Saturday, January 4, 2020

ಮನೋಬಲಂ....ದೈವಬಲಂ



’ಏಕಾಗ್ರತೆ’   ಅದು ನೀಲಾಕಾಶದ ಮೋಡದಂತೆ,  ಹಾರಿ ಕೈಯಲ್ಲಿ ಹಿಡಿದಂತೆ,  ಕೈಯಲ್ಲಿದ್ದರೂ ಇಲ್ಲದಂತೆ.  ಒಂದು ಮುಂಜಾವದ ಅನುಭವ ಇದು.

               ಅದರ ಮೊದಲು ಬಾಲ್ಯದ ಒಂದು ಘಟನೆ ಹೇಳಬೇಕು.

            ಚಾವಡಿಯಲ್ಲಿ ನೇತು ಹಾಕಿದ್ದ ದೊಡ್ಡ ಬೃಹದ್ ಗಾತ್ರದ ತಿರುಪತಿ ಶ್ರೀನಿವಾಸನ ಪೊಟೋ ಅದು ಹೇಗೋ ಅಷ್ಟೆತ್ತರದಿಂದ ಕೆಳಗೆ ಬೀಳುತ್ತದೆ. ಗಾಜು ಪುಡಿ ಪುಡಿಯಾಗಿ ಪರಮಾತ್ಮ ದರ್ಶನ ಪ್ರಖರವಾದಂತೆ ಶ್ರೀನಿವಾಸ ದರ್ಶನವಾಗುತ್ತದೆ. ಮಸುಕಾಗಿದ್ದ ಚಿತ್ರ  ಪ್ರಖರವಾಗಿ ಕಟ್ಟಿನಿಂದ ಹೊರಬರಲು ಹವಣಿಸುತ್ತದೆ. ಅದು ಎರಡು ಅಡಿಯ ಬಹಳ ದೊಡ್ಡ ಪೋಟೊ. ದಪ್ಪನೆಯ ಚೌಕಟ್ಟು ಅಲ್ಲಲ್ಲಿ ಶಿಥಿಲವಾಗಿ ಬಣ್ಣ ಕಳೆದುಕೊಂಡಿತ್ತು. ಅದೆಲ್ಲಿಂದಲೋ ಮಾವ ತಂದು ಗೋಡೆಗೆ ನೇತು ಹಾಕಿದ್ದರು ಹಲವು ಪೋಟೊಗಳು ಗೋಡೆಯಲ್ಲಿದ್ದರೂ ಇದು ಎದ್ದು ಕಾಣುತ್ತಿತ್ತು. ಅಯ್ಯೋ ಬಿದ್ದು ಹೋಯ್ತಲ್ಲಾ ಅಂತ ಯೋಚಿಸಿ ಅದನ್ನು ಎತ್ತಿ ಬದಿಗಿರಿಸಿ ಒಡೆದು ಹೋದ ಗಾಜಿನ ಪುಡಿಯನ್ನು ಸ್ವಚ್ಛಗೊಳಿಸಿದೆ.  ಫೋಟೊದ ಹೊರಾವರಣದ ಶಿಥಿಲ ಚೌಕಟ್ಟನ್ನು ಕಿತ್ತೆಸೆದು ಶ್ರೀನಿವಾಸನ ಚಿತ್ರ ಹೊರಗೆಳೆದೆ. ಅಚ್ಚರಿಯೊಂದು ಕಾದಿತ್ತು. ಶ್ರೀನಿವಾಸನ ಪೊಟೊದ ಹಿಂದೆ ಇನ್ನೊಂದು ಚಿತ್ರ ಗೋಚರಿಸಿತು. ಸರಿ ಸುಮಾರು  ಅದೇ  ಗಾತ್ರದ ಚಿತ್ರ. ಆದರೆ ಅದು ದೇವರದ್ದಲ್ಲ. ಅದು ತಮಿಳಿನ ಖ್ಯಾತ ಚಿತ್ರ ನಟ  ಎಂ. ಜಿ. ಆರ್ ಚಿತ್ರವಾಗಿತ್ತು. ದಪ್ಪ ಕನ್ನಡಕ ಸೂಟು ಬೂಟು ತೊಟ್ಟ   ಆಜಾನುಬಾಹು.  ಆ ಫೋಟೋ ನೋಡಿ ಆಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟೆ. ಹಾಗಾದರೆ ...ಹಾಗಾದರೆ ಇದುವರೆಗೆ ಹೂಮಾಲೆ ಹಾಕಿ ಅಗರಬತ್ತಿ ಹಚ್ಚಿ ಕರ್ಪುರಾರತಿ ಬೆಳಗಿದ್ದು ಕೇವಲ ದೇವರಿಗೆ ಮಾತ್ರ ಸಲ್ಲುತ್ತಿರಲಿಲ್ಲ. ಕದ್ದು ಅದನ್ನು ಸ್ವೀಕರಿಸುವುದಕ್ಕೆ ಗರ್ಭದೊಳಗೆ ಬೇರೋಬ್ಬರು ಇದ್ದರು.

