Saturday, August 22, 2020

ಸಾರ್ವಜನಿಕ ಗಣಪ

                 ದೇವರು ಎಂದರೆ ಅಂಗಡಿಯಂತೆ, ತಮಗೆ ಬೇಕಾಗಿರುವುದನ್ನು ಬೇಕಾದಾಗ ಸಿಗುವುದೋ ಎಂದು ನೋಡುವುದಕ್ಕಷ್ಟೇ ದೇವರು.  ದೇವರೂ ಹಾಗೆ ಕೆಲವರು ಬರುವುದನ್ನು ಕಂಡಾಗ ಬಾಗಿಲೆಳೆದು ಹೋಗಿಬಿಡುತ್ತಾನೆ. ಹೀಗಾಗಿಯೇ ದಾಸರು ಹೇಳಿದ್ದು, ಪಂಡರ ಪುರವೆಂಬ ದೊಡ್ಡ ಶಹರ, ಅಲ್ಲಿ ಪಾಂಡುರಂಗನೆಂಬ ಸಾಹುಕಾರ. ಭಜನೆಯೆ ಅಲ್ಲಿಯ ವ್ಯಾಪಾರ...ದಾಸರು ಹಾಡಿ ಹೋಗಳಿದ್ದು ಆಧ್ಯಾತ್ಮದ ಚಿಂತನೆಯಲ್ಲಿ. ಆದರೆ ಮನುಷ್ಯ ಮಾತ್ರ ದೇವರನ್ನು ಕಾಣುವುದು ತಮಗೆ ಬೇಕಾದಾಗ ತಮ್ಮ ಮನಸ್ಸಿನ ಭಾವನೆಯಂತೆ.  ಈ ಮಾತು ನೆನಪಾಗುವುದು ಗಣೇಶನ ಹಬ್ಬ ಚೌತಿ ಬರುವಾಗ.  ಕೆಲವರಿಗೆ  ಅಂಗಡಿ ಬಾಗಿಲು ಹಾಕಿರುವುದು ಅರಿವಿಗೆ ಬಂದರೆ ಇನ್ನು ಕೆಲವರಿಗೆ ಇಲ್ಲ. ಯಾಕೆ ಬಾಗಿಲು ಹಾಕಿತು ಎಂದು ಯೋಚಿಸುವ ವ್ಯವಧಾನವೂ ಇಲ್ಲ. ಇದು ತಿಳಿದರೆ ಮನುಷ್ಯ ಮನುಷ್ಯನಾಗಿ ಇರುವುದಿಲ್ಲ.  


                ಗಣೇಶನ ಹಬ್ಬ ಕೇವಲ ಇಹಪರದ ವ್ಯಾಪಾರವಾಗಿ ಉಳಿದಿಲ್ಲ. ತನ್ನಲ್ಲಿದ್ದ ಹೂವಿನ ಹೆಸರನ್ನು  ಹೂವಿನ ರಾಶಿ ಹಾಕಿ ಹೂವಿನವ ಕೂಗಿ ಹೇಳುತ್ತಿದ್ದ,  ಪೇರಿಸಿಟ್ಟ ಹೂವಿನ ಪರಿಮಳಕ್ಕಿಂತಲೂ  ಈತನ ಧ್ವನಿಯೇ ಸುತ್ತಲೂ ಪಸರಿಸಿರುತ್ತದೆ. ಆತ ಮಾರಾಟ ಮಾಡಿದ್ದು,  ಅದರಲ್ಲಿ ತಮಗೆ ಬೇಕಾದದ್ದು ಬಂದವರು ಕೊಂಡುಕೊಳ್ಳುತ್ತಾರೆ.  