Thursday, July 29, 2021

ವಾನ ಪ್ರಸ್ಥ

     ಉತ್ಕೃಷ್ಟವನ್ನು ಪ್ರೀತಿಸುವುದು ಸುಲಭ, ಎಲ್ಲರೂ ಪ್ರೀತಿಸುತ್ತಾರೆ ಆದರೆ ನಿಕೃಷ್ಣವನ್ನು ಪ್ರೀತಿಸುವುದು ಕಷ್ಟ. ಅದರ ಮೌಲ್ಯವೇ ಹೆಚ್ಚು

    ಒಂದು ಸಲ ಊರಲ್ಲಿ ಮಿತ್ರರೊಬ್ಬರ ಮನೆಗೆ ಹೋಗಿದ್ದೆ. ಹಳ್ಳಿಯ ತೋಟದ ಮನೆಯದು. ಹೀಗೆ ಅವರ ಕೃಷಿ ಭೂಮಿ ನೋಡುತ್ತಾ ತೋಟದಲ್ಲಿ  ಸುತ್ತಾಡುವಾಗ ತೋಟದ ಬದುವಿನಲ್ಲಿದ್ದ ಒಂದು ಕಪ್ಪೆಯನ್ನು ಅನಾಮತ್ತಾಗಿ ಕೈಯ ಅಂಗೈಯಲ್ಲಿ ಇಟ್ಟು ನನಗೆ ತೋರಿಸಿದರು. ಈಗಿನ ಹಾಗೆ ಆವಾಗ ಮೊಬೈಲ್ ಇರುತ್ತಿದ್ದರೆ ಪೋಟೋ ತೆಗೆಯಬಹುದಿತ್ತು.  ನನಗೆ ಒಂದು ರೀತಿ ಅಸಹನೀಯವೆನಿಸಿತ್ತು. ವಿಕಾರವಾಗಿ ನಿಕೃಷ್ಟವಾಗಿದ್ದ ಕಪ್ಪೆ ಒಂದು ರೀತಿ ಭಯಾನಕವಾಗಿತ್ತು. ಆತನೆಂದ ನಿಜವಾದ ರೈತ ಇದನ್ನೆಲ್ಲ ಪ್ರೀತಿಸುತ್ತಾನೆ. ಎರೆ ಹುಳು ಕಪ್ಪೆ ಇವುಗಳೆಲ್ಲ ರೈತನ ಬಂಧುಗಳು. ಈ ಕಪ್ಪೆ ಅದೆಷ್ಟು ಹುಳು ಹುಪ್ಪಟೆಗಳನ್ನು ತಿಂದು ಸಹಾಯ ಮಾಡುತ್ತಿದೆ. ಮಲ್ಲಿಗೆಯನ್ನು ಯಾರೂ ಪ್ರೀತಿಸಬಹುದು ಆದರೆ ಜತೆಗೆ ನಿಕೃಷ್ಟವಾಗಿರುವ ಬಳ್ಳಿಯನ್ನು ಮಾತ್ರ ಪ್ರೀತಿಸುವವ ಪ್ರಕೃತಿಯೊಂದಿಗೆ ಇರುತ್ತಾನೆ. 

