Thursday, July 14, 2022

ಹಂಪನ ಕಟ್ಟೆ ಸಿಗ್ನಲ್......








ಹಂಪನ ಕಟ್ಟೆ ಸಿಗ್ನಲ್...... 

ಮಂಗಳೂರು ನಗರ, ತುಳುವರ ಬಾಯಿಯಲ್ಲಿನ ಕುಡ್ಲ ಬಾಲ್ಯದಲ್ಲಿ ಅದು ಕನಸಿನ ನಗರವಾಗಿತ್ತು. ನಗರವೆಂದರೆ ಅದು ನಮ್ಮ ಮಂಗಳೂರು. ಮಂಗಳೂರಿಗೆ ಹೋಗುವುದೆಂದರೆ ಅದೊಂದು ಸಂಭ್ರಮ, ಮೂರು ಚಕ್ರದಲ್ಲಿ ಓಡುವ ಆಟೋರಿಕ್ಷಾ, ನಂಬರಿನ ಸಿಟಿ ಬಸ್ಸುಗಳು, (ನಂಬರಿಲ್ಲದ ನಮ್ಮೂರಿನ ಬಸ್ಸುಗಳ ಎದುರು ಇದೊಂದು ಅದ್ಭುತ) ಯಾವ ಯಾವ ಊರಿಗೆ ಯಾವ ಯಾವ ನಂಬರು ಬಸ್ಸುಗಳು ಹೋಗುತ್ತವೆ ಎಂಬುದೇ ಒಂದು ಮಹಾ ಜ್ಞಾನವಾಗಿತ್ತು. ನಗರದಿಂದ ನಮ್ಮೂರಿನ ತಲಪಾಡಿ ಗಡಿಗೆ  42 43 ನಂಬರಿನ ಬಸ್ಸುಗಳಂತೆ ನಮ್ಮ ಮಾವನ ಮನೆ ಇದ್ದ ಉರ್ವ ಸ್ಟೋರು ಕೊಟ್ಟಾರ ಕ್ಕೆ ಹೋಗುವ 13 ನಂಬರಿನ ಸಿ ಪಿ ಸಿ ಬಸ್ಸುಗಳು ಎಲ್ಲವೂ ಅದ್ಭುತ ಜಗತ್ತಿನ ಸಂಗತಿಗಳು. ಆ ಕಾಲಾದಲ್ಲಿ ಎಲ್ಲ ನಂಬರಿನ ಸಿಟಿ ಬಸ್ಸುಗಳು ಸ್ಟೇಟ್ ಬ್ಯಾಂಕ್ ಗೆ ಹೋಗಿ ಬರುತ್ತಿದ್ದವು. ಸ್ಟೇಟ್ ಬ್ಯಾಂಕ್ ಗೆ ಹೋಗದ ಸಿಟಿ ಬಸ್ಸುಗಳೇ ಇರುತ್ತಿರಲಿಲ್ಲ.  ಉರ್ವಸ್ಟೋರ್ ಕೊಟ್ಟಾರ ಕೂಳೂರ್ ಪಣಂಬೂರ್ ಸುರತ್ಕಲ್......ರೈಟ್ ಪೋಯಿ ಹೇಳುವ ಕಂಡಕ್ಟರ್ ಗಳು  ಆದರೆ ಈಗ....? ಬಸ್ಸುಗಳೆಲ್ಲ ಅಂಡೆ ಪಿರ್ಕಿಗಳಂತೆ ಸಂದು ಗೊಂದು ಗಳೆಲ್ಲಾ ಸಂಚರಿಸುತ್ತವೆ. ಯಾವುದು ಎಲ್ಲಿಗೆ ಹೋಗುತ್ತದೆ ಎಂದೇ ತಿಳಿಯುವುದಿಲ್ಲ.  ಸರಕಾರಿ ಕಾಲೇಜಿನ ಹತ್ತಿರದ ಗಡಿಯಾರ ಕಂಭದಿಂದ ನೆಹರು ಮೈದಾನ್ ಗೆ ಒಂದು ಸುತ್ತು ಹೊಡೆದು ಸ್ಟೇಟ್ ಬ್ಯಾಂಕ್ ಲೇಡಿ ಗೋಷನ್ ಆಗಿ ವಾಪಾಸು ಬರುವಾಗ ನಮಗೆಲ್ಲ ನಗರ ಪ್ರದಕ್ಷಿಣೆ ಹಾಕಿದ ಅನುಭವವಾಗುತ್ತಿತ್ತು. ಈ ನಗರದ ಹಲವು ಭಾಗಗಳಲ್ಲಿ ಬಾಲ್ಯದ ನೆನಪು ಇನ್ನೂ ಹಸಿರಾಗಿದೆ. ಲೇಡಿಗೋಷನ್  ಹತ್ತಿರದ ಸೆಂಟ್ರಲ್ ಮಾರುಕಟ್ಟೆ, ಮಾರ್ಕೆಟ್ ರಸ್ತೆ, ಸುತ್ತಮುತ್ತಲಿನ ಹೋಟೆಲ್ ಗಳು ಹಾಗೇ ಮುಂದೆ ಬಂದರೆ ಶರವು ದೇವಸ್ಥಾನ ಮತ್ತೆ ಸಂದಿಯಲ್ಲಿ ಹತ್ತಿ ಮುಂದೆ ಬಂದರೆ ವಿಶ್ವಭವನ, ಇಲ್ಲಿನ ಇಡ್ಲಿ ಸಾಂಬಾರ್, .....ನಾಲ್ಕು ಜನರಿಗೆ ಸೀಮಿತವಾಗಿದ್ದ ಸ್ಲಾಬ್ ಹಾಕಿದ  ಟೇಬಲ್ ಚಯರ್, ಕಪ್ ಸಾಸರ್ ನಲ್ಲಿನ ಕಾಫಿ ಚಹ, ( ಮರದ ಬೆಂಚಿನ ನಮ್ಮೂರಿನ ಹೋಟೆಲ್ ಎದುರು ಇದು ಸ್ವರ್ಗದಂತೆ ಭಾಸವಾಗುತ್ತಿತ್ತು !!! ) ತಿಂಡಿ ಚಹಾ ತಿಂದು ಸಪ್ಲೈಯರ್ ಕೊಟ್ಟ ಚೀಟಿ ಕೊಟ್ಟು ಕ್ಯಾಶಿಯರ್ ನಲ್ಲಿ ದುಡ್ದುಕೊಟ್ಟು ಗತ್ತಿನಿಂದ ಹೊರಬರುತ್ತಿದ್ದೆವು. ಇದು ನಮ್ಮೂರಿನ ಹೋಟೆಲ್ ನಲ್ಲಿ ಸಿಗುತ್ತಿರಲಿಲ್ಲ. 


ಒಂದು ಬಾರಿ ಸಿಗ್ನಲ್ ಬಳಿ ಇರುವ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿದ್ದೆ. ಬಾಲ್ಯದಲ್ಲಿ ಯಾವುದೋ ಕಾಯಿಲೆ ಬಂದು ಇಲ್ಲಿ ಒಂದು ತಿಂಗಳು ಎಡ್ಮಿಟ್ ಆಗಿದ್ದೆ. ನಮ್ಮೂರಿನ ಶಂಕರ ಡಾಕ್ಟರ್ ಕ್ಲೀನಿಕ್ ಅಷ್ಟೇ ಆಸ್ಪತ್ರೆ ಎಂದು ತಿಳಿದುಕೊಂಡಿದ್ದ ನನಗೆ ಒಳಗೆ ಸುತ್ತಾಡಿದಷ್ಟೂ ತೆರೆದುಕೊಳ್ಳುತ್ತಿದ್ದ ವೆನ್ಲಾಕ್ ಆಸ್ಪತ್ರೆ ನೋಡಿದಾಗ ಗಾಬರಿಯಾಗಿತ್ತು. ಚಕ್ರದಲ್ಲಿ ತಳ್ಳಿಕೊಂಡು ಹೋಗುತ್ತಿದ್ದ ಕುರ್ಚಿ ಚಯರ್ ಗಳು ಅದ್ಬುತ ಲೋಕದ ಪರಿಚಯ ಮಾಡಿಕೊಟ್ಟಿತ್ತು. 


