“ಬಣ್ಣ ಮಾಸಿದೆ ಆದರೆ
ನೆನಪು ಮಾಸಲೇ ಇಲ್ಲ ಇನ್ನೂ ಅಚ್ಚ ಹಸಿರಾಗಿ ನಳ ನಳಿಸುತ್ತಿದೆ. “
ಅಂದು ಬೆಳಗ್ಗೆ ಏಳುವುದು ಕೊಂಚ ತಡವಾಗಿತ್ತು.
ಅನಿವಾರ್ಯ ಕೆಲಸವೇ ಅಧಿಕವಾಗಿ ಮೊದಲದಿನ ಮಲಗುವುದು ತಡವಾಗಿಬಿಟ್ಟಿತು. ಆದರೂ ಎದ್ದ ಕೂಡಲೇ ಊರಾಚೆ
ಕಣಿವೆಯಲ್ಲಿರುವ ಕೆರೆಗೆ ಹೋಗಿ ಶೌಚ ಸ್ನಾನಾದಿಗಳನ್ನು ಮುಗಿಸಿ ಬರುವುದು ನಿತ್ಯ ರೂಢಿಗತವಾದ
ಕರ್ಮ. ಶೌಚಕ್ಕೆ ಊರಾಚೆ ಹೋಗುವುದೇ? ಆಶ್ಚರ್ಯ ಬೇಡ. ಇದು ಕೆಲವು ದಶಕಗಳ ಹಿಂದಿನ ಕಥೆ. ಎಪ್ಪತ್ತು
ಎಂಭತ್ತರ ದಶಕದ ಕಥೆ. ಅಂದಿನ ಕಾಲ ಶೌಚಾಲಯ,
ಅದು ಸಿರಿವಂತರಿಗಷ್ಟೇ ಮೀಸಲು. ನಾವಿನ್ನೂ
ಜೋಪಡಿವಾಸಿಗಳು ಇನ್ನೇಲ್ಲಿಯ ಶೌಚಾಲಯ?
ನಮ್ಮೂರ
ಕೆರೆ ಎಂದರೆ ಚಿಪ್ಪಾರು ರಸ್ತೆಯಲ್ಲಿ ಒಂದೆರಡು ಹೆಜ್ಜೆ ನಡೆದು ಎಡಭಾಗದ ಪ್ರಪಾತಕ್ಕೆ ಇಳಿದರೆ
ಕಂಗು ತೆಂಗು ತೋಟದ ಒತ್ತಿಗೆ ಗುಡ್ಡದ ಕೆಳಗೆ ಒಂದು ಚಿಕ್ಕ ಎಂದರೆ ಅತೀ ಚಿಕ್ಕದಾದ ಕೊಳ. ಕಂಗು
ತೆಂಗು ತೋಟದ ನೀರಡಿಕೆ ಇದೇ ಪುಟ್ಟ ಒರತೆಯಿಂದ ಸಾಧ್ಯವಾಗಬೇಕು. ಅಲ್ಲೊಂದು ಪುಟ್ಟ ಸುರಂಗ,
ಅದರಲ್ಲಿ ಒರತೆಯಾಗಿ ಬರುವ ಪುಟ್ಟ ಜಲಧಾರೆಯನ್ನು ಹಿಡಿದಿಡಲು ಒಂದು ಒಡ್ಡು ಕಟ್ಟಿದ್ದಾರೆ. ಅದೇ
ನಮ್ಮೆಲ್ಲರ ಸ್ನಾನದ ಮನೆ. ಸುತ್ತ ರಮಣೀಯ ಪ್ರಕೃತಿಯಲ್ಲಿ ನಮ್ಮ ಸ್ನಾನ. ಅಲ್ಲಿ ನನ್ನಂತೆ ಹಲವರು ಬೆಳಗ್ಗೆ ಇದೇ ಕೆಲಸಕ್ಕೆ ಒಂದು
ಬಕೆಟು ಸಾಬೂನು ಜತೆಗೆ ಬರುತ್ತಾರೆ. ಬೆಳಗ್ಗೆ ಅದು ಇದು ಲೋಕಾಭಿರಾಮದ ನಮ್ಮ ಜಾಗ. ಮಳೆಗಾಲದಲ್ಲಿ ಕೊಳದ ನೀರು ತುಸು ಬಿಸಿಯಾಗಿರುತ್ತದೆ,
ಅದು ನೀರಿಗಿಳಿದು ಸ್ನಾನ ಮಾಡಿದಾಗಲೇ ಅರಿವಿಗೆ ಬರುವುದು.
