Wednesday, September 16, 2020

ಭಾಷೆಯಲ್ಲಿನ ಬದುಕು



ಇತ್ತೀಚೆಗೆ ನಮ್ಮೂರಿನ ಮನೆಯ ಭೂ ತೆರಿಗೆ ಸಲ್ಲಿಸಬೇಕಿತ್ತು.  ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೈವಳಿಕೆ ಗ್ರಾಮದ ನಮ್ಮ ಸ್ಥಳ ಕೇರಳದ ಉತ್ತರದಲ್ಲಿದೆ. ಎಷ್ಟು ಉತ್ತರದಲ್ಲಿದ್ದರೂ ಉತ್ತರವಿಲ್ಲದ ಪ್ರಶ್ನೆಗಳು ಇಲ್ಲಿ ಸದಾ ಏಳುತ್ತದೆ. ಯಾಕೆಂದರೆ ಇದು ಕರ್ನಾಟಕಕ್ಕೆ ಹತ್ತಿರ. ತೆರಿಗೆ ಸಲ್ಲಿಸುವುದಕ್ಕೆ ಈಗ ಆನ್ ಲೈನ್ ವ್ಯವಸ್ಥೆ ಇದೆ. ಅಲ್ಲಿ ಹೆಸರು ದಾಖಲಿಸಿ ಇನ್ನೇನು ತೆರಿಗೆ ಸಲ್ಲಿಸಬೇಕು ಎನ್ನುವಾಗ ನಿಜವಾದ ಸಮಸ್ಯೆ ಎದುರಾದದ್ದು. ತಾಂತ್ರಿಕವಾಗಿ ಬಹಳ ಸರಳವಾಗಿ ಇದ್ದರೂ ನನ್ನೂರು ಪೈವಳಿಕೆ ಗ್ರಾಮವನ್ನು ಮಲೆಯಾಳದ ಸರಪಳಿಯೊಳಗೆ ಹುಡುಕಿತೆಗಿಯುವುದು ಬಹಳ ಶ್ರಮ ವಹಿಸಬೇಕಾಯಿತು. ನನಗೇನೋ ಅಲ್ಪಸ್ವಲ್ಪ ಮಲಯಾಳಮ್  ಓದುವುದಕ್ಕೆ ಸಾಧ್ಯವಿದೆ. ಅದೂ ತೀರ ಅತ್ಯಲ್ಪ ಜ್ಞಾನ. ಊರಲ್ಲಿ ಬಸ್ಸಿನ ಬೋರ್ಡ್ ನಲ್ಲಿ ಬರೆದ ಊರಿನ ಹೆಸರನ್ನು ಓದಿ ಊರನ್ನು ಗುರುತಿಸಬಲ್ಲೆ. ಆದರೆ ಎಲ್ಲರೂ ಹಾಗೆ ಇದ್ದಾರೆ ಎಂದು ತಿಳಿಯುವುದು ಮೂರ್ಖತನ. ಚಿತ್ರದಲ್ಲಿ ತೋರಿಸಿದಂತೆ ಇದರಲ್ಲಿ ಮಲಯಾಳ ತಿಳಿಯದೇ ಇದ್ದವರು ತಮ್ಮ ತಾಲೂಕೂ ಗ್ರಾಮವನ್ನು ಹೇಗೆ ಹುಡುಕಬಹುದು ತಿಳಿಸಿ. ಇಲ್ಲಿ ಯಾವ ಭಾಷಾಭಿಮಾನವೂ ರಕ್ಷಣೆಗೆ ಇಲ್ಲ. ತಮಗೆ ತೋಚಿದಂತೆ ಹೇಳುತ್ತಾ ಬಾವುಟ ಹಿಡಿವಾಗ ಜನಗಳು ಎದುರಿಸುವ ನಿಜವಾದ ಸಮಸ್ಯೆಯ ಅರಿವಿಲ್ಲ. ಕಾಸರಗೋಡು ಕನ್ನಡ ನಾಡೋ ಮಲಯಾಳವೋ ಹೇಗೂ ಇರಲಿ, ಭಾರತದಲ್ಲಿ ಇದ್ದರೆ ಸಾಕು ಎಂಬಂತಿರುವವರು ಇಲ್ಲಿನ ಜನ. ಇಲ್ಲಿ ಮಲಯಾಳ ಹೇರಿಕೆ ಅಂತ ಹೇಳಬಹುದು. ಹಾಗೇ ಯೋಚಿಸಿದರೆ, ಪ್ರತಿ ಗಡಿಭಾಗದ ಕಥೆಯು ಇದೇ ಆಗಿರುತ್ತದೆ. ಕನ್ನಡದ ಹೇರಿಕೆಯೂ ಇಲ್ಲದೇ ಇರುವುದಕ್ಕೆ ಸಾಧ್ಯವಿಲ್ಲ. ಮರಾಠಿ ಬಂಗಾಳಿ ತಮಿಳು ಹೀಗೆ ಭಾಷೆಗಳು ಹಲವಾದಂತೆ ಸಮಸ್ಯೆಗಳು ಹಲವಾಗುತ್ತವೆ. ಆದರೇನು ಮಾಡುವುದು ಕೋರೋನದ ಜತೆ ಮನುಷ್ಯ ಬದುಕಲು ಕಲಿತಂತೆ ಇದರ ನಡುವೆಯೂ ಜನ ಸಾಮಾನ್ಯ ಹೋರಾಡಿ ಬದುಕುವುದಕ್ಕೆ ಕಲಿಯುತ್ತಾನೆ. 


