹ್ಮ ತೇಜಸ್ಸನ್ನು ಗಳಿಸಿದ  ವಿಶ್ವಾಮಿತ್ರ, ನಿಕೃಷ್ಟನಾದರೂ  ರಾಮನಾಮದ ಹಿಂದೆ ಹೋದ ವಾಲ್ಮೀಕಿ...ಇಲ್ಲೆಲ್ಲೂ ವರ್ಣ ಭೇದದ ಸೋಂಕಿಲ್ಲ.  ಅವರೆಲ್ಲ  ಕಂಡ ಆಧ್ಯಾತ್ಮಿಕ ಲೋಕ ಎಂಬುದು ಕೇವಲ ಕಥೆಯಲ್ಲ. 

ಹಿಂದೂ ಅಂದರೆ ಮೂರ್ತಿ ಪೂಜೆ, ಅಸಂಖ್ಯ ದೇವರುಗಳು ರಾಮ ಕೃಷ್ಣ ಈಶ್ವರ ಗಣಪತಿ....ಮೂಢನಂಬಿಕೆಗಳು. ಆದರೆ ಇದಕ್ಕೆಲ್ಲ ಮೂಲವಾದ ಧ್ಯಾನ ಅಥವಾ ತಪಸ್ಸಿನಲ್ಲಿ ಯಾವ ಮೂರ್ತಿಯನ್ನು ಪೂಜಿಸುವುದಿಲ್ಲ. ಯಾವ ದೇವರನ್ನೂ ಆರಾಧಿಸುವುದಿಲ್ಲ. ಕೇವಲ ಅಂತರಂಗದಲ್ಲಿರುವ ಪರಮಾತ್ಮ ದರ್ಶನ. ಈ ಪರಮಾತ್ಮ ಎಂಬ ಕಲ್ಪನೆಯನ್ನು ಕೊಟ್ಟದ್ದೇ ಸನಾತನ ಧರ್ಮ. ಮೂರ್ತಿ ಎಂಬುದು ಕೇವಲ ಸಂಕೇತ. ಅದರಾಚೆಗಿರುವ ಭಾವನೆಗೆ ಮಿತಿ ಇರುವುದಿಲ್ಲ. ಇಲ್ಲಿ ಕೇವಲ ಮೂರ್ತಿಯಲ್ಲಿ ಮಾತ್ರ ದೇವರನ್ನು ಕಾಣುವುದಿಲ್ಲ. ಗಿಡ ಮರ ಪ್ರಾಣಿ ನದಿ ಸಮುದ್ರ ಭೂಮಿ ಹೀಗೆ ಪ್ರಕೃತಿಯನ್ನೇ ದೇವರಾಗಿ ಕಾಣುವ ಭಾವನೆ ಇದೆ. ಬೇರೆ ಯಾವ ಧರ್ಮದಲ್ಲಿ ಈ ಭಾವನೆ ಇರುವುದಕ್ಕೆ ಸಾಧ್ಯ.? ಹೀಗೆ ಅಂತರಂಗದ ದೈವಸ್ವರೂಪವನ್ನು ತೋರಿಸಿಕೊಟ್ಟದ್ದೇ ಸನಾತನ ಧರ್ಮ. ಅದು ಪರಮಾತ್ಮ ಹೇಳುವ ಪ್ರಕೃತಿ ಧರ್ಮ. ಅದು ಒಂದು ಜಾತಿಯಲ್ಲ. ನಿರ್ಧಿಷ್ಟವಾಗಿ ಹೇಳಿ ಅಷ್ಟಕ್ಕೆ ಸೀಮಿತವಾಗಿಸುವ ವಿಷಯವೂ ಇದಲ್ಲ. ಇದರ ಬಗ್ಗೆ ತಿಳಿಯಬೇಕಾದರೆ ಅದರಲ್ಲಿ ಇಳಿದು ನೋಡಬೇಕು. ಇಲ್ಲವಾದರೆ ಸಮುದ್ರದ ಬದಿಯಲ್ಲಿ ನಿಂತು ಕೊಂಡು ಅದನ್ನು ಅಳತೆ ಮಾಡಿದಂತೆ, ಅದು ಮೂರ್ಖತನವಾಗುತ್ತದೆ. 

