Sunday, July 9, 2023

ಸತ್ಯ ಪ್ರತಿಜ್ಞೆ

         ಮಹಾ ಭಾರತದಲ್ಲಿ ಭೀಷ್ಮ ಪ್ರತಿಜ್ಞೆ ಕೇಳಿರಬಹುದು. ಪ್ರತಿಜ್ಞೆ ಎಂದಾಕ್ಷಣ ಮೊದಲು ಭೀಷ್ಮ ನೆನಪಿಗೆ ಬರುತ್ತಾನೆ. ಯಾಕೆಂದರೆ ಆ ಪ್ರತಿಜ್ಞೆಯಿಂದ ಆತನ ಅಪ್ಪ ಇಟ್ಟ ಹೆಸರು ಬದಲಾಗಿಬಿಡುತ್ತದೆ. ಮೂಲ ಹೆಸರೇ ಮರೆತು ಹೋಗುವಷ್ಟು ಬದಲಾಗಿಬಿಡುತ್ತದೆ.   ಪ್ರತಿಜ್ಞೆ ಎಂದರೆ ಹೇಗಿರಬೇಕು ಎಂಬುದನ್ನು ಬದುಕಿನಾದ್ಯಂತ ತೋರಿಸಿಕೊಟ್ಟ ಪುರಾಣದ ಮಹಾ ಪುರುಷ ಭೀಷ್ಮ. ಈತನ ಕಥೆಯನ್ನು ಶಾಲೆಯ ತರಗತಿಯ ಒಳಗೆ ಕುಳಿತು ಓದುತ್ತೇವೆ. ಎಲ್ಲವೂ ಚೆನ್ನಾಗಿರುತ್ತದೆ. ರೋಚಕವಾಗಿರುತ್ತದೆ. ಪ್ರತಿಜ್ಞೆ...ನಾವು ಕೆಲವೊಮ್ಮೆ ಆವೇಶದಲ್ಲಿ ಮಾಡಿಬಿಡುತ್ತೇವೆ. ಪ್ರತಿಜ್ಞೆ ಅದು ದೃಢ ನಿರ್ಧಾರದ ಪ್ರತೀಕ. ಗಟ್ಟಿಮನಸ್ಸಿನ ಕಾಠಿಣ್ಯದ ಪರೀಕ್ಷೆ ಅದು. ಯಾವುದು ಅಸಾಧ್ಯವೋ ಅದು ಸಾಧ್ಯವಾಗುವ ಕರ್ತೃತ್ವ ಶಕ್ತಿ ಅದರಲ್ಲಿದೆ.

 "ಭಾರತವು ನನ್ನದೇಶ, ಬಾರತೀಯರೆಲ್ಲರೂ ನನ್ನ ಸಹೋದರ ಸಹೋದರಿಯರು. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ...."

