Saturday, September 17, 2022

ಸೆಂಟ್ರಲ್ ಮಾರ್ಕೆಟ್ ನಮ್ಮ ಕುಡ್ಲದ ಮಾರ್ಕೆಟ್

             ಬಾಲ್ಯದಲ್ಲಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯ ಬಳಿ ಬಸ್ಸು ಇಳಿದು ಹಾಗೇ ಅಡ್ಡ ರಸ್ತೆಯಲ್ಲಿ ನಡೆದು ಬಂದರೆ ಗಾಬರಿಯಾಗುತ್ತಿದ್ದೆ. ವರ್ಷಕ್ಕೊಮ್ಮೆ ನಮ್ಮೂರಿನ ನೇಮ ಜಾತ್ರೆಗೆ ಸಂತೆ ಇಡುವಂತೆ ಇಲ್ಲಿ ದಿನಾ ಸಂತೆ ಇರುತ್ತದೆ. ಬಗೆ ಬಗೆಯ ಅಂಗಡಿಗಳು. ಸುಮ್ಮನೇ ನೋಡುತ್ತಾ ಹೋದರೆ ಸಾಕು, ಮಂಗಳೂರಿಗೆ ಅತಿಥಿಯಾಗಿ ಬಂದಿದ್ದೇನೋ ಎಂದು ಅನುಮಾನಿಸುವ ಹಾಗೆ ಏನು ಬೇಕು? ಏನು ಬೇಕು? ಎಂದು ಕೇಳುವ ಅಂಗಡಿಯವರು. ಇನ್ನು ಅಲ್ಲಿ ನಡೆದಾಡಲು ಜಾಗವಿಲ್ಲ, ಹಲವು ಸಲ ಎರಡು ಕೈಯಲ್ಲಿ ಚೀಲ ಹಿಡಿದುಕೊಂಡು ಹೊದರೆ ಆ ಕಡೆ ಈ ಕಡೆ ಓಡಾಡುವ ಮಂದಿಗಳ ಕಾಲಿಗೆ ಚೀಲ ತಾಗಿ ಸುತ್ತು ತಿರುಗುತ್ತಿತ್ತು. ಕೊನೆಯಲ್ಲಿ ಬಸ್ ಹತ್ತಿರ ಬಂದು ಸ್ವಲ್ಪ ಹೊತ್ತು ಚೀಲ ಎತ್ತಿ ಹಿಡಿದು ತಿರುಗಿಸಿದ  ನಂತರ ಅದು ಪುನಃ  ಸರಿಯಾಗುತ್ತಿತ್ತು.  ಈ ರೀತಿಯಲ್ಲಿ ಜನಗಳು ನಮ್ಮೂರಿನ ಜಾತ್ರೆಯಲ್ಲೂ ಸೇರುತ್ತಿರಲಿಲ್ಲ. ಜನಗಳ  ನಡುವೆ ನುಸುಳಿಬರುವ ಅಟೋರಿಕ್ಷಾ ಕಾರುಗಳು. ಮುಂದೆ ಬಂದರೆ ಮಂಗಳೂರಿನ ಪ್ರಖ್ಯಾತ ಸೆಂಟ್ರಲ್ ಮಾರುಕಟ್ಟೆ  ಮತ್ತು ಭವಂತಿ ಸ್ಟ್ರೀಟ್. ಭವಂತಿ ಸ್ಟ್ರೀಟ್ ಹೇಳಿದರೆ ಎಷ್ಟು ಜನರಿಗೆ ತಿಳಿದಿದೆಯೋ ಗೊತ್ತಿಲ್ಲ. ಎಲ್ಲೋ ಕೆಲವು ಅಂಗಡಿಯ ಬೋರ್ಡ್ ಗಳಲ್ಲಿ ಇನ್ನೂ ಬರೆದುಕೊಂಡು ಉಂಟು.  ಮಾರ್ಕೆಟ್ ಎಂದರೆ ಅದು ಭವಂತೀ ರಸ್ತೆ. ಭವಂತ...ಎಂದರೆ ಕೊಂಕಣಿಯಲ್ಲಿ ತಿರುಗಾಡು ಎಂಬ ಅರ್ಥವಿದೆ. ಇಲ್ಲಿ ಬಂದರೆ ಅದನ್ನೇ ಮಾಡಬೇಕಿರುವುದರಿಂದ ಇದಕ್ಕೆ ಭವಂತಿ ರಸ್ತೆ ಎನ್ನುವುದೂ ಅರ್ಥ ಪೂರ್ಣ. ಭವಂತಿ ರಸ್ತೆ ಅಂದರೆ ಜನ ಗಲಾಟೆ ಎಂದೇ ಅರ್ಥ. ಇದೇ ರೀತಿ ಬಾಲ್ಯದಲ್ಲಿ ಉರ್ವ ಮಾರಿಗುಡಿ ಜಾತ್ರೆಗೆ ಹೋಗಿ ಆ ಜನ ಸಂದಣಿ ನೂಕು ನುಗ್ಗಲು ನೋಡಿ ಹಿರಿಯರ ಕೈಯನ್ನು ಭದ್ರವಾಗಿ ಹಿಡಿದ್ದೆ. 

