Thursday, March 17, 2011

ಸ್ಥಿರೆಯು ಸ್ಥಿರವಲ್ಲವಾದರೆ?


ಸ್ಥಿರೆಯು ಸ್ಥಿರವಲ್ಲವಾದರೆ?
 ಅಸ್ಥಿರ ಬದುಕಿನ ನಿದರ್ಶನವಾಯಿತು ಜಪಾನ್. ಸಂವತ್ಸರದ ಅಂತ್ಯದಲ್ಲಿ ಬಂದೆರಗಿದ ಜಾಗತಿಕ ಮಹಾದುರಂತ. ಅಂದು ಎರಡನೇ ಜಾಗತಿಕ ಮಹಾಸಮರದಲ್ಲಿ ನಲುಗಿ ಹೋದ ದೇಶದ ಭಾಗಗಳಾದ ಹಿರೋಶಿಮಾ ನಾಗಸಾಕಿ ಗಳಿಂದ ಅದ್ಭುತವಾಗಿ ಚೇತರಿಸಿಕೊಂಡ ಜಪಾನ್ ಜನತೆಗೆ ಮತ್ತೋಂದು ದುರ್ಘಟನೆಯನ್ನು ನೇರ ಸಂಧಿಸುವಂತಾದುದು ಅತ್ಯಂತ ವಿಷಾದನೀಯ ಮತ್ತು ದುರದೃಷ್ಟಕರ ಎಂದೇ ಹೇಳಬೇಕು. ಮನುಷ್ಯ ತನ್ನ ಅಸ್ಥಿರ ಬದುಕಿನ ಬಗ್ಗೆ ಯೋಚಿಸಬೇಕು. ಇಂದು ಕಂಬನಿ ತುಂಬಿ ವಿಷಾದ ಬಿಂಬಿಸಿ ನಾಳೆ ಮರೆತು ಬಿಡುವ ಘಟನೆಯಲ್ಲ. ನಲುಗಿ ಹೋದ ಜೀವರಾಶಿಗೆ ಯಾವ ಸಾಂತ್ವನವನ್ನು ತೋರಬಹುದು? ಕಲ್ಪನೆಗೆ ನಿಲುಕದ ಬವಣೆಯನ್ನು ಎದುರಿಸುವ ಬಗೆಯನ್ನು ಕಲ್ಪಿಸುವುದು ಹೇಗೆ. ಮನಸ್ಸಲ್ಲಿ ಒಂದು ಘಳಿಗೆಯಾದರೂ ಮನಸ್ಸು ತುಂಬಿ ಭಗವಂತನಲ್ಲಿ ಮೊರೆಯಿಡೋಣ.. ಹೇ ಭಗವಂತ ಜಪಾನ್ ವಾಸಿಗಳು ನಿನ್ನ ಕರುಣೆಯಿಂದ ವಂಚಿಸಲ್ಪಡಲು ಅವರೇನು ಅಂತಹ ಅಪಾರಾಧಿಗಳೇ? ಅವರ ಅಪರಾಧವಾದರೂ ಏನು? ಒಂದು ಕ್ಷಣದಲ್ಲೆ ತನ್ನದೆಲ್ಲವನ್ನು ಕಳೆದು ಬರಿಗೈ ಬರಿ ಮೈ ಆದ ಬದುಕಿನ್ನೆಂತು ಬದುಕಾದೀತು.? ಜಪಾನಿಗರು ಕಟ್ಟಿಕೊಂಡ ಮನೆ ಊರು ಬದುಕು ಎಲ್ಲವೂ ಕ್ಷಣದಲ್ಲಿ ಬಿಸುಟು ಬಿಡುವ ಆಟಿಕೆಯಾಗಿ ಕಂಡಿತೆ? ಇನ್ನಿನ್ನ ಬದುಕೆಂತು ಹೇಗೆ ಊಹಿಸಲಿ ? ಅವರಿಗಾಗಿ ನಿನ್ನಲ್ಲಿ ಏನು ಬೇಡಲಿ?

ಸ್ಥಿರವಾದ ಭೂಮಿ ಹೀಗೆ ನಲುಗಿದರೆ ಮನುಷ್ಯ ತನ್ನ ನಿಯಂತ್ರಣದ ಪರಿಧಿಯನ್ನರಿಯಬೇಕು. ಬದುಕಿನುದ್ದಕ್ಕೂ ಸ್ವಾರ್ಥಿಯಾಗುವ ಮನುಷ್ಯನ ಜೀವನವನ್ನು ಅವಲೋಕಿಸಿದರೆ ಸಾಲದೇ? ಹುಟ್ಟಿಸಿದವ ಮೇವನ್ನು ತೋರಿಸಿಯಾನು ಎಂಬ ಮಾತನ್ನು ನಂಬುವ ಸ್ಥಿತಿಯಲ್ಲಿ  ಮಾನವನಿಂದು ಇಲ್ಲ. ತನಗೆಷ್ಟು ಬೇಕೋ ಅದನ್ನು ಯೋಚಿಸುವ ಬದಲು ತನಗೆಷ್ಟು ಬರಬಹುದು ಎಂಬ ಸ್ವಾರ್ಥ ಚಿಂತನೆ ಎಲ್ಲಿ ಅಂತ್ಯ ಕಾಣಬಹುದು?

