Sunday, June 30, 2019

ಶ್ಯಾಮಾಂಜಲಿ


ಮನೆಯ ಒಳಗೆಮಂಚದಲ್ಲಿವಿರಮಿಸಿ  ಯಾವುದೋ ಪುಸ್ತಕವನ್ನು ಓದುತ್ತಿದ್ದವನಿಗೆ, ಅದುಯಾವಾಗ ನಿದ್ದೆ ಹತ್ತಿತೋ ತಿಳಿಯದು‌. ಮೌನದ ನಿರಾಳತೆಯನ್ನು ಅನುಭವಿಸುತ್ತದ್ದ ಮನೆಯೊಳಗೆ ಒಮ್ಮಿಂದೊಮ್ಮೆಲೇ ಕಲರವ ಲಕಲಕಿಸಿತು.  ನಿದ್ದೆಬಿಟ್ಟಕಣ್ಣು ಕಿವಿಒಮ್ಮೆ ಚುರುಕಾದರೆ ನಂತರ ಸಹಜವಾಗಿ ಯಾರೋ ಆತಿಥಿ ಇರಬೇಕೆಂದು ಬಗೆದು ನಿದ್ದೆಗೆ ಜಾರಿದರೆ ಹಿಂದೆಯೇ ಆಕೆ ಬಂದು ಎಬ್ಬಿಸಿದಳು." ಬನ್ನಿ, ಅಲ್ಲಿ ಮಾವ ಬಂದಿದ್ದಾರೆ." ಎಂದು ಪಿಸಗುಟ್ಟಿದಳು. ಆಕೆಯ ಪಿಸುನುಡಿಗೆ ಎಚ್ಚರವಾಗಿ ನಿದ್ದೆ ಬಿಟ್ಟೆದ್ದು "ಯಾರು?" ಅಂದೆ.   ಅಕಳಿಸುತ್ತಾ ಎದ್ದು ಹೊರ ಬಂದರೆ, ಮನೆಯವರೆಲ್ಲ ಸುತ್ತು ಗಟ್ಟಿಕುಳಿತಿದ್ದರು. ಸಣಕಲು ದೇಹದ ನೀಳ ತೋಳಿನಅಂಗಿ ಧರಿಸಿದ ಮಾವ ನಡುವೇ ಕುಳಿತಿದ್ದರು. ಅವರು ದೊಡ್ಡದಾಗಿ ಮಾತನಾಡುತ್ತಿದ್ದರೆ ಉಳಿದವರೆಲ್ಲ ಮುಖ ಕಿವಿಯಗಲಿಸಿ ಕೇಳುತ್ತಿದ್ದರು. ಆಕರ್ಷಕ ಮಾತುಗಾರಿಕೆ ಸರಳ ಸಜ್ಜನ ನಡವಳಿಕೆ ಮೊದಲ ನೋಟಕ್ಕೆ ಅನುಭವಕ್ಕೆಬಂತು. ಹಾಸ್ಯ ಮಿಶ್ರಿತ ಮಾತು, ನಡುವೆ ಆತ್ಮೀಯ ಬೈಗುಳ, ಗದರುವಿಕೆಒಮ್ಮಿಂದೊಮ್ಮೆಲೇ ತಾರಕಕ್ಕೇರಿಮಾತನಾಡುವ ವಿಶಿಷ್ಟ ಶೈಲಿ, ಎಲ್ಲಾ ಒಂದು ವಿಲಕ್ಷಣ ಆಕರ್ಷಕ ವ್ಯಕ್ತಿತ್ವ. ಎಲ್ಲರನ್ನೂ ಹಸರು ಹಿಡಿದು ಕರೆದು ಮಾತನಾಡುತ್ತಿದ್ದ ಅವರ ನನಪಿನ ಕಾಳಜಿ  ಅಗ ಅದ್ಭುತ ಎನಿಸಿತ್ತು. ನನ್ನ ಪರಿಸರದಲ್ಲಿ ಹೀಗಿರುವಹಿರಿಯ ಮಂದಿಗಳು ಹೀಗಿರುತ್ತಿರಲಿಲ್ಲ. ಅಥವಾ ನಾನು ಕಾಣುವುದು ಅಪರೂಪವಾಗಿತ್ತು.
ಶ್ರೀ ಶಾಮ ಸುಂದರ ಭಟ್ ತಲಮಕ್ಕಿ

ಆಕೆ ಹತ್ತಿರ ನಿಂತು ಪಿಸುಗುಟ್ಟಿದಳು "ಬೆಳಗಾಂ ಮಾವ."
ಹೋ..ಮನದೊಳಗೇ ಉದ್ಗರಿಸಿದ್ದೆ.

