Saturday, February 8, 2020

ಅಂತರ್ಜಾಲದ ಬಾಂದಳದಲ್ಲಿ....





ಮೊನ್ನೆ ಯಾವುದೋ ಆವಶ್ಯಕತೆಯಿಂದ ನವಗ್ರಹ ಮಂತ್ರಗಳಲ್ಲಿ ಒಂದಾದ  ’ರಾಹು ಮಂತ್ರ’ ದ ಬಗ್ಗೆ ತಿಳಿಯುವ ಆಸಕ್ತಿಯಿಂದ ಗೂಗಲ್ ನಲ್ಲಿ ತಡಕಾಡಿದೆ. ಬಹಳ ಆಶ್ಚರ್ಯವಾಯಿತು. ಆಶ್ಚರ್ಯ ತಂದದ್ದು ಮಂತ್ರದ ಬಗೆಗಿನ ವಿಚಾರಗಳಿಗಲ್ಲ, ಬದಲಾಗಿ  ಬೆರಳ ತುದಿಯ ಸ್ಪಂದನೆಗೆ , ಅಂತರ್ಜಾಲ ಜಗತ್ತು ಪ್ರತಿಕ್ರಿಯಿಸಿದ ರೀತಿ ಆಶ್ಚರ್ಯ ತಂದಿತ್ತು. ರಾಹು ಮಂತ್ರ ವೆಂಬ   ಸಾಮಾನ್ಯ ಎನ್ನಬಹುದಾದ ವಿಚಾರ ಎಂದು ನಾನು ತಡಕಾಡಿದರೆ ರಾಹು ಬ್ರಹ್ಮಾಂಡವೇ ಎದುರಿಗೆ ಬಂದು ನಿಂತಿತ್ತು. ಮಂತ್ರದ ಆರಂಭದ ’ಕಯಾನ’  ಎಂಬ ಶಬ್ದವೊಂದರ ಪ್ರತಿಫಲನ ಅದೆಷ್ಟು ಕಡೆಗಳಲ್ಲಿ ಆಯಿತೆಂದರೆ ಅದನ್ನು ನೋಡುವುದೇ ವಿಚಿತ್ರವೆನಿಸಿತ್ತು. ಮಂತ್ರ ಶಕ್ತಿ ಹೀಗೂ ಇದೆ. ಇದು ಕೇವಲ ಒಂದು ವಿಚಾರಕ್ಕೆ ಸಂಬಂಧಿಸಿದ್ದಲ್ಲ. ಯಾವುದೋ ಒಂದು ವಿಷಯಕ್ಕೆ ಸಂಬಂಧಿಸಿ ತಡಕಾಡಿದರೆ ನಾವು ಯಾವ ಜಾತಿಯೋ ಧರ್ಮವೋ  ಯಾವ ವಿಚಾರವೇ ಆಗಲಿ ನಮ್ಮ ಆಸಕ್ತಿಗೆ ಅನುಸಾರವಾಗಿ ಅಂತರ್ಜಾಲ ತೆರೆದುಕೊಳ್ಳುತ್ತದೆ. 

            ಗಾಳಿನೀರು ಬೆಂಕಿ ಇತ್ಯಾದಿ ಪಂಚಭೂತಗಳಿಗೆ ಹೇಗೆ ಯಾವ ಧರ್ಮ ಭೇದವಿಲ್ಲವೋ ಹಾಗೆ ಅಂತರ್ಜಾಲವೂ ಆಂತರ್ಯದಲ್ಲಿ ಪ್ರತಿ ಲೋಕವನ್ನು ಸೃಷ್ಟಿಸಿ ತಣ್ಣಗೇ ಕುಳಿತಿತ್ತು. ಈ ಲೋಕದ ಕರ್ತ್ರು ವಿಶ್ವಾಮಿತ್ರ ಯಾರಾಗಿರಬಹುದು? ಬೇರೆ ಯಾರು ಆಲ್ಲ ನಮ್ಮ ನಿಮ್ಮ ಹಾಗಿದ್ದ ಲೇಖಕ ಮಹಾಶಯನೆ.  