Sunday, October 25, 2020

ಮನೆಯಂಗಳದಲ್ಲಿ ಮಹಾ ಮಾರಿ

         ಬೇಲೂರು ಹಳೆಬೀಡು ಯಾರಿಗೆ ಗೊತ್ತಿಲ್ಲ ಬಿಡಿ. ನಾನು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರಬೇಕಾದರೆ ಸಾಮಾಜಿಕ ಅಧ್ಯಯನದಲ್ಲಿ ಹೊಯ್ಸಳರ ಬಗ್ಗೆ ಒಂದು ಪಾಠ ಇತ್ತು. ಬೇಲೂರು ಹಳೆಬೀಡುವಿನ  ಮಸುಕಾದ ಕಪ್ಪುಬಿಳುಪು ಚಿತ್ರ ಪಾಠ ಪುಸ್ತಕದಲ್ಲಿತ್ತು. ಆವಾಗ ಯೋಚಿಸುತ್ತಿದ್ದೆ ಹಳೆಬಿಡು ನಿಜಕ್ಕೂ ಇದೆಯಾ? ಇದ್ದರೂ ನಮಗೆಲ್ಲಿ ಕಾಣುವ ಭಾಗ್ಯವಿರುತ್ತದೆ? ಕಾಣುವುದಕ್ಕೆ ಸಾಧ್ಯವೇ ಇಲ್ಲ. ಶಾಲಾ ಸಹಪಾಠಿಗಳೊಂದಿಗೆ ಪ್ರವಾಸಕ್ಕೆ ಹೋಗುವ ಭರವಸೆ ಇಲ್ಲ. ಹಾಗೇ ಬೇಲೂರು ಕೇವಲ ಕನಸು. ಕಾಣುವುದಕ್ಕೆ ಸಾಧ್ಯವೇ ಇಲ್ಲವೆಂದು ಬಗೆದಿದ್ದೆ. ಆದರೆ ವಾಸ್ತವ ಹೇಗಾಯಿತು ಎಂದರೆ ಈಗ ಚಿಕ್ಕಮಗಳೂರು ಕೊಪ್ಪ ಹೋಗಬೇಕಾದರೆ ಬೇಲೂರು ಬಗಲಲ್ಲೇ ಹೋಗುತ್ತಿದ್ದೆವೆ. ಹಲವುಸಲ ಒಳಗೆ ಹೋಗಿ ಕಣ್ಣು ತುಂಬ ನೋಡಿಯೂ ಆಗಿದೆ. ಕಾಣುವುದಕ್ಕೆ ಸಾಧ್ಯವೇ ಇಲ್ಲವೆಂದು ತಿಳಿದದ್ದು ನಿತ್ಯ ಕಾಣುವ ವಿಷಯಗಳಾಗಿ ಬದಲಾಗುತ್ತವೆ. ಬದುಕಿನಲ್ಲಿ ಹೀಗೆ ಎಲ್ಲೋ ಹೇಗೋ ಅಂತ ತಿಳಿದದ್ದು ನಮ್ಮ ನಿತ್ಯಬದುಕಿನ ಅಂಗವಾಗುವಾಗುತ್ತದೆ. ಎಲ್ಲೋ ಇದೆ ಅಂತ ನಮ್ಮಲ್ಲಿಇಲ್ಲ ಅಂತ ತಿಳಿದದ್ದು ನಿತ್ಯ ಬದುಕಿನ ಅಂಗವಾಗುವುದು ಒಂದು ವಿಚಿತ್ರ. ಹೀಗೆ ಕೋರೋನ ಎಂ


ಬುದು ಆಗಿ ಹೋದದ್ದು ದುರ್ದೈವ ಎನ್ನಬೇಕು. ಒಬ್ಬ ಮಹಾಗುರು ಮಾಡಲಾಗದೇ ಇದ್ದದ್ದನ್ನು ಕೋರೋನ ಎಲ್ಲೋ ಇದ್ದುಕೊಂಡು ಜಗತ್ತಿಗೆ ಕಲಿಸಿಕೊಟ್ಟಿದೆ. ಏಳು ಜನ್ಮದ ವೈರಿಯೂ ಮಾಡಲಾಗದ ದುರವಸ್ಥೆಯನ್ನೂ ತಂದಿಟ್ಟಿದೆ. ಎಲ್ಲೋ ಇದೆ ಅಂತ ಬೇಲೂರಿನ ಹಾಗೆ ಬಗೆದರೆ ನಮ್ಮ ಕಲ್ಪನೆಯನ್ನೂ ಮೀರಿ ಘಟನೆಗಳು ನಡೆಯುತ್ತಾ ಇದೆ.

