Friday, July 26, 2019

ನನ್ನ ಅಮ್ಮ....ಅಮ್ಮನಲ್ಲ



ದಚ್ಚು ಮಾವ, ಸಾಕಷ್ಟು ಬದಲಾಗಿದ್ದಾರೆ. ಬಹಳ ಹಿಂದೆ ಕಂಡಿದ್ದೆ. ಈಗ ಮುಖತುಂಬ ಗಡ್ಡ ತುಂಬಿಸಿ ಒಂದಷ್ಟು ಹೊಟ್ಟೆ ಬೆಳಸಿ ದೇಹ ಬದಲಾಯಿಸಿದ್ದು ಮಾತ್ರವಲ್ಲ. ಅವರ ಮನಸ್ಸು ಬದಲಾಗಿದೆ ಅಂತ ಅನ್ನಿಸಿದೆ. ಮೊದಲೆಲ್ಲ ನನ್ನಲ್ಲಿ ಹಾಸ್ಯವಾಗಿ ತಮಾಷೆಯಾಗಿ ಮಾತನಾಡುತ್ತಿದ್ದವರು ಇಂದು ಕಂಡಕೂಡಲೇ ಗಂಭೀರವಾಗಿ ನಕ್ಕು ಸುಮ್ಮನಾಗಿದ್ದರು.  ಇಂದು ಬಹಳ ಸಮಯದ ನಂತರ ಕಾಣುತ್ತಿದ್ದೇನೆ. ದಚ್ಚು ಮಾವ ಬದಲಾದ ಬಗೆಗಾಗಲೀ, ಗಂಭೀರವಾಗಿ ಇದ್ದ ಬಗೆಗಾಗಲೀ ಯೋಚಿಸುತ್ತಿಲ್ಲ. ಬದಲಿಗೆ ಅವರು ಹೇಳಿದ ಒಂದು ವಿಚಾರ ಮತ್ತಷ್ಟು ನಾನೇ ಗಂಭೀರವಾಗಬೇಕು ಎಂಬಂತಿತ್ತು.

ದೇವಣ್ಣನ ಮನೆಯಲ್ಲಿ ನಾಳೆ ತ್ರಿಕಾಲ ಪೂಜೆ ಇದೆ. ಹಾಗಾಗಿ ಇಂದು ರಾತ್ರಿ ತರಕಾರಿ ಹೆಚ್ಚುವುದರಿಂದ ತೊಡಗಿ ಹಲವು ಕೆಲಸಗಳು ಇರುವುದರಿಂದ  ವಾಡಿಕೆಯಂತೆ ನೆರೆಕರೆಯವರು ಕೆಲವರು ಸೇರಿದ್ದರು.  ತಮಾಷೆಯಾಗಿ ಹರಟೆ ಹೊಡೆಯುತ್ತಾ ಎಲ್ಲರೂ ಸೇರಿ ತರಕಾರಿ ಹೆಚ್ಚುವುದರಿಂದ ತೊಡಗಿ ನಾಳೆಯ ಅಡುಗೆಗೆ ಸಿದ್ದ ಮಾಡುವುದು ಒಂದು ರೀತಿಯಲ್ಲಿ ಮಜ ಉಡಾಯಿಸಿದಂತೆ. ಅದೊಂದು ಸಂಭ್ರಮದ ಮತ್ತು ಸಂತೋಷದ ವಾತಾವರಣ. ಸಾಮಾನ್ಯವಾಗಿ ಎಲ್ಲರೂ ಪ್ರತಿ ಸಲವೂ ಕಾಣುವವರೇ  ಇಂದು ಕೂಡ ಬಂದಿದ್ದರು. ಅದು ಎಲ್ಲರೂ ಸೌಹಾರ್ದವಾಗಿ ಮಾಡುವ ಸೇವೆ.  ಆದರೆ ನಾವು ಹೋಗುವ ಮೊದಲೇ ದಚ್ಚು ಮಾವ ಬಿಳಿ ಬನಿಯನು ಮತ್ತು ವೇಷ್ಟಿ ಸುತ್ತಿ ಚಪ್ಪರದ ತುಂಬ ಓಡಾಡುತ್ತಿದ್ದರು. ಆಶ್ಚರ್ಯವಾದರೂ ಖುಷಿಯಾಗಿತ್ತು. ದಚ್ಚು ಮಾವನನ್ನು ಕಾಣುವುದೇ ಅಪರೂಪ. ಅವರಿದ್ದರೆ ಇಂತಹ ಕೂಟಗಳಿಗೆ ಕಳೆ ಕಟ್ಟುತ್ತದೆ. ಅರಳು ಹುರಿದಂತೆ ಮಾತನಾಡುತ್ತಾ, ಕೆಲಸಗಳಿಗೆ ನಿರ್ದೇಶನವನ್ನು ಕೊಡುತ್ತ ಒಂದು ರೀತಿಯ ಮೇಲು ಉಸ್ತುವಾರಿಯನ್ನು ಅವರು ನಿಭಾಯಿಸುವ ರೀತಿ ಬಹಳ ಉತ್ಸಾಹವನ್ನು ತರುತ್ತಿತ್ತು. ಮಾವನನ್ನು ಕಾಣದೆ ಈಗ ಎರಡು ಮೂರು ವರ್ಷವಾದರೂ ಆಗಿರಬೇಕು ಎಂದನಿಸಿತ್ತು.

