Sunday, March 26, 2023

ಹಾಸ್ಯಾಭಿನಯದ ಇನ್ನೊಸೆಂಟ್

         


ನೀವು ಎಂಭತ್ತರ ದಶಕದಲ್ಲಿ ಮಲಯಾಳಂ ಸಿನಿಮಾ ನೋಡುವ ಹವ್ಯಾಸವನ್ನು ಬೆಳೆಸಿದ್ದರೆ, ಮಲಯಾಳಂ ಸಿನಿಮಾದ ಅಭಿರುಚಿ ಅಂಟಿಸಿಕೊಂಡಿದ್ದರೆ ಒಬ್ಬ ನಟನನ್ನು ಖಂಡಿತಾ ಮರೆಯುವುದಕ್ಕೆ ಸಾಧ್ಯವಿಲ್ಲ. ಅದು ಯಾವುದೋ ಮೆಗಾಸ್ಟಾರ್ ಅಲ್ಲ. ಕೇವಲ ನಮ್ಮ ನಿಮ್ಮಂತೆ ಜನ ಸಾಮಾನ್ಯನ ಅಭಿವ್ಯಕ್ತಿ ಸ್ವರೂಪವನ್ನೇ ಹೊಂದಿದ ಇನ್ನೊಸೆಂಟ್....ನಿನ್ನೆ ಬಂದ ವಾರ್ತೆಯಲ್ಲಿ ಅತ್ಯಂತ ಹೆಚ್ಚು ಮನಕಲಕಿದ ವಾರ್ತೆ ಎಂದರೆ ಇವರು ಇಹಲೋಕ ತ್ಯಜಿಸಿ ಒಂದು ಅದ್ಭುತ ಪ್ರತಿಭೆಗೆ ಪೂರ್ಣವಿರಾಮ ಚುಕ್ಕಿಸಿದ್ದು. ಇನ್ನೊಸೆಂಟ್  ಹೆಸರೇ ಒಂದು ವಿಚಿತ್ರ. ವಿನ್ಸಂಟ್ ಇದ್ದದ್ದು ಇನ್ನೋಸೆಂಟ್ ಆಯಿತೋ ಎನೋ. ಯಾಕೆಂದರೆ ಇವರು ನಿರ್ವಹಿಸಿದ ಪಾತ್ರಗಳಲ್ಲಿ ಒಂದು ಮುಗ್ಧ ಸ್ಪರ್ಶ ಸದಾ ಇರುತ್ತಿತ್ತು. ಇವರೇ ಹೇಳುವಂತೆ ನಾನು ಹೆಸರಿನಿಂದ ಮಾತ್ರ ಇನ್ನೋಸೆಂಟ್...ಅಷ್ಟು ಇನ್ನೊಸೆಂಟ್ ಅಲ್ಲ. 

        ನಮ್ಮ ಬಾಲ್ಯದಲ್ಲಿ ಮಲಯಾಳಂ ಸಿನಿಮಾ ಎಂದರೆ .....ಸಾರ್ವತ್ರಿಕವಾಗಿ ಒಂದು ಹೇಳಲಾಗದ ಕೆಟ್ಟ ಅಭಿಪ್ರಾಯವಿತ್ತು. ಮಂಗಳೂರಲ್ಲಿ ಮಲಯಾಳಂ ಸಿನಿಮಾ ಎಂದರೆ ಒಂದು ....ವ್ಯಂಗ್ಯ ನಗುವಿತ್ತು. ಆ ನಗುವಿನ ಹಿನ್ನೆಲೆ ಏನೇ ಇರಲಿ ಕಪ್ಪಿನ ಹಿಂದೆ ಬಿಳಿ ಇರುವಂತೆ ಮಲಯಾಳಂ ನಲ್ಲಿ ಆಗಲೂ ಅದ್ಭುತ ಎನಿಸುವಂತಹ ಪ್ರಶಸ್ತಿಯ ಮಾನದಂಡದಲ್ಲಿ ನೋಡಿದರೆ ದೇಶಾದ್ಯಂತ ಸಂಚಲನ ಉಂಟುಮಾಡುವ ಸಿನಿಮಾಗಳು ಬರುತ್ತಿತ್ತು. ಅಡೂರ್, ಅರವಿಂದನ್, ಹೀಗೆ ಅದ್ಭುತ ಎನ್ನಿಸುವ ನಿರ್ದೇಶಕರುಗಳು ಪ್ರಶಸ್ತಿಯ ಕ್ಷೇಟ್ರದ ಸರ್ವಸ್ವಾಮ್ಯವನ್ನು ಶ್ತಾಪಿಸಿದ್ದರು.  ಅದು ಕೇವಲ ಕಲಾತ್ಮಕ ಸಿನಿಮಾಗಳಾದರೆ, ಜನ ಸಾಮಾನ್ಯನಿಗೆ ಹುಚ್ಚು ಹಿಡಿಸಿ ಗಲ್ಲಾಪೆಟ್ತಿಎಗೆಯನ್ನು ಸೂರೆಗೈದ ಕಡಿಮೆ ಬಜೆಟ್ ನ ಸಿನಿಮಾಗಳ ಒಂದು ವಿಶಿಷ್ಟ ವಲಯವೇ ನಿರ್ಮಾಣವಾಗಿತ್ತು. ಒಂದರ್ಥದಲ್ಲಿ ಎಂಭತ್ತರ ದಶಕ ಎಂದರೆ  ಮಲಯಾಳಂ ಸಿನಿಮಾದ ಸುವರ್ಣ ಯುಗ .ಆ ಯುಗದಲ್ಲಿ ಹಲವರ ಯೋಗದಾನ ಇದ್ದರೆ ಅದರಲ್ಲಿ ನಿನ್ನೆ ಅಗಲಿದ ಇನ್ನೊಸೆಂಟ್ ನವರದ್ದು  ಒಂದು ಪ್ರಮುಖ ಯೋಗದಾನವಿದೆ. 


        ರಾಮ್ ಜೀ ರಾವ್ ಸ್ಪೀಕಿಂಕ್....ನಮ್ಮಲ್ಲಿ ಮಲಯಾಳಂ ಸಿನಿಮಾವನ್ನು ಹೀಗಳೆಯುತ್ತಿದ್ದವರಿಗೆಲ್ಲ ಮನೆಗೆ ಕರೆತಂದು ವಿಡಿಯೋ ಕ್ಯಾಸೆಟ್ ಹಾಕಿ ತೋರಿಸುತ್ತಿದ್ದ ಸಿನಿಮ ಇದು. ಹಲವು ಭಾಷೆಗಳಿಗೆ ತರ್ಜುಮೆಯಾದ ಆ ಕಾಲದ ಸೂಪರ್ ಹಿಟ್ ಸಿನಿಮ. ಮಲಯಾಳಂ ಸಿನಿಮಾರಂಗದಲ್ಲಿ ಒಂದು ಕ್ರಾಂತಿಯನ್ನೇ ಆವಿಷ್ಕರಿಸಿದ ಸಿನಿಮಾ ಇದು. ಯಾವುದೇ ಸ್ಟಾರ್ ನಟರು ಇಲ್ಲದೆ ಸಾಧಾ ಸೀದ ನಟರೇ ಇದರಲ್ಲಿದ್ದು ಸಿದ್ದಿಕ್ ಲಾಲ್ ಎಂಬ ನಿರ್ದೇಶಕ ದ್ವಯರ ದಕ್ಷ ನಿರ್ದೇಶನದಲ್ಲಿ ಬಂದ ಸಿನಿಮಾ ಇದು. ಇದು ಕನ್ನಡದಲ್ಲೂ ಹಿಂದಿಯಲ್ಲೂ ರಿಮೇಕ್ ಆಗಿತ್ತು. ಅದರಲ್ಲಿ ಊರ್ವಶಿ ಥಿಯೇಟರ್ ನ ಮಾಲಿಕ ನಾಗಿರುವ ಒಬ್ಬ ಮುಗ್ದ ಸ್ವರೂಪದ  ಇನ್ನೊಸೆಂಟ್ ಪಾತ್ರ ಅದೆಷ್ಟು ಹುಚ್ಚು ಹಿಡಿಸಿತ್ತೆಂದರೆ ಆ ಹಾಸ್ಯ ಸಂಭಾಷಣೆಗಳು ಒಂದು ಹೊಸ ಹಾಸ್ಯದ ಮಜಲನ್ನೇ ಸೃಷ್ಟಿ ಮಾಡಿತ್ತು. ನಗುವುದನ್ನೂ ಅಳುವುದನ್ನೂ ಅರಿಯದ ಭಾವನಾರಹಿತರಿಗೆ ಈ ಸಿನಿಮಾ ತೋರಿಸಿದರೆ ಒಂದು ವಾರ ಆ ಸಿನಿಮಾದ ಹ್ಯಾಂಗ್ ಓವರ್ ನಲ್ಲೇ ಇದ್ದು ಬಿಡುತ್ತಾರೆ. ಇನ್ನೊಸೆಂಟ್ ಇದರಲ್ಲಿ ಕಮಾಲ್ ಮಾಡಿ ಬಿಡುತ್ತಾರೆ. ಆ ವಿಚಿತ್ರ ಮ್ಯಾನರಿಸಂ ನ ಅಭಿನಯ ..ಆಗ ನಾನು ಒಂದು ನೂರಕ್ಕೂ ಮಿಕ್ಕಿ ಈ ಸಿನಿಮಾವನ್ನು ನೋಡಿದ್ದೇನೆ. ಈಗಲೂ ಟಿವಿಯಲ್ಲಿ ಬಂದರೆ ಒಂದಷ್ಟು ಹೊತ್ತು ಈ ಸಿನಿಮಾವನ್ನು ನೋಡದೇ ಇರಲಾಗುವುದಿಲ್ಲ. 

    ಇನ್ನೊಸೆಂಟ್ ಅಭಿನಯದ ಸಿನಿಮಾಗಳ ಪಟ್ಟಿ ಮಾಡಿದರೆ ಪುಟಗಳೇ ಪರ್ಯಾಪ್ತವಾಗಲಾರದು. ಅದೆಷ್ಟು ಸಿನಿಮಾಗಳು? ಹೆಚ್ಚಾಗಿ ನವಿರು ಹಾಸ್ಯದ ಪಾತ್ರಗಳು. ಅಭಿನಯದ ಒಂದು ರೀತಿ ವಿಚಿತ್ರವಾಗಿದ್ದರೆ, ಇವರು ಒಪ್ಪಿಸುವ ಸಂಭಾಷಣೆಗಳು ಇರಿಂಜಾಲಕುಡದ ಮಣ್ಣಿನ ಭಾಷೆಯ ಶೈಲಿ.  ಕೇರಳದ ಸಾಂಸ್ಕೃತಿಕ ನಗರಿಯಾದ ತ್ರಿಶ್ಯೂರ್ ಜಿಲ್ಲೆಯ ಇರಿಂಜಾಲ ಕುಡದ ಒಂದು ಮಹಾನ್ ಪ್ರತಿಭೆ ಇನ್ನೊಸೆಂಟ್. ಇವರ ಅಭಿನಯ ಎಂದರೆ ನೀವು ಗಮನ ಇಟ್ಟು ಪ್ರತೀ ಇಂಚು ಇಂಚು ದೃಶ್ಯವನ್ನು ಗಮನಿಸುತ್ತ ಇರಬೇಕು. ಒಂದು ವೇಳೆ ತಪ್ಪಿದರೆ ಅದ್ಭುತ ಎನ್ನಿಸುವಂತಹ ಹಾಸ್ಯ ಅಭಿನಯವನ್ನು ಕೆಳೆದುಕೊಳ್ಳೂತ್ತೀರಿ. ಅಷ್ಟೂ ಸೂಕ್ಷ್ಮ ಸಂವೇದನೆಯ ಅಭಿನಯ ಮರ್ಮ ಇವರಿಗೆ ದೈವದತ್ತ. 

        ಆಕಾಲದಲ್ಲಿ ಹಲವು ಬೇರೆ ಭಾಷೆಯ ಸಿನಿಮಾಗಳ ಹುಚ್ಚು ಹಿಡಿಸಿಕೊಂಡು ಓಹ್ ಇದುವೆ ಸೂಪರ್ ಆಕ್ಟಿಂಗ್ ಅಂತ ತಿಳಿದುಕೊಂಡವನು, ಒಂದು ಸಲ ಈ ಮಲಯಾಳಂ ಸಿನಿಮಾ ನೋಡಿ...ಛೇ ಅಭಿನಯ ಎಂದರೆ ಇದು...ಎಂದು ಅಭಿರುಚಿಯನ್ನೇ ಬದಲಿಸಿಕೊಂಡು ಈಗಲೂ ಅದೇ ಅಭಿರುಚಿಯಲ್ಲಿ ಸಿನಿಮಾಗಳನ್ನು ನೋಡುತ್ತಿದ್ದೇನೆ. ಅದಕ್ಕೆ ಕಾರಣ ಈ ಇನ್ನೊಸೆಂಟ್ ನಂತಹ ಪೋಷಕ ನಟರು. 

        ಮಲಯಾಳಂ ಚಿತ್ರರಂಗದಲ್ಲಿ ಅದೆಷ್ಟೋ ತಾರಾಮೌಲ್ಯದ ಸ್ಟಾರ್ ಗಳು ಇರಬಹುದು. ಆದರೆ ಅಲ್ಲಿನ ನಿಜವಾದ ಜೀವಾಳ ಇರುವುದು ಈ ಪೋಷಕನಟರ ಕೊಡುಗೆಯಲ್ಲಿ. ಇನ್ನೊಸೆಂಟ್, ಜಗದಿ, ಶಂಕರಾಡಿ, ತಿಲಕನ್, ಮಮ್ಮುಕೋಯ, ಮಾಳಾ ಅರವಿಂದನ್, ಒಡುವಿಲ್ ಉಣ್ಣಿಕೃಷ್ಣನ್, ಕುದುರೆವಟ್ಟಂ ಪಪ್ಪು ಹೀಗೆ ಅದ್ಭುತ ಪ್ರತಿಭೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಲ್ಲಿ ಯಾವುದೇ ವಶೀಲಿ ನಡೆಯುವುದಿಲ್ಲ. ಪ್ರತಿಭೆ ಇದ್ದರೆ ಮಾತ್ರ ಚಲಾವಣೆಯಲ್ಲಿರುವುದಕ್ಕೆ ಸಾಧ್ಯ. ಪಾತ್ರಕ್ಕೆ ಒಪ್ಪುವಂತಹ ನಟರನ್ನು ಆಯ್ಕೆ ಮಾಡಿ ಅವರಿಂದ ಪಾತ್ರಕ್ಕೆ ತಕ್ಕಂತೆ ಅಭಿನಯವನ್ನು ಹೊರತೆಗೆಯುವ ನಿರ್ದೇಶಕರ ದಂಡು ಇಲ್ಲಿದೆ. ಹಾಗಾಗಿ ಇನ್ನೊಸೆಂಟ್ ಎಂಬ ಪ್ರತಿಭೆ ಇಲ್ಲಿ ಮೆರೆದದ್ದು ಅತಿಶಯ ಎನಿಸುವುದಿಲ್ಲ. ಇದಕ್ಕೆ ಅವರು ಅಭಿನಯಿಸಿದ ಒಂದೊಂದು ಸಿನಿಮಾಗಳೇ ಸಾಕ್ಷಿ. ಅದರಲ್ಲು ಸತ್ಯನ್ ಅಂತಿಕಾಡ್, ಪ್ರಿಯದರ್ಶನ್, ಕಮಲ್, ಸಿದ್ದಿಕ್ ಲಾಲ್ ಮುಂತಾದ ಪ್ರಸಿದ್ಧ ನಿರ್ದೇಶಕರ ಖಾಯಂ ನಟ , ಅವರ ಎಲ್ಲಾ ಸಿನಿಮಾಗಳಲ್ಲೂ ಒಂದಲ್ಲ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟ ಎಂದರೆ ಅದು ಇನ್ನೊಸೆಂಟ್.

        ಇನ್ನೊಸೆಂಟ್ ಎಂದರೆ ಹಾಸ್ಯ ಪಾತ್ರಗಳಿಗೆ ಹೆಸರಾದವರು. ಸಿದ್ದಿಕ್ ಲಾಲ್ ನಿರ್ದೇಶನದ  ಕಾಬೂಲಿವಾಲದಲ್ಲಿ ಜಗದಿಯೊಂದಿಗೆ ಕನ್ನಾಸು ಕಡಲಾಸು ಆಗಿ ಗುಜರಿ ಹೆಕ್ಕುವ ಪಾತ್ರದಲ್ಲಿ ವಿಜ್ರಂಭಿಸಿದ ಇನ್ನೊಸೆಂಟ್ ಇನ್ನಿಲ್ಲಎಂದರೆ ನಂಬಲಾಗುತ್ತಿಲ್ಲ. ಅವರ ಅಭಿನಯದ ಪಾತ್ರಗಳನ್ನು ನೋಡಿ ಮನಸ್ಸಿನ ಹಸಿವು ಇನ್ನೂ ಇಂಗಿಲ್ಲ. ಇವರ ಅದ್ಭುತ ಎನಿಸುವಂತಹ ಸಿನಿಮಾಗಳು ಎಂದರೆ, ವಿಯೆಟ್ನಾಂ ಕಾಲನಿ, ಕಾಬೂಲಿವಾಲ, ಪೊನ್ ಮುಟ್ಟ ಇಡುನ್ನ ತಾರಾವು, ವಡಕ್ಕು ನೋಕ್ಕಿ ಯಂತ್ರಂ, ಗಜಕೇಸರಿ ಯೋಗಂ, ಅಳಗೀಯ ರಾವಣನ್, ನಂ ಒನ್ ಸ್ನೇಹತೀರಂ, ಹಿಟ್ಲರ್, ಕ್ರಾನಿಕ್ ಬ್ಯಾಚುಲರ್, ಮೇಘಂ, ನಾಡೋಡಿಕ್ಕಾಟು, ಪಟ್ಟಣ ಪ್ರವೇಶಂ, ಮಣಿಚಿತ್ರತಾಳ್...ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅದರಲ್ಲೂ ಮೋಹನ್ ಲಾಲ್ ರೇವತಿ ಅಭಿನಯದ ಪ್ರಿಯದರ್ಶನ್ ನಿರ್ದೆಶನದ ಕಿಲುಕ್ಕಂ ಚಿತ್ರದ ಕೆಲಸದಾಳುವಿನ ಪಾತ್ರ ಯಾರೂ ಮರೆಯುವುದಕ್ಕೆ ಸಾಧ್ಯವಿಲ್ಲ. ಅದರಲ್ಲೂ ಲಾಟರಿ ಹೊಡೆಯುವ ಅಭಿನಯ ಕಂಡರೆ ನಗದೇ ಇರುವುದಕ್ಕೆ ಸಾಧ್ಯವೇ ಇಲ್ಲ. ಹಾಸ್ಯದ ಪಾತ್ರಗಳಲ್ಲಿ ವಿಜ್ರಂಭಿಸಿದರೂ ಐ ವಿ ಶಶಿ ನಿರ್ದೇಶನದ ಮೋಹನ್ ಲಾಲ್ ಕಥಾನಾಯಕನಾಗಿ ಅಭಿನಯಿಸಿದ ದೇವಾಸುರಂ ಸಿನಿಮಾದಲ್ಲಿನ ವಾರಿಯರ್ ಎಂಬ ಗಂಭೀರ ಪಾತ್ರದಲ್ಲಿ ತಮ್ಮ ಭಾವನಾತ್ಮಕ ಪ್ರತಿಭೆಯನ್ನು ತೋರಿಸಿದ್ದಾರೆ. 