ಮೊನ್ನೆ ಮೊನ್ನೆ ಮಂಗಳೂರಿನ ಹಂಪನ್ ಕಟ್ಟೇ ಸಿಗ್ನಲ್ ನಿಂದ ಹಾದು ಹೋಗುವಾಗ, ಹಳೆಯ ಘಟನೆಯೊಂದು ನೆನಪಾಯಿತು. ಹಂಪನ್ ಕಟ್ಟೆ ಸಿಗ್ನಲ್, ನಾವು ನೋಡಿದ ಪ್ರಥಮ ಸಿಗ್ನಲ್. ಕೆಂಪು ಹಸಿರು ಲೈಟಿಗೆ ಶಿಸ್ತಾಗಿ ಹೋಗುವ ವಾಹನಗಳನ್ನು ಕಂಡಾಗ ಹೀಗೂ ಉಂಟೆ ಅನ್ನಿಸುತ್ತಿತ್ತು. ಅಗಲವಾದ ರಸ್ತೆಯನ್ನು ಹೇಗೆ ದಾಟುವುದು ಎಂದು ನಮ್ಮ ಮಾವ ಹೇಳಿ ಕೊಟ್ಟದ್ದು ಇದೇ ಸಿಗ್ನಲ್ ನಲ್ಲಿ.   ನಮ್ಮೂರಿನ ರಸ್ತೆ ಗುಡ್ಡೆಯಲ್ಲಿ ಸೈಕಲ್ ಓಡಿಸುತ್ತಿದ್ದ ನನಗೆ ಮಂಗಳೂರು ರಸ್ತೆಯಲ್ಲಿ ಸೈಕಲ್ ಓಡಿಸುವುದೆಂದರೆ ಯಾವುದೋ ವಿಶೇಷವನ್ನು ಸಾಧಿಸಿದ ಹಾಗೆ. ಒಂದು ಬಾರಿ ಮಾರ್ಕೆಟ್ ರಸ್ತೆಯಲ್ಲಿ ಸೈಕಲ್ ಓಡಿಸುತ್ತಿರಬೇಕಾದರೆ ಊರಿನವರೊಬ್ಬರು ಸಿಕ್ಕಿ ಹೆದರಿಕೆ ಆಗುವುದಿಲ್ಲವೇ ಎಂದು ಕೇಳಿದ್ದರು. 