            ಸೆಂಟ್ರಲ್ ಮಾರ್ಕೆಟ್ ನ ಒಂದು ಭಾಗದಲ್ಲಿ ನಗರದ ಖ್ಯಾತ ಸಿನಿಮಾ ಮಂದಿರವಾದ ರೂಪವಾಣಿ ಚಿತ್ರಮಂದಿರವಿದೆ. ಅಲ್ಲಿ ಅಷ್ಟು ಗಲಾಟೆ ಇದ್ದರೂ ಸಿನಿಮಾ ಮಂದಿರದೊಳಗೆ ನುಗ್ಗಿದರೆ ಎಲ್ಲವೂ ಮಾಯ.  ಮಾರ್ಕೆಟ್ ನ ಮತ್ತೊಂದು ಬದಿಯಲ್ಲಿ ಲೇಡಿಗೋಶನ್ ಸರಕಾರಿ ಆಸ್ಪತ್ರೆ. ನನ್ನಮ್ಮ ಐದು ದಶಕದ ಹಿಂದೆ ನನ್ನನ್ನು ಹೆತ್ತಿರುವುದು ಇದೇ ಆಸ್ಪತ್ರೆಯಲ್ಲಿ!  ಹಾಗಾಗಿ ಜನ್ಮದಲ್ಲೇ ಕೇಂದ್ರ ಮಾರುಕಟ್ಟೆಯ ಹತ್ತಿರದ ಸಂಬಂಧಂತೆ ಭಾಸವಾಗುತ್ತದೆ.  ಬಾಲ್ಯದಲ್ಲಿ ಅಮ್ಮನ ಕೈ ಹಿಡಿದುಕೊಂಡು ಹೋಗುತ್ತಿದ್ದ ನೆನಪಿನಂತೆ,  ಸೋದರಮಾವನ ಸೈಕಲ್ ನ ಮುಂದಿನ ರಾಡ್ ಮೇಲೆ ಕಾಲು ಆಚೆ ಈಚೆ ಹಾಕಿ ಕುಳಿತು ಸುತ್ತಾಡಿದ ನೆನಪು ಇನ್ನೂ ಇದೆ. ಸೆಂಟ್ರಲ್ ಮಾರ್ಕೆಟ್ ಅಂದರೆ ಕೇಂದ್ರ ಮಾರುಕಟ್ಟೆ  ಒಂದು ರೀತಿಯ ನೆನಪುಗಳಿಗೂ ಕೇಂದ್ರವಾಗಿಬಿಡುತ್ತದೆ. ಅಂದಿನ ಕಾಲದಲ್ಲಿ ಈ ಮಾರುಕಟ್ಟೆ ಬೆರಗಿನ ತಾಣ. ಇಲ್ಲಿ ಸಿಗದಿರುವುದು ಜಗತ್ತಿನ ಯಾವ ಮೂಲೆಯಲ್ಲೂ ಇಲ್ಲ ಎಂಬ ಅಚಲವಾದ ನಂಬಿಕೆ. ಭಾನುವಾರ ಹೋದರೆ ...ಅಂಗಡಿಗಳು ಮುಚ್ಚಿರುತ್ತವೆ, ಆದರೆ ಸುತ್ತ ಮುತ್ತ ಬೀದಿ ತುಂಬ ಬೀದಿ ಬದಿಯ ವ್ಯಾಪಾರಿಗಳ ಬಗೆ ಬಗೆಯ ಅಂಗಡಿಗಳು. ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ವಸ್ತುಗಳು. ಸ್ಟೀಲ್ ಪ್ಲಾಸ್ಟಿಕ್ ವಸ್ತುಗಳಿಂದ ಹಿಡಿದು ಬಗೆ ಬಗೆಯ ಬಟ್ಟೇ ಉಡುಪುಗಳು. 

            ಮಾರುಕಟ್ಟೆಯ ಒಳಗೆ ಹೋದರೆ....ಅಬ್ಬಾ ನಮ್ಮೂರ ಗೂಡಂಗಡಿಯಲ್ಲಿ ಒಂದು ಬಾಸ್ಕೆಟ್ ಟೊಮೆಟೊ ಬಟಾಟೆ ತೊಂಡೆಕಾಯಿ ಇಟ್ಟ ತರಕಾರಿ ಅಂಗಡಿಯನ್ನೇ ದೊಡ್ಡದು ಎಂದು ತಿಳಿದುಕೊಂಡರೆ ಇಲ್ಲಿ ಕಂಡ ಟೋಮೆಟೋ ರಾಶಿ ನೋಡಿ ಹೌ ಹಾರಿದ್ದೇನೆ. ಆದರೆ ಬೆಂಗಳೂರಿನ ಕೆ ಆರ್ ಮಾರುಕಟ್ಟೆ ನೋಡಿದ ಮೇಲೆ ಅದು ಬದಲಾಗಿರುವುದು ಬೇರೆ ವಿಚಾರ. ಅದರಲ್ಲೂ ನೆಲಮಂಗಲದ ಬಳಿಯ  ದಾಬಸ್ ಪೇಟೆಯ ದೊಡ್ಡ ತರಕಾರಿ ಮಾರುಕಟ್ಟೇ ಇಪ್ಪತ್ತನಾಲ್ಕು ಗಂಟೆಯೂ ತೆರೆದಿರುವುದು ನೋಡಿ ನಮ್ಮ ಈ ಸೆಂಟ್ರಲ್ ಮಾರುಕಟ್ಟೆ ಏನೂ ಅಲ್ಲ ಅಂತ ಆಗಿತ್ತು. ಆದರೂ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಒಂದು ಕಾಲದ ಬೆರಗಿನ ತಾಣ ಎಂದರೆ ತಪ್ಪಾಗಲಾರದು. 

            ಮೊನ್ನೆ ಮೊನ್ನೆ ಹೀಗೆ ನಡೆದಾಡುತ್ತಾ ಹಂಪನ್ ಕಟ್ಟೆ ಸಿಗ್ನಲ್ ನಿಂದ ಮಾರುಕಟ್ಟೆ ರಸ್ತೆಯಲ್ಲಿ ಇಳಿದೆ. ಯಾಕೋ ರಸ್ತೆ ಬಹಳ ಇಕ್ಕಟ್ಟಾದಂತೆ ಅನಿಸಿತು. ರಸ್ತೆ ಚಿಕ್ಕದಾಗಿದೆಯೋ ಇಲ್ಲ ನನ್ನ ದೃಷ್ಟಿ ದೊಡ್ಡದಾಗಿದೆಯೋ ಅಂತ ಅನಿಸತೊಡಗಿತ್ತು. ಹೊಂಡ ಗುಂಡಿಗಳು ನೋಡಿ ರಸ್ತೆ ಇಲ್ಲವೇ ಇಲ್ಲವೇನೋ ಅನ್ನಿಸುತ್ತಿತ್ತು. ಎಲ್ಲ ನಗರಗಳಂತೆ ಮಂಗಳೂರು ಅಷ್ಟೆ ಅಂತ ತಿಳಿದು ಮುಂದೆ ಮುಂದೆ ಬಂದು ಸೆಂಟ್ರಲ್ ಮಾರುಕಟ್ಟೆಯ ಬಳಿ ಬಂದರೆ ....ಎಲ್ಲ ಬಟಾ ಬಯಲಿನಂತೆ. ಮೊದಲು ಅಂಗಡಿಯ ಬಾಗಿಲಲ್ಲಿ ಹೋಗಿನಿಂತರೂ ಕಾಣದ ಅಂಗಡಿ ಮುಂಗಟ್ಟುಗಳು ದೂರದಿಂದಲೇ ಕಾಣುತ್ತವೆ. ಕಾರಣ ಇಷ್ಟೆ ಸೆಂಟ್ರಲ್ ಮಾರ್ಕೆಟ್ ಸಂಪೂರ್ಣ ಧರಾಶಾಯಿಯಾಗಿದೆ. ಕೆಲವು ಸಮಯಗಳ ಹಿಂದೆ ಮಾರುಕಟ್ಟೆ ಒಳಗೆ ನುಗ್ಗಿ ತರಕಾರಿ ತಂದ ಆ ಕಟ್ಟಡ ಈಗ ನೆನಪು ಮಾತ್ರ. ಚಿತ್ರದಲ್ಲಿ ತೋರಿಸುವುದಕ್ಕಷ್ಟೇ ಸಾಧ್ಯ.