ಹಿಂದೆ ಮುಂದೆ ನೋಡದೆ ಬ್ರಾಹ್ಮಣ್ಯವನ್ನು ಜರಿಯುವುದನ್ನು ಕಾಣುತ್ತೇವೆ. ವಾಸ್ತವದಲ್ಲಿ ಬ್ರಹ್ಮ ಎಂದರೆ ಏನು? ಅದು ಅರ್ಥವಿಲ್ಲದ ಪದವಲ್ಲ. ಆ ಅರ್ಥಕ್ಕಿರುವ ವಿಶಾಲತೆ ತಿಳಿದರೆ ಬ್ರಾಹ್ಮಣ್ಯದ ಪವಿತ್ರತೆ ಅರಿವಾಗುತ್ತದೆ. ಯಾವುದು ಜಗತ್ತಿನಲ್ಲಿ ಅತ್ಯಂತ ದೊಡ್ಡದು ಅದೇ ಬ್ರಹ್ಮ. ಹಾಗಾಗಿ ಜಗತ್ತನ್ನು ಬ್ರಹ್ಮಾಂಡಕ್ಕೆ ಹೋಲಿಸುವುದು. ಅದೇ ಮುಂದು ವರೆದು ಬ್ರಾಹ್ಮಣನಾದವನು ಮುಂಜಾನೆ ಎದ್ದು ಸಂಧ್ಯಾ ಕರ್ಮವನ್ನು ಆಚರಿಸುತ್ತಾನೆ. ಇಲ್ಲಿ ಯಾವ ಮೂರ್ತಿಯೂ ಇಲ್ಲ. ಯಾವ ಸಂಕಲ್ಪವೂ ಇರುವುದಿಲ್ಲ. ಕೇವಲ ತನ್ನ ಪಾಪಕ್ಷಯ, ದುರಿತ ಪರಿಹಾರಕ್ಕೆ ಆತ ಆಚರಿಸುವ ಕರ್ಮ. ಪಾಪ ಏನು?  ದುರಿತ ಏನು? ಅದು ಮನುಷ್ಯನ ಹುಟ್ಟಿನಲ್ಲೇ ಇರುತ್ತದೆ. ಈ ಜ್ಞಾನ ಲಭ್ಯವಾಗಬೇಕಾದರೆ ಅದರ ಆಳಕ್ಕೆ ಇಳಿಯಬೇಕು. ಅದು ತಿಳಿಯದೇ ಸನಾತನ ಎಂಬುದುನ್ನು ತುಚ್ಛವಾಗಿ ಕಂಡರೆ ಅದು ಸನಾತನ ಧರ್ಮದ ರೂಪವೂ ಅಲ್ಲ, ವಿಸ್ತಾರವೂ ಅಲ್ಲ. ಸನಾತನ ಧರ್ಮ ಯಾವ ಜಾತಿಭೇದ ವರ್ಣಭೇದವನ್ನು ಬೋಧಿಸುವುದಿಲ್ಲ. ಅವುಗಳೆಲ್ಲವೂ ನಂತರ ಅದರ ಮೇಲೆ ಬಳಿದ ಬಣ್ಣಗಳು. ಹಿಂದೂ ಧರ್ಮ ಇದೆಲ್ಲವನ್ನು ಕಳೆದುಕೊಂಡು ಕಾಲ ಕಾಲಕ್ಕೆ ಬದಲಾಗುತ್ತಾ ಪ್ರಕೃತಿ ಧರ್ಮಕ್ಕೆ ಸ್ಪಂದಿಸುತ್ತಾ ಎಲ್ಲ ಧರ್ಮಗಳನ್ನು ತನ್ನಲ್ಲಿ ಸೇರಿಸುತ್ತಾ ಬಂದಿದೆ. ಜಗತ್ತಿನ ಬೇರೆ ಯಾವ ಧರ್ಮವೂ ಬದಲಾಗದಂತೆ ಇದು ಬದಲಾಗಿದೆ. ಯಾಕೆಂದರೆ ಇದರ ಮೂಲದಲ್ಲಿ ಯಾವುದು ಇದೆಯೋ ಅದು ಬಣ್ಣ ಕಳಚಿ ಮತ್ತೆ ಮುನ್ನೆಲೆಗೆ ಬಂದಿದೆ. ಜಗತ್ತಿನಲ್ಲಿ ಬೇರೆ ಯಾವ ಧರ್ಮವೂ ತೋರಿಸದೇ ಇರುವ ನಾಗಾರೀಕತೆಯೆನ್ನು ಹಿಂದು ಧರ್ಮ ತೋರಿಸುತ್ತದೆ.  ಅದಕ್ಕೆ ನಿದರ್ಶನವೇ ಯೋಗ ಜೀವನ ಮತ್ತು  ಅಧ್ಯಾತ್ಮ ಲೋಕ ದರ್ಶನ. 

