Sunday, October 29, 2023

ವೈದಿಕ ಭೋಜನ

  ಕಳೆದ ವಾರ ಜಯನಗರದಿಂದ ಮೆಟ್ರೋದಲ್ಲಿ ಬರುವಾಗ ಬಸವನಗುಡಿಯಿಂದ ಒಬ್ಬರು ವೃದ್ದರು ಹತ್ತಿದವರು ನನ್ನ ಬಳಿಯೇ ಕುಳಿತರು. ನೋಡಿದರೆ ಬ್ರಾಹ್ಮಣ ಎಂಬುದರಲ್ಲಿ ಅನುಮಾನವಿಲ್ಲ. ವೃದ್ಧರಾದರೂ ಶರೀರದಲ್ಲಿ ಬಹಳ ಕಾಠಿಣ್ಯ ವಿತ್ತು. ಒಂದು ರೀತಿಯ ದೃಢತೆ ಇತ್ತು. ಬಿಳಿ ಪಂಚೆ ಒಂದು ಶಲ್ಯ ಮುಸುಕಾದ ಒಂದು ಶರ್ಟು ಕೈಯಲ್ಲಿ ಒಂದು ಚಿಕ್ಕ ಚೀಲ ಇತ್ತು. ಬಳಿಯಲ್ಲಿ ಕುಳಿತ ನನ್ನಲ್ಲಿ ಮಾತನಾಡುವುದಕ್ಕೆ ತೊಡಗಿದರು. ಅದು ಪಿತೃ ಪಕ್ಷ, ಅದೇ ಕಾರ್ಯಕ್ರಮಕ್ಕೆ ಹೋಗಿ ಬರುತ್ತಿದ್ದರು. ಮೊದಲೆಲ್ಲ ಇಂತಹ ಕಾರ್ಯಕ್ರಮಕ್ಕೆ ಹೋದವರು ಒಂದು ರೀತಿಯ ತಾತ್ಸಾರವನ್ನು ಅನುಭವಿಸುವುದನ್ನು ಕಣ್ಣಾರೆ ಕಂಡಿದ್ದೇನೆ. ಮನೆಯ ಕತ್ತಲೆಯಲ್ಲಿ ಊಟ ಮಾಡಿ ಅಲ್ಲಿಂದಲೇ ಎಲ್ಲೋ ಕರಗಿ ಕಣ್ಮರೆಯಾಗುತ್ತಿದ್ದರು. ಒಂದು ರೀತಿಯಲ್ಲಿ ಮುಖ ತೋರಿಸುತ್ತಿರಲಿಲ್ಲ.  ಆದರೆ ಈಗ ಕಾಲ ಬದಲಾಗಿದೆ, ಅಂದರೆ ಗೌರವ ಸಿಗುತ್ತದೆ ಎಂದಲ್ಲ, ಹೀಗೆ ಹೋಗುವವರ ಸಂಖ್ಯೆ ಬಹಳಷ್ಟು ಲುಪ್ತವಾಗಿ ಇಲ್ಲವೇ ಇಲ್ಲ ಎನ್ನುವಂತಹ ಸ್ಥಿತಿ.  ಈಗ ಶಾಸ್ತ್ರಕ್ಕೆ ಏನೋ ಒಂದು ಪರಿಹಾರವನ್ನು ಕಂಡುಕೊಂಡು ಸೀಯಾಳ ಎಲೆ ವಸ್ತ್ರ ಇಟ್ಟು ಬ್ರಾಹ್ಮಣ ಆವಾಹನೆಯಾಗಿಬಿಡುತ್ತದೆ. 

