Thursday, April 13, 2023

ಬಾಸೆ ಇಜ್ಜಾ ಮಾರಾಯ

 "ನಿಕ್ಕ್ ಒಂಚೂರಾಂಡಲಾ ಬಾಸೆ ಇಜ್ಜಾ ಮಾರಾಯ......?"   ಇದು ತುಳುವಿನಲ್ಲಿ, "ಎಂತ ಮಾರಾಯ ನಿಂಗೆ ಭಾಷೆ ಇಲ್ಲವಾ?"    "ಅವನಿಗೆ ಭಾಷೆ ಇಲ್ಲ...."   

        ಕರಾವಳಿ ಭಾಗದಲ್ಲಿ ಅದರಲ್ಲೂ ಮಂಗಳೂರಿನಲ್ಲಿ ಸರ್ವೇ ಸಾಮಾನ್ಯವಾದ ಬೈಗುಳ. ಇದನ್ನು ಬೈಗುಳ ಎನ್ನುವುದಕ್ಕಿಂತ ಅಸಮಾಧಾನದ ಪ್ರಕಟಣೆ ಎನ್ನಬಹುದು. ತಮ್ಮಲ್ಲಿರುವ ಅಸಮಾಧಾನವನ್ನು ವ್ಯಕ್ತ ಪಡಿಸುವ ರೀತಿ ಇದು. ಇಲ್ಲಿ ಹೇಳುವ ಭಾಷೆ ಎಂತಹುದು? ಹೊರಗಿನಿಂದ ಬಂದವರಿಗೆ ಇದು ಬಹಳ ವಿಚಿತ್ರ ಎನಿಸಬಹುದು. ಅದರಲ್ಲೂ ತುಳುವಿನಲ್ಲಿ ಭಾಸ್ಸೆ...ಅಂತ ಹೇಳುವಾಗ ಆ ಬೈಗುಳದ ಅರ್ಥ ಏನು ಎಂದು ಹಲವರಿಗೆ ತಲೆಕೆರೆದುಕೊಳ್ಳುವ ಹಾಗಾಗುತ್ತದೆ. ನಾಯಿ ಮೃಗ ಜಾನುವಾರುಗಳೂ ಅಸಹಜವಾಗಿ ನಡೆದು ಕೊಂಡರೆ ಇದು ಸಾಮಾನ್ಯವೆಂಬಂತೆ ಬಳಕೆಯಾಗುತ್ತದೆ. ಅದಕ್ಕೆ ಹೇಳಿದ್ರೆ ಭಾಷೆ ಇಲ್ಲ.  ಹೇಳಿದ್ರೆ ಭಾಷೆ....ಎಂಬುದು ಯಾವ ಅರ್ಥದಲ್ಲಿ ಎಂದು ತಿಳಿದರೆ ಅದರೆ ಶುದ್ದ ಸಂಸ್ಕಾರ ಅರಿವಿಗೆ ಬರುತ್ತದೆ. ಹಾಗೆ ನೋಡಿದರೆ ತೀರ ಕೆಳಮಟ್ಟದ ಬೈಗುಳಕ್ಕಿಂತ ಇದು ತುಸು ಸಂಸ್ಕಾರಯುತ ಬೈಗುಳ ಎನ್ನಬಹುದು.  ಬೈಗುಳ ಎಂದರೆ....ನಾವು ಯಾರನ್ನು ಬೈಯುತ್ತೇವೆಯೋ ಅವನು ಕೆಟ್ಟವನಾಗಿ ಆ ಬೈಗುಳಕ್ಕೆ ಅರ್ಹನೇ ಆಗಿರಬಹುದು. ಆದರೆ ಬೈಯುವ ಬೈಗುಳ ನಮ್ಮ ಸಂಸ್ಕಾರವನ್ನೂ ತೋರಿಸುತ್ತದೆ ಎಂಬುದು ಗಮನಾರ್ಹ. ಹಾಗಾಗಿ ಶಬ್ದ ಉಚ್ಚರಿಸುವುದು ಸುಲಭ. ಆದರೆ ತಂದು ಕೊಡುವ ಪರಿಣಾಮ ಕೇವಲ ಬೈಗುಳ ತಿನ್ನುವವನಿಗೆ ಮಾತ್ರ ಸೀಮಿತವಲ್ಲ. ಹಾಗಾಗಿ ಭಾಷೆ ಇಲ್ಲ ಎಂದು ಬೈಯುವುದು ಒಂದಷ್ಟು ಸಂಸ್ಕಾರಯುತ ಎನ್ನಬಹುದು. 

        ಭಾಷೆ.....ಅದು ನಮ್ಮೊಳಗಿನ ಸಂವಹನದ ಮಾಧ್ಯಮ. ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಇದು ಮಾಧ್ಯಮ, ಭಾಷೆ ಎಂದರೆ ಅದು ಬಾಯ್ದೆರೆಯಾಗಿ ಮಾತ್ರ ಇರುವುದಿಲ್ಲ. ಕೈ ಭಾಷೆ, ಆಂಗಿಕ ಭಾಷೆ ಹೀಗೆ ಭಾಷಾ ವೈವಿಧ್ಯ ಉಪಯೋಗವಾಗುವುದು ಅದನ್ನು ಅರ್ಥೈಸಿಕೊಳ್ಳುವುದರಲ್ಲಿ. ಇದು ಎಲ್ಲ ಸಂವಹನವಾದರೆ, ಮೇಲೆ ಹೇಳುವ ಭಾಷೆ ಎಂಬುದು ಅತ್ಯಂತ ವೈಶಿಷ್ಟ್ಯ.  ಅದರಲ್ಲೂ ಒಂದು ಮನುಷ್ಯ ಜೀವನದ ಪ್ರತಿಬಿಂಬ ಇದೆ.  ಭಾಷೆ....ಹುಟ್ಟುವಾಗಲೇ ಮನುಷ್ಯ ಕಲಿಯುತ್ತಾನೆ. ನವಜಾತ ಶಿಷುವಿಗೂ ಒಂದು ಭಾಷಾ ಮಾಧ್ಯಮವಿದೆ. ಅದರ ಭಾವನೆಗಳನ್ನು ಅದರ ಅನುಭವಗಳನ್ನು ಹೇಳುವ ಮಾಧ್ಯಮವಿದೆ. ಬಾಷೆ ಎಂದಾಗ ನಾವು ಬಾಯ್ದೆರೆಯಾಗಿ ಹೇಳುವುದು ಬರಿಯುವುದು ಮಾತ್ರವೇ ನಮಗೆ ಗಮನಕ್ಕೆ ಬರುತ್ತದೆ. ಆದರೆ ಭಾಷೆ ಇದೆಲ್ಲವನ್ನು ಮೀರಿ ಮನುಷ್ಯ ಪ್ರಾಣಿಗಳ ನಡುವೆ ಸಂವಹನದ ವಸ್ತುವಾಗಿದೆ. ಮನುಷ್ಯ ಅಥವಾ ಪ್ರಾಣಿ ಪಕ್ಷಿಗಳು ಮೊದಲು ಕಲಿಯುವುದು ಮಾತೃ ಭಾಷೆ. ಭಾಷೆಯ ಮೊದಲ ಗುರು ತಾಯಿ. ವಿಪರ್ಯಾಸ ಎಂದರೆ ತಂದೆಗೆ ಈ ಸ್ಥಾನ ಇರುವುದಿಲ್ಲ. ಪಿತೃ ಭಾಷೆ ಎಂದು ಯಾವುದೂ ಬಳಕೆಯಲ್ಲಿ ಇಲ್ಲ. ತಾಯಿ ಹುಟ್ಟಿದೊಡನೆ  ಮಗುವಿನೊಂದಿಗೆ ಜತೆಯಾಗುವ ಭಾಷೆ ಅದು ಮಾತೃಭಾಷೆ. ಅದು ಮಮತೆಯ ಕಣ್ಣೋಟ ಇರಬಹುದು. ಆರೈಕೆ ಇರಬಹುದು. ನಿದ್ದೆ ಬಂದಾಗ ತಟ್ಟುವುದರಲ್ಲಿ ಇರಬಹುದು. ಬಾಚಿ ತಬ್ಬಿಕೊಳ್ಳುವುದರಲ್ಲಿರಬಹುದು. ತಾಯಿಯ ತೊಳ ತೆಕ್ಕೆಯ ಭಾಷೆ ತಾಯಿ ಮಗುವಿನ ಅನೂಹ್ಯ ಸಂಭಂಧ. ತನ್ನ ಬೆರಳ ತುದಿಯಲ್ಲೂ ತಾಯಿ ಮಗುವಿಗೆ ಭಾಷೆಯನ್ನು ಕಲಿಸಬಲ್ಲಳು. ಅದು ಆದ್ಯ ಭಾಷೆಯಾಗಿರುತ್ತದೆ.ತಾಯಿ ಈ ಭಾಷೆಯ ಮೂಲಕ ಮಗುವಿಗೆ ಜಗತ್ತಿನ ಪರಿಚಯ ಮಾಡಿಕೊಡುತ್ತಾಳೆ. ಮಗುವಿಗೆ ಅರ್ಥವಾಗಲಿ ಅರ್ಥವಾಗದಿರಲಿ. ಜೋಗುಳ ಹಾಡುತ್ತಾಳೆ. ಲಲ್ಲೆ ಗರೆಯುತ್ತಾಳೆ. ಮಗು ಅದನ್ನೆ ಕೇಳಿ ಕೇಳಿ ನಂತರ ಅರ್ಥವಿಸಿಕೊಳ್ಳುತ್ತದೆ. ಒಂದು ಹೂಂಕಾರದಲ್ಲೂ ತಾಯಿ ಮಗುವಿನ ಹೃದಯಗಳು     ಮಾತುಗಳನ್ನಾಡುತ್ತದೆ. ಹಾಗಾಗಿ ಮಾತೃ ಭಾಷೆ ಎಂಬುದು ಮಗುವಿಗೆ ಹುಟ್ಟಿನಿಂದ ಒದಗಿ ಬರುವ ಒಂದು ಸಂಸ್ಕಾರ. ಹಸಿವಾಗುವಾಗ ಮಗುವಿಗೆ ಎದೆ ಹಾಲು ಎಲ್ಲಿದೆ ಎಂದು ಪರಿಚಯ ಮಾಡುತ್ತದೆ. ಕೈ ತಟ್ಟುವಾಗ ನಿದ್ದೆ ಮಾಡಬೇಕು ಎಂಬುದನ್ನೂ ಹೇಳಿಕೊಡುತ್ತದೆ.  ಹಾಗಾಗಿ ತಾಯಿಯಿಂದ ಮಗುವಿಗೆ ಹುಟ್ಟಿನಿಂದ ಸಿಗುವ ಸಂಸ್ಕಾರವೇ ಈ ಭಾಷೆ. ಒಂದರ್ಥತಲ್ಲಿ ಭಾಷೆ ಎಂಬುದು ಸಂಸ್ಕಾರ. 

