"ನಮ್ಮ ಮನಸ್ಸಿನಲ್ಲಿ ಇಲ್ಲದೇ ಇರುವ ಪರಮಾತ್ಮನನ್ನು ನಾವು ಸರ್ವಾಂತರ್ಯಾಮಿ ಎನ್ನುತ್ತಿದ್ದೇವೆ. "
ಸತ್ಯ ಕಹಿ ಅಂತ ಮೂರ್ಖರು ಹೇಳುವ ಮಾತು. ಸತ್ಯ ಕಹಿಯೂ ಅಲ್ಲ ಸಿಹಿಯೂ ಅಲ್ಲ ಅದು ಕೇವಲ ಸತ್ಯವಾಗಿಯೇ ಇರುತ್ತದೆ. ಹಾಗಾಗಿಯೇ ಅದು ಸತ್ಯ ಎಂದಾಗುವುದು. ಸತ್ಯವನ್ನು ಕಹಿ ಅಂತ ಅರಗಿಸಿಕೊಳ್ಳಲಾಗದೇ ಇರುವಲ್ಲಿ ಸತ್ಯದ ಹಿನ್ನೆಲೆಯನ್ನು ತರ್ಕಿಸಲಾಗುತ್ತದೆ. ಪರೀಕ್ಷಾ ರಂಗದಲ್ಲಿ ಕರ್ಣ ಅರ್ಜುನನಿಗೆ ಸಮದಂಡಿಯಾಗಿ ಪ್ರದರ್ಶನ ನೀಡಿದ್ದು ಸತ್ಯ. ಆದರೆ ಆ ಸತ್ಯ ಅಲ್ಲಿ ಅಪ್ರಸ್ತುತವಾಗಿ ಕರ್ಣನ ಹಿನ್ನೆಲೆಯನ್ನು ಕೆದಕಲಾಯಿತು. ತೀರ ಅವಶ್ಯಕವಿದ್ದಲ್ಲಿ ಈ ಸತ್ಯವನ್ನು ಕೆದಕುವುದಿಲ್ಲ. ಸತ್ಯ ಯಾವಾಗಲೂ ಅಬಾಧಿತವಾಗಿರುವುದು. ಅದು ಬಾಧೆಗೆ ಒಳಗಾದಂತೆ ಭಾಸವಾಗುವುದು ನಮ್ಮ ದೃಷ್ಟಿಯಿಂದ.
ರಾಮನು ಕಾಡಿಗೆ ಹೋದನು. ರಾಮ ಎಂದು ಬರುವಾಗ ಅಲ್ಲಿ ಅಯೋಧ್ಯೆಗಿಂತಲೂ ಮೊದಲು ಸ್ಮರಣೆಗೆ ಬರುವುದೆಂದರೆ ಅದು ಕಾಡು. ಹಾಗಾಗಿ ರಾಮನು ಕಾಡಿಗೆ ಹೋದನು. ಮೂರ್ಖನಾದವನು ಚಿಂತಿಸುವ ರೀತಿಯೇ ಬೇರೆ. ರಾಮ ಇದ್ದನೇ? ರಾಮಾಯಣ ನಡೆದದ್ದು ನಿಜವೇ? ಕಾಡಿನಲ್ಲಿ ಇದ್ದದ್ದು ಸತ್ಯವೇ? ಹೀಗೆ ರಾಮನ ಹಿಂದಿನ ಸತ್ಯವನ್ನೇ ಕೆದಕುವುದು.ಯಾಕೆಂದರೆ ರಾಮನ ಅಸ್ತಿತ್ವ ಸಹಿಸುವುದಕ್ಕೆ ಆಸಾಧ್ಯವಾಗುತ್ತದೆ. ರಾಮನ ಅಸ್ತಿತ್ವದ ಬಗ್ಗೆ ಚಿಂತಿಸುವ ಮೊದಲು ರಾಮ ತತ್ವವನ್ನು ಯೋಚಿಸಬೇಕು. ರಾಮನಿಗಿಂತಲೂ ಸತ್ಯ ರಾಮ ತೋರಿಸಿದ ತತ್ವಗಳು. ಈ ತತ್ವಗಳು ಕಹಿಯಾಗುವಾಗ ರಾಮ ಎನ್ನುವುದು ಸುಳ್ಳಾಗಿ ಭಾಸವಾಗುತ್ತದೆ.