ಅದೇ ಬೇಸಗೆಯ ಬಿಸಿಲಲ್ಲಿ ಸುರಂಗದ ತಂಪಾದ ಧಾರೆ ನೀರು ಮೊಗೆ ಮೊಗೆದು ಸ್ನಾನ ಮಾಡುವುದೇ
ಸ್ವರ್ಗಾನುಭವ.
ಕೆರಯ ಪರಿಸರದಲ್ಲೇ ಇರುವ ಸಂದು ಗೊಂದಿಗಳೇ ನಮ್ಮ
ಸಾಮೂಹಿಕ ಶೌಚಾಲಯ ಎನ್ನುವುದಕ್ಕೆ ನಾಚಿಕೆಯಾಗುತ್ತಿಲ್ಲ. ಯಾಕೆಂದರೆ ಅದೆಲ್ಲ ಮರೆಯಲಾಗದ ನೆನಪುಗಳು. ಸಂದಿಯಲ್ಲಿ ಬಂಡೆಯ ಪೊದೆಯ ಮರೆಯಲ್ಲಿ ಬೀಡಿಯ ಹೋಗೆಯೋ ನೇತು ಹಾಕಿದ ಬೈರಾಸು ಇವೆಲ್ಲ ಇದ್ದರೆ
ಅಲ್ಲಿ ಯಾರಾದರೊಬ್ಬರು ಇದ್ದಾರೆಂದೇ ತಿಳಿದುಕೊಳ್ಳಬೇಕು. ಕೆಲವರಂತು ದೊಡ್ಡದಾಗಿ ಶಿಳ್ಳೆ
ಹಾಕುತ್ತಾ ಹಾಡು ಹೇಳುತ್ತಾ ಆನಂದಿಸುವುದರ ಜತೆಗೆ ತಮ್ಮ ಇರವನ್ನೂ ಹೊರಗೆ ಸಾರುತ್ತಾರೆ. ಹಳ್ಳಿ
ಜೀವನ ಕಲ್ಪಿಸುವುದಕ್ಕೂ ಸಾಧ್ಯವಿಲ್ಲ...ಆದರೂ ನಗರದ ರೈಲ್ವೆ ಹಳಿಗಳಿಂತ ಇದೆಷ್ಟೋ ವಾಸಿ.
ಅಂದು ತಡವಾದುದರಿಂದ ನಿಯಮಿತವಾಗಿ ಬರುವವರೆಲ್ಲ
ಸ್ನಾನಾದಿಗಳನ್ನು ಪೂರೈಸಿ ತೆರಳಿದ್ದರು. ಸ್ನಾನ ಮಾಡಿ ಮನೆಗೆ ಬಂದು ಕಣ್ಣ ಚಹವನ್ನು ಕುಡಿದು
ಮೂರು ಕಿಲೋ ಮೀಟರ್ ದೂರದ ಪೈವಳಿಕೆ ನಗರಕ್ಕೆ ಹೋಗಿ ಆದಿನಕ್ಕೆ ಬೇಕಾದ ಅಕ್ಕಿಯನ್ನು ಚೀಲದಲ್ಲಿ
ಹೊತ್ತು ತರಬೇಕು. ಆವಾಗೆಲ್ಲ ಅಕ್ಕಿ ತರಬೇಕೆಂದಿದ್ದರೆ ಮನೆಯಿಂದಲೆ ಅದಕ್ಕೆ ಬೇಕಾದ ಚೀಲ
ಕೊಂಡೊಯ್ಯಬೇಕು. ಈಗಿನಂತೆ ಪ್ಲಾಸ್ಟಿಕ್ ಕವರ್ ಇಲ್ಲ. ಕಾಲ ಬದಲಾದಂತೆ ಸೌಕರ್ಯವೂ
ಹೆಚ್ಚಾಗುತ್ತದೆ. ಜತೆಯಲ್ಲಿ ಕಸವೂ ಹೆಚ್ಚಾಗಿ ಮನುಷ್ಯನೇ ಕಸವಾಗಿ ಬದಲಾಗುತ್ತಾನೋ ಎಂಬ ಅನುಮಾನ.
