Tuesday, December 31, 2019

ಬಿChi...ಭಯಾಗ್ರಫಿ

ಬಾಲ್ಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಹಲವು ಕಾದಂಬರಿಗಳನ್ನು ಓದುತ್ತಿದ್ದೆ. ಎಲ್ಲಿ ಹೋಗುತ್ತಿದ್ದರೂ  ಕೈ ಚೀಲದಲ್ಲಿ ಒಂದೆರಡು ಕಾದಂಬರಿ ಪುಸ್ತಕವಾದರೂ ಇರುತ್ತಿತ್ತು. ತರಾಸು, ಕೆಟಿ ಗಟ್ಟಿ, ಟಿ ಕೆ ರಾಮ ರಾವ್, ಅ ನ ಕೃ , ಬಿchi   ಯಂಡಮೂರಿ   ಮೊದಲಾದವರ ಕಾದಂಬರಿ ಪುಸ್ತಕಗಳನ್ನು ಓದುವುದೆಂದರೆ ಸಮಯ ಕಳೆದುದೇ ಅರಿವಿರುತ್ತಿರಲಿಲ್ಲ. ಈ ಎಲ್ಲ ಪುಸ್ತಕಗಳ ಸಾಲಿನಲ್ಲಿ ಅತ್ಯಂತ ವಿಶಿಷ್ಟವಾಗಿ ನಿಲ್ಲುತ್ತಿದ್ದುದು ಬಿ.chi. ಯವರ ಪುಸ್ತಕಗಳು. ಹಲವುಸಲ ಒಂದು ಸಲದ ಓದಿನಿಂದ ಅರ್ಥವಾಗದೆ ಪುನಃ ಪುನಃ ಓದಿ ಅರ್ಥವಾಗುವವರೆಗೂ ಕಾಡುತ್ತಿದ್ದ ಬಿchi ಯವರ ಪುಸ್ತಕಗಳು ಅದರ ಬರಹಗಳು ವಿಚಿತ್ರವಾಗಿ ಭಾಸವಾಗುತ್ತಿತ್ತು. ತೀವ್ರವಾದ ಆಸಕ್ತಿ ಇದ್ದಲ್ಲಿ ಮಾತ್ರವೇ ಬಿchiಯವರ ಪುಸ್ತಕಗಳನ್ನು ಓದಬಹುದು. ಕೇವಲ ಪಂಚರಂಗಿ ಪ್ರಣಯದ ಕಥೆಗಳ ಓದುಗರಿಗೆ ಇವುಗಳು ರುಚಿಸುವುದಿಲ್ಲ. ಆದರೆ ಮೌಲ್ಯಗಳ ಸಿದ್ದಾಂತಗಳ ಅನ್ವೇಷಣೆ ವಿಡಂಬನೆಗಳನ್ನು ಆಸ್ವಾದಿಸುವವರಿಗೆ  ಬಿchi ಯ ಬರಹಗಳು ಅಪ್ಯಾಯಮಾನವಾಗುತ್ತವೆ. ಕಂಡು ಕೇಳರಿಯದ ವಿಚಾರಗಳೂ ಸರಳ ಹಾಸ್ಯದಿಂದ ಮನಸ್ಸಿಗೆ ಹತ್ತಿರವಾಗುತ್ತದೆ. ಗೂಢಾರ್ಥ ದ್ವಂದ್ವಾರ್ಥಗಳ ವಿಚಾರಗಳು ನಾವು ಕಂಡು ಕೇಳರಿಯದ ಶಬ್ದಗಳ ಸರ್ಕಸ್ ಗಳು ಆಶ್ಚರ್ಯ ಹುಟ್ಟಿಸುತ್ತಿತ್ತು. 

ಎರಡು ದಿನ ಮೊದಲು ಅಂತರ್ಜಾಲದ ಮಾಧ್ಯಮಗಳಲ್ಲಿ ಬಿchi ಯ ಆತ್ಮಕಥೆಯನ್ನು ಆಧರಿಸಿದ ನಾಟಕದ ಪ್ರಕಟನೆಯನ್ನು ನೋಡಿ ಬಾಲ್ಯದ ಆಶೆ ಮತ್ತೊಮ್ಮೆ ಗರಿಗೆದರಿತು. ಮೊನ್ನೆ ಶನಿವಾರ ಸಾಯಂಕಾಲ ಮಲ್ಲೇಶ್ವರಂ ಸೇವಾಸದನದ ರಂಗ ಮಂದಿರದಲ್ಲಿ , ಶ್ರೀ ಬಸವರಾಜ ಎಮ್ಮಿಯವರ  ರಚನೆ ನಿರ್ದೇಶನದಲ್ಲಿ ಮಾನಸಪುತ್ರ ಎಂಬ ನಾಟಕ ಪ್ರದರ್ಶನಗೊಳ್ಳುವುದಿತ್ತು. ಸಮಯಕ್ಕೆ ತುಸು ಮುಂಚಿತವಾಗಿ ನಾಟಕದ ಪ್ರೇಕ್ಷಕನಾದೆ. 

’ಮಾನಸ ಪುತ್ರ’ ಬಿChi ಯವರ ಆತ್ಮಕಥೆಯನ್ನು ಆಧರಿಸಿ ಹಲವು ರಸವತ್ತಾದ ಘಟನೆಗಳೊಂದಿಗೆ ಹೆಣೆದ ನಾಟಕ. ರಚನೆ ನಿರ್ದೇಶನ ಬಸವರಾಜ ಎಮ್ಮಿಯವರ, ಬೆಂಗಳೂರಿನ ಕಲಾವಿಲಾಸಿ ತಂಡದವರು ಈ ನಾಟಕವನ್ನು ಪ್ರದರ್ಶಿಸಿದರು. 

ಖ್ಯಾತ ಸಾಹಿತಿಯ ಅದು ಅವಧೂತ ವ್ಯಕ್ತಿತ್ವದ ಸಾಹಿತಿಯೊಬ್ಬರ ಆತ್ಮಕಥೆಯನ್ನು ಆಧರಿಸಿದ ಕಥೆಯನ್ನು ರಂಗಕ್ಕೆ ಅಳವಡಿಸುವುದು ಬಹಳ ಸಾಹಸದ ಕೆಲಸ. ಬಹಳ ಶ್ರಮ ವಹಿಸಿ ಇದನ್ನು ಉತ್ತಮವಾಗಿ ನೆರವೇರಿಸಿದ್ದಾರೆ.  ಉಚಿತವಾದ ರಂಗ ಪರಿಕರಗಳು ದೃಶ್ಯ ಜೋಡಣೆಗಳು ನಾಟಕದ ಆಕರ್ಷಕ ಅಂಶಗಳಾಗಿ ಗೋಚರಿಸಿದವು.  ಆ ಕಾಲದ ಹಲವು ಘಟನೆಗಳು ಅದನ್ನು ಬಿChiಯವರು ಕಂಡರೀತಿ ಅದಕ್ಕೆ ಅನುಯೋಜ್ಯವಾಗುವಂತೆ ದೃಶ್ಯ ಸಂಯೋಜನೆ ಉತ್ತಮವಾಗಿತ್ತು. ಪ್ರತಿಯೋಂದು ಸನ್ನಿವೇಶದಲ್ಲೂ ಒಂದೊಂದು ಸಂದೇಶವನ್ನು ಒದಗಿಸುತ್ತಿತ್ತು. ಉದಾಹರಣೆಗೆ: ಮುದುಕನನ್ನು ಮದುವೆಯಾದ ಹುಡುಗಿಯೊಬ್ಬಳು ರಾತ್ರೋ ರಾತ್ರಿ ಕೆಲಸದಾಳಿನ ಜತೆ ಓಡಿ ಹೋದಾಗ ಊರವರು ಸೇರಿ ಇಬ್ಬರನ್ನು ಹಿಡಿದು ಬೈಯುವ ಸನ್ನಿವೇಶವಿದೆ. ಆಗ  ಉತ್ತಮ ಜಾತಿಯ ಹುಡುಗಿ ನೀಚ  ಜಾತಿಯವನೊಂದಿಗೆ ಹೋದದನ್ನೇ ಆಕ್ಷೆಪಿಸುತ್ತಾನೆ. ಇಲ್ಲಿ ಬಿChiಯವರು ಒಂದು ಮಾತು ಹೇಳುತ್ತಾರೆ, ಮಾಡುವ ಅನೈತಿಕಕ್ಕಿಂತ ಜಾತಿಯೇ ಮುಖ್ಯವಾಗುತ್ತದೆ. ತಪ್ಪು ಮಾಡಿದರೂ ಆದೀತು, ಅದು ಜಾತಿ ನೋಡಿ ಮಾಡಬೇಕು.  ಹಾಗೆ ಮದುವೆಗೆ ಒಪ್ಪದ ಮಗನನ್ನು ಮದುವೆಯಾಗುವಂತೆ ಪೀಡಿಸುವ ಅಪ್ಪ, ಆತ ಹೇಳುವ ಮಾತು  ಎಲ್ಲರೂ ಇರುವಾಗ ಆತ ಮದುವೆಯಾಗದೆ ಸುಖದಲ್ಲಿ ಇರಬಾರದು ಎಂಬ ಒಕ್ಕಣಿಕೆ ಬಹಲ ಇಷ್ಟವಾಗುತ್ತದೆ. ಮದುವೆಯಾದವರು ಸುಖದಲ್ಲಿರುವುದಕ್ಕೆ ಸಾಧ್ಯವೇ ಇಲ್ಲ.

ಹೀಗೆ ತಮ್ಮ ಆತ್ಮ ಕಥೆಯನ್ನು ಬಿChiಯವರು ಬರೆಯುತ್ತಾ ಅಲ್ಲಿನ ಘಟನೆಗಳಿಗೆ  ಸ್ವತಃ ಅವರೇ ದಂಗಾಗಿ ಬಿಡುತ್ತಾರೆ. ಹಾಗಾಗಿಯೆ ಅವರ ಆತ್ಮ ಕಥೆಯನ್ನು ಅವರು ಭಯಾಗ್ರಫಿ ಅಂತಲೇ ಕರೆಯುತ್ತಾರೆ.


ನಿರೀಕ್ಷೆಯಂತೆ ಬಿChi ಯವರ  ಗೂಡಾರ್ಥದ ದ್ವಂದ್ವಾರ್ಥ ಶಬ್ದಗಳ ರಸಮಾಲೆಯೇ ಸಂಭಾಷಣೆಯಲ್ಲಿ ಹಾಸು ಹೊಕ್ಕಾಗಿತ್ತು. ಇಲ್ಲಿ ದ್ವಂದ್ವಾರ್ಥವೆಂದರೆ ವಾಡಿಕೆಯ ದ್ವಂದ್ವಾರ್ಥವಲ್ಲ. ಬದಲಿಗೆ ಒಂದು ಶಬ್ದಕ್ಕೆ ವಕ್ರವಾದ ಅರ್ಥವೋ ಉಚ್ಚಾರವೋ ಒಳಗೊಂಡಿರುವುದು ಬಿChiಯವರ ಸಾಹಿತ್ಯದ ವೈಶಿಷ್ಟ್ಯ. ಯಾರೂ ಕಾಣದೆ ಇದ್ದ ಅಂಕುಡೊಂಕುಗಳನ್ನು ಬಿChi ಯವರು ಉಲ್ಲೇಖಿಸಿದಂತೆ ಅದನ್ನು ಯಥೇಚ್ಛವಾಗಿ  ಉತ್ತಮವಾಗಿ  ಬಳಸಿಕೊಂಡಿದ್ದರು. ಇದಕ್ಕಾಗಿಯೇ ಪ್ರೇಕ್ಷಕ ಜಾಗ್ರತನಾಗಿರುತ್ತಿದ್ದ. ಕೇಳದೇ ಎಲ್ಲಿ ಕಳೆದು ಹೋಗಿಬಿಡಬಹುದೋ ಎಂಬ ಆತಂಕ. ಆ ರೀತಿಯಲ್ಲಿ ಬಿChi ಸಾಹಿತ್ಯದ ರಸ ಸೃಷ್ಟಿಯಾಗಿತ್ತು. ಪ್ರಧಾನ ಭೂಮಿಕೆಯಲ್ಲಿ ಬಿChiಯ ಪಾತ್ರ ನಿರ್ವಹಣೆ ಉತ್ತಮವಾಗಿತ್ತು. ಆದರೂ ಇನ್ನೂ ಕೆಲವು ಅಂಶಗಳನ್ನು ಸೇರಿಸಿಬಿಡಬಹುದಿತ್ತೋ ಏನೋ ಅಂತ ಅನ್ನಿಸಿತು. ಮುಖ್ಯವಾಗಿ ಬಿChiಯವರು ಸಿಗರೇಟ್ ಸೇದುತ್ತಿದ್ದರು, ಧೂಮ ಪಾನದ ತೀವ್ರ ವ್ಯಸನಿಯಾಗಿದ್ದರು ಎಂದು ಕೇಳಿದ್ದೆ.  ಅದನ್ನು ಸಂಕೇತವಾಗಿಯಾದರೂ ಅಳವಡಿಸಿದರೆ ಬಿChi ಸಹಜತೆಗೆ ಹತ್ತಿರವಾಗುತ್ತಿದ್ದರು. ಈ  ಋಣಾತ್ಮಕ ಅಂಶಗಳ ಕೊರತೆ ಕಾಣುತ್ತಿತ್ತು.  ಆದರೂ ಬಿChiಯ ಪಾತ್ರ ಆಕರ್ಷಕವಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ.    ಮತ್ತುಳಿದಂತೆ ಶರೀರ ಭಾಷೆಯಲ್ಲಿ ಕೆಲಸದಾಳುವಾಗಿದ್ದ ಕಲಾವಿದ ನಿರ್ವಹಣೆ ಉತ್ತಮವಾಗಿತ್ತು. ಅದಕ್ಕೆ ಕಾರಣ ಕೆಲಸದಾಳಿನಂತೆ ಆಕೆಯ ವಸ್ತ್ರವಿನ್ಯಾಸ. ಇದು ಅವರು ಬಾಣಂತಿಯಾಗಿ ನಿರ್ವಹಿಸುವಾಗಲೂ ಎದ್ದು ಕಾಣುತ್ತಿತ್ತು. ಪಾತ್ರದ ಸಹಜತೆಗೆ ಇದು ಅನಿವಾರ್ಯ.  ಇದರ ಜತೆಯಲ್ಲಿ ಮೊದಲು ಶಾಸ್ತ್ರಿಗಳಾಗಿ ನಿರ್ವಹಿಸಿದ ಪಾತ್ರಾಭಿನಯವೂ ಇಷ್ಟವಾಯಿತು.

ಇನ್ನು ಸೇರಿದ ಕಲಾವಿದರಲ್ಲಿ ಎಷ್ಟು ಮಂದಿ ಬಿChiಯವರ ಸಾಹಿತ್ಯಗಳನ್ನು ಓದಿದ್ದಾರೋ ತಿಳಿಯದು ಆದರೆ ರಂಗದಲ್ಲಿ ಪಾತ್ರವಾಗುವಾಗ ಅದರ ಕೊರತೆ ಎದ್ದುಕಾಣುತ್ತಿತ್ತು.  ಪಾತ್ರ ನಿರ್ವಹಣೆಯಲ್ಲಿ ಸಹಜತೆಯ ಕೊರತೆ ಇರುತ್ತಿತ್ತು. ವೃತ್ತಿಪರ ಕಲಾವಿದ ತನ್ನ ಪಾತ್ರಕ್ಕೆ ನ್ಯಾಯ ಒದಗಿಸುವುದಕ್ಕೆ ಬಿChi ಅವರ ಸಾಹಿತ್ಯದ ಅವಲೋಕನವೂ ಅತ್ಯವಶ್ಯ. ಇದು ವೃತ್ತಿ ಪರತೆ.  ಆಗ ಇನ್ನಷ್ಟು ಕಥೆಗೆ ಹತ್ತಿರವಾಗುವುದಕ್ಕೆ ಸಾಧ್ಯವಾಗುತ್ತದೆ. ಇದು ನನ್ನ ಅನಿಸಿಕೆ.  ಉದಾಹರಣೆ. ಬಿChiಯವರು ಮತ್ತು ಸಹಾಯಕ ತಮ್ಮದೇ  ಮನೆಯಲ್ಲಿ ಕುಳಿತು ಮಾತನಾಡುವ ಸನ್ನಿವೇಶವಿದೆ. ಅಲ್ಲಿ ಅವರು ಕುಳಿತ ಭಂಗಿಯಲ್ಲೆ ಒಂದು ಅಸಹಜತೆ ಇರುತ್ತಿತ್ತು. ತಮ್ಮದೇ ಮನೆಯಲ್ಲಿ ಬಂದ ನೆಂಟರಂತೆ ಶಿಸ್ತಿನಲ್ಲಿ ಕುಳಿತು ಮಾತನಾಡುವುದು ರಂಗ ತನ್ನದೂ ಎನ್ನುವ ಕೊರತೆ ಕಾಣುತ್ತಿತ್ತು. ತಮ್ಮ ಮನೆಯಲ್ಲಿ ಕುಳಿತುಕೊಳ್ಳುವಾಗ ಒಂದಷ್ಟು ಸ್ವೇಚ್ಛೆ ಸಹಜವಾಗಿ ಇರುತ್ತದೆ. ಕಾಲು ಮೇಲೆ ಹಾಕಿಯೋ ಕುಕ್ಕರಗಾಲಿನಲ್ಲೋ ಹೇಗೆ ಬೇಕೋ ಹಾಗೆ ನಮ್ಮ ಮನೆಯಲ್ಲಿ ಕುಳಿತು ಬಿಡುತ್ತೇವೆ. ಆ ನೈಜತೆ ಇಲ್ಲಿ ಕಂಡುಬಲಿಲ್ಲ. ಬಂದರೆ ಒಂದಷ್ಟು ಮಾರ್ಮಿಕವಾಗುತ್ತಿತ್ತೋ ಅಂತ ಅನ್ನಿಸುತ್ತದೆ.  ಅಂತಹ ಅಂಶಗಳು ಹಲವಾರನ್ನು ಇಲ್ಲಿ ಗುರುತಿಸಬಹುದು. ಬಹಳಷ್ಟು ಪಾತ್ರಗಳು ಸಂಭಾಷಣೆಯನ್ನು ಒಪ್ಪಿಸುವಾಗ ಸಂಭಾಷಣೆಯ ಗಂಭೀರತೆಯ ಬಗ್ಗೆ ಅನಗತ್ಯವಾಗಿ ಯೋಚಿಸುವಂತೆ ಕಂಡು ಬರುತ್ತಿತ್ತು. ಇದು ಸಹಜತೆಗೆ ಶರೀರ ಭಾಷೆಯ ನೈಜತೆಗೆ ಆಡ್ಡಿಯಾದಂತೆ ಭಾಸವಾಗುತ್ತಿತ್ತು. ನಾವು ಅಭಿನಯಿಸುತ್ತಿದ್ದೇವೆ ಎಂಬ ಭಾವನೆಯಿಂದ ಪಾತ್ರಗಳು ಹೊರಬಂದ್ರೆ ಸೂಕ್ತ.  ಆದರು ಕೆಲವು ಪಾತ್ರಗಳು ಉತ್ತಮವಾಗಿ ನಿರ್ವಹಿಸಿದ್ದನ್ನು ತಳ್ಳುವಹಾಗಿಲ್ಲ.  ಹೆಚ್ಚಿನ ಎಲ್ಲಾ ಪಾತ್ರಗಳು ಗರಿ ಗರಿ ಇಸ್ತ್ರಿ ಮಾಡಿದ  ಶುಭ್ರವಾದ  ವಸ್ತ್ರಗಳನ್ನು ಧರಿಸಿದ್ದು ಅದು ಅಸಹಜವಾಗಿತ್ತು. ಮನೆಯಲ್ಲಿರುವಾಗಲೂ ಶಿಸ್ತಿನ ಉಡುಗೆಯ ಆವಶ್ಯಕತೆ ಇರುತ್ತದೆಯೇ?

ಇತಿಹಾಸದ ವ್ಯಕ್ತಿಗಳನ್ನು ರಂಗದ ಮೇಲೆ ತರುವಾಗ ಜಾಗರೂಕರಾಗಿ ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ತುಸು ಎಚ್ಚರ ತಪ್ಪಿದರೂ ಇತಿಹಾಸಕ್ಕೆ ಅಪಚಾರವೆಸಗಿದಂತೆ.  ಆ ವಿಚಾರದಲ್ಲಿ ಬಹಳ ಗಮನ ಹರಿಸಿದ್ದು ಪ್ರತಿ ಸನ್ನಿವೇಶದಲ್ಲೂ ಅರಿವಿಗೆ ಬರುತ್ತಿತ್ತು. ಇದೊಂದು ಆತ್ಮಕಥೆಯಾಧಾರಿತವಾದರೂ ಇದು ಆತ್ಮಕಥೆ ಎಂದು ಪ್ರೇಕ್ಷಕ ಎಚ್ಚರಿಕೆಯಿಂದ ಗಮನಿಸುವಂತೆ ಮಾಡುತ್ತಿತ್ತು. ಯಾಕೆಂದರೆ ಪ್ರತೀ ಸನ್ನಿವೇಶವೂ ಒಂದು ಸುಂದರ ಕಥೆಯಂತೆ ಭಾಸವಾಗುತ್ತಿತ್ತು. 

ತುಂಬಿದ ರಂಗ ಮಂದಿರದಲ್ಲಿ ಪ್ರೇಕ್ಷಕ ಪ್ರತಿಕ್ರಿಯೆ ಅಧ್ಬುತವಾಗಿತ್ತು ಕರತಾಡನದ  ಪೂರ್ಣ ಅಂಕ ಅದು ಬಿChiಯವರಿಗೆ ಸಲ್ಲುತ್ತದೆ. ಅಷ್ಟು ಅಧ್ಬುತವಾದ ಮಾತುಗಳು ಇಡೀ ನಾಟಕದ ಜೀವಾಳಎಂದರೆ ತಪ್ಪಿಲ್ಲ.

ನಾಟಕವನ್ನು ಒದಗಿಸಿದ ಅದರಲ್ಲಿ ಪರಿಶ್ರಮ ವಹಿಸಿದ ಎಲ್ಲಾ ಕಲಾವಿದ ವರ್ಗದವರಿಗೂ ಸಂಘದ ಸದಸ್ಯರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಇನ್ನು ಇನ್ನೂ ಉತ್ತಮವಾದ ಸೇವೆ ಒದಗಿಸುವಂತೆ ಚೈತನ್ಯ ಮೂಡಿಬರಲಿ ಎಂಬ ಆಶಯ. ಶ್ರಮ ವಹಿಸಿದ ಕಲಾವಿದನ ಶ್ರಮ ಸಾರ್ಥಕವಾಗಬೇಕಾದರೆ ಪ್ರೇಕ್ಷಕನೂ  ಬದ್ದತೆಯನ್ನೂ ತೊರಬೇಕು.  ತನ್ನ ಅನಿಸಿಕೆ ವ್ಯಕ್ತ ಪಡಿಸಿದಾಗ ಅದು ಇನ್ನಷ್ಟು ಚೈತನ್ಯವನ್ನು ಒದಗಿಸುತ್ತದೆ. ಮುಂದಿನ ಹೆಜ್ಜೆ ಇಡುವಲ್ಲಿ ಒಂದಷ್ಟು ಬೆಳಕನ್ನು ಒದಗಿಸುತ್ತದೆ. ಒಬ್ಬ ಸಾಮಾನ್ಯ ಪ್ರೇಕ್ಷಕನಾದ ನನ್ನ ಅನಿಸಿಕೆಗಳು ಇದು. ಇದರಲ್ಲಿ ಮಿಥ್ಯೆಗಳು ಇದ್ದರೂ ಇರಬಹುದು. ಇದು ಕೇವಲ ನನ್ನ ಅನಿಸಿಕೆಗಳಿಗೆ ಸೀಮಿತ.  

Wednesday, December 25, 2019

ಪೌರತ್ವದ ಲೆಕ್ಕಾಚಾರ. ..

ಮಧ್ಯಾಹ್ನದ ಊಟಕ್ಕೆ ಅನ್ನಕ್ಕೆ ಪಾತ್ರೆ ಇಡಬೇಕಾದರೆ ಮನೆಯಾಕೆ ಲೆಕ್ಕ ಹಾಕುತ್ತಾಳೆ, ಮನೆಯಲ್ಲಿ ಯಾರೆಲ್ಲ ಇರುತ್ತಾರೆ? ಎಷ್ಟು ಮಂದಿ ಊಟ ಮಾಡಬೇಕು? ಅದನ್ನು ಹೊಂದಿಕೊಂಡು ಆಕೆ ಪಾತ್ರೆಗೆ ಅಕ್ಕಿ ಸುರಿಯುತ್ತಾಳೆ. ಇದು ಒಂದು ಮನೆಯ ಲೆಕ್ಕಾಚಾರ.  ಒಂದು ಮದುವೆ ಪೂಜೆ ಇನ್ನಿತರ ಸಮಾರಂಭದಲ್ಲೂ ಅಷ್ಟೇ ಊಟ ತಿಂಡಿಗೆ ಎಷ್ಟು ಜನ ಸೇರಬಹುದು ಅಂತ ಲೆಕ್ಕ ಹಾಕುತ್ತಾರೆ. ಹೋಗಲಿ ದೇವರ ಪೂಜೆಗೆ ಪ್ರಸಾದ ನೈವೇದ್ಯ ಇಡುವುದು ದೇವರಿಗಾದರೂ ಭಕ್ತರು ಎಷ್ಟು ಸೇರುತ್ತಾರೆ ಎಂಬುದನ್ನು ಲೆಕ್ಕ ಹಾಕುತ್ತಾರೆ. ಹಾಗಿರುವಾಗೆ ದೇಶದೊಳಗೆ ರಾಜ್ಯ ಗ್ರಾಮದೊಳಗೆ ಎಷ್ಟು ಜನ ಇದ್ದಾರೆ ಎಂದು ಲೆಕ್ಕ ಹಾಕಬೇಡವೇ? ಒಂದು ಸುಸ್ಥಿರ ಆಢಳಿತಕ್ಕೆ , ಅಭಿವೃದ್ಧಿಗೆ ಇದು ಜನಗಣತಿ ಅನಿವಾರ್ಯ.  ಮಾತ್ರವಲ್ಲ ನಮ್ಮ ಮನೆಯಲ್ಲೇ ಆಗಲಿ ಯಾರೆಲ್ಲ ಇದ್ದಾರೆ ಎಂಬಲ್ಲಿ ನಮ್ಮ ಮನೆಯ ಡಾಟಾ ಬೇಸ್ ಸಿದ್ದವಾಗುತ್ತದೆ. ಹಾಗಿರುವಾಗ ಊರಿಗೆ ದೇಶಕ್ಕೆ ಅದು ಬೇಡ ಎನ್ನುವ ತೀರ್ಮಾನಕ್ಕೆ ಬರುವುದು ಮೂರ್ಖತನವಾಗುತ್ತದೆ. ವಾಸ್ತವದಲ್ಲಿ ಬೇಡ ಎಂದು ತೀರ್ಮಾನಕ್ಕೆ ಯಾವಾಗ ಬರುತ್ತಾರೆ? ಊರನ್ನು ಮನೆಯನ್ನು ನೋಡಿಕೊಳ್ಳುವವ ಬೇರೆ ಯಾವನೋ ಒಬ್ಬನಾಗಿದ್ದರೆ ಆತನಿಗೆ ಮನೆಯೊಳಗಿನ ಮಂದಿಯ ಲೆಕ್ಕ ಬೇಕು ಎನ್ನುವುದಕಿಂತ ಅದನ್ನು ಆತ ಅಲಕ್ಷಿಸುತ್ತಾನೆ. ಮಧ್ಯಾಹ್ನ ಹತ್ತು ಜನ ಊಟಕ್ಕಿದ್ದರೆ ಈತ ಲೆಕ್ಕ ಪುಸ್ತಕದಲ್ಲಿ ಹೈದಿನೈದು ಮಂದಿ ಇದ್ದರು ಎಂದು ತೋರಿಸಿ ಐದು ಊಟದ ಹೆಚ್ಚುವರಿ ಖರ್ಚನ್ನು ಲೆಕ್ಕದಲ್ಲಿ ತೋರಿಸಿ ಸ್ವಂತ ಜೇಬಿಗೆ ಇಳಿಸಬಹುದು. ಆಂದರೆ ಭ್ರಷ್ಟಾಚಾರ ಅಲ್ಲೇ ಆರಂಭವಾಗಿಬಿಡುತ್ತದೆ. ಕದಿಯುವವರಿಗೆ ನಿಖರ ಲೆಕ್ಕ ಯಾವಾಗಲೂ ತೊಂದರೆಯನ್ನು ಕೊಡುತ್ತದೆ.  ಇದು ಬಹಳ ಸಾಮಾನ್ಯ ಜ್ಞಾನ. ಇದನ್ನು ಅರಿಯುವುದಕ್ಕೆ ಆತ ದೊಡ್ಡ ಪದವಿ ಪಡೆದ ವಿದ್ಯಾವಂತನಾಗಬೇಕಿಲ್ಲ. ಹಾಗೇ  ನಮ್ಮ ಮನೆಯಲ್ಲಿ ಯಾರೋ ಒಬ್ಬ ಪರಿಚಯ ಇಲ್ಲದವನು ಇರುತ್ತಾನೆ ಎಂದರೆ ಊಹಿಸಿ ರಾತ್ರಿ ಮಲಗಿದರೆ ನಿರಾಳವಾದ ನಿದ್ದೆ ಸಾಧ್ಯವೇ?  ಮಲಗುವ ಮೊದಲು ಆತನ ಪರಿಚಯ ಸಂಬಂಧಿಸಿದವನು ಎಲ್ಲರಿಗೂ ಮಾಡಿಕೊಡಬೇಕು. ಇಲ್ಲವಾದರೆ ಉಳಿದುಕೊಳ್ಳುವ ಅಪರಿಚಿತ ತನ್ನ ಪರಿಚಯವನ್ನು ಎಲ್ಲರಿಗೂ ಮಾಡಿಕೊಡಲೇ ಬೇಕು.  ಇದು ಯಾರೂ ಅರ್ಥ ಮಾಡಿಕೊಳ್ಳಬಲ್ಲ ಸರಳ ತತ್ವಗಳು ರಾಜಕೀಯ ಮಂದಿಗೆ ಅರ್ಥವಾದರೂ ಅದು ಬೇಕಾಗಿಲ್ಲ ಎಂದರೆ ಆಶ್ಚರ್ಯವಾಗುತ್ತದೆ. 

