Wednesday, January 27, 2021

ರಾಮ ಸರ್ವಾಂತರ್ಯಾಮಿ


"ನಮ್ಮ ಮನಸ್ಸಿನಲ್ಲಿ ಇಲ್ಲದೇ ಇರುವ ಪರಮಾತ್ಮನನ್ನು ನಾವು ಸರ್ವಾಂತರ್ಯಾಮಿ ಎನ್ನುತ್ತಿದ್ದೇವೆ.  "

 

ಚಿತ್ರಕಾರನಿಗೆ ಧನ್ಯವಾದಗಳು

ಸತ್ಯ ಕಹಿ ಅಂತ ಮೂರ್ಖರು ಹೇಳುವ ಮಾತು. ಸತ್ಯ ಕಹಿಯೂ ಅಲ್ಲ ಸಿಹಿಯೂ ಅಲ್ಲ ಅದು ಕೇವಲ ಸತ್ಯವಾಗಿಯೇ ಇರುತ್ತದೆ. ಹಾಗಾಗಿಯೇ ಅದು ಸತ್ಯ ಎಂದಾಗುವುದು. ಸತ್ಯವನ್ನು ಕಹಿ ಅಂತ ಅರಗಿಸಿಕೊಳ್ಳಲಾಗದೇ ಇರುವಲ್ಲಿ ಸತ್ಯದ ಹಿನ್ನೆಲೆಯನ್ನು ತರ್ಕಿಸಲಾಗುತ್ತದೆ. ಪರೀಕ್ಷಾ ರಂಗದಲ್ಲಿ ಕರ್ಣ ಅರ್ಜುನನಿಗೆ ಸಮದಂಡಿಯಾಗಿ ಪ್ರದರ್ಶನ ನೀಡಿದ್ದು ಸತ್ಯ. ಆದರೆ ಆ ಸತ್ಯ ಅಲ್ಲಿ ಅಪ್ರಸ್ತುತವಾಗಿ ಕರ್ಣನ ಹಿನ್ನೆಲೆಯನ್ನು ಕೆದಕಲಾಯಿತು. ತೀರ ಅವಶ್ಯಕವಿದ್ದಲ್ಲಿ ಈ ಸತ್ಯವನ್ನು ಕೆದಕುವುದಿಲ್ಲ.  ಸತ್ಯ ಯಾವಾಗಲೂ ಅಬಾಧಿತವಾಗಿರುವುದು. ಅದು ಬಾಧೆಗೆ ಒಳಗಾದಂತೆ ಭಾಸವಾಗುವುದು ನಮ್ಮ ದೃಷ್ಟಿಯಿಂದ.

ರಾಮನು ಕಾಡಿಗೆ ಹೋದನು. ರಾಮ ಎಂದು ಬರುವಾಗ ಅಲ್ಲಿ ಅಯೋಧ್ಯೆಗಿಂತಲೂ ಮೊದಲು ಸ್ಮರಣೆಗೆ ಬರುವುದೆಂದರೆ ಅದು ಕಾಡು. ಹಾಗಾಗಿ ರಾಮನು ಕಾಡಿಗೆ ಹೋದನು. ಮೂರ್ಖನಾದವನು ಚಿಂತಿಸುವ ರೀತಿಯೇ ಬೇರೆ. ರಾಮ ಇದ್ದನೇ?  ರಾಮಾಯಣ ನಡೆದದ್ದು ನಿಜವೇ? ಕಾಡಿನಲ್ಲಿ ಇದ್ದದ್ದು ಸತ್ಯವೇ? ಹೀಗೆ ರಾಮನ ಹಿಂದಿನ ಸತ್ಯವನ್ನೇ ಕೆದಕುವುದು.ಯಾಕೆಂದರೆ ರಾಮನ ಅಸ್ತಿತ್ವ ಸಹಿಸುವುದಕ್ಕೆ ಆಸಾಧ್ಯವಾಗುತ್ತದೆ. ರಾಮನ ಅಸ್ತಿತ್ವದ ಬಗ್ಗೆ ಚಿಂತಿಸುವ ಮೊದಲು ರಾಮ ತತ್ವವನ್ನು ಯೋಚಿಸಬೇಕು. ರಾಮನಿಗಿಂತಲೂ ಸತ್ಯ ರಾಮ ತೋರಿಸಿದ ತತ್ವಗಳು. ಈ ತತ್ವಗಳು ಕಹಿಯಾಗುವಾಗ ರಾಮ ಎನ್ನುವುದು ಸುಳ್ಳಾಗಿ ಭಾಸವಾಗುತ್ತದೆ.

ರಾಮ ಕಾಡಿಗೆ ಹೋದನು.  ರಾಮನಿಗೆ ಜನನದಿಂದ ಕಾಡು ಹತ್ತಿರವಾಗಿರುತ್ತದೆ. ರಾಮ ಕಥೆಯಲ್ಲಿ ಕಾಡು ಒಂದು ಪ್ರಮುಖ ಅಂಶವಾಗಿದೆ.  ರಾಮಾಯಣದ ಪ್ರತಿಹಂತದಲ್ಲು ಒಂದಲ್ಲ ಒಂದು ವಿಧದಲ್ಲಿ ವ್ಯಕ್ತಿತ್ವ ಕಾಡಿಗೆ ಅಂಟಿಕೊಂಡೇ ಇರುತ್ತದೆ. ಆದಿಯಲ್ಲಿ ಯಜ್ಞ ರಕ್ಷೆಗೆ  ವಿಶ್ವಾಮಿತ್ರರು ಕಾಡಿಗೆ ಕರೆದೊಯ್ಯುತ್ತಾರೆ. ನಂತರ ವನವಾಸ. ಇಲ್ಲಿರುವ ತತ್ವ ರಾಮನಿಗೆ ಕಾಡು ಎಷ್ಟು ಹತ್ತಿರವಾಗಿದೆ ಎಂದಾಗಿರುತ್ತದೆ. ಸೀತೆಯನ್ನು ಕಾಡಿಗೆ ಅಟ್ಟಿದನು. ಸೀತೆಗೆ ಅನ್ಯಾಯವಾಯಿತು. ಹೆಣ್ಣು ಯಾವತ್ತಿದ್ದರೂ ಶೋಷಿತಳು ಹೀಗೆ ವಿಶ್ಲೇಷಿಸುವಾಗ ರಾಮನಿಗೂ ಕಾಡಿಗೂ ಇರುವ ಸಂಬಂಧವನ್ನು ಯೋಚಿಸುವುದಿಲ್ಲ. ಯಾಕೆಂದರೆ ತತ್ವ ಕಠಿಣವಾದಾಗ ಅದರ ಹಿಂದಿನ ಸತ್ಯ ಕಹಿಯಂತೆ ಭಾಸವಾಗುತ್ತದೆ. 

