Friday, January 26, 2024

ತ್ರಿಪುರ ಯೋಗ ಥೆರಪಿ

ಕೆಲವು ದಿನಗಳ ಹಿಂದೆ ಭಾರತವು ವಿಶ್ವವೇ ಬೆರಗಾಗುವಂತೆ ಮಾಡಿದ ಚಂದ್ರಯಾನ ನೆನಪಿರಬಹುದು. ಭೂಮಿಯಿಂದ ಚಂದ್ರನ ಕಕ್ಷೆಗೆ ಜಿಗಿದ ಭಾರತ ಗುರಿ,  ಇಷ್ಟರವರೆಗೆ ಕೈಗೆಟುಕದೆ ಓಡಾಡುತ್ತಿದ್ದ ಚಂದ್ರನೊಡನೆ ಸಂಬಂಧ ಬೆಳೆಸಿಕೊಂಡು ಬಿಟ್ಟಿತು. ಅದು ಬಾಹ್ಯಾಕಾಶದ ಚಂದ್ರಯಾನವಾದರೆ,  ಯೋಗ ಜೀವನದಲ್ಲಿ ಒಂದು "ಚಂದ್ರಾಯಣ"ವಿದೆ. ಇಷ್ಟರವೆರೆಗೆ ಅದು ಎಲ್ಲೋ ಓದಿದ್ದು, ಮತ್ತು ಯಾರೋ ಒಂದಷ್ಟು ಹೇಳಿದ್ದು ಬಿಟ್ಟರೆ ಅದು ನನಗೆ ಸಾಧ್ಯವಿಲ್ಲ ಎಂಬ ನಿರ್ಧಾರದಲ್ಲಿ ನಾನಿದ್ದೆ. ಆದರೆ ಅದು ಸಾಧ್ಯವಾಗುವಂತೆ ನಿರೀಕ್ಷೆಯನ್ನು ಹುಟ್ಟಿಸಿದವರು ತ್ರಿಪುರ ಯೋಗ ಥೆರಪಿಯ ಶಿಕ್ಷಣ ತಜ್ಞ ಡಾ. ಶ್ರೀ ಹೃಷಿಕೆಶ ಪೆರ್ನಡ್ಕ. 

"ಚಂದ್ರಾಯಣ" ಅದೊಂದು ಆಹಾರ ಪದ್ದತಿ. ಜತೆಗೆ ಒಂದು ಜೀವನ ಶೈಲಿಯೂ. ಮಿತವಾದ ಆಹಾರ. ಶಿಸ್ತುಬದ್ಧ ಜೀವನ ಶೈಲಿ. ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಯ ತನಕದ ಪಯಣ. ನಡುವೆ ಒಂದು ಅಮಾವಾಸ್ಯೆ. ಇದರ ನಡುವೆ ಅದಕ್ಕೆ ಹೊಂದಿಕೊಂಡು ಆಹಾರ ಉಪವಾಸ ಪದ್ಧತಿ. ಮೊದಲು ಉಪವಾಸದ ಅವಧಿಯನ್ನು ಹೆಚ್ಚಿಸುತ್ತಾ ಸಾಗಿ ಅಮಾವಾಸ್ಯೆದಿನ ಪೂರ್ಣ ಉಪವಾಸಕ್ಕೆ ಬಂದು ಆನಂತರ ಯಥಾ ಪ್ರಕಾರ ಪೂರ್ವ ಸ್ಥಿತಿಗೆ ಬರುವ ಒಂದು ಪಯಣ. ಇದರ ನಿಯಮಗಳನ್ನು ವಿವರಿಸುವಷ್ಟು ತಿಳುವಳಿಕೆ ನನಗಿಲ್ಲ. ಆದರೆ ಅದನ್ನು ಆಚರಿಸಿ ನೋಡಬೇಕೆಂಬ ಕುತೂಹಲ ಬಹಳ ಸಮಯದಿಂದ ಇತ್ತು. ಇದೀಗ ಅದನ್ನು ಆಚರಿಸುವ ಒಂದು ಸಂಕಲ್ಪ ಹೃಷಿಕೇಶ್ ಅವರ ಒಡನಾಟದಲ್ಲಿ ದೊರಕಿತು. 

ಕಳೆದ ದಿನ ನಮ್ಮೂರಿನವರೇ ಆದ ಡಾಕ್ಟರ್ ಶ್ರೀ ಹೃಷಿಕೇಶ ಪೆರ್ನಡ್ಕ ಇವರ ತ್ರಿಪುರ ಯೋಗ ಥೆರಪಿ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದೆ. ಹಲವು ದಿನಗಳಿಂದ ಹೋಗಬೇಕೆಂದು ಬಗೆದು ಮೊನ್ನೆ ಪ್ರಯತ್ನ ಪಟ್ಟು ಒಂದಷ್ಟು ಸಮಯ ಮಾಡಿ ಭೇಟಿಕೊಟ್ಟೆ. ಅದಕ್ಕೆ ಮುಖ್ಯಕಾರಣ ಯೋಗದ ಬಗ್ಗೆ ಇವರಲ್ಲಿ ಹಲವು ಸಲ ಚರ್ಚಿಸಿದ್ದೆ. ಸಾಕಷ್ಟು ಮಾಹಿತಿಗಳನ್ನು ಪಡೆದಿದ್ದ. ಹೃಷಿಕೇಶ ಅವರು ಮೂಲತಃ ಮಂಗಳೂರಿನ ಬಂಟ್ವಾಳದ ಕನ್ಯಾನದವರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಯೋಗ ವಿಷಯಗಳಲ್ಲಿ ಪಿ ಹೆಚ್ ಪದವಿ ಪಡೆದು ಡಾಕ್ಟರ್ ಆದವರು. ಕೆಲವು ಕಾಲ ಉಪನ್ಯಾಸಕರಾಗಿ ವೃತ್ತಿ ಮಾಡಿದವರು ಮೊನ್ನೆ ಮೊನ್ನೆ ಕೋರೋನ ಕಾಲ ಬರುವ ತನಕವೂ ಸಿಂಗಾಪುರದಲ್ಲಿ ಯೋಗ ತರಬೇತಿ ಚಿಕಿತ್ಸೆ  ವೃತ್ತಿ ಮಾಡುತ್ತಿದ್ದವರು ಈಗ ಬೆಂಗಳೂರಿನ ಜೆ ಪಿ ನಗರದಲ್ಲಿ ಯೋಗ ಥೆರಪಿ ಆರಂಭಿಸಿದ್ದಾರೆ. ನಾನು ಭೇಟಿಕೊಟ್ಟಾಗ ಚಾಂದ್ರಯಾನ ವೃತದ ಬಗ್ಗೆ ಆಸಕ್ತರಾಗಿದ್ದವರು ಅದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದರು. ಸಣ್ಣ ಹರಯದಲ್ಲೇ ಯೋಗ ಥೆರಪಿಯಲ್ಲಿ ಡಾಕ್ಟರೇಟ್ ಪಡೆದ ಇವರಿಗೆ ಪ್ರಶಸ್ತಿ ಪುರಸ್ಕಾರವೂ ಸಂದಿದೆ. 





ಯಾವುದೋ ಅನಿರೀಕ್ಷಿತ ಸಂದರ್ಭದಲ್ಲಿ ನನ್ನ ಅವರ ಭೇಟಿಯಾಯಿತು. ಭೇಟಿಯಾದ ನಂತರ ಇವರು ಯೋಗದ ಬಗ್ಗೆ ಡಾಕ್ಟರೇಟ್ ಪಡೆದಿದ್ದಾರೆ ಎಂದು ತಿಳಿದನಂತರ ನನ್ನ ಅವರ ಸ್ನೇಹ ಅತ್ಮೀಯತೆ ಬೆಳೆದು ಬಂತು. ಆನಂತರ ನನ್ನ ಹಲವಾರು ಸಮಸ್ಯೆಗಳಿಗೆ ಇವರಿಂದ ಪರಿಹಾರವನ್ನು ಪಡೆದುಕೊಂಡಿದ್ದೇನೆ.  ಯೋಗಭ್ಯಾಸ ಎಂಬುದು ಆಧುನಿಕ ಜಗತ್ತಿನಲ್ಲಿ ಹೆಚ್ಚು ಆವಶ್ಯಕ ಅಂತ ಕಾಣುವಾಗ ಹಲವು ಕಡೆ ಇದರ ದುರುಪಯೋಗವೂ ಆಗುತ್ತಿದೆ. ಗಲ್ಲಿ ಗಲ್ಲಿಗಳಲ್ಲಿ ಯೋಗ ತರಗತಿಗಳು ಇದೆ. ಆದರೆ ಗುಣಮಟ್ಟ ಬಹಳ ಕಡಿಮೆಯಾಗಿದೆ. ಹೆಚ್ಚಿನ ಕಡೆ ಇದೊಂದು ಉದ್ಯೋಗದ ರೀತಿಯಲ್ಲಿ ಒಂದು ದಂಧೆಯಾಗಿ ಬೆಳೆದುಬಿಟ್ಟಿದೆ. ಸರಿಯಾಗಿ ಅಧ್ಯಯನ ಮಾಡದೇ ಕೇವಲ ಕೆಲವು ತಿಂಗಳ ತರಬೇತಿ ಪಡೆದು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಒಂದು ಸರ್ಟಿಫಿಕೇಟ್ ಪಡೆದು ಬಿಡುತ್ತಾರೆ. ತಾವು ಎಲ್ಲವನ್ನು ಕಲಿತು ಬಿಟ್ಟಿದ್ದೇವೆ ಎಂಬ ಪರವಾನಿಗೆ ಪಡೆದಂತೆ ತರಗತಿಯನ್ನು ಆರಂಭಿಸುತ್ತಾರೆ. ಹಲವರಿಗೆ ಸರಿಯಾಗಿ ನೆಟ್ಟಗೆ ಸಮರ್ಪಕ ಪದ್ಮಾಸನ ಹಾಕುವುದಕ್ಕು ಸಾಧ್ಯವಾಗದೇ ಇರುವುದನ್ನು ಕಂಡಿದ್ದೇನೆ. ಯಾಕೆಂದರೆ ನೇರ ಕುಳಿತುಕೊಳ್ಳಬೇಕೆಂದರೆ ಬೆನ್ನು ಹುರಿ ಗಟ್ಟಿಯಾಗಬೇಕು. ಇದು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ.   ನಾವು ಸ್ವಪ್ರಯತ್ನದಿಂದ ನೇರ ಕುಳಿತುಕೊಳ್ಳುವುದಕ್ಕೂ ಸಹಜವಾಗಿ ಕುಳಿತುಕೊಳ್ಳೂವುದಕ್ಕೂ ವೆತ್ಯಾಸವಿದೆ. ಮೊದಲಿನದ್ದು ಶಿಕ್ಷೆಯ ಒತ್ತಡವಾದರೆ, ಇನ್ನೊಂದು ನಿರಾಳತೆಯ ಸಹಜ ಸ್ಥಿತಿ. ಇಂತಹ ಸೂಕ್ಷ್ಮ ವಿಷಯಗಲನ್ನು ತಿಳಿಯದೇ ಒಟ್ಟು ಯೋಗ ಶಿಕ್ಷಕರಾಗಿ ಅಧಿಕೃತ ತರಗತಿಯನ್ನು ನಡೆಸುತ್ತಾರೆ. ಪರೀಕ್ಷೆಯಲ್ಲಿ ನೂರು ಅಂಕದಲ್ಲಿ ನಲ್ವತ್ತು ಅಂಕ ಪಡೆದರೂ ತೇರ್ಗಡೆಯಾಗಿ ಶಿಕ್ಷಕರಾಗುತ್ತಾರೆ. ಆದರೆ ಅರುವತ್ತು ಅಂಕಗಳು ಇವರಿಗೆ ತಿಳಿದಿರುವುದಿಲ್ಲ. ಅದು ಹೆಚ್ಚು ಅಪಾಯಕಾರಿ. ಯೋಗಾಭ್ಯಾಸದಲ್ಲಿ ಸರಿಯಾಗಿ ಮಾಡುವುದೇ ಪ್ರಧಾನ. ತಪ್ಪುಗಳನ್ನು ಎಷ್ಟು ಕಡಿಮೆ ಮಾಡಿತೋ ಅದೇ ಲಾಭ. ತಪ್ಪುಗಳನ್ನು ಮಾಡಬಹುದು, ಆದರೆ ಮಾಡಬೇಕಾದ ಸರಿ ಒಂದಾದರೂ ಅದನ್ನು ಸರಿಯಾಗಿ ಮಾಡಬೇಕು.  ಈ ಸೂಕ್ಷ್ಮಗಳನ್ನು ಅರಿತಿರಬೇಕು. ಇಲ್ಲವಾದರೆ, ಕಲಿಸುವ ವಿದ್ಯೆ ಅಮೃತವಾಗದೇ ವಿಷವೇ ಅಧಿಕವಾಗಿಬಿಡುತ್ತದೆ. ಅದಕ್ಕೆ ನಿರಂತರ ಅಧ್ಯಯನ ಬೇಕು. ಯೋಗಾಭ್ಯಾಸದಲ್ಲಿ ಎಂಟು ಹತ್ತು ವರ್ಷ ಸಾಧನೆ ಮಾಡಿದವರಿಗೆ ಮಾತ್ರ ಶಿಕ್ಷಕನಾಗುವ ಅರ್ಹತೆ ಸಿಗಬಹುದು.    ಅದರೆ ಈ ಇನ್ಸ್ಟಂಟ್ ಯುಗದಲ್ಲಿ ಅದಕ್ಕೆಲ್ಲ ಸಮಯ ಎಲ್ಲಿದೆ? ಕಡಿಮೆ ಕೆಲಸ ಕ್ಷಿಪ್ರ ಫಲಾನುಭವ. ಇಂತಹ ಸಮಯದಲ್ಲಿ ಸ್ವತಃ ಡಾಕ್ಟರ್ ಆಗಿರುವ ಹೃಷಿಕೇಶ್ ಅವರ  ಕೆಲಸ ಗಮನಾರ್ಹವಾಗುತ್ತದೆ. ಇವರು ತಿಳಿಸಿಕೊಡುವ ಸರಳ ವಿಧಾನಗಳು, ಅದರಲ್ಲಿರುವ ಸೂಕ್ಷ್ಮ ವಿಚಾರಗಳು ಅತ್ಯಂತ ಅಮೂಲ್ಯ ಎನಿಸುತ್ತವೆ.  ಯೋಗಾಭ್ಯಾಸ ಎಂಬುದು ಕೇವಲ ವ್ಯಾಯಾಮವಾಗಿ, ಕೇವಲ ಆರೋಗ್ಯದ ದೃಷ್ಟಿಕೋನದಲ್ಲೇ ಕಾಣುತ್ತಾರೆ. ಅದರಂತೆ ಅದನ್ನು ಅನುಸರಿಸುತ್ತಾರೆ. ಇಂತಹ ಸಮಯದಲ್ಲಿ ಇದರ ಸೂಕ್ಷ್ಮ ವಿಷಯಗಳ ಬಗ್ಗೆ ಗಮನ ಹರಿಸುವುದಿಲ್ಲ. ಒಂದು ಯಂತ್ರದಂತೆ ಯೋಗಾಭ್ಯಾಸ ಮಾಡುವುದು ಬಹಳ ಅಪಾಯಕಾರಿ. 