ಹೌದು, ಬೆಳಗಾಂ ಮಾವ, ಅದುವರೆಗೂ ಆಕೆ ಹೇಳುವ ಸಂಗತಿಗಳಲ್ಲಿ ಆಗಾಗ ನುಸುಳಿ ಬರುತ್ತಿದ್ದ ಅದ್ಭುತ ಪಾತ್ರ. ಅದರಲ್ಲಿನನ್ನ ಊಹಾ ಚಿತ್ರಣದಲ್ಲಿ ಗಾಢವಾದದ್ದು ಬ್ಯಾಂಕ್ ಮ್ಯಾನೇಜರ್ ಎಂಬ ಒಕ್ಕಣಿಕೆ.

ಬಾಲ್ಯದಿಂದಲೇ ಬ್ಯಾಂಕ್ ವ್ಯಕ್ತಿಗಳು ಎಂದರೆ ಅಸಾಮಾನ್ಯ ವ್ಯಕ್ತಿಗಳು ಎಂಬ ಕಲ್ಪನೆ.  ಅದು ನನ್ನಂತಹ ಸಾಮಾನ್ಯರಿಗೆ ಸಂಪರ್ಕ ಸಾಧ್ಯವಾಗದೇ ಇದ್ದದ್ದು.ಅದಕ್ಕೆ ಕಾರಣ ಎಪ್ಪತ್ತರ ದಶಕದಲ್ಲಿ ನಮ್ಮ ಹಳ್ಳಿಯಲ್ಲಿ ತೆರೆದುಕೊಂಡ ಸಿಂಡಿಕೇಟ್ ಬ್ಯಾಂಕ್. ಅದುವರೆಗೆ ನಾನು ಬ್ಯಾಂಕ್ ಎಂಬುದನ್ನು ಕೇಳಿದವನಲ್ಲ ಕಂಡವನೂ ಅಲ್ಲ. ಊರಿನ ದುಡ್ಡೆಲ್ಲದರ ಮೂಲ ಬ್ಯಾಂಕ್ ಎಂದು ಆಗ ಹೇಳುತ್ತಿದ್ದರು. ನಾಲ್ಕಾಣೆಗಿಂತಲೂ ಹೆಚ್ಚಿನ ಹಣವನ್ನು ಕಾಣದೇ ಇದ್ದ ನಮಗೆ ಬ್ಯಾಂಕ್ ಎಂದರೆ ಒಂದು ಗಾಬರಿಯ ಸಂಗತಿ.    ಅಲ್ಲಿಗೆಬಂದ ವ್ಯಕ್ತಿ ಗಳು. ಅದರಲ್ಲೂ ಮ್ಯಾನೇಜರ್ ಎಂಬವರು ಘನ ಗಂಭೀರವಾಗಿ ತಾನೇನೋ ತನ್ನ ಅದ್ಭುತ ಆರ್ಹತೆಯಿಂದ ಆರ್ಜಿಸಿಕೊಂಡ ಪದವಿ ಎಂಬಂತೆ ನಡೆದು ಕೊಳ್ಳುತ್ತಿದ್ದರು. ಹಣಕ್ಕೇ ಒಡೆಯ, ಇವರನ್ನು ಕಂಡರೆ ಆಗ ಭಯ ಸಹಜ.

ಇಲ್ಲಿ ಕಂಡ ಬೆಳಗಾಂ ಮಾವ ಎಂಬ ಮ್ಯಾನೇಜರ್ ಅದೆಲ್ಲ ಭಾವನೆಗಳಿಗೆ ಅತೀತವಾಗಿ ಕಂಡರು. ಇನ್ ಶರ್ಟ್ ಧರಿಸಿ  ಬ್ಯಾಂಕ್ ಆಫೀಸರರಂತೆ ಕಂಡರೂ ಸರಳವಾಗಿ ಬೆರೆತುಬಿಡುವ ನಗುಮುಖದ ಮಾತುಗಾರಿಕೆಯಲ್ಲಿನ ಆತ್ಮೀಯ ಸ್ಪರ್ಶವನ್ನು ಆದಿನ  ಕಂಡೆ.