ಅದಿನಕ್ಕೆ ಬೇಕಾದ ಅಕ್ಕಿ ಆದಿನವೇ ತರುವುದು ಎಂದರೆ ಸರಿ.
ಆಕಿ ತರುವುದು ಊಟ ಮಾಡುವುದಕ್ಕಲ್ಲ. ಬಾಲ್ಯದಲ್ಲಿ ನಮ್ಮನ್ನೆಲ್ಲ ಸಾಕಿ ಸಲಹಿದ ಅಮ್ಮ ಕಷ್ಟ ಪಟ್ಟು
ಮಾಡುವ ಒಂದು ಉದ್ಯಮವಿದೆ. ಅದೇ ಚಕ್ಕುಲಿ ತಯಾರಿ. ನಮ್ಮೂರಲ್ಲಿ ಅದು ಬಹಳ ಫೇಮಸ್ಸು ಮಾರಾಯರೆ. ಕಾಯರ್ ಕಟ್ಟೆ ಅಥವಾ ಲಾಲ್ ಭಾಗ್ ತುಂಬೆಲ್ಲ ಕಾದ
ತೆಂಗಿನೆಣ್ಣೆಯ ಘಮ ಘಮ ಹರಡಿದ್ದರೆ...ಅದು ನಮ್ಮ ಮನೆಯ ಬಾಣೆಲೆಯಿಂದ.
ಹೀಗೆ ಆ ದಿನ ಐದೋ ಹತ್ತೋ ಕಿಲೋ ಅಕ್ಕಿ ಹೊತ್ತು ತಂದು
ಮನೆಯಲ್ಲಿಟ್ಟು ಶಾಲೆಯ ಪುಸ್ತಕಗಳನ್ನು ಹೆಗಲಿಗೇರಿಸಿ ಹೊರಡುವಾಗ ಅದಾಗಲೇ ಒಂಬತ್ತು ವರೆಯ
ಗೋಪಾಲಣ್ಣನ ಶಂಕರ್ ವಿಠಲ್ ಬಸ್ ಹೋಗುತ್ತಿತ್ತು. ಬೆಳಗಿನ ಹದವಾದ ಬಿಸಿಲಿಗೆ ಏದುಸಿರುಬಿಡುತ್ತಾ
ಕಾಯರ್ ಕಟ್ಟೆಯ ಗುಡ್ಡದ ತುದಿಯ ಶಾಲೆಗೆ ಬಂದಾಗ ಶಾಲೆ ಆರಂಭದ ಲಾಂಗ್ ಬೆಲ್ ದೂರಕ್ಕೆ ಕೇಳಿಸಿತು.
ಇನ್ನು
ತಡ ಹೊತ್ತಿನಲ್ಲಿ ಬಂದರೆ ಪ್ರಾರ್ಥನೆ ಮುಗಿವ ತನಕ ಇಲ್ಲೇ ನಿಂತುಬಿಡುವುದು. |
ತಡವಾದರೆ
ಶಾಲೆಯ ಹೆಬ್ಬಾಗಿಲ ಬಳಿಯಲ್ಲೇ ತುಸು ಈ ಕಡೆಗೆ ರಾಷ್ಟ್ರಗೀತೆ ಮುಗಿಯುವ ತನಕ ನಿಲ್ಲುವುದು ರೂಢಿ.
ಹಲವು ಸಲ ನನ್ನಂತೆ ಬಹಳ ಹುಡುಗರು ತಡವಾಗಿ ಬಂದವರು ನಿಂತಿರುತ್ತಾರೆ. ಅಂದು ಯಾರೂ ಇಲ್ಲ
ನಾನೋಬ್ಬನೇ ...... ನಾನೊಬ್ಬನೇ .....ನಿಂತಿದ್ದೆ. ಸಹಜವಾಗಿ ಹೆಬ್ಬಾಗಿಲ ಬಳಿಯಲ್ಲೇ ಮುಖ್ಯೋಪಧ್ಯಾಯರ
ಕಛೇರಿ. ಅಲ್ಲೇ ಕಿಟಕಿಯಿಂದ ಅವರು ಇಣುಕುತ್ತಿರಬೇಕಾದರೆ ನನ್ನನ್ನು ಕಂಡಿರಬೇಕು. ಹಾಗೇ ಹೊರಗೆ
ಬಂದವರೆ ಕಣ್ಣಲ್ಲೇ ಗದರಿದರು. ಒಳಗೆ ಹೋಗುವಂತೆ ಸೂಚಿಸಿದರು. ನಾನು ಬೇಗನೆ ಬೇಗನೆ ಹೆಜ್ಜೆಹಾಕಿ ಒಳಗೆ ವಿದ್ಯಾರ್ಥಿಗಳ
ಸಾಲಿನಲ್ಲಿ ಜತಯಾದೆ. ಒಕ್ಕೊರಲಿನಿಂದ ಜನಗಣ ಮನ ಅಧಿನಾಯಕ ಜಯ ಹೇ ....ರಾಷ್ಟ್ರಗೀತೆ ಮೊಳಗಿತು.
