Monday, December 2, 2013

ಜನನಿ ಜನಕರು ಯಾರು?




ಒಂದು ಸಿನಿಮಾ ಕಥೆಯಿಂದ ಆರಂಭಿಸುವ. ಒಂದು ಪುಟ್ಟ ಮಗು ಬೆಳೆದು ದೊಡ್ಡದಾಗುತ್ತದೆ. ಮನೆಯಲ್ಲಿ ಅಪ್ಪ ಅಮ್ಮನ ಮುಂದಿನ ಕಂದಮ್ಮ. ಒಂದು ದಿನ ದೂರದ ಸಂಬಂಧಿಯೊಬ್ಬ ಬಂದು ಮಗುವಿಗೆ ಹೇಳುತ್ತಾನೆ. ಇದು ನಿನ್ನ ಹೆತ್ತ ಅಪ್ಪ ಅಮ್ಮ ಅಲ್ಲ. ನಿನ್ನನ್ನು ಹೆತ್ತವರು ಬೇರೆ ಇದ್ದಾರೆ.  ಕೆಲವು ಘಟನೆಗಳ ನಂತರ ಆ ಮಗುವಿನ ಸಾಕು ಅಪ್ಪ ಅಮ್ಮನೇ ಆ ಮಗುವನ್ನು ಅದರ ಹೆತ್ತವರಿಗೆ ಒಪ್ಪಿಸುತ್ತಾರೆ. ಆದರೆ ಆ ಮಗು ಹೆತ್ತ ಅಪ್ಪ ಅಮ್ಮನನ್ನು ಮನಸಾರೆ ಒಪ್ಪಿಕೊಳ್ಳುವುದೇ ಇಲ್ಲ. ತನ್ನ ಅರಿವಿಗೆ ಬಂದಂದಿನಿಂದ ಸಾಕಿದ ತನ್ನ ಅಪ್ಪ ಅಮ್ಮನೊಂದಿಗೆ ಕಳೆದ ಒಂದೊಂದೇ ಘಟನೆಗಳನ್ನು ಕನವರಿಸುತ್ತದೆ. ಹೆತ್ತವರು ಈಗ ಯಾವ ಪ್ರೀತಿ ಮಮತೆ ತೋರಿದರೂ ತುಲನೆಯಿಂದ ಮೊದಲ ಅಪ್ಪ ಅಮ್ಮನ ಪ್ರೀತಿಯೇ ಬೇಕೆಂದೆನಿಸುತ್ತದೆ. ಸತ್ಯ ಯಾವುದೋ ಅದರ ಬಗ್ಗೆ ಅದು ಯೋಚಿಸುವುದಿಲ್ಲ. ಮನಸ್ಸಿನ ವಿಶ್ವಾಸ ವಂಚಿಸಲ್ಪಡುವುದನ್ನು ಅದು ಸ್ವೀಕರಿಸಲಾರದೇ ಹೋಗುತ್ತದೆ. ತನ್ನನ್ನು ಪ್ರೀತಿಯಿಂದ ತುತ್ತು ಕೊಟ್ಟು ಸಾಕಿದ ಅಪ್ಪ ಅಮ್ಮನ ಸಂಬಂಧವನ್ನು ಅದು ಕೊನೆಗೂ ಬಿಟ್ಟಿರದೇ ಆ ಮಧುರ ವಿಶ್ವಾಸವನ್ನು ಜೋಪಾನವಾಗಿಡುತ್ತದೆ. .....

ಮನುಷ್ಯ ಹೆಚ್ಚು ಹೆಚ್ಚು ಜಿಜ್ಞಾಸೆಗೊಳಗಾದಂತೆ ವಿವಾದವನ್ನು ಹುಟ್ಟಿಸುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಬೇರೆಲ್ಲ ಭಾವನೆಗಳನ್ನು ಈ ವಿವಾದ ಬೆಲೆಕೊಟ್ಟು ಕೊಂಡಂತೆ ವರ್ತಿಸುತ್ತಾನೆ. ಇತ್ತೀಚೆಗೆ ಉಡುಪಿ ಶ್ರೀಕೃಷ್ಣ ದೇವರು ಕೂಡ ಕೃಷ್ಣ ಅಲ್ಲ ಸುಬ್ರಹ್ಮಣ್ಯ ಎಂಬ ವಿವಾದವೂ ಒಂದು ಮೂಢತನದ ಪರಮಾವಧಿ ಎಂದು ಕೆಲವೊಮ್ಮೆ ಅನಿಸುತ್ತದೆ. "ದೇವರು ಒಬ್ಬ ನಾಮ ಹಲವು" ಎಂಬ ಮಾತಿದೆ. ಭಗವದ್ಗೀತೆಯೊಂದಿಗೆ ವಿಶ್ವರೂಪವನ್ನು ಪಾರ್ಥನಿಗೆ ತೋರಿಸಿದ ಭಗವಂತ " ಈ ಜಗತ್ತಿನ ಚರಾಚರ ವಸ್ತುಗಳೂ ನನ್ನ ಪ್ರತೀಕ. ಎಲ್ಲದರಲ್ಲೂ ಎಲ್ಲರ ಆತ್ಮದಲ್ಲಿ ನಾನಿದ್ದೇನೆ ಎನ್ನುವ ತತ್ವವನ್ನು ಸಾರುತ್ತಾನೆ. " ಆದರೆ ಮನುಷ್ಯನ ಮೌಢ್ಯ ನಂಬಿಕೆಯನ್ನೇ ಮೋಸ ಎಂದು ವಿವಾದ ಹುಟ್ಟುಹಾಕುವುದಲ್ಲದೇ ಆ ನಂಬಿಕೆಯ ಜತೆಗೂ ಆಟವಾಡುತ್ತಾನೆ. ಕಪಟ ಇಲ್ಲದ ನಿರ್ಮಲ ಮನಸ್ಸಿಗೆ ದೇವರು ಯಾವುದಾದರೇನು? ಶಿವನೋ ಹರಿಯೋ ದುರ್ಗೆಯೋ ಗಣಪತಿಯೋ ಎಲ್ಲವೂ ಭಗವಂತನ ರೂಪ ಸಾದೃಶಗಳು. ಅದನ್ನು ಅರಿಯದೇ ಅಂದರ ಹಿಂದೆ ಸಂಶೋಧನೆಗೆ ತೊಡುಗುವುದು ಮೂಢತನ ಅನ್ನಿಸುತ್ತದೆ.

ಹುಟ್ಟಿ ಬೆಳೆದು ಪ್ರೌಢಾವಸ್ತೆಗೆ ಬಂದಮೇಲೆ ಹುಟ್ಟಿನಿಂದ ನಂಬಿಕೊಂಡು ಬಂದ ನಂಬುಗೆಯ ಅಸ್ತಿತ್ವವನ್ನು ಅಲುಗಾಡಿಸಿದರೆ ಏನು ಪ್ರಯೋಜನ? ತಾನೇ ಕೊಟ್ಟ ರೂಪವನ್ನು ಬದಲಿಸಿ ಅದಲ್ಲ ಇದು ಎಂದು ರೂಪಿಸಿದ ಹಾಗೆ. ಬಾಳ ಸಂಗಾತಿಯನ್ನೂ ಏನೇನೋ ಕಾರಣ ಕೊಟ್ಟು ಬದಲಿಸಿಕೊಂಡಹಾಗೆ. ಯಾವುದರಲ್ಲೂ ಏಕರೂಪದ ತೃಪ್ತಿಯನ್ನು ಅನುಭವಿಸದ ಚಪಲ ಮನಸ್ಸು. ತಾನು ಹೆಜ್ಜೆ ಇರಿಸಿದಲ್ಲಿ, ಮನಸ್ಸು ಓಡಿಸಿದಲ್ಲಿ  ವಿವಾದತನ್ನ ಅಸ್ತಿತ್ವವನ್ನೇ ಸ್ವತಃ ವಿವಾದಕ್ಕೆ ನೂಕುವ ಈ ಚಾಪಲ್ಯಕ್ಕೆ ಮೌಢ್ಯ ಅಲ್ಲದೆ ಬೇರೆ ಏನು ಹೇಳಲು ಸಾಧ್ಯ?