        ಕೇವಲ ಸಿನಿಮಾ ಅಭಿನಯಮಾತ್ರವಲ್ಲ. ಇವರು ಭಾರತದ ಪಾರ್ಲಿಮೆಂಟ್ ಸದಸ್ಯರಾಗಿ ಜನಸೇವೆ ಮಾಡಿದ್ದಾರೆ, ಚುರುಕು ಸ್ವಾರಸ್ಯಕರ ಮಾತುಗಾರಿಕೆಗೆ ಹೆಸರಾದ ಇನ್ನೊಸೆಂಟ್ ಯಾವುದೇ ಕಾರ್ಯಕ್ರಮದಲ್ಲಿ ಭಾಷಣ ಮಾಡಿದರೂ, ಟೀವಿ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಅವರ ಮಾತು ಹಾಸ್ಯಮಯವಾಗಿರುತ್ತದೆ. ವಿಡಂಬನೆಯ ಮಾತುಗಳು ಕೇಳುತ್ತಾ ಇದ್ದರೆ ಅದು ಮುಗಿದು ಹೋದದ್ದೆ ತಿಳಿಯುವುದಿಲ್ಲ. 

        ಅಭಿನಯ ಎಂದರೆ ಇನ್ನೊಸೆಂಟ್. ...ಇನ್ನೊಸೆಂಟ್ ಎಂದರೆ ಅಭಿನಯ.... ಆ ಇನ್ನೊಸೆಂಟ್ ಇಂದು ನಿಶ್ಚಲವಾಗಿ ಮಲಗಿದ್ದಾರೆ ಎಂದರೆ ನಂಬಲಾಗುವುದಿಲ್ಲ, ಇದೂ ಒಂದು ಅಭಿನಯವಾಗಿರಬಹುದೇ ಎಂಬುದು ಇವರ ಅಭಿಮಾನಿಗಳ ಅನಿಸಿಕೆ. ನಿಜಕ್ಕೂ ಒಂದು ದೈವದತ್ತ ಪ್ರತಿಭೆ. ಮಲಯಾಳಂ ಸಿನಿಮದ ಹುಚ್ಚು ಹಿಡಿಸಿದ ಒಬ್ಬ ನಟನಿಗೆ ಒಂದು ಸ್ಮರಣೀಯ ಶ್ರಧ್ದಾಂಜಲಿ ಅರ್ಪಿಸದೇ ಇದ್ದರೆ ನನ್ನ ಹವ್ಯಾಸಗಳಿಗೆ ಮೌಲ್ಯವೇ ಇರಲಾರದು. 


Thursday, March 16, 2023

ಎಂತು ಮರೆವೆವು ಗುರುಗಳ?

             ಅದಾಗ ಪ್ರೌಢ ಶಾಲೆಯಲ್ಲಿ ಅಧ್ಯಯನದ ಕೊನೆಯ ವರ್ಷ.  ಮೊದಲು ಪ್ರಾಥಮಿಕ ಶಾಲೆ ಅಲ್ಲಿ ಸ್ವಂತ ಯೋಚನೆಗಳಿರುವುದಿಲ್ಲ. ಯಾರದೋ ಯೋಚನೆಗಳನ್ನು ಹಿಂಬಾಲಿಸುವ ಬಾಲ್ಯ ಜೀವನವನ್ನು ದಾಟಿ ಪ್ರೌಢ ಶಾಲೆಯನ್ನು ಪ್ರವೇಶಿಸುವಾಗ ಅತ್ತ ಬಾಲ್ಯವೂ ಅಲ್ಲದ ಇತ್ತ ಯೌವನವು ಅಲ್ಲದ ಮನಸ್ಸಿಗೆ ಚಿನಕುರುಳಿಯಂತಾಗುವ ವಯಸ್ಸು. ಕುತೂಹಲ ನಿರೀಕ್ಷೆ ಇವುಗಳಲ್ಲೆ ಕಳೆಯುವ ಪ್ರೌಢಶಾಲಾ ಜೀವನದ ಕೊನೆಯ ವರ್ಷವದು. ಜೂನ್ ತಿಂಗಳ ಮೊದಲ ದಿನವೇ ಎಂದಿನಂತೆ ಶಾಲೆ ಆರಂಭವಾದರೂ ಕಾರಣಾಂತರದಿಂದ ನಾನು ಶಾಲೆಗೆ ಹೋಗುವಾಗ ಎರಡುವಾರ ಕಳೆದಿತ್ತು. ಎರಡು ವಾರ ಕಳೆದು ಹೋದಾಗ ಸಹಪಾಠಿಗಳೆಲ್ಲರೂ ನಗುಮುಖದಿಂದ ಬರಮಾಡಿಕೊಂಡರು. ಕೆಲವು ಹೊಸ ಮುಖಗಳಿದ್ದರು ಅದೇ ಹಳೆಯ ಮಿತ್ರರು ನನಗಾಗಿ ಬಳಿಯಲ್ಲೇ ಜಾಗ ಕಾದಿರಿಸಿದಂತೆ ಹತ್ತಿರ ಕುಳಿತುಕೊಳ್ಳಿಸಿದ್ದರು. ಅದಾಗಲೆ ಹಲವಾರು ಪಾಠಗಳು ಆರಂಭವಾಗಿತ್ತು. ಅವುಗಳನ್ನು ಕೈವಶ ಮಾಡಿ ವೇಗದಲ್ಲಿ ಹೆಜ್ಜೆ ಇಡಬೇಕಾದ ಅನಿವಾರ್ಯತೆ ನನಗೆ ಎದುರಾಯಿತು. ಕೊಟ್ಟ ನೋಟ್ಸ್ ಗಳನ್ನು ಪಾಠದವಿಷಯಗಳನ್ನು ಕೆಲವರು ಹೇಳಿದರೆ ಇನ್ನು ಕೆಲವರು ಹೊಸ ಹೊಸ ವಿಷಯಗಳನ್ನು ವಿನಿಮಯ ಮಾಡಿಕೊಂಡರು. ಮೊದಲ ದಿನದ ಲೆಕ್ಕದ ಕ್ಲಾಸು...ಒಂಭತ್ತನೇ ತರಗತಿಯಲ್ಲಿ ಲೆಕ್ಕದ ಮಾಸ್ತರ್ ಆಗಿದ್ದ ಶ್ರೀ ನಾಗೇಶ ಅಂಗಿತ್ತಾಯರು ಹತ್ತನೆ ತರಗತಿಗೂ ಲೆಕ್ಕದ ಮಾಸ್ತರ್ ಆಗಿದ್ದರು. ಅವರ ಲೆಕ್ಕದ ಪಾಠ ಎಂದರೆ ಒಂದು ರೀತಿಯಲ್ಲಿ ಪಿಟೀಲು ವಾದನದಂತೆ. ಶ್ರುತಿ ಸರಿ ಹೊಂದುವವರೆಗೂ ಅವರು ಬಿಡುವುದಿಲ್ಲ. ತಿಳಿಯದೇ ಇದ್ದುದನ್ನು ಅರ್ಥೈಸುವ ಪ್ರಾಮಾಣಿಕ ಪ್ರಯತ್ನ ಅಲ್ಲಿರುತ್ತದೆ. ತರಗತಿಗೆ ಬಂದವರೇ ನನ್ನನ್ನು ಕಂಡು ಕಿರುನಗು ನಕ್ಕರು. ಅವರಿಗೆ ತಿಳಿದಿತ್ತು...ನಾನು ಹಿಂದೆ ಉಳಿಯುವುದಿಲ್ಲ ಬಿಟ್ಟು ಹೋದ ಪಾಠವನ್ನು ನಾನು ಕೈವಶ ಮಾಡಬೇಕಿತ್ತು. ಅವರ ವಾಸ ನಮ್ಮ ಮನೆಯ ಸಮೀಪದಲ್ಲೇ ಇದ್ದುದರಿಂದ ಸಾಯಂಕಾಲ ಬರುವಂತೆ ಹೇಳಿದ್ದರು.  ಸಾಯಂಕಾಲದ ಹೊತ್ತು ಅವರ ರೂಮಿನಲ್ಲಿ ಹಲವು ಪಾಠಗಳ ಅಭ್ಯಾಸವನ್ನು ಮಾಡಿದ್ದೆ. ನಾನು ಗಣಿತದಲ್ಲಿ ಅತ್ಯಂತ ಹೆಚ್ಚು ಅಂಕಗಳನ್ನು ಪಡೆದಿದ್ದರೆ ಅದರ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಕಬ್ಬಿಣದ ಕಡಲೆಯಾಗುವ  ಗಣಿತದಲ್ಲಿ  ತುಂಬಾ ಆಸಕ್ತಿಯನ್ನು ಉಂಟು ಮಾಡಿದವರು ಇವರು.  ಯಾವುದೇ ಪಾಠವನ್ನು ಕಳೆದುಕೊಂಡರೂ ಇವರ ಲೆಕ್ಕದ ಪಾಠವನ್ನು ಮಿಸ್ ಮಾಡುತ್ತಿರಲಿಲ್ಲ.   ಇದೆಲ್ಲದಕ್ಕಿಂತಲೂ ಆಶ್ಚರ್ಯ ತಂದಿರುವ ಘಟನೆ ಎಂದರೆ, ತಲೆಂಗಳ ನಾರಾಯಣ ಭಟ್ಟರು ಭೌತ ಶಾಸ್ತ್ರ ವಿಷಯಕ್ಕೆ ಗುರುಗಳಾಗಿದ್ದರು. ಹತ್ತನೆ ತರಗತಿಗೆ ನಾನು ಬರುವಾಗ  ಅದಾಗಲೇ ಕೆಲವು ತರಗತಿಗಳು ಕಳೆದು ಹೋಗಿತ್ತು. ಅಂದು ತರಗತಿಗೆ ಬಂದವರೆ ನಾನು ಬಾರದೇ ಉಳಿದ ಕಾರಣ ತಿಳಿದು, ಕೇವಲ ನನಾಗಾಗಿ ಕಳೆದು ಹೋದ ಪಾಠವನ್ನು ವಿಶೇಷವಾಗಿ  ಮತ್ತು ಸಂಕ್ಷೇಪವಾಗಿ ಪುನಃ ಮಾಡಿದರು. ಯಾವ ಅಧ್ಯಾಪಕ ತಾನೇ ವಿದ್ಯಾರ್ಥಿ ಬಗ್ಗೆ ಹೀಗೆ ಮಾಡುವುದಕ್ಕೆ ಸಾಧ್ಯ? ಇದೊಂದು ಅನುಭವ. 

ಕಾಯರ್ ಕಟ್ಟೆ ಹೈಸ್ಕೂಲು ನಮ್ಮ ಹತ್ತನೆ ತರಗತಿಯ ಬ್ಯಾಚ್ ಮುಗಿವವರೆಗೆ ಉತ್ತಮವಾಗಿತ್ತು. ಅದೊಂದು ಸ್ವರ್ಣ ಯುಗ . ಮಕ್ಕಳ ಪಾಲಿಗೂ ಗುರುಗಳ ಪಾಲಿಗೂ ಅದು ಸುವರ್ಣ ಯುಗ. ಅನಂತರ ಒಂದು ಸಲ ಮಾಸ್ತರೊಬ್ಬರು ಸಿಕ್ಕಿದಾಗ, ಈಗ ಶಿಸ್ತು ಸಭ್ಯತೆ ಎಲ್ಲ ಹೋಗಿದೆ. ಈಗ ಕೇವಲ ಸಂಬಳ ಸಿಗುತ್ತದಲ್ಲಾ ಎಂಬ ಜೀವನ ನಿರ್ವಹಣೆ ಮಾತ್ರ ಎದುರಿಗೆ ಇರುತ್ತದೆ. ಅದು ಹೇಗೂ ಇರಲಿ, ಆಗಿನ ಅಧ್ಯಾಪಕ ವೃಂದವನ್ನು ಸ್ಮರಿಸುವಾಗ ನಾನು ಈಗ ಉಪಯೋಗಿಸಿವ ಒಂದೊಂದು ಅಕ್ಷರವೂ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತದೆ.

ಮೂರು ವರ್ಷ ಶಾಲೆ ಬಿಟ್ಟು ಆನಂತರ ಆರನೇ ತರಗತಿಗೆ ಸೇರಿದಾಗ ನಾನು ದಡ್ಡರ ಸಾಲಿನಲ್ಲೇ ಗುರುತಿಸಲ್ಪಟ್ಟೆ. ಕರ್ನಾಟಕದಿಂದ ಬಂದು ಇಲ್ಲಿ ಸೇರುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಇರುತ್ತಿತ್ತು. ಅದರಲ್ಲಿ ನಾನು ತೇರ್ಗಡೆಯಾಗಿದ್ದೆ ಎನ್ನುವುದಕ್ಕಿಂತ ನನ್ನನ್ನು ಕಷ್ಟದಲ್ಲಿ ಪಾಸ್ ಮಾಡಿದ್ದರು. ಇವುಗಳಿಂದ  ಒಂದು ರೀತಿಯ ಕೀಳರಿಮೆ ಇದ್ದರೂ ಅನಿವಾರ್ಯ ಎಂದುಕೊಂಡು ಮುಂದೆ ಹೆಜ್ಜೆ ಇಟ್ಟೆ.  ಆಗ ಶಾಲೆಗೆ ಸೇರುವಾಗ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಅಚ್ಚುತ ಶೆಣೈಯವರು ಒಂದು ಮಾತು ಹೇಳಿದರು. ನಾನು ಬಾಲ್ಯದಿಂದಲೇ ಅವರು ಹೆಡ್ ಮಾಸ್ತರ್ ಎಂದು ಅವರನ್ನು ಕಂಡವ. ಹೆಡ್ ಮಾಸ್ತರ್ ಎಂಬ ವ್ಯಕ್ತಿಚಿತ್ರ  ಎಂಬುದು ಇದ್ದರೆ ಮೊದಲಿಗೆ ಬರುವ ಮುಖ ಇವರದ್ದು. ಅವರು ಆಫೀಸ್ ರೂಮಿಗೆ ಕರೆದು ಹೇಳಿದರು, "ಎಸ್ ಎಸ್ ಎಲ್ ಸಿ ಯಲ್ಲಿ ಫಸ್ಟ್ ಕ್ಲಾಸ್ ತೆಗೆದು ಹೋಗಬೇಕು."    ಆದರೆ ನನಗೆ ಭರವಸೆ ಇರಲಿಲ್ಲ. ವಿದ್ಯಾಭ್ಯಾಸದಿಂದ ಬಹಳ ದೂರ ಇದ್ದ ನಾನು ಎಲ್ಲರ ಒತ್ತಾಸೆಗೆ ಸೇರಿದ್ದೆ. ಅಚ್ಯುತ ಶೆಣೈ ಬಹಳ ಶಿಸ್ತುಬದ್ದ ಅಧ್ಯಾಪಕರು.    ಅವರ ಮಾತುಗಳು ಭಾಷಣಗಳು ಕೇಳುವುದೇ ಒಂದು ಖುಷಿ. ಇವರೂ ಒಂದು ಬಾರಿ ಖಾಲಿ ಪಿರಿಯಡ್ ಗೆ ಕ್ಲಾಸ್ ತೆಗೆದುಕೊಳ್ಳುವುದಕ್ಕೆ ಬಂದಿದ್ದರು. ಅಂದು ಇವರು ಮಾಡಿದ ಲೆಕ್ಕದ ಪಾಠ ಮರೆಯುವುದಕ್ಕಿಲ್ಲ. ಹೀಗೆ ಯಾವುದೇ ವಿಷಯದ ಪಾಠಕ್ಕೂ ಒಂದೊಂದು ಕ್ಲಾಸ್ ಗೆ ಹೋಗುವುದು ಇವರ ಗುಣ.  ಹೈಸ್ಕೂಲು ಜೀವನದ ಕೊನೆಯ ಹಂತ ಎಂಬಂತೆ  ಎಸ್ ಎಸ್ ಎಲ್ ಸಿ ಯಲ್ಲಿ ಫಲಿತಾಂಶ ನೋಡುವುದಕ್ಕೆ ಹೋಗಿದ್ದೆ.  ಫಲಿತಾಂಶ ಮೊದಲೇ ಗೊತ್ತಿತ್ತು. ಆದರೂ ಅದೊಂದು ಸಂತಸ. ಭಾರತ ಗೆದ್ದ ಕ್ರಿಕೇಟ್ ಪಂದ್ಯದ ಮುಖ್ಯಾಂಶ ಕಂಡಂತೆ. ಪಲಿತಾಂಶ ಆಫೀಸ್ ಕೋಣೆಯ ಹೊರಗೆ ನೇತು ಹಾಕಿದ್ದರು. ನಿರೀಕ್ಷೆಯಂತೆ ಪಸ್ಟ್ ಕ್ಲಾಸ್ ತೆಗೆದ ಇಪ್ಪತ್ತೈದು ವಿದ್ಯಾರ್ಥಿಗಳ ಸಾಲಿನಲ್ಲಿ ನನ್ನ ಹೆಸರಿತ್ತು. !!   ನಾನು ಫಲಿತಾಂಶ ನೋಡಿ ಆಫೀಸ್ ಕೋಣೆಯ ಒಳಗೆ ಅಚ್ಚುತ ಶೆಣೈ ಕುಳಿತುಕೊಳ್ಳುತ್ತಿದ್ದ ಜಾಗವನ್ನು ನೋಡಿದೆ. ಐದು ವರ್ಷದ ಹಿಂದಿನ ಮಾತು ನೆನಪಾಗಿತ್ತು. ಆಗ ಬಹುಶಃ ಅವರು ಇರಬೇಕಿತ್ತು. ಆಗ ನಿಜಕ್ಕೂ ಧನ್ಯನಾಗಿದ್ದೆ. ಆ ಶಾಲೆ ಶುದ್ದ ಸಂಸ್ಕಾರವನ್ನು ಈ ರೀತಿಯಲ್ಲಿ ನೀಡಿತ್ತು. 