ಈ ಘಟನೆ ಮೊನ್ನೆ ಮೊನ್ನೆ ಕಾಯರ್ ಕಟ್ಟೆ ಹೈಸ್ಕೂಲು
ಪರಿಸರ ಹೊಕ್ಕಾಗ ನೆನಪಾಯಿತು. ಅನಿವಾರ್ಯ ಕೆಲಸ ಒಂದರ ನಿಮಿತ್ತ ಅಲ್ಲಿಗೆ ಹೋಗಿದ್ದೆ. ಆಗ ಹಲವು
ನೆನೆಪುಗಳ ಕೋಟೆಯೊಳಗೆ ಹೊಕ್ಕ ಅನುಭವ. ಯಾವ ಗೋಡೆ ಯಾವ ಕಿಟಕಿ ಬಾಗಿಲು ಸಂದಿಗೊಂದಿಗಳನ್ನು
ನೋಡಿದರೂ ಅಲ್ಲೊಂದು ನೆನಪು ಇದೆಯೋ ಎಂದು ಭಾಸವಾಗಿತ್ತು.
ಕಿಟಿಕಿ ಗೋಡೆಗಗಳ ಬಣ್ಣ ಮಾಸಿದೆ. ಹಲವು ಕಡೆ ಹಳೆಯ ಕಟ್ಟಡ ಶಿಥಿಲವಾಗಿದೆ. ಇಲ್ಲಿ ಗೋಡೆಯ ಬಣ್ಣ ಮಾಸಿದೆ ಆದರೆ
ನೆನಪು ಮಾಸಲೇ ಇಲ್ಲ ಇನ್ನೂ ಅಚ್ಚ ಹಸಿರಾಗಿ ನಳ ನಳಿಸುತ್ತಿದೆ.
ಈ ಶಾಲೆಯನ್ನು
ಕಂಡಾಗ ಶಾಲೆ ಪರಿಸರವೆಂದರೆ ಹೀಗಿರಬೇಕು ಎಂದನಿಸುತ್ತದೆ. ರಸ್ತೆಯ ಸದ್ದುಗದ್ದಲದಿಂದ ಒಂದಷ್ಟು ದೂರ,
ಗುಡ್ಡದ ತುದಿಯಲ್ಲಿ ಊರೆಲ್ಲಾ ಕಾಣುವಂತೆ
ಗಂಭೀರವಾಗಿ ಸೆಟೆದು ನಿಂತ ಶಾಲೆಯನ್ನು ಕಾಣುವುದೇ ಒಂದು ಸೊಗಸು. ರಸ್ತೆಯಿಂದ ಗುಡಿಯ ಮೆಟ್ಟಲು
ಹತ್ತಿದಂತೆ ಒಂದೊಂದೇ ಹೆಜ್ಜೆ ಇಡುತ್ತಾ ಶಾಲೆಯ ಪರಿಸರಕ್ಕೆ ಹೋಗಬೇಕು. ಅಲ್ಲಿ ಹೊರಗಿನ ಸದ್ದುಗದ್ದಲವಿಲ್ಲದ
ಪ್ರಶಾಂತವಾದ ಸ್ಥಳ ಅನುಭವಕ್ಕೆ ಬರುತ್ತದೆ.
