ಶೂನ್ಯದಿಂದ ಶೂನ್ಯದೆಡೆಗೆ
ಭೂಮಿಯಲ್ಲಿರುವ ಯಾವುದೇ ಜೀವಿಯಾದರೂ
ಉಗಮ ಮತ್ತು ಅಸ್ತಮದಲ್ಲಿ ಏಕ ಸ್ಥಿತಿಯಲ್ಲೇ ಇರುತ್ತವೆ. ಸೂರ್ಯ ಉದಯಿಸುವಾಗ ಮತ್ತು ಅಸ್ತಮಿಸುವಾಗ
ದಿಕ್ಕು ಬದಲಾದರೂ ಸ್ಥಿತಿಯಲ್ಲಿ ಬದಲಾಗಿರುವುದಿಲ್ಲ. ಭ್ರೂಣ ರೂಪದಲ್ಲಿ ಗರ್ಭಾಶಯದಲ್ಲಿ ಹುಟ್ಟು
ಪಡೆದು ಆಶ್ರಯಿಸುವಾಗ ಅಲ್ಲೂ ಕತ್ತಲೂ. ಆ ನಂತರ ಬೆಳಕಿನ ಪ್ರಪಂಚಕ್ಕೆ ಜನ್ಮವೆತ್ತಿ
ಪ್ರವೇಶಿಸುವುದು.ನಂತರ ಕೊನೆಯಲ್ಲು ಕಣ್ನು ಮುಚ್ಚಿ ಅಂಧಕಾರಕ್ಕೆ ಜಾರುವಾಗ ಪುನಃ ಕತ್ತಲಿಗೆ
ತೆವಳು ಈ ಬದುಕಲ್ಲಿ ಕತ್ತಲು ಎಂಬುದು ಯಾಕೆ ಪ್ರಾಮುಖ್ಯತೆ ಪಡೆದುಕೊಂಡಿದೆ? ಬೆಳಕನ್ನೇ ಹಪ ಹಪಿಸಿ
ಬಯಸುವ ನಾವು ಕತ್ತಲಿನ ಮಹತ್ವವನ್ನೇ ಅರಿಯದೇ ಹೋಗುತ್ತೇವೆ. ತಮ್ಮನ್ನು ತಾವು ಅರಿಯುವುದೇ
ಕತ್ತಲಲ್ಲಿ. ಮನುಷ್ಯನ ಗಾಢವಾದ ಹಲವು ವಿಷಯಗಳ ಅರಿವಾಗುವುದೂ ಕತ್ತಲಲ್ಲೇ. ಕತ್ತಲಲ್ಲೇ ಅರಿವಿನ
ಜ್ಞಾನವನ್ನು ಪಡೆದು ಬೆಳಕಿನೆಡೆಗೆ ಬರುತ್ತೇವೆ. ಕತ್ತಲಿಂದ ಬೆಳಕಿನೆಡೆಗೆ ಎಂಬುದರ ಸಂಕೇತವು
ಇದಾಗಿರಬಾರದೇಕೆ. ಆ ಕತ್ತಲನ್ನು ಮರೆಯದಂತೆ
ಮಾಡುವುದೇ ಧ್ಯಾನ.
ತನ್ನನ್ನು ತಾನು ಅರಿತುಕೊಳ್ಳುವುದೇ ಧ್ಯಾನ ಎಂದು
ಸರಳವಾಗಿ ವ್ಯಾಖ್ಯಾನಿಸಬಹುದು. ಜ್ಞಾನಿಗಳ ವಚನದಂತೆ ಧ್ಯಾನ ಎಂದರೆ ಮೂಲ ಸ್ಭಭಾವಕ್ಕೆ
ಹಿಂತಿರುಗುವುದು ಎಂದು ಅರ್ಥ. ತನ್ನನ್ನು ತಾನು ಅರಿತುಕಳ್ಳದೇ ಮೂಲ ಸ್ಭಭಾವಕ್ಕೆ ಹಿಂತಿರುಗುವುದು
ಅಸಾಧ್ಯ. ನಾನು ಏನು? ನನ್ನ ಈ ಭಾವನೆ ಏನು ? ಯೋಚಿಸುತ್ತ ಹೋದಂತೆ ಅನಂತವಾದ ಗುಹೆಯೊಳಗೆ
ಹೊಕ್ಕಂತೆ ಮತ್ತೂ ಮತ್ತು ಕತ್ತಲಿನೆಡೆಗೆ .. ಕತ್ತಲಾದರೂ.. ಕತ್ತಲ ರೂಪದಲ್ಲಿರುವ ಬೆಳಕಿನೆಡೆಗೆ.
