ಯಾವುದೋ ದೇವಸ್ಥಾನಕ್ಕೆ ಹೋಗಿ ಬಂದ ಮಿತ್ರರೊಬ್ಬರು ಹೇಳಿದರು, ಅಲ್ಲಿ ನಿತ್ಯ ಗಣಪತಿ ದೇವರೇ ಇರುತ್ತಿತ್ತು. ಈ ಸಲ ಗಣಪತಿ ಅಂತ ನಮಸ್ಕಾರ ಮಾಡಿದೆ. ಮತ್ತೆ ನೋಡಿದರೆ ಅಲ್ಲಿ ಬೇರೆ ಯಾವುದೋ ಸುಬ್ರಹ್ಮಣ್ಯ ಹೀಗೆ ಯಾವುದೋ ಇತ್ತು. ಗಣಪತಿ ದೇವರಿಗೆ ಮಾತ್ರ ನಮಸ್ಕರಿಸುವ ನಮಸ್ಕಾರ ಯಾವುದು ಅಂತ ಮತ್ತೆ ಯೋಚಿಸುವ. ಆದರೆ ನಾನು ಹೇಳಿದೆ, ಯಾಕೆ ಯೋಚನೆ ಸುಬ್ರಹ್ಮಣ್ಯನನ್ನೇ ಗಣಪತಿ ಅಂತ ಕರೆದರಾಯಿತು. ಅದರಲ್ಲೇನು? ನಾನು ಕೊಟ್ಟ ಉತ್ತರ ಮೇಲ್ನೋಟಕ್ಕೆ ಸರಳವಾದರೂ ಅದರಲ್ಲಿ ಅವ್ಯಕ್ತವಾಗಿ ಆಧ್ಯಾತ್ಮಿಕ ಚಿಂತನೆ ಇತ್ತು. ಯಾಕೋ ದೇವರ ವಿಚಾರ ಬಂದಾಗ ನನಗೆ ಈ ಅಧ್ಯಾತ್ಮಿಕ ಚಿಂತೆ ಬಿಟ್ಟು ಆಚೆಗೆ ಯೋಚಿಸುವುದು ಕಷ್ಟವಾಗುತ್ತದೆ. ಮನುಷ್ಯ ಮೂರ್ಖನೋ ಮನುಷ್ಯನನ್ನು ಸೃಷ್ಟಿಸಿದ ಭಗವಂತನ ಇಚ್ಛೆಯ ವೆತ್ಯಾಸವೊ ತಿಳಿಯುವುದಿಲ್ಲ. ಹೀಗೆ ದೈವ ವೆತ್ಯಾಸದಲ್ಲಿ ಆಗುವ ಸಂಘರ್ಷ ಮನುಷ್ಯನ ಅಸ್ತಿತ್ವವನ್ನೇ ಪ್ರಶ್ನಿಸುತ್ತದೆ.