ಬಾಲ್ಯದಲ್ಲಿ ನಾನು. ಸಿನಿಮಾಕ್ಕೆ ಹೋಗಿದ್ದೆ. ಸಿನಿಮಾ ಎಂದರೆ ಏನು ಅಂತ ತಿಳಿಯದು. ತೆರೆಯ ಮೆಲೆ ಚಿತ್ರ ವಿಚಿತ್ರ ನೋಡಿ ಬೆರಗಾದೆ. ಚಿತ್ರದ ಕಥೆಯ ಬಗ್ಗೆ ಯೋಚಿಸಲಿಲ್ಲ. ವಿರಾಮದ ವೇಳೆಯಲ್ಲಿ ಟಾಕೀಸ್ ಹಿಂಭಾಗ ಹೋಗಿ ನೋಡಿದೆ...ಸಿನಿಮಾದಲ್ಲಿ ಬಂದ ಮಂದಿ ಅಲ್ಲೆಲ್ಲಾದರೂ ಕಾಣ ಸಿಗುತ್ತಾರೆಯೇ? ನನ್ನಂತೆ ಹಲವರು ಇಣುಕಿ ನೋಡುತ್ತಿದ್ದರು...! ನಮಗೆ ಕಥೆಗಿಂತಲೂ ವಿಚಿತ್ರವಾದ ವಿಷಯ ಬೇರೆಯೇ ಆಗಿತ್ತು. ಸಿನಿಮಾದಲ್ಲಿ ಯಾವ ಸಂದೇಶ ಬಂದರೇನು? ನಮಗದು ಬೇಡ. ನಾವು ತೆರೆಯ ಹಿಂದಿನ ಸತ್ಯ ಹುಡುಕುತ್ತಾ ಹೋದೆವು.

            ಶ್ರೀ ರಾಮನಿಗೆ ಆಯೋಧ್ಯಾ ನಗರಕ್ಕೂ ದಂಡಕಾರಣ್ಯಕ್ಕೂ ವೆತ್ಯಾಸವೇ ಇರಲಿಲ್ಲ.  ಶರೀರಾದ್ಯಂತದಲ್ಲಿ ಮೇಲೆ ಇರುವ ಕೈಗೂ  ಕೆಳಗಿರುವ ಪಾದಕ್ಕೂ ವೆತ್ಯಾಸ ಕಲ್ಪಿಸುವವನು ಮೂರ್ಖನಾಗುತ್ತಾನೆ. ನೋವಾದರೆ ಕೈಗಾದರೇನು ಕಾಲಿಗಾದರೇನು ಸಹಿಸುವುದು ದೇಹವೇತಾನೇ? ಸಮಸ್ತ ಭೂಮಿಯೇ  ಶ್ರೀರಾಮನಿಗೆ ದೇಹವಿದ್ದಂತೆ.  ಇಂದು ಜನಪ್ರತಿನಿಧಿಗಳಾದ ಕೂಡಲೇ ರಾಜಧಾನಿಯನ್ನೇ ಸ್ವಂತ ಮನೆಯಂತೆ ಕಾಣುವ ಮಂದಿಗೆ ರಾಮನ ಈ ತತ್ವದ ಆಳ ಅರಿವಾಗುವುದಿಲ್ಲ.  ಕಾಡಿಗೆ ಹೋಗುವಲ್ಲಿ ಕೈಕೇಯಿ ಮಂಥರೆ ಇದಾವುದೂ ಮುಖ್ಯವೆನಿಸಲಿಲ್ಲ.  ಪಿತೃವಾಕ್ಯ ಎಂಬುದು ಒಂದು ತತ್ವವಾದರೆ ಕಾಡು ತನ್ನದೆಂಬ ಕರ್ತವ್ಯ ಮಮಕಾರ ಇನ್ನೊಂದೆಡೆ. ಹಾಗಾಗಿ ಅಯೋಧ್ಯೆಯ ಬೀದಿಗಳಂತೆ ದಂಡಕಾರಣ್ಯದ ಗುಡ್ಡ ಕಣಿವೆಗಳು.

ಯಾರೋ ಒಬ್ಬ ಯಃಕಶ್ಚಿತ್  ಅಗಸನ ಮಾತನ್ನು ಕೇಳಿ ಸೀತೆಯನ್ನು ಕಾಡಿಗೆ ಬಿಟ್ಟ. ಇದು ಅಮಾನವೀಯತೆ ಅಂತ ಬಣ್ಣಿಸುವುದು ಸುಲಭ.  ಸೀತೆಯನ್ನು ಬೇರೆಲ್ಲೂ ಬಿಡಲಿಲ್ಲ, ತನಗೆ ಪ್ರಿಯವಾದ ಕಾಡನ್ನೇ ಆಯ್ಕೆ ಮಾಡಿದ್ದ. ತನ್ನೊಂದಿಗಿನ ಹದಿನಾಲ್ಕು ವರ್ಷದ ವನವಾಸದಲ್ಲಿ ಕಾಡು ಎಂದರೇನೆಂದು ಆಕೆಗೆ ಶ್ರೀರಾಮ ತೋರಿಸಿಕೊಟ್ಟ ಮೇಲೆ ಕಾಡಿಗೆ ಬಿಡುವ ತತ್ವವೇ ಪವಿತ್ರವಾಗಿರುತ್ತದೆ. ಅರಸನಾದವನು  ಕೇವಲ ಒಬ್ಬ ಮನುಷ್ಯನ ಮಾತಿಗೆ ಮನ್ನಣೆ ಕೊಡುತ್ತಾನೆ ಎಂದರೆ ಈಗಿನ ಆಢಳಿತ ಮಂದಿಗಳನ್ನು ನೋಡಿ ಕೇಳಬೇಕಾದವರ ಮಾತೇ ಇವರಿಗೆ ಕೇಳಿಸುವುದಿಲ್ಲ.!! ರಾಮನ ತತ್ವ ಇನ್ನೂ ಆಳಕ್ಕೆ ಯೋಚಿಸಬೇಕು. ಶ್ರೀ ರಾಮ ಕೇವಲ ರಾವಣ ಸಂಹಾರಕ್ಕಾಗಿ ಬರಲಿಲ್ಲ. ಸೀತೆಯನ್ನು ವರಿಸುವುದಕ್ಕಾಗಿ ಅವತರಿಸಲಿಲ್ಲ ತಾನು ಅಧಿಕಾರದಲ್ಲಿದ್ದರೇನು, ತನ್ನ ಅಷ್ಟೂ ಮಂದಿ ಪ್ರಜೆಗಳಲ್ಲಿ ಒಬ್ಬ ತನ್ನ ಬಗ್ಗೆ ಅಪಸ್ವರ ಎತ್ತುತ್ತಾನೆ ಎಂದಾಗ ರಾಮ ಅದಕ್ಕೆ ಪೂರಕವಾಗಿಯೇ ತನ್ನ ನಡೆಯನ್ನು ತೋರಿಸಿದ. ಉನ್ನತವಾದ ಸ್ಥಾನ ಉನ್ನತಿಯನ್ನು ತೋರುವುದೆಂದರೆ ಹೀಗೆ. ನಾವು ಉನ್ನತವಾದ ಸ್ಥಾನದಲ್ಲಿ ಎಲ್ಲರಿಗೂ ಕಾಣುವಂತಿರುವಾಗ ಬಹುಮತವನ್ನು ಪರಿಗಣಿಸುವುದಲ್ಲ, ಸರ್ವಾನುಮತವನ್ನು ಅಂಗೀಕರಿಸಬೇಕು. ರಾಮ ಮತ್ತು ರಾಮನ ಹಾದಿಯನ್ನು ಅನುಸರಿಸುವಾಗ ಈ ಅಂಶಗಳೇ ಪ್ರಧಾನವಾಗಿರುತ್ತವೆ. ತಮ್ಮ ಬಗೆಗಿನ ಒಂದು ಅಪಸ್ವರವನ್ನೂ ಮನ್ನಿಸಬೇಕಾಗುತ್ತದೆ. ಇದನ್ನು ರಾಮ ತಾನು ಆಚರಿಸಿ ತೋರಿಸಿದರೆ ಇಂದಿನ ಉನ್ನತ ವ್ಯಕ್ತಿಗಳನ್ನು ಗಮನಿಸಿ ರಾಮನ ಅನುಸರಣೆಗೆ ಎಷ್ಟು ಮನ್ನಣೆ ಒದಗಿಸುತ್ತಾರೆ ಎಂದು ಅರಿವಾಗುತ್ತದೆ.   ಸ್ವರವೋ ಅಪಸ್ವರವೊ ವಿರುದ್ಧವಾಗಿದ್ದವುಗಳನ್ನು ದಮನ ಮಾಡಲಾಗುತ್ತದೆ. ರಾಮನ ಮಹಿಮೆಯನ್ನು ಹೊಗಳಿ ದೇವರೆಂದು ಪೂಜಿಸುವಾಗ ರಾಮ ಅಗಸನ ವಿಚಾರದಲ್ಲಿ ನಡೆದುದನ್ನು ಗಮನಿಸಬೇಕು.  ರಾಮ ಭಜನೆಗಿಂತ ರಾಮ ತತ್ವವನ್ನು ಅನುಸರಿಸಬೇಕು. ಅದುವೇ ಶ್ರೇಷ್ಠ. ಮತ್ತದು ಬಹಳ ಕಷ್ಟ.