ವಿಶಾಲವಾದ ಆಟದ ಮೈದಾನ |
ಶಾಲೆಯ ಹಿಂಭಾಗದಲ್ಲಿ ವಿಶಾಲವಾಗಿ ಹರಡಿದ ಆಟದ ಮೈದಾನ. ಇಲ್ಲಿಅದೆಷ್ಟು ಧೂಳು ಮೆತ್ತಿಸಿಕೊಂಡ ನೆನಪುಗಳು? ದೇಹಕ್ಕಂಟಿದ ಧೂಳು ಎಂದೋ ತೊಳೆದು ಹೋಗಿರಬಹುದು. ಆ ಧೂಳಿನ ನೆನಪು ಇನ್ನೂ ಅಂಟಿಕೊಂಡಿದೆ. ಒಳಗೆ ನಾನು ಕಳೆದ ಹಲವು ತರಗತಿ ಕೋಣೆಗಳನ್ನು ನೋಡಿದೆ ಕೆಲವು ಖಾಲಿಯಾಗಿದ್ದರೆ ಇನ್ನು ಕೆಲವಲ್ಲಿ ಈಗಿನ ವಿದ್ಯಾರ್ಥಿಗಳಿದ್ದರು. ಜ್ಞಾನಕ್ಕೆ ಮಾಧ್ಯಮವಾದ ಕರಿಹಲಗೆಯ ಬೆಳ್ಳಿ ಅಕ್ಷರಗಳು ಮತ್ತು ಚಿತ್ತಾರಗಳು ಹಲವು ಮನಸ್ಸಿನಾಳಕ್ಕೆ ಇಳಿದಿದ್ದರೆ ಈಗ ಖಾಲಿಯಾಗಿ ಕಪ್ಪಗಾದ ಕರಿ ಹಲಗೆ ತನಗೇನೂ ತಿಳಿದಿಲ್ಲವೆಂಬಂತೆ ನಿರ್ವಿಕಾರವಾಗಿ ಗೋಡೆಗೆ ಅಂಟಿಕೊಂಡಿತ್ತು.
ಶಾಲೆಯ ಜಗಲಿಯ ಕಾಡುವ ನೆನಪುಗಳು |
ಹೊರಗೆ ಉದ್ದಕ್ಕೂ ಚಾಚಿಕೊಂಡ
ಶಾಲೆಯ ಜಗಲಿ.....ಇಲ್ಲಂತೂ ನೆನಪುಗಳು ಭದ್ರವಾಗಿ ಮುದ್ರೆಯೊತ್ತಿವೆ. ಹಾಗೆ ನೋಡಿದರೆ ಶಾಲಾ
ಜೀವನದಲ್ಲಿ ಶಾಲೆಯ ಜಗಲಿ ಎಂಬುದು ಎಲ್ಲರ ಜೀವನದಲ್ಲೂ ಅಚ್ಚಳಿಯದ ನೆನಪುಗಳನ್ನು ಇತ್ತಿವೆ. ಯಾವೂದೋ
ಕಾರಣಕ್ಕೆ ತರಗತಿಯಿಂದ ಹೊರಗಾದಾಗ ನಿಲ್ಲುವ ಈ ಸ್ಥಳ, ಹಲವು ದುಃಖ ದುಮ್ಮಾನಗಳಿಗೆ ಜಗಲಿಯಂಚಿನಲ್ಲಿ ಕುಳಿತು ಕಂಬನಿ
ಮಿಡಿಯುವ ಈ ಸ್ಥಳವಿದು. ಈ ಶಾಲಾ ಜಗಲಿಯಂತೂ ನನಗೆ
ಅತ್ಯಂತ ಪ್ರಿಯವಾದ ಜಾಗವಾಗಿತ್ತು. ಬಿಡುವಿನ ಸಮಯದಲ್ಲಿ ಜಗಲಿಯಂಚಿಗೆ ನಿಂತು ಸುತ್ತಲಿನ
ಚಟುವಟಿಕೆಗಳನ್ನು ನೋಡುವುದು ಕಾಲ ಯಾಪನೆಯ ಸುಲಭ ವಿಧಾನವಾಗಿತ್ತು. ಕಾರಣಂತರಗಳಿಂದ ಮನಸ್ಸಿನ ಬೇಗುದಿಯಿಂದ ಬೇಸರದಿಂದ
ನೋವಾದಾಗ ಜಗಲಿಯಂಚಲ್ಲಿ ಕುಳಿತು ಸುರಿಸಿದ ಕಂಬನಿ
ಮುತ್ತಾಗಿ ಅಲ್ಲೇ ಆ ಮಣ್ಣಲ್ಲೇ ಮುತ್ತಾಗಿ ಆಳಕ್ಕೆ ಸೇರಿಹೋಯಿತೋ ಎನ್ನುವಂತೆ ಭಾಸವಾಗುತ್ತಿತ್ತು. ಇದೇ ಜಗಲಿಯಲ್ಲಿ ಹತ್ತನೇ ತರಗತಿಯ ವಿದಾಯದ ದಿನ ಎಲ್ಲ ವಿದ್ಯಾರ್ಥಿ
ಮಿತ್ರರುಗಳು ಅಧ್ಯಾಪಕರುಗಳು ಒಟ್ಟಿಗೇ ಕುಳಿತು ಅವಲಕ್ಕಿ ಲಡ್ಡು ಶರಬತ್ತು ಸವಿದ ಆ ಸಂತಸದ ಕ್ಷಣ
ಮರೆಯುವುದಕ್ಕುಂಟೆ?