            ದೂರ ಚೀನದ ಯಾವುದೋ ಒಂದು ಊರಿನಲ್ಲಿ ಆದ ಘಟನೆ ಕೇಳಿದಾಗ,  ಓದಿದಾಗ ಓ ಅಂತ ರಾಗ ಎಳೆದು ಔದಾಸಿನ್ಯ ತೋರಿದ ನಮ್ಮ ಬದುಕಲ್ಲಿ ಯಃಕಶ್ಚಿತ್ ನನ್ನ ಬದುಕಲ್ಲೂ ಅದೇ ವಾಸ್ತವವಾದದ್ದು


  ಬದುಕಿನ ಅನುಭವದ ಸಾಲಿಗೆ ಒಂದನ್ನು ಸೇರಿಸಿತು. ಹೌದು, ಕೊರೋನ ಏಲ್ಲೋ ಇದೆ ಅಂತ ತಿಳಿದದ್ದು ಒಂದು (ಅ)ಶುಭ ಮುಹೂರ್ತದಲ್ಲಿ ನಮ್ಮ ಭಾರತಕ್ಕೂ ಕಾಲಿಡಬೇಕೆ? ಭಾರತಕ್ಕೆ ಬಂದದ್ದು ಮೊದಲು ನಮ್ಮ ಬೆಂಗಳೂರಿಗೆ ಬರಬೇಕೆ. ಹೋಗಲಿ ಬೆಂಗಳೂರಿನ ಯಾವುದೋ ಗಲ್ಲಿಯಲ್ಲಿ ಕೋರೋನ ಬಂತು ಸೀಲ್ ಡೌನ್ ಆಯಿತು. ಪೋಲಿಸ ವಾರಿಯರ್ ಗಳು ಜಿದ್ದಾ ಜಿದ್ದಿನ ಸೈನಿಕರಂತೆ ಬೆನ್ನಟ್ಟಿ ಹಿಡಿದು ಸೋಂಕಿನವರನ್ನು ಆಸ್ಪತ್ರೆಗೆ ಸೇರಿಸುತ್ತಿದ್ದದ್ದು ನೋಡಿ ಸದ್ಯ ನಮ್ಮ ಪ್ರದೇಶಕ್ಕೆ ಬರಲಿಲ್ಲ ಅಂತ ಸಮಾಧಾನದಿಮ್ದ ಇದ್ದರೆ ಒಂದು ದಿನ ನಮ್ಮ ಪಕ್ಕದ ರಸ್ತೆಗೇ ಬಂದು ಬಿಟ್ಟಿತು. ಪಕ್ಕದ ರಸ್ತೆ ಇದ್ದದ್ದು ನಮ್ಮ ರಸ್ತೆಯಾಗಬೇಕಾದರೆ ಒಂದೆರಡು ದಿನ ಸಾಕಾಯಿತು. ನಮ್ಮ ರಸ್ತೆಯ ಯಾರದೋ ಮನೆಗೆ ಬಂದ ಕೋರೋನ ಎಂಬ ನೆಂಟ ಕೊನೆಗೆ ನಮ್ಮ ಮನೆಗೂ ಬಂದು ಬಿಟ್ಟ. ನಾವು ಕೋರೋನ ರೋಗಿಯಾದದ್ದು  ಎಲ್ಲೋ ಏನೋ ಅಂತ ತಿಳಿದವರಿಗೆ ಬೇಲೂರಿನ ಪಾಠದಂತೆ ಆದದ್ದು ವಿಪರ್ಯಾಸ ಎನ್ನಬೇಕು.


