Wednesday, December 28, 2022

ಲೆಕ್ಕವಿಲ್ಲದೇ ಇದ್ದ ನೆನಪುಗಳು

          ಕೆಲವು ದಿನಗಳ ಹಿಂದೆ  ನಮ್ಮೂರಿನ ಪೈವಳಿಕೆಯ ಗ್ರಾಮ ಕಛೇರಿ (ವಿಲೇಜ್ ಆಫೀಸ್) ಗೆ ಹೋಗಿದ್ದೆ. ನಮ್ಮ ಊರಿನ ಜಮೀನಿನ ತೆರಿಗೆ ಕಟ್ಟುವುದಿತ್ತು. ಹಾಗೆ ಯಾವುದೋ ದಾಖಲಾತಿ ತೆಗೆಯುವುದಕ್ಕೆ ಅಲ್ಲಿ ಕಾದು ಕುಳಿತಿದ್ದೆ. ಹೊರಗಿನ ನಮ್ಮೂರಿನ ನೀರವ ವಾತಾವರಣವನ್ನು ಆಸ್ವಾದಿಸುತ್ತಾ ತಲ್ಲೀನನಾಗಿದ್ದೆ. ಸುತ್ತಲೂ ಕರಿ ಬಣ್ಣದ ಪಾದೆ ಕಲ್ಲುಗಳು,  ಅಲ್ಲೇ ಒಂದು ಗೋಳಿಮರದ ಕಟ್ಟೆ ಇತ್ತು ಅದು ಇಲ್ಲ, ಅದರ ಜತೆಗೆ ಅಲ್ಲಿ ಇಲ್ಲಿ ಉಳಿದುಕೊಂಡ ಪಳೆಯುಳಿಕೆಯಂತಹ ಮರಗಿಡಗಳು ಎಲ್ಲವೂ ಬದಲಾವಣೆಯಾದರೂ ನಮ್ಮ ಪೈವಳಿಕೆ ಇನ್ನೂ ಶಾಂತವಾಗಿದ್ದಂತೆ ಅನಿಸಿತ್ತು.  ಇದೀಗ ವಿಲೇಜ್ ಆಫೀಸ್ ಎದುರಿಗೆ ಅಟೋ ಸ್ಟಾಂಡ್ ಆಗಿದೆ. ನಮ್ಮ ಬಾಲ್ಯದಲ್ಲಿ  ಮೊದಲು ಆಟೋ ರಿಕ್ಷ ನೋಡಬೇಕಾದರೆ ಮಂಗಳೂರಿಗೆ ಇಲ್ಲಾ ಕಾಸರಗೋಡಿಗೆ ಹೋಗಬೇಕಿತ್ತು. ಹತ್ತಿರದ ಉಪ್ಪಳದಲ್ಲೂ ರಿಕ್ಷಾಗಳು ಇರಲಿಲ್ಲ.    ಅಬ್ಬಾಸ್ ಬ್ಯಾರಿಯ ಕಪ್ಪು ಬಣ್ಣದ  ಬಾಡಿಗೆ  ಅಂಬಾಸಿಡರ್ ಬಿಟ್ಟರೆ ಅಲ್ಲಿ ಬೇರೆ ವಾಹನಗಳಿರಲಿಲ್ಲ.  ಅದೂ ಯಾರನ್ನೂ ಕಾದು ಇರುತ್ತಿರಲಿಲ್ಲ. ಹೀಗೆ ಊರಿಗೆ ಹೋದಾಗ ಹಳೆಯ ನೆನಪುಗಳು ಕಾಡುತ್ತಿರುವಂತೆ ಈಗಲೂ ಅದೇ ನೆನಪಿನ ಹಗ್ಗ ಜಗ್ಗಾಟದಲ್ಲಿ ವಾಸ್ತವವನ್ನು ಮರೆತಂತೆ ಇದ್ದು ಬಿಟ್ಟೆ. 

ಈ ಚಿತ್ರದಲ್ಲಿನ ಕಟ್ಟಡದ ಕೊನೆಯಲ್ಲಿ ನಾನು ಕಲಿತ ಆರನೇ ತರಗತಿ

                                   ಈ ಚಿತ್ರದಲ್ಲಿನ ಕಟ್ಟಡದ ಕೊನೆಯಲ್ಲಿ ನಾನು ಕಲಿತ ಆರನೇ ತರಗತಿ 


         ತಲ್ಲೀನತೆಯಲ್ಲಿ ಎಲ್ಲವನ್ನೂ ಮರೆತಿರುವಾಗ ಹಿಂದಿನಿಂದ ಯಾರೋ ಬೆನ್ನು ತಟ್ಟಿದ ಅನುಭವವಾಗಿ ಹಿಂದೆ ತಿರುಗಿ ನೋಡಿದೆ. " ಏನು ರಾಜಕುಮಾರ್....." ಅದೇ ನೆನಪಿಗೆ ಸರಿದು ಹೋದ ಒಂದು ಧ್ವನಿ ಮತ್ತೆ ಮರುಕಳಿಸಿದಂತೆ ಭಾಸವಾಯಿತು. ಎದುರಿಗೆ ನಸು ನಗುತ್ತಾ ಬೊಚ್ಚು ಬಾಯಿಯನ್ನು ಅಗಲಿಸಿ ನಗುತ್ತಾ ವೃದ್ದರು ನಿಂತಿದ್ದರು. ಹತ್ತಿರದಲ್ಲಿ ಯುವಕನೊಬ್ಬ ಕೈ ಹಿಡಿದು ನಿಂತಿದ್ದ. ಅವರು ಬೇರೆ ಯಾರೂ ಅಲ್ಲ ಆರನೇ ತರಗತಿಯ ಲೆಕ್ಕದ ಪಾಠ ಮಾಡಿದ ಮಹಮ್ಮದ್ ಮಾಸ್ತರ್. ಸರಿ ಸುಮಾರು ಮೂವತ್ತೈದು ವರ್ಷದ ನಂತರ ನೋಡುತಿದ್ದೇನೆ. ಈಗಲೂ ನನ್ನ ಪರಿಚಯ ಹಿಡಿದು ರಾಜ ಕುಮಾರ್ ಅಂತ ಅವರು ಕರೆದು ಮಾತನಾಡಿಸಬೇಕಾದರೆ ಹಳೆಯನೆನಪುಗಳಿಗೆ ಸೇತುವೆಯಂತೆ ಈ ವಯೋವೃದ್ದ ಮಹಮ್ಮದ್ ಮಾಸ್ತರ್ ನಿಂತಿದ್ದರು. ನನ್ನಂತಹ ಎಷ್ಟೋ ಮಕ್ಕಳಿಗೆ ಲೆಕ್ಕದ ಬಾಲ ಪಾಠಗಳನ್ನು ಹೇಳಿಕೊಟ್ಟ ಮಹಮ್ಮದ್ ಮಾಸ್ತರ್ ನನ್ನನ್ನೂ ನನ್ನ ಹೆಸರನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಎಂದರೆ .....ಅದೂ ಈ ಇಳಿ ವಯಸ್ಸಿನಲ್ಲಿ ಆಶ್ಚರ್ಯವಾಯಿತು. ಅದಕ್ಕೆ ಕಾರಣ ನಮ್ಮ ನಡುವಿನ ಗುರುಶಿಷ್ಯ ಸಂಬಂಧ. ಕಾಯರ್ ಕಟ್ಟೆ ಹೈಸ್ಕೂಲಿನಲ್ಲಿ ಆರನೆ ತರಗತಿಯ ಆ ಕೋಣೆ ಮತ್ತೊಮ್ಮೆ ಕಣ್ಣೆದುರು ಬಂದು ನಿಂತಿತು. ಈಗಲೂ ಸರಳ ಬಡ್ಡಿ ಏನೂ ಎಂದು ಕೇಳಿಬಿಡುತ್ತಾರೋ ಎಂದು ಅವರ ಮುಖ ನೋಡಿದೆ. ವಯಸ್ಸಿನ ಭಾರಕ್ಕೆ ಅವರು ಬಹಳಷ್ಟು ಕೃಶರಾಗಿದ್ದರು. ಉತ್ಸಾಹದ ಚಿಲುಮೆಯಂತೆ ತರಗತಿ ತುಂಬ ಓಡಾಡಿಕೊಂಡಿದ್ದ ಮಹಮ್ಮದ್ ಮಾಸ್ತರ್ ಎಲ್ಲಿ?  ಈ ಯುವಕನ ಕೈ ಆಧರಿಸಿ ನಿಂತು ಕೊಂಡ ಈ ವಯೋವೃದ್ದ ಎಲ್ಲಿ?

        ಮಹಮ್ಮದ್ ಮಾಸ್ತರ್,  ಸದಾ ಬಿಳಿ ಪಂಚೆ ಅಂಗಿ ಧರಿಸಿ ಬರುತ್ತಿದ್ದ ಶ್ವೇತ ವಸನಿ ಅಚ್ಚ ಬಿಳುಗಿನ ಉಡುಗೆಯ ಮಾಸ್ತರ್, ಸದಾ ತಲೆ ಮೇಲೆ ಒಂದು ಕಪ್ಪು ಟೊಪ್ಪಿ ಇರುತ್ತಿತ್ತು.  ಅವರನ್ನು ಎಂದೂ ಬೇರೆ  ವರ್ಣಮಯ ಉಡುಗೆಯಲ್ಲಿ ಕಂಡದ್ದೇ ಇಲ್ಲ. ಇಂದೂ ಅದೇ ರೀತಿ ಬಿಳಿ ಪಂಚೆ ಮತ್ತು ಬಿಳಿ ಅಂಗಿ  !! ಸುತ್ತಿದ ಬಟ್ಟೆ ಹೊಸದಾಗಿರಬಹುದು, ಆದರೆ ಬಣ್ಣ ಮಾತ್ರ ಹಳೆಯದೆ, ಮಾತ್ರವಲ್ಲ ಮಾಸ್ತರೂ ಹಳೆಯವರೆ. ಮಹಮ್ಮದ್ ಮಾಸ್ತರ್     ಅನ್ವರ್ಥವಾಗಿ ಟೊಪ್ಪಿ ಮಾಸ್ತರ್ ಎಂದೇ ಕರೆಸಿಕೊಳ್ಳುತ್ತಿದ್ದ ಇವರು ನಮಗೆ ಲೆಕ್ಕದ ಮಾಸ್ತರ್. ಸದಾ ಜೇಬಿನಲ್ಲಿ ಕಬ್ಬಿಣದ ಕಡಲೆಯನ್ನೇ ತರುತ್ತಿದ್ದಾರೋ ಎಂದು ಅನ್ನಿಸುತ್ತಿತ್ತು. ಗುರು ಅಥವಾ ಅಧ್ಯಾಪಕ(ಪಿಕೆ) ಎಂದರೆ ಉರಿಯುವ ದೀಪದಂತೆ. ತಾನು ಉರಿಯುತ್ತಾ ಬೆಳಕನ್ನು ಕೊಡುತ್ತಾ ಸ್ವತಃ ಇಲ್ಲದೇ ಅಗುವುದು.  ಆಗ ಇವರು ಒಂದರಿಂದ ಇಪ್ಪತ್ತರವೆರೆಗಿನ ಮಗ್ಗಿ ಪುಸ್ತಕದ ಅಷ್ಟೂ ಮಗ್ಗಿಗಳನ್ನು ಮೇಲಿಂದ ಕೆಳಗೆ ಕೆಳಗಿಂದ ಮೇಲೆ ದರ್ ದರ್ ಅಂತ ಹೇಳುತ್ತಿದ್ದುದು ಕೌತುಕಮಯವಾಗಿತ್ತು. 

        ನಾಲ್ಕನೇ ತರಗತಿಯಿಂದ ಆರನೆ ತರಗತಿಯ ಮಧ್ಯಭಾಗದವರೆಗೂ ನಾನು ಮಂಗಳೂರಿನ ಶಾಲೆಯಲ್ಲಿ ಕಲಿತಿದ್ದೆ. ಆಮೇಲೆ ಅನಾರೋಗ್ಯ  ಮತ್ತೇನೋ ಕಾರಣಗಳಿಂದ ಶಾಲೆ ಅರ್ಧಕ್ಕೆ ಮೊಟಕುಗೊಳಿಸಿದುದರಿಂದ ಮತ್ತೆ ಮೂರು ವರ್ಷ ಕಳೆದು  ಪೈವಳಿಕೆಯ ಕಾಯರ್ ಕಟ್ಟೆ ಹೈಸ್ಕೂಲ್ ಗೆ ಆರನೇ ತರಗತಿಗೆ ಮತ್ತೆ ಸೇರಿಕೊಂಡೆ. ಕರ್ನಾಟಕದಿಂದ  ಬಂದ ವಿದ್ಯಾರ್ಥಿಗಳಿಗೆ ಕೇರಳದಲ್ಲಿ ಒಂದು ಪ್ರವೇಶ ಪರೀಕ್ಷೆ ಇರುತ್ತಿತ್ತು. ಕ್ಲಾಸ್ ಮಾಸ್ತರುಗಳೇ ನಡೆಸುವ ಈ ಪರೀಕ್ಷೆಯಲ್ಲಿ ಪಾಸಾದರೆ ಶಾಲೆಗೆ ಸೇರಿಸಿಕೊಳ್ಳಲಾಗುತ್ತಿತ್ತು. ಅಂದು ನನಗೂ ಪ್ರವೇಶ ಪರೀಕ್ಷೆ ಇತ್ತು. ಬರೆದಾದಾದ ಮೇಲೆ ಅದು ಪರೀಕ್ಷೆ ಎಂದು ನನಗೆ ಗೊತ್ತಾಗಿದ್ದು. ಮೂರು ವರ್ಷ ಶಾಲಾಜೀವನದಿಂದ ದೂರವೇ ಉಳಿದ ನಾನು ಪರೀಕ್ಷೆಯಲ್ಲಿ ಪೈಲ್ ಆಗಿದ್ದೆ. ಆದರೆ ನನಗೆ ಎಲ್ಲವನ್ನೂ ಹೇಳಿಕೊಟ್ಟು ಪಾಸ್ ಮಾಡಿದ್ದು ಈ ಮಹಮ್ಮದ್ ಮಾಸ್ತರ್.   ಅದುವರೆಗೆ ಲೆಕ್ಕದ ಭಿನ್ನ ರಾಶಿ ಎಂದರೆ ಏನೆಂದು ತಿಳಿಯದ ನನಗೆ ಒಂದಿಷ್ಟು ಗದರಿ ಅಕ್ಕರೆಯಿಂದ ಹೇಳಿಕೊಟ್ಟಿದ್ದರು.  ಅಲ್ಲಿಂದ ಆರಂಭವಾದ ಮಹಮ್ಮದ್ ಮಾಸ್ತರ್ ಸಂಪರ್ಕ ಆನಂತರ ಹಲವು ನೆನಪುಗಳನ್ನು ಕಟ್ಟಿಕೊಟ್ಟಿತ್ತು. 