ಆ  ಘಟನೆ ನಿನ್ನೆ ಬಹಳ ನೆನಪಾಗಿಬಿಟ್ಟಿತು. ನನ್ನ ಪರಿಚಯಸ್ಥರೊಬ್ಬರು ಪ್ರತೀ ತಿಂಗಳು ಒಂದೊಂದು ವೃದ್ಧಾಶ್ರಮಕ್ಕೆ ಬೇಟಿ ನೀಡುತ್ತಾರೆ. ತಮಗೆ ಏನು ಸಾಧ್ಯವೋ ಅಕ್ಕಿ, ಆಹಾರ ಬಟ್ಟೆ ಹೀಗೆ ತೆಗೆದುಕೊಂಡು ಹೋಗಿ ಕೊಡುತ್ತಾರೆ. ಅಲ್ಲಿ ವೃದ್ಧರೊಂದಿಗೆ ಕುಶಲ ಮಾತನಾಡುತ್ತಾರೆ. ಇದವರ ಹವ್ಯಾಸ. ವೃದ್ಧಾಶ್ರಮ ಮತ್ತೆ ಅಲ್ಲಿನ ಬಿಸಿಯುಸಿರ ಹಲವು ಕಥೆಗಳನ್ನು ಹೇಳುತ್ತಾರೆ. ಅವರ ಮಾತುಗಳನ್ನು ಕೇಳುವಾಗ ಭಾವ ಪರವಶನಾಗುತ್ತೇನೆ. ನಮ್ಮ ಸಂಸ್ಕಾರದಲ್ಲಿ ವಾನ ಪ್ರಸ್ಥ ಎಂಬುದಿದೆ. ಮಕ್ಕಳು ಜವಾಬ್ದಾರಿ ಅರಿತಾಗ ಎಲ್ಲವನ್ನು ಅವರಿಗೆ ಹೊರಿಸಿ ತಾವು ಶಿವ ಶಿವಾ ಎನ್ನುತ್ತ ಕಾಡಿನತ್ತ ಮುಖಮಾಡುತ್ತಾರೆ. ಆದರೆ ಈಗ ಅರಣ್ಯವೆಲ್ಲಿದೆ? ಅದೇ ಕಾಂಕ್ರೀಟ್ ಕಾಡುಗಳು. ಆದರೂ ವೃದ್ಧಾಶ್ರಮ ನಾವು ಗೌರವದಿಂದ ಕೂಗಬಹುದು ಆಶ್ರಮ ಎಂದು.  ಆದರೆ ವಾಸ್ತವದಲ್ಲಿ ಅದು ಅನಿವಾರ್ಯ ಬಂಧನವಾಗುತ್ತದೆ. ಆಶ್ರಮದ ಮಾನಸಿಕ ಶ್ರಮ ಅರ್ಥವಾಗುವುದಿಲ್ಲ.  ಬಳ್ಳಿಯೊಂದು ಮೊಳಕೆಯೊಡೆದು ಬೆಳೆಯುತ್ತದೆ. ಎದ್ದು ನಿಲ್ಲಲು ಯತ್ನಿಸುತ್ತದೆ. ಒಂದು ಬಡಿಗೆಯೋ ಮರವೋ ಏನಿದ್ದರೂ ಎದ್ದು ನಿಲ್ಲುವುದಕ್ಕೆ ಅದನ್ನು ಅಪ್ಪಿಕೊಂಡು ಎದ್ದು ನಿಲ್ಲುತ್ತದೆ. ವೃದ್ಧರಿಗೆ ಆಶ್ರಮ ಎಂದರೆ ಅಷ್ಟೇ. 

