ಪಾಜಕ ವಿದ್ಯೆ ಅಂದರೆ ಅಡುಗೆ ಅಥವಾ ಆಹಾರ ತಯಾರಿ
ಅದು ಕೇವಲ ವೃತ್ತಿಯಲ್ಲ. ಇದೊಂದು ಕಲೆ. ಪ್ರತಿಭೇ ಹೀಗೆ ಎಲ್ಲವೂ ಹೌದು. ಇದು ಎಲ್ಲರಿಗೆ ಒಲಿಯುವುದಿಲ್ಲ.
ಇದರಲ್ಲಿ ಪ್ರಶಂಸೆ ಗಳಿಸಬೇಕಿದ್ದರೆ ಸುಲಭವಾಗಿ ಸಾಧ್ಯವಾಗುವುದಿಲ್ಲ. ಅಡುಗೆ ಕೆಲಸ, ಆಡುಗೆಯವ ಇದನ್ನು ಸರಿಯಾದ ಮಾನ್ಯತೆಯಿಂದ ಸಮಾಜ ಕಾಣುವುದಿಲ್ಲ. ಒಂದು ರೀತಿಯ
ತಾತ್ಸಾರ ಇದ್ದೇ ಇರುತ್ತದೆ. ಅದರಲ್ಲೂ ಗಂಡಸರು ಅಡುಗೆ ಮಾಡಲೇಬಾರದು ಎಂಬ ಅನಧಿಕೃತ ನಿಯಮ ಇದ್ದಂತೆ
ಹಲವರು ವರ್ತಿಸುವುದನ್ನು ಕಾಣಬಹುದು. ಆದರೆ ಇದರ ಮಹತ್ವ
ಅರಿತವನು ಎಂದಿಗೂ ಇದನ್ನು ಕಡೆಗಣಿಸುವುದಿಲ್ಲ. ಹೆಣ್ಣು
ಉತ್ತಮ ಅಹಾರ ತಯಾರಿಸಿ ಹೊಟ್ಟೆತುಂಬ ಬಡಿಸಿದರೆ ಅನ್ನಪೂರ್ಣೆ ಅಂತ ಹಾಡಿಹೊಗಳಿದರೆ ಗಂಡಸಿಗೆ ಈ ಮನ್ನಣೆ
ಸಿಗುವುದೇ ಇಲ್ಲ. ಹಲ
ವುಸಲ ಹೆಣ್ಣಿಗಿಂತ ಗಂಡೇ ಉತ್ತಮ ಪಾಜಕನಾಗಿರುತ್ತಾನೆ.
ರುಚಿಯಂತೆ ಇನ್ನೊಂದು ಶುಚಿತ್ವ. ಇದು ಹೆಚ್ಚಿನವರಿಗೆ
ಸಿದ್ಧಿಸುವುದಿಲ್ಲ. ಅಡುಗೆ ಕೋಣೆ ಅವ್ಯವಸ್ಥೆಯ ಕೂಪವಾಗಿ ಎಲ್ಲೆಂದರೆ ಆಹಾರದ ತುಣುಕು, ಕಸ ಕಡ್ಡಿಗಳು ಉಪಯೋಗಿಸಿದ ಪಾತ್ರೆಗಳು ತೆರೆದಿಟ್ಟ ಆಹಾರ ಇವುಗಳೇ ತುಂಬಿದ್ದರೆ
ಅದು ಉತ್ತಮ ಪಾಜಕವಲ್ಲ. ಆಹಾರ ತಯಾರಿಗಿಂತಲೂ ಶುಚಿತ್ವ ಹೆಚ್ಚು ಪ್ರಧಾನ. ಇದು ಆರೋಗ್ಯದ ಮೇಲೂ ಪರಿಣಾಮ
ಬೀರುತ್ತದೆ. ತಿನ್ನುವವನು ಕೈತೊಳೆಯದಿದ್ದರೂ ಪರವಾಗಿಲ್ಲ, ಅಡುಗೆಯವನ ಕೈಬಾಯಿ
ಮಾತ್ರವಲ್ಲ ಕಾಲೂ ಜತೆಯಲ್ಲಿ ಸರ್ವಾಂಗವೂ ಸ್ವಚ್ಛವಾಗಿರಬೇಕು. ಆತನೂ ಅರೋಗ್ಯವಂತನಾಗಿರುವುದು ಅತ್ಯವಶ್ಯ. ಮೂಗಿನಲ್ಲಿ ಸಿಂಬಳ
ಸುರಿಯುತ್ತಾ ಇದ್ದರೆ ಎಷ್ಟೇ ರುಚಿಯಾಗಿದ್ದ ಅಡುಗೆಯಾದರೂ ತಿನ್ನುವುದಕ್ಕೆ ಮನಸ್ಸು ಬರುವುದಿಲ್ಲ.
ರುಚಿಗಿಂತಲೂ ಹೆಚ್ಚು ಮಹತ್ವ ಶುಚಿತ್ವಕ್ಕೆ ಒದಗಿಸಬೇಕು.