ಒಂದು ಬಾರಿ ಸೈಕಲ್ ಏರಿ ಮಾರ್ಕೆಟ್ ರಸ್ತೆಯಿಂದ ಬಾವುಟ ಗುಡ್ಡೆ ರಸ್ತೆ ಕಡೆಗೆ ಹೋಗುತ್ತಿದ್ದೆ. ಅದಾಗಲೇ ಸಿಗ್ನಲ್ ನಲ್ಲಿ ಕೆಂಪು ಉರಿದು  ವಾಹನಗಳು ನಿಂತಿದ್ದರೂ ನಾನು ಅಲ್ಲೆ ರಸ್ತೆದಾಟುತ್ತಿದ್ದವರ ಜತೆಗೆ ಸೈಕಲ್ ಏರಿ ಹೋಗಬೇಕಾದರೆ ಪೋಲಿಸಿನ ತಡೆದು ನಿಲ್ಲಿಸಿದ. ಮೊತ್ತ ಮೊದಲ ಬಾರಿಗೆ ಪೋಲೀಸಿನವನು ನಿಲ್ಲಿಸಿದ ಘಟನೆ ಇದು. ಗಾಬರಿ ಭಯದಿಂದ ಬದಿಯಲ್ಲೇ ನಿಲ್ಲಿಸಿದೆ. ಕಂಬೈ ಸುತ್ತಿ ಹಳೆಯ ಅಂಗಿ ಹಾಕಿಕೊಂಡ ನನ್ನ ಕೈಯಲ್ಲಿ ಬಿಡಿಗಾಸು ಕೂಡ ಇಲ್ಲ. ಸುತ್ತ ಮುತ್ತಲು ನಡೆದಾಡುತ್ತಿದ್ದವರು ನನ್ನನ್ನೆ ನೋಡುತ್ತಿದ್ದಾರೆ ಎಂಬ ನಾಚಿಕೆಯಲ್ಲಿ ಅಲ್ಲೇ ಬದಿಯಲ್ಲಿ ನಿಂತಿದ್ದೆ. ಸುಮಾರು ಹೊತ್ತು ನಿಲ್ಲಿಸಿದ ಮೇಲೆ ಪೋಲೀಸಿನವನು ಬಂದು . ಸೈಕಲ್ ಗೆ ಲೈಟ್ ಇಲ್ಲ ಎಂದ,  ಹಗಲಲ್ಲಿ ಲೈಟು ಯಾಕೆ ಬೇಕು ಎಂದು ಕೇಳುವ ಗಟ್ಟಿ ಮನಸ್ಸು ಇರಲಿಲ್ಲ. ಸೈಕಲ್ ನ ಬೀಗ ಕೇಳಿದ ....ಕೇವಲ ಎರಡು ಚಕ್ರ, ಮತ್ತು ಅಸ್ತಿಪಂಜರದಂತಿದ್ದ ಹಳೆಯ ಸೈಕಲು.....ಬೀಗ ಎಲ್ಲಿದೆ?  ಇಲ್ಲ ಮತ್ತೂ ಸ್ವಲ್ಪ ಹೊತ್ತು ನಿಲ್ಲಿಸಿದ ಮೇಲೆ..ಪೋಲಿಸಿನವ ಹೋಗು ಹೋಗು ಅಂತ ಕಳುಹಿಸಿದ. ಬದುಕಿದೆಯಾ ಬಡಜೀವ ಎಂದು ಕೊಂಡು ಅಲ್ಲಿಂದ ತುಳಿದ ಸೈಕಲ್ ಮತ್ತೆ ನಿಂತದ್ದು ಮಾವನ ಮನೆ ಅಂಗಳದಲ್ಲಿ.  


ಈಗ ಮಂಗಳೂರು ನಗರ ಮಹಾನಗರವಾಗಿದೆ.  ಪ್ರತಿ ರಸ್ತೆಗೆ ಹೋದಾಗಲೂ ಒಂದಲ್ಲ ಒಂದು ಘಟನೆ ನೆನಪಾಗುತ್ತದೆ. ಮಧ್ಯ ರಾತ್ರಿ ಸಿನಿಮಾ ನೋಡಿ  ಕೆ ಎಸ್ ರಾವ್ ರಸ್ತೆಯಲ್ಲಿ ಎರಡೂ ಕೈ ಬಿಟ್ಟು ಸೈಕಲ್ ಓಡಿಸಿ  ಏನೋ ಸಾಹಸ ಮಾಡಿದ ಅನುಭವ ಮರೆಯುವುದಕ್ಕಿಲ್ಲ. ಬಲ್ಲಾಳ್ ಭಾಗಿನ ಚಡವು ಇಳಿಯದೇ  ಏದುಸಿರು ಬಿಟ್ಟುಕೊಂಡು ಸೈಕಲ್ ಹತ್ತಿಸುತ್ತಿದ್ದ ನೆನಪು ಮರೆಯುವುದಕ್ಕಿಲ್ಲ.  ಬೆಂಗಳೂರಿಗೆ ಬಂದು ದಶಕಗಳು ಕಳೆದರೂ ಮಂಗಳೂರಿಗೆ ಹೋಗಿ ಇಳಿದಾಗ ಇದು ನಮ್ಮದು ಎಂಬ ಅಭಿಮಾನದಲ್ಲಿ ಪರಕೀಯ ಭಾವನೆ ಎಲ್ಲೋ ಕಳೆದು ಹೋಗುತ್ತದೆ. 




