ಮೊನ್ನೆ
ಮೊನ್ನೆ ಗಾಂಧೀ ನಗರದಲ್ಲಿ ಯಾವುದೋ ಕಛೇರಿಯಿಂದ ಹೊರಬರಬೇಕಾದರೆ ರಸ್ತೆಯಲ್ಲಿ ಒಬ್ಬಾತ ನೆಟ್ಟ
ನೋಟದಿಂದ ನೋಡುತ್ತಲೇ ಇದ್ದ. ನನಗೂ ಅಷ್ಟೇ ಯಾರೋ ಪರಿಚಿತ ಅಂತ ಅನ್ನಿಸಿತು. ಹೇಳಿ ಕೇಳಿ
ಗಾಂಧೀನಗರ,
ಒಬ್ಬರಲ್ಲ ಒಬ್ಬರು ಪರಿಚಿತರು ಸಿಕ್ಕೇ ಸಿಗುತ್ತಾರೆ. ಅರೇ ಇದು ಹಾಗಲ್ಲ. ಯಾರಿರಬಹುದು?
ಎಂದು ತಲೆ ಕೆರೆದು ನಾನು
ನೆಟ್ಟಿಸಿ ನೋಡಿದೆ. ಆತ ಮುಗುಳು ನಗುತ್ತಾ ಹತ್ತಿರ ಬಂದು "ನಮಸ್ಕಾರ...ರಾಜಣ್ಣ ಅಲ್ವ?
" ಅಣ್ಣಾ ಅಂತ ಹೇಳಿದರೆ, ಈಗ ಊರಿನವನು ಅಂತ ಪಕ್ಕ ಆಗಿ
ಹೋಯಿತು. ಇಲ್ಲಿನವರ ಸಾರ್ ಸಾರ್ ಗಳ ನಡುವೆ
ಅಣ್ಣಅಕ್ಕ ಕಳೆದು ಹೋಗಿ ಬಹಳ ಸಮಯ ಆಗಿತ್ತು.
ಮತ್ತೆ ಆತ
ಯಾರು ಅಂತ ಪರಿಚಯ ಬಿಚ್ಚಿಟ್ಟ. ನಾನು ಮೋಣು...ಗೊತ್ತಾಗಿಲ್ವ. ಈಗ ಗೊತ್ತಾಗಿ ಹೋಯಿತು. ಸರಿ ಸುಮಾರು ಮೂವತ್ತು ವರ್ಷಗಳ
ನಂತರ ಕಾಣುವ ಮುಖವಿದು. ಗಡ್ಡ ಮೀಸೆ ಬೇಳೆದದ್ದು ಮಾತ್ರವಲ್ಲ ಅಲ್ಲಲ್ಲಿ ಬೆಳ್ಳಿಗೆರೆಗಳೂ
ಎಳೆದಾಗಿದೆ. ಈಗ ಆಶ್ಚರ್ಯದ ಉದ್ಗಾರ ನನ್ನದು.
ಹೌದು ಮೋಣು, ನಮ್ಮ ಬಾಲ್ಯದ ದಿನಗಳವು. ನಮ್ಮ ಮನೆಗೆ ಅದೂ ಇದು ಅಂತ ಬರುತ್ತಿದ್ದ. ನಮ್ಮ ನೆರೆ
ಮನೆ ಅಲ್ಲದೇ ಇದ್ದರೂ ನಮ್ಮದೇ ಗ್ರಾಮದವನು. ಊರಲ್ಲಿ ಅಷ್ಟೇ ಸಾಕಲ್ವ? ಗ್ರಾಮದವ ಎಂದೇಕೆ, ಜಿಲ್ಲೆಯವನೇ ಆದರೂ ಪರಿಚಯಸ್ಥರಾಗಿಬಿಟ್ಟು ಮಿತ್ರರಾಗಿಬಿಡುತ್ತಾರೆ. ಈ ಬೆಂಗಳೂರಿನಂತೆ,
ಪಕ್ಕದ ಗೋಡೆಯ ಆಚೆಗಿರುವವನೂ ಐದಾರು ವರ್ಷದಿಂದ ನೋಡುತ್ತಿದ್ದರೂ ನಮಸ್ಕಾರ ಬಿಡಿ
ಒಂದು ಕಿರು ನಗು ಕೂಡ ಇರುವುದಿಲ್ಲ. ಪರಿಚಯ ಸ್ನೇಹ ಜಗಳ ಏನಿದ್ದರೂ ಅದು ಊರಿನ ಕತೆಯೇ ಬೇರೆ. ಅದೂ
ನಮ್ಮೂರು ಕೇಳಬೇಕೆ. ಹಲವು ಭಾಷೆಗಳಿದ್ದರೂ ಇವುಗಳಿಗೆಲ್ಲ ಒಂದೇ ಭಾಷೆಯಾಗಿಬಿಡುತ್ತದೆ. ಮೋಣು ನಮ್ಮದೇ ಪಕ್ಕದ ಮನೆಯಂತಿದ್ದವನು. ಅವನ ಜತೆ
ಬೋಳಂಗಳದ ಗುಡ್ಡೆ ಯ ಮಾವಿನ ಮರಗಳು, ಕಂಡತ್ತಾಡಿನ ಕೆರೆ, ಕಾಯರ್ ಕಟ್ಟೆಯ ಬಳಿಯ ಕುಂಟಲದ ಕಾಡು...ಛೇ ತಿರುಗಾಡುತ್ತಿದ್ದುದ್ದಕ್ಕೆ ಲೆಕ್ಕವಿಲ್ಲ.