ಅಡುಗೆಯಲ್ಲಿ ಇನ್ನೊಂದು ಅದ್ಭುತ ಗುಣವೆಂದರೆ
ಕಡಿಮೆ ಸಮಯದಲ್ಲಿ ಉತ್ತಮ ಆಹಾರವನ್ನು ತಯಾರಿಸುವುದು. ಜತೆಯಲ್ಲಿ ಅಡುಗೆ ಕೋಣೆಯನ್ನು ಶುಚಿಯಾಗಿ ಸುವ್ಯವಸ್ಥೆಯಲ್ಲಿ
ಕಾಪಾಡಿಕೊಳ್ಳುವುದು. ಅಡುಗೆ ಯಾರೂ ಮಾಡಬಹುದು ಆದರೆ ವೇಗವಾಗಿ ಹಲವು ವಿಭವಗಳನ್ನು ಮಾಡಿ ಮುಗಿಸಿ ಬಡಿಸುವುದು
ಅದ್ಭುತ ಕಲೆ. ಇದು ಕೆಲವರಲ್ಲಿ ಮಾತ್ರವೇ ಇದೆ.
ಈಗ ಅಡುಗೆ ಕೆಲಸಕ್ಕೆ ಗಂಡು ಹೆಣ್ಣೆಂಬ ಭೇದವಿಲ್ಲ. ಹೆಣ್ಣು ಗಂಡಿನಂತೆ ವರ್ತಿಸುವಾಗ ಗಂಡು ಹೆಣ್ಣಾಗಬೇಕಾದದ್ದು
ಅನಿವಾರ್ಯ. ವೃತ್ತಿ ಧರ್ಮ ಎಂಬುದು ವೃತ್ತಿ ಆಚರಿಸುವಲ್ಲಿಗೆ ಮಾತ್ರ ಸೀಮಿತ. ಮಕ್ಕಳು ಗಂಡಾಗಲೀ ಹೆಣ್ಣಾಗಲಿ
ಬಾಲ್ಯದಲ್ಲೇ ಪಾಜಕ ಅಂದರೆ ಅಡುಗೆ ಕಲಿಯಬೇಕು. ಕೊನೇ ಪಕ್ಷ ತಾವು ತಿನ್ನುವಂತಹ ಆಹಾರವನ್ನಾದರೂ ತಯಾರಿಸುವುದಕ್ಕೆ
ಅರಿತಿರಬೇಕು. ತಾವು ತಿನ್ನುವ ಆಹಾರ ಎನ್ನುವಾಗ ಇಂದಿನ ಮಕ್ಕಳು ಕಲಿಯುವ ಅಡುಗೆ ಎಂದರೆ ನೊಡಲ್ ಮ್ಯಾಗಿ
ಆಮ್ಲೇಟ್ ಇಲ್ಲಿಗೇ ಸೀಮಿತವಾಗಿಬಿಡುತ್ತಾರೆ. ಅಡುಗೆ ಕೇವಲ ಹೊಟ್ಟೆ ತುಂಬಿಸಿಕೊಳ್ಳುವ ವಿದ್ಯೆಯಲ್ಲ.
ಅದು ದೇಹಾರೋಗ್ಯವನ್ನು ಸುಲಭದಲ್ಲೇ ರಕ್ಷಿಸುವ ಅಧ್ಬುತ ಶಾಸ್ತ್ರ.
ಅಡುಗೆ ಕೆಲಸ ಯೋಜನಾಬದ್ಧವಾಗಿ ಮಾಡಿದರೆ ಅದರಷ್ಟು ಸುಲಭದ ವೃತ್ತಿ ಬೇರೆ ಇಲ್ಲ. ಯಾವುದು
ಮೊದಲು ಮಾಡಬೇಕು ಯಾವುದು ನಂತರ ಮಾಡಬೇಕು ಇದನ್ನು ಮೊದಲಾಗಿ ಯೋಚಿಸಿ ಕಾರ್ಯ ಪ್ರವೃತ್ತರಾಗಬೇಕು.