 

Tuesday, July 12, 2022

ಸಾಂತಾಣಿ ಎಷ್ಟು ಜನರಿಗೆ ತಿಳಿದಿದೆ?


 ಸಾಂತಾಣಿ ಎಷ್ಟು ಜನರಿಗೆ ತಿಳಿದಿದೆ? 

        ಇದು ಏನು? ನೋಡಿದರೆ ಹಲಸಿನ ಬೀಜ. ಅಷ್ಟೇ ಅಲ್ಲ. ಇದಕ್ಕೆ ಸಾಂತಾಣಿ ಎಂದು ಹೇಳುತ್ತಾರೆ. ಸಾಂತಾಣಿ.......ಇದು ನಮ್ಮ ಬಾಲ್ಯವನ್ನು ನೆನಪಿಸುತ್ತದೆ. ನಮ್ಮೂರಿನ ಹಲವು ಮನೆಗಳಲ್ಲಿ ಮೊದಲು ಮಾಡಿ ಡಬ್ಬಗಳಲ್ಲಿ ಸಂಗ್ರಹಿಸಿಡುತ್ತಿದ್ದರು. ಹಲಸಿನ ಸೊಳೆ ಉಪ್ಪಿನಲ್ಲಿ ಹಾಕಿ ಮಂಡೆಗಳಲ್ಲಿ ಮಳೆಗಾಲದ ಉಪಯೋಗಕ್ಕೆ ಸಂಗ್ರಹಿಸಿಡುತ್ತಿದ್ದರು. ಅದರ ಜತೆಯಲ್ಲಿ ಈ ಹಲಸಿನ ಬೀಜವನ್ನು ಬಿಸಾಡದೆ ಅದನ್ನು ಉಪ್ಪಿನೊಂದಿಗೆ ಬೇಯಿಸಿ ಬಿಸಿಲಲ್ಲಿ ಒಣಗಿಸಿ ಸಂಗ್ರಹಿಸಿಡುತ್ತಿದ್ದರು. ಒಣಗಿದ ಸಾಂತಾಣಿ ತಿಂದೇ ಹಸಿವನ್ನು ನೀಗಿಸಿಕೊಳ್ಳುವ ಕಾಲವಿತ್ತು. ಈಗ ಜಂಕ್ ಪುಡ್ ಯುಗದಲ್ಲಿ ಇದು ಬಹುತೇಕ ಮೂಲೆಗೆ ಸೇರಿ ಹೋಗಿದೆ. ಏನೂ ಖರ್ಚಿಲ್ಲದೆ ಎಸೆಯುವ ವಸ್ತುವಿನಿಂದ ಮಾಡುತ್ತಿದ್ದ ಸಾಂತಾಣಿ ನಿಜಕ್ಕೂ ಬಡವನ ಆಹಾರ. 

