Friday, November 25, 2022

ಕಾಂತಾರಕ್ಕೂ ಭೂತ ಬಾಧೆ

 



"ಲಜ್ಜಾವತಿಯೇ ನಿಂದೆ ಕಳ್ಳಕಡಕಣ್ಣಿಲ್....."  ಕೆಲವು ವರ್ಷಗಳ ಹಿಂದೆ ಮಲಯಾಳಿಗರಲ್ಲಿ ಸಂಚಲನ ಮೂಡಿಸಿದ ಹಾಡು. ಪಾರ್ ದ ಪೀಪಲ್ ಎಂಬ ಸಿನಿಮಾದ ಈ ಹಾಡು ಬಹಳ ಜನಪ್ರಿಯವಾಗಿತ್ತು. ಯುವಜನಾಂಗ ಹುಚ್ಚೆದ್ದು ಕುಣಿದಿತ್ತು.   ಅದು ಕೇವಲ ಮಲಯಾಳಕ್ಕೆ ಸೀಮಿತವಾಗಿತ್ತು. ಆದರೆ ಕನ್ನಡದಲ್ಲಿ ಗಣೇಶ್ ನಾಯಕನಾದ ಒಂದು ಸಿನಿಮಾದಲ್ಲೂ ಅದನ್ನು ಯಥಾವತ್ ಆಗಿ ಬಳಸಿಕೊಳ್ಳಲಾಯಿತು. ಹೀಗೆ ಚರ್ಚೆ ಮಾಡುವಾಗ ಒಬ್ಬರಲ್ಲಿ ಹೇಳಿದೆ ಇದು ಲಜ್ಜಾವತಿಯೆ ಎಂಬ ಮಲಯಾಳಂ ಸಿನಿಮಾದ ಹಾಡು ಯಥಾವತ್ ನಕಲು ಮಾಡಿದ್ದಾರೆ. ಆತ ಒಪ್ಪಿಕೊಳ್ಳಲೇ ಇಲ್ಲ. ಆತ ಹೇಳಿದ ಯಾಕೆ ಕನ್ನಡದಿಂದ ಅವರು ನಕಲು ಮಾಡಿರಬಾರದು? ಆಗ ಅದರ ನಿರ್ಮಾಣದ ಬಿಡುಗಡೆಯ ದಿನಾಂಕವನ್ನು ದಾಖಲೆ ಸಹಿತ ಆತನ ಮುಂದಿಟ್ಟೆ.  ಆದರೆ ಇಲ್ಲಿ ಯಾರೂ ಅದರ ಬಗ್ಗೆ ಯೋಚಿಸಲಿಲ್ಲ. ಅದು ಹಕ್ಕು ಪಡೆದು ಉಪಯೋಗಿಸಿದರೂ ಮೂಲ ಸಿನಿಮಾದ ಉಲ್ಲೇಖ ಎಲ್ಲೂ ಇಲ್ಲದೆ ಅಮಾಯಕ  ಕನ್ನಡ ಪ್ರೇಕ್ಷಕ ಮಾತ್ರ ಅದು ಇಲ್ಲಿನದೇ ಕೃತಿ ಎಂದುಕೊಂಡ.  ರವಿಚಂದ್ರನ್ ನಟನೆಯ ರಣಧೀರ ಸಿನಿಮಾದಲ್ಲಿ ಒಂದಾನೊಂದು ಕಾಲದಲ್ಲಿ ಎಂಬ ಕೊಳಲಿನ ನಾದವಿತ್ತು. ಅದು ಕನ್ನಡದ್ದೇ ಟ್ಯೂನ್ ಅಂತ ತಿಳಿದಿದ್ದೆವು. ಸಂಪೂರ್ಣ ಹಕ್ಕು ಪಡೆದು ಚಿತ್ರ ನಿರ್ಮಿಸಿದ್ದರೂ ಕನ್ನಡದ ಬಹು ಪಾಲು ಪ್ರೇಕ್ಷಕರಿಗೆ ಇದು ಮೂಲದಲ್ಲಿ ಹಿಂದಿಯಲ್ಲಿ ಇತ್ತು ಎಂದು ತಿಳಿದಿರಲಿಲ್ಲ. ಆದರೆ ಹೀರೋ ಸಿನಿಮಾದ ಹಾಡು ಕೇಳಿದ ನಂತರ ಕನ್ನಡದಲ್ಲಿ ಅದು ಪುನರ್ ನಿರ್ಮಿಸಲಾಗಿದೆ ಎಂದು ತಿಳಿದು ಬಂತು. ಮೂಲ ಹಿಂದಿ ಸಿನಿಮಾಕ್ಕಿಂತಲೂ ಇದರಲ್ಲಿ ಉತ್ತಮವಾಗಿ ಬಳಸಲಾಗಿತ್ತು.  ಖಂಡಿತವಾಗಿ  ಇದು ಕೃತಿ ಚೌರ್ಯ ಅಲ್ಲದೇ ಇರಬಹುದು. ಆದರೂ ಪ್ರೇಕ್ಷಕನ ಕ್ಷಣದ ತಿಳುವಳಿಕೆ ಹೇಗಿರುತ್ತದೆ ಎಂಬುದಕ್ಕೆ ಇದು ನಿದರ್ಶನ.  ಸಿನಿಮಾದ ಜಾಹಿರಾತಿನಲ್ಲಿ ಎಲ್ಲೂ ಇದು ಇಂತಹ ಸಿನಿಮಾದ ಅವತರಣಿಕೆ ಎಂದು ಎಲ್ಲೂ ಉಲ್ಲೇಖಿಸುವುದಿಲ್ಲ. 


ಇದು ಕೇವಲ ಒಂದು ನಿದರ್ಶನ ಅಷ್ಟೇ. ಇಂತಹುದು ಬೇಕಾದಷ್ಟು ಸಿಗುತ್ತದೆ. ಹಲವು ಸಲ  ಮೂಲ ಕರ್ತೃವಿಗೆ ಸಿಗಬೇಕಾದ ಗೌರವ ಸಿಗುವುದೇ ಇಲ್ಲ.  ಕೆಲವರು ಇದು ಇದರ ಪ್ರೇರಣೆ ಅಂತ ಮೊದಲಾಗಿ ಹೇಳಿ ಗೌರವಿಸುತ್ತಾರೆ.  ಗೌರವ ಎಂದರೆ ಕೇವಲ ಹಕ್ಕುಗಳನ್ನು ಪಡೆಯುವುದಕ್ಕೆ ಸೀಮಿತವಾಗಿರುವುದಿಲ್ಲ. ಅದನ್ನು ಯಾವ ರೀತಿ ತೋರಿಸಿಕೊಡುತ್ತೇವೆ ಎನ್ನುವುದರಲ್ಲೂ ಇದೆ.  ಒಂದು ಕಡೆಯಲ್ಲಿ ಭಕ್ತಿ ಗೀತೆಯಾಗಿ ಉಪಯೋಗಿಸಿದ ಹಾಡನ್ನು, ಇನ್ನೊಂದು ಕಡೆಯಲ್ಲಿ ಹಕ್ಕು ಸ್ವಾಮ್ಯ ಪಡೆದು ಕ್ಯಾಬರೆಗೆ ಬಳಸಿಕೊಂಡರೆ ಹೇಗೆ?  ಏನಿದ್ದರೂ ಮೂಲದಲ್ಲಿ ಕೃತಿಯನ್ನು ಸೃಷ್ಟಿಸಿದವನ ಪ್ರತಿಭೆಗೆ ಹೆಚ್ಚು ಮೌಲ್ಯ. ಸ್ವಂತವಾಗಿ ಪ್ರತಿಭೆ ಇಲ್ಲದೇ ಇರುವಾಗ ಯಾವುದೋ ಕಾರಣಕ್ಕೆ ಮತ್ತೊಬ್ಬನ ಪ್ರತಿಭೆಯನ್ನು ಎರವಲು ಪಡೆದು ಇನ್ನೂ ಮುಂದಕ್ಕೆ ಹೋಗಿ ಕಳ್ಳತನ ಮಾಡಿ ತಮ್ಮದೇ ಪ್ರತಿಭೆ ಎಂದು ಮೀಸೆ ಮೇಲೆ ಕೈ ಹಾಕುವವರಿಗೆ ಏನೂ ಕಡಿಮೆ ಇಲ್ಲ.  ಹಲವು ಸಲ ಹಕ್ಕುಗಳನ್ನು ಪಡೆದರೂ ಹಕ್ಕುಗಳ ಉಲ್ಲಂಘನೆಯು ಆಗಿರುತ್ತದೆ. 