        ನನಗಿನ್ನೂ ನೆನಪಿದೆ ನಮ್ಮ ಕೇರಳದ ಶಾಲೆಗಳಲ್ಲಿ ಬೆಳಗ್ಗೆ ಪ್ರಾರ್ಥನೆ ಮಾಡಿದ ನಂತರ ಶಾಲಾ ನಾಯಕ ಪ್ರತಿಜ್ಞೆಯನ್ನು ಓದಿ ಹೇಳುತ್ತಾನೆ. ಮಿಕ್ಕ ಉಳಿದ ವಿದ್ಯಾರ್ಥಿಗಳು ಅಧ್ಯಾಪಕರೊಂದಿಗೆ  ಈ ಪ್ರತಿಜ್ಞೆ ಶಾಲೆಯಲ್ಲಿ ಮೊಳಗುತ್ತದೆ. ಅದೊಂದು ಸಮ್ಮೋಹನ. ಬೆಳಗ್ಗೆ ಶಾಲೆ ಆರಂಭವಾಗುವ ಒಂದು ಗೌರವದ ಸಮಯ. ಮೊನ್ನೆ ಒಂದು ಬಾರಿ ನಮ್ಮ ಕಾಯರ್ ಕಟ್ಟೆ ಹೈಸ್ಕೂಲಿಗೆ ಹೋಗಿದ್ದೆ. ಧ್ವಜ ಸ್ಥಂಭದ ಎದುರು ಶಾಲಾ ಅಂಗಣ. ಅದರ ತುದಿಯಲ್ಲಿ ನಿಂತು ನೋಡಿದಾಗ ಬಾಲ್ಯದಲ್ಲಿ ಹೇಳಿದ ಈ ಪ್ರತಿಜ್ಞೆ ನೆನಪಾಯಿತು. ದಿನವೂ ಮಾಡುತ್ತಿದ್ದ ಪ್ರತಿಜ್ಞೆ ಎಲ್ಲರಿಗೂ ಬಾಯಿ ಪಾಠವಾಗಿಬಿಡುತ್ತಿತ್ತು. ಶಾಲಾ ನಾಯಕ ನೆಪ ಮಾತ್ರಕ್ಕೆ ಪ್ರತಿಜ್ಞೆ ಬರೆದ ಕಾಗದವನ್ನು ಎದುರು ಹಿಡಿದಿರುತ್ತಿದ್ದ. ನಾವೆಲ್ಲ ಅಷ್ಟೇ ಯಾಂತ್ರಿಕವಾಗಿ ಆ ಪ್ರತಿಜ್ಞೆ ಹೇಳುತ್ತಿದ್ದೆವು. ಕ್ಷಮಿಸಿ ಪ್ರತಿಜ್ಞೆ ಮಾಡುತ್ತಿರಲಿಲ್ಲ. ಯಾಕೆಂದರೆ ಆ ಪ್ರತಿಜ್ಞೆಯ ಗಂಭೀರತೆ ಆಗ ಅರಿವಿಗೆ ಬರಲೇ ಇಲ್ಲ.  ಬಾಲ್ಯದಲ್ಲೆ ಸುಳ್ಳು ಹೇಳುವುದಕ್ಕೆ ಇಲ್ಲಿಂದಲೇ ಆರಂಭವಾಗಿಬಿಡುತ್ತದೆ. ಯಾಕೆಂದರೆ  ಬಾರತೀಯರೆಲ್ಲ ನನ್ನ ಸಹೋದರ ಸಹೋದರಿಯರು ಎಂಬುದನ್ನು ಆ ಅಂಗಣ ಬಿಡುವಾಗಲೆ ಮರೆತು ಬಿಟ್ಟ ಸನ್ನಿವೇಶಗಳು ಹೆಚ್ಚು. 

        ಪ್ರತಿಜ್ಞೆ ಅದೆಷ್ಟು ಪವಿತ್ರವಾದದ್ದುಎಂದರೆ ಅದು ನಮ್ಮ ವಿಶ್ವಾಸ ನಮ್ಮ ಭಾವನೆ ಆಶೋತ್ತರಗಳಿಗೆ ಸೀಮಿತವಾಗಿ ಉಳಿಯುತ್ತದೆ. ನಮ್ಮ ಬದ್ದತೆ ಪ್ರಾಮಾಣಿಕತೆ ಆ ಪ್ರತಿಜ್ಞೆಯ ಪಾವಿತ್ರ್ಯತೆಯನ್ನೂ ಗೌರವನ್ನು ಉಳಿಸುತ್ತದೆ. ಅದಕ್ಕೊಂದು ಮೌಲ್ಯ ನಮ್ಮ ನಡೆ ನುಡಿಗಳಿಂದ ನಿರ್ಧಾರವಾಗುತ್ತದೆ. ಪುರಾಣದಲ್ಲಿನ ಭೀಷ್ಮ ಪ್ರತಿಜ್ಞೆ ಅದಕ್ಕೊಂದು ಘನತೆ ತಂದದ್ದು ಭೀಷ್ಮನ ಜೀವನ. ಪ್ರತಿಜ್ಞೆ ಅದೊಂದು ಆತ್ಮ ವಿಶ್ವಾಸದ ಸಂಕೇತ. ನಮ್ಮಲ್ಲಿ ಆತ್ಮ ವಿಶ್ವಾಸದ ಕೊರತೆ ಇದ್ದರೆ ಅದೂ ವ್ಯರ್ಥವಾಗಿಬಿಡುತ್ತದೆ. ದೇವರು ಎಂಬುದು ಸರ್ವಶ್ರೇಷ್ಠ. ಸರ್ವ ಉತ್ಕೃಷ್ಟ. ಅದೆಲ್ಲವೂ ನಮ್ಮ ಮನೋಭಾವದಿಂದ ವ್ಯಕ್ತವಾಗುವ ಸೀಮಿತ ಸಂಭಂಧ. ನಾವು ದೇವರನ್ನು ಎಲ್ಲಿ ಇರಿಸುತ್ತೇವೆ ಅದಕ್ಕೆ ಹೊಂದಿಕೊಂಡಿರುತ್ತದೆ. ನಮ್ಮ ದೇವರು ಪವಿತ್ರವಾಗುವುದು ಅಪವಿತ್ರವಾಗುವುದು ಎಲ್ಲವೂ ನಮ್ಮ ವರ್ತನೆಯಲ್ಲಿರುತ್ತದೆ. ಪ್ರತಿಜ್ಞೆಯೂ ಅದೇ ರೀತಿ. ಖಡ್ಗ ರಕ್ಷಣೆಗೆ ಹೇಗೆ ಪೂರಕವಾಗುತ್ತದೆಯೋ ಅದೇ ರೀತಿ ವಿಧ್ವಂಸಕ್ಕೂ ಕಾರಣವಾಗುತ್ತದೆ. ಪ್ರತಿಜ್ಞೆ ಕೇವಲ ಸತ್ಕಾರ್ಯಕ್ಕೆ ಸೀಮಿತವಾಗುವುದಿಲ್ಲ ಅದು ದುಷ್ಟ ಕೃತ್ಯಗಳಿಗೂ ಪ್ರತಿಜ್ಞೆ ಬಳಕೆಯಾಗುತ್ತದೆ. 