ನಮ್ಮೂರಿನವರೇ ಆದ, ಯುವಕ ಡಾಕ್ಟರ್ ಶ್ರೀ  ಹೃಷಿಕೇಶ್ ಪೆರ್ನಡ್ಕ ಇವರು ಯೋಗ ಚಿಕಿತ್ಸೆಯಲ್ಲಿ ನಿರತರಾದವರು. ಕೋವಿಡ್ ಗಿಂತಲು ಮೊದಲು ಸಿಂಗಾಪುರದಲ್ಲಿ ವೃತ್ತಿಯಲ್ಲಿದ್ದವರು ಆನಂತರ ಭಾರತಕ್ಕೆ ಬಂದು ಈಗ ಬೆಂಗಳೂರಲ್ಲಿ ಯೋಗಕೇಂದ್ರವನ್ನು ನಡೆಸುತ್ತಿದ್ದಾರೆ.  ಯೋಗದ ಬಗ್ಗೆ ಸಾಕಷ್ಟು ತಿಳುವಳಿಕೆ ಪಡೆದವರು ಅದರಲ್ಲೇ ತಮ್ಮ ಶಿಕ್ಷಣವನ್ನು ಪಡೆದು ಈಗ ವೈದ್ಯರಾಗಿ ತ್ರಿಪುರ ಯೋಗ ಥೆರಪಿಯನ್ನು ಕೊಡುತ್ತಿದ್ದಾರೆ. ಯಕ್ಷಗಾನದ ವಿಷಯದಲ್ಲಿ ಪರಿಚಯಗೊಂಡ ಇವರ ಸಂಪರ್ಕ ಇವರು ಯೋಗ ವೈದ್ಯರಾದ ಕಾರಣ ಸ್ನೇಹ ಮತ್ತಷ್ಟು ಬಲವಾಯಿತು. ನನಗೆ ಯೋಗದ ಬಗೆಗಿನ ಸಂಶಯ ತಿಳುವಳಿಕೆಗಳ ಅವಶ್ಯಕತೆಯಾದರೆ, ದೈಹಿಕವಾಗಿ ಏನಾದರೂ ಸಮಸ್ಯೆಯಾದರೆ ಇವರಿಗೆ ಕರೆ ಮಾಡಿ ಪರಿಹಾರ ಕೇಳುತ್ತೇನೆ. ಅತ್ಯಂತ ಸರಳವಾದ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುವುದು ಇವರ ವಿಶೇಷತೆ.  ಯೋಗದ ವಿಚಾರ ಬಂದಾಗ ಅತ್ಯಂತ ಉತ್ಸಾಹದಲ್ಲಿ ಇವರ ಮಾತುಗಳನ್ನು ವಿಚಾರಗಳನ್ನು ಕೇಳುವುದೆಂದರೆ ನನಗೆ ಬಹಳ ಸಂತೋಷವಾಗುತ್ತದೆ. ಅದ್ಭುತವಾದ ಜ್ಞಾನ ಇವರಲ್ಲಿದೆ. ಹಲವು ಗಹನ ವಿಚಾರಗಳಿಗೆ ಖಚಿತವಾದ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. 

ಸುಮಾರು ಎರಡು ವರ್ಷದ ಹಿಂದೆ ನನ್ನ ಅವರ ಪರಿಚಯವಾಯಿತು.  ಅವರೇ ನನ್ನ ಬಳಿಗೆ ಬಂದಿದ್ದರು. ಆನಂತರ ಅವರ ಯೋಗ ಕೇಂದ್ರಕ್ಕೆ ಭೇಟಿ ಕೊಡಬೇಕೆಂದು ಹಲವು ಸಲ ಯೋಚಿಸಿದ್ದೆ. ಸಮಯ ಸಿಕ್ಕಿರಲಿಲ್ಲ.  ಏನಾದರೂ ಸಮಸ್ಯೆಯಾದಾಗ ವಿಡೀಯೋ ಕರೆ ಮಾಡಿ ಪರಿಹಾರ ಕೇಳುತ್ತಿದ್ದೆ. ಆದರೆ ಮೊನ್ನೆ ಸಮಯ ಹೊಂದಿಸಿಕೊಂಡು ಅವರ ತ್ರಿಪುರ ಯೋಗ ಥೆರಪಿಗೆ ಪತ್ನಿ  ಸಹಿತ ಭೇಟಿಕೊಟ್ಟೆ.  ತುಂಬ ಸರಳವಾಗಿ ಸುಂದರವಾಗಿ ತಮ್ಮ ಕಾರ್ಯ ಕ್ಷೇತ್ರವನ್ನು ಸಜ್ಜುಗೊಳಿಸಿದ್ದರು. ನನ್ನ ಪತ್ನಿಯ ಆರೋಗ್ಯದ ಸಮಸ್ಯೆಗೆ ಕೆಲವೆಲ್ಲ ಸರಳ ಪರಿಹಾರವನ್ನು ಯೋಗದ ಕ್ರಮಗಳನ್ನು ತುಂಬಾ ಚೆನ್ನಾಗಿ ಹೇಳಿದರು.  ಸದಾ ಯೋಗಾಭ್ಯಾಸ ಮತ್ತು ಅದರ ಚಿಕಿತ್ಸಾಕ್ರಮಗಳ ಬಗ್ಗೆ ಚಿಂತಿಸುವ ಇವರ ಕೇಂದ್ರಕ್ಕೆ ಭೇಟಿ ಕೊಟ್ಟದ್ದು ಬಹಳ ಸಂತೋಷವನ್ನು ತಂದಿದೆ.  ಇವರ ಜ್ಞಾನದ ಉಪಯೋಗ ಅವಶ್ಯವಿದ್ದವರಿಗೆ  ಲಭಿಸಿದರೆ ಅದು ಬಹಳ ಪ್ರಯೋಜನವಾಗುತ್ತದೆ. 

ತ್ರಿಪುರ ಯೋಗ ಥೆರಪಿ ಕೇಂದ್ರ ಬೆಂಗಳೂರಿನ ಜೆ ಪಿ ನಗರದಲ್ಲಿದೆ. ಯೆಲಚೇನ ಹಳ್ಳಿ ಮೇಟ್ರೋ ನಿಲ್ದಾಣದಿಂದ ಒಂದೆರಡು ಕಿಲೋ ಮೀಟರ್ ದೂರ ಇದೆ. ಆಸಕ್ತರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು. ಇವರ ಮೊಬೈಲ್ ಮತ್ತು ಈ ಮೇಲ್ ವಿಳಾಸ  ಈ ಲೇಖನದ ಕೊನೆಯಲ್ಲಿದೆ. 

ಡಾಕ್ಟರ್ ಹೃಷಿಕೇಶ ಅವರ ಮೊಬಲಿ : 91138 93928 ವಿಳಾಸ : No. 894, 3rd Floor, 10th A East Cross Rd, RBI Layout, 7th Phase, J. P. Nagar, Bengaluru, Karnataka 560078. ಇನ್ನಿತರ ವಿವರಗಳ ಲಿಂಕ್   https://g.co/kgs/Uq5wRF 


Wednesday, January 17, 2024

ಕಂಪನ ..