ತನ್ನನ್ನು ತಾನು ಅರಿಯುವುದು ಕತ್ತಲಲ್ಲೆ ಎಂಬುದರ
ಸೂಚ್ಯಾರ್ಥ ಇದುವೇ. ನಿಜಕ್ಕಾದರೂ ಯೋಚಿಸಿ ಒಂದು ಕತ್ತಲ ಕೋಣೆಯೊಳಗೆ ಹೊಕ್ಕಾಗ ಅಗುವ ಅನುಭವ ಏನು?
ಅಲ್ಲಿ ತಮ್ಮ ಇರವನ್ನು ಮೊದಲು ಅರಿಯುತ್ತೇವೆ. ಧ್ಯಾನ ಎಂದರೆ ಕಣ್ಣು ಮುಚ್ಚುವುದು ಅದಕ್ಕಾಗಿಯೇ ಕಣ್ಣು ಮುಚ್ಚಿ ಅಂತರಂಗದ ಗುಹೆಯೊಳಗೆ ಹೊಕ್ಕುವುದು. ಕಣ್ಣು
ಮುಚ್ಚಿ ಆಳವಾದ ಉಸಿರನ್ನು ಎಳೆದು ಕೊಂಡಾಗಲೇ ಅಂತರಂಗದ ಅರಿವಿಗೆ ಜಾರಿ ಬಿಡುತ್ತೇವೆ. ನಿರಂತರವಾಗಿ ಇದನ್ನು ಆವರ್ತಿಸಿದಾಗ ಸ್ವಲ್ಪ ಸ್ವಲ್ಪವೇ
ನಿಧಾನವಾಗಿ ತಡವರಿಸುತ್ತಾ ಒಳಗೆ ಹೋಗುತ್ತೇವೆ. ಹಾಗೆ ತನ್ನನ್ನು ತಾನು ಅರಿತುಕೊಳ್ಳುವ ಬಗೆ.
ಇದನ್ನೇ ಇನ್ನೊಂದು ರೂಪದಲ್ಲಿ ಯೋಗ ಅಂತ ಕರೆಯುವುದು.
ಯೋಗ ಎಂದರೆ ದೈಹಿಕ ವ್ಯಾಯಾಮ ಕಸರತ್ತು
ಇನ್ನಿತರ ವಿಶೇಷ ಭಾವಗಳ ನೆನಪಾದರೆ ಅದೆಲ್ಲ ಯೋಗಕ್ಕೆ ಪೂರಕವಾಗಿ ಇರುತ್ತದೆ ಹೊರತು ಅದನ್ನೇ
ಯೋಗವೆಂದು ಅರ್ಥೈಸಿಕೊಳ್ಳುವುದು ತಪ್ಪಾಗುತ್ತದೆ. ಆದುದರಿಂದ ಯೋಗ ಎಂಬುದು ಪ್ರತಿಯೊಂದು
ಜೀವಾತ್ಮಕ್ಕೂ ಸಿದ್ಧಿಸಬಹುದಾದ ಸ್ಥಿತಿ ( ಸ್ಥಿತಿ
ಹಾಗೆಂದರೆ ಸೂಕ್ತ) . ಬಹಳ ಸರಳವಾದ ವಿಚಾರಗಳು ನಿಗೂಢವಾದ ವಿಶಾಲವಾದ ಅರ್ಥವನ್ನು
ಹೊಂದಿರುತ್ತದೆ. ಯಾರೂ ಸಾಧಿಸ ಬಹುದಾದ ಈ ಸರಳ ಸಾಧನ ಅದರ ಅನುಭವವೇ ವಿಚಿತ್ರ.