        ಮಂಗಳೂರು ಮಾರುಕಟ್ಟೆ , ಕೇವಲ ಮಂಗಳೂರಿನವರಿಗೆ ಬದುಕು ಕೊಟ್ಟಿರುವುದಲ್ಲ. ಇಲ್ಲಿಂದ ಸಂಪರ್ಕ ದಕ್ಷಿಣಕ್ಕೆ ದೂರದ ಕಾಸರಗೋಡು, ಅಂತೆ ಉತ್ತರಕ್ಕೆ ಉಡುಪಿ ಕುಂದಾಪುರತನಕದ ಜನಜೀವನದಲ್ಲಿ ಮಂಗಳೂರು ಮಾರುಕಟ್ಟೆ ತನ್ನ ಗಹನವಾದ ಸಂಭಂಧವನ್ನು ಬೆಳೆಸಿದೆ. ಈಗ ಆ ಸಂಭಂಧಗಳು ವಿಚ್ಛೇದನ ಪಡೆದಂತೆ ಕೇಂದ್ರ ಮಾರುಕಟ್ಟೆ ಧರಾಶಾಯಿಯಾಗಿ ಜಾಗತೀಕರಣದ ಭೂಕಂಪಕ್ಕೆ ಕುಸಿದು ಬಿದ್ದಂತೆ ಭಾಸವಾಗುತ್ತದೆ. ಇನ್ನು ಹೊಸ ಕಟ್ಟಡ ತಲೆ ಎತ್ತಬಹುದು. ಆದರೂ ಮೊದಲಿನಂತೆ ಜನ ಮಾರುಕಟ್ಟೆಯ ಜತೆ ಸಂಭಂಧವನ್ನು ವ್ಯವಹಾರವನ್ನು ಬೆಳೆಸಿಕೊಳ್ಳಬಹುದು ಎಂಬುದನ್ನು ನಂಬುವುದಕ್ಕಿಲ್ಲ. ಮೊದಲು ಸೊಂಟಕ್ಕೆ ಹಣದ ಪುಟ್ಟ ಚೀಲ ಸಿಕ್ಕಿಸಿಕೊಂಡು, ಅಥವಾ ಜೇಬು ತುಂಬ ದುಡ್ಡು ಇಟ್ಟುಕೊಂಡು ಬರುತ್ತಿದ್ದ ಜನಗಳು ಇನ್ನು ಅದೇ ರೀತಿ ಬರಬಹುದೇ? ಅನುಮಾನ. ಯಾಕೆಂದರೆ, ಮೊಬೈಲ್ ಅಥವಾ ಎಟಿಎಂ ಕಾರ್ಡ್ ಹಿಡಿದು ಸೂಪರ್ ಮಾರುಕಟ್ಟೆಗೆ ಹೋಗುವ ಈ ಪೀಳಿಗೆಯಲ್ಲಿ ಸೆಂಟ್ರಲ್ ಮಾರುಕಟ್ಟೆ ಜನ ಜೀವನದಿಂದ ಎಂದೋ ದೂರಾಗಿ ಹೋಗಿದೆ. ಮಂಗಳೂರಲ್ಲಿ ಇಪ್ಪತ್ತು ವರ್ಷದ ಮೊದಲು ಒಂದೆರಡು ಸೂಪರ್ ಮಾರುಕಟ್ಟೆ ಇದ್ದರೂ ಜನಗಳು ಅಲ್ಲಿಗೆ ಹೋಗುತ್ತಿದ್ದುದು ಕಡಿಮೆ. ಯಾಕೆಂದರೆ ಏನಾದರೂ  ಉಳಿಯಬೇಕಿದ್ದರೆ ಕೇಂದ್ರ ಮಾರುಕಟ್ಟೆಗೆ ಹೋಗುವುದನ್ನು ರೂಢಿಸಿಕೊಂಡಿದ್ದರು.  ಈಗ ಸೂಪರ್ ಮಾರುಕಟ್ಟೆ ಸಂಸ್ಕೃತಿ ರಕ್ಕಸ ಗಾತ್ರದ, ಸುಸಜ್ಜಿತ ಮಾಲ್ ಗಳು ಕೇಂದ್ರ ಮಾರುಕಟ್ಟೆಯ ಆವಶ್ಯಕತೆಯನ್ನು ದೂರ ಮಾಡಿದೆ. ಹಾಗಾಗಿ ಕೇಂದ್ರ ಮಾರುಕಟ್ಟೆಯ ಮೊದಲಿನ ಚುರುಕುತನ, ಚಟುವಟಿಕೆ ಆ ಅತ್ಮೀಯ ವ್ಯವಹಾರಗಳು ಇನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಮನುಷ್ಯ ತನ್ನ ಆಕಾರ ವೇಷಭೂಷಣ ಜೀವನ ಶೈಲಿಯನ್ನು ಬದಲಾಯಿಸಿದಂತೆ ಕೇಂದ್ರ ಮಾರುಕಟ್ಟೆಯು ಬದಲಾಗಬಹುದು. ಆದರೂ ಹಳೆಯ ನೆನಪುಗಳು ಆ ಆತ್ಮೀಯ ವ್ಯವಹಾರಗಳು ಬಡತನದಲ್ಲೂ ಕಾಣುವ ಸುಖದುಃಖ ದುಮ್ಮನಗಳೊಂದಿಗಿನ ಭಾವನಾತ್ಮಕ ಸಂಬಂಧಗಳು ಇನ್ನು ಕೇವಲ ನೆನಪು ಎಂಬುದಂತು ಸತ್ಯ. 

Saturday, September 10, 2022

ಓ ಅಣ್ಣಾ..... ಸಣ್ಣ ಕಥೆ

 