ನಮ್ಮ ಹೆತ್ತವರು ಅದರಲ್ಲೂ ನಮ್ಮ ತಾಯಿ, ಅಮ್ಮ ಯೋಚಿಸಿ ಜಗತ್ತಿನಲ್ಲಿ ಅತ್ಯಂತ ಉತ್ಕೃಷ್ಟ ಸ್ಥಾನವಿದ್ದರೆ ಅದು ಅಮ್ಮನದ್ದು. ಬಸುರಾದೊಡನೆ ಆಕೆ ಅನುಭವಿಸುವ ತಾಯ್ತನದ ಸುಖ ಅದು ಆಕೆಗಾಗಿ ಅಂತ ಅನಿಸಬಹುದು. ಆದರೆ ಅದರ ಪ್ರಯೋಜನ ಮಾತ್ರಾ ಗರ್ಭಸ್ಥ ಶಿಶುವಿಗೆ. ತನ್ನ ನರದ ಮಿಡಿತವನ್ನು ಎದೆಯ ಬಡಿತವನ್ನು ಆಕೆ ಗರ್ಭದಲ್ಲೇ ಪರಿಚಯಿಸುತ್ತಾಳೆ. ಜನ್ಮ ನೀಡಿದ ಮೇಲೆ ತನ್ನದೇ ದೇಹದ ಒಂದು ತುಂಡು ಎಂಬಂತೆ ಅಕ್ಕರೆಯಿಂದ ಕಾಣುತ್ತಾಳೆ. ಮುದ್ದಿಸುತ್ತಾಳೆ ಹೊಡೆಯುತ್ತಾಳೆ, ಎಲ್ಲದರಲ್ಲೂ ಸ್ಥಾಯಿಯಾಗಿರುವುದು ಪ್ರೀತಿ ಮಾತ್ರ. ಬಡಿದರೂ ದ್ವೇಷಿಸಲಾಗದ  ಆ ಮಮತೆ ಅದು ತಾಯಿಗೆ ಮಾತ್ರ ಸಾಧ್ಯ. ಹಗಲು ರಾತ್ರಿ ಎನ್ನದೆ ತನ್ನ ಎದೆಗವಚಿಕೊಳ್ಳುತ್ತಾಳೆ. ಆ ಎದೆಯ ಬಡಿತವೇ ಕಂದನಿಗೆ ಜೋಗುಳವಾಗುತ್ತದೆ. ಮಗುವಿನ ದೇಹದಲ್ಲಿ ಅಮ್ಮ ಮುದ್ದಿಸದ ಸ್ಥಳವಿಲ್ಲ.  ಆ ಮಗುವಿಗೆ ಮೊದಲ ಪ್ರೀತಿಯನ್ನು ಮೊದಲ ಭಾವನೆಯನ್ನೂ ತುಂಬಿಕೊಡುವ ಅಮ್ಮನ ಪ್ರತಿ ಚರ್ಯೆಯಲ್ಲಿ   ಕಾಣುವುದು ಮಮತೆಯನ್ನು. ಮಗುವಿನ ನಗುವಲ್ಲೂ ಅಳುವಲ್ಲೂ ಹೋಗಲಿ ಮಗುವಿನ ಸಿಟ್ಟಿನಲ್ಲೂ ಆಕೆ ಅಭಿಮಾನಿಸುತ್ತಾಳೆ. ಈ ಪ್ರೀತಿ ಮಮತೆ ಎಲ್ಲವೂ ವೃದ್ಧಾಪ್ಯದಲ್ಲಿ ಸಿಗಬೇಕಾದ ಪ್ರೀತಿಗೆ ಭಂಡವಾಳವಲ್ಲ. ಆದರೂ ತನ್ನದೇ ಮಾಂಸದ ತುಂಡು ಬೇಡ ಎಂದರೂ ಅದರಲ್ಲಿರುವ ರಕ್ತ ಆಕೆಯದ್ದೇ. ಮಗು ಬೆಳೆದು ಎಷ್ಟು ದೊಡ್ಡದಾದರೂ ಮಗುವಿಗಾಗಿ ಆಕೆಯದ್ದು ಅರೆಹೊಟ್ಟೆಯ ಪರಿಶ್ರಮ. ಆ ಅರೆಹೊಟ್ಟೆಯ ಅಳತೆ ಮಗು ಬೆಳೆದು ದೊಡ್ಡದಾದರೂ ಅರ್ಥವಾಗುವುದಿಲ್ಲ. ತನ್ನ ಬದುಕಿನ ಸಾರ್ಥಕತೆಯನ್ನು ತನ್ನ ಮಗುವಲ್ಲಿ ಕಾಣುವ ಆ ಹೃದಯ ಜಗತ್ತಿನ ಮಾರ್ದವತೆ ಎಂಬ ಭಾವನೆಗೆ ಹಿಡಿದ ಕನ್ನಡಿ.  ಈಗ ವೃದ್ಧಾಶ್ರಮ ಹೊಕ್ಕರೆ ಇಂತಹ ಹೃದಯಗಳು ಅಲ್ಲೆಷ್ಟಿರಬಹುದು? ಅವುಗಳಲ್ಲಿಇನ್ನೂ ಅದೇ ಮಿಡಿತವಿರುತ್ತದೆ. ಎದೆ ಇನ್ನೂ ಬಡಿಯುತ್ತಿರುತ್ತದೆ. ಕಣ್ಣುಗಳು ಇನ್ನೂ ಹೊಳೆಯುತ್ತದೆ. ಆದರೆ ಆ ಪ್ರೀತಿಗೆ ಮಗು ಒಂದು ತುಂಡು ಕನ್ನಡಿಯಾದರೂ ಸಾಕಿತ್ತು. ಆ ಕನ್ನಡಿಯಲ್ಲಿ ಕಾಣುವ ಪ್ರೀತಿಗೆ ಅಮ್ಮ ಖುಷಿಯಾಗುತ್ತಾಳೆ. ತನ್ನ ಮಗು ಅಂತ ಅಭಿಮಾನಿಸುತ್ತಾಳೆ.   ಆದರದು ಸಾಧ್ಯವಾಗುವುದಿಲ್ಲ. ವ್ಯಾವಹಾರಿಕ ಪ್ರಪಂಚದಲ್ಲಿ ಭಾವನೆಗಳು ಕೇವಲ ಶೋಕೇಸಿನ ವಸ್ತುಗಳಾಗಿವೆ. ಅವುಗಳು ಕೇವಲ ನೋಡುವುದಕ್ಕೆ. ಆ ವಸ್ತು ಕೇವಲ ಶೋಕೇಸಿನ ಅಲಂಕಾರಕ್ಕೆ. ಬೇಕಾದಾಗ ತೆಗೆದು ಉಪಯೋಗವಾದೊಡನೆ ಮತ್ತೆ ಅಲ್ಲೇ ಇಡುವುದು.  ಎಷ್ಟು ಸುಂದರವಿದ್ದರೆ ಏನು?