ಇತ್ತಿಚೆಗೆ ಒಂದು ವಿವಾದ ಶಿವಫೂಜೆಯೋ ವಿಷ್ಣು ಪೂಜೆಯೋ? ಯಾವ ವಿಧಾನ? ವಿವಾದ ತಾರಕಕ್ಕೆ ಏರುತ್ತದೆ? ವೈಷ್ಣವ ಶೈವ ಇದರ ಮೂಲ ವೆತ್ಯಾಸದ ಬಗ್ಗೆ ನನಗೆ ಇನ್ನೂ ಸಂದೇಹವಿದೆ. ಒಬ್ಬ ಪರಮಾತ್ಮ ಅದು ಹೇಗೆ ಭಿನ್ನವಾಗುತ್ತಾನೆ? ಭಾವ ವೆತ್ಯಾಸ. ಹೇಗೂ ಇರಲಿ ನನ್ನ ಅಜ್ಞಾನ ಇದ್ದರೂ ಇರಬಹುದು. ಆದರೂ ಶಿವ ವಿಷ್ಣು ವಿವಾದಕ್ಕೆ ಕೊನೆಯಲ್ಲಿ ನ್ಯಾಯಾಲಯವೇ ಪ್ರವೇಶ ಮಾಡುತ್ತದೆ. ನ್ಯಾಯಾಲಯಕ್ಕೆ ಆಧ್ಯಾತ್ಮದ ಅರಿವು ಉಂಟೋ, ಇಲ್ಲವೊ, ಅದನ್ನು ದೃಷ್ಟಿಯಲ್ಲಿಟ್ಟು ನ್ಯಾಯಾಲಯ ಪ್ರವರ್ತಿಸಬಹುದೋ ಇಲ್ಲವೊ ತಿಳಿಯದು. ಆದರೆ ಇಲ್ಲಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡುವುದು ಮನುಷ್ಯನ ಜಗಳ ನೋಡುವಾಗ! ಆದರೂ ನಮಗೆ ತೀರ್ಮಾನ ಬೇಕು. ತೀರ್ಮಾನವಾಗುವುದು ಶಿವ ಹೆಚ್ಚೋ ವಿಷ್ಣು ಹೆಚ್ಚೋ ಅಲ್ಲ. ನಮ್ಮ ಆರಾಧನೆ ತಪ್ಪೋ ಸರಿಯೋ ಇದರ ನಿರ್ಣಯವಲ್ಲ. ಮತ್ತೆ ಯಾವ ನಿರ್ಣಯ. ಮನಸ್ಸಿನ ವಿಕಲ್ಪ. ವಾಸ್ತವದಲ್ಲಿ ಅದಷ್ಟೇ ತೀರ್ಮಾನಿಸಲ್ಪಡುತ್ತದೆ. ನಮ್ಮ ನಮ್ಮ ಭಾವ ವೆತ್ಯಾಸಗಳು ಗೆಲ್ಲುತ್ತವೆ ಇಲ್ಲ ಸೋಲುತ್ತದೆ. ಆದರೆ ದೈವತ್ವದಲ್ಲಿ ಇದು ಪ್ರಭಾವ ಶೂನ್ಯವಾಗಿರುತ್ತದೆ. ,ಮನುಷ್ಯನನ್ನು ದೇವರು ಸೃಷ್ಟಿಸಬಹುದು. ಆದರೆ ಮನುಷ್ಯ ದೇವರನ್ನು ಸೃಷ್ಟಿಸಿದರೆ ಅದು ಅಜ್ಞಾನವಾಗುತ್ತದೆ.
ವಾದ ವಿವಾದದ ಬಗ್ಗೆ ಚರ್ಚೆಯಲ್ಲ. ಅದರ ಬಗ್ಗೆ ಸ್ವಾರಸ್ಯವೇ ಕಾಣುವುದಿಲ್ಲ. ಯಾಕೆಂದರೆ, ದೇವರು ಅಂತ ಹೇಳುವಾಗ ಅಲ್ಲಿ ಎಲ್ಲವೂ ಒಂದಾಗಿ ಕಂಡಂತೆ. ಮನುಷ್ಯ ತನ್ನಲ್ಲಿ ಪರರಲ್ಲಿ ಮಾತ್ರವಲ್ಲ ವೆತ್ಯಾಸ ಗುರುತಿಸುವುದು, ಪರಮಾತ್ಮನಲ್ಲೂ ಗುರುತಿಸುತ್ತಾನೆ. ಅದು ಮನುಷ್ಯ ಸಹಜ ಚಿಂತನೆ. ಧ್ಯಾನದಲ್ಲಿ ಇದಾವುದು ಭಿನ್ನವಾಗಿ ಗೋಚರಿಸುವುದಿಲ್ಲ. ಗೋಚರಿಸಿದರೆ ಅದು ಏಕಾಗ್ರತೆ ಕಳೆದುಕೊಂಡಂತೆ. ಶಿವನೋ ವಿಷ್ಣುವೋ ಗಣಪತಿಯೋ ಸುಬ್ರಹ್ಮಣ್ಯನೋ ಈ ಗೊಂದಲದಲ್ಲಿಯೇ ಮನಸ್ಸು ಇರುತ್ತದೆ ಹೋರತು ಪರಮಾತ್ಮ ಸಾಕ್ಷಾತ್ಕಾರ ಸಾಧ್ಯವಾಗುವುದಿಲ್ಲ. ಇಲ್ಲಿ ಎಲ್ಲವೂ ಒಂದೇ ಅದೇ ಎರಡಲ್ಲದ ಅದ್ವೈತ ಅಂತ ಭಾವನೆ. ಜನಪ್ರಿಯ ನಟನೊಬ್ಬ ರಂಗದ ಮೇಲೆ, ಇಂದು ವಿಷ್ಣುವಾಗಿ ಅಭಿನಯಿಸಬಹುದು. ನಾಳೆ ಶಿವನಾಗಿ , ಮತ್ತೊಂದು ದಿನ ಯಾವುದೋ ರಕ್ಕಸನಾಗಿ ಅಥವಾ ಇನ್ನಾವುದೋ ವೇಶವಾಗಿ ಅಭಿನಯಿಸಬಹುದು. ಎಲ್ಲದರಲ್ಲೂ ಪ್ರೇಕ್ಷಕನಿಗೆ ಗೋಚರವಾಗುವುದು ನಟನ ವ್ಯಕ್ತಿತ್ವ . ಆನಂತರ ಪಾತ್ರದ ವ್ಯಕ್ತಿತ್ವ. ಹೀಗೆ ದೇವರು ಒಬ್ಬ ಜನಪ್ರಿಯ ನಟನಾಗುತ್ತಾನೆ. ನಾವು ನಟನನ್ನೆ ಗುರುತಿಸಬೇಕು. ವೇಶವನ್ನಲ್ಲ. ರಂಗದಲ್ಲಿ ನಟನನ್ನು ಗುರುತಿಸುವವನು ಆ ರಂಗದ ಸ್ಥಿರ ಪ್ರೇಕ್ಷಕನಾಗಿರುತ್ತಾನೆ ಎಂಬುದು ಸತ್ಯ. ಯಾವಾಗಲೊ ಒಂದು ಸಲ ಬಂದು ನೋಡುವವನಿಗೆ ನಟನ ಪರಿಚಯ ಸಿಗುವುದಿಲ್ಲ. ಹೀಗಾಗಿ ಧ್ಯಾನ ಎಂಬುದು ಅವಿರತ ಸಾಧನೆಯಾಗುತ್ತದೆ.
ರಸ್ತೆಯಲ್ಲಿ ಹೋಗುವಾಗ ಯಾರೋ ಒಬ್ಬ ಹಳೆಯ ಪರಿಚಿತ ಸಿಗುತ್ತಾನೆ. ಅತನಿಗೆ ನಿಮ್ಮ ಪರಿಚಯ ಸಿಗುವುದಿಲ್ಲ. ನಿಮಗೆ ಹೌದೋ ಅಲ್ಲವೋ ಎಂಬ ಅನುಮಾನ ಇರುತ್ತದೆ. ಆತ ಹತ್ತಿರ ಬಂದಾಗ ಆತನ ಹೆಸರನ್ನು ಯೋಚಿಸುತ್ತಾ ಉಳಿಯುವುದಲ್ಲ. ಯಾವುದಾದರೂ ರೂಪದಲ್ಲಿ ಉಚ್ಚಾರದಲ್ಲಿ ಆತನನ್ನು ಕರೆದು ಗಮನ ಸೆಳೆಯಬೇಕು. ಆತನ ಹೆಸರೇನೋ ಅಂತ ಯೋಚಿಸುತ್ತಾ ಇದ್ದರೆ ಆತ ನಿಮ್ಮಿಂದ ಸರಿದು ಮುಂದೆ ಹೋಗಬಹುದು.