ಹೀಗೆ ಹಲವು ಅಧ್ಯಾಪಕರು ಒಂದೊಂದು ವಿಧದಲ್ಲಿ ಸ್ಮರಣೆಗೆ ಬರುತ್ತಾರೆ. ಇದರಲ್ಲಿ ಅದ್ಭುತ ವ್ಯಕ್ತಿತ್ವದ ಮುದ್ರೆಯನ್ನು ಒತ್ತಿದವರು ಮುಖ್ಯೋಪಾಧ್ಯಾಯರಾಗಿದ್ದ  ಗುರು ಎಂದು ಕರೆಸಿಕೊಳ್ಳುತ್ತಿದ್ದ ಶ್ರೀ ಗುರು ರಂಗಯ್ಯ ಬಲ್ಲಾಳರು.  ಅದ್ಭುತ ಜ್ಞಾನ ಸಂಪತ್ತು. ಪಠ್ಯೆತರ ಚಟುವಟಿಕೆಯಲ್ಲಿ ಬತ್ತದ ಉತ್ಸಾಹ. ಇವರ ಅವಧಿಯಲ್ಲೇ ಶಾಲೆ ರಜತ ಮಹೋತ್ಸವವನ್ನು ಆಚರಿಸಿತ್ತು. ಯಕ್ಷಗಾನದಲ್ಲಿ ಅತೀವ ಆಸಕ್ತರಾಗಿರುವ ಇವರು ಮಕ್ಕಳಿಂದ ಸುಂದರ ಯಕ್ಷಗಾನವನ್ನು ಆಡಿಸಿ ನೋಡಿ ಖುಷಿ ಪಡುತ್ತಿದ್ದರು.  ನನ್ನ ಎಸ್ ಎಸ್ ಎಲ್ ಸಿ ಅಂಕ ಪಟ್ಟಿಯಲ್ಲಿ ಇವರ ಸಹಿ ಇದೆ. ಶ್ರೀ ಬಲ್ಲಾಳರದ್ದು ವಿಶಿಷ್ಟ ವ್ಯಕ್ತಿತ್ವ. ಈ ಶಾಲೆಯ ಹೆಚ್ಚಿನ ಎಲ್ಲಅಧ್ಯಾಪಕರದ್ದು ಊರಿನವರೇ ಆಗಿದ್ದುದರಿಂದ ನನಗೆ ಶಾಲೆಗೆ ಹೋಗುವ ಮೊದಲೇ ಪರಿಚಯವಿತ್ತು. ಇವರೂ ಸಹ ಪೂರ್ವ ಪರಿಚಿತರು.  ಶಾಲೆಯ ಸೂಚನಾ ಫಲಕದ  ವೃತ್ತ ಪತ್ರಿಕೆಗೆ ನನ್ನನ್ನೇ ಸಂಪಾದಕರನ್ನಾಗಿ ಮಾಡಿದ್ದರು. ಅದೂ ಒಂಭತ್ತನೇ ತರಗತಿಯಲ್ಲಿರುವಾಗ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ತೋರಿಸುವುದಕ್ಕೆ, ಬರವಣಿಗೆ ಚಿತ್ರಕಲೆ ಇತ್ಯಾದಿಯನ್ನು ತೋರಿಸುವುದಕ್ಕೆ ಇದೊಂದು ಮಾಧ್ಯಮ. ವಿದ್ಯಾರ್ಥಿಗಳು ತಮ್ಮದೇ ಕಾಗದದಲ್ಲಿ ಬರೆದು ಯಾ ಚಿತ್ರಿಸಿ ತಂದವುಗಳನ್ನು ಸಂಗ್ರಹಿಸಿ  ಈ ಸೂಚನಾ ಫಲಕದಲ್ಲಿ ಜೋಡಿಸುವ ಕೆಲಸ ನನ್ನದು. ಇದರಲ್ಲು ಉತ್ತಮವಾದವುಗಳ ಆಯ್ಕೆ ಇತ್ತು. ಈ ಕೆಲಸಕ್ಕೆ  ಸಾಮಾನ್ಯವಾಗಿ ಹತ್ತನೇ ತರಗತಿಯವರನ್ನೇ ಆಯ್ಕೆ ಮಾಡಲಾಗುತ್ತಿತ್ತು. ಆದರೆ ಮೊದಲ ಬಾರಿ ಒಂಭತ್ತನೆ ತರಗತಿಯಲ್ಲಿದ್ದ ನನ್ನನ್ನು ಆಯ್ಕೆ ಮಾಡಿದ್ದರು. ಆಗಿನಿಂದ ಸಿಕ್ಕಿದ ಬರವಣಿಗೆಯ ಪ್ರೇರಣೆ ಇದುವರೆಗೂ ಸುಪ್ತವಾಗಿ ಮುಂದುವರೆದಿದೆ.  ಶ್ರೀ ಬಲ್ಲಾಳರು ಬಿಡುವಿನ ಸಮಯದಲ್ಲಿ  ಇವರು ನಮ್ಮೊಂದಿಗೆ ಕ್ರಿಕೆಟ್,  ವಾಲಿ ಬಾಲ್ ಆಡುವುದಕ್ಕೆ ಮಕ್ಕಳಂತೆ ಜತೆಯಾಗುತ್ತಿದ್ದರು. ಆಟದಲ್ಲಿ ಬಹಳ ಗಂಭೀರವಾಗಿ ತಲ್ಲೀನರಾಗುತ್ತಿದ್ದರು.  ಇಂತಹ ಭಾಗ್ಯ ಯಾರಿಗೆ ಉಂಟು? ಹಲವು ವಿಷಯಗಳಲ್ಲಿ ಇವರನ್ನು ಮರೆಯುವಂತೇ ಇಲ್ಲ. ಒಂದು ಸಲ ಶಾಲಾ ಜವಾನ ( ಪೀಯೋನ್) ಗೈರು ಹಾಜರಾಗಿದ್ದಾಗ ಕ್ಲಾಸ್ ಕ್ಲಾಸ್ ಗೆ ನೋಟೀಸು ಕೊಡುವುದಕ್ಕೆ ನನ್ನನ್ನೇ ಕಳುಹಿಸಿದ್ದರು. ಅದೊಂದು ದೊಡ್ಡ ಹಿರಿಮೆಯಾಗಿ ಕಂಡಿತ್ತು. ಮಕ್ಕಳೊಂದಿಗೆ ಮಕ್ಕಳಂತೆ ಮಿತ್ರರಂತೆ ಇವರು ಬೆರೆಯುತ್ತಿದ್ದ ರೀತಿ ಅನನ್ಯ.  ಬಿಡುವಿನ ಪಿರಿಯಡ್ ನಲ್ಲಿ ಯಾವುದಾದರೊಂದು ವಿಷಯಕ್ಕೆ ಪಾಠವನ್ನು ವಿಶೇಷವಾಗಿ ತೆಗೆದುಕೊಳ್ಳುತ್ತಿದ್ದರು. ಹಾಗೇ ಒಂದು ಸಲ ಹತ್ತನೆ ತರಗತಿಯಲ್ಲಿ ಒಂದು   ಇಂಗ್ಲೀಷ್ ಪಾಠವನ್ನು ಮಾಡಿದ್ದರು.  ಕನ್ನಡ ಭಾಷೆಯ  ಒಂದೇ ಒಂದು ಶಬ್ದವನ್ನೂ ಬಳಸದೆ ಸಂಪೂರ್ಣ ಇಂಗ್ಲೀಷ್ ಭಾಷೆಯಲ್ಲೇ ಮನ ಮುಟ್ಟುವಂತೆ  ಇವರು ಪಾಠ ಮಾಡಿದ್ದನ್ನು ಮರೆಯುವ ಹಾಗಿಲ್ಲ. ಪಾಠದ ಸನ್ನಿವೇಶಗಳನ್ನು ಸ್ವತಹ ಅಭಿನಯಿಸಿ ಮಕ್ಕಳಿಗೆ ಅರ್ಥವಾಗುವಂತೆ ಪಾಠ ಮಾಡಿದ್ದರು. ಇದೊಂದು ಮರೆಯಲಾಗದ ಅನುಭವ.  ಇವರ ಅವಧಿಯಲ್ಲಿ ನಾವು ವಿದ್ಯಾರ್ಥಿಗಳಾಗಿದ್ದೇವೆ ಎನ್ನುವುದೇ ಒಂದು ಹಿರಿಮೆ. 

ಮಹಮ್ಮದ್ ಮಾಸ್ತರ್ ಬಗ್ಗೆ ಈ ಮೊದಲು ಬರೆದಿದ್ದೆ. ಆರನೇ ತರಗತಿಯಲ್ಲಿ ಕ್ಲಾಸ್ ಟೀಚರ್ ಆಗಿದ್ದ ವಾಸುದೇವ ಶೆಟ್ಟರು ಎಲ್ಲಾ ಪಾಠಗಳ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಅದರಂತೆ ಇವರಿಗೆ ನಾನು ಅತ್ಯಂತ ಹತ್ತಿರವಾಗಿದ್ದೆ. ಶಾಲೆಯ ಬಿಟ್ಟುಳಿದ ಚಟುವಟಿಕೆಗಳಲ್ಲಿ ನನ್ನನ್ನು ಆಸಕ್ತಿಯಿಂದ ಸೇರಿಸುತ್ತಿದ್ದರು. ಅವರ ನೇತೃತ್ವದಲ್ಲಿ ರಜತ ಮಹೋತ್ಸವದ ತುಳು ನಾಟಕದಲ್ಲಿ ಮುಖ್ಯ ಪಾತ್ರವನ್ನು ನನಗೆ ನೀಡಿದ್ದರು. ಇನ್ನು ಆರನೇ ತರಗತಿಯಲ್ಲಿ ವಿಜ್ಞಾನದ ವಿಷಯಕ್ಕೆ ಟೀಚರ್ ಆಗಿ ಬಂದವರು ಪ್ರಭಾವತಿ ಟೀಚರ್. ಮೇಲೆ ಹೇಳಿದ ನಾರಾಯಣ ಭಟ್ಟರ ಶ್ರೀಮತಿ ಇವರು. ಇವರು ಮಕ್ಕಳಿಗೆ ಹೇಳುವ ಪಾಠದ ರೀತಿ ಹೇಗಿತ್ತು ಎಂದರೆ ಅಲ್ಲಿ ಮಮತೆ ವಿಶ್ವಾಸ ತುಂಬುವಂತಿತ್ತು. ಚೆನ್ನಾಗಿ ಅರ್ಥ ಮಾಡಿಸುತ್ತಿದ್ದರು. ಇವರ ತಾಳ್ಮೆ ಉಲ್ಲೇಖಾರ್ಹ.  ಬೇರೆ ತರಗತಿಗೆ ಲೆಕ್ಕವನ್ನೂ ತೆಗೆದುಕೊಳ್ಳುತ್ತಿದ್ದ ಇವರಲ್ಲಿ ಹಲವು ಸಲ ಲೆಕ್ಕ ಪಾಠದ ಬಗೆಗಿನ ಸಂಶಯವನ್ನು ವೈಯಕ್ತಿಕವಾಗಿ ಕೇಳಿ ಪರಿಹರಿಸಿಕೊಂಡಿದ್ದೇನೆ. ಹತ್ತಿರ ಕುಳಿತುಕೊಳ್ಳಿಸಿ ಒಂದೊಂದೆ ಹೇಳುತ್ತಿದ್ದರೆ ಅದೊಂದು ದಿವ್ಯ ಅನುಭವ.  ಇನ್ನು ಆರನೇ ತರಗತಿಯಲ್ಲಿ ಹಿಂದಿ ಪಾಠಕ್ಕೆ ಬಂದ ಹಿಂದಿ ಪಂಡಿತರು, ವೆಂಕಟ್ರಮಣ ಮಯ್ಯ...ಮಯ್ಯರು ಅಂತಲೇ ಕರೆಸಿಕೊಳ್ಳುತ್ತಿದ್ದ ಇವರ ಹಿಂದಿ ವ್ಯಾಕರಣ ಅಧ್ಬುತವಾಗಿತ್ತು. ಇಂದು ನಾನು ಹಿಂದಿಯಲ್ಲಿ ವ್ಯವಹರಿಸುತ್ತಿದ್ದರೆ ಇವರ ಯೋಗ ದಾನ ಬಹಳ ದೊಡ್ಡದು. ಅದರಂತೆ ಏಳನೇ ತರಗತಿಗೆ ಇದೇ ಅಧ್ಯಾಪಕರು ಇದ್ದರು, ವೆತ್ಯಾಸವೆಂದರೆ ಹಿಂದಿಗೆ ಗಂಗಾಧರ್ ಮಾಸ್ತರ್ ಎಂಬ ಮಲಯಾಳಿ ಅಧ್ಯಾಪಕರಿದ್ದರು. ಇವರು ಅರ್ಧ ಮಲಯಾಳ ಹಾಗು ಕನ್ನಡದಲ್ಲಿ ಪಾಠ ಮಾಡಿದರೂ ಅದು ಸುಂದರವಾಗಿತ್ತು. ಇವರ ಅಧ್ಯಾಪನೆಯಲ್ಲಿ ಹಿಂದಿಯಲ್ಲಿ ಐವತ್ತಕ್ಕೆ ಐವತ್ತು ಅಂಕ ಪಡೆದದ್ದು ನನ್ನ ಹಿರಿಮೆ. 

ಇನ್ನು ಏಳು ಮುಗಿಸಿ ಎಂಟನೆ ತರಗತಿಗೆ ಸೇರಿದಾಗ ನಾವೆಲ್ಲ ಪ್ರೌಢರಾಗಿ ನಿಜವಾಗಿ ಹಸ್ಕೂಲ್ ವಿದ್ಯಾರ್ಥಿಗಳಾಗಿದ್ದೆವು. ಪ್ರೌಢ  ಎಂದರೆ ಅದು ಬಾಲ್ಯಕ್ಕೂ ಯೌವನಕ್ಕೂ ಇರುವ ಸೇತುವೆ. ಇತ್ತ ಬಾಲ್ಯವೂ ಬಿಟ್ಟಿಲ್ಲ ಅತ್ತ ಯೌವನವೂ ಇಲ್ಲದ ಸ್ಥಿತಿ. ಇಲ್ಲಿ ಎಲ್ಲ ವಿಷಯಕ್ಕೂ ಬೇರೆ ಬೇರೆ ಅಧ್ಯಾಪಕರು. ಕನ್ನಡಕ್ಕೆ ಕನ್ನಡ ಪಂಡಿತ ಸುಬ್ಬಣ್ಣ ಮಾಸ್ತರ್. ರಾಗವಾಗಿ ರಾಘವಾಂಕ, ನಾರಣಪ್ಪ ಮುಂತಾದವರ ಹಳೆಕನ್ನಡ ಪದ್ಯಗಳನ್ನು ಹೇಳುತ್ತಿದ್ದ ಇವರದ್ದು ವ್ಯಾಕರಣ ಪಾಠ ಅದ್ಭುತವಾಗಿತ್ತು. ಮಾತ್ರಾಗಣ ಅಕ್ಷರಗಣಗಳು ಈಗಲೂ ನೆನಪಾಗುತ್ತವೆ. ಯಾವುದೇ ಪದ್ಯ ಪಾಠ ಮಾಡಿದ ನಂತರ ಅದನ್ನು ಹೇಳುವುದಕ್ಕೆ ನನ್ನಲ್ಲಿ ಹೇಳುತ್ತಿದ್ದರು. ರಾಜಕುಮಾರ್ ಒಂದು ಸಲ ರಾಗವಾಗಿ ಹೇಳಿಬಿಡು. ನಾನು ಎದ್ದು ನಿಂತು ಗಂಭೀರವಾಗಿ ಸ್ಪಷ್ಟ ಉಚ್ಚಾರದಲ್ಲಿ ಪದ್ಯಗಳನ್ನು ಹೇಳುತ್ತಿದ್ದೆ.    ನನಗೆ  ವೇದ ಮಂತ್ರದ ಪಠಣದಿಂದ ಅಕ್ಷರದ ಸ್ಪಷ್ಟ ಉಚ್ಚಾರ ಕರಗತವಾಗಿತ್ತು. 

  ಇಲ್ಲಿ ಇಂಗ್ಲೀಷ್ ಮತ್ತು ಲೆಕ್ಕದ ಪಾಠಕ್ಕೆ ಬಂದವರು ನಾಗೇಶ್ ಅಂಗಿತ್ತಾಯ ಮಾಸ್ತರು. ಇವರ ಮತ್ತು ನನ್ನ ಈ ಸಂಪರ್ಕ ಎಸ್ ಎಸ್ ಎಲ್ ಸಿ ತನಕವು ಅಬಾಧಿತವಾಗಿ ಮುಂದುವರೆದಿತ್ತು. ವಿಜ್ಞಾನದ ವಿಷಯಕ್ಕೆ , ರಸಾಯನ ಶಾಸ್ತ್ರಕ್ಕೆ ರಾಂಭಟ್ಟ ಮಾಸರ್, ಎರಡೂ ಕೈಗಳಲ್ಲಿ ಏಕಪ್ರಕಾರವಾಗಿ ಬೋರ್ಡ್ ನಲ್ಲಿ ಬರೆಯುತ್ತಿದ್ದ ಇವರ ಚಾಣಾಕ್ಷತೆ ವಿಸ್ಮಯವಾಗಿತ್ತು. ನಮ್ಮ ಯಾವ ಸಂಶಯವಿದ್ದರೂ ಶಾಲೆಯ ಪ್ರಯೋಗ ಶಾಲೆಗೆ ಕರೆಸಿ ಹೇಳಿಕೊಡುತ್ತಿದ್ದರು. ಪ್ರಯೋಗ ಶಾಲೆಯ ಉಸ್ತುವಾರಿ ಇವರದ್ದೇ ಆಗಿತ್ತು. ಇನ್ನು ಭೌತ ಶಾಸ್ತ್ರಕ್ಕೆ ಶ್ರೀನಿವಾಸ ಮಾಸ್ತರ್. ದೂರದಿಂದ ಸಂಬಂಧಿಯಾಗಿ ಮೊದಲೇ ಪರಿಚಯ ಇದ್ದ ಇವರ ಪಾಠ ಪರಿಚಯವಾಗಿದ್ದು ಎಂಟನೇ ತರಗತಿಯಲ್ಲಿ ಆನಂತರ ಹತ್ತನೆ ತರಗತಿಯವರೆಗೂ ಮುಂದುವರೆದು ಹತ್ತನೇ ತರಗತಿಯಲ್ಲಿ ಕ್ಲಾಸ್ ಮಾಸ್ತರ್ ಆಗಿದ್ದರು. ಶ್ರೀನಿವಾಸ ಮಾಸ್ತರ್, ಒಂದು ಅದ್ಭುತ ವ್ಯಕ್ತಿತ್ವ. ಬಹಳ ಸಾಂತ್ವನ ಚಿತ್ತದಲ್ಲಿ ಮೆತ್ತಗೆ ಮಾತನಾಡುತ್ತಿದ್ದ ಇವರ ಮಾತು ಬಹಳ ಬುದ್ದಿವಂತಿಕೆಯಿಂದ ಕೂಡಿರುತ್ತಿತ್ತು.      ಮಕ್ಕಳ ತಂಟೆ ಕಿರಿ ಕಿರಿಯ ಸಂದರ್ಭಗಳಲ್ಲಿ  ಇವರು ಮಕ್ಕಳನ್ನು ತನಿಖೆ ಮಾಡುವಾಗ ಅದೊಂದು ವಿಡಂಬನೆಯಿಂದ ನಮಗೆಲ್ಲ ಮನರಂಜನೆಯನ್ನು ಕೊಡುತ್ತಿತ್ತು. ಬುದ್ದಿವಂತಿಕೆಯ ಪ್ರಶ್ನೆಗಳು ಇಕ್ಕಟ್ಟಿನಲ್ಲಿ ಸಿಲುಕಿಸುವ ರೀತಿ ವಿಶಿಷ್ಟವಾಗಿರುತ್ತಿತ್ತು. ಇವರು ಸಿಟ್ಟಾಗಿದ್ದನ್ನು ಕಾಣುವುದಕ್ಕೆ ಸಾಧ್ಯವಿರಲಿಲ್ಲ.  ಅವರು ತರಗತಿಯಲ್ಲಿ ಹೆಜ್ಜೆ ಇಡುತ್ತಿದ್ದರೆ ಅದು ಬೆಕ್ಕಿನ ಹೆಜ್ಜೆಯಂತೆ ಗೊತ್ತೇ ಆಗುತ್ತಿರಲಿಲ್ಲ. ಹತ್ತಿರ ಬಂದು ಹೆಗಲಿಗೆ ಕೈ ಹಾಕಿ ಮಾತನಾಡುತ್ತಿದ್ದರು. ಅತ್ಯಂತ ಸ್ನೇಹಮಯಿ. ಅತ್ಯಂತ ಚಾಣಾಕ್ಷ. ಯಾವುದೇ ಸಮಸ್ಯೆಗಳನ್ನು ಇವರು ನೀವಾರಿಸುತ್ತಿದ್ದ ರೀತಿ ಅದ್ಭುತ. ಶಾಲಾ ಜೀವನ ಮುಗಿದರೂ ಇವರ ಸಂಪರ್ಕ ಮುಂದುವರೆದಿತ್ತು. ನನ್ನ ಸ್ಕೂಟರ್ ನಲ್ಲಿ ಎಷ್ಟೋ ಸಲ ಇವರನ್ನು ಕರೆದುಕೊಂಡು ಹೋದ ಹಿರಿಮೆ ನನ್ನದು. 