ರಾಜಕಾರಿಣಿಯೊಬ್ಬರ ಕಂಪನ ....ಈಗಿನವರ ಭಾಷೆಯಲ್ಲಿ ವೈಬ್  ಅಂದರೆ  ವೈಬ್ರೇಶನ್ ....ಇದರ ಬಗ್ಗೆ ಯಾಕೋ ಒಂದೆರಡು ಅನಿಸಿಕೆ ಹೇಳಬೇಕೆಂದೆನಿಸಿದೆ. ಕಾರಣ ರಾಜಕೀಯ ನಾಯಕರೊಬ್ಬರು ಹೇಳಿದ ಮಾತು ಇದರ ಬಗ್ಗೆ ಹೇಳುವ ಪ್ರಚೋದನೆಯನ್ನು ನೀಡಿದ್ದಂತು ಸತ್ಯ. ನಾಯಕರ ಮಾತಿನ ಬಗ್ಗೆ ವಿಮರ್ಷೆಯಾಗಲೀ ಟೀಕೆ ಲೇವಡಿಯಾಗಲೀ ಒಂದೂ ಇಲ್ಲ.  ಅದರ ಸರಿ ತಪ್ಪನ್ನು ಹೇಳುವಷ್ಟು ತಿಳುವಳಿಕೆ ನನಗಿಲ್ಲ. ಮತ್ತೆ ಸುಮ್ಮನೆ ವಿವಾದಗಳಿಗೆ ಪುಷ್ಟಿಕೊಡುವುದಕ್ಕಿಂತ ನನ್ನ ಒಂದೆರಡು ಅನಿಸಿಕೆಗಳಿಗಷ್ಟೇ ಸೀಮಿತ. 

ನಾಯಕರಿಗೆ ಅಯೋಧ್ಯೆಗೆ ಹೋದಾಗ ಟೆಂಟ್ ನಲ್ಲಿರುವ ರಾಮನ ಗೊಂಬೆಯನ್ನು ನೋಡಿ ಅದು ಯಃಕಶ್ಚಿತ್ ಗೊಂಬೆಯಾಗಿ ಕಂಡು ಯಾವುದೇ ಕಂಪನ ಉಂಟಾಗಲಿಲ್ಲ. ಯಾಕೆ ಕಂಪನ ಉಂಟಾಗಲಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ . ಅದನ್ನು ಮುಕ್ತ ಮನಸ್ಸಿನಿಂದ ಗೌರವಿಸುವ. ಪ್ರಜಾಪ್ರಭುತ್ವದ ಸಂಕೇತವದು. ಈ ಕಂಪನ ಎಂಬುದು ಅದೊಂದು ಮನಸ್ಸಿನ ಪ್ರೇರಕ ಶಕ್ತಿ. ಮನಸ್ಸಿನ ಅಂತರಂಗದ ಭಾವನೆ. ಅದು ಕನಸಿನ ಸುಪ್ತಾವಸ್ಥೆಯಲ್ಲೂ ಜಾಗೃತವಾಗಿರುತ್ತದೆ. ನಿದ್ರೆಯಲ್ಲಿರುವಾಗ ಹೆತ್ತ ತಾಯಿ ಬಂದು ಮೈದಡಿವಿದಾಗ ಉಂಟಾಗುವಂತೆ, ಅದೊಂದು ವೈಬ್.  ಹಾಗಂತ ಬೇರೊಬ್ಬರ ತಾಯಿ ಬಂದು ಮೈದಡಿವಿದರೆ ಅಲ್ಲಿ ಆ ಕಂಪನ ಉಂಟಾಗುವುದಕ್ಕೆ ಸಾಧ್ಯವಿಲ್ಲ. 

ಶ್ರೀರಾಮನನ್ನು ಕಾಣುವಾಗ ತ್ರೇತಾಯುಗದಲ್ಲೂ ಕಂಪನ ಉಂಟಾಗದವರು ಇದ್ದರು.  ರಾವಣ, ವಾಲಿ, ಕಬಂಧ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಆದರೂ ಕೊನೆಯ ಕ್ಷಣದಲ್ಲಿ ರಾವಣನಿಗೂ ವಾಲಿಗೂ ಕಂಪನ ಉಂಟಾಗಿತ್ತು ಶ್ರೀರಾಮನನ್ನು ಕಾಣುವಾಗ. ಅದಕ್ಕಾಗಿ ಅವರು ಜನ್ಮಾಂತರದಿಂದ ಕಾದು ಕುಳಿತಿದ್ದರು. ರಾವಣ ಹಲವು ಜನ್ಮ ವೆತ್ತಿ ಕೊನೆ ಕ್ಷಣದಲ್ಲಿ ಶ್ರೀರಾಮನಲ್ಲಿ  ಸಾಕ್ಷಾತ್ ಶ್ರೀಮನ್ನಾರಾಯಣನ್ನು ಕಂಡು ತನಗೆ ಇದುವೆ ಸಾಕ್ಷಾತ್ಕಾರ ರೂಪವೆಂದುಕೊಂಡು ಮೋಕ್ಷಪದಕ್ಕೆ ಏರಿದ.  ರಾವಣ ದುಷ್ಟನಾದರೂ ಕೊನೆಯ ಕ್ಷಣದಲ್ಲೂ ರಾಮ ದರ್ಶನದಲ್ಲಿ ಮೋಕ್ಷವನ್ನು ಕಂಡ. ಅದು ಆತನಿಗಾದ ಕಂಪನ. ಅದು ಅವನ ಭಾವನೆ. ರಾವಣನಿಗೆ ಮೊದಲು  ಉಂಟಾಗದೇ ಇದ್ದ ಕಂಪನ ಹಲವರಿಗೂ ಉಂಟಾಗದೇ ಇರಬಹುದು. ಅದು ಮನಸ್ಸಿನ ಸ್ವಭಾವ.  ಅದೇ ರಾಮಾಯಣದಲ್ಲಿ ಅಹಲ್ಯ, ಶಬರಿಯಂತಹ ವ್ಯಕ್ತಿತ್ವಗಳು ರಾಮ ದರ್ಶನಕ್ಕಾಗಿ ಕಾದು ಕಾದು ಕೊನೆಗೆ ಒಂದು ದಿನ ರಾಮನನ್ನು ಕಂಡು ಆ ಕಂಪನವನ್ನು ಅನುಭವಿಸಿದ್ದಿದೆ. ಹತ್ತು ತಲೆ ಇದ್ದು ವಿದ್ಯೆಯಿಂದ ಹಿಡಿದು ಎಲ್ಲವೂ ಇದ್ದ ರಾಣನಿಗೆ ಉಂಟಾಗದೇ ಇದ್ದ ಕಂಪನ ಎನೇನೂ ಇಲ್ಲದ ಅಹಲ್ಯ ಶಬರಿಯಲ್ಲಿ ಉಂಟಾಯಿತು. ಅದಕ್ಕೆ ಅರ್ಹತೆಯಲ್ಲಿ ಯೋಗವಿರಬೇಕು. ಯೋಗ್ಯತೆ ಇರಬೇಕು.

ರಾಮಾಯಣದ ಒಂದು ಕಥೆಯಾದರೆ ಇತಿಹಾಸದ ಪುಟ ತೆಗೆದು ನೋಡಿದರೆ ಅಯೋಧ್ಯೆಗೆ ಧಾಳಿ ಇಟ್ಟವರಿಗೂ ಈ ಕಂಪನ ಉಂಟಾಗಲೇ ಇಲ್ಲ.  ಒಂದು ವೇಳೆ ಕಂಪನ ಉಂಟಾಗಿದ್ದರೆ....ಈ ಕರಾಳ ಇತಿಹಾಸಗಳು ಬರೆಯಲ್ಪಡುತ್ತಿರಲಿಲ್ಲ ಎಂಬುದು ಸತ್ಯ.   ಹಾಗೆ ಕಂಪನ ಉಂಟಾಗಬೇಕಿದ್ದರೆ ಅದಕ್ಕೆ ತಕ್ಕಂತಹ ಮನೋಭಾವ ಇರಬೇಕು. ಇರದಿದ್ದರೆ......ಆದಕೆ ಯಾರೂ ಕಾರಣರಲ್ಲ. ಆದರೆ ಅಲ್ಲೇ ಉಳಿದವರಿಗೆ ಸಿಗುವ ಕಂಪನಗಳನ್ನು ಲೇವಡಿ ಮಾಡುವುದು ಆಕ್ಷೇಪಿಸುವುದು ತಪ್ಪು. 

ಕಂಪನ ಉಂಟಾಗಬೇಕಿದ್ದರೆ, ಆಡಂಬರದ ಅವಶ್ಯಕತೆ ಇಲ್ಲ. ಪಂಚತಾರಾ ಹೋಟೇಲುಗಳನ್ನು ನಾಚಿಸುವಂತಹ ದೇವಾಲಯದ ಆವಶ್ಯಕತೆ ಇಲ್ಲ. ಸಣ್ಣ ಗುಡಿಯಾದರೂ ಅಲ್ಲಿ ಕಂಪನ ಪಡೆಯುವವರಿದ್ದಾರೆ. ನಮ್ಮ ಊರಿಗೆ ಅಂದರೆ ಕರಾವಳಿ ಭಾಗಕ್ಕೆ ಹೋದರೆ ದೇವಾಲಯ ಬಿಡಿ, ಗುಳಿಗನ ಕಲ್ಲು ಇರುತ್ತದೆ. ಅಲ್ಲಿ ಗುಡಿಯೂ ಇರುವುದಿಲ್ಲ, ಏನೂ ಇರುವುದಿಲ್ಲ. ಕೇವಲ ಒಂದು ಕಲ್ಲು ಮಾತ್ರಾ ಇರುತ್ತದೆ. ಆದರೆ ಮನುಷ್ಯನ ಭಾವನೆಗಳಿಗೆ ಪರಿಧಿ ಇಲ್ಲ. ಅಲ್ಲಿ ಆ ಕಲ್ಲಿನ ಬುಡಕ್ಕೆ ಹೋದಾಗ ಕಂಪನ ಮಾತ್ರವಲ್ಲ ಭಯ ಪಡುವವರೂ ಇದ್ದಾರೆ. ಅದು ತಪ್ಪು ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಅಯೋಧ್ಯೆಯ ಡೇರೆಯಲ್ಲಿದ್ದ  ರಾಮನ ಮೂರ್ತಿ ಕಂಪನ ತರಿಸಿದದೇ ಇದ್ದರೆ ಅದಕ್ಕೆ ಆ ಮೂರ್ತಿಯನ್ನು ಹೊಣೆ ಮಾಡುವುದು ಅಜ್ಞಾನ ಎನ್ನಬೇಕಷ್ಟೆ.  

ಹಳೆಯ ಕಾಲದ ಹಳ್ಳಿಯ ಮನೆಗಳಿಗೆ ಹೋದರೆ, ನಮ್ಮ ಅಜ್ಜನೋ ಮುತ್ತಜ್ಜನೋ ನಿತ್ಯ ಕುಳಿತುಕೊಳ್ಳುವ ಸ್ಥಳವಿರುತ್ತದೆ. ಮನೆಯ ಚಾವಡಿಯಲ್ಲಿ ಒಂದು ಇಸೀಚೇರ್ ಹಾಕಿ ಕಾಲು ಮೇಲೆ ಹಾಕಿ ಅವರು ಕುಳಿತುಕೊಳ್ಳುತ್ತಿದ್ದರು. ಅವರ ಮರಣಾನಂತರ ಆ ಆರಾಮಾಸನದ ಬಳಿಗೆ ಹೋಗುವಾಗ ಮನೆಯವರಿಗೆ ಕಂಪನ ಉಂಟಾಗಬಹುದು. ಅದು ಅವರ ಮನಸ್ಸಿನ ಅಂತರಂಗದ ಪ್ರೇರಣೆ. ಬದುಕು ನಡೆದು ಬಂದ ಅನುಭವ. 