        ಭಾಷೆ ಎಂಬುದು ಒಂದು ಸಂಸ್ಕಾರ ಎಂದಾಗುವಾಗ ಮೇಲೆ ಹೇಳಿದ ಭಾಷೆ ಇಲ್ಲವಾ ಎನ್ನುವುದು ಆ ಮನುಷ್ಯನಿಗೆ ತಾಯಿಯಿಂದ ಸಿಕ್ಕಿದ ಸಂಸ್ಕಾರವನ್ನೇ ಪ್ರತಿಬಿಂಬಿಸುತ್ತದೆ.  ತಾಯಿಯಿಂದ ಸಿಗುವ ಸಿಗುವ ಶುದ್ದ ಸಂಸ್ಕಾರವೇ ಮಾತೃಭಾಷೆ.  ಹಾಗಾಗಿ ಆ ಭಾಷೆಯ ಅರ್ಥ ವ್ಯಾಪಕತೆ ಕೇವಲ ಒಂದು ಸಂವಹನವಲ್ಲ ಅದು ಜೀವನದ ಪಾಠದ ಜತೆಗೆ ಒಂದು ಶುದ್ದ ಸಂಸ್ಕಾರವನ್ನೂ ತೋರಿಸುತ್ತದೆ. ಈಗ ನೋಡಿ ಭಾಷೆ  ಇಲ್ಲವಾ ಎನ್ನುವುದರಲ್ಲಿನ ಒಂದು ಸಂಸ್ಕಾರ ಅರ್ಥವಾಗುವುದಿಲ್ಲವಾ? ಓದುಗರಿಗೆ ಭಾಷೆ ಇದೆ ಎಂಬ ವಿಶ್ವಾಸ ಇರುವುದರಿಂದಲೇ ಲೇಖಕನಿಗೆ ಪ್ರಚೋದನೆ ಹುಟ್ಟಿಕೊಳ್ಳುತ್ತದೆ.  

Saturday, April 8, 2023

ಅವ್ವ ಸಲ್ಲಿಸಿದ ಪ್ರಾರ್ಥನೆ

  ಆದಿನ ದೇವಸ್ಥಾನದ ಉತ್ಸವದ ಸಮಯ. ಮಧ್ಯಾಹ್ನದ ಪೂಜೆಯ ಮಹಾಮಂಗಳಾರತಿ ನಡೆದು ಭಕ್ತರೆಲ್ಲ ಪೂಜೆಯನ್ನು ಕಣ್ತುಂಬ ಕಂಡು,  ಪ್ರಸಾದ ತೆಗೆದುಕೊಂಡು ಭೋಜನಕ್ಕೆ ತೆರಳುತ್ತಾರೆ. ಉಳಿದ ಕೆಲವೇ ಕೆಲವು ಮಂದಿ ಸರದಿಯಲ್ಲಿ ನಿಂತು ತೀರ್ಥಪ್ರಸಾದವನ್ನು ತೆಗೆದುಕೊಳ್ಳುತ್ತಿದ್ದಾರೆ. ಹೆಚ್ಚಿನವರೆಲ್ಲರೂ ಊಟಕ್ಕೆ ತೆರಳಿರುವಾಗ ಅಲ್ಲಿ ಬೇರೆ ಯಾರೂ ಇರುವುದಿಲ್ಲ. ದೂರದಲ್ಲಿ ನಿಂತ ವೃದ್ದೆ ಯಾವುದೋ ಹರಕೆ ಸಲ್ಲಿಸಿದ್ದಳು. ಪ್ರಸಾದಕ್ಕಾಗಿ ಬಂದು ನಿಂತಳು. ಮೊಕ್ತೇಸರರು ಪ್ರಾರ್ಥನೆ ಸಲ್ಲಿಸಿ ಹರಕೆ ಪ್ರಸಾದ ಕೊಡುವುದು ವಾಡಿಕೆ ಪ್ರಾರ್ಥನೆ ಏನಾದರೂ ಉಂಟಾ ಎಂದು ಯಾಂತ್ರಿಕವಾಗಿ ಕೇಳಿದರು. ವೃದ್ದೆ ಗರ್ಭಗುಡಿಯ ಒಳಗಿನ ದೇವಿಯನ್ನು ನೋಡುತ್ತಾ ಗದ್ಗದಳಾಗಿಬಿಡುತ್ತಾಳೆ. ಕಂಪಿಸುವ ಕೈಯನ್ನು ಜೋಡಿಸಿ ಕೈ ಮುಗಿಯುತ್ತಾಳೆ. ಏನು ಪ್ರಾರ್ಥನೆ ವಿವರಿಸುವುದಕ್ಕೆ ಆಕೆಗೆ ಸಾಧ್ಯವಾಗುತ್ತಿಲ್ಲ. ಹಾಗೇ ನಿಂತು ಬಿಡುತ್ತಾಳೆ. ಆಕೆಯ ದುಃಖತಪ್ತ ಮುಖವನ್ನು ನೋಡಿ ಮೊಕ್ತೇಸರರು ಸುಮ್ಮನೇ ನಿಂತು ಬಿಡುತ್ತಾರೆ. ಅವರೂ ಒಂದಷ್ಟೂ ತಲ್ಲಣಗೊಂಡಿರುತ್ತಾರೆ. ಆಕೆ ಸಾವರಿಸಿಕೊಳ್ಳುವುದನ್ನು ಕಾಯುತ್ತಾರೆ. ಕೊನೆಗೆ ಕಣ್ಣೀರನ್ನು ಒರೆಸಿಕೊಂಡು.....ಹೇಳುತ್ತಾಳೆ, "  ಕೌಟುಂಬಿಕ ಕಷ್ಟಗಳನ್ನು ಪರಿಹರಿಸಿ, ಮಕ್ಕಳ ಭವಿಷ್ಯ ಉತ್ತಮವಾಗಬೇಕು. "   ಆಕೆಗೆ ಕೌಟುಂಬಿಕ ವಿಷಯಗಳನ್ನು ತೆರೆದ ಮನಸ್ಸಿನಿಂದ ಹೇಳಲಾಗುತ್ತಿಲ್ಲ. ಆ ಅಸಹಾಯಕತೆ ಆಕೆಯ ಮುಖದಲ್ಲಿದೆ. ಮೌನದಲ್ಲೇ ದೇವರಲ್ಲಿ ಆರಿಕೆಯನ್ನು ಮಾಡುತ್ತಾಳೆ. ದೇವರು ಕೇಳದೆ ಇರಲಾರ ಎನ್ನುವುದು ಆಕೆಯ ವಿಶ್ವಾಸ. ಕೊನೆಲ್ಲಿ ಆಕೆ ತನಗೆ ನೆಮ್ಮದಿ ಕೊಡು ಎಂದು ಕೇಳುವುದಿಲ್ಲ. ಮಕ್ಕಳ ಬದುಕು ಒಳ್ಳೆಯದಾಗಬೇಕು. ಈ ಪ್ರಾರ್ಥನೆ ಆಕೆ ಬದುಕಿನಲ್ಲಿ ಅಳವಡಿಸಿದ ತತ್ವವನ್ನು ತೋರಿಸುತ್ತದೆ. ಬಹುತೇಕ ಎಲ್ಲ ಅಮ್ಮಂದಿರ ತತ್ವಗಳು ಇದೇ ಆಗಿರುತ್ತದೆ. 