ನಾನು ನನ್ನ ಆಸಕ್ತಿಯನ್ನು ಮಂತ್ರದ ಮುಖದಲ್ಲಿ ಕಂಡರೆ ಇನ್ನಾರೊ ಇನ್ನಾವುದನ್ನೋ ಇದೇ ಅಂತರ್ಜಾಲದಲ್ಲಿ ತಡಕಾಡುತ್ತಾರೆ. ಅವರವರ ಭಾವಕ್ಕೆ ಅವರವರ ಮುಖಕ್ಕೆ ತಕ್ಕಂತೆ ವರ್ತಿಸುವ ಈ ಅಂತರ್ಜಾಲ ಬ್ರಹಾಂಡ ಸೋಜಿಗದ ಜಗತ್ತು. ಬ್ಲಾಗುಗಳು, ಫೇಸ್ ಬುಕ್, ಟ್ವಿಟರ್ ಹೀಗೆ ಇನ್ನೆಷ್ಟೋ ನನ್ನರಿವಿಗೆ ಇರದ ಪರಿಧಿ ಮೀರಿದ ಅಂತರ್ಜಾಲದ ಸೃಷ್ಟಿ ಹೇಗಾಯಿತು. ? ರಾಹು ಮಂತ್ರದ ಕುರಿತಾಗಿ ಕೇವಲ ನನ್ನ ಕಣ್ಣಿಗೆ ಒಂದು ನೂರು ಬ್ಲಾಗು ಗಳು ಲೇಖನ ಗಳು ವಿವಿಧ ಭಾಷೆಯಲ್ಲಿ ಕಣ್ಣಿಗೆ ಬಿತ್ತು. ಇದನ್ನೆಲ್ಲ ಯಾಕಾಗಿ ಯಾರಿಗಾಗಿ ಬರೆದರು? ಆಶ್ಚರ್ಯವಾಗುತ್ತದೆ. ಬ್ಲಾಗ್ ಎಂಬ ಪ್ರಪಂಚವಾಗಲಿ ಫೇಸ್ ಬುಕ್ ಪೋಸ್ಟುಗಳಾಗಲೀ ಮನುಷ್ಯ ಕಂಡುಕೊಂಡ ಅದ್ಬುತ ನಿರಾಳ ಪ್ರಪಂಚ. 

            ಒಂದೆರಡು ವರ್ಷದ ಹಿಂದೆ ನಡೆದ ಸಂಭವ. ಹಲವು ಸಲ ಸುಮ್ಮನೇ ಕುಳಿತಿದ್ದ ನಾವು ಏನನ್ನೊ ಸುಮ್ಮನೆ ಎಳೆದು ಹಾಕಿಕೊಳ್ಳುತ್ತೇವೆ.  ಯಾವುದೋ ಕರೆ ಬಂತು ಅಂತ ಮೊಬೈಲ್ ಕೈಗೆ ತೆಗೆದು ಕೊಂಡವನು ಕರೆ ಮುಗಿಸಿ ಮೊಬೈಲ್ ಇಡುವ ಮೊದಲು ಫೇಸ್ ಬುಕ್ ವಾಟ್ಸಾಪ್ ತಡಕಾಡುವುದು ಈಗ ಸಹಜವೇ ಆಗಿದೆ. ಹಾಗೇ ಮೊಬೈಲ್ ಕೆಳಗಿರಿಸುವುದಕ್ಕೆ ಮನಸ್ಸೆ ಬರುವುದಿಲ್ಲ. ಹಾಗೇ ಫೇಸ್ ಬುಕ್ ತೆರೆದು ನೋಡಿದವನಿಗೆ ಮಿತ್ರನೊಬ್ಬನ ಬರಹ ಕಣ್ಣಿಗೆ ಬಿತ್ತು. ಮಿತ್ರ ಮಾತ್ರವಲ್ಲ ಆತ ಸಂಬಂಧಿಯೂ ಹೌದು.   ಅದಾಗಲೇ ಫೇಸ್ ಬುಕ್ ಲೋಕವನ್ನು ಕಂಡು ತಾನು ಅದರಲ್ಲಿ ಸೇರಿಕೊಂಡಿದ್ದ. ಆ ಲೋಕದ ಸಂಪೂರ್ಣ ಪರಿಜ್ಞಾನ ಅರಿವು ಆತನಿಗಿಲ್ಲ. ಸರಿ , ಆತನ ವಿಚಾರಕ್ಕೆ ಸ್ಪಂದಿಸಿ ಸುಮ್ಮನೇ ನನ್ನ ಅಭಿಪ್ರಾಯವನ್ನು ಲಗತ್ತಿಸಿದೆ.  