  ನಮ್ಮ ಬಾಲ್ಯದಲ್ಲಿ ಯಾವುದಾದರೇನು ಹೊಟ್ಟೆ ತುಂಬ ಊಟ ಸಿಗುತ್ತದಲ್ಲಾ ಎಂದು ಮೈಲು ಗಟ್ಟಲೆ  ಇಂತಹ ಕಾರ್ಯಕ್ರಮಕ್ಕೆ ನಡೆದು ಹೋಗುತ್ತಿದ್ದದ್ದು ನೆನಪಾಗುತ್ತದೆ. ಅದೆಷ್ಟು ಸಲ ಗುಂಪೆ ಗುಡ್ಡೆ ಹತ್ತಿ ಇಳಿದಿದ್ದೇವೋ ಗೊತ್ತಿಲ್ಲ. ಬೆಳಗ್ಗೆ ಮನೆಯಲ್ಲಿ ಇದ್ದರೆ ಉಂಟು ಇಲ್ಲದಿದ್ದರೆ ಇಲ್ಲ ಎಂದು ಸಿಕ್ಕಿದ್ದು ತಿಂದು ನಡೆಯುವುದಕ್ಕೆ ತೊಡಗಿದರೆ ಮೈಲಿ ನಡೆದು ವೈದಿಕ ಕ್ರಿಯೆ ನಡೆಯುವಲ್ಲಿಗೆ ತಲಪುವಾಗ ಮಧ್ಯಾಹ್ನವಾಗುತ್ತಿತ್ತು. ನಾವು ಬಾಲಕರು. ಯಾರ ಪರಿಚಯವೂ ಇರುತ್ತಿರಲಿಲ್ಲ. ಸಮಯವಾದಾಗ ಎಲ್ಲರ ಜೊತೆ ಊಟಕ್ಕೆ ಕುಳಿತುಬಿಡುವುದು.  ಯಾರ  ಪರಿಚಯ ಇಲ್ಲದಿದ್ದರೆ ಏನು, ಹೊಟ್ಟೆ ತುಂಬ ಊಟದ ಪರಿಚಯವಂತೂ ಆಗಿಬಿಡುತ್ತಿತ್ತು. ಅದೂ ....ಸಾಕು ಸಾಕು ಎನ್ನುವಷ್ಟು ಊಟ. ಮತ್ತೆ ಕೈಯಲ್ಲಿ ಒಂದಷ್ಟು ಚಿಲ್ಲರೆ ನಾಣ್ಯಗಳು. ನಾವೆಲ್ಲಆ ಪ್ರಾಯದಲ್ಲಿ  ಕೈಯಲ್ಲಿ ನಮ್ಮದೇ ಆದ ಕಾಸು ಕಂಡವರೇ ಅಲ್ಲ. ಒಂದು ವೇಳೆ ಕೈಯಲ್ಲಿ ಹಣ ಇದ್ದರೆ ಅದು ಚಿಲ್ಲರೆ ಕಾಸಾದರೂ ಹಿರಿಯರ ತನಿಖೆ ಇರುತ್ತಿತ್ತು.  ಸರಕಾರ ಆದಾಯ ತೆರಿಗೆ ಪರೀಕ್ಷೆ ಮಾಡಿದ ಹಾಗೆ.  ಈ ಕಾಸು ಮನೆಗೆ ಬಂದು ಹಳೆಯ ಡಬ್ಬದಲ್ಲಿ ತೆಗೆದಿಟ್ಟು ದಿನಕ್ಕೆ ಹತ್ತು ಬಾರಿ ಎಣಿಕೆ ಮಾಡುತ್ತಿದ್ದೆವು. ಆದರೆ ಮೊದಲು ನಮಗೆ ಹೊಟ್ಟೆ ತುಂಬ ಆಹಾರವೇ ಪ್ರಧಾನವಾಗಿತ್ತು. ಆದರೂ ಎಡಕೈಗೆ ಸಿಗುವ ಚಿಕ್ಕಾಸು ನಾಣ್ಯ ಬಹಳ ಖುಷಿಯನ್ನುಕೊಡುತ್ತಿತ್ತು.  ಇತ್ತೀಚೆ ಯಾರದೋ ವೈದಿಕ ಕಾರ್ಯಕ್ರಮಕ್ಕೆ ಯಾವುದೋ ಕೈವಲ್ಯ ಧಾಮಕ್ಕೆ ಹೋಗಿದ್ದೆ. ಊಟ ಮಾಡಿ ಹೊರಗೆ ಬರುವಾಗ ಯಾರೋ ಒಬ್ಬರು ಹಲವರು  ಕೈ ಒಡ್ಡುತ್ತಿದ್ದರು. ಇಲ್ಲಿ ಊಟಕ್ಕಿಂತಲೂ ಕಾಸು ಪ್ರಧಾನವಾದಂತೆ ಅನಿಸಿತ್ತು. ಕ್ರಿಯಾ ಭಾಗದಲ್ಲಿ ಅಷ್ಟೋ ಇಷ್ಟೊ ದಾನ  ಸಿಕ್ಕಿದರೂ ಹೀಗೆ ಭಿಕ್ಷೆ ಬೇಡುವುದು ಕಾಣುವಾಗ ಭಿಕ್ಷೆ ದಾನವಾಗುವುದು ಹೇಗೆ ಎಂಬ ಯೋಚನೆ ಬರುತ್ತದೆ. 

ವೃದ್ದರಲ್ಲಿ ನನ್ನ ಅನುಭವ ಹೇಳಿದೆ. ಕಾಲ ಬದಲಾಗಿದೆ ಎನ್ನುವುದಕ್ಕಿಂತಲೂ ಮನುಷ್ಯ ಬದಲಾಗಿದ್ದಾನೆ ಎನ್ನುವುದು ಸರಿ. ಅವರು ಹೇಳಿದರು, ಬದಲಾಗಬೇಕು, ಎಲ್ಲವೂ ಅಂದರೆ ಎಲ್ಲವೂ  ಮೊತ್ತ ಬದಲಾಗಬೇಕು, ಯಾಕೆಂದರೆ ಈಗ ಉಳಿದಿರುವಂತಹುದು ಒಂದೂ ಇಲ್ಲ. ಎಲ್ಲವನ್ನು ನಾವು  ಕಳೆದುಕೊಂಡಾಗಿದೆ.  ಬದಲಾಗಬೇಕು ಎಂಬುದೇನೋ ಸತ್ಯ . ಆದರೆ ನಾವು ಹೇಗೆ ಬದಲಾಗಬೇಕು ಎಂಬುದೇ ಮರೆತು ಹೋಗಿದೆ. ಸ್ಮರಣೆಗೆ ಬರಲಾದಷ್ಟು ಬದಲಾಗಿ ಹೋಗಿದ್ದೇವೆ. ಮೊದಲು ಯಾವುದಾದರೇನು ಊಟ ಎಂದರೆ ಸಾಕು ಎಂದುಕೊಂಡಿದ್ದರೆ ಈಗ ಊಟದಲ್ಲೂ ಆಯ್ಕೆ ಮಾಡುತ್ತಿದ್ದೇವೆ. ವೈದಿಕವೋ ತೀರ ಹತ್ತಿರದ ಕುಟುಂಬದೊಳಗಿದ್ದರೆ ಮಾತ್ರ ಹೋಗುತ್ತಿದ್ದೇವೆ. ವಿಚಿತ್ರವೆಂದರೆ ಊಟದ ವೈವಿಧ್ಯತೆಯೋ ಹಸಿವಿನ ವೆತ್ಯಾಸವೋ ಅರಿವಾಗುವುದಿಲ್ಲ. 