  ದೇವರ ಮುಂದೆ ನಿಂತಾಗ ಹೀಗೆ ಭಾವುಕರಾಗುವುದು, ಮನಸ್ಸಿನ ಪ್ರಾರ್ಥನೆಯನ್ನು ಸಲ್ಲಿಸಿ ದೈವಾನುಗ್ರಹಕ್ಕೆ ಮೊರೆ ಹೋಗುವುದು ಸಹಜ. ಅದರೂ ಈಕೆಯ ಪ್ರಾರ್ಥನೆಯಲ್ಲಿ ಅಕೆ ಹತಾಶೆಗೊಳಗಾದಂತೆ ಕಂಡಳು. ಅತ್ಯಂತ ಭಾವುಕರಾದಂತೆ ನನಗೆ ಏನೋ ಕಸಿವಿಸಿ ಅನಿಸಿತು. ಸಾಂಸಾರಿಕ ಸಮಸ್ಯೆಗಳನ್ನು ಅರಿಕೆ ಮಾಡುವಾಗ ಮುಜುಗರ ಸಂಕೋಚ ಅನುಭವಿಸುವುದು ಸಹಜ.   ಮೊಕ್ತೇಸರರು ಆಕೆಯ ಪರವಾಗಿ ಆಕೆಯ ಕಷ್ಟಗಳನ್ನು ಪರಿಹರಿಸಿ ಮನಸ್ಸಿಗೆ ಸಮಾಧಾನವನ್ನು ಒದಗಿಸಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು. ದೇವರ ಮುಂದೆ ಭಾವುಕರಾಗುವುದು, ಕಷ್ಟಗಳನ್ನು ಹೇಳಿಕೊಳ್ಳುವುದು, ಮನಸ್ಸಿಗೆ ಸಾಂತ್ವಾನವನ್ನು ಪಡೆದುಕೊಳ್ಳುವುದು ಇದೇನು ಹೊಸತಲ್ಲ.  ಅಲ್ಲಿಗೆ ಮರೆತು ಬಿಡಬಹುದಾದ ಸಣ್ಣ ಘಟನೆ. 

ಕಾರ್ಯಕ್ರಮ ಮುಗಿದು ಹಿಂದಿರುಗುವಾಗ ರಸ್ತೆಯಲ್ಲಿ ಅದೇ ವೃದ್ದೆ ನಡೆದುಕೊಂಡು ಹೋಗುತ್ತಿದ್ದಳು. ಏನೋ ಕನಿಕರ ತೋರಿ ವಾಹನದ ಒಳಗೆ ಕರೆದೆ. ಆಕೆ ಬೇಡ ಎಂದು ಹೇಳಿದರೂ ನಡೆಯುವುದಕ್ಕೆ ಅಸಮರ್ಥಳಾಗಿರುವುದರಿಂದಲೋ ಏನೋ ನಂತರ ವಾಹನ ಏರಿದಳು. ಹೋಗುತ್ತಿದ್ದಂತೆ ಆಕೆಯಲ್ಲಿ ಕೇಳಿದೆ, ದೇವರ ಮುಂದೆ ಅತ್ತ ಕಾರಣ ಏನು? ಏನು ಸಂಕಷ್ಟ?

ಭಾವನಾತ್ಮಕ ಸುಳಿಗೆ ಸಿಲುಕಿದಾಗ ಮನುಷ್ಯ ಹೇಳಬಾರದೇ ಇರುವಂತಹ ವಿಷಯವನ್ನೂ ಹೇಳಿಬಿಡುತ್ತಾನೆ. ಆಕೆ ಹೇಳಿದ ವಿಷಯ ಸಾಂಸಾರಿಕವಾಗಿತ್ತು. ಇದರ ಅರಿವು ಮೊದಲೇ ಇದ್ದರೂ ಕೇಳುವುದೋ ಬಿಡುವುದೋ ಎಂದು ಸಂದಿಗ್ಧದಲ್ಲೇ ಕೇಳಿದೆ. ಆಕೆಯ ಮಕ್ಕಳ ವಿಷಯ ಒಂದೊಂದಾಗಿ ಹೇಳಿದಳು. ಸಾಮಾನ್ಯವಾಗಿ ವೃದ್ದೆಗೆ ಈ ವಯಸ್ಸಿನಲ್ಲಿ ಮತ್ತೇನಿರುತ್ತದೆ. ಹಲವರು ತಮ್ಮ ದೇಹಾರೋಗ್ಯದಲ್ಲಿ ಬಳಲಿದರೂ ಅದರ ಉಪಶಮನಕ್ಕೆ ಹರಕೆ ಹೊರುವುದಿಲ್ಲ. ಅದನ್ನು ಅವರು ಹೇಗೋ ಎದುರಿಸಬಲ್ಲರು. ಆದರೆ ತನ್ನ ಸಂಸಾರ ಎಂದು ಬರುವಾಗ, ದೇವರ ಮೊರೆ ಹೋಗುವುದು ಸರ್ವೇ ಸಮಾನ್ಯ. ಪರಿಹರಿಸದ ವಿಚಾರದ ಗಮ್ಯ ಇರುವುದು ಭಗವಂತನ ಸಾನ್ನಿಧ್ಯದಲ್ಲಿ. ಭಗವಂತ ಅದನ್ನು ಪರಿಹರಿಸುತ್ತಾನೋ ಬಿಡುತ್ತಾನೋ ಅದು ಬೇರೆ ವಿಷಯ. ಪರಿಹಾರವಾದರೆ ದೈವಾನುಗ್ರಹ ಫಲಿಸಿತು, ಪರಿಹಾರವಾಗದೇ ಇದ್ದರೆ ತಮಗೆ ಯೋಗವಿಲ್ಲ ಎಂದು ತೃಪ್ತಿ ಪಟ್ಟುಕೊಳ್ಳುವುದು. 