ಇದು ನಾನು ಮದುವೆಯಾಗುವ ಮೊದಲಿನಘಟನೆ. ಹೊಸಸಂಬಂಧ ಹೊಸಮಂದಿ ಆಗ ಎಲ್ಲವೂ ಹೊಸದಾದರೆ    ಸರಳತೆ  ಅತ್ಯಂತ ನೂತನವಾದ ಅನುಭವವಾಯಿತು.

ಹೌದು, ನನ್ನಾಕೆಯ ಬೆಳಗಾಂ ಮಾವ ಸರಳ ನಡೆಯ ಸರಳಸಂವಹನದ ಸಜ್ಜನ ವ್ಯಕ್ತಿ. ಸದ್ಭಾವನೆ ಸಚ್ಚಿಂತನೆ  ಸನ್ಮನಸ್ಸು ಇದರಿಂದ ಹೊರತಾಗಿ ಅವರನ್ನುಕಲ್ಪಿಸುವುದು ಅಸಾಧ್ಯ. ಮಕ್ಕಳಿಂದ ತೊಡಗಿ ಹಿರಿಯ ಮಂದಿಗಳ ಜತೆಗೆ ಅವರು ಬೆರೆತುಕೊಳ್ಳುವ ರೀತಿ ನನ್ನಂತವರಿಗೆ ದೊಡ್ಡ ಶಿಕ್ಷಣ ಪುಸ್ತಕದಂತೆ.  ಅದೊಂದು ಮಾದರೀ ವ್ಯಕ್ತಿತ್ವ.

ಮಾವನ ಹೆಸರೇ  ತಲಮಕ್ಕಿ ಶ್ಯಾಮಸುಂದರ  ಭಟ್.  ಮನೆಮಂದಿಯ ಆತ್ಮೀಯ ದೇವಣ್ಣ. ನನ್ನಾಕೆಯ ಬೆಳಗಾಂ ಮಾವ. ನನ್ನಲ್ಲಿ ಇವರ ನೆನಪು ಗಾಢವಾಗಿ  ಉಳಿಯುವುದಕ್ಕೆ ಮಹತ್ತರ ಕಾರಣವೆಂದರೆ, ಇವರೇ ನನ್ನ ಮದುವೆಯಲ್ಲಿ ನನ್ನಾಕೆಯನ್ನು ಹಸೆ ಮಣೆಗೆ ಕೈ ಹಿಡಿದು ಕರೆತಂದವರು.

ತಲಮಕ್ಕಿ  ಎಂದೊಡನೆ ನೆನಪಾಗುವುದು ಮಲೆನಾಡು, ಉಪ್ಪರಿಗೆ ಮನೆ, ಎಲ್ಲದಕ್ಕೂ ಕಲಶವಿಟ್ಟಂತೆ ಮುಂದೆ ಇರುವ ಮಹಾಗಣಪತಿಯ ದೇವಸ್ಥಾನ. ಇದೆಲ್ಲದರ ಹೊರತಾಗಿ ಚಿತೋಹಾರಿಯಾಗುವ ವಿಷಯಗಳು ಬಹಳಷ್ಟು.

ತಲಮಕ್ಕಿಯ ಆ ದೊಡ್ಡ ಮನೆ. ಅಲ್ಲಿಂದಲೇ ನನ್ನಾಕೆ ನನ್ನಾಕೆ ನನ್ನ ಜತೆ ಬದುಕಲ್ಲಿ ಹೆಜ್ಜೆ ಇಟ್ಟವಳು. ವ್ಯಕ್ತಿಗತ ಸಂಬಂಧಕ್ಕಿಂತಲೂ ಭಾವನಾತ್ಮಕ ನಂಟು ಈ ಮನೆಯೊಂದಿಗಿದೆ.