ಈ ನಡುವೆ ಗಣೇಶನಿಗೆ ಏನು ಬೇಕೋ ಕೆಲವೊಮ್ಮೆ ಅರ್ಥವಾಗುವುದಿಲ್ಲ. ಬಹುಶಃ ಮನುಷ್ಯ ಮಾತ್ರನಿಗೆ ಅರ್ಥವಿಸುವುದಕ್ಕೆ ಸಾಧ್ಯವಿಲ್ಲ. ಮನುಷ್ಯನಿಗೆ  ತನ್ನ ಹಸಿವನ್ನೇ ದೇವರ ಹಸಿವು  ಎಂದು ತಿಳಿಯುವುದರಲ್ಲಿ ಏನೋ ಒಂದು ತೃಪ್ತಿ ಇದೆ.  ಹೂವಿನವನು ಕೂಗಿ ಕೂಗಿ ಹೇಳುತ್ತಿದ್ದ. ಈಗ ಅತನಿಗೆ ಧ್ವನಿ ಕೂಡಿಸಲು ಪುಟ್ಟ ಮೈಕು ಒಂದು ಬೇರೆ ಇದೆ. ಸುತ್ತಲೂ ಆತನದೇ ಧ್ವನಿ. ಮನೆ ಬಾಗಿಲಿಗೆ ಬರುತ್ತಾನೆ, ಮನೆಯವರು ಕೊಂಡರೂ ಈತನ ಧ್ವನಿ ನಿಲ್ಲುವುದಿಲ್ಲ. ಮತ್ತೂ ಕೂಗುತ್ತಿರುತ್ತಾನೆ. ಯಾಕೆಂದರೆ, ಊರವರು ಹಬ್ಬ ಮಾಡಿದರೆ ಈತನ ಮನೆಯಲ್ಲಿ ಹಬ್ಬ ಆಗುತ್ತದೆ.  ಆ ಹೂವು ಎಲ್ಲೋ ಹೇಗೋ ಅರಳಿ ಹೇಗೋ ಬಂದು ದೇವರ ಪಾದ ಸೇರುತ್ತದೆ. ಹಲವು ಸಲ ಸಂದೇಹ ಬರುತ್ತದೆ ಮನುಷ್ಯ ದೇವರ ಸೃಷ್ಟಿಯೋ?  ದೇವರು ಮನುಷ್ಯನ ಸೃಷ್ಟಿಯೋ? ತನ್ನ ಮನದ ಭಾವನೆಯನ್ನೇ ಮನುಷ್ಯ ದೇವರು ಅಂತ ಕರೆದ.  ಹೀಗೆ ಹಬ್ಬ ಬರುವಾಗ ಮಾತ್ರ ದೇವರ ನೆನಪಾಗಿ ಉಳಿದಂತೆ ತಮ್ಮ ವ್ಯವಹಾರದಲ್ಲಿ ಆತನನ್ನು ಮರೆತು ತಮ್ಮ ತಮ್ಮ ಕಾಮ ಕ್ರೋಧ ಲೋಭಕ್ಕೆ ಶರಣಾಗುತ್ತಾನೆ. ಪ್ರಪಂಚದ ವ್ಯವಹಾರವೇ ಹಾಗೆ, ಪರಮ ಧಾರ್ಮಿಕನೂ ದೇವರನ್ನು ಪೂಜಿಸುತ್ತಾನೆ. ಮಹಾ ದರೋಡೆಕೋರನೂ ತನ್ನ ಕಾರ್ಯಕ್ಕೆ ಹೊರಡುವಾಗ ದೇವರನ್ನುಪ್ರಾರ್ಥಿಸುತ್ತಾನೆ. ಯಾರ ಬಯಕೆಯನ್ನು ದೇವರು ಹೇಗೆ ತೀರಿಸುತ್ತಾನೋ ಅದೇ ಸೋಜಿಗ.