Wednesday, October 4, 2023

ಭ್ರಮರಾಂಬಿಕೆಯ ಮಡಿಲಲ್ಲಿ ಭ್ರಮರವಾಗಿ

        ಬಹಳ ಸಮಯದಿಂದ ಬೆಂಗಳೂರಲ್ಲಿ ಕುಳಿತು ಯೋಚಿಸುತ್ತಿದ್ದೆ. ಊರಿಗೆ ಹೋದರೆ ಕಟೀಲು ಭ್ರಮರಾಂಬಿಕೆಯ ಸನ್ನಿಧಿಗೆ ಹೋಗಬೇಕು ಅಂತ. ಯಾಕೆಂದರೆ ಕಟೀಲು ದೇವಸ್ಥಾನದ ಜೊತೆಗಿರುವ ಭಾವನಾತ್ಮಕ ಸಂಬಂಧಗಳು ಹಲವಿದೆ. ಅದನ್ನೆಲ್ಲ ನೆನಪಿಸಿಕೊಳ್ಳಬೇಕು. ಆದರೆ ಪ್ರತಿ ಸಲ ಊರಿಗೆ ಹೋದಾಗ ಸಮಯ ಹೊಂದಾಣಿಕೆಯಾಗದೆ ಹೋಗುವ ಅವಕಾಶ ಸಾಧ್ಯವಾಗುತ್ತಿರಲಿಲ್ಲ.  ಆದರೆ ಈ ಸಲ ಎಲ್ಲ ಕೆಲಸದ ಜೊತೆಗೆ ಇದನ್ನೂ ಪ್ರಧಾನವಾಗಿಸಿ ಮಂಗಳೂರಿನಿಂದ ಕಟೀಲಿನ ಬಸ್ಸು ಹತ್ತಿದೆ. 

                                                     ಚಿತ್ರ ಕೃಪೆ: ವಿಕಿಪೀಡಿಯ

     ಬಸ್ಸು ನಗರದಾಟಿ ಕುಂಟಿಕಾನ ದೇರೇಬೈಲು ಚರ್ಚ್ ದಾಟುತ್ತಿದ್ದಂತೆ ಬಾಲ್ಯದ ನೆನಪುಗಳು ಒತ್ತೊತ್ತಿ ಬರುವುದಕ್ಕೆ ತೊಡಗಿತು. ದೇರೇಬೈಲಿನ ಸೋದರ  ಮಾವನ ಮನೆ ಎಂದರೆ ಅದು ನನ್ನ ಮನೆ ಎಂಬ ಪ್ರೀತಿ ಬಾಲ್ಯದಿಂದಲೇ ಬೆಳೆದು ಬಂದಿತ್ತು. ಇಲ್ಲಿರುವಾಗಲೇ ನನ್ನಮ್ಮ ನನ್ನನ್ನು ಹೆತ್ತದ್ದು. ಹೀಗೆ ದ್ವಾರಕೆ ನಂದಗೋಕುಲ ಇದ್ದಂತೆ ನನಗೆ ಪೈವಳಿಕೆ ಮತ್ತು ದೇರೇಬೈಲು.  ಎರಡು ಅವಿನಾಭಾವದ ಸಂಬಂಧಗಳು. 