ತಲಮಕ್ಕಿ ಎಂದರೆ ದೊಡ್ಡ ಆಲದ ಮರದ ಬುಡದಲ್ಲಿ ನಿಂತ ಅನುಭವವಾಗುತ್ತದೆ. ಬೇರು..ತಾಯಿಬೇರು, ‌ಜತೆಯಲ್ಲಿ ಇದೀಗ ಇಳಿಬಿದ್ದ ಬಿಳಲುಗಳು ಹಲವು. ಅಲ್ಲಿ ಚಿಗರೆಯಂತೆ ಸರಿದು ಹೋಗುವ ತಲಮಕ್ಕಿ ಸಹೋದರಿಯರು,  (ಇದರಲ್ಲಿ  ನನ್ನಾಕೆಯ ಅಮ್ಮನೂ ಒಬ್ಬರು)      ನಗುಮುಖದ ಆತ್ಮೀಯ ಕರೆಗಳು ಛೇ ಅನುಭವಿಸುವುದಕ್ಕೆ ಜನ್ಮಾಂತರದ ಋಣಭಾರವಿರಬೇಕು ಅನ್ನಿಸುತ್ತದೆ. ಇದಕ್ಕೆಲ್ಲ ನೆರಳಂತೆ ಇರುವ ಬೆಳಗಾಂ ಮಾವ ಒಂದು ಸಂವಹನದ ಬಳ್ಳಿ ಎನ್ನಬಹುದು.  ಸಿಕ್ಕಿದಾಗಲೆಲ್ಲ ಒಂದು ಟರ್ಕಿ ಟವಲ್ ಹೆಗಲಿಗೆ ಹಾಕಿ ಬಂದು ಆತ್ಮೀಯವಾಗಿ ಹೆಗಲು ತಟ್ಟುವ ಬೆಳಗಾಂ ಕೈಯ ಬಿಸಿ,  ಅನುಭವಿಸಿದ ಪುಳಕಗಳು ಅನೇಕ.

ತಲಮಕ್ಕಿ ಎಂಬ ಆಲದ ಮರದ ಕೆಳಗೆ ಅತ್ಮೀಯವಾಗಿ ಸ್ವಾಗತಿಸುವ ಮಂದಿ. ಸದ್ಭಾವನೆ ಸವಿನಯ ಸೌಹಾರ್ದ ಇಲ್ಲಿ ವ್ಯಕ್ತಿ ನೋಡದೇ  ವಿನಿಮಯವಾಗುವ ಭಾವನೆಗಳು. ಅದನ್ನು ಅನುಭವಿಸುವಾಗ ಅದರ ಆಳದ ಅನುಭವವಾಗುತ್ತದೆ. ಆದರೆ ಹೃದಯ ವೈಶಾಲ್ಯದ ವಿಸ್ತಾರ ತಿಳಿಯದಷ್ಟು ಬೆಳೆಯುತ್ತಾ ಹೋಗುತ್ತದೆ. ಇವುಗಳಿಗೆ ಪ್ರತೀಕವಾಗಿ ನಮ್ಮ ದೇವಣ್ಣ ಮಾವ ತಲಮಕ್ಕಿ ಮನೆಯ ಹಿರಿತಲೆ.   ಸದಾ ಅರಳು ಹುರಿದಂತೆ ಮಾತನಾಡುವ ಅದಕ್ಕಿಂತ ಹೆಚ್ಚಾಗಿ ಸಹಜವಾಗಿ ಬೆರೆಯುವ ಸೌಜನ್ಯದ ನಡವಳಿಕೆ ಎಂಥಹವರನ್ನೂ ಆತ್ಮೀಯರನ್ನಾಗಿಸುತ್ತದೆ

ತಲಮಕ್ಕಿ ದೊಡ್ಡ ಅಲದಮರದ ಕವಲು ಕವಲು, ಚಿಗುರು ಎಲೆಗಳು, ಪ್ರತಿಯೊಂದೂ ಅಂಗದ ಹೆಸರು , ಪ್ರವೃತ್ತಿ, ಹೀಗೆ ಎಲ್ಲವೂ ದೇವಣ್ಣನ ಪುಸ್ತಕದಲ್ಲಿ ದಾಖಲಾಗಿ ಎದುರು ಸಿಕ್ಕಿದಾಗ ಹೆಸರು ಹೇಳಿ ಕರೆದು ಮಾತನಾಡುವ ಅದ್ಬುತ ಸರಣಾಶಕ್ತಿ ಆಶ್ಚರ್ಯವೆನಿಸುತ್ತದೆ. ಹೀಗೆ ಒಂದು ಸಲ ಇಲ್ಲಿ ದಾಖಲಾಗಿ ಇವರ ಪರಿಧಿಯೊಳಗೆ ಸೇರಿಕೊಂಡರೆ ಆತ್ಮೀಯತೆಯ ರಸಧಾರೆ ಹರಿದು ಬರುತ್ತದೆ.ಬೆಳಗಾಂ ಮಾವ ಎಂಬ ವ್ಯಕ್ತಿತ್ವದ ಸಹಜಗುಣವದು.