         ಮೂರು ವರ್ಷದ ನಂತರ  ಶಾಲೆಗೆ ಸೇರಿದ್ದುದರಿಂದ ಉಳಿದ ಎಲ್ಲ ಮಕ್ಕಳಿಗಿಂತಲೂ ನಾನು ದೊಡ್ಡವನಾಗಿದ್ದೆ. ಹಾಗಾಗಿ ಕೊನೆಯ ಬೆಂಚ್ ನಲ್ಲಿ ಲಾಸ್ಟ್ ಬೆಂಚರ್ ಸ್ಟೂಡೆಂಟ್ ನಾನಾಗಿದ್ದೆ. ಇದು ಆರಂಭದಲ್ಲಿ ಹಲವು ಅಧ್ಯಾಪಕರಿಗೆ ನನ್ನ ಬಗ್ಗೆ ತಪ್ಪು ಕಲ್ಪನೆಯನ್ನು ತರಿಸಿತ್ತು. ಕೊನೆಯ ಬೆಂಚ್ ಎಂದರೆ ....ಎಲ್ಲದರಲ್ಲೂ ಕೊನೆಯ ಬೆಂಚ್. ಮಹಮ್ಮದ್ ಮಾಸ್ತರ್ ಗೂ ನನ್ನ ಮೇಲೆ ಹೆಚ್ಚು ಆಸಕ್ತಿ ಏನೂ ಇದ್ದ ಹಾಗಿಲ್ಲ. ಶಾಲೆಯ ಹತ್ತಿರವೇ ನಮ್ಮ ಮನೆ ಇದ್ದುದರಿಂದ ಶಾಲೆಯ ಹೊರಗೆ ಅಲ್ಲಿ ಇಲ್ಲಿ ಕಾಣುತ್ತಿದ್ದ ಮಾಸ್ತರು ಇಂದು ಕ್ಲಾಸಿನಲ್ಲಿ ಲೆಕ್ಕದ ಮಾಸ್ತರ್ ಆಗಿದ್ದರು. ಅದು ವರೆಗೆ ಸೀಮಿತವಾಗಿ ಪರಿಚಯವಿತ್ತು. ಪ್ರವೇಶ ಪರೀಕ್ಷೆಯಲ್ಲಿ ನಾನು ದಡ್ಡ ಎಂದು ಶ್ರುತ ಪಟ್ಟಿತ್ತು.  ಇದೆಲ್ಲ ಮೊದಲ ಎರಡು ತಿಂಗಳು ಅಷ್ಟೆ. ಮೊದಲ ಕ್ಲಾಸ್ ಪರೀಕ್ಷೆ. ಅಲ್ಲಿ ನಾನು ಮೊದಲ ಕ್ಲಾಸಿಗೆ ವಿದ್ಯಾರ್ಥಿಯಾಗಿ ಪರೀಕ್ಷೆಯಲ್ಲಿ ಅಂಕವನ್ನು ಗಳಿಸಿದಾಗ ಸ್ವತಃ ಮಹಮ್ಮದ್ ಮಾಸ್ತರ್ ಆಶ್ಚರ್ಯಗೊಂಡಿದ್ದರು. ಎಲ್ಲರಲ್ಲೂ ಆಗ ಹೇಳಿದ್ದರು ನೋಡಿದ ಹಾಗಲ್ಲ ಇವನು. ಅಂದಿನಿಂದ ನನ್ನನ್ನು ಕಾಣುವ ದೃಷ್ಟಿ ಬದಲಾಯಿತು. ಮಹಮ್ಮದ್ ಮಾಸ್ತರ್ ಮಾತ್ರವಲ್ಲದೇ ಶಾಲೆಯ ಎಲ್ಲಾ ಆಧ್ಯಾಪಕರಿಗೆ ನಾನು ಗುರುತಿಸಲ್ಪಟ್ಟೆ. ಅಂದಿನ ಹೆಚ್ಚಿನ ಎಲ್ಲಾ ಮಾಸ್ತರ್ ಗಳು ನಮ್ಮೊಂದಿಗೆ ಗುರು ಶಿಷ್ಯ ಸಂಬಂಧದಿಂದ ಕೂಡಿರದೆ ಒಳ್ಳೆ ಗೆಳೆಯರಂತೆ ನಮ್ಮೊಂದಿಗೆ ಬೆರೆಯುತ್ತಿದ್ದರು. ಅದೊಂದು ವಿಶಿಷ್ಟ ಸಂಭಂಧ.  ಹಾಗಾಗಿ ಕಾಯರ್ ಕಟ್ಟೆ ಹೈಸ್ಕೂಲಿನ ವಿದ್ಯಾರ್ಥಿ ಜೀವನದ ನೆನಪುಗಳು ಇಂದಿಗೂ ಅಚ್ಚಳಿಯದೇ ಮಧುರ ನೆನಪುಗಳಾಗಿ ಉಳಿದು ಬಿಟ್ಟಿದೆ. 

        ಮಹಮ್ಮದ್ ಮಾಸ್ತರ್ ಲೆಕ್ಕ ಪಾಠ,   ಕಲಿತ ಲೆಕ್ಕದಂತೆ ಅದೂ ಮರೆಯುವ ಹಾಗಿಲ್ಲ. ಸದಾ ಹಾಸ್ಯಮಯವಾಗಿ ಮಾತನಾಡುತ್ತಿದ್ದರು. ಮಕ್ಕಳೊಂದಿಗೆ ಪ್ರೀತಿಯಿಂದ ಬೆರೆಯುತ್ತಿದ್ದರು.  ಲೆಕ್ಕ ಎಂದರೆ ಅದು ಚೊಕ್ಕ ಎಂದು ಪದೇ ಪದೇ ಹೇಳುತ್ತಿದ್ದರು. ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಬರುವ ವಿಷಯವಿದ್ದರೆ ಅದು ಲೆಕ್ಕ ಮಾತ್ರ ಎಂದು ಪದೇ ಪದೇ ಹೇಳುತ್ತಿದ್ದರು. ಅವರು ಅಂದು ಹೇಳಿಕೊಟ್ಟ, ಸರಳ ಬಡ್ಡಿ ಚಕ್ರ ಬಡ್ಡಿ ಶೇಕಡಾ ಮಾನ ಇಂದಿಗೂ ಗಟ್ಟಿ ಅಸ್ತಿವಾರದ ಕಲ್ಲುಗಳಾಗಿವೆ.  ನಾನು ಏಳನೇ ತರಗತಿಯಲ್ಲಿದ್ದಾಗ ಮಾಸ್ತರ್ ಮಗ ಆರನೇ ತರಗತಿಯಲ್ಲಿ ವಿದ್ಯಾರ್ಥಿಯಾಗಿದ್ದ. ಒಂದು ದಿನ ವಿರಾಮದ ವೇಳೆಯಲ್ಲಿ ನಾನು ಕ್ಲಾಸ್ ನಲ್ಲಿ ಕುಳಿತುಕೊಂಡಿದ್ದಾಗ, ಮಾಸ್ತರ್ ತನ್ನ ಮಗನನ್ನು ದರ ದರ ಎಳೆದು ಕೊಂಡು ಬಂದು ನನ್ನ ಬಳಿ ಕುಳ್ಳಿರಿಸಿ, ಸ್ವಲ್ಪ ಇವನಿಗೆ ಹೇಳಿಕೊಡು ಮಾರಾಯ. ನನಗೆ ಹೇಳಿಕೊಟ್ಟು ಸಾಕಾಯಿತು. ಲೆಕ್ಕದ ಮಾಸ್ತರ್ ಮಗನೇ ಲೆಕ್ಕದಲ್ಲಿ ಹಿಂದುಳಿದಿದ್ದ. ಲೆಕ್ಕದ ಮಾಸ್ತರ್,  ಅವರ ಮಗನಿಗೆ ಲೆಕ್ಕ ಹೇಳಿಕೊಡುವುದಕ್ಕೆ ನನಗೆ ಒಪ್ಪಿಸಿದ್ದರು. ಲೆಕ್ಕದ ಮಾಸ್ತರ್ ನನಗೆ ಗುರುವಾಗಿದ್ದರೆ, ಅವರ ಮಗನಿಗೆ ತಾತ್ಕಾಲಿಕವಾಗಿ ನಾನು ಗುರುವಾದೆ. ಇಂತಹ ಆತ್ಮೀಯ ಸಂಬಂಧ ನಮ್ಮೊಳಗೆ ಇತ್ತು. ಇವರು ಎಂದಿಗೂ ನನಗೆ ಬೈದ ಹೊಡೆದ ಉದಾಹರಣೆ ಇಲ್ಲ. ಏನು ಕೆಲಸವಿದ್ದರೂ ಮೊದಲು ನನ್ನ ಮೇಲೆ ದೃಷ್ಟಿ ಬೀಳುತ್ತಿತ್ತು. ಒಂದು ಬಾರಿ ನನ್ನನ್ನೇ ಕ್ಲಾಸ್ ಲೀಡರ್ ಆಗಿ ಮಾಡಿ ಬೆನ್ನು ತಟ್ಟಿದ್ದರು.  ನಾನು ಒಂಭತ್ತನೆ ತರಗತಿಯಲ್ಲಿರುವಾಗ ಇರಬೇಕು, ಇವರು ಹತ್ತಿರದ ಪೈವಳಿಕೆ ನಗರದ ಹೈಸ್ಕೂಲಿಗೆ ವರ್ಗವಾಗಿದ್ದರು. ಆಗ ಯಾವುದೋ ಕೆಲಸ ನಿಮಿತ್ತ ಆ ಶಾಲೆಗೆ ಹೋಗಿದ್ದಾಗ ಇವರು ಯಾವುದೋ ತರಗತಿಯಲ್ಲಿ ಪಾಠ ಮಾಡುತ್ತಿದ್ದರು. ನನ್ನನ್ನು ಕರೆದು , ಈ ರಾಜ್ ಕುಮಾರ್ ನನ್ನ ಸ್ಟೂಡೆಂಟ್ ಅಂತ ಅಲ್ಲಿನ ವಿದ್ಯಾರ್ಥಿಗಳಿಗೆ ಪರಿಚಯಿಸಿದ್ದರು. ಈ ಅಭಿಮಾನ ಪ್ರೀತಿ ಎಂದೂ ಮರೆಯುವ ಹಾಗಿಲ್ಲ. ಈದೀಗ ಅದೇ ಮಾಸ್ತರ್ ವೃದ್ದರಾಗಿ ನಡುಗುತ್ತಾ ನಸು ನಗುತ್ತಾ ನಿಂತಿದ್ದಾರೆ. ನನ್ನ ಬಗ್ಗೆ ಕುಶಲ ಸಮಾಚಾರ ಕೇಳಿದರು. ಈಗಲೂ ಹೆಗಲ ಮೇಲೆ ಕೈ ಹಾಕಿ ಇನ್ನೊಂದು ಕೈಯಿಂದ ನನ್ನ ಕೈ ಹಿಡಿದು, ಏನು ಮಾಡ್ತಾ ಇದ್ದಿಯಾ?  ಎಂದು ಕೇಳಿದರೆ ನನಗೆ ಕ್ಷಣಕಾಲ ಉತ್ತರ ಹೊಳೆಯಲಿಲ್ಲ. ನಾನೆಂದೆ ಬೆಂಗಳೂರಲ್ಲಿ ತೆರಿಗೆ ಸಹಾಯಕನಾಗಿ ನೀವು ಕಲಿಸಿದ ಸರಳ ಬಡ್ಡಿ ಶೇಕಡಾ ಮಾನದ ನಡುವೆ ಸುತ್ತುತ್ತಾ ಇದ್ದೇನೆ ಎಂದು ಹೇಳಿದೆ. ನಗುತ್ತಾ ಬೆನ್ನು ತಟ್ಟಿದರು. 

        ಆ ಹೊತ್ತಿಗೆ ಕಛೇರಿ ಒಳಗೆ ಆಫೀಸರ್ ನನ್ನನ್ನು ಕರೆದ ಕಾರಣ ನಾನು ಅವರಿಗೆ ಮತ್ತೊಮ್ಮೆ ನಮಸ್ಕರಿಸಿ ಒಳಗೆ ಹೋದೆ. ನಂತರ ಹೊರಗೆ ಬಂದಾಗ ಮಹಮ್ಮದ್ ಮಾಸ್ತರ್ ಹೊರಟು ಹೋಗಿಯಾಗಿತ್ತು. ಛೇ ಒಂದು ಸೆಲ್ಫಿ ತೆಗೆದುಕೊಳ್ಳುವುದಕ್ಕೂ ನೆನಪಾಗಿಲ್ಲವಲ್ಲಾ ಎಂದು ಕೊಂಡೆ. ಈ ಮರೆವಿನ ಬಗ್ಗೆ ನೊಂದುಕೊಂಡರೂ ಎಂದಿಗೂ ಅಚ್ಚಳಿಯದ ಶಾಲಾ ದಿನದ ನೆನಪುಗಳಲ್ಲಿ ಕೆಲವು ಪುಟಗಳು ಈ ಮಹಮ್ಮದ್ ಮಾಸ್ತರ್ ಗೆ ಮೀಸಲಾಗಿ ದಾಖಲಾಗಿ ಹೋಗಿದೆ. 