ರಜನೀಶರ ಪುಸ್ತಕ ಒಂದರಲ್ಲಿ ಓದಿದ ನೆನಪು. ಎಲ್ಲಿ ಕಾಮವಿರುತ್ತದೋ ಅಲ್ಲಿ ರಾಮನಿರುವುದಿಲ್ಲ. ಬಹಳ ಸರಳವಾದ ತತ್ವ ಇದು.  ರಾಮ ಎಂದರೆ ಪರಮಾತ್ಮ. ಎಲ್ಲಿವರೆಗೆ ನಮ್ಮ ದೇಹದಲ್ಲಿ ಕಾಮನೆ ಇರುವುದೋ ಅಲ್ಲಿ ತನಕ ರಾಮನ ಅಸ್ತಿತ್ವ ಇರುವುದಿಲ್ಲ. ಕಾಮ ಎಂದರೆ ಎಲ್ಲ ವಾಂಛಿತ ಬಯಕೆಗಳು.   ದೇಹದ ಬಯಕೆಗಳನ್ನು ದೂರ ಮಾಡುವುದೇ ಧ್ಯಾನ. ಧ್ಯಾನವೆಂದರೆ ಕೇವಲ ಸ್ಮರಣೆಯಲ್ಲ. ನಮ್ಮೆಲ್ಲ ಬಯಕೆಗಳನ್ನು ದೌರ್ಬಲ್ಯವನ್ನು ದೂರವಾಗಿಸುವ ಕ್ರಿಯೆ.  ಆ ಧ್ಯಾನವೇ  ನಮ್ಮ ದೇಹದೊಳಗಿನ ರಾಮನನ್ನು ತೋರಿಸುತ್ತದೆ. ಆದರೆ ರಾಮನ ಮುಂದೆ ನಿಂತಾಗ ನಮ್ಮ ಎಲ್ಲಾ ಬಯಕೆಗಳೂ ಪ್ರಕಟಗೊಳ್ಳುತ್ತವೆ. ಪರಮಾತ್ಮ ಎಂದರೆ ನಮ್ಮ ಆಶೆಗಳನ್ನು ತೀರಿಸುವ ಎಜಂಟ್ ಆಗಿರುತ್ತಾನೆ. 

ಇದೀಗ ಐತಿಹಾಸಿಕವಾಗಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ರಾಮ ಮಂದಿರ ನಿರ್ಮಿಸುವಾಗ ರಾಮ ತತ್ವದ ಅರಿವು ಉಂಟಾಗಬೇಕು.  ಅದರ ಅನುಸರಣೆಯ ಜಾಗ್ರತಿಯೂ ನಮ್ಮಲ್ಲಿ ಮೊಳಗಬೇಕು.  ನಮ್ಮ ಮನಸ್ಸಿನಲ್ಲೇ ರಾಮ ಇಲ್ಲದಿದ್ದರೆ ರಾಮ ಸರ್ವಾಂತರ್ಯಾಮಿಯಾಗುವುದಕ್ಕೆ ಹೇಗೆ ಸಾಧ್ಯ?  ರಾಮನನ್ನು ಅರಿತು ರಾಮ ತತ್ವವನ್ನು ಅರಿತಾಗ ನಿಜಕ್ಕೂ ಶ್ರೀರಾಮ ಸರ್ವಾಂತರ್ಯಾಮಿಯಾಗುತ್ತಾನೆ.

 

ಜೈ ಶ್ರೀರಾಮ

 

Saturday, January 9, 2021

ಸಹ ಭೋಜನ ಸಹ ಜೀವನ

 


ನಮ್ಮೂರಲ್ಲಿರುವ ಪ್ರಸಿದ್ಧ ಕ್ಷೇತ್ರವೊಂದಕ್ಕೆ ಹೋಗಿದ್ದೆ. ಹಾಗು ಹೀಗು ಬಸ್ಸು ದೇವಸ್ಥಾನದ ಬಳಿ ಬಂದು ನಿಂತಿತು. ಭರ್ತಿಯಾಗಿದ್ದ ಬಸ್ಸು  ಕ್ಷಣ ಮಾತ್ರದಲ್ಲಿ ಖಾಲಿಯಾಯಿತು.  ಬಸ್ ಇಳಿದವರೆ ಹೆಚ್ಚಿನವರು ದೇವಸ್ಥಾನಕ್ಕೆ ನಡೆದು ಹೋದರು ಎನ್ನುವುದಕ್ಕಿಂತ ದೌಡಾಯಿಸಿಯೇ ಬಿಟ್ಟರು. ಅದೇನು ಧಾವಂತ!   ಓಡುವವರನ್ನು ಕಂಡಾಗ ಒಂದಂತೂ ಸ್ಪಷ್ಟ....ಇವರಲ್ಲಿ ದೇವರನ್ನು ಕಾಣುವ ಆತುರ ಖಂಡಿತಾ ಇರಲಾರದು....ಆದರೂ ಧಾವಂತ. ಅವಸರ. ಧಾವಂತದ ಕಾರಣವೋ ಏನೋ ಕೈಕಾಲು ತೊಳಿಯುವಲ್ಲೂ  ಜಂಗುಳಿ ನೂಕು ನುಗ್ಗಾಟ, ಎದುರಿದ್ದವನು ಒಂದಿಷ್ಟು ನಿಧಾನವಾದರೆ ಭುಗಿಲೇಳುವ ಅಸಹನೆ, ಮನಸ್ಸಿನ ಶಾಂತಿಗೆ ದೇವಾಲಯಕ್ಕೆ ಬಂದಿದ್ದೇನೆ ಎಂಬುದನ್ನೂ ಮರೆತು ಶಾಂತಿ ನೆಮ್ಮದಿಯನ್ನು ಕಳೆದುಕೊಳ್ಳುವುದನ್ನು ಕಾಣುವಾಗ ಅಯ್ಯೋ ದೇವರೆ ಅಂತ ಉದ್ಗಾರ ಬರುತ್ತದೆ.