        ದೇರೆಬೈಲಿನ ಗುಡ್ಡ ಇಳಿದು ಕೆಳಗೆ ಇಳಿದರೆ ಕೊಂಚಾಡಿ. ಚರ್ಚ್ ನಿಂದ ಒಂದು ತಿರುವು ಕೆಳಗೆ ಇಳಿಯುತ್ತಿದ್ದಂತೆ ಎರಡೂ ಕಡೆ ಚಾಚಿನಿಂತ ಗದ್ದೆ. ಸದಾ ಹಸಿರು ಪೈರನ್ನು ಹಾಸಿದ್ದು ಬೇಸಗೆಯಲ್ಲಿ ಬಯಲಾಟಗಳ ಮೈದಾನವಾಗುತ್ತಿದ್ದವು. ಒಂದು ಬದಿಗೆ ಮಾಂಕಾಳಿ ಸನ್ನಿಧಾನ ಅದರೊತ್ತಿಗೆ ಶ್ರೀ ರಾಮ ಭಜನಾಮಂದಿರ. ಕೊಂಚಾಡಿಯ ಗದ್ದೆಯ ಈ ತುದಿಯಲ್ಲಿ ನಿಂತರೆ ಅತ್ತ ಕೂಳೂರಿನ ತನಕ ಗೋಚರಿಸುತ್ತಿತ್ತು. ಗದ್ದೆಯ ನಡುವೆ ಸಾಲಾಗಿ ಬೆಳೆದು ನಿಂತ ತೆಂಗಿನ ಮರಗಳು. ಈ ಗದ್ದೆಗಳ ನಡುವೆ ಒಂದು ಕೆರೆ ಇತ್ತು. ಆ ಕೆರೆಯಲ್ಲಿ ಲಾಗ ಹಾಕುತ್ತಿದ್ದ ನೆನಪು, ಆದರೆ ಈಗ ಸಂಪೂರ್ಣ ಬದಲಾಗಿ ಹಲವಾರು ಬಡವಾಣೆಗಳು ನಗರ ಎಂಬ ಹೆಸರಿನೊಂದಿಗೆ ಕರೆಯಲ್ಪಡುತ್ತದೆ. ಕೊಂಚಾಡಿಯ ರಸ್ತೆಯ ಎರಡೂ ಬದಿಗೆ ಇದ್ದ ಮಾವು  ಹಲಸು ಗೋಳಿ ಮರಗಳು ಮರೆಯಾಗಿವೆ. 

        ಮೊದಲು ಮಂಗಳೂರಿನಿಂದ ಕಟೀಲಿಗೆ ಹನುಮಾನ್ ಅಥವಾ ಸಿಪಿಸಿ ಬಸ್ ಹತ್ತಿದರೆ ಸರಿ ಸುಮಾರು ಎರಡು ಘಂಟೆಯ ಪಯಣ.ಬಸ್ಸು ಕೂಡ ಕಿಕ್ಕಿರಿದು ತುಂಬಿರುತ್ತಿತ್ತು. ಪ್ರತಿ ಸ್ಥಳಗಳಲ್ಲಿ ಒಂದೈದು ನಿಮಿಷವಾದರೂ ಬಸ್ಸು ನಿಂತು ಬಿಡುತ್ತಿತ್ತು. ಸಾಮಾನ್ಯವಾಗಿ ಮಧ್ಯಾಹ್ನದ ನಂತರ ಬಸ್ಸು ಹತ್ತಿದರೆ ಮುಸ್ಸಂಜೆ ದಾಟಿ ಕಟೀಲು ತಲುಪುತ್ತಿದ್ದೆವು. ಅಲ್ಲಿ ಕಟೀಲಿನ ದೇವಾಲಯದ ಸುತ್ತ ಹರಿಯುವ ನದಿಯಲ್ಲಿ ಮುಳುಗಿ ಸ್ನಾನ ಮಾಡಿದ  ಆದಿನಗಳದ್ದೇ ಒಂದು ಸುಮಧುರ ನೆನಪು. ನದಿಯಲ್ಲಿ ಸ್ನಾನ ಮಾಡಿ ರಾತ್ರಿ ದೇವಾಲಯದ ಗೋಪುರದಲ್ಲಿ ಕುಳಿತು ಭಜನೆ ಪಾರಾಯಣ ಮಾಡಿದ ನೆನಪು ಇದೆ. 

        ನಿನ್ನೆ ಹಾಗೇ ಕಟೀಲು ಬಸ್ಸು ಹತ್ತಿದೆ ಕೇವಲ ನಲ್ವತ್ತು ನಿಮಿಷದಲ್ಲಿ ಕಟೀಲು ತಲುಪಿದಾಗ ಅಚ್ಚರಿಯಾಯಿತು. ಮೊದಲಿನ ಬಸ್ಸು ಪಯಣದ ಅನುಭವಕ್ಕೂ ಈಗಿನ ಅನುಭವಕ್ಕೂ ಅಜಗಜಾಂತರ . ಹಳೆಯ ಅನುಭವದ ನೆನಪಿಗೆ ಬಸ್ಸಿನ ಪ್ರಯಾಣದ ಪ್ರತೀ ಕ್ಷಣ ಸುತ್ತಲಿನ ಪರಿಸರವನ್ನು ನೋಡುತ್ತ ಸಾಗಿದೆ. ನಾಲ್ಕು ದಶಕಗಳ ಹಿಂದಿನ ರಸ್ತೆ ತಿರುವುಗಳು ಮರಗಿಡಗಳು ಎಲ್ಲವೂ ಬದಲಾಗಿ ಆ ನೆನಪುಗಳು ಮಾತ್ರ  ಬಹಳಷ್ಟು ಕಾಡಿತು.  ಮೊದಲಿಗಿಂತಲೂ ತೀರ ಭಿನ್ನವಾದ ಪರಿಸರ. ಕಟೀಲಿನ ದುರ್ಗಾ ಭವನ ಹೋಟೇಲಿನ ಜಾಗ ಈಗ ವಾಹನ ನಿಲುಗಡೆಗೆ ಎರವಾಗಿದೆ. ಶಾಲೆಯ ಮೈದಾನದ ಒಂದಷ್ಟು ಭಾಗವೂ ಮಾಯವಾಗಿದೆ. ದೇವಸ್ಥಾನದ ಹೊರಬಂದು ಮೆಟ್ಟಲು ಹತ್ತಿ ಶಾಲೆಯ ಜಗಲಿಯಲ್ಲಿ ಹಲವಾರು ಜನ ವಿಶ್ರಮಿಸುತ್ತಿದ್ದರು. ಹಲವು ಸಲ ನಾನೊಬ್ಬನೇ ಬಾಲ್ಯದಲ್ಲಿ ಕಟೀಲಿಗೆ ಹೋಗುತ್ತಿದ್ದೆ. ರಾತ್ರಿ ಅಲ್ಲಿ ಹರಿಯುವ ನದಿನೀರಲ್ಲಿ ಸ್ನಾನ ಮಾಡಿ, ದೇವರ ದರ್ಶನ ಪೂಜೆ ಮುಗಿಸಿ ಪ್ರಸಾದ ಉಂಡು ಈ ಶಾಲೆಯ ಜಗಲಿಯಲ್ಲಿ ಮಲಗಿ ರಾತ್ರೆಯನ್ನು ಕಳೆದು ಮರುದಿನ ಮುಂಜಾನೆ ಎದ್ದು ಸ್ನಾನ ಜಪ ಮುಗಿಸಿ ದೇವಾಲಯದ ಸುತ್ತ ಮುತ್ತ ಸುತ್ತಾಡುತ್ತಿದ್ದ ದಿನಗಳು ಮತ್ತೆ ಬರಲಾರದು.  ದೇವಸ್ಥಾನದ ಹೆಬ್ಬಾಗಿಲು ಕ್ರಮಿಸಿ ಒಳ ಪ್ರವೇಶಿಸುವಾಗ ಹೊಳೆಯನ್ನು ದಾಟುವುದಕ್ಕೆ ಎರಡು ಸೇತುವೆ. ಮೊದಲು ಈ ಸೇತುವೆ ನಡುವೆ ನಿಂತು ಕೆಳಗೆ ಭೋರ್ಗರೆದು ದುಮ್ಮಿಕ್ಕಿ ಹರಿಯುವ ನೀರಿನಲ್ಲಿ ಹಾರಿ ಹಾರಿ ಮೇಲೆ ಬರುತ್ತಿದ್ದ ಮೀನುಗಳನ್ನು ನೋಡುತ್ತಿದ್ದೆವು. 