ರಾಮ ಕಾಡಿಗೆ ಹೋದನು. ರಾಮನಿಗೆ ಜನನದಿಂದ ಕಾಡು ಹತ್ತಿರವಾಗಿರುತ್ತದೆ. ರಾಮ ಕಥೆಯಲ್ಲಿ ಕಾಡು ಒಂದು ಪ್ರಮುಖ ಅಂಶವಾಗಿದೆ. ರಾಮಾಯಣದ ಪ್ರತಿಹಂತದಲ್ಲು ಒಂದಲ್ಲ ಒಂದು ವಿಧದಲ್ಲಿ ವ್ಯಕ್ತಿತ್ವ ಕಾಡಿಗೆ ಅಂಟಿಕೊಂಡೇ ಇರುತ್ತದೆ. ಆದಿಯಲ್ಲಿ ಯಜ್ಞ ರಕ್ಷೆಗೆ ವಿಶ್ವಾಮಿತ್ರರು ಕಾಡಿಗೆ ಕರೆದೊಯ್ಯುತ್ತಾರೆ. ನಂತರ ವನವಾಸ. ಇಲ್ಲಿರುವ ತತ್ವ ರಾಮನಿಗೆ ಕಾಡು ಎಷ್ಟು ಹತ್ತಿರವಾಗಿದೆ ಎಂದಾಗಿರುತ್ತದೆ. ಸೀತೆಯನ್ನು ಕಾಡಿಗೆ ಅಟ್ಟಿದನು. ಸೀತೆಗೆ ಅನ್ಯಾಯವಾಯಿತು. ಹೆಣ್ಣು ಯಾವತ್ತಿದ್ದರೂ ಶೋಷಿತಳು ಹೀಗೆ ವಿಶ್ಲೇಷಿಸುವಾಗ ರಾಮನಿಗೂ ಕಾಡಿಗೂ ಇರುವ ಸಂಬಂಧವನ್ನು ಯೋಚಿಸುವುದಿಲ್ಲ. ಯಾಕೆಂದರೆ ತತ್ವ ಕಠಿಣವಾದಾಗ ಅದರ ಹಿಂದಿನ ಸತ್ಯ ಕಹಿಯಂತೆ ಭಾಸವಾಗುತ್ತದೆ.
ಬಾಲ್ಯದಲ್ಲಿ ನಾನು. ಸಿನಿಮಾಕ್ಕೆ ಹೋಗಿದ್ದೆ. ಸಿನಿಮಾ ಎಂದರೆ ಏನು ಅಂತ ತಿಳಿಯದು. ತೆರೆಯ ಮೆಲೆ ಚಿತ್ರ ವಿಚಿತ್ರ ನೋಡಿ ಬೆರಗಾದೆ. ಚಿತ್ರದ ಕಥೆಯ ಬಗ್ಗೆ ಯೋಚಿಸಲಿಲ್ಲ. ವಿರಾಮದ ವೇಳೆಯಲ್ಲಿ ಟಾಕೀಸ್ ಹಿಂಭಾಗ ಹೋಗಿ ನೋಡಿದೆ...ಸಿನಿಮಾದಲ್ಲಿ ಬಂದ ಮಂದಿ ಅಲ್ಲೆಲ್ಲಾದರೂ ಕಾಣ ಸಿಗುತ್ತಾರೆಯೇ? ನನ್ನಂತೆ ಹಲವರು ಇಣುಕಿ ನೋಡುತ್ತಿದ್ದರು...! ನಮಗೆ ಕಥೆಗಿಂತಲೂ ವಿಚಿತ್ರವಾದ ವಿಷಯ ಬೇರೆಯೇ ಆಗಿತ್ತು. ಸಿನಿಮಾದಲ್ಲಿ ಯಾವ ಸಂದೇಶ ಬಂದರೇನು? ನಮಗದು ಬೇಡ. ನಾವು ತೆರೆಯ ಹಿಂದಿನ ಸತ್ಯ ಹುಡುಕುತ್ತಾ ಹೋದೆವು.
