Saturday, March 28, 2020

ವೈರಸ್…..ಅರಸು…


ಜಿಮ್ ಇಲ್ಲ ಪಾರ್ಕ್ ಇಲ್ಲರಸ್ತೆಯಲ್ಲಿ ವಾಕಿಂಗ್ ಮಾಡುವ ಹಾಗಿಲ್ಲ…..ಆದರೆ ಮನೆಯಲ್ಲೇ ಯೋಗಾಭ್ಯಾಸಕ್ಕೆ ಇದಾವುದೂ ಅಡ್ಡಿಯಾಗುವುದಿಲ್ಲ. ನಾವು ಮಲಗಿದಷ್ಟು ಜಾಗವಿದ್ದರೂ ಸಹ ಯೋಗಾಭ್ಯಾಸ ಮಾಡಿಕೊಳ್ಳಬಹುದು.  ಮತ್ತೊಂದು  ಯೋಗಾಭ್ಯಾಸ ಮಾಡಿದರೆ ಯಾವ ವೈರಸ್ ಭಯವೂ ಇರುವುದಿಲ್ಲ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತಲೂ ರೋಗ ಬಾರದಂತೆ ತಡೆಗಟ್ಟುವುದು ಮನುಷ್ಯನಾದವನು ಮಾಡಬಹುದಾದ ಪ್ರಾಣಿಗಳು ಮಾಡಲಾಗದಂತಹ ಕೆಲಸ. ಆದರೂ  ರೋಗಬಾಧೆಗೆ ಮನುಷ್ಯ ತುತ್ತಾಗುತ್ತಾನೆ ಎಂದಾದರೆ ಅದು ಮನುಷ್ಯನ ಜೀವನ ಶೈಲಿಯೇ ಕಾರಣ.
ದಾರಿಯಲ್ಲಿ ಹೋಗುವಾಗ ಯಾವುದೋ ಒಂದು ವಿಚಿತ್ರ ವಸ್ತು ಕಣ್ಣಿಗೆ ಬೀಳುತ್ತದೆ. ಅದನ್ನು ಕೈಗೆತ್ತಿ ಅದಕ್ಕೊಂದು ಹೆಸರು ಕೊಟ್ಟುಬಿಡುತ್ತೇವೆ. ಯಾವಾಗ ಕಣ್ಣಿಗೆ ಬಿತ್ತೋ ಆಗಿನಿಂದ ಅದರ ಅಸ್ತಿತ್ವ ಎಂದು ತಿಳಿದುಕೊಳ್ಳುತ್ತೇವೆ. ಎಷ್ಟೋ ಸಲ ಅದೇ  ಹಾದಿಯಲ್ಲಿ ಹೋಗುವಾಗ ಅದು ನಮ್ಮ ಕಾಲಿಗೆ ತಾಗಿರುತ್ತದೆ. ನಮಗೆ ನೋವಾದರೂ ನಮ್ಮ ಗಮನ ಅದರತ್ತ ಹೋಗುವುದಿಲ್ಲ. ಆದರೆ ಒಂದು ಸಲ ಜೋರಾಗಿ ತಾಗಿ ನೋವು ಸಹಿಸದೆ ಇದ್ದಾಗ ಅದನ್ನು ಗಮನವಿಟ್ಟು ನೋಡುತ್ತೇವೆ. ಹಿಂದೇ ಅದೆಷ್ಟು ಸಲವಾದರೂ ಆಗ ಪರಿಣಾಮ ಇಲ್ಲದೇ ಇದ್ದುದರ ಬಗ್ಗೆ ಯೋಚಿಸುವುದಿಲ್ಲ.
ಈ ಜಗತ್ತಿನಲ್ಲಿ ಮನುಷ್ಯ ಸೃಷ್ಟಿಸಿದ ವಸ್ತು ಯಾವುದೂ ಇಲ್ಲ ಅಂತ ಜ್ಞಾನಿಗಳು ಹೇಳುತ್ತಾರೆ. ಯಾಕೆ? ಜಗತ್ತಿನ ಆರಂಭ ಯಾವಾಗ ಆಯಿತೋ ಆವಾಗಿನಿಂದಲೇ ವಸ್ತುಗಳು ಇದ್ದವು. ಮನುಷ್ಯ ಅದನ್ನು ಗುರುತಿಸುವಾಗಲೇ ಅದರ ಅಸ್ತಿತ್ವದಿಂದ ಹುಟ್ಟಿಕೊಂಡಿತು.
ಸದ್ಗುರು ಪ್ರವಚನದಲ್ಲಿ ಒಂದು ಮಾತು ಹೇಳಿದ್ದು ಅತ್ಯಂತ ಇಷ್ಟವಾಗುತ್ತದೆ. ಯಾವುದೇ ವೈರಸ್ ಆಗಲಿ ಮನುಷ್ಯ ಪ್ರಾಣಿಗಳು ಹುಟ್ಟುವಾಗ ಅವುಗಳೂ ಹುಟ್ಟಿತ್ತು. ಅವುಗಳ ಅಸ್ತಿತ್ವ ಪ್ರಕಟವಾಗುತ್ತದೆ ಎಂದರೆ ಅದು ಮನುಷ್ಯನ ಕೊರತೆ. ಮೊದಲು ಈ ವೈರಸ್ ಗಳು ಇದ್ದರೂ ಋಷಿ ಮುನಿಗಳು, ನಮ್ಮ ಹಿರಿಯರು ಬದುಕುತ್ತಿದ್ದರು. ಅವರ ದೇಹದಲ್ಲಿ ಆ ಚೈತನ್ಯವಿತ್ತು. ಆ ಜೀವನ ಶೈಲಿಯೇ  ವೈರಸ್ ಗಳನ್ನು ದೂರವಿಡುತ್ತದೆ. ದೇಹ ರೋಗನಿರೋಧಕ ಶಕ್ತಿ ಎಲ್ಲವನ್ನು ದೂರವಿಡುತ್ತದೆ. ಕಾಲ ಬದಲಾದಂತೆ ಮನುಷ್ಯ ಬದಲಾದ. ತನ್ನ ಜೀವನ ಶೈಲಿಯನ್ನು ಬದಲಾಯಿಸಿದ. ನಿದ್ರೆ , ಆಹಾರ  ಕುಟುಂಬ ಜೀವನ ಎಲ್ಲವು ಬದಲಾಗಿಬಿಟ್ಟಿತು. ಅದುವರೆಗೂ ಸುಪ್ತವಾಗಿದ್ದ ವೈರಸ್ ಗಳು ಪ್ರಕಟವಾದವು.
ಈ ಚಿಂತನೆಗಳಲ್ಲಿ ಬಹಳಷ್ಟು ಅರ್ಥವಿದೆ. ನಮ್ಮ ಚಿಂತನೆಗಳು ಬದಲಾಗಬೇಕಿದೆ. ಪ್ರಪಂಚ ಬದಲಾಗಿದೆ ಅಂತ ಸಮಾಧಾನ ಪಟ್ಟುಕೊಂಡು ನಮ್ಮ ತಪ್ಪುಗಳನ್ನು ಪ್ರಪಂಚದ ಮೇಲೆ ಹಾಕುತ್ತೇವೆ. ಆದರೂ ನಮ್ಮ ಜೀವನ ಬದಲಾವಣೆಯಾಗುವುದಿಲ್ಲ.