ಇಂದು ದೇಶಾದ್ಯಂತ ಗಲಭೆ ಎಬ್ಬಿಸುವ CAB  ಅಂದರೆ ಪೌರತ್ವ ಕಾಯಿದೆ ಉಳಿದಂತೆ NCR ಮತ್ತು NPR(National Population Register) ಇವುಗಳ  ಬಗೆಗಿನ  ವಿರೋಧ ನೋಡಿದರೆ ಮೂರ್ಖತನದ ಅರಿವಾಗುತ್ತದೆ.  ಯಾಕಾಗಿ ವಿರೋಧಿಸಬೇಕು ಎನ್ನುವುದೇ ಸ್ಪಷ್ಟವಿಲ್ಲದ ಎಡಬಿಡಂಗಿ ಮನೋಭಾವ ಒಂದೆಡೆಯಾದರೆ, ಇದಕ್ಕೆ ಧರ್ಮಾಂಧತೆಯ ಬಣ್ಣ ಹಚ್ಚುವುದು ಮತ್ತೊಂದೆಡೆ. ಸರಕಾರ ಇದೇ ಗಣತಿಯನ್ನು ತೆಗೆದು ಲೆಕ್ಖ ಹಾಕಿ ಯೋಜನೆಯನ್ನು ರೂಪಿಸಿ ಅದರ ಫಲವನ್ನು ಪಡೆಯುವಲ್ಲಿ ಅಡ್ದಿಯಾಗದ ಧರ್ಮ, ಒಂದು ಕಾಯಿದೆ ರೂಪಿಸುವಾಗ ಧರ್ಮ ಅಡ್ಡಿಯಾಗುತ್ತದೆ. ಕುಂಬಳ ಕಾಯಿ ಕಳ್ಳ ಎಂಬಂತೆ ತಮ್ಮ ಹೆಗಲನ್ನು ತಾವೆ ಮುಟ್ಟಿನೋಡುತ್ತಾರೆ. 

ಮಾಜಿ ಮಂತ್ರಿಯೊಬ್ಬರು ಈ ಕಾಯಿದೆ ಯಾಕೆ ಬೇಡ ಎಂಬುದಕ್ಕೆ ಕಾರಣ ಕೊಡುತ್ತಾರೆ.  ಈ ಕಾನೂನಿನಂತೆ ಒಬ್ಬ ಪೌರನಿಗೆ ದಾಖಲಾತಿಗಳನ್ನು ಕೇಳಿದಾಗ, ಈ ದೇಶದ ಬುಡಕಟ್ಟು ಜನಾಂಗ ಅವಿದ್ಯಾವಂತರು, ದೀನ ದಲಿತರು ಈ ದಾಖಲೆಯನ್ನು ಒದಗಿಸಲು ಎಲ್ಲಿ ಹೋಗಬೇಕು? ಈ  ಕಾರಣ ಮೇಲ್ನೋಟಕ್ಕೆ ನ್ಯಾಯಯುತವಾದದ್ದು ಸರಿಯಾಗಿದ್ದದ್ದು ಎಂದು ಅನ್ನಿಸಿದರು ಅದನ್ನುಆಳವಾಗಿ ಯೋಚಿಸಿದಾಗ ಆ ಕಾರಣ ಎಷ್ಟು ಮೂರ್ಖತನದ್ದು ಎಂಬುದು ಅರಿವಾಗುತ್ತದೆ.  ಯೋಚಿಸಿ,  ಹಿರೋಶಿಮಾ ನಾಗಸಾಕಿಯಲ್ಲಿ  ಬಾಂಬ್ ಸುರಿದಾಗ ಆ ದೇಶ ಸಂಪೂರ್ಣವೆಂಬಂತೆ ನಾಶವಾದರೂ ಜಪಾನಿಗಳ ಬದ್ದತೆ ಕಾರ್ಯ ಕ್ಷಮತೆ ಆ ರಾಷ್ಟ್ರ ನಿರ್ಮಾಣದಲ್ಲಿ ಮುಖ್ಯ ಪಾತ್ರವಾಗುತ್ತದೆ. ಮಾತ್ರವಲ್ಲ ಬಹುರಾಷ್ಟ್ರಗಳಿಗೆ ಸಡ್ಡು ಹೊಡೆವಂತೆ ಜಪಾನ್ ಮತ್ತೆ ಎದ್ದು ನಿಲ್ಲುತ್ತದೆ. ಆ ರಾಷ್ಟ್ರವನ್ನು ನೋಡಿಯಾದರೂ ನಮ್ಮನ್ನು ಎಪ್ಪತ್ತು ವರ್ಷ ಆಳಿದವರು ನೋಡಿ ಕಲಿಯಬೇಕಿತ್ತು. ಜಪಾನಿನಷ್ಟು ಅಲ್ಲವಾದರು ಒಂದಿಷ್ಟು ನಾವು ಎದ್ದು ನಿಲ್ಲಬೇಕು ಎನ್ನುವ ಇಚ್ಛಾ ಶಕ್ತಿ ಪ್ರಜೆಗಳಲ್ಲಿ ಮೂಡಿಸಬೇಕಿತ್ತು. ಆದರೆ ಆದದ್ದೇನು ಬುಡಕಟ್ಟು ಜನಾಂಗ ಇನ್ನೂ ಕಾಡಲ್ಲೇ ಇದೆ.  ಎಪ್ಪತ್ತು ವರ್ಷವಾದರೂ ಊರು ಅವರಿಗೆ ಅರಿವಿಗೆ ಬಂದಿಲ್ಲ ಎಂದರೆ ಅದರ ವೈಫಲ್ಯ ಆಳಿದ ಮಂದಿಗಳ  ವೈಫಲ್ಯ ಯಾಕೆ ಆಗುವುದಿಲ್ಲ?  ಅವಿದ್ಯಾವಂತರಿಗೆ ಎಪ್ಪತ್ತು ವರ್ಷದಲ್ಲಿ ಸ್ವಲ್ಪವಾದರೂ  ವಿದ್ಯೆಯನ್ನು ಒದಗಿಸದ ಸ್ವಾತಂತ್ರ್ಯಾ ನಂತರದ ಆಢಳಿತ ಅದು ಎಂತದ್ದು?  ಸಂಗ್ರಹವಾದ ತೆರಿಗೆ ರಾಜ ದರ್ಬಾರಿಗೆ ಬಳಕೆ ಯಾಗುತ್ತಿದೆ ಎಂಬುದಕ್ಕೆ ಬೇರೆ ನಿದರ್ಶನ ಬೇಡ.  ಇನ್ನೂ ಅವಿದ್ಯಾವಂತರು ಸ್ವಂತ ದಾಖಲೆ ಇಟ್ಟುಕೊಳ್ಳದಷ್ಟು ಅರಿವಿಲ್ಲದ ಪ್ರಜೆಗಳು ಇದ್ದಾರೆ ಎಂದರೆ ಅದಕ್ಕೆ  ಎಪ್ಪತ್ತು ವರ್ಷದ ಆಢಳಿತ ಯಾಕೆ ಕಾರಣವಾಗುವುದಿಲ್ಲ?  ಬೇಡಾ ಅಂತ ಆಕ್ಷೇಪಿಸಿ ಕಾರಣಗಳನ್ನು ಒದಗಿಸುವಾಗ ಅದು ತಮ್ಮ ವೈಫಲ್ಯಗಳಾಗಿ ತಮ್ಮ ಕಾಲ ಬುಡಕ್ಕೆ ಬರುತ್ತದೆ ಎಂಬ ಪರಿಜ್ಞಾನ ಇಲ್ಲವೇ? 

ಎಪ್ಪತ್ತು ವರ್ಷ ಎಂದರೆ ಮನುಷ್ಯನ ಎರಡು ತಲೆಮಾರು ಎನ್ನಬಹುದು. ಈ ಎರಡು ತಲೆಮಾರಿನಲ್ಲಿ ಕೊನೆಯ ವ್ಯಕ್ತಿ ಇನ್ನೂ ತನ್ನ ಸ್ವಂತ ಅಸ್ತಿತ್ವಕ್ಕೆ ದಾಖಲೆಯನ್ನು ಒದಗಿಸುವುದಕ್ಕೆ ವಿಫಲನಾಗುತ್ತಾನೆ ಎಂದಾದರೆ ಅದರ ಹೊಣೆ ಯಾರದ್ದು? ಇಂದು ರಾಜಕೀಯದಲ್ಲಿ ವಿರೋಧಿಸುವುದಕ್ಕೆ ಕಾರಣ ಬೇಕಿಲ್ಲ? ಮಾಡುವುದು ’ಆತ’   ಎಂಬ ಒಂದೇ ಕಾರಣ ಸಾಕಾಗುತ್ತದೆ. ಅದನ್ನೆ ನಾನು ಮಾಡಿದರೆ ಅದು ಪರಮ ಪವಿತ್ರ ಕೆಲಸವಾಗುತ್ತದೆ. ಸ್ವಾತಂತ್ರ್ಯ ನಂತರ ಭಾರತದ ರಾಜಕೀಯ ಬೆಳೆದು ಬಂದ ರೀತಿ ಇದು. ಕೇವಲ ಮತಗಳಿಸುವುದು ಅಧಿಕಾರ ಉಳಿಸುವುದು ಸ್ವಜನ ಪಕ್ಷಪಾತ ಇವಿಷ್ಟೇ ರಾಜಕೀಯ ಎಂಬಂತಾಗಿ ಇಂದು ಭಾರತದ ಸಜ್ಜನ ಪ್ರಜೆ ರಾಜಕೀಯವನ್ನು ಛೀ ಥೂ ಅಂತ ದೂರವಿಡುವುದಕ್ಕೆ ಕಾರಣ ಹುಡುಕಿದರೆ,  ಅದೇ ಎಪ್ಪತ್ತುವರ್ಷದ ಇತಿಹಾಸ ಅತ್ಯಂತ ಹೀನಾಯವಾಗಿ ತೆರೆದುಕೊಳ್ಳುತ್ತದೆ.  ನಾವು ಬಾಲ್ಯದಲ್ಲಿರುವಾಗ ಪ್ರತಿ ದಿನವೂ ಒಂದು ಆಶಾವಾದವನ್ನು ಹೊಂದಿಕೊಳ್ಳುತ್ತಿದ್ದೆವು. ಕೆಟ್ಟು ನಿಂತ ರಸ್ತೆ, ಬಾರದ ವಿದ್ಯುತ್, ಕಲ ಬೆರೆಕೆ ಅಹಾರ, ಹೀಗೆ ಎಲ್ಲವನ್ನು ನೋಡಿದಾಗ ಇಂದಲ್ಲ ನಾಳೆ ಒಳ್ಳೆದಾಗುತ್ತದೆ ಎಂಬ ಆಶಾವಾದ ಇಟ್ಟು ನಿರೀಕ್ಷೆಯಲ್ಲಿ ದಿನ ಕಳೆದು ಕಳೆದು ಇದೀಗ ಐವತ್ತು ವರ್ಷ ಕಳೆದರೂ ನಿರೀಕ್ಷೆ ಸತ್ತು ಹೋಗಿದೆ. ಅದಕ್ಕೆ ಯಾರನ್ನು ಕಾರಣ ಮಾಡಬೇಕು. ಆಳುವ ಮಂದಿಗೆ ಒಂದಿಷ್ಟು ಸಾರ್ವಜನಿಕ ಇಚ್ಛಾ ಶಕ್ತಿ ಇಲ್ಲ ಎಂದಾದಾಗ ಅದು ಜನತೆಯ ಕೊರತೆಯೇ ಆಗಿ ಪರಿಣಮಿಸುತ್ತದೆ. 

  ಒಂದು ಮನೆಯ ಯಜಮಾನ ಪ್ರತಿಯೊಂದಕ್ಕೂ ಸರಿಯಾದ ಲೆಕ್ಕ ಇಡಬೇಕಾದದ್ದು ಆತನ ಅನಿವಾರ್ಯತೆಯಾಗುತ್ತದೆ. ಆದರೆ ಹಾಗೆ ಆತ ಪ್ರತಿಯೊಂದಕ್ಕು ಲೆಕ್ಕ ಇಡುವಾಗ ಆ ಮನೆಯಲ್ಲಿ ಕದಿಯುವವರು ವಂಚಿಸುವವರು ಇದ್ದರೆ ಅವರಿಗೆ ಸರಿಯಾದ ಲೆಕ್ಕ ಒದಗಿಸುವುದು ಕಷ್ಟವಾಗುತ್ತದೆ. ಸಹಜವಾಗಿ ತಳಮಳ ಶುರುವಾಗುತ್ತದೆ.  ನಾವು ಚಿಕ್ಕವರಿದ್ದಾಗ ಪಟ್ಟಿ ಬರೆದು, ಕೈಗೆ ಹಣ ಇಟ್ಟು ಅಂಗಡಿಗೆ ಕಳುಹಿಸುತ್ತಿದ್ದರು. ನಾವು ಮಾಡಿದ ಖರ್ಚನ್ನು ಸರಿಯಾಗಿ ಲೆಕ್ಕ ಒದಗಿಸಬೇಕಿತ್ತು.  ಕೈಯಲ್ಲಿದ್ದ ಹಣ ಕಡಿಮೆ ಬಂದಾಗ ಹಣ ಏನು ಮಾಡಿದೆ?  ಅಂತ ಜೋರು  ಮಾಡಿ ಗದರಿಸಿ ಕೇಳುತ್ತಿದ್ದರು .  ಮಧ್ಯೆ ಗೊತ್ತಿಲ್ಲದೆ ಬಿಸ್ಕತ್ತು ಚಾಕಲೇಟ್ ಗೆ ಖರ್ಚು ಮಾಡುವುದಿದ್ದರೂ ನಮಗೆ ತಳಮಳವಾಗುತ್ತಿತ್ತು.  ಕೊನೆಗೆ ಲೆಕ್ಕ ಸರಿ ಹೊಂದದೇ ಇದ್ದಾಗ ತಂದ ಅಕ್ಕಿ ಬೇಳೆಯ ಬೆಲೆಯನ್ನೇ  ವೆತ್ಯಾಸ ಮಾಡಿ ಹೇಳಿ ಬಚಾವ್ ಆಗುವ ಕುಟಿಲ ಉಪಾಯವೂ ನಮ್ಮಲ್ಲಿರುತ್ತಿತ್ತು. ಈ ನಡುವೆ ಅನಧಿಕೃತವಾಗಿ ನಮ್ಮ  ಕೈಯಲ್ಲಿ ಚಾಕಲೇಟ್ ಕಂಡರೆ ದುಡ್ಡು ಎಲ್ಲಿಂದ ಸಿಕ್ಕಿತು?  ನಾವು ಮನೆಯ ಒಳಗೆ ಕದ್ದೆವಾ?  ಇಲ್ಲ ಹೊರಗೆ ಕದ್ದೆವಾ? ಹಿರಿಯರ ಆತಂಕದ ಅರ್ಥ ವಾಗಬೇಕಾದರೆ ನಮ್ಮಲ್ಲೂ ಜವಾಬ್ದಾರಿ ಬರಬೇಕು.  ತರುವ ಸಾಮಾನಿಗೆ ದುಡ್ಡು ಮನೆಯ ಯಜಮಾನ ಕೊಡುತ್ತಾನೆ ಎಂದಾಗ ಅಂಗಡಿಯ ಸಾಮಾನಿನ ಬೆಲೆಯೂ ನಮಗೆ ಮುಖ್ಯವಾಗುವುದಿಲ್ಲ. ಅದೇ ನಾವೇ ನಮ್ಮ ಜೇಬಿನ ಹಣದಿಂದ ಏನಾದರೂ ಕೊಳ್ಳಬೇಕಿದ್ದರೆ ಹತ್ತು ಸಲ ಯೋಚಿಸುವುದಿತ್ತು. ಹಲವು ಅಂಗಡಿ ಸುತ್ತುವುದಿತ್ತು. ಇಂತಹ ಸಾಮಾನ್ಯ ಜ್ಞಾನವು ಇಂದು ಕಾಯಿದೆಯನ್ನು ಪ್ರಶ್ನಿಸುವವರಿಗೆ  ಅರ್ಥವಾಗುವುದಿಲ್ಲ. ಹೋಗಲಿ ಕಾಯಿದೆ ಕಾನೂನು ನಿಯಮಗಳು ರೂಪಿಸುವಾಗ ಅದರಲ್ಲಿ ಕುಂದುಕೊರತೆಗಳು ಸಾಮಾನ್ಯ. ಅದರ ಅನುಭವ ಬೇರೆಯೇ ಆಗಿರುತ್ತದೆ. ಹಾಗಂತ ಅದನ್ನು ವಿರೋಧಿಸುವುದಕ್ಕೂ ಒಂದು ನಿಯಮ ಇರುತ್ತದಲ್ಲವೆ? ವಿರೋಧಿಸುವುದೆಂದರೆ ಅದು ಏಳು ಜನ್ಮದ ವೈರಿಯೊಂದಿಗೆ ಯುದ್ದಕ್ಕೆ ಇಳಿದಂತೆ ಮಾಡಬೇಕೆ. ಮರು ದಿನ ನಾವುಗಳೇ ಇಲ್ಲಿ ಪರಸ್ಪರ ಮುಖ ನೋಡಿಕೊಂಡು ಬದುಕಬೇಕು ಎಂಬ ಸಾಮಾನ್ಯ ಅರಿವು ಇಲ್ಲದಂತೆ ಗಲಭೆ ಎಬ್ಬಿಸಬೇಕೆ. ಪ್ರಜಾ ಪ್ರಭುತ್ವದಲ್ಲಿ ನ್ಯಾಯಾಂಗ ವ್ಯವಸ್ಥೆ ಇದೆ ಎಂಬುದನ್ನೇ ಮರೆತು ಪ್ರತಿಭಟನೆ ವಿರೋಧ ಮಾಡುತ್ತಿದ್ದರೆ ಈ ದೇಶದಲ್ಲಿ ಅನಾಗರಿಕರು ಅವಿದ್ಯಾವಂತರು ಯಾರು ಎಂದು ಪ್ರಶ್ನೆ ಮಾಡುವ ಹಾಗಾಗುತ್ತದೆ.  ಆದಾಯ ತೆರಿಗೆಯ ನಿಯಮದಂತೆ ಲಾಭವಾದರೂ ನಷ್ಟವಾದರೂ ಅದಕ್ಕೊಂದು ಲೆಕ್ಕ ಬೇಕು. ಆದರೆ ರಾಜಕೀಯ ಮಂದಿಗಳು ಈ ಲೆಕ್ಕ ಮೊದಲು ತಪ್ಪಿಸುತ್ತಾರೆ. ಎಪ್ಪತ್ತು ವರ್ಷದ ರಾಜಕೀಯ ನಡೆದು ಬಂದ ರೀತಿ ಇದು. 

ಎಪ್ಪತ್ತು ವರ್ಷದ ಆಳ್ವಿಕೆ ಪ್ರಜೆಗಳಲ್ಲಿ ಜವಾಬ್ದಾರಿಯನ್ನು ತುಂಬಲಿಲ್ಲ. ಸಾಮಾನ್ಯ ಅರಿವನ್ನೂ ಮೂಡಿಸಲಿಲ್ಲ. ಪ್ರಜಾ ಕರ್ತವ್ಯದ ಅರಿವನ್ನು ಮೂಡಿಸಲಿಲ್ಲ. ದಿಕ್ಕು ತಪ್ಪಿಸುವ ರಾಜಕೀಯವನ್ನಷ್ಟೇ ಬಾರತ ಕಂಡದ್ದು. ಇನ್ನಾದರೂ  ನಮ್ಮಲ್ಲಿ ಉತ್ತಮ ಪ್ರಜಾ ಲಕ್ಷಣದ ಜವಾಬ್ದಾರಿ ಅರಿವು ಮೂಡಬೇಕು. ಭಾರತ ಜಪಾನಿನಂತೆ ಅಲ್ಲವಾದರು ಒಂದಿಷ್ಟು ಎದ್ದು ನಿಲ್ಲ ಬೇಕು ರಾಜಕೀಯ ಇಚ್ಛಾಶಕ್ತಿಗಳು ಬದಲಾಗಬೇಕು. ಇದು ಪ್ರತಿಯೊಬ್ಬ ಭಾರತೀಯನ ಬಯಕೆ. ಹಾಗಾಗಿ ಈ ಪೌರತ್ವ ಕಾಯಿದೆ ವಿರೋಧವಿಲ್ಲದೆ ಜಾರಿಗೆ ಬರಬೇಕು. ನಮ್ಮ ಲಾಭ ನಷ್ಟದ ಲೆಕ್ಕ ಇಲ್ಲಿಂದಲೇ ಆರಂಭವಾಗಬೇಕು. ನಮ್ಮ ಮನೆಯಲ್ಲಿ ಯಾರೆಲ್ಲ ಇದ್ದಾರೆ ಎಂಬ ಅರಿವು ನಮಗಾಗಬೇಕು. ಇಲ್ಲವಾದರೆ ಹಾವು ಹೆಗ್ಗಣ ಬಂದು ವಾಸವಾದರೂ ನಮ್ಮ ಅರಿವಿಗೆ ಬಾರದೆ ಇರಬಹುದು. ಒಮ್ಮೆ ಯೋಚಿಸೋ ಶಕ್ತಿ ನಮ್ಮಲ್ಲಿ ಮೂಡಲಿ. 



Sunday, December 22, 2019

ಹೋರಾಟ ಯಾರಿಗಾಗಿ?


ನಾವು ಊರಲ್ಲಿರುವಾಗ ನಮ್ಮ ಮನೆಗೆ  ಕೂಲಿಕೆಲಸಕ್ಕೆ ಒಬ್ಬಾತ ಮುಸ್ಲಿಂ ಹುಡುಗ ಬರುತ್ತಿದ್ದ. ಆತ ಹೇಳಿದ ಕಥೆ ಪ್ರಸ್ತುತ ಬಹಳ ನೆನಪಾಗುತ್ತಿದೆ. ಬಹಳ ಸಾಧು ಸಭ್ಯ ವಿದ್ಯಾವಂತ ಪದವೀಧರ ಹುಡುಗ ಕೂಲಿಯಾಳಾಗಿ ಮಣ್ಣಿನ ಕೆಲಸಕ್ಕೆ ಹೋಗುತ್ತಾನೆ ಎಂದರೆ ಆಶ್ಚರ್ಯವಾಗಬಹುದು. ಆದರೆ ಕೇರಳದಲ್ಲಿ ಇದು ಸಾಮಾನ್ಯ. ಗಾರೆ ಕೆಲಸದ ಮೇಸ್ತ್ರಿಯೂ ಕನಿಷ್ಠ ಪಕ್ಷ ಕಾಲೇಜ್ ಮೆಟ್ಟಲು ತುಳಿದಿರುತ್ತಾನೆ.

ಇದೇ ಹುಡುಗ ಒಂದು ದಿನ ಕಾಸರಗೋಡಿನ ಹಳೆ ಬಸ್ ಸ್ಟಾಂಡ್ ಪರಿಸರದಲ್ಲಿ ಪುಟ್ ಪಾತ್ ನಲ್ಲಿ ಹೋಗುತ್ತಿರಬೇಕಾದರೆ ಅಲ್ಲೇ ಯಾವುದೋ ರಾಜಕೀಯ ಪಕ್ಷದ ಸಭೆಯೊಂದು ನಡೆಯುತ್ತಿತ್ತು. ಯಾವ ಪಕ್ಷ ಎಂಬುದು ಇಲ್ಲಿ ಅಪ್ರಸ್ತುತ. ಪಕ್ಷದ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಒಟ್ಟು ಸೇರಿದ್ದರು. ಹುಡುಗನ ಮಿತ್ರನೊಬ್ಬ ಅದೇ ಗುಂಪಿನಲ್ಲಿ ಇರುವುದನ್ನು ಕಾಣುತ್ತಾನೆ. ಇಬ್ಬರೂ ಬಹಳ ಆತ್ಮೀಯ ಮಿತ್ರರು. ಆತನೂ ಹತ್ತಿರ ಬಂದು ಇವನಲ್ಲಿ ಮಾತನಾಡುತ್ತಾನೆ. ಬಹಳ ಅಪರೂಪಕ್ಕೆ ಸಿಕ್ಕಿದ ಮಿತ್ರ ಎಂದಾಗ ಮಾತನಾಡಿದಷ್ಟೂ ಸಂಗತಿಗಳು ಮುಗಿಯುವುದಿಲ್ಲ. ಅಲ್ಲಿ ಪಕ್ಷದ ಸಭೆ ನಡೆಯುತ್ತಿದ್ದಂತೆ ಏನೋ ಗದ್ದಲ ಶುರುವಾಗುತ್ತದೆ.  ಇವರಿಬ್ಬರೂ ಇಲ್ಲೇ ಮಾತನಾಡುತ್ತಿದ್ದಂತೆ ಲಾಠೀ ಪ್ರಹಾರ ಕಿರುಚಾಟ ಎಲ್ಲರೂ ಚೆಲ್ಲಾ ಪಿಲ್ಲಿ ಓಡುತ್ತಿದ್ದಂತೆ ಈ ಇಬ್ಬರು ಮಿತ್ರರು ಸಿಕ್ಕ ಸಿಕ್ಕಲ್ಲಿ ಓಡುತ್ತಾರೆ. ಆದರೆ ಪೋಲೀಸ್ ವಾಹನ ಅದು ಹೇಗೋ ಇವರನ್ನು ಹಿಂಬಾಲಿಸುತ್ತದೆ. ಎಲ್ಲರ ಜತೆಗೆ ಇವರೂ ಬಂಧನಕ್ಕೆ ಒಳಗಾಗುತ್ತಾರೆ. ಪಾಪ ಪುಟ್ ಪಾತ್ ನಲ್ಲಿ ಸುಮ್ಮನೇ ಓಡಾಡುತ್ತಿದ್ದವನೂ ನೂರಾರು ಕಾರ್ಯಕರ್ತರೊಂದಿಗೆ ಬಂಧಿಸಲ್ಪಟ್ಟ. ಕಥೆ ಅಲ್ಲಿಗೇ ನಿಲ್ಲುವುದಿಲ್ಲ. ಹಲವು ಸಲ ಹೀಗೆ ಬಂಧಿಸಿದವರನ್ನು ಗಲಾಟೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಹೆಸರು ವಿಳಾಸ ಬರೆದು ಹಾಗೇ ಬಿಟ್ಟು ಬಿಡುತ್ತಾರೆ. ದುರಂತವೆಂದರೆ  ಈ ಸಲ ಹಾಗಾಗಲೇ ಇಲ್ಲ.