ಕಾಂತಾರ ಇದೀಗೆ ಅಂತರ್ಜಾಲದಲ್ಲಿ ಬಿಡುಗಡೆಯಾಗಿದೆ. ಮತ್ತೊಮ್ಮೆ ಮನೆಯವರೆಲ್ಲರೂ ಕಂಡಾಯಿತು. ಮೊದಲು ಕಂಡಿರುವುದರಿಂದ ಅದರ ಪ್ರಭಾವವೇ ಅಧಿಕವಾಗಿರುವುದರಿಂದ ವಿಶೇಷವೇನೂ ಅನಿಸಲಿಲ್ಲ. ಮತ್ತೊಮ್ಮೆ ಮರುಕಳೆಯಾಯಿತು ಅಷ್ಟೆ. ಕೊನೆಯಲ್ಲಿ ಅತೀ ಪ್ರಮುಖವೆನಿಸಿದ ಹಾಡು ಬದಲಾವಣೆಯಾಗಿರುವುದು ಎಲ್ಲರಿಗೂ ಒಂದು ಅಸಮಾಧಾನವಾಯಿತು. ಆದರೂ ಮತ್ತೆ ಜೋಡಿಸಿದ ಹಾಡು ಕಳಪೆ ಏನಲ್ಲ. ಮೊದಲ ಹಾಡಿನ ನೆಶೆ ಇದಕ್ಕಿಂತಲೂ ಗಾಢವಾಗಿರುವುದರಿಂದ ಇದರ ಪ್ರಭಾವ ಬಹಳಷ್ಟು ಕಡಿಮೆಯಾಯಿತು. ಇದೆಲ್ಲ ಮನರಂಜನೆಯ ಒಂದು ಭಾಗ. ಆದರೂ ಇಲ್ಲಿ ಗಮನಿಸಬೇಕಾದ ಅಂಶಗಳು ಹಲವು. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಇನ್ನೂ ಜೀವಂತವಾಗಿ ಮತ್ತು ಬಲಿಷ್ಠವಾಗಿದೆ.  ಹೀಗಿದ್ದರೂ ಕಾಂತಾರ ಮಾಡುವಷ್ಟು ಪ್ರಭಾವ ಸಮ್ಮೋಹನ ಅದಾಗಲೇ ಮಾಡಿಯಾಗಿರುವುದರಿಂದ ಈಗಿನ ಪ್ರೇಕ್ಷಕ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. 


ನಕಲಿ ಕೃತಿಚೌರ್ಯ ಹಲವು ಸಲ ವಂಚನೆ ಎಂದನಿಸುವುದೇ ಇಲ್ಲ. ಕದ್ದ ವಸ್ತುವಿನಲ್ಲಿ ಆರ್ಥಿಕವಾಗಿಯೋ ಅಥವ ಬೇರೆ ಯಾವುದೇ ರೂಪದಲ್ಲಿ ಲಾಭವಾದಾಗ ಅದು ಚೌರ್ಯದ ಸಾಲಿಗೆ ಸೇರಿಬಿಡುತ್ತದೆ. ಚೌರ್ಯ ಗಂಭೀರವಾಗುವುದು ಆವಾಗಲೇ. ದಾರಿಯಲ್ಲಿ ಸುಮ್ಮನೇ ಬಿದ್ದಿರುವ ವಸ್ತುವನ್ನು ತಿಳಿಯದೇ ತೆಗೆದುಕೊಂಡು ಹೋದರು, ತೆಗೆದುಕೊಂಡವರು ಅದರಲ್ಲಿ ಎಷ್ಟು ಲಾಭ ಗಳಿಸುತ್ತಾರೆ ಅದರ ಮೇಲೆಯೆ ವಂಚನೆಯ ಪ್ರಮಾಣ ಅಳಿಯುವುದು ಮಾತ್ರ ವಿಚಿತ್ರ ಅನಿಸುತ್ತದೆ. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ. ನಮ್ಮದಲ್ಲದ ವಸ್ತುವನ್ನು ಯಾರೇ ಕೈವಶ ಮಾಡಿಕೊಂಡರೂ ಒಂದೋ ಅದು ಅತಿಕ್ರಮಣವಾಗುತ್ತದೆ. ಇಲ್ಲ ಕಳ್ಳತನವಾಗುತ್ತದೆ. ನಮ್ಮ ಮನೋಭಾವಕ್ಕೆ ಹೊಂದಿಕೊಂಡು ಅದು ಗಂಭೀರತೆಯನ್ನು ಪಡೆಯುತ್ತದೆ.  ಇಲ್ಲವಾದರೇ ಎಲ್ಲೋ ಒಂದು ಯಾವುದೋ ಕಾಲದಲ್ಲಿ ಬಿಡುಗಡೆಯಾದ ಆಲ್ಬಂ ನ ಹಾಡಿನ ನೆರಳು ಈ ರೀತಿಯಾಗಿ ವಿವಾದ ಸೃಷ್ಟಿ ಮಾಡುತ್ತದೆ ಎಂದು ಯಾರುಬಲ್ಲರು. ಚೌರ್ಯ ಹೌದೋ ಅಲ್ಲವೋ ಅದು ನ್ಯಾಯಾಲಯಲದಲ್ಲಿ ಕಾನೂನಾತ್ಮಕವಾಗಿ ನಿರ್ಣಯವಾದರೂ ಈ ಚೌರ್ಯ ವೆಂಬುದು ಅಂತರಾತ್ಮದ ನಿರ್ಧಾರದ ಮೇಲೆಯೇ ನಿಂತಿರುತ್ತದೆ. ಅದನ್ನು ಇದರ ಸಂಗೀತ ನಿರ್ದೇಶಕ ಪ್ರಾಮಾಣಿಕವಾಗಿ ಸ್ಪಷ್ಟ ಪಡಿಸಬೇಕು. ಒಂದಿಷ್ಟಾದರೂ ಮೂಲ ಹಾಡಿನಿಂದ ಪ್ರಭಾವಿತನಾಗಿದ್ದರೆ ಅದು ಖಂಡಿತ ಕೃತಿ ಚೌರ್ಯವಾಗುತ್ತದೆ. ನ್ಯಾಯಾಲಯ ಏನೇ ಹೇಳಲಿ, ಏನೇ ನಿರ್ಣಯವಾಗಲಿ ಆತ್ಮ ವಂಚನೆ ಎಂಬುದು ಪ್ರಾಮಾಣಿಕತೆಯನ್ನು ನಿರ್ಣಯಿಸುತ್ತದೆ.  ಪ್ರಾಮಾಣಿಕತೆ ಇದ್ದರೆ ಒಂದು ಸಣ್ಣ ವಿಷಯಕ್ಕೂ ಮನ್ನಣೆ ಕೊಡುವ ಮನೋಭಾವ ಇರುತ್ತದೆ. ಅದರಲ್ಲಿ ಇರುವ ನಿರಾಳತೆ ಅದನ್ನು ಅನುಭವಿಸುವವರಿಗಷ್ಟೇ ತಿಳಿದಿರುತ್ತದೆ. 