            ಇದೀಗ ಪ್ರಪಂಚ ಎಂದೂ ಕಂಡರಿಯದ ವೈರಸ್ ಬಾಧೆಗೆ ತುತ್ತಾಗಿದೆ. ಸರಕಾರ ನಿಷೇಧಾಜ್ಞೆ ಹೇರಿ ವೈರಸ್ ಬಾಧೆಯನ್ನು ಎದುರಿಸುವುದಕ್ಕೆ ಪ್ರಯತ್ನಿಸುತ್ತದೆ. ವಿಚಿತ್ರವೆಂದರೆ ಈ ಪ್ರಯತ್ನಕ್ಕೆ ವೈರಿಯಾಗುವುದು ಯಾವುದೇ ವೈರಸ್ ಅಲ್ಲ. ಮನುಷ್ಯನೇ ಪ್ರಥಮ ವೈರಿ!! ಇದನ್ನು ಮೀರಿ ಹೊರಬರುತ್ತಾರಲ್ಲ ಅವರು ಖಂಡಿತವಾಗಿಯೂ ಕೊರೋನಾದಂತೆ ಜನಜೀವನಕ್ಕೆ ವೈರಿಗಳು. ಭೂಮಿಯಲ್ಲಿ ಬದುಕುವುದಕ್ಕೆ ಹಕ್ಕು ಕಳೆದುಕೊಂಡಬರು.  ಅಚ್ಚರಿಯಾಗುತ್ತದೆ.  ರಸ್ತೆಗೆ ಇಳಿಯುವುದು ಬೇಡ. ತೀರ  ಅವಶ್ಯ ಇದ್ದರೆ ಮನೆಯಿಂದ ಒಬ್ಬ, ಅದೂ ಯುವಕರು ಮಾತ್ರ ರಸ್ತೆಗೆ ಇಳಿಯಬೇಕು. ನಮ್ಮ ಆವಶ್ಯಕತೆಗಳೂ ಅಷ್ಟೇ, ಆಡಂಬರದ ವಸ್ತುಗಳ ಬೇಡಿಕೆಯಾಗಬಾರದು. ಮನೆಯಲ್ಲಿ ತೀರಾ ಅವಶ್ಯವಿರುವ  ಅಕ್ಕಿ ಗೋಧಿ ಹಣ್ಣು ಹೀಗೆ ಜೀವ ಉಳಿಸುವ ವಸ್ತುಗಳಾಗಬೇಕು. ಜಂಕ್ ಪುಡ್ ಕಾಪಿ ಚಹ ಇಲ್ಲದಿದ್ದರೂ ಬದುಕಬಹುದು..  ಮಿತವಾದ ಆಹಾರ ಸಾತ್ವಿಕ ಆಹಾರ ಬದಲಾದ ನಮ್ಮ ಜೀವನ ಶೈಲಿಯನ್ನು ಪುನಃ ಹಳಿಗೆ ತಂದು ನಿಲ್ಲಿಸಬಹುದು. ಯೋಗಿಕ್ ಶರೀರ ನಮ್ಮದಾಗಬಹುದು. ಸಿಗರೇಟು ಮದ್ಯ ಇವುಗಳಿಂದ ದೂರವಿದ್ದು ಮನೆಯವರೊಂದಿಗೆ ಬೆರೆಯುವುದಕ್ಕೆ ದೈವ ಒದಗಿಸಿಕೊಟ್ಟ ಸನ್ನಿವೇಶ ಇದು. ಮನುಷ್ಯ ಹೌದು ಅಂತಾದರೆ ಇದನ್ನೆಲ್ಲ ಉಪಯೋಗಿಸಿಕೊಳ್ಳಬೇಕು.
            ಇಷ್ಟೆಲ್ಲಾ ಆದರೂ ಕೆಲವರು ರಸ್ತೆಯಲ್ಲಿ ಅಡ್ಡಾತ್ತಿದ್ದಾರೆ. ಮನೆಯಲ್ಲಿ ಕಾಲ ಕಳೆಯುವುದು ಅವರಿಗೆ ದುಸ್ತರ. ಇವರು ಸಮಾಜಕ್ಕೆ ಭಾರವಾಗಬೇಕಾದವರು. ಇವರಿಗೆ ಸಮಯ ಉಪಯೋಗಿಸಿಕೊಳ್ಳುವ ಹವ್ಯಾಸಗಳು, ಪುಸ್ತಕ ಓದು, ಲೇಖನ, ಒಳ್ಳೆಯ ಸಿನಿಮಾ ನಾಟಕ (ಮನೆಯಲ್ಲೇ ಸಿಗುವ) ಸಂಗೀತ ಆಸ್ವಾದನೆ ಇಂತಹ ಹವ್ಯಾಸಗಳು ಇವರಿಗಿಲ್ಲ. ಹಾಗಾದುದರಿಂದಲೇ ಮನೆಯಲ್ಲಿ ಕಾಲ ಹರಣ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಮದ್ಯ, ಸಿಗರೇಟು ತಾಸಿಗೊಂದು ಕಾಪಿ ಚಹ ಹೀಗೆ ಬೇರೆ ಪ್ರಪಂಚವೇ ತಿಳಿಯದವರು ಸಮಾಜಕ್ಕೆ ಇವರು ಭಾರ. ವೈರಸ್ ನಂತೆ.....ಸಮಾಜ ಇವರನ್ನು ದೂರವಿಡಬೇಕು.
            ಹವ್ಯಾಸಗಳೂ ಹಾಗೆ ಅದು ಮಿತಿಯಲ್ಲಿ ಇರಬೇಕು. ಹಾಗೆ ನೋಡಿದರೆ ಜೀವನದಲ್ಲಿ ಎಲ್ಲವೂ ಮಿತವಾಗಿರಬೇಕು. ಮಿತಿ ಮೀರಿದ್ದು ಯಾವುದಾದರೂ ಅದು ರೋಗವಾಗುತ್ತದೆ. ವ್ಯಾಧಿಯಾಗಿ ನಮ್ಮನ್ನೂ ಮನಸ್ಸನ್ನು ಕಾಡುತ್ತದೆ. ದೇಹಾರೋಗ್ಯಕ್ಕೆ ವ್ಯಾಯಾಮ ಮುಖ್ಯ ಅಂದುಕೊಂಡು ಅದನ್ನೆ ದಿನ ಪೂರ್ತಿ ಮಾಡಿದರೆ...? ಅದು ವ್ಯಾಧಿಯೇ. ಯೋಗಾಭ್ಯಾಸದಲ್ಲಿ ಶವಾಸನ ಮಾಡುವಾಗ ಅದಕ್ಕೂ ಸಮಯ ನಿಗದಿ ಇದೆ. ಅದನ್ನು ಮೀರಿ ಮಾಡಿದರೆ ಅದು ಮಾನಸಿಕ ವ್ಯಾಧಿಯಾಗುತ್ತದೆ.  ಹೀಗೆ ಮನುಷ್ಯ ತನ್ನ ಮಿತಿಯನ್ನು ಮರೆತಿದ್ದಾನೆ. ಪ್ರತಿಯೊಂದರಲ್ಲೂ ಅತ್ಯಾಗ್ರಹ, ಅತೃಪ್ತಿ. ಹೊಸತರ ಅನ್ವೇಷಣೆಯಲ್ಲಿ ಹಳೆಯದರ ಅಸಡ್ಡೆ. ಜೀವನ ಬದಲಾಗುತ್ತದೆ. ಪ್ರಕೃತಿ ಪಾಠ ಕಲಿಸುವುದಕ್ಕೆ ಸಿದ್ಧವಾಗುತ್ತದೆ. ಆದರೂ ನಾವುಗಳು ಸಿದ್ಧವಿಲ್ಲದಂತೆ ಪಿಶಾಚ ಪ್ರವೃತ್ತಿಯನ್ನು ತೋರುತ್ತೇವೆ.  ಸಮಾಜಕ್ಕೆ ವೈರಸ್ ಗಳು ನಾವಾಗುತ್ತೇವೆ. ಆವಾಗ ಮನುಷ್ಯತ್ವವೇ ಒಂದು ರೋಗವಾಗಬಹುದು.
           