ಹಲವು ಸಲ ಹಿರಿತನ ಎಂಬುದು ಎಲ್ಲರಲ್ಲಿ ಒಂದಾಗಿ ಬೆರೆಯುವುದಕ್ಕೆ ಅಡೆತಡೆಯ ಪರಿಧಿಯನ್ನು ಸೃಷ್ಟಿ ಮಾಡಿ ಎತ್ತರದಲ್ಲೇ ಇರುವಂತೆ ಮಾಡುತ್ತದೆ. ಅದರೆ ದೇವಣ್ಣ ಹಿರಿತನ  ಕಿರಿತನಗಳ ಅಂತರದಲ್ಲಿ ಸುಲಭವಾಗಿ ಸಂಚರಿಸುವ ಜೀವ. ಹಿರಿತನದ ಅಣ್ಣನ ಪದವಿ ಕೇವಲ ಸ್ಥಾನಕ್ಕಷ್ಟೇ ಸೀಮಿತ.  ಆತ್ಮೀಯತೆಯ ಸಂವಹನಕ್ಕೆ ಅದು ತಡೆ ಅಗುವುದೇ ಇಲ್ಲ . ಮರಿಮಕ್ಕಳ ಜತೆ ಸಣಕಲು ದೇಹ  ಅಜ್ಜನಾಗುವಂತೆ  ಯುವಕರ ಜತೆ ನವ ಯುವಕರಂತೆ ಬೆರೆತು ಆಟವಾಡುತ್ತದೆ. ವಯೋ ಮಿತಿಯ ನಿಬಂಧನೆಗಳು ವರ್ತುಲಗಳು ಆತ್ಮೀಯತೆಯ ಧಾರೆಯಲ್ಲಿ ಕರಗಿಬಿಡುತ್ತದೆ.  ಸರಳತೆ ಆತ್ಮೀಯತೆ ಸನ್ಮನಸ್ಸು ಒಂದಾದರೆ ಮುರಿಯದ ಬೇಲಿಗಳಿಲ್ಲ. ಎಟುಕದ ಸೀಮೆಗಳಿಲ್ಲ. ಅದು ನಮ್ಮ ದೇವಣ್ಣನ ನಡವಳಿಕೆ.   ಆದರೆ ನಮ್ಮ ದೇವಣ್ಣ ಹೀಗೆ ಹೀಗೆ ಅಂತ ಊಹಿಸಿಬಿಡಬಹುದಾದರೂ ಊಹೆಗೆ ನಿಲುಕದ ಆಘಾತವನ್ನು ಕೊಟ್ಟು ಕಣ್ಮರೆಯಾದದ್ದು ಬದುಕಿನ ವಿಸ್ಮಯವನ್ನು ಕಣ್ಣೆದುರಿಗೆ ಇಟ್ಟಂತೆ.