            ನಮ್ಮ ಮನೆಗೆ ಹೇಗೆ ವಕ್ಕರಿಸಿತು? ನಮಗಿನ್ನೂ ಅಚ್ಚರಿಯ ವಿಚಾರ. ನನಗೂ ಚಿಕ್ಕ ಮಗನಿಗೂ ಇದರ ಬಗ್ಗೆ ವಿಪರೀತ ಎಂಬಂತೆ ಚರ್ಚೆಯಾಗಿದೆ. ಕಾರಣ ನನಗೆ ಬಂದ ಜ್ವರ ಅವನಿಗೆ ಬರದಿರುವುದಕ್ಕೆ ಸಾಧ್ಯವೇ ಇಲ್ಲ. ಕಾರಣ ಆತ ನನ್ನಿಂದ ಎತ್ತರ ಬೇಳೆದರೂ ನನ್ನ ಮೈಮೇಲೆ ಬೀಳುವಂತೆ ಈಗಲೂ ಇದ್ದು ಬಿಡುವವನು. ಒಂದು ದಿನ ನನಗೂ ಮೈ ಬಿಸಿಯಾಯಿತು. ಸದಾ ಅಲರ್ಜಿಯಿಂದ ಇಂತಹ ಸಮಸ್ಯೆಗೊಳಗಾಗುವ ನನಗೆ ಚಿತ್ರವಿಚಿತ್ರ ಅನುಭವಗಳಾಗಿಬಿಡುತ್ತವೆ. ಯೋಗಾಸನ ಪ್ರಾಣಾಯಾಮ ಎಂದು ಅದರೊಂದಿಗೆ ನಿತ್ಯ ಸಮರ ಸಾರುವ ನನಗೆ ಯಾವ ಅನುಭವಗಳೂ ವಿಶೇಷ ಎನಿಸಲಿಲ್ಲ. ಆದರೆ ಇದು  ಜ್ವರ....ಸುಮಾರು ಹದಿನೈದು ವರ್ಷದಿಂದ ನನ್ನ ಬಳಿಗೆ ಸುಳಿಯದ ಜ್ವರ ಈಗ ಬಂದೇ ಬಿಟ್ಟಿತು ನೂರರ ಆಸುಪಾಸಿನಲ್ಲಿ ಮೈ ಬೆಚ್ಚಗಾಗಿ ಅಲಕ್ಷಿಸಿ ಸುಮ್ಮನಿದ್ದೆ. ಆದರೆ ಮಗನಿಗೆ ಜ್ವರ ಬಂತು ನೆಗಡಿಯೂ ಬಂತು ಒಂದೇ ದಿನ. ನಂತರ ತಲೆನೋವು ಅಂತ ಇದ್ದವನು ಕೋವಿಡ್ ಪರೀಕ್ಷೆಗೆ ಹೋಗಿ ಎಂಜಲು  ಕಫ ಒಪ್ಪಿಸಿಬಂದ. ಮೊದಲು ನೆಗೆಟಿವ್ ಅಂತ ಬಂದು ನಿರಾಳವಾದರೆ ಮರುದಿನವೇ  ಆರೋಗ್ಯ ಕಛೇರಿಯಿಂದ ಆತಂಕದ ಕರೆ ಬಂತು. ಕೊವಿಡ್ ಪಾಸಿಟಿವ್!!!

            ಮಗನಿಗೆ ಬಂದಮೇಲೆ ಆರೋಗ್ಯಾಧಿಕಾರಿಗಳು  ಚುರುಕಾದರು. ಮಗನನ್ನು ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ಹೇಳಿ ಮರುದಿನ ಮನೆ ಮಂದಿಯ ತಪಾಸಣೆಗಾಗಿ ಕೆಲವು ಸೈನಿಕರು (ವಾರಿಯರ್ಸ್) ಸಹಜವಾಗಿ ಎಲ್ಲಾ ಸಲಕರಣೆಯೊಂದಿಗೆ ಬಂದರು.  ಪಕ್ಕದ ರಸ್ತೆಯಲ್ಲೆಲ್ಲಾ ಓಡಾಡುತ್ತಿದ್ದ ಈ ವಾರಿಯರ್ಸ್ ನಮ್ಮ ರಸ್ತೆಗೂ ಬಂದಿದ್ದು ನಮ್ಮ ರಸ್ತೆಯವರು ಕತ್ತು ಉದ್ದ ಮಾಡಿ ವಿಚಿತ್ರವನ್ನು ವಿಚಿತ್ರವಾಗಿ ನೋಡುತ್ತಿದ್ದರು.

 

