Monday, December 3, 2012

ಯೋಗಕ್ಷೇಮ “ಯೋಗಃ ಕರ್ಮಸು ಕೌಶಲಂ"



ಜ್ಞಾನಿಗಳು ಹೇಳುವ ಮಾತು “ಯೋಗ ಅಂದರೆ ನಮ್ಮಲ್ಲಿಲ್ಲದ ಒಳ್ಳೆಯದನ್ನು ಹೊಂದುವಂತದ್ದು. ಕ್ಷೇಮ ಎಂದರೆ ಅದನ್ನು ಸರಂಕ್ಷಿಸಿಡುವುದು.”  ನಮಗಿಷ್ಟವಾದ ಯಾವುದೇ ವಸ್ತುವಾದರೂ ಅದನ್ನು ಬಹಳ ಆಸಕ್ತಿಯಿಂದ ಹೊಂದಿಸುತ್ತೇವೆ. ಮತ್ತು ಅದನ್ನು ಆಸಕ್ತಿಯಿಂದ ಸಂರಕ್ಷಿಸುತ್ತೇವೆ. ಅದನ್ನು ಪಡೆದುಕೊಳ್ಳುವ ಸಾಧಿಸುವ ಪರಿ ವಿಭಿನ್ನವಾಗಿರುತ್ತದೆ. ನಂತರ ಅದನ್ನು ಸಂರಕ್ಷಿಸುವ ರೀತಿ ಕೂಡ ವಿಭಿನ್ನ. ಪ್ರಾಣಾಯಮ, ಆಸನ ಇವು ಯೋಗವನ್ನು ಸಿದ್ಧಿಸುವ ದಾರಿಯಾಗಿ ಅದನ್ನು ಹೊಂದಿದ ನಂತರ ನಿಶ್ಚಲ ನಿರ್ವಿಕಾರ ಸ್ಥಿರವಾದ ಸ್ಥಿತಿಗೆ ಯೋಗ ಸ್ಥಿತಿ ಅಂತಲೂ ಹೇಳಬಹುದು. ಯೋಗ ಇದನ್ನುಸಿದ್ಧಿಸಿದ ಮೇಲೆ ಕ್ಷೇಮದ ಬಗ್ಗೆ ಯೋಚಿಸುವ ಆವಶ್ಯಕತೆಯಿಲ್ಲ ಅನಿಸುತ್ತದೆ. ಯಾಕೆಂದರೆ ಆಸ್ಥಿತಿಯೇ ಎಲ್ಲವನ್ನು ರಕ್ಷಿಸುತ್ತದೆ. ಮತ್ತೆ ಬೇರೆ ಸಂರಕ್ಷಣೆ ಯಾಕೆ ಬೇಕು?

ಈ ಯೋಗ ಗಮ್ಯ ಮಾರ್ಗದಲ್ಲಿ ಅಂತ್ಯವಿಲ್ಲದ ಪಯಣ. ಪ್ರತಿಹಂತವು ಹೊಸ ಒಳಿತನ್ನು ಹೊಂದುವ ಯೋಗ. “ಯೋಗಃ ಕರ್ಮಸು ಕೌಶಲಂ” ಎಂದು ಶ್ರೀಕೃಷ್ಣ ಪರಮಾತ್ಮ ಹೇಳಿದ ಮಾತು. ಒಳ್ಳೆಯದನ್ನು ಪಡೆಯುವ ಕೆಲಸದಲ್ಲಿ ಅದು ಯಾವುದೇ ಆದರೂ ಅದನ್ನು ಪ್ರಾಮಾಣಿಕತೆಯಿಂದ ಮತ್ತು ಶ್ರದ್ದೆಯಿಂದ ಮಾಡು. ಆಗ ಯೋಗ ಸಿದ್ಧಿಯಾಗುತ್ತದೆ. ಯೋಗ ಎಂದರೆ ಕೇವಲ ಪ್ರಾಣಾಯಾಮ ಆಸನಗಳು ಅಲ್ಲ. ಅದೊಂದು ಜೀವನ ಶೈಲಿ.  ಕಲಾತ್ಮಕ ಸರಳ ಬದುಕಿನ ಶೈಲಿ. ಅದನ್ನು ಗಮಿಸುವ ಮಾರ್ಗವೇ ಈ ಪ್ರಾಣಾಯಾಮ ಆಸನ ಇತ್ಯಾದಿ.