ಅಂದು ಬೆಳಗ್ಗೆ ಎಂದಿನಂತೆ ದಿನಚರಿಯಲ್ಲಿ ತೊಡಗಬೇಕಾದರೆ ಮೊಬೈಲ್ ಸದ್ದು ಮಾಡುತ್ತಾ ಕಂಪಿಸಿತು. ಅತ್ತಣಿಂದ ಭಾವನ ಕರೆ, “ಭಾವ ದೇವಣ್ಣ ಮಾವ ಹೋಗಿಬಿಟ್ಟರುಮೊಬೈಲ್ ಕಂಪನ ಇನ್ನೂ ನಿಂತಿಲ್ಲ,  ಅಲ್ಲಾ  ನನ್ನ ಕೈ ಕಂಪಿಸುತ್ತಿದೆಯಾ?  ಅಂತ ಅನುಮಾನ. ನಾನೇನು ಉದ್ಗರಿಸಿದ್ದೇನೋ ಒಂದೂ ಅರಿವಿಗೆ ಬಂದಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಸಮಾರಂಭದಲ್ಲಿ  ತಲಮಕ್ಕಿಯಲ್ಲಿ ಕಂಡ ಆತ್ಮೀಯ ಸಿಂಚನ ಹನಿ ಥಟ್ಟನೆ ನಿಂತ ಅನುಭವ. ಇತೀಚೆಗೆ ಸರಣಿಯಂತೆ ಬಂದ ಸಾವಿನ ಸುದ್ದಿಳಲ್ಲಿ ಶ್ಯಾಮಣ್ಣನ  ಹೆಸರು ಸರದಿಯಲ್ಲಿ ಸೇರಿಕೊಂಡದ್ದು ದುರ್ದೈವ.  ಕಿರುಚುವ ನನ್ನಾಕೆ, ಬಡಿದುಕೊಳ್ಳುವ ನನ್ನೆದೆ ಇದರಲ್ಲಿ ಯಾವುದನ್ನು ಮೊದಲು ನಿಯಂತ್ರಿಸಬೇಕೋ ಎಂದು ತಿಳಿಯಲಿಲ್ಲ.  ನಮ್ಮ ಪ್ರೀತಿಯ ಬೆಳಗಾಂ ಮಾವ ಇನ್ನಿಲ್ಲ. ಅದೊಂದೇ ದೊಡ್ಡ ಆಘಾತ!!

ಗಡಿಬಿಡಿಯಲ್ಲೇ ಹೊರಟು ಸಾಯಂಕಾಲ ತಲಮಕ್ಕಿ ತಲಪಿದಾಗ ಸದಾ ನಗುಮುಖದಲ್ಲಿ ಸ್ವಾಗತಿಸುವ ತಲಮಕ್ಕಿ ಮನೆ  ಮರಗಳ ನಡುವೆ ಮುದುಡಿ ಮುಖ ಮುಚ್ಚಿದಂತೆ ಕಂಡಿತು. ಎಲ್ಲಾ ಮುಖಗಳೂ ನೋವನ್ನು ಜಯಿಸುವುದಕ್ಕೆ ಸಿದ್ದತೆಯನ್ನು ಮಾಡುವುದಕ್ಕೆ ತೊಡಗಿಂದತೆ ಭಾಸವಾಗಿತ್ತು.  ಅದು ತಲಮಕ್ಕಿಯ ಮಣ್ಣಿನ ಗುಣ. ನೋವನ್ನು ತನ್ನಲ್ಲೇ ಇರಿಸಿಕೊಂಡು ಬರೀ ನಗುವನ್ನಷ್ಟೇ ಕೊಡುತ್ತದೆ.  ಇಂದು ನಗುವಿನ ಹಿಂದಿನ ನೋವು ಕಾಣುವಲ್ಲಿ ಕಣ್ಣೇ ದಣಿಯುತ್ತದೆ.

ನಗುವಿನ ಆಳ ಸಂತೋಷದ  ವಿಸ್ತಾರ   ಕಂಡರೆ ತಿಳಿಯಬಹುದು. ಆದರೆ ನೋವಿನ ಆಳ ತಿಳಿಯುವುದು ಕಠಿಣ. ಹಾಗಾಗಿ ತಲಮಕ್ಕಿ  ಎಲ್ಲರಿಗೂ ನಗುವನ್ನಷ್ಟೇ ಹಂಚುತ್ತಾ ತಾನು ನೋವಿನ ಆಳಕ್ಕೆ ಇಳಿದಂತೆ ….ಛೇಕಲ್ಪಸಿಕೊಳ್ಳುವುದಕ್ಕೆ ಭಾವನೆಗಳೂ ಸಿಕ್ಕುವುದಿಲ್ಲ.

ಮನೆಯೊಳಗೆ ಕಾಲಿಡುತ್ತಿದ್ದಂತೆ ಶಾಂತವಾದ ಸರೋವರಕ್ಕೆ ಜಿಗಿದ ಅನುಭವ. ಎಲ್ಲವೂ ನಿಸ್ತೇಜವಾದ ಮುಖಗಳು. ಅಲ್ಲೂ ಸೌಜನ್ಯಕ್ಕೆ ನಗುವಿನ ಆವರಣ. ನೋವನ್ನು ತನ್ನಲ್ಲೇ ನುಂಗಿಕೊಳ್ಳುವ ಹವಣಿಕೆ.