ಹಾಗೆಂದು ಅಪರಿಮಿತ ಸ್ನೇಹ ಎಂದೇನಲ್ಲ. ಬಾಲ್ಯದ ಹಲವು ಆಟ ಪಾಠಗಳಲ್ಲಿ ಈ ಮೋಣುವಿನದ್ದೂ ಒಂದೆರಡು
ಅಕ್ಷರಗಳು ವಾಕ್ಯಗಳೂ ಇವೆ.
ಸಿಕ್ಕವನೇ
ಕೇಳಿದ ಅಮ್ಮ ಹೇಗಿದ್ದಾರೆ. ಅಮ್ಮನಿಂದ ಕಣ್ಣ ಚಹ
ಚಕ್ಕುಲಿ ತಿಂದ ನೆನಪು ಹೇಳಿದಾಗ ಮಂದ ಹಾಸ ಮೂಡಿ ಮರೆಯಾಯಿತು. ಎಂದೋ ತಿಂದು ಎಂದೋ ಕರಗಿ
ಈ ಪರಿಸರದಲ್ಲಿ ಸೇರಿ ಹೋದ ಕಣ್ಣ ಚಹ ಇಂದೂ ನೆನಪಿದೆ ಎಂದರೆ ಅದು ಚಹದ ಹಿಂದಿರುವ ಭಾವ ಅಷ್ಟೇ.
ಮಾತನಾಡುತ್ತಿರುವಂತೆ ಬನ್ನಿ ಹೋಗೋಣ ಅಂತ ಪಕ್ಕದಲ್ಲೇ ಇದ್ದ ಹೋಟಲಿಗೆ ಕರೆದ. ನಾನು ಹಿಂದೆ ನಡೆದು
ಒಂದು ಹಣ್ಣಿನ ಜ್ಯೂಸ್ ಗೆ ಹೇಳಿ ಮಾತನಾಡುತ್ತಾ ಕುಳಿತೆವು.
ಮೋಣು ಹೇಳಿ
ಕೇಳಿ ಮುಸ್ಲಿಂ ಹುಡುಗ. ಆದರೂ ನಮ್ಮ ಆ ಒಡನಾಟ ಆ ಸ್ನೇಹ ಇಂದೂ ಮರುಕಳಿಕೆಯಾಗಿ ಬಹಳ
ಸಂತಸವಾಗಿತ್ತು. ಜಾತಿ ಧರ್ಮಗಳು ಯಾವುದೂ ನಮ್ಮ
ವಿಚಾರಗಳೇ ಅಗಿ ಇರಲಿಲ್ಲ. ಎಷ್ಟೊ ಸಲ ಬಾಯಾರಿನ ಯಕ್ಷಗಾನ ಬಯಲಾಟಕ್ಕೆ ನನ್ನ ಜತೆಯೇ ಬಂದು
ನೆಲದಲ್ಲಿ ಒಟ್ಟಿಗೆ ಕುಳಿತು ಬೆಳಗಿನ ವರೆಗೂ ಆಟ ನೋಡಿದ್ದ. ಚರುಂಬುರಿ ಮಸಾಲೆ ಕಡಲೆ ತಿಂದಿದ್ದ.