Sunday, December 25, 2022

ಉಜ್ಜಾಯಿ ಪ್ರಾಣಾಯಾಮ

         ದಿನವೂ ಸುರಿವ ಬೆವರಿನ ನಾಡು ನಮ್ಮೂರು. ಸುಮ್ಮನೇ ಕುಳಿತರೂ ಸುರಿವ ಬೆವರು ಒರೆಸಿಕೊಳ್ಳುವುದಕ್ಕೇ ಒಂದು ಅಂಗವಸ್ತ್ರ ಸದಾ ಕೈಯಲ್ಲಿರಬೇಕು. ಸದಾ ಉರಿವ ಬಿಸಿಲು ಮಳೆಗಾಲದಲ್ಲೂ ನಮ್ಮೂರು ಬೆವರ ಹನಿಯನ್ನೇ ನೀಡುತ್ತದೆ ಎಂಬ ಅನಿಸಿಕೆ. ಸದಾ ಚಲನ ಶೀಲವಾಗಿ ಚಟುವಟಿಕೆಯಿಂದ ಇರುವುದರ ರಹಸ್ಯ ಈ ಊರಿನ ಬಿಸಿಲ ವಾತಾವರಣವೇ ಕಾರಣ. ಯಾಕೆಂದರೆ ಜಡತ್ವ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ.   ಅಂತಹ ಊರನ್ನು ಬಿಟ್ಟು ಜೀವನವನ್ನು ಕಟ್ಟುವುದಕ್ಕೆ ಬೆಂಗಳೂರಿಗೆ ಬಂದ ಮೊದಲು ಎಲ್ಲ ಹೊಸದರ ನಡುವೆ ಅಂಟಿಕೊಂಡ ಸ್ನೇಹಿತನಂತೆ ಅಪ್ಪಿಕೊಂಡು ಬಿಡದೇ ಕಾಡಿದ್ದು ಈ ಅಲರ್ಜಿ ಎಂಬ ಸಮಸ್ಯೆ. ಅದು ಅಲರ್ಜಿ ಎಂದು ಅರಿವಿಗೆ ಬರಬೇಕಾದರೆ ಬಹಳ ಸಮಯಗಳೇ ಬೇಕಾಯಿತು. ಎಲ್ಲೋ  ಯಾರಿಗೋ  ಇದೆ ಎಂದುಕೊಂಡು ಅಷ್ಟೂ ದಿನ ಇದ್ದೆ.  ನನಗೂ ಅದು ಇದೆ ಎಂದು ಹತಾಶೆ ನೋವನ್ನು ಅನುಭವಿಸಿದ್ದೆ.   ಮನೆಯಿಂದ ಒಂದಷ್ಟು ಹೊರ ಹೋಗಬೇಕೆಂದರೆ ಅರ್ಧ ಮುಖವನ್ನು ಮುಚ್ಚಿಕೊಂಡು ಸರಿಯಾಗಿ ಉಸಿರಾಡದಂತೆ ಮುಸುಕನ್ನು ಮೂಗಿಗೆ ಕಟ್ಟಿಕೊಳ್ಳುವಂತಾಗಿದ್ದು ಬಹಳ ಕಿರಿಕಿರಿಯನ್ನು ಉಂಟುಮಾಡುತ್ತಿತ್ತು. ಅಲರ್ಜಿ ಬಾಧೆ ಅದು ಅನುಭವಿಸಿದವನಿಗೆ ಮಾತ್ರ ಅದರ ನೋವು ಅರಿವಾಗುವುದು. ಎಲ್ಲರಂತೆ ತಾನಿಲ್ಲ ಎಂಬುದು ಪ್ರತಿಕ್ಷಣವೂ ಕೀಳರಿಮೆಯನ್ನು ತಂದು ಆತ್ಮ ಸ್ಥೈರ್ಯವನ್ನೇ ಕುಗ್ಗಿಸಿ ಬಿಡುತ್ತದೆ. ಇದು ಯಾವ ಯಾವ ವಿಧದಲ್ಲಿ ಬಾಧಿಸುತ್ತದೆ ಎಂದು ವಿವರಿಸುವುದು ಕಷ್ಟ. ಇದ್ದಕ್ಕಿದ್ದಂತೆ ಜ್ವರ ಬರುವುದು ಚಳಿಯಾಗುವುದು ಎದೆನೋವು ನೆಗಡಿ ಕಫ ಜೀವವೇ ಕಳಚಿ ಹೋಗುವಂತಹ ಸೀನು ಎಲ್ಲದಕ್ಕಿಂತಲೂ ಸಹನೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. 


        ಅಲರ್ಜಿಯಿಂದ ಹೊರಬರಬೇಕು, ಎಲ್ಲರಂತೆ ನಾನೂ ಮುಕ್ತವಾಗಿ ಉಸಿರಾಡಬೇಕು ಎಂದು ಬಯಸುತ್ತಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ವೈದ್ಯರ ಬಳಿಗೆ ಹೋದರೆ ಏನೋ ಒಂದು ಮಾತ್ರೆ ಕೊಡುತ್ತಿದ್ದರು. ಅದು ಒಂದೆರಡು ದಿನ ನಿರಾಳವನ್ನು ತಂದುಕೊಟ್ಟಂತೆ ಅನಿಸಿದರೂ ಆನಂತರ ಮೊದಲಿಗಿಂತಲೂ ಹೆಚ್ಚಿನ ಬಾಧೆ ಅನುಭವಿಸುವಂತಾಗುತ್ತಿತ್ತು. ಅಲರ್ಜಿಯ ಬಾಧೆ ಎಂದರೆ ವಿಚಿತ್ರ, ಹೊರಗಿನವರಿಗೆ ನೋಡಿದರೆ ಆರೋಗ್ಯವಂತ ಎಂದು ಕಂಡರೂ ನಾವು ಸರಿ ಇಲ್ಲ ಅಂತ ಕೀಳರಿಮೆ ಸದಾ ಇರುತ್ತದೆ. ಒಂದಿಷ್ಟು ಮೋಡ ಮುಸುಕಿದ ವಾತಾವರಣ ಮಬ್ಬು ಕವಿದರೆ ಅಲರ್ಜಿ ಬಾಧೆಯಲ್ಲಿ ಚಿತ್ರ ವಿಚಿತ್ರವಾದ ನೋವು ಅನುಭವಿಸುವಂತಾಗುತ್ತದೆ. ಮೈ ಕೈ ನೋವಿನಿಂದ ಹಿಡಿದು ನಗಡಿ ಕಫ ಯಾರಲ್ಲೂ ಹೇಳುವಂತಿಲ್ಲ,  ಬಿಡುವಂತಿಲ್ಲ.  ಅಲರ್ಜಿಯ ಬಾಧೆಯಲ್ಲಿ ಜೀವನ ಹೀಗೆ ಕಳೆದು ಬಿಡುತ್ತದೆ ಎಂಬ ಹತಾಶೆ ಸಂಕಟ ಅದು ಅನುಭವಿಸಿದವರಿಗೆ ಗೊತ್ತು. ಇಂತಹ ಅಲರ್ಜಿಯಿಂದ ಹೊರಬಂದದ್ದು ನನ್ನ ಅಪ್ರತಿಮ ಸಾಧನೆ ಎಂದು ನನಗೆ ಭಾಸವಾಗುತ್ತದೆ.  ಅದಕ್ಕೆ ಕಾರಣವಾದ ಯೋಗಭ್ಯಾಸ ಅದರಲ್ಲೂ ಕೆಲವು ತಿಂಗಳ ಹಿಂದೆ ಆರಂಭಿಸಿದ ಉಜ್ಜಾಯಿ ಪ್ರಾಣಾಯಾಮ. ಇದು ಇಷ್ಟೊಂದು ಪರಿಣಾಮಕಾರಿಯಾಗಬಹುದೆಂದು ಕಲ್ಪನೆಯೇ ಇರಲಿಲ್ಲ. ನನ್ನ ಅಲರ್ಜಿ ಬಾಧೆಗೆ ಇದು ರಾಮಬಾಣದಂತೆ ಕೆಲಸ ಮಾಡಿ ಬಿಟ್ಟಿತು. ಅದೂ ಕೇವಲ ಮೂರು ತಿಂಗಳಲ್ಲಿ! ಯಾವುದೇ ಔಷಧಿ ಕಷಾಯಕ್ಕೂ ಜಗ್ಗದ ಅಲರ್ಜಿ  ಬಾಧೆಯಿಂದ ನಾನು ಮುಕ್ತನಾಗಿದ್ದೇನೆ ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ. 

        ಉಜ್ಜಾಯಿ ಪ್ರಾಣಾಯಾಮ, ಇದೊಂದು ವಿಚಿತ್ರ ಬಗೆಯ ಪ್ರಾಣಾಯಾಮ. ಸಾಮಾನ್ಯವಾಗಿ ಪ್ರಾಣಾಯಾಮವನ್ನು ಖಾಲಿ ಹೊಟ್ಟೆಯಲ್ಲಿ ಅದರಲ್ಲೂ ಮುಂಜಾನೆ ಮಾಡುವುದು ಸೂಕ್ತ. ಆದರೆ ಉಜ್ಜಾಯಿ ಪ್ರಾಣಾಯಾಮ ಯಾವಾಗ ಬೇಕು ಆವಾಗ ಅಭ್ಯಾಸ ಮಾಡಬಹುದು. ನಡೆದಾಡುವಾಗ ಕೆಲಸ ಮಾಡುವಾಗ ಇದನ್ನು ಪರಿಣಾಮಕಾರಿಯಾಗಿ ಮಾಡಬಹುದು. 

            ಘನವಾದ ಯಾವುದೇ ಆರೋಗ್ಯದ ಸಮಸ್ಯೆ ಬಾಧಿಸಿದಾಗ ನಾನು ವೈದ್ಯರಿಗಿಂತ ಮೊದಲು ಕರೆ ಮಾಡುವುದು ಮಿತ್ರ ಹಾಗು ಯೋಗ ಗುರು ಹರೀಶನಿಗೆ. ನನ್ನ ಯೋಗಾಭ್ಯಾಸಕ್ಕೆ ಅದಮ್ಯವಾದ ಪ್ರೇರಣೆ ಕೊಟ್ಟ ಸನ್ಮಿತ್ರ. ಸಲುಗೆಯಿಂದ ಸ್ನೇಹದಿಂದ ಸದಾ ಸಂಪರ್ಕದಲ್ಲಿರುವ  ಈತ ನೀಡುವ ಪರಿಹಾರ ಅತ್ಯಂತ ಸರಳ ಹಾಗು ಅಧ್ಬುತ ಪರಿಣಾಮಕಾರಿಯಾಗಿರುತ್ತದೆ. ಒಂದು ಸಲ ಮಂಗಳೂರಿಗೆ ಹೋದಾಗ ಭೇಟಿಯಾದಾಗ ಹೇಗೆ ಮಾಡಬೇಕು ಎಂದು ಒಂದಷ್ಟು ತೋರಿಸಿಕೊಟ್ಟು ಅದನ್ನು ಅಭ್ಯಾಸ ಮಾಡಿ ನೋಡುವಂತೆ ಸಲಹೆ ಕೊಟ್ಟರು. ಆದರೆ ಅದನ್ನು ಇನ್ನಷ್ಟು ತಿಳಿದು ಸರಿಯಾಗಿ ಅಧ್ಯಯನ ಮಾಡಿ ಮಾಡಬೇಕು ಎಂದುಕೊಂಡು   ಇನ್ನೊಬ್ಬ ಮಿತ್ರ ಹೃಷೀಕೇಶ ಪೆರ್ನಡ್ಕ ಅವರನ್ನು ಸಂಪರ್ಕಿಸಿದೆ. ಇವರು ಮೂಲತಃ ನಮ್ಮೂರಿನವರು. ಯುವ ಪ್ರತಿಭಾವಂತ. ವಿದೇಶದಲ್ಲಿದ್ದು ಈಗ ಬೆಂಗಳೂರಲ್ಲಿದ್ದಾರೆ. ಯೋಗ ರೀತಿಯ ಚಿಕಿತ್ಸೆಯನ್ನೆ ವೃತ್ತಿಯನಾಗಿಸಿಕೊಂಡ ಸಹೃದಯಿ. ಒಂದು ದಿನ ವಿಡೀಯೋ ಕಾಲ್ ಮಾಡಿ ಉಜ್ಜಾಯಿ ಪ್ರಾಣಾಯಾಮ ಹೇಗೆ ಮಾಡಬೇಕು ಎಂದು ಕಲಿಸಿಬಿಟ್ಟರು. ನಿಜವಾಗಿ ಇದನ್ನು ಗುರುಗಳ ಸಮ್ಮುಖದಲ್ಲೇ ಮಾಡಬೇಕು. ಆದರೆ ಈ ಯೋಗಾಭ್ಯಾಸದಲ್ಲಿ ನಿರತನಾದ ನನಗೆ ಅವರು ಸುಲಭದಲ್ಲಿ ಕಲಿಸಿಕೊಟ್ಟರು. ಅದರ ಉಪಯೋಗಗಳನ್ನು ತಿಳಿಸಿದರು. 

        ಅಲ್ಲಿಂದ ನಂತರ  ನನ್ನ ಆರೋಗ್ಯದಲ್ಲಿ ಮತ್ತಷ್ಟು ಸುಧಾರಣೆಯಾಯಿತು. ಕೋವಿಡ್ ಸಮಯವಲ್ಲದೇ ಇದ್ದರೂ ಹೊರಗೆ ಓಡಾಡಬೇಕಾದರೆ ಸದಾ ಮಾಸ್ಕ್ ಧರಿಸಿ ಓಡಾಡುವ ನನಗೆ ಈಗ ಮಾಸ್ಕ್ ಅವಶ್ಯಕತೆ ಬೀಳುವುದಿಲ್ಲ. ಮಾತ್ರವಲ್ಲ ರಕ್ತದೊತ್ತಡದಿಂದ ಸಂಪೂರ್ಣ ಮುಕ್ತನಾಗಿಬಿಟ್ಟೆ. ಈಗ ಅನುಭವಿಸುವ ಸಂತೋಷ ಸಂತೃಪ್ತಿ ಅನೂಹ್ಯವಾದದ್ದು. ಇಷ್ಟು ಮಾತ್ರವಲ್ಲ ಪ್ರಾಣಾಯಾಮದಲ್ಲಿ ಮತ್ತಷ್ಟು ಸುಧಾರಣೆಯಾಗಿ ಧ್ಯಾನ ಏಕಾಗ್ರತೆ ದಿನನಿತ್ಯದ ಯೋಗಾಭ್ಯಾಸ ಹೊಸ ಮಜಲಿಗೆ ತಲುಪಿದ ಅನುಭವವಾಗತೊಡಗಿತು. 

        ಉಜ್ಜಾಯಿ ಪ್ರಾಣಾಯಾಮದ ಪರಿಣಾಮ ಉಪಯೋಗಗಳನ್ನು ಅಂತರ್ಜಾಲದಲ್ಲಿ ನೋಡಬಹುದು. ಹಲವಾರು ಆರೋಗ್ಯ ಸಮಸ್ಯೆಗೆ ಉಸಿರಾಟದ ಸಮಸ್ಯೆಗಳಿಗೆ ಇದು ಅತ್ಯಂತ ಸೂಕ್ತ ಪರಿಹಾರವನ್ನು ಒದಗಿಸುತ್ತದೆ. ಅಲರ್ಜಿಯ ಭಾಧೆಯಿಂದ ದೂರವಾಗುವಾಗ ಇದಕ್ಕೆ ಪ್ರೇರಣೆಕೊಟ್ಟ ಹರೀಶ್ ಯೋಗ ಮತ್ತು ಅದನ್ನು ಸರಳವಾಗಿ ತಿಳಿಸಿಕೊಟ್ಟ ಹೃಷಿಕೇಶ್ ಪೆರ್ನಡ್ಕ ಅವರ ನೆನಪು ಸದಾ ಪ್ರೇರಕವಾಗಿ ಪ್ರಚೋದಿಸಲ್ಪಡುತ್ತದೆ. ಅವರಿಗೆ ಈ ಮೂಲಕ ಹೃತ್ಪೂರ್ವಕ ಕೃತಜ್ಞತೆಗಳು. ಹಲವು ವರ್ಷದ ಬಾಧೆ, ಹಲವು ಔಷಧಿಗಳಿಗೆ ಜಗ್ಗದ ಸಮಸ್ಯೆ ಇಂದು ನನ್ನಿಂದ ಬಹಳಷ್ಟು ದೂರವಾಗಿದೆ. ಸಮರ್ಪಕ ಉಸಿರಾಟ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. 