            ಬಿಳಿ ಕೋಟು ಧರಿಸಿ ಬರುವ ಈ ಸೇನಾನಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ. ಕೊರೋನ ಎಂದರೆ ಮೈಲು ದೂರ ಓಡಿ ಹಾವನ್ನು ಕಂಡವರಂತೆ ಆಡುವ ಸಂಬಂಧಿಗಳು ಸ್ನೇಹಿತರೂ ಇರುವಂತಹ ಕಾಲದಲ್ಲಿ ನಮ್ಮ ಮನೆಗೆ ಬಂದು ನಮ್ಮ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ಆ ವೈದ್ಯ ತಂಡವನ್ನು ಮರೆಯುವುದಕ್ಕಿಲ್ಲ. ಬಂದ  ಹೆಣ್ಣು ಮಗಳೊಬ್ಬಳು ನಮ್ಮ ಮನೆಯಿಂದಲೇ ಕುಡಿಯುವ ನೀರು ಕೇಳಿ ಕುಡಿದಳು. ಬಂದವರು ಯಾವುದೇ ತೊಂದರೆ ಇದ್ದರೂ  ಕರೆ ಮಾಡುವಂತೆ ಹೇಳಿದಳು. ಅವರ ಧೈರ್ಯದ ನುಡಿಗಳು ಒಂದು ರೀತಿಯಲ್ಲಿ ಸಂಜೀವಿನಿಯಂತೆ ಕೆಲಸ ಮಾಡಿತ್ತು. ನಿತ್ಯವೂ ರೋಗ ಗ್ರಸ್ಥರನ್ನು ನೋಡುತ್ತಿದ್ದ ಅವರಿಗೆ ಇದು ಸಹಜವಾಗಿತ್ತು. ಕೋವಿಡ್ ದೃಢವಾಗುವಾಗಲೇ ಆರೋಗ್ಯ ಅಧಿಕಾರಿಗಳು ಆಸ್ಪತ್ರೆಯ ಅಥವಾ ಮನೆಯ ವಾಸದ ಆಯ್ಕೆಯನ್ನು ಕೊಡುತ್ತಾರೆ. ಯಾವುದೇ ಉಸಿರಾಟ ಇನ್ನಿತರ ತೊಂದರೆ ಇಲ್ಲವಾದರೆ ಮಾತ್ರ ಈ ಆಯ್ಕೆ ಇರುತ್ತದೆ. ಮನೆಯಲ್ಲೇ ಇರುವುದಾದರೆ ಒಂದು ಘೋಷಣಾ ಪತ್ರಕ್ಕೆ ಸಹಿ ಹಾಕಿ ಷರತ್ತುಗಳಿಗೆ ಸಮ್ಮತಿ ಕೊಡಬೇಕು. ನಮ್ಮದು ಮಹಡಿ ಮನೆಯಾದುದರಿಂದ ಬಂದ ವೈದ್ಯೆಯೇ ಹೇಳಿದಳು, ಮನೆಯಲ್ಲೇ ಇರಬಹುದು ನಿಮಗೆಲ್ಲ. ಏನೂ ತೊಂದರೆ ಇಲ್ಲ. ಪ್ರತ್ಯೇಕ ಶೌಚಾಲಯ ಕೋಣೆಗಳು ಇದ್ದರೆ ಸಾಕು.  ಕೋವಿಡ್ ಬಂದ ರೋಗಿಗಳನ್ನು ಬೆನ್ನಟ್ಟಿ ಹಿಡಿದು ವಾಹನಕ್ಕೆ ತುಂಬುತ್ತಿದ್ದ ಟಿ. ವಿ . ವಾರ್ತೆಯ ದೃಶ್ಯಗಳು ನೆನಪಿಗೆ ಬಂದವು. ನಿಜಕ್ಕೂ ವೈದ್ಯ ತಂಡದ ಧರ್ಯದ ಮಾತುಗಳು ಆತಂಕವನ್ನು ಕಡಿಮೆ ಮಾಡಿತ್ತು ಆದರೂ  ಸಹಜವಾಗಿ ಮನೆ ಮಂದಿಯೆಲ್ಲ ಆತಂಕಿತರಾಗಿದ್ದೆವು. ನಮ್ಮ ಮನೆಗೆ ಬಂದ ವಸ್ತುಗಳಲ್ಲಿ ಚೀನದ ಉತ್ಪನ್ನ ಯಾವುದು ಅಂತ ಇದುವರೆಗೆ ತಲೆಬಿಸಿ ಮಾಡಿಲ್ಲ. ಆದರೆ ಇದೊಂದು ಚೀನದ್ದೇ ಅಂತ ಖಾತರಿ. ಬಂದದ್ದು ಅನುಭವಿಸಲೇ ಬೇಕು ಎಂದು ಪರಸ್ಪರ ಧೈರ್ಯ ಹೇಳಿಕೊಂಡೆವು. ಬಂದ ವೈದ್ಯರು ಬಹಳ ಮುತು ವರ್ಜಿಯಿಂದ ಪ್ರತಿಯೊಬ್ಬರ ಕಫವನ್ನು ಪೆಟ್ಟಿಗೆ ಸೇರಿಸಿ ತೆಗೆದುಕೊಂಡು ಹೋದರು. ವಿಚಿತ್ರವೆಂದರೆ ನೆಗಡಿ ಖೆಮ್ಮು ಹೀಗೆ ಯಾವ ಅನುಭವವೂ ಇಲ್ಲದ ಮನೆ ಮಂದಿ ಒಂದಿಷ್ಟು ಧೈರ್ಯದಿಂದ ಇದ್ದರೂ ನಮಗೆ ಕೋವಿಡ್ ಬಂದಿರಬಹುದೇ ಎಂಬ ಆತಂಕ ಎಲ್ಲರಲ್ಲೂ ಇತ್ತು. ಆದರೆ ಕೊರೋನದ  ಯಾವ ಲಕ್ಷಣಗಳೂ  ಅನುಭವವೂ ಇಲ್ಲದೆ ಇರುವುದು ಆತಂಕವನ್ನು ಕಡಿಮೆ ಮಾಡಿತ್ತು. ಆದರೆ ಆತಂಕ ನಿಜವಾಗಿದ್ದು ಮರುದಿನ.