ಕೊನೆಯಲ್ಲಿ ಧರ್ಮೋ ರಕ್ಷತಿ ಎನ್ನುವ ಹಾಗೆ ಸನಾತನದ ವಾದ ಬರುವಾಗ, ಅದರ ಬಗ್ಗೆ ಏನು ಪ್ರತಿಕ್ರಿಯೇ ಕೊಡದೇ ಇರುವುದರಲ್ಲೇ ಅದಕ್ಕೆ ಉತ್ತರವಿರುತ್ತದೆ. ಯಾಕೆಂದರೆ ಅದು ಯಾರಿಂದಲೂ ನಾಶವಾಗುವುದಿಲ್ಲ. ಸರೋವರ ಸುಂದರವಾಗಿದೆ ಅದರ ಒಳಗೆ ಇಳಿದು ನೋಡಿ ಅನುಭವಿಸುವವರು ಕಡಿಮೆ. ಸನಾತನ ಸುಂದರವಾಗಿದೆ , ಅದನ್ನು ತಿಳಿಯಬೇಕಾದರೆ ಅದರ ಆಳಕ್ಕೆ ಇಳಿಯಬೇಕು. ಸನಾತನದ ರಕ್ಷಣೆ ಯಾರೂ ಮಾಡಬೇಕಾದ ಅವಶ್ಯಕತೆ ಇಲ್ಲ. ಅದು ಅಂದಿನಿಂದ ಇಂದಿನವರೆಗೂ ತನ್ನನ್ನು ತಾನು ರಕ್ಷಿಸುತ್ತಾ ಬಂದಿದೆ. ಅದು ಈವರೆಗೆ ಉಳಿದಿರುವುದೇ ಇದಕ್ಕೆ ನಿದರ್ಶನ.  ನಾವು ಯಾವುದೇ ಮತವನ್ನು ಮತಾಂತರ ಮಾಡಿ ಅಂಗೀಕರಿಸಬಹುದು, ಆದರೆ ಅಂತರಾತ್ಮ ಅದನ್ನು ಬದಲಿಸುವುದಕ್ಕೆ ಸಾಧ್ಯವಿಲ್ಲ. ಅದೆಂದು ಬದಲಾಗುವುದೂ ಇಲ್ಲ. ಬಹಿರಂಗದಲ್ಲಿ ಯಾವುದನ್ನೋ ಹೇಳಬಹುದು, ಆದರೆ ಅಂತರಂಗದಲ್ಲಿ ಅದು ಶಿವನೋ ರಾಮನೋ ಅದೇ ಮೂಲ ಸ್ವರೂಪದಲ್ಲಿರುತ್ತದೆ.  


ಮಂಗಲಂ ಭಗವಾನ್ ವಿಷ್ಣು ಮಂಗಲಂ ಮಧು ಸೂದನ 

ಮಂಗಲಂ ದೇವಕೀ ಪುತ್ರೋ ಮಂಗಲಂ ಗರುಡ ಧ್ವಜ

ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರ

ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಚತಿ.

ಪ್ರತಿ ಬಿಂದು ನೀರು ಸಾಗರದ ಕಡೆಗೆ ಸಂಚರಿಸುವಂತೆ ಯಾವ ದೇವರನ್ನು ನಮಸ್ಕರಿಸಿದರೂ ಅದು ಸೇರುವುದು ಒಂದೇ ಪರಮಾತ್ಮನಲ್ಲಿಗೆ.