Wednesday, December 21, 2022

ಯಾತ್ರಾ ಸನ್ನಾಹ

ನಮ್ಮ ಮನೆಯಿಂದ ಹಿರಿಯರೆಲ್ಲ ಸೇರಿ ಕಾಶಿ ಯಾತ್ರೆಗೆ ಹೊರಡುವ ಸಿದ್ದತೆ ಮಾಡುತ್ತಿದ್ದೇವೆ. ಕಾಶಿ ಯಾತ್ರೆ ಎಂದರೆ ಹಿಂದುಗಳ ಜೀವನದ ಒಂದು ಗುರಿ ಎಂದರೂ ತಪ್ಪಲ್ಲ. ಮುಖ್ಯವಾಗಿ ನಮ್ಮ ಅಮ್ಮನಿಗೆ ಕಾಶಿಯನ್ನು ಕಾಣಬೇಕು, ಅಯೋಧ್ಯೆಗೆ ಹೋಗಿ ಬರಬೇಕು ಹೀಗೆ ಹಂಬಲ ಉಂಟಾಗಿ ಬಹಳ ವರ್ಷಗಳೇ ಕಳೆದುವು. ಆದರೆ ಅದಕ್ಕೆ ಸಮಯಾವಕಾಶ ಕೂಡಿಬರಲಿಲ್ಲ. ವೃದ್ದರಾದ ಅಮ್ಮನನ್ನು ಮಾತ್ರ ಕಳುಹಿಸುವುದು ಸಾಧ್ಯವಿಲ್ಲದೇ ಇರುವುದರಿಂದ ಅದು ಈ ವರೆಗೆ ಸಾಧ್ಯವಾಗದೇ ಹೋಯಿತು.  ಇದೀಗ ರಾಷ್ಟ್ರ ಜಾಗೃತಿ ಸಂಸ್ಥೆಯವರು ಅದಕ್ಕೆ ಒಂದಷ್ಟು ಅನುಕೂಲವನ್ನು ಒದಗಿಸಿ, ಆ ಸದವಕಾಶದಿಂದ ಹೋಗಿ ಬರುವ ಸಿದ್ದತೆ ನಡೆಯುತ್ತಾ ಇದೆ.  ಹೊರಡುವುದಕ್ಕೆ ಇನ್ನೆರಡು ತಿಂಗಳು ಇದೆ.  ಯಾವುದೇ ದೇವಸ್ಥಾನಗಳಿಗೆ ಅದೂ ಜನಸಂದಣಿಯ ನಡುವೆ ಹೋಗುವುದು ನನಗೆ ತೀರಾ ಇಷ್ಟವಿಲ್ಲದ ಕೆಲಸ. ಹಾಗಾಗಿ ಹಲವು ತೀರ್ಥ ಕ್ಷೇತ್ರ ದರ್ಶನದಿಂದ ಬಹಳ ದೂರವೇ ಉಳಿದಿದ್ದೇನೆ. ಇತ್ತೀಚೆಗೆ ಮಂತ್ರಾಲಯ ದರ್ಶನ ಮಾಡಿದ್ದೆ. ಅದೂ ಮುಂಜಾನೆ ಹೆಚ್ಚು ಜನರೂ ಯಾರೂ ಇಲ್ಲದೆ ಇದ್ದಕಾರಣ ಅದೊಂದು ಅಹ್ಲಾದಮಯವಾಗಿತ್ತು.  ನಿತ್ಯ ಮನೆಯಲ್ಲೇ ಮುಂಜಾನೆ ಎದ್ದು ಒಂದು ದಿನವೂ ಬಿಡದೇ ಬ್ರಾಹ್ಮೀ ಮುಹೂರ್ತದಲ್ಲಿ ಸಂಧ್ಯಾವಂದನೆ ಮತ್ತು  ತಾಸು ಪ್ರಾಣವಾಯುವಿನ ಏರಿಳಿತಕ್ಕೆ ತಲ್ಲೀನನಾಗಿ  ಏಕಾಂತ  ಧ್ಯಾನ ಮಾಡುವಾಗ ನಿಜವಾದ ಪರಮಾತ್ಮ ದರ್ಶನದ ಅನುಭವವಾಗುತ್ತದೆ. ಆ ಅನುಭವದಲ್ಲಿ ಅದನ್ನು ದಿನವೂ ಬಿಡದೆ ನಿಷ್ಠೆಯಿಂದ ಪಾಲಿಸಿಕೊಂಡು ಬಂದು ಬಿಟ್ಟಿದ್ದೇನೆ.  ಹಾಗಾಗಿ ದೇವಸ್ಥಾನ ದರ್ಶನ ಎಂಬುದು ಆ ನಂತರ ಉಳಿದುಕೊಂಡು ಯಾಕೋ ಅದರತ್ತ ಪ್ರಚೋದನೆಯೇ ಇಲ್ಲವಾಗುತ್ತದೆ. ಮನೆಯಲ್ಲಿ ಮನದಲ್ಲಿ ದೇವರ ದರ್ಶನವಾಗುವಾಗ ಎಲ್ಲದರಿಂದಲು ಅದು ಉತ್ಕೃಷ್ಠ ಎಂಬ ಭಾವನೆ ಬೆಳೆದು ಬಂದು ಬಿಟ್ಟಿದೆ. ಸತ್ಕಾರ್ಯಗಳು ಮನದಲ್ಲಿ ಹುಟ್ಟಿ ಮನೆಯಲ್ಲಿ ಮೊದಲು ಆಚರಿಸಲ್ಪಡಬೇಕು.  ನಿತ್ಯಕರ್ಮದಲ್ಲಿ ಮನೆಯಲ್ಲೇ ಆರಾಧಿಸುವ ದೇವರ ಮಹಿಮೆ ಅನುಗ್ರಹ ಅತ್ಯಂತ ಉತ್ಕೃಷ್ಟವಾಗಿರುತ್ತದೆ.  ಆದರೂ   ಹಲವು ಸಲ ಅನಿವಾರ್ಯವಾಗುವಾಗ ಜೀವನದ ಅಂಗ ಎಂದು ಹೋಗುವುದು ಇದೆ. ನಿಜಕ್ಕಾದರೆ ಜಾತ್ರೆ ಸಮಾರಂಭಕ್ಕಿಂತಲೂ ವಿಶೇಷವಲ್ಲದ ದಿನದಲ್ಲಿ ಅದೂ ಯಾರೂ ಹೋಗದಿರುವ ದೇವಸ್ಥಾನಗಳಿಗೆ ಹೋಗುವುದು ನನಗಿಷ್ಟ. ಈಗ ಕಾಶಿ ಎಂದರೆ ಕೇಳಬೇಕೆ? ಭಾರತ ದೇಶಕ್ಕೊಂದೇ ಕಾಶಿ....ಕುತೂಹಲ ಇದ್ದೇ ಇರುತ್ತದೆ. ತಾಯಿಗೆ ಕಾಶಿ ದರ್ಶನ ಮಾಡಿಸುವ ಕರ್ತವ್ಯ ಪ್ರಜ್ಞೆಯೂ ಜತೆಯಾಗಿರುತ್ತದೆ.

         ಹತ್ತು ವರ್ಷಗಳ ಹಿಂದೆ ಮಲಯಾಳಂ ಸಿನಿಮಾ ಒಂದು ನೋಡಿದ್ದು ಈಗ ನನಗೆ ನೆನಪಾಗುತ್ತಿದೆ. ಮಲಯಾಳಂ ನ ಖ್ಯಾತ ಹಾಸ್ಯ ನಟ ನಟಿಸಿ ನಿರ್ಮಿಸಿ ನಿರ್ದೇಶಿಸಿ ಪ್ರಧಾನ ನಟನಾಗಿ ನಟಿಸಿದ್ದ ಮಲಯಾಳಂ ಸಿನಿಮ "ಅದಾಮಿಂದೆ ಮಗನ್ ಅಬು."    ಪ್ರಧಾನವಾಗಿ ಇದು ಮುಸ್ಲಿಂ ಕಥಾ ಹಂದರ ಇರುವ ಸಿನಿಮ. ಆ ಕಾಲದಲ್ಲಿ ಅದಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕಾರವೂ ಲಭ್ಯವಾಗಿತ್ತು.  ಅದು  ಈಗ ನನಗೆ ನೆನಪಾವುವುದಕ್ಕೆ ಕಾರಣ  ಆ ಸಿನಿಮಾದಲ್ಲಿ ಕಥಾನಾಯಕ ವಯೋವೃದ್ದ ಪತ್ನಿ ಸಹಿತ ಹಜ್ ಗೆ  ಯಾತ್ರೆ ಹೋಗಲು ಹಂಬಲಿಸುತ್ತಾನೆ.  ಹಿಂದುಗಳಿಗೆ ಕಾಶಿ ಹೇಗೋ ಮುಸ್ಲಿಂ ರಿಗೆ ಹಜ್ಅಥವಾ ಮೆಕ್ಕಾ. ತೀರಾ ಬಡವನಾದ ಆತ ಅತ್ತರ್ ವ್ಯಾಪಾರಿ. ಆತ ಹಜ್ ಗೆ ಹೋಗಲು ಸಿದ್ದತೆ ನಡೆಸುವುದು ನಿಜಕ್ಕೂ ಮನಮುಟ್ಟುವಂತೆ ಚಿತ್ರಿಸಲಾಗಿದೆ. ಈ ಸಿದ್ದತೆಯೇ ಸಿನಿಮಾದ ಕಥೆ. ಹಜ್ ಯಾತ್ರೆ ಎಂದರೆ ಅದು ಜೀವನದ ಗುರಿ. ಹೊರಡುವಾಗ ಹಿಂತಿರುಗಿ ಬರುವ ಹಂಬಲ  ಕೆಳೆದುಕೊಂಡು ಹೊರಡಬೇಕು. ಈ ಸಿನಿಮಾದಲ್ಲಿ ಅದನ್ನು ಎಳೆ ಎಳೆಯಾಗಿ ತೋರಿಸಲಾಗಿದೆ.   ಆತ ಮೊದಲಿಗೆ ತನ್ನ ಮನೆಯಲ್ಲಿದ್ದ ಸಾಕುವ ಹಸುವನ್ನು ಮಾರಾಟ ಮಾಡುತ್ತಾನೆ. ಆತನ ಪತ್ನಿಗೆ ಅದು ಜೀವಾಳವೇ ಆಗಿರುತ್ತದೆ. ಮನೆಯಲ್ಲಿ ಬೇರೆ ಯಾರೂ ಇಲ್ಲದಿರುವುದರಿಂದ ಆಕೆಗೆ ಅದು ಬಂಧುವಿನಂತೆ ಇರುತ್ತದೆ. ಅದನ್ನು ಮಾರಾಟ ಮಾಡುವಾಗ ಆಕೆ ( ನಟಿ ಜರಿನಾ ವಹಾಬ್) ಬಹಳ ಸಂಕಟ ಅನುಭವಿಸುತ್ತಾಳೆ. ಆದರೆ ಅವರಿಗೆ ಅದು ಅನಿವಾರ್ಯ.  ಹತ್ತಿರದ ನಗರಕ್ಕೆ ಹೋಗಿ ಪಾಸ್ ಪೋರ್ಟ್ ಅರ್ಜಿ ಹಾಕಿ ಪಡೆಯುತ್ತಾರೆ.  ಆತ ಅಲ್ಲಿ ಇಲ್ಲಿ ಮಾಡಿದ ಸಾಲಗಳನ್ನು ನೆನಪು ಮಾಡಿಕೊಂಡು ಚಿಕ್ಕಾಸೂ ಬಾಕಿ ಇಲ್ಲದೇ ತೀರಿಸುತ್ತಾನೆ.  ಹಜ್ ಗೆ ಹೋಗಬೇಕಾದರೆ ಎಲ್ಲರ ಋಣವನ್ನೂ ತೀರಿಸಿ ಹೋಗಬೇಕು. ಇಷ್ಟು ಮಾತ್ರವಲ್ಲ, ಕಾರಣಾಂತರದಿಂದ ಯಾರಲ್ಲೋ ಜಗಳವಾಡಿ ಏನೋ ವೈಷಮ್ಯ ಬೆಳೆದಿರುತ್ತದೆ. ಈತನ ನೆರೆ ಮನೆಯವನಾಗಿದ್ದವನು ಯಾವುದೋ ಕಾಲದಲ್ಲಿ ಇವರಲ್ಲಿ ಜಗಳಮಾಡಿ ದೂರ ಹೋಗಿದ್ದ. ಆತನನ್ನು ಹುಡುಕಿ ಆತನ ಮನೆಗೆ ಹೋಗಿ ಆ ವೈಷಮ್ಯವನ್ನು ಮರೆಯುವಂತೆ ಅದಕ್ಕೆ ಪರಿಹಾರವನ್ನು ಕಾಣುವುದಕ್ಕೆ ತೊಡಗುತ್ತಾನೆ. ಇದು ನಿಜಕ್ಕೂ ಭಾವನಾತ್ಮಕವಾಗಿರುತ್ತದೆ. ಇಷ್ಟೇ ಅಲ್ಲ ಹೋಗುವುದಕ್ಕೆ ಮತ್ತಷ್ಟು ಹಣದ ಅವಶ್ಯಕತೆ ಇರುತ್ತದೆ. ಮನೆಯ ಅಂಗಳದಲ್ಲಿರುವ ಹಲಸಿನ ಮರವನ್ನು ಮರದ ವ್ಯಾಪಾರಿಗೆ ಕೊಡುತ್ತಾನೆ. ಮರದ ವ್ಯಾಪಾರಿಯೂ ಅಷ್ಟೇ..ಮರ ಬೇಕಾಗಿಲ್ಲ ಹಣ ನೀನೆ ಇಟ್ಟುಕೋ ಎಂದರೂ ಈತ ಒಪ್ಪಿಕೊಳ್ಳುವುದಿಲ್ಲ. ಮರವನ್ನು ಕಡಿದು ಕೊಂಡೊಯ್ಯುವಂತೆ ಹೇಳುತ್ತಾನೆ. ತನಗೆ ಸಮಯ ಬಂದಾಗ ಕೊಂಡೊಯ್ಯುತ್ತೇನೆ ಎಂದುಕೊಂಡಿದ್ದ ವ್ಯಾಪಾರಿ ಒಂದು ದಿನ ಮರೆವನ್ನು ಕಡಿಯಲು ಮುಂದಾಗುತ್ತಾನೆ. ಆಗ ಮರದ ಒಳಗೆ ಸಂಪೂರ್ಣ ಟೊಳ್ಳಾಗಿರುತ್ತದೆ.  ಛೇ ಹೀಗಾಯಿತಲ್ಲ ಎಂದು ಅಬು ಮಮ್ಮಲ ಮರುಗುತ್ತಾನೆ. ವ್ಯಾಪಾರಿ ಪರವಾಗಿಲ್ಲ ನೀವು ಹೋಗಿ, ನೀವು ನನಗೆ ಮೋಸ ಮಾಡಿಲ್ಲ,   ಎಂದರೂ ಕೇಳದೆ, ನಿನಗೆ ಮೋಸಮಾಡಿ ಆ ಹಣವನ್ನು ಹಜ್ ಯಾತ್ರೆಗೆ ಉಪಯೋಗಿಸುವುದು ಸೂಕ್ತವಲ್ಲ. ಅದರ ಪಾವಿತ್ರ್ಯತೆ ಇಲ್ಲವಾಗುತ್ತದೆ ಎಂದು ಆ ಹಣವನ್ನು ಹಿಂದಿರುಗಿಸಿ  ಹಜ್ ಯಾತ್ರೆಗೆ ಹೋಗುವ ಬಯಕೆಯನ್ನು ಬಿಟ್ಟುಬಿಡುತ್ತಾನೆ. ಈ ಉದಾತ್ತವಾದ ತತ್ವ ನನಗೆ ನಿಜಕ್ಕೂ ಇಷ್ಟವಾಗುತ್ತದೆ. 

