ಓಂ ....ಓಂ.. ..ಭಗವಂತನ ಓಂಕಾರ
ಸ್ವರೂಪದ ಈ ಆದಿ ಮಂತ್ರದ ಪೂರ್ಣ ಮಹತ್ವದ ಅರಿವಾದದ್ದು ಇತ್ತೀಚೆಗೆ. ಧ್ಯಾನ ಯೋಗದಲ್ಲಿ ಅತ್ಯಂತ
ಮಹತ್ವವಿರುವ ಈ ಮಂತ್ರ ಹಲವು ರೀತಿಯಲ್ಲಿ ಉಚ್ಚರಿಸಲ್ಪಡುತ್ತದೆ. ಸಹಜವಾಗಿ ವೇದ ಮಂತ್ರಗಳಲ್ಲಿ
ಗುರು ಉಪದೇಶವಾದಂತೆ ನೇರವಾಗಿ ಕುಳಿತು ನಾಭಿಯಿಂದ ಉಚ್ಚರಿಸಲ್ಪಡುವ ಓಂಕಾರ ಕೇವಲ ಉಚ್ಚಾರಕ್ಕೆ
ಮಾತ್ರವೇ ಸೀಮಿತವಾದಂತೆ ಈ ಮೊದಲು ಕಂಡಿತ್ತು. ಸ್ವಲ್ಪ ಮಟ್ಟಿಗೆ ಯೋಗಾಭ್ಯಾಸ ಆರಂಭಿಸಿದ ಮೇಲೆ
ಧ್ಯಾನದಲ್ಲಿ ಏಕಾಗ್ರತೆಯನ್ನು ಸಾಧಿಸಿ ಭಗವಂತನ ಧ್ಯಾನದಲ್ಲಿ ಲೀನವಾಗುವಾಗ ಓಂಕಾರ ಮಹತ್ವವನ್ನು
ಪಡೆಯುತ್ತಿತ್ತು. ಯೋಗ ಮಾಡುತ್ತಿದ್ದಂತೆ ಪ್ರತೀ ಬಾರಿಯೂ ಒಂದು ವಿಶಿಷ್ಟ ಅನುಭವಕ್ಕೆ ನಾನು
ಒಳಗಾಗುತ್ತೆದ್ದೆ. ಅದೇ ರೀತಿ ಈ ಬಾರಿಯೂ ವಿಚಿತ್ರವಾದ ಅನುಭವ Ooಓಂಕಾರ ಧ್ಯಾನದ ಮೂಲಕ ಆದಾಗ ಅದರ
ನೆನಪು ಮತ್ತೂ ಮತ್ತೂ ಮರುಕಳಿಸುತ್ತದೆ.
ಧ್ಯಾನಕ್ಕೆ ತೊಡಗುವಾಗ ಆರಂಭದಲ್ಲಿ
ಸಹಜವಾಗಿ ಪದ್ಮಾಸನದಲ್ಲಿ ನೇರವಾಗಿ ಕುಳಿತು ಒಂದೇ ಕಡೆಗೆ ಮೇಲ್ಮುಖವಾಗಿ ದಿಟ್ಟಿಸಿ ನಿಧಾನವಾಗಿ
ಕಣ್ಣು ಮುಚ್ಚಬೇಕು. ನಿಧಾನವಾದ ದೀರ್ಘವಾದ ಉಸಿರಾಟ ಕೆಲವು ಬಾರಿ ಮಾಡಿದಾಗ ಮನಸ್ಸು ಮತ್ತು ದೇಹ ಒಂದು ಸ್ಥಿರತೆಯನ್ನು ಪಡೆದು
ಕೊಳ್ಳುತ್ತದೆ. ಆ ಸ್ಥಿರತೆಯಲ್ಲೆ ಎಲ್ಲವೂ ಲೀನವಾದ ಅನುಭವ. ಬಾಹ್ಯ ಜಗತ್ತಿನ ಸದ್ಧು ಗದ್ದಲ
ಕೇಳುತ್ತಿದ್ದರೂ, ನಿಧಾನವಾಗಿ ನಮ್ಮ ಅರಿವಿನ
ವರ್ತುಲದಿಂದ ದೂರವಾಗುತ್ತದೆ ಆ ಅವ್ಯಕ್ತ ಅನುಭವವೇ ಯೊಗ. ಯೋಗವೆಂದರೆ ಒಟ್ಟು ಸೇರುವುದು. ಎಲ್ಲಾ
ಪ್ರಚೋದನೆಗಳಜತೆಗೆ ದೇಹ ಮತ್ತು ಮನಸ್ಸನ್ನು ಒಂದೇ
ಕೇಂದ್ರದಲ್ಲಿ ಒಟ್ಟು ಸೇರಿಸುವುದು.