        ದೇವಸ್ಥಾನದ ಒಳಾಂಗಣವನ್ನು ಪ್ರವೇಶಿಸಿದರೆ ಪ್ರಶಾಂತವಾದ ದೇವ ಸನ್ನಿಧಿ. ಹೊರಗೆ ನದಿ ಭೋರ್ಗರೆಯುವ ಶಬ್ದ  ಅದರೆ ಒಳಗೆ ಪ್ರಶಾಂತವಾದ ಘಂಟಾನಾದಾದದ ಕಲರವ ಎರಡನ್ನೂ ಜತೆಯಲ್ಲೇ ಅನುಭವಿಸುವ ಕಟೀಲಿನ ದುರ್ಗಾ ಪರಮೇಶ್ವರಿಯ ಪ್ರಸನ್ನ ಮುಖ ದರ್ಶನವಾದರೆ ಅದೊಂದು ವಿಸ್ಮಯ ಅನುಭವ. ದೇವಾಲಯ ಹಿಂಭಾಗದಲ್ಲಿ ಮೊದಲು ಪಂಜಕಜ್ಜಾಯ ಪ್ರಸಾದವನ್ನು ತಯಾರಿಸುತ್ತಿದ್ದರು. ಅದರ ಘಮ ಘಮ ಪರಿಮಳ ಚಿತೋಹಾರಿಯಾಗಿರುತ್ತಿತ್ತು. ಈಗ ಸಾಕಷ್ಟು ಬದಲಾಗಿದೆ. ದೇವಸ್ಥಾನದ ಒಳಗೋಪುರದ ಎಡಭಾಗದಲ್ಲಿ ಪುಟ್ಟ ಮೇಜು ಇಟ್ಟುಕೊಂಡು ನೆಲದಲ್ಲಿ ಕುಳಿತು ಪ್ರಸಾದ ರಶೀದಿಗಳನ್ನು ಕೊಡುತ್ತಿದ್ದರು. ಆನಂತರ ಅದು ದೊಡ್ಡದಾಗಿ ಹೊರಬಂದು ಈಗ ದೇವಸ್ಥಾನದ ರಸ್ತೆಯ ಬದಿಯಲ್ಲೇ ಇದನ್ನು ವ್ಯವಸ್ಥಿತವಾಗಿ ನಿರ್ಮಿಸಿದ್ದಾರೆ.  ಈಗ ಈ ಗೋಪುರದಲ್ಲಿ ಕುಳಿತುಕೊಳ್ಳುವುದಕ್ಕೂ ಅವಕಾಶವಿಲ್ಲ. ಕೊನೆ ಪಕ್ಷ ಇಲ್ಲಿ ಮಹಾಮಂಗಳಾರತಿ ತನಕು ಕುಳಿತುಕೊಳ್ಳುವ ಅವಕಾಶ ಭಕ್ತರಿಗೆ ಲಭ್ಯವಾಗಬೇಕು. ಗೋಪುರದಲ್ಲಿ ಕುಳಿತು ನಾಮಸ್ಮರಣೆ ಮಾಡುವ ಮಧುರವಾದ ಅವಕಾಶ ಇಲ್ಲವಾಗಬಾರದು.   ಇದೇ ಗೋಪುರದಲ್ಲಿ ಕುಳಿತು ಸಂಧ್ಯಾವಂದನೆ ಪಾರಾಯಣ ಮಾಡಿದ ದಿನಗಳು, ಇಲ್ಲೇ ಕುಳಿತು ಭೋಜನ ಪ್ರಸಾದ ಉಂಡ ನೆನಪುಗಳು ನಿನ್ನೆ ಮತ್ತೆ ಕಾಡಿತು. ಹಿರಿಯ ವೇದಮೂರ್ತಿ ಶ್ರೀ ಗೋಪಾಲ ಕೃಷ್ಣ ಅಸ್ರಣ್ಣರು ಕುಳಿತುಕೊಳ್ಳುತ್ತಿದ್ದ ಜಾಗ ಎಲ್ಲವೂ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತಿದ್ದವು.