ಶಾಲೆಯ ನೆನಪಿನ
ಬುತ್ತಿಯನ್ನು ತೆರೆದು ನೋಡಿದರೆ ಅಲ್ಲಿ ಸಿಗುವ ಮತ್ತೊಂದು ವಿಭವ ಶಾಲೆಯ ರಜತ ಭವನ. ನಮ್ಮ
ಅವಧಿಯಲ್ಲೇ ಶಾಲೆ ಇಪ್ಪತ್ತೈದರ ರಜತ ಸಂಭ್ರಮವನ್ನು ಎರಡುದಿನ ಸಡಗರದಿಂದ ಆಚರಿಸಿತ್ತು.
ಅಂದು ರಾತ್ರಿ ಹಗಲೆನ್ನದೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಊರಿಗೆ ಊರೇ ಸಂಭ್ರದಿಂದ
ಆಚರಿಸಿದ್ದಕ್ಕೆ ಅಂದು ಸೇರಿದ ಜನಸಂದಣಿಯೇ ಸಾಕ್ಷಿ.
ಈ ಅವಧಿಯಲ್ಲಿ ಕಟ್ಟಿದ ರಜತಭವನದ ನೆನಪು ಇನ್ನೂ ಹಸಿರು. ಅದರ ಒಂದೊಂದು ಕಲ್ಲು ಕೆತ್ತಿ
ಕಟ್ಟುವಾಗ ದಿನವೂ ಅದರ ಒಂದೊಂದು ರೂಪವನ್ನು
ಕಂಡವರು ನಾವು. ಅದರ ತಾರಸೀಗೆ ನಾವೆಲ್ಲ ಮಿತ್ರರು ಹೊತ್ತು ಹಾಕಿದ ನೀರು ಹೊತ್ತ ಕಲ್ಲು ಮಣ್ಣು
ಇನ್ನೂ ಅದರ ಗಂಧ ಮಾಸಲಿಲ್ಲವೆಂದು ಅನಿಸುತ್ತದೆ. ಇಂದಿಗೂ ರಜತ ಭವನ ಹೋಸ ರೂಪದೊಂದಿಗೆ ಅದೇ ವೈಭವದ
ನೆನಪನ್ನು ತರುತ್ತದೆ.
ಶಾಲೆಗೆ ರಜೆ
ಎಂದೊಡನೆ ಹಲವು ಸಲ ಬೇಸರವಾಗುತ್ತಿತ್ತು. ರಜಾದಿನದಲ್ಲೂ ಇಲ್ಲಿ ನಾವು ಒಂದಷ್ಟು ಮಿತ್ರರು ಬಂದು
ಆಟವಾಡಿ ನಲಿದು ಹೋದ ನೆನಪುಗಳಿವೆ. ಈ ಎಲ್ಲ ನೆನಪುಗಳು ಸವಿ ನೆನಪುಗಳಾಗುವಂತೆ ಕಾಣುವಲ್ಲಿ ಶಾಲಾ
ಅಧ್ಯಾಪಕ ವರ್ಗದ ಸ್ನೇಹ ಅತ್ಯಂತ ಆಹ್ಲಾದಮಯ. ಮಾಸ್ತರ್ ಗಳು ಟೀಚರ್ ಗಳು ಎಲ್ಲರೂ ನನ್ನಲ್ಲಿ ಕೇವಲ
ಗುರು ಶಿಷ್ಯ ಸಂಬಂಧವಲ್ಲ ಉತ್ತಮ ಸ್ನೇಹಿತರಂತೆ ಪ್ರೀತ್ಯಾದರ ಸಲುಗೆಯನ್ನು ತೋರಿಸಿದವರು.