ಭೋಳಂಗಳದ ನೇಮದಲ್ಲಿ ಕಲ್ಲಂಗಡಿ ತುಂಡು ಹಂಚಿ ತಿಂದಿದ್ದ.
ಪೈವಳಿಕೆಯ ಉತ್ಸವಕ್ಕೆ ಉಪ್ಪಳದ ಅಯ್ಯಪ್ಪ ಬೆಳಕಿಗೆ ಕೇವಲ ಬಾಲ್ಯದ ಸ್ನೇಹ ಸಂಬಂಧದಲ್ಲಿ ಒಟ್ಟಿಗೇ
ತಿರುಗಾಡಿದ್ದ. ಈ ಧರ್ಮ ಜಿಜ್ಞಾಸೆಗಳು ಜನ
ಸಾಮಾನ್ಯನ ನಿತ್ಯ ಜೀವನದಲ್ಲಿ ಒಂದು ವಿಷಯವೇ ಅಲ್ಲ. ಎಲ್ಲದರ ಸೀಮೆಯನ್ನು ದಾಟಿ ಅಲ್ಲಿ ಮತ್ತೆಂದೋ
ಒಂದು ಇರುತ್ತದೆ. ಇಂದೂ ಅಷ್ಟೇ. ವಿಚಿತ್ರವೆಂದರೆ
ಜನ ಸಾಮಾನ್ಯನ ಈ ಸಾಮಾನ್ಯ ವಿಷಯಗಳು ಸಮಾಜದಲ್ಲಿ ಗಂಭೀರವಾಗುವುದೇ ಇಲ್ಲ.
ಊರಿನ
ಬಾಲ್ಯದ ಹಲವಾರು ವಿಚಾರಗಳು ಮಾತನಾಡಿದೆವು. ನೆನಪಿಗೆ ಬಂದ ವ್ಯಕ್ತಿಗಳ ಬಗ್ಗೆ ಪರಸ್ಪರ
ಕೇಳಿಕೊಂಡೆವು. ಹೆಂಡತಿ ಮಕ್ಕಳು ಎಲ್ಲ ವಿಚಾರಗಳು
ವಿನಿಮಯವಾಯಿತು. ಒಂದು ಘಂಟೆ ಕಳೆದದ್ದೇ ಅರಿವಿಗೆ
ಬರಲಿಲ್ಲ. . ನಾನು ಜೀವನ ಹಾದಿಯಲ್ಲಿ ಬೇರೆಯಾದಾಗ
ಆತ ದೂರದ ಗಲ್ಪ್ ರಾಜ್ಯಕ್ಕೆ ಜೀವನವರಸಿ
ಹೋಗಿದ್ದ. ಅಂದಿನಿಂದ ಇಂದೇ ಭೇಟಿ. ಬೊಂಬಾಯಿ
ಬಸ್ಸು ಹತ್ತುವುದಕ್ಕೆ ಹೋದಾಗ ಕೈ ಕುಲುಕಿ ’ಕಾಣುವ’
ಎಂದು ಹೇಳಿದ ಮಾತು ಇಷ್ಟು ದೀರ್ಘ ಸಮಯದವರೆಗೂ ಜ್ಯಾರಿಯಲ್ಲಿರುತ್ತದೆ ಎಂದು ಆಗ ಕೈ
ಕುಲುಕಿದಾಗ ಅರಿವಿರಲಿಲ್ಲ. ಈಗಲೂ ಹಾಗೆ.