ಶ್ರೀ ರಾಮನಿಗೆ ಆಯೋಧ್ಯಾ ನಗರಕ್ಕೂ ದಂಡಕಾರಣ್ಯಕ್ಕೂ ವೆತ್ಯಾಸವೇ ಇರಲಿಲ್ಲ. ಶರೀರಾದ್ಯಂತದಲ್ಲಿ ಮೇಲೆ ಇರುವ ಕೈಗೂ ಕೆಳಗಿರುವ ಪಾದಕ್ಕೂ ವೆತ್ಯಾಸ ಕಲ್ಪಿಸುವವನು ಮೂರ್ಖನಾಗುತ್ತಾನೆ. ನೋವಾದರೆ ಕೈಗಾದರೇನು ಕಾಲಿಗಾದರೇನು ಸಹಿಸುವುದು ದೇಹವೇತಾನೇ? ಸಮಸ್ತ ಭೂಮಿಯೇ ಶ್ರೀರಾಮನಿಗೆ ದೇಹವಿದ್ದಂತೆ. ಇಂದು ಜನಪ್ರತಿನಿಧಿಗಳಾದ ಕೂಡಲೇ ರಾಜಧಾನಿಯನ್ನೇ ಸ್ವಂತ ಮನೆಯಂತೆ ಕಾಣುವ ಮಂದಿಗೆ ರಾಮನ ಈ ತತ್ವದ ಆಳ ಅರಿವಾಗುವುದಿಲ್ಲ. ಕಾಡಿಗೆ ಹೋಗುವಲ್ಲಿ ಕೈಕೇಯಿ ಮಂಥರೆ ಇದಾವುದೂ ಮುಖ್ಯವೆನಿಸಲಿಲ್ಲ. ಪಿತೃವಾಕ್ಯ ಎಂಬುದು ಒಂದು ತತ್ವವಾದರೆ ಕಾಡು ತನ್ನದೆಂಬ ಕರ್ತವ್ಯ ಮಮಕಾರ ಇನ್ನೊಂದೆಡೆ. ಹಾಗಾಗಿ ಅಯೋಧ್ಯೆಯ ಬೀದಿಗಳಂತೆ ದಂಡಕಾರಣ್ಯದ ಗುಡ್ಡ ಕಣಿವೆಗಳು.