            ಕಾಶೀಯಾತ್ರೆಯ ಪಾವಿತ್ರ್ಯತೆಯ ಗಂಭೀರತೆ ಅರಿವಾಗುತ್ತಿದ್ದಂತೆ ಆತ್ಮ ಗಹನವಾದ ಪ್ರಶ್ನೆಗಳನ್ನು ಮಾಡುತ್ತಾ ಹೋಗುತ್ತದೆ. ಯಾರು ಹೇಗೂ  ಹೋಗಿ ಬರಬಹುದು. ಆದರೆ ಆತ್ಮ ವಂಚನೆ ಎಂಬುದು ಎಲ್ಲಕ್ಕಿಂತ ದೊಡ್ಡ ವಂಚನೆ. ಯಾರಿಗೋ ವಂಚಿಸಿದ ಹಣವಾಗಲಿ ಸಂಪತ್ತಾಗಲೀ ಇಲ್ಲಿಗೆ ಬಳಕೆಯಾಗಬಾರದು. ಯಾರಲ್ಲೋ ಇದ್ದ ವೈಷಮ್ಯವನ್ನು ಬಿಡುವ ಪ್ರಯತ್ನವನ್ನಾದರೂ ಮುಕ್ತ ಮನಸ್ಸಿನಿಂದ ಮಾಡಬೇಕು.   ನ್ಯಾಯವಾದ ಸ್ವಂತ ದುಡಿಮೆಯಿಂದ ಹೋಗಿಬರುವ ನಿಷ್ಠೆಯನ್ನು ಹೊಂದಬೇಕು.  ಧನ ಸಂಪತ್ತು ಹೇಗೋ ಸಂಪಾದಿಸುತ್ತಾರೆ. ಆದರೆ ವೈಷಮ್ಯ ಅದನ್ನು ದೂರ ಮಾಡುವುದು ಬಹಳ ಕಷ್ಟ.  ನೀರು ಭೂಮಿ ಗಾಳಿ ಹೀಗೆ ಪಂಚಭೂತಗಳನ್ನು ಎಲ್ಲಾ ಪ್ರಾಣಿ ಪಕ್ಷಿಯೊಂದಿಗೆ ಮನುಷ್ಯ ಸಮಾನವಾಗಿ ಅನುಭವಿಸುವಾಗ ಇಲ್ಲಿ ಯಾರೂ ಕನಿಷ್ಠರಲ್ಲ. ಎಲ್ಲರೂ ಶ್ರೇಷ್ಠರೆ. ಇನ್ನೊಬ್ಬರನ್ನು ಕನಿಷ್ಠ ಎಂದು ಕೀಳಾಗಿ ಕಾಣುವವನೇ ಸ್ವತಃ ಮನಸ್ಸಿನಲ್ಲಿ ಕೀಳು ಭಾವನೆಯನ್ನು ಹೊಂದಿರುತ್ತಾನೆ. ಕಾಶೀ ಯಾತ್ರಿಕನ ಒಂದು ಬೆರಳು ಹಿಡಿದು ಆಧರಿಸಿದರೂ ಕಾಶೀ ಯಾತ್ರೆಯ ಪುಣ್ಯ ಲಭಿಸುತ್ತದೆ. 

ಕಾಶೀ ಯಾತ್ರೆಯನ್ನು ಬೇರೆ ಯಾವುದಕ್ಕೂ ಸಮೀಕರಿಸುವುದು ಹೋಲಿಸುವುದು ಖಂಡಿತಾ ಸರಿಯಲ್ಲ. ಆದರೆ ಉದಾತ್ತವಾದ ಧ್ಯೇಯಗಳು ಎಲ್ಲೇ ಇರಲಿ ಅದು ಅನುಸರಣೀಯವಾಗಿರುತ್ತದೆ.  ಧರ್ಮಗಳು ಮನುಷ್ಯನ ಜನ್ಮದಿಂದ ಜತೆಯಾಗಿ ಬೆಳೆದು ಬರುತ್ತದೆ.  ತೆಂಗಿನ ಮರ ತನ್ನಲ್ಲಿ ಮಾವಿನ ಹಣ್ಣು ಇಲ್ಲದಿರುವುದಕ್ಕೆ ಬೇಸರಿಸುವುದಿಲ್ಲ. ಮಾವಿನ ಮರ ಮಾವಿನ ಹಣ್ಣನ್ನೇ ಕೊಡುತ್ತದೆ. ಮಲ್ಲಿಗೆಯ ಬಳ್ಳಿಯಲ್ಲಿ ಮಲ್ಲಿಗೆಯೇ ಅರಳುತ್ತದೆ. ಹೀಗೆ ವೈವಿಧ್ಯಮಯ ಎಂಬುದು ಪ್ರಕೃತಿ ಧರ್ಮ.  ನಾವು ಹುಟ್ಟಿ ಬೆಳೆಯುವ ಧರ್ಮವು ಅದೇ ಬಗೆಯಲ್ಲಿ ಪ್ರಕೃತಿ ಧರ್ಮವೇ ಹೊರದಲ್ಲಿ ಅದರಲ್ಲಿ ಭೇದವಿಲ್ಲ.   ಅದರಲ್ಲಿ ಯಾರು ಭೇದವನ್ನು ಕಾಣುತ್ತಾನೋ ಆತ ಎಂದಿಗೂ ಸ್ವಧರ್ಮಾಚರಣೆಯಲ್ಲಿಯೂ ನೆಮ್ಮದಿಯನ್ನು ಕಾಣಲಾರ.  ಮರಗಿಡ ಪಕ್ಷಿಗಳಿಗಿಲ್ಲದ ಧರ್ಮ ಭೇದ   ಮನುಷ್ಯನಲ್ಲಿ ಯಾಕಿರಬೇಕು?  ಇಂದು ಜಗತ್ತು  ಹಸಿವಿನಿಂದ ತತ್ತರಿಸುವುದಕ್ಕಿಂತಲೂ ಹೆಚ್ಚು ಧರ್ಮಾಂಧತೆಯ ಉರಿಗೆ ತತ್ತರಿಸುತ್ತಿದೆ.  ಹಿಂದೂ ಧರ್ಮದ ಮೂಲ ಸ್ವಭಾವವೇ ಪರಧರ್ಮ ಸಹಿಷ್ಣುತೆ. ಬೇರೆ ಯಾವಧರ್ಮವೂ ಮಾಡಿಕೊಡದ ಅವಕಾಶವನ್ನು ಹಿಂದೂ ಧರ್ಮ ಒದಗಿಸಿದ್ದನ್ನೂ ಚರಿತ್ರೆಯೇ ಹೇಳುತ್ತದೆ.  ಈಗ ಕಾಶಿ ಯಾತ್ರೆ ಸಿದ್ದತೆಯಾಗುವಾಗ ನಾನೆಷ್ಟು ಪ್ರಾಮಾಣಿಕನಾಗಿದ್ದೇನೆ ಎಂದು ಆತ್ಮವಂಚನೆ ಬಿಟ್ಟು ಒರೆಗೆ ಹಚ್ಚಬೇಕಾಗುತ್ತದೆ. ಆಗಈ ಸಿನಿಮಾದ ಅಬುವಿನ ಪಾತ್ರ ನೆನಪಾಗುತ್ತದೆ. ಏನೂ ಇಲ್ಲದ ಆ ಬಡವನಲ್ಲಿ ಇದ್ದದ್ದು ಪ್ರಾಮಾಣಿಕತೆ , ನಿಷ್ಠೆ ಮತ್ತು ಭಗವಂತನ ಮೇಲಿನ ಪ್ರೇಮ.  ಕಾಶೀ ಯಾತ್ರೆಯ ಅನುಭವದ ನಿರೀಕ್ಷೆಯಲ್ಲಿದ್ದೇನೆ.

 


Tuesday, December 20, 2022

ಸಂಗೀತ ಸಾಗರದ ತೀರದಲ್ಲಿ

      ನಾವು ಒಂದು ಕೋಣೆಯೊಳಗೆ ಬಾಗಿಲು ಹಾಕಿ ಕುಳಿತಿರುತ್ತೇವೆ. ಹಿತವಾದ ಒಂದು ಪರಿಮಳ ಎಲ್ಲಿಂದಲೋ ಮೂಗಿಗೆ ಬರುತ್ತದೆ. ಅಹಾ...ಮತ್ತಷ್ಟು ಗಾಢವಾಗಿ ಅನುಭವಿಸುವುದಕ್ಕೆ ಮನಸ್ಸಾಗುತ್ತದೆ. ಹೋಗಿ ಕಿಟಿಕಿ ಬಾಗಿಲು ತೆರೆದು ಇಡುತ್ತೇವೆ. ಸಾಧ್ಯವಾದರೆ ಹೊರಗೆ ಹೋಗಿ ನೋಡುತ್ತೇವೆ. ಈಗ ಪರಿಮಳ ಮತ್ತಷ್ಟು ಗಾಢವಾಗಿ  ಅನುಭವಕ್ಕೆ ಬರುತ್ತದೆ.  

ಚಲನ ಚಿತ್ರದಲ್ಲಿ ಅಥವಾ ಇನ್ನೆಲ್ಲೋ ಒಂದು ಜನಪ್ರಿಯ  ಹಾಡನ್ನು ಕೇಳುತ್ತೇವೆ. ಆಗ ನನಗೆ ಇದೇ ರೀತಿಯ ಅನುಭವವಾಗುತ್ತದೆ. ಆ ಹಾಡು ಯಾಕೆ ಮಧುರವಾಗಿ ಕೇಳಬೇಕೆನಿಸುತ್ತದೆ್?   ಕುತೂಹಲ ಜಾಸ್ತಿಯಾಗುತ್ತದೆ. ಆ ಹಾಡು ಸಂಗೀತದ ಯಾವ ರಾಗದಲ್ಲಿ ಸಂಯೋಜನೆ ಮಾಡಲಾಗಿದೆ ಎಂದು ತಿಳಿಯಲು ಪ್ರಯತ್ನಿಸುತ್ತೇನೆ. ಉದಾಹರಣೆಗೆ ಕಾಂತಾರ ಸಿನಿಮಾದ ವರಾಹ ರೂಪಂ ಹಾಡು, ಇದು ಪ್ರಧಾನವಾಗಿ  ತೋಡಿ ರಾಗದಲ್ಲಿ ಸಂಯೋಜಿಸಲಾಗಿದೆ.  ನನಗೆ ರಾಗದ ಬಗ್ಗೆ ಅಷ್ಟೊಂದು ಜ್ಞಾನ ಇಲ್ಲ. ಕೇವಲ ಅದರ ಶೈಲಿಯನ್ನು ರಾಗದ ಆರೋಹಣ ಅವರೋಹಣವನ್ನು ತನ್ಮಯನಾಗಿ ಅನುಭವಿಸುತ್ತೇನೆ. ಇದಕ್ಕೆ ಶಾಸ್ತ್ರೀಯ ಸಂಗೀತದ ಜ್ಞಾನ ಇರಬೇಕೆಂದೇನೂ ಇಲ್ಲ. ಆದರೆ ಶಾಸ್ತ್ರೀಯ ಸಂಗೀತದ ಕುತೂಹಲ ಇರುತ್ತದೆ. ಸರಿ ತೋಡಿ ರಾಗದ ಆರೋಹಣ ಅವರೋಹಣ ವಿಸ್ತಾರವಾಗಿರುವ ಶಾಸ್ತ್ರೀಯ ಸಂಗೀತವನ್ನು ಕೇಳುವ ಮನಸ್ಸಾಗುತ್ತದೆ. ಆಗ ಗಾಢವಾದ ತೋಡಿರಾಗದ ಅನುಭವಾಗುತ್ತದೆ. ಮಲಯಾಳಂ ನ ಜನಪ್ರಿಯ ಸಿನಿಮಾ ಹೃದಯಂ ನ ಒಂದು ಸುಂದರ ಹಾಡು "ಮನಸೇ ಮನಸೇ..." ಬಹಳ ಇಷ್ಟವಾಗುತ್ತದೆ. ಇದು ಆಭೇರಿ ರಾಗದಲ್ಲಿ ಸಂಯೋಜಿಸಲಾದ ಹಾಡು. ಮುಖ್ಯವಾಗಿ ಆ ಸಿನಿಮಾದ ಎಲ್ಲ ಭಾಗದ ಹಿನ್ನೆಲೆ ಸಂಗೀತದಲ್ಲಿ ಈ ರಾಗದ ಪ್ರಭಾವ ದಟ್ಟವಾಗಿ ಅನುಭವಕ್ಕೆ ಬರುತ್ತದೆ. ಸರಿ ಆಭೇರಿ ರಾಗದಲ್ಲಿರುವ  ಶಾಸ್ತ್ರೀಯ ಸಂಗೀತವನ್ನು ಹುಡುಕಿ ಕೇಳುತ್ತೇನೆ. ಭಜರೇ ಮಾನಸ....ಹಾಗೇ ಎಂದರೋ ಮಹಾನು ಭಾವುಲು ....ಸಿನಿಮಾದಲ್ಲಿ ಹಾಡಿನ ಸಾರಮಾತ್ರ ಅನುಭವಕ್ಕೆ ಬಂದರೆ ಶಾಸ್ತ್ರೀಯ ಸಂಗೀತದಲ್ಲಿ ಅದನ್ನು ಕೇಳುವಾಗ ಕಿಟಿಕಿ ಬಾಗಿಲು ತೆರೆದು ಗಾಢವಾದ ಪರಿಮಳವನ್ನು ಆಘ್ರಾಣಿಸಿದಂತೆ ಅನುಭವವಾಗುತ್ತದೆ.  ಇದೊಂದು ಅವ್ಯಕ್ತವಾದ ಆನಂದವನ್ನು ಕೊಡುತ್ತದೆ. ಇದರ ಅನುಭವ ಸಂಗೀತದ ರಸಿಕತೆಯನ್ನು ಹೆಚ್ಚಿಸುತ್ತದೆ. ಹಾಗೇ ಹಲವು ರಾಗಗಳು ನನಗೆ ಬಹಳ ಇಷ್ಟವಾಗುತ್ತದೆ. ಆ ರಾಗದ ಬಗ್ಗೆ ಯಾವ ಜ್ಞಾನವು ಇಲ್ಲದೇ ಇದ್ದರೂ ಈ ಅನುಭವ ಸುಖವನ್ನು ಕಾಣಬಹುದಾದರೆ ಇನ್ನು ಶಾಸ್ತ್ರೀಯ ಸಂಗೀತದ ರಾಗಗಳ ಬಗ್ಗೆ ತಿಳಿದಿದ್ದರೆ ಹೇಗಾಗಬೇಡ?  ನಿಜಕ್ಕೂ ಸಂಗೀತ ಎನ್ನುವುದು ಸಾಗರದಂತೆ. ಅದರ ತೀರದಲ್ಲಿ ನಿಲ್ಲುವುದಕ್ಕೂ ನಾವು ಪುಣ್ಯ ಮಾಡಿರಬೇಕು. 