ಕೃತಿ ಚೌರ್ಯದ ಬಗ್ಗೆ ಕೇಳುವಾಗ ಹಾಸ್ಯಾಸ್ಪದವೆನಿಸುತ್ತದೆ. ಆದರೆ ಎಲ್ಲಾ ಕಳ್ಳತನಕ್ಕಿಂತಲೂ ಇದು ಅತ್ಯಂತ ಗಂಭೀರ. ಒಬ್ಬನ ಪ್ರತಿಭೆಯನ್ನು ಉಪಯೋಗಿಸಬಹುದು, ಆದರೆ ಆ ಪ್ರತಿಭೆಗೆ ಗೌರವ ಕೊಡದೇ ಇರುವಾಗ ಅದು ವಂಚನೆಯಾಗುತ್ತದೆ. ಆದರೆ ಸಿನಿಮಾರಂಗ ಅದರಲ್ಲು ಇತ್ತೀಚಿಗಿನ ಕನ್ನಡ ಚಿತ್ರರಂಗ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದನಿಸುವುದೇ ಇಲ್ಲ.  ಹಲವು ಸಲ ಅತ್ಯಂತ ಹೆಚ್ಚು ಸುದ್ದಿ ಮಾಡಿದ ಸಿನಿಮಾ ನೋಡುವ ಮನಸ್ಸಾಗುತ್ತದೆ. ಮಾಧ್ಯಮಗಳಲ್ಲಿ ಅದರ ಬಗ್ಗೆ ಕೇಳುವಾಗ ಕುತೂಹಲದಿಂದ ನೋಡುತ್ತಿದ್ದಂತೆ  ಇದು ಎಲ್ಲೋ ನೋಡಿದ್ದೇನಲ್ಲ ಎಂದು ತಲೆಕೆರೆದುಕೊಳ್ಳುವಂತಾಗುತ್ತದೆ. ಮತ್ತೆ ತಿಳಿಯುತ್ತದೇ ಓಹ್ ಇದು ಅದೇ ಸಿನಿಮ, ಮೊದಲು ಯಾವುದೋ ಭಾಷೆಯಲ್ಲಿ ಬಂದ ಸಿನಿಮಾ ರೀ ಮೆಕ್ ಆಗಿ ಪುನಃ ಬಂದಿರುತ್ತದೆ. ಇಷ್ಟಾದರು ಮಾಧ್ಯಮದ ಯಾವುದೇ ಜಾಹಿರಾತಿನಲ್ಲೂ ಮೂಲ ಸಿನಿಮಾದ ಉಲ್ಲೇಖವೇ ಇರುವುದಿಲ್ಲ ! ಕಾನೂನು ಪ್ರಕಾರ ಹಕ್ಕುಗಳನ್ನು ಪಡೇದಿದ್ದರೂ ಸಹ ಅದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳದೇ ನಮ್ಮದೇ ಬೆನ್ನನ್ನು ನಾವು ತಟ್ಟಿಕೊಳ್ಳುವ ಮನೋಭಾವ ಕಾಣಬಹುದು. 


ಕೆಲವು ವರ್ಷಗಳ ಹಿಂದೆ ಯಕ್ಷಗಾನ ವಲಯದಲ್ಲೂ ಇದೇ ರೀತಿ ಕೃತಿಯ ಹಕ್ಕು ಸ್ವಾಮ್ಯದ ಬಗ್ಗೆ ಒಂದು ವಿವಾದ ಉಂಟಾಗಿತ್ತು. ಆ ವಿವಾದ ಬಗೆಹರಿಯಲ್ಪಟ್ಟರೂ, ಕೃತಿ ಸ್ವಾಮ್ಯದ ಬಗ್ಗೆ ಯಕ್ಷಗಾನದಲ್ಲಿ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಯಾರೋ ಪ್ರಸಂಗ ಬರೆಯುತ್ತಾರೆ. ಅದು ಎಲ್ಲೋ ಆಡಲ್ಪಡುತ್ತದೆ. ಹಲವು ಸಲ ಒಂದು ಪ್ರಸಂಗದ ಕೆಲವು ಪದಗಳನ್ನು ಭಾಗವತರ, ಕಲಾವಿದರ ಮರ್ಜಿಗೆ ಅನುಸಾರವಾಗಿ ಆಯ್ಕೆ ಮಾಡಿ ಹೊಸ ತಳಿಯನ್ನು ಕಸಿ ಮಾಡುವಂತೆ ಪ್ರಸಂಗ ಸೃಷ್ಟಿಯಾಗುತ್ತದೆ. ಇಲ್ಲೆಲ್ಲ ಮೂಲ ಕೃತಿಯವನ ಪರಿಶ್ರಮಕ್ಕೆ ಯಾವ ಮೌಲ್ಯವೂ ಇರುವುದಿಲ್ಲ. ಇನ್ನು ಈಗಿನ ಅಂತರ್ಜಾಲ ಮಾಧ್ಯಮದಲ್ಲಿ ಬೇಕಾಬಿಟ್ಟಿ ಎಂಬಂತೆ ಯಕ್ಷಗಾನ ವೀಡಿಯೋ ಆಡಿಯೋಗಳನ್ನು ಪ್ರಸಾರ ಮಾಡಲಾಗುತ್ತದೆ. ಹಲವು ಹಳೆಯ ಧ್ವನಿಮುದ್ರಣಗಳನ್ನು ಅದರ ನಿರ್ಮಾತೃಗಳ ಶ್ರಮಕ್ಕೆ ಬೆಲೆಯೇ ಇಲ್ಲದಂತೆ ಪ್ರಸಾರ ಮಾಡುತ್ತಾರೆ. ಹಲವಾರು ಹಳೆಯ ಧ್ವನಿ ಸುರುಳಿಗಳನ್ನು ಕಷ್ಟದಿಂದ ಸಂಗ್ರಹಿಸಿ ದುರಸ್ತಿಗೊಳಿಸಿ ಅದನ್ನು ಅದನ್ನು ಪರಿವರ್ತಿಸಿದ ನನಗೆ ಮೊದಲಿಗೆ ಕೃತಿಯ ಹಕ್ಕು ಸ್ವಾಮ್ಯದ ಬಗ್ಗೆ ಅಷ್ಟಾಗಿ ಅರಿವಿರಲಿಲ್ಲ. ನಾನೇ ಖುದ್ದಾಗಿ ಹಂಚಿದ ಧ್ವನಿಮುದ್ರಣಗಳು ಪುನಃ ನನ್ನ ಬಳಿಗೆ ಯಾರದೋ ಹೆಸರಿನಲ್ಲಿ ಬಂದಾಗ ಸಹಜವಾಗಿ ನನಗೆ ನೋವಾಗಿತ್ತು. ಆಗಲೇ ಇದರ ಮೂಲ ನಿರ್ಮಾಣದವರಿಗೆ ಹೇಗಾಗಬೇಡ ಎಂದು ಅರಿವಾಗಿತ್ತು. ಈ ಪ್ರಚಲಿತಲ್ಲಿ ಪ್ರಚಾರದಲ್ಲಿರಲು ಹೆಸರಿನ ಹಿಂದೆ ಹೋಗುವಾಗ ಮೂಲ ಕೃತಿ ಸ್ವಾಮ್ಯಕ್ಕೆ ಯಾರೂ ಗೌರವಿಸುವುದಿಲ್ಲ. ಇಲ್ಲಿ ಕೃತಿಚೌರ್ಯವೇ ಒಂದು ರೀತಿಯಲ್ಲಿ ಸಹಜ ಪ್ರಕ್ರಿಯೆಯಾಗಿದೆ. ಯಕ್ಷಗಾನದಲ್ಲಿ ಪ್ರತಿ ಸನ್ನಿವೇಶಗಳಿಗೂ ಪ್ರಸಂಗ ಕರ್ತ ಪದಗಳನ್ನು ರಚಿಸಿರುತ್ತಾನೆ. ಹಾಗಿದ್ದರೂ ದೇವೆಂದ್ರ ಒಡ್ಡೋಲಗಕ್ಕೆ ಅನಾದಿಕಾಲದಿಂದಲೂ ಅದೇ ಪದ ಬಳಕೆಯಾಗುವುದು ನಿಜಕ್ಕೂ ಪ್ರಸಂಗ ಕರ್ತನ ಶ್ರಮಕ್ಕೆ ನಾಗರೀಕತನದ ಗೌರವ ಒದಗಿಸುವುದರಲ್ಲಿ ಎಡವಿದೆ ಎಂದು ಹೇಳಬಹುದು. 