ಯಾರೋ ಒಬ್ಬ ಯಃಕಶ್ಚಿತ್ ಅಗಸನ ಮಾತನ್ನು ಕೇಳಿ ಸೀತೆಯನ್ನು ಕಾಡಿಗೆ ಬಿಟ್ಟ. ಇದು ಅಮಾನವೀಯತೆ ಅಂತ ಬಣ್ಣಿಸುವುದು ಸುಲಭ. ಸೀತೆಯನ್ನು ಬೇರೆಲ್ಲೂ ಬಿಡಲಿಲ್ಲ, ತನಗೆ ಪ್ರಿಯವಾದ ಕಾಡನ್ನೇ ಆಯ್ಕೆ ಮಾಡಿದ್ದ. ತನ್ನೊಂದಿಗಿನ ಹದಿನಾಲ್ಕು ವರ್ಷದ ವನವಾಸದಲ್ಲಿ ಕಾಡು ಎಂದರೇನೆಂದು ಆಕೆಗೆ ಶ್ರೀರಾಮ ತೋರಿಸಿಕೊಟ್ಟ ಮೇಲೆ ಕಾಡಿಗೆ ಬಿಡುವ ತತ್ವವೇ ಪವಿತ್ರವಾಗಿರುತ್ತದೆ. ಅರಸನಾದವನು ಕೇವಲ ಒಬ್ಬ ಮನುಷ್ಯನ ಮಾತಿಗೆ ಮನ್ನಣೆ ಕೊಡುತ್ತಾನೆ ಎಂದರೆ ಈಗಿನ ಆಢಳಿತ ಮಂದಿಗಳನ್ನು ನೋಡಿ ಕೇಳಬೇಕಾದವರ ಮಾತೇ ಇವರಿಗೆ ಕೇಳಿಸುವುದಿಲ್ಲ.!! ರಾಮನ ತತ್ವ ಇನ್ನೂ ಆಳಕ್ಕೆ ಯೋಚಿಸಬೇಕು. ಶ್ರೀ ರಾಮ ಕೇವಲ ರಾವಣ ಸಂಹಾರಕ್ಕಾಗಿ ಬರಲಿಲ್ಲ. ಸೀತೆಯನ್ನು ವರಿಸುವುದಕ್ಕಾಗಿ ಅವತರಿಸಲಿಲ್ಲ ತಾನು ಅಧಿಕಾರದಲ್ಲಿದ್ದರೇನು, ತನ್ನ ಅಷ್ಟೂ ಮಂದಿ ಪ್ರಜೆಗಳಲ್ಲಿ ಒಬ್ಬ ತನ್ನ ಬಗ್ಗೆ ಅಪಸ್ವರ ಎತ್ತುತ್ತಾನೆ ಎಂದಾಗ ರಾಮ ಅದಕ್ಕೆ ಪೂರಕವಾಗಿಯೇ ತನ್ನ ನಡೆಯನ್ನು ತೋರಿಸಿದ. ಉನ್ನತವಾದ ಸ್ಥಾನ ಉನ್ನತಿಯನ್ನು ತೋರುವುದೆಂದರೆ ಹೀಗೆ. ನಾವು ಉನ್ನತವಾದ ಸ್ಥಾನದಲ್ಲಿ ಎಲ್ಲರಿಗೂ ಕಾಣುವಂತಿರುವಾಗ ಬಹುಮತವನ್ನು ಪರಿಗಣಿಸುವುದಲ್ಲ, ಸರ್ವಾನುಮತವನ್ನು ಅಂಗೀಕರಿಸಬೇಕು. ರಾಮ ಮತ್ತು ರಾಮನ ಹಾದಿಯನ್ನು ಅನುಸರಿಸುವಾಗ ಈ ಅಂಶಗಳೇ ಪ್ರಧಾನವಾಗಿರುತ್ತವೆ. ತಮ್ಮ ಬಗೆಗಿನ ಒಂದು ಅಪಸ್ವರವನ್ನೂ ಮನ್ನಿಸಬೇಕಾಗುತ್ತದೆ. ಇದನ್ನು ರಾಮ ತಾನು ಆಚರಿಸಿ ತೋರಿಸಿದರೆ ಇಂದಿನ ಉನ್ನತ ವ್ಯಕ್ತಿಗಳನ್ನು ಗಮನಿಸಿ ರಾಮನ ಅನುಸರಣೆಗೆ ಎಷ್ಟು ಮನ್ನಣೆ ಒದಗಿಸುತ್ತಾರೆ ಎಂದು ಅರಿವಾಗುತ್ತದೆ. ಸ್ವರವೋ ಅಪಸ್ವರವೊ ವಿರುದ್ಧವಾಗಿದ್ದವುಗಳನ್ನು ದಮನ ಮಾಡಲಾಗುತ್ತದೆ. ರಾಮನ ಮಹಿಮೆಯನ್ನು ಹೊಗಳಿ ದೇವರೆಂದು ಪೂಜಿಸುವಾಗ ರಾಮ ಅಗಸನ ವಿಚಾರದಲ್ಲಿ ನಡೆದುದನ್ನು ಗಮನಿಸಬೇಕು. ರಾಮ ಭಜನೆಗಿಂತ ರಾಮ ತತ್ವವನ್ನು ಅನುಸರಿಸಬೇಕು. ಅದುವೇ ಶ್ರೇಷ್ಠ. ಮತ್ತದು ಬಹಳ ಕಷ್ಟ.