            ತಮಿಳರು ಸಿನಿಮಾ ನಟರನ್ನು ದೇವರಂತೆ ಪೂಜಿಸುವುದು ಜಗಜ್ಜಾಹೀರು.  ಹಲವು ಸಿನಿಮಾ ನಟರಿಗೆ ದೇವಾಲಯವನ್ನು ನಿರ್ಮಿಸಿದ ನಾಡದು. ಅಭಿಮಾನವೇ ದೊಡ್ಡದು. ಆದರೆ ಇನ್ನೊಬ್ಬರಿಂದಲೂ ಹೀಗೆ ಪೂಜೆ ಮಾಡಿಸುವ ಈ ತಂತ್ರ ಮಾತ್ರ ಆಶ್ಚರ್ಯವನ್ನು ತಂದಿತ್ತು . ಪೋಟೋ ಚ್ಜೌಕಟ್ಟು ಹಾಕಿದ ಪುಣ್ಯಾತ್ಮ ಯಾರೋ? ಎಂ ಜಿ ಆರ್ ನ ಬಹಳ ದೊಡ್ಡ ಅಭಿಮಾನಿಯಾಗಿರಬೇಕು.  ಆನಂತರ ಉಳಿದ ಸೀತಾರಾಮ ಗಣಪತಿ ಮುಂತಾದ ಫೋಟೊದತ್ತ ಅನುಮಾನದಿಂದ ನೋಡುವಂತಾಗಿತ್ತು. ಯಾವ ಉಪದೇಶದ ಅಗತ್ಯವೂ ಇಲ್ಲ. ತಾನು ಪೂಜೆ ಮಾಡುವುದನ್ನು ಮತ್ತೊಬ್ಬರೂ ಪೂಜೆ ಮಾಡಲಿ ಎಂಬ ಭಾವನೆ. ಇದೊಂದು ವಿಕೃತ ತೃಪ್ತಿ. ಹೇಗಿದ್ದರೂ ನಾವು ಫೋಟೊ ಕೊಳ್ಳುವಾಗ ಬಗೆದು ನೋಡುವುದಿಲ್ಲ ಎಂಬ ಅಚಲ ವಿಶ್ವಾಸವಿದೆ. ಹೀಗೆ ಆತ ನಂಬಿದ ದೇವರಿಗೆ ಅಗರಬತ್ತಿ ಹಚ್ಚಿಯಾಗಿತ್ತು.  ಆಗ ಆ ಮಹಾನ್ ವ್ಯಕ್ತಿ ಇನ್ನೂ ಜೀವಂತವಿದ್ದು ತಮಿಳುನಾಡನ್ನು ಆಳುತ್ತಿದ್ದರು ಎಂಬುದು ವಿಪರ್ಯಾಸ.