ನಿಜವಾಗಿ ನಾನು ಒಂದಷ್ಟು ವ್ಯತಿರಿಕ್ತವಾಗಿಯೇ ಹೇಳಿದ್ದೆ. ನನಗೂ ಅಷ್ಟೇ  ನನ್ನ ಮನಸ್ಸಿ ಗೆ ವಿಹಿತವಾದ ನಾನು ಒಪ್ಪಿಕೊಳ್ಳದ ವಿಷಯಗಳನ್ನು ಸುಮ್ಮನೇ ಒಪ್ಪಿಕೊಳ್ಳುವುದಕ್ಕೆ ಮನಸ್ಸಿಲ್ಲ. ಒಂದು ವಿಚಾರ ಮುಂದೆ ಬಂದಾಗ ಯಾರೂ ನೋಡದ ದೃಷ್ಟಿಕೋನದಿಂದ ಅದನ್ನು ವಿಶ್ಲೇಷಿಸುವ ಅಭ್ಯಾಸ. ಬಹಳಷ್ಟು ಜನರಿಗೆ ಇದು ಇದೆ. ಸರಿಯೋ ತಪ್ಪೋ ಅದಿರಲಿ. ಅವನ ವಿಚಾರದ ಖಂಡನೆ ನೋಡಿ ಮಿತ್ರ ಕೆಂಡಾಮಂಡಲನಾದ. ಛೇ ಮಿತ್ರನಾಗಿ ಹೀಗೆ ಮಾಡುವುದೇ ಅಂತ ಖಾಸಗಿಯಾಗಿ ನನಗೆ ಸಂದೇಶ ಕಳುಹಿಸಿದ್ದೂ ಅಲ್ಲದೇ ತನ್ನ ಫೇಸ್ ಬುಕ್ ಖಾತೆಯನ್ನೇ ಇಲ್ಲವಾಗಿಸಿ ಸುಮ್ಮನೆ ಕುಳಿತ. ಆನಂತರ ಆತ ಎದುರಿಗೆ ಸಿಕ್ಕರೂ ಮಾತನಾಡುವುದನ್ನೂ ಬಿಟ್ಟು ಬಿಟ್ಟ. ಸ್ನೇಹ ಸೇತುವಾಗಬೇಕಿದ್ದ ಫೇಸ್ ಬುಕ್ ಬಂಧ ವಿಮುಕ್ತನನ್ನಾಗಿಸಿದ್ದು ವಿಪರ್ಯಾಸ.

            ಇಂತಹ ಘಟನೆಗಳು ಈಗ ಸಾಮಾನ್ಯವೆಂಬಂತೆ ಘಟಿಸುತ್ತವೆ. ತೆರೆದ ಮನಸ್ಸಿ ನಿಂದ ಮಾಡಬೇಕಾದ ಸಂವಾದಗಳು ತೀರ ವೈಯಕ್ತಿಕ  ಪರಿಣಾಮದವರೆಗೂ ಹೋಗುತ್ತದೆ. ಇದೆಲ್ಲ ಮೂರ್ಖತನ ಅಂತ ಅನ್ನಿಸುತ್ತದೆ. ಒಂದು ವೇಳೆ ಮಿತ್ರತ್ವ ತೊರೆದವರು ಫೇಸ್ ಬುಕ್ ನ್ನು ಬಹಿಷ್ಕರಿಸಿ ದೂರ ಕುಳಿತರೆ ಯಾರಿಗೂ ನಷ್ಟವಿಲ್ಲ. ಅಂತರ್ಜಾಲ ಲೋಕದ ಇತಿಮಿತಿಯನ್ನು ತಿಳಿಯದೆ ಹೀಗೆ ವರ್ತಿಸುತ್ತಾರೆ. ನಮಗೆ ವಿಹಿತವಲ್ಲದೇ ಇದ್ದುದನ್ನು. ನಾವು ನೋಡಿಲ್ಲ ಅಂತ ಸುಮ್ಮನಿದ್ದರಾಯಿತು. ಅಥವಾ ನಾವು ನೋಡಬಾರದವುಗಳು ಯಾವುದು? ನಾವು ಅಲಕ್ಷಿಸಬೇಕಾದವುಗಳು ಯಾವುದು? ಇವಿಷ್ಟರ ಅರಿವು ಇದ್ದರೆ ಸಾಕು. ಇಲ್ಲಿಯ ವ್ಯವಹಾರಗಳೇ ಹಾಗೆ, ಒಬ್ಬ ಕೇಳಿದ ಪ್ರಶ್ನೆಗಳಿಗೆ ಮನಸ್ಸಿದ್ದರೆ ಆವಶ್ಯಕತೆ ಇದ್ದರೆ ಉತ್ತರಿಸಿದರಾಯಿತು. ಇಲ್ಲವಾದರೆ ಸುಮ್ಮನಿದ್ದು ಬಿಟ್ಟರಾಯಿತು.