ಪರಮಾತ್ಮನನ್ನು ಯಾವುದೇ ಹೆಸರಿನಿಂದ ಕರೆದರೂ ಅಲ್ಲಿ ಪರಮಾತ್ಮ ಎಂಬ ಭಾವ ಅತ್ಯವಶ್ಯ. ವಾಸ್ತವದಲ್ಲಿ ದೇವರ ಹೆಸರು ಕಳ್ಳನಿಗೂ ಇರುತ್ತದೆ. ಅದೇ ಹೆಸರು ಸತ್ಯವಂತನಿಗೂ ಇರುತ್ತದೆ.
ಮುಂಜಾನೆ ಮೊದಲ ಜಾವದಲ್ಲೇ ಎದ್ದು ಶುಚಿಯಾಗಿ, ಉದಯಿಸಲಿರುವ ಸೂರ್ಯನನ್ನೇ ಸ್ಮರಿಸಿ ಅರ್ಘ್ಯ ಆಚಮನಾದಿಗಳನ್ನು ಪೂರೈಸಿ ದೇಹದೊಂದಿಗೆ ಮನಸ್ಸೂ ಶುದ್ಧೀಕರಣವಾಯಿತು ಎಂಬ ಭಾವದಲ್ಲಿ ಗಾಯತ್ರೀ ಮಂತ್ರದ ಧ್ಯಾನದಲ್ಲಿ ತಲ್ಲೀನವಾಗುವಾಗ, ಸುತ್ತಲೂ ನೀರವ ಮೌನ ಅಲ್ಲೊಂದು ಇಲ್ಲೊಂದು ಚಿಕ್ಕ ಪುಟ್ಟ ಸದ್ದು ಬಿಟ್ಟರೆ ತನ್ನ ಉಸಿರಿನ ಸದ್ದು ಮಾತ್ರ ಕೇಳಿಸುತ್ತದೆ. ಪೂರಕ ರೇಚಕದ ಉಸಿರಿನಲ್ಲೇ ಮಗ್ನವಾಗಿ ಕಣ್ಣು ಮುಚ್ಚುವಾಗ ಮನಸ್ಸಿನ ಭಾವನೆಗಳೆಲ್ಲ ಶೂನ್ಯವಾಗುತ್ತದೆ. ಸುಖ ದುಃಖ ನೊವು ಯಾವುದೂ ಇಲ್ಲದ ಹಂತಕ್ಕೆ ಮನಸ್ಸು ಎಳೆಯುತ್ತಾ ಇರುತ್ತದೆ. ಯಾಕೆಂದರೆ ಅಲ್ಲಿ ಅದಾವುದಕ್ಕೂ ಸ್ಪಂದನೆ ಇರುವುದಿಲ್ಲ. ಧ್ಯಾನ ಎಂದರೆ ಅದು. ಅಲ್ಲಿ ಯಾವುದೇ ಬೇಡಿಕೆಗಳು ಇರುವುದಿಲ್ಲ. ಯಾವುದೇ ಪೂರೈಕೆಯ ಹಂಬಲ ಇರುವುದಿಲ್ಲ. ದೇಹವಿಡೀ ಸ್ವತಂತ್ರವಾದ ಅನುಭವ. ಕೇವಲ ನಾನು. ಅದು ಎಲ್ಲಿ ಕಳೆದು ಹೋಗುತ್ತದೋ ಎಂಬ ಅರಿವು ಇರುವುದಿಲ್ಲ. ಇಷ್ಟರಲ್ಲೇ ಪರಮಾತ್ಮನ ದರ್ಶನವಾದಂತೆ, ಅಥವಾ ಮನಸ್ಸು ಹೇಳುತ್ತದೆ ಆ ದಿವ್ಯ ಅನುಭೂತಿಯೇ ಪರಮಾತ್ಮ. ಅನುಭವಿಸು. ರೂಪ ಭಾವವಿಲ್ಲದ ಅಗೋಚರ ಶಕ್ತಿ ಮನಸ್ಸಿನ ಭಾವನೆಗೆ ಮಾತ್ರ ಸ್ಪಂದಿಸುತ್ತದೆ. ದರ್ಶನ ಕೊಡುತ್ತದೆ. ಎಲ್ಲವನ್ನು ಬದಿಗಿಟ್ಟಷ್ಟೂ ಇಲ್ಲಿ ಅನುಭವ ಹೆಚ್ಚಾಗುತ್ತದೆ. ಹೇಗೆ ಸರೋವರದ ತುಂಬಿದ ನೀರಲ್ಲಿ ಮುಳುಗುತ್ತೇವೊ ಹಾಗೆ ನಾವು ಕುಗ್ಗಿದಷ್ಟು ಈ ಅನುಭೂತಿ ಹೆಚ್ಚುತ್ತಾ ಹೋಗುತ್ತದೆ. ನಿಜವಾದ ಭಕ್ತಿ ಎಂದರೆ ಹಾಗೆ. ಅಲ್ಲಿ ದೇವರಲ್ಲಿ ಬೇಡಿಕೊಳ್ಳುವುದು ಏನೂ ಇರುವುದಿಲ್ಲ. ಪುಟ್ಟ ಮಗು ನಿದ್ದೆಯಿಂದ ಎದ್ದು ಅಳುತ್ತದೆ. ಒಂದು ಅಳುವಿಗೆ ಅಮ್ಮ ಬರುವುದಿಲ್ಲ. ಮತ್ತೂ ಜೋರಾಗಿ ಅಳುತ್ತದೆ. ಅಮ್ಮ ಇಲ್ಲ. ಮತ್ತೂ ಕಿರುಚುವಾಗ ಅಮ್ಮ ಓಡೋಡಿ ಬರುತ್ತಾಳೆ. ಮಗುವಿಗೆ ಏನೋ ಬೇಕೆಂದು ...ಹಾಲು ಕೊಡುತ್ತಾಳೆ...ಮಗು ಬೇಡ ಅಂತ ತಲೆ ವಾಲಿಸುತ್ತದೆ. ಆಟ ಬೇಕಾ? ಅದೂ ಬೇಡ ಮಗುವಿಗೆ ಯಾವುದು ಬೇಕು ಎಂದು ಯೋಚಿಸಿದರೆ ಯಾವುದೂ ಬೇಡ. ಆದರೂ ಅದು ಅತ್ತಿತು. ಅದು ಬೆಚ್ಚಗೆ ಅಮ್ಮನನ್ನು ತಬ್ಬಿ ಹಿಡಿದು ಅಮ್ಮನ ತೋಳಲ್ಲಿ ಹಾಗೇ ಸುಮ್ಮನಾಗುತ್ತದೆ. ಹೀಗೆ ಯಾವುದೇ ವಾಂಛೆಯಿಲ್ಲದ ಒಂದು ಬಯಕೆ. ಧ್ಯಾನ ಮಗುವಿನ ಮನಸ್ಥಿತಿಗೆ ಸಮನಾಗಿರುತ್ತದೆ.