ಕೊನೆಯಲ್ಲಿ ಸಹಜವಾಗಿ ವಿದಾಯ ಹೇಳುವ ಘಳಿಗೆ. ಈಗ ಕಾಣುವ ಅಂತ ಅದೇ ಮಾತು. ಆಗ ಇದನ್ನೇ ನಾನು
ಹೇಳಿದೆ...." ಮಾರಾಯ ಆವತ್ತು ನೀನು ಇದೇ ಹೇಳಿ ಈಗ ಸಿಕ್ಕಿ ಮಾತಾಡ್ತಾ ಇದ್ದಿಯಾ
ಅಂತ". ಇದನ್ನು ಅದೇ ಊರಿನ ಬ್ಯಾರಿ ಮಲಯಾಳಂ ನಲ್ಲೇ ಹೇಳಿದೆ. ಆತನಿಗೆ ಕಣ್ಣು ಭಾರವಾದ ಹಾಗೆ
ಭಾಸವಾಯಿತು. ಭಾವನೆಗಳು ಕಣ್ಣೀರು ಅದು ಜಾತಿ
ಭಾಷೆಯನ್ನು ಮೀರಿ ಒಂದೇ ರೀತಿ ಇರುತ್ತದೆ. ಭಾರತದವನಾದರೂ ದೂರದ ಅಮೇರಿಕದವನಾದರೂ ದುಃಖವಾದರೆ
ಹೃದಯ ಭಾರವಾದರೆ ಸುರಿಸುವುದು ಅದೇ ಕಣ್ಣೀರು. ಇಲ್ಲೂ ಹಾಗೆ. ಆತ ಹೇಳಿದ...ಅದೇ
ಮಲ್ಲು ಭಾಷೆಯಲ್ಲಿ..." ನೀ ಅದೇ ಪೋಲೆ....ಎಂದೂ ಚೇಂಜ್ ಆಯಿಟ್ಟಿಲ್ಲ" ( ನೀನು ಅದೇ
ರೀತಿ ಏನೂ ಬದಲಾಗಿಲ್ಲ).
ಮತ್ತೂ
ಮುಂದೆ ಹಲವು ವಿಚಾರ ಮಾತನಾಡುತ್ತಾ ಜಾತಿ ವಿಚಾರ ಬಂದಾಗ ಹೇಳಿದ. ಆಗ ನಾವು ಹುಡುಗರು....ಈಗ
ತಿಳುವಳಿಕೆ ಬಂದು ದೊಡ್ಡವರಾಗಿದ್ದೇವೆ. ಜೀವನದ ಅರ್ಧ ಪಾಲು ಕಳೆದಿರಬಹುದು. ಆಗ ಜಾತಿ ಭಾಷೆಯ
ಬಗ್ಗೆ ನಾವು ಮಾತಾಡಿರಲಿಕ್ಕಿಲ್ಲ. ಆದರೆ ಈಗ ಹಾಗೆ ಆಗಬೇಕೆಂದೇನೂ ಇಲ್ಲ. ಆದರೂ ನಾನು ಅದೇ ರೀತಿ
ಇದ್ದದ್ದು ಆತನಿಗೆ ಆಶ್ಚರ್ಯ ತಂದಿತ್ತು. ನಾನು ಹೇಳಿದೆ,
"ಎಂತದು
ಜಾತಿ ಮಾರಾಯ. ನಿಮ್ಮದೇ ಜಾತಿಯವರು ಅದೂ ಊರಿನವರು
ನನಗೆ ಕ್ಲೈಂಟ್ ಆಗಿ ಕೆಲವರಿದ್ದಾರೆ.
ಸ್ನೇಹ ವಿಶ್ವಾಸದಿಂದ ನನ್ನ ಜತೆ
ವ್ಯವಹಾರ ಇರಿಸಿದ್ದಾರೆ. ನಾನು ಊಟ ಮಾಡುವ ಒಂದು
ತುತ್ತಿನಲ್ಲಿ ಅವರದ್ದು ಪಾಲು ಇರಬಹುದು. ಜಾತಿ
ಧರ್ಮ ಎಲ್ಲವೂ ಒಂದು ಪರಿಧಿಯೊಳಗೆ ಮನುಷ್ಯನ ನಡುವೆ ಇರುತ್ತದೆ. ಇರುತ್ತದೆ ಅಲ್ಲ ಇರಬೇಕು. ನಾನು
ರಾಮ ಕೃಷ್ಣ ಅಂತ ಹೇಳಿದರೆ ನೀನು ’ಅಲ್ಲಾ’ ಅಂತ
ಹೇಳ್ತಿಯಾ. ನೀನು ಅಲ್ಲಾ ಅಂತ ಹೇಳಿದ್ದನ್ನು ನಾನು ಕನ್ನಡದಲ್ಲಿ ಅರ್ಥ ಮಾಡುವುದಕ್ಕೆ ಹೋದರೆ