ದಚ್ಚುಮಾವ...ಎಲ್ಲರಿಂದಲೂ ಮಾವ ಎಂದು ಕರೆಸಿಕೊಳ್ಳುತ್ತಿದ್ದರು. ಸ್ವಂತ ಸಂಭಂಧಿಗಳು ಎಲ್ಲರೂ ಸಂಭಂಧದಲ್ಲಿ ದೂರ ದೂರ. ಆದರೂ ಮಾವ ಅತ್ಮೀಯರಾಗಿದ್ದರು. ತನ್ನದೇ ಸ್ವಂತ ಮನೆ ಅಂತ ಇಂದಿಗೂ ಇಲ್ಲ. ಇದ್ದ ಒಬ್ಬಳು ಹೆಂಡತಿ ತೀರಿಕೊಂಡ ಬಳಿಕ ಸಂತತಿ ಇಲ್ಲದ ಇವರು ಮನೆ ಮನೆಗೆ ಅತಿಥಿಗಳಾಗಿದ್ದರು. ಕೈಯಲ್ಲಿ ಒಂದು ಕೊಡೆ ಹೆಗಲಲ್ಲಿ ಒಂದು ಚೀಲ. ಹಳೆಯ ಚಂದ್ರನಾ ಬ್ರದರ್ಸ್ ನ ಬಟ್ಟೆ ಅಂಗಡಿಯಿಂದ ಅದಾವಾಗಲೋ ಕೊಂಡುಕೊಂಡ ಬಟ್ಟೆಯ ಜತೆಗೆ ಬಂದ ಚೀಲವದು. ಎಲ್ಲಿ ಹೋಗುತ್ತಿದ್ದರೂ ಚಂದ್ರನಾ ಬ್ರದರ್ಸ್  ಚೀಲ ಹೆಗಲ ಮೇಲಿರುತ್ತಿತ್ತು. ಅವರದ್ಡೇ ಆದ ಬಟ್ಟೆ ಬರೆ, ತಾಂಬೂಲದ ಪೆಟ್ಟಿಗೆ ಒಂದು ಚಿಕ್ಕ ಹರಿತವಾದ ಚಾಕು. ಹೀಗೆ ಮಿತವಾದ ಸಾಮಾಗ್ರಿಗಳು.  ಹಳೆಯ ಮಾಸಿದ ಆ ಚೀಲದಲ್ಲಿ ಚಂದ್ರನಾ ಬ್ರದರ್ಸ್ ಅಂತ ಬರೆದದ್ದು ಈಗಲೂ ಕಾಣುತ್ತದೆ. ಮಾಸಿದ್ದರೂ ದಚ್ಚು ಮಾವನಂತೆ ಅದು ಸ್ವಚ್ಛ.  ಅತಿಯಾಗಿ ಎಲ್ಲೂ ಬೆರೆತುಕೊಳ್ಳದ ಸ್ವಭಾವವಾದರೂ ಎಲ್ಲ ಮನೆಗೂ ಓಡಾಡಿಕೊಂಡು ಅಲ್ಲಿಯ ಪ್ರತಿ ಕಾರ್ಯಕ್ರಮದಲ್ಲೂ ಒಬ್ಬರಾಗಿ ಬಿಡುತ್ತಿದ್ದರು.  ಹಲವು ಸಲ ಒಂದೊಂದು ಮನೆಗೆ ಹೋದರೆ ಕೆಲವು ದಿನ ಅಲ್ಲಿಯವರೇ  ಆಗಿ ಅಲ್ಲಿ ಚಿಲ್ಲರೆ ಪಲ್ಲರೆ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇಂದು ದಚ್ಚುಮಾವನನ್ನು ಕಂಡಕೂಡಲೇ ತುಂಬ ಹುರುಪಿನಲ್ಲಿ ಇದ್ದಂತೆ ಕಂಡರು. ನನ್ನಲ್ಲಿ ಬಹಳಷ್ಟು ಮಾತುಗಳಾಡುತ್ತಿದ್ದರು.  ಹಾಗೇ ಹಾಗೆ ಮತಾನಾಡುತ್ತಿದ್ದರೆ,

ಎಲ್ಲವೂ ಸರಿ ಇತ್ತು.  ಆದರೆ ದಚ್ಚು ಮಾವ ಹೇಳಿದ ಆ  ಒಂದು ವಿಚಾರ ನನ್ನ ಅಸ್ತಿತ್ವವನ್ನೆ ಅಲುಗಾಡಿಸುವಂತೆ ಮಾಡಿತ್ತು.

ಯೋಚನೆಯ ಕೊಂಡಿ ಹರಿದು ಮನಸ್ಸು ಬಹಳ ಹಿಂದಕ್ಕೆ ಓಡುತ್ತದೆ.  ಬಹಳ ಹಿಂದೆ ಅಂದರೆ ಬಹಳ ಹಿಂದೆ.  ನಾನು ಮೂರನೆಯ ತರಗತಿಯ ಪುಟ್ಟ ಬಾಲಕನಾಗಿದ್ದಾಗಿನ ಒಂದು ಘಟನೆ.

ಶಾಲೆಯ ಜಗಲಿಯಲ್ಲಿ ಯಾರೋ ಅಡ್ಡಾಡಿದ ಹಾಗೆ ನೆರಳು ಅತ್ತಿತ್ತ ಚಲಿಸುವುದನ್ನು ಕಂಡ ಪುಟ್ಟ ಮಕ್ಕಳ ದೃಷ್ಣಿ ಪಠ್ಯ ಪುಸ್ತಕವನ್ನು ಬದಲಿಸಿ ಹೊರಗೆ ನೋಡುವಂತೆ ಮಾಡಿತು.  ಮೂಗಿನ ಮೇಲಿದ್ದ ಕನ್ನಡಕದ ಮೇಲಿನ ಭಾಗದಿಂದ ಶೆಟ್ಟಿ ಮಾಸ್ಟರು ಜಗಲಿಯತ್ತ ನೋಡಿದರು. ಬಾಗಿಲ ಅಚೆಗೆ ಯಾರೋ ನಿಂತಹಾಗೆ ಕಂಡು ಅತ್ತ ಹೋಗಿ ನೋಡಿದರು. ಒಬ್ಬಾಕೆ ಹೆಂಗಸು. ಕಣ್ಣು ಪಿಳಿ ಪಿಳಿ ಮಾಡುತ್ತಾ ನಿಂತಿದ್ದಳು. ಮಾಸಿದ ಬಟ್ಟೆ ದಣಿದ ಮುಖ ಮಾಸ್ಟರು ಅನುಕಂಪದ ನೋಟದಲ್ಲೇ ತಲೆ ಆಡಿಸಿ ಕೇಳಿದರು “ ಯಾರು ಬೇಕು?”

ಹೆಂಗಸು ಅಳುಕುತ್ತಾ ಹೇಳಿದಳು...”ವಿಶು ಕುಮಾರ “  ನಂತರ ನಡುಗುವ ಕೈಗಳಳಿಂದ ಒಂದು ಕೆಂಪು ಪೆನ್ನು ತೆಗೆದು ಮಾಸ್ಟರ ಕೈಗೆ ಇತ್ತಳು.  ಕೆಂಪು ಪೆನ್ನು ಬಹಳ ಸುಂದರವಾಗಿತ್ತು. ಶಾಲೆಯ ಬಳಿಯಲ್ಲೇ ಇದ್ದ ಬಾಬಣ್ಣನ ಅಂಗಡಿಯಿಂದ ಕೊಂಡ ಪೆನ್ನು ಎಂದು,  ಆ ಪೆನ್ನು ದೂರದಿಂದ ಕಂಡಕೂಡಲೆ ಮಕ್ಕಳೆಲ್ಲ ಊಹಿಸಿದರು.

ಹೆಂಗಸು ನಂತರ ಮೆತ್ತಗಿನ ಸ್ವರದಲ್ಲಿ ಮಾಸ್ಟರಲ್ಲಿ ಬೇಡಿಕೊಳ್ಳುವಂತೆ ಕೇಳಿಕೊಂಡಳು.
 “ ಸುಮಾರು ದಿನ ಆಯ್ತು..ಪೆನ್ನು ಬೇಕು, ಮಾಸ್ಟ್ರು ತರಲಿಕ್ಕೆ ಹೇಳಿದ್ದಾರೆ ಅಂತ ಹೇಳ್ತಿದ್ದ. ಬೆಳಗ್ಗೆ ಹಟ ಮಾಡಿ ಶಾಲೆಗೆ ಬಂದಿದ್ದ. ಪೆನ್ನಿಗೆ  ದುಡ್ಡು ಇಲ್ಲದೇ  ದನಿಗಳತ್ರ  ರೂಪಾಯಿ  ಸಾಲ ಕೇಳೀದೆ.  ಇವತ್ತು ಸಿಕ್ಕಿತು. ಎಲ್ಲಿ ಬೈಗುಳ ತಿಂತಾನೋ ಅಂತ  ಹಾಗೆ ಶಾಲೆಗೇ ತಂದೆ.”