        ಶಾಲೆಯಿಂದ ಆರಂಭವಾಗುವ ಈ ಪ್ರತಿಜ್ಞೆ ಮತ್ತೆ ಹಲವು ಸ್ಥರಗಳಲ್ಲಿ ಉಪಯೋಗವಾಗುತ್ತದೆ. ಶಾಲಾ ದಿನದ ಪ್ರತಿಜ್ಞೆ ಮತ್ತೆ ಹಲವು ವಿಧಗಳಲ್ಲಿ ಎದುರಿಗೆ ಬರುತ್ತದೆ. ರಾಜಕೀಯ ಅಥವ ಅಧಿಕಾರ ಪದವಿಗಳಲ್ಲಿ ಇದು ಒಂದು ಯಾಂತ್ರಿಕವಾಗಿರುತ್ತದೆ. ಯಾವುದೇ ಸರಕಾರ ಅಧಿಕಾರಕ್ಕೆ ಬರುತ್ತಿದ್ದರೂ ರಾಷ್ಟ್ರಪತಿ  ಅಥವಾ ರಾಜ್ಯಪಾಲರು ಪ್ರತಿಜ್ಞೆಯನ್ನು ಬೋಧಿಸುತ್ತಾರೆ. ಅದಕ್ಕೆ ಬೇರೆ ಸತ್ಯ ಪ್ರತಿಜ್ಞೆ ಎಂದು ಕರೆಯುತ್ತಾರೆ. ಪ್ರತಿಜ್ಞೆ ಎಂಬುದು ಅದು ಸತ್ಯವಾಗಿರಲೇ ಬೇಕು. ಪಂಚಾಮೃತದಲ್ಲಿ ಹಾಲು ಬೆರೆತಂತೆ. ಹಾಲು ಹಾಕಿದ ಪಂಚಾಮೃತ ಎಂದು ಹೇಳುವುದು ಎಷ್ಟು ಅಸಂಭದ್ದವೋ ಪ್ರತಿಜ್ಞೆ ಸತ್ಯ ಪ್ರತಿಜ್ಞೆ ಎಂದು ಕರೆಯುವುದೂ ಹಾಸ್ಯಾಸ್ಪದ. ಮಂತ್ರಿ ಅಧಿಕಾರಿಗಳು ಪ್ರತಿಜ್ಞೆ ಸ್ವೀಕರಿಸುವಾಗ ಅದು ಸತ್ಯ ಪ್ರತಿಜ್ಞೆ ಎಂದಾಗಬೇಕಾದರೆ ಅದರ ಅಕ್ಷರಾಕ್ಷರವೂ ಪಾಲನೆಯಾಗಬೇಕು. ಆದರೆ ವಾಸ್ತವ ಮಾತ್ರ ಬೇರೆಯೇ ಆಗಿರುತ್ತದೆ. ಹೀಗಿರುವುದರಿಂದಲೇ ಪ್ರತಿಜ್ಞೆ ಅದನ್ನು ಸತ್ಯ ಪ್ರತಿಜ್ಞೆ ಎಂದು ಕರೆದ ಮಾತ್ರಕ್ಕೆ  ಅದು ಗಂಭೀರವಾಗುವುದಿಲ್ಲ.  ಅದು ಸತ್ಯವಾಗಬೇಕು. ಶಾಲಾ ಜೀವನದಲ್ಲಿ ಭಾರತವು ನನ್ನದೇಶ , ಹೀಗೆ ಏನೋ ಯಾಂತ್ರಿಕವಾಗಿ ಹೇಳಿದಂತೆ ಇಂದು ಪ್ರತಿಜ್ಞೆಗಳು ಯಾಂತ್ರಿಕವಾಗಿದೆ. ಮತ್ತೂ ಹಾಸ್ಯಾಸ್ಪದವಾಗಿದೆ. ಇದು ಪ್ರತಿಜ್ಞೆ ಎಂಬ ಶಬ್ದಾರ್ಥವನ್ನೇ ಹಾಸ್ಯಾಸ್ಪದವನ್ನಾಗಿ ಮಾಡಿದೆ. 