ಮನಸ್ಸಿನಲ್ಲಿ ಬಯಕೆಯನ್ನು ಇರಿಸಿಕೊಂಡು ಹರಕೆ ಹಾಕಿ ಈ ಬಯಕೆ ಆಶೆಗಳನ್ನು ಪೂರೈಸಿಕೊಡು ಅಂತ ಪರಮಾತ್ಮನಿಗೆ ಕೈ ಮುಗಿಯುವಾಗ, ನಮ್ಮ ಗಮನವೆಲ್ಲ ನಮ್ಮ ಆಶೆಗಳಲ್ಲೇ ಕೇಂದ್ರೀಕೃತವಾಗುತ್ತದೆ. ಅದು ಸಾಧು ಅಸಾಧುವೋ ಎಂಬ ಆತಂಕ ಎದುರಾಗುತ್ತದೆ. ಆ ಬಯಕೆ ಈಡೇರುತ್ತದೊ ಇಲ್ಲವೋ ಎಂಬ ಸಂದೇಹದಲ್ಲಿ ಭಕ್ತಿ ಗಾಢವಾದಂತೆ ಭಾವಿಸಿದರೂ ಅಲ್ಲಿ ಪರಮಾತ್ಮ ಅಸ್ತಿತ್ವ ಇರುವುದಿಲ್ಲ. ಹಲವು ಸಲ ಈ ಅ ಬಯಕೆಗಳಿಗೆ ಹೊಂದಿಕೊಂಡು ಮನಸ್ಸು ಉದ್ವಿಗ್ನವಾಗಿರುತ್ತದೆ. ಸಿಟ್ಟು ದುಃಖ ಸಂತೋಷ ಹೀಗೆ ಯಾವುದೋ ಭಾವ ಮನಸ್ಸನ್ನು ವ್ಯಾಪಿಸಿರುತ್ತದೆ. ಆದರೆ ನಿಜವಾದ ಪರಮಾತ್ಮ ಅನುಭೂತಿ ಬರಬೇಕಾದರೆ ಈ ಎಲ್ಲ ಬಯಕೆ ದುಮ್ಮಾನ ಸಂಕಟಗಳಿಂದ ಆಚೆಗೆ ನಮ್ಮ ಮನಸ್ಸು ಸೆಳೆಯಲ್ಪಡಬೇಕು. ಅದು ಭಾವ ರಹಿತವಾಗಿ ಸಂಪೂರ್ಣ ಖಾಲಿಯಾಗಬೇಕು. ಪರಿಶುದ್ಧವಾದ ಹಾಲನ್ನು ಪಾತ್ರೆ ಸ್ವಚ್ಛಗೊಳಿಸಿ ಹಾಕಿದಂತೆ, ಯಾವುದೇ ಒಂದು ಕಲ್ಮಷ ಇದ್ದರೂ ಹಾಲು ಕೆಟ್ಟು ಹೋಗುತ್ತದೆ. ಇಲ್ಲಿ ಪರಮಾತ್ಮ ಸದೃಶ ಹಾಲು ಹಾಕಬೇಕಾದರೆ ನಮ್ಮ ಮನಸ್ಸು ಕಲ್ಮಷರಹಿತವಾಗಬೇಕು. ಭಾವರಹಿತವಾಗಿರಬೇಕು. ಕ್ರೋಧ, ದುಃಖ, ನಗು ಹೀಗೆ ಯಾವುದೇ ಭಾವೋದ್ವೇಗ ರಹಿತವಾಗಬೇಕು. ಅನ್ಯಥಾ ಪರಮಾತ್ಮ ದರ್ಶನ ಸಾಧ್ಯವಾಗುವುದಿಲ್ಲ. ಎಲ್ಲ ಬಯಕೆಯನ್ನು ಇಲ್ಲವಾಗಿಸಿ ತೆದೇಕ ಚಿತ್ತದಿಂದ ಉಸಿರಲ್ಲೇ ಕೇಂದ್ರೀಕರಿಸಿ ಅಲ್ಲೇ ಲೀನವಾಗುವಾಗ ನಮ್ಮೋಳಗೇ ಉಂಟಾಗುವ ದಿವ್ಯ ಅನುಭವ ಅದೇ ಅದೇ ಅದ್ವೈತ ಅನುಭವ. ಇಲ್ಲಿ ಎರಡು ಇರುವುದಕ್ಕೆ ಸಾಧ್ಯವಿಲ್ಲ. ಒಂದೇ ಒಂದೇ. ಧ್ಯಾನ ಎಂದರೆ ಲೀನವಾಗುವುದು. ಲೀನ ತಲ್ಲೀನವಾಗಬೇಕು.
ಸತ್ಯಂ ಶಿವಂ ಸುಂದರಂ