ಸಿನಿಮಾ ಹಾಡುಗಳು ಕಳಪೆ ಅಂತ ಹೇಳುವುದಿಲ್ಲ. ಅವುಗಳು ಒಂದು ರೀತಿಯಲ್ಲಿ  ಕಿತ್ತಳೆ ಮಾವು ಹಣ್ಣಿಗಳ ರಸಮಾತ್ರ ಇರುವ ಪಾನೀಯ ಇದ್ದಂತೆ. ಫಿಲ್ಟರ್ ಕಾಫಿಯಂತೆ.  ಇದರ ಗಾಢ ಅನುಭವವನ್ನು ಪಡೆಯುವುದಕ್ಕೆ ನಾವು ಕಿತ್ತಳೆ ಹಣ್ಣನ್ನೇ ತಿನ್ನಬೇಕು. ಫಿಲ್ಟರ್ ಕಾಫಿಯ ಬದಲ್ಲು ಕಾಫೀ ಬೀಜದ ಪುಡಿಯ ಕಾಫಿಯನ್ನು ಸವಿಯಬೇಕು. ರಾಗಗಳ ಗಾಢ ಅನುಭವವಾಗುವುದು ಶಾಸ್ತ್ರೀಯ ಸಂಗೀತವನ್ನು ಆಲಿಸುವಾಗ.  ಯಾವುದೋ ಮದುವೆ ಮನೆಯಲ್ಲಿಯೋ ಅಥವಾ ಇನ್ನು ಯಾವುದೋ ಸಮಾರಂಭದಲ್ಲಿ ಯಾವುದರಲು  ಮಗ್ನರಾಗಿರುತ್ತೇವೆ. ಫಕ್ಕನೇ ಒಂದು ಇಂಪಾದ ಹಾಡನ್ನು ಸುಂದರವಾಗಿ ಹಾಡುವುದು ದೂರದಲ್ಲಿದ್ದ ನಮ್ಮ ಕಿವಿಗೆ ಬೀಳುತ್ತದೆ. ಆಗ ನಮ್ಮ ಮನಸ್ಸಿನಲ್ಲಿ ಕುತೂಹಲ ಮೂಡಿ ವೇದಿಕೆಯತ್ತ ಧಾವಿಸುತ್ತೇವೆ. ಯಾರಪ್ಪಾ ಇದು ಹಾಡುತ್ತಿರುವುದು ಎಂದು ಕುತೂಹಲವಿರುತ್ತದೆ. ಮತ್ತೆ ವೇದಿಕೆ ಎದುರು ನಿಂತು ಆ ಹಾಡನ್ನು ಅನುಭವಿಸುತ್ತೇವೆ. ಸಿನಿಮಾ ಹಾಡಿನಲ್ಲಿ ಸಂಗೀತದ ರಾಗವನ್ನು ಅನುಭವಿಸಬಹುದು, ಆದರೆ ಅದರ ಪೂರ್ಣ ಸ್ವಾದ ಅನುಭವಕ್ಕೆ ಬರಬೇಕಾದರೆ   ಅದೇ ರಾಗವನ್ನು ಶಾಸ್ತ್ರೀಯ ಸಂಗೀತಲ್ಲಿ ಕೇಳಬೇಕು. ಅದರ ಅನುಭವ ಅನುಭವಿಸಿ ತಿಳಿಯಬೇಕು.  ನಾವು ಕೋಣೆಯ ಒಳಗೆ ಇದ್ದಾಗ ಹೊರಗೆ ಜಗಲಿಯಲ್ಲಿ ಸುಂದರವಾದ ಉಡುಪು ಧರಿಸಿದ ಹೆಣ್ಣೊಬ್ಬಳು ಹಾದು ಹೋದರೆ ಯಾರಪ್ಪಾ ಇವಳು ಎಂದು ಕುತೂಹಲ ಮೂಡಿ ಹೊರಗೆ ಬಂದು ನೋಡಿದಂತೆ. ರಾಗದ ಪೂರ್ಣ ಸೌಂದರ್ಯ ಅನುಭವಕ್ಕೆ ಬರಬೇಕಾದರೆ ಶಾಸ್ತ್ರೀಯ ಸಂಗೀತ ಕೇಳಬೇಕು.  ಈಗೀಗ ಈ ಬಗೆಯ ಸಂಗೀತ ಆಸ್ವಾದನೆ ಅಹ್ಲಾದಮಯವನ್ನು ಸೃಷ್ಟಿಸುತ್ತದೆ. ರಾಗಗಳ ವೈವಿದ್ಯತೆಯನ್ನು ತಿಳಿಯುವ ಕುತೂಹಲ ಮೂಡುತ್ತದೆ.  ಹೃದಯಂ ನ ಮನಸೇ ಮನಸೇ ಹಾಡು ಕೇಳಿ ಆಭೇರಿ ರಾಗದ ಎಂದರೋ ಮಹಾನುಭಾವುಲು ಕೇಳುವಾಗ ನನಗೆ ನಾನು ಮೈಮರೆತಂತೆ ಅನುಭವವಾಗಿದೆ.  ಹೀಗೆ ಅದೆಷ್ಟೋ ರಾಗದ ಬಗ್ಗೆ ಅಲ್ಪ ತಿಳುವಳಿಕೆಯನ್ನು ಕೇವಲ ಕೇಳುವುದರಿಂದ ಗಳಿಸಿಕೊಂಡಿದ್ದೇನೆ. ನಿಜಕ್ಕೂ ಶಾಸ್ತ್ರೀಯ ಸಂಗೀತದ ರಸಿಕನಾಗುವುದು ಅದೊಂದು ದಿವ್ಯ ಅನುಭವ. 

ಇದೇ ರೀತಿ ನಮ್ಮ ಪ್ರತಿಯೊಂದು ನಡೆಗಳಲ್ಲೂ  ಒಂದು ಪರಂಪರೆ ಇರುತ್ತದೆ. ಮಾವಿನ ಮರದಲ್ಲೂ  ಮಾವು ಆದಂತೆ, ಮಲ್ಲಿಗೆ ಬಳ್ಳಿಯಲ್ಲಿ ಮಲ್ಲಿಗೆ ಮಾತ್ರ ಅರಳಿದಂತೆ ಈ ಪ್ರಕೃತಿ ಎಂಬುದು ಪರಂಪರೆಯ ಬಂಧನದಲ್ಲಿದೆ. ಅದರ ಜೀವಾಳವೇ ಪರಂಪರೆ. ಅದರಿಂದ ವಿಹಿತವಾಗಿ ಇರುವುದು ಅಸಾಧ್ಯವಾದ ಮಾತು. ಮಹಾನ್ ಸಂಗೀತ ನಿರ್ದೇಶಕ ಇಳಯರಾಜ ಸಂಯೋಜಿಸುವ ಹೆಚ್ಚಿನ ಹಾಡುಗಳು ಶಾಸ್ತ್ರೀಯ ಸಂಗೀತದ ರಾಗದ ಆಧಾರದಲ್ಲೇ ಸಂಯೋಜಿಸಲ್ಪಡುತ್ತದೆ. ಅದರ ಅರಿವಾದರೆ ಆ ಹಾಡುಗಳನ್ನು ಅನುಭವಿಸುವುದರಲ್ಲೂ ಒಂದು ರಸಿಕತನವಿರುತ್ತದೆ. ಗಾಢವಾದ ಮಾಧುರ್ಯದ ಅನುಭವಾಗುತ್ತದೆ. ಮಲಯಾಳಂ ಸಿನಿಮಾದ ಬಹುತೇಕ ಹಾಡುಗಳು ಈ ರಾಗದ ಆಧಾರದಲ್ಲೇ ಇರುತ್ತವೆ. ಅದಕ್ಕೆ ಕಾರಣಗಳು ಹಲವಾರು ಇದೆ. ಜೇಸುದಾಸ್, ಚಿತ್ರ ರಂತಹ ಸಂಗೀತ ದಿಗ್ಗಜರು ಗಾಯಕರಾಗಿರುವುದರಿಂದ ಇದು ಅಲ್ಲಿ ಹೆಚ್ಚು ಜನಪ್ರಿಯವಾಗುತ್ತದೆ. 


Friday, December 9, 2022

ಬ್ರಾಹ್ಮಣೋ ಸ್ಯಮುಖ ಮಾಸೀತ್

ಇತ್ತೀಚೆಗೆ ಒಂದು ಸಲ ಶಿವಮೊಗ್ಗದಿಂದ ಬೆಂಗಳೂರಿಗೆ ರೈಲಿನಲ್ಲಿ ಪಯಣಿಸುವಾಗ ಭದ್ರಾವತಿಯಿಂದ  ಒಬ್ಬರು ವ್ಯಕ್ತಿ ಬಂದು ಪಕ್ಕದಲ್ಲೇ ಕುಳಿತರು. ಬಹಳ ಸಾಧು ಮನುಷ್ಯ. ಅದು ಇದು ಲೋಕಾಭಿರಾಮ ಮಾತನಾಡುತ್ತ ನನ್ನಲ್ಲಿ ಕೇಳಿದರು ನೀವು ಮಂಗಳೂರಿನವರಾ?   ಬ್ರಾಹ್ಮಣರ? ಕಾರಣ  ನಾನು ಪಂಚೆ ಉಟ್ಟುಕೊಂಡಿದ್ದೆ. ಎಂದಿನಂತೆ ಮುಖದಲ್ಲಿ ಗಂಧದ ತಿಲಕ ಇತ್ತು. ಬಹುಶಃ ಇದನ್ನು ನೋಡಿ ಸ್ವತಃ ಬ್ರಾಹ್ಮಣರಾಗಿದ್ದ ಅವರು ಪ್ರಶ್ನೆ ಕೇಳಿದ್ದರಲ್ಲಿ ಅಚ್ಚರಿ ಏನೂ ಇರಲಿಲ್ಲ. ನಾನು ಸಹಜವಾಗಿ ಹೌದು ಎಂದು ಉತ್ತರಿಸಿದೆ. ಜಾತಿಯ ಬಗ್ಗೆ ಹೇಳಿಕೊಳ್ಳುವುದು ಮತ್ತು ತೋರಿಸಿಕೊಳ್ಳುವುದು  ಹಲವು ಸಲ ಇದು ಮುಜುಗರ ಉಂಟುಮಾಡುವ ವಿಷಯವಾಗುತ್ತದೆ. ಬಾಲ್ಯದಿಂದಲೂ ಈ ಸಂಕೋಚ ಅಂಟಿಕೊಂಡಿತ್ತು. ಸಾರ್ವಜನಿಕವಾಗಿ ಒಂದು ವಿಧದ ಹಾಸ್ಯ ವಿಡಂಬನೆಯ ವಿಷಯವಾಗಿ  ಜಾತಿಯ ಪ್ರಶ್ನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿತ್ತು. ಎಷ್ಟೋ ಸಲ ಜಪ ಮಾಡಿದಾಗ ಹಾಕುವ ಭಸ್ಮವನ್ನೂ ಉಜ್ಜಿಕೊಂಡು ಹೊರಗೆ ಹೋಗುತ್ತಿದ್ದ ನೆನಪು ಈಗಲೂ ಇದೆ. ಗೇಲಿ ಮಾಡುತ್ತಿದ್ದವರೇ ದಪ್ಪ ನಾಮ ಎಳೆದು ಕಪ್ಪು ವಸ್ತ್ರ ಧರಿಸಿ ಅಯ್ಯಪ್ಪ ಸ್ವಾಮಿಗಳಾಗಿ ಅವತರಿಸಿದಾಗ ವಿಚಿತ್ರ ಎನಿಸುತ್ತಿತ್ತು. ಅದೇನಿದ್ದರೂ ಅವರವರ ನಂಬಿಕೆ ಎಂದು ಅರಿವಾದ ಮೇಲೆ ಇದು ಸ್ವಾಭಿಮಾನದ ಸಂಕೇತವಾಗಿ ಬದಲಾದೆ. ಬೆಳಗ್ಗೆ ಹಾಕಿದ ತಿಲಕ ಸಾಯಂಕಾಲ ಪುನಃ ಸ್ನಾನ ಮಾಡುವ ತನಕವೂ ಇರುತ್ತಿತ್ತು.  ಈ ವಿಚಾರಗಳ ವಸ್ತುನಿಷ್ಠತೆ ಯಾವಾಗಲೂ ಕಠಿಣವಾಗಿರುತ್ತದೆ. ಬ್ರಾಹ್ಮಣ ಎಂದರೆ ದೇವಸ್ಥಾನಗಳಿಗೆ ಇನ್ನಿತರ ಸ್ಥಳಗಳಿಗೆ ಹೋಗದೇ ಇದ್ದಲ್ಲಿಗೇ ದೈವಾನುಗ್ರಹವನ್ನು ಪ್ರಸನ್ನೀಕರಿಸುವ ಶಕ್ತಿ. ಅದು ಜಾತಿಯಲ್ಲ. ಅದು ಪ್ರಕೃತಿಯೊಂದಿಗೆ ಒಂದಾಗಿ ಬದುಕುವ ಪ್ರಕೃತಿ ಧರ್ಮ. ಅದನ್ನು ಜಾತಿಯಾಗಿ ಕಂಡು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವಾಗ ಅನ್ನಿಸುತ್ತದೆ, ಹಾಲಿಗೆ ಜೇನು ಮತ್ತೀತರ ಸುವಸ್ತುಗಳನ್ನು ಹಾಕಿ ಅದನ್ನು ಅಮೃತ ತುಲ್ಯವಾಗಿ ಸೇವಿಸುತ್ತಾರೆ. ಅದಕ್ಕೆ ಕಾಫಿ ಎಂಬ ವಿಷವನ್ನು ಸೇರಿಸಿ ವಿಷವಾಗಿಸಿಯೂ ಸೇವಿಸುತ್ತಾರೆ. ಇಲ್ಲಿ ಹಾಲು ಎಂದಿಗೂ ಕೆಟ್ಟದಾಗುವುದಿಲ್ಲ. ಅದನ್ನು ಉಪಯೋಗಿಸುವ ಮನೋಭಾವವೇ ಕೆಟ್ಟದಾಗಿ ಅದು ಒಟ್ಟು ಪಾನೀಯದ ಮೇಲೆಯೇ ಅರೋಪಿಸಲಾಗುತ್ತದೆ. ಹಾಗೆಯೇ ಬ್ರಾಹ್ಮಣ್ಯ ಅದು ಎಂದಿಗೂ ಕೆಟ್ಟದಾಗುವುದಿಲ್ಲ, ಅದನ್ನು ಉಪಯೋಗಿಸುವ ಬಗೆಯಲ್ಲಿ ಅದು ಕೆಟ್ಟದಾಗುತ್ತದೆ. ಮನೋಭಾವ ವಿಕೃತವಾಗುವಾಗ ಉಪಯೋಗಿಸುವ ರೀತಿಯೂ ವಿಕೃತಿಯಾಗುತ್ತದೆ.  ಹಾಗೆ ನೋಡಿದರೆ ಪ್ರತಿಯೊಂದು ಧರ್ಮಗಳೂ ಹಾಗೆ. ನಮ್ಮ ಮನಸ್ಸು ಕೆಟ್ಟದಾದಂತೆ ಪ್ರಕೃತಿಯೂ ವಿಕೋಪವಾಗಿ ಪರಿಣಮಿಸುತ್ತದೆ. 