ಬಂಧಿಸಿದ ಅಷ್ಟೂ ಮಂದಿಯ ಮೇಲು ಎಪ್ ಐ ಆರ್  ದಾಖಲಾಯಿತು. ನ್ಯಾಯಾಯಲಯಕ್ಕೆ ಹಾಜರು ಪಡಿಸಿ ಜಾಮೀನು ಸಿಕ್ಕಿತು.   ಸಾಮಾನ್ಯವಾಗಿ ರಾಜಕೀಯದಲ್ಲಿ ಜಾಮೀನು ಸಿಕ್ಕಿದರೆ ಬಿಡುಗಡೆ ಸಿಕ್ಕಿದಂತೆ ಎಂಬ ತಪ್ಪು ಕಲ್ಪನೆ ಇರುತ್ತದೆ. ಒಂದು ಸಲ ಪೋಲೀಸ್ ಕೇಸ್ ಆಯಿತು ಎಂದರೆ ಅದು ಚರಿತ್ರೆಯ ದಾಖಲೆಯಾಗುತ್ತದೆ. ಮೊದಲ ಒಂದೆರಡು ತಿಂಗಳು ಪಕ್ಷದ ವಕೀಲನೊಬ್ಬ ನ್ಯಾಯಾಲಯಕ್ಕೆ ಬರುತ್ತಿದ್ದ. ಕ್ರಮೇಣ ಆತ ಬಾರದೇ ಇವರಷ್ಟೇ ನ್ಯಾಯಾಲಯಕ್ಕೆ ಹಾಜರಾಗಬೇಕಾಯಿತು. ಒಂದು ದಿನ ಕೋರ್ಟ್ ಕೇಸ್ ಗೆ ಅದೂ ಕ್ರಿಮಿನಲ್ ಕೇಸ್ ಗೆ ಒಂದು ದಿನ ವ್ಯರ್ಥ ಕಳೆದಂತೆ. ಸರಿಯಾಗಿ ಊಟ ಮಾಡುವುದಕ್ಕೂ ಸಾಧ್ಯವಿಲ್ಲದಂತೆ ನ್ಯಾಯಾಲಯ ಬೆಂಚ್ ಮೇಲೆ ಕುಳಿತುಕೊಳ್ಳಬೇಕು. ಹೆಸರು ಯಾವಾಗ ಕೂಗುತ್ತಾರೋ ಎಂದು ಕಾಯಬೇಕು. ಮೂತ್ರ ಮಾಡುವುದಕ್ಕೂ ಹೋಗುವ ಹಾಗಿಲ್ಲ. ಹಾಗೇ ಕೇಸು ವಾಯಿದೆ ಅಂತ ಒಂದು ವರ್ಷ ಕಳೆಯಿತು. ಹುಡುಗ ಈ ನಡುವೆ ಹಲವು ಬಾರಿ ಕೋರ್ಟ್ ಮೆಟ್ಟಲು ಹತ್ತಿದ್ದ. ಹಲವು ಸಲ ಪಕ್ಷದ ನೇತಾರರ ಮನೆ ಬಾಗಿಲು ಬಡಿದ. ಒಂದು ಸಲ ಇದರಿಂದ ಮುಕ್ತಿ ಸಿಗುವಂತೆ ಕಾಡಿದ ಬೇಡಿದ.

ಪಕ್ಷದವರು ಮೊದ ಮೊದಲು ಸಭ್ಯತೆಯಿಂದ ವ್ಯವಹರಿಸಿದರೂ ಮತ್ತೆ ಮತ್ತೆ ಧ್ವನಿಯ ಶೈಲಿ ಬದಲಾಗುತ್ತಿತ್ತು. ಈತನಿಗೂ ಅಲೆದಾಟ ಸಾಕಾಗಿತ್ತು. ಹಲವರ ಕಾಲು ಹಿಡಿದ. ಅವರಿಗಾಗಿ ಒಂದಷ್ಟು ಹಣವನ್ನೂ ಖರ್ಚು ಮಾಡಿದ. ಆದರೆ ಕೋರ್ಟ್ ಕೇಸು ಮಾತ್ರ ಹಾಗೇ ಮುಂದುವರೆಯುತ್ತಿತ್ತು. ಒಂದು ವರ್ಷ ಎರಡು ವರ್ಷ ಅದು ಮುಗಿಯಲೇ ಇಲ್ಲ. ಈ ನಡುವೆ ಆತನಿಗೆ ಗಲ್ಫ್ ಗೆ ಹೋಗುವ ಅವಕಾಶ ಸಿಕ್ಕಿತು. ಸಂಬಂಧಿಗಳು ಯಾರೋ ವೀಸಾ ಸಿದ್ದ ಪಡಿಸಿ ಈತನನ್ನು ಕರೆದರೆ ಕ್ರಿಮಿನಲ್  ಕೇಸ್ ಇದ್ದ ಇವನಿಗೆ ಅನುಮತಿಯೇ ಸಿಗಲಿಲ್ಲ. ಯಾವ ರಾಜಕೀಯ ವ್ಯಕ್ತಿಗಳೂ ಸಹಾಯಕ್ಕೆ ಬರಲಿಲ್ಲ. ಅಲ್ಲಿ ಪಕ್ಷಕ್ಕಾಗಿ ಜೈಕಾರ ಹಾಕಿದವರು ಮುಖ ಮರೆಸಿ ಓಡಾಡಿದರು. ಪರಿಚಯದ ಮಿತ್ರ ನಂತರ ಮಿತ್ರನಾಗಿ ಉಳಿಯಲಿಲ್ಲ. ಮನೆಯ ಬಡತನನಿರುದ್ಯೋಗಈ ಕೋರ್ಟ್ ಕೇಸ್ ನ ಖರ್ಚು ಸಣ್ಣ ಪ್ರಾಯದ ಹುಡುಗ ನಿಜಕ್ಕೂ ಹೈರಾಣಾಗಿ ಹೋದ. ಉತ್ತಮ ಬದುಕು ಕಟ್ಟಿ ಮನೆ ಸಂಸಾರ ಅಂತ ಕನಸು ಕಟ್ಟಿದವನ ಕನಸು ಭಗ್ನವಾಯಿತು.  ಸರಿ ಸುಮಾರು ಐದು ವರ್ಷ ಆ ಕೇಸ್ ಮುಂದುವರೆಯಿತು.  ಹೇಗಾಗಬೇಡ ಯೋಚಿಸಿ.  ಮಣ್ಣಿನ ಬುಟ್ಟಿ ತಲೆಯಲ್ಲಿಟ್ಟು ಈ ಕಥೆಯನ್ನು ಆತ ವಿಷಾದಿಂದ ಹೇಳುತ್ತಿರಬೇಕಾದರೆ ಆತನಿಗೆ ಕಣ್ಣಲ್ಲಿ ನೀರು ಬರುತ್ತಿತ್ತು.

ರಾಜಕೀಯದ ಚಕ್ರವ್ಯೂಹವೇ ಹಾಗೇ. ಒಂದು ತಣ್ಣಗಿನ ವಿಷದಂತೆ.  ಮೊದ ಮೊದಲು ಹೆಗಲಿಗೆ ಕೈ ಹಾಕುವ ಪಕ್ಷದ ಸೇವಕರು ನಂತರ ಸಿಗುವುದಿಲ್ಲ. ಆ ಗಲಭೆಯಲ್ಲಿ ಪಕ್ಷದ ಯಾವ ಲೀಡರ್ ಗೆ ಸ್ವಾರ್ಥ ಸಾಧನೆಯಾಗಿದೆಯೋ , ಆದರೆ ಈ ಹುಡುಗನಂತಹ ಹಲವಾರು ಬದುಕುಗಳ ಕನಸು ಕರಗಿ ವಾಸ್ತವ ಅವರನ್ನು ಜೀವಿಸುವುದಕ್ಕೆ ಬಿಡುವುದಿಲ್ಲ. ಇದು ನೈಜ ಕಥೆ. ಒಂದು ಸಲ ಆವೇಶದಲ್ಲಿ ಪಕ್ಷದ ಲೀಡರ್ ಗೆ ಖುಷಿಯಾಗುವುದಕ್ಕೆ ಗಲಭೆ ಎಬ್ಬಿಸುತ್ತಾರೆ. ಕಲ್ಲು ಎಸೆಯುತ್ತಾರೆ. ಆ ಆವೇಶ ಕೇವಲ ಘಳಿಗೆಯ ಅವಧಿಗೆ. ಒಂದು ಹೊತ್ತಿನ ಊಟ ಮತ್ತೆ ಚಿಲ್ಲರೆ ದುಡ್ಡು ಇವಿಷ್ಟು ಅಷ್ಟನ್ನು ಮಾಡಿರುತ್ತದೆ. ಆದರೆ ಪೋಲೀಸ್ ಕೇಸು ಅಂತ ಕೊರಳಿಗೆ ಸುತ್ತಿಕೊಂಡರೆ ಅದು ವೈಯಕ್ತಿಕ ಬದುಕನ್ನು ಸುಡುತ್ತಾ ಹೋಗುತ್ತದೆ. ಪಕ್ಷದ ಧ್ವಜ ಗಾಳಿಯಲ್ಲಿ ಮೇಲೇರಿ ಮೇಲೆರಿ ಹಾರಾಡಿದರೆ ಇವರಿಗೆ ತುಂಡು ಬಟ್ಟೆಗೂ ಅಲೆದಾಡುವ ಸ್ಥಿತಿ ಬರುತ್ತದೆ. ಪಕ್ಷದ ನಾಯಕರು ಕಣ್ಣು ಮುಚ್ಚಿ ದೃಷ್ಟಿ ಬದಲಿಸುತ್ತಾರೆ. ಇದು ಒಂದು ಪಕ್ಷಕ್ಕೆ ಸೀಮಿತವಲ್ಲ

 ಕೌಟುಂಬಿಕವಾಗಿ ಸಾಮಾಜಿಕವಾಗಿ ರಾಜಕೀಯ ವ್ಯಕ್ತಿಗಳೆಂದರೆ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಒಂದು ಕುಟುಂಬದ ಮದುವೆ ಮುಂತಾದ  ಕಾರ್ಯಕ್ರಮವಾದರೂ ಸರಿಅ ಕುಟುಂಬದಲ್ಲಿ ರಾಜಕೀಯ ವ್ಯಕ್ತಿ ಇದ್ದಾನೆ ಎಂದರೆ ಆ ಪ್ರತ್ಯೇಕವಾಗಿ ನಿಲ್ಲುತ್ತಾನೆ. ಕುಟುಂಬದ ಮಂದಿ ಮನೆ ಮಂದಿ ಆತನೊಡನೆ ಸಹಜವಾಗಿ ಬೆರೆಯುವುದಿಲ್ಲ. ಸೂಕ್ಷ್ಮವಾಗಿಯಾದರೂ ಕಣ್ಣಿಗೆ ಕಾಣದ ಅಡ್ಡ ಗೋಡೆಯೊಂದು ಮಧ್ಯೆ ತಡೆಯಾಗಿ ನಿಂತಿರುತ್ತದೆ. ಸಾರ್ವಜನಿಕ ಜೀವನವಾದರೂ ಹಾಗೆ. ರಾಜಕೀಯ ವ್ಯಕ್ತಿಗಳು ಪ್ರತ್ಯೇಕವಾಗಿರುತ್ತಾರೆ. ಎದುರಿಗೆ ಗೌರವ ಇದ್ದರು ಮನಸ್ಸಿನಲ್ಲಿ ಒಂದು ಅಸಹನೆ ಇದ್ದೇ ಇರುತ್ತದೆ.  ಹಲವು ಸಲ ಇದು ಅರಿವಿಗೆ ಬರುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಅರಿವಾಗುತ್ತದೆ. ಒಂದರ್ಥದಲ್ಲಿ  ಹೇಳುವುದಾದರೆ ಈ ಸಮಾಜದಲ್ಲಿ ಯಾವುದೋ ಒಂದು ಜಾತಿ ಪಂಗಡ ಅಸ್ಪೃಶ್ಯವಾಗಿ ಉಳಿಯುವುದಿಲ್ಲಬದಲಿಗೆ ರಾಜಕೀಯ ವ್ಯಕ್ತಿಗಳೇ ಅಸ್ಪ್ರ್ ಶ್ಯರಾಗಿ ಬಿಡುತ್ತಾರೆ. ಅವರೊಂದಿಗೆ ಬೆರೆಯುವುದೂ ಸಹ ಕೃತ್ರಿಮವಾಗಿ ಬಿಡುತ್ತದೆ. ರಾಜಕೀಯದವರಿಗೆ ಇದು ಅರ್ಥವಾದರೂ ಸ್ವಾರ್ಥ ಸಾಧನೆಯ ಹಾದಿಯಲ್ಲಿ ಇದನ್ನು ಬದಿಗೆ ತಳ್ಳಿಬಿಡುತ್ತಾರೆ.

ಈಗೀಗ ಪಕ್ಷದ ಪ್ರತಿಭಟನೆಗಳು ವರ್ಷಕ್ಕೆ ಒಂದು ಎರಡರಂತೆ ನಡೆಯುತ್ತದೆ. ಎಲ್ಲೋ ಇದ್ದ ಕಲ್ಲು ತಲೆಗೆ ಬಂದು ಬಡಿಯುತ್ತದೆ. ನಮ್ಮ ನಿಮ್ಮ ಸೊತ್ತು ನಾಶವಾಗುತ್ತದೆ.  ಎಲ್ಲಾ ತೆರಿಗೆಯನ್ನು ನ್ಯಾಯಯುತವಾಗಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸಲ್ಲಿಸುವ ಜನಸಾಮಾನ್ಯನಿಗೆ ಸ್ವತಂತ್ರ ಭಾರತದ ರಸ್ತೆಯಲ್ಲಿ ಸಂಚರಿಸುವುದಕ್ಕೆ ಭಯವಾಗುತ್ತದೆ. ಆಸ್ಪತ್ರೆಯಲ್ಲಿರುವ ರೋಗಿಗೆ ಔಷಧಿ ಸಿಗುವುದಿಲ್ಲ. ಕಷ್ಟ ಪಟ್ಟು ಜೀವನಾಧಾರವಾಗಿ ಕಟ್ಟಿ ಬೆಳೆಸಿದ ಅಂಗಡಿ ಮುಂಗಟ್ಟುಗಳು ನಮ್ಮ ಕಣ್ಣೆದುರೇ ಎಸೆದ ಕಲ್ಲಿಗೆ ಹಚ್ಚಿದ ಬೆಂಕಿಗೆ ಬಲಿಯಾಗುತ್ತವೆ. ಕಾಲ ಕೆಳಗಿನ ಮಣ್ಣು ಜರೆದು ಹೊಂಡವಾದರೂ ಈಗಿನ ರಾಜಕೀಯ ಹಿಂಬಾಲಕರಿಗೆ ಅರ್ಥವಾಗುವುದಿಲ್ಲ. ಮತ್ತಷ್ಟು ಉದ್ವಿಗ್ನರಾಗಿ ಹೋರಾಟ ಮಾಡುತ್ತಾರೆ. ಪ್ರಜಾಪ್ರಭುತ್ವದ ಹಕ್ಕು ಅವರಿಗೆ ಮಾತ್ರ ಸೀಮೀತವಾಗುವಂತೆ ವರ್ತಿಸುತ್ತಾರೆ. ಮನೆಯಲ್ಲಿದ್ದ ಹೆತ್ತಮ್ಮ ಅಪ್ಪ ಅಣ್ಣ ತಂಗಿ ಕುಟುಂಬವನ್ನು ಕ್ಷಣ ಕಾಲ ಮರೆಯುತ್ತಾರೆ.

ಹೋರಾಟ ಪಕ್ಷದ ವಿರುದ್ಧ ಅಲ್ಲ ಸರಕಾರದ ವಿರುದ್ದ ಅಲ್ಲ. ಯಾವುದೋ ಕಾಯಿದೆ ಕಾನೂನಿನ ವಿರುದ್ದ ಅಲ್ಲ. ನಮ್ಮ ಮನೋಭಾವದ ವಿರುದ್ಧ ಹೋರಾಡಬೇಕಾಗಿದೆ. ಬದುಕುವ ಹಕ್ಕು ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಪ್ರಾಣಿಗೂ ಇರುತ್ತದೆ. ಸಾಯುವುದಕ್ಕಾಗಿ ಯಾರೂ ಹುಟ್ಟುವುದಿಲ್ಲ. ಆದರೆ ಸಾವನ್ನು ತಾವೇ ಆಹ್ವಾನಿಸುವುದು ಮಾತ್ರವಲ್ಲ ಮತ್ತೊಬ್ಬರ ಬದುಕನ್ನು ನಾಶ ಮಾಡುತ್ತಾರೆ.






Monday, October 28, 2019

ಧರ್ಮ ನಿಂದನೆಯಲ್ಲಿ ನಿಂದನೆಯೇ ಧರ್ಮ.....

           
ಬಾಲ್ಯದ ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ನಡೆದ ಒಂದು ಘಟನೆ ನನಗೆ ಈಗಲೂ ಯೋಚಿಸುವಂತೆ ಮಾಡುತ್ತದೆ. ಬ್ರಾಹ್ಮಣ ಬಾಲಕನೊಬ್ಬ ಅದಾಗಲೇ ಬ್ರಹ್ಮೋಪದೇಶವಾಗಿ ಜನಿವಾರ ಧರಿಸಿ ಬರುತ್ತಿದ್ದ. ಆತನಿಗೆ ಉಪನಯನ ಆಗಿದೆ ಎಂದು ತಿಳಿದ ಕೆಲವು ಅನ್ಯರು ಆತನ ಅಂಗಿಯೊಳಗೆ ಕೈ ಹಾಗಿ ಜನಿವಾರ ಹಿಡಿದೆಳೆಯುತ್ತಿದ್ದರು. ಬಾಲಕ ಬಹಳಷ್ಟು ಇರಿಸು ಮುರುಸು ಅನುಭವಿಸುತ್ತಿದ್ದ. ಅದಾಗಿ ಶಾಲೆಯ ಮೈದಾನದಲ್ಲಿ ವಿರಾಮದ ವೇಳೆಯಲ್ಲಿ ಆಟವಾಡುತ್ತಿದ್ದಾಗ , ಅದು ಕಬ್ಬಡಿಯಾಟ. ಸಹಜವಾಗಿ ಎಲ್ಲ ಮಕ್ಕಳು ಒಟ್ಟಾಗಿ, ಅಲ್ಲಿ ಚೋಮ ದೂಮ ಕೃಷ್ಣ ಅದ್ದು ಮೂಸೆ ಅಬೂಬಕ್ಕರ್, ಜೋಸೆಫ್ ಎಲ್ಲಾ ಮಕ್ಕಳು ಜತೆಯಾಗಿ ಆಟವಾಡುತ್ತಿದ್ದರು. ಹಾಕಿದ ಉಡುಪು ಕೊಳೆಯಾಗಬಾರದು ಎಂದು ಕೆಲವರು ಅಂಗಿ ಕಳಚಿ ಹತ್ತಿರದ ಮರದ ಗೆಲ್ಲಿಗೆ ಸಿಕ್ಕಿಸಿ ಕಬ್ಬಡಿ ಆಟವಾಡುತ್ತಿದ್ದರೆ, ಈ ಬ್ರಾಹ್ಮಣ ಬಾಲಕನ ಜನಿವಾರ ಒಬ್ಬ ಬೇಕೆಂದೇ ಗೇಲಿ ಮಾಡಿ ತುಂಡರಿಸಿದ. ಬಾಲಕನಿಗೆ ಕಣ್ಣೀರು ಒತ್ತರಿಸಿ ಬಂತು.  ಆತ ಅಳುತ್ತಿದ್ದರೆ ಉಳಿದವರು ಗೇಲಿ ಮಾಡಿ ನಗುತ್ತಿದ್ದರು.  ಭೇದವಿಲ್ಲದೇ ಆಟವಾಡುತ್ತಿದ್ದ ಮಕ್ಕಳ ನಡುವೆ ಒಂದು ನೂಲು ದೊಡ್ಡ ಕಂದಕವನ್ನೇ ಉಂಟು ಮಾಡಿತ್ತು. ಇದನ್ನು ಕಣ್ಣಾರೆ ಕಂಡವನು ನಾನು. ಆದರೂ ಆ ಬಾಲಕನನ್ನು ಸಾಂತ್ವಾನ ಮಾಡುವ ಪ್ರಬುದ್ದತೆ ಆ ಬಾಲ ಮನಸ್ಸಿಗೆ ಹೊಳೆಯಲಿಲ್ಲ. ಬದಲಿಗೆ ನಮ್ಮ ಧರ್ಮಾಚರಣೆ ಬಗ್ಗೆ ಸಿಟ್ಟು ಬಂತು. ಬಾಲ್ಯದಲ್ಲಿ ಈ ಅಪೂರ್ಣತೆ ಸಹಜವೇ. ಮಾಸ್ಟರ ಒಂದೆರಡು ಏಟಿಗೆ ಆ ಪ್ರಕರಣ ಅಲ್ಲಿ ನಿಂತು ಹೋಯಿತು. ಆದರೆ ಆ ಘಟನೆ ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೆ ಹಾಗೇ ಉಳಿದಿದೆ.

            ಧರ್ಮ ....ಇಂದು ವ್ಯಕ್ತಿ ರೀತ್ಯಾ ವೈರುಧ್ಯವನ್ನೇ ಸೃಷ್ಟಿಸಿದ್ದು ಅಧಿಕ ಎನ್ನಬೇಕು. ಸಾಮರಸ್ಯ ಬೆಸೆದ ಉದಾಹರಣೆಗಳು ಕೇವಲ ಹುಬ್ಬೇರಿಸುವಂತೆ ಮಾಡುತ್ತಿದೆ ಎಂದರೆ ಮನುಷ್ಯ ಧರ್ಮದ ಹಾದಿಯನ್ನು ಎಷ್ಟು ವಕ್ರಗೊಳಿಸಿದ್ದಾನೆ ಎಂದು ಆಶ್ಚರ್ಯವಾಗುತ್ತದೆ.   ಮನುಷ್ಯ  ಧರ್ಮವನ್ನು ಅನುಸರಿಸುವುದಕ್ಕಿಂತಲೂ  ದುರ್ವ್ಯಾಖ್ಯಾನಗೊಳಿಸುವುದೇ ಅಧಿಕ. ಹತ್ತು ಹಲವು ಗುರು ಪೀಠಗಳೂ ಇದಕ್ಕೆ ಹೊರತಾಗಿಲ್ಲ ಎಂಬುದು ದುರ್ದೈವದ ಸಂಗತಿ.  ಇರಲಿ.  ಮಗುವಾಗಿರುವಾಗಲೇ ಅಪ್ಪ ಅಮ್ಮ ಹೆದರಿಸುತ್ತಾರೆ. ಅದು ಮಾಡಬೇಡ ದೇವರು ಶಾಪ ಕೊಡುತ್ತಾನೆ.  ಮಗುವಿನಲ್ಲಿ ದೇವರ ಬಗ್ಗೆ ಭಯ ಹುಟ್ಟಿಸುವುದು ಒಂದಾದರೆ ಭಯದಿಂದ ಭಕ್ತಿ ಹುಟ್ಟುತ್ತದೆ ಎಂಬುದು ಇನ್ನೊಂದು. ಎರಡೂ ಇಂದು ಧರ್ಮದ ಸ್ವರೂಪವನ್ನೇ ಬದಲಾಯಿಸಿವೆ. ಶಾಪ ಕೊಡುವವನು ದೇವರು ಹೇಗಾಗುತ್ತಾನೆ. ಸರಳವಾಗಿ  ಯೋಚಿಸುವ ಹೆತ್ತು ಸಾಕಿದ ಮಗುವಿಗೆ ಅಮ್ಮ ಶಪಿಸಿಯಾಳೆ? ಅಂತರಂಗದ ಪ್ರೀತಿ ಅದಕ್ಕೆ ಆಸ್ಪದ ನೀಡಬಹುದೇ? ಹೀಗೆ ದೇವರು ಧರ್ಮ ಬ್ರಾಹ್ಮಣ ದುರ್ವ್ಯಾಖ್ಯಾನದ ವಸ್ತುಗಳಾಗಿವೆ. ಬ್ರಹ್ಮ ಪದದ ಕಲ್ಪನೆಯನ್ನೆ ಹಾಳುಗೆಡವಿ ಅದು ಧರ್ಮ ಇದು ಧರ್ಮ ಅಂತ ವಿವಿಧ ಧರ್ಮಗಳನ್ನು ಅಂಧರಾಗಿ ಹಿಂಬಾಲಿಸುವಾಗ ಧರ್ಮದ ಮರ್ಮ ಏನು ಅಂತ ಹಲವು ಸಲ ಅರ್ಥವಾಗುವುದಿಲ್ಲ.