           
           
            ಮನೆಯಲ್ಲಿ ರಾತ್ರಿ ಹಾಸಿಗೆ ಮೇಲೆ ಬೆಚ್ಚಗೆ ಹೊದ್ದು ಮಲಗಿದರೂ ನಿದ್ದೆ ಬರುದಿಲ್ಲ ಅಂತ ಹೇಳಿದವರು, ರಾತ್ರಿ ಯಕ್ಷಗಾನಕ್ಕೆ ಹೋಗಿ ಅಲ್ಲಿ ಪ್ಲಾಸ್ಟಿಕ್  ಕುರ್ಚಿಯಲ್ಲಿ  ಸ್ವಯ ಇಲ್ಲದೇ ನಿದ್ದೆ ಮಾಡುವುದನ್ನು ಕಾಣಬಹುದು. ಮನೆಯ ಶಾಂತ ನಿಶ್ಯಬ್ದತೆಯಲ್ಲಿ ಬಾರದ ನಿದ್ದೆ ಹಲವು ಸಲ ಯಕ್ಷಗಾನದ ಚೆಂಡೆ ಮದ್ದಲೆ ಧ್ವನಿಗೂ ಹೆದರದೆ ಬಂದುಬಿಡುತ್ತದೆ. ಈ ಅಂತರ್ಜಾಲದ ಒಳಗಿನ ಸಂಚಾರವೂ ಹಾಗೆ. ಬೇಕಾದರೆ ಅದನ್ನು ಅಂಟಿಸಿಕೊಳ್ಳಬಹುದು. ಇಲ್ಲವಾದರೆ ಯಕ್ಷಗಾನದ ಗದ್ದಲದ ನಡುವಿನ ನಿದ್ದೆಯಂತೆ ಹಾಯಾಗಿ ಇರಬಹುದು.  ಯಕ್ಷಗಾನ ನಿದ್ದೆ ಬರಿಸುವ ಸಾಧನ ಅಲ್ಲ. ಕೆಲವು ಸಲ ನಿದ್ದೆ ಬರುತ್ತದೆ. ಇರಲಿ ಬಿಡಿ.    ಮಿತ್ರನಿಗೆ ಕೇವಲ ನನ್ನನ್ನು ಮಿತ್ರರ ಪಟ್ಟಿಯಿಂದ ತೆಗೆದರೆ ಸಾಕಿತ್ತು.  ಫೇಸ್ ಬುಕ್ ಮುಂತಾದ ಮಾಧ್ಯಮಗಳನ್ನು  ಅನುಮಾನದ ದೃಷ್ಟಿಯಿಂದಲೇ ಕಾಣುವಾಗ ಇಂತಹ ವರ್ತನೆ ಸಹಜವಾದದ್ದೆ. ಇಲ್ಲಿ ಗದ್ದಲದಲ್ಲೂ ಗಡದ್ದಾಗಿ ನಿದ್ದೆ ಮಾಡುವ ಅಭ್ಯಾಸ ಇರಬೇಕಾಗುತ್ತದೆ. ಹಾಗಾದರೆ ಅಂತರ್ಜಾಲವನ್ನು ಹೊಕ್ಕು ಯಾವುದೇ ತೊಂದರೆ ಇಲ್ಲದೇ ವಿಹರಿಸಬಹುದು.