 

ಮನೆ ಮಂದಿಯ ಒಬ್ಬತ್ತು ಜನರಲ್ಲಿ ಆರು ಮಂದಿಗೆ ಕೊರೋನ ಬಂದು ಬಿಟ್ಟಿತ್ತು. ನನಗೂ ಪಾಸಿಟಿವ್. ಆದರೆ ನನಗೆ ಬಂದು ಹೋಗಿ ಅದಾಗಲೇ ನಾಲ್ಕು ದಿನ ಸಂದಿತ್ತು.  ಮತ್ತೆಲ್ಲರಿಗೂ ಕೋರೋನ ಪ್ರವೇಶವಾಗಿ ಅಲ್ಪಸ್ವಲ್ಪ ತನ್ನ ಪ್ರಭಾವವನ್ನು ತೋರಿಸಿತ್ತು. ಅಡಿಗೆ ಮನೆಯಲ್ಲಿ ಯಾವ ಒಗ್ಗರಣೆ ಕರಟಿದರೂ   ಮೆಣಸಿನಕಾಯಿ ಹುರಿದರೂ ಅರಿವಿಗೆ ಬರುತ್ತಿಲ್ಲ. ಎಲ್ಲ ವಸ್ತುವು ಪರಿಮಳವನ್ನು ಕಳೆದುಕೊಂಡ ಅನುಭವ ಕೆಲವರಿಗಾಯಿತು.ನಾಲಿಗೆ ರುಚಿಯೂ ಕಳೆದುಕೊಂಡು ಹಾಲಿಗೂ ಮಜ್ಜಿಗೆ ನೀರಿಗೂ  ವೆತ್ಯಾಸವೇ ಇಲ್ಲವಾಯಿತು.  ಮೈದ ಮತ್ತು ಡಿಡಿಟಿ ಎದುರು ಇಟ್ಟರೆ ವೆತ್ಯಾಸವೇ ತಿಳಿಯದು. ಮೈದ ಅಂತ ಡಿಡಿಟಿ ಕಲಸಿ ಗೋಳಿಬಜೆ ಮಾಡಿದರೆ ಕಥೆ ಗೋವಿಂದ.

ಎಲ್ಲರಿಗೂ ಕೊರೋನ ಬಾಧೆ ಬಂದ ಮರುದಿನವೇ ಅರೋಗ್ಯ ಕೇಂದ್ರದಿಂದ ನರ್ಸ್ ಇರಬೇಕು ಬಂದಳು. ಎಲ್ಲರ ಸಹಿ ಪಡೆದು ಎಲ್ಲರಿಗು ಸಾಕಾಗುವಷ್ಟು ವಿಟಮಿನ್ ಮಾತ್ರೆ ಜ್ವರದ ಮಾತ್ರೆ ಇವುಗಳನ್ನೊ ಕೊಟ್ಟಳು. ವಾಸ್ತವದಲ್ಲಿ ಅದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ಮಾತ್ರವೇ ಕೊಡುತ್ತಿದ್ದದ್ದು. ಆದರು ನಮ್ಮಲ್ಲಿ ಆರು ಮಂದಿಗೆ ಬಹಳ ಮಾತ್ರೆಯ ಆವಶ್ಯಕತೆ ಇತ್ತು.  ಇದಂತು ನಮಗೆ ಬಹಳ ಸಹಾಯವನ್ನು ಒದಗಿಸಿದಂತಾಗಿತ್ತು.

ದೊಡ್ಡ ಪಾತ್ರೆಯಲ್ಲಿ ತುಳಸೀ ಜೀರಿಗೆ ಹಾಕಿ ನೀರು ಕುದಿಸಿಟ್ಟು ಅದನ್ನೇ ನೀರಿನ ಬದಲು ಕುಡಿಯುತ್ತಿದ್ದೆವು. ಆತಂಕ ಯಾರಲ್ಲೂ ಇರಲಿಲ್ಲ. ವಯಸ್ಸಾದ ಅಮ್ಮನೇ ಒಂದಿಷ್ಟು ತಲೆನೋವು ಅಂತ ಇದ್ದದ್ದು ಮತ್ತೆಲ್ಲ ನಿರಾತಂಕವಾಗಿತ್ತು. ಮೊದಲ ಒಂದೆರಡು ದಿನ ಜ್ವರ ಇದೆಯೋ ಅಂತ ಪರೀಕ್ಷಿಸಿದ್ದು ಬಿಟ್ಟರೆ ನಿರಾಳವಾಗಿದ್ದೆವು. ಮನೆಯೊಳಗೇ ಹೋಮ್ ಕ್ವಾರಂಟೈನ್  ಇರುವುದು ಬಿಟ್ಟರೆ ಬೇರೆ ಯಾವ ತೊಂದರೆಯೂ ಕಾಣಿಸಲಿಲ್ಲ. ದೇಹದ ಆಮ್ಲಜನಕ ಮಟ್ಟ ಅಳೆಯುವುದಕ್ಕೆ ಒಂದು ಪುಟ್ಟ ಸಾಧನ ತಂದದ್ದು ಆಗಾಗ ಅಮ್ಲ ಜನಕ ಮಟ್ಟ ನೋಡುತ್ತಿದ್ದೆವು.  ನಾನಂತೂ ಮನೆಯನ್ನೇ ಕಛೇರಿಯನ್ನಾಗಿ ಮಾಡಿ ಎಂದಿನ ಕೆಲಸವನ್ನು ಯಾವುದೇ ತೊಂದರೆ ಇಲ್ಲದೆ ಮಾಡಿದೆ. ಎಲ್ಲರೂ ಖುಷಿಯಿಂದ ಮನೆಯಲ್ಲೇ ಇರುವುದು ಒಂದು ರೀತಿಯಲ್ಲಿ ಖುಷಿಯನ್ನೇ ತಂದಿತ್ತು. ಈ ಸಮಯದಲ್ಲಿ ಮಾನಸಿಕ ಒತ್ತಡ ಇಲ್ಲದಂತೇ ನೋಡಿಕೊಳ್ಳಬೇಕು. ನಮ್ಮ ಮನಸ್ಸಿನಲ್ಲಿ ಸ್ವಲ್ಪ ಅಸಹನೆ ಭಯ ಇದ್ದರೂ ಆಕ್ಸೀ ಮಿಟರ್ ನಲ್ಲಿ ತಿಳಿಯುತ್ತಿತ್ತು. ಯಾಕೆಂದರೆ ಆಮ್ಲಜನಕದ ಮಟ್ಟ ಕಡಿಮೆಯಾಗುತ್ತಿತ್ತು.

ಈ ನಡುವೇ ನಮ್ಮದೇ ರಸ್ತೆಯಲ್ಲಿ ಒಬ್ಬ ಕೋವಿಡ್ ನಿಂದ ಅಸುನೀಗಿದ ಸುದ್ದಿ ನನಗೆ ತಿಳಿದು ಬಂತು. ನಾವು ನಿತ್ಯವೂ ನೊಡುತ್ತಿದ್ದ ವ್ಯಕ್ತಿಯಾತ.  ನಾನದನ್ನು ಅಮ್ಮನಲ್ಲಿ ಹೇಳಲಿಲ್ಲ. ಹೇಳಿದರೆ ಎಲ್ಲಿ ಆತಂಕ ಪಡುತ್ತಾರೋ ಅಂತ ಹೆದರಿಕೆ.

            ದಿನದ ಮೂರು ಹೊತ್ತು ಭದ್ರ ಮುಷ್ಠಿ ತುಳಸಿ ಅಮೃತ ಬಳ್ಳಿ ಕಷಾಯ ನಿಯಮಿತವಾಗಿ ಮನೆ ಮಂದಿಯೆಲ್ಲ ಸೇವಿಸುತ್ತಿದ್ದೆವು. ನಾನಂತು ಮೊದಲೆ ಚಹ ಕಾಪಿ ತೆಗೆದುಕೊಳ್ಳುತ್ತಿರಲಿಲ್ಲ.  ಹೀಗೆ ಒಂದು ವಾರ ಕಳೆದ ನಂತರ ನಮಗೆ ನಾವೇ ಕೊವಿಡ್ ಮುಕ್ತರಾದಂತೆ ಸಮಾಧಾನವನ್ನು ಪಡೆದುಕೊಂಡೆವು. ತೊಂದರೆ ಇದ್ದಲ್ಲಿ ವೈರಸ್ ಬಾಧೆಯಾದ ವ್ಯಕ್ತಿ ಹದಿನೆಂಟು ದಿನದಲ್ಲಿ ಇಹಲೋಕ ತ್ಯಜಿಸುತ್ತಾನೆ ಎಂದು ಕೇಳಿದ್ದೆ. ಆ ಹದಿನೆಂಟು ದಿನವೂ ಕಳೆಯಿತು.  ಕೋವಿಡ್ ಬಂದರೂ ನನ್ನ ನಿಯಮಿತವಾದ ದಿನಚರಿಗೆ ಸ್ನಾನ ಜಪ ಯಾವುದಕ್ಕೂ ತೊಂದರೆ ಯಾಗಲಿಲ್ಲ. ಎಂದಿನಂತೆ ಮುಂಜಾನೆ ನಾಲ್ಕು ಗಂಟೆಗೆ ಎದ್ದು ಬಿಡುತ್ತಿದ್ದೆ. ತಣ್ಣೀರಲ್ಲಿ ಚೆನ್ನಾಗಿ ಸ್ನಾನ ಮಾಡಿ ಜಪ ಯೋಗಾಭ್ಯಾಸ ಮಾಡುತ್ತಿದ್ದೆ. ಕೋರೋನದ ಬಗ್ಗೆ ಒಂದಿಷ್ಟೂ ಆತಂಕವಿಲ್ಲದೇ ಮೊನ್ನೆಗೆ ನಿಗದಿಯಂತೆ ಇಪ್ಪತೊಂದು ದಿವಸವನ್ನೂ ಕಳೆದಾಯಿತು. ಮನೆಯಲ್ಲ ಸ್ವಚ್ಚ ಮಾಡಿ ವೈರಸ್ ಇಲ್ಲ ಅಂತ ಸಂಭ್ರಮಿಸಿದೆವು. ಮೊದಲು ಬಂದ ವೈದ್ಯ ತಂಡ ಮತ್ತೊಮ್ಮೆ ಬಂದು ಪರೀಕ್ಷೆಗೆ ಸ್ಯಾಂಪಲ್ ಪಡೆದು ಹೋದರು. ಇನ್ನೂ ನೆಗೆಟಿವ್ ಎಂದು ವರದಿ ಬಂದಿಲ್ಲ. ತೆಗೆದುಕೊಂಡು ಹೋಗಿ ವಾರ ಕಳೆಯಿತು. ಈಗ ಪಾಸಿಟಿವ್ ಇಲ್ಲ ಎಂಬ ಭರವಸೆ ಇದೆ.