ಹಲವು ದಿನಗಳಿಂದ ಕೊರೆಯುವ ವಿಚಾರಗಳಿಗೆ ಬರಹ ರೂಪ ನೀಡಬೇಕು. ಎಲ್ಲಿಯೋ ಹೇಗೋ ಕಣ್ಣಿಗೆ ಗೋಚರಿಸದ ಈ ಭಾವನೆಗಳಿಗೆ ಒಂದು ರೂಪಕೊಡಬೇಕು ಎಂಬ ದೃಢ ಸಂಕಲ್ಪದಲ್ಲಿ ಕೈಯಲ್ಲಿ ಲೇಖನಿ ಹಿಡಿದು ಕುಳಿತರೆ ಒಂದಕ್ಷರವೂ ಬರೆಯಲಾಗದ ಸ್ಥಿತಿ ಬರುತ್ತದೆ. ಭಾವನೆಗಳು ಒಣ ಲಿಂಬೆಯಲ್ಲಿ ಅಡಗಿದ ರಸದಂತೆ ಇನ್ನೆಲ್ಲಿ ಬತ್ತಿ ಹೋಗುವುದೋ ಎಂಬ ಆತಂಕ ಒಂದೆಡೆಯಾದರೆ ಹಿಂಡಿದಷ್ಟೂ ತೊಟ್ಟು ಸಹಾ  ರಸ ಒಸರದ ಸ್ಥಿತಿ. ವೃಣದೊಳಗಿನ ನಂಜಿನಂತೆ ಅದು ಒತ್ತಿದಷ್ಟೂ ನೋವು ಹೆಚ್ಚಾಗುತ್ತದೆ ವಿನಃ ನಂಜು ಹೊರಬರುವುದಿಲ್ಲ. ದೇವರ ಕೋಣೆಯಲ್ಲಿರುವ ಸ್ವತಃ ಪರಮಾತ್ಮ ನಂಜುಂಡೇಶ್ವರ ರೂಪವು ಅಷ್ಟೇ ಅದು ಮನುಷ್ಯ ನಿರ್ಮಿತ ಕಲ್ಪನೆ. ಯಾರೋ ಓದಿದ ಬರೆದ ಚಿತ್ರವದು. ಶಿವ ಸ್ವರೂಪ ಹಾಗಾದರೆ ಪರಮಾತ್ಮ ಹೇಗೆ? ಸಾಕ್ಷಾತ್ ಪರಮಾತ್ಮನನ್ನು ಕಂಡವರು ಯಾರೂ ಇಲ್ಲ. ಹಾಗೋ ಹೀಗೋ ಪ್ರಪಂಚ ಈ ಕಲ್ಪನೆಯ ಹಿಂದೆ ನಿರಾಳವಾಗಿ ನಿರ್ಭಯವನ್ನು ಅನುಭವಿಸುತ್ತದೆ. ಪರಮಾತ್ಮ ಹೀಗೆ.....ಕೈಯಲ್ಲಿ ಚಕ್ರ ಮುಖದಲ್ಲಿ ಶಾಂತತೆ ಕಣ್ಣುಗಳಲ್ಲಿ ಆರ್ದ್ರತೆ, ಇದೆಲ್ಲ ಗ್ರಹಿಕೆ. ಪರಮಾತ್ಮ ನಿಜದರ್ಶನ ಇಂದಿಗೂ ಕಠಿಣ.  ಮೇಲೆ ಹೇಳಿದ ಘಟನೆ ವಿಡಂಬನೆಯ ನಗುವನ್ನು ತರುತ್ತದೆ.