ಅಂತರ್ಜಾಲದ ಬ್ಲಾಗ್ ಪ್ರಪಂಚವನ್ನು ಸುತ್ತುವುದಕ್ಕೆ ಪ್ರಯತ್ನ ಪಡಬೇಕು. ಇಲ್ಲಿ ಬರೆವ ಲೇಖನಗಳು ಚಿತ್ರಗಳು ಯಾವುದೇ ಚಟುವಟಿಕೆಗಳು ಹಲವು ಸಲ ಮೆಚ್ಚಿಗಾಗಿ ಪ್ರತಿಕ್ರಿಯೆಗಾಗಿ ಕಾದು ಕುಳಿತುಕೊಳ್ಳುವುದಿಲ್ಲ. ಒಂದು ಲೇಖನ ಬರೆದು ಅದನ್ನು ಪ್ರಕಟಿಸಿ, ಮರುಘಳಿಗೆಯಲ್ಲೇ ಮತ್ತೊಂದು ಬರೆದು ಪ್ರಕಟಿಸುವುದನ್ನೂ ಕಾಣಬಹುದು. ಇದರ ವಾಚಕರು ಅಥವಾ ಓದುಗರು ಯಾರು? ಹಲವು ಬ್ಲಾಗುಗಳನ್ನು ಕಾಣುವಾಗ ಇದನ್ನು ಯಾರದರೂ  ಓದುವವರು ಇರಬಹುದೇ? ಅನುಮಾನ ಹುಟ್ಟುತ್ತದೆ. ಆದರೂ ಬರೆಯುವವರು ಬರೆಯುತ್ತಾರೆ. ಬ್ಲಾಗ್ ಪ್ರಪಂಚ ಮತ್ತಷ್ಟು ತುಂಬಿಕೊಂಡು ವೈವಿಧ್ಯಮಯವಾಗುತ್ತದೆ. ಓದುವ ನಿರೀಕ್ಷೆಯಲ್ಲಂತು ಎಲ್ಲವೂ ಬರೆದಿರುವುದಿಲ್ಲ. ಕೇವಲ ಹೇಳಬೇಕು ಬರೆಯಬೇಕು ಎಂಬ ವಾಂಛೆಯೊಂದೇ ಇರುತ್ತದೆ.  ಮನೆಯ ಉಪ್ಪರಿಗೆಯ ಮೂಲೆಯಲ್ಲಿಟ್ಟ ಯಾವುದೋ ವಸ್ತುವಿನಂತೆ. ಬೇಕಾದರೆ ಎಂದಾದರೂ ಉಪಯೋಗಿಸಿದರಾಯಿತು. ಹೀಗಿದ್ದರೂ ಇಂದು ಫೇಸ್ ಬುಕ್ ಆಗಲಿ ಅಥವಾ ಇನ್ನಿತರ ಅಂತರ್ಜಾಲ ಮಾಧ್ಯಮಗಳಾಗಲಿ ಅದನ್ನು ಉಪಯೋಗಿಸುವಲ್ಲಿ ನಾವು ಸರ್ವ ತಂತ್ರ ಸ್ವತಂತ್ರರು.  ಸ್ವಾಸ್ಥ್ಯ ಕೆಡದಂತೆ ಏನೂ ಮಾಡಬಹುದು.

ನನಗೆ ಈ ಅಂತರ್ಜಾಲ ಮಾಧ್ಯಗಳನ್ನು ಉಪಯೋಗಿಸುವಲ್ಲಿ ದಶಕಗಳಿಗೂ ಮಿಕ್ಕಿದ ಅನುಭವ ಇದೆ. ಅಂದು ಲೇಖನಗಳು ಪ್ರತಿಕ್ರಿಯೆಗಳು ಬರೆವಾಗ ಇನ್ನೊಬ್ವರು ಕಾಣಲಿ ಪ್ರತಿಕ್ರಿಯೆ ನೀಡಲಿ ಎಂಬ ನಿರೀಕ್ಷೆ ಇತ್ತು. ಹಲವು ಸಲ ಮೆಚ್ಚಿಸುವುದಕ್ಕಾಗಿಯೇ ಲೇಖನಗಳನ್ನು ಬರೆದಿದ್ದೆ. ಆದರೆ ಬರುತ್ತಾ ಬರುತ್ತಾ  ಇಲ್ಲಿ ಯಾವುದೇ ನಿರೀಕ್ಷೆ ಪ್ರತೀಕ್ಷೆ ಇಲ್ಲದೇ ವ್ಯವಹರಿಸಿದ್ದಲ್ಲಿ ಇದನ್ನು ಉಪಯೋಗಿಸುವಲ್ಲಿ ನೆಮ್ಮದಿಯನ್ನು ಅಹ್ಲಾದತೆಯನ್ನು ಅನುಭವಿಸಬಹುದು ಎಂದು ಅಂತರ್ಜಾಲವೇ ನನಗೆ ತೋರಿಸಿಕೊಟ್ಟಿತ್ತು,  ವಿಶಾಲವಾದ ಕೊಳದ ಒಂದು ಮೂಲೆಯಲ್ಲಿ ಮುಳುಗಿ ಈಜಿ ಸ್ನಾನ ಮಾಡುವುದಷ್ಟೇ ನಮ್ಮ ಕೆಲಸ.  