                    ಈ ಬಾರಿಯಂತೂ ಗಣೇಶನ ಹಬ್ಬ ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿ ಬಂದಿದೆ. ಹಬ್ಬ ಬೇಕೋ ? ಬೇಡವೊ ? ಸಂದೇಹದಲ್ಲಿ ಹಬ್ಬ ಆಚರಿಸುತ್ತಾನೆ.  ಅದರೆ ಒಂದು, ಈ ಸಲ  ಭಕ್ತಿಗೆ ಹೆಚ್ಚು ಅವಕಾಶ ಇದ್ದ ಹಾಗೆ ಉಂಟು.  ಅದಕ್ಕೆ ಒಂದು ಕಾರಣವೆಂದರೆ ಜಗತ್ತನ್ನೇ ವ್ಯಾಪಿಸಿರುವ ಮಹಾ ರೋಗ.  ಇನ್ನೊಂದು ಸರಕಾರವೇ ಗಣೇಶನ ಹಬ್ಬಕ್ಕೆ ಹಲವು ನಿಬಂಧನೆ ಹಾಕಿದೆ. ಗಣೇಶನ ಮೂರ್ತಿ ಇಷ್ಟೇ ಗಾತ್ರದ ಒಳಗಿರಬೇಕು, ಇನ್ನೊಂದು ಹೆಚ್ಚು ಜನ ಸೇರಬಾರದು. ಮಾಸ್ಕ್ ಧರಿಸಿ ದೇವರಿಗೂ ಸರಿಯಾಗಿ ಮುಖ ತೋರಿಸಬಾರದು. ಆದರೆ  ದೇವರಿಗೆ ಮುಖ ತೋರಿಸುವ ಸ್ಥಿತಿಯಲ್ಲಿ ಮನುಷ್ಯ ಇಲ್ಲ. ಮುಖ್ಯ ವಿಷಯವೆಂದರೆ ಈ ಸಲ  ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಹಲವು ಕಲಾವಿದರಿಗೆ  ಗಣಪತಿ ಪ್ರಸಾದ ಕಹಿಯಾಗುತ್ತದೆ. ಆದರೂ  ಅನಾವಶ್ಯಕ ಆಡಂಬರದ ಗದ್ದಲವಿಲ್ಲದ ಕೇವಲ ಭಕ್ತಿ ಮಾತ್ರ ಪ್ರಧಾನವಾದ ಗಣೇಶ ಹಬ್ಬ ನಿಜಕ್ಕೂ ಅರ್ಥ ಪೂರ್ಣವಾದೀತು.  ಪ್ರತಿಸಲ ಈ ಗದ್ದಲ, ಆಡಂಬರ ಜಗಳ ಜನಗಳಿಗೆ ಕೊಡುವ ಕಿರುಕುಳ ತೊಂದರೆಯಿಂದ ಈ ಗಣೇಶ ಹಬ್ಬ ಯಾಕಾದರೂ ಬರುತ್ತದೋ ಅಂತ ಅನ್ನಿಸುತ್ತದೆ.  ಆ ಗಣೇಶನ ಮೂರ್ತಿಗೆ ಕೊಡುವ ಕಷ್ಟ ನೋಡಿದರೆ ಮನುಷ್ಯ ದೇವರನ್ನೂ ಬಿಡುವುದಿಲ್ಲ . ಆ ಬೀದಿಯವನು ಗಣೇಶನನ್ನು ಕೂರಿಸಿದ ಅಂತ ಈ ಬೀದಿಯವನು ಕೂರಿಸುತ್ತಾನೆ. ಮನೆಯಲ್ಲಿ ಹಿಟ್ಟಿಗೆ ಗತಿ ಇಲ್ಲದಿದ್ದರೂ ಅಬ್ಬರದ ಗಲಾಟೆಗೆ ಏನೂ ಕಡಿಮೆ ಇಲ್ಲ. ಸುತ್ತ ಮುತ್ತಲಿನವರನ್ನು ಬಂದು ಹೋದವರನ್ನು ಹಿಂಡಿ ಹಿಪ್ಪೆ ಮಾಡಿ ಬೆದರಿಸಿಯಾದರು ಗಣಪತಿ ಸೇವೆ ಮಾಡಿಸಿಕೊಳ್ಳುತ್ತಾರೆ. 