        ದೇವಸ್ಥಾನದ ಒಳಾಂಗಣದಲ್ಲಿ ಸಾಕಷ್ಟು ಭಕ್ತರು ನೆರೆದಿದ್ದರು. ಈಗ ಕೆಲವರು ಭದ್ರತಾ ಸಿಬ್ಬಂದಿಗಳು ಭಕ್ತರಿಗೆ ಮಾರ್ಗ ದರ್ಶನ ಕೊಟ್ಟು ನಿಯಂತ್ರಿಸುತ್ತಿದ್ದರು.  ಮೊದಲಿನಂತೆ ಕುಳಿತುಕೊಳ್ಳುವುದಕ್ಕೆ ಸಾಧ್ಯವಾಗದೆ ಕೆಲವು ವೃದ್ದೆಯರೂ ಸಹ ಮಹಾಪೂಜೆಗೆ ನಿಲ್ಲಲಾಗದೆ ನಿಂತುಕೊಂಡಿದ್ದರು. ಅಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಬರುವ ಭಕ್ತರಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಅದರಲ್ಲೂ ಬಯಲು ಸೀಮೆ ಘಟ್ಟದ ಮೇಲಿನ ಭಕ್ತಗಣಗಳ ಸಂಖ್ಯೆ , ಪರ ಊರಿನವರ ಸಂಖ್ಯೆ ಕಟೀಲಿನ ಮಟ್ಟಿಗೆ ಬಹಳಷ್ಟು ಹೆಚ್ಚಾಗಿದೆ. ಮೊದಲು ಸುಬ್ರಹ್ಮಣ್ಯ ಧರ್ಮಸ್ಥಳ ಯಾತ್ರೆ ಮುಗಿಸಿ ಘಟ್ಟ ಹತ್ತುತ್ತಿದ್ದವರ  ಪಟ್ಟಿಯಲ್ಲಿಈಗ ಕಟೀಲು ಕೂಡ ಸೇರ್ಪಡೇಯಾಗಿದೆ. ಮಧ್ಯಾಹ್ನ ರಾತ್ರಿ ಎಲ್ಲಿ ಹೋದರೂ ಊಟ ಇದೆ ಎಂಬುದು ಹಲವರ ಸೌಕರ್ಯ. ಬೆಂಗಳೂರಲ್ಲಿ ಮೊನ್ನೆ ಮೊನ್ನೆ ನನ್ನ ಪರಿಚಿತರೊಬ್ಬರು ಕರಾವಳಿಯ ಯಾವ ದೇವಸ್ಥಾನಗಳಲ್ಲಿ ಊಟವಿದೆ ಎಂದು ಪಟ್ಟಿಮಾಡಿಕೊಂಡು ಹೋಗಿದ್ದರು. ಅದು ಯಾಕೆ ಎಂದು ಇಲ್ಲಿ ನೋಡಿದಾಗ ಅರಿವಾಯಿತು. ಮೊದಲು ಕಟೀಲಿನಲ್ಲಿ ಕೇವಲ ಇಲ್ಲಿನ ಸುತ್ತಮುತ್ತಲಿನವರು ಹೆಚ್ಚೆಂದರೆ ಉತ್ತರ ಕಾಸರಗೋಡಿನ ಕೆಲವರು ನಿಯಮಿತವಾಗಿ ಬರುತ್ತಿದ್ದರು. ಈಗ ಸುತ್ತಮುತ್ತಲಿನ ದೇವಸ್ಥಾನಗಳ ಆದಾಯ ವೃದ್ಧಿಗೆ ಇದೂ ಮುಖ್ಯ ಕಾರಣವಾಗಿದೆ. ನಿನ್ನೆ ಪೂಜೆ ಮುಗಿಸಿ ಗೋಪುರದ ಒಂದು ಬದಿ ನಿಂತುಕೊಂಡಿದ್ದೆ. ಆಗ ಇದೇ ಘಟ್ಟದ ಮೇಲಿನ ಒಬ್ಬರು ಬಂದು ಅವರ ಕೈಯಲ್ಲಿ ಗಂಧ ಪ್ರಸಾದ ಇತ್ತು. ಹಣೆಗೆ ಹಚ್ಚಿಕೊಂಡ ನಂತರ ಸಾಕಷ್ಟು ಉಳಿದಿತ್ತು. ಪುಣ್ಯಾತ್ಮ ಅದನ್ನು ಯಾವುದೇ ಕಂಬಕ್ಕೆ ಉಜ್ಜದೆ ನನ್ನ ಬಳಿಗೆ ಬಂದು ಕೇಳಿದ ಇದನ್ನು ಏನು ಮಾಡಬೇಕು? ಎಲ್ಲಿ ಎಸೆಯಬೇಕು? ಅವನಿಗೆ ಗಂಧಪ್ರಸಾದವೇ ವಿಚಿತ್ರವಾಗಿ ಕಂಡಿತ್ತು. ಯಾಕೆಂದರೆ ಹೂವಿನೊಂದಿಗೆ ಗಂಧಪ್ರಸಾದವನ್ನು ಕೊಂಡುವುದು ಕೇವಲ ದಕ್ಷಿಣ ಕನ್ನಡ ಹಾಗೂ ಕರಾವಳಿಯಲ್ಲಿ ಮಾತ್ರ. ಮಧೂರು ಉಳಿದಂತೆ ಕಾಸರಗೋಡಿನ ದೇವಸ್ಥಾನಗಳಲ್ಲೂ ಈ ಕ್ರಮವಿದೆ. ಆದರೆ ಉಳಿದಂತೆ ಘಟ್ಟದ ಮೇಲಿನ ದೇವಸ್ಥಾನಗಳಲ್ಲಿ ಇದು ಬಳಕೆಯಲ್ಲಿ ಇಲ್ಲ. ಹಾಗಾಗಿ ಆತನಿಗೆ ಇದು ವಿಚಿತ್ರವಾಗಿ ಕಂಡಿತು. ನಾನೆಂದೆ ಅಲ್ಲಿ ಅದಕ್ಕೆಂದು  ಕಾಗದದ ಚೂರುಗಳನ್ನು ಇಟ್ಟಿದ್ದಾರೆ ಕಟ್ಟಿಕೊಂಡು ಮನೆಗೆ ಹೋಗು ಸ್ನಾನ ಮಾಡಿ ಶುದ್ದ ನೀರು ಬೆರೆಸೆ ಮನೆಯ ಉಳಿದ ಮಂದಿಗಳಿಗೂ ಕೊಡಬಹುದು ಎಂದೆ. ಮತ್ತೂ ಎಚ್ಚರಿಸಿದೆ ಕಂಭಗಳಿಗೆ ಹಚ್ಚಬೇಡ. 