ಮಾಸ್ಟ್ರು “ವಿಶು ಕುಮಾರ”  ಎಂದು ಕರೆದಾಗ ನಾನು ತಲೆ ತಗ್ಗಿಸಿದೆ. ಅಮ್ಮ ಹೀಗೆ ಶಾಲೆಗೆ ಬರುತ್ತಾಳೆ ಎಂದು ನಾನು ಊಹಿಸಿರಲಿಲ್ಲ. ತೋಟದ ಕೆಲಸಕ್ಕೆ ಹೋಗುವ ಬಟ್ಟೆಯಲ್ಲೇ ಶಾಲೆಗೆ ಗಡಿಬಿಡಿಯಲ್ಲಿ ಬಂದಿದ್ದಳು.

ಮಾಸ್ಟರ್ ದೊಡ್ಡ ಧ್ವನಿಯಲ್ಲಿ ಇಡೀ ತರಗತಿ ಕೇಳುವಂತೆ ಹೇಳಿದರು ತಲೆ ತಗ್ಗಿಸಿ ಮಾಸ್ಟರ ಕಡೆಗೆ ಹೆದರಿ ಹೆದರಿ ನೋಡಿದೆ. ಹಾಗೆ ಹೆದರುವುದಕ್ಕೆ ಒಂದು ಕಾರಣವಿದೆ.  ನಮ್ಮದು ಮೂರನೇಯ ತರಗತಿ. ನಮ್ಮಲ್ಲಿ ಇನ್ನೂ ಪೆನ್ನು ಬಳಕೆಗೆ ಬಂದಿರಲಿಲ್ಲ. ಬಳಪದ ಕಡ್ಡಿ ಮತ್ತೆ ಲೆಕ್ಕದ ಪುಸ್ತಕದಲ್ಲಿ ಬರೆಯುವುದಕ್ಕೆ ಪೆನ್ಸಿಲ್.   ಇಷ್ಟೆ.   ಪೆನ್ನು ಮೂರನೇ ತರಗತಿಗೆ ಅಗತ್ಯವಿರಲಿಲ್ಲ. ಚಿಕ್ಕ ಮಕ್ಕಳಲ್ಲವೇ?  ಆಗಿನ ಕಾಲದಲ್ಲಿ ಪೆನ್ನು ಎಂದರೆ ಪ್ರತಿಷ್ಠೆಯ ಸಂಕೇತ. ಐದು ಆರನೆಯ ತರಗತಿಯಿಂದ ನಂತರ ಇಂಗ್ಲೀಷ್ ಪಠ್ಯ ಶುರುವಾಗುತ್ತದೆ. ಆಗಲೇ ಪೆನ್ನು ತರುವಂತೆ ಮಕ್ಕಳಿಗೆ ಹೇಳುತ್ತಿದ್ದರು. ಬಹುಶಃ ಇಂಗ್ಲೀಷ್ ಬರೆಯಬೇಕಿದ್ದರೆ ಪೆನ್ನು ಅಗತ್ಯವೇನೋ.? ಪುಟ್ಟ ಮಕ್ಕಳ ಭಾವನೆ. ಆದರೆ ಕ್ಲಾಸ್ ನಲ್ಲಿ ಇಸ್ಮಾಯಿಲ್ ನ ಕೈಯಲ್ಲಿ ಮಿರಿ ಮಿರಿ ಮಿಂಚುವ ಪೆನ್ನು ಕಂಡು ನನಗೂ ಬೇಕು ಅಂತ ಆಶೆಯಾಗಿತ್ತು. ಆದರೆ ಹೇಗೆ. ಇಸ್ಮಾಯಿಲ್ ಗೆ ಅಪ್ಪ ಬೊಂಬಾಯಿಂದ ಬರುವಾಗ ತಂದು ಕೊಟ್ಟ ಪೆನ್ನನ್ನು ಜಂಭದಿಂದ ತಂದಿದ್ದ. ಒಂದಷ್ಟು ದಿನ ಮಾಸ್ತರಿಗೆ  ತೊರಿಸದೇ ಅಡಗಿಸಿ ಇಟ್ಟರೂ ಕೊನೆಗೊಂದು ದಿನ ಗೊತ್ತಾಗಿತ್ತು. ಇಸ್ಮಾಯಿಲ್ ನ ಪೆನ್ನಿನಂತೆ ಅಲ್ಲದೇ ಇದ್ದರೂ ಬಾಬಣ್ಣನ ಅಂಗಡಿಯಲ್ಲಿರುವ ಪೆನ್ನು ಕೊಳ್ಳುವ ಆಶೆಯಾಗಿತ್ತು. ಹೊರಗಿನಿಂದ ನೋಡಿದರೆ ಒಳಗಿನ ಶಾಯಿ ಎಷ್ಟು ಇದೆ  ಅಂತ ಗೊತ್ತಾಗುವ ಪೆನ್ನು. ಆದರೆ ಕೊಳ್ಳುವ ಬಗೆ ಹೇಗೆ.? ಹಾಗೆ ಅಮ್ಮನಲ್ಲಿ ಒಂದು ಸುಳ್ಳು ಹೇಳಿದೆ. ಶಾಲೆಯಲ್ಲಿ ಪೆನ್ನು ತರಲು ಹೇಳಿದ್ದಾರೆ.  

ಹೀಗೆ ನಾನು ಸುಳ್ಳು ಹೇಳುವುದಕ್ಕೂ ಒಂದು ನನ್ನದೇ ಸಮಜಾಯಿಷಿಕೆ ಇತ್ತು.  ಟೈಂ ಟೇಬಲ್ ನ ಕಾಲು ಮುರಿದಿದೆ, ರಿಪೇರಿಗೆ ದುಡ್ಡು ತರಲಿಕ್ಕೆ ಹೇಳಿದ್ದಾರೆ ಅಂತ ಮನೆಯಿಂದ ದುಡ್ಡು ತಂದು, ಅದೂ ಇದೂ ಅಂತ ಖರ್ಚು ಮಾಡುವವರಿದ್ದರು. ಅವರಿಗಿಂತಲೂ ನನ್ನ ಸುಳ್ಳು ದೊಡ್ಡದಲ್ಲ ಎಂಬ ಭಾವನೆ.

ನಿಜಕ್ಕಾದರೆ ಶಾಲೆಯಲ್ಲಿ ಹೇಳಿರಲೇ ಇಲ್ಲ. ಇದೀಗ ಅಮ್ಮ ಶಾಲೆಗೆ ತಂದಿದ್ದಾರೆ. ಮಾಸ್ತರು ದೊಡ್ಡ ಕಣ್ಣು ಮಾಡಿ ನನ್ನತ್ತವೇ ನೋಡುತ್ತಿದ್ದಾರೆ.   ಪೆನ್ನು...ಮೂರನೇ ಕ್ಲಾಸಿಗೆ ಅಗತ್ಯ ಇಲ್ಲ. ಅವನು ಸುಳ್ಳು ಹೇಳಿದ್ದಾನೆ.”

ಅಮ್ಮ ಒಂದಷ್ಟು ಹೊತ್ತು ನೋಡಿ ಪೆನ್ನು ಕೊಟ್ಟು ಹೋದಳು. ಆದರೆ ಮಾಸ್ತರು ಪೆನ್ನನ್ನು ಕೊಡದೇ ಮೇಜಿನ ಮೇಲಿಟ್ಟರು.

ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದೆ. ಅಮ್ಮ ಹೋದನಂತರ ಶಾಲೆಯ ಬಳಿಯ ಗೋಳಿ ಮರದ ಕಟ್ಟೆಗೆ ಹತ್ತು ಸುತ್ತು ಓಡಿಸಿ ನಂತರ ಮಾಸ್ಟರು ಆಪೀಸ್ ರೂಮಿಗೆ ಕರೆದು ಬುದ್ದಿವಾದ ಹೇಳಿದರು.  ಪೆನ್ನು ಕೈಗಿತ್ತು ಈಗ ಶಾಲೆಗೆ ತರಬೇಡ ಪಾಸಾಗಿ ಆರನೇ ಕ್ಲಾಸಿಗೆ ಹೋಗುವಾಗ ಉಪಯೋಗವಾಗುತ್ತದೆ. ಜೋಪಾನವಾಗಿ ಇಡು ಅಂತ ಉಪದೇಶ ಮಾಡಿದರು.

ಶಾಲೆ ಬಿಟ್ಟ ಮೇಲೆ ಮನೆಗೆ ಹೆದರಿ ಹೆದರಿ ತಲೆ ತಗ್ಗಿಸಿ ಹೋಗಿದ್ದೆ. ಅಮ್ಮ ಮನೆಯಲ್ಲೇ ಇದ್ದರು. ಅಮ್ಮನ ಮುಖ ನೋಡದೇ ಶಾಲೆ ಚೀಲ ಗೋಡೆಗೆ ನೇತಾಡಿಸಿ ಕೈಕಾಲು ತೊಳೆದು ಬಂದೆ. ಅಮ್ಮ ಯಾವ ರೀತಿಯಲ್ಲಿ ಬೈಯ್ಯಬಹುದು ಅಂತ ನಿರೀಕ್ಷೆಯಲ್ಲಿದ್ದವನಿಗೆ ಅಮ್ಮ ಹತ್ತಿರ ಬಂದು ದನಿಗಳ ಮನೆಯಿಂದ ತಂದ ತಿಂಡಿಯಷ್ಟನ್ನು ಕೈಗೆ ಇತ್ತರು.  ಹಸಿವಾಗ್ತಾ ಇದೆಯಾ? ದೋಸೆ ಮಾಡಿಕೊಡಲಾ?  ಅಂತ ಕೇಳಿದಳು. ಅದೆಲ್ಲ ನಿತ್ಯ ವಾಡಿಕೆಯ ಮಾತುಗಳು. ಏನೂ ಆಗಿಲ್ಲವೆಂಬಂತೆ ಅಮ್ಮ ಮಾತನಾಡುತ್ತಿದ್ದರು. ನನ್ನ ಆತಂಕ ಹಾಗೇ ಇತ್ತು. ಕೊನೆಯಲ್ಲಿ ಕೇಳಿದರು

 “ಪೆನ್ನು ಚೆನ್ನಾಗಿತ್ತಾ. ಬಾಬಣ್ಣ ಚೆಂದ ಉಂಟು ಅಂತ ಕೊಟ್ಟ. “

ನನ್ನ ಧ್ವನಿ ಗಂಟಲಲ್ಲೇ ಉಳಿದು ಬಿಟ್ಟಿತು. ಅಮ್ಮನ ಸೊಂಟ ತಬ್ಬಿ ಜೋರಾಗಿ ಅತ್ತು ಬಿಟ್ಟೆ. ಇನ್ನೆಲ್ಲಿ  ಅಮ್ಮ ಬೈದು ಬಿಡುವಳೋ  ಎಂಬ ಆತಂಕ. ಅಮ್ಮ ತಲೆಯಲ್ಲಿ ಕೈಯಾಡಿಸಿ ಹೇಳಿದರು...

“ಅಳ್ಬೇಡ ಕುಮಾರೂ. ಯಾಕಳ್ತಿಯಾ? ಸುಳ್ಳು ಹೇಳಿದಿಯಾ ಅಂತ ನನಗೆ ಸಿಟ್ಟಿಲ್ಲ. ಇಷ್ಟು ದಿನ ನಿನ್ನ ಆಶೆ ನಾನು ಕಾಣಲೇ ಇಲ್ಲವಲ್ಲ? ಇರಲಿ ಬಿಡು. ಇನ್ನು ಹೀಗೆ ಮಾಡಬೇಡ. ಹಾಗೆಲ್ಲ ಅಪ್ಪ ಅಮ್ಮನಲ್ಲಿ ಸುಳ್ಳು ಹೇಳ್ಬಾರದು. ಕೆಟ್ಟ ಮಕ್ಕಳು ಅಂತ ಹೇಳ್ತಾರೆ. “

ಎಲ್ಲರಂತಲ್ಲ ನನ್ನಮ್ಮ ಅಂತ ಅನ್ನಿಸಿದ್ದು ಅಂದಿನಿಂದ. ಪುಟ್ಟ ಬಾಲಕನಾದರೂ ಸೀಮಿತವಾದ ಬಾಲ ಬುದ್ಧಿ ಅಂದೇ ತೀರ್ಮಾನ ಮಾಡಿತ್ತು. ನನ್ನಮ್ಮ ಪಾಪ . ನಾನು ಆಕೆಯಲ್ಲಿ ಸುಳ್ಳು ಹೇಳಬಾರದು ಅಂತ.

ಯಾರದೋ ಮನೆಗೆ ತೋಟಕ್ಕೆ ಅಡಿಗೆಗೆ  ಕೆಲಸಕ್ಕೆ ಹೋಗುವ ನನ್ನಮ್ಮ, ಅದೆಷ್ಟು ಕಷ್ಟದಿಂದ ಆ ಪೆನ್ನು ತಂದಿರಬಹುದು? ಎರಡು ದಿನ ಊಟಕ್ಕೆ ಆಗುವಷ್ಟು ಅಕ್ಕಿ ತರಬಹುದಿತ್ತು. ಆದರೂ ಅಮ್ಮ ಯೋಚಿಸದೇ ತಂದು ಕೊಟ್ಟಿದ್ದಳು. ಅದೂ ಶಾಲೆಗೆ ಬಂದು ಕೊಡಬೇಕಿದ್ದರೆ. ಛೇ ಇಂತಹ ಅಮ್ಮನಲ್ಲಿ ಸುಳ್ಳು ಹೇಳಿದೆನಲ್ಲಾ?  ಬಹಳ ದಿನ ಕಳೆದು ದೊಡ್ಡವನಾದಾಗ ಇದು ಬಹಳ ದೊಡ್ಡ ವಿಚಾರವಾಗಿ ಕಂಡಿತ್ತು. ಇಂತಹ ಹಲವು ಘಟನೆಗಳು ನನ್ನ ಮತ್ತು ನನ್ನಮ್ಮನ ನಡುವೆ ನಡೆದಿತ್ತು. ನನ್ನಮ್ಮ ಎಂದಿಗೂ ನನ್ನಾಶೆಗೆ ಎದುರು ಮಾತನಾಡಿಲ್ಲ. ಬದಲಿಗೆ ತನ್ನ ಗುಣಗಳಿಂದಲೇ ನನ್ನಾಶೆಗೆ ನಿಯಂತ್ರಣ ರೇಖೆಯನ್ನು ಎಳೆದು ಬಿಡುತ್ತಿದ್ದಳು. ನಾನು ನನ್ನ ಹಲವು ಆಶೆಗಳನ್ನು ಹತ್ತಿಕ್ಕತೊಡಗಿ ಬುದ್ದಿವಂತ ಅಂತ ತೋರಿಸಿಕೊಡುತ್ತಿದ್ದೆ.