ಕೃತಿ ಚೌರ್ಯ,  ಇದು ಕಳ್ಳತನ ಎಂದು,  ಕದಿಯುವವನೇ ಮೊದಲು ನಿರ್ಣಯಿಸುತ್ತಾನೆ. ಆತನಿಗೆ ಅದು ತಿಳಿದಿರುತ್ತದೆ.  ಆದರೆ ಪ್ರಾಮಾಣಿಕತೆ ಇದ್ದರೆ ಇದು ಸೌಹಾರ್ದವಾಗಿ ಪರಿಹರಿಸಲ್ಪಡುತ್ತದೆ. ಹೆತ್ತವರು ಮಗುವಿಗೆ  ಜನ್ಮ ಕೊಡುತ್ತಾರೆ, ಆದರೆ ಆನಂತರ ಗುರುವಾದವನ್ನು  ಆ ಮಗುವಿಗೆ ವಿದ್ಯೆ ಕಲಿಸಿ ಒಂದು ಸಂಸ್ಕಾರವನ್ನು ಒದಗಿಸಿ ಅದನ್ನು ಉತ್ತಮವಾಗಿ ರೂಪಿಸುತ್ತಾನೆ.  ಮಗುವಿನ ಕರ್ತ್ರು  ಇಬ್ಬರೂ ಆಗಿರುತ್ತಾರೆ. ಇಲ್ಲಿ ಇದು ನನ್ನ ಮಗು ಅಂತ ಹೆತ್ತವರು ಅಭಿಮಾನ ಪಟ್ಟುಕೊಂಡರೆ ಕಲಿಸಿದ ಗುರು ತನ್ನ ಶಿಷ್ಯ ಎಂದು ಅಭಿಮಾನ ಗಳಿಸುತ್ತಾನೆ.  ಮುಖ್ಯವಾಗಿ ಒಂದು ಮಗು ಹುಟ್ಟಿದ ನಂತರ ಹೇಗೆ ಮತ್ತೆ ರೂಪವನ್ನು ಪಡೆಯುತ್ತದೆ ಎಂಬುದೇ ಮುಖ್ಯವಾಗುತ್ತದೆ. ಮಗು ಎಷ್ಟೇ ಸುಂದರವಾಗಿದ್ದರೂ ಆ ಮಗುವನ್ನು ನಂತರ ಹೇಗೆ ಉಪಯೋಗಿಸಿಕೊಳ್ಳುವುದು ಅತ್ಯಂತ ಮುಖ್ಯವಾಗುತ್ತದೆ.  ಇಲ್ಲಿ ತನ್ನದು ಎಂಬುದು ಸೌಹಾರ್ದಯುತವಾಗಿರುತ್ತದೆ. ಯಾವುದೇ ವಸ್ತುವಾದರು ನಿರ್ಮಿಸಿದ ನಂತರ ಅದು ಹೇಗೆ ಉಪಯೋಗಿಸಲ್ಪಡುತ್ತದೇ ಎಂಬುದೂ ಮುಖ್ಯ.  ಒಬ್ಬನಲ್ಲಿದ್ದ ಮರವನ್ನು ಕದ್ದು ತಂದು ಕೆತ್ತಿ ಸುಂದರ ಶಿಲ್ಪವನಾಗಿಸಿ ದೇವರ ಗುಡಿಯಲ್ಲಿಟ್ಟು ಪೂಜಿಸಿದರೆ, ಆ ಮರದ ಮಾಲೀಕ ಒಂದು ಸಮಾಧಾನ ಪಟ್ಟುಕೊಳ್ಳ ಬಹುದು, ಕದ್ದರೂ ನನ್ನ ವಸ್ತು ಉತ್ತಮ ಕಾರ್ಯಕ್ಕೆ ಬಳಕೆಯಾಯಿತಲ್ಲ? ಯಾರದೋ ತೋಟದ ಹೂವನ್ನು ತಂದು ದೇವರ ಪೂಜೆಗೆ ಬಳಸಿದರೆ  ತೋಟದವನು ಸಂತಸ ಪಡಬಹುದು, ತನ್ನ ತೋಟದ ಹೂವಿನ ಬಗ್ಗೆ ಸದ್ಬಳಕೆಯ ಬಗ್ಗೆ  ಅಭಿಮಾನ ಪಟ್ಟುಕೊಳ್ಳಬಹುದು.  ಅದಕ್ಕೆ ಸೌಹಾರ್ದಯುತ ಮನಸ್ಸು ಬೇಕು. ತಾನು ಹೆತ್ತ ಮಗು ಯಾರದೋ ಆಸರೆ ಉತ್ತಮ ಭವಿಷ್ಯ ರೂಪಿಸಿಕೊಂಡರೆ ಕಿಂಚಿತ್ತಾದರು ಸಂತಸವಾಗುವುದಿಲ್ಲವೇ?  ಈ ನಿಟ್ಟಿನಲ್ಲಿ ನೋಡಿದರೆ ಕಾಂತಾರದಲ್ಲಿ ಮೊದಲು ಸೇರಿಸಿದ ಹಾಡು ಚೌರ್ಯವಾದರು ಅದು ಚೌರ್ಯವಾಗುವುದಿಲ್ಲ. ಯಾಕೆಂದರೆ ಆ ಹಾಡಿಗೆ ಆ ಸಂಗೀತಕ್ಕೆ ಅದ್ಭುತವಾದ ಗೌರವವನ್ನು ಅಲ್ಲಿ ಒದಗಿಸಲಾಗಿದೆ. ಸೌಹಾರ್ದಯುತವಾಗಿ ಕಾಣುವುದಿದ್ದರೆ ಅದರ ಕೃತಿಯನ್ನು ರಚಿಸಿದವನೂ ಸಂತೋಷ ಪಟ್ಟುಕೊಳ್ಳಬಹುದಿತ್ತು. ತನ್ನ ಹಾಡು ಯಾವುದೋ ಕ್ಯಾಬರೆಗೆ ಬಳಕೆಯಾಗಿಲ್ಲವಲ್ಲಾ ಎಂದು. ಎಷ್ಟೇ ಉತ್ತಮ ಕೆಲಸವಾದರು ಕೃತಿ ಚೌರ್ಯ ಅದು ಕಳ್ಳನವೇ....ಅದಕ್ಕೆ ಬೇರೆ ಹೆಸರು ಇಲ್ಲ. ಆದರೂ ಒಂದು ಸೌಹಾರ್ದತೆಯ ಸದ್ಭಾವನೆ ಇದ್ದರೆ....ಕೊನೇ ಪಕ್ಷ ಈ ಸಂಗೀತಗಾರ ಮೂಲ ಸಂಗೀತದವನಿಗೆ ಒಂದಕ್ಷರದ ಸ್ಮರಣೆಯನ್ನಾದರೂ ಸೌಹಾರ್ದದಿಂದ ಪ್ರಾಮಾಣಿಕತೆಯಿಂದ ಸಲ್ಲಿಸಿದ್ದರೆ.....ಇಂದಿನ ಕಾಂತಾರ ಮಿಶ್ರತಳಿಯಾಗಿ ಹೊಸ ಅಲಂಕಾರ ಪಡೆಯುವ ಸ್ಥಿತಿಗೆ ಬರುತ್ತಿರಲಿಲ್ಲ. ಕೃತಿ ಚೌರ್ಯ ಎಂಬ ಭೂತ ಕಾಂತಾರದಲ್ಲೂ  ಬಾಧೆಯಾಗಿ ಕಾಡುತ್ತದೆ.  ಕಲಾವಿದ ಕಲಾವಿದನನ್ನುಮೊದಲು ಗೌರವಿಸಬೇಕು. ಆದರೂ ಒಂದು,  ಮುಂದಿನ ಶುಭ ನಿರೀಕ್ಷೆಯಲ್ಲಿ ನಾವಿರಬೇಕು.  ಕಾಂತಾರ ಮೂಲ ಹಾಡಿನೊಂದಿಗೆ ಪುನಃ ಬರಲಿ ಮತ್ತು ಅದೇ ರೀತಿ ಯಾವುದೇ ವೈಕಲ್ಯ ವಿಲ್ಲದೆ ನಮ್ಮ ನಡುವೆ ಇರಲಿ ಎಂಬ ಆಶಯ. 