ಬದುಕಿನಲ್ಲಿ ಹಲವು ಪ್ರಶ್ನೆಗಳೂ ಹೀಗೆ ನಮ್ಮೊಳಗೇ ನಗುತ್ತವೇ, ಅಳುತ್ತವೆ , ತಳಮಳವನ್ನು ಸೃಷ್ಟಿಸುತ್ತವೆ. ಹೇಳುವುದಕ್ಕೆ ತೊಡಗಿದರೆ ಅವುಗಳಿಗೆ ರೂಪವೇ ಇಲ್ಲದ ನಿಸ್ಸಹಾಯಕ ಸ್ಥಿತಿ ನಮ್ಮದಾಗುತ್ತದೆ. ಗಡಿಯಾರದ ಮುಳ್ಳು ತಿರುಗಿದಂತೆ  ಈ ಸ್ಥಿತಿಗೆ ಬಂದಾಗ ಇಷ್ಟು ಹೊತ್ತಾಯಿತು ಅಂತ ಮನುಷ್ಯನ ಲೆಕ್ಕಾಚಾರ. ಚಲಿಸುವ ಗೃಹಗಳಿಗೂ ಗೊತ್ತಿರದ ಲೆಕ್ಕವನ್ನು ಮನುಷ್ಯ ಮಾಡುತ್ತಾನೆ. ಮುಂಜಾನೆ ಗಡಿಯಾರ ನಾಲ್ಕು ಬಡಿದಾಗ ಎಚ್ಚರವಾಗುತ್ತದೆ.  ಆ ಏಟು ನಮಗೇ ತಗುಲಿದ ಅನುಭವ ಎಚ್ಚರವಾದದ್ದು ದೇಹವೋ ಮನಸ್ಸೋ ಎಂಬ ಗೊಂದಲದಲ್ಲೇ ಮುಂದಿನ ಸ್ವಲ್ಪ ಹೊತ್ತು ಕಳೆಯುತ್ತದೆ. ನಿದ್ದೆಯಿಂದ ಎಚ್ಚೆತ್ತುಕೊಳ್ಳುವುದೂ ಆವರಿಸಿದ ಮೌಢ್ಯದಿಂದ ಎಚ್ಚರವಾಗುವುದಕ್ಕೂ ವೆತ್ಯಾಸವಿದೆ. ಆದರೆ ಎರಡು ಒಂದೇ ಘಳಿಗೆಯಲ್ಲಿ ಆಗುವ ಅಪೂರ್ವ ಸಮಯವಿದ್ದರೆ ಅದು ಮುಂಜಾನೆ.. ಸ್ನಾನ ಮುಗಿಸಿ ಮನೆಯ ತಾರಸೀ ಮೇಲೆ ಬಂದಾಗ ಮೂಡಣದಲ್ಲಿ ಕೆಂಪು ಗೋಚರಿಸುತ್ತದೆ.  ಸುತ್ತಲಿನ ಮೌನ ನನ್ನ ಉಸಿರನ್ನೇ ಕೇಳಿಸುವಂತೆ ಮಾಡುತ್ತದೆ. ಕಳೆದ ದಿನ ಘಟನೆಗಳೆಲ್ಲ ನೆನಪಿಗೆ ಬರುತ್ತವೆ. ಈದಿನದ ನಿರೀಕ್ಷೆಗಳು ಚಿಗುರೊಡೆಯುತ್ತದೆ.  ನಮ್ಮಲ್ಲಿಲ್ಲದವುಗಳ ಬಯಕೆಯಲ್ಲಿ ಅತೃಪ್ತಿ ಅರಿವಿಲ್ಲದೇ ಹೊಗೆಯಾಡುತ್ತದೆ.