ಒಳ್ಳೆಯ ಉದ್ದೇಶ ಸಾಧನೆಗೆ ಹಲವನ್ನು ನಾವು ಮಾಡಬಹುದು. ಉತ್ತಮ ದುಡಿಮೆಯನ್ನು ಮಾಡಬಹುದು. ಶ್ರಧ್ಧೆಯಿಂದ ವಿದ್ಯೆಯನ್ನು ಕಲಿಯಬಹುದು. ವಿದ್ಯಾದಾನ ಮೊದಲಾದವನ್ನು ನಿಸ್ವಾರ್ಥದಿಂದ ಮಾಡಬಹುದು. ಆದರೆ ಪ್ರತಿಫಲ ಒಳ್ಳೆಯದೇ ಸಿಗುವುದೆಂದು ಭರವಸೆಯಿಲ್ಲ. ಒಳ್ಳೆಯದು ಪಡೆಯಬಹುದು ಎಂಬ ಆಶಯ ಮಾತ್ರ. ಆದರೆ ಪ್ರಾಣಾಯಾಮ, ಆಸನ ಎಂಬ ಯೊಗದೀಕ್ಷೆಯ ಸಾಧನೆ ಮಾತ್ರ ಒಳ್ಳೆಯದನ್ನೆ ತರುತ್ತದೆ. ಇದರಲ್ಲಿ ಕಲ್ಮಶವಿಲ್ಲ.

ಬಹಳಷ್ಟು ಸಾಧನೆ ಮಾಡಿ ದೊಡ್ಡ ಕಲಾವಿದ ಎನ್ನಿಸಿಕೊಳ್ಳಬಹುದು. ಕಲಾವಿದನೊಳಗಿನ ಕಲೆಯನ್ನೂ,  ಕಲಿತ ವಿದ್ಯೆಯನ್ನೂ ಯಾರು ಅಪಹರಿಸಲಾರರು ಇದು ನಿಜ. ಆದರೆ ಅದರ ಬಗ್ಗೆ ಮತ್ಸರವನ್ನು ತಾಳಲಾರರು ಎಂಬುದಕ್ಕೆ ಭರವಸೆ ಇಲ್ಲ. ನಮ್ಮ ವಿದ್ಯೆಗೆ ಅಥವ ಕಲೆಗೆ ನಾವು ಅಭಿಮಾನ ಪಟ್ಟಂತೆ ಇನ್ನೊಬ್ಬ ಮತ್ಸರಿಸುವ ಸಂಭವವೂ ಇದೆ. ಆದರೆ ಯೋಗ ಮಾರ್ಗದಲ್ಲಿ ಗಳಿಸಿದ ಉತ್ತಮ ಜೀವನ ಶೈಲಿಯಾಗಲೀ ಅಥವಾ ರೋಗ ರಹಿತ ಶರೀರ ಪ್ರಕೃತಿಗೆ ಯಾರೂ ಮತ್ಸರಿಸುವ ಹಾಗಿಲ್ಲ. ಯಾಕೆಂದರೆ ಇದು ಅಂತರಂಗದ ಅನುಭವ. ನಾನು ನಿರೋಗಿಯಾಗಿದ್ದೇನೆ!ಯಾವುದೇ ರೋಗ ನನ್ನಲ್ಲಿಲ್ಲ!! ವಯೋಸಹಜ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಸ್ಥಿರವಾಗಿ ಪಾಲನೆ ಮಾಡಿದ್ದೇನೆ.!! ಹೀಗೆ ಅನ್ನಿಸಿಕೊಳ್ಳುವುದು ಅಂತರಂಗದ ಭಾವ. ಇದು ಪ್ರಕಾಶಕ್ಕೆ ವ್ಯಕ್ತಪಡಿಸಬೇಕಾಗಿಯೂ ಇಲ್ಲ.  