ಎಲ್ಲ ಅಮ್ಮಂದಿರು ಹಾಗಿದ್ದರೂ, ನನ್ನಮ್ಮನ ಬಗ್ಗೆ ನನಗೆ ಹೇಳಿಕೊಳ್ಳಲು ಬಹಳಷ್ಟಿತ್ತು. ಅಪ್ಪ ತೀರಿ ಹೋದ ನಂತರ ಏಕಾಂಗಿಯಾಗಿಯೇ ಅಮ್ಮ ನನ್ನನ್ನು ಸಾಕಿದ್ದರು . ಈ ಶಾಂತಮ್ಮನಿಗೆ  ನಾನೊಬ್ಬನೇ ಮಗ. ಹಾಗೆ ನೋಡಿದರೆ ನನಗೆ ಅಪ್ಪನನ್ನು ನೋಡಿದ ನೆನಪೇ ಇಲ್ಲ. ಬುದ್ದಿ ಬಂದಾಗಿನಿಂದ ಅಪ್ಪ ಅಮ್ಮ ಎಲ್ಲ ಒಂದೇ. ಅಪ್ಪ ಎಂಬ ಹಾಗೊಂದು ಪಾತ್ರದ ಪರಿಚಯವಾದದ್ದೇ ಶಾಲೆಗೆ ಬಂದ ಮೇಲೆ. ಆದರೂ ಅಪ್ಪನಿಲ್ಲದ ಕೊರತೆ ಅಮ್ಮ ಎಂದೂ ಉಂಟು ಮಾಡಿಲ್ಲ. ಹರಿದ ತೇಪೆ ಹಾಕಿದ ಸೀರೆ ಅದು ಹೇಗೆ ಉಟ್ಟರೂ ಹರಿದ ಲಂಗದ  ಅಂಚು ಮೊಣಕಾಲ ಕೆಳಗೆ ಕಾಣುತ್ತಿತ್ತು. ತೋಟದ ಕೆಲಸ ಹಟ್ಟಿ ಕೆಲಸ ಮಾಡುವಾಗ ಬಟ್ಟೇ ಎತ್ತಿಕಟ್ಟಿ ಅಮ್ಮ ಗಂಡಾಳಿನಂತೆ ದುಡಿಯುತ್ತಿದ್ದರು. ಬಹಳ ಕಠಿನ ಪರಿಶ್ರಮಿ ನನ್ನಮ್ಮ.  ಅಮ್ಮ ಎಂದೂ ಸಡಗರದಿಂದ ಹೊರಟದ್ದು ನೋಡಿದ್ದು ಕಮ್ಮಿಯೇ. ಎಲ್ಲೋ ವರ್ಷಕ್ಕೆ ದೇವಸ್ಥಾನದ ಉತ್ಸವಕ್ಕೆ ಹೊಸ ಸೀರೆ ಉಟ್ಟು ಹೋಗುತ್ತಿದ್ದಳು. ಹೊಸ ಸೀರೆ ಬಹಳ ವರ್ಷಗಳ ವರೆಗೂ ಅದು ಹೊಸ ಸೀರೆಯಾಗಿ ಇತ್ತು. ಉಟ್ಟರೆ ತಾನೆ ಹಳೆಯದಾಗುವುದು?

ಜೀವನ ಪರ್ಯಂತ ನನಗಾಗಿ ಬದುಕಿದ ಅಮ್ಮ, ನನ್ನ ಬದುಕಲ್ಲದೇ ಆ ಅಮ್ಮ ಬೇರೆ ಎನು ಕಂಡಿರಬಹುದು? ನನ್ನ ನಗು ಸಂತೋಷವಲ್ಲದೇ ಬೇರೆ ಯಾವ ಸಂತೋಷವನ್ನೂ ಆಕೆ ಅನುಭವಿಸಿದ್ದು ಕಾಣೆ. ಆದರೆ....

ದಚ್ಚು ಮಾವ ಮತ್ತು ನಾನು ಇಬ್ಬರು ಮಾತ್ರ ಇಂದು ತರಕಾರಿ ಹೆಚ್ಚುತ್ತಿದ್ದೆವು. ಯಾಕೋ ನನ್ನಮ್ಮನ ಮಾತು ಬಂತು. ಅಮ್ಮ ಒಬ್ಬರೇ ಬೇಗ ಹೋಗಬೇಕು ಎಂದಿದ್ದೆ. ದಚ್ಚು ಮಾವ ಮೆತ್ತಗಿನ ಸ್ವರದಲ್ಲಿ ಹೇಳಿದರು. “ ವಿಶ್ವಣ್ಣಾ...ನಿನ್ನಪ್ಪ ನಾನು ಬಹಳ ದೋಸ್ತಿ ಗೊತ್ತಾ.?”

ಹೌದು ಇದೇನು ಹೊಸ ಮಾತಲ್ಲ. ದಚ್ಚುಮಾವ ಬಹಳಷ್ಟು ಸಲ ಹೇಳುತ್ತಿದ್ದರು. ಹಾಗಾಗಿಯೇ ನನ್ನಲ್ಲಿ ಒಂದು ರೀತಿಯ ಸಲುಗೆ ಅಕ್ಕರೆ ಎಲ್ಲವೂ ಇತ್ತು.

ಮತ್ತು ಮುಂದುವರೆಸಿ ಹೇಳಿದರು. “ನಿನ್ನಪ್ಪನಿಗೆ ಎರಡು ಮದುವೆಯಾಗಿತ್ತು. ಈಗ ನಿನ್ನಮ್ಮ ನಿನ್ನಪ್ಪನಿಗೆ ಎರಡನೇ ಹೆಂಡತಿ. ಮೊದಲ ಹೆಂಡತಿ ಸಾವಿತ್ರಿ ತೀರಿಹೋದ ಮೇಲೆ ಇವರನ್ನು ಮದುವೆಯಾಗಿದ್ದು. ” ದಚ್ಚು ಮಾವನ ಸ್ವಭಾವೇ ಹಾಗೆ. ಕೆಲವೊಮ್ಮೆ ಬಹಳ ವೈಯಕ್ತಿಕ ವಿಚಾರಗಳಿಗೆ ಕೈ ಹಾಕಿ ಮಾತನಾಡಿಬಿಡುತ್ತಾರೆ.