    ಇಲ್ಲಿ ಆ ವ್ಯಕ್ತಿ  ಬ್ರಾಹ್ಮಣರ ಹಲವಾರು ಸಮಸ್ಯೆಗಳು ಪ್ರಕೃತ ಘಟನೆಗಳು ಇದರ ಬಗ್ಗೆ ತುಸು ಹೆಚ್ಚು ಎನ್ನುವಂತೆ ವಿಷಯ ಹಂಚಿಕೊಂಡರು. ಅವರು ಹೇಳಿದ ಹಲವಾರು ವಿಚಾರಗಳಲ್ಲಿ ಒಂದು ವಿಚಾರಕ್ಕೆ ನಾನು ಸ್ವಲ್ಪ ನಿಷ್ಠೂರವಾಗಿ ಪ್ರತಿಕ್ರಿಯೆ ಕೊಡಬೇಕಾಯಿತು. ಪ್ರಸ್ತುತ ಬ್ರಾಹ್ಮಣರ ಸಮಸ್ಯೆಗಳಲ್ಲಿ ಒಂದು ವೈದಿಕ ಕಾರ್ಯಗಳಿಗೆ ಅಂದರೆ ಅಪರ ಕ್ರಿಯೆ ಸಂಸ್ಕಾರಗಳಿಗೆ ಬ್ರಾಹ್ಮಣರೇ ಸಿಗುತ್ತಿಲ್ಲ. ಅದರ ಬದಲಿಗೆ ಚಟ್ಟಕ ( ಎಳನೀರು ವಸ್ತ್ರ ಇತ್ಯಾದಿ ಬ್ರಾಹ್ಮಣರ ಸ್ಥಾನದಲ್ಲಿಡುವುದು) ಇಟ್ಟು ಸುಧಾರಿಸಿಕೊಳ್ಳುವ ಅನಿವಾರ್ಯತೆ ಇದೆ.  ನಾನು ಹೇಳಿದೆ, " ಒಂದು ವೇಳೆ ಯಾರಾದರೊಬ್ಬ ಬಡ ಬ್ರಾಹ್ಮಣ (ಬಡವನೇ ಬರಬೇಕು) ಆ ಕಾರ್ಯಕ್ಕೆ   ಬಂದರೂ ಅವರಿಗೆ ಎಷ್ಟು ಗೌರವ ಸಿಗುತ್ತದೆ?"  ಆ ವ್ಯಕ್ತಿ ಒಂದು ಕಿರುನಗುವನ್ನು ಬೀರಿದರೂ ನನ್ನ ಮಾತಿಗೆ ಅವರದ್ದು ಪೂರ್ಣ ಸಹಮತವಿರಲಿಲ್ಲ.  ಅವರು ಎಂದಲ್ಲ ಹಲವರು ಇದನ್ನು ಒಪ್ಪಿಕೊಳ್ಳುವುದಿಲ್ಲ.  ನಮಗೆ ತೀರ ಅವಶ್ಯವಿರುವುದನ್ನು ಮತ್ತೆ ನಿಕೃಷ್ಟವಾಗಿ ಕಾಣುವ ಪ್ರಕ್ರಿಯೆ ಸದಾ ಇದ್ದೇ ಇರುತ್ತದೆ. 

ಕಾಲ ಬಹಳ ಬದಲಾಗಿದೆ. ಅವರು ಹೇಳಿದ ಸಮಸ್ಯೆ ಬಹಳ ಗಂಭೀರವಾದದ್ದು. ನನಗೆ ಈ ಸಮಸ್ಯೆಯ ಅರಿವಿದೆ. ಇದರ ಗುಣಾವಗುಣಗಳು ಏನೇ ಇದ್ದರು ಕಾಲ ಈಗ ಬದಲಾಗಿದೆ. ದೇವರನ್ನು ತೆಂಗಿನಕಾಯಿ ಇಟ್ಟು ಆವಾಹನೆ ಮಾಡಿದಂತೆ ಬ್ರಾಹ್ಮಣ ತನ್ನ ಸ್ಥಾನಕ್ಕೂ ಜಡವಸ್ತುವಿನ ಮೊರೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆ ವ್ಯಕ್ತಿಗೆ ಪ್ರತಿಕ್ರಿಯೆಯಾಗಿ ನಾನು ಹೇಳಿದೆ, ಬ್ರಾಹ್ಮಣರು ಪುರೋಹಿತರು ಸಿಗುವುದಿಲ್ಲ ಸತ್ಯ. ಆದರೆ ಈ ಸಮಸ್ಯೆ ಸೃಷ್ಟಿಯಾಗುವುದಕ್ಕೆ,   ಆ ವೃತ್ತಿನಿರತ ಬ್ರಾಹ್ಮಣರ ಕೊರತೆಯೇ ಬಹಳ ಮುಖ್ಯ ಕಾರಣ. ಈ ನಡುವೆ ಮನುಷ್ಯ ಸ್ವಭಾವ ಬದಲಾಗಿರುವುದೂ ಒಂದು ಕಾರಣ. ಒಂದು ವೇಳೆ ಯಾರಾದರೊಬ್ಬ ಬ್ರಾಹ್ಮಣ ಸಾಮಾನ್ಯವಾಗಿ ಆ ಸ್ಥಾನಕ್ಕೆ ಬಡ ಬ್ರಾಹ್ಮಣನೇ ಬರುವುದು, ಆ ಬ್ರಾಹ್ಮಣನಿಗೆ ಗೌರವ ಸಲ್ಲುವುದು ಅಲ್ಲಿ ಕುಳಿತಾಗ ಮಾತ್ರ. ಉಳಿದಂತೆ ಅವರಿಗೆ ಎಲ್ಲೂ ಮನ್ನಣೆ ಸಿಗುವುದಿಲ್ಲ. ಹಲವು ಕಡೆ ಸಹಪಂಕ್ತಿ ಕೂಡ ಸಿಗದೇ ಇರುವುದನ್ನು ಕಣ್ಣಾರೆ ಕಂಡಿದ್ದೇನೆ. ಆತ ತಿನ್ನುವ ಒಂದೊಂದು ತುತ್ತಿಗೂ ಆತನ ಬಡನವನ್ನು ಸಾಕ್ಷಿಯಾಗಿಸಿ ಕಾಣುವುದನ್ನು ಕಂಡಿದ್ದೇನೆ.   ಬಡತನದಿಂದ ಇದು ವರೆಗೆ ಎಲ್ಲವು ನುಂಗಿಕೊಂಡು ಇದ್ದವರು  ಈಗ ಸ್ವಾಭಿಮಾನದಿಂದ ಬದುಕುವ ದಾರಿ ಕಂಡುಕೊಂಡಿದ್ದಾರೆ.  ಈ ಪರಿಸ್ಥಿತಿಗೆ ಯಾರೆಲ್ಲ ಕಾರಣರಾಗುತ್ತಾರೆ? ವಿಶ್ಲೇಷಣೆ ಮಾಡಿದಂತೆ ಹಲವಾರು ಕಾರಣ ಸಿಗುತ್ತದೆ.  ಕಾರಣಗಳನ್ನು ಪರಿಹಾರಗಳನ್ನು ಹೇಳುವುದಕ್ಕೆ ಹೋಗುವುದಿಲ್ಲ. ಆದರೆ ತುಳಿತ ಎಂಬುದು ಕೇವಲ ಒಂದು ವರ್ಗಕ್ಕೆ ಅಥವಾ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ ಎಂಬುದು ಸತ್ಯ.  ಮನೆಯಲ್ಲಿ ವೈದಿಕ ಶ್ರಾದ್ಧ ಅಪರಕ್ರಿಯೆಗಳು  ಇದ್ದರೆ ಇವರು ಹಿಂದಿನ ಬಾಗಿಲಿನಿಂದ ಬಂದು,  ಹೆಚ್ಚಾಗಿ ಉತ್ತರ ಕ್ರಿಯೆಗಳು ಮರೆಯಲ್ಲೇ ಕತ್ತಲ ಕೋಣೆಯಲ್ಲೇ ನಡೆಯುವುದರಿಂದ ಅಲ್ಲಿ ಕುಟುಂಬಸ್ಥರು ಪುರೋಹಿತರಲ್ಲದೆ ಬೇರೆ ಯಾರೂ ಹೋಗುವುದಿಲ್ಲ. ಕ್ರಿಯೆ ಮುಗಿದು ಬಂದ ವಿಪ್ರರು ಹಿಂದಿನ ಬಾಗಿಲಿನಿಂದಲೇ ಹೋಗಿ ಮರೆಯಾಗಿಬಿಡುತ್ತಾರೆ. ಅರ್ಥಾತ್ ಹೊರಗೆ ಬಂದು ಯಾರಿಗೂ ಮುಖವನ್ನೂ ತೋರಿಸುವುದಿಲ್ಲ.  ಇದನ್ನು ಹಲವು ಸಲ ಕಣ್ಣಾರೆ ಕಂಡವನು ನಾನು. ಆದರೆ ಈಗ ಸ್ಥಿತಿ ಬದಲಾಗಿದೆ. ಈಗ ಹೊಸ ತಲೆಮಾರಿನವರು ಹೆಚ್ಚು ಸ್ವಾಭಿಮಾನಿಗಳಾಗಿ ವೃತ್ತಿಯನ್ನೆ ಬದಲಿಸಿಕೊಂಡಿದ್ದಾರೆ.  ಆದರೆ ಇಂದು ಮನೋಭಾವ ಹೇಗಾಗಿದೆ ಎಂದರೆ ಬಡ ಬ್ರಾಹ್ಮಣ ಸ್ವಾಭಿಮಾನವನ್ನು ಹೊಂದಿವುರುವುದೇ ಅಪರಾಧ ಎಂಬಂತೆ ಭಾಸವಾಗುತದೆ. 