Friday, November 11, 2022

ದಶಮಗ್ರಹದ ಭ್ರಮಣ ಪಥ

             ಮೊನ್ನೆ ದೀಪಾವಳಿಯ ಮುನ್ನಾದಿನ ನಡು ಮಧ್ಯಾಹ್ನ ಕೊಪ್ಪದಲ್ಲಿರುವ ನನ್ನ ಮಾವನ ಮನೆಯ (ಹೆಂಡತಿಯ ತವರು ಮನೆಯ)  ಮೆಟ್ಟಿಲು ತುಳಿವಾಗ ಒಂದು ವೈಶಿಷ್ಟ್ಯತೆ ಇತ್ತು.  ಎಂದಿನಂತೆ ಅತ್ತೆ ನಗು ಮುಖದಿಂದಲೇ ಓಹೋ....ಹೋ ಅಂತ ಎದಿರುಗೊಂಡು ಸ್ವಾಗತಿಸಿದರು. ವೈಶಿಷ್ಟ್ಯತೆ  ಎಂದರೆ, 1990ನೇ ಇಸವಿಯಲ್ಲಿ  ನನ್ನ ಮದುವೆಯಾಗಿತ್ತು. ಅದೇ ವರ್ಷ ದೀಪಾವಳಿಗೆ ಹೊಸ ಅಳಿಯನಾಗಿ ಹೊಸ ಹಬ್ಬಕ್ಕೆ ಇದೇ ಮೆಟ್ಟಲು ಹತ್ತಿದ್ದೆ. ಅದರ ನಂತರ ಸರಿ ಸುಮಾರು ಮೂವತ್ತೆರಡು ವರ್ಷಗಳ ನಂತರ ನಾನು ದೀಪಾವಳಿಗೆ ಮಾವನ ಮನೆಗೆ ಹೋಗುತ್ತಿರುವುದು ಈ ಬಾರಿಯ ವಿಶೇಷ !  ಅತ್ತೆ ಭಾವಂದಿರು, ಮತ್ತವರ ಪತ್ನಿಯರು ಹೀಗೆ ಅವರ ಸಂಭ್ರಮ ಸಡಗರ ಕಣ್ಣು ತುಂಬಿತು.  ಎಂತಹ ಬಡತನವಿರಲಿ ಸಿರಿವಂತಿಗೆ ಇರಲಿ ಸಂಭ್ರಮ ಎಂಬುದು ಸಮಾನವಾಗಿರುತ್ತದೆ. ಆ ಮನೆಗೆ ಒಬ್ಬಳೇ ಮಗಳು, ಹಾಗಾಗಿ ನಾನು ಒಬ್ಬನೇ ಅಳಿಯ ಜಾಮಾತಾ ದಶಮಗ್ರಹ ಎನ್ನುವಂತೆ. .  ಆ ಮನೆಯ    ಹತ್ತನೆಯ ಗ್ರಹ, ಅತ್ಯಂತ ಪ್ರಭಾವೀ ಗ್ರಹ ನಾನಾಗಿದ್ದೆ. ಒಬ್ಬಳೇ ಒಬ್ಬಳು ಮಗಳ ಕೈಹಿಡಿದ ಅಳಿಯ ಎಂದ ಮೇಲೆ ಕೇಳಬೇಕೆ?  ಅಳಿಯ ಎಂದಿಗೂ ಹೊರಗುಳಿಯ. 

           ಅಪ್ಪ ಅಮ್ಮ ಮಕ್ಕಳು ಒಡಹುಟ್ಟಿದವರನ್ನು ನಾವು ಕೇಳಿ ಪಡೆಯುವುದಿಲ್ಲ. ಅದು ಜನ್ಮದಿಂದ ಜತೆಯಾಗುತ್ತದೆ. ಆದರೆ ಪತಿ ಪತ್ನಿ  ಬಂಧು ಮಿತ್ರರರ ಆಯ್ಕೆ ನಮ್ಮಲ್ಲೇ ಇರುತ್ತದೆ. ಉತ್ತಮ ಮಿತ್ರರನ್ನು  ಹಾಗೆ ಉತ್ತಮ ಜೀವನ ಸಂಗಾತಿಯನ್ನು ಪಡೆಯುವ ಆಕಾಂಕ್ಷೆ ಎಲ್ಲರಲ್ಲೂ ಇರುತ್ತದೆ. ಆದರೆ ಇದು ಹಾರ್ದಿಕವಾಗಿ ಪರಿಪೂರ್ಣವಾಗಿ ಈಡೇರುವುದು ಸುಕೃತ ಫಲದಿಂದ ಮಾತ್ರ. ಕೆಲವೊಮ್ಮೆ ಎಲ್ಲವೂ ಇದ್ದರೂ ಏನೋ ಒಂದು ಇಲ್ಲದ ಕೊರತೆ ಬಾಧಿಸುತ್ತದೆ. ಹಲವು ಸಲ ಸನ್ಮನಸ್ಸು  ಸದ್ಭಾವನೆಗಳು ಎಲ್ಲ ಇದ್ದರೂ ಏನೋ ಒಂದು ವಿಷಯ ಹೊಂದಾಣಿಕೆಗಳಿಗೆ  ಪರೀಕ್ಷೆಯನ್ನೇ ತಂದೊಡ್ಡುತ್ತದೆ. ನಾವು ಪೇಟೆಯಿಂದ ಕೊಂಡು ತರುವ ಸಾಮಾಗ್ರಿಯಂತೆ ಈ ಬಂಧು ಬಳಗ. ಎಷ್ಟೇ  ಆಯ್ದು ಹುಡುಕಿ ಪರೀಕ್ಷೆ ಮಾಡಿ ತರಕಾರಿ ತಂದರೂ ಮನೆಗೆ ತಂದನಂತರ ಅದರಲ್ಲಿ ಹುಳು, ಕೊಳೆತು ಹಾಳಾಗಿರುವುದು ಸಿಗುವುದು ಸಾಮಾನ್ಯ. ಒಂದು ವೇಳೆ ಎಲ್ಲವೂ ಒಳ್ಳೆಯದಿದ್ದರೂ ದಿನ ಕಳೆದಂತೆ ಹಾಳಾಗುತ್ತದೆ.  ಈ ಸಂಭಂಧಗಳೂ ಹಾಗೆ , ಗಂಡಾಗಲೀ ಹೆಣ್ಣಾಗಲೀ ಸಂಬಂಧಗಳನ್ನು ಆಯ್ಕೆ ಮಾಡುವಾಗ ಚೌಕಾಶಿ ಮಾಡಿ ಅರಸಿ ಅರಸಿ ಸೋಸಿ ಹೇಗೆ ಸಾಧ್ಯವೋ ಹಾಗೆ ಸಾಮಾರ್ಥ್ಯವಿದ್ದಂತೆ   ಹುಡುಕಿ ಹೊಂದಿಸಿಕೊಂಡು ಸಂಪಾದಿಸುವುದು ಸಹಜ. ಬದುಕಿನ ಪಯಣದಲ್ಲಿ  ಹೊಸ ಸಂಬಂಧಗಳ ಆಯ್ಕೆ ಅನಿವಾರ್ಯ. ತರಕಾರಿ ಅಂಗಡಿಯಿಂದ ತಂದಂತೆ, ಯೋಗವಿದ್ದರೆ ಸಂಭಂಧಗಳು ಹಳಸದೆ ನಿತ್ಯ ಹಸಿರಾಗಿರುತ್ತದೆ.  ಇದನ್ನು ಪ್ರೀತಿ ವಿಶ್ವಾಸ ಎಂಬ ಫ್ರಿಜ್ ನಲ್ಲಿ ಭದ್ರವಾಗಿರಿಸಿಕೊಳ್ಳಬೇಕು. ಆದರೆ ಅದರಲ್ಲು ಎಲ್ಲವೂ ಸರಿ ಇದ್ದು ವಿದ್ಯುತ್ ಇಲ್ಲದೇ ಕೆಡುವಂತೆ, ನಮಗೆ ಯೋಗ ಇಲ್ಲದೇ ಇದ್ದರೆ ಕೆಟ್ಟು ಹೋಗುವುದು ಇಲ್ಲದಿಲ್ಲ. 