        ಕಟೀಲಿನ ಜತೆಗೆ ನನಗೆ ಅತ್ಯಂತ ಭಾವನಾತ್ಮ ಸಂಭಂಧ ಎಂದರೆ ಇಲ್ಲೇ ನನಗೆ ಬ್ರಹ್ಮೋಪದೇಶವಾಗಿತ್ತು. ಸುಮಾರು ನಲವತ್ತು ವರ್ಷಗಳ ಹಿಂದಿನ ನೆನಪು. ದೇವಾಲಯದ ಎದುರಿನ ಹೊರಾಂಗಣದಲ್ಲಿ ನದಿಯ ದಡದಲ್ಲಿ ಉಪನಯನ ಕರ್ಮಗಳಾಗಿತ್ತು. ಆಗ ಪ್ರತಿವರ್ಷವೂ ಸಾಮೂಹಿಕ ಬ್ರಹ್ಮೋಪದೇಶವಾಗುತ್ತಿತ್ತು.ಬೆಳಗ್ಗೆ ಹೋಗಿ ಒಂದು ಚೀಟು ಬರೆಸಿದರೆ ಉಪನಯಕ್ಕೆ ಬೇಕಾದ ವಸ್ತ್ರ ಹೋಮ ದ್ರವ್ಯ ಪುರೋಹಿತ ದಕ್ಷಿಣೆ ತನಕ ಎಲವನ್ನೂ ಒದಗಿಸಿಕೊಡುತ್ತಿದ್ದರು. ಆಗ ನನಗೆ ಒಂದು ಪಂಚೆ ಸಿಕ್ಕಿತ್ತು. ಬಹಳಷ್ಟು ಖುಷಿಯಾಗಿತ್ತು. ಸಾಮಾನ್ಯವಾಗಿ ಒಂದು ಚಡ್ಡಿ ತಪ್ಪಿದರೆ ಎರಡು ಎಂಬಂತೆ ಇದ್ದವನಿಗೆ ಈ ಪಂಚೆ ಉಟ್ಟುಕೊಳ್ಳುವುದಕ್ಕೆ ನಾಂದಿ ಹಾಡಿತ್ತು. ಅಂದಿನಿಂದ ದೊಡ್ಡವರಂತೆ ಪಂಚೆ ಉಟ್ಟು ತಿರುಗುವುದು ಬಹಳ ಹೆಮ್ಮೆ ಅನಿಸಿತ್ತು.  ನಂದಿನೀ ದಡದ ಮೇಲೆ ಸೋದರಮಾವನ ಮಡಿಲಲ್ಲಿ ಕುಳಿತು ಗುರು ಅಜ್ಜನ ಮುಖಾಂತರ ಉಪದೇಶವಾದ ಗಾಯತ್ರಿಮಂತ್ರ ನನ್ನ ಮಟ್ಟಿಗೆ ಭ್ರಮರಾಂಭಿಕೆಯ ಆಶೀರ್ವಾದ. ಈಗ ಪ್ರತಿಸಲ ಯಜ್ಞೋಪವೀತಕ್ಕೆ ಕೈ ಹಾಕುವಾಗ ಕಟೀಲಿನ ಅಮ್ಮ ನೆನಪಾಗುತ್ತಾಳೆ. ಮಾವನ ಮಡಿಲಲ್ಲಿ ಕುಳಿತ ಜಾಗದಲ್ಲಿ ಅದೇ ನೆನಪಿಗೋಸ್ಕರ ಒಂದಷ್ಟು ಹೊತ್ತು ಕುಳಿತೆ. ಆ ನೆನಪು ಮತ್ತೆ ಮತ್ತೆ ಬಂದು ಮೈ ಪುಳಕಗೊಂಡಿತು. ಇಂದಿಗೂ ಸಂಧ್ಯಾವಂದನೆ ಬಿಡದೆ ಅನುಷ್ಠಾನ ಗೊಳಿಸುವಾಗ ಕಟೀಲು ದುರ್ಗಾ ಪರವೇಶ್ವರಿಯ ಅನುಗ್ರಹವಾದಂತೆ ಭಾಸವಾಗುತ್ತದೆ. ಕಟೀಲಿನ ಸಾಮೂಹಿಕ ಬ್ರಹ್ಮೋಮದೇಶ ಎಂಬುದು ಇಲ್ಲದೇ ಇರುತ್ತಿದ್ದರೆ ನನಗೆ  ಬಡತನದ ಕಾರಣ ಉಪನಯನ ಎಂಬುದು ಆಗುತ್ತಲೇ ಇರುತ್ತಿರಲಿಲ್ಲವೇನೋ ಎಂದು ಅನ್ನಿಸುತ್ತದೆ. ಬಹಳಷ್ಟು ಮಕ್ಕಳಿಗೆ ನನ್ನ ಜತೆ ಬ್ರಹ್ಮೋಪದೇಶವಾಗಿತ್ತು. ಕೊನೆಯಲ್ಲಿ ಎಲ್ಲರೂ  ಶ್ರೀ ಗೋಪಾಲಕೃಷ್ಣ ಅಸ್ರಣ್ಣರ ಜತೆಯಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದೆವು. ಇದೇ ನೆನಪಿನಲ್ಲಿ  ಊಟವಾದರೂ ಬಹಳಷ್ಟು ಹೊತ್ತು ಕಟೀಲಿನಲ್ಲೇ ಉಳಿದೆ. ಸೇತುವೆ ನಡುವೆ ಬಂದು ನಿಂತು  ಹರಿಯುವ ನದಿಯನ್ನು ನೋಡುತ್ತಾ ಆ ಸದ್ದಿನಲ್ಲಿ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದೆ. ಕಟೀಲು ನನ್ನ ಪಾಲಿಗೆ ಕೇವಲ ದೇವಾಲಯವಲ್ಲ. ಬದುಕಿನ ಉತ್ಕರ್ಷಕ್ಕೆ, ಆಧ್ಯಾತ್ಮದ ಚಿಂತನೆಗೆ ನಾಂದಿ ಹಾಡಿದ ಪವಿತ್ರ ಕ್ಷೇತ್ರ. ಇಲ್ಲೇ ನನ್ನ ಬ್ರಹ್ಮ ಚರ್ಯ  ಆರಂಭವಾಯಿತು.    ಇಂದು ಎಲ್ಲವನ್ನು ಮರೆತು ಮುಂಜಾನೆ ಸೂರ್ಯನಿಗೆ ಅರ್ಘ್ಯ ಬಿಟ್ಟು ಪರಮಾತ್ಮನನ್ನು ಕಾಣುವುದಿದ್ದರೆ ಈ ಕ್ಷೇತ್ರದ ಅನುಗ್ರಹ ಮರೆಯುವಂತಹುದಲ್ಲ. ಆ ಒಂದು ಚೈತನ್ಯ ಬೆನ್ನ ಹಿಂದೆ ಸದಾ ಸತ್ಪ್ರೇರಣೆಯನ್ನು ಒದಗಿಸುತ್ತದೆ. 


ಓಂ ನಮೋ ಭ್ರಮರಾಂಬಿಕೆ.