ಪ್ರತಿ ದಿನವು ಹೊಸ ಹೊಸ ಹಗರಣಗಳಿಂದ ಪ್ರಸಿದ್ದಿ ಪಡೆಯುವ ಮಂತ್ರಿಗಳು, ರಾಜಕಾರಿಣಿಗಳು. ಇವರ ಸ್ವಾರ್ಥಕ್ಕೆ ಒಂದು ಪರಿಮಿತಿ ಎಂಬುದು ಇದೆಯೆ? ಓರ್ವರು ವಿದೇಶಿ ಬ್ಯಾಂಕ್ ನಲ್ಲಿ ಠೇವಣಿ ಇಟ್ಟ ಹಣ...ಕೇಳಿದರೆ ದಿಗಿಲಾಗುತ್ತದೆ. ಅಬ್ಬಾ...!!!! ಮೂರು ಸಾವಿರ ಕೋಟಿ ರೂಪಾಯಿ!!! ಎಲ್ಲಿಂದ ಬಂತು ಈ ಹಣ.? ಇಲ್ಲಿ ಮೂರು ಸಾವಿರ ಕೋಟಿ ಬಿಡಿ  ಮೂರು ಸಾವಿರ ರೂಪಾಯಿಗೆ ಜನಸಾಮಾನ್ಯ ಇರುಳು ನಿದ್ದೆಗೆಟ್ಟು ಅಥವಾ ಬಿಸಿಲ ಝಳಕ್ಕೆ ಬೆಂದು, ಧೂಳು ತಿಂದು ದುಡಿದರೂ ಗಿಟ್ಟದ ಹಣ ಇವರಿಗೆ ಸಾವಿರಾರು ಕೋಟಿ ಅದು ಹೇಗೆ ಸಂಗ್ರಹವಾಗುತ್ತದೆ? ಅತಿಯಾದ ಆಶೆ. ಸುಮ್ಮನೇ ಕೂತುಂಡರೂ ಮುಗಿಯದ ಈ ಸಂಪತ್ತು ಭೂಮಿಯ ಇಂತಹ ಒಂದು ನಲುಗಾಟಕ್ಕೆ ಬೆಲೆಯೇ ಇಲ್ಲದ ಹಾಗೆ ಆಗಿಬಿಡುವುದಲ್ಲ. ಆದರೂ ಸ್ವಾರ್ಥ ಬಿಡುವುದಿಲ್ಲ. ಆಶೆ ತೀರುವುದಿಲ್ಲ.ನೋಡಬಾರದೆ ಜಪಾನಿನಲ್ಲಿ ಕೋಟ್ಯಾಧಿಪತಿ ಕ್ಷಣವೊಂದರ ಅವನಿಯ ಮುನಿಸಿಗೆ ಬೀದಿ ಪಾಲಾಗಿ ಬಿಟ್ಟದ್ದು? ನಾನು ನನ್ನ ಮಕ್ಕಳು ನನ್ನ ಕುಟುಂಬ ಹೀಗೆ ಪ್ರತಿಯೊಂದರಲ್ಲು ಸ್ವಾರ್ಥ.ಒಬ್ಬನಿಗೆ ಸಾಮಾನ್ಯ ಸುಖ ಜೀವನಕ್ಕೆ ಅವಶ್ಯವಿರುವ ಸಂಪಂತ್ತು ತಾನು ತನಾಗಾಗಿ ವಿನಿಯೋಗಿಸಬಹುದಾದುದಕ್ಕೆ ಒಂದು ಮಿತಿ ಎಂಬುದಿದೆ. ಅದರೆ ಮಿತಿ ಮೀರಿದ ಸಂಪತ್ತಿನ ಅಗತ್ಯ ಇಲ್ಲವಾದರೂ ಮತ್ತೂ ಬೇಕೆಂಬ ಈ ಸ್ವಾರ್ಥ .. ಇದು ಏನನ್ನು ತೋರಿಸುತ್ತದೆ? ಇವರ ಭೂಮಿದಾಹ ಎಷ್ಟೊಂದು ಅರ್ಥಹೀನ ಎಂದು ಭಾಸವಾಗುವುದಿಲ್ಲವೇ? ಯಾರನ್ನೋ ಹಿಂಸಿಸಿ ಏನೇನೋ ವಶೀಲಿ ಮಾಡಿ ಯಾವುದೋ ಹಾದಿಯಿಂದ ಗಳಿಸಿಟ್ಟ ಭೂಮಿ ಇಂತಹ ಒಂದು ನಲುಗಾಟಕ್ಕೆ ಕಾದಿರುವುದೇ?