ಆನಂತರ ಇನ್ನೊಬ್ಬರ ಪ್ರತಿಕ್ರಿಯೆಗಳು ಮೆಚ್ಚಿಕೆಗಳು ಬರ್ತ್ಸನೆಯ ಮಾತುಗಳು ಎಲ್ಲವೂ ನನ್ನ ಮುಖದಲ್ಲಿ ಕಿರುನಗೆಯನ್ನು ತರಿಸುತ್ತಿತ್ತು. ಪ್ರಚೋದನೆಗಳಿನಿದ್ದರೂ ಅವು ಕ್ಷಣಿಕ. ಬ್ಲಾಗ್ ಎಂಬುದು ಎಷ್ಟು ಕ್ಷುಲ್ಲಕವೋ ಹಲವು ಸಲ ಅಷ್ಟೇ ಪರಿಣಾಮಕಾರಿ ಸಾಧನ. ಹಲವು ಬ್ಲಾಗುಗಳಿವೆ ಅದು ಯಾರೊಬ್ಬರು ಓದುವ ಉದ್ದೇಶದಿಂದ ಬರೆಯಲ್ಪಟ್ಟಿದೆ ಎಂದನಿಸುವುದಿಲ್ಲ. ಪುಂಖಾನುಪುಂಖವಾಗಿ ಪುಟಗಳು ತೆರೆದುಕೊಳ್ಳುತ್ತವೆ. ದಿನಕ್ಕೊಂದು ಘಳಿಗೆಗೊಂದು ವಿಚಾರಗಳು ಪುಟಗಟ್ಟಲೆ ಇರುತ್ತವೆ. ಆದರೆ ಯಾಕಾಗಿ ಬರೆಯುತ್ತಾರೆ? ಅದೊಂದು ಅತ್ಯುತ್ತಮ ಹವ್ಯಾಸ. ಬ್ಲಾಗ್ ಎಂದರೆ ಅದು ವಿಶ್ವ ಶಬ್ದ ಕೋಶದಂತೆ. ಮಹಾ ನಿಘಂಟುವಿನಂತೆ, ಅದನ್ನು ಪೂರ್ಣವಾಗಿ ಯಾರೂ ಓದಿರುವುದಿಲ್ಲ.  ಇದು ಅತ್ಯುತ್ತಮ ಮಿತ್ರ. ಅತ್ಯುತ್ತಮ ಬಂಧು. ಸಮಸ್ಯೆಗಳು ಬಂದಾಗ ಹಿರಿಯಜ್ಜನಂತೆ ಪರಿಹಾರ ಕೊಡಬಹುದು. ಯಾವುದನ್ನು ಹೇಗೆ ಮಾಡಬೇಕು ಎಂದು ಅರಿಯದೇ ಹೋದಾಗ ಅಮೂಲ್ಯ ಸಲಹೆಗಳು ಇಲ್ಲಿ ಸಿಗುತ್ತವೆ. ಒಂದು ಸಲ ನನ್ನ ಕಂಪ್ಯೂಟರ್ ಕೆಟ್ಟಾಗ ಇಲ್ಲಿ ನೋಡಿಯೇ ದುರಸ್ತಿಗೊಳಿಸಿದ್ದೇನೆ. ಹಾಗಾಗಿ ಯಾಕಾಗಿ ಬರೆಯುತ್ತಾರೆ ಎಂಬುದನ್ನು ಯೋಚಿಸುವುದನ್ನು ಬಿಟ್ಟು ಶುದ್ದ ಅವಲೋಕನವನ್ನು ಮಾಡುತ್ತಾ ಅನುಭವಿಸಿಬಿಡಬೇಕು.