ಆತ ಪ್ರಶಾಂತ.  ಮದುವೆ ಪಾರ್ಟಿ ಮುಗಿದು ಎಲ್ಲರೂ ಹೋಗುತ್ತಿದ್ದಂತೆ ಆತ  ಕಲ್ಯಾಣ ಮಂಟಪದಿಂದ ಹೊರಟು ತನ್ನ ಮನೆಗೆ ಬಂದ. ಮೂರನೇ ಮಹಡಿಯಲ್ಲಿದ್ದ ಮನೆಯಲ್ಲಿ ಆತ ಒಬ್ಬನೇ ವಾಸವಾಗಿದ್ದ. ಒಂದೇ ಕೋಣೆಯ ಆ ಮನೆ ಅಕ್ಷರಶಃ ಅವ್ಯವಸ್ಥೆಯಿಂದ ಕೂಡಿತ್ತು. ಅಲ್ಲಿ ಇಲ್ಲಿ ಧರಿಸಿ ಬಿಚ್ಚಿಟ್ಟ ವಸ್ತ್ರಗಳು ನೇತಾಡುತ್ತಿದ್ದವು. ಇನ್ನು ಕೆಲವು ಹಾಸಿಗೆ ಮೇಲೆ ಮುದ್ದೆಯಾಗಿ ಬಿದ್ದುಕೊಂಡಿತ್ತು. ಮೂಲೆಯಲ್ಲಿದ್ದ ಗ್ಯಾಸ್ ಸ್ಟೌವ್ ನಲ್ಲಿ ಒಂದು ಪಾತ್ರೆ ಮುಚ್ಚಳವಿಲ್ಲದೇ ಇತ್ತು. ನಿನ್ನೆ ಮಾಡಿದ ಗಂಜಿಯ ತಿಳಿ ಹಾಗೆ ಉಳಿದುಕೊಂಡಿತ್ತು. ಸ್ಟೌ ಸುತ್ತ ಗ್ಲಾಸು ತಟ್ಟೇಗಳು ಹಾಗೇ ಬಿದ್ದುಕೊಂಡಿತ್ತು. ಆ ಅವ್ಯವಸ್ಥೆ ಆತನ ಗಮನಕ್ಕೆ ಬಂದಿತ್ತು.  ಮೊದಲಾದರೆ ಅದನ್ನೆಲ್ಲ ಶುಚಿಗೊಳಿಸಿ ಪಾತ್ರೆಗಳನ್ನೆಲ್ಲ ತೊಳೆದು ಬಟ್ಟೆ ತೊಳೆದು ಚೆನ್ನಾಗಿ ಇರಿಸುತ್ತಿದ್ದ. ಆದರೆ ಇಂದು ಅದಾವುದಕ್ಕೂ ಉತ್ಸಾಹವಿಲ್ಲದೇ ಹೋಯಿತು. ಎಂದಿಗೂ ವಿಚಲಿತಗೊಳ್ಳದೇ ಶಾಂತವಾಗಿರುವುದಕ್ಕೆ ಬಯಸುವ ಆತನಿಗೆ ಇಂದು ಇರುಳು ಕಳೆಯುವುದಕ್ಕಿಲ್ಲ ಅಂತ ಅನ್ನಿಸಿತ್ತು. ಹಾಗಾಗಿ ಏಕಾಂತವಾಗಿ ಇರುವುದಕ್ಕೇ ಒಂದು ರೀತಿಯ ಭಯ ಆತಂಕ ಉಂಟಾಗಿತ್ತು. ಕಲ್ಯಾಣ ಮಂಟಪದಲ್ಲೆ ಬಹಳಷ್ಟು ಹೊತ್ತು ಕಳೆದು ಈಗ ಮನೆಗೆ ಬಂದಿದ್ದ. ಕಟ್ಟಡದ ತುತ್ತ ತುದಿಯಲ್ಲಿದ್ದ ಆತನ ಮನೆ, ಅದನ್ನು ಮನೆ ಎನ್ನುವುದಕ್ಕಿಂತ ಕೋಣೆ ಎನ್ನಬಹುದೇನೋ. ಎಲ್ಲವು ಒಂದೇ ಕೋಣೆಯಲ್ಲಿ. ಕುಳಿತರೆ ಬೆಡ್ ಮೇಲೆ ಕುಳಿತುಕೊಳ್ಳಬೇಕು. ನಿಂತರೆ ಶೌಚಾಲಯದ ಬಳಿ ನಿಲ್ಲಬೇಕು. ತನಗೊಬ್ಬನಿಗೆ ಇಷ್ಟು ಸಾಕು ಎಂದೇ ಅದನ್ನು ಬಾಡಿಗೆಗೆ ಪಡೆದಿದ್ದ. ಇಂದು ಮನಸ್ಸಿನ ನೆಮ್ಮದಿ ಕದಡಿದಂತೆ ಇತ್ತು. ತನ್ನ ಸ್ಥಿಮಿತವನ್ನು ಎಂದೂ ಕಳೆದುಕೊಳ್ಳದವನು ಮ್ಲಾನತೆಯಿಂದ ಖಿನ್ನನಾಗಿದ್ದ.  ತನ್ನ ಮನಸ್ಸಿನ ನೆಮ್ಮದಿ ಕಳೆದುಕೊಂಡಿರುವುದಕ್ಕೆ ಯಾರನ್ನೋ ಕಾರಣ ಮಾಡಿ ಮನಸ್ಸಿಗೆ ಸಾಂತ್ವಾನ ತಂದುಕೊಳ್ಳಬಹುದು. ನಿಜಕ್ಕಾದರೆ ಅವರರವರ ಮನಸ್ಸಿನ ನೆಮ್ಮದಿ ಕಳೆಯುವುದಕ್ಕೆ ಅವರವರೇ ಕಾರಣರು. ರೋಗ ಬರುವುದಕ್ಕೆ ಶರೀರದ ರೋಗ ನೀರೋಧಕ ಶಕ್ತಿ ಹೇಗೆ ಕಡಿಮೆಯಾಗಿರುತ್ತದೋ ಮನಸ್ಸಿನ ನೆಮ್ಮದಿ ಕಳೆಯುವುದಕ್ಕೂ ಮನಸ್ಸು ದುಃಖ ನೋವುಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿರುವುದೇ ಕಾರಣವಾಗಿರುತ್ತದೆ.

 