ಇಪ್ಪತ್ತು ವರ್ಷದ ಹಿಂದೆ ಮಲ್ಲೇಶ್ವರಂ ನ ಯೋಗ ಕೇಂದ್ರಕ್ಕೆ ಯೋಗಾಭ್ಯಾಸ ಕಲಿಯಲು ನಿತ್ಯ ಮುಂಜಾನೆ ಹೋಗುತ್ತಿದ್ದೆ. ಯೋಗಾಭ್ಯಾಸದ ಮಧುರ ಅನುಭವವನ್ನು ಪಡೆದಿದ್ದೆ.   ಇತ್ತೀಚೆಗೆ  ಇಪ್ಪತ್ತು ವರ್ಷ  ಕಳೆದನಂತರ ಮೊನ್ನೆ ಯಾವುದೋ ಕಾರಣಕ್ಕೆ ಅಲ್ಲಿ ಹೋದಾಗ ಅದೇ  ಮಧುರ ಅನುಭವದ ಸ್ಮರಣೆಯಲ್ಲಿ ಆ ಕಂಪನವನ್ನು ಅನುಭವಿಸಿದ್ದೆ. ಯಾಕೆಂದರೆ ಅದು ಯೋಗಾಭ್ಯಾಸದ ಅನುಭವ.  ನನಗಾದ ಅನುಭವ ಉಳಿದವರಿಗೆ ಆಗುವ ಭರವಸೆ ಇರುವುದಿಲ್ಲ. ಅದು ಭಾವನಾತ್ಮಕ ಸಂಭಂಧದಗಳು. ಅದು ಅನುಭವದಿಂದಲೇ ಬರಬೇಕು. 

ಇಷ್ಟೆಲ್ಲ ಯಾಕೆ ಹೇಳಬೇಕಾಯಿತೆಂದರೆ, ಅಯೋಧ್ಯೆಗೆ ನಾನೂ ಹೋದವನು, ನಾನು ಹೋದಾಗ ಅಯೋಧ್ಯೆಯಲ್ಲಿ ಎಲ್ಲವೂ ಅಪೂರ್ಣ ಸ್ಥಿತಿಯಲ್ಲಿತ್ತು. ಆದರೆ ಆ ಮಣ್ಣಿನಲ್ಲಿ ಆ ವಾತಾವರಣದಲ್ಲಿ ರಾಮನ ಅಸ್ತಿತ್ವವನ್ನು ಕಂಡವನು ನಾನು. ಶ್ರೀ ರಾಮ ಓಡಾಡಿದ ನೆಲವದು. ಆ ಭಾವ ಬಂದಕೂಡಲೇ ದೇಹದಲ್ಲಿ ಅವ್ಯಕ್ತವಾದ ಒಂದು ಕಂಪನ ಉಂಟಾಗುತ್ತದೆ. ಅದು ರಾಮನ ಮೇಲಿನ ವಿಶ್ವಾಸದ ಸಂಕೇತ. ರಾಮ ಕೇವಲ ಒಂದು ದೇವರಾಗಿ ಅಲ್ಲ ಅದೊಂದು ದಿವ್ಯ ಚೇತನವಾಗಿ ಸದಾ ಕಂಪನವನ್ನು ಒದಗಿಸುವ ಶಕ್ತಿ. ದೂರದ ಅಯೋಧ್ಯೆ ಎಲ್ಲಿ ಬಂತು, ಅಯೋಧ್ಯೆಯನ್ನು ನೆನಸಿ ಇಲ್ಲಿ ದೇಹ ಕಂಪಿಸುತ್ತದೆ. 

ಈಗ ಈ ನಾಯಕರ ಮಾತು ಅದಕ್ಕೆ ಯಾವುದೋ ಕಾರಣವಿರಬಹುದು. ವೈಬ್ರೇಶನ್  ಪ್ರತಿಯೊಬ್ಬರಿಗೂ ಪ್ರತ್ಯೇಕವಿರುತ್ತದೆ.  ಚುನಾವಣೆಯಲ್ಲಿ ಗೆಲ್ಲದೇ ಇದ್ದರೆ ಒಂದು ಕಂಪನ, ಗೆದ್ದು ಮಂತ್ರಿಯಾಗದೇ ಇದ್ದರೆ ಇನ್ನೊಂದು ಕಂಪನ, ಮತ್ತೊಬ್ಬರ ಹೀಯಾಳಿಕೆಯಲ್ಲಿ ಸಿಗುವ ಆತ್ಮಾನಂದದ ಕಂಪನ ಅನುಭವಿಸುವ ರಾಜಕಾರಿಣಿಗಳ ಮಾತುಗಳಿಗೆ ನಮ್ಮ ನಡುವೆ ಯಾವ ಮೌಲ್ಯವೂ ಇರುವುದಿಲ್ಲ. ನಮಗೆ ಕಂಪಿಸುತ್ತಿರುವುದಕ್ಕೆ ನಾವು ಆತ್ಮಾನಂದವನ್ನು ಪಡೆಯೋಣ, ಈ ಕಂಪನ ಉಂಟಾಗದೇ ಇದ್ದವರ ಬಗ್ಗೆ ಕಂಪನ ಬೇಡ....ಕೇವಲ ಒಂದು ಅನುಕಂಪ ಸಾಕು. ತಪ್ಪು ಒಪ್ಪಿನ ವಿಮರ್ಶೆಯ ಅವಶ್ಯಕತೆ ಇಲ್ಲ. ಅವರವರ ಭಾವ ಅದು ಅವರಿಗೇ ಬಿಟ್ಟದ್ದು.  ನಮ್ಮ ದೃಷ್ಟಿಕೋನದಲ್ಲಿ ರಾಮ ಕಾಣುತ್ತಾನೆ ಈ ವಿಶ್ವಾಸ ನಮ್ಮಲ್ಲಿದ್ದರೆ ಸಾಕು. 



Monday, January 15, 2024

ಪ್ರಾಣಮಯ ಶ್ರೀರಾಮ


ಲೋಕಾಭಿರಾಮಂ ರಣರಂಗ ಧೀರಂ ರಾಜೀವ ನೇತ್ರಂ ರಘುವಂಶ ನಾಥಂ

ಕಾರುಣ್ಯ ರೂಪಂ ಕರುಣಾಕರಂತಂ  ಶ್ರೀರಾಮ ಚಂದ್ರಂ ಶರಣಂ ಪ್ರಪದ್ಯೆ


ಕಳೆದವರ್ಷ ಹೆಚ್ಚು ಕಡಿಮೆ ಇದೇ ಹೇಮಂತ ಋತುವಿನ ಸಮಯದಲ್ಲಿ  ನಾವು ಅಯೋಧ್ಯೆಗೆ ಭೇಟಿ ನೀಡಿದ್ದ ಆ ಭಾವನಾತ್ಮಕ ಘಳಿಗೆಗಳ ನೆನಪುಗಳು ಈಗ ಮರುಕಳಿಸುತ್ತಿವೆ. ಮೊನ್ನೆ ಶ್ರೀರಾಮ ಪ್ರಸಾದ ರೂಪದ ಮಂತ್ರಾಕ್ಷತೆ ಕೈ ಸೇರಿದಾಗ ನಿಜಕ್ಕೂ ನಾನು ಭಾವುಕನಾದೆ. ಆ ಮಧುರ ನೆನಪುಗಳು ಸ್ಮರಣೆಗೆ ಬಂದು ಒಂದರೆ ಘಳಿಗೆ ರಾಮನಲ್ಲದೇ ಬೇರೆ ಏನೂ ಯೋಚಿಸದಂತೆ ಹೃದಯ ಶ್ರೀರಾಮ ಮಯವಾಗಿಬಿಟ್ಟಿತು. ಆಯೋಧ್ಯೆಗೆ ಮತ್ತೊಮ್ಮೆ ಹೋಗಬೇಕೆಂಬ ತುಡಿತ ಹುಟ್ಟಿಕೊಂಡಿತು. ಅದು ಎಂದು ಸಫಲವಾಗುವುದೋ ಆ ರಾಮನೇ ಬಲ್ಲ. 

ಅಯೋಧ್ಯೆ....ಅರ್ಥದಲ್ಲಿ ಅದು ಯೋಧನಿಲ್ಲದ ಊರು. ಅಲ್ಲಿ ರಾಮನೊಬ್ಬನೇ ಯೋಧ ಹೀಗೆ ಅವರವರ ಭಾವಕ್ಕೆ ಅಯೋಧ್ಯೆ ಕಂಡವರಿದ್ದಾರೆ. ಯೋಧನಿಲ್ಲದ ಊರಿನಲ್ಲಿ ಹೋರಾಟದ ಫಲರೂಪವಾಗಿಯೇ ರಾಮ ಮಂದಿರ ನಿರ್ಮಾಣವಾಗುವುದು ಅದೊಂದು ವಿಪರ್ಯಾಸ. ಬಹುಶಃ ಈ ಹೋರಾಟವೆಂಬುದು ರಾಮ ತೋರಿಸಿಕೊಟ್ಟ ಹಾದಿಯಂತೆ ಭಾಸವಾಗುತ್ತದೆ. ಆಯೋಧ್ಯೆಯಲ್ಲಿ ನಾವು ಕಾಲಿಟ್ಟ ಘಳಿಗೆ ಇನ್ನೂ ನೆನಪಿದೆ. ಸೂರ್ಯ ಅಯೋಧ್ಯೆಯ ಮೇಲ್ಮೈಯನ್ನು ಸವರಿ ಪಡುವಣದಲ್ಲಿ ವಿಶ್ರಮಿಸುವುದಕ್ಕೆ ತೆರಳುತ್ತಿದ್ದ. ಅದೊಂದು ಸುಂದರ ಘಳಿಗೆ. ಹಿತವದ ತಣ್ಣನೆಯಗಾಳಿ ಮೈಗೆ ಸವರಿದಂತೆ ರಾಮನ ತಣ್ಣನೆಯ ಮೂರ್ತಿ ಮೈಗೆ ಬಂದು ತಬ್ಬಿಕೊಂಡಂತೆ ಭಾಸವಾಯಿತು. ಈಗ ಆ ಮಧುರ ನೆನಪು ಮೈ ಮನ ಅರಳುವಂತೆ ಮಾಡಿತು.  ಅಯೋಧ್ಯೆಯಲ್ಲಿ ನಾವು ಉಳಿದುಕೊಂಡ ಸ್ಥಳ  ನಗರದ ಮಧ್ಯೆ ಹಳ್ಳಿಯಂತೆಯೇ  ಇತ್ತು. ಹಳೆಯದಾದ ಒಂದು ಕಟ್ಟಡ...ಅಲ್ಲಲ್ಲಿ ಕೆಲವು ಮರಗಳು ಅದರ ಬುಡದಲ್ಲಿ ಕಟ್ಟೆಗಳು ಹಳ್ಳಿಯ ಸೊಗಡಿನ ಓಡಾಡುವ ಜನಗಳು , ಎಲ್ಲಕ್ಕಿಂತಲೂ ಮಿಗಿಲಾಗಿ ಆವರಿಸಿಕೊಂಡ ದಿವ್ಯ ಮೌನ. ಅದರ ನಡುವೆ ಹಕ್ಕಿಗಳ ಕಲರವ ಅದರ ಜತೆಗೆ ನಮ್ಮೆಲ್ಲರ ಮಾತು ನಗುವಿನ ಸಡಗರ.  ಇಲ್ಲ ಈ ಅಯೋಧ್ಯೆಯ ಘಳಿಗೆಗಳನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಆ ಗಂಭೀರ ಮೌನದಲ್ಲಿ ಶ್ರೀರಾಮನ ಆಗಮನದ ಸ್ವಾಗತ ಗಾನವಿರಬಹುದೇ?  ಈಗ ಆ ಗಾನದ ಫಲಶ್ರುತಿಯಾದಂತೆ ರಾಮನ ಪ್ರಾಣ ಪ್ರತಿಷ್ಠೆ ಆಗುತ್ತಿದೆ. ಈ ವರ್ತಮಾನ  ಅದೊಂದು ದಿವ್ಯ ಘಳಿಗೆಯಾಗಬಹುದು. 