ಆದರೆ ನೋಡದೇ ಇದ್ದ ನನ್ನ ಅಪ್ಪನಿಗೆ ಅಮ್ಮ ಎಷ್ಟನೇ ಹೆಂಡತಿಯಾಗಿದ್ದರೂ ನಾನು ಅದನ್ನು ಯೋಚಿಸುವ ಹಂತ ದಾಟಿದೆ. ಈಗ ಅಮ್ಮನಿಗೆ ವಯಸ್ಸಾಗಿದೆ. ಮತ್ತೆ ಅಪ್ಪ ಬದುಕಿಲ್ಲ. ಆದರೆ ದಚ್ಚು ಭಟ್ಟರು ಅಲ್ಲಿಗೇ ನಿಲ್ಲಿಸಲಿಲ್ಲ.
“ ನೀನು ಮೊದಲ ಹೆಂಡತಿ ಸಾವಿತ್ರಿಯ ಮಗ. “

ಒಂದು ಸಲ ಆಯೋಮಯವಾದ ಅನುಭವ. ದಚ್ಚು ಮಾವ ತಮಾಷೆಗಾದರೂ ಹೀಗೆಲ್ಲ ಮಾತನಾಡುವವರಲ್ಲ. ಮಾವ ಅಂತ ನಾನು ಕರೆಯುತ್ತೇನೆ. ಆದರೆ ಯಾವುದೇ ಸಂಬಂಧ ನನಗೆ ತಿಳಿದಂತೆ ಇಲ್ಲ. ಈ ಮಾವ ಏನು ಹೇಳುತ್ತಿದ್ದಾರೆ?

“ಹೌದು, ವಿಶ್ವಣ್ಣ, ಇದು ಈಗ ಯಾರಿಗೂ ಗೊತ್ತಿಲ್ಲ. ಗೊತ್ತಿದ್ದವರು ಯಾರೂ ಸಹ ಈಗ ಬದುಕಿಲ್ಲ. ಮತ್ತೆ ಇಂಥದ್ದೆಲ್ಲ ಈಗ ದೊಡ್ಡ ಸಂಗತಿಯಲ್ಲ ಬಿಡು. ಆದರೆ ನಿನ್ನಪ್ಪ ನೀನು ಚಿಕ್ಕ ಮಗುವಾಗಿರುವಾಗಲೇ ಈ ಶಾಂತಮ್ಮನನ್ನು ಮದುವೆಯಾಗಿದ್ದರು.”

“ನಿನ್ನಮ್ಮ ಯಾವಾಗ ತೀರಿ ಹೋದರು? ನಿನ್ನಪ್ಪ ಯಾಕೆ ಎರಡನೇ ಮದುವೆಯಾದರು? ಅದು ಯಾವುದೂ ಗೊತ್ತಿಲ್ಲ. ಶಾಂತಮ್ಮನ ಮದುವೆಯಾಗಿದ್ದೇ ನನಗೆ ಗೊತ್ತಾಗಿದ್ದು ಕೆಲವು ಸಮಯಗಳಾದಮೇಲೆ. ಆದರೆ ಅವರಲ್ಲೇ ಕೇಳೋಣವೆಂದರೆ ಆನಂತರ ಅವರು ಹೆಚ್ಚು ದಿನ ಬದುಕಿ ಉಳಿಯಲಿಲ್ಲ”

ನನ್ನ ಕೌಟುಂಬಿಕ ಸ್ಥಿತಿ ಇಷ್ಟೊಂದು ನಿಗೂಢವೇ? ನನಗೆ ಅಚ್ಚರಿಯಾಗಿತ್ತು. ದಚ್ಚುಮಾವನ ಬದಲು ಬೇರೆ ಯಾರು ಹೇಳಿದ್ದರೂ ನನ್ನನ್ನು ಅವಹೇಳನ ಮಾಡುವುದಕ್ಕೆ ಹೇಳುತ್ತಿದ್ದಾರೆ ಎಂದು ಕೊಳ್ಳುತ್ತಿದ್ದೆ. ಕೆಲವರು ಇರುತ್ತಾರೆ. ನಾವೆನು ಮಾಡುತ್ತಿದ್ದೇವೆ ಎಂದು ತಿಳಿದುಕೊಳ್ಳುವುದಕ್ಕಿಂತಲೂ ಮನೆಯವರು ಏನು ಮಾಡುತ್ತಾರೆ ಎಂದು ತಿಳಿಯುವ ಕೆಟ್ಟ ಕುತೂಹಲ. ಅದರಲ್ಲೂ ಹೆಣ್ಣು ಮಕ್ಕಳಿದ್ದರೆ ಕೇಳುವುದೇ ಬೇಡ.  ಆದರೆ ದಚ್ಚು ಮಾವ ಹಾಗಲ್ಲ.  ಅಂತಹ ಗಾಸಿಪ್ ವಿಚಾರಗಳಲ್ಲಿ ಅವರು ನಿರಾಸಕ್ತರು. ಕೊಂಕು ಮತ್ಸರ ಚುಚ್ಚು ಮಾತು ಯಾವುದೇ ಇಲ್ಲದೆ ಸಹಜವಾಗಿ ಹೇಳಿದ್ದರು.

ದಚ್ಚು ಮಾವನ ಮಾತುಗಳು ಕೇಳಿದಾಗ ನನ್ನಮ್ಮನ ಸುತ್ತ ಭಾವನೆಗಳು ಸುತ್ತತೊಡಗಿದವು. ಅಮ್ಮನನ್ನು ಸುತ್ತಿಕೊಂಡು ಇನ್ನು ಯಾವ ನೆನಪುಗಳೆಲ್ಲಾ ಇವೆ ಎಂದು ಮನಸ್ಸು ಗತಕಾಲದ ಆಳಕ್ಕೆ ಇಳಿಯುತ್ತಿತ್ತು. ಒಂದೊಂದರಂತೆ ಘಟನೆಗಳು ನೆನಪಿನಾಳದಿಂದ ಎದ್ದು ಬರತೊಡಗಿದವು. ಪ್ರತಿಯೊಂದು ಘಟನೆಗಳೂ ನೆನಪುಗಳೂ ಭಾವನಾತ್ಮಕವಾಗಿ ಹೃದಯಸ್ಪರ್ಶಿಯಂತೆ ಭಾಸವಾಗತೊಡಗಿದವು. ಹೌದು ಅಮ್ಮನೊಂದಿಗೆ ಕಳೆದ ಘಟನೆಗಳು ನೆನಪಿಸಿಕೊಂಡಂತೆ ಈ ಅಮ್ಮ ಅಮ್ಮನಲ್ಲ ಎಂಬ ವಾಸ್ತವವನ್ನು ನಂಬುವುದಕ್ಕೆ ಸಾಧ್ಯವಿಲ್ಲದೇ  ಕಳವಳಿಸಿತ್ತು.