                ಒಂದು ದಿನ ಕೃಷ್ಣ ರಾಜ ಮಾರುಕಟ್ಟೆಗೆ ಹೋಗಿದ್ದೆ. ಈ ಮಾರುಕಟ್ಟೆಯ ಸ್ಥಿತಿ ಹೇಗಿರುತ್ತದೆ ಹೋದವರಿಗೆ ಗೊತ್ತಿರಬಹುದು. ಪ್ರತಿಯೊಬ್ಬನೂ ಜೀವನದಲ್ಲಿ ಒಂದು ಸಲವಾದರೂ   ಕಾಶಿಗೆ ಹೇಗೆ ಭೇಟಿ ಕೊಡಬೇಕೋ ಹಾಗೇ ಈ ಕೆ ಆರ್ ಮಾರುಕಟ್ಟೆಗೂ ಬೇಟಿ ಕೊಡಬೇಕು. ಯಾಕೆಂದರೆ ಎರಡರಲ್ಲೂ ಜೀವನ ಮೌಲ್ಯ ಅರಿವಿಗೆ ಬರುತ್ತದೆ. ಒಂದು ಆಧ್ಯಾತ್ಮಿಕವಾದರೆ, ಇನ್ನೊಂದು ತೀರಾ ಲೌಕಿಕ. ಮಾರುಕಟ್ಟೆ ಬಹುರಾತ್ರಿಯವರೆಗೂ ಚಟುವಟಿಕೆಯಿಂದ ಇದ್ದು ಮುಂಜಾನೆ ನಾಲ್ಕು ಗಂಟೆಗೆ ವ್ಯವಹಾರ ಆರಂಭವಾಗುತ್ತದೆ. ಜನ ಸೇರುತ್ತಾರೆ. ಇದರ ನಡುವೆ ದಿನದ ಇಪ್ಪತ್ತನಾಲ್ಕು ಘಂಟೆ ಇಲ್ಲೇ ವಾಸ ಇಲ್ಲೇ ನಿದ್ದೆ ಇಲ್ಲೇ ಆಹಾರ ಅಂತ ಕಳೆಯುವವರು ಇದ್ದಾರೆ.  ಜನ್ಮ ಪರ್ಯಂತ ಬೇರೆ ಲೋಕದ ಅರಿವಿಲ್ಲದಂತೆ ಇರುವ ಜೀವನ. ಸ್ನಾನ ಊಟ ಯಾವುದಕ್ಕೂ ನಿಗದಿಯಿಲ್ಲದ ಜೀವನ. ಒಂದಿಷ್ಟು ತರಕಾರಿ ಹಣ್ಣು ಇಟ್ಟುಕೊಂಡು ಸಣ್ಣ ತುಂಡು ಬಟ್ಟೆ ಹಾಸಿ ಆ ಗೊಚ್ಚೆಯಲ್ಲೇ ವ್ಯಾಪಾರ, ಮತ್ತೆ ಅಲ್ಲೇ ನಿದ್ದೆ ಅಲ್ಲೇ ಊಟ. ಅವರು ನಿದ್ರಿಸುವಾಗ ಗಮನಿಸುತ್ತೇನೆ ಏನೊಂದು ಸಂತೃಪ್ತಿ. ಹಲವು ಸಲ ಇವರನ್ನು ನೋಡುವಾಗ ಅನಿಸುತ್ತದೆ ಹೊರಗೊಂದು ಲೋಕ ಇದೆ ಅಂತ ಇವರಿಗೆ ಅರಿವಿಲ್ಲವೇನೋ? ಸದಾ ಎನಾದರೊಂದು ಮಾರಾಟ ಮಾಡುತ್ತಲೋ ಏನಾದರೂ ದುಡಿಮೆ ದುಡಿಯುತ್ತಲೋ  ಇರುವ ಈ ಮಂದಿಗೆ ನಿಂತ ನೆಲವೇ ಎಲ್ಲವೂ. ಸಾಮಾನ್ಯವಾಗಿ ಯಾವ ತೀರ್ಥ ಕೇತ್ರ ದರ್ಶನದಲ್ಲೂ ಸಿಗದ ನೆಮ್ಮದಿ ಆ ಬಿಸಿಲು ಮಳೆ ಎನ್ನದೇ ಗೊಚ್ಚೆಯಲ್ಲಿ ಮಲಗಿದಾಗ ಸಿಗುತ್ತದೆ ಎಂದರೆ ಇದೆಂತಹ ಲೌಕಿಕ ಜೀವನ?

                  ಮಾರುಕಟ್ಟೆ ಸುತ್ತಿ ಅನಿವಾರ್ಯವಾಗಿ ಅಲ್ಲಿ ಶೌಚಾಲಯಕ್ಕೆ ಹೋದೆ.   ಮಹಾ ನರಕದರ್ಶನ. ಕಾಲು ಇಡುವುದಕ್ಕೂ ಅನುಮಾನ. ಕಣ್ಣು ಹಾಯಿಸಿದಲ್ಲೆಲ್ಲಾ   ಕೇವಲ ಜಲಬಾಧೆಯ ಜನರು,  ಅಲ್ಲಿ ಹೊಳೆಯಂತೆ ಹರಿಯುವುದು ನೀರಲ್ಲ ಅಂತ ಗೊತ್ತಿದ್ದರೂ ಕಣ್ಣು ಮುಚ್ಚಿ ಯಾವ ಅನಿವಾರ್ಯತೆಗೋ ಬಾಧೆಯನ್ನು ತೀರಿಸಿ ಬಂದು ಬಿಡುವ ಧಾವಂತದಲ್ಲಿ ಇದ್ದರೆ ಅಲ್ಲೇ ಜೀವನ ಎಂಬಂತೆ ಶೌಚಾಲಯದ ಮಂದಿಯ ಸಂಸಾರ ಅಲ್ಲೇ ಇರುತ್ತದೆ. ಒಬ್ಬಾತ ಅಲ್ಲೇ ಕುಳಿತು ಊಟ ಮಾಡುತ್ತಿದ್ದಾನೆ. ಛೇ, ನಾವು ಉಗುಳುವುದಕ್ಕೂ ಹೇಸಿಗೆ ಪಡುವ ಜಾಗದಲ್ಲಿ ಯಾವುದೇ ಅಸಹ್ಯ ಭಾವನೆ ಇಲ್ಲದೇ ಆತ ಊಟ ಮಾಡುತ್ತಿದ್ದಾನೆ. ಇಲ್ಲೂ ಅದೆ ಹೊಟ್ಟೆ ತುಂಬುತ್ತಿದ್ದಂತೆ ಏನು ಸಂತೃಪ್ತಿ.ಸಾಮಾಜಿಕ ಮೌಲ್ಯಗಳು ಹಲವು ಸಲ ಮನಸ್ಸಿನ ಭಾವಕ್ಕೆ ಹೊಂದಿಕೊಂಡೇ ಇರುತ್ತವೆ. ಮನುಷ್ಯ ಅದರ ವ್ಯಾಪ್ತಿಯನ್ನು ತಿಳಿಯದೆ ಸಂದಿಗ್ಧಕ್ಕೆ ಒಳಗಾಗುತ್ತಾನೆ. ಹಲವು ಸಲ ಯೋಚಿಸಿದ್ದಿದೆ,  ಆತ ಈಗ ಜತೆಯಲ್ಲೇ ಊಟಮಾಡೋಣ ಅಂತ ಕರೆದರೆ ಏನಾದೀತು?  ಜಾತ್ಯಾತೀತ ಅಂತ ಹೇಳಿ ಅಂದುಕೊಂಡರೂ  ಜತೆಯಲ್ಲಿ ಊಟ ಮಾಡುವವರೆಷ್ಟು ಈತನ ಜತೆ ಕುಳಿತು ಊಟ ಮಾಡದೇ ಇದ್ದರೆ ಅದು ಪಂಕ್ತಿಭೇದವಾಗುತ್ತದೆ.  ನಾನು ಪಂಕ್ತಿ ಭೇದಕ್ಕೆ ಪರವೂ ಅಲ್ಲ ವಿರೋಧವೂ ಅಲ್ಲ. ನಿಜವಾಗಿ ಮನಸ್ಸಿನ ಭಾವಅದು ಸಂಸ್ಕಾರವನ್ನು ನಿರ್ಣಯಿಸುತ್ತದೆ. ಆ ಸಂಸ್ಕಾರ ಜೀವನವನ್ನು ರೂಪಿಸುತ್ತದೆ ಎಂದು ನಂಬಿದವನು.