ಒಂಭತ್ತನೆ ತರಗತಿಯಲ್ಲಿ ಕನ್ನಡ ಪಾಠಕ್ಕೆ ಒಂದು ವರ್ಷ ಗಣಪತಿ ಭಟ್ ಮಾಸ್ತರಾಗಿದ್ದರು. ಇವರ ಒಂದು ಕಾಲು ಪೋಲಿಯೋಗ್ರಸ್ಥವಾಗಿಯೋ ಏನೋ ನಡೆಯುವಾಗ ಒಂದಿಷ್ಟು ಕುಂಟುತ್ತಿದ್ದರು. ಅದರೆ  ಇವರ ಪಾಠ ಅದು ಕುಂಟುತ್ತಿರಲಿಲ್ಲ. ಅದು ಬಹಳ ಸುಂದರವಾಗಿತ್ತು. ಕಠಿಣವಾಗಿದ್ದ ವ್ಯಾಕರಣಗಳನ್ನು ಸರಳವಾಗಿ ಹೇಳುತ್ತಿದ್ದರು. ಪಠ್ಯದ ಕಥೆಗಳನ್ನು ವಿವರಿಸುತ್ತಿದ್ದ ರೀತಿ ಸುಂದರವಾಗಿತ್ತು. ಗಣಪತಿ ಭಟ್ಟರು ಶಾಲಾ ವಾಚನಾಲಯ ಅಥವ ಲೈಬ್ರರಿಯ ಮೇಲುಸ್ತುವಾರಿಯನ್ನು ವಹಿಸಿದ್ದರು. ಆಗ ನನಗೆ ಕಾದಂಬರಿ ಓದುವ ಹುಚ್ಚು ದಪ್ಪ ದಪ್ಪ ಕಾದಂಬರಿ ತಂದು ಮನೆಯಲ್ಲಿ ಓದುತ್ತಿದ್ದೆ. ಒಬ್ಬ ವಿದ್ಯಾರ್ಥಿಗೆ ಒಂದೇ ಪುಸ್ತಕವನ್ನು ಓದುವುದಕ್ಕೆ ಕೊಡುವುದು ನಿಯಮ. ಆದರೆ ಇವರು ನನಗೆ ಬೇಕಾದಷ್ಟು ಪುಸ್ತಕವನ್ನು ಪ್ರೀತಿಯಿಂದ ಓದುವುದಕ್ಕೆ ಕೊಡುತ್ತಿದ್ದರು. ಓದುವ ಹವ್ಯಾಸ ಹುಟ್ಟುಹಾಕಿದ ಅಧ್ಯಾಪಕರು ಇವರು. 

ನಮ್ಮ ಪ್ರೌಢ ಶಾಲಾ ಜೀವನದಲ್ಲಿ ಒಂದು ದಿನ ಹೊಸದಾಗಿ ಒಬ್ಬರು ಮಾಸ್ತರು ಬಂದರು. ಶ್ರೀ ಮಹಾಲಿಂಗೇಶ್ವರ ಭಟ್. ಬದಿಯಡ್ಕ ಸಮೀಪದ ನೀರ್ಚಾಲಿನಿಂದ ಇವರು ಬರುತ್ತಿದ್ದರು. ನಮ್ಮ ಮನೆಯ ಹತ್ತಿರದಲ್ಲೆ ಬಾಡಿಗೆ ರೂಮಿನಲ್ಲಿ ವಾಸವಾಗಿದ್ದ ನಾಗೇಶ ಮಾಸ್ತರ ಜತೆ ವಾಸವಾಗಿದ್ದರು.  ಇವರೊಂದು ರೀತಿಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ ಮಾಸ್ತರ್. ಬಹಳ ಖಂಡ ತುಂಡವಾಗಿ ಮಾತನಾಡುತ್ತಿದ್ದ ಇವರ ಇಂಗ್ಲೀಷ್ ಮತ್ತು ಸಮಾಜ ಶಾಸ್ತ್ರದ ಪಾಠ ಬಹಳ ಚೆನ್ನಾಗಿತ್ತು. ಪಾಠ ಮಾಡುವಾಗ ಇವರದೇ ಶೈಲಿಯ ಕೆಲವು ತಂತ್ರಗಾರಿಕೆಗಳು ಇರುತ್ತಿದ್ದವು. ಪಾಠಮಾಡುವಾಗ ನಿದ್ರೆಗೆ ಜಾರುವವರನ್ನು ಬೆಂಚಿನ ತುದಿಯಲ್ಲಿ ಕೂರಿಸಿ ಪಾಠ ಮಾಡುತ್ತಾ ಅತಿಂದ ಇತ್ತ ಓಡಾಡುವಾಗ ಇವರು ಅವರ ಬೆನ್ನು ಸವರಿ ಎಚ್ಚರದಿಂದ ಇಡುತ್ತಿದ್ದರು. ಬಹಳ ಸಭ್ಯತೆಯ ಶಿಸ್ತಿನ ಮನುಷ್ಯ. ಹಾಸ್ಯ ಭರಿತ ಮಾತುಗಳು. ಇವರ ಜತೆ ಮಾತನಾಡುವುದೆಂದರೆ ಅದೊಂದು ಬಗೆಯ ಆನಂದ. ನನ್ನಲ್ಲಿ ಬಹಳ ಅಕ್ಕರೆ ಇವರಿಗೆ. 

ಶಾಲೆಯಲ್ಲಿ ಕನ್ನಡ ವಿಭಾಗಕ್ಕೆ  ಎರಡು ಜನ ಮಹಿಳಾ ಟೀಚರ್ ಗಳು. ಅದರಲ್ಲಿ ಒಬ್ಬರು ಮೇಲೆ ಹೇಳಿದ ಪ್ರಭಾವತಿ ಟೀಚರ್ ಆದರೆ ಇನ್ನೊಬ್ಬರು ಪ್ರೇಮಲತಾ ಟೀಚರ್. ಅದ್ಭುತ ಎನ್ನುವಂತ ಟೀಚರ್ ಇವರು. ನಮ್ಮೊಂದಿಗೆ ಅಕ್ಕರೆಯಿಂದ ಬೆರೆಯುತ್ತಿದ್ದರು. ನಮ್ಮದೇ ಶಾಲೆಯ ಮಲಯಾಳಿ ಟೀಚರ್ ಜತೆ ನಮ್ಮ ಮನೆಯ ಪಕ್ಕದಲ್ಲೆ ಕೆಲವು ಸಲ ವಾಸ್ತವ್ಯ ಹೂಡುತಿದ್ದರು. ಆಗೆಲ್ಲ ನಮಗೆ ಉಚಿತ ಟ್ಯೂಷನ್. ನಾನು ಹತ್ತನೆ ತರಗತಿಯಲ್ಲಿರುವಾಗ ಒಂದು ಸಲ ಆರನೇ ತರಗತಿಯ ಮಕ್ಕಳ ಪರೀಕ್ಷಾ ಪೇಪರ್ ಕೊಟ್ಟು ನೋಡುವುದಕ್ಕೆ ಹೇಳಿದ್ದರು. ನಾನು ತಪ್ಪು ಹುಡುಕಿ ತೋರಿಸಬೇಕಿತ್ತು. ಬಹಳ ಸಾಧು ಸ್ವಭಾವದ ಭಾವನಾತ್ಮಕ ಮನಸ್ಸಿನ ಟೀಚರ್ ಇವರು. ನಮ್ಮ ಮನೆಯಲ್ಲಿ ಮಾಡಿದ ಅಡುಗೆ ತಿಂಡಿಯನ್ನು ಇವರಿಗೆ ತಂದು ಕೊಡುತ್ತಿದ್ದೆ. ಇವರ ಸ್ನೇಹಮಯ ನಡವಳಿಕೆ ಮರೆಯುವುದಕ್ಕಿಲ್ಲ. 

ನಮ್ಮ ಶಾಲೆಗೆ ಕೇರಳದ ತಲಶ್ಯೇರಿಯಿಂದ ಡ್ರಾಯಿಂಗ್ ಮಾಸ್ತರ್ ಒಬ್ಬರು ಬಂದಿದ್ದರು. ಇವರ ಹೆಸರು ಕೇಶವನ್.  ಹೈಸ್ಕೂಲ್ ಚರಿತ್ರೆಯಲ್ಲಿ ಇವರ ಹೆಸರನ್ನು ಉಲ್ಲೇಖಿಸದೇ ಇದ್ದರೆ ಅದು ಅಪೂರ್ಣವಾಗುತ್ತದೆ. ಅದ್ಭುತ ಹಸ್ತ ಪ್ರತಿಭೆಯ ಕಲಾವಿದರು ಇವರು. ಇವರ ಚಿತ್ರಕಲೆಯ ಪ್ರತಿಭೆ ಅಪಾರ. ಕ್ಷಣ ಮಾತ್ರದಲ್ಲಿ ಇವರು ಬಿಡಿಸುವ ಚಿತ್ರಗಳನ್ನು ನೋಡುವುದೇ ಒಂದು ಹಬ್ಬ. ನಮ್ಮ ಶಾಲೆಯ ರಜತ ಮಹೋತ್ಸವದ ಮಂಟಪವನ್ನು ವಿನ್ಯಾಸಗೊಳಿಸಿದವರು ಇವರು. ದೊಡ್ಡದಾ ಸರಸ್ವತಿಯ ಉಬ್ಬು ಪ್ರತಿಮೆಯನ್ನು ಅದರ ಗೋಡೆಯಲ್ಲಿ ಚಿತ್ರಿಸಿದವರು ಇವರು. ಅನನ್ಯ ಪ್ರತಿಭೆ. ಆದರೆ ಇವರನ್ನು ಕಂಡರೆ ವಿದ್ಯಾರ್ಥಿಗಳಿಗೆ ಅಷ್ಟಕ್ಕಷ್ಟೆ. ಸಿಕ್ಕಾ ಪಟ್ಟೆ ವಿಲಕ್ಷಣ ಸ್ವಭಾವದ ಅಧ್ಯಾಪಕರು. ಮಲಯಾಳ ಬಿಟ್ಟರೆ ಬೇರೆ ಭಾಷೆ ತಿಳಿಯದು. ಎಲ್ಲ ವಿದ್ಯಾರ್ಥಿಗಳ ಜತೆಗೂ ಬೆರೆಯುವಾಗ ಎನೋ ಒಂದು ಸಮಸ್ಯೆ ಎದುರಾಗುತ್ತಿತ್ತು. ಹಲವು ವಿದ್ಯಾರ್ಥಿಗಳಿಗೆ ಹೊಡೆಯುವುದು ಇತ್ಯಾದಿ ...ಆದರೂ ಇವರಿಗೆ ನನ್ನನ್ನು ಕಂಡರೆ ಒಂದು ಅಭಿಮಾನ. ಇವರು ತಂಗಿದ್ದ ರೂಮಿಗೆ ಕರೆಯುತ್ತಿದ್ದರು. ಇವರ ಕಲಾಕೃತಿಗಳನ್ನು ತೋರಿಸುತ್ತಿದ್ದರು. ನನಗೂ ಒಂದಷ್ಟು ಚಿತ್ರಕಲೆಯಲ್ಲಿ ಆಸಕ್ತಿ ಬರುವಂತೆ ಮಾಡಿದ್ದರು.  ಶಾಲೆಯ ಎಲ್ಲ ಕೆಲಸಗಳಲ್ಲಿ ನನ್ನನ್ನು ಸೇರಿಸುತ್ತಿದ್ದರು. 

ನಮ್ಮ ಶಾಲೆಯಲ್ಲಿ ಇದ್ದ ಇನ್ನೊಬ್ಬ ಮಾಸ್ತರ್, ರಮೇಶ ಮಾಸ್ತರ್, ಹೆಚ್ಚಾಗಿ ಲೆಕ್ಕದ ಪಾಠವನ್ನೇ ಮಾಡುತಿದ್ದ ಇವರು ನಾವಿರುವಗಲೇ ಇನ್ನೊಂದು ಶಾಲೆಗೆ ಹೆಡ್ ಮಾಸ್ತರ್ ಆಗಿ ವರ್ಗವಾಗಿ ಹೋದರು. ಇವರು ನನಗೆ ಪಾಠಕ್ಕೆ ಇಲ್ಲವಾಗಿದ್ದರೂ ನನ್ನ ಜತೆ ಒಳ್ಳೆ ಸ್ನೇಹದಿಂದ ಬೆರೆಯುತ್ತಿದ್ದರು. ಇವರಲ್ಲು ಹಲವು ಸಲ ನನ್ನ ಲೆಕ್ಕದ ಸಮಸ್ಯೆಗಳನ್ನು ಪರಿಹರಿಸಿಕೊಂಡದ್ದಿದೆ. 

ಶಾಲೆಯಲ್ಲಿ ಬಯೋಲಜಿ ಅಂದರೆ ಜೀವ ಶಾಸ್ತ್ರಕ್ಕೆ ಒಬ್ಬರೇ ಒಬ್ಬ ಮಾಸ್ತರ್ ಎಂದರೆ ನೂತಿಲ ಅಬ್ದುಲ್ಲ ಮಾಸ್ತರ್. ಜೀವ ಶಾಸ್ತ್ರಕ್ಕೆ ಜೀವ ತುಂಬುವ ಪಾಠ ಇವರದ್ದು. ಕಂಚಿನ ಕಂಠ. ಕುರ್ಚಿಯಲ್ಲಿ ಕುಳಿತೇ ಪಾಠ ಮಾಡುತ್ತಿದ್ದ ಇವರು ದೂರದಲ್ಲಿ ಕುಳಿತ ವಿದ್ಯಾರ್ಥಿಗೂ ಇವರ ಸ್ವರ ಕೇಳಿಸುತ್ತಿತ್ತು. ಶಾಲೆಯ ಕೊನೆಯ ವರ್ಷದಲ್ಲಿ ಪರೀಕ್ಷೆಗೆ ಹಲವು ದಿನ ಮೊದಲೆ ನಮಗೆ ವಿದಾಯ ಹೇಳಿಯಾಗಿತ್ತು. ಹಳೆಯ ಪ್ರಶ್ನೆ ಪತ್ರಿಕೆಯನ್ನು ಅಭ್ಯಾಸ ಮಾಡುತ್ತಿದ್ದ ನಾನು ಶಾಲೆಯಲ್ಲಿರುವಾಗಲೇ ಇವರಲ್ಲಿ ಒಂದು ಪ್ರಶ್ನೆಯನ್ನು ಕೇಳಿದ್ದೆ. ಆಗ ಅವರಿಗೆ ಅದರ ಉತ್ತರ ತತ್ ಕ್ಷಣಕ್ಕೆ ಹೊಳೆಯಲಿಲ್ಲ. ರಜೆ ಆರಂಭವಾಗಿ ಒಂದು ದಿನ ಹೊರಗೆ ಹೋಟೇಲ್ ಒಂದರಲ್ಲಿ ಸಿಕ್ಕಾಗ ಅದಕ್ಕೆ ಕರೆದು ಉತ್ತರ ಹೇಳಿದ್ದರು. ಅವರ ಬದ್ದತೆ ಮೆಚ್ಚತಕ್ಕದ್ದು. 



ಅತ್ಯಂತ ಚಿರಸ್ಮರಣೆಯ ಅಧ್ಯಾಪಕ ವೃಂದವನ್ನು ಪಡೆದ ವಿದ್ಯಾರ್ಥಿ ಜೀವನ ನನ್ನದು. ಗುರು, ಗು ಎಂದರೆ ಕತ್ತಲೆ ರು ಎಂದರೆ ಬೆಳಕು, ಕತ್ತಲೆಯಿಂದ ಬೆಳಕಿನ ಕಡೆಗೆ ಒಯ್ಯುವ ವ್ಯಕ್ತಿ ಎಂದರೆ ಗುರು. ಕತ್ತಲೆಯಿಂದ ನಾವು ಎಷ್ಟು ಬೆಳಕನ್ನು ಕಂಡಿದ್ದೇವೆ ಅದಕ್ಕೆ ಕಾರಣಕರ್ತರು ನಮ್ಮ ಶಾಲೆಯ ಅಧ್ಯಾಪಕ ವೃಂದ. ಈ ಸಂಭಂಧಗಳು ಹಿತವಾಗಿ ಇದ್ದರೆ ಶಾಲಾ ಜೀವನ ಎಂಬುದು ಮರೆಯುವುದಕ್ಕಿಲ್ಲ. ಈಗಲೂ ಶಾಲೆಯ ಪಕ್ಕದಲ್ಲೆ ಹಾದು ಹೋಗುವಾಗ ಒಂದು ದೃಷ್ಟಿ ಅಪ್ರಯತ್ನವಾಗಿ  ಅತ್ತ ಸರಿಯುತ್ತದೆ. ಮತ್ತೊಮ್ಮೆ ಆ ದಿನಗಳು ಬರಬಾರದೆ ಎಂದು ಹಪ ಹಪಿಸುತ್ತದೆ. 


Monday, March 6, 2023

ಮುಂಜಾನೆಯ ಕರೆ


ಇದನ್ನು ಯಾರು ಎಷ್ಟು ಓದುತ್ತಾರೋ ಗೊತ್ತಿಲ್ಲ. ಆದರೆ ಈ ಅನುಭವ ಹಿಡಿದಿಡುವುದು ಅಸಾಧ್ಯ.....