ರಜನೀಶರ ಪುಸ್ತಕ ಒಂದರಲ್ಲಿ ಓದಿದ ನೆನಪು. ಎಲ್ಲಿ ಕಾಮವಿರುತ್ತದೋ ಅಲ್ಲಿ ರಾಮನಿರುವುದಿಲ್ಲ. ಬಹಳ ಸರಳವಾದ ತತ್ವ ಇದು. ರಾಮ ಎಂದರೆ ಪರಮಾತ್ಮ. ಎಲ್ಲಿವರೆಗೆ ನಮ್ಮ ದೇಹದಲ್ಲಿ ಕಾಮನೆ ಇರುವುದೋ ಅಲ್ಲಿ ತನಕ ರಾಮನ ಅಸ್ತಿತ್ವ ಇರುವುದಿಲ್ಲ. ಕಾಮ ಎಂದರೆ ಎಲ್ಲ ವಾಂಛಿತ ಬಯಕೆಗಳು. ದೇಹದ ಬಯಕೆಗಳನ್ನು ದೂರ ಮಾಡುವುದೇ ಧ್ಯಾನ. ಧ್ಯಾನವೆಂದರೆ ಕೇವಲ ಸ್ಮರಣೆಯಲ್ಲ. ನಮ್ಮೆಲ್ಲ ಬಯಕೆಗಳನ್ನು ದೌರ್ಬಲ್ಯವನ್ನು ದೂರವಾಗಿಸುವ ಕ್ರಿಯೆ. ಆ ಧ್ಯಾನವೇ ನಮ್ಮ ದೇಹದೊಳಗಿನ ರಾಮನನ್ನು ತೋರಿಸುತ್ತದೆ. ಆದರೆ ರಾಮನ ಮುಂದೆ ನಿಂತಾಗ ನಮ್ಮ ಎಲ್ಲಾ ಬಯಕೆಗಳೂ ಪ್ರಕಟಗೊಳ್ಳುತ್ತವೆ. ಪರಮಾತ್ಮ ಎಂದರೆ ನಮ್ಮ ಆಶೆಗಳನ್ನು ತೀರಿಸುವ ಎಜಂಟ್ ಆಗಿರುತ್ತಾನೆ.
ಇದೀಗ ಐತಿಹಾಸಿಕವಾಗಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ರಾಮ ಮಂದಿರ ನಿರ್ಮಿಸುವಾಗ ರಾಮ
ತತ್ವದ ಅರಿವು ಉಂಟಾಗಬೇಕು. ಅದರ ಅನುಸರಣೆಯ
ಜಾಗ್ರತಿಯೂ ನಮ್ಮಲ್ಲಿ ಮೊಳಗಬೇಕು. ನಮ್ಮ
ಮನಸ್ಸಿನಲ್ಲೇ ರಾಮ ಇಲ್ಲದಿದ್ದರೆ ರಾಮ ಸರ್ವಾಂತರ್ಯಾಮಿಯಾಗುವುದಕ್ಕೆ ಹೇಗೆ ಸಾಧ್ಯ? ರಾಮನನ್ನು
ಅರಿತು ರಾಮ ತತ್ವವನ್ನು ಅರಿತಾಗ ನಿಜಕ್ಕೂ ಶ್ರೀರಾಮ ಸರ್ವಾಂತರ್ಯಾಮಿಯಾಗುತ್ತಾನೆ.
ಜೈ ಶ್ರೀರಾಮ