ಆಕೆಗೆ ಇಬ್ಬರು ಮಕ್ಕಳು ಒಬ್ಬಳನ್ನು ಮದುವೆ ಮಾಡಿ ಕಳುಹಿಸಿದರೆ ಇನ್ನೊಬ್ಬ ಮಗ ಮದುವೆ ಆದ. ಆನಂತರ ನಿಜವಾದ ಸಂಸಾರ ಸಾಗರದ ತೆರೆಗಳ ಅಬ್ಬರ ಹೆಚ್ಚಾಯಿತು. ಮನೆ ತುಂಬುವ ಸೊಸೆ ಮನೆಯನ್ನು ನೋಡಿಕೊಳ್ಳುವುದು ಬಿಡಿ ಆಕೆಯನ್ನೂ ನೋಡಿಕೊಳ್ಳುವ ಅನಿವಾರ್ಯತೆಯನ್ನು ತಂದಿಡುತ್ತಾಳೆ. ಹೀಗೆ ಇನ್ನೂ ಏನೇನೋ ಹೇಳುತ್ತಾಳೆ. ಸೀರಿಯಲ್ ನಲ್ಲಿ ಅತ್ತೆ ಸೊಸೆ ಭಾವನಾತ್ಮಕವಾಗಿ ಒಂದಾಗುವಾಗ ಕಣ್ಣಲ್ಲಿ ನೀರು ಹರಿದು ಭಾವನೆಗಳೆಲ್ಲ ಹೊರಗೆ ಬರುತ್ತವೆ. ಆದರೆ ಅದೇ ಕ್ಷಣ ಸ್ವಂತ ಮನೆಯಲ್ಲಿ ಬೆಂಕಿ ಧಗ ಧಗಿಸುತ್ತದೆ. ಇದು ವಾಸ್ತವ. ಆಕೆ ಸೊಸೆಯ ಬಗ್ಗೆ ಬಹಳಷ್ಟು ಹೇಳುತ್ತಾ ಹೋದಳು. ಆಕೆಯಿಂದ ಮಗನಿಗೆ ಸುಖವೂ ಇಲ್ಲ.  ನೆಮ್ಮದಿಯೂ ಇಲ್ಲ. ಮೊನ್ನೆ ಮೊನ್ನೆ ತನಕ ಅಕ್ಕರೆಯಿಂದ ಮಗನನ್ನು ಬೆಳೆಸಿದ ಆಕೆಗೆ ಆತನ ಬವಣೆ ನೋಡುವುದಕ್ಕಾಗುವುದಿಲ್ಲ. ಇಂತಹ ಕಥೆಗಳು ಹಲವು ಸಿಗುತ್ತವೆ.   ನನಗೆ ಅದರಲ್ಲೇನು ವಿಶೇಷ ಉಂಟು ಅಂತ ಅನಿಸಲಿಲ್ಲ. ಸಾಂಸಾರಿಕ ಸಂಗತಿಗಳು ಹೆಚ್ಚು ಕಡಿಮೆ ಹೀಗೆ ಇರುತ್ತವೆ. ಆದರೆ ಇಲ್ಲಿ ಮನುಷ್ಯನ ಸ್ಪಂದನೆ ತೆಗೆದುಕೊಳ್ಳುವ ನಿರ್ಣಯಗಳು ನನಗೆ ಚಿಂತನೆಯ ಮುಖವನ್ನು ತೋರಿಸುತ್ತವೆ. ಮಗನ ಇಕ್ಕಟ್ಟಿನ ಪರಿಸ್ಥಿತಿಯನ್ನು ಕಾಣಲಾಗದೇ ಆಕೆ ಮನೆಬಿಟ್ಟು ಯಾರದೊ ಮನೆಯಲ್ಲಿ ನಿಂತು ಬಿಡುತ್ತಾಳೆ. ಪರರ ಮನೆಯಲ್ಲಿ ಚಾಕರಿಗೆ ಎನ್ನುವ ಹಾಗೆ ಇಲ್ಲವಾದರೂ ಅಲ್ಲಿ ಸಿಗುವ ಅನುಕಂಪವೂ  ಅದು ಒಂದು ರೂಪದ ಚಾಕರಿಯೇ,  ಬೇಕಾದಾಗ ಉಣ್ಣುವುದಕ್ಕಿಲ್ಲ, ಮಲಗುವುದಕ್ಕಿಲ್ಲ. ಆಕೆ ಅಷ್ಟು ಸಹಿಸುವುದು ಹೆತ್ತ ಮಗನಿಗೋಸ್ಕರ!!  ಇನ್ನೊಬ್ಬರ ಹಿತಕ್ಕಾಗಿ ನೋವು ಸಹಿಸುವ ಶಕ್ತಿ ಅಮ್ಮನಿಗೆ ದೈವ ಕೊಟ್ಟವರ. ಹುಟ್ಟಿನಿಂದಲೇ ಪಡೆವ ಈ ವರ ಆಕೆಗೆ ಬದುಕಿನ ಚೈತನ್ಯವನ್ನು ಅದು ಹೇಗೆ ತುಂಬಿಸುತ್ತದೆ ಎಂಬುದು ವಿಚಿತ್ರ. ಯಾವ ಕಥೆಯನ್ನೂ ನೋಡಿದರೂ  ಹೆಣ್ಣಿಗೆ  ಅದರ ಅಂತರ್ಚೈತನ್ಯ ಇದೇ  ಆಗಿರುತ್ತದೆ.  ಅದರಲ್ಲೂ  ತಾಯಿಗೆ ಅದು ಪ್ರಕೃತಿ ದತ್ತ ಕೊಡುಗೆ. 

ನಮ್ಮ ಮನೆಯ ರಸ್ತೆಯಲ್ಲಿ ಒಂದು ಕುಟುಂಬವಿತ್ತು. ಆಗಾಗ ಅಲ್ಲಿಗೆ ಒಬ್ಬಳು ವೃದ್ದೆ ಬರುತ್ತಿದ್ದಳು. ಬಹಳ ಶಾಂತ ಸ್ವಭಾವದ ವಯೋ ವೃದ್ದೆ. ಒಂದು ದಿನ ನನಗೂ ಮಾತಿಗೆ ಸಿಕ್ಕಿದಳು, ಹೀಗೆ ಪರಿಚಯ ಮಾತನಾಡುವಾಗ  ಆ ಮನೆಯವರು ಆಕೆಗೆ ಏನಾಗಬೇಕು ಎಂದು ಕೇಳಿದೆ. ಆಕೆ ಸಹಜವಾಗಿ ಉತ್ತರಿಸಿದಳು. ನನಗೆ ಮಾತ್ರ ಅದನ್ನು ಸಹಜವಾಗಿ ಸ್ವೀಕರಿಸುವುದಕ್ಕೆ ಸಾಧ್ಯವಾಗಲಿಲ್ಲ. ಆಕೆಯ ಮಗನೇ ಅಲ್ಲಿರುವುದು. ಮಗ ಸೊಸೆ ಮೊಮ್ಮಗು ಇವರನ್ನು ಕಾಣುವುದಕ್ಕಾಗಿ ಆಗಾಗ ಬರುತ್ತಿರುತ್ತಾಳೆ. ಬಂದವಳು ಸಾಯಂಕಾಲವಾಗಬೇಕಾದರೆ ಹೊರಟು ನಿಲ್ಲುತ್ತಾಳೆ.  ಎಲ್ಲಿಗೆ ಎಂದು ತಿಳಿದರೆ  ಮತ್ತೂ ಗಾಬರಿಯಾಗುತ್ತದೆ....ಅನಾಥಾಶ್ರಮಕ್ಕೆ.  ಅನಾಥಾಶ್ರಮದಿಂದ ಆಕೆಯೇ ಮಗನ ಮನೆಗೆ ನೆಂಟರಂತೆ ಬರುತ್ತಾಳೆ. ಅಷ್ಟಾಗಿ ಆಕೆ ಇರುವುದು ಒಬ್ಬನೇ ಮಗ. ಮನೆಯಲ್ಲಿ ಕಾರಿನಿಂದ ತೊಡಗಿ ಎಲ್ಲವೂ ಇದೆ. ಆದರೆ ಅಮ್ಮನಿಗೆ ಮಾತ್ರ ಜಾಗವಿಲ್ಲ. ಅದರ ಬಗ್ಗೆ ಆಕೆ ಯೋಚಿಸುವುದಿಲ್ಲ. ಒಂದು ಸಲ ಆಕೆ ಹೇಳಿದಳು ಕೊನೆ ಪಕ್ಷ ಹೀಗೆ ನೋಡಿ ಹೋಗುವ ಸೌಹಾರ್ದವಾದರೂ ಉಳಿದಿದೆಯಲ್ಲ.  ಈ ಮಾತು ಕೇಳುವಾಗ ಕರುಳು ಚುರುಕ್ ಎನ್ನದಿದ್ದರೆ ಮಾನವೀಯ ಭಾವನೆಗೆ ಗೌರವ ಇಲ್ಲ ಎಂದಾಗುತ್ತದೆ. ಹಾಗಿದ್ದರೆ ಅದನ್ನು ಅನುಭವಿಸುವ ಮನಸ್ಸುಗಳು ಹೇಗಿರಬಹುದು?  ನನ್ನ ಅಮ್ಮನಲ್ಲಿ ಬೆರೆಯುವಾಗ ನನಗೆ ಆಕೆಯ ಮುಖ ಎದುರು ಬಂದು ನಿಂತು ಬಿಡುತ್ತದೆ. ಅವಿದ್ಯಾವಂತೆಗೂ ಜನ್ಮನಾ ಒಂದು ಸಂಸ್ಕಾರ ಲಭ್ಯವಾಗುತ್ತದೆ. ಹಲವು ಸಲ ಅದುವೇ ಶಾಪವಾಗಿ ಪರಿಣಮಿಸುತ್ತದೆ.  ಸಾಮಾನ್ಯವಾಗಿ ವೃದ್ದ ಮಾತಾಪಿತೃಗಳನ್ನು ಮಕ್ಕಳೇ ಹೋಗಿ ಅನಾಥಾಶ್ರಮದಲ್ಲಿ ಬಿಟ್ಟು ಬರುವುದನ್ನು ಕಂಡಿದ್ದೇವೆ. ಆದರೆ ಈಕೆ ಸ್ವಯಂ ತಾನೇ ಹೋಗಿ ಅನಾಥಾಶ್ರಮವನ್ನೆ ತನ್ನ ಖಾಯಂ ವಾಸಸ್ಥಾನ ಮಾಡಿಕೊಂಡಿವುರುವುದು ವಿಚಿತ್ರ ಅನ್ನಿಸುತ್ತದೆ. ಆಕೆಯೇ ಬರುತ್ತಾಳೆ, ಆಕೆಯೇ ಹೋಗುತ್ತಾಳೆ. ನಡುವೆ ಒಂದು ಸಲವೂ ಮಗ ಸೊಸೆ ಆಶ್ರಮಕ್ಕೆ ಭೇಟಿ ಕೊಡುವುದಿಲ್ಲ. ಬಹುಶಃ ಅಲ್ಲಿನವರ ಮುಖ ನೋಡುವ ಧೈರ್ಯ ಇಲ್ಲದಿರಬೇಕು. ಮಗನ ಕುಟುಂಬದ ಸೌಹಾರ್ದತೆ ಉಳಿಯುವುದಕ್ಕೆ ಆಕೆ ತುಳಿದ ಹಾದಿ ಛೇ ಅಮ್ಮನ ನೋವು ಅದು ನೋವಾಗುವುದಿಲ್ಲ. ನೋವು ಎಂದಾದರೆ ಅದಕ್ಕೆ ಪರಿಹಾರವೂ ಇಲ್ಲ. 