        ಮೊದಲೆಲ್ಲ ತೋಟದ ಮನೆಯಿಂದ ದೂರದ ಅಂಗಡಿಗೆ ಹೋಗಿ ಮಿಕ್ಚರ್ ಚಿಪ್ಸ್ ಬಿಸ್ಕತ್ತು ತರುವ ಹಾಗಿಲ್ಲ. ಆಗೆಲ್ಲ ಮನೆಯಲ್ಲಿ ತಿನ್ನುತ್ತಿದ್ದ ಈ ಸಾಂತಾಣಿ, ಹುಣೆಸೆ ಬೀಜದ ಪುಳಿಂಕೊಟೆ ಇದೇ ಜಗಿದು ತಿನ್ನುವ ಜಂಕ್ ಫುಡ್. ಎಣ್ಣೆಯ ಅಗತ್ಯವಿಲ್ಲ. ಯಾವಾಗ ಬೇಕೋ ಆವಾಗ ಡಬ್ಬಕ್ಕೆ ಕೈ ಹಾಕಿ ಬೊಗಸೆ ತುಂಬ ಬಾಚಿಕೊಂಡು ಮನೆಯ ಜಗಲಿಯಲ್ಲಿ ಕುಳಿತು ಸುರಿಯುವ ಮಳೆಗೆ ಜಗಿದಷ್ಟು ಮುಗಿಯದ ಸಾಂತಾಣಿ ಪುಳಿಂಕೊಟೆಗಳನ್ನು ತಿನ್ನುವುದೇ  ಮಜ.  ಮೊದಲೆಲ್ಲ ಮಳೆಗಾಲ ಎಂದರೆ ಹೀಗೆ ಹಲಸಿನ ಹಪ್ಪಳ ಬಾಳೆಕಾಯಿ ಹಪ್ಪಳ ಹೀಗೆ ಹಲವು ತಿಂಡಿಗಳಿದ್ದರೆ ಅದಕ್ಕೆ ಸಮಾನಾಗಿ  ಹಲಸಿನ ರುಚಿಯೋಂದಿಗೆ ಉಪ್ಪಿನ ಸ್ವಾದ ಬೆರಸಿ ಕೊಡುವ ಈ ಸಾಂತಾಣಿ ಮರೆಯುವುದಕ್ಕಿಲ್ಲ. 

        ಶಾಲೆಗೆ ಹೋಗುವಾಗ ಪುಸ್ತಕದ ಚೀಲದಲ್ಲಿ ಅಥವಾ ಬುತ್ತಿಯ ಪಾತ್ರೆಯಲ್ಲಿ ಒಂದಿಷ್ಟು ಸಾಂತಾಣಿ ಪುಳಿಂಕೊಟೆ ಇದ್ದೇ ಇರುತ್ತಿತ್ತು. ಅದರಲ್ಲು ಯಾವುದೇ ಮಕ್ಕಳ ಕೈಯಲ್ಲಿ ಈ ಸಾಂತಾಣಿ ಕಂಡರೆ ಆತನ ಹತ್ತಿರ ಹೋಗಬೇಡ ಮಾರಾಯ, ಘರ್ನಾಲು ಹೊಟ್ಟಿಸುತ್ತಾನೆ ಅಂತ ತಮಾಷೆ ಮಾಡುವುದಿತ್ತು. ಹಲಸಿನ ಬೀಜದ ಸಾಂತಾಣಿ ತಿಂದು ಯಾರಾದರೂ ಪ್ರಾಣಾಯಾಮ ಮಾಡಿದರೆ ಅಲ್ಲಿ ನಡೆಯಬಾರದ್ದು ನಡೆದಿದೆ ಎಂದು ತಿಳಿದುಕೊಳ್ಳಬೇಕು. ಇದನ್ನು ತಿಂದು ಮೂಗಿನಜತೆ ಇನ್ನೇಲ್ಲೋ ಉಸಿರಾಡಿ ಪ್ರಾಣಾಯಾಮ ಮಾಡಿದರೆ.................. ಈಗ ನೆನಸಿಕೊಂಡರೆ ಕಿರುನಗುವೊಂದು ಹಲವರಿಗೆ ಬರಬಹುದು. ಆ ಬಾಲ್ಯವೇ ಸುಂದರ. ಹೇಳಿ ಎಷ್ಟು ಜನರಿಗೆ ಈ ಸಾಂತಾಣಿ ನೆನಪಿದೆ.