Saturday, July 1, 2023

ಜೀವ ಶುದ್ದಿ

                 


   ಕುಡಿಯುವ ನೀರಿನ ಪಾತ್ರೆ ದಿನಾ ನೀರು ತುಂಬುವಾಗ ಇದ್ದ ನೀರನ್ನು ಚೆಲ್ಲಿ ಪುನಹ ನೀರಲ್ಲಿ ತೊಳೆದು, ಪುನಹ ಅದೇ ನೀರನ್ನು ತುಂಬಿಸಿಬಿಡುತ್ತಾರೆ. ಸ್ವಚ್ಛತೆ....ನೀರು ತುಂಬಿದ ಪಾತ್ರೆಯಲ್ಲಿ  ಕೇವಲ ನೀರಾದರೂ ಅದನ್ನು ಖಾಲಿ ಮಾಡಿ ಪುನಃ ಅದೇ ನೀರನ್ನು ತುಂಬಿಡುವಾಗ ಆಗುವ ಸ್ವಚ್ಛತೆಯಾದರೂ ಯಾವಬಗೆ? ಅದೇ ಪ್ರಕೃತಿಯ ಆವರ್ತನ ಅಥವಾ ಚಕ್ರ ಅಥವಾ ವರ್ತುಲ. ಮಣ್ಣಲ್ಲೇ ಹುಟ್ಟಿ ಮಣ್ಣಲ್ಲೇ ಬೆಳೆದು ಪುನಃ ಮಣ್ಣಾಗುವಂತೆ, ಸಾಗರದ ನೀರು ಆವಿಯಾಗಿ ಪುನಃ ಮಳೆಯಾಗಿ ನದಿಯಾಗಿ ಪುನಃ ಕಡಲು ಸೇರಿ ಪ್ರಕೃತಿಯೇ ಸ್ವಚ್ಛವಾದಂತೆ.   ನೀರಿನ ಪಾತ್ರೆಯಂತೆ ನಮ್ಮ ದೇಹ.  ದೇಹದ ಪ್ರತಿ ಕ್ರಿಯೆಗಳಲ್ಲಿ ಒಂದು ವರ್ತುಲವಿದೆ.  ಅದರಂತೆ ಪ್ರಧಾನವಾಗುವುದು ಉಸಿರಾಟ. ನಮ್ಮ ಜೀವಂತಿಕೆಯ ಲಕ್ಷಣವೆಂದರೆ ಅದು ಉಸಿರಾಟ. ಆದಿಯಿಂದ ಆಂತ್ಯದ ವರೆಗೂ ನಿಲ್ಲದ ನಿರಂತರ ಕ್ರಿಯೆ.  ನಮ್ಮ ಹೃದಯವೂ ನೀರಿನ ಪಾತ್ರೆಯಂತೆ. ಒಂದು ಬಾರಿಯಾದರೂ ಅದು ಸ್ವಚ್ಛವಾಗಬೇಕು. ಇಲ್ಲವಾದರೆ ಅದೂ ಕಲ್ಮಷದಿಂದ ರೋಗ ಬಾಧೆಗೆ ಒಳಗಾಗುತ್ತದೆ. ಶ್ವಾಸ ಉಚ್ಛ್ವಾಸ ನಿರಂತರ ನಡೆದರೂ ಹೃದಯ ಸ್ವಚ್ಛವಾಗುವುದಿಲ್ಲ. ಯಾಕೆಂದರೆ ದಿನವಿಡೀ ಹಲವು ಕಾರಣಗಳಿಂದ ನಮ್ಮ ಉಸಿರು ಅಸಹಜವಾಗಿ ಏರು ಪೇರು ಉಂಟಾಗುತ್ತದೆ. ಇದು ಹೃದಯ ಸ್ವಚ್ಛತೆಗೆ ಪ್ರತಿಕೂಲವಾಗಿ ಪರಿಣಮಿಸುತ್ತದೆ. ಒಂದು ಬಾರಿ ಒಳತೆಗೆದ ಶ್ವಾಸ ಪೂರ್ಣವಾಗಿ ನಾವು ಸಹಜ ಉಸಿರಾಟದಲ್ಲಿ ಹೊರ ಹಾಕುವುದಿಲ್ಲ. ಅಲ್ಪ ಸ್ವಲ್ಪ  ಸೇವಿಸಿದ ಗಾಳಿ ಉಳಿದೇ ಉಳಿಯುತ್ತದೆ.  ನೀರಿನ ಪಾತ್ರೆಯಲ್ಲಿ ಇದು ಶ್ವಾಸ ಕೋಶದಲ್ಲಿ ಕಲ್ಮಷವಾಗಿ ಕಫ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಾತ್ರವಲ್ಲ ದೇಹಕ್ಕೆ ಒದಗಬೇಕಾದ ಆಮ್ಲಜನಕದ ಕೊರತೆಯೂ ಉಂಟಾಗುತ್ತದೆ. 