             ಮೊನ್ನೆ ಮುಂಜಾನೆ ಇನ್ನೇನು ಐದು ಘಂಟೆ ಆಗುತ್ತದೆ ಎನ್ನುವಾಗ ದೂರದ ಮಿತ್ತನೊಬ್ಬ   ಕರೆ ಮಾಡಿದ.  ಅದು ವೀಡಿಯೋ ಕರೆ. ಆ ಹೊತ್ತಿಗೆ ಯಾವ ಕರೆಯೂ ಸ್ವೀಕರಿಸುವುದಿಲ್ಲ. ಆದರೆ ಎಂದೂ ಕರೆಯದ ಮಿತ್ರ  ಆ ದಿನ ಕರೆ ಮಾಡಿದ್ದ. ವೆತ್ಯಾಸ ಇಷ್ಟೇ ಮನೆಯಲ್ಲೇ ಇರುವ ಮಗನ ಕರೆಗಿಂತಲೂ ದೂರದಲ್ಲಿರುವ ಮಗಳ ಕರೆ ಹಲವು ಸಲ ಆಪ್ಯಾಯಮಾನವಾಗುತ್ತದೆ. ಹಾಗಾಗಿ ಅಪರೂಪದ ಮಿತ್ರನ ವೀಡಿಯೊ ಕರೆಗೆ ಸ್ಪಂದಿಸಿದೆ.  ಆತ ಆಗತಾನೇ ಎದ್ದಿದ್ದ. ಎದ್ದವನಿಗೆ ಯೋಗಾಭ್ಯಾಸದ ಯಾವುದೊ ಸಮಸ್ಯೆಗೆ ನನ್ನಲ್ಲಿ ಚರ್ಚಿಸಬೇಕಿತ್ತು. ನಾನು ಎಚ್ಚರದಲ್ಲಿರುತ್ತೇನೆ ಎಂಬ ಭರವಸೆಯಲ್ಲೇ ಕರೆ ಮಾಡಿದ್ದ. ಆದರೆ ಆತನ ನಿರೀಕ್ಷೆಗೆ ಮೀರಿ ನನ್ನಿಂದ ಸ್ಪಂದನೆ ತನ್ನಿಂತಾನೇ ಆತನಿಗೆ ಲಭ್ಯವಾಯಿತು. ನನ್ನ ಮುಖವನ್ನು ನೋಡಿದವನೇ ಉದ್ಗಾರ ತೆಗೆದ, ಆತನ ಭಾವೋದ್ವೇಗ ಒಂದು ಸಲ ನನ್ನನ್ನು ಅಚ್ಚರಿಗೆ ತಳ್ಳಿತು. ಆತನೆಂದ " ಏನು ರಾಜಣ್ಣ...ಇಷ್ಟೊತ್ತಿಗೆ ಸ್ನಾನ ಆಗಿ ಇಷ್ಟು ಫ್ರೆಶ್ ಆಗಿದ್ದೀರಾ?" ನಂಬುವುದಕ್ಕೆ ಆತನಿಗೆ ಸಾಧ್ಯವಾಗಲಿಲ್ಲ.  ಸಾಮನ್ಯವಾಗಿ ಮನೆಯಲ್ಲಿ ಏನಾದರೂ ವಿಶೇಷವಾಗಿ ಹಬ್ಬ ಹರಿದಿನ ಇದ್ದರೆ ಅಷ್ಟು ಮುಂಜಾನೆ ಸ್ನಾನ ಮಾಡುವುದು ವಾಡಿಕೆ.  ಸ್ನಾನ ಮಾಡಿ ಭಸ್ಮಧಾರಣೆ ಮಾಡಿ ಆಗಿನ ವಾಸ್ತವದ ರೂಪದಲ್ಲಿ ನಾನು ಆತನಿಗೆ ಗೋಚರಿಸುತ್ತಾ ಇದ್ದೆ.  ಆತ ಕೇಳಿದ "ಇನ್ನೂ ಐದು ಆಗಿಲ್ಲ ಅಷ್ಟೊತ್ತಿಗೆ ಸ್ನಾನ ಮಾಡಿ ಇಷ್ಟು ಉತ್ಸಾಹದಲ್ಲಿ ಇರುತ್ತೀರಲ್ಲ. " ಆತನಿಗೆ ಮತ್ತೆ ಮಾತು ಹೊರಡಲಿಲ್ಲ. ಮತ್ತೆ ಆತನ ಸಮಸ್ಯೆಗೆ ನನಗೆ ತಿಳಿದ ಪರಿಹಾರ ಹೇಳಿ ಕರೆ ನಿಲ್ಲಿಸಿದೆ. ಮುಂಜಾನೆಯ ನನ್ನ ಅಮೂಲ್ಯ ಸಮಯ ಜಾರಿಹೋಗುತ್ತಿತ್ತು.  ಹೀಗೆ ಮುಂಜಾನೆಯ ಎಚ್ಚರ ಎಂಬುದು ನನಗೆ ಹಳೆಯದಾಗಿ ವರ್ಷ ಹಲವು ಸಂದಿತು. ಈಗ ಯಾರಾದರೂ ಅದರ ಬಗ್ಗೆ ಹೇಳಿದರೆ ನನಗೇ ಅಚ್ಚರಿಯಾಗುತ್ತದೆ.  ಜಗತ್ತಿನಲ್ಲಿ ಉತ್ತಮವಾಗಿರುವುದೆಲ್ಲವೂ ಅಚ್ಚರಿಯಾಗುವುದು ಅದು ವೈಶಿಷ್ಟ್ಯವಾಗಿ ಬದಲಾಗುವುದು ನಾವು ಪ್ರಕೃತಿಯಿಂದ ದೂರಾದ ಸಂಕೇತ. ಮುಂಜಾನೆ ಮಿತ್ರ ಕರೆ ಮಾಡಿದ, ಅಚ್ಚರಿ ದಿಗ್ಭ್ರಮೆ ವ್ಯಕ್ತ ಪಡಿಸಿದ. ಆದರೆ ನಾನೂ ಅದರಂತೆ ಮುಂಜಾನೆ ದಿಗ್ಭ್ರಮೆಗೆ ಒಳಗಾಗುವುದು ನನಗೆ ವಿಶೇಷವಾಗಿ ಉಳಿದಿಲ್ಲ.

                       ಮಿತ್ರನ ಅಚ್ಚರಿಬಗ್ಗೆ ನನಗೇ ಅಚ್ಚರಿಯಾಗಿತ್ತು. ಅಚ್ಚರಿ ಪಡುವಂತಹುದು ಏನಿದೆ? ಇರಬಹುದು, ನಮಗೆ ಕಾಣದೇ ಇರುವುದು ಕಾಣುವಾಗ ಅಚ್ಚರಿ ಎನಿಸುತ್ತದೆ. ಮುಂಜಾನೆ ಪರಿಶುದ್ದವಾಗಿ ಇರುವುದೂ ನಾನೊಬ್ಬನೇ ಎನಲ್ಲ? ಇದೂ ಒಂದು ಅಚ್ಚರಿಯಾಗುತ್ತದೆ.  ಮಿತ್ರನ ಪತ್ರಿಕ್ರಿಯೆಯ ಬಗ್ಗೆ ನಂತರ ಯೋಚಿಸಿದೆ, ಹೌದಲ್ಲ...ನಾನು ಸಹಜತೆಯಿಂದ ಅಸಹಜತೆಗೆ ಜಾರಿದೆನಾಇರಬಹುದೋ ಏನೋ? ಪ್ರಾಮಾಣಿಕತೆ ಸತ್ಯ ಎಲ್ಲವೂ ಅಪರೂಪವಾಗಿರುವಾಗ ಹಲವು ಸಲ ಇದು ಕಂಡರೆ ಅಚ್ಚರಿಯ ವಿಷಯವಾಗುತ್ತದೆ. ಕರ್ತವ್ಯ ನಿರ್ವಹಣೆಯೂ ಅಚ್ಚರಿಯ ವಿಷಯವಾಗುತದೆ. ನಮ್ಮದಲ್ಲದೇ ಇರುವ ವಸ್ತು ಬಯಸದೇ ಇದ್ದರೂ ಅದು ಅಚ್ಚರಿಯಾಗುತ್ತದೆ. ಎಲ್ಲೋ ಕಳೆದು ಹೋದ ವಸ್ತು ಪ್ರಾಮಾಣಿಕವಾಗಿ ತಂದು ಒಪ್ಪಿಸಿದರೆ ಕೃತಜ್ಞತೆಯಿಂದ ಸ್ಮರಿಸಿ ಧನ್ಯತೆಯನ್ನು ತಿಳಿಸುವುದು ಸಭ್ಯತೆ. ಆದರೆ ಯೋಚಿಸಿ ನಮಗೆ ಹೀಗೆ ಹೇಳುವ ಪ್ರೇರಣೆಯಾವುದು, ಸಮಾಜದಲ್ಲಿ ಪ್ರಾಮಾಣಿಕತೆ ಎಂಬುದು ವಿರಳವಾಗಿ ಗೋಚರವಾಗುವಾಗ.  ಬಸ್ ನಿರ್ವಾಹಕ, ಅಥವಾ ಅಂಗಡಿಯವನು ಕೊಡಬೇಕಾದ ದುಡ್ಡನ್ನು ನಾವು ಮರೆತು ಹೋದಾಗ ನೆನಪಿಸಿ ಕೊಟ್ಟರೆ ಅದು ವಿಶೇಷವಾಗುತ್ತದೆ. ಅದು ವಿಚಿತ್ರವಾಗುತ್ತದೆ.

             ವಾಸ್ತವದಲ್ಲಿ ನನಗಿದು ಸಹಜ ಸ್ಥಿತಿ. ಯಾರೂ ನನಗೆ ಮುಂಜಾನೆ ನಾಲ್ಕುಘಂಟೆಗೆ ಏಳು, ಸ್ನಾನ ಮಾಡು ಎಂದು ಕೋಲು ಹಿಡಿದು ನಿಲ್ಲುವುದಿಲ್ಲ. ನನಗೆ ನಿದ್ದೆ ಬಾರದಿರುವ ಖಾಯಿಲೆಯೂ ಇಲ್ಲ. ಆದರೂ ಎದ್ದುಬಿಡುವುದು ಸಹಜ ಜೀವನದ ಒಂದು ಭಾಗವದು. ಅದನ್ನು ಉಲ್ಲೇಖಿಸುವಾಗ, ಹಲವು ಸಲ ವಿಚಿತ್ರ ಎನಿಸುತ್ತದೆ. ವಾಸ್ತವದಲ್ಲಿ ಪ್ರಕೃತಿ ಇರಬೇಕಾದ ಸ್ವಭಾವ ಹೀಗೆ. ಅದು ವೈಶಿಷ್ಟ್ಯವಾಗುವಾಗ ಕೆಲವೊಮ್ಮೆ ಇರುಸು ಮುರುಸಾಗುತ್ತದೆ. ನಾನೇ ಏನೋ ಅಸಹಜ ಎನ್ನುವಂತಾಗುತ್ತದೆ. ನಾನು ನಾಲ್ಕಕ್ಕೆ ನಿದ್ದೆ ಬಿಟ್ಟು ಏಳುತ್ತೇನೆ ಎಂದು ಹೇಳಿದರೆ ಅಷ್ಟು ಬೇಗ ಎದ್ದು ಏನು ಮಾಡುವುದು? ಇದು ಕೆಲವರು ಕೇಳುವ ಪ್ರಶ್ನೆ.ಹಲವರಿಗೆ ಇದು ಉತ್ತರ ಇಲ್ಲದ ಪ್ರಶ್ನೆಯಾಗುತ್ತದೆ. ಇದಕ್ಕೆಲ್ಲ ಹೊಗಳಿಕೆಯನ್ನು ಕೇಳುವುದೆಂದರೆ ನಮ್ಮ ಜೀವನ ಕ್ರಮಕ್ಕೆ ವಿರುದ್ಧವಾದ ಪ್ರವೃತ್ತಿ. ಹೊಗಳಿಕೆಯನ್ನು ಆ ಜೀವನ ಕ್ರಮ ಬಯಸುವುದೇ ಇಲ್ಲ. ಬಯಸಿದರೆ ಅದು ಪ್ರದರ್ಶನದ ವಸ್ತುವಾಗುತ್ತದೆ. ಆಗ ನಾವು ಏನು ದಿವ್ಯತೆಯನ್ನು ಇಲ್ಲಿ ಅನುಭವಿಸುತ್ತಿದ್ದೇವೆಯೋ ಅದು ಪರಿಪೂರ್ಣವಾಗುವುದಿಲ್ಲ. ಹೊಗಳಿಕೆ ನಿಜಕ್ಕೂ ಇಷ್ಟವಾಗುವ ವಿಷಯವೇ. ಹಲವು ಸಲ ಅದು ಸಿಗದೇ ಇದ್ದರೆ ಭ್ರಮನಿರಸನವಾಗುವುದೂ ಇರುತ್ತದೆ. ಹೊಗಳಿಕೆಯನ್ನು  ಬಯಸಿದಾಗ ಮಾತ್ರ ಭ್ರಮನಿರಸನವಾಗುವುದು.

             ವಿಶಿಷ್ಟ ಅನುಭವಗಳೇ ಜೀವನದ ಉತ್ಸಾಹವನ್ನು ಹೆಚ್ಚಿಸುತ್ತದೆ. ಹಲವು ಸಲ ಈ ಅನುಭವಗಳು ಮರೆತು ಹೋಗುತ್ತದೆ. ಈ ಉತ್ಸಾಹವನ್ನು ಹೆಚ್ಚಿಸುವುದಕ್ಕಾಗಿ, ಅದರಲ್ಲಿ ಚೈತನ್ಯವನ್ನು ಉತ್ಪಾದಿಸುವುದಕ್ಕೆ ನಾನು ಬರವಣಿಗೆಯನ್ನು ಆರಂಭಿಸಿದೆ. ಏನೇ ಆದರೂ ಬರೆಯಬೇಕು. ಹಲವು ಸಲ ಇದೊಂದು ಹುಚ್ಚು ಅಂತ ಅನ್ನಿಸಿಕೊಂಡದ್ದು ಇದೆ. ಹಲವರು ಬಹಿರಂಗವಾಗಿ ಹೇಳುವುದಕ್ಕೆ ಸಂಕೋಚ ಪಡುವುದನ್ನು ಮುಕ್ತವಾಗಿ ಬರೆದುಕೊಂಡು ಯಾವುದೇ ಭಾವನೆ ಇಲ್ಲದೆ ಪ್ರಕಟಿಸಿದ್ದೇನೆ. ಅದೊಂದು ಮನಸ್ಸಿ ತೃಪ್ತಿಯನ್ನು ಕೊಡುವ ಕಾಯಕ. ಅದರ ಪ್ರತಿಕ್ರಿಯೆ ಬರುವಾಗ ಕ್ಷಣಕಾಲ ಸಂತೋಷವಾದರೂ ನಂತರ ಅದು ದಿನವೂ ತಿನ್ನುವ ಆಹಾರದ ಸಾಲಿಗೆ ಸೇರಿಬಿಡುತ್ತದೆ. ಈ ಬರವಣಿಗೆ ಹವ್ಯಾಸ, ನನಗೆ ಅದೊಂದು ಸಖನಿದ್ದಂತೆ. ಹಲವು ಸಲ ನಮ್ಮ ಕೋಣೆಯ ಗೋಡೆಗಳು ನಮಗೆ ಕಿವಿಯಾಗುತ್ತವೆ. ಗೋಡೆಗೂ ಕಿವಿ ಇದೆ ಅಂತ ಹೇಳುವಾಗ ಆ ಕಿವಿಯನ್ನು ನಾವೇ ಬಳಸಿಕೊಂಡರೆ ಹೇಗೆ? ಹಾಗಾಗಿ ಬರೆಯುತ್ತೇನೆ. ಯಾರಾದರೂ ಓದಲೇಬೇಕು ಎನ್ನುವ ಹಂಬಲ ಇರುವುದಿಲ್ಲ.  ಪ್ರಕಟಿಸುವ ಉದ್ದೇಶ ಓದುವುದಕ್ಕೆ, ಇಲ್ಲವಾದರೆ ಮನೆಯಲ್ಲೇ ಮನದಲ್ಲೇ ಅದನ್ನು ಹುದುಗಿಸಿ ಇಡಬಹುದು. ಈ ಹವ್ಯಾಸದ ಮುಖ್ಯ ಕಾರಣ ಇದು ನನ್ನ ಮನಸ್ಸನ್ನು ತೆರೆಯುವುದಕ್ಕಿರುವ ಏಕ ಮಾಧ್ಯಮ. ಕಾರಣಸತ್ಯ ಹೇಳಬೇಕೆಂದರೆ ನನ್ನ ಮನೆಯಲ್ಲೇ ಇದನ್ನು ಓದುವವರು ಇಲ್ಲವೇ ಇಲ್ಲ ಎನ್ನಬೇಕು. ಅವರಿಗೇನು ದ್ವೇಷವಿಲ್ಲ. ಓದಬಾರದು ಎನ್ನುವ ಹಟವು ಇಲ್ಲ. ಅವರಿಗೆ ಅದು ಆಸಕ್ತಿಯ ವಿಚಾರವೂ ಅಲ್ಲ. ಒಂದು ವೇಳೆ ನನ್ನ ಯಾವುದಾದರೂ ಲೇಖನ ತೋರಿಸಬೇಕೆಂದು ಇದ್ದರೆ ಅದನ್ನು ನಾನೇ ಸ್ವತಹ ಓದಿ ಹೇಳಬೇಕು. ಓದುವುದು ನನಗೂ ಕೆಲವೊಮ್ಮೆ ಸುಸ್ತು ಎನಿಸುತ್ತದೆ. ಅವರಿಗೆ ಕೇಳಿ ಬಾಯಿ ಆಕಳಿಕೆ ಬರುತ್ತದೆ.  ವಾಸ್ತವದಲ್ಲಿ ನಾನು ಸ್ವಲ್ಪ ವಾಚಾಳಿ. ಮಾತನಾಡುತ್ತಾ ಇರಬೇಕು. ನಾನು ಮೌನಿಯಾದರೆ ಅದು ಅಸಹಜ ಸ್ವಭಾವ. ಮನೆ ಮಂದಿಗೆಲ್ಲ ನನ್ನ   ತತ್ವ ಜ್ಞಾನಗಳು ಕೇಳಿ ಕೇಳಿ ಸಾಕಾಗಿ ಹೋಗಿದೆಯಾ ಅಂತ ನನಗನ್ನಿಸಿದಾಗ  ನನಗೆ ನನ್ನಷ್ಟಕ್ಕೆ ಬರೆಯುವುದು ಸುಲಭ ಆಯ್ಕೆ. ಬೇರೆ ನಿರ್ವಾಹವಿಲ್ಲ. ಬಹುಶಃ ಜಗತ್ತಿನ ಮಹಾ ಚಿಂತಕ ತತ್ವಜ್ಞಾನಿ ಸಾಕ್ರೆಟೀಸ್ಹೆಂಡತಿ ಅವನ ಮಾತು ಕೇಳುತ್ತಿದ್ದರೆ, ಆತ ತತ್ವ ಜ್ಞಾನಿಯಾಗುತ್ತಿರಲಿಲ್ಲ. ಆತನ ತತ್ವಗಳು ನಮಗೆ ಸಿಗುತ್ತಲೇ ಇರಲಿಲ್ಲ. ಹಾಗಾಗಿ ನನ್ನ ಮಟ್ಟಿಗೆ ಬರೆಯುವುದು ಅನಿವಾರ್ಯ. ನನ್ನ ಏಕಾಂಗಿತನದ ಬಾಧೆಗೆ ವಾಚಾಳಿತನಕ್ಕೆ ಇದಕ್ಕಿಂತ ಮಿಗಿಲಾದ ಔಷದ ಇಲ್ಲ. ಇದೊಂದು ವ್ಯಾಧಿ ಅಂತ ಪರಿಗಣಿಸುವವರಿಗೆ ಇದನ್ನು ಔಷಧ ಎಂದು ಉಲ್ಲೇಖಿಸಿದ್ದೇನೆ.

