ಇಂದಿನ ವೇಗದ ಆಹಾರ ಪದ್ದತಿಯಲ್ಲಿ ಪರಂಪರೆಯ ಆಹಾರ
ಪದ್ದತಿಯೇ ಬದಲಾಗಿ ಹೋಗಿದೆ. ಇಡ್ಲಿ ದೋಸೆ ಕಡುಬು ಶಾವಿಗೆ ಪತ್ರೋಡೆ ಎಂಬುದು ನಮ್ಮ ಬಾಲ್ಯದ
ಮುಂಜಾನೆ ಉಪಾಹಾರದ ಸಾಮಾನ್ಯ ತಿಂಡಿಗಳಾಗಿತ್ತು. ಆದರೆ ಅದನ್ನೆಲ್ಲ ತಯಾರಿಸಬೇಕೆಂದರೆ ಮೊದಲ ದಿನ
ಬೆಳಗ್ಗೆಯೇ ಯೋಜನೆಯನ್ನು ಸಿದ್ದಪಡಿಸಬೇಕು.
ಈಗಿನ
ವೇಗದ ಯುಗದಲ್ಲಿ ಅದಕ್ಕೆಲ್ಲ ಸಹನೆ ವ್ಯವಧಾನ ಇದ್ದರೂ ಸಮಯ ವೆಲ್ಲಿದೆ ಹೇಳಿ? ರುಚಿಯಾಗುತ್ತದೆ ಎಂದು ತಿಳೀದರೂ ಮಾಡಲಾಗದ ಅಸಹಾಯಕತೆ
ಒಂದೆಡೆಯಾದರೆ ಅದರ ಬಗ್ಗೆ ಸಂಪೂರ್ಣ ತಿಳುವಳಿಕೆಯೂ ಬೇಕಲ್ಲವೇ? ಹಾಗಾಗಿ ಇಂದು ಏನಿದ್ದರೂ ಕ್ಷಿಪ್ರ ತಿಂಡಿ ತಿನಿಸುಗಳು
ಜನಪ್ರಿಯವಾಗುವುದು ಮಾತ್ರವಲ್ಲ ಅನಿವಾರ್ಯವಾಗುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಯೋಚನೆ
ಇಲ್ಲದೆ ಆಭ್ಯಾಸ ಇಲ್ಲದೆ ಎಲ್ಲರು ಮಾಡಬಹುದಾದ ತಿಂಡಿ ಎಂದರೆ ಉಪ್ಪಿಟ್ಟು. ಅಡಿಗೆ ಕಲಿಕೆ
ಆರಂಭವಾಗುವುದೇ ಈ ಉಪ್ಪಿಟ್ಟು ತಯಾರಿಕೆಯಿಂದ. ಮಾತ್ರವಲ್ಲ ಪ್ರಪ್ರಥಮ ಮಾಡಿದ ಉಪ್ಪಿಟ್ಟಿಗೆ ಉಪ್ಪು ಹಾಕುವುದಕ್ಕೆ
ಮರೆಯುವುದೂ ಅಷ್ಟೇ ಸಾಮಾನ್ಯ. ಹಾಗಾಗಿ ಇಂದಿನ
ಕಾಲಮಾನಕ್ಕೆ ಹೊಂದಿಕೊಳ್ಳುವ ಒಂದು ರುಚಿಕರ ತಿಂಡಿಯನ್ನು ಇಲ್ಲಿ ತೋರಿಸುವ ಪ್ರಯತ್ನವಿದು.
ಸಜ್ಜಿಗೆ ರೊಟ್ಟಿ, ಇದು ಹಲವರ ಮನೆಯಲ್ಲಿ ರುಚಿಕರವಾಗಿ
ತಯಾರಿಸುತ್ತಿರಬಹುದು. ಆದರೂ ನಾನು ತಿಳಿದ ಮಟ್ಟಿಗೆ ಇನ್ನೂ ಬಹಳಷ್ಟು ಪ್ರದೇಶದಲ್ಲಿ ಇದರ
ಪರಿಚಯವೇ ಇಲ್ಲ. ಇದು ನೌಕರಿಗೆ ಹೋಗುವ ಯುವಕ
ಯುವತಿಯರು ಮಾತ್ರವೇ ವಾಸಿಸುವ ಮನೆಗಗಳಲ್ಲಿ ಸಿದ್ದಪಡಿಸುವುದಕ್ಕೆ ಅತ್ಯಂತ ಸೂಕ್ತ. ಇದಕ್ಕೆ
ಮಿಕ್ಸಿಯ ಅವಶ್ಯಕಗೆ ಇರುವುದಿಲ್ಲ. ಮಾಡಬೇಕಿದ್ದರೂ ಅಷ್ಟೆ ಕೇವಲ ಕೆಲವು ನಿಮಿಷಗಳು ಸಾಕು.