            ಅಂತೂ ಕೋರೋನ ಎಂಬ ಅನುಭವ ಆಗಿಯೇ ಬಿಟ್ಟಿತು.

 

 

           

           


Sunday, October 4, 2020

ಮೊಬೈಲ್ ಭೂತ ದರ್ಶನ

         ಅನುತ್ಪಾದಕ ಬಯಕೆಗಳು ಮನುಷ್ಯನ ಅತೀ ದೊಡ್ಡ ದೌರ್ಬಲ್ಯ ಗಳು. ಮೊಬೈಲ್ ಎಂಬ ವಸ್ತು ಎರಡೂ ಅಗಿ ಭೂತವಾಗುವ ಅಪಾಯಕಾರಿ ವಸ್ತುವಾಗಿದೆ.‌ಈಗಿನ ಬೆಳೆಯುವ ತಂತ್ರಜ್ಞಾನದಲ್ಲಿ. ಕ್ಷಣಕ್ಕೂ ಮೊಬೈಲ್ ರೂಪ ಕಾರ್ಯ ಸಾಮಾರ್ಥ್ಯ ಬದಲಿಸುತ್ತವೆ ಅಂದರೆ ಅಪ್ಡೇಟ್ ಅಗುತ್ತವೆ ಮತ್ತು ತಮ್ಮ ಬೆಲೆಯನ್ನು ಹೆಚ್ಚುಸಿಕೊಳ್ಳುತ್ತವೆ.  

          ಒಂದು ಸಾಮಾನ್ಯ ಸರಳ ಮೊಬೈಲ್‌ ಪ್ರತಿಯೊಬ್ಬನ ಅತ್ಯಾವಶ್ಯಕ ಸಾಧನವಾಗಿದೆ. ಆದರೆ ಇದು ಅಸಾಮಾನ್ಯತೆಗೆ ಬದಲಾಗುವಾಗ ಅಪಾಯ ಕಟ್ಟಿಟ್ಟ ಬುತ್ತಿ. 

           ಹೊರ ಮತ್ತು ಒಳಬರುವ ಕರೆಗಳಿಗೆ, ಅತ್ಯಗತ್ಯ ಎನಿಸುವ ವಾಟ್ಸಪ್ ಇಮೇಲ್ ಬ್ಯಾಂಕಿಂಗ್ ಕೆಲಸಗಳು  ಮುಂತಾದ ಕೆಲವು ಸರಳ ಅವಶ್ಯಕತೆಗಳು ಹತ್ತರಿಂದ ಇಪ್ಪತ್ತು ಸಾವಿರದ ಮೊಬೈಲ್ ನಲ್ಲೂ ಏಕಪ್ರಕಾರವಾಗಿ ಪರಿಹರಿಸಲ್ಪಡುತ್ತದೆ. ಆದರೆ ಇದರಿಂದ ನಂತರದ ಬೆಲೆ ಬಾಳುವ ಮೊಬೈಲ್ ಗಳು ಅನುತ್ಪಾದಕ ವಸ್ತುವಾಗುವ ಅಪಾಯವೇ ಹೆಚ್ಚು. . 