ಅಂತರ್ಜಾಲ ಪ್ರಪಂಚ ನನ್ನೊಳಗಿನ ಲೇಖಕ ಪ್ರಜ್ಞೆಗೆ ಸಾರ್ಥಕತೆಯನ್ನು ತಂದಿದೆ.  ನನ್ನ ವ್ಯಾಕರಣ ದೋಷ ಅಕ್ಷರ ದೋಷಗಳನ್ನು ಯಾವ ಅಸಮಾಧಾನವು ಇಲ್ಲದೇ ಸ್ವೀಕರಿಸಿದೆ. ಯಾರೂ ಓದುವ ಇಚ್ಚೇ ಇಲ್ಲ ಎಂದ ಮೇಲೆ ಅದನ್ನು  ಬರೆಯುವ ಕೆಲಸಕ್ಕೆ ಅರ್ಥವಿದೆಯೇ?  ಓದಬೇಕು ಎಂಬ ಹಂಬಲ ಸರಿ. ಓದಬೇಕು ಎಂದಿದ್ದರೆ ಓದುವಂತೆ ಬರೆಯುವ ಜವಾಬ್ದಾರಿಯೂ ನಮ್ಮಲ್ಲಿರುತ್ತದೆ. ಆದರೆ ಇದಾವುದೂ ಇಲ್ಲದೇ ಇಲ್ಲಿ ಬರೆದರೆ ಅತ್ಯಂತ ನಿರಾಳತೆಯನ್ನು ಇಲ್ಲಿ ಅನುಭವಿಸಬಹುದು. ಹಲವು ಸಲ ನಮಗೆ ಮಾತಲ್ಲಿ ಹೇಳುವುದಕ್ಕೆ ಸಾಧ್ಯವಿರುವುದಿಲ್ಲ. ಮಾತಲ್ಲಿ ಹೇಳುವುದಕ್ಕೆ ನೆನಪೂ ಆಗುವುದಿಲ್ಲ. ಅಥವಾ ನಾವು ಮಾತನಾಡುತ್ತಾ ಇದ್ದರೆ,  ಉಳಿದವರಿಗೆ ಅದು ಹರಟೆಯಾಗಿ ಶಬ್ದ ಮಾಲಿನ್ಯವನ್ನೂ ತರಬಹುದು. ಮಾತು ನಮಗೆ ಪ್ರಿಯವಾದಷ್ಟು ಪರರಿಗೆ ಅಪ್ರಿಯವಾಗಿಬಿಡುತ್ತದೆ.  ಹಾಗಾಗಿ ಮಾತು ಹೊರಡದೇ ಭಾವನೆಗಳು ವ್ಯಕ್ತವಾಗಬೇಕು. ಅದು ನಮ್ಮಲ್ಲೇ ನಾಶವಾಗಬಾರದು ಎಂಬ ತುಡಿತ ನಮ್ಮಲ್ಲಿರುತ್ತದೆ. ಆಗ ಈ ಅಂತರ್ಜಾಲ ತಾಣವೇ ನಮ್ಮ ಮಿತ್ರನಂತೆ ಸಹಚರನಂತೆ ವರ್ತಿಸುತ್ತದೆ. ಹಾಗಾಗಿ ನಾನು ಇಲ್ಲಿ ನಿರ್ಭಿಡೆಯಿಂದ ನನಗೆ ತೋಚಿದಂತೆ ಬರೆಯುತ್ತೇನೆ. ಮಾನಸಿಕ ಸ್ವಾಸ್ಥ್ಯ ಸಾಮಾಜಿಕ ಸ್ವಾಸ್ಥ್ಯ ಕೆಡದಂತೆ ಕಾಳಜಿಯಂತೂ ಇದ್ದೇ ಇದೆ. ಹಾಗಾಗಿ ನಾನೊಬ್ಬ ಅಂತರ್ಜಾಲದ ಅಂತರಂಗ ಲೇಖಕ ಅಂತ ಹೇಳಬಲ್ಲೆ.  ಅಂತರ್ಜಾಲದ ಬಾಂದಳದಲ್ಲಿ....ನಾನೂ ಒಂದು ಚುಕ್ಕೆ.

ಹಲವು ಸಲ ನಾನು ಗೀಚಿದ ಬ್ಲಾಗ್ ಲೇಖನಗಳನ್ನು ನೋಡಿ ಹಲವರು ಪತ್ರಿಕೆಗಳಿಗೆ ಕಳಿಸುವುದಕ್ಕೆ ಸಲಹೆ ಕೊಟ್ಟಿದ್ದರು.  ಪತ್ರಿಕೆಯಲ್ಲವೇ? ಅದರಲ್ಲಿ ಉತ್ತಮ ಲೇಖನಗಳೂ ಬರುತ್ತವೆ, ಕಳಪೆ ಲೇಖನಗಳೂ ಬರುತ್ತವೆ. ಹಾಗಾಗಿ ಪತ್ರಿಕೆ ಎಂಬುದು ಮಾನ್ಯತೆ ಎಂಬುದೇನಲ್ಲ. ನಮ್ಮ ಭಾವನೆಗಳಿಗೆ ಷರಾ ಬರೆಯುತ್ತವೆ. ಪತ್ರಿಕೆಯಲ್ಲಿ ಪ್ರಕಟಗೊಳ್ಳಬೇಕು, ಎಲ್ಲರಿಗೂ ತಿಳಿಯಬೇಕು ಎಂದು ಭಾವನೆಗಳು ಹುಟ್ಟಿಕೊಳ್ಳುವುದಿಲ್ಲ.  