ಕಣ್ಣು ಕಿವಿ ಮೂಗು ನಾಲಿಗೆ ಮತ್ತು ಚರ್ಮ ಈ
ಪಂಚೇಂದ್ರಿಯಗಳನ್ನು ಶರೀರ ಹೊಂದಿರುವುದು ಬಾಹ್ಯ ಲೋಕದ ಸಂವಹನಕ್ಕೆ.ಆದರೆ ಈ ಇಂದ್ರಿಯಗಳ
ಸಂವಹನಕ್ಕೆ ಸಿಗದೇ ಆ ಅನುಭವದ ಅರಿವಾಗದೇ ಇರುವಂತಹ ಒಂದು ವಸ್ತುವಿದೆ.ಕಣ್ಣಿಂದ ಕಾಣಲಾಗದ, ಕಿವಿಯಿಂದ ಕೇಳಲಾಗದ, ಮೂಗಿನಿಂದ ಅಘ್ರಾಣಿಸಲಾಗದ, ನಾಲಿಗೆಯಿಂದ ಸ್ವಾದನೆ ಮಾಡಲಾಗದ ಹಾಗೆ ಚರ್ಮದ
ಸಂವೇದನೆಗೆ ನಿಲುಕದ ವಸ್ತುವಿದೆ. ಅದು ಮನಸ್ಸಿನ ಅರಿವು. ಅದನ್ನು ಗ್ರಹಿಸುವ ಸಂವಹನ ಮಾರ್ಗದ
ಇಂದ್ರಿಯ ರೂಪವೇ ಮೊದಲು ಹೇಳಿದಂತಹ ಯೋಗ. ಯೋಗಾನುಭವ ಅಂದರ ಯೋಗ ಸ್ಥಿತಿಯ ಅನುಭವ ಅದು ಯಾವ ಭೌತಿಕ
ಪ್ರಪಂಚದ ಬಾಹ್ಯ ಇಂದ್ರಿಯಗಳಿಗೆ ಸಂವೇದಿಸಲ್ಪಡುವುದಿಲ್ಲ. ಅದು ಕೇವಲ ಅನುಭವ ಮಾತ್ರ.
ಆನುಭವವನ್ನು ವಿವರಿಸುವುದಾಗಲಿ ಆ ಆತ್ಮಾನಂದದ ಭಾವ ವಿಕಾರಗಳ ನಿರ್ವಚನೆಯನ್ನು ಮಾಡುವುದು
ಅಸಾಧ್ಯ. ನಿರಾಕಾರ, ಸ್ವಭಾವ ರಹಿತ, ಸಿಹಿಯೂ ಇಲ್ಲ ಕಹಿಯೂ ಯಾವ ಸ್ವಾದವೂ ಇಲ್ಲದ, ಬಿಸಿಯೂ ಇಲ್ಲ, ತಂಪೂ ಇಲ್ಲದ ಈ ವಸ್ತುವನ್ನು ಹೀಗೆ ಎಂದು ವಿವರಿಸುವುದು
ಅಸಾಧ್ಯ. ಅದನ್ನು ಸ್ವ ಆ ಇಂದ್ರಿಯಗಳ ಮೂಲಕ ಅನುಭವಿಸಿಯೇ ಅರಿಯಬೇಕು.