ಹೀಗಿದ್ದುದರಿಂದಲೇ ಈ ಎಲ್ಲ ನೆನಪುಗಳು ಮಧುರ ನೆನಪುಗಳಾಗಿ ಇಂದಿಗೂ ಹಸಿರಾಗಿ ಉಳಿಯುವುದಕ್ಕೆ
ಸಾಧ್ಯವಾಯಿತು.
ಶಾಲೆಯಿಂದ ರಸ್ತೆಯತ್ತ ಒಂದು ವಿಹಂಗಮ ನೋಟ |
ಶಾಲೆಯ ಮಣ್ಣಿಗೆ ಹೆಜ್ಜೆ ಇಡುತ್ತಿದ್ದಂತೇ ಎಲ್ಲವೂ ನಿನ್ನೆಯೋ
ಮೊನ್ನೆಯೋ ಘಟಿಸಿದಂತೆ ಅದೇ ಜಾಗ ಅದೇ ನೆನಪುಗಳು ಇಲ್ಲಿ ಅದೆಷ್ಟು ಮನಸ್ಸುಗಳು ಹೀಗೆ
ನೆನಪುಗಳನ್ನು ಸಂಗ್ರಹಿಸಿ ತುಂಬಿಸಿಕೊಂಡು ಹೋಗಿರಬಹುದು? ಶಾಲೆಯ ಪರಿಸರವನ್ನೆಲ್ಲ ಆ ಬಿಸಿಲಿನಲ್ಲೂ ಒಂದು ಸುತ್ತು
ಹೊಡೆದೆ. ರಣ ಬಿಸಿಲು ಬಿಸಿಲಾಗಿ ಕಾಣಲಿಲ್ಲ. ಶಾಲೆಯ ಮೂಲೆ ಮೂಲೆಯ್ ನನ್ನ ಕ್ಷೇಮ ಸಮಾಚಾರ
ವಿಚಾರಿಸುತ್ತವೆಯೋ ಎಂಬ ಭ್ರಮೆ. ಒಮ್ಮೆ ಗುರುವಾಗಿ ಇನ್ನೊಮ್ಮೆ ತಾಯಿಯಂತೆ ಮತ್ತೊಮ್ಮೆ ಬಾಲ್ಯ
ಸಖನಂತೆ ಕಾಣುವ ಈ ಶಾಲೆಯ ಮೆಟ್ಟಲನ್ನು ಇಳಿದು ದೂರ ಬಂದು ನಿಂತು ಒಂದು ಸಲ ತಿರುಗಿ ನೋಡಿದೆ.
ಹಾಗೆ ಹೆಜ್ಜೆ ಮೆಲೆ ಹೆಜ್ಜೆ ಇಡುತ್ತಾ ಭಾರವಾದ ಮನಸ್ಸಿನಿಂದ ಗುಡ್ದವನ್ನು ಇಳಿಯುತ್ತಾ ಬಂದೆ.
ಹೆಜ್ಜೆಯಿಡುವ ದಾರಿಯನ್ನು ನೋಡುವುದಕ್ಕಿಂತಲೂ ಅಧಿಕವಾಗಿ ಹಿಂತಿರುಗಿ ಶಾಲೆಯನ್ನು ನೋಡುತ್ತಾ
ಒಂದೊಂದೇ ಹೆಜ್ಜೆ ಇರಿಸುತ್ತಾ ಮುನ್ನಡೆದೆ. ಹೆಣ್ಣುಮಗಳು ತಾಯಿಮನೆಯಿಂದ ಗಂಡನ ಮನೆಗೆ ತೆರಳುವಾಗ
ತಿರು ತಿರುಗಿ ತಾಯಿ ಮನೆಯನ್ನು ನೋಡಿದಂತೆ ಮತ್ತೂ ಮತ್ತೂ ನೋಡಿದೆ. ಶಾಲೆ ಕೈ ಬೀಸಿ ವಿದಾಯವನ್ನು ಹೇಳಿದಂತೆ ಭಾಸವಾಯಿತು.