ಕೆಲವು ಸಮಯದ ಮೊದಲು ಓರ್ವರು ಹೀಗೆ
ಚರ್ಚಿಸುವಾಗ ಹೇಳೀದ್ದರು ... “ ಪ್ರಾಣಾಯಾಮ ಅಥವಾ ಧ್ಯಾನ ಯೋಗದಲ್ಲಿ ಕ್ಯಾಲೊರಿ ಉರಿಸಲ್ಪಡುವುದಿಲ್ಲ.
ಕೇವಲ ಪ್ರಾಣಾಯಾಮ ಒಂದೇ ಸಾಕಾಗುವುದಿಲ್ಲ ಎಂದು.” ಆವಾಗ ನನಗೂ ಹೌದೇನೋ ಅನ್ನಿಸಿತ್ತು.
ಆದರೆ ಆ ಮಾತು ಇಂದು ನಿಜವಲ್ಲ ಎಂದನಿಸುತ್ತದೆ. ನಿರಂತರ ಓಂಕಾರ ಉಚ್ಚಾರದಿಂದ ನಾಭಿವಲಯದಲ್ಲಿ ಕಂಪನವು
ನಿರಂತರವಾಗಿ ಪ್ರಚೋದಿಸಲ್ಪಟ್ಟರೆ, ದೈಹಿಕವಾದ ಕ್ರಿಯೆಗಳ ಮೇಲೂ ಅದರ ಪ್ರಭಾವ ಬೀರದೆ ಇರಲಾರದು.
ನಿರಂತರವಾದ ಕಂಪನವು ಹೊಟ್ಟೆ;ಯೊಳಗಿನ ಜೀರ್ಣಾಂಗ ವಿಸರ್ಜನಾಂಗ ಮಾತ್ರವಲ್ಲದೆ ಶ್ವಾಸ ಕೋಶ
ಸೇರಿದಂತೆ ದೇಹದ ಎಲ್ಲಾ ಭಾಗದಲ್ಲೂ ಆವಶ್ಯಕ ಪ್ರಭಾವವನ್ನು ಬೀರಬಲ್ಲುದು. ಏನೂ ಅರಿವಿಲ್ಲದೆ ಇದು
ಪ್ರಾಯೋಗಿಕವಾಗಿ ಸಿದ್ಧಿಸುವಾಗ ಆಗುವ ಅನುಭವವೇ ವಿಶಿಷ್ಟವಾದುದು.
ಈ ಪ್ರಕೃತಿ ಎಷ್ಟೊಂದು ವೈವಿಧ್ಯಮಯವಾಗಿದೆ.
ಪರಮಾತ್ಮನೇ ಲೀನವಾಗಿ ಪರಮಾತ್ಮನಲ್ಲೇ ಒಂದಾಗಿ ಯಾವ
ಬಗೆಯಲ್ಲೂ ಕಾಣಬಹುದಾದ ವೈವಿಧ್ಯತೆ ಅಚ್ಚರಿಪಡುವಂತಹುದು. ಇದಕ್ಕೆ ಅತಿ ಸುಲಭದ ಮಾರ್ಗವೇ ಈ ಧ್ಯಾನ ಯೋಗ .