             ಹಲವು ಸಲ ನನ್ನ ಮಗಳು (ತಮ್ಮನ ಮಗಳು) ಸದಾ ನನಗೆ ಚೊರೆ ಹೊಡೆಯುವ ನನ್ನ ಹವ್ಯಾಸಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸುವ ಈಕೆಗೆ ನಾನು ಅಪ್ಪನಲ್ಲದೇ ಇರಬಹುದು ಆದರೆ ಅದಕ್ಕಿಂತಲೂ ಮಿಗಿಲಾದ ಪಿತೃ ಸಂಭಂಧವಿದೆ. ಅವಳು ಹೇಳುತ್ತಾಳೆ, ನಿಮ್ಮ ಅನುಭವವನ್ನೆಲ್ಲಾ ಪಡೆದುಕೊಳ್ಳಬೇಕು. ಅದನ್ನು ಅನುಭವಿಸಬೇಕು, ಆದರೆ ನಿಮ್ಮ ಹಾದಿಯನ್ನು ಹಿಡಿಯುವುದು ಕಷ್ಟವಾಗುತ್ತದೆ. ಅದು ಯಾವ ಪ್ರೇರೇಪಣೆ? ಅದು ನಿಮಗೆ ಎಲ್ಲಿಂದ ಸಿಗುತ್ತದೆ? ಮನೆಯ ಗಡಿಯಾರಕ್ಕಾದರೂ ಬ್ಯಾಟರಿಯನ್ನು ನಾವು ನೆನಪಿಸಿ ತಪ್ಪದೇ ಇಡಬೇಕು...ಈ ದಿನಚರಿಗೆ ಅದು ಎಲ್ಲಿಂದ ಬ್ಯಾಟರಿ ಲಭ್ಯವಾಗುತ್ತದೆ.? ನನ್ನ ಉತ್ತರ ಒಂದೇ ...ಈ ಜೀವನಾನುಭವಗಳೇ ನನಗೆ ಬ್ಯಾಟರಿ. ಇದೇ ನನ್ನ ಮುಂಜಾನೆಯ ಕರೆ. ಮುಂಜಾನೆ ಸ್ನಾನ ಮಾಡಿ ನಾಲ್ಕೂ ವರೆಯ ಬ್ರಾಹ್ಮೀ ಮುಹೂರ್ತಕ್ಕೆ ನಾನು ಸಂಧ್ಯಾ ಜಪಕ್ಕೆ ಕುಳಿತು ಬಿಡುತ್ತೇನೆ. ಸೂರ್ಯನಿಗೆ ಅರ್ಘ್ಯದಾನ ಮಾಡಿ ಪದ್ಮಾಸನ ಬಲಿದು ನೆಟ್ಟಗೆ ಧ್ಯಾನಕ್ಕೆ ಕುಳಿತರೆ ಮತ್ತೆ ಸುತ್ತಲಿನ ಪರಿವೆ ಇರುವುದಿಲ್ಲ. ಮೂಲಾಧಾರದಿಂದ ಶಿರೋಧಾರಕ್ಕೆ ಹರಿವ ಚೈತನ್ಯದ ಚಿಲುಮೆಗೆ ಮನಸ್ಸು ಒಡ್ಡಿ ಎಲ್ಲವನ್ನು ಮರೆಯುತ್ತೇನೆ. ಹೀಗೆ ಕಂಪಿಸದೇ ಕುಳಿತುಕೊಳ್ಳುವುದನ್ನು ಒಂದು ದಿನ ಅರ್ಧ ತಾಸು ನಿಂತಲ್ಲೆ ನಿಂತು ಮಗಳು ನೋಡುತ್ತಾಳೆ. ಆಕೆ ನೋಡುವುದು ನನ್ನಲ್ಲಿ ಏನಾದರೂ ಕಂಪನ ಬರಬಹುದೇ? ಇಲ್ಲ ಒಂದಿಷ್ಟೂ ಕಂಪಿಸದೇ ಇರುವುದು ಆಕೆಗೆ ಬಹಳ ಅಚ್ಚರಿಯಾಗುತ್ತದೆ. ಹಲವು ಸಲ ಆಕೆ ನನ್ನ ಅನುಭವವನ್ನು ಕೇಳುತ್ತಾಳೆ. ಧ್ಯಾನದಲ್ಲಿ ತಲ್ಲೀನನಾಗಿರುವಾಗ ಅಂಗಾಂಗವೆಲ್ಲ ಹಿತವಾಗಿ ಬೆವರುತ್ತದೆ. ಆಕೆಗೆ ಅದನ್ನು ಹೇಳಿದರೆ ಆಕೆಯ ಕಂಪನ ನಿಂತು ಬಿಡುತ್ತದೆ. ಆಕೆ ಕಲ್ಲಾಗುತ್ತಾಳೆ.

             ಹೌದು, ಮಗಳಿಗೆ ಹೇಳುವಂತೆ ಇದೊಂದು ಪುನರ್ಜನ್ಮದಂತೆ. ಯಾರಲ್ಲೇ ಆಗಲಿ ಗಾಢವಾದ ಧ್ಯಾನದ ಆನಂದವನ್ನು ವರ್ಣಿಸುವುದಕ್ಕೆ ಹೇಳಿದರೆ ಅದನ್ನು ಪರಿಪೂರ್ಣವಾಗಿ ವಿವರಿಸುವುದಕ್ಕೆ ಸಾಧ್ಯವಿಲ್ಲ. ಸುಂದರ ಹೆಣ್ಣಿನ ಸೌಂದರ್ಯವನ್ನು ಅಂಗುಲ ಅಂಗುಲವಾಗಿ ವರ್ಣಿಸಬಹುದು. ಪರಮಾತ್ಮನ ಮೂರ್ತಿ ಎದುರಿಗೆ ಪ್ರತ್ಯಕ್ಷವಾದರೂ ವಿವರಿಸಬಹುದೇನೋ....ಆದರೆ ಯೋಗಾನುಭವ ಅದರಲ್ಲೂ ಧ್ಯಾನಾನುಭವದ ವಿವರಣೆ ಸಾಧ್ಯವಾಗುವುದಿಲ್ಲ.

 

            ಸಾಮಾನ್ಯವಾಗಿ ಧ್ಯಾನ ಎಂಬುದು ದೇಹ ಮನಸ್ಸು ಇಂದ್ರಿಯ ನಿಗ್ರಹದ ಸ್ಥಿತಿಯಾಗಿರುತ್ತದೆ. ಇದು ಗಾಢವಾದಷ್ಟೂ ಪರಿಣಾಮ ಗಾಢವಾಗಿರುತ್ತದೆ.  ಪರಾಕಾಷ್ಠೆ ಎಂಬುದು ನಿರ್ದಿಷ್ಟವಿಲ್ಲ. ಹಿಮಾಲಯ ಪರ್ವತವನ್ನು ಏರಿದ ತೇನಸಿಂಗ್ ಗೆ ಎವರೆಸ್ಟ್ ಏರಿದ ನಂತರ ಮತ್ತಿನ ಎತ್ತರ ಆತನಿಗೆ ಗೋಚರವಾಗಲಿಲ್ಲ. ಹಿಮಾಲಯದ ಎತ್ತರ ಅಳೆದಾಗಿತ್ತು. ಆದರೆ ಧ್ಯಾನದ ಪರಾಕಾಷ್ಠೆ ಆ ಸುಖದ ಔನ್ನತ್ಯ ಅಳೆಯುವುದಕ್ಕೆ ಸಾಧ್ಯವಿಲ್ಲ. ಅದೆಂತಹ ಅನುಭವಗಳು. ಹಲವು ಸಲ ಈ ಅನುಭವಗಳನ್ನು ಒಂದು ಬ್ರಹತ್ ಪುಟಗಳನ್ನಾಗಿ ಪರಿವರ್ತಿಸಬೇಕು ಎಂದು ಭಾವಿಸುತ್ತೇನೆ. ಆದರೆ ಬರೆಯುವುದರಲ್ಲಿ ಸೋತು ಬಿಡುತ್ತೇನೆ. ಹಲವು ಸಲ ನನಗೆ ಏಕಾಗ್ರತೆ ಎಂಬುದು ಸವಾಲಾಗಿತ್ತು. ಸವಾಲು ಮಾತ್ರವಲ್ಲ ಏಕಾಗ್ರತೆಯ ಅಸ್ತಿತ್ವವೇ ಅವಿಶ್ವಾಸವನ್ನು ಹುಟ್ಟಿಸುತ್ತಿತ್ತು. ಹಾಗೊಂದು ಸ್ವಭಾವ ಇರುವುದಕ್ಕೆ ಸಾಧ್ಯವಿಲ್ಲ ಎಂಬ ನಂಬಿಕೆ ಬೆಳೆದಿತ್ತು. ಧ್ಯಾನ ಎಂಬುದು ಆ ಅವಿಶ್ವಾಸವನ್ನು ಕಡಿಮೆ ಮಾಡುತ್ತಾ ಮಾಡುತ್ತಾ ತನ್ನ ಅಸ್ತಿತ್ವದ ನೆಲೆಯನ್ನು ತೋರಿಸಿಬಿಡುತ್ತಿತ್ತು.  ಧ್ಯಾನದ ಹೊಸ ಹೊಸ ಎತ್ತರಗಳು   ಈಗೀಗ ಅರಿವಾಗುತ್ತದೆ. ಆನುಭವಕ್ಕೆ ಮನಸ್ಸನ್ನು ಒಪ್ಪಿಸುವಾಗ ಮುಂಜಾನೆಯ ನಿದ್ದೆ ಏನು...ಲೌಕಿಕವಾದವುಗಳು ಎಲ್ಲವೂ  ಅರ್ಥವನ್ನು ಕಳೆದುಕೊಳ್ಳುತ್ತವೆ. ಮುಂಜಾನೆಯ ಕರೆ ಬಲವಾಗುವುದು ಹೀಗೆ.

             ಧ್ಯಾನ.... ಈ ವಿಷಯ ಬಂದಾಗ ಹಲವರು ಆಸಕ್ತಿಯನ್ನು ಕಳೆದು ಬಿಡುತ್ತಾರೆ. ಯಾವುದೋ ದೇಶದಲ್ಲಿ ನಯಾಗರ ಇದೆ ಎಂದು ಹೇಳಿದರೆ ಹೌದಾ...ಎಂಬುದಷ್ಟಕ್ಕೇ ಸೀಮಿತವಾಗುತ್ತದೆ. ಯಾಕೆಂದರೆಹೋಗುವುದಕ್ಕಿಲ್ಲ ನೋಡುವುದಕ್ಕಿಲ್ಲ. ಧ್ಯಾನ ಬೇಡ ಎನ್ನುವುದಕ್ಕೆ ಆಲಸ್ಯ ಹೇಗೆ ನಿಮಿತ್ತವಾಗುತ್ತದೋ ಹಾಗೆ ಅದು ಬೇಕು ಎನ್ನುವ ಬಯಕೆ ಹುಟ್ಟಬೇಕಾದರೆ ನಿಷ್ಠೆ ಶ್ರದ್ದೆ ಇರಲೇಬೇಕು. ಧ್ಯಾನದ ಬಗ್ಗೆ ವ್ಯಾಖ್ಯಾನಗಳು ಹಲವು ಇರಬಹುದು ಆದರೆ ಅವುಗಳಲ್ಲಿ  ಅನುಭವಗಳಿಂದ ಬಂದವುಗಳು ಕೆಲವೇ ಕೆಲವು.  ನಮ್ಮ ತಾಮಸ ಗುಣಗಳನ್ನು ಕಳೆಯುವ ಮುಂಜಾನೆಯ ಕರೆ.   ಧ್ಯಾನ ಎಂಬುದು ಪ್ರಕೃತಿ ಧರ್ಮ ಅದು ವೈರಾಗ್ಯವಲ್ಲ ಅದು ಸನ್ಯಾಸ ಅಲ್ಲ ಬದುಕನ್ನು ಪ್ರಚೋದಿಸುತ್ತದೆ ಪ್ರಕೃತಿಯೊಂದಿಗಿನ ಸಂಬಂಧವನ್ನು ತಿಳಿಸುತ್ತದೆ. ರೈಲು ಏರುವಾಗ ನಮ್ಮನ್ನು ಬೀಳ್ಕೊಡುವುದಕ್ಕೆ ಹಲವು ಬಂಧು ಮಿತ್ರರು ಬರಬಹುದು. ಆದರೆ ವಿದಾಯ ಹೇಳಿ ರೈಲಿನೊಳಗೆ ನಾವೊಬ್ಬರೇ ಹೋಗುವಂತೆ, ಧ್ಯಾನದ ವರೆಗೆ ಹಲವು ಯೋಚನೆಗಳು ನಮ್ಮನ್ನು ಕಾಡಬಹುದು. ಆನಂತರ ಎಲ್ಲವನ್ನು ಕಳಚಿ ನಾವು ಒಬ್ಬರೇ ಒಳ ಪ್ರವೇಶಿಸಬೇಕು. ಹೀಗೆ ಧ್ಯಾನ ಆರಂಭವಾಗುತ್ತದೆ.

             ನನ್ನ ದಿನಚರಿಯಲ್ಲಿ ಮುಂಜಾನೆ ಸ್ನಾನ ಮಾಡಿ ಸಂಧ್ಯಾವಂದನೆಯ ನಡುವೇಯೇ ಧ್ಯಾನಕ್ಕೆ ಸಿದ್ಧವಾಗುತ್ತೇನೆ. ಇದೆಷ್ಟು ಸರಿಯಾದ ಕ್ರಮವೋ ಅರಿವಿಲ್ಲ. ಆದರೆ ಆಗ ಮನಸ್ಸು ಹೆಚ್ಚು ಪ್ರಫುಲ್ಲವಾಗಿ ಎಲ್ಲವನ್ನೂ ಸ್ವೀಕರಿಸುವ ಹಂತದಲ್ಲಿರುತ್ತದೆ.   ನಿಧಾನಗತಿಯ ಉಸಿರಾಟಕ್ಕೆ ದೇಹದ ನರನಾಡಿಗಳಲ್ಲಿ ಹರಿಯುವ ರಕ್ತದ ಚಲನೆ ಅರಿವಾಗಿ ಅದೊಂದು ಕಂಪನದಂತೆ ಭಾಸವಾಗುತ್ತದೆ. ಯಾವುದೋ ಒಂದು ಸೆಳೆತ ಆ ಸೆಳೆತಕ್ಕೆ ದೇಹವೆಲ್ಲ ಶರಣಾದಂತೆ ಭಾಸವಾಗುತ್ತದೆ.   ಏಕಾಗ್ರತೆ ಬೇಗನೆ ಅರಿವಾಗುತ್ತದೆ. ಉಸಿರಾಟದ ಜತೆಗೆ ಮೂಲಾಧಾರದಿಂದ ಸಹಸ್ರಾರದ ವರೆಗಿನ ಕಂಪನ ಸೂಕ್ಷ್ಮವಾಗಿ ಅನುಭವವಾಗುತ್ತಿದ್ದಂತೆ ಮನಸ್ಸು ಅದರಲ್ಲೇ ತಲ್ಲೀನವಾಗಿ ಬಿಡುತ್ತದೆ. ಆ ಸ್ಥಿತಿಯಿಂದ ವಾಸ್ತವಕ್ಕೆ ಬರುವುದಕ್ಕೆ ಮನಸ್ಸಾಗುತ್ತಿಲ್ಲ. ಆ ಹಿತವಾಗದ ಅನುಭವ ಹೇಗಿರುತ್ತದೆ ಎಂದರೆ ಅದನ್ನು ಪೂರ್ಣವಾಗಿ ವಿವರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಓಂ ಕಾರದಿಂದ ತೊಡಗಿ ಉಸಿರಾಟಕ್ಕೆ ಸ್ಪಂದಿಸುತ್ತಾ ಅಂತರಂಗಕ್ಕೆ ಜಾರತೊಡಗಿದಂತೆ ಅದಾವುದೋ ದಿವ್ಯ ರೂಪ ಅಸ್ಪಷ್ಟವಾಗಿ ಗೋಚರವಾದಂತೆ. ಅದಕ್ಕೆ ಆಕಾರವಿರುವುದಿಲ್ಲ. ಏನೂ ಇಲ್ಲದ ಒಂದು ಸ್ಥಿತಿ. ಮನಸ್ಸೆಲ್ಲ ಅದರಲ್ಲಿ ತಲ್ಲೀನವಾಗುತ್ತದೆ. ಜಪ ಮುಗಿದು ಉಪಸ್ಥಾನಗಳು ಮುಗಿದನಂತರ ಇದು ಗಾಢವಾಗುತ್ತಾ ಸಾಗಿ ನಂತರ ಅಲ್ಲಿ ಯಾವ ಮಂತ್ರಗಳೂ ನೆನಪಾಗುವುದಿಲ್ಲ. ಓಂಕಾರವೂ ಸ್ಮರಣೆಗೆ ಬರುವುದಿಲ್ಲ.ಯಾವುದೋ ಒಂದು ಸ್ಥಿತಿಗೆ ಜಾರುತ್ತೇನೆ. ಹಲವು ಸಲ ದೇಹವೆಲ್ಲ ಸೂಕ್ಷ್ಮವಾಗಿ ಬೆವರುತ್ತದೆ. ಹಲವು ಸಲ ಯಾವುದೋ ಅಗ್ನಿ ಪ್ರಜ್ವಲಿಸಿದಂತೆ ಆ ಉಷ್ಣತೆ ಚೈತನ್ಯವಾದಂತೆ, ಆ ಶಕ್ತಿಯನ್ನು ಹಿಡಿದಿಡುವುದಕ್ಕೆ ಸಾಧ್ಯವಾಗುವುಇಲ್ಲ. ಆಸಾಧ್ಯವಾದ ಸಿಟ್ಟು ಬಂದಾಗ ಹೇಗೆ ದೇಹ ಕಂಪಿಸಿ ಕೈಗೆ ಸಿಕ್ಕಿದ ವಸ್ತುವಿನ ಮೇಲೆ ರವಾನೆಯಾಗುತ್ತದೆಯೋ , ಅದೇ ರೀತಿ ಚೈತನ್ಯ ಹೊರ ಹಾಕುವುದಕ್ಕೆ ದೇಹ ಕಾತರಿಸುತ್ತದೆ. ಎದ್ದು ಒಂದು ಹೆಜ್ಜೆ ಇಟ್ಟರೆ ನೂರು ಹೆಜ್ಜೆ ಇಡುವ ಧಾವಂತ ಪ್ರಚೋದನೆಯಾಗುತ್ತದೆ. ಕೊನೆಗೊಮ್ಮೆ ಎಲ್ಲವೂ ತಣ್ಣಗಾಗಿ ವಾಸ್ತವದ ಅರಿವಾಗುತ್ತದೆ. ಆದರೂ ಹುಟ್ಟಿಕೊಂಡ ಚೈತನ್ಯ ಎಲ್ಲೆಲ್ಲಿಗೋ ಸೆಳೆದಂತೆ ಭಾಸವಾಗುತ್ತದೆ. ಮತ್ತೆ ಬಲವಂತವಾಗಿ ವಾಸ್ತವಕ್ಕೆ ಬರುತ್ತೇನೆ. ಬೆಟ್ಟದ ತುದಿಯಲ್ಲಿರುವ ದೇವಾಲಯಕ್ಕೆ ದರ್ಶನಕ್ಕೆ ಹೋದಂತೆ. ಕಷ್ಟ ಪಟ್ಟು ಬೆಟ್ಟ ಹತ್ತಿ ಸರದಿ ನಿಂತು ಗರ್ಭಗುಡಿಯ ಎದುರು ನಿಂತರೆ ಅಲ್ಲಿ ಒಂದು ಕ್ಷಣಮಾತ್ರ ನಿಂತು ಬಿಡುತ್ತೇವೆ. ಅದುವರೆಗೆ ಬೆಟ್ಟ ಹತ್ತಿದ ಸರದಿ ನಿಂತ ಶ್ರಮ ಎಲ್ಲವೂ ಮರೆತು ಒಂದು ಕ್ಷಣ ನಿಂತು ನಂತರ ಸರಿದು ಹೋದಂತೆ ಧ್ಯಾನದಿಂದ ಹೊರಬರುತ್ತೇನೆ.  ಕೇವಲ ಕೆಲವು ಕ್ಷಣಗಳು ಆ ಪರಾಕಾಷ್ಠೆಯ ಅನುಭವದಲ್ಲಿ ಮಗ್ನನಾಗಿದ್ದರೆ ಮತ್ತೆ ವಾಸ್ತವಕ್ಕೆ ಬಂದು ಯಥಾ ಪ್ರಕಾರ ಮರುದಿನದ ಅನುಭವಕ್ಕೆ ದಿನವಿಡೀ ಕಾಯುತ್ತೇನೆ.