                 ಮನುಷ್ಯ ಹುಟ್ಟುತ್ತಿದ್ದಂತೆ ಅವನ ಸುತ್ತ ಒಂದು ಸಂಸ್ಕಾರದ ವರ್ತುಲವೂ ಸುತ್ತಿಕೊಳ್ಳುತ್ತದೆ. ಇದರಲ್ಲಿ ವೈವಿಧ್ಯ ಇರಬಹುದು. ವಿದೇಶದಲ್ಲಿ ಬೆಳೆಯುವ  ಗಿಡತುಂಬ ಫಸಲು ಕೊಡುವ ಆ ಗಿಡವನ್ನು ನಮ್ಮ ದೇಶಕ್ಕೆ ತಂದು ನೆಟ್ಟರೆ ಅದು ಫಲ ಕೊಡುವುದು ಬಿಡಿ ಒಂದು ಚಿಗುರು ಹುಟ್ಟುವುದಿಲ್ಲ. ಯಾಕೆಂದರೆ ಅದಕ್ಕೊಂದು ಸಂಸ್ಕಾರವಿರುತ್ತದೆ. ಒಂದು ಸಲ ನಾಯಿಗಳನ್ನು ಮಾರಾಟ ಮಾಡುವ ಮನೆಯೊಂದಕ್ಕೆ ಹೋಗಿದ್ದೆ. ಅಲ್ಲಿ ಸೈಬೀರಿಯನ್ ತಳಿ ನಾಯಿಯೊಂದನ್ನು ನೋಡಿದ್ದೆ. ಸರಿ ಸುಮಾರು ಒಂದು ಲಕ್ಷ ರೂಪಾಯಿಯಷ್ಟು ಬೆಲೆಯ ನಾಯಿ ಅದು. ರಂಗು ರಂಗಾಗಿ ಹಂಸದಂತೆ ನಡೆದು ಬಂದು ಮೈಮೇಲೆ ಹತ್ತಿದ್ದರೆ ಆಳೆತ್ತರದ ನಾಯಿಗೆ ಭಾರವೇ ಇಲ್ಲದ ಅನುಭವ. ಆ ನಾಯಿಗೆ ಉಳಿದುಕೊಳ್ಳುವುದಕ್ಕೆ ಹವಾನಿಯಂತ್ರಿತ ಕೋಣೆ. ಉಳಿದ ನಾಯಿಗಳು ....ಹೇಗೋ ಬೇಕೋ ಹಾಗೆ.  ಸೈಬೀರಿಯನ್ ನಾಯಿ ಬದುಕಬೇಕಿದ್ದರೆ ಅದಕ್ಕೆ ಹವಾನಿಯಂತ್ರಿತ ಕೋಣೆ ಬೇಕು. ಅದಕ್ಕೆ ಹುಟ್ಟಿನಿಂದ ಬಂದ ಸಂಸ್ಕಾರ. ಹಾಗಂತ ಬೇರೆ ನಾಯಿ ಜತೆ ಭೇದ ಮಾಡುವುದು ಸರಿಯಲ್ಲ ಅಂತ ಅದನ್ನು ಬೇರೆ ನಾಯಿಗಳ ಜತೆ ಮಿಶ್ರ ಮಾಡಿದರೆ ಒಂದು ವಾರಕ್ಕಿಂತ ಹೆಚ್ಚು ಅದು ಬದುಕುಳಿಯುವುದಿಲ್ಲ.

 

ರಕ್ತದೊತ್ತಡ, ಅಸ್ತಮಾ ಸಕ್ಕರೆ ಖಾಯಿಲೆ ಹೀಗೆ  ತಪಾಸಣೆಗೆ ಹೋಗುವವರನ್ನು ಕಾಣುವಾಗ ಇದಾವುದೂ ತಿಳಿಯದೆ ರಸ್ತೆಯ ಅಲೆಮಾರಿಗಳನ್ನು ಕಾಣಬಹುದು. ಇವರಿಗೆ ಎಲ್ಲಿ ರಕ್ತದೊತ್ತಡ?  ಎಲ್ಲಿ ಸಕ್ಕರೆಖಾಯಿಲೆ?  ಅಂತಹ ಬಾಧೆ ಇದೆ ಅಂತ ತಿಳಿಯದೇ ಇದ್ದವರು ಹಲವರು. ಬಾಧೆ ಇದ್ದರೂ ಅದು ಏನು ಅಂತ ತಿಳಿಯದವರು.

 

                ಹುಟ್ಟುವಾಗಲೇ ಜತೆಗೇ ಬರುವ ಈ ಸಂಸ್ಕಾರ ಜೀವನದುದ್ದಕ್ಕೂ ಸವಾಲಾಗಿಯೇ ಹಲವು ಸಲ ಎದುರು ನಿಲ್ಲುತ್ತದೆ. ಅದನ್ನು ಉಳಿಸಿಕೊಂಡು ಜೀವ ಉಳಿಯಬೇಕಿದ್ದರೆ ಹೋರಾಟವೇ ಮಾಡುವಂತ ಸ್ಥಿತಿ ಬರುತ್ತದೆ. ಅದು ತಪ್ಪೋ ಸರಿಯೋ ವಿವೇಚನೆಯಲ್ಲ.  ಆದರೆ ವಾಸ್ತವ ಎಂಬುದು ಇಲ್ಲಿ ಮನಸ್ಸಿನ ಭಾವಕ್ಕೆ ಹೊಂದಿಕೊಂಡೇ ಇರುತ್ತದೆ. ಯಾರೋ ಒಬ್ಬ ಶೌಚಾಲಯದಲ್ಲೇ ಊಟ ಮಾಡಬಹುದು. ನಮಗೆ ಮಾಡಲಿಕ್ಕೆ ಅಸಾಧ್ಯವಾಗಬಹುದು. ಅದು ಭೇದ ಅಂತ ವರ್ಗೀಕರಿಸುವಾಗ  ಈ ಚಿಂತನೆ ಒಂದಿಷ್ಟು ಗೊಂದಲವನ್ನು ಸೃಷ್ಟಿಸುತ್ತದೆ. ನೀರಲ್ಲೇ ಬೆಳೆದ ಮೀನು ನೀರಲ್ಲೇ ಬದುಕಬೇಕು. ಮೀನು ನೀರಲ್ಲಿ ಬದುಕು ಕಾಣುತ್ತದೆ. ನೀರಿಂದ ಹೊರಬಂದರೆ? ಹೀಗೆ ಜೀವ ಸಂಸ್ಕಾರ ಎಂಬುದು ಅದು ಶೋಷಣೆ ಅಂತ ಒಂದೇ ಸವನೆ ಪ್ರತ್ಯೇಕಿಸುವುದಕ್ಕೆ ಸಾಧ್ಯವಿಲ್ಲ.

 

                ‘ಪಂಕ್ತಿ ಭೇದ..’  ಹಲವು ಸಲ ವಿವಾದಕ್ಕೆ ಕಾರಣವಾಗುವ ವಿಚಾರ. ಇದೆ ಅವೈಜ್ಞಾನಿಕ, ಅಮಾನವೀಯ ಹೀಗೆಲ್ಲ ವಿಶ್ಲೇಷಣೆ ಮಾಡಬಹುದು. ನಿಜಕ್ಕೂ ಇದು ಸತ್ಯ. ಆದರೆ ವಾಸ್ತವದ ವಿಚಾರಗಳು ಅಷ್ಟು ಸುಲಭದಲ್ಲಿ ನಿರ್ಣಯಿಸಲ್ಪಡುವುದಿಲ್ಲ. ಪಂಕ್ತಿ ಭೇದ ಇಲ್ಲದೇ ಒಟ್ಟಿಗೆ ಕುಳಿತು ಊಟ ಮಾಡಿದ ತಕ್ಷಣ ಅದು ಜಾತ್ಯಾತೀತವಾಗುವುದಿಲ್ಲ. ಬ್ರಾಹ್ಮಣ ಎಂದಾಕ್ಷಣ ಈಗೀಗ ಬ್ರಾಹ್ಮಣರೇ ಅಸ್ಪೃಶ್ಯರಂತೆ ಭಾಸವಾಗುತ್ತದೆ. ಯಾಕೆಂದರೆ ಬ್ರಹ್ಮ ಜೀವನ ಅ ರೀತಿಯಲ್ಲೂ ಸವಾಲನ್ನು ಎದುರಿಸಬೇಕಾಗುತ್ತದೆ.  ಇದೆಷ್ಟು ಸರಿಯೋ ತಪ್ಪೋ ಎನ್ನುವ ವಿಶ್ಲೇಷಣೆಗಿಂತ , ಹುಟ್ಟಿದ ಪ್ರತಿಯೊಬ್ಬರಿಗೂ ಅವರವರ ನಂಬಿಕೆ ವಿಶ್ವಾಸಕ್ಕೆ ಅನುಸಾರವಾಗಿ ಬದುಕುವ ಹಕ್ಕು ಇರುತ್ತದೆ. ಯಾರನ್ನೂ ಬೇಕಾದರೂ ಆರಾಧಿಸು, ಏನು ಬೇಕಾದರೂ ಆಚರಿಸು ಇನ್ನೊಬ್ಬರಿಗೆ ತೊಂದರೆಯಾಗದಂತೆ ಇರಬೇಕು. ಅಷ್ಟಾಗಿಯೂ ಬ್ರಾಹ್ಮಣ ಅವನ ಪಾಡಿಗೆ ಆತ ಯಜ್ಞೋಪವೀತ ಧರಿಸಿ ಓಡಾಡುತ್ತಾನೆ ಎಂದರೆ ಹಲವರ ಕಣ್ಣು ಕೆಂಪಗಾಗುತ್ತದೆ. ಹೀಗೆ ಪ್ರತ್ಯೇಕವಾದ ವಸ್ತುವನ್ನು ಧರಿಸಿ ಓಡಾಡುವುದು ಬ್ರಾಹ್ಮಣ ಮಾತ್ರವಲ್ಲ.ಹಲವು ಮತದಲ್ಲೂ ವಿವಿಧ ರೀತಿಯಲ್ಲಿ ಇದು ಇರುತ್ತದೆ. ಆದರೆ ಬ್ರಾಹ್ಮಣ ಮಾತ್ರ ಪ್ರಶ್ನಾರ್ಹವಾಗುತ್ತಾನೆ ಮತ್ತು ಅಪಹಾಸ್ಯಕ್ಕೆ ಈಡಾಗುತ್ತಾನೆ. ಹಣೆಗೆ ನಾಮ ಧರಿಸಿದರೂ ಅಪ ಹಾಸ್ಯ ಜುಟ್ಟು ಬಿಟ್ಟರೂ ಹಾಸ್ಯ ಕಚ್ಚೆ ಪಂಚೆ ಧರಿಸಿದರೂ  ಹಾಸ್ಯ. ಈ ಅಪಹಾಸ್ಯಕ್ಕೆ ಹೊಂದಿಕೊಂಡು ಹಲವರು ಜನಿವಾರ ಮನೆಯಲ್ಲಿ ಇಟ್ಟು, ಹಣೆಯ ನಾಮ ಉಜ್ಜಿ ಓಡಾಡುವುದನ್ನು ಸ್ವತಃ ಕಂಡಿದ್ದೇನೆ. ಇದರ ಬಗ್ಗೆ ಅನುಕಂಪವಿದೆ.  ನಿಜಕ್ಕಾದರೆ ಇದೆಲ್ಲ ಅಪಹಾಸ್ಯವಲ್ಲ.

                 ಕೆಲವೊಮ್ಮೆ ಹೀಗೂ ಆಗುತ್ತದೆ.  ನಾನು ಹುಟ್ಟಿದಂದಿನಿಂದ ಬ್ರಾಹ್ಮಣ ಎನ್ನುವ ಕಾರಣಕ್ಕೆ ಅವಮಾನಿಸಲ್ಪಡಲಿಲ್ಲ. ಬದಲಿಗೆ ನನ್ನಲ್ಲಿ ವಂಚನೆ ಸುಳ್ಳು  ದುರ್ವರ್ತನೆ  ತೋರಿದಾಗ ನಾನು ಬ್ರಾಹ್ಮಣ ಎನ್ನುವ ಪರಿಗಣನೆಯೂ ನಷ್ಟವಾಗುತ್ತದೆ. ಇಲ್ಲಿ ಅವಮಾನಿಸಲ್ಪಡುವುದು ಬ್ರಾಹ್ಮಣ್ಯವಲ್ಲ. ಯಾಕೆಂದರೆ ಬ್ರಾಹ್ಮಣನಾದವನಿಗೆ ಮಾನ ಅಪಮಾನ ಎಲ್ಲವೂ ಒಂದೇ ಆಗಿರುತ್ತದೆ. ಆ ಮಟ್ಟಕ್ಕೆ ಆತ ತಲುಪಿದಾಗ ಮಾತ್ರವೇ ಆತ ಬ್ರಾಹ್ಮಣನಾಗುತ್ತಾನೆ. ಇದು ತತ್ವ.