             ನೆನಪಿದೆ  ಅಂದು ಬಾಲ್ಯದಲ್ಲಿ ನನಗೂ ಕಟೀಲು ದೇವಿಯ ಸನ್ನಿಧಿಯಲ್ಲಿ ಬ್ರಹ್ಮೋಪದೇಶವಾಗಿತ್ತು. ಪ್ರತಿವರ್ಷ ಅಲ್ಲಿ ಸಾಮೂಹಿಕ ಬ್ರಹ್ಮೊಪದೇಶ ಉಚಿತವಾಗಿ ಮಾಡುತ್ತಿದ್ದರು. ಹಾಗಾಗಿ ತೀರ ಬಡತನಲ್ಲಿದ್ದ ನಾನು ಬ್ರಾಹ್ಮಣ ವಟುವಾದೆ. ಉಪದೇಶ ಮಾಡಿದ ಗುರುಗಳು( ಪುರೋಹಿತರು) ಹೇಳಿದ್ದರು  ದಂಡವನ್ನು ಕೈಯಿಂದ ಕೆಳಗಿಡಬೇಡ, ಉಚ್ಚಿಷ್ಟವನ್ನು ತಿನ್ನಬೇಡ, ಶೌಚಕ್ಕೆ ಹೋಗುವಾಗ ಆಚರಿಸಬೇಕಾದ ಕ್ರಮಗಳು ಹೀಗೆ ಹತ್ತು ಹಲವು ನಿಯಮಗಳು. ಅದರಲ್ಲಿ ಒಂದು ಭಸ್ಮಧಾರಣೆ. ಸಂಧ್ಯಾವಂದನೆಗೆ ತೊಡಗುವ ಮೊದಲು ಹಚ್ಚಿದ ಭಸ್ಮ ದೇಹಶುದ್ದಿಗೂ ಮನಸ್ಸಿನ ಶುದ್ದಿಗೂ ಕಾರಣವಾಗುತ್ತದೆ. ಆದರೆ ಸಂಧ್ಯಾವಂದನೆ ಅಂದು ಸಾಯಂಕಾಲ ನಾವು ವಾಡಿಕೆಯಂತೆ ಬೀದಿ ಬದಿಯ ಅಂಗಡಿಗೆ ಹೋದೆ. ನನ್ನ ಹಣೆಯಲ್ಲಿ ಭುಜದಲ್ಲಿದ್ದ ಭಸ್ಮ ನೋಡಿ ಸ್ವತಃ ಹಿಂದುವಾಗಿದ್ದ ಅಂಗಡಿಯವನೂ ತಮಾಷೆ ಮಾಡಿ ಗಹ ಗಹಿಸಿ ಉಳಿದವರೆಲ್ಲ ನಕ್ಕಿದ್ದು ಈಗಲೂ ನೆನಪಿದೆ.  .  ಆನಂತರ ಅಂಗಡಿಗೆ ಹೋಗಬೇಕಿದ್ದರೆ ಮೈ ಮೇಲಿನ ಭಸ್ಮ ಎಲ್ಲ ಉಜ್ಜಿ ಸ್ವಚ್ಚ ಮಾಡಿ ಹೋಗುತ್ತಿದ್ದೆ.  ಈಗಲೂ ಶಾಲೆಗೆ ಹೋಗುವ ಭಟ್ರುಗಳ ಮಕ್ಕಳಿಗೆ ಇದೊಂದು ಸಮಸ್ಯೆಯೇ. ಹಣೆಯ ಮೇಲಿನ ಭಸ್ಮವನ್ನು ಅಳಿಸಿ ಶಾಲೆಗೆ ಹೋಗುವ ಮಕ್ಕಳು ಬಹಳಷ್ಟು ಮಂದಿ ಇದ್ದಾರೆ.     ಈಗಿನ ಅಂಗ್ಲ ಮಾಧ್ಯಮ ಶಾಲೆಗಳಲ್ಲಿ ಇದಕ್ಕೆ ನಿಯಮ ಇದ್ದರೂ ಆಶ್ಚರ್ಯ ಪಡಬೇಕಿಲ್ಲ. ಭಸ್ಮ ಉಜ್ಜಿ ತೆಗೆದು ಶಾಲೆಗೆ ಬರಬೇಕು.

            ಈಗ ಯೋಚಿಸುತ್ತೇನೆ. ಇವುಗಳೆಲ್ಲ ಯಾಕೆ ಧರ್ಮ ಜಾತಿ ನಿಂದನೆಯಾಗುವುದಿಲ್ಲ?  ಜಾತಿ ಎಂದಾಕ್ಷಣ  ಕೇವಲ ಯಾವುದೋ ಒಂದು ಪಂಗಡ ಮಾತ್ರ ಯಾಕೆ ಗುರಿಯಾಗಬೇಕು? ಅರ್ಥವಾಗುವುದಿಲ್ಲ. ನಮ್ಮಲ್ಲಿ ತೇಗದ (ಸಾಗುವಾನಿ) ಮರವನ್ನು ಜಾತಿ ಮರ ಅಂತ ಹೇಳುತ್ತಾರೆ. ಹಾಗಾದರೆ ಉಳಿದ ಮರಗಳಿಗೆ ಜಾತಿಯೇ ಇಲ್ಲ. ಇಲ್ಲಿ ಜಾತಿ ಎಂಬುದು ಶ್ರೇಷ್ಠತೆಯ ಸಂಕೇತವಾಗುವಾಗ ಮನುಷ್ಯ ಆಚರಣೆಯಲ್ಲಿ ಜಾತಿ ಎಂದಾಕ್ಷಣ ಹೌ ಹಾರುವ ಸ್ಥಿತಿ ಬರುತ್ತದೆ. ಜಾತಿ ಯಾವುದು ಎಂದು ಕೇಳುವುದೇ ಜಾತಿ ನಿಂದನೆಯಾಗುತ್ತದೆ. ನಿಂದನೆಯ ಮುಖಗಳು ಅಚ್ಚರಿಯಾಗುತ್ತವೆ.

            ಮಂಗಳೂರಿನಲ್ಲಿ ನನ್ನ ಪ್ರಾಥಮಿಕ ಶಾಲಾ ವಿಧ್ಯಾಭ್ಯಾಸ ಒಂದಷ್ಟು ಸಮಯ ಇತ್ತು. ನಾಲ್ಕು ಐದು ಆರನೇ ತರಗತಿ ಅಲ್ಲಿಯೇ ಕಲಿತಿದ್ದೆ ಅದು ಎಪ್ಪತ್ತರ ದಶಕ. ಹಾಗೆ ಇರುತ್ತ ಶಾಲೆಯ ಆಟದ ಮೈದಾನದಲ್ಲಿ ನಡೆದ  ಒಂದು ಘಟನೆ ಇನ್ನೂ ನೆನಪಿದೆ. ಅಲ್ಲಿ ಮುಸಲ್ಮಾನ ಮಕ್ಕಳು ಬಹಳ ಅಂದರೆ ಬಹಳ ಕಡಿಮೆ ಸಂಖ್ಯೆಯಲ್ಲಿದ್ದರು, ಉಳಿದಂತೆ ಸಮಾನ ಸಂಖ್ಯೆಯಲ್ಲಿ ಹಿಂದು ಕ್ರಿಶ್ಛನ ಹುಡುಗರು ಕಲಿಯುತ್ತಿದ್ದರು. ಅದು ಚರ್ಚ್ ಆಢಳಿತಕ್ಕೆ ಒಳಪಟ್ಟ ಒಂದು ಶಾಲೆ. ಒಂದು ದಿನ ಸಂಜೆ, ಆಟವಾಡುತ್ತಿರಬೇಕಾದರೆ ನನ್ನದೇ ತರಗತಿಯ  ಒಬ್ಬ ಮುಸ್ಲಿಂ ಬಾಲಕ, ಆತ ನಿತ್ಯವೂ ಬಿಳಿ ಟೊಪಿ ಧರಿಸಿ ಬರುತ್ತಿದ್ದ.  ಕೆಲವು ಮಕ್ಕಳು ಆಟವಾಡುತ್ತಿದ್ದರೆ , ಉಳಿದ ಮಕ್ಕಳು ಆ ಟೋಪಿ ತಲೆಯಿಂದ ಹಾರಿಸಿ ಆತನನ್ನು ಗೇಲಿ ಮಾಡುತ್ತಿದ್ದರು.  ಕೊನೆಗೆ ಜಗಳವಾಗಿ ಏಕಾಂಗಿಯಾದ ಬಾಲಕನ ಮೇಲೆ ಹೊಡೆಯುವುದಕ್ಕೂ ತೊಡಗಿದರು. ಪಾಪ ಹುಡುಗ ಏಕಾಂಗಿ.  ನಂತರ ಹೆಡ್ ಟೀಚರ್ ಕರೆದು ನಾಗರ ಬೆತ್ತದಲ್ಲಿ ಬರೆ ಬರುವಂತೆ  ಆ ಮಕ್ಕಳಿಗೆ ಹೊಡೆದಿದ್ದರು. ಅದರಲ್ಲಿ ಒಬ್ಬಾತನ ಅಪ್ಪ ಮರುದಿವಸ ಶಾಲೆಗೆ ಇದನ್ನು ಕೇಳುವುದಕ್ಕಾಗಿ ಬಂದಿದ್ದ.!  ಈಗ ಯೋಚಿಸುತ್ತೇನೆ ಯಾಕೆ ಇವುಗಳೆಲ್ಲ ಧರ್ಮನಿಂದನೆ, ಜಾತಿ ನಿಂದನೆಯಾಗುವುದಿಲ್ಲ? ಯಾರನ್ನೆ ಒಬ್ಬನನ್ನು ನಿಂದಿಸುವುದೆಂದರೆ ಈ ಸ್ವತಂತ್ರ ಭಾರತಲ್ಲಿ ಆತನ ಸ್ವಾತಂತ್ರ್ಯ ಹರಣ ಮಾಡಿದಂತೆ.  ಸ್ವಾತಂತ್ರ್ಯ ಎಲ್ಲರೂ ಸಮಾನವಾಗಿ ಅನುಭವಿಸಬೇಕಾದ ಹಕ್ಕು. ಹಾಗಿದ್ದರೆ ಅದನ್ನು ಸ್ವಾತಂತ್ರ್ಯ ಎನ್ನಬೇಕು. ಗಾಳಿ ಬೆಳಕು ಪಂಚಭೂತಗಳನ್ನು  ಹಂಚಿ ತಿನ್ನುವ  ಮನುಷ್ಯ ಸ್ವಾತಂತ್ರ್ಯವನ್ನು ಹಂಚಿ ತಿನ್ನುವುದಿಲ್ಲ.

            ಬಾಲ್ಯದಲ್ಲಿ ಒಂದಷ್ಟು ದಿನ ನನ್ನ ಅಜ್ಜನಲ್ಲಿ ವೇದಾಧ್ಯಯನ ಮಾಡುತ್ತಿದ್ದೆ. ಆವಾಗಿನ ಒಂದು ಘಟನೆ, ಅಜ್ಜನೊಂದಿಗೆ ಒಂದು ಮನೆಗೆ ಪೌರೋಹಿತ್ಯಕ್ಕೆ ಹೋಗಿದ್ದೆ. ಯಾವುದೋ ಬ್ರಾಹ್ಮಣರಲ್ಲದವರ ಮನೆಯದು. ಅಜ್ಜನಲ್ಲಿ ಅಪಾರವಾದ ಗೌರವವನ್ನು ಇಡೀ ಕುಟುಂಬವೇ ಹೊಂದಿತ್ತು. ಹೋದಕೂಡಲೆ ಅಜ್ಜನ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಆಗ ನಾನು ಅಚ್ಚರಿಯಿಂದ ನೋಡಿದ್ದು ಈಗಲೂ ನೆನಪಿನಲ್ಲಿದೆ. ಪೂಜೆಯ ಕ್ರಿಯಾಭಾಗವೆಲ್ಲ ಮುಗಿದು ವಿಪ್ರ ದಕ್ಷಿಣೆಯನ್ನು ತೆಗೆದುಕೊಳ್ಳುವ ಸಮಯ.  ಅಜ್ಜನ ಸಹ ಪುರೋಹಿತನಾದ ನಾನೂ ಸಹ ಅಜ್ಜನ ಜತೆಯಲ್ಲೇ ಕುಳಿತಿದ್ದೆ. ಮನೆಯವರೆಲ್ಲ ಒಬ್ಬೊಬ್ಬರಾಗಿ ಅಜ್ಜನ ಪಾದ ಮಾತ್ರವಲ್ಲ ನನ್ನ ಕಾಲೂ ಹಿಡಿದಾಗ ಬಾಲಕ ನಾನು ಮುಜುಗರಕ್ಕೆ ಒಳಗಾಗುತ್ತಿದ್ದೆ. ಆದರೂ ಅಜ್ಜ ಬಹಳಷ್ಟು ಸಲ ಹೇಳುತ್ತಿದ್ದರು. ಅಲ್ಲಿ ವಯಸ್ಸಲ್ಲ ಪ್ರಧಾನ, ನಮ್ಮ ಸ್ಥಾನವೇ ಮುಖ್ಯವಾಗುತ್ತದೆ. ವಾಮನ ಮೂರ್ತಿಯಾದರೂ ಸಹ ವಿಪ್ರಬಾಲಕನಿಗೆ ಮೂರು ಲೋಕದ ಪ್ರಭು ಮಹಾಬಲಿ ಅಡ್ಡಬಿದ್ದ ಕಥೆಯೇ ಇದೆಯಲ್ಲ?  ಹೀಗೆ ಅಜ್ಜನೊಟ್ಟಿಗೆ ನಮಸ್ಕಾರಗಳನ್ನು ಸ್ವೀಕರಿಸುವಾಗ ಅಲ್ಲಿ ಬಂದ ಒಬ್ಬ ಹುಡುಗನನ್ನು ನೋಡಿ ನಾನು ಹಿರಿ ಹಿರಿ ಹಿಗ್ಗಿದೆ. ಕಾರಣವಿಷ್ಟೆ, ಆತ ದಿನವೂ ನನಗೆ ಭಟ್ಟನ ಜುಟ್ಟು ಅಂತ ಗೇಲಿ ಮಾಡಿ ನಗುತ್ತಿದ್ದ.  ಇಂದು ಆತನೇ ನನ್ನ ಕಾಲಿಗೆ ಬೀಳುವಾಗ ಹೇಗಾಗಬೇಕು? ಬದನೆಯ ತೊಟ್ಟಿನ ಮುಳ್ಳು ಚುಚ್ಚಿರಬಹುದು.  ನಿಂದನೆ ಇದು ಕೇವಲ ಬಾಲ ಬುದ್ದಿಯಲ್ಲ. ಎಷ್ಟೋ ಸಲ ಬ್ರಾಹ್ಮಣ ಅಂತ ನಿಂದನೆ ಮಾಡಿದವರೂ ತಮ್ಮ ಮನೆಯ ಅಂಗಡಿ ಸಂಸ್ಥೆಯ ಪೂಜೆ ಕಾರ್ಯಗಳನ್ನು ಮಾಡಬೇಕಾದರೆ ನಮ್ಮ ಹತ್ತಿರವೇ ಬರುತ್ತಿದ್ದರು. ಅವಾಗ ಬ್ರಾಹ್ಮಣರನ್ನು ಹುಡುಕಿಕೊಂಡು ಹೋಗುವ ಪೂಜ್ಯಮನೋಭಾವ ಅದು ಹೇಗೆ ಹುಟ್ಟುತ್ತದೆ?  ಹೀಗಿದ್ದರೂ ಸಾರ್ವಜನಿಕವಾಗಿ ಅವರೆದುರೇ ನಾವು ಗೇಲಿಗೊಳಗಾಗುತ್ತಿದ್ದದ್ದು ಅಚ್ಚರಿಯ ವಿಷಯವಾಗಿ ಕಾಡಿತ್ತು.  ಮೇಲೂ ಕೀಳು ಎಂಬ ವಿಮರ್ಷೆಯಲ್ಲ. ಮನುಷ್ಯನ ದ್ವಂದ್ವ ನೀತಿ. ಬೇಕಾದಾಗ ಬೇಕಾದಂತೆ ಬದಲಾಗುವ ರೀತಿ. ಒಬ್ಬ ಕರ್ಮಿಷ್ಠನಾದ ಬ್ರಾಹ್ಮಣ, ನಿತ್ಯ ಜಪ ತಪ ನಿಯಮಗಳನ್ನು ಅನುಸರಿಸುವ ಬ್ರಾಹ್ಮಣ ಅತ್ಯಂತ ಪೂಜನೀಯ ಹೌದು. ಆತ ಅನುಸರಿಸುವ ನಿಯಮ ನಿಷ್ಠೆಗಳು ಅದು  ಕೇವಲ ಸ್ವಕಿಯ. ಬ್ರಹ್ಮ ಪದ ಸಾಧನೆಗೆ, ಪರಮಾತ್ಮನ ಅನುಗ್ರಹಕ್ಕೆ ಇರುವ ಉಪಾಸನೆಯಾದರೂ ಆತ ನಿಷ್ಠಾವಂತ ಬ್ರಾಹ್ಮಣ ಗೌರವಕ್ಕೆ ಅರ್ಹನಾದರೂ ಸಹ ಆತ ಅನುಭವಿಸುವ ನಿಂದನೆ ಕೆಲವೊಮ್ಮೆ ಅರಿವಿಗೆ ಬಂದರೂ ಹಲವು ಸಲ ಅರಿವಿಗೆ ಬರುವುದೇ ಇಲ್ಲ. ಇನ್ನೂ ಒಂದು ವಿಚಿತ್ರ ಹೀಗೆ  ತನ್ನ ಸ್ವ  ಪಾಪ ಕ್ಷಯಕ್ಕೆ   ಜಪಾನುಷ್ಠಾನವನ್ನು ನಿಷ್ಠೆಯಿಂದ ಅನುಸರಿಸುವ ಬ್ರಾಹ್ಮಣ ಸ್ವಜಾತಿಗಳಾದ  ಬ್ರಾಹ್ಮಣರಿಂದ ಲೇ ನಿಂದನೆಯನ್ನು ಅನುಭವಿಸುವುದು ಇನ್ನೂ ಒಂದು ವಿಪರ್ಯಾಸ ಎನ್ನಬೇಕು. ವಿಚಿತ್ರವೆಂದರೆ ನನ್ನ  ಅನುಭವದಲ್ಲಿ ಹಲವು ಸಲ ಬ್ರಾಹ್ಮಣ ನಿಂದನೆ ನಾನು ಕಂಡಿದ್ದರೆ ಅದು ಸ್ವಜಾತಿಗಳಲ್ಲೇ. ಇದು ನನ್ನ ಅನುಭವ. ಅರ್ಥಿಕವಾಗಿಯೋ ದೈಹಿಕವಾಗಿಯೋ ಆತ ಸಬಲನಾಗಿದ್ದರೆ ಈ ನಿಂದನೆ ನೇರವಾಗಿ ಇರುವುದಿಲ್ಲ. ಪರೋಕ್ಷವಾಗಿಯೂ ಇರುವುದಿಲ್ಲ.ದುರ್ಬಲನಾದವನನ್ನು ಸ್ವ ಜಾತಿಯೂ ತುಳಿಯುವುದನ್ನು ಕಂಡಿದ್ದೇನೆ.   ಹೀಗೆ ಧರ್ಮದ ಹಾದಿ ತಪ್ಪಿಸುವುದು ಯಾಕೆ ಧರ್ಮನಿಂದನೆಯಾಗುವುದಿಲ್ಲ?

            ಧರ್ಮ ಅಂದರೆ ಎನು? ಪರಮಾತ್ಮನ ಪರಮ ಪದಕ್ಕಿರುವ ಹಾದಿ. ಇದು ತಿಳಿಯಬೇಕಾದರೆ ಮೊದಲು ಪರಮಾತ್ಮ ಅಸ್ತಿತ್ವವನ್ನು ತಿಳಿಯಬೇಕು. ಜ್ಞಾನಿಗಳು ಅದನ್ನೇ ತತ್ಸ ವಿತುವರೇಣ್ಯಂ ಅಂತ ವ್ಯಾಖ್ಯಾನಿಸಿದ್ದಾರೆ. ಜಗತ್ತಿನಲ್ಲಿ ಯಾವುದು ಅತ್ಯಂತ ಶ್ರೇಷ್ಠವೋ ಅದಕ್ಕಿಂತ ಶ್ರೇಷ್ಠವಾದದ್ದು ಪವಿತ್ರವಾದದ್ದು ಈ ಸೃಷ್ಟಿಯಲ್ಲಿ ಯಾವುದು ಇಲ್ಲ. ಅದುವೇ ಪರಮ ಪದ. ಬ್ರಾಹ್ಮಣ ಅದನ್ನು ಬ್ರಹ್ಮ ಪದ ಅಂತ ತಿಳಿಯುತ್ತಾನೆ. ಅದೇ ಬ್ರಹ್ಮೋಪದೇಶ. ಆ ಹಾದಿಯಲ್ಲಿ ನಡೆಯುವುದು ಎಂದರೆ ಜಾತಿ ಧರ್ಮವಾಗುತ್ತದೆ. ಹೊರತು ಇಲ್ಲಿ ಯಾವುದು ಕನಿಷ್ಠವಲ್ಲ ಎಲ್ಲ ಹಾದಿಯ ಸ್ವರೂಪ ಮಾತ್ರ ಭಿನ್ನ. ಇಂದು ಧರ್ಮದ ನಡುವೆ ಭೇದವನ್ನು ಸೃಷ್ಟಿಸಿ, ನಮ್ಮ ಧರ್ಮವೇ ಶ್ರೇಷ್ಠ ಅಂತ ಉಪದೇಶ ಮಾಡುವುದು ಇನ್ನೊಂದು ಧರ್ಮದಿಂದ ವಿಮುಖನಾಗುವುದಕ್ಕೆ ಪ್ರಚೋದನೆ ಕೊಡುವುದೂ ಸಹ ಮೂರ್ಖತನವಾಗಿ ಧರ್ಮ ನಿಂದನೆಯಾಗುತ್ತದೆ. ಧರ್ಮದ ತಪ್ಪು ವ್ಯಾಖ್ಯಾನ. ಒಂದು ಜಾತಿ ಬಿಟ್ಟು ಇನ್ನೊಂದನ್ನು ಅನುಸರಿಸುವುದು ಮೂರ್ಖತನ. ಆತನಿಗೆ  ಪರಮಾತ್ಮ ಅಸ್ತಿತ್ವದಲ್ಲಿ ನಂಬಿಕೆ ಬರುವುದಿಲ್ಲ.  ನಾವು ಸಾಗುವ ರಸ್ತೆಯನ್ನು ನೋಡುವುದು ಬಿಟ್ಟು ವಿಭಾಜಕದ ಆ ಬದಿಯ ಇನ್ನೊಂದು ರಸ್ತೆ ನೋಡುತ್ತಾ ಹೋದರೆ ನಾವು ಸಾಗುವ ರಸ್ತೆಯ ಹೊಂಡ ಗುಂಡಿಗಳು ಕಾಣಲಾರದು. ಒಂದು ಧರ್ಮದ ಹಾದಿಯಲ್ಲಿ ನಡೆಯುವಾಗ ಮತ್ತೊಂದು ಧರ್ಮವನ್ನು ನೋಡಿ ಹೋಲಿಕೆ ಮಾಡಿ ಅವಹೇಳನ ಮಾಡುವುದು ಎಂದರೆ ತಮ್ಮ ಹಾದಿಯಲ್ಲಿ ಅಡೆ ತಡೆಗಳನ್ನು ತಂದು ಹಾಕಿದಂತೆ. ಓಟಗಾರ ಸ್ಪರ್ಧೆಯಲ್ಲಿ ಪಳಗಿದ ಓಟಗಾರ ತನ್ನ ಗುರಿಯನ್ನಷ್ಟೇ ನೋಡುತ್ತಾನೆ ಹೊರತು ಪಕ್ಕದ ಗೆರೆಯಾಚೆವನನ್ನು ನೋಡುವುದಿಲ್ಲ. ನೋಡಿದರೆ ಈತನ ಹಾದಿ ಗುರಿ ಎಲ್ಲವೂ ಕಠಿಣವಾಗುತ್ತದೆ.    ಧರ್ಮಾಚರಣೆಯ ಹಾದಿಯೂ ಹಾಗೆ. ಹಾಗಾಗಿ ಧರ್ಮನಿಂದನೆಯ ಮುಖಗಳಿವು. ಆದರೂ ಇಂದು ನಿಂದನೆಯನ್ನೇ ಧರ್ಮ ಅಂತ ಮಾಡುವುದನ್ನು ಕಾಣಬಹುದು.
           
            ಒಂದು ಸಲ ಹಲವು ಮಿತ್ರರು ನಾವೆಲ್ಲ ಶಬರಿಮಲೆಗೆ ಹೋಗಿದ್ದೆವು. ಎಲ್ಲರೂ ಬ್ರಾಹ್ಮಣ ಮಿತ್ರರು.   ಹತ್ತು ಮೂವತ್ತು ಮಂದಿ ತಂಡದಲ್ಲಿದ್ದೆವು.  ನಿಜಕ್ಕೂ ಒಂದು ಅಹ್ಲಾದಮಯ ಅನುಭವದ ತೀರ್ಥಯಾತ್ರೆ. ಮುಂಜಾನೆ ಪಂಪೆಯಲ್ಲಿ  ಮಿಂದು ನಾನು ಯಥಾ ಪ್ರಕಾರ ಸಂಧ್ಯಾವಂದನೆ ಮಾಡಿದ್ದೆ. ಸೂರ್ಯೋದಯಕ್ಕೆ ನದಿಯಲ್ಲಿ ನಿಂತು ಸೂರ್ಯಾರ್ಘ್ಯ ಬಿಡುವುದು ಒಂದು ಅಪರೂಪದ ದಿವ್ಯ ಅನುಭವ.  ಅಷ್ಟೂ ಮಂದಿ ಇದ್ದ ನಮ್ಮಲ್ಲಿ ಸಂಧ್ಯಾವಂದನೆ ಮಾಡಿದ್ದು ಮೂರೇ ಜನೆ. ಕೆಲವರು ಹೋದಲ್ಲಿಯೂ ಬೇಕಾ ಇದು ಎಂಬ ಭಾವನೆಯಲ್ಲಿದ್ದರೆ, ಉಳಿದವರಿಗೆ ತೋರಿಸುವುದಕ್ಕೆ ಇದು ಅಂತ ಭಾವಿಸಿರಲೂ ಬಹುದು. ಆದರೆ ಕರ್ಮವನ್ನು ಅನುಸರಣೆ ಮಾಡದ ವೃತ  ಮಾತ್ರ ಸತ್ಪಲವನ್ನು ಪೂರ್ಣವಾಗಿ ಒದಗಿಸುವುದಿಲ್ಲ.  ಶಬರಿಮಲೆಯಾತ್ರೆ ಒಂದು ವೃತ ಅಂತಲೇ ಆಚರಿಸಲ್ಪಡುತ್ತದೆ.  ಪರಮಾತ್ಮನ ಹಾದಿಯಲ್ಲಿ ಸಾಗುವಾಗ ವೃತ ಎಂಬುದು ಅದಕ್ಕೆ ಪೂರಕವಾಗಿರಬೇಕು. ಕರ್ಮವೇ ಪ್ರಧಾನವಾಗಬೇಕು. ಹೀಗೆ ಧರ್ಮದ ಹಾದಿಯನ್ನು ಅರ್ಥೈಸಿಕೊಳ್ಳದೇ ಇರುವುದೂ ಧರ್ಮನಿಂದನೆಯಾಗುತ್ತದೆ. ಧರ್ಮನಿಂದನೆಯಲ್ಲಿ ನಿಂದನೆಯೇ  ಧರ್ಮವಾಗುವುದು ಮನುಷ್ಯ ಮೌಢ್ಯದ ಸಂಕೇತ.

            ’ಧರ್ಮ ನಿಂದನೆ...’  ಒಬ್ಬ ಯಾವುದೇ ಒಂದು ಧರ್ಮದ ಅವಲಂಬಿಯಾಗಿರುವುದು ಆತನ ಹಕ್ಕು. ಪರಮಾತ್ಮ ನೀಡಿರುವ ಹಕ್ಕು ಅದನ್ನು ನಿಂದಿಸಿ ಆತನ ಹಕ್ಕನ್ನು ಕಸಿದುಕೊಳ್ಳುವುದು ನಿಜಕ್ಕೂ ನಿಯಮ ಉಲ್ಲಂಘನೆಯಾಗುತ್ತದೆ.  ಇದಕ್ಕೆ ಜಾತಿಭೇದವಿಲ್ಲ. ಇದು ಸಮತ್ವದ ಸಂಕೇತ.