            ಮನೆ ಒಳಗೆ ಕುಳಿತುಕೊಳ್ಳಲಾಗದೆ ಹೊರಬಂದ. ಹೊರಗೆ ವಿಶಾಲವಾದ ತಾರಸಿ. ಅದರ ಒಂದು ಬದಿಗೆ ಹಳೆಯ ಚಯರ್ ಒಂದಿತ್ತು. ಅದರಲ್ಲಿ ಕುಳಿತು ಕಾಲು ಚಾಚಿ ತಡೆ ಬೇಲಿ ಯಲ್ಲಿಟ್ಟು ಮೇಲೆ ಆಕಾಶವನ್ನು ನೋಡುತ್ತಾ ಕುಳಿತ. ರಾತ್ರಿ ಬಹಳವಾಗಿದ್ದುದರಿಂದ  ನಗರ ಸಾಕಷ್ಟು ಮೌನವಾಗಿತ್ತು.  ಬೀದಿ ನಾಯಿಗಳೂ ಸಹ ಎಲ್ಲೋ ಮೂಲೆಯಲ್ಲಿ ಸುಮ್ಮನೆ ಬಿದ್ದುಕೊಂಡಿದ್ದವು. ಹಾಗೆ ನೋಡುತ್ತಿದ್ದವನಿಗೆ ದುಃಖ ಒತ್ತರಿಸಿ ಬಂತು. ಅತ್ತರೆ ಯಾವ ಪ್ರಯೋಜನವೂ ಇಲ್ಲ. ದೂರದಲ್ಲಿ ಬೀದಿ ದೀಪ ಉರಿದಂತೆ....ಆ ದೀಪದ ಬೆಳಕನ್ನು ಉಪಯೋಗಿಸುವುದಕ್ಕೆ ಅಲ್ಲಿ ಒಬ್ಬರಾದರೂ ಬೇಕಲ್ಲ. ಯಾರೂ ಇಲ್ಲ. ತನ್ನ ನೋವು ದುಮ್ಮಾನ ಎಲ್ಲವೂ ಹಾಗೆ, ಸುಮ್ಮನೇ ಉರಿಯುತ್ತವೆ. ಇಷ್ಟು ಮೌನದಲ್ಲಿರಬೇಕಾದರೆ ದೂರದ ಗುಡಿಸಲಿನಲ್ಲಿ ಯಾವುದೋ ಒಂದು ಸಂಸಾರ ಜಗಳವಾಡುವುದು ಕೇಳುತ್ತಿತ್ತು. ಛೇ ಸುಮ್ಮನೇ ದುಃಖಿಸುವುದಕ್ಕೂ ಅವಕಾಶ ಇಲ್ಲವಲ್ಲಾ? ಗಾಳಿ ಬೆಳಕು ನೀರು ಇವು ಪ್ರತಿಯೊಬ್ಬನಿಗೂ ಸೇರಿದ್ದು. ಒಬ್ಬ ಅದನ್ನು ಅನುಭವಿಸುತ್ತಿದ್ದರೆ ಮತ್ತೊಬ್ಬನು ಅದಕ್ಕೆ ತಡೆ ಒಡ್ಡುವ ಹಾಗಿಲ್ಲ. ಈ ಗಾಳಿ ನೀರು ಬೆಳಕುಗಳ  ಪಂಚ ಭೂತಗಳಂತೆ  ಈ ಮೌನವೂ ಯಾಕೆ ಆಗಬರದು? ಮೌನವನ್ನು ಅನುಭವಿಸುವುದು ಒಂದು ಹಕ್ಕಲ್ಲವೇ? ಸುಮ್ಮನೇ ದುಃಖಿಸುವುದಕ್ಕೂ ಅದೃಷ್ಟ ಪಡೆದಿರಬೇಕು. ಮನಸ್ಸು ನೆನಪುಗಳ ಹಿಂದೆ ಹೋಯಿತು. ನೆನಪುಗಳೇನು ಸಿನಿಮಾ ರೀಲಿನಂತೆ ಸರದಿ ಪ್ರಕಾರ ಬರುವುದಿಲ್ಲ.  ಇಲ್ಲೂ ಹಾಗೆ ಆತನ ಯೋಚನೆ ಸರಿದದ್ದು ಹೀಗೆ.

 

            “ಮಂಜರಿ, ಆಕೆಯ ಹೆಸರು. ಏನು ಸುಂದರ ಹೆಸರು? ಬಹಳ ಕಾಲ ಆ ಹೆಸರೇ ಸುಂದರವಾಗಿತ್ತು. ಜಪವಾಗಿತ್ತು. ಆ ಕಾಲವೂ ಹಾಗಿತ್ತು. ಹದಿ ಹರಯಕ್ಕೆ ಬಾಲ ಹೆಜ್ಜೆ ಇಟ್ಟ ದಿನಗಳು. ಎಲ್ಲವೂ ಸುಂದರ. ಆಗ ಕೆಲಸಕ್ಕಾಗಿ ಬೆಂಗಳೂರಿಗೆ ಬಂದವನಿಗೆ ಮನೆ ಬಾಡಿಗೆ ಸಿಕ್ಕಿದ್ದು ಚಿಕ್ಕ ಪೇಟೆಯ ಗಲ್ಲಿಯೊಳಗೆ.  ಆ ಕಟ್ಟಡದಲ್ಲಿ ಸರಿ ಸುಮಾರು ಇಪ್ಪತ್ತು ಕುಟುಂಬಗಳಾದರೂ ಇರಬೇಕು.  ಒಬ್ಬನಿಗಲ್ಲವೇ ಅಂತ ಹೇಗೋ ಸುಧಾರಿಸಿಕೊಂಡೆ. ಚಿಲ್ಲರೆ ದುಡ್ಡಿಗೆ  ದೊಡ್ಡ ಬಡಾವಣೆಯಲ್ಲಿ ಸಿಕ್ಕಿತೇ? ಸಿಕ್ಕಿದರೂ ಅತ್ತಿತ್ತ ಹೋಗಿ ಬರುವುದಕ್ಕೆ ದುಪ್ಪಟ್ಟು ಖರ್ಚು. ನಾನಿದ್ದ ಕಟ್ಟಡದಲ್ಲೇ ಆಕೆ ಕೆಳ ಅಂತಸ್ಥಿನ ಮನೆಯಲ್ಲಿ ತನ್ನ ಕುಟುಂಬದ ಜತೆಗಿದ್ದಳು. ಅಪ್ಪ ಅಮ್ಮ ಇಬ್ಬರೂ ದುಡಿಯಲು ಹೊರಗೆ ಹೋದ ನಂತರ ಈಕೆ ಒಬ್ಬಳೇ .  ದಿನಾ ಮಧ್ಯಾಹ್ನದ ತನಕ ಕಾಲೇಜ್ ಹೋಗುತ್ತಿದ್ದವಳು ಆನಂತರ ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು.  ನಾನೂ ಕೆಲಸ ಮುಗಿಸಿ ಬಂದರೆ ರಾತ್ರಿಯ ತನಕವೂ ಆಕೆಯೊಂದಿಗೆ ಮಾತನಾಡುತ್ತಾ ಇರುತ್ತಿದ್ದೆ. ಮರೆತೇ ಹೋದಂತೆ ಇದ್ದ ನ್ನ ಹೆಸರನ್ನು ಕರೆಯುತ್ತಿದ್ದದ್ದು ಆಕೆ ಮಾತ್ರ. ಬೆಂಗಳೂರು ನಗರದಲ್ಲಿ ಅಷ್ಟು ಜನರಿದ್ದರೂ ನ್ನನ್ನು ಹೆಸರಿಂದ ಕರೆಯುವವರು ಒಬ್ಬರೂ ಇಲ್ಲ. ಮೊದ ಮೊದಲು ಟ್ಯೂಷನ್ ಪ್ರೆಂಡ್ಸ್ ಅಂತ ಹೊರಗೆ ಇರುತ್ತಿದ್ದವಳು ನ್ನ ಪರಿಚಯವಾದ ನಂತರ ಮನೆಯಲ್ಲೇ ಇರುತ್ತಿದ್ದಳು. ಪರಿಚಯ ಆತ್ಮೀಯತೆ ಬೀದಿ ಬದಿಯ ಪಾನೀಪೂರಿಯ ಅಂಗಡಿವರೆಗೂ ಹೋಗುತ್ತದೆ.  ಜತೆಯಾಗಿ ಗಲ್ಲಿಯ ಬೀದಿಯಲ್ಲಿ ಮಸಾಲಾ ಪೂರಿ ತಿನ್ನುತ್ತಿದ್ದವರಿಗೆ ಆ ಮಸಾಲೆ ಬದುಕಿನಲ್ಲೂ ಇದ್ದಂತೆ ಭಾಸವಾಗತೊಡಗಿತು.  ಹೀಗಿದ್ದರೂ ನಾನು ಆಕೆಯನ್ನು ಪ್ರೀತಿಸುತ್ತಿದ್ದೇನೆ ಎಂದು ನನಗೆ ಅನ್ನಿಸಲಿಲ್ಲ. ಅದು ಅನ್ನಿಸಿದ್ದು ಆಕೆ ಕೈತಪ್ಪಿ ಹೋದಾಗ. “