ಕುಟುಂಬ ಜೀವನ ಎಂದರೆ ಹೀಗೆ. ಅದು ಸಾಗರದಂತೆ ಅಂತ ತಿಳಿದವರು ಹೇಳಿದ್ದಾರೆ. ಸಾಗರದ ಆಳದಂತೆ ಇದು .... ಇಲ್ಲಿ ಬಾಂಧವ್ಯದ ಆಳಕ್ಕೆ ಇಳಿದರೆ ಮಾತ್ರ ಮುತ್ತುಗಳು ಸಿಗಬಹುದು. ಇಲ್ಲವಾದರೆ ಕೇವಲ ಅಲೆಗಳು ಸುಳಿಗಳು ಜಲಚರಗಳು. ನಮ್ಮ ಮನೆಯಲ್ಲಿ ಈಗಲೂ ಅಮ್ಮನೇ ಮೊದಲು ಒಲೆ ಉರಿಸುವುದು. ಮನೆಯೊಳಗೆ ಏನು ಬಿಸಿಯಾಗಬೇಕು ಎಂಬುದು ಅವರದೇ ತೀರ್ಮಾನ. ಅಮ್ಮ ಅಡುಗೆ ಕೋಣೆಯಿಂದ ಹೊರಗೆ ಬರುವಾಗ ರಾತ್ರಿ ಎಂಟು ಘಂಟೆಯಾಗುತ್ತದೆ. ಈಗಲು ನಮ್ಮ ಹೊಟ್ಟೆ ತುಂಬಿದ ನಂತರ ಅವರ ಹೊಟ್ಟೇ ತುಂಬುತ್ತದೆ. ನಾನು ಹಲವು ಸಲ ಹೇಳು ತ್ತಿರುತ್ತೇನೆ. ಏನೂ ಮಾಡುವುದು ಬೇಡ, ವಿಶ್ರಾಂತಿ ತೆಗೆದುಕೊಳ್ಳಿ. ಅದು ಹೇಗಾದರೂ ಆಗಿಬಿಡುತ್ತದೆ. ಹಸಿವು ತನ್ನಿಂತಾನೆ ಎಲ್ಲವನ್ನು ಸೃಷ್ಟಿಸಿ ಬಿಡುತ್ತದೆ. ಆದರೆ ಆಕೆ ಕೇಳಬೇಕಲ್ಲ. ನಾನು ಬೇಡ ಎಂದು ಖಂಡ ತುಂಡವಾಗಿ ಹೇಳಿದರೆ, ಆಕೆಗೆ ಸಹಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಏನೋ ಕಳೆದು ಹೋದ ಅನುಭವವಾಗುತ್ತದೆ. ಬದುಕಿನ ಚೈತನ್ಯವೆಲ್ಲ ವ್ಯಯವಾದಂತೆ ಮ್ಲಾನತೆ ಆವರಿಸಿಬಿಡುತ್ತದೆ. ಅದಕ್ಕೆ ನಾನು ಏನಾದರೂ ಮಾಡಿಕೊಳ್ಳಲಿ, ಚಿಂತೆ ಒಂದು ಮಾಡದಿದ್ದರೆ ಆಯಿತು ಅಂತ ಸಮಾಧಾನ ಮಾಡಿಕೊಳ್ಳುತ್ತೇನೆ.  ಚಿತ್ ಎಂದರೆ ಮನಸ್ಸು...ಅದರ ಒಳಗೆ ಶೂನ್ಯ ತುಂಬಿದರೆ ಅದು ಚಿಂತೆಯೇ ಆಗಿಬಿಡುತ್ತದೆ. ಮೊದಲೇ ನಾವು ಶೂನ್ಯದ ಪ್ರತಿಪಾದಕರು. ಅಮ್ಮ ಅಡುಗೆಕೋಣೆಯಲ್ಲಿದ್ದರೆ ಈಗೀಗ ನಾನೂ ಸೇರಿಕೊಂಡು ಬಿಡುತ್ತೇನೆ. ಅದುವೇ ನನಗೆ  ಆಕೆಯೊಂದಿಗೆ ಬೆರೆಯುವ ಏಕೈಕ ಕ್ಷೇತ್ರ . ಆ ಅವಕಾಶ ಎಂದಿಗೂ ನಾನು ಕಳೆದುಕೊಳ್ಳುವುದಿಲ್ಲ. ಆಕೆಯ ಬೇಕು ಬೇಡಗಳು, ಆಕೆಯ ನೋವು ನಲಿವುಗಳು ಎಲ್ಲವನ್ನೂ ಹತ್ತಿರದಿಂದ ಕಾಣುತ್ತೇನೆ.  ಒಂದು ಬಾರಿ ಅಮ್ಮ ಹೇಳುತ್ತಾರೆ...ನಾನು ಹೋಗಿ ಮಲಗಿದರೆ ಅಲ್ಲಿಗೆ ವಿಚಾರಿಸಿ ಕಷಾಯ ಹಿಡಿದು ತರುವುದು ನೀನು ಮಾತ್ರ. ಉಳಿದವರು ಮಾಡುವುದಿಲ್ಲ ಅಂತಲ್ಲ...ಅದಕ್ಕೆ ನಾನಿದ್ದೇನೆ ಎಂಬುದು ಉಳಿದವರ ವಿಶ್ವಾಸ.  ಮಾಡಿದರೂ ಮಾಡದೇ ಇದ್ದರೂ ಸೌಹಾರ್ದತೆ ಅತೀ ಮುಖ್ಯ. ಪ್ರೀತಿ ಇದ್ದಲ್ಲಿ ಸಮಸ್ಯೆ ಸಮಸ್ಯೆಯಾಗಿ ಉಳಿಯುವುದಿಲ್ಲ. 