ಕೈಯಲ್ಲಿ ಅರ್ಘ್ಯದ ಜಲಧಾರೆ ಹಿಡಿದು ಪೂರ್ವಾಭಿಮುಖವಾಗಿ ನಿಂತಾಗ ಉದಿಸದ ಸೂರ್ಯ ಮುಸಿ ಮುಸಿ ನಗುತ್ತಿರಬಹುದು. ತುಟಿಯಲ್ಲಿ ಗಾಯತ್ರೀ ಮಂತ್ರ ಪಠಿಸಿದರೆ ಮನಸ್ಸು ಸಮಯದ ಅರಿವಿಲ್ಲದೆ ನಿನ್ನೆಯ ಮೊನ್ನೆಯ ಅದರ ಮೊನ್ನೆಯ ಘಟನೆಗಳನ್ನೇ ಲೆಕ್ಕ ಹಾಕುತ್ತದೆ. ಒಂದು ಸಲ ದೇವರ ಕೋಣೆಯ ಚಿತ್ರದ ಪರಮೇಶ್ವರನನ್ನು ಕಲ್ಪಿಸಿ ಇದುವೇ ಏಕಾಗ್ರತೆ ಅಂತ ಭಾವಿಸಿದರೂ ಮರುಕ್ಷಣ ಮನಸ್ಸು ತೀರಾ ಲೌಕಿಕವಾಗಿಬಿಡುತ್ತದೆ. ಏಕಾಗ್ರತೆ ಸಿದ್ದಿಸುವುದಿಲ್ಲ. ಪದ್ಮಾಸನ ಬಳಿದು ಮುಷ್ಠಿಯಲ್ಲಿ ಯಜ್ಞೋಪವಿತ ಹಿಡಿದು ಎದೆಗೊತ್ತಿ ಗಾಯತ್ರೀ ಜಪ ಮಾಡಿದರೂ ಹೇಳುವ ಮಂತ್ರಕ್ಕೂ ಮಾಡುವ ಪ್ರವೃತ್ತಿಗೂ ಹೊಂದಿಕೆಯಾಗುವುದಿಲ್ಲ. ಛೇ ....ಕರ್ಮವೂ ಅಭಿನಯವಾಗುತ್ತಿದೆಯಲ್ಲ? ದೇವರ ಎದುರಿಗೆ ನಟಿಸುವ ನಮಗಿಂತಲೂ ದೊಡ್ಡ ನಟ ಇರಲಾರದು ಅಂತ ಅನ್ನಿಸುತ್ತದೆ. ಭಕ್ತಿ ಧ್ಯಾನ ಹೇಗಿರುತ್ತದೆ ಎಂಬ ದ್ವಂದ್ವದಲ್ಲೇ ಎಲ್ಲ ಕಳೆದು ಬಿಟ್ಟು ಇನ್ನು ಸಮಯವಿಲ್ಲ ಎಂದು ಸೋತು ಹೋದ ಸೇನಾಪತಿಯಂತೆ ರಂಗದಿಂದ ಹೊರಬರುತ್ತೇನೆ.

ಹಲವರ ಸಮಸ್ಯೆಯೇ ಇದು ಹಿರಿಯರೊಬ್ಬರು ಹೀಗೆ ವಾದ ಮಾಡುವಾಗ ಹೇಳಿದ್ದರು ಏಕಾಗ್ರತೆ ಎಂಬುದೇ ಇಲ್ಲ. ಮನಸ್ಸು ಒಂದನ್ನೇ ಯೋಚಿಸುವುದಿಲ್ಲ. ಹತ್ತು ಹಲವು ಸಂಗತಿಗಳು ಬೇಡದೇ ಇದ್ದರೂ ನೆನಪಿಗೆ ಬರುತ್ತದೆ. ಮತ್ತೆ ಏಕಾಗ್ರತೆ ಹೇಗೆ ಸಾಧ್ಯ?  ಈ ರೀತಿ ಯೋಚನೆಗಳ ಧಾಳಿಯಾಗುವಾಗ ಎಲ್ಲವನ್ನು ಕೊಡವಿ ನಾನು ಏನಕ್ಕಾಗಿ ಮುಂಜಾನೆ ಎದ್ದಿದ್ದೇನೆ? ಆ ಚಳಿಯಲ್ಲೂ ತಣ್ಣೀರ ಸ್ನಾನ ಮಾಡಿ ಯಾಕಾದರೂ ನಿಂತಿದ್ದೇನೆ ಅಂತ ಯೋಚಿಸುತ್ತದೆ. ಯಾರೂ ಹೀಗೆ ನಿಲ್ಲು ಅಂತ ಕೋಲು ಹಿಡಿದು ನಿಲ್ಲಲಿಲ್ಲ. ಮತ್ತೆ?  ಮನುಷ್ಯ ಎಲ್ಲವನ್ನು ದುಡ್ದು ಕೊಟ್ಟು ಕೊಳ್ಳಬಹುದು ಆದರೆ ಏಕಾಗ್ರಚಿತ್ತ ಕೊಳ್ಳುವುದು ಕಷ್ಟ.