ಹಿಂದೀ ಹೇರಿಕೆ  ಎಂಬ ವಿವಾದ ಈಗ ದೇಶಾದ್ಯಂತ ಸುದ್ದಿಯಲ್ಲಿದೆ. ಹಲವರು ತಮ್ಮ ವಸ್ತುನಿಷ್ಠ ವಿಮರ್ಶೆಯಿಂದ ಪರ ವಿರೋಧ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.  ಯಾವುದು ಸರಿ ಯಾವುದು ತಪ್ಪು ನಿರ್ಣಯಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಒಂದು ಭಾಷಾ ಪ್ರೇಮ ಕೇವಲ ಒಂದು ಭಾಷಿಗರಿಗೆ ಮೀಸಲಿಟ್ಟದ್ದಲ್ಲ. ಅವರ ಮಟ್ಟಿಗೆ ಅವರವರ ಭಾಷೆ ಸರ್ವ ಸುಂದರ. ನಾವು ಕನ್ನಡವನ್ನು ಹೇಳಬಹುದು. ಇಲ್ಲಿ ಸಾಹಿತ್ಯ ಶ್ರೀಮಂತಿಗೆ ವರ್ಣಸಿ ಅಭಿಮಾನಿಸಬಹುದು. ಆದರೆ ಅದು ನಮ್ಮ ಚಿಂತನೆಗಷ್ಟೇ ಸೀಮಿತ ಎಂಬುದನ್ನು ನಮ್ಮ ಅಭಿಮಾನದ ಹುಚ್ಚಿನಲ್ಲಿ ಮರೆಯುತ್ತೇವೆ. ಹಿಂದೀ ಹೇರಿಕೆ ಹೌದೋ ಅಲ್ವೋ. ಅದರ ಆವಶ್ಯಕತೆ ಇದೆಯೋ ಇಲ್ಲವೋ ಅದು ಒತ್ತಟ್ಟಿಗಿರಲಿ, ಆದರೆ ವ್ಯವಹಾರ ಲೋಕಕ್ಕೆ ಇಳಿದು ವಾಸ್ತವಕ್ಕೆ ಎರವಾದಾಗ ಯಾವ ಭಾಷಾಭಿಮಾನವೂ  ಉಪಯೋಗಕ್ಕೆ ಇಲ್ಲ. 


ಭಾಷೇ ಕೇವಲ ಜ್ಞಾನ ಕ್ಕಿರುವ ರಹದಾರಿ. ಅದು ಹೇಗೆ ಉಪಯೋಗಿಸಬೇಕು ಎಷ್ಟು ಅಭಿಮಾನ ಇಡಬೇಕು ಅದನ್ನು ತಿಳಿಯಬೇಕಾದರೆ ಕರ್ನಾಟಕದ ಕರಾವಳಿ ಭಾಗದ  ಜನರನ್ನು ನೋಡಿ ಕಲಿಯಬೇಕು. ಏನು ಇಲ್ಲಿನವರಿಗೆ ಭಾಷಾಭಿಮಾನ ಇಲ್ಲವೇ? ಉಳಿದೆಡೆಗಿಂತ ಆಂಗ್ಲ ಮಿಶ್ರವಿಲ್ಲದ ಕನ್ನಡ ಇಲ್ಲಿ ಕಾಣಬಹುದು. ಉಳಿದವರಿಗೆ ಅದು ಹಾಸ್ಯದವಸ್ತುವಾಗುವುದು ಒಂದು ದುರಂತ. ಹೋಗಲಿ. ಇಲ್ಲಿ ಕನ್ನಡ ಹಾಸುಹೊಕ್ಕಾಗಿ ಇದ್ದರೂ ಎಲ್ಲಾ ಜಾತಿಗೂ ಏಕ ಸ್ವಾಮ್ಯವಾಗಿ ಇರುವ ತುಳು ಜನರನ್ನು ಪರ ಊರಲ್ಲೂ ಬೆಸೆಯುತ್ತಿದೆ. 