             ಈ ಅನುಭವಗಳು ಮುಂಜಾನೆಯ ಕರೆಗೆ ಪ್ರಚೋದನೆಯನ್ನು ಒದಗಿಸುತ್ತವೆ. ಮುಂಜಾನೆ ಗಾಢವಾದ ನಿದ್ರೆಯಿಂದ ಒಮ್ಮಿಂದೊಮ್ಮೆಲೆ ಎಚ್ಚರಿಸುತ್ತದೆ. ಎದ್ದಕೂಡಲೇ ಸಹಜವಾಗಿ ಇರಬೇಕಾದ ಜಾಡ್ಯದ ಸೂಕ್ಷ್ಮ ಸಂವೇದನೆಯೂ ಇಲ್ಲದೆ ಎಲ್ಲ ಹುರುಪಿನಿಂದ ಮನಸ್ಸು ದೇಹ ಅಣಿಯಾಗುತ್ತದೆ. ನಿಜಕ್ಕೂ ಮುಂಜಾನೆಯ ಕರೆ ಎಂಬುದು ದಿನದ ಆರಂಭದಿಂದ ಅಂತ್ಯದ ತನಕೆ ಮನಸ್ಸನ್ನೂ ಪ್ರಚೋದಿಸುತ್ತಾ ಹೊಸ ಅನುಭವಕ್ಕೆ ಸಾಕ್ಷಿಯಾಗುತ್ತಾ ಮುಂಜಾನೆಯ ದಿವ್ಯತೆಯ ಅನುಭವವನ್ನು ಕೊಡುತ್ತದೆ. 

Wednesday, March 1, 2023

ನಾ ಕಂಡ ಅಯೋಧ್ಯೆ ಮತ್ತೆ ಮಿಂದೆದ್ದ ಗಂಗೆ

ರಮ ಹರೇ ರಾಮ ರಾಮ ಹರೇ ರಾಮ|

ರಾಮ ಹರೆ ಜಯ ರಾಮಹರೆ|

ರಾಮ ಹರೆ ಜಯ ರಾಮಹರೆ|

ದಶರಥ ನಂದನ ರಾಮ | ಕೌಸಲ್ಯಾತ್ಮಜ ರಾಮಾ|

ಇನಕುಲ‌ವಾರಿಧಿ ರಾಮಾ | ಸೀತಾವಲ್ಲಭರಾಮ ||ರಾಮ ಹರೆ  ||


ಧರಣೀ ಪತಿ ಶ್ರೀರಾಮ | ಪುರುಷೋತ್ತಮ ಶ್ರೀರಾಮ |

ರಘುಪತಿ  ರಾಘವ ರಾಮಾ | ನಿತ್ಯ ಪೂಜಿತ ರಾಮ  || ರಾಮ ಹರೆ ||

            ಇದು ನಾನು ರಚಿಸಿದ ಭಜನೆ. ಇದು ಇನ್ನೊಂದಿಷ್ಟು ಉದ್ದವಿದೆ. ಆಗಾಗ ಇದನ್ನು ಗುನುಗುನಿಸುತ್ತಾ ಇರುವುದು ಮನಸ್ಸಿಗೆ ಒಂದು ನೆಮ್ಮದಿಯನ್ನು ಕೊಡುತ್ತದೆ. ನನ್ನದೊಂದು ಸ್ವಭಾವವೆಂದರೆ ನನ್ನದೇ ಸ್ವಂತ ವಸ್ತುಗಳನ್ನು ಹೊಂದುವುದು. ನನಗೆ ಬೇಕಾದ ಆಹಾರವನ್ನು ನಾನೇ ತಯಾರಿಸುವುದು. ಹಾಗೆ ನನಗೆ ಪ್ರಿಯವಾದ ದೈವನಾಮಸ್ಮರಣೆಗೂ ನಾನೇ ಸ್ವತಃ ಒಂದು ಭಜನೆ ರಚಿಸಿದ್ದೆ. ಇದು ಕೇವಲ ಖಾಸಗೀ ಉಪಯೋಗಕ್ಕೆ.  ಯಾಕೆಂದರೆ ರಾಮ ನೆಂದರೆ ಪುರಾಣದಲ್ಲಿ ನನಗೆ ಅತ್ಯಂತ ಪ್ರಿಯವಾದ ಪಾತ್ರ. ಅದೆಷ್ಟು ಸರಳ?  ಅದೆಷ್ಟು ಸುಂದರ. ? ರಾಮ ರಾಮ..ಧೀಮಂತ ರಾಮನ ಶ್ರೀಮಂತ ವ್ಯಕ್ತಿತ್ವ. 

            ಈಚೆಗೆ ಉತ್ತರ ಭಾರತ ಪ್ರವಾಸದಲ್ಲಿ ಮೊದಲಿಗೆ ಹೊದ ಕ್ಷೇತ್ರ ಅಯೋಧ್ಯೆ. ರಾಮ ಜನ್ಮ ಭೂಮಿಯ ರಾಮ ರಾಜ್ಯದ ಪವಿತ್ರ ಸ್ಥಳ.  ಲಕ್ನೋ ನಗರದಿಂದ ಅಯೋಧ್ಯೆಗೆ ಐದಾರು ಘಂಟೆಗಳ ಪ್ರಯಾಣವಿದೆ. ಉದ್ದಕ್ಕು ರಾಷ್ಟ್ರೀಯ ಹೆದ್ದಾರಿ. ಇಲ್ಲಿನ ಹಾಗೆ ಏರಿಳಿವ ಗುಡ್ಡ ಪ್ರದೇಶಗಳಿಲ್ಲ. ಸಮತಟ್ಟಾದ ಭೂಮಿ. ಲಕ್ನೋದಿಂದ ಫೈಜ಼ಾ ಬಾದ್ ರಸ್ತೆಯಲ್ಲಿ ಸಾಗಿದರೆ ಮೊದಲಿಗೆ ಬರೀ ಬರಡು ಭೂಮಿ ಕಾಣ ಸಿಗುತ್ತದೆ. ಅಷ್ಟೇನು ಆಕರ್ಷಣೀಯವಲ್ಲದ ಬರಡು ಭೂಮಿ. ಆದರೆ ಆಯೋಧ್ಯೆ ಹತ್ತಿರ ತಲುಪುತ್ತಿದ್ದಂತೆ  ರಸ್ತೆಯ ಇಕ್ಕೆಲದಲ್ಲಿ ಹಸುರು ಕಂಗೊಳಿಸುವುದಕ್ಕೆ ಆರಂಭವಾಗುತ್ತದೆ. ಬಹುಶಃ ರಾಮ ಜನ್ಮ ಭೂಮಿಯ ಮಹಿಮೆ ಇರಬೇಕು.  ಅಯೋಧ್ಯೆ ಸಣ್ಣ ನಗರವೇ ಆದರೂ ಅದು ಹಳ್ಳಿಯ ಸೊಗಡನ್ನೇ ಹೊಂದಿದೆ. 

            ರಾಮ, ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ ,  ದಾಸ ವರೇಣ್ಯರು ಹಾಡಿದಂತೆ ರಾಮ ಎಂಬ ಶಬ್ದ ಮೊದಲು ಹುಟ್ಟಿತಂತೆ. ನಾರಾಯಣದ ’ರಾ" ಮಹೇಶ್ವರನ ’ಮ’  ಜತೆಯಾಗಿ ಸೇರಿದರೆ ಮತ್ತೇನಾಗಬಹುದು. ವಿಶ್ವವೇ ಒಂದಾದಂತೆ.   ಆ ಹೆಸರಿಗೆ ಒಪ್ಪುವಂತೆ ಆ ಹೆಸರೇ ಹೇಳುವಂತೆ ತಕ್ಕವನಾಗಿ ರಾಮನಾಗಿ ಭಗವಂತ ಅವತರಿಸಿದ. ಪುತ್ರಕಾಮೇಷ್ಠಿಯಾಗದಲ್ಲಿ ದಶರಥನ ಬೊಗಸೆಯಲ್ಲಿ ಇದಂ ಪಾಯಸಂ ದೇವನಿರ್ಮಿತಂ ಎನ್ನುವಂತೆ ಪಾಯಸದ ಬಟ್ಟಲು ಬಂದು ನಿಂತಿತು. ಮೂರೂ ಪತ್ನಿಯರಿಗೂ ಹಂಚಿದ ದಶರಥ ಮೊದಲಾಗಿ ರಾಮನನ್ನು ಕಂಡ. ತಂದೆಯಾದರೆ ದಶರಥನಂತಾಗಬೇಕು. ಮಕ್ಕಳಾಗದ ದಶರಥನಿಗೆ ಋಷಿಶಾಪ ಸಾಯುವ ಕಾಲಕ್ಕೆ ಮಕ್ಕಳು ಹತ್ತಿರ ಇರದಿರಲಿ.  ಶಾಪವೂ ವರದಂತೆ ರಾಮ ಲಕ್ಷ್ಮಣ ಭರತ ಶತ್ರುಘ್ನ ಹುಟ್ಟಿಕೊಂಡಾರು. 

         ಅಯೋಧ್ಯೆಗೆ  ಹೆಜ್ಜೆ ಇಟ್ಟ ಒಡನೆ ರಾಮಾಯಣದ ಹಲವು ಕಥೆಗಳು ಸ್ಮೃತಿ ಪಟಲದಲ್ಲೆ ತೇಲಿ ಹೋದವು. ಸತ್ಯಕ್ಕೆ ಅನ್ವರ್ಥವಾದ ಹರಿಶ್ಚಂದ್ರನ ಕಥೆ.  ರಘುವಂಶದ ದೀಲೀಪ ಮಾಂಧಾತರ ಕಥೆ ಭಾವನಾತ್ಮಕವಾಗಿ ಸುತ್ತುವ ಶಬರಿಯ ಕಥೆಯಂತೂ ಮೊನ್ನೆ ಗಾಢವಾಗಿ ನೆನಪಿಗೆ ಬಂದು ಬಿಟ್ಟಿತು.  ಅದೊಂದು ಆಧ್ಯಾತ್ಮದ ಅಂತಾರಾತ್ಮದ ಸ್ಪರ್ಶದ ಕಥೆ. ಅದಕ್ಕೆ ಮುಖ್ಯ ಕಾರಣ, ಅಯೋಧ್ಯೆಗೆ ಹೋದ ಒಡನೆ ಇಲ್ಲಿನ ಜನ ಕೊಟ್ಟ ಅತಿಥ್ಯ. ಹಸಿ ಹೊಟ್ಟೆಗೆ ಅವರು ಕೊಟ್ಟ ಆಹಾರ ಅದು ಯಾವ ರೂಪದಲ್ಲೇ ಇರಲಿ ಅದನ್ನು ಮರೆಯುವಂತೆ ಇಲ್ಲ. ಸತ್ಯಕ್ಕೆ ಹರಿಶ್ಚಂದ್ರನ ನೆನಪಾಗುವಂತೆ ಅದೇಕೊ ನಾವೆಷ್ಟು ಸತ್ಯ ನುಡಿದರೂ ಸತ್ಯವೆಂದರೆ  ನಮಗೆ ಹರಿಶ್ಚಂದ್ರನ ನೆನಪೇ ಆಗುತದೆ. ಕಾಯುವಿಕೆಗ ಶಬರಿಯ ನೆನಪಾಗುತ್ತದೆ. ಸೇವಾ ಮನೋಭಾವಕ್ಕೆ ಅಳಿಲಿನ ನೆನಪಾಗುತ್ತದೆ. ರಾಮಾಯಣದಲ್ಲಿ ಕಂಡು ಬರುವ ಈ ಸಣ್ಣ ಪುಟ್ಟ ಪಾತ್ರಗಳು ಅಗಾಧವಾದ ಪರಿಣಾಮವನ್ನು ಬೀರುತ್ತದೆ. ಶಬರಿ ಬರೀ ಕಾಯುವುದರಲ್ಲೇ ಜನ್ಮ ಸವೆಸಿದಳು. ರಾಮ ಬಂದೇ ಬರುತ್ತಾನೆ ಎಂದು ಕಾಯುತ್ತಾ ಇದ್ದಳು. ಬಹುಶಃ ಇಲ್ಲಿನ ಜನರೂ ನಮ್ಮಂತೆ ಯಾರಾದರೂ ಬಂದೇ ಬರುತ್ತಾರೆ ಎಂದು ಕಾಯುತ್ತಿದ್ದರೋ ಹೀಗೆ ಇವರ ಆತಿಥ್ಯ ಕಾಣುವಾಗ ಅನಿಸಿದ್ದು ಸುಳ್ಳಲ್ಲ. ಶಬರಿಯ ರಕ್ತ ಗುಣ, ಶಬರಿಯ ಕಥೆ ಇವರಿಗೆ ರಕ್ತಗತವಾದಂತೆ ಭಾಸವಾಯಿತು.  ಹಾಗಾಗಿ 

                ಶಬರಿ ರಾಮನ ಎದುರಿಗೆ ಹಣ್ಣನ್ನು ಇಟ್ಟು ಸತ್ಕರಿಸುತ್ತಾಳೆ. ಆಕೆಯಲ್ಲಿ ಭಕ್ತಿಯಲ್ಲದೆ ಬೇರೆ ಎನೂ ಇಲ್ಲದ ದಯನೀಯ ಸ್ಥಿತಿ. ಶಿಥಿಲವಾದ ದೇಹ. ಮಂದವಾದ ದೃಷ್ಟಿ ಅಲ್ಲೂ ರಾಮನ ಆಕಾರ ಅಸ್ಪಷ್ಟವಾದರೂ ಹೃದಯದಲ್ಲಿ ಸಂಪೂರ್ಣ ರಾಮನೇ ನೆಲೆ ನಿಲ್ಲಿಸಿದ ಶಬರಿಯ ವ್ಯಕ್ತಿತ್ವ ಭಾವನೆಗೆ ಸೆರಗು ಹೊದ್ದಂತೆ. ಶಬರಿಯಂಥವಳನ್ನೂ ರಾಮ ಅರಸಿ ಹೋದ ಎಂದರೆ ಆಕೆ ಎಂಥವಳಿರಬೇಕು?  ಆಕೆ ಕೊಟ್ಟ ಹಣ್ಣಾದರೂ...ತಾನು ರುಚಿ ನೋಡಿ ಅದನ್ನೇ ರಾಮನಿಗೆ ತಿನ್ನಿಸಿದಳು. ರಾಮ ಸ್ವೀಕರಿಸಿದ. ಅಲ್ಲಿ ಶಬರಿಯ ಭಕ್ತಿ ವಿಜ್ರಂಭಿಸಿತು. ರಾಮ ನಿಜಕ್ಕೂ ಶರಣಾಗಿ ಹೋದ. ಶಬರಿಯ ಆತಿಥ್ಯದ ರೂಪ ಅದು. ಎಲ್ಲವೂ ಭಗವಂತನಿಗೆ ಸಮರ್ಪಿತ. ರಾಮ ಶಬರಿಯ ಹಣ್ಣು ಉಚ್ಚಿಷ್ಠ  ಎಂದು ಬಗೆಯಲಿಲ್ಲ. ಆಕೆಯ ಶ್ರದ್ಧೆ ಭಕ್ತಿಗೆ ಮಾರು ಹೋದ. ಆಕೆಯ ಕೈಯನ್ನು ನೋಡಲಿಲ್ಲ. ಹೃದಯವನ್ನು ನೋಡಿದ. ನನ್ನಲ್ಲೂ ಒಂದು ಕ್ಷಣ ರಾಮ ಆವೇಶಗೊಂಡನೋ ಎಂದು ಹೇಳಿದರೆ ಅಹಂಕಾರವಾದೀತು...ಆದರೆ ಅಲ್ಲಿನ ಜನ ಸಾಮಾನ್ಯನಲ್ಲಿ ಶಬರಿಯನ್ನು ಕಂಡದ್ದು ಸತ್ಯ. ಪರಮ ಭಕ್ತನ ಪ್ರಾಮಾಣಿಕತೆ ಎಂದರೆ ತನಗೇನಿದೆಯೋ ತನ್ನಲ್ಲಿ ಏನಿದೆಯೋ ಅದು ಭಗವಂತನಿಗೆ. ಅದುವೇ ಉತ್ಕೃಷ್ಟ. ಹಾಗೆ ತಾವೇನು ತಿನ್ನುತ್ತಿದ್ದೇವೆಯೋ ಅದರಲ್ಲಿ ಉತ್ಕೃಷ್ಟವನ್ನು ಹೆಕ್ಕಿ ನಮ್ಮ ತಟ್ಟೇಗೆ ಇಕ್ಕಿದರು. ಅದರಲ್ಲು ಕಲ್ಲು ಕಂಡರೆ ಅದು ನಮ್ಮ ಅಹಂಕಾರವಾದೀತು. ಶಬರಿಯ ಆತಿಥ್ಯ ನಮಗೆ ದೊರಕಿತು. ಇವರ ಆತೀಥ್ಯದಲ್ಲಿ ಶಬರಿಯೇ ಪ್ರತ್ಯಕ್ಷವಾದಳು. ಆದರೆ ನಾವು ರಾಮನಾಗಿ ಬದಲಾಗುವ ಅಗತ್ಯವಿತ್ತು. ಬದಲಾಗಿದ್ದೇವೋ ಇಲ್ಲವೋ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.  ರಾಮನಂತೆ ನಾವಾಗದೇ ಇದ್ದರೂ ರಾಮನ ಆದರ್ಶದ ಒಂದು ಸೂಕ್ಷ್ಮ ತರಂಗವಾದರೂ ನಮಗೆ ಸೋಕಬೇಕು. ಅದು ಅಯೋಧ್ಯೆಯ ಮಣ್ಣಿನಗುಣವಾಗಬೇಕು. ಅಲ್ಲಿನ  ಗಾಳಿಯ ಕಂಪಾಗಬೇಕು.  ಅವರು ತಿನ್ನುವುದನ್ನು ನಮಗೆ ಕೊಡುವಾಗ ನಾವು ಅದನ್ನು ಹೀನವಾಗಿ ಕಂಡರೆ ನೋಯುವ ಮನಸ್ಸಿನ ಬೇಗುದಿ ಹೇಗಿರಬಹುದು? ತಿನ್ನುವ ಆಹಾರ ಅಮೃತವಾಗಬೇಕಾದರೆ ಹೃದಯದಲ್ಲಿ ಅಮೃತವಿರಬೇಕು. ದೇಹದ ನಂಜಾದರೂ ಕರಗಿ ಹೋದೀತು, ಮನಸ್ಸಿನ ನಂಜು ಕರಗುವುದಕ್ಕಿಲ್ಲ. ಹಿರಣ್ಯ ಕಶ್ಯಪು ಕಯಾದುವಿನ ಕೈಯಲ್ಲಿ ವಿಷದ ಪಾತ್ರೆಯನ್ನು ಕೊಟ್ಟು ಪ್ರಹ್ಲಾದನಿಗೆ ಕೊಡುವಂತೆ ಹೇಳಿದ. ತಾಯಿ ಕಯಾದುವಿನ ಹೃದಯದ ಅಮೃತ ಬೆಸೆಯುವಾಗಲೋ ಇಲ್ಲ ಪ್ರಹ್ಲಾದನ ಹೃದಯದಲ್ಲಿ ಭಗವಾನ್ ಸ್ವರೂಪಿ ಅಮೃತ ಇದ್ದುದರಿಂದಲೋ ಕುಡಿದ ವಿಷ ವಿಷವಾಗಲೇ ಇಲ್ಲ . ಯಾಕೆ ಅಮೃತವಾಯಿತು? ಅಲ್ಲಿ ಭಗವಂತನಿದ್ದ. ಭಗವಂತನಿಗೆ ಅಮೃತವೂ ಒಂದೇ ವಿಷವೂ ಒಂದೇ. ಮೂರ್ಖ ದಾನವ ಹಿರಣ್ಯ ಕಶ್ಯಪುಗೆ ಅದು ಅರಿವಾಗಲೇ ಇಲ್ಲ. ಆ ಜ್ಞಾನ ಪ್ರಚೋದನೆಗೆ ಅವನಲ್ಲಿ ದುರಹಂಕಾರವೇ ತುಂಬಿತ್ತು.  ಒಂದು ವೇಳೆ ಅಯೋಧ್ಯೆಯಲ್ಲಿ ಸಿಕ್ಕಿದ ಆಹಾರವನ್ನು ನಾವು ದುರಹಂಕಾರದಲ್ಲಿ ತಳ್ಳಿ ಎಸೆದು ಅಮೃತ ಅರಸಿ ಸೇವಿಸಿದರೂ ಅದು ಅಮೃತವಾಗಬಹುದೇ? ಇಲ್ಲ ಮನಸ್ಸಿನ ನಂಜು ಕರಗುವುದೇ ಇಲ್ಲ. ಮತ್ತೊಮ್ಮೆ ಶಬರಿ ನೆನಪಾಗುತ್ತಾಳೆ. ಆಕೆಯ ಉಚ್ಛಿಷ್ಟ ಫಲ ನೆನಪಾಗುತ್ತದೆ. ರಾಮನ ಆದರ್ಶ ನೆನಪಾಗುತ್ತದೆ. ಇದು ಅಯೋಧ್ಯೆಯ ಪ್ರಚೋದನೆ. ಇಲ್ಲಿ ಹೆಜ್ಜೆ ಊರುವಾಗ ನಮ್ಮ ದುರಹಂಕಾರಗಳು ಮಾಯವಾಗಬೇಕು. ಇಲ್ಲಿನ ಗಾಳಿ ಸೇವಿಸುವಾಗ ನಮ್ಮೊಳಗಿನ ವಿಷಗಾಳಿ ಬತ್ತಿ ಹೋಗಬೇಕು. ಇಲ್ಲವಾದರೆ ಇಲ್ಲಿ ಹೆಜ್ಜೆ ಊರುವುದಕ್ಕೆ ನಮಗೆ ಯಾವ ಹಕ್ಕೂ ಇರುವುದಿಲ್ಲ. ಇಲ್ಲಿನ ಜನ ಶಬರಿಗಳಾಗುತ್ತಾರೆ. ಇವರ ನರ ನರದಲ್ಲೂ  ಶಬರಿಯ ಪ್ರಭಾವ ಹರಿಯುತ್ತಿದೆಯೋ ಎಂಬ ಭಾವನೆ ವ್ಯಕ್ತವಾಗುತ್ತದೆ. ರಾಮಾಯಣದ ವಾಕ್ಯ ಕೇಳಿದ್ದು ನೆನಪಾಗುತ್ತದೆ, ಪುರದ ಪುಣ್ಯಂ ಪುರುಷ ರೂಪಿಂದ ಪೋಗುತಿದೆ.  ರಾಮ ಅಯೋಧ್ಯೆಯಿಂದ ಹೊರಡುವಾಗ ಅಯೋಧ್ಯಾ ನಗರವೇ ಹಿಂದೆ ಬಂದಿತ್ತು. ಎಂತಹಾ ರಾಮ? ಎಂತಹಾ ಪ್ರಜೆಗಳು? ಆಯೋಧ್ಯೆಯಲ್ಲಿ ಸಿಕ್ಕಿದ ಆತಿಥ್ಯ ಅತಿಶಯವಲ್ಲ ಅನ್ನಿಸಿತ್ತು. ಬಸ್ ಹತ್ತಿ ಹೋಗುವಾಗ ನಮ್ಮ ಹಿಂದೆ ಇದ್ದದ್ದು ಧೂಳು ಮಾತ್ರ. 