           

Saturday, August 10, 2019

ಶಿಥಿಲ ಸಂಸ್ಕಾರ


ಮನಸ್ಸಿಗೆ ಬಹಳಷ್ಟು ವೇದನೆಯನ್ನೂ ಆತಂಕವನ್ನೂ ತರುವ ವಿಚಾರವಿದು. ಮನುಷ್ಯನಾಗಿ ಹುಟ್ಟಿದ ಮೇಲೆ ಅವನ ಬದುಕು ಆಯಾಮ ಗೊಳ್ಳುವುದು ಶುದ್ದವಾದ ಸಂಸ್ಕಾರದಿಂದ. ಸಂಸ್ಕಾರವೆಂಬುದು ಒಬ್ಬ ಮನುಷ್ಯನ ಜೀವನವನ್ನು ಗುರುತಿಸಿಕೊಡುತ್ತದೆ. ಅದಕ್ಕೆ ಜಾತಿ ಜಾತಿ ಎಂಬ ಭೇದವಿಲ್ಲ. ಪ್ರತಿಯೊಂದರಲ್ಲೂ ಒಂದು ವಿಧಿವತ್ತಾದ ಸಂಸ್ಕಾರವಿರುತ್ತದೆ. ಅದರಲ್ಲಿ ಮೇಲು ಕೀಳು ಎಂಬುದಿಲ್ಲ. ಪ್ರತಿಯೊಂದರ ಗಮ್ಯವೂ ಭಗವದ್ಗೀತೆಯಲ್ಲಿ ಹೇಳಿದಂತೆ ಎಲ್ಲವೂ ಭಗವಂತನತ್ತ ಸೆಳೆಯಲ್ಪಡುವ ಸಂಸ್ಕಾರಗಳೇ ಆಗಿರುತ್ತವೆ . ಹಾಗಾಗಿ ಸಂಸ್ಕಾರ  ಮನುಷ್ಯನ  ಜೀವನದ ಆಯಾಮವನ್ನು ತೋರಿಸುತ್ತದೆ. ಮನುಷ್ಯ ಯಾವ ಬದುಕನ್ನೇ ನಡೆಸಿದರೂ ಸಂಸ್ಕಾರವೆಂಬುದು ಅವನನ್ನು ಜನ್ಮ ಪರ್ಯಂತ ಹಿಂಬಾಲಿಸುತ್ತದೆ. ಸಣ್ಣ ಮಗುವಾದರೂ ತುತ್ತು ಹಿಡಿದ ಕೈ ಬಾಯಿಗೆ ಹೋದಂತೆ, ಸಂಸ್ಕಾರ ಬಿಟ್ಟು ಬಿಡದ ನೆರಳಿನಂತೆ ಮನುಷ್ಯನನ್ನು ಹಿಂಬಾಲಿಸುತ್ತದೆ. ಇಲ್ಲಿ ಕಥೆ ಇರುವುದು ಸಂಸ್ಕಾರದ ಬುಡವೇ ಶಿಥಿಲವಾದ ಅನುಭವದಲ್ಲಿ.

ಒಂದೆರಡು ತಿಂಗಳ ಹಿಂದೆ ನಮ್ಮೂರ ಹಳ್ಳಿಯೊಂದರ ದೇವಸ್ಥಾನಕ್ಕೆ ಹೋಗಿದ್ದೆ. ಹಳ್ಳಿಯ ದೇವಸ್ಥಾನ ಎಂದರೆ ಕೇಳಬೇಕೆ? ಹಸಿರಾದ ಕಂಗಿನ ತೋಟದ ನಡುವೆ ಇತ್ತು ಈ ದೇವಸ್ಥಾನ.  ನೀರವ ಮೌನ. ಮನಸ್ಸನ್ನು ಅಹ್ಲಾದಗೊಳಿಸುವ ಶಾಂತ ಪರಿಸರ.  ಸುತ್ತಲೂ ಹಸಿರು. ಪರಿ ಶುದ್ದವಾದ ಗಾಳಿ ನೀರು.  ಅದರ ಜತೆಯಲ್ಲಿ ಜೋರಾಗಿ ಸುರಿಯುತ್ತಿದ್ದ ಮಳೆ. ಮಳೆಯ ಸದ್ದು, ತೋಟದಿಂದ ಬರುವ ಹಕ್ಕಿಗಳ ಜೀರುಂಡೆಯ ಸದ್ದು. ದೇವಸ್ಥಾನ ನಿಜಕ್ಕೂ ದೇವ ಸಾನ್ನಿಧ್ಯವನ್ನು ಸಾರುತ್ತಿತ್ತು. ವಿಶೇಷವಾದ ಯಾವ ಪೂಜೆಗಳು ಇಲ್ಲದ ನಿತ್ಯದ ದಿನಚರಿಗೆ ಸೀಮಿತವಾದ  ದಿನವಾದುದರಿಂದಲೂ ಜನ ಸಂಚಾರ ತೀರ ವಿರಳ.  ವಿರಳ ಮಾತ್ರವಲ್ಲ ಯಾರೂ ಇಲ್ಲ.

ವಿಶಾಲವಾದ ಅಂಗಣ ದಾಟಿ ದೇವಾಲಯದ ಒಳಗಿನ ಪ್ರಾಂಗಣಕ್ಕೆ ಹೊಕ್ಕೆ. ಯಾರೊಬ್ಬರೂ ಇಲ್ಲ. ಗರ್ಭಗುಡಿಯ ಬಾಗಿಲು ತೆರೆದು ಒಳಗೆ ಬೆಳಗುತ್ತಿದ್ದ ದೀಪ ದೂರಕ್ಕೂ ಗೋಚರಿಸುತ್ತಿತ್ತು. ನಿತ್ಯದ ದಿನವಾದುದರಿಂದ ವಿಶೇಷವಾದ ಯಾವ ಪೂಜೆ ಪುನಸ್ಕಾರಗಳೂ ಇಲ್ಲವಾಗಿ ಕೇವಲ ನಿತ್ಯ ನಿಯತಿಯಂತೆ ನಡೆಯುವ ಪೂಜೆ ಮಾತ್ರವಾಗಿದ್ದುದರಿಂದ ಯಾರೂ ಇರುವುದಿಲ್ಲ ಎಂದು ಅರಿವಿತ್ತು. ಏನೇ ಆಗಲಿ  ಒಬ್ಬರಾದರೂ ಒಳಗಡೆ ಅರ್ಚಕರು ಇರುತ್ತಾರೆ, ಹಾಗೆ ಕೈಕಾಲು ಮುಖ ತೊಳೆದು ದೇವರ ಎದುರಿನ ಗೋಪುರದಂಚಿನಲ್ಲಿ ಕುಳಿತು ಕಣ್ಣು ಮುಚ್ಚಿ ಜಪ ಮಾಡುತ್ತಿದ್ದೆ.ಯಾವುದೇ ದೇವಾಲಯಕ್ಕೆ ಹೋದರೂ ಒಂದಷ್ಟು ಹೊತ್ತುಇದಕ್ಕೇ ಮೀಸಲಿರಿಸಿಕೊಂಡಿದ್ದೇನೆ.  ಒಳಗಿಂದ ತಟ್ಟೆ ಹರಿವಾಣ ಪಾತ್ರೆಗಳ ಸದ್ದು ಕೇಳುತ್ತಿತ್ತು.  ಅರ್ಚಕರು ಒಬ್ಬರಾದರೂ ಇರಲೇಬೇಕಲ್ಲ? ಬಹುಶಃ ನನ್ನಂತೇ ಅವರೂ ಸಹ ಏಕಾಂಗಿ ಸುಖವನ್ನು ಅನುಭವಿಸುತ್ತಿರಬೇಕು. ಯಾಕೆಂದರೆ ಅವರಿಗೆ ನಾನು ಬಂದುದು ಬಹಳ ಹೊತ್ತು ಅರಿವಿಗೆ ಬರಲೇ ಇಲ್ಲ.!!!

ಸುಮಾರು ಹೊತ್ತಿನ ತರುವಾಯ ಅವರು ಹೊರಗೆ ಇಣುಕಿದಾಗ ನನ್ನನ್ನು ಕಂಡರು.  ಆವಾಗ ಆಶ್ಚರ್ಯವಾದದ್ದು ಮಾತ್ರ ನನಗೆ. ನನ್ನನ್ನು ಕಂಡು ಉದ್ಗಾರ ತೆಗೀತಾರೆ ಅಂದೊಕೊಂಡಿದ್ದರೆ ಅವರು ಸಹಜವಾಗಿಯೇ ಮಾತಿಗಾರಂಭಿಸಿದರು. ಬಹುಶಃ ಇದಲ್ಲಿ ಸಹಜವೋ ಏನೊ?

ಅಲ್ಪ ಸ್ವಲ್ಪ ಪರಿಚಿತರಾದುದರಿಂದ,  ಉಭಯ ಕುಶಲ ವಿಚಾರಿಸುವ ಮೊದಲೇ ಅವರ ಪ್ರಶ್ನೆ ಸ್ವಲ್ಪ ಅಸ್ವಾಭಾವಿಕವಾಗಿ ಕಂಡಿತು.

“ ಏನು ಬಂದದ್ದು?”

ನಾನು ಒಂದಷ್ಟು ತಡಬಡಾಯಿಸಿದೆ.  ಏನೆಂದು ಉತ್ತರಿಸುವುದು? ದೇವಸ್ಥಾನಕ್ಕೆ ಹೋಗುವ ಉದ್ದೇಶವಾದರು ಏನು? ಪರಮಾತ್ಮ ಭಕ್ತಿ ಉಪಾಸನೆಗೆ. ಬೇರೆ ಉದ್ದೇಶವೇನಿರುತ್ತದೆ? ದರ್ಶನ ನಮಸ್ಕಾರ ಅದೆಲ್ಲ ಆಗಿ ಸಿಕ್ಕಿದರೆ ಪ್ರಸಾದ. ಇದಲ್ಲದೇ ಬೇರೆ ಏನಿರಬಹುದು?  ವ್ಯಾವಹಾರಿಕವಾಗಿ ಯೋಚಿಸಿದರೆ ಅವರ ಪ್ರಶ್ನೆಗೂ ಒಂದು ಅರ್ಥವನ್ನು ಕಲ್ಪಿಸಬಹುದು.  ಈಗೀಗ ದೇವಸ್ಥಾನಕ್ಕೆ ಹೋಗುವ ಉದ್ದೇಶಗಳಲ್ಲಿ ಈ ಉದ್ದೆಶಗಳು ಯಾವುದೂ ಇರುವುದಿಲ್ಲ. ದೇವಸ್ಥಾನಕ್ಕೆ ಹೋದದ್ದಕ್ಕೆ ಪ್ರದಕ್ಷಿಣೆ ಬರುದು ನಮಸ್ಕಾರ ಹಾಕುದು ಕಾಣಿಕೆ ಹಾಕುವುದು...ಹೀಗೆ ಕೇವಲ ಯಾಂತ್ರಿಕ ಕಿಯೆಗಳು.    ಹೋದದ್ದಕ್ಕೆ ಭಕ್ತಿ ಪ್ರಕಟವಾಗುತ್ತದೊ ತೋರಿಕೆಯಾಗುತ್ತದೋ ಹೇಳುವುದು ಕಷ್ಟ. ಭಕ್ತಿಗಿಂತಲೂ ದೇವರ ಭಯವೇ ಹೆಚ್ಚಾಗಿರುತ್ತದೆ.  ಎಲ್ಲಾದರೂ ದೇವರು ಮುನಿದರೆ ಎಂಬ  ಆತಂಕ.  ಹೀಗಾಗಿ ಭಕ್ತಿ ಕೂಡ ಒಂದು ಅಭಿನಯ.

ಈ ದೇವರ ವಿಷಯ ಬರುವಾಗ   ’ ಭಯ ಭಕ್ತಿ’  ಅಂತ ಯಾಕೆ ಸೇರಿಸಿದರೋ ಗೊತ್ತಾಗುವುದಿಲ್ಲ. ಭಕ್ತಿ ಮಾರ್ಮಿಕವಾಗುವುದಕ್ಕೆ ಭಯ ಸೇರಿಕೊಂಡಿತು ಅಂತ ಅಂದುಕೊಳ್ಳುತ್ತೇನೆ. ಆದರೆ ಭಯ ಇದ್ದಲ್ಲಿ ಭಕ್ತಿ ಎಂಬುದು ಅಭಿನಯವಾಗುವ ಪ್ರಮೇಯವೇ ಹೆಚ್ಚು. ಇದೆಲ್ಲವೂ ತಮ್ಮ ಸ್ವಕೀಯವಾದ ವ್ಯವಹಾರದ ಸಂಕೇತವಾಗಿರಬೇಕಾದದ್ದು ಇನ್ನೊಬ್ಬರ ತೋರಿಕೆಗೆ  ಪ್ರಕಟಗೊಳ್ಳುವುದನ್ನೇ ಕಾಣಬಹುದು. ನಮಸ್ಕಾರ ಮಾಡದಿದ್ದರೆ, ಪ್ರದಕ್ಷಿಣೆ ಬಾರದಿದ್ದರೆ, ಕಾಣಿಕೆ ಹಾಕದಿದ್ದರೆ ಕಂಡವರು ಏನು ಅಂದುಕೊಳ್ಳುತ್ತಾರೋ ಎಂಬ ಆತಂಕ. ಹಾಗಾಗಿ ಸುತ್ತಲೂ ಕಾಣುವವರಿಗೆ ದೇವಕಾರ್ಯಗಳು ಪ್ರಕಟಗೊಳ್ಳುತ್ತದೆ. ತಾವು ಮಾಡುವ ಸೇವೆಗಳು ಘಂಟಾಘೋಷವಾಗಿ ಪ್ರಕಟಗೊಳ್ಳಬೇಕು ಎಂದೇ ಭಾವಿಸುತ್ತಾ,  ದೊಡ್ಡ ದೊಡ್ಡ ಸೇವಾಕಾರ್ಯಗಳನ್ನು ಮಾಡುವುದನ್ನು ಕಾಣಬಹುದು. ಯಾರಾದರೂ ನೋಡುತ್ತಾರೆ ಗಮನಿಸುತ್ತಾರೆ ಎಂದಾಕ್ಷಣ ದೇವರಿಗೆ ಬರುವ ಸುತ್ತು  ನಮಸ್ಕಾರಗಳ ಸಂಖ್ಯೆ ಹೆಚ್ಚಾಗುತ್ತದೆ. ನಮಸ್ಕಾರ ದೇವರಿಗೆ ಹಾಕುವುದೋ ಬಂದವರಿಗೆ ಹಾಕುವುದೋ ಅದರ ಉದ್ದೇಶವೇನೋ ಎಲ್ಲವೂ ಹಾಸ್ಯಾಸ್ಪದವಾಗುತ್ತದೆ.

ಹೀಗೆಲ್ಲ ಯೋಚನೆ ಮಾಡುವಾಗ ಅರ್ಚಕರು ಏನು ಬಂದದ್ದು ಎಂಬ ಪ್ರಶ್ನೆಗೆ ಹಲವು ಅರ್ಥಗಳು ಬರಬಹುದು.
ಏನು ಬಂದದ್ದು? ಎಂಬ ಪ್ರಶ್ನೆಗೆ ನನ್ನ ಕಳವಳ ಅವರಿಗೆ ಅರ್ಥವಾಗಿರಬೇಕು. ಅವರು ನಂತರ ಹೇಳಿದರು.

ಕೇಳದೇ ನಿರ್ವಾಹ ಇಲ್ಲ. ಇಲ್ಲಿಇರುವುದು ನಾನೊಬ್ಬ. ಮತ್ತೆ ಆ ಹರಕೆ ಉಂಟು ಈ ಹರಕೆ ಉಂಟು ಅಂತ ಹೇಳಿದರೆ ನಾನು ಪೂಜೆಗೆ ಕುಳಿತಾಗುತ್ತದೆ.  ಏನು ಮಾಡುವುದು? ಅದಕ್ಕೆ ಬಂದ ಕೂಡಲೇ ಕೇಳಿಬಿಡುವುದು.

ಹೌದಲ್ಲವೇ?  ಹರಕೆ ಸಂದಾಯವೂ ಕೇವಲ ಹರಕೆ ಯಾಗಬಾರದಲ್ಲ.?

ಅರ್ಚರ್ಕರು ನಂತರ ಸ್ನೇಹದಿಂದ ಸೌಜನ್ಯದಿಂದಲೇ ಮಾತನಾಡಿದರು. ನಾನು ಯಾವಾಗಲಾದರೊಮ್ಮೆ ಅಪರೂಪಕ್ಕೆ ಬರುವವನು. ಕುಶಲ ಸಮಾಚಾರ ವಿಚಾರಿಸಿ ನಂತರ,  ಹಲವು ವಿಷಯಗಳನ್ನು ಹೇಳುತ್ತಾ,  ತೊಂದರೆಗಳನ್ನೂ ಸಮಸ್ಯೆಗಳನ್ನೂ ಹೇಳುತ್ತಾ ಹೋದರು. ಅವರು ಹೇಳಿದ ಹಲವು ವಿಚಾರಗಳು  ಹಲವು ಯೋಚನೆಗಳಿಗೆ ಗ್ರಾಸವಾದವು.

ಒಬ್ಬ ಪುರೋಹಿತ ಒಂದು ದೇವಾಲಯದ ಪೂಜೆಗೆ ನಿಯಮಿಸಲ್ಪಟ್ಟರೆ ನಂತರ ಆತನ ಸ್ವಾತಂತ್ರ್ಯ ಹರಣವಾದಂತೆ. ವಾಡಿಕೆಯಲ್ಲಿ ಹೇಳುವುದುಂಟು ಕರು ಹಾಕಿದ ದನ ಮನೆಯಲ್ಲಿದ್ದಂತೆ. ಎಲ್ಲಿ ಹೋದರೂ ಹಾಲು ಕರೆಯುವ ಹೊತ್ತಿಗೆ ಬರಲೇಬೇಕು. ದೇವ ಪೂಜೆಯೂ ಹಾಗೆ. ಬೆಳಗ್ಗೆ ಮಧ್ಯಾಹ್ನ ರಾತ್ರೆ. ಮುಂಜಾನೆಯದ್ದು ಮುಗಿಸುವಾಗ ಮಧ್ಯಾಹ್ನದ ಪೂಜೆಗೆ ಸಿದ್ದತೆ. ಮಧ್ಯೆ ತುಸು ಬಿಡುವಿದ್ದರೂ ದೇವಸ್ಥಾನ ಬಿಟ್ಟು ಯಾವ ಕೆಲಸವೂ ಹಚ್ಚಿಕೊಳ್ಳುವಂತಿಲ್ಲ. ಈ ಬಂಧು ಬಳಗ ದೂರದ ಪಯಣ ಕನಸೇ ಸರಿ. ಮದುವೆಯಾಗಿ ಸಂಸಾರಿಯಾದವನಿಗೆ ಹೆಂಡತಿಯನ್ನು ಕರೆದುಕೊಂಡು ಎಲ್ಲಾದರೂ, ನೆಂಟರಿಷ್ಟರ ಮನೆಗೆ ಹೋಗಬೇಕಿದ್ದರೆ, ಅನಿವಾರ್ಯ ಕೆಲಸ ಕಾರ್ಯಗಳಿಗೆ ಹೋಗುವುದಿದ್ದರೆ  ದೇವಾಲಯದಲ್ಲಿ ಬದಲೀ ವ್ಯವಸ್ಥೆ ಯಾಗಬೇಕು. ಆದರೆ ಈಗ ಬದಲಿ ವ್ಯವಸ್ಥೆಗೆ ಅದೂ ಹಳ್ಳಿಗಳ ದೇವಸ್ಥಾನದಲ್ಲಿ ಬ್ರಾಹ್ಮಣರೇ  ಸಿಗುವುದಿಲ್ಲ. ಇದ್ದರೂ ಯಾವುದೋ ನೆವ ಹೇಳಿ ತಪ್ಪಿಸಿಕೊಂಡು ಬಿಡುತ್ತಾರೆ. ದೇವರು ಭಕ್ತಿ ಇದು ವ್ಯಾವಹಾರಿಕ ಜೀವನದ ಲೆಕ್ಕಾಚಾರಕ್ಕೇ ಸಿಕ್ಕಿಬೀಳುವುದಿಲ್ಲ.

ಸಾಮಾನ್ಯವಾಗಿ ಭಕ್ತರು ಹೆಚ್ಚಿರುವ ದೊಡ್ಡ ಕ್ಷೇತ್ರಗಳಲ್ಲಿ ಈ ಸಮಸ್ಯೆಕಾಡುವುದಿಲ್ಲ. ಆದರೆ ತೀರ ಹಳ್ಳಿಗಳಲ್ಲಿ,  ನಿಯಮದಂತೆ ದೇವಾಲಯದ ನಿತ್ಯದ  ಪೂಜೆ ಹೇಗಿದ್ದರೂ ನಿಲ್ಲಿಸುವಂತಿಲ್ಲ. ಮಾನಸಿಕವಾಗಿ ಒಂದು ಭಯ ಅರ್ಚಕನಾದವನಿಗೆ ಇದ್ದೇ ಇರುತ್ತದೆ. ಆದರೆ ಹಳ್ಳಿಗಳಲ್ಲಿ ಬದಲೀ ವ್ಯವಸ್ಥೆ ಇಲ್ಲದೆ ಹಲವು ಬ್ರಾಹ್ಮಣರು ಇಂದು ಅನಧಿಕೃತ ಸೆರೆವಾಸವನ್ನು ಅನುಭವಿಸುತ್ತಾರೆ ಇದು ಸತ್ಯ. ಇನ್ನೂ ಸೂತಕದಂತಹ ವಿಚಾರ ಬಂದರೆ ದೇವಸ್ಥಾನ ಪುರೋಹಿತರೇ ಸಂಬಂಧಿಕರಿಗೆ ಹೇಳಿಬಿಡುತ್ತಾರೆ....ನಮಗೆ ಸೂತಕವಿದ್ದರೆ ತಿಳಿಸಲೇ ಬೇಡಿ ಅಂತ. ಸೂತಕ ತಿಳಿದ ನಂತರ ದೇವಸ್ಥಾನದ ಒಳ ಹೊಕ್ಕುವ ಹಾಗಿಲ್ಲ. ತಿಳಿಯದೇ ಇದ್ದರೆ ತಿಳಿದಿಲ್ಲ ಎಂದು ಸುಮ್ಮನಾಗಬಹುದು. ಇದೊಂದು ಅಪರ ಶಾಸ್ತ್ರ. ಇನ್ನೂ ಖಾರವಾಗಿ ಹೇಳಬೇಕೆಂದರೆ ಕಣ್ಣು ಮುಚ್ಚಿ ವಿಸರ್ಜಿಸಿದ ಹಾಗೆ. ಊರೆಲ್ಲ ಕಂಡರೂ ತನಗೆ ಕಾಣಲಿಲ್ಲ ಎಂಬ ನ್ಯಾಯ.  ಆದರೂ ಇದು ಆಚರೆಣೆಯಲ್ಲಿ ಇರುವುದು ಸುಳ್ಳಲ್ಲ.  ಹಾಗಾಗಿ ತೀರ ಹತ್ತಿರದ ಬಂಧುಗಳ ಸೂತಕ ಮಾತ್ರ ಆಚರಣೆಯಲ್ಲಿರುತ್ತದೆ. ಇದಕ್ಕೆ ಕಾರಣ ದೇವಸ್ಥಾನದ ಪೂಜೆ ಒಂದು ದಿನಕ್ಕಾದರೂ,  ತಾತ್ಕಾಲಿಕ ಭಟ್ಟರನ್ನು ಹುಡುಕುವುದು ಬಹಳ ಕಷ್ಟದ ಕೆಲಸ. ಮಾತ್ರವಲ್ಲ ಸಾಧ್ಯವೇ ಇಲ್ಲದಂತಹ ಕೆಲಸ.

ದೇವಸ್ಥಾನದ ಪೂಜೆ ಪುಣ್ಯದ ಕೆಲಸವೇನೋ ಹೌದು, ಆದರೆ ಅದು ಕೊರಳಿಗೆ ಉರುಳಾಗಿಯೂ ಸುತ್ತಿಕೊಳ್ಳುತ್ತದೆ ಎಂಬುದಕ್ಕೆ ಹಲವು ದೇವಸ್ಥಾನಕ್ಕೆ ಭೇಟಿಕೊಟ್ಟು ಅಲ್ಲಿಯ ಸಮಸ್ಯೆಯನ್ನು ಅರಿತುಕೊಂಡರೆ ಅರಿವಿಗೆ ಬರುತ್ತದೆ.  ಅನಿವಾರ್ಯ ಕರ್ಮ ಎಂಬಂತೆ ಆಚರಿಸಲ್ಪಡುತ್ತದೆ. ಇದರಿಂದ ಮಾನಸಿಕ ನೆಲೆಯೂ ಸ್ಥಿರತೆಯಲ್ಲಿರುವುದಿಲ್ಲ. ಪೂಜೆಯಂತಹ ದೇವ ಕಾರ್ಯಗಳು ನಿಶ್ಚಲ ಮನಸ್ಸಿನಿಂದ ಶಾಂತ ರೀತಿಯಲ್ಲಿ ಆಚರಿಸಬೇಕಾಗಿದೆ. ಆದರೆ ಅದು ಸಾಧ್ಯವಾಗುವುದಿಲ್ಲ. ಯಾಕೆಂದರೆ ಪ್ರತೀಕ್ಷಣವೂ ಮನಸ್ಸು ಉದ್ವಿಗ್ನತೆಯನ್ನು ಅನುಭವಿಸುತ್ತಿರುತ್ತದೆ.  ಬ್ರಾಹ್ಮಣನಾಗಿ ಹುಟ್ಟಿದ್ದಕ್ಕೆ ಅಂತ ವಿಕಲ್ಪ ತೃಪ್ತಿಯನ್ನೂ ಅನುಭವಿಸುತ್ತಾರೆ.

ಯೋಚನೆ ಮಾಡೋಣ ಯಾವುದೇ ವೃತ್ತಿಯಲ್ಲಾದರು ರಜೆ ಅರ್ಜಿ ಎಸೆದು ಹೋಗಿಬಿಡಬಹುದು. ಇಲ್ಲ ಬದಲೀ ವ್ಯವಸ್ಥೆ ಮಾಡಬಹುದು. ಸ್ವಂತ ವ್ಯವಹಾರವಾದರೆ ಒಂದೆರಡು ದಿನಕ್ಕೆ ರಜೆ ಸಾರಬಹುದು. ಆದರೆ ದೇವ ಪೂಜೆ ಹಾಗಲ್ಲ.  ಈ ಸಮಸ್ಯೆಗಳ ಅರಿವಿದ್ದವರು ಕಣ್ಣಿಗೆ ಕಂಡರೂ ದೂರ ಹೋಗಿಬಿಡುತ್ತಾರೆ.  ಕಟ್ಟಿ ಹಾಕಿದಂತಹ ಯಾವುದೇ ವೃತ್ತಿಯಲ್ಲೂ ಮನುಷ್ಯ ನೆಮ್ಮದಿಯಿಂದ ಬದುಕಲಾರ. ಅದು ದೇವಾಲಯದ ಪೂಜೆಯಾದರೂ ಸರಿ. ಅಸಹನೆ ಬಂದೇ ಬಿಡುತ್ತದೆ.