         ಹೃದಯವನ್ನೂ ದೇಹವನ್ನೂ ಸ್ವಚ್ಛಗೋಳಿಸುವ ಸುಲಭದ  ಕ್ರಿಯೆಯೇ ಪ್ರಾಣಾಯಾಮ. ಒಳ ಸೇವಿಸಿದ ಉಸಿರಾಟವನ್ನು ಸಂಪೂರ್ಣವಾಗಿ ಹೊರಚೆಲ್ಲಿ ಪುನಃ ಹೊಸ ಗಾಳಿಯನ್ನು ಸೇವಿಸಿದಾಗ ಹೃದಯ ಸ್ವಚ್ಛವಾಗುತ್ತದೆ.  ನರನಾಡಿಗಳು ಸ್ವಚ್ಛವಾಗುತ್ತದೆ.  ಹುಟ್ಟಿನಿಂದ ತೊಡಗಿ ಮರಣದಲ್ಲಿ ಆಧ್ಯಾತ್ಮಿಕವಾಗಿ ಸ್ವಚ್ಛವಾಗುವ ನಮ್ಮ ಜನ್ಮದಂತೆ  ಸ್ವಚ್ಛತೆ ಜೀವ ಜನ್ಮದ ಸಂಕೇತ.  ದಿನದಲ್ಲಿ ಒಂದು ಬಾರಿಯಾದರೂ ಹೃದಯ ಸ್ವಚ್ಛವಾಗಬೇಕು. ಸಮರ್ಪಕ ಉಸಿರಾಟದಿಂದ ಹೃದಯ ದೇಹ ಸ್ವಚ್ಛವಾಗುವುದು ಮಾತ್ರವಲ್ಲ ನಮ್ಮ ಮನಸ್ಸು ಸ್ವಚ್ಛವಾಗುತ್ತದೆ. ನಮ ಮನಸ್ಸು ಯೋಚಿಸುವ ಯೋಚನೆಗಳು, ಮನಸ್ಸಿನ ಭಾವನೆಗಳಿಗೆ ಹೊಂದಿಕೊಂಡು ಉಸಿರಾಟವೂ ಅದಕ್ಕೆ ಹೊಂದಿಕೊಂಡು ಸೂಕ್ಷ್ಮವಾಗಿ ಸ್ಪಂದಿಸುತ್ತದೆ. ಇದಕ್ಕೆ ಹೊಂದಿಕೊಂಡು ನಮ್ಮ ಉಸಿರಾಟವೂ ಏರು ಪೇರಾಗುತ್ತದೆ.  ಪ್ರಾಣಾಯಾಮದಲ್ಲಿರುವಾಗ ನಮ್ಮ ಮನಸ್ಸೂ ಯೋಚನೆಗಳಿಂದ  ಮುಕ್ತವಾಗಿ ಸ್ವಚ್ಛವಾಗುತ್ತದೆ. ಮನಸ್ಸಿನಲ್ಲಿ ಸಣ್ಣ ಯೋಚನೆ ಇದ್ದರೂ ಪ್ರಾಣಾಯಾಮದ ಚರಮ ಸುಖ ಸಾಧ್ಯವಾಗುವುದಿಲ್ಲ. ಪೂರ್ಣ ಅನುಭವ ಸಾಧ್ಯವಾಗುವುದಿಲ್ಲ. ಶುಷ್ಕ ಮನಸ್ಸಿನ ಪರಿಣಾಮ ಮನಸ್ಸೂ ಸ್ವಚ್ಛವಾಗಿ ನಮ್ಮ ಮನಸ್ಸಿನ ಹೊಸ ಯೋಚನೆಗಳು ಹೆಚ್ಚು ಪ್ರಖರವಾಗುತ್ತದೆ.  ಪ್ರಾಣಾಯಾಮ ಸ್ವಚ್ಛ ದೇಹದ ಸ್ವಚ್ಛಮನಸ್ಸಿನ ಪ್ರತೀಕ.