ಮೊನ್ನೆ ಪೇಜಾವರದ ಪಿತಾಮಹ ಪರಮಾತ್ಮ ಪಾದ ಸೇರಿದ್ದು  ಲೋಕ ಕಂಡಿತು. ಜಡ ದೇಹವನ್ನು ಸಮಾಧಿ ಸ್ಥಿತಿಗೆ ಕುಳ್ಳಿರಿಸಿ ಭಕ್ತ ಸಮೂಹ ಹೃದಯ ಭಾರ ಮಾಡಿಕೊಂಡು ಅಂತಿಮ ಕ್ರಿಯೆಗಳನ್ನು ನಡೆಸುವಾಗ ಆ ಗುರು ಪಿತಾಮಹರ ಮುಖವನ್ನು ನೋಡುತ್ತೇನೆ ಅದೇ ಮಂದ ಹಾಸ. ಅದೇ ಶಾಂತತೆ. ಇಲ್ಲ ಏನೂ ಆಗಿಲ್ಲ ಪೇಜಾವರ ಶ್ರೀಪಾದರು ಹಾಗೇ ಇದ್ದಾರೆ. ಆ ದೇಹ ಇನ್ನೂ ಚೈತನ್ಯವನ್ನು ಹೊರಸೂಸುತ್ತದೆ. ಹೀಗೆ ಕಲ್ಪಿಸುತ್ತೇನೆ. 

ಇದೀಗ ಮನಸ್ಸಲ್ಲಿ ಪ್ರಶ್ನೆ ಏಳುತ್ತದೆ

ಇದುವರೆಗೆ ಆ ಜಡದೇಹದೊಳಗಿದ್ದ ಮನಸ್ಸು ಎಲ್ಲಿ ಹೋಯಿತು? ಅಲ್ಲೇ ಎಲ್ಲೋ ಸುತ್ತಾಡುತ್ತಿರಬಹುದೇ? ದೇಹ ಕಣ್ಣೆದುರು ಕಾಣುತ್ತಿದೆ. ಆದರೆ ವೆತ್ಯಾಸ ಒಂದೆ ಆ ಅದ್ಬುತ ಮನಸ್ಸು ಅಸ್ತಿತ್ವದಲ್ಲಿ ಇಲ್ಲ. ಅದು ದೇಹವನ್ನು ಬಿಟ್ಟಿದೆ. ಗುರುಗಳು ಅಂತ್ಯದಲ್ಲೂ ಒಂದು ಸಂದೇಶವನ್ನು ಬಿಟ್ಟು ಹೋದ ಅನುಭವವಾಯಿತು.  

ಆ ಮನಸ್ಸು ಒಂದು ಇರುತ್ತಿದ್ದರೆ, ಇನ್ನೂ ಗುರುಗಳು ಲೋಕದ ಬಗ್ಗೆ ಚಿಂತಿಸುತ್ತಿದ್ದರು. ಪರಮಾತ್ಮ ಶ್ರೀ ಕೃಷ್ಣನ ಬಗ್ಗೆ ಹಾಡಿ ಹೊಗಳುತ್ತಿದ್ದರು. ಆ ಮನಸ್ಸೊಂದು ಇಲ್ಲ. ಮತ್ತೆಲ್ಲವೂ ಇದೆ. ಅರಿವಿಗೆ ಬರುತ್ತದೆ. ಗುರುಗಳ ಆ ಮನಸ್ಸೇ ಭಗವಂತ. ಶ್ರೀ ಕೃಷ್ಣ ಬೇರೆ ಅಲ್ಲ. ಆ ಮನಸ್ಸು ಬೇರೆ ಅಲ್ಲ. ಅದ್ವೈತ ! ಗುರುಗಳ ದೇಹ ಕೃಶವಾದರೂ ಮನಸ್ಸು ಬಲಿಷ್ಠವಾಗಿತ್ತು. ಸಾವಿರ ಶತ ಸಾವಿರ ದೇಹಗಳಿಗೆ ಮನಸ್ಸುಗಳಿಗೆ ಮುಂದಿನ ದಾರಿಯನ್ನು ತೋರಿಸುತ್ತಿತ್ತು.