ಅರೋಗ್ಯ ಎನ್ನುವುದು ಅರೋಗ ಸ್ಥಿತಿಯನ್ನು ಸೂಚಿಸುತ್ತದೆ. ರೋಗ ರಹಿತ ಸ್ಥಿತಿ. ಸಮತೋಲನ ಇಲ್ಲದೇ ರೋಗ ಆವರಿಸುವಾಗ ವೈದ್ಯರು ಹೇಳುತ್ತಾರೆ... ಬೆಳಗ್ಗೆ ಎದು ವಾಕಿಂಗ್ ಜಾಗಿಂಗ್ ಕಡ್ಡಾಯ. ವ್ಯಾಯಾಮ ಮಾಡಿ ಇತ್ಯಾದಿ ಇತ್ಯಾದಿ. ರೋಗಕ್ಕೆ ಭಯಪಟ್ಟು,  ದುರ್ವಿಧಿಯನ್ನು ಹಳಿಯುತ್ತಾ ಮುಂಜಾನೆ ಬೇಗನೆ ಎದ್ದು ವಾಕಿಂಗ್ ಜಾಗಿಂಗ್ ವ್ಯಾಯಾಮ ಇದು ಹೀಗೆ ಎಂದು ನಿಯಮದಲ್ಲಿ ಇರುವುದು ಬಹಳ ಕಡಿಮೆ. ಬೆಳಕು ಸರಿದರೂ ಚಳಿಗೆ ಮುದುರಿ ಬೆಚ್ಚಗೆ ಮಲಗಿದವರ ಆರೋಗ್ಯದ ಬಗ್ಗೆ ಕರುಬುತ್ತೇವೆ. ಛೇ ಯಾಕಾದರೂ ರೋಗ ಬಂತೋ ಎಂದು ಮರುಗುತ್ತೇವೆ. ಬೇಕೋ ಬೇಡವೋ ಅಂತೂ ಬೆಳಗಿನ ಧಾವಂತ ಮುಗಿಸಿಬಿಟ್ಟು ಸುಸ್ತಾಗಿ ಕುಳಿತುಬಿಡುತ್ತೇವೆ. ನಿರಾಳತೆಯ ಸುಖ ಅಪರೂಪ.  ಇದಾವ ಭಾವವೂ ಇಲ್ಲದ ಯೋಗಸ್ಥಿತಿ ಮುಂಜಾನೆ ಸರಿದೇ ಬಿಟ್ಟಿತಲ್ಲ.  ಇನ್ನು ನಾಳೆಯ ಸೂರ್ಯೋದಯಕ್ಕೆ ಕಾಯಕಬೇಕು ಎಂಬ ಭಾವವನ್ನು ತರುತ್ತದೆ. ವಾಕಿಂಗ್ ಜಾಗಿಂಗ್ ವ್ಯಾಯಾಮದ ದೇಹದಂಡನೆಯಿಂದ ದೇಹವೇನೋ ದಂಡಿಸಲ್ಪಡುತ್ತದೆ. ಮನಸ್ಸಿನ ಮೂಲೆಯ ಕೊರಗು ಮಾತ್ರ ಹಾಗೆ ಉಳಿದುಬಿಡುತ್ತದೆ. ಗಮನಿಸಿ... ಬರೀ ದೇಹ ದಂಡನೆ. ಮನುಷ್ಯನ ಹಿಂಸಾ ಪ್ರವೃತ್ತಿ ಇಲ್ಲಿಯೂ ವ್ಯಕ್ತವಾಗುತ್ತದೆ. ನಮ್ಮ ದೇಹ ನಾವೇ ದಂಡಿಸಿ ನಮ್ಮ ಆತ್ಮಕ್ಕೆ ಉಗ್ರತೆಯ ದರ್ಶನ ನಮಗರಿವಿಲ್ಲದೇ ಮಾಡುತ್ತೇವೆ. ಇದು ಒಂದು ರೀತಿಯ ಹಿಂಸಾ ತೃಪ್ತಿ. ಸ್ಯಾಡಿಸ್ಟ್ ಚಿಂತನೆಯಲ್ಲ ಎಂದು ಹೇಗೆ ಹೇಳುವುದು? ತಾಯಿ ತಂದೆಯ ಶುಕ್ಲ ಶೋಣಿತ ಸಂಯೋಗ ರೂಪದಲ್ಲಿ ಅತ್ಮದೊಂದಿಗೆ ಭೂಮಿಗೆ ಇಳಿದ ದೇಹವಿದು. ತನ್ನ ಎದೆಯ ರಕ್ತವನ್ನು ಅಮೃತವಾಗಿಸಿ ತಾಯಿ ಈ ದೇಹವನ್ನು ಬೆಳೆಸುತ್ತಾಳೆ.  ಒಂದೊಂದೇ ಬೆಳವಣಿಗೆಯಲ್ಲಿ ಸಂತಸ ಪಡುತ್ತಾಳೆ.. ಆ ದೇಹವನ್ನು ನಾವು ವಾಕಿಂಗ್ ಜಾಗಿಂಗ್ ರೂಪದಲ್ಲಿ ಹಿಂಸಿಸುತ್ತೇವೆ. ಎಂತಹ ಮನೋಭಾವ ಇದು?  ಯೋಗಸ್ಥಿತಿಯಲ್ಲಿ ದೇಹ ದಂಡನೆಯಿಲ್ಲ. ವ್ಯಗ್ರತೆಯ ರೂಪವಿಲ್ಲ.  ಶಾಂತ ಚಿತ್ತದ ನಿರಾಳತೆಯ ಸಹಕಾರ ಮಾತ್ರ. ಮುಂಜಾನೆ ಏಳಬೇಕಲ್ಲ ಎಂಬ ಔದಾಸಿನ್ಯವಿಲ್ಲ. ಮೊದಲ ದಿನವೇ ನಾಳಿನ ಮುಂಜಾನೆಯ ರೋಮಾಂಚನಕ್ಕೆ ಮನಸ್ಸು ಹಾತೊರೆಯುತ್ತದೆ.  ಮುಸುಕೆಳೆದು ಮುದುರಿ ಮಲಗಿದವರತ್ತ ಅನುಕಂಪ ತೋರಿ  ಗೆಲುವಿನ ನಗೆ ಬೀರುತ್ತೇವೆ.