Monday, March 16, 2020

ಜುಗಾರಿ ಕಟ್ಟೇ......!!!

            ಬಣ್ಣ ಬಣ್ಣದ ಇಸ್ಪೀಟ್ ಎಲೆಗಳೆಂದರೆ ಬಾಲ್ಯದಲ್ಲಿ ಬಹಳ ಇಷ್ಟ. ಆದರೆ ಕೈಯಿಂದ ಮುಟ್ಟುವುದಕ್ಕೆ ಭಯ. ನಮ್ಮ ಕೈಯಲ್ಲಿ ಅದನ್ನು ಕಂಡರೆ ಹಿರಿಯರು ಬೈಯುತ್ತಿದ್ದರು. ಇಸ್ಪೀಟ್ ಎಲೆಗಳ ಮೇಲಿನ ರಾಜಾ ರಾಣಿ ಗುಲಾಮ ಬಣ್ಣದ ಚಿತ್ರಗಳು ಅದೆಷ್ಟು ಸುಂದರವಾಗಿ ಕಾಣುತ್ತಿದ್ದುವೆಂದರೆ, ದೊಡ್ಡವರೆಲ್ಲ ತೋಟದ ಮನೆಯಲ್ಲಿ ಸುತ್ತಾಗಿ ಕುಳಿತು  ಮಧ್ಯದಲ್ಲಿ ದೊಡ್ಡದಾಗಿ ಚಿಮಿಣಿ ದೀಪವೋ, ಪೆಟ್ರೋ ಮೇಕ್ಸ್ ಉರಿಸಿ  ಇಸ್ಪೀಟ್ ಆಡುತ್ತಿದ್ದರೆ ನಾವುಗಳು ಅವರ ಹಿಂದೆ ಕದ್ದು ಕುಳಿತು ಹೆದರಿ ಹೆದರಿ ಇಣುಕಿ ನೋಡುತ್ತಿದ್ದೆವು. ಹಲವು ಸಲ ಆಟೀನ್ ಗುಲಾಮ ಅಂತ ಕ್ರಿರುಚಿ ನಮ್ಮ ಜ್ಞಾನವನ್ನು ತೋರಿಸಿ ಪೆಟ್ಟು ತಿಂದದ್ದೂ ಇದೆ.  ಕತ್ತಲೆಯಲ್ಲಿ ಅವಿತು ನೋಡುವ ನಮ್ಮ ಬಗ್ಗೆ ದೊಡ್ಡವರಿಗೆ ಅರಿವೇ ಇಲ್ಲವೇನೋ ಅಂತ ನಾವು ತಿಳಿದಿದ್ದರೆ ಸ್ವಲ್ಪ ಹೊತ್ತಿನಲ್ಲೇ ಚಹ, ಬೀಡಿ ಇನ್ನೆಂತದೋ ತಾ ಅಂತ ನಮ್ಮತ್ತ ತಿರುಗಿ ಹೇಳಿದಾಗ ಆಶ್ಚರ್ಯವಾದರೂ ಎದುರಿಗೆ ಕುಳಿತು ನೋಡುವುದಕ್ಕೆ ಪರವಾನಿಗೆ ಅಂತ ತಿಳಿದು ಕತ್ತಲೆಯಲ್ಲಿ ಬುರ್ ಬುರ್ ಅಂತ ಬಸ್ಸು ಬಿಟ್ಟುಕೊಂಡು  ಓಡಿ ಹೋಗಿ ಹೇಳಿದ ಸಾಮಾನು ಕ್ಷಣದಲ್ಲೇ ತಂದುಕೊಟ್ಟು ಎದುರೇ ಕುಳಿತು ಬಿಡುತ್ತಿದ್ದೆವು.  ಸೋತು ಸುಣ್ಣುವಾಗಿ ಹ್ಯಾಪ್ ಮೋರೆ ಹಾಕಿ ಯಾರಾದರೂ ಎದ್ದು ಹೋದರೆ ಅಲ್ಲಿ ಕುಳಿತು ಕೆಳಗೆ ಬಿದ್ದ ಎಲೆಗಳು ಚೆನ್ನಾಗಿ ಅಟ್ಟಿ ಇಡುವುದಕ್ಕೆ ಸಹಕರಿಸುತ್ತಿದ್ದೆವು.  ಹಲವು ಸಲ ಮನೆಯೊಳಗಿದ್ದ ಹೆಂಗಸರು ಮಾತ್ರ ಬೈಯುತ್ತಿದ್ದರು. ಆದರೂ ಇಸ್ಪೀಟ್ ನ ಸುಂದರ ಜುಗಾರಿ ರಂಗ ನಮಗಂತೂ ಮಜವನ್ನು ಕೊಡುತ್ತಿತ್ತು.