 ಹಾಗಾದರೆ ಗುರುಗಳ ಮನಸ್ಸು ಮಾತ್ರ ಯಾಕೆ ದೇವರಾಗುತ್ತದೆ? ಹಾಗಾದರೆ ನನ್ನ ಮನಸ್ಸು??

ಅಷ್ಟೇ...,   ನನ್ನ ಮನಸ್ಸು ನನ್ನ ದೇವರು. ಆ ದೇವರನ್ನು ಪೂರ್ಣವಾಗಿ ಕಾಣಬೇಕು. ಅದಕ್ಕೆ ನಾನು ಸಿದ್ಧವಾಗಬೇಕು. ಮನಸ್ಸು ದೇವರು ಹೊರಗೆಲ್ಲೂ ಇಲ್ಲ ಯಾವ ರೂಪವೂ ಇಲ್ಲ. ಅದಕ್ಕಾಗಿ ಗುಡಿಯ ಮುಂದೆ ಸರದಿಯ ಸಾಲಲ್ಲಿ ನಿಲ್ಲಬೇಕಾಗಿಲ್ಲ. ಶಿಲ್ಪಿಯು ನಾನೇ ಶಿಲೆಯೂ ನಾನೇ. ಶಿಲ್ಪವೂ ನಾನೇ. ಮಹಾ ಅದ್ವೈತವಿದು.  ನನ್ನ ಮನಸ್ಸು ಹೇಗೋ ಹಾಗೆ ದೇವರಿದ್ದಾನೆ.  ಮನಸ್ಸಿನ ಕಲ್ಪನೆಗಳು ಒಂದೊಂದೆ ತೊಳೆದು ಹೋಗುತ್ತದೆ. ಅದೋ ದೇವರು? ಈ ರೂಪ ದೇವರದ್ದಾಗಿರಬಹುದೇ? ಆ ಚಂಚಲತೆ ಕಳಚುತ್ತದೆ.   ಹಾಗಾದರೆ ಮನವನ್ನೇ ದೇವರಾಗಿ ಕಾಣಬೇಕು. ಒಂದು ರೀತಿ ಅದ್ವೈತ ಸ್ಥಿತಿ.  ಮನಸ್ಸು ದೇವರು ಎಂಬ ಕಲ್ಪನೆಯಲ್ಲಿ ಮನಸ್ಸು ಸ್ಥಿರವಾಗುತ್ತದೆ. ಚಂಚಲತೆ ದೂರಾಗುತ್ತದೆ. ಧ್ಯಾನದಲ್ಲಿ ಚರಮ ಸ್ಥಿತಿಯತ್ತ ಚಲಿಸಿದ ಅನುಭವ.  ಮನಸ್ಸು,  ದೇವರು. ಈ ಕಲ್ಪನೆ ಬಂದೊಡನೆ ಉಡುಪಿಯ ಅಜ್ಜ ಮತ್ತೊಮ್ಮೆ ನಗುತ್ತಾರೆ. ಆಯ್ಯೋ ಮೂರ್ಖ ಇಷ್ಟು ಸಮಯ ಅದನ್ನೇ ಹೇಳಿದ್ದು. ಮನಸ್ಸಿನ ರೂಪದಲ್ಲಿ ಭಗವಂತನಿದ್ದಾನೆ. ಮನಸ್ಸಿನ ಚಿಂತನೆಯಲ್ಲಿ ಭಗವಂತನನ್ನು ತಾ. ಅಷ್ಟೇ ಪರಮಾತ್ಮ ದರ್ಶನವಾಗುತ್ತದೆ. ಜಡದೇಹದಲ್ಲೂ ಗುರು ತತ್ವ ವಿಶ್ವ ತತ್ವದ ಭೋಧನೆಯಾಗುತ್ತದೆ. ಅಜ್ಜ ಮತ್ತೂ ನಗುತ್ತಲೇ ಇದ್ದಾರೆ ಅಂತ ಅನಿಸಿತು.  ಮನಸ್ಸು ನಗುತ್ತಿದ್ದರೆ ಮುಖವು ನಗುತ್ತಿದೆ.  ಮನಸ್ಸು ಮನಸ್ಸು...  ಆ ಮನಸ್ಸು ಈ ಮನಸ್ಸು   ಅವರು ಇವರು  ಹೀಗೆ ವಿಶ್ವವ್ಯಾಪಿಯಾಗುವ ಆ ಮನಸ್ಸುಗಳು.  ಅಮ್ಮ ಅಪ್ಪ ಹೆಂಡತಿ ಮಕ್ಕಳು ಒಡನಾಡಿಗಳು ಎಲ್ಲರ ಮನಸ್ಸೂ ಒಂದೇ ರೂಪ. ಛೇ ಎಂತಹ ಸರಳ ತತ್ವ? ಗಾಯತ್ರೀ ವಿಶ್ವಾಮಿತ್ರ ವಿಶ್ವಮಯವಾದ ಅನುಭವ. ಹಾಗಾದರೆ ಉಳಿದ ಬಾಂಧವ್ಯಗಳ ಅರ್ಥವೇನು?