ನಾವಲ್ಲಿದ್ದ ಕೆಲವೇ  ಕ್ಷಣಗಳಲ್ಲಿ ಮಂದಿರದ ಸುತ್ತ ಮುತ್ತಲೆಲ್ಲ ಓಡಾಡಿ ರೋಮಾಂಚನ ಪಡೆದಿದ್ದೇವೆ. ಆಗಿನ್ನು ಸುತ್ತಮುತ್ತಲಿನ ಕಟ್ಟಡಗಳು ಭಗ್ನಾವಶೇಷಗಳಾಗಿ ನವೀಕರಣಕ್ಕೆ ಸಜ್ಜಾಗುತ್ತಿದ್ದವು.  ಮುಂಜಾನೆಯ ಸರಯೂ ನದಿಯ ದೃಶ್ಯವಂತೂ ಭಾವನೆಗಳ ಪೂರವನ್ನೆ ಶರೀರದಾದ್ಯಂತ ಅಭಿಷೇಕವನ್ನು ಮಾಡಿತ್ತು. ಇಲ್ಲೇ... ಇಲ್ಲೇ ಇದೇ ಹರಿಯುವ ಸರಯೂ ನದಿಯಲ್ಲಿ ರಾಮ ತನ್ನ ದೇಹದ ಮಾಲಿನ್ಯವನ್ನು ಕಳೆದಿರಬಹುದು. ಆ ಮಾಲಿನ್ಯವನ್ನು ಕಳೆದ ರಾಮನ ದೇಹ ಶುದ್ದವಾದರೆ, ಆ ಮಾಲಿನ್ಯವನ್ನು ತೊಳೆದ ಸರಯೂ ಪಾವನ ರೂಪ ಪಡೆದಿರಬಹುದು.  ಸರಯೂ ನೀನೆಷ್ಟು ಧನ್ಯೆ? ನಿನ್ನ ಮಡಿಲಲ್ಲಿ ಕುಳಿತ ನಾನೆಷ್ಟು ಧನ್ಯ?  ಆ ಸರಯೂ ಅಯೋಧ್ಯೆಯ ಪುಣ್ಯ ಭೂಮಿಯನ್ನು ತಬ್ಬಿಕೊಂಡಿದ್ದರ ಕಾರಣವಿರಬಹುದು ನದಿ ಬಿಟ್ಟು ಬಿಡಲಾಗದಂತೆ ಮಂದವಾಗಿ ಹರಿಯುತ್ತಿತ್ತು.  ಸರಯೂ ತೋಳಲ್ಲಿ ಸೆರೆಯಾದ ಅಯೋಧ್ಯೆ ಅದೆಷ್ಟು ಸುಂದರ?  ರಾಮನ ಅಸ್ತಿತ್ವವನ್ನು ತನ್ನ ತೋಳಿನಲ್ಲಿ ಬಂಧಿಸಿ ಇಂದು  ಆ ಸಂದೇಶವನ್ನು ನಮಗೆ ಈಗ ರವಾನಿಸುತ್ತದೆ. 



ಅ ಅಯೋಧ್ಯೆಯ ಮಣ್ಣಿನಕಣಗಳಲ್ಲಿ ಹೆಜ್ಜೆ ಇಡುವಾಗ ರಾಮ ಹನುಮನ ನೆನೆಯದಿರೆ ಆ ಭಾವನೆಗಳಿಗೆ ಅರ್ಥವೇ ಒದಗಲಾರದು. ಹನುಮಾನ್ ಗುಡಿ ಅಯೋಧ್ಯೆಯ ರಕ್ಷಣೆಯ ಹೊಣೆಯನ್ನು ತ್ರೇತಾಯುಗದಲ್ಲೇ ಹೊತ್ತುಕೊಂಡಿತ್ತು. ಅದರ ಪ್ರತೀಕವೆಂಬಂತೆ ಈ ಶತಮಾನದಲ್ಲಿ ನಡೆದ ಹೋರಾಟದ ಫಲಶ್ರುತಿಯೆಂಬಂತೆ ಈಗ ಶ್ರೀ ರಾಮನ ಪ್ರಾಣ  ಫಲರೂಪ ಪಡೆಯುತ್ತಿದೆ.  ಶ್ರೀರಾಮ ಎಂಬುದು ಕೇವಲ ಅಯೋಧ್ಯೆಗೆ ಮಾತ್ರ ಸೀಮಿತವಲ್ಲ. ಆದರೂ ಅಯೋಧ್ಯೆ ಎಂಬ ಹೆಸರು ಅಲ್ಲಿಗೆ ಭೇಟಿಗೆ ಕೊಟ್ಟಾಗಿನಿಂದ ರೋಮಾಂಚನ ಉಂಟುಮಾಡಿ ಪ್ರಚೋದನೆಗೊಳಿಸುತ್ತದೆ. ರಾಮ ಎಲ್ಲೆಲ್ಲೂ ಇರುವ ಸರ್ವಾಂತರ್ಯಾಮಿ ವ್ಯಕ್ತಿತ್ವ.  ವಾಲ್ಮೀಕಿಯಲ್ಲಿ ಆ ಮರ ಈ ಮರ ಎನ್ನುವ  ಬೀಜಾಕ್ಷರಗಳಿಂದ ರಾಮಮಂತ್ರ, ಹಾಗೆಯೇ     ರಾಮಾಯಣಕ್ಕೆ ಕಾರಣ ಎನ್ನುವ ಎರಡು ವ್ಯಕ್ತಿಗಳು, ಒಂದು ಮಂಥರೆ, ಇನ್ನೊಂದು ರಾವಣ.  ರಾವಣನಲ್ಲಿ ಇರುವ ’ರಾ ’ ಮಂಥರೆಯಲ್ಲೂ ಇರುವ ’ಮ’ ಎಲ್ಲೆಲ್ಲೂ ರಾಮನ ಅಸ್ತಿತ್ವವನ್ನೇ ಹೇಳುತ್ತದೆ. ದುಷ್ಟ ಮನೋವೃತ್ತಿಯಲ್ಲೂ ರಾಮನಿದ್ದರೂ ಅದರಿಂದಲೂ ರಾಮನ ವ್ಯಕ್ತಿತ್ವ ಪುಟಗೊಂಡಿದ್ದು ರಾಮನೆಂಬುದು  ಚೈತನ್ಯವಾಗುವ ಕಥೆ.  ರಾಮ ಅಯೋಧ್ಯೆಯಲ್ಲೇ ಇರಲಿ ಅದರೆ ಅದು ದೇಹದ ಹೃದಯದಂತೇ  ಇಡೀ ದೇಶಕ್ಕೆ ಹೃದಯವಾಗಿರುತ್ತದೆ. ಇದು ಶುದ್ದ ಭಾವನೆಯ ಪ್ರತೀಕ. ಮನೆಯಲ್ಲಿ ಎಲ್ಲೆಡೆ ದೇವರಿದ್ದರೂ ದೇವರ ಕೋಣೆಯೊಂದು ಯಾಕೆ ಬೇಕು? ದೇವಾಲಯದ ಪ್ರತೀ ಅಂಚಿನಲ್ಲೂ ದೇವರ ಅಸ್ತಿತ್ವ ಇರುವಾಗ ಗರ್ಭಗುಡಿ ಏಕೆ? ಇದು ಕೇವಲ ಭಾವನೆಯ ಪ್ರತೀಕ. ಮನುಷ್ಯ ಹುಟ್ಟುವಾಗ ಹುಟ್ಟಿಕೊಳ್ಳುವ ಭಾವನೆ ಅವನೊಂದಿಗೇ ಸಮಾಧಿಯಾಗಿ ಇಲ್ಲವಾಗುತ್ತದೆ. ಆದರೂ ಮನುಷ್ಯನ ಅಸ್ತಿತ್ವ ಇರುವುದು ಈ ಭಾವನೆಗಳಲ್ಲಿ. 

ಕಾಶಿಯಲ್ಲಿ ಎಲ್ಲಿ ಅಗೆದರೂ ಸಿಗುವುದು ಗಂಗೆಯ ನೀರು. ಸಾರ್ವಜನಿಕ ಕೊಳವೆಯಲ್ಲೂ ಹರಿಯುವುದು ಗಂಗೆಯ ನೀರು, ಹಾಗಿದ್ದರೂ ಗಂಗೆಯಲ್ಲೇ ಹೋಗಿ ಮುಳುಗುವುದು ಯಾಕೆ? ಮನುಷ್ಯ ಭಾವನೆಯೊಂದಿಗೆ ಬದುಕು ಸವೆಸುವುದು. ಹಸಿವಿದ್ದರೂ ಶಮನವಾದರೂ ಭಾವನೆಗಳು ಜತೆಗೇ ಇರುತ್ತವೆ.  ಗಂಗೆ ಕಾಶಿಯಲ್ಲಿ ಹರಿದರೂ ಅಂತರಗಂಗೆಯಾಗಿ ದೇಶವ್ಯಾಪಿಸುವಂತೆ, ರಾಮ ಅಯೋಧ್ಯೆಯಲ್ಲಿದ್ದರೂ ದೇಶವ್ಯಾಪಿ ಮಾತ್ರವಲ್ಲ ಸರ್ವ ಜೀವವ್ಯಾಪಿಯಾಗುತ್ತಾನೆ. ದೇಹದಲ್ಲಿ ಎಲ್ಲಿ ವ್ಯಾಧಿಯಾದರೂ ಔಷಧಿ ಕೊಡುವುದು ಹೊಟ್ಟೆಗೆ. ಹಾಗೆ ಅಯೋಧ್ಯೆ ಎಂಬುದು ಎಲ್ಲವೂ ಆಗಿಬಿಡುತ್ತದೆ.  ಶಶಾಂಕನಾಗಿರುವ ಚಂದ್ರ ರಾಮನ ಜತೆಯಾಗಿ ಶ್ರೀ ರಾಮಚಂದ್ರನಾಗಿ ತನ್ನ ಕಳಂಕವನ್ನು ಕಳೆದು ಶುಭ್ರವಾದಂತೆ ರಾಮನಾಮ ವ್ಯಾಪಕವಾಗಿ ನಾವೂ ಪರಿಪೂರ್ಣ ಶುದ್ದಿಯಿಂದ ಪವಿತ್ರರಾಗುತ್ತೇವೆ. 

        ಭಗವಂತ ಅವತಾರ ರೂಪಿಯಾಗಿ ಮನುಷ್ಯನಾಗುತ್ತಾನೆ. ಹೆತ್ತ ಅಪ್ಪ ತಾನು ಸ್ನಾನ ಧ್ಯಾನ ಮಾಡಿ ಮಗನಿಗೆ ಪ್ರೇರಕವಾದಂತೆ ರಾಮ ತನ್ನ ನಡೆಯಿಂದ ಪರಿಪೂರ್ಣ ಮನುಷ್ಯನಾಗಿ ರಾಜಾ ರಾಮನಾಗಿ, ಪುರುಷೋತ್ತಮನಾ ಆದರ್ಶ ರೂಪ. ಈ ಆದರ್ಶಗಳು ಸರ್ವ ಪ್ರೇರಕ ಶಕ್ತಿಯಾಗಿ ರಾಮನ ಆದರ್ಶ ಸರ್ವತ್ರವಾಗಲಿ. 