        ಮೊದಲೆಲ್ಲ ಮನೆ ಮನೆಯಲ್ಲಿ ತರಕಾರಿ ಸ್ವತಃ ಬೆಳೆಯುತ್ತಿದ್ದುದರಿಂದ ಅದಕ್ಕೆ ಗೌರವ ಅಭಿಮಾನ ಪ್ರೀತಿ ಎಲ್ಲವೂ ಇರುತ್ತಿತ್ತು. ಅದರೆ ಯಾವಾಗ ಹೊರಗೆ ಹೋಗಿ ಅಂಗಡಿಯಿಂದ ಖರೀದಿಸಿ ತರುವಾಗ ನಕಲಿ ವಂಚನೆ ಎಲ್ಲವು ಸಂಭವನೀಯ. ಅದರ ಅರ್ಥ ನಾವು ಮನೆಯಲ್ಲೇ ಬೆಳೆಯಬಹುದಾದ ಪ್ರೀತಿ ಸೌಹಾರ್ದತೆಯ ಕೊರತೆಯಾಗಿದೆ. ಆ ಪ್ರೀತಿ  ಸಂಭಂಧಗಳು ಇಂದು ಅಪರೂಪವಾಗಿವೆ.  ಇದ್ದರೂ ಕೃತಕವಾಗಿ ಅಭಿನಯವಾಗಿದೆ.  ಮನೆಯ ಒಳಗೆ ಪರಸ್ಪರ ವಿಡಿಯೋ ಕಾಲ್ ಮಾಡುವ ಕಾಲ ಇದು. ಕಾಣುವ ನಗು ವಿಶ್ವಾಸವನ್ನು ಅರಸುವಂತಾಗುತ್ತದೆ.  ಬಂಧುಗಳು ಹತ್ತಿರವಿದ್ದಷ್ಟೂ ಮಾನಸಿಕವಾಗಿ ದೂರವಿರುತ್ತಾರೆ.  ಇದು ವಾಸ್ತವ. 

        ದೀರ್ಘ ಕಾಲದ ವೈವಾಹಿಕ ಪಯಣದಲ್ಲಿ ದೈವ ನಿಮಿತ್ತವಾದ ಏರಿಳಿತಗಳು ಹಲವಿದ್ದರೂ ಇದುವರೆಗೆ ವಿದ್ಯುತ್ ಕಡಿತದ ಯೋಗ ವಿರಲಿಲ್ಲ. ಪ್ರೀತಿ ಅಭಿಮಾನ ಗೌರವ ಎಲ್ಲವನ್ನು ಮನಸೋ ಇಚ್ಛೆ ಅನುಭವಿಸಿದವನು ನಾನು. ಅದಕ್ಕೆ ಕಾರಣ ನನ್ನ ಮಾವನ ಮನೆಯ ಸದಸ್ಯರು.   ಮೂರು ದಶಕದ ಈ ಅಳಿಯನ ಪದವಿಯ ಉನ್ನತಿಯಲ್ಲಿ ಎಂದಿಗೂ ಪ್ರೀತಿಗೆ ಕೊರತೆಯಾಗಲಿಲ್ಲ. ದಶಕದ ಹಿಂದಿನ ಅದೇ ವಿಶ್ವಾಸ. ಮೂವತ್ತು ವರ್ಷಗಳ ಹಿಂದೆ ಪತ್ನಿ ತವರು ಮನೆಯಲ್ಲಿ ಇರುವಾಗ ಸಂಭ್ರಮದಿಂದ ಕೊಪ್ಪಕ್ಕೆ ಹೋಗುವ ದಿನಗಳು ಇಂದಿಗೂ ನೆನಪಾಗುತ್ತದೆ. ಈಗ ದಿನ ಮಾತ್ರ ಬದಲಾಗಿದೆ. ಆ ಸಂಭ್ರಮ ನಿರೀಕ್ಷೆ ಈಗಲೂ ಹಸಿರಾಗಿದೆ ಮಲೆನಾಡಿನ ಹಸಿರಂತೆ.  ಹಾಕಿದ ಉಡುಪು ಎಷ್ಟೇ  ಆಕರ್ಷಕವಾಗಿ ಬೆಲೆಬಾಳಲಿ, ಅದನ್ನು ತೊಟ್ಟವನ ವ್ಯಕ್ತಿತ್ವದ ಪ್ರಭಾವ ಅದರ ಮೇಲೂ ಇರುತ್ತದೆ. ಆತ ಕೆಟ್ಟವನಾದರೆ ಆ ಸುಂದರ ಉಡುಪಿನ ಬಗ್ಗೆಯೂ ಅಭಿಮಾನ ಇರುವುದಿಲ್ಲ. ಹಾಗೆ ಈ ಊರು ಹಿತವಾಗಿ ಅದೇ ಆಕರ್ಷಣೆ ಉಳಿದುಕೊಳ್ಳಲು ಈ ಬಂಧುವರ್ಗವೇ ಕಾರಣ ಎಂದು ಬೇರೆ ಹೇಳಬೇಕಿಲ್ಲ.   ಇದನ್ನೆಲ್ಲ ನೆನಪಿಸಿಕೊಳ್ಳುವಾಗ  ನಾನು ಮೇಲೆ ಹೇಳಿದ ವಾಕ್ಯ ...ಅಪ್ಪ ಅಮ್ಮನನ್ನು ಪಡೆಯುವುದು ನಮ್ಮೆಣಿಕೆಯಲ್ಲಿಲ್ಲ, ಆದರೆ ಬಂಧುಗಳನ್ನು ಗಳಿಸಿ ಅದರ ಔಚಿತ್ಯವನ್ನು ಉಳಿಸಿಕೊಳ್ಳುವಲ್ಲಿ ನಮಗೆ ಯೋಗ ಅತ್ಯಂತ ಅವಶ್ಯ. ಸಿಗದೇ ಇರುವುದನ್ನು ಪಡೆಯುವುದೇ ಯೋಗ. ಈ ಕಾಲದಲ್ಲಿ ಇಂತಹ ಸಂಭಂಧಗಳು ಪಡೆಯುವುದೇ ಯೋಗ ಎನ್ನುವುದು ಹೆಚ್ಚು ಅರ್ಥ ಪೂರ್ಣ. 

        ಅತ್ತೆ ಮಾವ ಹೆಂಡತಿಯನ್ನು ಹೊಗಳುವುದೆಂದರೆ ವಾಡಿಕೆಯಲ್ಲಿ ಒಂದಷ್ಟು  ಮುಜುಗರ ಇರುತ್ತದೆ. ಹೊಗಳುವಷ್ಟು  ವಿಶೇಷವೇನಿರುತ್ತದೆ?   ಹಲವು ಸಲ ಇದು ಅತಿರೇಕ ಅತಿಶಯ ಎನಿಸಿದರು ಅನುಭವಿಸಿದ ಸುಖ ಸಮೃದ್ಧಿಗೆ ಯೋಗ ಕೂಡಿಬರುವುದೇ ಇಲ್ಲಿಂದ ಎಂಬುದು ಸತ್ಯ.  ಪ್ರಯಾಣದಲ್ಲೋ ಇನ್ನೆಲ್ಲೋ ನಮಗೆ ಕ್ಷಣಿಕವಾಗಿಯಾದರೂ ಒಳ್ಳೆಯದನ್ನು ಮಾಡುವ ಅಪರಿಚಿತರನ್ನು ಹೊಗಳುತ್ತೇವೆ. ಬಸ್ಸಿನಲ್ಲಿ ಸಹಪ್ರಯಾಣಿಕ ಅಪರಿಚಿತ ಹತ್ತಿರದಲ್ಲೇ ಕುಳಿತಿದ್ದರೂ ಆ ಪ್ರಯಾಣದ ಅವಧಿಯಲ್ಲಾದರೂ ಆತನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ.   ಆತನ ಕೈ ಮೇಲಿದ್ದರೆ ನಮ್ಮದು ಕೆಳಗಿರುತ್ತದೆ! ಹೀಗಿರುವಾಗ ನಮ್ಮ ಜೀವನ ಪರ್ಯಂತ ಜತೆಯಾಗುವ ಉತ್ತಮ ಬಂಧುಗಳಿದ್ದರೆ ಅವರನ್ನು ಹೊಗಳುವುದರಲ್ಲಿ ಸಂಕೋಚ ಬಿಗುಮಾನ ಯಾಕಿರಬೇಕು? ಈ   ಸ್ನೇಹ ಗೌರವದ ಬಂಧುಗಳು ಪರಮಾತ್ಮನಿಗೆ ಸಮ, ಯಾಕೆಂದರೆ ಉತ್ತಮ ಬಂಧುಗಳು ಜತೆಗಿದ್ದರೆ ಪರಮಾತ್ಮನ ಸ್ಮರಣೆ ಕೂಡ ಆಗುವುದಿಲ್ಲವಂತೆ, ಹಾಗಾಗಿ ಬಂಧುಗಳು ಎನಗಿಲ್ಲ...ಎಂದು ದಾಸ ವರೇಣ್ಯರು ಹಾಡುತ್ತಾರೆ. 