                    ಗಣೇಶನ ಹಬ್ಬ ಎನ್ನುವಾಗ ಆರಂಭದಲ್ಲಿ ನಮ್ಮ ಮನೆಗೂ ಆದ ಒಂದು ಕಹಿ ಅನುಭವ ಮರೆಯುವುದಕ್ಕಿಲ್ಲ. ಅದಾಗ ಬೆಂಗಳೂರಿಗೆ ಬಂದ ಹೊಸತು. ಗಣೇಶನ ಹಬ್ಬಕ್ಕೆ ನಮ್ಮ ಬೀದಿಯ ಭಕ್ತ ಮಹಾಶಯರು ಗಣೇಶೋತ್ಸವ ಮಾಡುತ್ತಾರೆ. ವರ್ಷಂ ಪ್ರತಿ ನಮ್ಮ ಮನೆಯ ಗೇಟ್ ಮುಂದೆ ಚಪ್ಪರ ಹಾಕಿ ಗಣಪತಿಯನ್ನು ತಂದಿರಿಸುತ್ತಿದ್ದರು. ಈ ಸಲವು ಇದೆ ಎನ್ನುವಾಗ ನಮ್ಮೂರಿನ ಗಣೇಶೋತ್ಸವ, ಆ ಪೂಜೆ ಭಜನೆ ಕಂಡ ನಮಗೆ ಬಹಳ ಸಂತಸವಾಗಿತ್ತು. ಆದರೆ ಕಥೆ ಮುಂದೆ ಹೋದಂತೆ ನಮ್ಮೂರಿನಂತೆ  ಪೂಜೆ ಭಜನೆ ಯಾವುದೂ ಇಲ್ಲದ ಒಂದು ವಿಚಿತ್ರ ಗಣಪ ನಮ್ಮ ಮನೆಯ ಮುಂದೆ ಇದ್ದ. ಗಣೇಶೋತ್ಸವದ ಮೊದಲ ದಿನ ಎಲ್ಲರೂ ಸೇರಿ ಚೆನ್ನಾಗಿತ್ತು ಎನ್ನುವಷ್ಟರ ಮಟ್ಟಿಗೆ ಉತ್ಸವ ಸಾಗಿತ್ತು. ನಾವು ಮನೆಯಲ್ಲಿ ಅವಲಕ್ಕಿ ಪಂಚಕಜ್ಜಾಯ ಮಾಡಿ ದೇವರ ಮುಂದೆ ಇಟ್ಟೆವು.  ಮತ್ತೆ ತಿಳಿಯಿತು ನಮ್ಮಲ್ಲಿ ಪ್ರತಿ ಹಬ್ಬಕ್ಕೂ ಇರುವ ಈ ಪ್ರಸಾದ  ಇಲ್ಲಿನವರಿಗೆ ಪರಿಚಯವೇ ಇಲ್ಲ. ಹೋಗಲಿ, ದಿನ ಕಳೆದಂತೆ ಗಣಪತಿಗೆ ಪೂಜೆಯೂ ಇಲ್ಲ ದೀಪವೂ ಇಲ್ಲ. ತಂದಿಟ್ಟ ಹೂವು ಹಣ್ಣು ಧೂಳು ಹಿಡಿದು ಗಣಪತಿ ವಿಗ್ರಹ ಬಣ್ಣವೇ ಬದಲಿಸಿದರೂ ಗಣಪತಿ ವಿಸರ್ಜನೆ ಯಾಕೆ ಇಲ್ಲ ಅಂತ ನಮಗೆ ಅಚ್ಚರಿಯಾಗಿತ್ತು.    ಮಾತ್ರವಲ್ಲ ಮನೆಯ ಬಾಗಿಲಲ್ಲಿ ಅಡ್ಡವಾಗುವಂತೆ ಇದ್ದ ಚಪ್ಪರ,  ರಸ್ತೆಯ ಕೊನೆಯಲ್ಲಿ ನಮ್ಮ ಮನೆ ಇದ್ದುದರಿಂದ ನಮಗೆ ಹೊರಗೆ ಓಡಾಡುವುದು ಬಹಳ ಕಷ್ಟವೇ ಆಗಿತ್ತು.  ಹಗಲಲ್ಲಿ ಯಾರೂ ಇಲ್ಲದೆ ರಾತ್ರಿಯಾಗುತ್ತಿದ್ದಂತೆ ಬೀದಿಯ ಹುಡುಗರು ಅಲ್ಲಿ ಬಂದು ಮಲಗುವುದಕ್ಕೆ ತೊಡಗಿದರು. ಇದು ಆರಂಭದಿಂದಲೂ ಇತ್ತು. ಗಣಪತಿಯ ರಕ್ಷಣೆಗೆ ! ಆದರೆ ಹೀಗೆ ಮಲಗಿದವರು ಮರುದಿನ ಹೊತ್ತು ಮಧ್ಯಾಹ್ನ ವಾದರೂ ಏಳುವುದಿಲ್ಲ. ನಮಗೆ ಮನೆಯ ಎದುರು ಇದೊಂದು ಅಪಶಕುನ . ಅದೂ ಹೇಗೆ ಹೇಗೋ ಸ್ವಯ ಇಲ್ಲದೇ ಮಲಗಿಬಿಡುತ್ತಾರೆ.  