ಅನರ್ಥವಾಗುತ್ತದೆ ಅಲ್ವ. ಧರ್ಮ ಎಂದರೆ ಅಷ್ಟೇ. ಅದನ್ನು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ
ಇದೆ. ಧರ್ಮದ ವಿಷಯಗಳು ವಿಪರೀತವಾಗಿ
ತಿಳಿದುಕೊಂಡಿದ್ದರೆ ನೀನು ಕರೆದು ನನ್ನನ್ನು ಮಾತಾಡಿಸುತ್ತಿರಲಿಲ್ಲ. ಹೀಗೆ ಜ್ಯೂಸ್ ಕುಡಿಸಿ ಕೈ
ಕುಲುಕುತ್ತಿರಲಿಲ್ಲ. ನನ್ನ ಅಮ್ಮ ನನ್ನ ಸಂಸಾರದ ಬಗ್ಗೆ ಕೇಳುತ್ತಿರಲಿಲ್ಲ. ಹೋಗಲಿ ಅಂದು ಕುಡಿದ
ಕಣ್ಣ ಚಾಯವೂ ನೆನಪಿರುತ್ತಿರಲಿಲ್ಲ ಅಲ್ವ? ಜಾತಿ ಧರ್ಮ ಯಾವುದೇ ಆಗಲಿ ಅದು
ಅವಹೇಳನ ಮಾಡುವ ವಸ್ತುಗಳಾಗಬಾರದು. ನಮ್ಮ ಮಕ್ಕಳು ನಮ್ಮ ಸಂಸಾರ ಬಂಧು ಬಳಗ ಬೇರೆಯವರು
ಪ್ರೀತಿಯಿಂದ ಕಾಣಬೇಕೆಂದೇನೂ ಇಲ್ಲ. ಹಾಗೆಂತ ಅವಹೇಳನ ಮಾಡಿದ್ರೆ ಸಹಿಸ್ತೇವಾ? ಇಲ್ಲ ಧರ್ಮವೂ ಹಾಗೆ. "
"ಆಯ್ತು ರಾಜಣ್ಣ ನಿಮ್ಮಲ್ಲಿ ಮಾತಾಡಿ ತುಂಬ ಖುಷಿಯಾಯಿತು. ಈಗ
ಮಂಗಳೂರಲ್ಲಿ ಮನೆ ಮಾಡಿದ್ದೇನೆ. ಊರಿಗೆ ಬಂದರೆ ಮನೆಗೆ ಬನ್ನಿ. ಖಂಡಿತ ಸಿಗುವ." ಅಂತ ಹೇಳಿ ಕೈ ಕುಲುಕಿ ಅದೇ ಗಾಂಧೀನಗರದ
ಜನಜಂಗುಳಿಯಲ್ಲಿ ಕರಗಿ ಹೋದ.
ನಾನು ಹಿಂದು , ನಿತ್ಯ
ಎರಡು ಹೊತ್ತು ಪ್ರಾರ್ಥನೆ ಮಾಡುತ್ತಿದ್ದೇನೆ. ಆದರೂ ನನಗೆ ಬೇರೆ ಯಾವ ಧರ್ಮದ ಬಗ್ಗೆಯೂ
ತಾತ್ಸಾರವಿಲ್ಲ. ಹಾಗಂತ ನನ್ನ ಧರ್ಮದ ಅವಹೇಳನ ನನಗೆ ಸಹಿಸುವುದಕ್ಕೂ ಸಾಧ್ಯವಾಗುವುದಿಲ್ಲ.
ಎಲ್ಲಾ ಧರ್ಮಗಳು
ಬೇರೆ ಬೇರೆಯೇ ನೀರು ಬೆಂಕಿ ಗಾಳಿ ಯಂತೆ ಪಂಚ ಭೂತಗಳು ಇದ್ದಹಾಗೆ. ಹಕ್ಕಿ ಪಕ್ಷಿ ಪ್ರಾಣಿಗಳು ಇದ್ದ
ಹಾಗೆ.
ಎಲ್ಲದಕ್ಕೂ ಅದರದ್ದೇ ಆದ ಧರ್ಮವಿದೆ. ಇದೆಲ್ಲ ಜತೆಯಾಗಿ ಕಾಣುವ ಪ್ರಕೃತಿ ಇದೆ. ಮನುಷ್ಯತ್ವ ಇರುವುದು
ಇದನ್ನು ಅರ್ಥೈಸುವುದರಲ್ಲಿ. ಭಾರತ ಇದಕ್ಕೆಲ್ಲ ಆಶ್ರಯ ನೀಡಿದೆ. ಹಾಗಾಗಿಯೇ ಎಲ್ಲೂ ಇಲ್ಲದ ವಸುಧೈವ
ಕುಟುಂಬಕಂ ಭಾರತದಿಂದಲೇ ಉದಯವಾಗಿದೆ.