                 ಒಂದು ಸಲ ನಾನು ಬೆಂಗಳೂರಿನ ವಾಣಿಜ್ಯ ತೆರಿಗೆ ಕಛೇರಿಗೆ ಪಂಚೆ ಉಟ್ಟುಕೊಂಡು ಹೋಗಿದ್ದೆ.  ನಿಜಕ್ಕೂ ನನಗೆ ಪಂಚೆ ಉಡುವುದೆಂದರೆ ಬಹಳ ಇಷ್ಟ. ನಮ್ಮೂರ  ಹೈಸ್ಕೂಲಿನಿಂದಲೆ ತೊಡಗಿಕೊಂಡ ಅಭ್ಯಾಸವದು. ಬೆಂಗಳೂರಲ್ಲಿ ಪಂಚೆ ಉಡುವುದು...ದೊಡ್ಡ ಅನಾಗರೀಕತೆ ಅಂತ ತಿಳಿಯುತ್ತಾರೆ. ಕಚೇರಿಗೆ ಪಂಚೆಯಲ್ಲಿ ಬಂದ ನನ್ನನ್ನು ಪರಿಚಿತರು ಕೇಳಿದರು ಏನು ಭಟ್ರೆ ಊಟ ಉಂಟಾಪಂಚೆ ಉಟ್ಟವರು ಮಾತ್ರ ಊಟ ಮಾಡುವುದೇ? ಪಂಚೆ ಉಟ್ಟು ಪೂಜೆಗೆ ಆರಾಧನೆಗೆ ಹೋದರೆ ಅದು ಊಟಕ್ಕೆ ಹೋದ ಹಾಗೆ ಹೇಗಾಗುತ್ತದೆ? ವಿಚಿತ್ರ. ಇಷ್ಟಕ್ಕೂ ನಾನು ಪಂಚೆ ಉಟ್ಟು ಹೋಗಬಾರದು ಎಂಬ ಅಲಿಖಿತ ನಿಯಮದಂತೆ ಭಾಸವಾಯಿತು. 

 ಪಂಕ್ತಿ ಭೇದ ಇದನ್ನು ಭೇದ ಅಂತ ಕರೆಯುವ ಬದಲಾಗಿ ಆತ ಬೇರೆ ಊಟಕ್ಕೆ ಕುಳಿತ ಅಂತ ಮಾಡಬೇಕು. ಇದೊಂದು ರೀತಿಯ ವರ್ಗ ಸಂಘರ್ಷ. ಅದನ್ನು ಕೇವಲ ಒಂದು ಜಾತಿಗೆ ಸೀಮಿತ ಗೊಳಿಸದೆ ನಮ್ಮ ಪರಿಸರ ಸಮಾಜವನ್ನು ಗಮನಿಸಿ ನೋಡಬೇಕು. ತನ್ನ ಮೇಲಧಿಕಾರಿಯ ಜತೆ ಕುಳಿತು ಎಷ್ಟು ಜನ ಊಟ ಮಾಡಬಹುದು? ಕಛೇರಿಯಲ್ಲೇ ಕಾಣಬಹುದು. ಹೊರಗಿದ್ದವನು ಕುಡಿಯುವಂತೆ ಒಳಗೆ ಕುಳಿತ ಮೇಲಧಿಕಾರಿ ಕುಡಿಯುವುದಿಲ್ಲ. ಆತನಿಗೆ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಇಲ್ಲಿ ಕೆಲಸಕ್ಕೆ ಬಾರದ  ಸಹ ಪಂಕ್ತಿ ಸಹ ಭೋಜನ ಬೇರೆ ಕಡೆಯಲ್ಲಿ ಯಾಕೆ ಬೇಕಾಗಿದೆ?  ಸಾರ್ವಜನಿಕದ ಹಲವು ವಿಚಾರಗಳಲ್ಲಿ ಖಾಸಗೀತನ ಇರುವುದಿಲ್ಲವೇ ಅದರಂತೆ ಇದು.

 ಬೇರೆ ಪಂಕ್ತಿಯಲ್ಲಿ ಕುಳಿತು ಊಟಮಾಡಬಹುದು, ಅದಕ್ಕೆ ಆತ ನಿಜವಾಗಿಯೂ ಬ್ರಾಹ್ಮಣನಾಗಿರಬೇಕು. ಬ್ರಹ್ಮ ಪದ ಏನೂ ಅಂತ ಅರಿವಿರಬೇಕು.  ಉಚ್ಚಿಷ್ಟ  ಅಪವಿತ್ರ ಇವುಗಳಿಂದ ದೂರವಿರಬೇಕು.  ಈಗ ಸಹ ಭೋಜನ ಪಂಕ್ತಿ ಭೇದ ಅಂತ ಜತೆಯಲ್ಲೇ ಕುಳಿತು ಊಟಮಾಡಬಹುದು. ಆದರೆ ವಿವಾದ ಇಲ್ಲಿಗೇ ನಿಲ್ಲುವ ಭರವಸೆ ಇರಲಾರದು.  ಸಹಭೋಜನ ಇನ್ನು ಮುಂದಕ್ಕೆ ಒಂದೇ ಬಾಳೆ ಎಲೆ ಆಗಬಾರದೇಕೆ ಎಂಬ ವಿಪ್ಲವವೂ ಬಂದರೂ ಬರಬಹುದು. ಒಂದೇ ತಟ್ಟೆಯಲ್ಲಿ ಊಟ...!