ಆತನ ಚಿಂತನೆಗಳು ಪುಂಖಾನು ಪುಂಖವಾಗಿ ಬರುತ್ತಿದ್ದವು. ಹುಲ್ಲು ಬೆಳೆದು ಪಾಚಿಗಟ್ಟಿದ ಕೊಳದ ಕೆಸರಿನಂತೆ ಚಿಂತೆ ಹೆಚ್ಚಾಯಿತು.

 

            ಊರಿನಿಂದ ಮಿತ್ರನೊಬ್ಬ ಬಂದಿದ್ದ. ಹೆಸರು ಆನಂದ. ಹೇಳಿ ಕೇಳಿ ದೂರದ ಸಂಬಂಧಿ. ಬೆಂಗಳೂರಲ್ಲಿ ಈತನಿದ್ದಾನೆ ಎಂದು ತಿಳಿದೇ ಬಂದಿದ್ದ. ಬೆಂಗಳೂರಿಗೆ ಬರುವುದೇ ಹಾಗೆ. ಆರಂಭದಲ್ಲಿ ಒಂದು ಹೆಜ್ಜೆ ಊರುವುದಕ್ಕೆ ಜಾಗ ಸಿಕ್ಕಿದರೆ ಸಾಕು. ಮತ್ತೆ ಬೆಂಗಳೂರು ಮುಂದಿನ ಹೆಜ್ಜೆಯನ್ನು ಊರುವುದಕ್ಕೆ ಹೇಳಿಕೊಡುತ್ತದೆ. ಹಾಗಾಗಿ ಮೊದಲ ಹೆಜ್ಜೆ ಊರಿದ್ದು ಈತನ ಒಂದೇ ಒಂದು ಕೋಣೆಯ ಮನೆಯನ್ನು  ಹಂಚಿಕೊಂಡು. ಒಂದೇ ಕೋಣೆಯಲ್ಲಿ ಇದ್ದರೆ ಕೇಳಬೇಕೆ? ಒಂದೇ ತಟ್ಟೆ ಒಂದೇ ಚಾಪೆ ಒಂದೇ ತಲೆದಿಂಬು ಕೊನೆಗೆ ಒಂದೇ ಚಾದರ. ಹೀಗೆ ಒಂದರಲ್ಲೇ ಹೊಂದಾಣಿಸಿಕೊಂಡದ್ದು ಹಲವು. ಪ್ರಶಾಂತ ಆನಂದ ಒಂದರ್ಥದಲ್ಲಿ ಹೆಸರಿನಂತೇ ಇದ್ದರು.

 

            ಮಂಜರಿ, ಯಾವಾಗಲೂ  ಪ್ರಶಾಂತ ಅಂತ ಕರೆಯುತ್ತಿದ್ದವಳು ಕ್ರಮೇಣ ಅದಕ್ಕೆ ಅಣ್ಣ ಅಂತ ಸೇರಿಸುವುದಕ್ಕೆ ತೊಡಗಿದಳು. ಯಾಕೆ ಹೀಗೆ? ಆಕೆಯ ಮನೆಯವರು ಅಗೊಮ್ಮೆ ಈಗೊಮ್ಮೆ ಸಿಕ್ಕಾಗ ಹಾಗೆ ಕರೆಯುತ್ತಿದ್ದರೆ ಈಕೆಯೂ ಅಣ್ಣಾ ಸೇರಿಸಿಬಿಟ್ಟಳು. ಹೋಗಲಿ ಎರಡು ಅಕ್ಷರದಲ್ಲಿ ಏನಿದೆ ಅಂತ ತನ್ನ ವೈಯಕ್ತಿಕ ಸಮಸ್ಯೆಗಳಲ್ಲೇ ಮುಳುಗಿ ಹೋದ.  ವೈರಸ್ ಸೋಂಕು ಆದದ್ದು ತಿಳಿಯ ಬೇಕಾದರೆ ಕೆಲವು ದಿನಗಳೇ  ಸಂದು ಹೋಗಿಬಿಡುತ್ತದೆ. ಹಾಗೆ ಈಕೆಯ ಅಣ್ಣಾ ಕರೆಗೆ ಅರ್ಥ ಸಿಕ್ಕಿದ್ದುಆ ಒಂದು ದಿನ. ಆದಿನ ಹೊರಗೆ ಹೋದವನು ಬೇಗ ಬಂದಿದ್ದ. ಸಹಜವಾಗಿ ಒಂದು ಕೋಣೆಯ ಮನೆಯ ಬಾಗಿಲು ಸರಿದು ಒಳ ಬರಬೇಕಾದರೆ ಆನಂದನ ತೋಳಿನಲ್ಲಿ ಮಂಜರಿ ಇದ್ದಳು. ಎಲ್ಲವನ್ನೂ ಹಂಚಿಕೊಂಡ ಮಿತ್ರ ಇದನ್ನೂ ಹಂಚಿಕೊಂಡದ್ದು ವಿಪರ್ಯಾಸ. ಎದೆಯೊಳಗೆ ಆಘಾತವಾದಂತೆ ನರಳಿತು ಮನಸ್ಸು. ಆಗ ಅರಿವಿಗೆ ಬಂತು ಮಂಜರಿ ತನ್ನವಳು ಎಂದು. ಆದರೆ ತಡವಾಗಿತ್ತು. ಬಿಟ್ಟ ಶಬ್ದದ ವಾಕ್ಯಕ್ಕೆ ಮಿತ್ರ ಶಬ್ದ ತುಂಬಿಸಿಯಾಗಿ ಹೋಗಿತ್ತು.ತಾನೇ  ಬರೆದ ವಾಕ್ಯ ತನ್ನನ್ನೇ ಲೇವಡಿಯ ಅರ್ಥವನ್ನು ತಂದಂತೆ, ತನ್ನದೇ ಮನೆಯ ತನ್ನದೇ ಕೋಣೆಯಲ್ಲಿ ತಾನು ಪರಕೀಯನಾದಂತೆ ಭಾಸವಾಯಿತು. ಆನಂತರ ಆ ಮನೆಯಲ್ಲಿ ಆತನಿಗೆ ಇರುವುದಕ್ಕೆ ಮನಸ್ಸಾಗಲಿಲ್ಲ. ನಾವಿಲ್ಲದಾಗ ಮನೆಯೊಳಗೆ ಕಳ್ಳ ಹೊಕ್ಕಿದ್ದಾನೆ ಎಂದು ತಿಳಿದರೆ ಮನದೊಳಗೆ ಆಗುವ ತಾಕಲಾಟ ಹೇಗಿರುತ್ತದೆ. ಮನೆಯ ಇಂಚಿಂಚೂ ಮಲೀನವಾದಂತೆ ಭಾಸವಾಗುತ್ತದೆ. ಕಳ್ಳ ಏನೊಂದೂ ಕದಿಯದೇ ಇದ್ದರೂ  ಮನಸ್ಸು,  ಎಲ್ಲವೂ ಬತ್ತಲಾದ ಅನುಭವದಂತೆ ತಳಮಳಿಸುತ್ತದೆ. ಮತ್ತೆ ಅದನ್ನು ಅನುಭವಿಸುವುದಕ್ಕೆ ಒಪ್ಪುವುದಿಲ್ಲ. ಅನಿವಾರ್ಯವಿದ್ದರೆ ಬೇರೆ. ಪ್ರಶಾಂತನಿಗೆ ತನ್ನದೇ ವಸ್ತುಗಳೆಲ್ಲವೂ ಮಲೀನವಾದ ಅನುಭವ. ತನ್ನದೇ ಭಾವನೆಗಳಲ್ಲಿ ಕೆಸರು ಬಿದ್ದಂತಾಗುವಾಗ ಭಾರ ಹೊತ್ತ ತನಗೆ ಇಡೀ ಜಗತ್ತೇ ಬಾರವಾದಂತೆ ಅನ್ನಿಸಿದ್ದರೆ ತಪ್ಪಿರಲಿಲ್ಲ.