ಒಂದು ದಿನ   ಮಗಳು (ತಮ್ಮನ ಮಗಳು)  ನನ್ನಲ್ಲಿ ಹೇಳಿದಳು, ಆಕೆಯನ್ನು ಆಕೆಯ ಶಾಲಾ ಸ್ನೇಹಿತೆ ರಜೆಯ ದಿನ ಹೊರಗೆ ತಿರುಗಾಡೋಣ, ಮಾಲ್ ಅಥವಾ ಇನ್ನೇಲಿಗೋ ಕರೆಯುತ್ತಾಳೆ. ಈಕೆ ಇಲ್ಲ ಎಂದು ಬಿಡುತ್ತಾಳೆ. ಮನೆಯಲ್ಲಿ ಕುಳಿತು ಬೋರ್ ಆಗಲ್ಲವೇ ಅಂತ ಆಕೆ ಕೇಳುವಾಗ ಈಕೆ ಹೇಳಿದ ಮಾತು ನನಗೆ ಬಹಳ ಆಶ್ಚರ್ಯ ತಂದಿತು. ಈಗ ಸ್ಕೂಲ್  ಇಲ್ಲ ನಮ್ಮ ಮನೆಯಲ್ಲಿ ಬೋರ್ ಎಂಬ ವಿಷಯವೇ ಇಲ್ಲ. ನೀನು ಬಂದು ನೋಡು, ನಮ್ಮ ಮನೆಯಲ್ಲಿ ಎಲ್ಲರೂ ನಮ್ಮೊಡನೆ ಬೆರೆಯುತ್ತಾರೆ. ರಜೆ ಬಂದರೆ ಅವರ ಜತೆ ಕಳೆಯುವುದೇ ಒಂದು ಸಂತೋಷ. ದೊಡ್ಡಪ್ಪನ ಜತೆ ಕುಳಿತರೆ ಸಾಕು ....ಅವರ ಕಥೆಗಳು ವಿಚಾರಗಳು ಕೇಳುತ್ತಾ ಇದ್ದರೆ ಬೋರ್ ಎನಿಸುವುದೇ ಇಲ್ಲ.  ಅದೆಷ್ಟು ಮಾತನಾಡುತ್ತಾರೆ ಎಂದರೆ ಆಶ್ಚರ್ಯವಾಗುತ್ತದೆ.  ಬೇಕಾದರೆ ನೀನೇ ಮನೆಗೆ ಬಾ. ಹೀಗೆ ಅವಳು ಹೇಳಬೇಕಿದ್ದರೆ ಮನೆ ಎಂಬುದು ಅವಳ ಮೇಲೆ ಬೀರಿರುವ ಪರಿಣಾಮವಾದರೂ ಏನು? ಹೆತ್ತವರು ಮಕ್ಕಳ ಮನಸ್ಸನ್ನು ಅರಿಯಬೇಕು. ಅವರೊಂದಿಗೆ ಬೆರೆಯಬೇಕು. ಮನೆಯಲ್ಲಿ ಹಿತವಾದ ವಾತಾವರಣ ರೂಪಿಸಬೇಕು. ಆವಾಗ ಅವರಿಗೆ ಮನೆ ಬೋರ್ ಹೊಡೆಯುವುದಿಲ್ಲ. ಪ್ರತೀ ಕ್ಷಣ ಅವರ ತಪ್ಪನ್ನು ಆಕ್ಷೇಪಿಸುತ್ತಾ ಅದನ್ನು ತಿದ್ದುವುದರಲ್ಲೇ ಗಮನ ಹರಿಸಿದರೆ ಅವರು ಮಾಡುವ ತಪ್ಪು ಯೋಚಿಸುವ ಮನೋಭಾವ ಕೂಡ ಅವರಲ್ಲಿ ಪ್ರಚೋದನೆಗೊಳ್ಳುವುದಿಲ್ಲ.  ಒಂದು ಭಾನುವಾರವು ಆಕೆ ಮನೆಯಿಂದ ಹೊರಗೆ ಹೋಗುವುದಿಲ್ಲ. ಹೋದರೆ ಮನೆಯವರ ಜತೆಗೆ. ಮನೆಯಲ್ಲಿ ಯಾರೂ ಆಕೆಗೆ ನಿಬಂಧನೆ ಹಾಕಿಲ್ಲ. ಯಾಕೆಂದರೆ ಆಕೆ ಹಾಗೆ ಹೇಳಿದಾಗಲೇ ನನಗೆ ಆಕೆಯ ಮನಸ್ಸು ಅರಿವಾದದ್ದು. ಮಕ್ಕಳಿಗೆ ತಪ್ಪು ಸರಿಯನ್ನು ನಾವು ತೋರಿಸಿಕೊಡಬೇಕು. ನಮ್ಮ ನಡೆಯಲ್ಲಿ ಅದು ವ್ಯಕ್ತವಾಗಬೇಕು. ಮಕ್ಕಳಿಂದಲೂ ನಾವು ಕಲಿಯುವಂತಹುದು ಬೇಕಾದಷ್ಟಿದೆ.  ಇದರಲ್ಲಿ ಅಪ್ಪ ಅಮ್ಮನ ವಿರಸವೂ ಸೇರಿಕೊಳ್ಳುತ್ತದೆ. ಈಗ ನಾನೂ ರಜೆಯದಿನ ಮಕ್ಕಳೊಂದಿಗೆ ಕಳೆಯುವುದಕ್ಕೆ ಇಷ್ಟ ಪಡುತ್ತೇನೆ. ವಾಸ್ತವದಲ್ಲಿ ನಾನು ಮಕ್ಕಳೊಂದಿಗೆ ಬೆರೆಯುವುದಕ್ಕೆ ಹೆಚ್ಚು ಬಯಸುತ್ತೇನೆ. ಯಾಕೆಂದರೆ ಆ ಸಮಯದ ಮೌಲ್ಯ ಅತೀ ಹೆಚ್ಚು. ಅದು ಪುನಃ ಸಿಗುವುದೇ ಇಲ್ಲ.  ಕೋವಿಡ್ ಸಮಯದಲ್ಲಿ ಲಾಕ್ ಡೌನ್ ದಿನಗಳನ್ನು ನಮ್ಮಮನೆಯಲ್ಲಿ ಮಕ್ಕಳು ಸಂಭ್ರಮದ ರೀತಿಯಲ್ಲಿ ಕಳೆದಿದ್ದಾರೆ.  ಕಾರಣ ಅವರೊಂದಿಗೆ ನಾವು ಮನೆಯಲ್ಲೇ ಬೆರೆಯುವುದಕ್ಕೆ ಅವಕಾಶ ಒದಗಿಬಂತು.  ಜೀವನ ಈ ಅನುಭವದ ಹಲವು ಪಾಠಗಳನ್ನು ಕಲಿಸಿದೆ.  ಸಾಮಾನ್ಯವಾಗಿ ನಾವು ನಮ್ಮ ಮನೆಮಂದಿಯೊಂದಿಗೆ ಅಥವಾ ಮಕ್ಕಳೊಂದಿಗೆ ಬೆರೆಯುವುದೆಂದರೆ ಹೊರಗೆ ತಿರುಗಾಡುವುದಕ್ಕೆ ಕರೆದುಕೊಂಡು ಹೋಗುವುದು. ಇದಕ್ಕಿಂತ ಮನೆಯಲ್ಲೇ ಆ ವಾತಾವರಣ ಕಲ್ಪಿಸಿದರೆ  ಅದು ಬಾಂಧವ್ಯವನ್ನು ಇನ್ನೂ ಗಟ್ಟಿಗೊಳಿಸುತ್ತದೆ. ನಮ್ಮ ಮನೆ ಎಂಬ ಅಭಿಮಾನ ಮತ್ತೂ ಜಾಗ್ರತವಾಗುತ್ತದೆ. ಮಕ್ಕಳಿಗೆ ಬೇಕಾಗಿರುವುದು ಕಟ್ಟು ನಿಟ್ಟಲ್ಲ. ಮಕ್ಕಳಿಗೆ ನಮ್ಮ ನಿಬಂಧನೆಗಳು   ಅದು ಅವರಿಗೆ ಹೇರಿಕೆಯಾಗಬಾರದು. ಯಾಕೆಂದರೆ ಪ್ರಬುದ್ದರಾಗುವಾಗ ಅವರಿಗೆ ತಪ್ಪು ಯಾವುದು ಸರಿ ಯಾವುದು ಎಂದು ತಿಳಿಯುವ ಸಾಮಾರ್ಥ್ಯ ದೊರಕಿಬಿಡುತ್ತದೆ. ಅವರ ಜತೆ ಹೆಚ್ಚು ಸಮಯ ವಿನಿಯೋಗ ಮಾಡುತ್ತಿದ್ದರೆ ನಮ್ಮ ಅನಿವಾರ್ಯತೆಯಲ್ಲಿ ಅವರಿರುತ್ತಾರೆ. ನಮ್ಮ ನಡವಳಿಕೆಯ ಸೂಕ್ಷ್ಮ ಅವರಿಗೆ ಅರ್ಥವಾಗಿಬಿಡುತ್ತದೆ. 