ಜೈ ಶ್ರೀರಾಮ








Saturday, January 13, 2024

ವ್ಯರ್ಥ ನಿರೀಕ್ಷೆ

"ಗಾಜಿನ ಲೋಟ ಅಥವಾ ಪಿಂಗಾಣಿ ತಟ್ಟೆಯನ್ನು ತಿಕ್ಕಿ ತಿಕ್ಕಿ ತೊಳೆದು ಲಕ ಲಕ ಹೊಳೆಯುವಂತೆ ಮಾಡಿ ಅದನ್ನು ಕಣ್ತುಂಬ ಖುಷಿಯಲ್ಲಿ ನೋಡಿ , ಅದರ ಜಾಗದಲ್ಲಿ ಇಡುವಾಗ ಕೈಜಾರಿ ಬಿದ್ದು ಒಡೆದರೆ ಬಹಳ ದುಃಖವಾಗಿಬಿಡುತ್ತದೆ. ಛೇ ತೊಳೆಯುವ ಮೊದಲೇ ಬಿದ್ದಿದ್ದರೆ....ತೊಳೆಯುವ ಕೆಲಸವಾದರೂ ಉಳಿಯುತ್ತಿತ್ತು. ಎಲ್ಲ ಸಾಮಾಗ್ರಿಗಳನ್ನು ತಂದು ಬಹಳ ನಿರೀಕ್ಷೆಯನ್ನಿಟ್ಟು ಒಂದು ಖಾದ್ಯವನ್ನು ಶ್ರಮವಹಿಸಿ ಮಾಡಿ , ಅದನ್ನು ಆಘ್ರಾಣಿಸುವ ಸುಖಾನುಭವದಲ್ಲಿ ಅದರ ಪಾತ್ರೆ ಕೆಳಗೆ ಬಿದ್ದು ಬಿಟ್ಟರೆ ಬಹಳ ನಿರಾಶೆಯಾಗುತ್ತದೆ. ಪಟ್ಟ ಪರಿಶ್ರಮದ ವ್ಯರ್ಥ ವಾಗುವ ನೋವು ಒಂದು ಕಡೆ ಆಶೆಗೆ ತಣ್ಣೀರು ಎರಚಿದ ನೋವು ಬೇರೆ. "

ಮೊನ್ನೆ ಒಬ್ಬ ಸ್ನೇಹಿತ ಸಿಕ್ಕಿದ. ಯಾವಾಗಲೂ ಬಹಳ ಲವಲವಿಕೆಯಲ್ಲಿ ಕಂಡು ಬರುವ ಈತ ಬಹಳ ಖಿನ್ನತೆಯಲ್ಲಿದ್ದಂತೆ ಭಾಸವಾಯಿತು. ಸದಾ ಸಿಗುವಾಗ ಅದೂ ಇದು ಅಂತ ಮಾತನಾಡುತ್ತೇವೆ. ರಾಜಕೀಯ, ಸಾಮಾಜಿಕ ಹೀಗೆ ಹಲವು ವಿಷಯಗಳನ್ನು ಚರ್ಚಿಸುತ್ತಾ ಇರುವ ಈತನ ಖಿನ್ನತೆ ವಿಚಿತ್ರವಾಗಿ ಕಂಡಿತು. ನಾನು ಕೇಳಿದೆ       

"ಯಾಕೆ ಯಾವಾಗಲು ಇದ್ದಂತೆ ಇಲ್ಲ?  "

ತುಸು ಹೊತ್ತು ಸುಮ್ಮನೇ ಇದ್ದ, ಮತ್ತೆ ಗಳ ಗಳ ಅಳುವುದಕ್ಕೆ ಶುರು ಮಾಡಿದ, ನನಗೆ ಇರಿಸು ಮುರುಸಾಯಿತು.  ಆತ ಹೇಳಿದ, 

"ನನಗೆ ಒಬ್ಬಳೇ ಮಗಳು ಗೊತ್ತಲ್ವ? ಕಳೆದ ಕೆಲವು ದಿನಗಳಿಂದ ಅವಳ ಮದುವೆ ಮಾತುಕತೆಗೆ ಓಡಾಡುತ್ತಾ ಇದ್ದೇನೆ. ಹಲವಾರು ಸಂಬಂಧಗಳನ್ನು ನೋಡಿದೆ. ಕೊನೆಗೆ ಒಬ್ಬರು ಒಳ್ಳೆ ಮನೆಯವರು ಸಿಕ್ಕಿದರು. ಇನ್ನೇನು ಎಲ್ಲ ಮಾತುಕತೆ ಆರಂಭಿಸಿ ಕೆಲಸ ಶುರು ಮಾಡುವ ಹೊತ್ತಿಗೆ , ಮಗಳು ಮದುವೆಗೆ ಒಪ್ಪುವುದಿಲ್ಲ. ಆಕೆಗೆ ಯಾರ ಜತೆಗೋ ಪ್ರೇಮವಿದೆ. ಅವನನ್ನೆ ಮದುವೆ ಆಗಬೇಕು ಅಂತ ಹೇಳುತ್ತಿದ್ದಾಳೆ. ಅವಳ ಇಷ್ಟ ಅಲ್ವ ಮಾಡಿಕೊಳ್ಳಲಿ ಆದರೆ ನನ್ನ ಅವಸ್ಥೆ ಹೇಗಾಗಬೇಕು. ಆಕೆಗೆ ಅಮ್ಮನಿಂದಲೂ ನಾನೇ ಹತ್ತಿರ. ಅಪ್ಪ ಅಪ್ಪ ಅಂತ ಯಾವಾಗಲು ಹೆಗಲಿಗೆ ಬೀಳುತ್ತಾಳೆ. ಆಕೆಗಾಗಿ ಕೇಳಿದ್ದನ್ನೇಲ್ಲಾ ಮಾಡಿದೆ.  ಇಂಜಿನಿಯರ್  ಕಲಿಸಿದೆ.  ಒಳ್ಳೆ ಕೆಲಸ ಸಿಕ್ಕಿತು. ಈಗ ನೋಡಿದರೆ ನನ್ನ ಕನಸು ಭಾವನೆಗೆಗಳಿಗೆ ಯಾವ ಬೆಲೆಯೂ ಇಲ್ಲ. ಈಗ ಬಂದ ಸಂಬಂಧದವರ  ಉಳಿದವರ ಮುಖ ಹೇಗೆ ನೋಡುವುದು?  "

ಮಕ್ಕಳು ಸಂಸಾರ ಎಂದ ಮೇಲೆ ಇದೆಲ್ಲ ಸಾಮಾನ್ಯ.  ಮಕ್ಕಳ ಬಗ್ಗೆ ಹಲವು ಕನಸುಗಳನ್ನು ಬಯಕೆಗಳನ್ನು ಕಟ್ಟಿಕೊಳ್ಳುವುದು ಸಹಜ. ನಮ್ಮ ಮಕ್ಕಳಲ್ಲಿ ಇಡುವ ನಿರೀಕ್ಷೆ ಹುಸಿಯಾಗುವಾಗ ಜಿಗುಪ್ಸೆ ಆವರಿಸಿಬಿಡುತ್ತದೆ. ನಮ್ಮದೇ ಮಕ್ಕಳಾದರೂ ನಾವು ಅವರ ಬಗ್ಗೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದು ಸೂಕ್ತವಲ್ಲ. ಬದಲಿಗೆ  ಸೂಕ್ತ ನಿರ್ಧಾವನ್ನು  ಅವರೆ ತೆಗೆದುಕೊಳ್ಳುವಂತೆ ಅವರನ್ನು ಪ್ರೇರೇಪಿಸಬೇಕು. ಅವರ ಬಗೆಗಿನ ನಿರ್ಧಾರ ನಾವೇ ತೆಗೆದುಕೊಂಡರೆ ನಿರ್ಧಾರಗಳಲ್ಲಿ ಅವರು ಸ್ವಾವಾಲಂಬಿಗಳಾಗುವುದು ಯಾವಾಗ?  ಅವರ ಪರವಾಗಿ ನಾವು ನಮ್ಮ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಂಡರೆ ಅವರ ಹಕ್ಕುಗಳನ್ನು ಕಸಿದುಕೊಂಡಂತೆ. ಇನ್ನು ನ್ಯಾಯಾಲಯ ದಾವೆ ಕಾನೂನು ಯಾವುದನ್ನು ನೋಡಿದರು ಅಲ್ಲಿ ಕಾನೂನು ಮಾತ್ರವೇ ಇರುತ್ತದೆ. ನೀತಿ ಎಂಬುದು ಇರುವುದಕ್ಕೆ ಸಾಧ್ಯವಿಲ್ಲ. ಮಕ್ಕಳು ಹೆತ್ತವರ ಆಶಯದಂತೆ ನಡೆಯಬೇಕಾಗಿರುವುದು ಹೌದು, ಆದರೆ ಅವರ ಆಶಯಗಳು ಅದೇ ರೂಪದಲ್ಲಿ ಬೆಳೆದು ಬರುವಂತೆ ಮಕ್ಕಳ ಮನೋಭಾವವನ್ನು ರೂಪಿಸಬೇಕು.  ಇದೇ ಮಾತುಗಳಲ್ಲಿ ಆತನಿಗೆ ಸಾಂತ್ವಾನ ಹೇಳಿದೆ. ಆಗ ಆತ ಹೇಳಿದ,

"ಹುಟ್ಟಿನಿಂದ ಅವಳ ಎಲ್ಲಾ ಆಶೆಗಳನ್ನು ತೀರಿಸಿದವನು ನಾನು. ಹೆತ್ತಮ್ಮನಿಗಿಂತಲೂ ಆಕೆ ತನ್ನ ಆಶೆಗಳನ್ನು ನನ್ನಲ್ಲೇ ಹೇಳಿ ಪರಿಹರಿಸಿಕೊಳ್ಳುತ್ತಿದ್ದಳು. ಈಗ ಬದುಕಿನ ಮಹತ್ವದ ನಿರ್ಧಾರದಲ್ಲಿ ಅಕೆಗೆ ನಾನು ಬೇಡವಾದೆ. ದುಃಖವಾಗುವುದಿಲ್ಲವಾ? ಆಕೆಯ ಪ್ರೇಮ ಎರಡು ವರ್ಷದಿಂದ ಇದೆ. ಈ ಮೊದಲು ಒಂದು ದಿನ ಅದರ ಬಗ್ಗೆ ಹೇಳಿರುತ್ತಿದ್ದರೆ, ನಾನು ಬಹುಶಃ ಅವಳ ಆಶೆಗಳನ್ನು ಮೊದಲಿನಂತೆ ನೆರವೇರಿಸಿಬಿಡುತ್ತಿದ್ದೆ. "