ಮಿತ್ರನ ಅಂಗಡಿಗೆ ಹೋಗುತ್ತೇವೆ. ಬೇಕಾದ ಸಾಮಾಗ್ರಿ ಕೊಳ್ಳುತ್ತೇವೆ. ಮಿತ್ರ ಎಂಬ ಕಾರಣಕ್ಕೆ ದುಡ್ಡು ಕೊಡದೇ ಇದ್ದರೆ ನಾವು ಅವನಿಗೆ ಮಾಡುವ ದ್ರೋಹವಾಗುತ್ತದೆ. ದುಡ್ಡು ಕೊಡುವುದು ಸಾಮಗ್ರಿ ಕೊಳ್ಳುವುದು ಅದು ಲೌಕಿಕವ್ಯವಹಾರ. ಅದರಾಚೆಗೆ ಮಿತ್ರತ್ವ ನಿಲ್ಲುತ್ತದೆ. ಅಪ್ಪ ಅಮ್ಮ ಹೆಂಡತಿ ಮಕ್ಕಳೂ ಅಣ್ಣ ತಮ್ಮ ಬಂಧು ಬಳಗ ಎಲ್ಲ ಮನಸ್ಸಲ್ಲೂ ದೇವರಿದ್ದಾನೆ . ಮತ್ತೆ ಈ ಸಂಬಂಧಗಳೆಲ್ಲ ಮಿತ್ರನ ಅಂಗಡಿಯ ವ್ಯವಹಾರದಂತೆ ಕೇವಲ ಲೌಕಿಕ.     ಮಿತ್ರತ್ವ ಮಾತ್ರ ಸ್ಥಾಯಿಯಾಗಿ ವ್ಯವಹಾರವೆಂಬುದು ತಾತ್ಕಾಲಿಕ ಸಂಬಂಧವಾಗಿರುತ್ತದೆ.
ಓಂ ಶಾಂತಿಃ ಶಾಂತಿಃ ಶಾಂತಿಃ.