ಅಂತೂ ಇಂತು ಒಂದು ದಿನ ಗಣಪತಿಯನ್ನು ವಿಸರ್ಜನೆ ಮಾಡಿಯಾಯಿತು. ಆದರೆ ಚಪ್ಪರ ಹಾಗೇ ಉಳಿದು ಬಿಟ್ಟಿತು. ನಾವು ಒಂದೆರಡು ಸಲ ಚಪ್ಪರ ತೆಗೆವಂತೆ ಮನವಿ ಮಾಡಿದೆವು. ಪರಿಣಾಮ ಇಲ್ಲ.   ಮತ್ತೆ ಮತ್ತೆ   ಸಂಬಂಧ ಪಟ್ಟ ಹುಡುಗರು ಯಾರೂ ನಮ್ಮ ಕಣ್ಣಿಗೆ ಬೀಳದೆ ತಪ್ಪಿಸಿಕೊಳ್ಳುತ್ತಿದ್ದರು.  ರಾತ್ರಿ ಅದಾವುದೋ ಹೋತ್ತಿನಲ್ಲೋ ಬಂದು ಮಲಗಿಬಿಡುತ್ತಿದ್ದರು. ಈ ನಡುವೆ ನಮ್ಮಲ್ಲಿಗೆ ಬಂದವರಿಗೆ ಚಪ್ಪರದ ಮಾಡು ತಗಲಿ ರಕ್ತ ಸುರಿದು ಬಹಳಷ್ಟು ತೊಂದರೆ ಯಾಯಿತು. ಆದರೂ ಚಪ್ಪರ ತೆಗೆಯದಾಗ ಹೇಗೋ ಅವರನ್ನು ಹುಡುಕಿ ಹೇಳಿದರೆ ಅಕ್ಷರಶಃ ನಮ್ಮ ಮೈ ಮೇಲೆ ಏರಿ ಬಂದರು. ಒಂದು  ರೀತಿಯ ಸೌಮ್ಯ ರೌಡಿಸಂ. ಬೆದರಿಕೆ.   ಕೊನೆಗೆ ನಾನು ಸ್ಥಳೀಯ ಕಾರ್ಪೊರೇಟರ್ ಮನೆಗೆ ಹೋಗಿ ದೂರಿತ್ತೆ. ಅವರು ಆಗಲೇ ಸ್ಪಂದಿಸಿ ಒಂದೆರಡು ಸಲ ಆ ಹುಡುಗರನ್ನು ಎಚ್ಚರಿಸಿದರೂ ಪರಿಣಾಮ ಇಲ್ಲದಾಗ ನಗರ ಪಾಲಿಕೆ ಲಾರಿ ತಂದು ಚಪ್ಪರ ಕಿತ್ತು  ಎತ್ತಿಸಿದರು. ಹಾಗೆ ಚಪ್ಪರ ಕೀಳುತ್ತಿರಬೇಕಾದರೆ ಚಪ್ಪರದ ಒಂದು ಮೂಲೆಯಲ್ಲಿ ಒಂದು ರಾಶಿ ಮದ್ಯದ ಬಾಟಲಿಗಳು  ಗಣೇಶ ತೀರ್ಥ ಸೇವನೆಯಾದ ಕುರುಹಾಗಿ ಸಿಕ್ಕಿತ್ತು.  ಪುಟ್ಟ ಪುಟ್ಟ ಮಕ್ಕಳೂ ಅಲ್ಲಿ ಯಾಕೆ ಮಲಗುತ್ತಿದ್ದರು ಎಂದು ಈಗ ಅರಿವಿಗೆ ಬಂತು. ಇಷ್ಟಾದರೂ ಬೀದಿಯ ಉಳಿದ ಮನೆಯವರು ನಮ್ಮನ್ನು ವೈರಿಗಳಂತೆ ಕಂಡರು. ದೇವರ ಮೇಲೆ ಭಕ್ತಿಯೇ ಇಲ್ಲವೇನೋ ಎಂಬಂತೆ ಕಾಣತೊಡಗಿದರು. ಆದರೂ ನಾವು ಗಣ್ಯ ಮಾಡಲಿಲ್ಲ. ಆನಂತರ ನಮ್ಮ ಮನೆಯ ಎದುರು ಗಣಪತಿಗೆ ಸ್ಥಾನವಿಲ್ಲ...... 