ಮನೆ ಎಂಬುದು ಎಲ್ಲರಿಗೂ  ಸ್ವಾತಂತ್ರ್ಯವನ್ನು ಕಲ್ಪಿಸುತ್ತದೆ. ಅದೇ ಮನೆ ಅಸಹನೀಯ ವಾತಾವರಣವನ್ನು ಸೃಷ್ಟಿ ಮಾಡಿದರೆ ಅದು ಸೆರೆಮನೆಯಾಗುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ,    ಸಹಜವಾಗಿ ಹೆಣ್ಣು ಮಕ್ಕಳು ಹೆಚ್ಚು ಹೆಚ್ಚು ಸಮಯವನ್ನು ಮನೆಯಲ್ಲೇ ಕಳೆಯುತ್ತಾರೆ.  ಮನೆಯಲ್ಲಿ ಒಬ್ಬಳು ಹೆಣ್ಣು ಮಕ್ಕಳು ಇದ್ದರೆ ಹೆತ್ತವರು ಸಹಜವಾಗಿ ಆತಂಕ ಎದುರಿಸುತ್ತಾರೆ. ಮದುವೆಯ ನಂತರ ಹೇಗೋ? ಇನ್ನೊಂದು ಮನೆಯಲ್ಲಿ ಬೆಳೆಯಬೇಕಾದವಳು. ಹೀಗೆ ಆತಂಕದ ಬಿಸಿಯನ್ನೂ ಅವಳಲ್ಲಿ ತುಂಬಿ ಬಿಡುತ್ತಾರೆ. ಹುಟ್ಟಿದ ಮನೆ ಆಕೆಗೆ ಶಾಶ್ವತ ಅಲ್ಲ ಎಂಬ ಭಾವನೆ ತುಂಬಿಸುತ್ತಾ ಆಕೆಗೆ ಪರಕೀಯ ಭಾವನೆ ಸದಾ ಇರುವಂತೆ ಮಾಡುತ್ತಾರೆ. ಹಲವು ಸಲ ಹೆಣ್ಣು ಮಕ್ಕಳು ಒಂದು ಸಲ ಮದುವೆಯಾಗಿ ಹೋದರೆ ಸಾಕು ಎಂಬಂತಹ ಮನೋಭಾವದಲ್ಲಿ ಬೆಳೆಯುತ್ತಾರೆ. ನಂತರದ ಬದುಕು ಹೇಗೆ ಇರಲಿ. ಇದು ಅತ್ಯಂತ ಅಮಾನವೀಯ ಮನೋಭಾವ.  ಕ್ಯಾನ್ಸರ್ ಬಂದು ರೋಗಿಗೆ ಇನ್ನು ಇಷ್ಟೇ ಸಮಯ ಬದುಕುತ್ತಾನೆ ಎಂದು ರೋಗಿಗೆ ಹೇಳಿದಂತೆ, ಹುಟ್ಟಿದ ಮನೆಯ ಜೀವನದ ಅಭದ್ರತೆ ಹೆಣ್ಣಿಗೆ ಕಾಡುತ್ತಾ ಇರುತ್ತದೆ. ಈ ಪರಕೀಯ ಭಾವದಲ್ಲಿ ಹಲವು ಹೆಣ್ಣು ಮಕ್ಕಳು ತಮ್ಮ ಬಾಲ್ಯವನ್ನೇ ಮರೆತುಬಿಡುವ ಸಂಭವ ಇರುತ್ತದೆ.  ಎರಡು ದಿನ ಹೆಚ್ಚು ಕಡಿಮೆ ಬದುಕುವ ಜೀವನದಲ್ಲಿ ಈ ರೀತಿಯ ಅಸಹನೆ ಮನಸ್ಸಿನಲ್ಲಿ ತುಂಬಿಕುಂಡು ನಾವು ಬದುಕುವುದಾದರೂ ಯಾಕೆ? ಜೀವನ ಎಂಬುದು ಎಲ್ಲರಿಗೂ ಒಂದೇ, ಅದು ಕಳೆದಷ್ಟೂ ಮತ್ತೆ ಸಿಗುವುದಿಲ್ಲ. 

ಮನೆಯಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಬ್ಬರ ಮೇಲೂ ಪ್ರೀತಿ ಇರಬಹುದು. ಆದರೆ ವಿಶ್ವಾಸ ಇರುವುದಿಲ್ಲ. ಮುಖ್ಯವಾಗಿ ನಾವು ಯಾಕಾಗಿ ಬದುಕುತ್ತೇವೆ. ಈ ಬದುಕಿನ ಉದ್ದೇಶ ಏನು ಎಂದು ಯೋಚಿಸಬೇಕು. ಇನ್ನೊಂದು ಮನಸ್ಸಿಗೆ ನೋವು ಕೊಡುವುದೇ? ಮನೆಯೊಳಗೆ ಸಾಮಾನ್ಯವಾಗಿ ಪರಸ್ಪರ ಒಂದು ಸ್ಪರ್ಧೆ ಇರುತ್ತದೆ. ಒಬ್ಬರು ತನಗೆ ಸರಿಯಿಲ್ಲ ಎಂಬುದನ್ನು ಮಾಡಿದಾಗ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಇವರು ಇನ್ನೊಂದನ್ನು ಮಾಡುವುದು. ಆಡಿದ ಮಾತು ಮನಸ್ಸಿನಲ್ಲಿಟ್ಟುಕೊಂಡು ಅದನ್ನು ಇನ್ನೊಂದು ಸಂದರ್ಭದಲ್ಲಿ ಚುಚ್ಚುವುದು. ಇದು ಮನಸ್ಸಿನಲ್ಲಿ ಕೊಂಕು ಎಂಬ ಭಾವವನ್ನು ಸದಾ ಜೀವಂತವಾಗಿರಿಸುತ್ತದೆ.  ಕೊಂಕು ಇದ್ದವರು ಇನ್ನೊಬ್ಬರ ತಪ್ಪನ್ನೇ ಸದಾ ಗಮನಿಸುತ್ತಾ ಇರುತ್ತಾರೆ. ಸಣ್ಣ ತಪ್ಪಾದರೂ ಅದನ್ನು ಎತ್ತಿ ತೋರಿಸುವ ಕುಹಕವಾಡುವ ಪ್ರವೃತ್ತಿ ಬೆಳೆದು ಬರುತ್ತದೆ. ಇದು ಸ್ಪರ್ಧಾತ್ಮಕವಾಗಿ ಸಂಘರ್ಷ ಅಲ್ಲಿ ಜೀವಂತವಾಗಿರುತ್ತದೆ. ನಮ್ಮದೇ ಮನೆ ನಮ್ಮದೇ ಬಳಗ, ನಮ್ಮದೆ ರಕ್ತ ಸಂಭಂಧ....ಒಂದು ರೀತಿಯಲ್ಲಿ ನಮ್ಮ ದೇಹದ ಭಾಗಗಳು ಹೇಗೆ ನಾವು ಹೇಳಿದಂತೆ ಕೇಳುವುದಿಲ್ಲವೋ ಅದೇ ರೀತಿ ನಮ್ಮೊಳಗೆ ಇರುವ ಈ  ಅಸಹನೆ. ಯಾರ ಮನಸ್ಸಿನಲ್ಲಿ ಈ ಕೊಂಕು ಎಂಬುದು ಇರುತ್ತದೋ ಅವರು ಎಂದಿಗೂ ನೆಮ್ಮದಿಯಿಂದ ಇರುವುದಿಲ್ಲ. ನೆಮ್ಮದಿ ಎಂದು ಭಾವಿಸಿಕೊಂಡು ಇದ್ದರೂ ಅದು ನೆಮ್ಮದಿಯಾಗಿರುವುದಿಲ್ಲ. ಯಾಕೆಂದರೆ ಮನಸ್ಸಿನಕೊಂಕು ಮನಸ್ಸನ್ನು ನಿರಾಳವಾಗಿರುವುದಕ್ಕೆ ಬಿಡುವುದಿಲ್ಲ. ನಾವು ಇದೇ ಕೊಂಕು ನಮ್ಮ ಮಕ್ಕಳಿಗೆ ತೋರಿಸಿದರೆ ಅವರ ಮನಸ್ಸೂ ಈ ಕಲ್ಮಷವನ್ನು ಉಂಡು ಬೆಳೆಯುತ್ತದೆ.  ಪ್ರೀತಿ ಇದ್ದರೂ ಅದು ವ್ಯಕ್ತವಾಗುವುದಕ್ಕೆ ಅವಕಾಶವೇ ಇರುವುದಿಲ್ಲ. ಮತ್ತೆ ಮೇಲೆ ಹೇಳಿದ ವೃದ್ದೆಯರ ಪಾತ್ರ ಸೃಷ್ಟಿಯಾಗುತ್ತಾ ಹೋಗುತ್ತದೆ. ನಮ್ಮವರೇ ನಮಗೆ ಪರೀಕಿಯರಾಗಿ ಜೀವಿಸುವುದೆಂದರೆ ಆ ಜೀವನದ ಉದ್ದೇಶ ಏನು ಎಂಬುದನ್ನು ಯೋಚಿಸಬೇಕಾಗುತ್ತದೆ. ನಮ್ಮಲ್ಲಿ ಪ್ರೀತಿ ಎಂಬ ಔಷಧಿ ಇದೆ. ಆದರೆ ಆ ಔಷಧಿ ತೆಗೆದುಕೊಳ್ಳುವ ವೇಳೆ ಮಾತ್ರ ಅನಿಯಮಿತವಾಗಿರುತ್ತದೆ. ಅಥವಾ ಆ ಔಷಧಿಯ ಮಹತ್ವ ತಿಳಿದಿರುವುದಿಲ್ಲ. 