ನಾವು ನಮ್ಮ ಭಾವನೆಗಳಲ್ಲಿ ಕಾಳಜಿಯನ್ನು ತೋರುತ್ತೇವೆ. ಮತ್ತೊಬ್ಬರ ಭಾವನೆಗಳಲ್ಲಿ ಕಾಳಜಿ ತೋರಿದಾಗ ನಮ್ಮ ಭಾವನೆಗಳಿಗೆ ಮೌಲ್ಯ ಒದಗಿ ಬರುತ್ತದೆ.  ಈಗ ವಸ್ತುಗಳ ಮೌಲ್ಯಗಳು ಹೆಚ್ಚುತ್ತಾ ಹೋದರೆ ಮಾನವೀಯ ಸಂಬಂಧಗಳ ಮೌಲ್ಯಮಾತ್ರಾ ಕುಸಿಯುತ್ತಾ ಹೋಗುತ್ತದೆ. ಅಮ್ಮನಿಗೆ ಹರಯ ಹೆಚ್ಚುತ್ತಾ ಹೋದಂತೆ, ಅಮ್ಮನಿಗೆ  ತನ್ನದಾದ ಸುಖ ಯಾವುದೂ ಬೇಡ. ಆಹಾರ ಬೇಡ. ತೊಡುವುದಕ್ಕೆ ಬಟ್ಟೆ ಬೇಡ. ಅದು ಬೇಡ ಇದು, ಈ ಬೇಡಗಳ ನಡುವೆ ಬೇಕಾದುದು ಒಂದಿರುತ್ತದೆ. ಅದು ತನ್ನ ಮಗುವಿನ ಸುಂದರ ನಗು. ಕೇವಲ ಅದನ್ನು ಕೊಡುವುದಕ್ಕೆ ಮಗು ಚೌಕಾಶಿ ಮಾಡುತ್ತದೆ.  ವೃದ್ಧರಾಗುವುದೆಂದರೆ ಶಾಪಗ್ರಸ್ಥರಾಗುವುದು. ಎಲ್ಲವೂ ಇದ್ದರೂ ಯಾವುದೂ ಅನುಭವಿಸಲಾಗದ ಅಸಹಾಯಕತೆ.  ಆದರೂ ವೃದ್ಧರಾಗುವುದಕ್ಕೂ ಒಂದು ಅರ್ಹತೆ ಇದೆ. ನಮ್ಮ ಮನೆಯ ಕಥೆಗಿಂತಲೂ ಆಶ್ರಮದ ಗೊಡೆಯಿಂದ ಪ್ರತಿಧ್ವನಿಸುವ ನಿಟ್ಟುಸಿರ ಕಥೆಗಳು ಬಹಳವಿದೆ. ಹಲವನ್ನು ಕೇಳುವುದಕ್ಕೂ ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಇನ್ನದನ್ನು ಅನುಭವಿಸಿ ಬದುಕು ಸವೆಸುವ ಜೀವಗಳು ಹೇಗಿರಬೇಕು. ಒಂದೊಂದು ದಿನ ಕಳೆಯುವುದಕ್ಕು ಇವತ್ತಿನ ವಿಶೇಷ ಏನು ಅಂತ ಅರಸುತ್ತಿರುವ ಇಂದಿನ ಜನಾಂಗದಲ್ಲಿ ಸಶೇಷವಾಗು ವೃದ್ದರ ದುಃಖ ದುಮ್ಮಾನಗಳಿಗೆ ಅಂತ್ಯವಿಲ್ಲ. 

ಅಮ್ಮಂದಿರ ಅಪ್ಪಂದಿರ ದಿನ ಆಚರಿಸುವ ನಾಡಿನಲ್ಲೇ ವೃದ್ಧಾಶ್ರಮ ಹುಟ್ಟಿಕೊಳ್ಳುತ್ತದೆ. ಇದು ವಿಪರ್ಯಾಸ.   ತಾನು ಹೋದಲೆಲ್ಲ ಬಗಲಿಗೆ ತನ್ನ ಕಂದನನ್ನು ಕಟ್ಟಿಕೊಳ್ಳುವ ಅಮ್ಮ ಅಪ್ಪನನ್ನು  ಮರೆಯುವುದಕ್ಕೆ ಸಾಧ್ಯವಿರುವ ಮನಸ್ಥಿತಿಗೆ ಮರುಕ ಹುಟ್ಟುತ್ತದೆ. ಹೆತ್ತ ಜೀವವನ್ನು ಅಲ್ಲಿ ಬಿಟ್ಟು ಬರುವಾಗ ನಮಗೂ ಒಂದು ಸ್ಥಾನವನ್ನು ಅಲ್ಲಿ ಮುಂಗಡವಾಗಿ ಕಾದಿರುಸುತ್ತಿದ್ದೇವೆ ಎಂಬುದನ್ನು ಮರೆಯುತ್ತೇವೆ.