ಪತ್ರಿಕೆಯಲ್ಲಿ ಪ್ರಕಟವಾಗಬೇಕೆಂಬ ನಿರೀಕ್ಷೆ ನನ್ನಲ್ಲಿ ಇಲ್ಲ.  ನನ್ನ ಲೇಖನಗಳಿಗೆ ನಾನಂತು ಆ ಆರ್ಹತೆಯನ್ನು ಕಲ್ಪಿಸಿಲ್ಲ. ಅರ್ಹತೆ ಇದ್ದರೂ ಅದಕ್ಕಿಂತಲೂ ವಿಸ್ತಾರವಾದ ಪ್ರಪಂಚ ಈ ಅಂತರ್ಜಾಲ ಮಾಧ್ಯಮ.  ಅಲ್ಲಿ ಪತ್ರಿಕೆ ದುಡ್ದು ಕೊಟ್ಟು ಕೊಂಡುಕೊಳ್ಳುತ್ತಾರೆ. ಕೊನೇ ಪಕ್ಷ ಆ ದುಡ್ಡಿನಷ್ಟು ಋಣ ಅಲ್ಲಿರುತ್ತದೆ. ಹಾಗಾಗಿ ಲೇಖನ ಕೇವಲ ಪತ್ರಿಕೆಯನ್ನು ಅಲಂಕರಿಸಿದರಷ್ಟೇ ಸಾಲದು. ಆ ಋಣದ ಭಾರವನ್ನೂ ಹೊರಬೇಕಾಗುತ್ತದೆ. ಇಲ್ಲಿ ಬೇಕಾದರೆ ಓದಬಹುದು, ಇಲ್ಲವಾದರೆ ಕೈಬೆರಳಿಗೆ ಒಂದಷ್ಟು ಕೆಲಸ. ಬರೆದವನಿಗೆ ಯಾವ ಋಣಭಾರವೂ ಇರುವುದಿಲ್ಲ. ಋಣ ಮುಕ್ತನಾಗಿ ಯಾರ ಹಂಗಿಲ್ಲದೇ ಇಲ್ಲಿ ಬರೆದು ಪ್ರಕಟಿಸಬಹುದು. ಹಾಗಾಗಿ ಪತ್ರಿಕೆಗೆ ಯಾಕಾಗಿ ಕಳುಹಿಸಬೇಕು. ಒಂದೋ ನಮ್ಮೊಳಗೆ ಹೆಸರು ಮಾಡಿಕೊಳ್ಳುವ ಚಪಲ ಇರಬೇಕು. ಇದು ಇಲ್ಲದ ಪ್ರಾಮಾಣಿಕರೂ ಇದ್ದಾರೆ.  ಎಲ್ಲರಿಂದ ಹೊಗಳಿಸಿಕೊಳ್ಳುವ ಅದಮ್ಯ ಚಟ ಇರಬೇಕು. ಎಲ್ಲರೂ ಅದಕ್ಕಾಗಿ ಬರೆಯುತ್ತಾರೆ ಎಂದಲ್ಲ. ಆದರೆ ಈ ಹಂಬಲಗಳು ಅಲ್ಲಿ ಪರಿಹರಿಸಲ್ಪಡುತ್ತವೆ. ಎಲ್ಲೋ ಒಂದು ಕಡೆಯ  ವಿಚಾರಗಳನ್ನು ನಕಲು ಮಾಡಿ ಇಲ್ಲಿ ನನ್ನದು ಅಂತ ತೋರಿಸುವ ಮಹಾನ್ ಲೇಖಕರನ್ನು ನೋಡಿದ್ದೇನೆ.  ವಿಚಾರಗಳು ಸ್ವಂತವಾಗಬೇಕಿಲ್ಲ. ಆದರೆ ಓದುಗ ಬುದ್ಧಿವಂತನಿದ್ದಾನೆ ಎಂಬ ಪ್ರಜ್ಞೆಯಾದರೂ ಇರಬೇಕು. ಯಾಕೆಂದರೆ ಇಲ್ಲಿ ಅಂತರ್ಜಾಲದಲ್ಲಿ ಮಾಹಿತಿಗಳು ಸುಲಭವಾಗಿ ಕ್ಷಣದಲ್ಲಿ ಸಿಕ್ಕಿಬಿಡುತ್ತವೆ.  ಹಣ ಖರ್ಚುಮಾಡಿ ಹೆಸರು ಮಾಡಬೇಕೆಂಬ ಹಂಬಲ ಎಲ್ಲವನ್ನೂ ಮುಚ್ಚಿಬಿಡುತ್ತವೆ. 

ಅಂತರ್ಜಾಲದಲ್ಲಿ ನಿರಾಳವಾಗಿ ಸಂಚರಿಸುವುದಕ್ಕೆ ತಿಳಿದರೆ ಇಲ್ಲಿ ಹೊರಗಿಗಿಂತ ನಿರಾಳವಾಗಿರಬಹುದು.