          ಹಲವು ಮೊಬೈಲ್ ಕೆಲಸಗಳು ನಮ್ಮ ವೃತ್ತಿ ಜೀವನ ಆವಶ್ಯಜತೆಯನ್ನು ಪೂರೈಸಿ ಅದರಿಂದ ಒಂದಷ್ಟು ಅದಾಯಕ್ಕೆ ಸಹಾಯವಾದರೆ ಅದು ಉತ್ಪಾದಕ ವಸ್ತುವಾಗುತ್ತದೆ. ಹಲವರು ಖಾಸಗಿಯಾಗಿ ತಮ್ಮ ಮೊಬೈಲ್ ನ್ನೇ ಕಛೇರಿಯಾಗಿ ಪರಿವರ್ತಿಸುತ್ತಾರೆ. ಇದು ಮೊಬೈಲ್ ಮತ್ತು ಅದರೊಳಗಿನ ಉಪಯೋಗಗಳ ಸದ್ಬಳಕೆ. ಆದರೆ ಕೇವಲ ತಿಂಗಳ ಮಿತವಾದ ಅದಾಯದಲ್ಲಿ ತಿಂಗಳ ಸಂಬಳದಲ್ಲಿ ಬದುಕುವವನಿಗೆ ಇಪ್ಪತ್ತೈದು ಸಾವಿರದಿಂದ ದುಬಾರಿ ಮೊಬೈಲ್ ಅನಾವಶ್ಯಕ. ಆದರೆ ಇಂದು ತಮ್ಮಲ್ಲಿ ಇಲ್ಲದ ದುಡ್ಡಿನಲ್ಲಿ ಸಾಲ ಸೋಲ ಮಾಡಿ ಹೊಂದಾಣಿಕೆ ಮಾಡಿ 40  50 ಸಾವಿರದ ಮೊಬೈಲ್ ಕೊಳ್ಳುವುದು ಶೋಕಿಯಾಗುತ್ತದೆ. ತಮ್ಮ ಹಳೆಯ ಮೊಬೈಲ್ ನಲ್ಲಿ ಸಮಸ್ಯೆ ಇಲ್ಲದೇ ಇದ್ದರೂ ಆರು ತಿಂಗಳಿಗೊಮ್ಮೆ ಮೊಬೈಲ್ ಬದಲಿಸುವುದನ್ನು ನೋಡಬಹುದು. ಇದು ಶೋಕೀ ಜೀವನ.ಒಟ್ಟು ಬದುಕಿನಲ್ಲಿ ಎಲ್ಲ ಸುಖವನ್ನು ಹೊಂದಬೇಕು ಎನ್ನುವ ತುಡಿತ. ಇಂತಹ ತುಡಿತವನ್ನೇ ಮೊಬೈಲ್ ಕಂಪೆನಿಗಳು ಉಪಯೋಗಿಸುವ ಜಾಣತನವನ್ನು ತೋರುತ್ತವೆ. ಅದನ್ನು ತಿಳಿಯದೆ ಜನ ಹಳ್ಳಕ್ಕೆ ಬೀಳುತ್ತಾರೆ


         


ಪೇಸಬುಕ್ ವಾಟ್ಸಪ್ ಮುಂತಾದ ಸಾಮಾನ್ಯ ಸಂಗತಿಗಳು ಹತ್ತು ಸಾವಿರದ ಮೊಬೈಲ್ ನಲ್ಲೂ ಇರುತ್ತದೆ. ಅಷ್ಟೇ ಅವಶ್ಯಕತೆ ಇದ್ದರೂ ಸಾಲ ಮಾಡಿ ಐವತ್ತುಸಾವಿರದ ಮೊಬೈಲ್ ಹಿಂದೆ ಹೋಗುತ್ತಾರೆ.‌  ಹತ್ತು ಸಾವಿರದ ಮೊಬೈಲ್ನಲ್ಲಿ ಬರುವ ಫೇಸ್ ಬುಕ್ ಅದೇ ಐವತ್ತು ಸಾವಿರದ ದುಬಾರಿ ಮೊಬೈಲ್ ನಲ್ಲೂ ಬರುವುದು.  ದುಬಾರೀ ಸೌಲಭ್ಯಗಳನ್ನು ಪೂರ್ಣವಾಗಿ ಉಪಯೋಗಿಸುವುದಿಲ್ಲ ಮಾತ್ರವಲ್ಲ ಅದರ ಅಗತ್ಯವೂ ಇರುವುದಿಲ್ಲ.‌ಸುಮ್ಮನೇ ನಲ್ವತ್ತು ಸಾವಿರ ವನ್ನು ಪ್ರತಿಷ್ಠೆಗಾಗಿ ಸಾಲ ಮಾಡಿ ಕೊಳ್ಳುತ್ತಾರೆ. ಮುಂದೆ ಸಾಲದವರು ಕರೆ ಮಾಡಿದಾಗ ಒಂದೋ ಕರೆಯನ್ನ ಕಟ್ ಮಾಡುತ್ತಾರೆ ಇಲ್ಲ ತೆಗೆಯದೇ ಹಾಗೆ ಇಡುತ್ತಾರೆ. ಮೊಬೈಲ್ ಸದ್ದು ಮಾಡುತ್ತಿದ್ದಂತೆ ಅದೇ ದುಬಾರಿ ಮೊಬೈಲ್ ಭೂತವಾಗಿ ಕಾಡುತ್ತದೆ.