ಯೋಗಾನುಭವದ ಹಲವು ವೆತ್ಯಾಸಗಳು ಅದು
ಭೌತಿಕವಾಗಿ ಹೊರಲೋಕಕ್ಕೆ ಕಾಣಬಹುದು. ಇದೆಲ್ಲ ಪ್ರಾಕೃತಿಕ ವೆತ್ಯಾಸಗಳು. ಆದರೆ ಅಂತರಂಗದ
ವೆತ್ಯಾಸ ಮಾತ್ರ ಇದಕ್ಕಿಂತ ಗಣನೀಯವಾಗಿರುತ್ತದೆ. ವ್ಯಕ್ತಿತ್ವದ ರೂಪವನ್ನೇ ಬದಲಾಯಿಸುವ
ಯೋಗಾನುಭವದ ಅನುಭವದ ಸ್ವರೂಪವನ್ನು ವಿವರಿಸುವುದು ಸಾಧ್ಯವಿಲ್ಲ. ಅದನ್ನು ಸಹಜವಾಗಿ ಅನುಭವಿಸಿ
ಮೊದಲು ಹೇಳಿದ ಇಂದ್ರಿಯದ ಸಂವಹನದ ಮೂಲಕವೆ
ತಿಳಿಯಬೇಕು. ಬಾಹ್ಯ ಪ್ರಪಂಚದಿಂದ ಈ ಪಂಚೇಂದ್ರಿಯಗಳ ಪರಿಧಿಯಿಂದ ಹೊರಬಂದು ಅದನ್ನು ಅನುಭವಿಸಬೇಕು
ಇದೆಲ್ಲ ಅನುಭವಕ್ಕೆ ಬರಲು ಯಾವ ಯಾವ ದಾರ್ಶನಿಕನಾಗುವ ಅಗತ್ಯವಿಲ್ಲ. ಯೋಗಿಯಾಗಿ ಹಠಸಾಧನೆಯ
ಅಗತ್ಯವೂ ಇಲ್ಲ. ಬಹಳ ಸರಳ ಹಾಗು ಸುಲಭದ ವಿಧಾನವೇ ಈ ಯೋಗಾನುಭವವನ್ನು ಹೊಂದುವುದು.
ಆರಂಭದಲ್ಲಿ ಏಕಾಗ್ರತೆಯ ಬಗ್ಗೆ
ಯೋಚಿಸಬಾರದು. ಅದಕ್ಕಾಗಿ ಖಿನ್ನನಾಗಿ ಅದರಿಂದ ವಿಮುಖನಾಗಬಾರದು. ಇಲ್ಲಿ ಸೋಲು ಎಂಬುದಿಲ್ಲ.
ನಿರಾಶೆ ಅನುಭವಿಸಬೇಕಾಗಿಲ್ಲ. ಅನಪೇಕ್ಷಿತ ಪ್ರೇರಣೆಯ ಕಿಂಚಿದಂಶ ಸಾಕು. ರೋಗಿಯಾದವನಿಗೆ ಆಹಾರ
ರುಚಿಸುವುದಿಲ್ಲ. ಊಟ ಎಂದಾಗ ಬೇಡ ಎನ್ನುವವನಿಗೆ ಬಲವಂತವಾಗಿ ಉಣ ಬಡಿಸುವಂತೆ. ಬಾಯಿಗೆ ರುಚಿಸದೇ
ಇದ್ದರೂ ಹೊಟ್ಟೆಗೆ ಬೇಡದೇ ಇದ್ದರೂ ಅಪ್ರಯತ್ನವಾಗಿಯಾದರೂ ಊಟ ಮಾಡಲೇಬೇಕು. ಔಷಧಿ ಸೇವಿಸುವ ಕಾರಣಕ್ಕಾಗಿಯಾದರು
ಒಂದೆರಡು ತುತ್ತು ಅನಿವಾರ್ಯ. ಆವಾಗ ನಿಧಾನವಾಗಿ
ಸ್ವಲ್ಪ ಸ್ವಲ್ಪವಾಗಿ ಬೇಡದೆ ಇದ್ದ ಆಹಾರವನ್ನು ಸೇವಿಸ ಬೇಕು. ಕ್ರಮೇಣ ತಿನ್ನಬೇಕೆಂಬ ಇಚ್ಚಾಶಕ್ತಿಯೇ
ಬೆಳೆದುಬಿಡುತ್ತದೆ. ಇದರಲ್ಲೂ ಹಾಗೆ ನಿಧಾನವಾಗಿ ಒಂದೊಂದೇ ಹೆಜ್ಜೆಯ ಕಾಲುಭಾಗವಾದರೂ ಮುಂದೆ ಇಡುವ
ಪ್ರಯತ್ನ ಮಾಡಬೇಕು. ಹಸಿದ ಹೊಟ್ಟೆಗೆ ಆಹಾರವನ್ನು ಯಾವ ಮುತುವರ್ಜಿಯಿಂದ ತಯಾರಿಸಿ ದಿನ ಮೂರು
ಹೊತ್ತು ಉಣ್ಣುತ್ತೇವೆಯೋ ಆ ಇಚ್ಚಾ ಶಕ್ತಿಯನ್ನೇ ಇಲ್ಲಿ ಉಪಯೋಗಿಸುವುದು. ಬೆಳಗಿನ ಉಪಾಹಾರದಂತೆ
ಮಧ್ಯಾಹ್ನದ ಊಟದಂತೆ ದಿನದ ಒಂದು ಭಾಗವಾಗಿ ಅದನ್ನು ಬಳಕೆ ತರಬೇಕು. ನಿರಾಸಕ್ತಿಯಲ್ಲೂ ಕಿಂಚಿತ್
ಆಸಕ್ತಿಯನ್ನು ತಾಳಿ ಸಾಧನೆಯತ್ತ ಮುಖಮಾಡಬೇಕು.