ನನ್ನ ಪ್ರತಿಯೊಂದು ಬೆಳವಣಿಗೆಯ ಹಂತದಲ್ಲೂ ಮಲತಾಯಿ ಎಂಬ ಭಾವನೆ ಸೋಕದಂತೆ ಮಮತೆಯ ಸ್ಪರ್ಶವನ್ನು ನೀಡಿದಾಕೆ ಅಮ್ಮನಾಗಿರದೇ ಇರುವುದಕ್ಕೆ ಸಾಧ್ಯವೇ? ಹೇಗೂ ಇರಲಿ ಜೀವನ ಇಲ್ಲಿವರೆಗೆ ಬಂದಾಗಿದೆ. ಇನ್ನು ಇದೆಲ್ಲ ಸ್ವಾರಸ್ಯವಿಲ್ಲದ, ಪ್ರಾಮುಖ್ಯವಲ್ಲದ  ವಿಚಾರಗಳಂತೆ ಅವನ್ನು ನಿರ್ಲಕ್ಷಿಸಿಬಿಡಬೇಕು ಎಂದು ಭಾವಿಸಿದೆ. ನೇರವಾಗಿ ಮನೆಗೆ ಬಂದು ರಾತ್ರಿ ಬಹಳ ತಡವಾಗಿದ್ದರಿಂದ ಚೆನ್ನಾಗಿ ನಿದ್ದೆ ಮಾಡಿದೆ.

ಮರುದಿನ ಎಂದಿನಂತೆ  ನಿದ್ದೆ ಬಿಟ್ಟು ಎದ್ದಾಗ ಅಮ್ಮ ಸಹಜವಾಗಿ ಆಡುಗೆ ಕೋಣೆಯಲ್ಲಿದ್ದವರು ಕೂಗಿದರು. “ ನಿನ್ನೆ ಬರುವಾಗ ಎಷ್ಟು ಹೊತ್ತಾಗಿತ್ತು ಮಾರಾಯ? ಕಾದು ಕಾದು ಮಲಗಿದ್ದೆ.” 

ನಾನು ನಿರುತ್ಸಾಹದಲ್ಲೇ “ ತುಂಬಾ ತಡವಾಗಿತ್ತಮ್ಮ. ನಿನಗೆ ಒಳ್ಳೆ ನಿದ್ದೆ ಬಂದಿತ್ತು”  ಎಂದು ಅಲ್ಲೇ ಅಡುಗೆ ಕೋಣೆಯ ತಿಟ್ಟೆಯಲ್ಲಿ ಕುಳಿತೆ.

ದಚ್ಚು ಮಾವ ಹೇಳಿದ ವಿಷಯ ಪ್ರಸ್ತಾಪಿಸಲೇ ಅಂತ ಹತ್ತೆಂಟು ಸಲ ಯೋಚಿಸಿದೆ. ಕೊನೆಗೆ ಅಮ್ಮನಲ್ಲಿ ಹೇಳಿಕೊಂಡದ್ದರಲ್ಲಿ ಏನಿದೆ?   ನಮ್ಮಲ್ಲಿ ಅಂತಹ ಮುಚ್ಚು ಮರೆ ಯಾವುದೂ ಇರಲಿಲ್ಲ. 

ಬಿಸಿ ಬಿಸಿ ಚಹ ಮಾಡಿದ ಅಮ್ಮ ಹತ್ತಿರವೇ ಕುಳಿತರು. ಲೋಟದಿಂದ ಲೋಟಕ್ಕೆ ಚಹವನ್ನು ಧಾರೆ ಎರೆಯುತ್ತಾ  ಇದ್ದಾಗ ನಾನು ಮೆತ್ತಗೆ ಹೇಳಿದೆ.

“ಅಮ್ಮ ನಿನ್ನೆ ದಚ್ಚು ಮಾವ ಬಂದಿದ್ದರು. “
ಆಕೆ ಒಂದು ಸಲ ವಿಚಿತ್ರ ಎಂಬಂತೆ ನೋಡಿದಳು. “ ಇಷ್ಟು ದಿನ ಎಲ್ಲಿದ್ದರಪ್ಪಾ? ನೋಡದೇ ತುಂಬ ದಿನ ಆಯ್ತು” ಸಹಜವೆಂಬಂತೆ ನುಡಿದಳು.

            ನಾನು ನೇರವಾಗಿ ವಿಷಯ ಪ್ರಸ್ತಾಪಿಸಿದೆ. “ ಅಮ್ಮ , ದಚ್ಚು ಮಾವ ಒಂದು ವಿಷಯ ಹೇಳಿದರು. ನನ್ನ ಅಪ್ಪನಿಗೆ ಎರಡು ಮದುವೆ. ಮೊದಲ ಪತ್ನಿ, ಅವರ ಮಗ ನಾನು..ನೀನು ಚಿಕ್ಕಮ್ಮ ಅಂತ “  ಅಮ್ಮ ಮೌನಿಯಾದರು. ಎನೋ ಯೋಚಿಸುತ್ತಿದ್ದರು. ದುಗುಡವೇನಾದರೂ ಇದೆಯೋ ಅಂತ ಅವಲೋಕಿಸಿದೆ.

            ಛೇ ಇಲ್ಲವೇ ಇಲ್ಲ. ಇದೀಗ ಇಳಿ ವಯಸ್ಸಿನಲ್ಲಿ ಯೋಚಿಸುತ್ತಾ ದುಗುಡವನ್ನು ಅನುಭವಿಸುವಷ್ಟು ಅಲ್ಪ ಚಿಂತಕಳಲ್ಲ ಅಮ್ಮ.

            ಮತ್ತೂ ನಾನು ಕೇಳಿದೆ. “ ನೀನು ಎರಡನೇ ಮದುವೆ ಯಾಗಿದ್ದಂತೆ. ಇಷ್ಟು ವರ್ಷ ಆದರೂ ನಾನು ಕೇಳೂ ಇಲ್ಲ. ನೀನು ಹೇಳು ಇಲ್ಲ.”

            ಮುಖ್ಯವಾಗಿ ಅದರ ಅವಶ್ಯಕತೆ ನಮಗಿಬ್ಬರಿಗೂ ಬಂದಿಲ್ಲ. ಬಹುಶಃ ನನ್ನಮ್ಮನಿಗೆ ಅದೊಂದು ಪ್ರಾಮುಖ್ಯತೆ ವಿಷಯ ಅಂತ ಅನ್ನಿಸಲೇ ಇಲ್ಲ. ಇಲ್ಲವಾದರೆ ಈವರೆಗೂ ಮಲತಾಯಿಯ  ಒಂದಿಷ್ಟು ಭಾವವನ್ನು ತೋರಿಸದ ಆಕೆ ಎಷ್ಟು ಸ್ಥಿತ ಪ್ರಜ್ಞಳು ಎಂದಸಿತ್ತು. ಈಗ ನಾನು ಕೇಳಿದುದರಲ್ಲಿ ಸಹಜವಾಗಿ ನಿರ್ಲಿಪ್ತಳಾಗಿಯೇ ಇದ್ದಳು. 

            ಹತ್ತಿರ ಕುಳಿತ ಅಮ್ಮನ ಕೈಯಿಂದ ಚಹದ ಲೋಟ ತೆಗೆದು ಬದಿಯಲ್ಲಿಟ್ಟೇ. ಅಮ್ಮನಿಗೆ ನೋವಾಗಬಾರದು ಎಂಬ ಕಾಳಜಿಯೋ ಏನೋ ಎರಡು ಕೈಯಿಂದ ಅಮ್ಮನನ್ನು ಬಾಚಿ ತಬ್ಬಿಕೊಂಡೆ. ವಿಷಯ ತಿಳಿದರು ಈ ಅಮ್ಮನ ಸ್ಥಾನ ಚ್ಯುತಿಯಾಗಿದೆ ಎಂದು ಈಕೆ ತಿಳಿದುಕೊಳ್ಳಬಾರದು. ಈವರೆಗೂ ಇಲ್ಲದ ಅಂತರ ಇನ್ನು ಯಾಕೆ? ಆಕೆ ಅಂತಹ ಅಪರಾಧವನ್ನು ಏನು ಮಾಡಲೇ ಇಲ್ಲ.