ಶ್ಯಾಮಣ್ಣ ಹೆಸರಿನಂತೆ ನೀಲಾಕಾಶದಲ್ಲಿ ಲೀನವಾಗಿ ಬರಿ ಜಡದೇಹ ನಿಸ್ತೇಜವಾಗಿ ಮಲಗಿತ್ತು. ಮುಖದಲ್ಲಿ ಇನ್ನೂ ಮಾಡುವ ಕೆಲಸಗಳು ಬಾಕಿ ಉಳಿಸಿದ ನೋವು. ತನ್ನ ಸಾವಿನಲ್ಲೂ ಹಿತೈಷಿಗಳು ಎಲ್ಲಿ ನೋವನುಭವಿಸಿಬಿಡುತ್ತಾರೋ ಎಂಬ ಕಳವಳ ಮುಖದಲ್ಲಿ ಹೊತ್ತಂತೆ ಕಂಡಿತು.

ನೋವುಂಡ ಹಿರಿಯರು ಎಂದಿಗೂ ತಮ್ಮ ನೋವಿನ ಆಳವನ್ನು ತೋರಿಸುವುದಿಲ್ಲ. ಅದನ್ನು ಅರಿಯುವುದೆಂದರೆ ಅವರನ್ನು ಅರಿತಂತೆ.

ತಲಮಕ್ಕಿಗೆ ಹೋದರೆ ಒಂದು ಮೌನದ ಪ್ರಾರ್ಥನೆ ಆ ಮಹಾಗಣಪತಿಯ ಮುಂದೆ. ಮನೆಯ ಮುಂದೆ ಇರುವ  ಮಹಾಗಣಪತಿ ಮನದ ಮೌನಕ್ಕೆ ಕಿವಿಯಾದರೆ, ನಮ್ಮ ದೇವಣ್ಣ ಮಾವ ಎಲ್ಲರ ಮಾತಿಗೂ ಕಿವಿಯಾದವರು. ಕಣ್ಣಿಗೆ ಕಾಣದ ಭಗವಂತನ  ಮುಂದೆ ನಾವೇ ಮೌನದ ಬೇಡಿಕೆಯನ್ನು ಸಲ್ಲಿಸಿದರೆ ಮಾವ ಹತ್ತಿರ ಬಂದು ನೋವಿಗೆ ಕಿವಿಯಾಗುತ್ತಾರೆ. ಇದು ಹಲವರ ಅನುಭವ. ಅದೆಲ್ಲ ಬಿಟ್ಟು ಬಿಡು ಮಾರಾಯಅಂತ ಮಾಡುವ ಸಾಂತ್ವಾನದ ನುಡಿಗಳು ಇಂದಿನಿಂದ ದ್ವನಿ ನಿಲ್ಲಿಸಿ ಮೌನವಾಗಿದೆ.  ಹಾಗೇ ಒಂದು ಕಿವಿ ಮುಚ್ಚಿ ಹೋದ ಅನುಭವ. ಇನ್ನು ನೋವಿಗೆ ಕಿವಿಯಾಗುವವರು ಯಾರು?
ಭಾವುಕ ಮನಸ್ಸು ಸದಾ ನೋವಿನೊಂದಿಗೆ ಹೋರಾಡುತ್ತಿರುತ್ತದೆ. ಹಾಗೇ ನೋವುಗಳು ಆವರಣ ಬಿಟ್ಟು ಪ್ರಕಟಗೊಳ್ಳುವುದೇ ಇಲ್ಲ. ಇದು ದೇವಣ್ಣ ಮಾವ. ಶ್ರೀಕೃಷ್ಣ ಪರಮಾತ್ಮ ತನ್ನ ಸತಿ ಭಾಮೆಗಾಗಿ ಸ್ವರ್ಗದ ಅಮೂಲ್ಯ ವಸ್ತು ಪಾರಿಜಾತವನ್ನು ಭೂಮಿಗೆ ತಂದ, ಆದರೆ ಭಗವಂತ ಆತನಿಗೇನು ಕಮ್ಮಿ ಇತ್ತೋ ಭೂಮಿಯಿಂದ ಈ ಅಮೂಲ್ಯವಸ್ತುವನ್ನು  ಸ್ವರ್ಗಕ್ಕೆ ಕೊಂಡು ಹೋದ.