ಹಿಂದಿ ಹೇರಿಕೆ ವಿಚಾರ ಹೇಗೂ ಇರಲಿ. ಕೇರಳದಲ್ಲಿ ತೆರಿಗೆ ಪಾವತಿಸುವುದಕ್ಕೆ ಮಲಯಾಳಂ ಒಂದೇ ಬೇಕಿತ್ತು. ಗಡಿ ಭಾಗದವರು ಏನು ಮಾಡಬೇಕು? ಹಾಗಿರುವಾಗಲೇ ಯೋಚನೆಗೆ ಬರುವುದು ದೇಶಾದ್ಯಂತ ಆಢಳಿತ ಏಕ ಸ್ವಾಮ್ಯದ ಏಕರೂಪದ ಭಾಷೆ ಬೇಕು. ಅದು ಯಾವುದೇ ಆಗಿರಲಿ. ಕನ್ನಡವೋ ತೆಲುಗೋ ಮತ್ತೊಂದೋ ಯಾವುದೇ ಆಗಿರಲಿ ದೇಶಾದ್ಯಂತ ಒಂದೇ ಭಾಷ ಆಢಳಿತ ಸಂವಹನಕ್ಕೆ ಮಾಧ್ಯಮವಾಗಬೇಕು. ಇಲ್ಲವಾದರೆ ನಮ್ಮ ಪೈವಳಿಕೆಯನ್ನು ಕಷ್ಟ ಪಟ್ಟು ಹುಡುಕಿದಂತೆ ದೇಶದ ಯಾವುದೋ ಭಾಗದಲ್ಲಿರುವ ನಮ್ಮೂರನ್ನೇ ಹುಡುಕುವುದಕ್ಕೆ ಬಹು ಭಾಷಾ ತಜ್ಞರಾಗಬೇಕಾದ ಅನಿವಾರ್ಯತೆ ಇದೆ. 

ಭಾಷಾವಾರು ವಿಂಗಡೆನೆ ಅವೈಜ್ಞಾನಿಕ, ಅದರಲ್ಲೂ ಭಾಷಾಭಿಮಾನ ಇನ್ನೂ ಅವೈಜ್ಞಾನಿಕ. ಬದುಕು ತಾಂತ್ರಿಕತೆಗೆ ಹತ್ತಿರವಾಗುವುದನ್ನು ನೋಡಿಯೂ ಸುಮ್ಮನಿರುತ್ತೇವೆ. ಆದರೆ ಭಾಷೆ ತಾಂತ್ರಿಕತೆ ವೈಜ್ಞಾನಿಕತೆಯನ್ನು ಮೀರಿ ಭಾವನಾತ್ಮಕ ಚಿಂತನೆಗೆ ಎರವಾಗುವುದು ವಿಪರ್ಯಾಸ. 



ದೇಶದ ಯಾವುದೇ ಭಾಗದಲ್ಲಿ ಭೂಮಿಯನ್ನೋ ಮನೆಯನ್ನೋ ಹೊಂದಿರುವುದು ಭಾರತದ ಪ್ರಜೆಯಾಗಿ ನಾಗರೀಕನಾಗಿ ಆತನ ಹಕ್ಕಾಗಿರುತ್ತದೆ. ಭಾಷೆ ಆ ಹಕ್ಕನ್ನು ಕಸಿಯುತ್ತದೆ ಎಂದಾದರೆ ಆ ಭಾಷೆ ಜನ ಸಾಮಾನ್ಯನಿಗೆ ಬೇಕಾಗಿರುವುದಿಲ್ಲ.