ಅಂದು ಜುಗಾರಿಗೆ ಹಲವರು ಎಲ್ಲವನ್ನು ಕಳೆದುಕೊಂಡು ಸ್ವಂತ ಅಂಗಡಿಯೋ ಹಸುವೋ ಮಾರಾಟ ಮಾಡಿ ಸಾಲದಲ್ಲಿ ಮುಳುಗಿದ್ದನ್ನು ಕಣ್ಣಾರೆ ಕಂಡಿದ್ದೆವು. ಇದು ಅರಿವಿಗೆ ಬರಬೇಕಿದ್ದರೆ ಸ್ವಲ್ಪ ವಯಸ್ಸು ಬೆಳೆಯಬೇಕಾಗಿತ್ತು. ಆಗ ಜುಗಾರಿ ಎಂಬುದು ಎಷ್ಟು ಕೆಟ್ಟದ್ದು ಎಂಬುದು ಅರಿವಿಗೆ  ಬಂದರೂ ದುಡ್ಡು ಹಾಕದೇ ಆಡಬಹುದಲ್ವೇ ಅಂತ ಯೋಚಿಸುತ್ತಿದ್ದೆವು. ಹೊಗೆ ಸೊಪ್ಪು ಇಲ್ಲದ ತಾಂಬೂಲದಂತೆ ನಮ್ಮವರಿಗೆ ಅದು ರುಚಿಸುವುದೇ ಇಲ್ಲ. ಆದರೂ ಜುಗಾರಿ ಅಂತ ತಿಳಿಯದೇ ಇದ್ದರೆ ಇಸ್ಪೀಟ್ ಆಟದ ಆಕರ್ಷಣೆ ಅದ್ಭುತ. ಕೇವಲ ಎಲೆಗಳಲ್ಲಿ ಆಡಬಹುದಾದ ಬುದ್ದಿ ಮತ್ತು ಅದೃಷ್ಟವನ್ನು ಜತೆಯಾಗಿಸಿ ಆಡುವ ಈ ಆಟ ಇಂದಿಗೂ ಒಂದು ಸೋಜಿಗದ ವಿಷಯ.  ಆದರೂ ಜುಗಾರಿಗೆ ಮಾನ್ಯತೆ ಇಲ್ಲ ಬಿಡಿ. ಆಗಲೂ ಎಲ್ಲಿಯೋ ಗುಡ್ಡಗಾಡಿನ ತೋಟದ ಮನೆಯಲ್ಲಿ ಆಡುತ್ತಿದ್ದರೂ ಸಹ ಪೋಲೀಸರ ಭಯ ಇದ್ದೇ ಇರುತ್ತಿತ್ತು.  ಜುಗಾರಿ ಎಂದಿಗೂ ಕೆಟ್ಟದೇ. ಆದರೆ,

ಆಧುನಿಕ ಜಗತ್ತು ಹೇಗಿದೆ ನೋಡಿ.  ಕೊರೋನ ಬಂತು , ಯಾವುದೋ ಬ್ಯಾಂಕ್ ಅಥವಾ ಕಂಪೆನಿ ಪಲ್ಟಿ ಹೊಡೆಯಿತು ಅಂತ ದೇಶದ ಅಥವಾ ಜಗತ್ತಿನ ಶೇರ್ ಮಾರ್ಕೇಟ್ ಅಲ್ಲೋಲ ಕಲ್ಲೋಲವಾಗುತ್ತದೆ.  ಮಿರಿ ಮಿರಿ ಮಿರುಗುವ ಕಂಪ್ಯೂಟರ್ ಮುಂದೆ ತಲೆಗೆ ಕೈ ಇಟ್ಟು ಕುಳಿತುಕೊಳ್ಳುವ ಹೂಡಿಕೆದಾರರು ಮುಳುಗಿದ ಜಗತ್ತಿನಲ್ಲಿ ಈಜಲು ಪ್ರಯತ್ನ ಮಾಡುತ್ತಾರೆ. ಇಷ್ಟು ಸಮಯವಾದರೂ ಇಲ್ಲಿ ಗೆದ್ದವರನ್ನು ನಾನು ಇದುವರೆಗೂ ನೋಡಿಲ್ಲ. ಕಾರಣವೆಂದರೆ ಇದು ಪಕ್ಕಾ ಅದೃಷ್ಟದ ವ್ಯವಹಾರ. ಇದು ಮಾನ್ಯತೆಯ ಛತ್ರಿ ಹಿಡಿದುಕೊಂಡು ಹೇಳುವುದಾದರೂ ಬುದ್ಧಿವಂತರು ಹೇಳುವಂತೆ ಇದು ಪಕ್ಕಾ ಜುಗಾರಿ ಸ್ವಾಮಿ. ಅಂದಿನ ಇಸ್ಪೀಟ್ ಆಟಕ್ಕೂ ಇದಕ್ಕೂ ಏನು ವೆತ್ಯಾಸ ಉಂಟೋ ಅಂತ ಅಚ್ಚರಿಯಾಗುವುದುಂಟು. ಇಲ್ಲಿನ ಸೋಲು ಗೆಲುವು ಲಾಭ ನಷ್ಟಕ್ಕೆ ಪಕ್ಕಾ ಲೆಕ್ಖ ಉಂಟು,  ಅಲ್ಲದಿದ್ದರೆ ಇದು ಪಕ್ಕಾ ಬೀದಿ ಬದಿಯ ಜುಗಾರಿ. ಆದರೂ ವಿಚಿತ್ರ ಎಂದರೆ, ದೇಶ ದೇಶಗಳ ಮಾನದಂಡ ಈ ಶೇರು ಮಾರುಕಟ್ಟೆಯ ವ್ಯವಹಾರ. ಎಂತಹ ಮುಂದುವರಿದ ಪ್ರಜ್ಞಾವಂತ ದೇಶವಾದರು ಬಲಿಷ್ಠವಾದ ಆರ್ಥಿಕತೆಗೆ ಅವಲಂಬಿಸಿರುವುದು ಇದೇ ಈ ಜುಗಾರಿ ಕಟ್ಟೆಯನ್ನು ಹೇಳಿದರೆ ಅಚ್ಚರಿಯಿಲ್ಲ.  ಅಂದು ಸೊಂಟಕ್ಕೆ ಬೈರಾಸು ಸುತ್ತಿ ತಲೆಗೆ ಮುಂಡಾಸು ಸುತ್ತಿ , ಬಾಯಿಯಲ್ಲಿ ಬೀಡಿ ಇಟ್ಟು ಆಡುತ್ತಿದ್ದ ಇಸ್ಪೀಟ್ ಇಂದು ದೇಶದದ ಬಲಿಷ್ಠ ಕಂಪೆನಿಗಳೇ ಆಡುತ್ತಿವೆ. ಹಾಗೊಂದು ವೇಳೆ ಆಡದೇ ಇದ್ದರೆ ದೇಶದ ಆರ್ಥಿಕತೆ, ಜೆಡಿಪಿ ಕುಸಿದು ಬಿತ್ತು ಅಂತನೇ ಅರ್ಥ. ಏನು ಅಚ್ಚರಿಯಲ್ಲವೇ