ರುಚಿಕರ ರೊಟ್ಟಿಯ ತುಂಡು ನಮ್ಮ ಬಾಯಿಯಲ್ಲಿರುತ್ತದೆ. ರವೆರೊಟ್ಟಿಗೆ ಬೇಕಾಗುವ ಸಾಮಾಗ್ರಿಗಳು. ರವೆ, ಬನ್ಸಿ
ರವೆ ಯಾ ಖಂಡ್ವ ಸಜ್ಜಿಗೆ ಇದಕ್ಕೆ ಅತ್ಯುತ್ತಮ ಮತ್ತು ಗರಿ ಗರಿಯಾಗಿ ರುಚಿಯಾಗಿರುತ್ತದೆ. ಇದು
ಇಲ್ಲವಾದರೆ ಚಿರೋಟಿ ಅಥವಾ ಇನ್ನಿತರ ರವೆಯಾದರೂ ಆಗಬಹುದು. ಇದು ಉಪ್ಪಿಟ್ಟಿನಂತೆ. ಉಪ್ಪಿಟ್ಟಿಗೆ
ನಾವು ಏನೆಲ್ಲ ಹಾಕುತ್ತೇವೆಯೋ ಒಗ್ಗರಣೆ ಹೊರತಾಗಿ
ಅದನ್ನು ಇಲ್ಲಿ ಹಿಟ್ಟಾಗಿ ಉಪಯೋಗಿಸುವುದು. ಹಾಗಾಗಿ ....ಒಂದಷ್ಟು ರವೆ, ಅದಕ್ಕೆ ಸ್ವಲ್ಪ
ಈರುಳ್ಳಿ, ಹಸಿ ಮೆಣಸು, ಶುಂಠಿ ಕರಿಬೇವು, ರುಚಿಗೆ
ತಕ್ಕಷ್ಟು ಉಪ್ಪು ಇದಿಷ್ಟು ಪ್ರಧಾನ ಮತ್ತು ತೀರ
ಅಗತ್ಯ. ಮತ್ತೆ ಜತೆಯಲ್ಲಿ ತುರಿದ ಕ್ಯಾರೆಟ್, ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಮತ್ತು
ಟೊಮೆಟೊ ಸ್ವಲ್ಪ ಅರಶಿನ ಪುಡಿ ಎಲ್ಲವನ್ನು ಹಾಕಿ ತಣ್ಣಗಿನ ನೀರು ಹಾಕಿ ಕಲಸಿ ಇಟ್ಟುಕೊಳ್ಳಿ.
ಸ್ವಲ್ಪ ಹೊತ್ತಿನಲ್ಲೇ ರವೆ ನೀರಿನೊಂದಿಗೆ ಹಿಗ್ಗಿಕೊಂಡು ಮಿಶ್ರವಾಗುತ್ತದೆ. ಇದನ್ನು ದೋಸೆ
ಕಾವಲಿ ಬಿಸಿ ಮಾಡಿ ಬರಿ ಕೈಯಿಂದ ಕಾವಲಿ ಮೇಲೆ ಸಾರಿಸಬಹುದು. ಹೀಗೆ ಮಾಡುವುದಕ್ಕೆ ಸ್ವಲ್ಪ
ಅಭ್ಯಾಸ ಬೇಕು.
ಅದಿಲ್ಲವಾದರೆ ಸೌಟಿನಿಂದ ದಪ್ಪ ದೋಸೆ ಎರೆದಂತೆ ಕಾವಲಿಯಲ್ಲಿ ಎರೆಯಬಹುದು. ಸಣ್ಣ ಉರಿಯಲ್ಲಿ ಸ್ವಲ್ಪ ನಿಧಾನವಾಗಿ ಕಾಯಿಸಿ ತಟ್ಟೆಗೆ
ಹಾಕಿದರೆ ಅತ್ಯಂತ ರುಚಿಕರವಾದ ಸಜ್ಜಿಗೆ ರೊಟ್ಟಿ ಎಂಬ ನಮ್ಮೂರಿನ ಜನಪ್ರಿಯ ಖಾದ್ಯ ನಿಮ್ಮ
ತಟ್ಟೆಯಲ್ಲಿರುತ್ತದೆ. ತಿಂದು ನೋಡಿ.