ಅವನ ಅಳಲು ಪ್ರಾಮಾಣಿಕ. ಅದರಲ್ಲಿ ತಪ್ಪೇನಿದೆ.  ಎಲ್ಲವನ್ನು ಸಲುಗೆಯಿಂದ ಪ್ರೀತಿಯಿಂದ ಹೇಳಬಲ್ಲ ಆಕೆ ....ತನ್ನ ಪ್ರೇಮವನ್ನೂ ಪ್ರಾಮಾಣಿಕವಾಗಿ ತಂದೆಯಲ್ಲಿ ಹೇಳಬಹುದಿತ್ತು. ಆದರೆ ಅದನ್ನೂ ಸಹ ಹೇಳುವಷ್ಟು ಅವರ ನಡುವಿನ ಸಂಭಂಧಕ್ಕೆ ಆ ಬಲವೇ ಇರಲಿಲ್ಲ.  ಅದೇನು ನಿಯತಿಯೋ ಗೊತ್ತಿಲ್ಲ. ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ಇಷ್ಟವಾಗುತ್ತಾನೆ. ಪ್ರೀತಿ ಸಲುಗೆ ಎಲ್ಲವೂ ಹೆತ್ತ ಅಮ್ಮನಿಗಿಂತಲೂ ಅಧಿಕವಾಗುತ್ತದೆ.  ಬಹುಶಃ ಅಪ್ಪನಂತೆ ನಾನಾಗಲಾರೆ ಎಂಬ ಹತಾಶೆಯೋ ಏನೋ ಹಲವು ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ಅದು ಎಲ್ಲದಕ್ಕೂ ಇರುವ ಅಂತಿಮ ನಿರೀಕ್ಷೆ. ಆದರೆ ಬದುಕಿನ ನಿರ್ಣಾಯಕ ಹಂತದಲ್ಲಿ ಅಪ್ಪ ಪ್ರೀತಿಯ ತೂಕ ಎಲ್ಲೋ ಕಳೆದ ಅನುಭವವಾಗುತ್ತದೆ. ಅಪ್ಪ ಅಮ್ಮನ ಪ್ರೀತಿ ಮಕ್ಕಳು ಕೊಡಬೇಕಾದ ಪ್ರತ್ಯುಪಹಾರ ಒಂದೇ ಅದು ಪ್ರಾಮಾಣಿಕತೆ.  ಮಕ್ಕಳು ಹೆತ್ತವರಲ್ಲಿ ಗೌರವ ಪ್ರೀತಿ ತೋರಿಸುವುದಕ್ಕಿಂತಲು ಅವರಲ್ಲಿ ಪ್ರಾಮಾಣಿಕವಾಗಿ ಇರಬೇಕಾಗಿರುವುದು ಅವಶ್ಯ. ಪ್ರೀತಿ ಗೌರವ ಹುಟ್ಟಿನಿಂದ ಸಹಜವಾಗಿ ಬರಬಹುದು. ಆದರೆ ವಿಶ್ವಾಸ ಪ್ರಾಮಾಣಿಕತೆ ಒದಗಿ ಬಂದಾಗಲೇ ಆ ಪ್ರೀತಿ ಸಂಭಂಧಗಳಿಗೆ ಮೌಲ್ಯ ಒದಗಿ ಬರುತ್ತದೆ. ತನ್ನ ಮಕ್ಕಳು ಏನೂ ಬಚ್ಚಿಡಲಾರರು ಎಂಬ ಅದಮ್ಯ ವಿಶ್ವಾಸ ಹೆತ್ತವರಲ್ಲಿ ಇರುತ್ತದೆ. ಅದಕ್ಕೆ ಘಾತಿಯೊದಗಿದಾಗ  ಜಗತ್ತಿನ ಯಾವ ನೋವು ಅದಕ್ಕೆ ಸರಿಸಮನಾಗಿ ಇರುವುದಿಲ್ಲ. 


Tuesday, January 9, 2024

ಉಡುಗೊರೆ, ಆದರೂ ಬೇಡ

ಇತ್ತೀಚೆಗೆ ಒಬ್ಬರ ಮದುವೆ ಆಮಂತ್ರಣ ಸಿಕ್ಕಿತ್ತು. ಆ ಒಂದು ಆಮಂತ್ರಣದ ಪತ್ರಿಕೆ ಅಚ್ಚು ಹೊಡೆಯುವುದಕ್ಕೆ ಏನಿಲ್ಲವೆಂದರೂ ಇನ್ನೂರು ರೂಪಾಯಿ ಖರ್ಚಾಗಿರಬಹುದು. ಅರಮನೆ ಮೈದಾನದಲ್ಲಿ ಆ ವಿವಾಹ ಕಾರ್ಯಕ್ರಮ ಆಯೋಜಿಸಿದ್ದರು.  ಪತ್ರಿಕೆಯ ಕೊನೆಯಲ್ಲಿ ವಿಶೇಷವಾಗಿ ಬರೆಯಲಾಗಿತ್ತು. ಇದು ನನಗೆ ವಿಚಿತ್ರವಾಗಿ ಕಂಡಿತ್ತು. ಆಮಂತ್ರಿತರು ಯಾರೂ ಹೂವಿನ ಬೊಕ್ಕೆ ತರಬಾರದು ಎಂದು ಉಲ್ಲೇಖಿಸಿದ್ದರು. ಹೂವಿನ ಬೊಕ್ಕೆ ಒಂದು ಘಳಿಗೆ ಕಳೆದರೆ ಅದರ ಮೌಲ್ಯವನ್ನು ಕಳೆದುಕೊಳ್ಳುತ್ತದೆ.  ಕೊಡುವಾಗ ಇದ್ದ ಮೌಲ್ಯ ಪಡೆದಾಗ ಇರುವುದಿಲ್ಲ. ಅದನ್ನು ಮೂಲೆಗೆ ಎಸೆದು ಬಿಡುವ ಈ ಉಡುಗೊರೆ ಕೊಡುವ ಅವಶ್ಯಕತೆಯಾದರೂ ಏನು ಎಂದು ಹಲವು ಸಲ ಯೋಚಿಸಿದ್ದಿದೆ. 

ಉಡುಗೊರೆ ಯಾರಿಗೆ ಇಷ್ಟವಿಲ್ಲ ಹೇಳಿ?  ಉಡುಗೊರೆ ಕೈಗೆ ಇಟ್ಟಾಗ ಎಷ್ಟು ಸಂಕೋಚದ ಮನಸ್ಸಾದರೂ ಮೊದಲಿಗೆ  ನಿರಾಕರಿಸುತ್ತಾ ನಂತರ ಮುಖ ಅರಳಿಬಿಡುತ್ತದೆ.  ಮೊನ್ನೆ ಮನೆಯಾಕೆ ತುಂಬಿದ ಒಂದೆರಡು ಬ್ಯಾಗ್ ತಂದಿಟ್ಟಳು. ಅದರಲ್ಲಿ ತುಂಬಾ ಉಡುಗೊರೆ ರೂಪದಲ್ಲಿ ಬಂದ ಬಟ್ಟೆಗಳಾಗಿತ್ತು. ಇಷ್ಟು ಉಡುಗೊರೆ ಮುಖ ಅರಳದೇ ಇರಬಹುದಾ? ಆದರೆ ಹಾಗೆ ಸಂಪಿಗೆಯ ಮೊಗ್ಗಿನಂತಿದ್ದ ಮುಖ ಒಮ್ಮಿಂದೊಮ್ಮೆಲೇ  ಕೆರೆಯ ತಾವರೆಯಾಗಿ ಅರಳುವುದಿಲ್ಲ.  ಅದು ಹೆಸರಿಗೆ ಶಾಸ್ತ್ರಕ್ಕೆ  ಸಿಕ್ಕ ಉಡುಗೊರೆ. 

ಬಗೆ ಬಗೆಯ ಬಟ್ಟೆಗಳು ಆ ಬ್ಯಾಗ್ ತುಂಬಾ ಇದ್ದವು. ಸೀರೆ ಪಂಚೆ ಶಲ್ಯ ಒಂದಷ್ಟು ರವಕೆ ಕಣಗಳು.  ಅಷ್ಟೊಂದು ಸೀರೆಗಳು ಇದ್ದರೂ ಒಂದು ಮದುವೆಯೋ ಮತ್ತೊಂದೋ ಬಂದಾಗ ಅದಕ್ಕೆ ಹೋಗುವುದಕ್ಕೆ ಅಂತ ಒಂದು ಬಟ್ಟೆ ಬೇಕು ಅಂತ ಮಲ್ಲೇಶ್ವರಂಗೆ ಹೋಗುವುದು ತಪ್ಪುವುದಿಲ್ಲ. ಸಿಕ್ಕಿದ ಸೀರೆ ಪಂಚೆಗಳೇ ಹಾಗೆ. ಒಂದು ಪಂಚೆ ತೆಗೆದು ನೋಡಿದೆ. ಅದು ಅತ್ತ ಪಂಚೆಯಷ್ಟು ದೊಡ್ಡ ಇಲ್ಲ. ಲುಂಗಿಯಂತೆ ಉಡುವುದಕ್ಕೂ ಸಾಧ್ಯವಿಲ್ಲ. ಈಗೀಗ ಪ್ರತೀ ಮನೆಯಲ್ಲೂ ಇಂತಹ ಹಲವು ಬ್ಯಾಗ್ ಗಳು ಇರಬಹುದು. ಯಾಕೆಂದರೆ ಬೇಡದೇ ಇದ್ದ ಉಡುಗೊರೆ ಕೊಡುವುದು ವಾಡಿಕೆಯಾಗಿದೆ.  ನಮ್ಮಜ್ಜನಿಗೆ ಪೌರೋಹಿತ್ಯಕ್ಕೆ  ಹೋಗುವಾಗ   ಬೈರಾಸುಗಳು ದಾನವಾಗಿ  ಸಿಗುತ್ತಿದ್ದವು. ಅಜ್ಜ ಅದನ್ನು ತೋರಿಸಿ ಹೇಳುತ್ತಿದ್ದರು, ಇದನ್ನು ಸೊಂಟದ ಸುತ್ತ ಉಡುವುದಕ್ಕೆ ಇದು ಉದ್ದ ಇಲ್ಲ. ಹಾಗಂತ ಲಂಗೋಟಿಯಾಗಿ ಉಡುವುದಕ್ಕೆ ಇದು ದೊಡ್ಡ ಆಯಿತು.  ಒಂದು ಬಾರಿ ಯಾರೋ ಒಬ್ಬರು ದನವನ್ನು ದಾನ ಕೊಟ್ಟಿದ್ದರು. ಅದು ಯಾಕೆ ಕೊಟ್ಟಿದ್ದಾರೆ ಎಂದು ಅದರ ಹತ್ತಿರ ಹೋಗುವಾಗ ಅರಿವಾಗುತ್ತಿತ್ತು. ಹಾಯುವುದಕ್ಕೆ ಒದೆಯುವುದಕ್ಕೆ ಮಾತ್ರ ಕಲಿತಿದ್ದ ಪಶು ಹಾಲು ಕೊಡುವುದು ಹಾಗಿರಲಿ, ಅದಕ್ಕೆ ತಿನ್ನುವುದಕ್ಕೆ ಹುಲ್ಲು ಹಿಂಡಿ ಒದಗಿಸುವುದೇ ದೊಡ್ಡ ಸಮಸ್ಯೆಯಾಗಿಬಿಡುತ್ತಿತ್ತು.  ಆದರೂ ಪಶುವಲ್ಲವಾ? ಅದನ್ನು ಸಾಕುವುದೇ ಪುಣ್ಯದ ಕೆಲಸ.  ಹೀಗೆ ಉಪಯೋಗಕ್ಕೆ ಬಾರದ  ವಸ್ತುಗಳು ಹೀಗೆ ದಾನವಾಗಿ ಕೊಡುವುದಕ್ಕೆ ಯೋಗ್ಯವಾಗಿರುತ್ತವೆ. ಬ್ಯಾಗ್ ತುಂಬಾ ಇದ್ದ ಸೀರೆಗಳ ಕಥೆಯೂ ಇದುವೆ. ಅದು ಉಡುವುದಕ್ಕೂ  ಸಾಧ್ಯವಿಲ್ಲ ಮಲಗಿದಾಗ ಹಾಸಿ ಹೊದಿಯುವುದಕ್ಕೂ ಸಾಧ್ಯವಿಲ್ಲ.  ಗೋವದಲ್ಲಿ ಈ ತರ ಸಿಕ್ಕಿದ ಸೀರೆ ಪಂಚೆಗಳನ್ನು ಒಂದರ ಮೇಲೆ ಒಂದು ಇಟ್ಟು ಹೊಲಿದು ಚಳಿಗೆ ಹೊದಿಕೆಯಂತೆ ಉಪಯೋಗಿಸುವುದನ್ನು ನೋಡಿದ್ದೇನೆ. 