Sunday, March 1, 2020

ಅನುದಾನ



ಎಪ್ಪರದ ದಶಕದ ಮಳೆಗಾಲದ ಒಂದು ದಿನ ನಾವು ನಾಲ್ಕೈದು ಜನ ಮಾಣಿಗಳು  ಗುಂಪೆಯ ಆ ಕಡೆಯ ಯಾವುದೋ ಒಂದು ಮನೆಯ ಕಾರ್ಯಕ್ರಮಕ್ಕೆ ಹೊರಟಿದ್ದೆವು. ಇಲ್ಲಿ ಮಾಣಿಗಳು ಎನ್ನುವುದೇ ಸೂಕ್ತ. ಆಗಷ್ಟೇ ಬ್ರಹ್ಮೋಪದೇಶವಾಗಿ ನಾಮ ಎಳೆದುಕೊಂಡ ಹುಡುಗರು.  ಮನೆಯ ಕಾರ್ಯಕ್ರಮ ಎಂದರೆ ಅದು ಔರ್ಧ್ವದೇಹೀ ಕಾರ್ಯಕ್ರಮ. ವೈಕುಂಠ ಸಮಾರಾಧನೆ. ಬೆಳಗ್ಗೆ ಹೊರಟು ಸುರಿಯುವ ಮಳೆಗೆ ಒದ್ದೆಯಾಗಿ ತೊಡು ಗದ್ದೆಯಲ್ಲಿ ನೀರಾಟವಾಡಿ ಗುಡ್ಡೆ ತೋಟ ಸುತ್ತಿ ಮಧ್ಯಾಹ್ನದ ಹೊತ್ತಿಗೆ ಮನೆಯಂಗಳಕ್ಕೆ ಕಾಲಿಡುತ್ತಿದ್ದೆವು. ಅಂದು ಎರಡು ಕಡೆಯಲ್ಲಿ ಕಾರ್ಯಕ್ರಮ ಇರುವುದನ್ನು ಮನೆಯಲ್ಲಿ ಹಿರಿಯರು ಹೇಳಿದ್ದರು. ಮನೆಯಲ್ಲಿ ಕುಳಿತರೆ ಗಂಜಿ ಸಿಗುವುದೂ ಸಹ ಅನುಮಾನ ಎಂದಿರುವಾಗ ಹೊಟ್ಟೆತುಂಬದ ಆ ಊಟಕ್ಕಿಂತ ಹೊಟ್ಟೆ ತುಂಬುವ ಸಮಾರಾಧನೆಯ ಊಟದ ಆಯ್ಕೇಯೆ ಸುಲಭ ಅನ್ನಿಸುತ್ತಿತ್ತು. ನಾಲ್ಕೈದು ಮೈಲಿ ನಡೆದು ಹೋಗಬೇಕು.  ಎರಡು ಮನೆಯ ಕಾರ್ಯಕ್ರಮದಲ್ಲಿ ಯಾವ ಮನೆಗೆ ಹೋಗಬೇಕು ? ನಮ್ಮೊಳಗೇ ಚರ್ಚೆ. ನಮ್ಮಲ್ಲೊಬ್ಬ ಇದ್ದ. ಆತ ವಯಸ್ಸಿನಲ್ಲಿ ಎಲ್ಲರಿಗಿಂತಲೂ ಹಿರಿಯವನು. ಸ್ವಲ್ಪ ಭೀಮ ಗಾತ್ರದವನು.  ಸ್ವಭಾವವೂ ಹಾಗೆ. ಎಲೆಯ ಎದುರು ಕುಳಿತರೆ ಎರಡು ಬಗೆಯ ಪಾಯಸವನ್ನು ಮೂರು ಸಲ ಹಾಕಿಸಿ ತಿಂದು ತೇಗುತ್ತಿದ್ದ. ಅವನೊಂದು ಮನೆಯನ್ನು ಮೊದಲೇ  ಆಯ್ಕೆ ಮಾಡಿದ್ದ. ಆದಕ್ಕೆ ಅವನು ಕೊಟ್ಟ ಕಾರಣ ಬಹಳ ಸರಳವಾಗಿತ್ತು. 

ಬ್ರಾಹ್ಮಣೋ  ಭೋಜನ ಪ್ರಿಯ ಅಂತ ಭೋಜನದ ಬಗ್ಗೆ ತಿಳಿಯದವರು ಗೇಲಿ ಮಾಡಬಹುದು. ಭೋಜನವು ಪರಮಾತ್ಮ ಸದೃಶ ಎಂಬುದು ಅವರಿಗೆ ತಿಳಿಯದು.  ನಮ್ಮ ಭೀಮ ಗಾತ್ರದವನಿಗೆ ಭೋಜನ ಪ್ರಿಯವಾಗುವುದು ಕೈ ಭಾರವಾಗುವಾಗಲೇ ಎಂಬುದು ಬೇರೆ ಮಾತು. ಅಂದು ಆತನ ನಿರ್ಣಯದ ಹೊಲಬು  ಆವಾಗ ನಮಗೆ ಹೊಳೆಯಲಿಲ್ಲ. ನಾವು ಹೋಗುವ ಮನೆಯ ತಾತನಿಗೆ ಹನ್ನೆರಡು ಜನ ಮಕ್ಕಳು. ಇನ್ನೊಂದು ಮನೆಯಲ್ಲಿ ಸತ್ತು ಹೋದ ವ್ಯಕ್ತಿಗೆ ಒಬ್ಬನೇ ಒಬ್ಬ ಮಗನಿರುವುದರಿಂದ ಆ ಮನೆಯನ್ನು ಬಿಟ್ಟು ಈ ಮನೆಯನ್ನು ಆಯ್ಕೆ ಮಾಡಿಕೊಂಡದ್ದು ಹನ್ನೆರಡು ಮಕ್ಕಳು ಕೊಡುವ ದಕ್ಷಿಣೆಗಾಗಿ!!  ಇಂದು ಇದು ಕೇಳಿದರೆ ಹಾಸ್ಯಾಸ್ಪದವಾಗಬಹುದು. ನಂಬುವುದು ಕಷ್ಟವಾಗಬಹುದು. ಅದರೆ ಅದು ವಾಸ್ತವ.  ಆ ಬಡತನ ವೇಷವಲ್ಲದ  ನಿಜವಾದ ಪಾತ್ರ.   ಇಂದಿನ ಪಿಜಾ ಬರ್ಗರು ಕಾಲದಲ್ಲಿ ಹಸಿವೆಂದರೆ ಏನು ಎಂಬುದೇ ಅರಿವಿಗೆ ಬಾರದಿರುವಾಗ ಸಮಾರಾಧಾನೆಯ ಊಟವನ್ನು ಹಿಡಿದಿಡಬಲ್ಲ ಸಾಮಾರ್ಥ್ಯ ಇಲ್ಲ ಅಂತಲೇ ಹೇಳಬೇಕು.  ಹಸಿವೆಂದರೆ ಆರೋಗ್ಯದ ಲಕ್ಷಣ. ಆರೋಗ್ಯವಂತ ಹಸಿವು ಇಂದಿನ ಜನಾಂಗ ಮರೆತು ಹೋಗಿದೆ.  ಮಾತ್ರವಲ್ಲ ಸಿಗುವ ಚಿಲ್ಲರೆ ದಕ್ಷಿಣೆ,  ಇಂದಿನ ಮಕ್ಕಳು ಎಲೆಯ ಹತ್ತಿರವೇ ಚೆಲ್ಲಿ ಹೋಗುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅಷ್ಟೂ ನಿರ್ಲಕ್ಷ್ಯ. 