ಇಂದು ಆಗದಿದ್ದದ್ದಕ್ಕೆ ನಾಳೆ ಪ್ರಯತ್ನ
ಮಾಡಬೇಕು. ಆ ನಿರೀಕ್ಷೆಯನ್ನು ಇಟ್ಟುಕೊಂಡು ಪರಿಣಾಮದತ್ತ ಗಮನ ಹರಿಸಬಾರದು. ಇಂದು ಇಟ್ಟ ಕಾಲು
ಭಾಗದ ಹೆಜ್ಜೆ ಏನಿದೇಯೋ ಅದೇ ಹೆಜ್ಜೆ ಮಹತ್ವವಾಗಿರುತ್ತದೆ. ಯಾಕೆಂದರೆ ನಿಮ್ಮಪ್ರಯತ್ನ ದಲ್ಲಿ ಇಂದು ಇಟ್ಟ ಒಂದು ಹೆಜ್ಜೆ
ಮುಂದೆ ನಿಮ್ಮ ಯತ್ನವಿಲ್ಲದೇ ನಿಮ್ಮನ್ನು ಹತ್ತಾರು ಹೆಜ್ಜೆಯಷ್ಟನ್ನು ಎಳೆದು ಕೊಂಡು ಹೋಗುತ್ತದೆ.
ಇಲ್ಲಿ ಕೇವಲ ನಿಷ್ಟೆ ಮತ್ತು ಪ್ರಾಮಾಣಿಕತೆ ಮಾತ್ರ ಬೇಕಾಗಿರುವುದು. ಇಂದು ಮೊದಲು ಹೇಳಿದ ರೋಗಿಯ
ಭಾವದಲ್ಲಿ ಔದಾಸಿನ್ಯದಿಂದ ಹತ್ತು ನಿಮಿಷ ಪ್ರಾಣಾಯಾಮ ಮಾಡಿದರೆ ಮುಂದೆ ನೀವು ಊಹಿಸದೇ ಇದ್ದ ಫಲ
ನಿಮ್ಮದಾಗುತ್ತದೆ. ಒಂದು ಹೆಜ್ಜೆ ಮುಂದೆ ಇರಿಸಿದ್ದೀರಿ ಎಂದರೆ ಆ ಯೋಗಾನುಭವ ನಿಮ್ಮ
ಹತ್ತಿರದಲ್ಲಿ ಇದೆ ಎಂದೆ ಅರ್ಥ.