ನಮ್ಮ ಬದುಕಿನ ಉದ್ದೇಶ ಸ್ಪಷ್ಟವಾಗಿ ಅರಿವಿಲ್ಲದಾಗ ಗಂಭೀರವಾದ ಸಮಸ್ಯೆ ಎದುರಾಗುತ್ತದೆ.  ಮುಖ್ಯವಾಗಿ ನಾವೇಕೆ ಬದುಕುತ್ತಿದ್ದೇವೆ ಎಂಬುದನ್ನು ಯೋಚಿಸಬೇಕು. ನಮ್ಮ ಅಸಹನೆ ಕೊಂಕು ಮುಂತಾದವುಗಳಿಗೆ ನಾವೇ ಬಲಿಪಶುಗಳಾಗಿ ನಮ್ಮ ಬದುಕನ್ನು ಬಲಿಕೊಡುತ್ತಿದ್ದೇವೆ. ಅಪ್ಪ ಅಮ್ಮ ಮಕ್ಕಳನ್ನು ಹೆರುವುದು ಮತ್ತು ಸಲಹುವುದು ವೃದ್ದಾಪ್ಯದಲ್ಲಿ ಆಸರೆಯಾದಾರು ಎಂಬ ಭಾವನೆ ಇದೆ. ಯಾವುದೇ ಅಪ್ಪ ಅಮ್ಮ ನಿಜವಾದ ಮಮತೆ ಪ್ರೀತಿಯ ಅಂತಃಕರಣವಿದ್ದರೆ ಈ ಭಾವನೆ ಬೆಳೆಯಲಾರದು. ಯಾಕೆಂದರೆ ಇವೆರಡು ಪ್ರೀತಿಯ ಮೂಲ ಸ್ವರೂಪವೇ ನಿಸ್ವಾರ್ಥ. ಹಲವು ಸಲ ಇದರ ಅರಿವಿಲ್ಲದೇ ಮಕ್ಕಳ ಮೇಲೆ ಏನೇನೋ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದುಂಟು, ಕೊನೆಗೊಮ್ಮೆ ಇದಕ್ಕೆ ಧಕ್ಕೆಯಾಗುತ್ತದೆ ಎಂದಾಗುವಾಗ ಮಾನಸಿಕ ತುಮುಲವೂ  ಅನುಭವಿಸುವುದುಂಟು. ನಮ್ಮ ಸ್ವಾರ್ಥಕ್ಕೆ ನಮ್ಮ ಮಕ್ಕಳ ಮೇಲೆ ಅತಿಯಾದ ನಿರೀಕ್ಷೆ ಇಟ್ತುಕೊಳ್ಳುವುದು ಅವರ ಮೇಲೆ ಒತ್ತಡ ಹೇರಿದಂತೆ. ಇದು ಹತಾಶೆಗೂ ಕಾರಣವಾಗುತ್ತದೆ. ನಾವು ನಮ್ಮ ಸ್ವಾಭಿಮಾನವನ್ನು ತೋರಿಸಿ ಅವರಲ್ಲಿ ಅವರ ಸ್ವಾಭಿಮಾನವನ್ನು ಜಾಗೃತಗೊಳಿಸಬೇಕು. 

ಭಗವಾನ್ ಶ್ರೀಕೃಷ್ಣನ ಕಥೆ ನಮಗೆಲ್ಲ ನಿದರ್ಶನವಾಗುತ್ತದೆ. ಹೆತ್ತ ತಾಯಿ ಒಬ್ಬಳಾದರೆ ಆತನನ್ನು ಸಾಕಿದ ತಾಯಿ ಇನ್ನೊಬ್ಬಳು. ಶ್ರೀಕೃಷ್ಣನ ಬಾಲ್ಯವನ್ನು ಆಕೆ ಅದೆಷ್ಟು ಅನುಭವಿಸುತ್ತಾಳೆ. ಅದಕ್ಕೆ ಕಾರಣ ಅವಳಿಟ್ಟಿರುವ ಪ್ರೀತಿ ಅದು ನಿಸ್ವಾರ್ಥವಾಗಿತ್ತು. ಬಾಲ ಕೃಷ್ಣನ ಬಾಲ ಲೀಲೆಯನ್ನು ಆಕೆ ಅನುಭವಿಸುವ ರೀತಿ ಅದು ಆದರ್ಶ. ಎಲ್ಲರಿಗೂ ಶ್ರೀಕೃಷ್ಣನಂತಹ ಮಗ ಹುಟ್ಟುವುದಕ್ಕೆ ಸಾಧ್ಯವಿಲ್ಲ. ಆದರೆ ದೇವಕೀ ಯಶೋದೆಯಂತಹ ವಸುದೇವ ನಂದಗೋಪರಂತಹ ಹೆತ್ತವರಾಗುವುದಕ್ಕೆ ಸಾಧ್ಯವಿದೆ. ತಾಯಿ ತಂದೆಯರ ಮಮತೆ ನಿಸ್ವಾರ್ಥವಾದಾಗ ಬದುಕಿನಲ್ಲಿ ಅಸಂತೃಪ್ತಿ ಇರುವುದಿಲ್ಲ. ಮಕ್ಕಳೊಂದಿಗಿನ ಬಾಲ್ಯವನ್ನು ಮುಕ್ತವಾಗಿ ಅನುಭವಿಸುವುದೆಂದರೆ ಅದು ಬದುಕಿನ ಸುಂದರ ಅವಧಿ. ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಕೋಟಿ ಕೊಟ್ಟರೂ ಸಿಗದ ಸುಂದರ ಅವಕಾಶ. ಅಲ್ಲಿ ಸ್ವಾರ್ಥವಿದ್ದರೆ ಮುಕ್ತವಾಗಿ ಅದನ್ನು ಅನುಭವಿಸುವುದಕ್ಕೆ ಸಾಧ್ಯವಿಲ್ಲ. ನಮ್ಮ ಭಾರ ಮಕ್ಕಳು ಹೊರಬೇಕು ಸತ್ಯ. ಆದರೆ ಆ ಭಾರ ನಾವು ಹೇರುವಂತಾಗಬಾರದು. ಪರಸ್ಪರ ಸ್ನೇಹ ವಿಶ್ವಾಸ ಇದ್ದಾಗ ಅಲ್ಲಿ ವಂಚನೆಗೆ ಅವಕಾಶವಿರುವುದಿಲ್ಲ.