 

            ಯಾವುದೋ ಕಾರಣ ಹೇಳಿ ಚಿಕ್ಕ ಪೇಟೆಯ ಗಲ್ಲಿ ಬಿಟ್ಟು ತಾನು ಶಿವಾಜಿ ನಗರಕ್ಕೆ ಬಂದ. ಒಬ್ಬನೇ ಕೆಲವು ಸಮಯ ಇದ್ದ. ತಾನಾಯಿತು ತನ್ನ ಕೆಲಸವಾಯಿತು. ಇಂದು ತನ್ನ ಸಹೋದ್ಯೋಗಿಯ ಮದುವೆ. ಹಾಗೇ ಬನಶಂಕರಿಯ ಕಲ್ಯಾಣ ಮಂಟಪಕ್ಕೆ ಹೋಗಿದ್ದ. ಸಾಕಷ್ಟು ಜನ ಬಂದಿದ್ದರು. ಅದೆಲ್ಲಿದ್ದಳೋ ಮಂಜರಿ ತಿಳಿಯದು. ಶುಭ ಹಾರೈಕೆಗೆ ಸರದಿಯ ಸಾಲಲ್ಲಿ ನಿಂತಿರಬೇಕಾದರೆ ಹಿಂದೆ ಬಂದು ಬೆನ್ನು ತಟ್ಟಿದಳು. ಆ ದಿನದ ಮದುಮಗಳು ಈಕೆಯ ಸಂಬಂಧಿಯಂತೆ. ಆಕೆ ಮಾತು ಮಾತಿಗೂ ಅಣ್ಣಾಎನ್ನುವಾಗ ಏನೋ ಕಸಿವಿಸಿ. ಕರಟಿ ತಳ ಹಿಡಿದ ನೆನಪುಗಳನ್ನೆಲ್ಲ ಮತ್ತೂ ಕೆರೆಸಿ ತೆಗೆದ ಹಾಗೆ ಭಾಸವಾಯಿತು. ತಮ್ಮ ಭಾವನೆಯಲ್ಲಿ ವಿಶ್ವಾಸವೇ ಇಲ್ಲದಂತೆ ಅಣ್ಣಾ ಎನ್ನುವ ಉದ್ಗಾರಕ್ಕೆ ಒತ್ತು ಕೊಡುವಾಗ ಭಾವನೆಗಳೂ ವೇಷ ತೊಟ್ಟುಕೊಂಡ ಬಸವನಂತೆ ಭಾಸವಾಗುತ್ತದೆ. ಅಣ್ಣಾ ಅಣ್ಣಾ ಎಂದು ಪ್ರತಿ ಮಾತಿಗೂ ಹೇಳಿದಾಗ ಆಕೆಯ ಮನಸ್ಸಿನ ಮೇಲೆಯೇ ಅನುಮಾನ ಬರುವಂತಾಗಿತ್ತು. ಮನಸ್ಸಿನ ಕಪಟವನ್ನು ಮುಚ್ಚಿಡುವುದಕ್ಕೆ ಈ ಅಣ್ಣಾ ಕರೆ ಇರಬಹುದೇ? ತಮ್ಮ ಮನಸ್ಸಿನಲ್ಲಿ ನಿಯಂತ್ರಣವಿಲ್ಲದೇ ಇರುವಾಗ ಈ ಅಣ್ಣ ಎಂಬ ಭಾವದಲ್ಲಿ ರಕ್ಷಣೆಯನ್ನು ಪಡೆದಂತೆ ಭಾಸವಾಗುತ್ತದೆ. ಒತ್ತು ಒತ್ತಿಗೂ ಅಣ್ಣಾ ಎನ್ನುವಾಗ ಆಕೆಗೆ ಆಕೆಯಬಗ್ಗೆ ವಿಶ್ವಾಸವಿಲ್ಲವೇನೋ ಎಂದುಕೊಂಡ. ಅಣ್ಣ ಎಂಬುದು ತಮ್ಮ ಮನಸ್ಸಿನ ಅವಿಶ್ವಾಸದ  ಸಂಕೇತ.

 

  ಸಾಹೋದರ್ಯ ಅದು ಹುಟ್ಟಿನಿಂದಲೇ ಬರುವಂತಹುದು. ಬಲವಂತವಾಗಿಯೋ ಕೇಳಿಯೋ ಅದು ಸಿಗುವುದಿಲ್ಲ. ಅದಲ್ಲವಾದರೆ ಸಾಹೋದರ್ಯ ಕೇವಲ ಭಾವದಿಂದ ಹುಟ್ಟಿಕೊಳ್ಳುತ್ತದೆ. ಇಲ್ಲಿ ಪ್ರಾಮಾಣಿಕತೆ ಒಂದೇ ಮಾನದಂಡ. ಯಾಕೆಂದರೆ ಬಾಯಿಯಲ್ಲಿ ಹೇಳಿದ್ದು ಮನಸ್ಸಿನಲ್ಲಿ ಇರಬೇಕೆಂದೇನು ಇಲ್ಲ. ಬಾಯಿಯಲ್ಲಿ ಅಣ್ಣಾ ತಂಗಿ  ಅಂತ ಕೂಗಿದರೂ ಮನಸ್ಸಿನಲ್ಲಿ ವಿಕಲ್ಪವಿದ್ದರೂ ಇರಬಹುದು. ಹುಟ್ಟಿನಿಂದ ಬಂದ ಸಾಹೋದರ್ಯ ಅದು ಅದ್ವಿತೀಯ ಭಾವದಲ್ಲಿರುತ್ತದೆ. ಅಲ್ಲಿ ಭಾವ ಹೇಗಿದ್ದರೂ ಸಾಹೋದರ್ಯ ತಪ್ಪುವುದಕ್ಕಿಲ್ಲ.  ಆಕೆಯಲ್ಲಿ ಪ್ರಾಮಾಣಿಕತೆಯ ನಿರೀಕ್ಷೆ ಮೂಡುವುದಾದರೂ ಹೇಗೆ?