ನಮ್ಮ ಸಂಗಾತಿಗೆ ಮತ್ತು ಮಕ್ಕಳಿಗೆ ನಾವು ನೀಡುವ ದೊಡ್ದ ಉಡುಗೊರೆ ಎಂದರೆ ನಾವು ಸ್ವತಃ ಆರೋಗ್ಯವಾಗಿರುವುದು. ನಮ್ಮ ಮೇಲಿನ ಪ್ರೀತಿ ಮಮತೆಗೆ ನಮ್ಮನ್ನು ಸಹಿಸುವಂತಾಗಬಾರದು. ಮನೆಯಲ್ಲಿ ಕುಟುಂಬದಲ್ಲಿ ನಿಟ್ಟುಸಿರಿನ ದುಮ್ಮಾನದ ಬಿಗುವಿರದೆ ನಮ್ಮ ಇರವೆಂಬುದು ಚಿತೋಹಾರಿಯ ಕ್ಷಣಗಳಾಗಬೇಕು. ಯೋಗ ಸ್ಥಿತಿ ಇದನ್ನು ಸಾಧ್ಯವಾಗಿಸುತ್ತದೆ


ಯೋಗ ಸ್ಥಿತಿಯ ಅಂತರಂಗದ ಭಾವ ನಮ್ಮ ನಡೆ ನುಡಿಯಲ್ಲಿ ಅಭಿವ್ಯಕ್ತಿಸುತ್ತದೆ. ಹಸಿವಾದಾಗ ಉಣ್ಣುತ್ತೇವೆ. ಉಂಡನಂತರ ಹೊಟ್ಟೆ ತುಂಬಿದ ಸುಖ ಅನುಭವಕ್ಕೆ ಬರುತ್ತದೆ. ತಿಳಿದವರು ಹೇಳಿದ್ದಾರೆ...ಯಾವನೇ  ಆದರೂ ಯಾವುದನ್ನು ಕೊಟ್ಟರೂ ಸಾಕು ಎನ್ನದೇ ಇದ್ದರೆ ಅವನಿಗೆ ತಿನ್ನುವಷ್ಟು ಹೊಟ್ಟೆ ತುಂಬುವಷ್ಟು ಆಹಾರಕೊಡು. ಹೊಟ್ಟೆ ತುಂಬಿದ ಮೇಲೆ ಬೇಕು ಎಂದು ತಿನ್ನುವುದು ಸಾಧ್ಯವಿಲ್ಲದಾಗಿ  “ ಸಾಕು.. “ ಎನ್ನಲೇಬೇಕಲ್ಲವೇ? ಮನುಷ್ಯ ಸಾಕು ಎನ್ನುವುದು ಒಂದು ಊಟ ಹಾಕಿದಾಗ ಇಲ್ಲವೇ ಹೊಡೆತ ತಿನ್ನುವಾಗ. ಹಾಗೇನೇ ರತಿವಿಲಾಸದಲಿ ಮೌರ್ಧನ್ಯತೆಗೆ ತಲುಪಿ ತೃಪ್ತರಾಗಿ ಸಾಕು ಎನ್ನಬಹುದು.  ಇದೆಲ್ಲವೂ ಮನಸ್ಸು ದೇಹದ ಅನಪೇಕ್ಷಿತ ವರ್ತನೆ. ಯೋಗ ಸ್ಥಿತಿಯಲ್ಲಿ ಸಾಕು ಎಂಬ ಭಾವ ಬರುವುದಿಲ್ಲ ಹಾಗೆಂದು ಅತೃಪ್ತಿಯ ಅಸಮಧಾನವೂ ಸುಳಿಯುವುದಿಲ್ಲ. ಸಾಕು ಬೇಕುಗಳು ಒಟ್ಟಾಗಿ ಇರುವ ಚರಮ ಸ್ಥಿತಿ ಇದೊಂದೇ. ಅದಕ್ಕೆ ಇದು ನಿರ್ವಿಕಾರ ಚಿತ್ತದೆ ಸ್ಥಿರವಾದ ಸ್ಥಿತಿ. ಯೋಗ ಸ್ಥಿತಿ.