 ಪ್ರಕೃತಿಯ ಇಂತಹ ಒಂದು ಮುನಿಸಿಗೆ ಯಾವುದೆ ಮೌಲ್ಯವನ್ನು ತರಲಾರದ ಈ ಸಂಪತ್ತು ಕಾಣಬಾರದೆ.? ಕುಸಿದು ಬಿದ್ದ ಕಟ್ಟಡಗಳು? ರಾಶಿ ರಾಶಿಯಾಗಿ ಮೂಲೆ ಸೇರಿದ ವಾಹನಗಳು ಎಲ್ಲವೂ ಒಂದು ಸಮಯದ ಬೆಲೆ ಬಾಳುವ ಸಂಪತ್ತು. ಅದನ್ನು ಗಳಿಸುವುದಕ್ಕಾಗಿ ವಿನಿಯೋಗವಾದ ದುಡಿಮೆ ಎಂತಹುದು? ಎಲ್ಲವೂ ಮೌಲ್ಯವನ್ನು ಕಳೆದು ಕೊಂಡು ತಮ್ಮ ಸತ್ವವನ್ನು ಬಹಿರಂಗ ಪಡಿಸಿದರೂ ಜ್ಞಾನೋದಯವಾಗಲಾರದು.  

ಈ ಅಸ್ಥಿರ ಬದುಕಿನ ಅರಿವಿದ್ದೂ ಈ ಬಗೆಯ ಸ್ವಾರ್ಥಿಗಳಾಗುವುದು ಸೋಜಿಗ. ಬೇಡದೆ ಇದ್ದರೂ ಕೂಡಿಸಿಡುವ ಸಂಪತ್ತು ಇಲ್ಲಿ ವಿನಿಯೋಗವಾಗಬಹುದೇ? ಭೂಮಿಯ ಕ್ಷಣ ಮುನಿಸಿಗೆ ನಲುಗಿದ ಬದುಕಿಗೆ ಆಸರೆಯಾಗಬಲ್ಲುದೇ?

ಶರೀರದಲ್ಲಿ ಜೀವ ಚೇತನ ಇರುವ ತನಕ ಅದು ಬೇಕು ಇದು ಬೇಕು ಎಂಬ ಪರಿಮಿತಿಯಿಲ್ಲದ ಬಯಕೆಗಳು. ಸ್ವಾರ್ಥ ದ್ವೇಶ ಅಸೂಯೆಯ ನಿತ್ಯ ದರ್ಶನ. ಪ್ರತಿಯೊಂದು ಜೀವವೂ ಬದುಕನ್ನು ಸವಿಸುವುದಕ್ಕಾಗಿಯೇ ಭುವಿಯಲ್ಲಿ ಜೀವಿಸಿವೆ ಎಂಬ ಸತ್ಯವನ್ನು ಅರಿಯುವುದೇ ಇಲ್ಲ.

ಪಾಠವಾಗಲಿ ಈ ದುರಂತ.ನಶಿಸಿ ಹೋಗಲಿ ದ್ವೇಶ ಅಸೂಯೆ ಸ್ವಾರ್ಥದ ದಳ್ಳುರಿ. ಬೆಳೆಯಲಿ ಜೀವ ಜೀವದ ನಡುವೆ ಸಾಮರಸ್ಯ. ನಾವು ನಿಂತ ನೆಲ ಎಂದು ಅದುರುವುದೋ ಬಲ್ಲವರಾರು. ಈ ಸತ್ಯದ ಅರಿವನ್ನು ಮನದಲ್ಲಿ ಇರಿಸಿದರೆ ಮೂಡದು ಸ್ವಾರ್ಥ ದ್ವೇಶ ಅಸೂಯೆಗಳು. ಒಂದೊಂದು ಹೆಜ್ಜೆಗೂ ಭಯ ಹುಟ್ಟಿಸುವಂತೆ ಭೂಮಿ ಮನುಷ್ಯನಿಗೆ ಪಾಠ ಕಲಿಸಿದೆ. ಅಸ್ಥಿರ ಬದುಕಿನ ಅರಿವನ್ನು ಮೂಡಿಸಿದೆ.ದ್ವೇಶ ರಹಿತ ಸ್ವಾರ್ಥ ರಹಿತ ಜಗತ್ತು ನಮ್ಮದಾಗಲಿ ಎಂಬ ಹಾರೈಕೆಯೊಂದಿಗೆ, ಸರ್ವಸ್ವವನ್ನು ಕಳೆದುಕೊಂಡ ಜಪಾನಿಗರ ಬದುಕಿಗೆ ನಾಶದ ಉರಿಯನ್ನು ಶಮನಮಾಡುವ ಚೈತನ್ಯವನ್ನು ಭಗವಂತನು ಅನುಗ್ರಹಿಸಲಿ ಮನದಾಳದಿಂದ ಬಯಸುವುದೇ ನಮ್ಮ ನಿಶ್ಚಯವಾಗಲಿ.