ಹಾಗಾಗಿ ಕೆಲವರು ಸ್ವಂತ  ನಿಯಮವನ್ನು ರೂಢಿಗೆ ತರುತ್ತಾರೆ. ಇಷ್ಟು ಹೊತ್ತಿಗೆ ಪೂಜೆ ದರ್ಶನ. ಸೇವೆ ಆನಂತರ ಯಾವುದೇ ಸೇವೆ ಹರಕೆ ಪೂಜೆಗೆ ಅವಕಾಶ ಇರುವುದಿಲ್ಲ.  ಇಲ್ಲಿಯೂ ಪಾಪ ಅರ್ಚಕರು ಅದನ್ನೇ ರೂಢಿಗೆ ತಂದಿದ್ದರು. ಇದು ನನಗೆ ಸ್ವಲ್ಪ ಅಸ್ವಾಭಾವಿಕವಾಗಿ ಅನುಭವವಾದದ್ದು ನನ್ನ ಅರಿವಿನ ಕೊರತೆ ಇರಬೇಕು.
ನಾನು ಹೋದ ಈ ದೇವಸ್ಥಾನದ ಅರ್ಚಕರು ಇದನ್ನೇ ಹೇಳಿದರು. ಹಾಗಾಗಿಯೇ ಬಂದಕೂಡಲೇ ಕೇಳಿಬಿಡುತ್ತಾರೆ  ಏನು ಬಂದದ್ದು.? ಒಂದಿಷ್ಟು ಒರಟು ಅಂತ ಕಂಡರೂ ಬೇರೆ ನಿರ್ವಾಹವಿಲ್ಲ. ಇಷ್ಟಾದರೂ ಬಂದವರು ಸ್ವತಃ ಬ್ರಾಹ್ಮಣರಾಗಿ ಸ್ವಲ್ಪ ಅಸಮಾಧಾನ ಮಾತನಾಡುವುದಿರುತ್ತದೆ. ತಮ್ಮನ್ನು ತಾವು ಪ್ರತಿಷ್ಥಿತರು ಅಂತ ತೋರಿಸಿಕೊಳ್ಳುವ ಚಪಲ.  ನಿಮ್ಮ ತಂದೆಯವರ ಕಾಲದಲ್ಲಿ ಹೀಗಿಲ್ಲ. ಯಾವಾಗ ಬಂದರೂ ಪೂಜೆ ಪ್ರಸಾದ ಎಲ್ಲ ಸಿಗುತ್ತಿತ್ತು. ಈಗ ಮಕ್ಕಳ ಕಾಲಕ್ಕಾಗುವಾಗ ಹೀಗೆ. ಎಲ್ಲದಕ್ಕೂ ಸಮಯ.. ದೇವರಿಗೂ ರೂಲ್ಸು.  ಹೀಗೆ ಆಕ್ಷೇಪ ಎತ್ತುವ ಅವರ ಮಕ್ಕಳಿಗೆ ಈ ನ್ಯಾಯ ಯಾವುದೂ ಅನ್ವಯವಾಗುವುದಿಲ್ಲ. ಅಪ್ಪ ಮಾಡಿದ್ದನ್ನೇ ಮಗ ಎಲ್ಲಿ ಮಾಡುತ್ತಾನೆ? ಬಡ ಅರ್ಚಕನ ಮಗನ ಮೇಲೆ ನಿಯಮವನ್ನು ಹೇರುವುದಕ್ಕೆ  ಯಾವಾಗಲಾದರೊಮ್ಮೆ ದೇವಸ್ಥಾನಕ್ಕೆ ಭೇಟಿಕೊಡುವವನು ಶ್ರಮಿಸುತ್ತಾನೆ. ಹಲವು  ಸಲ ಹೀಗೆ ಅಸಮಾಧಾನ  ತೋರುವವರು ದೇವಸ್ಥಾನದ ಹೊರ ಗೇಟಿನಲ್ಲಿ ನಮಸ್ಕಾರ ಮಾಡಿ ಅಲ್ಲಿಂದಲೇ ಹೋಗಿ ಜಾಣ್ಮೆಯನ್ನು ಪ್ರದರ್ಶಿಸುತ್ತಾರೆ. ಆಗ ಒಳಗಿನ ದೇವರು ಇಷ್ಟಕ್ಕೇ ಸಾಕು ಎಂದು ತಿಳಿದುಕೊಳ್ಳುವುದರಲ್ಲಿ ಯಾವ ಭಕ್ತಿ ಇದೇಯೋ ಅರ್ಥವಾಗುವುದಿಲ್ಲ.

ದೇವಸ್ಥಾನದ ವಿಶೇಷ ಉತ್ಸವಾದಿ ದಿನಗಳಲ್ಲಿ ಹಲವು ಕಡೆ ನಿತ್ಯದ ಅರ್ಚಕನಿಗೆ ಮನ್ನಣೆಯೇ ಇರುವುದಿಲ್ಲ. ಉತ್ಸವ ಮೂರ್ತಿಯಂತೆ ಉತ್ಸವ ಅರ್ಚಕರೂ ಇರುತ್ತಾರೆ.

ಎರಡು  ಹೊತ್ತು ನೈವೇದ್ಯ..(ಅನ್ನ) ಇರುವ  ದೇವಸ್ಥಾನಗಳಲ್ಲಂತೂ ಇನ್ನೂ ಕಠಿಣ. ನಿತ್ಯದಲ್ಲಿ ಯಾರಾದರೊಬ್ಬ ಭಕ್ತ ಬಂದರೂ  ಅವರಿಗೆ ಊಟದ ವ್ಯವಸ್ಥೆ ಮಾಡಲೇಬೇಕು. ಈ ಎಲ್ಲ ಕಾರಣದಿಂದ ಹೋಗುವ ಭಕ್ತರಿಗೆ ಅನ್ನಿಸಿಬಿಡುತ್ತದೆ ಯಾಕಾದರೂ ಬಂದೆವೋ ಎಂದು. ಇದು ನನ್ನ ಸ್ವಂತ ಅನುಭವ. ಬದುಕಿನ ನಿತ್ಯ ಜಂಜಾಟವನ್ನು ಒಂದಿಷ್ಟು ಪಕ್ಕಕ್ಕಿಟ್ಟು ನೆಮ್ಮದಿ ಅನುಭವಿಸೋಣ ಎಂದು ದೇವರ ಬಳಿ ಬಂದರೆ ಇಲ್ಲೂ ಸಮಸ್ಯೆಗಳು ಬೇರೊಂದು ರೀತಿಯಲ್ಲಿ ಸುತ್ತಿಕೊಳ್ಳುತ್ತದೆ. ಹಾಗಾಗಿ ದೇವಸ್ಥಾನದ ಬ್ರಾಹ್ಮಣರ ವಿಚಾರಕ್ಕೆ ಬಂದರೆ ಅವರ ತಲೆಗೆ ಅವರದೇ ಕೈ. ಬಡ ಬ್ರಾಹ್ಮಣನಿಗೆ ಕೇವಲ ಬಡತನ ಮಾತ್ರ ಸಮಸ್ಯೆಯಾಗಿಲ್ಲ ಎಂದು ದೇವಸ್ಥಾನಗಳಿಗೆ ಭೇಟಿ ಕೊಡುವಾಗ ಮನವರಿಕೆಯಾಗುತ್ತದೆ.

ಈ ಸಮಸ್ಯೆಗೆ ಪರಿಹಾರವಿಲ್ಲವೇ?  ಬೇರೊಂದು ರೀತಿಯಲ್ಲಿ ಯೋಚಿಸುವಾಗ ನನಗೆ ಅನಿಸಿದ ಕೆಲವು ಅಂಶಗಳು.

ವಾಸ್ತವದಲ್ಲಿ ಇಂತಹ ಸಮಸ್ಯೆಗಳಿಗೆ ಸುಲಭವಾದ ಪರಿಹಾರ ಸಾಧ್ಯವಿದೆ. ಆದರೆ ಅದನ್ನು ಕಂಡುಕೊಳ್ಳುವ ಪ್ರಯತ್ನ ಯಾರು ಮಾಡಬೇಕೋ ಅವರು ಮಾಡುವುದಿಲ್ಲ. ಇಂದು ಪ್ರತಿಯೊಂದು ಜಾತಿ ಪಂಗಡಗಳಿಗೂ ತಮ್ಮದೇ ಆದ ’ಸಮಾಜ ’ ಅಂತ ಇರುತ್ತದೆ. ಅದು ಬ್ರಾಹ್ಮಣ ಶೂದ್ರ ಅಂತ ಭೇದವಿಲ್ಲ. ಹೆಚ್ಚಿನ ಎಲ್ಲಾ ಜಾತಿಯವವರೂ ತಮ್ಮದೇ ಒಂದು ಸಮಾಜ ಅಥವಾ ಸಂಘವನ್ನು ಕಟ್ಟಿರುತ್ತಾರೆ.  ತಮ್ಮ ಪಂಗಡಗಳ ಸಮಸ್ಯೆಗಳನ್ನು ಸ್ವತಃ ಪರಿಹರಿಸಿಕೊಳ್ಳುವುದಕ್ಕೆ ಅದೊಂದು ವೇದಿಕೆ.  ಅದೇ ರೀತಿ ಬ್ರಾಹ್ಮಣರಲ್ಲೂ ಬ್ರಾಹ್ಮಣ ಸಮಾಜವಿದೆ. ಆದರೆ ಯಾರೋಬ್ಬರೂ ಈ ಮೂಲಭೂತವಾದ ಸಮಸ್ಯೆಗಳಿಗೆ ಆದ್ಯತೆ ಕೊಡದಿರುವುದು ಆಶ್ಚರ್ಯವನ್ನು ತರುತ್ತದೆ. ಹಾಗಾದರೆ ಈ ಬ್ರಾಹ್ಮಣ ಸಮಾಜ ಇರುವುದು ಯಾವ ಕಾರ್ಯಕ್ಕೆ?

ಒಂದು ಹಳ್ಳಿಯ ದೇವಸ್ಥಾನವೆಂದರೆ ಶುದ್ದ ಸಂಸ್ಕಾರ ರೂಪುಗೊಳ್ಳುವುದೇ ಇಲ್ಲಿಂದ. ಅದೇ ಸಂಸ್ಕಾರ ಜೀವನ ಪರ್ಯಂತ ನಮ್ಮೊಂದಿಗೆ ಇರುತ್ತದೆ. ಆ ಸಂಸ್ಕಾರವನ್ನು ಉಳಿಸುವ ಕೆಲಸವನ್ನು ’ಸಮಾಜ ಅಥವಾ ಸಂಘ’  ಮಾಡಬೇಕಾಗಿದೆ. ದೇವಸ್ಥಾನ ಪೂಜೆ ಪುನಸ್ಕಾರಗಳು ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಶ್ರಮಿಸಬೇಕಾಗಿದೆ. ಆದರೆ ವಾಸ್ತವದಲ್ಲಿ ಸಮಾಜಗಳು ಹೇಗಿರುತ್ತವೆ ಎಂದರೆ ಅದ್ದೂರಿ ಶ್ರೀಮಂತಿಕೆಯ ಸ್ವಪ್ರತಿಷ್ಠೆಯ ’ಕ್ಲಬ್ಬು’  ಗಳಂತೆ ಇರುತ್ತವೆ. ಇಂಹ ಮೂಲ ಭೂತ ಸಮಸ್ಯೆಗಳು ಕಣ್ಣಿಗೆ ಕಾಣಿಸುವುದಿಲ್ಲ. ಯಾವುದೋ ಒಂದು ದೇವಸ್ಥಾನದಲ್ಲಿ ಒಬ್ಬ ಭಟ್ಟ , ನಮ್ಮದೇ ಸಮಾಜದವನಾದರು ಎಲ್ಲಿಗೂ ಹೋಗದೆ ಅನಧಿಕೃತ ಖೈದಿಯಾಗಿದ್ದಾನೆ ಎಂದು ಗಮನಿಸುವುದಕ್ಕೆ ಹೋಗುವುದಿಲ್ಲ. ಅದೇ ಸಮಾಜದ ಗಣ್ಯವ್ಯಕ್ತಿಗಳು ಹೇಗಿರುತ್ತಾರೆ, ತನ್ನ ಮಗ ಒಳ್ಳೆ ಕಲಿತು ನಗರದಲ್ಲಿ ಒಳ್ಳೆ ಮನೆ ಪ್ಲಾಟ್ ಎಲ್ಲ ಮಾಡಿಕೊಂಡು ಆರಾಮವಾಗಿರಲಿ ಎಂದು ಬಯಸುತ್ತಾರೆ ವಿನಃ ಅರ್ಚಕನ ಮಗ ಅರ್ಚಕನೇ ಆಗಿರಲಿ ಮತ್ತವನು ಎಲ್ಲಾ ಹಕ್ಕುಗಳಿಂದ ದೂರವಿದ್ದರೂ ಅವರಿಗೆ ಚಿಂತೆ ಇರುವುದಿಲ್ಲ.  ಬ್ರಾಹ್ಮಣ ಅರ್ಚಕನಾಗುವುದು ಪೂರ್ವ ಜನ್ಮ ಸುಕೃತದ ಫಲ ಎಂದುಕೊಳ್ಳುವುದು ದೂರದ ಮಾತು. ಆತನಿಗೆ ವಿವಾಹಕ್ಕೇ ಹೆಣ್ಣೇ ಸಿಗುವುದಿಲ್ಲ.

ಈಗಿನ ಹಲವು ಸಮಾಜದ ಚಟುವಟಿಕೆಗೆಳು ವಿಚಿತ್ರವಾಗಿರುತ್ತವೆ. ವರ್ಷಕ್ಕೊಮ್ಮೆ ಸರಕಾರಿ ಸಂಘಸಂಸ್ಥೆಯ ಕಾನೂನಿನಂತೆ  ಒಂದು ಸಲ ಮಹಾ ಸಭೆ ಸೇರುತ್ತಾರೆ. ಏನೇನೋ ಕಾರ್ಯಕ್ರಮಗಳು ಇರುತ್ತವೆ. ಲಕ್ಷ ಸಾವಿರ ಖರ್ಚು ಮಾಡಿ ಮಧ್ಯಾಹ್ನ ಭೂರಿ ಭೋಜನ. ಯಾಕೆ ಇದನ್ನೆಲ್ಲ ಸರಳವಾಗಿ ಆಚರಿಸುವುದಕ್ಕೆ ಸಾಧ್ಯವಿಲ್ಲವೇ? ವರ್ಷಕ್ಕೊಮ್ಮೆ ಸೇರಿ ಹೊಟ್ಟೇ ಬಿರಿವಂತೆ ತಿಂದು ಅಪಾನವಾಯು ಬಿಡುವುದಕ್ಕಷ್ಟೇ  ಚಟುವಟಿಕೆ ಸೀಮಿತವೇ.  ಬ್ರಾಹ್ಮಣೊ ಭೋಜನ ಪ್ರಿಯ ಎಂಬುದನ್ನು ಸಾರ್ಥಕ ಪಡಿಸುವ ಇಂತಹ ಆಡಂಬರದ ಆಚರಣೆಗಳು ನಿಲ್ಲಬೇಕು. ಅಲ್ಲದೇ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮ ,  ಕಬಡಿ ವಾಲಿಬಾಲ್ ಕ್ರಿಕೇಟ್ ಆಡಿದ್ದರಲ್ಲಿ ಯಾವ ಬ್ರಾಹ್ಮಣ ಸಂಸ್ಕಾರ ಉದ್ದಾರವಾಗುತ್ತದೆ? ಯುವಜನರನ್ನು ಈ ಕ್ಲಬ್ಬು ಗಳಿ ಆಕರ್ಷಿಸುವುದಕ್ಕೆ ಈ ಕ್ರೀಡೆಗಳು ಅಂತ ಕಾರಣವಿರುತ್ತದೆ. ಈ ಅಕರ್ಷಣೆಯಿಂದ ಬಂದ ಬಂದ ಯುವಕರಿಗೆ ಸಿಗುವ ದರ್ಶನವಾದರೂ ಏನು?  ಸ್ವ ಪ್ರತಿಷ್ಥೆಯ ಒಳ ರಾಜಕೀಯಗಳು.   ಕ್ರೀಡಾ ಸಾಂಸ್ಕೃತಿಕ ಚಟುವಟಿಗೆಗಳಿಗೆಂದೇ ಹಲವ ಸಂಘ ಸಂಸ್ಥೆಗಳಿವೆ.ಆದುದರಿಂದ ಭ್ರಾಹ್ಮಣ್ಯದ ಮೂಲಭೂತ ಅಗತ್ಯಗಳನ್ನು ಚಿಂತಿಸುವಲ್ಲಿ ಸಮಾಜವೇ ಮುಂದೆ ಬರಬೇಕು.  ಸಮಾಜ ಸಂಸ್ಥೆಗಳು ಇಂತಹ ಹಳ್ಳಿಯ ದೇವಸ್ಥಾನಗಳ ಅಳಿವು ಉಳಿವಿನ ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸಬೇಕು. ದೇವಸ್ಥಾನದ ಪೂಜೆಗೆ ಬದಲೀ ಅರ್ಚಕರನ್ನು ನಿಯಮಿಸಬೇಕು. ಕೇವಲ ನಗರದ ಬ್ರಾಹ್ಮಣನಾಗಿ ಶಾಲು ಹೆಗಲಿಗೆ ಸುತ್ತಿಕೊಳ್ಳುವಲ್ಲಿಗೇ ಸಮಾಜದ ಚಟುವಟಿಕೆ ಕ್ರಿಯಾಕ್ಷೇತ್ರ ಸೀಮಿತವಾಗ ಕೂಡದು.  ಒಂದು ಸಮಾಜ ಒಕ್ಕೂಟವಾಗಿ ಮನಸ್ಸು ಮಾಡಿದರೆ ಇಂತಹ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವುದಕ್ಕೆ ಸಾಧ್ಯವಿದೆ. ಅರ್ಚಕ ಪುರೋಹಿತ ವರ್ಗ ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿ ನಿಲ್ಲುವ ಹಂತದಲ್ಲಿ ಸಮಾಜ ಜಾಗರೂಕವಾಗಿರಬೇಕು.

ಇಂದು ಸಮಾಜವೆಂದರೆ ಕೇವಲ ವ್ಯಯಕ್ತಿಕ ಪ್ರತಿಷ್ಠೆಯ ಪ್ರದರ್ಶನದ ವೇದಿಕೆಯಾಗಿದೆ. ( ಎಲ್ಲವೂ ಅಲ್ಲ ) ಗುಂಪುಗಾರಿಕೆ, ರಾಜಕೀಯ ಮತ್ಸರ ಹೀಗೆ ಸ್ವಾರ್ಥ ಸಾಧನೆಯನ್ನೇ ಇಲ್ಲಿ ಕಾಣಬಹುದು. ಸಾರ್ವಜನಿಕ ಜೀವನ,  ಇಂತಹ ಸಂಘ   ಸಂಸ್ಥೆಯ ಚಟುವಟಿಕೆಗಳ ಮುಖ್ಯ ಉದ್ದೇಶ, ನಮ್ಮ ದೈನಂದಿನ ಬದುಕಿನ ಸಮಸ್ಯೆ ಜಂಜಡಗಳಿಂದ ದೂರಾಗಿ ಅಲ್ಲೊಂದಿಷ್ಟು ನೆಮ್ಮದಿಯನ್ನು ಕಾಣುವ ಹಾಗಿರಬೇಕು. ಆದರೆ ಅಲ್ಲೂ ಇದೇ ಆದರೆ ಮತ್ತೆ ಸಾರ್ವಜನಿಕ ಸೇವಾ ಜೀವನದ ಆವಶ್ಯಕತೆಯಾದರೂ ಏನು? ವ್ಯಾವಹಾರಿಕ ಜೀವನದಲ್ಲಿ ಜಗಳ ದ್ವೇಷ ಎಲ್ಲವನ್ನು ಕಾರಣಾಂತರಗಳಿಂದ ಒಪ್ಪಿ ಜೀವನ ಮಾಡುವ ಅನಿವಾರ್ಯತೆ ಇದೆ. ಆದರೆ ಸಮಾದಲ್ಲೂ ಹೋಗಿ ಅದನ್ನೇ ಮಾಡುವುದಾದರೆ ಮನುಷ್ಯ ಹುಟ್ಟಿರುವುದು ಕೇವಲ ಸಮಸ್ಯೆಯನ್ನು ಅನುಭವಿಸುವ ಪರಮೋದ್ದೇಶವೇ?

ಇಂದು ಸಮಾಜ ಸಾರ್ವಜನಿಕವಾಗಿ ಆಚರಿಸುವ ಕಾರ್ಯಕ್ರಮಗಳಿಗಷ್ಟೇ ಮನಸ್ಸು ಮಾಡುತ್ತದೆ. ಬ್ರಾಹ್ಮಣ ಎಂಬ ತತ್ವಕ್ಕೆ ಬದ್ಧವಾಗಿ ಯಾವ ಕಾರ್ಯ ಪ್ರವೃತ್ತಿಯೂ ಇರುವುದಿಲ್ಲ. ಎಷ್ಟು ಜನ ಮನೆಯಲ್ಲಿ ಸಂಧ್ಯಾವಂದನೆ ಮಾಡುತ್ತಾರೆ ? ಎಷ್ಟು ಜನ ತಮ್ಮ ಪಿತೃಗಳ ಶ್ರಾದ್ಧ ಮಾಡುತ್ತಾರೆ? ಆ ಸಮೀಕ್ಷೆ ನಡೆಸಿದರೆ ಗಾಬರಿ ಹುಟ್ಟಿಸುವ ಉತ್ತರಗಳು ಸಿಗುತ್ತವೆ. ಯಾಕೆಂದರೆ ಇವುಗಳೆಲ್ಲ ತೀರಾ ಖಾಸಗಿಯಾಗಿ ಆಚರಿಸುವ ಕಾರ್ಯಕಗಳು. ಇದನ್ನು ಯಾರೂ ನೋಡುವುದಿಲ್ಲ. ಅದೇ ಹತ್ತು ಜನ ಕಾಣುವ ಪ್ರದರ್ಶನ ಪೂಜೆ ಪುನಸ್ಕಾರಗಳನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಬ್ರಾಹ್ಮಣ ಬ್ರಹ್ಮೋಪದೇಶ ಅಂತ ಯಜ್ಞೋಪವಿತ ಸುತ್ತಿದರೆ ಸಾಕೆ? ಬ್ರಾಹ್ಮಣ ಶಬ್ದದ ಅರ್ಥವನ್ನೂ ಅರಿಯುವ ಪ್ರಯತ್ನ ಮಾಡಬೇಕು. ಸ್ವಂತ ಪಿತೃಗಳ ಶ್ರಾದ್ದಮಾಡಿ ತರ್ಪಣ ಬಿಡದವರೂ ಉಪಾಕರ್ಮದಂತಹ ಕಾರ್ಯಗಳಲ್ಲಿ ಶಾಲು ಹೊದೆದು ಮುಂಚೂಣಿಯಲ್ಲಿ ಮಿಂಚುತ್ತಾರೆ. ಯಾಕೆ? ಇದನ್ನು ನೋಡುವುದಕ್ಕೆ ಹಲವರು ಇರುತ್ತಾರೆ. ಕತ್ತಲೆಯಲ್ಲಿ ಬಿಡುವ ಪಿತೃ ತರ್ಪಣ ಯಾರು ನೋಡುತ್ತಾರೆ?  ಕಾಟಾಚಾರದ ಆಚರಣೆಗಳು ಕೇವಲ ಇನ್ನೊಬ್ಬರಿಗೆ ಪ್ರದರ್ಶನ ವಿಚಾರವನ್ನು ಮಾತ್ರ ಆಧರಿಸುತ್ತದೆ.  ’ನಮೋ ಬ್ರಹ್ಮಣೇ ಪ್ರಜಾಪತಿ...’ ಅಂತ ಮಂತ್ರ ಹೇಳಿ ಆ ಬ್ರಹ್ಮ ಪದದತ್ತ ದೃಷ್ಟಿ ಹರಿಸುವಾಗ ಅಲ್ಲಿಗೆ ಸಂಚರಿಸುವ ಮಾರ್ಗವೂ ಮುಖ್ಯವಾಗಿರುತ್ತದೆ. ಕಾಟಾಚಾರದ ಆಚರಣೆ ಈ ಪದವಿಯನ್ನು ಒದಗಿಸುವುದಿಲ್ಲ. ಹಲವು ಸಲ ಕಾಟಾಚಾರಕ್ಕೆ ಮಾಡುವ ಜಪ ತಪಗಳು ಹೇಗಿರುತ್ತವೆ ಎಂದರೆ ಪರಮಾತ್ಮನೇ ಸ್ವತಃ   ಬಂದು ಇವರ ಕಾಲು ಹಿಡಿದು ಬೇಡುತ್ತಿರಬೇಕು ಅಂತ ಅನ್ನಿಸುತ್ತದೆ.  ಅಷ್ಟು ಅಸಡ್ಡೆ.   ಸಮಾಜ ಈ ವಿಚಾರಗಳಲ್ಲಿ ಜಾಗೃತಿಯನ್ನು ಉಂಟು ಮಾಡಿ ಬ್ರಾಹ್ಮಣ ಸಂಸ್ಕಾರದ ಮೂಲಭೂತ ತತ್ವವನ್ನು ಉಳಿಸುವಲ್ಲಿ ಶ್ರಮಿಸಬೇಕು. ಅದ್ದೂರಿ ಭೋಜನ ಮಾಡದೇ ಇದ್ದರೂ ತೊಂದರೆ ಇಲ್ಲ. ಈಗ ಒಪ್ಪೊತ್ತಿನ ಊಟ ಇಲ್ಲದ ಬಡ ಬ್ರಾಹ್ಮಣರ ಸಂಖ್ಯೆ ಬಹಳ ಕಡಿಮೆ ಇದೆ.  ಬ್ರಾಹ್ಮಣ ಭೋಜನ ಪ್ರಿಯ ಅಂತ ಹೇಳುವಷ್ಟೂ ಆರೋಗ್ಯ ನೆಟ್ಟಗಿರುವುದಿಲ್ಲ.

ಸಮಾಜ, ಕೇವಲ ಸಮಾಜಮುಖಿಯಾಗಿ ಚಿಂತಿಸಿದರೆ ಸಾಲದು. ಸಂಸ್ಕಾರ ಮುಖಿಯಾಗಿಯೂ ಚಿಂತಿಸಬೇಕು..    ಹಾಗಿದ್ದಲ್ಲಿ ಮೂಲಭೂತವಾದ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಾಗುತ್ತದೆ. ಪರಸ್ಪರ ಸೌಹಾರ್ದ ಬದುಕೂ ಸಾಧ್ಯವಾಗುತ್ತದೆ. ಶುದ್ದ ಸಂಸ್ಕಾರಗಳು ಶಿಥಿಲವಾದರೆ ಸಮಾಜವು ಶಿಥಿಲವಾದಂತೆ ಹೆಸರು ಪ್ರತಿಷ್ಥೆ ಇವುಗಳಿಂದ ಸಮಾಜ ಹೊರತಾಗಿ ಚಿಂತಿಸಬೇಕಾಗಿದೆ.