 

ಒಪ್ಪಿಗೆ ಇಲ್ಲದ ಪಾತ್ರದಲ್ಲಿ ನಟನಾದವನು ತನ್ಮಯತೆಯನ್ನು ಹೇಗೆ ಕಾಣಬಲ್ಲ.? ಬೇಗನೆ ಪಾರ್ಟಿ ಮುಗಿಸಿದವನಿಗೆ ಎಲ್ಲವೂ ನಟನೆಯಂತೆ ಭಾಸವಾಯಿತು. ಮದುವೆಯೂ ಸುಮ್ಮನೆ ಪಾರ್ಟಿಯೂ ಸುಮ್ಮನೆ. ತಾನು ಕೇವಲ ನಟನಾಗಿ ಪಾರ್ಟಿ ಮುಗಿಸಿ ಬಂದುಬಿಟ್ಟ.

 

ಎಷ್ಟು ಹೊತ್ತಿಗೆ ನಿದ್ದೆಆವರಿಸಿತೋ ತಿಳಿಯದು. ಮುಂಜಾನೆ ಕಾಗೆ ಕಾ ಕಾ ಎಂದು ಕಿವಿಯ ಹತ್ತಿರವೇ ಕೀರುಗುಟ್ಟಿದಾಗ ಎಚ್ಚರವಾಯಿತು.  ಎದ್ದು ನಿಂತ ಸುತ್ತಲೂ ನೋಡಿದ. ಪೂರ್ವದಲ್ಲಿ ಸೂರ್ಯ ರಕ್ತ ಚೆಲ್ಲಿಯಾಗಿತ್ತು. ಮೊದಲ ದಿನದ ದುಃಖ ದುಮ್ಮಾನಗಳು ಕನಸಿನಂತೆ ಭಾಸವಾಯಿತು. ತನ್ನ ವಾಸ್ತವಕ್ಕೆ ತಾನು ಬರಬೇಕಿದೆ. ಮಂಜರಿಯ ನೆನಪು ಮಂಜಿನಂತೆ ಕಳೆಯಬೇಕು. ಆಕೆ ಆಭಿನಯಿಸಿದಳು. ತಾನು ಪ್ರೇಕ್ಷಕನಾದೆ ಎಂದು ತಿಳಿದುಕೊಂಡ. ತನ್ನಮ್ಮನ ನೆನಪಾಯಿತು. ಆಕೆಯ ಮಡಿಲಲ್ಲಿ ಹುಟ್ಟಿ ಬೆಳೆದಾಗ, ಆಕೆಯ ಲಾಲನೆಯಲ್ಲಿನ ನೈಜತೆಯ ನೆನಪಾಯಿತು. ಏನೆಂದು ಅಮ್ಮ ಪ್ರೀತಿಸಿದಳು? ಮುಂದೆ ಈ ಮಗು ಉತ್ತಮ ಬದುಕು ಕಾಣಲಿ. ಅದಕ್ಕಾಗಿ ಕಪಟವಿಲ್ಲದ ಮಮತೆ ತೋರಿದಳು. ಇದೀಗ ಮಂಜರಿಯ ಪಾತ್ರವನ್ನು ಆ ರಂಗವನ್ನೂ ಕನಸಿನಂತೆ ಕಂಡ. ಅಮ್ಮ ನನಗಿತ್ತ ಪ್ರೀತಿ ಉತ್ತಮ ಬದುಕು ನನ್ನದಾಗಬೇಕು. ತನ್ನಮ್ಮ ವಿದ್ಯಾವಂತಳಲ್ಲ. ಆದರೆ ಸನ್ಮಸ್ಸಿನ ಹೃದಯವಂತಳು.  ಯಾವಾಗಲೂ ಹೇಳುತ್ತಿದ್ದ ಮಾತೊಂದು ನೆನಪಾಯಿತು.  "ಪರರ ವಸ್ತುವನ್ನು ಬಯಸಬಾರದು. ನಿನ್ನದೇನಿದೆಯೋ ಅದನ್ನು ಪರರಲ್ಲಿ ಬಯಸಬೇಡ. ನಿನ್ನೊಳಗಿನ ಪ್ರೀತಿಗಿಂತಲೂ  ನಿನ್ನನ್ನು ಪ್ರೀತಿಸುವವರ ಪ್ರೀತಿಯ ಗಾತ್ರ ದೊಡ್ಡದು. "

 

ಅಮ್ಮ ಸುಮ್ಮನೇ ಹೇಳುವುದಿಲ್ಲ. ಆಕೆಯ ಪ್ರೀತಿಯನ್ನು ಕಂಡವನು. ತನ್ನ ಪ್ರೀತಿಯನ್ನು ಆಕೆ ಎಂದೂ ಬಯಸಲಿಲ್ಲ. ತನ್ನ ಮುನಿಸಲ್ಲಿ  ತನ್ನ ನಗುವನ್ನು ಕಂಡವಳು. ಪರರ ವಸ್ತುವನ್ನು ಪಯಸಬಾರದು.  ಮಂಜರಿಯ ಪ್ರೀತಿಯೂ ಅದೇ. ಆಕೆಯ ಪ್ರೀತಿ ಪರವಸ್ತುವಾಗಿ ಕಾಣಬೇಕು.  ಅದು ತನ್ನದಾಗಬೇಕು ಎಂದು ಬಯಸದೇ ಇರುವುದರಲ್ಲಿ ತನ್ನ ಭವಿಷ್ಯವಿದೆ. ತನ್ನಮ್ಮನ ಪ್ರೀತಿಯ ಸಾರ್ಥಕತೆ ಇದೆ.

 

ಹೊಸ ಹುರುಪಿನಿಂದ ಎದ್ದ. ಇರುಳಲ್ಲಿ ಕಂಡದ್ದೇಲ್ಲವೂ ನಿದ್ದೆಯ ಕನಸಿನಲ್ಲಿ ಸೇರಿ ಹೋಯಿತು.