            ಆಯೋಧ್ಯೆ ಗಲ್ಲಿ ಗಲ್ಲಿ ಬೀದಿ ಬೀದಿ ಸುತ್ತಬೇಕು ಎಂಬ ಅದಮ್ಯ ಬಯಕೆ ಏನೋ ಇತ್ತು. ಆದರೆ ಅದು ಕೈಗೂಡುವ ಹಾಗಿರಲಿಲ್ಲ. ಆದರೆ ಅಲ್ಲಿನ ಭೂಮಿಯಲ್ಲಿ ನಾವು ಹೆಜ್ಜೆ ಇಟ್ಟ ಎಡೆಯೆಲ್ಲ ಹೆಜ್ಜೆ ಊರುವುದಕ್ಕೆ ಅಂಜಬೇಕು. ಛೇ ಇಲ್ಲೇ ಬಾಲರಾಮನ ಹೆಜ್ಜೆಯ ಸದ್ದು ಅಡಗಿರಬಹುದೇ? ಧೀಮಂತ ಪುರುಷೋತ್ತಮನ  ಉಸಿರ ಬಿಸಿ ಆರಿರಬಹುದೇ . ಆ ಗಾಳಿಯ ಆರ್ದ್ರತೆ ಇನ್ನೂ ಹಸಿಯಾಗಿರಬಹುದೇ? ಕಲ್ಪನೆಗಳು ನೂರಾರು. ನಿಜಕ್ಕೂ ಭಾವನಾತ್ಮಕನಾಗಿದ್ದೆ. ಕೇವಲ ಬರಹಗಳಿಗೆ ಸೀಮಿತವಾಗುವ ಭಾವನೆಗಳಲ್ಲ. ಒಂದು ಬಾರಿ ಅಲ್ಲಿನ ಧೂಳಿಗೆ ಮೈ ಬೆಸೆಯುವಾಸೆ ಹೇಗೋ ಹತ್ತಿಕೊಂಡರೂ ಮಂದಿರದ ಒಳಹೋಕ್ಕ ಮೇಲೆ ಸಾಷ್ಟಾಂಗ ನಮಸ್ಕರಿಸಿದೆ.  ಕಣ್ಣು ಮುಚ್ಚಿ ದೀರ್ಘವಾದ ಉಸಿರೆಳೆದೆ. ರಾಮ ತುಳಿದ ಹೆಜ್ಜೆಯ ಗಂಧ ಸೇರಬಹುದೇ ಎಂಬ ತವಕ.  ಕೊನೆಗೊಮ್ಮೆ ಅಯೋಧ್ಯೆಗೆ ವಿದಾಯ ಹೇಳಲೇ ಬೇಕು. ಪ್ರತಿಯೊಬ್ಬ ಮನುಷ್ಯನೂ ಪ್ರಾಣಿಯೂ ಈ ಭೂಮಿಗೆ ವಿದಾಯ ಹೇಳುವಾಗ ಆಯೋಧ್ಯೆಗೂ  ವಿದಾಯ ಹೇಳಲೇ ಬೇಕು. ಪ್ರಖರವಾದ ಸೂರ್ಯ ನಗುತ್ತಿದ್ದ. ಆಕಾಶ ನೋಡಿ ನಾನೆಂದೆ ಮತ್ತೊಮ್ಮೆ ತೋರಿಸುವ ಅನುಗ್ರಹ ಮಾಡು. ಯಾಕೆಂದರೆ ರಾಮ ಸುರ್ಯವಂಶಜ ಇನಕುಲ ವಾರಿಧಿ. ಸೂರ್ಯ ಅಸ್ತಮಿಸಿದರೂ ಮತ್ತೆ ಉದಯಿಸಲೇ ಬೇಕು. 

                ಭೂಮಿಯ ಮೇಲೆ ಪ್ರಕಾಶವಿದ್ದಂತೆ ಅಂಧಕಾರವೂ ಇರುತ್ತದೆ. ಸೂರ್ಯ ಪ್ರಕಾಶವನ್ನು ಮಾತ್ರ ಸೃಷ್ಟಿಸುವುದಿಲ್ಲ. ಆತ ಅಂತರ್ಧಾನನಾಗಿ ಕತ್ತಲೆಯನ್ನು ಸೃಷ್ಟಿಸುತ್ತಾನೆ. ಭೂಮಿಯಲ್ಲಿ ಕತ್ತಲೆಯನ್ನು ಸೃಷ್ಟಿಸಿ ಮುಳುಗಿಬಿಡುತ್ತಾನೆ.  ಕತ್ತಲೆ ಸ್ಥಾಯಿಯಾಗಿದೆಯೋ ಬೆಳಕು ಸ್ಥಾಯಿಯೋ ಹೇಳುವುದು ಕಷ್ಟ. ಯಾವುದೂ ಸ್ಥಿರವಲ್ಲ.  ಇದನ್ನು ಕಾಣುವ ನಮ್ಮ ಮನೋಭಾವ ಮತ್ತು ಅದನ್ನು ಸ್ವೀಕರಿಸುವ ರೀತಿಯೇ ಮುಖ್ಯ.  ಕತ್ತಲೆಯಿಂದ ಬೆಳಕಿನ ಪ್ರಚೋದನೆಯಂತೂ ಸತ್ಯ. ಪ್ರಚೋದನೆ ಕೆಟ್ಟದೂ ಇರಬಹುದು ಒಳ್ಳೆಯದೂ ಇರಬಹುದು. ಕೆಟ್ಟದು ಎಂದು ದೂರ ಮಾಡುವಂತಿಲ್ಲ. ಕೆಟ್ಟದು ಇದ್ದರೆ ಒಳ್ಳೆಯದರ ಅರಿವಾಗುತ್ತದೆ. ಹಲವು ಸಲ ದುಷ್ಟರಿಂದಲೂ ಸತ್ಪ್ರೇರಣೆ ಲಭ್ಯವಾಗುತ್ತದೆ. ಅವರಂತೆ ನಾವಾಗಬಾರದು ಎಂಬ ಪ್ರಚೋದನೆ ಉಂಟಾದರೆ ಜಗತ್ತಿನಲ್ಲಿ ಕೆಟ್ಟದು ಇರಬಾರದು ಎನ್ನುವ ಹಾಗಿಲ್ಲ. ಹೆಜ್ಜೆ ಇಟ್ಟು ನಡೆದು ಹೋಗುವಾಗ ಕೆಸರು ಸಿಗುತ್ತದೆ. ಅಲ್ಲಿ ಉಟ್ಟ ಬಟ್ಟೆಯನ್ನು ಎತ್ತಿ ಕೆಸರು ತಾಗದಂತೆ  ನಿಧಾನಕ್ಕೆ ಹೆಜ್ಜೆ ಇಡುತ್ತೇವೆ. ಕೆಸರು ಎಲ್ಲಿ ಮೆತ್ತಿಕೊಳ್ಳುತ್ತದೋ ಎಂಬ ಭಯ. ಕೆಸರು ಇಲ್ಲಿ ಪರಿಶುದ್ಧಿಯ ಪ್ರಚೋದನೆಯನ್ನು ಜಾಗೃತ ಗೊಳಿಸಿತು. ದುಷ್ಟರೂ ಸತ್ಪ್ರೇರಣೆಗೆ ನಿಮಿತ್ತರಾಗುತ್ತಾರೆ. ದುಷ್ಟತನದ ಅಸ್ತಿತ್ವ ಇರಲೇ ಬೇಕು. ಅದು ನಮ್ಮನ್ನು ಸದಾ ಎಚ್ಚರಿಸುತ್ತದೆ. ಹಾಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ಸುಪ್ರಚೋದನೆಯನ್ನು ಜಾಗೃತ ಗೊಳಿಸಿದರೆ ಕುಸಿದ ಗೋಪುರಗಳು  ಆ ಪ್ರಚೋದನೆಯನ್ನು ಜೀವಂತವಾಗಿರಿಸುತ್ತವೆ. ದುಷ್ಟರನ್ನು ಹತ್ತಿರ ಮಾಡುವ, ದುಷ್ಟತನವನ್ನು ದೂರಮಾಡುವ ಸಂದೇಶವನ್ನು ನಾವು ಅರ್ಥವಿಸಬೇಕು. ದುಷ್ಟರಿದ್ದಾರೆ ಎಂದು ಧೃತಿಗೆಡುವ ಅವಶ್ಯಕತೆ ಇಲ್ಲ. ಅದರೊಂದಿಗೆ ಬದುಕಬೇಕು, ಅದೆಲ್ಲವೂ  ಉತ್ತಮ ಬದುಕಿನ ನಿರ್ಮಾಣಕ್ಕೆ ಭಗವಂತ ಒಡ್ಡುವ ಪರೀಕ್ಷೆಗಳು. 

                        ಆಯೋಧ್ಯೆಯನ್ನು ಕಂಡಾಗ ಒಂದು ಭಾವನೆ ಗಾಢವಾಗಿ ಅಚ್ಚೊತ್ತಿತು. ವಾಸ್ತವದಲ್ಲಿ ನಾವು ತಿರುಳನ್ನು ಕಾಣುವುದಿಲ್ಲ ಬರೀ ಹೊರಕವಚವನ್ನಷ್ಟೇ ಕಾಣುತ್ತಿದ್ದೇವೆ. ಇಂದಿನ ರಾಜಕೀಯ ಇಚ್ಛಾಶಕ್ತಿಯ ರೀತಿ ಇದು.   ನಮಗೆ ವಾಲ್ಮೀಕಿ ಬೇಕು, ವಾಲ್ಮೀಕಿ ಬರೆದ ರಾಮಾಯಣದ ಬಗ್ಗೆ ಆಸಕ್ತಿ ಇಲ್ಲ. ರಾಮಾಯಣದ ಬಗ್ಗೆ ಆಸಕ್ತಿ ಇದ್ದರೆ ರಾಮನ ಬಗ್ಗೆ ಆದರ್ಶದ ಬಗ್ಗೆ ಗಂಭೀರವಾಗಿ ಚಿಂತಿಸುವ ಮನೋಭಾವ ಬರುತ್ತಿತ್ತು.                       



                        ಅಯೋಧ್ಯೆಯ ಪ್ರಚೋದನೆ ಒಂದಾದರೆ ಕಾಶಿಯಲ್ಲಿ ಸೆರಗನ್ನು ಹೊದ್ದುಕೊಂಡ  ಗಂಗೆಯ ಪ್ರಚೋದನೆ ಇನ್ನೊಂದು ಬಗೆಯದು. ಕಾಶೀ ವಿಶ್ವನಾಥ ...ಆತ ನಾಥ   ಯಾಕೆಂದರೆ ಜತೆಯಲ್ಲೇ ಇದ್ದಾಳೆ ಗಂಗಾ ಮಾತೆ.  ಒಂದೆಡೆ ವಿಶ್ವನಾಥನ ಸನ್ನಿಯಲ್ಲಿ  ಅನಾಥರು  ಸನಾಥರಾದರೆ, ಗಂಗೆಯಲ್ಲಿ ಮಿಂದವರು ಪುನೀತರಾಗುತ್ತಾರೆ. ನಡು ರಾತ್ರಿ ಗಂಗಾತೀರಕ್ಕೆ ಬಂದು ನಿಂತೆ, ಕ್ಷಣ ಹೊತ್ತು ಮೊದಲು ಗಂಗಾರತಿಯಾಗಿ ಸೇರಿದ ಜನರೆಲ್ಲ ಚದುರಿ ಹೊಗಿದ್ದರು. ಪೂಜೆಯ ಪರಿಕರಗಳು ಅವಶೇಷಗಳಾಗಿ ಬಿದ್ದುಕೊಂಡಿತ್ತು. ಅಲ್ಲೊಬ್ಬರು ಇಲ್ಲೊಬ್ಬರು ಗಂಗೆಯಲ್ಲಿ ಮುಳುಗೇಳುತ್ತಿದ್ದರು. ಹರಿಯವ ಗಂಗೆ ಸಮುದ್ರ ಗಂಭೀರೆಯಾಗಿ ಮಂದಸ್ಮಿತೆಯಂತೆ ತಣ್ಣನೇ ಕುಳಿತಂತೆ ಭಾಸವಾಯಿತು. ಒಂದೊಂದೆ ಹೆಜ್ಜೆಇಟ್ಟು ಕೆಳಗಿಳಿದೆ. ಏಕ ಸಂಕಲ್ಪದಿಂದ   ಗಂಗೆಯಲ್ಲಿ  ಮುಳುಗೆದ್ದೆ. ಹುಟ್ಟಿದ ನಂತರ ಈ ಬಗೆಯ ಸ್ನಾನ ಮಾಡಿದ್ದಿಲ್ಲ. ಅಗಲಿದ ಮಗನನ್ನುತಬ್ಬಿಕೊಳ್ಲುವ ಗಂಗಾ ಮಾತೆ ಇಲ್ಲೂ ತಬ್ಬಿ ಹಿಡಿದಳು. ಒಂದು ಎರಡು ಮೂರು ಹಲವಾರಿ ಬಾರಿ ಮುಳುಗೆದ್ದ. ಚಳಿ ಎನಿಸಲಿಲ್ಲ. ತಾಯಿ ಮಡಿಲ ಬೆಚ್ಚನೆ ಅನುಭವ. ಕೊನೆಯಲ್ಲಿ ಎದ್ದು ನಿಂತೆ  ಕೈಯ ಬೊಗಸೆಯಲ್ಲಿ ಗಂಗೆಯನ್ನು ತುಂಬಿಕೊಂಡೆ,  ಹುಟ್ಟಿಸಿ  ಅಗಲಿ ಹೋದ  ಅಪ್ಪ ನನಪಿಗೆ ಬಂದ. ಓ ನನ್ನ ಜನಕನೇ, ಭೂಮಿಗೆ ಬರುವುದಕ್ಕೆ ನಿಮಿತ್ತನಾಗಿ ಹೋದ ತಂದೆಯೇ ಇದೋ  ನಿನಗೆ ತರ್ಪಣ. ಮೂರು ಬಾರಿ ಬೊಗಸೆ ಎತ್ತಿ ಎತ್ತಿ ಬಿಟ್ಟು ಬಿಟ್ಟೆ. ಮನಸ್ಸಿನಲ್ಲೇ ನುಡಿದೆ   ಇದಕ್ಕಿಂತ ಮಿಕ್ಕಿನದು ನೀನು ಬಯಸಲಾರೆ ಸ್ವೀಕರಿಸು. ಗಂಗೆ ಸ್ವೀಕರಿಸಿದಳು. ಅಪ್ಪನಿಗೆ ಕೊಡುವುದಕ್ಕೆ ಅಮ್ಮನಿಗಲ್ಲದೇ  ಬೇರೆ ಯಾರಿಗೆ ಸಾಧ್ಯವಿದೆ?  ಇಲ್ಲ. ಆಕೆ  ಇದೋ ನಿನ್ನ ಅಪ್ಪನಿಗೆ ಮುಟ್ಟಿಸುವ ಹೊಣೆ ನನ್ನದು ಎಂದಂತೆ ಭಾಸವಾಯಿತು.  ಜನ್ಮಾಂತರದ ಪಾಪವೂ ಋಣವೂ ಸಂದಾಯವಾದಂತೆ ಮನಸ್ಸು ಹಗುರವಾಯಿತು.