Friday, July 26, 2019

ನನ್ನ ಅಮ್ಮ....ಅಮ್ಮನಲ್ಲ



ದಚ್ಚು ಮಾವ, ಸಾಕಷ್ಟು ಬದಲಾಗಿದ್ದಾರೆ. ಬಹಳ ಹಿಂದೆ ಕಂಡಿದ್ದೆ. ಈಗ ಮುಖತುಂಬ ಗಡ್ಡ ತುಂಬಿಸಿ ಒಂದಷ್ಟು ಹೊಟ್ಟೆ ಬೆಳಸಿ ದೇಹ ಬದಲಾಯಿಸಿದ್ದು ಮಾತ್ರವಲ್ಲ. ಅವರ ಮನಸ್ಸು ಬದಲಾಗಿದೆ ಅಂತ ಅನ್ನಿಸಿದೆ. ಮೊದಲೆಲ್ಲ ನನ್ನಲ್ಲಿ ಹಾಸ್ಯವಾಗಿ ತಮಾಷೆಯಾಗಿ ಮಾತನಾಡುತ್ತಿದ್ದವರು ಇಂದು ಕಂಡಕೂಡಲೇ ಗಂಭೀರವಾಗಿ ನಕ್ಕು ಸುಮ್ಮನಾಗಿದ್ದರು.  ಇಂದು ಬಹಳ ಸಮಯದ ನಂತರ ಕಾಣುತ್ತಿದ್ದೇನೆ. ದಚ್ಚು ಮಾವ ಬದಲಾದ ಬಗೆಗಾಗಲೀ, ಗಂಭೀರವಾಗಿ ಇದ್ದ ಬಗೆಗಾಗಲೀ ಯೋಚಿಸುತ್ತಿಲ್ಲ. ಬದಲಿಗೆ ಅವರು ಹೇಳಿದ ಒಂದು ವಿಚಾರ ಮತ್ತಷ್ಟು ನಾನೇ ಗಂಭೀರವಾಗಬೇಕು ಎಂಬಂತಿತ್ತು.

ದೇವಣ್ಣನ ಮನೆಯಲ್ಲಿ ನಾಳೆ ತ್ರಿಕಾಲ ಪೂಜೆ ಇದೆ. ಹಾಗಾಗಿ ಇಂದು ರಾತ್ರಿ ತರಕಾರಿ ಹೆಚ್ಚುವುದರಿಂದ ತೊಡಗಿ ಹಲವು ಕೆಲಸಗಳು ಇರುವುದರಿಂದ  ವಾಡಿಕೆಯಂತೆ ನೆರೆಕರೆಯವರು ಕೆಲವರು ಸೇರಿದ್ದರು.  ತಮಾಷೆಯಾಗಿ ಹರಟೆ ಹೊಡೆಯುತ್ತಾ ಎಲ್ಲರೂ ಸೇರಿ ತರಕಾರಿ ಹೆಚ್ಚುವುದರಿಂದ ತೊಡಗಿ ನಾಳೆಯ ಅಡುಗೆಗೆ ಸಿದ್ದ ಮಾಡುವುದು ಒಂದು ರೀತಿಯಲ್ಲಿ ಮಜ ಉಡಾಯಿಸಿದಂತೆ. ಅದೊಂದು ಸಂಭ್ರಮದ ಮತ್ತು ಸಂತೋಷದ ವಾತಾವರಣ. ಸಾಮಾನ್ಯವಾಗಿ ಎಲ್ಲರೂ ಪ್ರತಿ ಸಲವೂ ಕಾಣುವವರೇ  ಇಂದು ಕೂಡ ಬಂದಿದ್ದರು. ಅದು ಎಲ್ಲರೂ ಸೌಹಾರ್ದವಾಗಿ ಮಾಡುವ ಸೇವೆ.  ಆದರೆ ನಾವು ಹೋಗುವ ಮೊದಲೇ ದಚ್ಚು ಮಾವ ಬಿಳಿ ಬನಿಯನು ಮತ್ತು ವೇಷ್ಟಿ ಸುತ್ತಿ ಚಪ್ಪರದ ತುಂಬ ಓಡಾಡುತ್ತಿದ್ದರು. ಆಶ್ಚರ್ಯವಾದರೂ ಖುಷಿಯಾಗಿತ್ತು. ದಚ್ಚು ಮಾವನನ್ನು ಕಾಣುವುದೇ ಅಪರೂಪ. ಅವರಿದ್ದರೆ ಇಂತಹ ಕೂಟಗಳಿಗೆ ಕಳೆ ಕಟ್ಟುತ್ತದೆ. ಅರಳು ಹುರಿದಂತೆ ಮಾತನಾಡುತ್ತಾ, ಕೆಲಸಗಳಿಗೆ ನಿರ್ದೇಶನವನ್ನು ಕೊಡುತ್ತ ಒಂದು ರೀತಿಯ ಮೇಲು ಉಸ್ತುವಾರಿಯನ್ನು ಅವರು ನಿಭಾಯಿಸುವ ರೀತಿ ಬಹಳ ಉತ್ಸಾಹವನ್ನು ತರುತ್ತಿತ್ತು. ಮಾವನನ್ನು ಕಾಣದೆ ಈಗ ಎರಡು ಮೂರು ವರ್ಷವಾದರೂ ಆಗಿರಬೇಕು ಎಂದನಿಸಿತ್ತು.

ದಚ್ಚುಮಾವ...ಎಲ್ಲರಿಂದಲೂ ಮಾವ ಎಂದು ಕರೆಸಿಕೊಳ್ಳುತ್ತಿದ್ದರು. ಸ್ವಂತ ಸಂಭಂಧಿಗಳು ಎಲ್ಲರೂ ಸಂಭಂಧದಲ್ಲಿ ದೂರ ದೂರ. ಆದರೂ ಮಾವ ಅತ್ಮೀಯರಾಗಿದ್ದರು. ತನ್ನದೇ ಸ್ವಂತ ಮನೆ ಅಂತ ಇಂದಿಗೂ ಇಲ್ಲ. ಇದ್ದ ಒಬ್ಬಳು ಹೆಂಡತಿ ತೀರಿಕೊಂಡ ಬಳಿಕ ಸಂತತಿ ಇಲ್ಲದ ಇವರು ಮನೆ ಮನೆಗೆ ಅತಿಥಿಗಳಾಗಿದ್ದರು. ಕೈಯಲ್ಲಿ ಒಂದು ಕೊಡೆ ಹೆಗಲಲ್ಲಿ ಒಂದು ಚೀಲ. ಹಳೆಯ ಚಂದ್ರನಾ ಬ್ರದರ್ಸ್ ನ ಬಟ್ಟೆ ಅಂಗಡಿಯಿಂದ ಅದಾವಾಗಲೋ ಕೊಂಡುಕೊಂಡ ಬಟ್ಟೆಯ ಜತೆಗೆ ಬಂದ ಚೀಲವದು. ಎಲ್ಲಿ ಹೋಗುತ್ತಿದ್ದರೂ ಚಂದ್ರನಾ ಬ್ರದರ್ಸ್  ಚೀಲ ಹೆಗಲ ಮೇಲಿರುತ್ತಿತ್ತು. ಅವರದ್ಡೇ ಆದ ಬಟ್ಟೆ ಬರೆ, ತಾಂಬೂಲದ ಪೆಟ್ಟಿಗೆ ಒಂದು ಚಿಕ್ಕ ಹರಿತವಾದ ಚಾಕು. ಹೀಗೆ ಮಿತವಾದ ಸಾಮಾಗ್ರಿಗಳು.  ಹಳೆಯ ಮಾಸಿದ ಆ ಚೀಲದಲ್ಲಿ ಚಂದ್ರನಾ ಬ್ರದರ್ಸ್ ಅಂತ ಬರೆದದ್ದು ಈಗಲೂ ಕಾಣುತ್ತದೆ. ಮಾಸಿದ್ದರೂ ದಚ್ಚು ಮಾವನಂತೆ ಅದು ಸ್ವಚ್ಛ.  ಅತಿಯಾಗಿ ಎಲ್ಲೂ ಬೆರೆತುಕೊಳ್ಳದ ಸ್ವಭಾವವಾದರೂ ಎಲ್ಲ ಮನೆಗೂ ಓಡಾಡಿಕೊಂಡು ಅಲ್ಲಿಯ ಪ್ರತಿ ಕಾರ್ಯಕ್ರಮದಲ್ಲೂ ಒಬ್ಬರಾಗಿ ಬಿಡುತ್ತಿದ್ದರು.  ಹಲವು ಸಲ ಒಂದೊಂದು ಮನೆಗೆ ಹೋದರೆ ಕೆಲವು ದಿನ ಅಲ್ಲಿಯವರೇ  ಆಗಿ ಅಲ್ಲಿ ಚಿಲ್ಲರೆ ಪಲ್ಲರೆ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇಂದು ದಚ್ಚುಮಾವನನ್ನು ಕಂಡಕೂಡಲೇ ತುಂಬ ಹುರುಪಿನಲ್ಲಿ ಇದ್ದಂತೆ ಕಂಡರು. ನನ್ನಲ್ಲಿ ಬಹಳಷ್ಟು ಮಾತುಗಳಾಡುತ್ತಿದ್ದರು.  ಹಾಗೇ ಹಾಗೆ ಮತಾನಾಡುತ್ತಿದ್ದರೆ,

ಎಲ್ಲವೂ ಸರಿ ಇತ್ತು.  ಆದರೆ ದಚ್ಚು ಮಾವ ಹೇಳಿದ ಆ  ಒಂದು ವಿಚಾರ ನನ್ನ ಅಸ್ತಿತ್ವವನ್ನೆ ಅಲುಗಾಡಿಸುವಂತೆ ಮಾಡಿತ್ತು.

ಯೋಚನೆಯ ಕೊಂಡಿ ಹರಿದು ಮನಸ್ಸು ಬಹಳ ಹಿಂದಕ್ಕೆ ಓಡುತ್ತದೆ.  ಬಹಳ ಹಿಂದೆ ಅಂದರೆ ಬಹಳ ಹಿಂದೆ.  ನಾನು ಮೂರನೆಯ ತರಗತಿಯ ಪುಟ್ಟ ಬಾಲಕನಾಗಿದ್ದಾಗಿನ ಒಂದು ಘಟನೆ.

ಶಾಲೆಯ ಜಗಲಿಯಲ್ಲಿ ಯಾರೋ ಅಡ್ಡಾಡಿದ ಹಾಗೆ ನೆರಳು ಅತ್ತಿತ್ತ ಚಲಿಸುವುದನ್ನು ಕಂಡ ಪುಟ್ಟ ಮಕ್ಕಳ ದೃಷ್ಣಿ ಪಠ್ಯ ಪುಸ್ತಕವನ್ನು ಬದಲಿಸಿ ಹೊರಗೆ ನೋಡುವಂತೆ ಮಾಡಿತು.  ಮೂಗಿನ ಮೇಲಿದ್ದ ಕನ್ನಡಕದ ಮೇಲಿನ ಭಾಗದಿಂದ ಶೆಟ್ಟಿ ಮಾಸ್ಟರು ಜಗಲಿಯತ್ತ ನೋಡಿದರು. ಬಾಗಿಲ ಅಚೆಗೆ ಯಾರೋ ನಿಂತಹಾಗೆ ಕಂಡು ಅತ್ತ ಹೋಗಿ ನೋಡಿದರು. ಒಬ್ಬಾಕೆ ಹೆಂಗಸು. ಕಣ್ಣು ಪಿಳಿ ಪಿಳಿ ಮಾಡುತ್ತಾ ನಿಂತಿದ್ದಳು. ಮಾಸಿದ ಬಟ್ಟೆ ದಣಿದ ಮುಖ ಮಾಸ್ಟರು ಅನುಕಂಪದ ನೋಟದಲ್ಲೇ ತಲೆ ಆಡಿಸಿ ಕೇಳಿದರು “ ಯಾರು ಬೇಕು?”

ಹೆಂಗಸು ಅಳುಕುತ್ತಾ ಹೇಳಿದಳು...”ವಿಶು ಕುಮಾರ “  ನಂತರ ನಡುಗುವ ಕೈಗಳಳಿಂದ ಒಂದು ಕೆಂಪು ಪೆನ್ನು ತೆಗೆದು ಮಾಸ್ಟರ ಕೈಗೆ ಇತ್ತಳು.  ಕೆಂಪು ಪೆನ್ನು ಬಹಳ ಸುಂದರವಾಗಿತ್ತು. ಶಾಲೆಯ ಬಳಿಯಲ್ಲೇ ಇದ್ದ ಬಾಬಣ್ಣನ ಅಂಗಡಿಯಿಂದ ಕೊಂಡ ಪೆನ್ನು ಎಂದು,  ಆ ಪೆನ್ನು ದೂರದಿಂದ ಕಂಡಕೂಡಲೆ ಮಕ್ಕಳೆಲ್ಲ ಊಹಿಸಿದರು.

ಹೆಂಗಸು ನಂತರ ಮೆತ್ತಗಿನ ಸ್ವರದಲ್ಲಿ ಮಾಸ್ಟರಲ್ಲಿ ಬೇಡಿಕೊಳ್ಳುವಂತೆ ಕೇಳಿಕೊಂಡಳು.
 “ ಸುಮಾರು ದಿನ ಆಯ್ತು..ಪೆನ್ನು ಬೇಕು, ಮಾಸ್ಟ್ರು ತರಲಿಕ್ಕೆ ಹೇಳಿದ್ದಾರೆ ಅಂತ ಹೇಳ್ತಿದ್ದ. ಬೆಳಗ್ಗೆ ಹಟ ಮಾಡಿ ಶಾಲೆಗೆ ಬಂದಿದ್ದ. ಪೆನ್ನಿಗೆ  ದುಡ್ಡು ಇಲ್ಲದೇ  ದನಿಗಳತ್ರ  ರೂಪಾಯಿ  ಸಾಲ ಕೇಳೀದೆ.  ಇವತ್ತು ಸಿಕ್ಕಿತು. ಎಲ್ಲಿ ಬೈಗುಳ ತಿಂತಾನೋ ಅಂತ  ಹಾಗೆ ಶಾಲೆಗೇ ತಂದೆ.”

ಮಾಸ್ಟ್ರು “ವಿಶು ಕುಮಾರ”  ಎಂದು ಕರೆದಾಗ ನಾನು ತಲೆ ತಗ್ಗಿಸಿದೆ. ಅಮ್ಮ ಹೀಗೆ ಶಾಲೆಗೆ ಬರುತ್ತಾಳೆ ಎಂದು ನಾನು ಊಹಿಸಿರಲಿಲ್ಲ. ತೋಟದ ಕೆಲಸಕ್ಕೆ ಹೋಗುವ ಬಟ್ಟೆಯಲ್ಲೇ ಶಾಲೆಗೆ ಗಡಿಬಿಡಿಯಲ್ಲಿ ಬಂದಿದ್ದಳು.

ಮಾಸ್ಟರ್ ದೊಡ್ಡ ಧ್ವನಿಯಲ್ಲಿ ಇಡೀ ತರಗತಿ ಕೇಳುವಂತೆ ಹೇಳಿದರು ತಲೆ ತಗ್ಗಿಸಿ ಮಾಸ್ಟರ ಕಡೆಗೆ ಹೆದರಿ ಹೆದರಿ ನೋಡಿದೆ. ಹಾಗೆ ಹೆದರುವುದಕ್ಕೆ ಒಂದು ಕಾರಣವಿದೆ.  ನಮ್ಮದು ಮೂರನೇಯ ತರಗತಿ. ನಮ್ಮಲ್ಲಿ ಇನ್ನೂ ಪೆನ್ನು ಬಳಕೆಗೆ ಬಂದಿರಲಿಲ್ಲ. ಬಳಪದ ಕಡ್ಡಿ ಮತ್ತೆ ಲೆಕ್ಕದ ಪುಸ್ತಕದಲ್ಲಿ ಬರೆಯುವುದಕ್ಕೆ ಪೆನ್ಸಿಲ್.   ಇಷ್ಟೆ.   ಪೆನ್ನು ಮೂರನೇ ತರಗತಿಗೆ ಅಗತ್ಯವಿರಲಿಲ್ಲ. ಚಿಕ್ಕ ಮಕ್ಕಳಲ್ಲವೇ?  ಆಗಿನ ಕಾಲದಲ್ಲಿ ಪೆನ್ನು ಎಂದರೆ ಪ್ರತಿಷ್ಠೆಯ ಸಂಕೇತ. ಐದು ಆರನೆಯ ತರಗತಿಯಿಂದ ನಂತರ ಇಂಗ್ಲೀಷ್ ಪಠ್ಯ ಶುರುವಾಗುತ್ತದೆ. ಆಗಲೇ ಪೆನ್ನು ತರುವಂತೆ ಮಕ್ಕಳಿಗೆ ಹೇಳುತ್ತಿದ್ದರು. ಬಹುಶಃ ಇಂಗ್ಲೀಷ್ ಬರೆಯಬೇಕಿದ್ದರೆ ಪೆನ್ನು ಅಗತ್ಯವೇನೋ.? ಪುಟ್ಟ ಮಕ್ಕಳ ಭಾವನೆ. ಆದರೆ ಕ್ಲಾಸ್ ನಲ್ಲಿ ಇಸ್ಮಾಯಿಲ್ ನ ಕೈಯಲ್ಲಿ ಮಿರಿ ಮಿರಿ ಮಿಂಚುವ ಪೆನ್ನು ಕಂಡು ನನಗೂ ಬೇಕು ಅಂತ ಆಶೆಯಾಗಿತ್ತು. ಆದರೆ ಹೇಗೆ. ಇಸ್ಮಾಯಿಲ್ ಗೆ ಅಪ್ಪ ಬೊಂಬಾಯಿಂದ ಬರುವಾಗ ತಂದು ಕೊಟ್ಟ ಪೆನ್ನನ್ನು ಜಂಭದಿಂದ ತಂದಿದ್ದ. ಒಂದಷ್ಟು ದಿನ ಮಾಸ್ತರಿಗೆ  ತೊರಿಸದೇ ಅಡಗಿಸಿ ಇಟ್ಟರೂ ಕೊನೆಗೊಂದು ದಿನ ಗೊತ್ತಾಗಿತ್ತು. ಇಸ್ಮಾಯಿಲ್ ನ ಪೆನ್ನಿನಂತೆ ಅಲ್ಲದೇ ಇದ್ದರೂ ಬಾಬಣ್ಣನ ಅಂಗಡಿಯಲ್ಲಿರುವ ಪೆನ್ನು ಕೊಳ್ಳುವ ಆಶೆಯಾಗಿತ್ತು. ಹೊರಗಿನಿಂದ ನೋಡಿದರೆ ಒಳಗಿನ ಶಾಯಿ ಎಷ್ಟು ಇದೆ  ಅಂತ ಗೊತ್ತಾಗುವ ಪೆನ್ನು. ಆದರೆ ಕೊಳ್ಳುವ ಬಗೆ ಹೇಗೆ.? ಹಾಗೆ ಅಮ್ಮನಲ್ಲಿ ಒಂದು ಸುಳ್ಳು ಹೇಳಿದೆ. ಶಾಲೆಯಲ್ಲಿ ಪೆನ್ನು ತರಲು ಹೇಳಿದ್ದಾರೆ.  

ಹೀಗೆ ನಾನು ಸುಳ್ಳು ಹೇಳುವುದಕ್ಕೂ ಒಂದು ನನ್ನದೇ ಸಮಜಾಯಿಷಿಕೆ ಇತ್ತು.  ಟೈಂ ಟೇಬಲ್ ನ ಕಾಲು ಮುರಿದಿದೆ, ರಿಪೇರಿಗೆ ದುಡ್ಡು ತರಲಿಕ್ಕೆ ಹೇಳಿದ್ದಾರೆ ಅಂತ ಮನೆಯಿಂದ ದುಡ್ಡು ತಂದು, ಅದೂ ಇದೂ ಅಂತ ಖರ್ಚು ಮಾಡುವವರಿದ್ದರು. ಅವರಿಗಿಂತಲೂ ನನ್ನ ಸುಳ್ಳು ದೊಡ್ಡದಲ್ಲ ಎಂಬ ಭಾವನೆ.

ನಿಜಕ್ಕಾದರೆ ಶಾಲೆಯಲ್ಲಿ ಹೇಳಿರಲೇ ಇಲ್ಲ. ಇದೀಗ ಅಮ್ಮ ಶಾಲೆಗೆ ತಂದಿದ್ದಾರೆ. ಮಾಸ್ತರು ದೊಡ್ಡ ಕಣ್ಣು ಮಾಡಿ ನನ್ನತ್ತವೇ ನೋಡುತ್ತಿದ್ದಾರೆ.   ಪೆನ್ನು...ಮೂರನೇ ಕ್ಲಾಸಿಗೆ ಅಗತ್ಯ ಇಲ್ಲ. ಅವನು ಸುಳ್ಳು ಹೇಳಿದ್ದಾನೆ.”

ಅಮ್ಮ ಒಂದಷ್ಟು ಹೊತ್ತು ನೋಡಿ ಪೆನ್ನು ಕೊಟ್ಟು ಹೋದಳು. ಆದರೆ ಮಾಸ್ತರು ಪೆನ್ನನ್ನು ಕೊಡದೇ ಮೇಜಿನ ಮೇಲಿಟ್ಟರು.

ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದೆ. ಅಮ್ಮ ಹೋದನಂತರ ಶಾಲೆಯ ಬಳಿಯ ಗೋಳಿ ಮರದ ಕಟ್ಟೆಗೆ ಹತ್ತು ಸುತ್ತು ಓಡಿಸಿ ನಂತರ ಮಾಸ್ಟರು ಆಪೀಸ್ ರೂಮಿಗೆ ಕರೆದು ಬುದ್ದಿವಾದ ಹೇಳಿದರು.  ಪೆನ್ನು ಕೈಗಿತ್ತು ಈಗ ಶಾಲೆಗೆ ತರಬೇಡ ಪಾಸಾಗಿ ಆರನೇ ಕ್ಲಾಸಿಗೆ ಹೋಗುವಾಗ ಉಪಯೋಗವಾಗುತ್ತದೆ. ಜೋಪಾನವಾಗಿ ಇಡು ಅಂತ ಉಪದೇಶ ಮಾಡಿದರು.

ಶಾಲೆ ಬಿಟ್ಟ ಮೇಲೆ ಮನೆಗೆ ಹೆದರಿ ಹೆದರಿ ತಲೆ ತಗ್ಗಿಸಿ ಹೋಗಿದ್ದೆ. ಅಮ್ಮ ಮನೆಯಲ್ಲೇ ಇದ್ದರು. ಅಮ್ಮನ ಮುಖ ನೋಡದೇ ಶಾಲೆ ಚೀಲ ಗೋಡೆಗೆ ನೇತಾಡಿಸಿ ಕೈಕಾಲು ತೊಳೆದು ಬಂದೆ. ಅಮ್ಮ ಯಾವ ರೀತಿಯಲ್ಲಿ ಬೈಯ್ಯಬಹುದು ಅಂತ ನಿರೀಕ್ಷೆಯಲ್ಲಿದ್ದವನಿಗೆ ಅಮ್ಮ ಹತ್ತಿರ ಬಂದು ದನಿಗಳ ಮನೆಯಿಂದ ತಂದ ತಿಂಡಿಯಷ್ಟನ್ನು ಕೈಗೆ ಇತ್ತರು.  ಹಸಿವಾಗ್ತಾ ಇದೆಯಾ? ದೋಸೆ ಮಾಡಿಕೊಡಲಾ?  ಅಂತ ಕೇಳಿದಳು. ಅದೆಲ್ಲ ನಿತ್ಯ ವಾಡಿಕೆಯ ಮಾತುಗಳು. ಏನೂ ಆಗಿಲ್ಲವೆಂಬಂತೆ ಅಮ್ಮ ಮಾತನಾಡುತ್ತಿದ್ದರು. ನನ್ನ ಆತಂಕ ಹಾಗೇ ಇತ್ತು. ಕೊನೆಯಲ್ಲಿ ಕೇಳಿದರು

 “ಪೆನ್ನು ಚೆನ್ನಾಗಿತ್ತಾ. ಬಾಬಣ್ಣ ಚೆಂದ ಉಂಟು ಅಂತ ಕೊಟ್ಟ. “

ನನ್ನ ಧ್ವನಿ ಗಂಟಲಲ್ಲೇ ಉಳಿದು ಬಿಟ್ಟಿತು. ಅಮ್ಮನ ಸೊಂಟ ತಬ್ಬಿ ಜೋರಾಗಿ ಅತ್ತು ಬಿಟ್ಟೆ. ಇನ್ನೆಲ್ಲಿ  ಅಮ್ಮ ಬೈದು ಬಿಡುವಳೋ  ಎಂಬ ಆತಂಕ. ಅಮ್ಮ ತಲೆಯಲ್ಲಿ ಕೈಯಾಡಿಸಿ ಹೇಳಿದರು...

“ಅಳ್ಬೇಡ ಕುಮಾರೂ. ಯಾಕಳ್ತಿಯಾ? ಸುಳ್ಳು ಹೇಳಿದಿಯಾ ಅಂತ ನನಗೆ ಸಿಟ್ಟಿಲ್ಲ. ಇಷ್ಟು ದಿನ ನಿನ್ನ ಆಶೆ ನಾನು ಕಾಣಲೇ ಇಲ್ಲವಲ್ಲ? ಇರಲಿ ಬಿಡು. ಇನ್ನು ಹೀಗೆ ಮಾಡಬೇಡ. ಹಾಗೆಲ್ಲ ಅಪ್ಪ ಅಮ್ಮನಲ್ಲಿ ಸುಳ್ಳು ಹೇಳ್ಬಾರದು. ಕೆಟ್ಟ ಮಕ್ಕಳು ಅಂತ ಹೇಳ್ತಾರೆ. “

ಎಲ್ಲರಂತಲ್ಲ ನನ್ನಮ್ಮ ಅಂತ ಅನ್ನಿಸಿದ್ದು ಅಂದಿನಿಂದ. ಪುಟ್ಟ ಬಾಲಕನಾದರೂ ಸೀಮಿತವಾದ ಬಾಲ ಬುದ್ಧಿ ಅಂದೇ ತೀರ್ಮಾನ ಮಾಡಿತ್ತು. ನನ್ನಮ್ಮ ಪಾಪ . ನಾನು ಆಕೆಯಲ್ಲಿ ಸುಳ್ಳು ಹೇಳಬಾರದು ಅಂತ.

ಯಾರದೋ ಮನೆಗೆ ತೋಟಕ್ಕೆ ಅಡಿಗೆಗೆ  ಕೆಲಸಕ್ಕೆ ಹೋಗುವ ನನ್ನಮ್ಮ, ಅದೆಷ್ಟು ಕಷ್ಟದಿಂದ ಆ ಪೆನ್ನು ತಂದಿರಬಹುದು? ಎರಡು ದಿನ ಊಟಕ್ಕೆ ಆಗುವಷ್ಟು ಅಕ್ಕಿ ತರಬಹುದಿತ್ತು. ಆದರೂ ಅಮ್ಮ ಯೋಚಿಸದೇ ತಂದು ಕೊಟ್ಟಿದ್ದಳು. ಅದೂ ಶಾಲೆಗೆ ಬಂದು ಕೊಡಬೇಕಿದ್ದರೆ. ಛೇ ಇಂತಹ ಅಮ್ಮನಲ್ಲಿ ಸುಳ್ಳು ಹೇಳಿದೆನಲ್ಲಾ?  ಬಹಳ ದಿನ ಕಳೆದು ದೊಡ್ಡವನಾದಾಗ ಇದು ಬಹಳ ದೊಡ್ಡ ವಿಚಾರವಾಗಿ ಕಂಡಿತ್ತು. ಇಂತಹ ಹಲವು ಘಟನೆಗಳು ನನ್ನ ಮತ್ತು ನನ್ನಮ್ಮನ ನಡುವೆ ನಡೆದಿತ್ತು. ನನ್ನಮ್ಮ ಎಂದಿಗೂ ನನ್ನಾಶೆಗೆ ಎದುರು ಮಾತನಾಡಿಲ್ಲ. ಬದಲಿಗೆ ತನ್ನ ಗುಣಗಳಿಂದಲೇ ನನ್ನಾಶೆಗೆ ನಿಯಂತ್ರಣ ರೇಖೆಯನ್ನು ಎಳೆದು ಬಿಡುತ್ತಿದ್ದಳು. ನಾನು ನನ್ನ ಹಲವು ಆಶೆಗಳನ್ನು ಹತ್ತಿಕ್ಕತೊಡಗಿ ಬುದ್ದಿವಂತ ಅಂತ ತೋರಿಸಿಕೊಡುತ್ತಿದ್ದೆ.