ಇಂದು ಬ್ರಾಹ್ಮಣೊ ಭೋಜನ ಪ್ರಿಯವೂ ಇಲ್ಲ ದಕ್ಷಿಣ ಪ್ರಿಯನೂ ಅಲ್ಲ. ಹಾಗಿದ್ದರೆ ಇಂದಿನ ಬ್ರಾಹ್ಮಣ ಆವಶ್ಯಕತೆಯಾದರೂ ಏನು? ಪ್ರಶ್ನೆ ಸಹಜ. 

ಕೆಲವು ದಿನಗಳ ಹಿಂದೆ ನಮ್ಮ ಪರಿಚಯದವರೊಬ್ಬರು ಮದುವೆ ದಲ್ಲಾಳಿ ಕೆಲಸ ಮಾಡುತ್ತಿದ್ದವರು. ಈಗ ಮದುವೆ ದಲಾಳಿಯಲ್ಲೂ ಅತ್ಯಂತ ವೈವಿಧ್ಯವಿದೆ  ಎಂಬುದು ಆಶ್ಚರ್ಯ. ಮದುವೆಯಾಗುವವರ, ಆಗಬೇಕಾದವರ ಕಾನೇಷುಮಾರಿ ಇವರ ದಿನಚರಿಯಲ್ಲಿರುತ್ತದೆ. ದಲ್ಲಾಳಿಗಳು ಒಂದಿಷ್ಟು ಖರ್ಚಿನ ಹಣ ಅಂತ ಕಮೀಷನ್ ಪಡೆಯುವುದನ್ನು ಕಂಡಿರಬಹುದು. ಆದರೆ ಇದು ಹಾಗಲ್ಲ. ಮದುವೆಯಾಗಬೇಕಾದ ಮಾಣಿ (?) ಯನ್ನು ಕರೆದು ಕೊಂಡು ಉತ್ತರಕರ್ನಾಟಕದ ಯಾವುದೋ ಊರಿಗೆ ಹೋಗುತ್ತಾರೆ.  ಒಂದು ಬ್ರಾಹ್ಮಣ ಹೆಣ್ಣನ್ನು ತೋರಿಸಿ ಹೆಣ್ಣಿನ ಅಪ್ಪ ಅಮ್ಮನಿಗೆ ಒಂದಿಷ್ಟು ದುಡ್ದು ಕೈಗೆ ಹಾಕಿದರೆ ಮದುವೆ ಹೆಣ್ಣು ಸಿದ್ಧ. ವಧು ದಕ್ಷಿಣೆ ಅಂತ ಗೌರವದಲ್ಲಿ ಹೇಳಬಹುದಾದರೂ  ವ್ಯವಹಾರ ಕುದುರುವ ರೀತಿ ನೋಡಿದರೆ ಆ ಗೌರವ ಅದು ಉಳಿಸಿಕೊಂಡಿರುವುದಿಲ್ಲ ಎಂದು ಅರ್ಥವಾಗುತ್ತದೆ. ಹೆಣ್ಣು ತೋರಿಸುವ ಮೊದಲೇ ಮುಂಗಡ ಅಂತ ಒಂದಷ್ಟು ದೊಡ್ಡ ಮೊತ್ತವೇ ಜೇಬಿಗಿಳಿಸಿಬಿಡುತ್ತಾರೆ. ನಂತರ  ಆ ಹೆಣ್ಣು ಒಪ್ಪಿಗೆಯೋ ಇಲ್ಲವೋ ಅದು ವಾಪಾಸು ಸಿಗುವ ಭರವಸೆಯಿಲ್ಲ. ಅಕ್ಷರಶಃ ಮಾರುಕಟ್ಟೆಯ ವ್ಯವಹಾರ.  ಹಲವು ಸಲ ತೋರಿಸುವುದು ಒಂದು ಹೆಣ್ಣಾದರೆ,  ನಂತರ ಮದುವೆಯಾಗುವಾಗ ಹೆಣ್ಣು ಬದಲಾಗುವ ಸಂಭವವೂ ಇರುತ್ತದೆ. ಡೆಮೋ ಪೀಸ್ ಒಂದು ಬೇರೆಯೇ ಇರುತ್ತದೆ!!!   ಇದು ಕೇವಲ ಬ್ರಾಹ್ಮಣರಲ್ಲಿ ಮಾತ್ರ ಅಂತ ನನ್ನ ಭಾವನೆ. ಯಾಕೆಂದರೆ ಬ್ರಾಹ್ಮಣ ಕನ್ಯಾಮಣಿಗಳೇ ಇಲ್ಲ. ಗಂಡು ಯಾವ ವಂಚನೆಗೂ ಸಿದ್ಧವಾಗಿರಬೇಕು.  ಪಕ್ಕಾ ವ್ಯವಹಾರಿಯಾಗಿರಬೇಕು. ಇಲ್ಲೂ ಅಂತೇ ಕರೆದು ಕೊಂಡು ಹೋದ ಹುಡುಗಿ ನಂತರ ಮದುವೆಗೆ ಹೆಣ್ಣೇ ಬೇರೆ ಎಂದು ಅರಿವಾದಾಗ ಗಂಡು ಬುದ್ಧಿವಂತನಂತೆ ಹೆಣ್ಣನ್ನು ನಿರಾಕರಿಸುತ್ತಾನೆ. ಮಧ್ಯವರ್ತಿ ಇಷ್ಟಕ್ಕೇ ಒಪ್ಪಂದದ ಪೂರಾ ಹಣ ಕೊಡುವಂತೆ ದುಂಬಾಲು ಬೀಳುತ್ತಾನೆ. ಬ್ರಾಹ್ಮಣ ಪಕ್ಕಾ ವ್ಯವಹಾರಿಯಾಗುತ್ತಾನೆ. 