                 ನನ್ನ ಅನಿಸಿಕೆಯಂತೆ ಪಂಕ್ತಿ ಭೇದ ನಿಜಕ್ಕೂ ಅಮಾನವೀಯ.  ಆದರೂ ನಾನು ಅದರ ಪರವಾಗಿಯೂ ಇಲ್ಲ ವಿರೋಧವಾಗಿಯು ಇಲ್ಲ. ಇದೆಲ್ಲ ಅನಗತ್ಯ ವಿವಾದಗಳು ಅಂತಲೇ ಭಾಸವಾಗುತ್ತದೆ. ಬ್ರಾಹ್ಮಣ ಬೇರೆ ಕುಳಿತು ಊಟ ಮಾಡಬಹುದು. ಅದರಲ್ಲಿ ತಪ್ಪೇನಿಲ್ಲ. ನನ್ನ ಅನಿಸಿಕೆ ಅಂದರೆ ಇಷ್ಟೆ ಆತ ಆಚಾರದಿಂದ ಬ್ರಾಹ್ಮಣನಾಗಿರಬೇಕು.  ಹಸ್ತೋದಕ  ಕೇವಲ ಇನ್ನೊಬ್ಬರಿಗೆ ತೋರಿಸುವುದಕ್ಕೆ ಆಚರಿಸುವಂತಹ ಅಭಿನಯ ಕ್ರಿಯೆಯಲ್ಲ.  ಮನೆಯಲ್ಲಿ ಅಥವಾ ಎಲ್ಲೇ ಮಾಡಿದರೂ ಉಣ್ಣುವ ಮೊದಲು ಅದನ್ನು ಒದಗಿಸಿದ ಆ  ಪರಮಾತ್ಮ ಸ್ಮರಣೆ ಅದು ಕರ್ತವ್ಯ. ಇದನ್ನು ಪ್ರತಿಯೊಬ್ಬನೂ ಮಾಡಬೇಕು. ಆಚಾರ ಬೇರೆ ಇದ್ದರೂ ಅದು ಅನಿವಾರ್ಯ ಕರ್ತವ್ಯವಾಗಬೇಕು. ಯಾಕೆಂದರೆ ನಮ್ಮ ಆಚಾರ ವಿಚಾರಗಳು ಕೇವಲ ಅಭಿನಯವಾಗುತ್ತದೆ. ಅದು ಕೇವಲ ಒಂದು ಜಾತಿಯನ್ನು ಪಂಗಡವನ್ನು ಹೊಂದಿಕೊಂಡು ಇರುವುದಿಲ್ಲ. ಎಲ್ಲರಲ್ಲೂ ಇದನ್ನು ಕಾಣಬಹುದು. ಜಾತ್ಯಾತೀತ ಎಂಬುದು ಮನಸ್ಸಿನಿಂದ ಬರುವುದನ್ನು ಒಪ್ಪಿಕೊಳ್ಳಬಹುದು. ಆದರೆ ಅದು ಅಭಿನಯವಾದರೆ, ಬ್ರಾಹ್ಮಣ ಬೇರೆ ಕುಳಿತು ಊಟ ಮಾಡುವುದರಲ್ಲಿ ತಪ್ಪೇನಿಲ್ಲ.  ಒಟ್ಟಿಗೆ ಕುಳಿತು ಊಟ ಮಾಡಿದ್ದರಲ್ಲಿ ಜಾತಿ ಏನೂ ಹೋಗುವುದಿಲ್ಲ. ಹಾಗೆ ಜಾತ್ಯಾತೀತ ಪಟ್ಟವೂ ಸಿಗುವುದಿಲ್ಲ. ಯಾಕೆಂದರೆ ಇಲ್ಲಿ ಮನಸ್ಸಿನ ಭಾವನೆ ಮುಖ್ಯ. ಅದನ್ನೇ ಕಾಯಾ ವಾಚಾ ಮನಸಾ ಅಂತ ಹೇಳಿದ್ದು. ಒಂದೇ ಜಾತಿ ಒಂದೇ ಮತ ಅಂತ ಒಟ್ಟಿಗೆ ಊಟಕ್ಕೆ ಕುಳಿತಾಗ ಒಬ್ಬರನ್ನೊಬ್ಬರು ತಳ್ಳಿ ಜಗಳವಾಡಿ ಊಟಕ್ಕೆ ಕುಳಿತದ್ದನ್ನು ಕಾಣಬಹುದು.       ಪಂಕ್ತಿ ಭೇದಕ್ಕಿಂತ ಗಂಭೀರ ಈ ಮಾನಸಿಕ ಅಸಮಾನತೆ. ಅಸಹಿಷ್ಟುತೆ ಅಸಹನೆ ಇವುಗಳೆಲ್ಲ ಇದ್ದಲ್ಲಿ ಸಮಾನತೆ ಎಂಬುದು ಕೇವಲ ಅಭಿನಯವಗುತ್ತದೆ. ಪಂಕ್ತಿ ಭೇದ ಜಾತಿ ಭೇದ....ಇದು ಕೇವಲ  ಒಬ್ಬ ಬಡ ಬ್ರಾಹ್ಮಣನಿಗೆ ಮಾತ್ರವೇ ಎದುರಾಗುವ ಸವಾಲುಗಳು.   ಒಬ್ಬ ಶ್ರೀಮಂತ ಧನಿಕನಾದ  ಬ್ರಾಹ್ಮಣ ಇವುಗಳನ್ನೆಲ್ಲ ಮಾಡಿದರೂ....ಅದನ್ನು ಓಲೈಸುವ ಜಾತ್ಯಾತೀತರೂ ಇರಬಹುದು. ಇದೆಲ್ಲ ಸಮಾಜದ ಅಸಮಾನತೆಗಳ ಪ್ರತೀಕ. ಬಡ ಬ್ರಾಹ್ಮಣ ಕೇವಲ  ಸಮಾಜದಲ್ಲಿ ಮಾತ್ರವಲ್ಲ ನಿಂದನೆಗೆ ಒಳಗಾಗುವುದು.  ದೈಹಿಕವಾದ ಆಚರಣೆಗಿಂತ ನಾವು ಮನಸ್ಸಿನಿಂದ ವರ್ಗ ಭೇದವನ್ನು ತೋರೆಯಬೇಕು. ಮನಸ್ಸಿನ ಭೇದವನ್ನು ಇರಿಸಿ ಜತೆಯಲ್ಲಿ ಕುಳಿತು ಊಟ ಮಾಡಿದರೂ ಒಂದೇ ಸೂರಿನಡಿ ಜೀವನ ಮಾಡಿದರೂ ಏನೂ ಪ್ರಯೋಜನವಿಲ್ಲ. ಮನಸ್ಸಿನಲ್ಲಿರುವ  ಅಸಮಾನತೆ ಮೊದಲು ದೂರವಾಗಬೇಕು. ಸಾಮಾಜಿಕ ಜೀವನದ ಹಲವು ಸ್ತರಗಳಲ್ಲಿ ಅಸಮಾನತೆಯನ್ನು ಕಾಣಬಹುದು. ಮಾನುಷಿಕ ಪರಿಗಣನೆಯೇ ಇಲ್ಲದ ವರ್ಗಭೇದವನ್ನು ಕಾಣಬಹುದು. ಅವುಗಳು ದೂರಾಗಬೇಕು. ಆಗ ಈ ಪಂಕ್ತಿ ಭೇದ ಎಂಬ ವಿಚಾರಕ್ಕೆ ಆಸ್ಪದವೇ ಉಳಿಯುವುದಿಲ್ಲ. ಇಲ್ಲವಾದರೆ ಇವುಗಳೆಲ್ಲ ಕೇವಲ ಅಭಿನಯವಾಗುತ್ತದೆ.

 ನಾವೆಲ್ಲ ಒಂದಾಗಿ ಕುಳಿತು ಊಟುಮಾಡುವುದಕ್ಕಿಂತ , ಒಂದಾಗಿ ಸ್ನೇಹದಿಂದ ಸೌಹಾರ್ದದಿಂದ ಬದುಕಬೇಕಾಗಿರುವುದು ಇಂದಿನ ಪರಿಸ್ಥಿತಿಗೆ ಅನಿವಾರ್ಯ. ಜಾತಿ ಭೇದ ಎಂಬುದು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಮನುಷ್ಯತ್ವ ಮನುಷ್ಯನೇ ಮೊದಲು ಕಾಣಬೇಕು.