ಎಲ್ಲ ಅಮ್ಮಂದಿರು ಹಾಗಿದ್ದರೂ, ನನ್ನಮ್ಮನ ಬಗ್ಗೆ ನನಗೆ ಹೇಳಿಕೊಳ್ಳಲು ಬಹಳಷ್ಟಿತ್ತು. ಅಪ್ಪ ತೀರಿ ಹೋದ ನಂತರ ಏಕಾಂಗಿಯಾಗಿಯೇ ಅಮ್ಮ ನನ್ನನ್ನು ಸಾಕಿದ್ದರು . ಈ ಶಾಂತಮ್ಮನಿಗೆ  ನಾನೊಬ್ಬನೇ ಮಗ. ಹಾಗೆ ನೋಡಿದರೆ ನನಗೆ ಅಪ್ಪನನ್ನು ನೋಡಿದ ನೆನಪೇ ಇಲ್ಲ. ಬುದ್ದಿ ಬಂದಾಗಿನಿಂದ ಅಪ್ಪ ಅಮ್ಮ ಎಲ್ಲ ಒಂದೇ. ಅಪ್ಪ ಎಂಬ ಹಾಗೊಂದು ಪಾತ್ರದ ಪರಿಚಯವಾದದ್ದೇ ಶಾಲೆಗೆ ಬಂದ ಮೇಲೆ. ಆದರೂ ಅಪ್ಪನಿಲ್ಲದ ಕೊರತೆ ಅಮ್ಮ ಎಂದೂ ಉಂಟು ಮಾಡಿಲ್ಲ. ಹರಿದ ತೇಪೆ ಹಾಕಿದ ಸೀರೆ ಅದು ಹೇಗೆ ಉಟ್ಟರೂ ಹರಿದ ಲಂಗದ  ಅಂಚು ಮೊಣಕಾಲ ಕೆಳಗೆ ಕಾಣುತ್ತಿತ್ತು. ತೋಟದ ಕೆಲಸ ಹಟ್ಟಿ ಕೆಲಸ ಮಾಡುವಾಗ ಬಟ್ಟೇ ಎತ್ತಿಕಟ್ಟಿ ಅಮ್ಮ ಗಂಡಾಳಿನಂತೆ ದುಡಿಯುತ್ತಿದ್ದರು. ಬಹಳ ಕಠಿನ ಪರಿಶ್ರಮಿ ನನ್ನಮ್ಮ.  ಅಮ್ಮ ಎಂದೂ ಸಡಗರದಿಂದ ಹೊರಟದ್ದು ನೋಡಿದ್ದು ಕಮ್ಮಿಯೇ. ಎಲ್ಲೋ ವರ್ಷಕ್ಕೆ ದೇವಸ್ಥಾನದ ಉತ್ಸವಕ್ಕೆ ಹೊಸ ಸೀರೆ ಉಟ್ಟು ಹೋಗುತ್ತಿದ್ದಳು. ಹೊಸ ಸೀರೆ ಬಹಳ ವರ್ಷಗಳ ವರೆಗೂ ಅದು ಹೊಸ ಸೀರೆಯಾಗಿ ಇತ್ತು. ಉಟ್ಟರೆ ತಾನೆ ಹಳೆಯದಾಗುವುದು?

ಜೀವನ ಪರ್ಯಂತ ನನಗಾಗಿ ಬದುಕಿದ ಅಮ್ಮ, ನನ್ನ ಬದುಕಲ್ಲದೇ ಆ ಅಮ್ಮ ಬೇರೆ ಎನು ಕಂಡಿರಬಹುದು? ನನ್ನ ನಗು ಸಂತೋಷವಲ್ಲದೇ ಬೇರೆ ಯಾವ ಸಂತೋಷವನ್ನೂ ಆಕೆ ಅನುಭವಿಸಿದ್ದು ಕಾಣೆ. ಆದರೆ....

ದಚ್ಚು ಮಾವ ಮತ್ತು ನಾನು ಇಬ್ಬರು ಮಾತ್ರ ಇಂದು ತರಕಾರಿ ಹೆಚ್ಚುತ್ತಿದ್ದೆವು. ಯಾಕೋ ನನ್ನಮ್ಮನ ಮಾತು ಬಂತು. ಅಮ್ಮ ಒಬ್ಬರೇ ಬೇಗ ಹೋಗಬೇಕು ಎಂದಿದ್ದೆ. ದಚ್ಚು ಮಾವ ಮೆತ್ತಗಿನ ಸ್ವರದಲ್ಲಿ ಹೇಳಿದರು. “ ವಿಶ್ವಣ್ಣಾ...ನಿನ್ನಪ್ಪ ನಾನು ಬಹಳ ದೋಸ್ತಿ ಗೊತ್ತಾ.?”

ಹೌದು ಇದೇನು ಹೊಸ ಮಾತಲ್ಲ. ದಚ್ಚುಮಾವ ಬಹಳಷ್ಟು ಸಲ ಹೇಳುತ್ತಿದ್ದರು. ಹಾಗಾಗಿಯೇ ನನ್ನಲ್ಲಿ ಒಂದು ರೀತಿಯ ಸಲುಗೆ ಅಕ್ಕರೆ ಎಲ್ಲವೂ ಇತ್ತು.

ಮತ್ತು ಮುಂದುವರೆಸಿ ಹೇಳಿದರು. “ನಿನ್ನಪ್ಪನಿಗೆ ಎರಡು ಮದುವೆಯಾಗಿತ್ತು. ಈಗ ನಿನ್ನಮ್ಮ ನಿನ್ನಪ್ಪನಿಗೆ ಎರಡನೇ ಹೆಂಡತಿ. ಮೊದಲ ಹೆಂಡತಿ ಸಾವಿತ್ರಿ ತೀರಿಹೋದ ಮೇಲೆ ಇವರನ್ನು ಮದುವೆಯಾಗಿದ್ದು. ” ದಚ್ಚು ಮಾವನ ಸ್ವಭಾವೇ ಹಾಗೆ. ಕೆಲವೊಮ್ಮೆ ಬಹಳ ವೈಯಕ್ತಿಕ ವಿಚಾರಗಳಿಗೆ ಕೈ ಹಾಕಿ ಮಾತನಾಡಿಬಿಡುತ್ತಾರೆ.

ಆದರೆ ನೋಡದೇ ಇದ್ದ ನನ್ನ ಅಪ್ಪನಿಗೆ ಅಮ್ಮ ಎಷ್ಟನೇ ಹೆಂಡತಿಯಾಗಿದ್ದರೂ ನಾನು ಅದನ್ನು ಯೋಚಿಸುವ ಹಂತ ದಾಟಿದೆ. ಈಗ ಅಮ್ಮನಿಗೆ ವಯಸ್ಸಾಗಿದೆ. ಮತ್ತೆ ಅಪ್ಪ ಬದುಕಿಲ್ಲ. ಆದರೆ ದಚ್ಚು ಭಟ್ಟರು ಅಲ್ಲಿಗೇ ನಿಲ್ಲಿಸಲಿಲ್ಲ.
“ ನೀನು ಮೊದಲ ಹೆಂಡತಿ ಸಾವಿತ್ರಿಯ ಮಗ. “

ಒಂದು ಸಲ ಆಯೋಮಯವಾದ ಅನುಭವ. ದಚ್ಚು ಮಾವ ತಮಾಷೆಗಾದರೂ ಹೀಗೆಲ್ಲ ಮಾತನಾಡುವವರಲ್ಲ. ಮಾವ ಅಂತ ನಾನು ಕರೆಯುತ್ತೇನೆ. ಆದರೆ ಯಾವುದೇ ಸಂಬಂಧ ನನಗೆ ತಿಳಿದಂತೆ ಇಲ್ಲ. ಈ ಮಾವ ಏನು ಹೇಳುತ್ತಿದ್ದಾರೆ?

“ಹೌದು, ವಿಶ್ವಣ್ಣ, ಇದು ಈಗ ಯಾರಿಗೂ ಗೊತ್ತಿಲ್ಲ. ಗೊತ್ತಿದ್ದವರು ಯಾರೂ ಸಹ ಈಗ ಬದುಕಿಲ್ಲ. ಮತ್ತೆ ಇಂಥದ್ದೆಲ್ಲ ಈಗ ದೊಡ್ಡ ಸಂಗತಿಯಲ್ಲ ಬಿಡು. ಆದರೆ ನಿನ್ನಪ್ಪ ನೀನು ಚಿಕ್ಕ ಮಗುವಾಗಿರುವಾಗಲೇ ಈ ಶಾಂತಮ್ಮನನ್ನು ಮದುವೆಯಾಗಿದ್ದರು.”

“ನಿನ್ನಮ್ಮ ಯಾವಾಗ ತೀರಿ ಹೋದರು? ನಿನ್ನಪ್ಪ ಯಾಕೆ ಎರಡನೇ ಮದುವೆಯಾದರು? ಅದು ಯಾವುದೂ ಗೊತ್ತಿಲ್ಲ. ಶಾಂತಮ್ಮನ ಮದುವೆಯಾಗಿದ್ದೇ ನನಗೆ ಗೊತ್ತಾಗಿದ್ದು ಕೆಲವು ಸಮಯಗಳಾದಮೇಲೆ. ಆದರೆ ಅವರಲ್ಲೇ ಕೇಳೋಣವೆಂದರೆ ಆನಂತರ ಅವರು ಹೆಚ್ಚು ದಿನ ಬದುಕಿ ಉಳಿಯಲಿಲ್ಲ”

ನನ್ನ ಕೌಟುಂಬಿಕ ಸ್ಥಿತಿ ಇಷ್ಟೊಂದು ನಿಗೂಢವೇ? ನನಗೆ ಅಚ್ಚರಿಯಾಗಿತ್ತು. ದಚ್ಚುಮಾವನ ಬದಲು ಬೇರೆ ಯಾರು ಹೇಳಿದ್ದರೂ ನನ್ನನ್ನು ಅವಹೇಳನ ಮಾಡುವುದಕ್ಕೆ ಹೇಳುತ್ತಿದ್ದಾರೆ ಎಂದು ಕೊಳ್ಳುತ್ತಿದ್ದೆ. ಕೆಲವರು ಇರುತ್ತಾರೆ. ನಾವೆನು ಮಾಡುತ್ತಿದ್ದೇವೆ ಎಂದು ತಿಳಿದುಕೊಳ್ಳುವುದಕ್ಕಿಂತಲೂ ಮನೆಯವರು ಏನು ಮಾಡುತ್ತಾರೆ ಎಂದು ತಿಳಿಯುವ ಕೆಟ್ಟ ಕುತೂಹಲ. ಅದರಲ್ಲೂ ಹೆಣ್ಣು ಮಕ್ಕಳಿದ್ದರೆ ಕೇಳುವುದೇ ಬೇಡ.  ಆದರೆ ದಚ್ಚು ಮಾವ ಹಾಗಲ್ಲ.  ಅಂತಹ ಗಾಸಿಪ್ ವಿಚಾರಗಳಲ್ಲಿ ಅವರು ನಿರಾಸಕ್ತರು. ಕೊಂಕು ಮತ್ಸರ ಚುಚ್ಚು ಮಾತು ಯಾವುದೇ ಇಲ್ಲದೆ ಸಹಜವಾಗಿ ಹೇಳಿದ್ದರು.

ದಚ್ಚು ಮಾವನ ಮಾತುಗಳು ಕೇಳಿದಾಗ ನನ್ನಮ್ಮನ ಸುತ್ತ ಭಾವನೆಗಳು ಸುತ್ತತೊಡಗಿದವು. ಅಮ್ಮನನ್ನು ಸುತ್ತಿಕೊಂಡು ಇನ್ನು ಯಾವ ನೆನಪುಗಳೆಲ್ಲಾ ಇವೆ ಎಂದು ಮನಸ್ಸು ಗತಕಾಲದ ಆಳಕ್ಕೆ ಇಳಿಯುತ್ತಿತ್ತು. ಒಂದೊಂದರಂತೆ ಘಟನೆಗಳು ನೆನಪಿನಾಳದಿಂದ ಎದ್ದು ಬರತೊಡಗಿದವು. ಪ್ರತಿಯೊಂದು ಘಟನೆಗಳೂ ನೆನಪುಗಳೂ ಭಾವನಾತ್ಮಕವಾಗಿ ಹೃದಯಸ್ಪರ್ಶಿಯಂತೆ ಭಾಸವಾಗತೊಡಗಿದವು. ಹೌದು ಅಮ್ಮನೊಂದಿಗೆ ಕಳೆದ ಘಟನೆಗಳು ನೆನಪಿಸಿಕೊಂಡಂತೆ ಈ ಅಮ್ಮ ಅಮ್ಮನಲ್ಲ ಎಂಬ ವಾಸ್ತವವನ್ನು ನಂಬುವುದಕ್ಕೆ ಸಾಧ್ಯವಿಲ್ಲದೇ  ಕಳವಳಿಸಿತ್ತು.

ನನ್ನ ಪ್ರತಿಯೊಂದು ಬೆಳವಣಿಗೆಯ ಹಂತದಲ್ಲೂ ಮಲತಾಯಿ ಎಂಬ ಭಾವನೆ ಸೋಕದಂತೆ ಮಮತೆಯ ಸ್ಪರ್ಶವನ್ನು ನೀಡಿದಾಕೆ ಅಮ್ಮನಾಗಿರದೇ ಇರುವುದಕ್ಕೆ ಸಾಧ್ಯವೇ? ಹೇಗೂ ಇರಲಿ ಜೀವನ ಇಲ್ಲಿವರೆಗೆ ಬಂದಾಗಿದೆ. ಇನ್ನು ಇದೆಲ್ಲ ಸ್ವಾರಸ್ಯವಿಲ್ಲದ, ಪ್ರಾಮುಖ್ಯವಲ್ಲದ  ವಿಚಾರಗಳಂತೆ ಅವನ್ನು ನಿರ್ಲಕ್ಷಿಸಿಬಿಡಬೇಕು ಎಂದು ಭಾವಿಸಿದೆ. ನೇರವಾಗಿ ಮನೆಗೆ ಬಂದು ರಾತ್ರಿ ಬಹಳ ತಡವಾಗಿದ್ದರಿಂದ ಚೆನ್ನಾಗಿ ನಿದ್ದೆ ಮಾಡಿದೆ.

ಮರುದಿನ ಎಂದಿನಂತೆ  ನಿದ್ದೆ ಬಿಟ್ಟು ಎದ್ದಾಗ ಅಮ್ಮ ಸಹಜವಾಗಿ ಆಡುಗೆ ಕೋಣೆಯಲ್ಲಿದ್ದವರು ಕೂಗಿದರು. “ ನಿನ್ನೆ ಬರುವಾಗ ಎಷ್ಟು ಹೊತ್ತಾಗಿತ್ತು ಮಾರಾಯ? ಕಾದು ಕಾದು ಮಲಗಿದ್ದೆ.” 

ನಾನು ನಿರುತ್ಸಾಹದಲ್ಲೇ “ ತುಂಬಾ ತಡವಾಗಿತ್ತಮ್ಮ. ನಿನಗೆ ಒಳ್ಳೆ ನಿದ್ದೆ ಬಂದಿತ್ತು”  ಎಂದು ಅಲ್ಲೇ ಅಡುಗೆ ಕೋಣೆಯ ತಿಟ್ಟೆಯಲ್ಲಿ ಕುಳಿತೆ.

ದಚ್ಚು ಮಾವ ಹೇಳಿದ ವಿಷಯ ಪ್ರಸ್ತಾಪಿಸಲೇ ಅಂತ ಹತ್ತೆಂಟು ಸಲ ಯೋಚಿಸಿದೆ. ಕೊನೆಗೆ ಅಮ್ಮನಲ್ಲಿ ಹೇಳಿಕೊಂಡದ್ದರಲ್ಲಿ ಏನಿದೆ?   ನಮ್ಮಲ್ಲಿ ಅಂತಹ ಮುಚ್ಚು ಮರೆ ಯಾವುದೂ ಇರಲಿಲ್ಲ. 

ಬಿಸಿ ಬಿಸಿ ಚಹ ಮಾಡಿದ ಅಮ್ಮ ಹತ್ತಿರವೇ ಕುಳಿತರು. ಲೋಟದಿಂದ ಲೋಟಕ್ಕೆ ಚಹವನ್ನು ಧಾರೆ ಎರೆಯುತ್ತಾ  ಇದ್ದಾಗ ನಾನು ಮೆತ್ತಗೆ ಹೇಳಿದೆ.

“ಅಮ್ಮ ನಿನ್ನೆ ದಚ್ಚು ಮಾವ ಬಂದಿದ್ದರು. “
ಆಕೆ ಒಂದು ಸಲ ವಿಚಿತ್ರ ಎಂಬಂತೆ ನೋಡಿದಳು. “ ಇಷ್ಟು ದಿನ ಎಲ್ಲಿದ್ದರಪ್ಪಾ? ನೋಡದೇ ತುಂಬ ದಿನ ಆಯ್ತು” ಸಹಜವೆಂಬಂತೆ ನುಡಿದಳು.

            ನಾನು ನೇರವಾಗಿ ವಿಷಯ ಪ್ರಸ್ತಾಪಿಸಿದೆ. “ ಅಮ್ಮ , ದಚ್ಚು ಮಾವ ಒಂದು ವಿಷಯ ಹೇಳಿದರು. ನನ್ನ ಅಪ್ಪನಿಗೆ ಎರಡು ಮದುವೆ. ಮೊದಲ ಪತ್ನಿ, ಅವರ ಮಗ ನಾನು..ನೀನು ಚಿಕ್ಕಮ್ಮ ಅಂತ “  ಅಮ್ಮ ಮೌನಿಯಾದರು. ಎನೋ ಯೋಚಿಸುತ್ತಿದ್ದರು. ದುಗುಡವೇನಾದರೂ ಇದೆಯೋ ಅಂತ ಅವಲೋಕಿಸಿದೆ.

            ಛೇ ಇಲ್ಲವೇ ಇಲ್ಲ. ಇದೀಗ ಇಳಿ ವಯಸ್ಸಿನಲ್ಲಿ ಯೋಚಿಸುತ್ತಾ ದುಗುಡವನ್ನು ಅನುಭವಿಸುವಷ್ಟು ಅಲ್ಪ ಚಿಂತಕಳಲ್ಲ ಅಮ್ಮ.

            ಮತ್ತೂ ನಾನು ಕೇಳಿದೆ. “ ನೀನು ಎರಡನೇ ಮದುವೆ ಯಾಗಿದ್ದಂತೆ. ಇಷ್ಟು ವರ್ಷ ಆದರೂ ನಾನು ಕೇಳೂ ಇಲ್ಲ. ನೀನು ಹೇಳು ಇಲ್ಲ.”

            ಮುಖ್ಯವಾಗಿ ಅದರ ಅವಶ್ಯಕತೆ ನಮಗಿಬ್ಬರಿಗೂ ಬಂದಿಲ್ಲ. ಬಹುಶಃ ನನ್ನಮ್ಮನಿಗೆ ಅದೊಂದು ಪ್ರಾಮುಖ್ಯತೆ ವಿಷಯ ಅಂತ ಅನ್ನಿಸಲೇ ಇಲ್ಲ. ಇಲ್ಲವಾದರೆ ಈವರೆಗೂ ಮಲತಾಯಿಯ  ಒಂದಿಷ್ಟು ಭಾವವನ್ನು ತೋರಿಸದ ಆಕೆ ಎಷ್ಟು ಸ್ಥಿತ ಪ್ರಜ್ಞಳು ಎಂದಸಿತ್ತು. ಈಗ ನಾನು ಕೇಳಿದುದರಲ್ಲಿ ಸಹಜವಾಗಿ ನಿರ್ಲಿಪ್ತಳಾಗಿಯೇ ಇದ್ದಳು. 

            ಹತ್ತಿರ ಕುಳಿತ ಅಮ್ಮನ ಕೈಯಿಂದ ಚಹದ ಲೋಟ ತೆಗೆದು ಬದಿಯಲ್ಲಿಟ್ಟೇ. ಅಮ್ಮನಿಗೆ ನೋವಾಗಬಾರದು ಎಂಬ ಕಾಳಜಿಯೋ ಏನೋ ಎರಡು ಕೈಯಿಂದ ಅಮ್ಮನನ್ನು ಬಾಚಿ ತಬ್ಬಿಕೊಂಡೆ. ವಿಷಯ ತಿಳಿದರು ಈ ಅಮ್ಮನ ಸ್ಥಾನ ಚ್ಯುತಿಯಾಗಿದೆ ಎಂದು ಈಕೆ ತಿಳಿದುಕೊಳ್ಳಬಾರದು. ಈವರೆಗೂ ಇಲ್ಲದ ಅಂತರ ಇನ್ನು ಯಾಕೆ? ಆಕೆ ಅಂತಹ ಅಪರಾಧವನ್ನು ಏನು ಮಾಡಲೇ ಇಲ್ಲ.

             ಅಮ್ಮನ ಶಿಥಿಲವಾದ ದೇಹ ನನ್ನ ತೊಳಲ್ಲಿ ಬಂದಿಯಾಗಿತ್ತು. ಹಾಗೇ ಆಕೆಯೂ ನನ್ನ ಕೈಯನ್ನು ಸುತ್ತು ಬಳಸಿ ನನ್ನ ಬೆನ್ನ ಮೇಲೆ ಆಡಿಸಿದಳು. ನಂತರ ನಿಧಾನವಾಗಿ ಹೇಳಿದಳು

“ಕುಮಾರೂ...”

“ನಿನ್ನಪ್ಪನಿಗೆ ಮೊದಲ ಹೆಂಡತಿ ನಿನ್ನಮ್ಮನೇ ಸತ್ಯ. ಆದರೆ...ನಾನು ನಿನ್ನಪ್ಪನ ಎರಡನೇ  ಹೆಂಡತಿಯಲ್ಲ.”

“ಮತ್ತೊಂದು ಗೊತ್ತಾ, ನನಗೂ ನಿನ್ನಪ್ಪನಿಗೂ ಮದುವೆಯೇ ಆಗಿಲ್ಲ. ಲೋಕದ ಕಣ್ಣೆ ಹಾಗೆ. ಏನೋ ಕಾಣುತ್ತದೆ. ಏನೋ ಯೋಚಿಸುತ್ತದೆ. ನಿನ್ನಪ್ಪ ನನ್ನನ್ನು ಮದುವೆಯಾಗೂ ಇಲ್ಲ. ಹಾಗಂತ ಅವರೆಂದೂ ನನ್ನನ್ನು ಆದೃಷ್ಟಿಯಲ್ಲಿ ಕಂಡವರೇ ಅಲ್ಲ. ಅವರಿಗೆ ಹೆಂಡತಿಯಾಗುವಷ್ಟು ಯೋಗ್ಯತೆಯು ನನಗಿಲ್ಲ ಬಿಡು. ”

“ ಕುಮಾರು ನಿನ್ನಪ್ಪ, ದೊಡ್ಡ ಪುಣ್ಯವಂತ ಕಣಪ್ಪಾ. ಎಂತಹಾ ಯೋಗ್ಯತಾವಂತ?  ಆ ಮನುಷ್ಯನನ್ನು ನಿತ್ಯ ಕಾಲು ತೊಳೆದು ನೀರು ಕುಡಿಬೇಕಪ್ಪ. “

“ ಎನೂ ಇಲ್ಲದೇ ಬೀದಿಗೆ ಬಿದ್ದಿದ್ದೆ. ನನಗೆ ಆಸರೆ ಕೊಟ್ಟರು. ಅದೆಷ್ಟೋ ಸಲ ಹೇಳಿದ್ದರು. ಲೋಕ ಏನೇ ತಿಳಿದುಕೊಳ್ಳಲಿ. ನೀನು ನನಗೆ ಹೆಂಡತಿಯಲ್ಲ. ನನ್ನ ಹೆಂಡತಿ ಸಾವಿತ್ರಿಯೆ. ನಿನಗೆ ಆಸರೆ ಕೊಡುವ ಉದ್ದೇಶ ಅಷ್ಟೆ. ನನ್ನ ಮಗುವಿಗೆ ತಾಯಿಯಾಗು.   

“ ಅವರು ಬೇರೇನೂ ನನ್ನಿಂದ ಬಯಸಿಲ್ಲ. ದೇವತಾ ಮನುಷ್ಯ.”

“ನಿನ್ನಮ್ಮನ ಬಗ್ಗೆ ಅದೆಷ್ಟು ಮೋಹ ಇತ್ತು. ನಿನ್ನಮ್ಮನ ಅಗಲಿಕೆ ಅವರಿಂದ ಸಹಿಸಿಕೊಳ್ಳುವುದು ಸಾಧ್ಯವಾಗಲೇ ಇಲ್ಲ. ಅದೇ ನೆನಪಿನಲ್ಲಿ ಕೊನೆಯಾದರು. ಆನಂತರ ಇದು ನಿನಗೆ ಹೇಳಬೇಕು ಅಂತ ಅನ್ನಿಸಲಿಲ್ಲ. ನೀನಿನ್ನು ಸಣ್ಣ ಮಗು. ನಿನಗೆಲ್ಲಿ ಅರ್ಥವಾಗಬೇಕು. ನಂತರ ನಿನ್ನಲ್ಲಿ ಹೇಳುವಷ್ಟು ದೊಡ್ಡ ವಿಷಯ ಅಲ್ಲ ಅಂತ ಅನಿಸಿತು. ಸ್ವಲ್ಪ ನನ್ನ ಸ್ವಾರ್ಥವೂ ಇತ್ತು ಹೇಳು. ಯಾರೂ ಇಲ್ಲದ ನನಗೆ ನೀನು ಇಲ್ಲವಾದರೆ...?? ಈಗ ನಿನ್ನನ್ನು ಚೆನ್ನಾಗಿ ಬಲ್ಲೆ. ಹಾಗೆ ಹೇಳ್ತಾ ಇದ್ದೇನೆ. ನಾನು ನಿನ್ನ ಅಮ್ಮನಲ್ಲ ಆದರೂ  ನನಗೆ ಹಾಗನ್ನಿಸುವುದೇ ಇಲ್ಲ.”

            ಹೌದಲ್ಲವೇ ? ಬಹುತೇಕ ಸಂಬಂಧಗಳು ದೇಹದಿಂದಲೇ ಅಳೆಯಲ್ಪಡುತ್ತವೆ. ಆದರೆ ಸಂಬಂಧಗಳು ಬಂಧಿಸಲ್ಪಡುವುದು ಹೃದಯದಿಂದ. ಸನ್ಮನಸ್ಸಿನ ವಿಶ್ವಾಸದಿಂದ.

            ಆವರೆಗೆ ಮನಸ್ಸಿಗೆ ಅಂಟಿದ ದುಗುಡವೆಲ್ಲ ದೂರಾಯಿತು. ಹಾಗೇ ಅಮ್ಮನಲ್ಲದ ನನ್ನಮ್ಮನನ್ನು  ತೋಳಿಂದ ಮತ್ತಷ್ಟು ಬಿಗಿಯಾಗಿಸಿದೆ. ಅಮ್ಮನ ಕೈ ಹಾಗೇ  ಬೆನ್ನ ಮೇಲೆ ಹರಿದಾಡುತ್ತಿತ್ತು. ಈ ನನ್ನ ಅಮ್ಮ ಅಮ್ಮನಲ್ಲ. ಆಕೆ ದೇವತೆ.

********************