ನನ್ನತ್ತೆ ಹೇಳುತ್ತಾರೆ , ಅವರಂಥ ಅಣ್ಣ ಇಲ್ಲ. ಮರಿ ಮಕ್ಕಳು ಹೇಳುತ್ತಾರೆ ಅವರಂಥ ಅಜ್ಜ ಇಲ್ಲ. ನಂತರದ ಧ್ವನಿಗಳು ಅವರಂಥ ಮನುಷ್ಯರೇ ಇಲ್ಲ. ದಿನಗಳು ಒಂದರ ನಂತರ ಒಂದು ಕಳೆಯುತ್ತವೆ. ಮಳೆ ಸುರಿಯುತ್ತದೆ ನೀರು ಹರಿಯುತ್ತದೆ. ಹಳೆಚಿಗುರು ಹಣ್ಣಾಗುತ್ತದೆ ಹೊಸ ಚಿಗುರು ಮೊಳೆಯುತ್ತದೆ. ಆದರೆ ಬಿಟ್ಟು ಹೋದ ಗಂಧವನ್ನು ಮತ್ತಿಷ್ಟು ಆಘ್ರಾಣಿಸಬಹುದಿತ್ತು ಎಂಬ ಹಪ ಹಪಿಕೆಯನ್ನು ಉಳಿಸಿ ನೆನಪುಗಳು ಹಾಗೇ ಸ್ಮರಣೆಯಲ್ಲಿ ಉಳಿದು ಬಿಡುತ್ತವೆ.

ಬೆಳಗಾಂ ಮಾವ ಇನ್ನು ನೆನಪು ಮಾತ್ರ ಎನ್ನುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಸತ್ಯ ಸುಳ್ಳಾದೀತೋ ಎಂಬ ಹುಸಿ ಬಯಕೆ  ಸತ್ಯದ ಹಿಂದೆ ಹೋಗುವುದಕ್ಕೆ ಬಿಡುವುದಿಲ್ಲ. ಪ್ರತಿಯೊಬ್ಬರ ಅಗಲಿಗೆಯಾದಾಗ ಸಾಂತ್ವಾನ ಹೇಳುವುದಕ್ಕೆ, ದುಃಖ ತಪ್ತ ಮನಸ್ಸಿಗೆ ಆಸರೆಯಾಗುವುದಕ್ಕೆ ಸನಿಹದಲ್ಲೇ ಮಾವ ಸಿದ್ಧರಾಗಿಬಿಡುತ್ತಿದ್ದರು. ನನ್ನಾಕೆಯ ಅಪ್ಪ ನನ್ನ ಮಾವ ತೀರಿಕೊಂಡಾಗಲೂ ಅದರ ಅನುಭವವನ್ನು ಕಣ್ಣಾರೆ ಕಂಡವನು. ಆದರೆ  ಆ ಸಾಂತ್ವಾನದ ನುಡಿಯನ್ನು ಧೈರ್ಯವನ್ನು ನೀಡುವ ವ್ಯಕ್ತಿ ಇನ್ನು ಯಾರು?  ಅಗಲಿಕೆಯಲ್ಲಿ ಜತೆಯಾಗುವ ಒಂದು ಆಸನ ಇಂದು ಶೂನ್ಯವಾಗಿದೆ.

  ಮಾವನ ಸನ್ಮನಸ್ಸು , ಸದ್ಬಾವನೆ ಇದೆಲ್ಲವೂ ಮುಂದಿನ ಪೀಳಿಗೆಗೆ ದುಃಖ ವೈಮನಸ್ಸುಗಳನ್ನು ಮರೆಯುವಲ್ಲಿ ಪ್ರೇರಣೆಯಾಗಬೇಕು.  ಅದೇ ಅವರಿಗೆ ಸಲ್ಲುವ ಶ್ರದ್ಧಾಂಜಲಿ. ಅದೇ ಶ್ಯಾಮಾಂಜಲಿ.
ಓಂ ಶಾಂತಿ