        


ಮಾವ ಈಗ ನಮ್ಮೊಡನೆ ಇಲ್ಲ.  ಕಡಿದ ಮರ ಮತ್ತೂ ಚಿಗುರಿ ನನ್ನಲ್ಲಿನ್ನೂ ಈ ಪ್ರಕೃತಿಯ ಪ್ರೀತಿ ಹುದುಗಿದೆ ಎಂದು ತೋರಿಸುತ್ತದೆ ಇಲ್ಲಿನ ವಾತ್ಸಲ್ಯ  ಆ ಪ್ರೀತಿಯ ನೆರಳಿನಲ್ಲೇ ಬಂಧುತ್ವ ಮತ್ತೂ ಗಾಢವಾಗಿದೆ. ಮಾವನ ಎದುರು ಎಂದೂ ನಾನು ಪರಕೀಯ ಅನ್ನಿಸಲಿಲ್ಲ. ಪ್ರೀತಿಯ ಚಿಗುರು ಇನ್ನೂ ಹಸಿರಾಗಿಯೇ ಉಳಿದಿದೆ. ಆ ಅನುಭವ ಮಾಸದಂತೆ ಅತ್ತೆ ಭಾವಂದಿರು ಮತ್ತವರ ಸಹವರ್ತಿಗಳು ನೀರೆರೆದು ಈ  ಹಸಿರಿನ ಹಸಿವನ್ನು ಸದಾ ಜಾಗೃತ ಗೊಳಿಸಿದ್ದಾರೆ. ಈ ಬಾರಿಯ ದೀಪಾವಳಿ ಹೊಸ ಅಳಿಯನ ಮರು ಸೃಷ್ಟಿಯನ್ನು ನೀಡಿದೆ.  ಜಾಮಾತಾ  ದಶಮಗ್ರಹ....ಹೆಣ್ಣು ಹೆತ್ತವರಿಗೆ ಅಳಿಯ ಹತ್ತನೆಯ ಗ್ರಹ. ಒಂಭತ್ತಕ್ಕೆ ಗ್ರಹ ಶಾಂತಿ ಸುಲಭವಾಗಬಹುದು, ಹತ್ತನೆಯದರ ಪ್ರಭಾವ ಬಂಧುತ್ವದ ಸಂಭಂಧಗಳ  ಬುಡವನ್ನೇ ಅಲುಗಾಡಿಸುತ್ತದೆ.  ಇಲ್ಲಿ ದಶಮ ಗ್ರಹದ ಮೇಲೆ ಬಹಳ ಗೌರವ. ಮಾವನ ಊರು ಮೇಗೂರು ಇದೆ. ಅಲ್ಲಿ ಕೇವಲ ಅತ್ತೆ ಮಾವ ಮಾತ್ರವಲ್ಲ ಅಲ್ಲಿ ಬಂಧುವರ್ಗ ಮಾತ್ರವಲ್ಲ ಪರಿಸರ ಪ್ರಕೃತಿ ಎಲ್ಲವೂ ಅಳಿಯ ಗ್ರಹನನ್ನು ಗೌರವದಿಂದ ಕಾಣುತ್ತದೆ. ಇಲ್ಲಿನ ಶುದ್ದ ಸಂಸ್ಕಾರವದು. ಅಳಿಯ ಎಂದರೆ ಸಾಕ್ಷಾತ್ ದೇವರು. ನವಗ್ರಹದ ಚಲನೆಯನ್ನಾದರು ಮರೆತು ಬಿಡಬಹುದು, ಆದರೆ ಈ ಅಳಿಯನೆಂಬ ಹತ್ತನೆಯ ಗ್ರಹದ ಚಲನೆ ಮೇಲೆ ಸದಾ ಕಣ್ಣು. ಒಬ್ಬರಲ್ಲ ಒಬ್ಬರು ಗಮನಿಸುತ್ತಾ ಇರುತ್ತಾರೆ. ಅಳಿಯ...ಕಾಫಿ ಕುಡಿದರಾ, ಅಳಿಯ ನಿದ್ದೆಗೆ ಜಾರಿದರಾ, ಅಳಿಯನ ತಲೆಗಿಟ್ಟ ದಿಂಬು ಮೆತ್ತಗೆ ಇದೆಯಾ...ಹೀಗೆ ಹತ್ತು ಹಲವು ಅಳಿಯನ ಚಟುವಟಿಕೆಗಳು ಗಾಜಿನ ಮನೆಯಲ್ಲಿಟ್ಟಂತೆ ಸದಾ ಗಮನಾರ್ಹ. ಹಲವು ಸಲ ಅನ್ನಿಸಿದ್ದಿದೆ...ನನ್ನ ಹಿಂದೆ ಯಾವುದೋ ಸಿ ಸಿ ಕ್ಯಾಮೆರ ಇದೆ ಎಂದು. ನಾನು ಏನು ಮಾಡಿದರೂ  ಯಾರದರೊಬ್ಬರ ಮನಸ್ಸಿನಲ್ಲಿ ಅದು ದಾಖಲಾಗಿರುತ್ತದೆ.  ಹೀಗಿರುವುದರಲ್ಲೇ ಒಂದು ಗಾಂಭೀರ್ಯ. ಅಳಿಯ ಎಂದರೆ ಗಂಭೀರ. ನಿಮ್ಮಲ್ಲಿ ಇಲ್ಲದೇ ಇದ್ದರು ಅದನ್ನು ತುಂಬಿಸಿಬಿಡುತ್ತಾರೆ. ಆತ್ಮೀಯತೆ ಗೌರವ ನಿಮ್ಮ ಮನಸೋ ಇಚ್ಛೇ ಅಹಮಿಕೆ ಇಲ್ಲದೆ ಅನುಭವಿಸಬಹುದು. ಎಂತೆಂತಹ ದಶಮಗ್ರಹದ ಭ್ರಮಣವನ್ನು ಸಂಬಂಧಗಳನ್ನು ಕಂಡಿದ್ದೇನೆ. ಈ ಎಲ್ಲದರ ನಡುವೆ ನನ್ನದೇ ಅತ್ಯಂತ ವೈಶಿಷ್ಟ್ಯ ಎನಿಸುತ್ತದೆ. ಅದಕ್ಕೆ ಕಾರಣ ನಾನಂತೂ ಅಲ್ಲ ಎಂಬ  ಪ್ರಜ್ಞೆ ಸದಾ ಜಾಗ್ರತವಿರುತ್ತದೆ. ಅದೇ ದಶಮಗ್ರಹದ ಅನಗ್ರಹವೋ ಆಗ್ರಹವೋ ಹೇಳುವುದು ಕಷ್ಟ. 


ಈ ಬಾರಿ ದೀಪಾವಳಿಗೆ ಹೋಗಲೇ ಬೇಕೆಂಬ ಛಲದಲ್ಲಿ ಹೋದೆ. ಕಳೆದ ದಿನಗಳನ್ನು ಪುನಃ ನವೀಕರಿಸುವ ತವಕ. ಅದೇ ಸಂಭ್ರಮ ಅದೇ ಸಡಗರ. ಮಾವ ಇಲ್ಲದೇ ಇರುವುದೊಂದೆ ಕೊರತೆಯಾದರೂ ಅಳಿಯನೆಂಬ ಗ್ರಹಗತಿಯ ಚಲನೆಗೆ ಭಂಗವಿರಲಿಲ್ಲ. ದೀಪಾವಳಿ ಬೆಳಕಿನಲ್ಲಿಹಾರ್ದಿಕವಾದ  ಸಂತಸದ ಎರಡು ದಿನ ಕಳೆದು ನಿರ್ಗಮಿಸುವಾಗ ಯಥಾ ಪ್ರಕಾರ ಹೃದಯ ಭಾರವಾಗುತ್ತದೆ. ದಶಮಗ್ರಹ ಭಾರವಾದರು ಚಲನೆಯನ್ನು ಸ್ಥಗಿತಗೊಳಿಸುವಂತಿಲ್ಲ. ಅದು ಚಲನಶೀಲವಾಗಿ ಚಲಿಸುತ್ತ ಇರಬೇಕು. ಮುಂದಿನ ದೀಪಾವಳಿ ನಿರೀಕ್ಷೆಯಲ್ಲಿ ಮತ್ತೆ ಯಾವ ಮನೆಯಲ್ಲಿ ನೆಲೆಯಾಗುವುದೋ ಕಾಣಬೇಕು.  


