ನನ್ನ ಬಾಲ್ಯದ ಒಂದು ಘಟನೆ. ನಮ್ಮ ಊರಿನ ದೊಡ್ಡ ಮನೆಯಲ್ಲಿ ಬಾವಿಯೊಂದನ್ನು ತೊಡುವ ಬಗ್ಗೆ ಹಿರಿಯರು ನಿರ್ಧರಿಸಿಬಿಟ್ಟರು. ಇನ್ನೇನು ನೀರು ತೋರಿಸುವುದಕ್ಕೊಸ್ಕರ ಒಬ್ಬರು ಬಂದೇ ಬಿಟ್ಟು ಕೈಯಲ್ಲಿ ಬೆತ್ತವೊಂದನ್ನು ಹಿಡಿದುಕೊಂಡು ಕೈ ಅತ್ತಿತ್ತ ತಿರುಗಿಸುತ್ತಾ ಗುಡ್ಡೆ ಎಲ್ಲ ತಿರುಗಿ ತಿರುಗಿ ಪಾದೆ ಕಲ್ಲಿನ ಮೇಲೆ ನಿಂತು ಅಲ್ಲೇ ಗುರುತು ಮಾಡಿಬಿಡುವಂತೆ ಹೇಳಿದರು. ಕರ್ರಗಿನ ಪಾದೆ ಆ ಬೇಸಿಗೆ ಕಾಲದ ಬಿಸಿಲಿಗೆ ಕಾದು ಬರಿ ಕಾಲಲ್ಲಿ ನಿಲ್ಲುವ ಹಾಗಿರಲಿಲ್ಲ. ಸುಡುತ್ತಿತ್ತು. ನಮಗೆಲ್ಲ ಅಶ್ಚರ್ಯ. ಇಲ್ಲಿ ಈ ಕಲ್ಲಿನಲ್ಲಿ ನೀರು ಸಿಗುವುದೇ? ಮಣ್ನಿನ ಅಂಶ ಲವಲೇಶವೂ ಇಲ್ಲದ ಈ ಬರಡು ಜಾಗದಲ್ಲಿ ನೀರು ಸಿಗಬಹುದೇ? ಆಶ್ಚರ್ಯ. ನಮಗೆಲ್ಲಿ ಅರಿವಿತ್ತು. ಪ್ರಕೃತಿ ಇಂತಹ ಹಲವು ವಿಸ್ಮಯ ನಿಗೂಢತೆಗಳನ್ನು ಬಸಿರಲ್ಲಿರಿಸಿದೆ ಎಂದು.
ಬಾವಿ ತೋಡುವ ಕೆಲಸ ಆರಂಭವಾಯಿತು. ಅಲ್ಲಿ ನೆಲವನ್ನು ಸಾಕಷ್ಟು ಸಜ್ಜುಗೊಳಿಸಿ ವೃತ್ತಾಕಾರದಲ್ಲಿ ಆಕಾರವನ್ನು ಒಂದೆರಡು ಆಳುಗಳು ಅಗೆಯುವುದಕ್ಕೆ ಆರಂಭಿಸಿದರು.ನಾಲ್ಕುಸಲ ಗುದ್ದಲಿ ಎತ್ತಿ ಅಗೆದಾಗ ಸಣ್ಣ ಚಿಪ್ಪು ಹಾರಿ ಬರುತ್ತಿತ್ತು ಇಂತಹ ಕಠಿಣ ಸ್ಥಳದಲ್ಲಿ ನೀರು ಸಿಗಬಹುದೇ ನಮಗೆಲ್ಲ ಆಶ್ಚರ್ಯವಾಗುತ್ತಿತ್ತು. ಪ್ರಕೃತಿಯ ವಿಸ್ಮಯಕ್ಕೆ ಕುತೂಹಲವಾಗುತ್ತಿತ್ತು. ದಿನವಿಡೀ ಅಗೆದರೂ ಅರ್ಧ ಅಡಿಗಿಂತ ಹೆಚ್ಚು ಅಗೆಯಲು ಸಾಧ್ಯವಾಗದ ಸ್ಥಳದಲ್ಲಿ ನೀರಿದೆ ! ಎಂತಹ ವಿಸ್ಮಯ. ದಿನ ಕಳೆದಂತೆ ಕಲ್ಲಿನಂಶ ಕಡಿಮೆಯಾಗಿ ಕಲ್ಲು ಮೆತ್ತಗಾಗುವ ಭಾಸವಾಗುತ್ತಿತ್ತು.. ಕಲ್ಲು ಕರಗಿ ಮಣ್ಣಾದಂತೆ ನಿಧಾನವಾಗಿ ಭೂಗರ್ಭದೊಳಗೆ ನೀರಿನ ಗಮ್ಯದೆಡೆಗಿನ ಪಯಣ ಸಾಗುವಂತಿತ್ತು. ಆರಂಭದಲ್ಲಿ ಇರದಿದ್ದ ವಿಶ್ವಾಸ, ವಿಸ್ಮಯ ವಾಸ್ತವದಲ್ಲಿ ಸತ್ಯವಾಗುವ ಭಾವನೆಯನ್ನು ಮೂಡಿಸಿತು. ಕಲ್ಲು ಕರಗಿ ಮಣ್ಣಾಗಿ ಮುಂದೊಂದು ದಿನ ಅಂತರಂಗ ಗಂಗೆಯ ದರ್ಶನವಾದಾಗ ಸಂತಸಕ್ಕೆ ಪಾರವಿರಲಿಲ್ಲ
ಪ್ರಕೃತಿ ಕಲಿಸುವ ಇಂತಹ ನಿದರ್ಶನ ಪಾಠಗಳನ್ನು ಗಮನಿಸುವ ಪ್ರಜ್ಞೆ ನಮ್ಮಲ್ಲಿರಬೇಕು. ಐದಾರು ವರ್ಷದ ಹಿಂದೆ ಯೋಗಾಭ್ಯಾಸಕ್ಕೆ ತೊಡಗಿಕೊಂಡಾಗ ದೇಹಕ್ಕೆ ಅಂಟಿಕೊಂಡ ರೋಗಗಳಿಂದ ಮೋಕ್ಷಸಾಧನೆಯಾಗಬಹುದು ಎಂಬ ನೀರೀಕ್ಷೆಯಿರಲಿಲ್ಲ. ಬರಡು ಬಂಡೆಯಂತಿದ್ದ ನೆಲದಲ್ಲಿ ಗಂಗೆ ದರ್ಶನವಾದೀತೇ ಅನುಮಾನ ಗಾಢವಾಗಿತ್ತು. ಅದರೆ ರೋಗ ದೇಹಕ್ಕೆಂದೇನು ಮನಸ್ಸಿಗೂ ಅಂಟಿಕೊಂಡಿತ್ತು ಎಂದು ಈಗ ಅನ್ನಿಸತೊಡಗಿದೆ. ಯೋಗಾಭ್ಯಸದ ವೈಶಿಷ್ಟ್ಯವೇ ಅಂತಹುದು. ಆರಂಭದ ಒಂದು ತಿಂಗಳು ಉತ್ಸಾಹವಿಲ್ಲದ ಯಾಂತ್ರಿಕ ಯೋಗಾಭ್ಯಾಸವಾದರೆ ಆನಂತರ ಕೆಲವು ದಿನ ತುಸು ಉತ್ಸಾಹ ಮೊಳೆಯಿತೆನ್ನಬಹುದು. ಮನೆಯ ಒಂದು ಕೋಣೆಯನ್ನು ಶುಭ್ರವಾಗಿ ಸಜ್ಜಾಗಿಸುತ್ತೀರಿ, ಕೋಣೆಯ ಇಂಚಿಚಿಂಚು ಕಸತೆಗೆದು ಧೂಳು ಒರೆಸಿ ಗುಡಿಸಿ ಶುಭ್ರವಾಗಿ ಕಾಣುವಂತೆ ಮಾಡಿದ ಮೇಲೆ ಅಲ್ಲಿ ಒಂದು ಕಸ ಅಥವಾ ಕೊಳೆಯುಂಟಾದರೆ ಮನಸ್ಸಿಗೆ ಆ ಕಸವನ್ನು ಅಥವಾ ಕಲ್ಮಶವನ್ನು ತೆಗೆದೆಸೆವ ಪ್ರೇರಣೆಯುಂಟಾಗುತ್ತದೆ. ಆ ಕೊಳಕು ಕೋಣೆಯ ಯಾವುದೇ ಮೂಲೆಯಲ್ಲಿದ್ದರೂ ಏನೋ ಒಂದು ಕಿರಿ ಕಿರಯನ್ನು ನಾವು ಅನುಭವಿಸಿ ಅದನ್ನು ತೆಗೆದು ಶುಭ್ರ ಮಾಡಿದಾಗ ಒಂದು ರೀತಿಯ ನಿರಾಳತೆ ಮನಸ್ಸಿಗೆ ಉಂಟಾಗುತ್ತದೆ. ಆ ಕಸ ಸ್ವಲ್ಪವೇ ಆದರೂ ಕೊಳಕಿನ ಕಲೆ ಚಿಕ್ಕದೇ ಆದರೂ ಅದಿರುವವರೆಗೆ ಮನಸ್ಸು ಒಂದು ರೀತಿಯ ಅಸಹನೆಯನ್ನು ಅನುಭವಿಸುತ್ತದೆ. ಯೋಗಾಭ್ಯಾಸ ಮಾಡುವಾಗಲೂ ಇದೇರೀತಿಯ ಅನುಭವ. ನಮಗಂಟಿದ ದುಶ್ಚಟಗಳಂತಹ ಕಲ್ಮಶವನ್ನು ನಾವೇ ದೂರ ಮಾಡುವ ಪ್ರೇರಣೆಯಾಗುತ್ತದೆ. ಶುಭ್ರವಾದ ಕೋಣೆಯಿಂದ ಕಸವನ್ನು ಎತ್ತಿ ಬೀಸಾಕಿದಂತೆ ದುಶ್ಚಟಗಳು ಒಂದೊಂದಾಗಿ ನಮ್ಮಿಂದ ದೂರವಾಗುತ್ತದೆ. ಆ ಪ್ರೇರಣೆ ಮನಸ್ಸಿನ ಆಳದಿಂದ ಉಂಟಾಗಿ ನಾವೇ ಚಕಿತರಾಗುವಂತೆ ಅದು ಸ್ಥಿರವಾಗಿ ನೆಲೆ ನಿಲ್ಲುತ್ತದೆ. ದುಶ್ಚಟಗಳು ಕೇವಲ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಅಂಟಿಕೊಂಡಿದೆ ಎಂಬ ಅರಿವಾಗುವಾಗ ಮನಸ್ಸು ಆ ಕಲ್ಮಶವನ್ನು ತೊಡೆದು ಹಾಕಿ ಹೊಸ ಮನುಷ್ಯತ್ವದತ್ತ ಸೆಳೆಯುತ್ತದೆ.
ದುಶ್ಚಟಗಳು ಹೆಚ್ಚು ಕಡಿಮೆ ಸಾಮಾನ್ಯ ಮನುಷ್ಯನಾದವನಿಗೆ ಎಲ್ಲರಲ್ಲೂ ಇರುತ್ತದೆ. ಸ್ವಭಾವತಃ ಪ್ರಾಮಾಣಿಕ ಮನಸ್ಸು ಅದನ್ನು ಒಪ್ಪಿಕೊಂಡು ಅದರಿಂದ ಮುಕ್ತವಾಗುತ್ತ ಯೋಚಿಸುವ ಪ್ರೇರೇಪಣೆ ಯೋಗದಿಂದ ಸಾಧ್ಯವಾಗುತ್ತದೆ. ದುಶ್ಚಟಗಳು ನನಗೂ ಅಂಟಿಕೊಂಡಿತ್ತು ಎಂದು ಪ್ರಾಮಾಣಿಕವಾಗಿ ಹೇಳಬಲ್ಲೆ. ಮಾನಸಿಕವಾಗಲೀ ದೈಹಿಕವಾಗಲೀ ಇದ್ದಂತಹ ಚಟಗಳನ್ನು ತೊಡೆದು ಹಾಕುತ್ತ ಶುಭ್ರ ತನುಮನದಿಂದ ಪ್ರಪ್ಪುಲ್ಲತೆಯತ್ತ ಸಾಗುವಾಗ ಅಧಿಕವಾಗುವ ಆ ಅತ್ಮವಿಶ್ವಾಸ ಹೊಸ ಬದುಕಿನ ಅಶಾಭಾವವನ್ನು ಮತ್ತಷ್ಟು ಬಿಗಿಯಾಗಿಸುತ್ತದೆ. ಪ್ರಫುಲ್ಲ ಮನಸ್ಸಿನಿಂದ ನಾನು ಎಲ್ಲದರಿಂದ ಮುಕ್ತನಾಗುತ್ತೇನೆ ಎಂದು ಹೇಳುವ ಆ ಅತ್ಮ ವಿಶ್ವಾಸದಭಾವ ಇದೆಯಲ್ಲ, ಅದು ಎಷ್ಟು ದೃಢವಾಗಿರುತ್ತದೆ ಎಂದರೆ ಆ ಚಟಗಳ ಸೋಂಕು ಕೂಡ ಮೈಲಿಗೆಯಾಗಿ ಭಾಸವಾಗುತ್ತದೆ. ಪರಿಶುಭ್ರ ವ್ಯಕ್ತಿತ್ವ ನಮ್ಮದು ಎಂಬ ಭಾವ ಸ್ಪುರಣೆಯಾಗುತ್ತದೆ. ಇಷ್ಟು ವರ್ಷದವರೆಗೂ ಇಲ್ಲದ ಈ ಪ್ರೇರಣೆ ಈಗ ಎಲ್ಲಿಂದ ಬಂತು? ಅದು ನಮ್ಮ ಅಂತರಾತ್ಮದಲ್ಲೇ ಹುದುಗಿತ್ತು ಎಂಬುದನ್ನು ನಾವು ಮರೆತಿದ್ದೆವು ಎಂಬುದನ್ನು ತೋರಿಸಿಬಿಡುತ್ತದೆ.
ಪ್ರತಿಯೊಬ್ಬ ಮನುಷ್ಯನ ಆತ್ಮ ನಿಜವಾಗಿಯೂ ಜನ್ಮತಹ ಪರಿಶುಭ್ರವಾಗಿರುತ್ತದೆ. ಅಂತರಾತ್ಮದಲ್ಲಿ ಅವರರವರ ಮಟ್ಟಿಗೆ ತಾವು ಶುಭ್ರಮನಸ್ಸಿನವರು. ಆ ಸುಪ್ತ ಪ್ರಜ್ಞೆ ಅಂತರಾತ್ಮದಲ್ಲಿ ಸದಾ ಜಾಗ್ರತವಾಗಿರುತ್ತದೆ. ನಾನು ಒಳ್ಳೆಯವ ಎಂದು ತನ್ನ ಮನಸ್ಸು ಸದಾ ಹೇಳುತ್ತಿರುತ್ತದೆ. ಆದರೆ ಹೊರ ಪ್ರಪಂಚಕ್ಕೆ ಮಾತ್ರ ಅದರ ಪ್ರೇರಣೆಯಾಗುವುದೇ ಇಲ್ಲ. ಸುಪ್ತವಾಗಿರುವ ಗುಣ ಪೂರ್ಣವಾಗಿ ಪ್ರಕಾಶಕ್ಕೆ ಬರುವುದೇ ಇಲ್ಲ. ಹೊಸ ಗಣಕ ಯಂತ್ರ (ಕಂಪ್ಯೂಟರ್) ತಂದು ಉಪಯೋಗಿಸುತ್ತೇವೆ. ಹಲವಾರು ಪ್ರೋಗ್ರಾಂಗಳನ್ನು ತುಂಬಿಸುತ್ತೇವೆ. ಹಲವು ಸಲ ಪ್ರೋಗ್ರಾಂಗಳ ಅವಿರತ ದುಡಿಮೆಯಿಂದ ಸ್ತಭ್ದವಾಗತೊಡಗಿದಾಗ ಅದನ್ನು ಫ಼ಾರ್ಮೇಟ್ ಮಾಡಿ ಹೊಸದರಂತೆ ಅಣಿಗೊಳಿಸುತ್ತೇವೆ. ಪಾರ್ಮೇಟ್ ಮಾಡಿದ ಕಂಪ್ಯೂಟರ್ ಶುರುವಿಗೆ ಏಷ್ಟು ವೇಗವಾಗಿ ಪ್ರತಿಕ್ರಿಯಿಸುತ್ತದೆ ಎಂದರೆ ಆಶ್ಚರ್ಯವಾಗಿಬಿಡುತ್ತದೆ. ನಂತರ ಒಂದೊಂದಾಗಿ ಪ್ರೊಗ್ರಾಂಗಳನ್ನು ಏರಿಸುತ್ತಾ ಅದನ್ನು ಒಂದು ರೀತಿಯಲ್ಲಿ ರಾಡಿ ಎಬ್ಭಿಸುತ್ತೇವೆ. ನಮ್ಮ ದೇಹವೂ ಹಾಗೇ, ಜನಿಸಿದಾಗ ಪರಿಶುಭ್ರವಾಗಿದ್ದು ನಂತರ ಬದುಕಿನ ರಸ್ತೆಯಲ್ಲಿ ಸಾಗುತ್ತಿದ್ದಂತೆ ರಸ್ತೆಯ ಧೂಳನ್ನೂ ಪರಿಸರದ ಮಾಲಿನ್ಯವನ್ನು ಅಂಟಿಸಿಕೊಂಡು ಕೆಲವೊಮ್ಮೆ ಸ್ಥಬ್ಧವಾಗಿಬಿಡುತ್ತದೆ. ಕಂಪ್ಯೂಟರನ್ನು ಪಾರ್ಮೇಟ್ ಮಾಡಿ ಹೊಸದಾಗಿ ಸಜ್ಜುಗೊಳಿಸುವಂತೆ ನಮ್ಮನ್ನು ನಾವು ಸಿದ್ದ ಪಡಿಸಿಕೊಳ್ಳುವುದಿಲ್ಲ. ಇಂದು ಬಹಳಷ್ಟು ಬದುಕು ದುರ್ಭರವಾಗುವುದು ಇದೇ ಕಾರಣದಿಂದ. ಯೋಗಾಭ್ಯಾಸ ಪ್ರತಿದಿನ ನಮ್ಮ ಮನಸ್ಸು ಮತ್ತು ದೇಹವನ್ನು ಫಾರ್ಮೇಟ್ ಮಾಡಿ ಪರಿಶುಭ್ರ ವ್ಯಕ್ತಿತ್ವವನ್ನು ರೂಪಿಸಿತ್ತದೆ. ಅದಕ್ಕಾಗಿಯೇ "ಯೋಗಃ ಕರ್ಮಸುಕೌಶಲಂ" ಅಂತ ಹೇಳುವುದು.
ಈ ವಾಸ್ತವ ಪ್ರಪಂಚವನ್ನೂ ಮಿಥ್ಯಾ ಪ್ರಪಂಚ ಎನ್ನುತ್ತಾರೆ. ತನ್ನ ಅಸ್ತಿತ್ವದ ಬಗ್ಗೆ ವಿಶ್ವಾಸ ಇಲ್ಲದವನೂ ನಾಳಿನ ಬಗ್ಗೆ ಕನಸನ್ನು ಕಾಣುವತ್ತಾ ಆಶಾಭಾವದಿಂದ ಬದುಕುತ್ತಾನೆ. ವಿಚಿತ್ರ. ಕಣ್ಣಿಗೆ ಕಾಣುವುದೇಲ್ಲವೂ ವಾಸ್ತವದಲ್ಲಿ ಬೇರೆಯೇ ಆಗಿರುತ್ತದೆ. ರಾತ್ರಿ ವಾಹನದ ಬೆಳಕಿಗೆ ದೂರದಲ್ಲಿ ಯಾವುದೋ ವಸ್ತು ಯಾವುದೋ ರೂಪದಲ್ಲಿ ಕಾಣಿಸುತ್ತದೆ. ಆದರೆ ಹತ್ತಿರ ಹೋದಾಗ ಅದರ ನೈಜತೆ ಬಗ್ಗೆ ಅರಿವಾಗುತ್ತದೆ. ಜೀವನದ ಸತ್ಯ ಏನು? ಬರಡು ನೆಲದ ಒಳಗಿನ ಸತ್ಯ ಏನು? ಹಲವು ಸಲ ಜೀವನದಲ್ಲಿ ನಾವು ಚಿಂತಿತರಾಗುವುದುಂಟು. ನಮ್ಮನ್ನು ಯಾರೂ ಅರ್ಥೈಸುವುದಿಲ್ಲ. ನಮ್ಮ ಬಗ್ಗೆ ಯಾರಿಗೂ ತಿಳಿದಿಲ್ಲ. ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳದೇ ಇನ್ನೊಬ್ಬರ ಬಗ್ಗೆ ಅರೋಪಿಸುತ್ತೇವೆ. ನಮ್ಮೊಳಗಿನ ನಾವೇನು ಎಂದು ನಮಗೇ ತಿಳಿದಿರುವುದಿಲ್ಲ. ಯೋಗದ ಮಹತ್ವವೇ ಅದು ನಾವೇನು ಎಂದು ಅದು ಸ್ಪಷ್ಟ ಪಡಿಸುತ್ತಾ ಹೋಗುತ್ತದೆ. ಕನ್ನಡಿಯ ಮುಂದೆ ನಿಂತು ಕನ್ನಡಿಯ ಪ್ರತಿಬಿಂಬವನ್ನು ನೋಡುತ್ತಾ ಯೋಚಿಸಿ ನಾನೇನು? ನಾನೇನನ್ನು ನೋಡುತ್ತಿದ್ದೇನೆ? ನಾನೆಂದರೆ ಈ ನಾಮಾಂಕಿತದಿಂದ ಏನಾಗಿದ್ದೇನೆ ಅದುವೇ? ಅಲ್ಲ ಈ ದೇಹವೇ ? ಆಲ್ಲ ಈ ದೇಹದೊಳಗಿನ ಜೀವಸೆಲೆಯೇ? ದೇಹದ ನರನಾಡಿಗಳಲ್ಲಿ ರಕ್ತ ಸಂಚರಿಸುತ್ತದೆ. ಹೃದಯ ಉಸಿರಾಡುತ್ತದೆ. ಹೊಟ್ಟೆ ಹಸಿದು ತುಂಬಿಕೊಂಡು ಮತ್ತೆ ಪುನಃ ಹಸಿಯುತ್ತದೆ. ಯಾಕೆ ಹೀಗೆ? ಉತ್ತರ ಗೊತ್ತಿಲ್ಲ..ಗೊತ್ತಿಲ್ಲ..ಹೀಗೆ ಈ ಗೊತ್ತಿಲ್ಲಗಳಿಗೆ ಸರಳವಾದ ಉತ್ತರವನ್ನು ಯೋಗಾಭ್ಯಾಸ ನೀಡುತ್ತದೆ.
ಇತ್ತೀಚೆಗೆ ನನ್ನ ದೂರದ ತಂಗಿಯೊಬ್ಬಳು ದೂರದ ಗೋವಾದಿಂದ ಬಂದಳು. ನನ್ನನ್ನು ನೋಡದೆ ನಾಲ್ಕೈದು ವರ್ಷ ಕಳೆದಿರಬಹುದು. ನನ್ನನ್ನು ಕಂಡವಳೇ ಆಶ್ಚರ್ಯದಿಂದ ಉದ್ಗರಿಸಿದಳು. ಬಹಳ ವರ್ಷದಿಂದ ನನ್ನನ್ನು ಕಂಡುದಕ್ಕೆ ಉದ್ಗರಿಸಿದ್ದಲ್ಲ. ನನ್ನ ಮುಖ ಏಕೆ ಬೆಳ್ಳಗಾಗಿದೆ?. ಏಕೆ ಹೋಳೆಯುತ್ತಿದೆ.? ಈ ಪ್ರಸನ್ನತೆಗೆ ಕಾರಣ ಏನು? ನನ್ನ ಬೆನ್ನು ನಾನು ತಟ್ಟಿಕೊಂಡ ಹಾಗೆಂದು ತಿಳಿವ ಹಾಗಿಲ್ಲ. ದಢೂತಿ ದೇಹ.. ಅರ್ಥ ಮೊಣಕಾಲಿನ ವರೆಗೆ ಬಗ್ಗಿದರೂ ನೇರವಾಗಿ ನಿಲ್ಲುವುದಕ್ಕೆ ಪ್ರಯಾಸ ಪಡುವ ದೇಹ? ದಿನದ ಸ್ವಲ್ಪ ಹೊತ್ತಿನಲ್ಲೇ ಬಸವಳಿದ ಅಯಾಸಗೊಂಡ ಮುಖ ಈಗ, ದಿನ ಮುಗಿದರೂ ಲವಲವಿಕೆಯ ಉತ್ಸಾಹವನ್ನು ತೋರಿಸುತ್ತಿದೆ ಏಕೆ? ನನ್ನ ಬಗ್ಗೆ ನಾನು ಪವಾಡವನ್ನು ಕಂಡದ್ದಲ್ಲ ವಿಸ್ಮಯವಾಗಿ ಭೂಗರ್ಭ ಜಲದ ವಿಸ್ಮಯತೆಯನ್ನು ನನ್ನಲ್ಲಿ ಕಂಡುಕೊಂಡಳು. ಹೌದಲ್ಲ, ನಾನೆಂದೆ ಬರಡು ಬಂಡೆಯಂತಹ ನನ್ನ ದೇಹದಲ್ಲಿ ನೀರಿನ ಸೆಲೆಯ ದರ್ಶನ ಈಗ ಆಗುತ್ತಿದೆ. ಅದಕ್ಕಾಗಿ ನಾನು ಏನೂ ಮಾಡಿಲ್ಲ. ಕೇವಲ ಶ್ರದ್ಧೆಯಿಂದ ಪ್ರಯತ್ನಿಸಿದೆ. ಬಂಡೆಯ ಮೇಲೆ ಬಾವಿ ಅಗೆದಂತೆ..ಸ್ವಲ್ಪ ಸ್ವಲ್ಪವೇ ಚಿಪ್ಪು ಚಿಪ್ಪು ಅಗೆಯುತ್ತಾ ಸಾಗಿದೆ. ಬಾವಿ ತೆಗೆಯುವಾಗ ನೀರು ಸಿಗಬಹುದೆಂಬ ಆಶಾಭಾವವಾದರೂ ಇತ್ತು.. ಆದರೆ ನಾನು ಯೋಗ ಜೀವನವನ್ನು ತೊಡಗಿಸಿದಾಗ ಯಾವುದೇ ಆಶಾಭಾವದ ನಿರೀಕ್ಷೆಯೂ ಇರಲಿಲ್ಲ. ಕೇವಲ ಶ್ರದ್ದೆ ಮತ್ತು ಪ್ರಾಮಾಣಿಕತೆ ಮಾತ್ರ ಇದ್ದದ್ದು. ಬಾವಿಯೊಳಗೆ ಸ್ವಲ್ಪ ಸ್ವಲ್ಪವೇ ಇಳಿದಂತೆ ನನ್ನ ದೇಹದೊಳಕ್ಕೆ ನನ್ನ ಆತ್ಮದೊಳಗೆ ಸಂಚರಿಸುತ್ತಾ ಸಾಗಿದೆ. ಆ ಪಯಣದ ಅನುಭವ ವಿಸ್ಮಯವನ್ನು ಉಂಟು ಮಾಡಿದೆ.ಗಮ್ಯವಿಲ್ಲದ ಈ ಪಯಣ ಇನ್ನು ಏನನ್ನೆಲ್ಲ ತೋರಿಸುತ್ತದೋ ಕಾತರದಿಂದ ಕಾತರಿಸುತ್ತ ಮತ್ತಷ್ಟು ಶ್ರದ್ದೆ ವಿಶ್ವಾಸದಿಂದ ಒಂದೊಂದೇ ಹೆಜ್ಜೆಗಳನ್ನು ಇಡುತ್ತಾ ಸಾಗುತ್ತಿದ್ದೇನೆ. ಈ ಪಯಣವನ್ನು ನೀವು ಆರಂಭಿಸುವ ಬಯಕೆ ನಿಮ್ಮಲ್ಲಿದೇಯೇ.... ಇದ್ದರೆ ಬಹಳ ಸುಲಭ..ಕೇವಲ ಶ್ರದ್ದೆಯೊಂದು ಇದ್ದರೆ ಸಾಕು.