                    ಹೀಗೆ  ಗಣೇಶ ಹಬ್ಬ ಎಂದರೆ ಯಾಕೆ ಬರುತ್ತದೆ ಅಂತ ಅನ್ನಿಸುತ್ತಿದ್ದರೆ,  ನಮ್ಮ ಅನುಭವವೇ ಎಲ್ಲರಿಗೂ ಇದೆ ಅಂತ ಅಲ್ಲ., ಆದರೆ ಇದೇ ರೀತಿಯ ಅನುಭವ ಹಲವರಿಗೆ ಆಗಿರುತ್ತದೆ. ಒಂದು ಹಬ್ಬ ಬಂದಾಗ ಅದನ್ನು ಹೇಳಿಕೊಂಡು ಹಲವರು ಹೊಟ್ಟೆ ಹೊರೆಯುತ್ತಾರೆ. ಉಳಿದವರ ಹಬ್ಬದಿಂದ ತಾವೂ ಹಬ್ಬ ಮಾಡುತ್ತಾರೆ. ಇದು ಸತ್ಯ. ಆದರು ಸರಳವಾಗಿ ಮನೆಯ ದೇವರ ಕೋಣೆಯಲ್ಲಿ ಸರಳವಾಗಿ ನಿತ್ಯ ನಮಸ್ಕರಿಸುವ ದೇವರಿಗೆ ಒಂದು ನೈವೇದ್ಯ ಇರಿಸಿ  ಭಜನೆ ಮಾಡಿದರೂ ಗಣಪತಿ ಒಲಿಯುತ್ತಾನೆ. ಯಾರಿಗೂ ತೊಂದರೆ ಕೊಡದೆ ಹಬ್ಬ ಆಚರಿಸುವುದಕ್ಕೆ ಸಾಧ್ಯವಿದೆ. ಆದರೆ ಹೆಚ್ಚು ತೊಂದರೆ ಕೊಟ್ಟಷ್ಟು ಗಣಪತಿ ಒಲಿಯುತ್ತಾನೆ ಎನ್ನುವ ಭಾವದಲ್ಲಿ ಗಣೇಶೋತ್ಸವ ಆಚರಿಸುವುದು.....ಅದೂ ಭಕ್ತಿಯೊಂದು ಬಿಟ್ಟು ಉಳಿದೆಲ್ಲವನ್ನೂ ದೇವರ ಮುಂದಿಡುವುದು ಮೂರ್ಖತನವಲ್ಲವೇ? ಹಾಗಾಗಿ ಅನ್ನಿಸಿಬಿಡುತ್ತದೆ ಈ ಗಣೇಶೋತ್ಸವ ಯಾಕಾಗಿ ಬರುತ್ತದೆಯೋ ಅಂತ. ಆದರೂ ಚೌತಿಯ ದಿನ ಮುಂಜಾನೆ ದೇವರ ಧ್ಯಾನ ಮಾಡುತ್ತಿರಬೇಕಾದರೆ ಆ ಮಹಾಗಣಪತಿ ಕಣ್ಣ ಮುಂದೇ ಕುಣಿದಾಡಿ ಇಂದು ಗಣೇಶ ಚತುರ್ಥಿ ಅಂತ ಕೂಗಿ ಹೇಳುವಾಗ ನಮ್ಮನ್ನೇ ನಾವು ಮರೆಯುತ್ತೇವೆ.