ಮದುವೆ ಎಂಬುದು ಒಂದು ಭಾವನಾತ್ಮ ಸಂಬಂಧ. ಅದರಲ್ಲೂ ಒಂದು ಬ್ರಾಹ್ಮಣ ಕನ್ಯೆ ಗೃಹಿಣಿಯಾದ ಮೇಲೆ ಕರ್ಮಾಂಗದಲ್ಲಿ ವಾಮಭಾಗದಲ್ಲಿ ಸಹಭಾಗಿಯಾಗಬೇಕಾದವಳು ಇಲ್ಲಿ ವಿಕ್ರಯದ ಸಾಮಾಗ್ರಿಯಂತಾಗುತ್ತಾಳೆ. ಇಲ್ಲಿ ಮಾರಾಟದ ವಸ್ತು ಗಂಡೋ ಹೆಣ್ಣೋ ಅಂತ ಸಂದೇಹ ಬಂದರೂ ವೈಶ್ಯರಿಗಿಂತ ವ್ಯವಹಾರ ಕುಶಲಿ ಬ್ರಾಹ್ಮಣನೇ ಆಗಿರುತ್ತಾನೆ. ಬೀದಿ ಬದಿಯ ಮಾರಾಟಕ್ಕೂ ಇದಕ್ಕು ಹೆಚ್ಚಿನ ವೆತ್ಯಾಸವೇನೂ ಇರುವುದಿಲ್ಲ. ಅಲ್ಲಿ ಕೊಳೆತ ತರಕಾರಿಯಾದರೆ, ಇಲ್ಲಿ ಹಚ್ಚ ಹಸಿರು ಸಿಗಬಹುದು. ಆದರೆ ವ್ಯವಹಾರದ ರೂಪ ಮಾತ್ರ ಒಂದೇ.  ಹೆಣ್ಣನ್ನು ಗಂಡು ಕೊಳ್ಳುವುದೋ ಗಂಡನ್ನು ಹೆಣ್ಣು ಕೊಳ್ಳುವುದೋ ಹೇಳುವುದು ಕಷ್ಟ. ಹೆಣ್ಣು ಸಿಗದ ಗಂಡು ಯಾವುದಕ್ಕೂ ಸಿದ್ದನಿದ್ದಾನೆ. ಹಲವು ಸಲ ಹೆಣ್ಣಿನ ಅಪ್ಪ ದುಡ್ದಿನೊಂದಿಗೆ ಷರತ್ತುಗಳನ್ನೂ ಹೇಳುತ್ತಾನೆ. ನಂತರದಲ್ಲಿ ಅದು ಎಷ್ಟು ನೆರವೇರುತ್ತದೋ ಯಾರಿಗೆ ಗೊತ್ತು. ಆ ಕ್ಷಣಕ್ಕೆ ಅದು ಕೇವಲ ಒಪ್ಪಿಕೊಳ್ಳಬೇಕಾದ ಷರತ್ತುಗಳು. ಹೆಣ್ಣಿಗೆ ಅಡುಗೆ ಬರುವುದಿಲ್ಲ, ಮನೆಗೆಲಸ ಅಭ್ಯಾಸ ಇಲ್ಲ. ಹೀಗೆ  ಅಸಹಜ ಬೇಡಿಕೆಗಳು. ಭಾವಾನಾತ್ಮಕ ವಿಷಯಗಳಿಗೆ ಮನ್ನಣೆಯೇ ಇಲ್ಲದಲ್ಲಿ ಈ ಶರತ್ತುಗಳನ್ನು ಗಂಡು ಒಪ್ಪಿಕೊಳ್ಳುತ್ತಾನೆ. ಮದುವೆಯಾಗಿ ಕೆಲವು ತಿಂಗಳು ಜ್ಯಾರಿಯಲ್ಲಿದ್ದರೆ ಸಾಕು. ನಂತರ ....? ಇದನ್ನೆಲ್ಲ ಯೋಚಿಸುವುದಿಲ್ಲ. ಆದರೆ ಷರತ್ತು ಮಾತ್ರ ಇದ್ದೇ ಇರುತ್ತದೆ. ಕೊನೆಯಲ್ಲಿ ಆಕೆ ಏನೂ ಮಾಡದೇ ಇದ್ದರೂ ಆದೀತು. ಎಲ್ಲವನ್ನು ಮಾಡುವ ಹುಮ್ಮಸ್ಸು ಗಂಡಿಗೆ ಒಟ್ಟಿನಲ್ಲಿ ಗೃಹಸ್ಥನಾಗಿ ಬರಿದಾಗಲಿರುವ ವಾಮಭಾಗದ ಆಸನ ಭರ್ತಿಯಾಗಬೇಕು.  ಒಂದು ಹೆಣ್ಣು ಬೇಕು. 