 








Tuesday, November 8, 2022

ಉತ್ಕೃಷ್ಟ ಸಂದೇಶ

 

 ಮಂತ್ರಾಲಯದಲ್ಲಿ ಮುಂಜಾನೆ ಹೀಗೆ ಹರಿಯುವ ತುಂಗೆಯ ನಡುವೆ ಬಂಡೆಯ ಮೇಲೆ ಸುತ್ತಾಡಬೇಕಾದರೆ ಸುತ್ತಲೂ ಸುಂದರ ಬಯಲು ಸೀಮೆಯ ಪ್ರಕೃತಿಯಾದರೆ ಅಲ್ಲೇ ಗುಟುರು ಹಾಕುತ್ತಾ ಮೇಯುವ ಹಂದಿಯ ಹಿಂಡು ಕಾಣುತ್ತಿದ್ದಂತೆ ಮಗನಿಗೆ ಕಾಂತಾರ ಸಿನಿಮದ ಪಂಜುರ್ಲಿ ಸ್ಮರಣೆಗೆ ಬಂತು. ಹಂದಿ ಕಾಣುವುದಕ್ಕೆ ನಿಕೃಷ್ಟ ಪ್ರಾಣಿ ಆದರೆ ಆಗ ಅಲ್ಲಿ ಮನುಷ್ಯನ ವಿಕೃತಿ ನಿಕೃಷ್ಟತೆಯ ಪ್ರತೀಕದಂತೆ ಬಂಡೆಯ ಮೇಲೆ ಎಸೆದ ಕಸ ಆಹಾರದ ಮುದ್ದೆಗಳನ್ನು ಸ್ವಚ್ಛ ಮಾಡಿ ತನ್ನ ಉತೃಷ್ಟತೆಯನ್ನು ಪೂರ್ವ ದಲ್ಲಿ ಉದಿಸಿದ ಸೂರ್ಯನಿಗೆ ತೋರುಸುತ್ತಿತ್ತು.

ಕೇವಲ ಇಷ್ಟೇ ಅಲ್ಲ,
ನಗ್ನತೆ  ಹೊರಗೆ ಕಂಡಾಗ  ಸ‌ಭ್ಯತೆಯ ಮನಸ್ಸು  ವಸ್ತ್ರವನ್ನು ಧರಿಸಿಬಿಡುತ್ತದೆ.  ಕಣ್ಣು ಮುಚ್ಚಿಕೊಳ್ಳುತ್ತದೆ. ಅದು ಸಭ್ಯತೆ. ಅದು ಮೀರಿದರೆ ಹೊರಗೆ ವಸ್ರ ಧರಿಸಿದರೂ  ಮನಸ್ಸು ನಗ್ನತೆಯನ್ನೇ  ಕಾಣುತ್ತದೆ.  ಮನುಷ್ಯ ಮನಸ್ಸು ಅಮೀಬದಂತೆ ಯಾವರೂಪವನ್ನು ಕ್ಷಣದಲ್ಲಿ ಪಡೆಯಬಲ್ಲುದು. ಇದನ್ನೆ ಮನೋವಿಕಾರ ಎನ್ನುವುದು.  ಕ್ಷೇತ್ರ ಪರಿಸರದ ಮೌಲ್ಯ ಅರಿಯದೆ ಮನೋವಿಕಾರವನ್ನು ಪ್ರಚೋದಿಸುವ ಒಂದು ವರ್ಗವಿದ್ದರೆ, ಮನೋವಿಕಾರವನ್ನೇ ಭಂಡವಾಳ ಮಾಡಿಕೊಂಡ ಇನ್ನೊಂದು ವರ್ಗ. ಸಭ್ಯತೆಯ ತಕ್ಕಡಿ ಸಂತುಲನೆಯನ್ಮು ಕಳೆದುಕೊಂಡಂತೆ ನೇತಾಡುತ್ತಿದೆ. ನೇತಾರನೇ ನೇತಾಡಿದರೆ ಉಳಿದವರೂ ಅದೇ ಬಳ್ಲಿಗೆ ನೇತಾಡುತ್ತಾರೆ.


ಹಂದಿ ತುಳುವರ ಪಂಜಿ...ನೋಡುವುದಕ್ಕೆ ಭೀಭತ್ಸವಾದರೂ ಅದೇಕೊ ಅದರ ಪ್ರವೃತ್ತಿಯ ಬಗ್ಗೆ ಗೌರವ ಮೂಡಿತು. ಪವಿತ್ರ ಪಾವನ ತುಂಗೆ ಮನಷ್ಯನ ಅಪವಿತ್ರ ಧಾಳಿಗೆ ನಲುಗಿ ಎಲ್ಲೆಂದರಲ್ಲಿ ಎಸೆದ ಕಸ,  ಭಾಟಲಿ,  ಹರುಕು ಬಟ್ಟೆ ಇನ್ನೂ ಏನೇನೊ ನೋಡುವುದಕ್ಕೂ ಅಸಹ್ಯ ಎನಿಸುವಂತಹ ವಸ್ತುಗಳನ್ನು ಮೈಯೆಲ್ಲಾ ತುಂಬಿ, ಗುಣವಾಗದ ವೃಣದಿಂದ ರೋಧಿಸುವಂತೆ ಭಾಸವಾಯಿತು. ಇದರ ನಡುವೆ ಈ ಕಸದ ಸಂಹಾರವನ್ನು ಸಾಧು ವರಾಹ ರೂಪ ಸಂಹಾರ ಮಾಡುತ್ತಿತ್ತು. ಇದು ಸಾವಿರ ಪಂಜುರ್ಲಿಗಳು ಅವತಾರ ಎತ್ತಿದರೂ ಮನುಷ್ಯ ಪ್ರಬುದ್ದನಾಗುವುದಿಲ್ಲ ಎಂಬುದರ ಸಂಕೇತ.

ಹಂದಿಯನ್ನು ನೋಡುವಾಗ ಪೂಜ್ಯ ಪಂಜುರ್ಲಿಯ ನೆನಪಾಗಬೇಕಾದರೆ  ಕಾಂತಾರ ಪ್ರಚೋದಿಸಿದ ಆ ಭಾವನಾತ್ಮಕ ಭಕ್ತಿ ಏನಿರಬಹುದು? ನಮ್ನ ಸನಾತನ ಸಂಸ್ಕೃತಿಯ ಮೌಲ್ಯಗಳೇ ಹೀಗೆ. ಅದು ನಿಕೃಷ್ಟತೆಯಲ್ಲೂ ಉತ್ಕರ್ಷವನ್ನು ತೋರಿಸಿ, ಲೌಕಿಕ ಪ್ರಪಂಚದ ಉತ್ಕೃಷ್ಟತೆಯ ನಿಕೃಷ್ಟತೆಯನ್ನು ಆಧ್ಯಾತ್ಮಿಕ ದಲ್ಲೇ ತೋರಿಸುತ್ತವೆ. ಜಗತ್ತು ಇದನ್ನು‌ಕಾಣಬೇಕು. ಹಾಗಾಗಿಯೇ ಕಾಂತಾರ ಜಗತ್ತಿಗೆ ಕೊಡುವ ಸಂದೇಶದಲ್ಲಿ ಇದೂ ಒಂದು ಉತ್ಕೃಷ್ಟ ಸಂದೇಶ.

ನಾವು ಪ್ರಕೃತಿಯನ್ನು ಗೌರವಿಸಿ ಪೂಜಿಸಿದಷ್ಟು ಬೇರೆ ಯಾವ ಧರ್ಮವೂ ಪ್ರಕೃತಿಯನ್ನು ಕಂಡದ್ದಿಲ್ಲ. ಇಲ್ಲಿ ಮರಗಿಡಗಳೂ ಪಕ್ಷಿ ಪಶುಗಳೂ ಪೂಜಿಸಲ್ಪಡುವುದು ಮಾತ್ರವಲ್ಲ....ಹಂದಿಯೂ ದೈವಾಂಶವಾಗುತ್ತದೆ.  ಇದರ ಮೌಲ್ಯಗಳನ್ನು ತಿಳಿಯದೇ ಇದ್ದರೆ ಮನುಷ್ಯನೇ ಪ್ರಕೃತಿಯ ಎದುರು ಬೆತ್ತಲಾಗಿ ನಿಕೃಷ್ಟನಾಗುತ್ತಾನೆ.