             ಅಮ್ಮನ ಶಿಥಿಲವಾದ ದೇಹ ನನ್ನ ತೊಳಲ್ಲಿ ಬಂದಿಯಾಗಿತ್ತು. ಹಾಗೇ ಆಕೆಯೂ ನನ್ನ ಕೈಯನ್ನು ಸುತ್ತು ಬಳಸಿ ನನ್ನ ಬೆನ್ನ ಮೇಲೆ ಆಡಿಸಿದಳು. ನಂತರ ನಿಧಾನವಾಗಿ ಹೇಳಿದಳು

“ಕುಮಾರೂ...”

“ನಿನ್ನಪ್ಪನಿಗೆ ಮೊದಲ ಹೆಂಡತಿ ನಿನ್ನಮ್ಮನೇ ಸತ್ಯ. ಆದರೆ...ನಾನು ನಿನ್ನಪ್ಪನ ಎರಡನೇ  ಹೆಂಡತಿಯಲ್ಲ.”

“ಮತ್ತೊಂದು ಗೊತ್ತಾ, ನನಗೂ ನಿನ್ನಪ್ಪನಿಗೂ ಮದುವೆಯೇ ಆಗಿಲ್ಲ. ಲೋಕದ ಕಣ್ಣೆ ಹಾಗೆ. ಏನೋ ಕಾಣುತ್ತದೆ. ಏನೋ ಯೋಚಿಸುತ್ತದೆ. ನಿನ್ನಪ್ಪ ನನ್ನನ್ನು ಮದುವೆಯಾಗೂ ಇಲ್ಲ. ಹಾಗಂತ ಅವರೆಂದೂ ನನ್ನನ್ನು ಆದೃಷ್ಟಿಯಲ್ಲಿ ಕಂಡವರೇ ಅಲ್ಲ. ಅವರಿಗೆ ಹೆಂಡತಿಯಾಗುವಷ್ಟು ಯೋಗ್ಯತೆಯು ನನಗಿಲ್ಲ ಬಿಡು. ”

“ ಕುಮಾರು ನಿನ್ನಪ್ಪ, ದೊಡ್ಡ ಪುಣ್ಯವಂತ ಕಣಪ್ಪಾ. ಎಂತಹಾ ಯೋಗ್ಯತಾವಂತ?  ಆ ಮನುಷ್ಯನನ್ನು ನಿತ್ಯ ಕಾಲು ತೊಳೆದು ನೀರು ಕುಡಿಬೇಕಪ್ಪ. “

“ ಎನೂ ಇಲ್ಲದೇ ಬೀದಿಗೆ ಬಿದ್ದಿದ್ದೆ. ನನಗೆ ಆಸರೆ ಕೊಟ್ಟರು. ಅದೆಷ್ಟೋ ಸಲ ಹೇಳಿದ್ದರು. ಲೋಕ ಏನೇ ತಿಳಿದುಕೊಳ್ಳಲಿ. ನೀನು ನನಗೆ ಹೆಂಡತಿಯಲ್ಲ. ನನ್ನ ಹೆಂಡತಿ ಸಾವಿತ್ರಿಯೆ. ನಿನಗೆ ಆಸರೆ ಕೊಡುವ ಉದ್ದೇಶ ಅಷ್ಟೆ. ನನ್ನ ಮಗುವಿಗೆ ತಾಯಿಯಾಗು.   

“ ಅವರು ಬೇರೇನೂ ನನ್ನಿಂದ ಬಯಸಿಲ್ಲ. ದೇವತಾ ಮನುಷ್ಯ.”

“ನಿನ್ನಮ್ಮನ ಬಗ್ಗೆ ಅದೆಷ್ಟು ಮೋಹ ಇತ್ತು. ನಿನ್ನಮ್ಮನ ಅಗಲಿಕೆ ಅವರಿಂದ ಸಹಿಸಿಕೊಳ್ಳುವುದು ಸಾಧ್ಯವಾಗಲೇ ಇಲ್ಲ. ಅದೇ ನೆನಪಿನಲ್ಲಿ ಕೊನೆಯಾದರು. ಆನಂತರ ಇದು ನಿನಗೆ ಹೇಳಬೇಕು ಅಂತ ಅನ್ನಿಸಲಿಲ್ಲ. ನೀನಿನ್ನು ಸಣ್ಣ ಮಗು. ನಿನಗೆಲ್ಲಿ ಅರ್ಥವಾಗಬೇಕು. ನಂತರ ನಿನ್ನಲ್ಲಿ ಹೇಳುವಷ್ಟು ದೊಡ್ಡ ವಿಷಯ ಅಲ್ಲ ಅಂತ ಅನಿಸಿತು. ಸ್ವಲ್ಪ ನನ್ನ ಸ್ವಾರ್ಥವೂ ಇತ್ತು ಹೇಳು. ಯಾರೂ ಇಲ್ಲದ ನನಗೆ ನೀನು ಇಲ್ಲವಾದರೆ...?? ಈಗ ನಿನ್ನನ್ನು ಚೆನ್ನಾಗಿ ಬಲ್ಲೆ. ಹಾಗೆ ಹೇಳ್ತಾ ಇದ್ದೇನೆ. ನಾನು ನಿನ್ನ ಅಮ್ಮನಲ್ಲ ಆದರೂ  ನನಗೆ ಹಾಗನ್ನಿಸುವುದೇ ಇಲ್ಲ.”

            ಹೌದಲ್ಲವೇ ? ಬಹುತೇಕ ಸಂಬಂಧಗಳು ದೇಹದಿಂದಲೇ ಅಳೆಯಲ್ಪಡುತ್ತವೆ. ಆದರೆ ಸಂಬಂಧಗಳು ಬಂಧಿಸಲ್ಪಡುವುದು ಹೃದಯದಿಂದ. ಸನ್ಮನಸ್ಸಿನ ವಿಶ್ವಾಸದಿಂದ.

            ಆವರೆಗೆ ಮನಸ್ಸಿಗೆ ಅಂಟಿದ ದುಗುಡವೆಲ್ಲ ದೂರಾಯಿತು. ಹಾಗೇ ಅಮ್ಮನಲ್ಲದ ನನ್ನಮ್ಮನನ್ನು  ತೋಳಿಂದ ಮತ್ತಷ್ಟು ಬಿಗಿಯಾಗಿಸಿದೆ. ಅಮ್ಮನ ಕೈ ಹಾಗೇ  ಬೆನ್ನ ಮೇಲೆ ಹರಿದಾಡುತ್ತಿತ್ತು. ಈ ನನ್ನ ಅಮ್ಮ ಅಮ್ಮನಲ್ಲ. ಆಕೆ ದೇವತೆ.

********************