ಮೊನ್ನೆ ಮಾಜಿ ಮಂತ್ರಿಗಳೊಬ್ಬರು ಹೇಳಿದ್ದರು. ಎಲ್ಲರಿಗಿಂತಲೂ ಹೆಚ್ಚಿಗೆ ಬ್ರಾಹ್ಮಣರಿಗೆ ಸರಕಾರೀ ಅನುದಾನ ಒದಗಿಸಿದ್ದು ನಾನೆ ಅಂತ. ಇರಬಹುದು, ಅದಕ್ಕೆ ನಿಜವಾಗಿಯೂ ಧನ್ಯವಾದ ಹೇಳಬೇಕು.  ರಹಸ್ಯವಾಗಿಯೋ ಬಹಿರಂಗವಾಗಿಯೋ ಮಹಾಯಾಗವನ್ನು ಮಾಡಿ ಕೆಲವಾದರೂ ಬ್ರಾಹ್ಮಣರಿಗೆ ಭೂರಿ ದಕ್ಷಿಣೆಯನ್ನು ಕೊಡುತ್ತಾರೆ. ಆದರೆ ಸಾಮಾಜಿಕವಾಗಿ ಬ್ರಾಹ್ಮಣನಿಗೆ ಸಲ್ಲುವುದು ಇಷ್ಟೇ ಅಂತ ಇದೆ. ಸರಕಾರದ ಲೆಕ್ಕದಲ್ಲಿ ಬ್ರಾಹ್ಮಣ ಮುಂದುವರೆದವನು ಮಾತ್ರವಲ್ಲ ಇನ್ನೂ ಮುಂದೆ ಓಡಿ ಹೋದವನು. ಅನುದಾನ ಸಿಗದ ನತದೃಷ್ಟ.  ಹಾಗಾಗಿ ಅನುದಾನವೇನೋ ಸಿಕ್ಕಿದೆ.  ಆದರೆ ಅದನ್ನು ಯಾವ ಬಗೆಯಲ್ಲಿ ಉಪಯೋಗಿಸುವುದು?  ಬ್ರಾಹ್ಮಣರಿಗೆ ಯಾವ ಸೌಲಭ್ಯವನ್ನು ರಾಜ್ಯಾಡಳಿತದಲ್ಲಿ ಒದಗಿಸಬೇಕು? ವಿದ್ಯಾಭ್ಯಾಸವೇ? ಬ್ರಾಹ್ಮಣರು ಮೊದಲೇ ವಿದ್ಯಾವಂತರು. ಹಣ? ಜೀವನಾಧಾರ? ಯಾವುದೂ ಅಲ್ಲ.  ಯಾವುದು ಇಲ್ಲವೋ ಅದನ್ನು ಒದಗಿಸಬೇಕು ಎಂದು ಯೋಚಿಸಿದರೆ  ಇಂದು ಬ್ರಾಹ್ಮಣ್ಯಕ್ಕೆ  ಬೇಕಾಗಿರುವುದು ಸಂಸ್ಕಾರಗಳು. ಹೌದು ಬ್ರಾಹ್ಮಣ ಸಂಸ್ಕಾರ ಒದಗಿಸಬೇಕು.  ಮೇಲೆ ಹೇಳಿದ ಎರಡು ನಿದರ್ಶನಗಳಿಂದ  ಬ್ರಾಹ್ಮಣ ಬದಲಾದ ರೀತಿ ತಿಳಿಯಬಹುದು. ಹಾಗೆ ನೋಡಿದರೆ ಪ್ರತಿಯೊಂದು ಜಾತಿ ಪಂಗಡಗಳಲ್ಲೂ ಈ ಸಮಸ್ಯೆ ಇರಬಹುದು. ಆದರೆ ಅದು ಉಳಿದವರಿಗೆ ಅರಿವಿಗೆ ಬರುವುದಿಲ್ಲ.  ಉಳಿದ ಕಡೆ ಕ್ರಾಂತಿಯಾದಾಗ ಅದು ಅಲ್ಲೇ ಆ ಜಾತಿಯೊಳಗೇ ಇರುತ್ತದೆ.  ವಿಚಿತ್ರ ಎಂದರೆ ಬ್ರಾಹ್ಮಣ ಸಂಸ್ಕಾರ ದೂರವಾದಾಗ ಅದು ಪ್ರಪಂಚಕ್ಕೆ ತಿಳಿದುಬಿಡುತ್ತದೆ. ಬ್ರಾಹ್ಮಣ್ಯದ ಮಹತ್ವ ಅದು. ಬ್ರಾಹ್ಮಣ ಬ್ರಾಹ್ಮಣನಾಗಿ ಇರಬೇಕಾದದ್ದು ಉಳಿದ ಜಾತಿಗೂ ಅನಿವಾರ್ಯ ಎಂದನಿಸುತ್ತದೆ. ಬ್ರಾಹ್ಮಣ ಬದುಕು ಬಿಳೀ ವಸ್ತ್ರದಂತಿರುವ ಬದುಕು.  ಬಹಳ ಎಚ್ಚರಿಕೆ ಬೇಕು. ಬ್ರಾಹ್ಮಣನ್ನು  ಬ್ರಾಹ್ಮಣನಿಗಿಂತಲೂ ಹೆಚ್ಚಾಗಿ ಸಮಾಜವೇ ಗಮನಿಸುತ್ತದೆ.  ಮುಖ್ಯವಾಗಿ ಸಂಸ್ಕಾರ ಅದು ಜನ್ಮದಿಂದಲೇ ಬರುವಂತದ್ದು. ಯಾರೋ ದಾನ ಮಾಡಿ ಒದಗಿಸುವದ್ದಲ್ಲ.   ಆದರೆ ಜನ್ಮದಿಂದಲೇ ಲಭಿಸಿದ್ದು ಅದು ಉಳಿದಿಲ್ಲ. ಗಿಡಮರಗಳಿಗೆ ಕಸಿ ಕಟ್ಟಿದಂತೆ ತನ್ನ ಸಂಸ್ಕಾರಗಳಿಗೂ ಮನುಷ್ಯ ಕಸಿಕಟ್ಟಿಕೊಂಡು ಏನೋ ಆಗಿದ್ದವನು ಇನ್ನೇನೋ ಆಗಿ ಸಮಾಜದಲ್ಲಿ ಗುರುತಿಸಲ್ಪಡುತ್ತಾನೆ.  ಬ್ರಾಹ್ಮಣನಿಗೆ ಉಚಿತ ಶಿಕ್ಷಣದ ಅವಶ್ಯಕತೆಯಾಗಲೀ ಅನುದಾನದ ಅವಶ್ಯಕತೆ ಇದೆ ಎಂದನ್ನಿಸುವುದಿಲ್ಲ. ಉತ್ತಮ ಸಂಸ್ಕಾರ ಯುಕ್ತ ಬದುಕಿನ ಕೊರತೆ ಇದೆ. ಸಂಧ್ಯ ಜಪ ತಪ ಕರ್ಮಾನುಷ್ಠಾನಗಳ ಪ್ರಜ್ಞೆ ಜಾಗ್ರತವಾಗಬೇಕಿದೆ. ಅನಗತ್ಯ ಆಡಂಬರದ ಉತ್ಸವಕ್ಕಿಂತಲೂ ಇದರ ಅರಿವಿನ ಬಗ್ಗೆ ಅಭಿಯಾನವಾಗಬೇಕಿದೆ. ಸರಳವಾದ ಜೀವನ ಶೈಲಿಯ  ಸಾರ್ಥಕತೆಯ ಅರಿವಾಗಬೇಕಿದೆ. 
ಮನುಷ್ಯನಲ್ಲಿ  ಸಂಸ್ಕಾರದ ತಳಹದಿ ಅಂತ ಗುರುತಿಸುವುದು ಆತನಲ್ಲಿರುವ  ಆತ್ಮ ವರ್ಚಸ್ಸಿನಿಂದ.   ಪರಮಾತ್ಮನನ್ನು ಗುರುತಿಸುವಲ್ಲಿ ಲಭ್ಯವಾಗಬೇಕಾದ  ಜಾತಿ ಸಂಸ್ಕಾರಗಳು   ಇಂದು ಅದು ಮನುಷ್ಯನನ್ನುವರ್ಗೀಕರಿಸುವುದಕ್ಕೆ ಉಪಯೋಗವಾಗುತ್ತಿದೆ.  ಹಾಗಾಗಿ ಸಂಸ್ಕಾರದ ಕೊರತೆ, ಮಾನವೀಯ ಮೌಲ್ಯಗಳ ಕೊರತೆ ಸಮಾಜವನ್ನು ಬಾಧಿಸುತ್ತದೆ.  ಹಲವರಲ್ಲಿ  ಮಿತ್ರತ್ವ,  ವ್ಯವಹಾರ  ಈ ಎಲ್ಲ  ಸೌಹಾರ್ದತೆಯಿದ್ದರೂ ಜಾತಿ ಯಾವುದು ಅಂತ,  ಮತ್ತೊಬ್ಬರ ಸಂಸ್ಕಾರ ತಿಳಿಯುವ ಕುತೂಹಲ. ಆದರೆ ಸ್ವತಃ ತಮ್ಮ ಸಂಸ್ಕಾರ ಉಳಿಸಿಕೊಳ್ಳುವುದರಲ್ಲಿ ಕಾಳಜಿಯೇ ಇರುವುದಿಲ್ಲ.