ಪ್ರತಿಯೊಂದು ವರ್ಗ ಪಂಗಡಗಳಿಗೂ ಈಗ ಸಂಘಟನೆಗಳಿವೆ. ಸಮಾಜ ಸಂಘಟನೆಗಳು ನೋಂದಾಯಿಸಿಕೊಂಡು ಕಾರ್ಯ ಪ್ರವೃತ್ತವಾಗಿದೆ. ಹಲವು ಸಂಘಟನೆಗಳು ಆರ್ಥಿಕವಾಗಿಯೂ ಸುದೃಢವಾಗಿದೆ. ಇವುಗಳ ಧ್ಯೇಯೋದ್ದೇಶ ಉತ್ತಮವಾಗಿದ್ದರೂ ಇಂತ ಸಂಕೀರ್ಣ ಸಮಸ್ಯೆಗಳತ್ತ ಯಾವ ಸಮಾಜ ಸಂಘಗಳೂ ಗಮನ ಹರಿಸುತ್ತಿಲ್ಲ ಎಂಬುದು ಸತ್ಯ. ವಾರ್ಷಿಕವಾಗಿ ಏನೋ ಒಂದು ಧಾರ್ಮಿಕ ಕಾರ್ಯಕ್ರಮ ಮಾಡಿ ವಿಜ್ರಂಭಣೆಯಿಂದ ಭೋಜನ ಸಂತರ್ಪಣೆ ಮಾಡಿ ಯಾಗ  ಯಜ್ಞಕ್ಕೇ ಕಾರ್ಯಕ್ಶೇತ್ರ ಸೀಮಿತವಾಗಿಬಿಡುತ್ತದೆ. ಹೆಚ್ಚೆಂದರೆ, ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅನುದಾನವೊ, ಬಡವರಿಗೆ ಒಂದಷ್ಟು ಧನಸಹಾಯವೋ, ವೈದ್ಯಕೀಯ ಸಹಾಯವೋ  ಹೀಗೆ ಚಟುವಟಿಕೆ ಇರುತ್ತದೆ. ಇಂತಹ ಸಾಮಾನ್ಯ ಕಾರ್ಯಗಳನ್ನು ಮಾಡುವುದಕ್ಕೆ ಹಲವಾರು ಸಂಘಟನೆಗಳಿವೆ. ಆದರೆ ಬ್ರಾಹ್ಮಣ ಸಂಸ್ಕಾರಗಳು ನೆಲೆನಿಲ್ಲುವ ಇಂತಹ ಸಂಕೀರ್ಣ ಸಮಸ್ಯೆಗಳಿಗೆ ಎಲ್ಲಾ ಸಂಘಟನೆಗಳು ದಿವ್ಯ ನಿರ್ಲಕ್ಷವನ್ನು ತಳೆದಿವೆ ಎಂದರೆ ತಪ್ಪಾಗಲಾರದು. ಸಮಾಜ ಸಂಸ್ಕಾರ ಪರಂಪರೆಯಿಂದ ಬಹಳ ದೂರ ಸಾಗುತ್ತಾ ಇದೆ. ವೃತ್ತಿ ಪರವಾದ ಜೀವನ ಶೈಲಿ ಇದಕ್ಕೆ ಕಾರಣವಾದರೂ, ಕೆಲವೆಲ್ಲ ಶಾಸ್ತ್ರಕ್ಕೆ ಸಾಕು ಎಂಬಂತೆ ಕಾಟಾಚಾರಕ್ಕೆ ಸೀಮಿತವಾಗಿಬಿಡುತ್ತದೆ. ಸಂಧ್ಯಾವಂದನೆಯಲ್ಲಿ ನೂರ ಎಂಟು ಗಾಯತ್ರಿಮಂತ್ರ ಜಪ ಮಾಡಬೇಕು ಎಂದಿದ್ದರೆ, ಕೊನೆ ಪಕ್ಷ ಹತ್ತಾದರೂ ಮಾಡಿ ಅನುಷ್ಠಾನದಲ್ಲಿರಬೇಕು. ಆದರೆ ಸಮಯವಿಲ್ಲ ಎಂಬ ನೆವನದಿಂದ ಹತ್ತಕ್ಕಿಂತ ಒಂದು ಮೀರದಂತೆ ಕಾಟಾಚಾರಕ್ಕೆ ಗಡಿಬಿಡಿಯ ಜಪ ಮಾಡುವವರೂ ಇಲ್ಲದಿಲ್ಲ. ಪ್ರತಿಯೊಂದು ಸತ್ಕಾರ್ಯದಲ್ಲೂ ನಮ್ಮದೊಂದು ಸಿದ್ಧ ಮಂತ್ರವಿದೆ ಅಷ್ಟಾದರು ಮಾಡುತ್ತಾರಲ್ಲಾ? ತೀರ ಅನಿವಾರ್ಯ ಎನ್ನುವಂತಹ ಕ್ರಿಯೆಗಳು ಅಷ್ಟಾದರೂ ಮಾಡುವ ಹೊಂದಾಣಿಕೆಗೆ ಸೀಮಿತವಾಗುವುದು ನಮ್ಮ ಸಂಸ್ಕಾರದಲ್ಲಿನ ಅಗೌರವವನ್ನೇ ತೋರಿಸುತ್ತದೆ. ಹಲವು ಸಲ ಗಡಿಬಿಡಿಯಲ್ಲಿ ಜಪ ಮುಗಿಸಿ ವೃಥಾ ಪಟ್ಟಾಂಗ ಹೊಡೆಯುವುದಕ್ಕೋ ಇನ್ನೋಂದು ಕಾಲಹರಣಕ್ಕೋ ಸಮಯವನ್ನು ಒದಗಿಸುತ್ತದೆ.  ಭಗವಂತನಿಗೆ ನಾವು ಲೆಕ್ಕಾಚಾರ ತೋರಿಸುವಾಗ ಪ್ರತಿ ಭಗವಂತನು ಅದೇ ಲೆಕ್ಕಾಚಾರದಲ್ಲಿರುತ್ತಾನೆ. ಅಲ್ಲಿ ಒದಗಿ ಬರುವ ಕಾಟಾಚಾರ ನಮ್ಮಲ್ಲಿನ ಅತೃಪ್ತಿಯನ್ನು ನಮಗರಿವಿಲ್ಲದೇ ಹೆಚ್ಚಿಸುತ್ತದೆ.   ಜಾತಿ ಧರ್ಮಗಳು ಉಳಿಯುವುದು ಅದರಲ್ಲೂ ಬ್ರಾಹ್ಮಣ ಧರ್ಮ ಉಳಿಯುವುದು ಧಾರ್ಮಿಕ ಆಚರಣೆಗಳಿಂದ. ಧಾರ್ಮಿಕ ನಂಬಿಕೆಗಳಿಂದ. ಆದರೆ ಅದನ್ನು ಆಚರಿಸುವುದಕ್ಕೆ ಒಂದು ಸೂಕ್ತ ವಾತಾವರಣ ಕಲ್ಪಿಸುವುದರಲ್ಲಿ ಇಂದಿನ ಸಮಾಜ ಸಂಘಟನೆಗಳು ಔದಾಸಿನ್ಯವನ್ನು ತೋರಿಸುತ್ತವೆ,  ಇಲ್ಲ ಇದು ಒಂದು ಆದ್ಯತೆಯ ವಿಷಯವಾಗಿ ಗಮನಾರ್ಹವೆನಿಸಿಲ್ಲ. 

ಬ್ರಾಹ್ಮಣರು ಸಮಾಜದ ಮುಖಗಳು ಅಂತ ಹಿಂದಿನ ರಾಜರು ತಿಳಿದುಕೊಂಡಿದ್ದರಂತೆ.  ಇಂದು ರಾಜರಾಗಲೀ ಅಧಿಕಾರಿವರ್ಗವಾಗಲೀ ತಿಳಿದುಕೊಳ್ಳಬೇಕೆಂದು ಬಯಸುವ ಬದಲು ನಮ್ಮ ಮುಖವನ್ನು ನಾವು ಸ್ವಚ್ಛವಾಗಿಸಬೇಕು. ಹಾಗಂತ ಮಲಿನವಾಗಿದೆ ಎಂದಲ್ಲ. ಬ್ರಾಹ್ಮಣ್ಯ ಎಂಬುದು ಪರಿಶುದ್ದತೆಯ ಸಂಕೇತ. ಅಲ್ಲಿ ದೇಹ ಮನಸ್ಸು ಜೀವನ ಎಲ್ಲವೂ ಪರಿಶುದ್ದತೆಯತ್ತ ಸಾಗುವಂತಿರಬೇಕು. ತುಂಬ ಕಲ್ಮಷವಿದ್ದಲ್ಲಿ ಪರಿಶುದ್ದತೆಯು ಅಪವಾದವಾಗುವುದು ಸಹಜ. ಅಲ್ಲಿಗೆ ಅದು ಹೊಂದಿಕೊಳ್ಳುವುದಿಲ್ಲ. ಹಾಗೆಂದು ಅದನ್ನು ತೊರೆದು ಮಾಲಿನ್ಯವನ್ನು ಮೈಮೇಲೆ ಆವಾಹಿಸಿಕೊಳ್ಳುವುದಲ್ಲ. 

        ಕೆಲವು ವರ್ಷಗಳ ಹಿಂದೆ ತೆರಿಗೆ ಕಛೇರಿಗೆ ವೃತ್ತಿಯ ಕಾರಣದಿಂದ ಹೋಗಬೇಕಾಯಿತು.  ನಮ್ಮ ವರ್ತಕರೊಬ್ಬರಿಗೆ ಯಾವುದೋ ವಸ್ತುವಿಗೆ ತೆರಿಗ ಹಾಕಿ ಅದರ ಜತೆಗೆ ದಂಡವನ್ನು ಸೇರಿಸಿ ನೋಟೀಸು ನೀಡಿದ್ದರು. ವಾಸ್ತವದಲ್ಲಿ ಆ ವಸ್ತುವಿಗೆ ತೆರಿಗೆ ವಿನಾಯಿತು ಇರುವುದು ಎಲ್ಲೋ ಉಲ್ಲೇಖವಾಗಿರುವುದು ನಮ್ಮ ಗಮನಕ್ಕೆ ಬಂತು. ಹಾಗಾಗಿ ನೋಟಿಸಿನೊಂದಿಗೆ ನಾನು ಸಂಬಂಧಿಸಿದ ಕಛೇರಿಗೆ ಹೋಗಿದ್ದೆ.  ಅಲ್ಲಿ ಸಂಬಂಧಿಸಿದ ಅಧಿಕಾರಿಯ ಕೋಣೆಗೆ ಹೋಗಿ ಎಲ್ಲ ವಿವರಿಸಿದೆ ಸದರಿ ವಸ್ತುವಿಗೆ ತೆರಿಗೆ ವಿನಾಯಿತಿ ಇದೆ ಎಂದು ಹೇಳಿದೆ. ಆ ಅಧಿಕಾರಿ ಸ್ವಲ್ಪ ಪರಿಚಿತರು. ಹಲವಾರು ಸಂದರ್ಭಗಳಲ್ಲಿ ಅವರನ್ನು ಭೇಟಿಯಾಗಿದ್ದೆ.  ಕೆಲವು ಸಲ ಎಂತ ಭಟ್ರೆ ಅಂತ ಮಂಗಳೂರು ಭಾಷೆಯಲ್ಲಿ ಮಾತನಾಡುತ್ತಿದ್ದರು. ಆದಿನ ಮಾತ್ರ ಅವರು ಮೊದಲಿಗೆ ಒಪ್ಪಿಕೊಳ್ಳಲಿಲ್ಲ. ಹಾಗೆ ಹೀಗೆ ಎಂದು ಆಕ್ಷೇಪಿಸುತ್ತಾ ಹೋದರು. ಅದು ಅವರ ಕರ್ತವ್ಯ. ಸರಕಾರದ ಆದಾಯದ ದುಡ್ಡು ಯಾರೂ ವಂಚಿಸುವ ಹಾಗಿಲ್ಲ. ನಾನು ಮತ್ತೂ ವಿನಂತಿಸಿಕೊಂಡು ಮಾರಾಟ ತೆರಿಗೆಯ ನಿಯಮ ಪುಸ್ತಕದ ಯಾವುದೋ ಪುಟದಲ್ಲಿ ಉಲ್ಲೇಖಿಸಿದ ವಿನಾಯಿತಿಯನ್ನು  ತೋರಿಸಿದೆ. ಅವರಿಗೆ ಸ್ವಲ್ಪ ಸಂದೇಹ ಬಂತು. ಕೊನೆಗೆ ಕೆಲವರಿಗೆ ಕರೆ ಮಾಡಿ ಆ ನಿಯಮದ ಬಗ್ಗೆ ವಿಚಾರಿಸಿದರು. ಕೊನೆಗೆ ನನ್ನ ವಿನಂತಿಗೆ ಒಪ್ಪಿಕೊಳ್ಳದೆ ವಿಧಿ ಇಲ್ಲದಾಯಿತು. ಹಾಗೆ ಸಮಸ್ಯೆ ಪರಿಹರಿಸಿ ಅವರ ಕೋಣೆಯಿಂದ ಹೊರಬರಬೇಕಾದರೆ, ಅಲ್ಲೆ ಇದ್ದ ಸಹಾಯಕರಿಗೆ ಏನೋ ಗೊಣಗಿ ಹೇಳುವುದು ಕಿವಿಗೆ ಬಿತ್ತು." ಪುಳಿಚಾರ್ ಭಟ್ರು ಏನೋ ಓದಿಕೊಂಡು ಬಂದಿದ್ದಾರೆ....."( ಇದೇ ಅರ್ಥ ಬರುವ ಯಾವುದೋ ಶಬ್ದಗಳು ಅದು ನೆನಪಿಲ್ಲ)   ಅದು ಬಹಳ ಕ್ಷೀಣವಾದ ಧ್ವನಿಯಲ್ಲಿ ಹೇಳಿದ್ದರು.  ಒಂದು ಸಲ ತಿರುಗಿ ನೋಡಿದ್ದೆ. ಅವರಲ್ಲಿ ಆ ಬಗ್ಗೆ ಮಾತನಾಡುವುದು ವ್ಯರ್ಥ ಎನಿಸಿತ್ತು. ನನ್ನ ಬ್ರಾಹ್ಮಣ್ಯದ ಬಗ್ಗೆ ಅವರಿಗೆ ಸಮರ್ಥನೆ ಕೊಡುವ ಅವಶ್ಯಕತೆ ನನಗಿಲ್ಲ.  ಒಂದು ನಿಯಮ ಪುಸ್ತಕವನ್ನು ಓದುವುದು ಬ್ರಾಹ್ಮಣರು ಮಾತ್ರವಾ ಎಂಬ ಸಂದೇಹ ನನಗೆ ಬಂದು ಬಿಟ್ಟಿತು. ಎಲ್ಲರೂ ತಮಗೆ ಬೇಕಾಗಿರುವುದನ್ನು ಚರ್ಚಿಸುವುದು ಹಕ್ಕು. ಆದರೆ ಬ್ರಾಹ್ಮಣ ಚರ್ಚಿಸಿದರೆ ಅದು ನಿಂದನೆಯಾಗುತ್ತದೆ. ಒಬ್ಬ ಓದಿದ್ದಾನೆ ಎಂದರೆ ಅದು ಆತನ ದೃಷ್ಟಿಯಲ್ಲಿ ಬ್ರಾಹ್ಮಣನೇ ಆಗಿರುತ್ತಾನೆ. ಆತ ಹೇಳಿದ್ದು ನಿಂದನೆಯಾಗಲಿ, ಅಥವಾ ವ್ಯಂಗ್ಯವಾಲಿ ಅದಕ್ಕೆ ಆತನಿಗೆ ಧನ್ಯವಾದ ಹೇಳಬೇಕು ಎನಿಸಿತ್ತು. ಸಮಾಜದಲ್ಲಿ ಬ್ರಾಹ್ಮಣ ಎಂದರೆ ವಿದ್ಯಾವಂತ ಎಂಬ ಭಾವನೆ ದಟ್ಟವಾಗಿದೆ. ಸುಸಂಸ್ಕೃತ ಸಂಸ್ಕಾರ  ಎಂಬುದು ಸಮಾಜ ಎಂದೋ ಅಂಗೀಕರಿದೆ. ಇದು ವ್ಯಕ್ತವಾಗಿಯೋ ಅವ್ಯಕ್ತವಾಗಿಯೋ ಕೆಲವೊಮ್ಮೆ ಎದುರು ಬಂದು ಬಿಡುತ್ತದೆ. ಹೀಗಿರುವಾಗ ಬ್ರಾಹ್ಮಣ ಸ್ಥಾನ ಎಂಬುದು ಬಹಳ ಜವಾಬ್ದಾರಿಯುತ ಸ್ಥಾನ. ಅದು ಕೇವಲ ಪರಿಶುದ್ದಿಯ ಸಂಕೇತ ಮಾತ್ರವಲ್ಲ ಅರಿವಿನ ಜ್ಞಾನದ ಸಂಕೇತವೂ ಹೌದು.