ಸ್ವಾನುಭವ ಹೇಳುವುದಾದರೆ ಮೊದಲ ದಿನ ನನ್ನ ಅನುಭವ ದೊಡ್ಡ ಶೂನ್ಯವಾಗಿ
ಭಾಸವಾಗಿತ್ತು. ಹಾಗಾಗಿ ಒಂದು ರೀತಿಯ ಔದಾಸಿನ್ಯ ಹಲವು ದಿನ ಜಡವಾಗಿಸಿದ್ದರೂ ಯಾವುದೋ
ಪ್ರೇರಣೆಯಿಲ್ಲ ಅನೈಚ್ಚಿಕ ಕ್ರಿಯೆಯಂತೆ ನಡೆದು ಕೊಂಡು ಹೋಯಿತು. ಎಲ್ಲಿವರೆಗೆ ಎಂದರೆ ಆ ಒಂದು
ದಿನ.ದೇಹದೊಳಗೆ ಮತ್ತು ಉಸಿರಾಟದ ರೀತಿಯಲ್ಲಿ ಆದ ಸ್ವಲ್ಪ ಬಹಳ ಸೂಕ್ಷ ಬದಲಾವಣೆಯೇ ಜಡವಾಗಿದ್ದ
ಮನಸ್ಸನ್ನು ಮೆಲುವಾಗಿ ತಟ್ಟಿ ಎಬ್ಬಿಸಿಬಿಟ್ಟಿತು. ಮೊದಲ ಶೂನ್ಯತೆ ಏನಿದೆಯೊ ಅದಕ್ಕಿಂತ ತೀರ
ಭಿನ್ನವಾದ ಶೂನ್ಯತೆಯ ದರ್ಶನಕ್ಕೆ ಮುಖ ಮಾಡಿದಂತೆ ಭಾಸವಾಗುತ್ತದೆ. ಒಂದು ಶೂನ್ಯದಿಂದ ಇನ್ನೊಂದು
ಶೂನ್ಯೆಕ್ಕ. ಒಂದುರೀತಿಯ ಶೂನ್ಯಾಂತರ.
ಹೊರ
ಜಗತ್ತಿನ ಸಂವೇದನೆಯನ್ನು ಅನುಭವಿಸುವ ಪಂಚೇದ್ರಿಯದ ಅನುಭವವನ್ನು ಬದಿಗಿರಿಸಿ ಆರಂಭದಲ್ಲಿ ಬರೀ ಕತ್ತಲಲ್ಲೆ ತಡಕಾಡುವ ಅನುಭವವಾದರು
ನಂತರ ಸಹಜವಾಗಿ ಆ ಕತ್ತಲಲ್ಲೂ ನಮ್ಮ ಗುರಿಯ ಅರಿವು ನಮಗಾಗುತ್ತದೆ. ಮತ್ತು ನಮ್ಮ ಗಮ್ಯ
ಏನು? ಅದು ಎಲ್ಲಿದೆ? ಎಂಬುದನ್ನು ನಾವು
ಕತ್ತಲಲ್ಲೇ ಬಹಳ ಸುಲಭದಲ್ಲಿ ಅಭ್ಯಾಸಬಲದಂತೆ ಹೊಂದಿಕೊಳ್ಳುತ್ತೇವೆ. ಇದುವೇ ಯೋಗಾನುಭವ. ಕತ್ತಲಲ್ಲೆ
ಇದನ್ನು ಅರಿತುಕೊಳ್ಳುವುದು. ಅದಕ್ಕೆ ನಿದರ್ಶನವೆಂಬಂತೆ ಧ್ಯಾನದಿಂದ ಅಂತರ್ಮುಖಿಯಾಗಲು
ಕತ್ತಲನ್ನು ನಿರ್ಮಿಸುವುದಕ್ಕಾಗಿ ಕಣ್ನನ್ನು ಮುಚ್ಚಿಕೊಳ್ಳುತ್ತೇವೆ. ಕಣ್ಣು ದೇಹದ ಮಹಾದ್ವಾರ
ಇದ್ದಂತೆ. ಕಣ್ಣು ಮುಚ್ಚಿ ಒಂದು ಸಲ ಕತ್ತಲ ಅನುಭವಾವಾಯಿತೋ ನಂತರ ಒಂದೊಂದೇ ದ್ವಾರಗಳು ಅಂದರೆ
ಇತರ ಇಂದ್ರಿಯಗಳು ಮುಚ್ಚಿಕೊಳ್ಳುತ್ತವೆ. ವಿಚಿತ್ರವೆಂದರೆ ಇದಕ್ಕೆ ಇಛ್ಚಾಶಕ್ತಿಯ ಕಿಂಚಿದಂಶ
ಸಾಕು. ಶೂನ್ಯದಿಂದ ಶೂನ್ಯದೆಡೆಗೆ ಹೆಜ್ಜೆ ಇಡೋಣ ಅಲ್ಲವೇ?