ಒಂದು ಸಲ ಯಾರೋ ಕೊಟ್ಟಿದ್ದ ಶರ್ಟ್ ಪೀಸ್ ನೋಡುವುದಕ್ಕೆ ಚೆನ್ನಾಗಿ ಇದೆ ಎಂದು ಟೈಲರ್ ಗೆ ಹೊಲಿಯುವುದಕ್ಕೆ ಕೊಟ್ಟಿದ್ದೆ. ಆತ ಕೈಯಲ್ಲಿ ಹಿಡಿದು ಹೇಳಿದ ಸಾರ್ ಇದು ಗಿಫ್ಟ್ ಸಿಕ್ಕಿದ್ದಾ ? ಹೊಲಿಯುವುದಕ್ಕೆ ಮಜೂರಿ ಅದರಿಂದ ಹೆಚ್ಚಾಗುತ್ತದೆ, ಏನು ಮಾಡಬೇಕು ಎಂದು ಕೇಳಿದಾಗ ಒಂದಷ್ಟು ಇರಿಸು ಮುರಿಸಾಯಿತು. ಪುಣ್ಯ ಅದನ್ನು ಯಾರು ಕೊಟ್ಟದ್ದು ಎಂದು ನೆನಪಿರಲಿಲ್ಲ. ಹೀಗೆ ನೆನಪಾಗದ ವಸ್ತುವನ್ನು ತಮ್ಮ ನೆನಪು ಮರೆಸುವಂತೆ ಯಾರೋ ಕೊಟ್ಟುಬಿಟ್ಟಿದ್ದರು. 

ಸಾಮಾನ್ಯವಾಗಿ ನಾವು ಅತ್ಮೀಯರಿಗೆ ಶುಭ ಸಂದರ್ಭದಲ್ಲಿ ಏನಾದರೂ ಕೊಡಬೇಕು ಎನ್ನುವಾಗ ಅವರಿಗೆ ಏನು ಅತ್ಯಂತ ಉಪಯೋಗಕ್ಕೆ ಬರಬಹುದು ಎಂಬುದನ್ನು ಯೋಚಿಸುತ್ತೇವೆ. ಅವರ ಮನೆಯಲ್ಲಿ ಏನು ಇಲ್ಲ ಎಂಬುದನ್ನು ಲೆಕ್ಕ ಹಾಕುತ್ತೇವೆ. ನಾವು ಕೊಟ್ಟ ವಸ್ತುವನ್ನು ಉಪಯೋಗಿಸುವಾಗ ನಮ್ಮ ನೆನಪನ್ನು ತರಿಸುವುದಕ್ಕೆ ಪ್ರಯತ್ನಿಸುತ್ತೇವೆ. ಆದರೆ ಇಲ್ಲಿ ಬ್ಯಾಗ್ ತುಂಬ ಇದ್ದ ಉಡುಗೊರೆ ಯಾರ ನೆನಪನ್ನೂ ತರಿಸುವುದಿಲ್ಲ. ಇದೊಂದು ಹರಿವ ನೀರಿನ ಹಾಗೆ. ಯಾವುದೋ ಅನಾಥಾಶ್ರಮಕ್ಕೂ ಕೊಡುವುದಕ್ಕೆ ಯೋಗ್ಯವಿಲ್ಲದವುಗಳು. ಹಾಗಂತ ಕಳಪೆಯಾದವುಗಳನ್ನು ಅನಾಥರಿಗೆ ಕೊಡಬೇಕೆಂದಲ್ಲ. ಏನೂ ಇಲ್ಲದವರೂ ನಿರಾಕರಿಸುವ ಈ ಉಡುಗೊರೆಗಳು ಸಿಕ್ಕರೆ ಮುಖ ಅರಳುವುದಕ್ಕೆ ಸಾಧ್ಯವೆ?  ಇಂದು ನಮಗೆ ಯಾರೋ ಕೊಟ್ಟಿದ್ದಾರೆ, ನಾಳೆ ನಾವು ಇದನ್ನು ಯಾರಿಗೋ ದಾಟಿಸಿಬಿಡುತ್ತೇವೆ. ಹೋದದ್ದಕ್ಕೆ ಏನಾದರೂ ಕೊಡಬೇಕಲ್ಲ. ಹಾಗೆ ಆಕಡೆಯಿಂದ  ಈಕಡೆಗೆ ಈ ಕಡೆಯಿಂದ ಪುಟ್ ಬಾಲಿನಂತೆ ತಳ್ಳುವ ವಸ್ತುಗಳು.  ಕೊಡುವವರಿಗೂ ಗೊತ್ತಿದೆ ಇದು ಉಪಯೋಗ ಶೂನ್ಯ. ತೆಗೆದುಕೊಳ್ಳುವವರಿಗೂ ಗೊತ್ತಿದೆ ಇದು ಏನಕ್ಕೂ ಬರುವುದಿಲ್ಲ ಎಂದು. ಹೀಗೆ ನಮಗೆ ಉಚಿತವಾಗಿ ಸಿಕ್ಕದ್ದನ್ನು ಯಾರಿಗೋ ದಾಟಿಸುತ್ತೇವೆ. ಹಲವು ಸಲ ಹರಿದ ನೋಟನ್ನು ತಿಳಿಯದಂತೆ ಯಾರಿಗೋ ಅಂಟಿಸಿದಂತೆ ಬಾಸವಾಗುತ್ತದೆ. ವಿಪರ್ಯಾಸವೆಂದರೆ ಒಂದು ಸಲ ಹೀಗೆ ಕೊಟ್ಟದ್ದು ಒಂದೆರಡು ತಿಂಗಳು ಕಳೆದನಂತರ ಇನ್ನಾರದೋ ಕೈಯಿಂದ ನಮ್ಮ ಕೈಗೆ ಪುನಃ ಸಿಗುವ ಸಂಭವವು ಇದೆ. 

ನನಗೆ ಉಡುಗೊರೆ ಕೊಡುವುದರಲ್ಲೂ ಪಡೆಯುವುದರಲ್ಲೂ ಆಸಕ್ತಿಇಲ್ಲ. ಈ ಉಡುಗೊರೆಯದ್ದು ಒಂದು ದೊಡ್ಡ ಕಥೆ,  ಪಡೆದರೆ ಸಾಲದು ಅದನ್ನು ಬರೆದಿಟ್ಟು  ನೆನಪಿಸಿಕೊಂಡು  ಪುನಹ ಅದನ್ನು ಕೊಡಬೇಕು. ಹಾಗೇ  ಯಾವುದೇ ಮದುವೆ ಉಪನಯನಕ್ಕೆ ಹೋದರೂ ಮನಸಾರೆ ಶುಭ ಹಾರೈಸುತ್ತೇನೆ. ಸಂತಸದಿಂದ ಅವರಿಗೆ ಶುಭ ಹಾರೈಸಿ ಪರಮಾತ್ಮನಲ್ಲಿ ಶುಭವಾಗಲಿ ಎಂದು ಬೇಡಿಕೊಳ್ಳುತ್ತೇನೆ.  ಯಾರೊ ನೋಡುವುದಕ್ಕೆ ಇನ್ನಾರನ್ನೋ ತೃಪ್ತಿ ಪಡಿಸುವುದಕ್ಕೆ ಹಲವು ಸಲ  ಪ್ರದರ್ಶನ ಉಡುಗೊರೆ ಬಳಕೆಯಾಗುತ್ತದೆ. ಒಂದು ರೀತಿಯ ಢಾಂಬಿಕತನವಿದು. 

ಈಗೀಗ ಉಡುಗೊರೆಗಳು ಹೀಗೆ ಅರ್ಥ ಹೀನವಾಗುತ್ತವೆ. ಅವುಗಳನ್ನು ಹೊತ್ತು ತರುವುದು ಮತ್ತು ಅದೇ ರೀತಿ ಹೊತ್ತುಕೊಂಡು ಹೋಗಿ ಇನ್ನೊಬ್ಬರಿಗೆ ಒಪ್ಪಿಸುವುದು. ಈ ಯಾಂತ್ರಿಕತೆ ಯಾವ ಪುರುಷಾರ್ಥಕ್ಕೆ?  ಕೊಡುವುದಕ್ಕೆ ಮನಸ್ಸಿಲ್ಲದೆ ಕೊಡುವ ಉಡುಗೊರೆ ಕೊಡುವ ಉದ್ದೇಶವಾದರೂ ಏನು? ಅದು ಕೊಡದೇ ಇರುವುದೇ ವಾಸಿ. ಕೊನೆ ಪಕ್ಷ ಅದನ್ನು ಹಿಡಿದುಕೊಳ್ಳುವ ಶ್ರಮವಾದರೂ ತಪ್ಪುತ್ತದೆ. 

ಉಡುಗೊರೆಗಳು ಅದಕ್ಕಿರುವ ಮೌಲ್ಯಕ್ಕಿಂತಲೂ ಅದರ ಹಿಂದಿನ ಭಾವನೆಗಳು ಮೌಲ್ಯಯುತವಾಗುತ್ತವೆ. ಅದರ ಹಿಂದೆ ಇರುವ ಪ್ರೀತಿ ಸ್ನೇಹ ಅದಕ್ಕಿರುವ ಮೌಲ್ಯದಲ್ಲಿ ಕೊಡುವ ಉಡುಗೊರೆ ಕೇವಲ ಸಾಂಕೇತಿಕವಾಗುತ್ತವೆ. ಆದರೆ ಈಗಿಗ ಕೊಡುವ ಅಥವಾ ಪಡೆಯುವ ಉಡುಗೊರೆಗಳಿಗೆ ಸ್ನೇಹ ಪ್ರೀತಿಯ ಮೌಲ್ಯ ಇರುವುದಿಲ್ಲ.  ಗುಲಾಬಿ ಮೊಗ್ಗನ್ನು ಕೈಯಲ್ಲಿ ಹಿಡಿದಾಗ ಅದು ಪಸರಿಸುವ ಪ್ರೇಮದ ಗಂಧ ದಿವ್ಯವಾಗಿರುತ್ತದೆ. ಆದರೆ ಕೊಡುವ ಮನಸ್ಸಿನಲ್ಲೂ ಪಡೆಯುವ ಮನಸ್ಸಿನಲ್ಲೂ ಪ್ರೀತಿ ಎಂಬುದು ತುಂಬಿರಬೇಕು. ಇಲ್ಲವಾದರೆ ಅದು ಕೇವಲ ಹೂವಾಗಿಬಿಡುತ್ತದೆ.