ಸಾಮಾನ್ಯವಾಗಿ ಸಮಾರಂಭಗಳಲ್ಲಿ ತುಂಬ ವಿಭವಗಳು ಸಿಹಿ ಕಾರ ತಿಂಡಿಗಳು ಇದ್ದರೆ ಉತ್ತಮ ಭೋಜನ
ಅಂತ ಪರಿಗಣಿಸುತ್ತಾರೆ. ವಾಸ್ತವದಲ್ಲಿ ಇದು ಸರಿಯಲ್ಲ. ಅದ್ಧೂರಿಯ ಅಡುಗೆ ನೆನಪಿನಾಳಕ್ಕೆ
ಇಳಿಯುವುದೇ ಇಲ್ಲ. ಅದೇ ಸರಳವಾದ ಅಡುಗೆ ಮಾಡಿ ಅತಿಥಿಗಳಿಗೆ ನೀಡಿ. ಬಹುಕಾಲ ನೆನಪಲ್ಲಿ
ಉಳಿಯುತ್ತದೆ. ಹಲವು ವರ್ಷಗಳ ಹಿಂದೆ ಮಳೆಗಾಲದ ಒಂದು ದಿನ ರಾತ್ರಿ ಊರಲ್ಲಿ ಸಂಭಂಧೀಯೊಬ್ಬರ ಮನೆಗೆ
ಹೋಗಿದ್ದೆ. ಹಳ್ಳಿಯ ಮನೆ. ದಿಢೀರ್ ರಾತ್ರೆ ಹೋದರೆ ಊಟಕ್ಕೆ ಏನು ಮಾಡಬೇಕು? ಆದರೆ ಮನೆಯಾಕೆ,
ಉಪ್ಪಿನಲ್ಲಿ ಹಾಕಿದ ಮಾವಿನ ಕಾಯಿತೆಗೆದು ಒಂದೆರಡು ಮೆಣಸು ಹುರಿದು ತೆಂಗಿನ ಕಾಯಿ ಹಾಕಿ ದೊಡ್ಡ
ರುಬ್ಬೋ ಕಲ್ಲಿನಲ್ಲಿ ಹತ್ತು ಸುತ್ತು ತಿರುಗಿಸಿ ಚಟ್ನಿಯೊಂದನ್ನು ಮಾಡುತ್ತಾಳೆ. ಕಲ್ಲು ತೊಳೆದ
ನೀರನ್ನು ಬಿಸಿ ಮಾಡಿ ಅದಕ್ಕೊಂದಷ್ಟು ಉಪ್ಪು ಬೆಲ್ಲ ಹಾಕಿ ಬಿಸಿ ಬಿಸಿ ಸಾರು ಮಾಡಿ
ಬಡಿಸುತ್ತಾಳೆ. ಅಬ್ಬಾ ಏನು ರುಚಿ. ಹಳ್ಳಿಯ ಮನೆ, ಮಳೆಗಾಲದ ಆ ದಿನಗಳು. ಛೇ ಆ ಸರಳವಾದ ಊಟ ಇಂದಿಗೂ ನೆನಪಿದೆ. ಬೆಂಗಳೂರಲ್ಲಿ ಊರಿಂದ ಯಾರೇ ಬಂದರೂ ಸಾಮಾನ್ಯವಾಗಿ ನಮ್ಮಲ್ಲಿ
ಕುಚ್ಚಿಲಕ್ಕಿ ಅನ್ನಅಥವಾ ಗಂಜಿ ಚಟ್ನಿ ಊಟಕ್ಕೆ ಬಡಿಸುತ್ತೇವೆ. ಆದರೆ ಆ ಸರಳ ಊಟವನ್ನು ಹಲವು
ವರ್ಷ ಕಳೆದರೂ ನೆನಪಿಸುವ ಮಂದಿ ಹಲವರಿದ್ದಾರೆ.
ಅತಿಥಿ ದೇವೋ ಭವ ಅಂತ ಅತಿಥಿಯಲ್ಲಿ ದೇವರನ್ನು ಕಾಣುವ ಸಂಸ್ಕಾರ ನಮ್ಮದು. ಆ ದೇವರಿಗೆ ಬೇರೆ
ಏನೂ ಬೇಡ ಒಂದೆರಡು ಬಗೆಯ ಊಟ ಬಡಿಸಿದರೆ ಸಾಕು ತೃಪ್ತರಾಗಿ ಕೃತಜ್ಛತೆ ಸಲ್ಲಿಸುತ್ತಾರೆ. ಎಂದಿಗೂ
ಸರಳತೆಗೆ ಇರುವ ಮೌಲ್ಯ, ಆಡಂಬರ ಅದ್ಧೂರಿತನಕ್ಕೆ ಒಲಿದು ಬರುವುದಿಲ್ಲ.
ಪಾಜಕ ಕೆಲಸ, ನನಗೆ ಪ್ರಿಯವಾದ ಹವ್ಯಾಸಗಳಲ್ಲಿ ಒಂದು. ರುಚಿಯಾದ ಶುಚಿಯಾದ ಅಡುಗೆಯನ್ನು ಮಾಡಿ
ತಿನ್ನುವವರು ಸಂಭ್ರಮದಿಂದ ಸಂತೋಷದಿಂದ ತಿನ್ನುವುದನ್ನೇ ನಿಜವಾದ ಅಡುಗೆಯವನು ಬಯಸುತ್ತಾನೆ. ಅದರಲ್ಲಿ ಸಿಗುವ ಆತ್ಮ
ತೃಪ್ತಿ ಅದು ಅನುಭವಿಸಿದವರಿಗೇ ಗೊತ್ತು. ಯಾವುದೇ ಒಂದು ಅಡುಗೆಯವರನ್ನು ಅವರು ಮಾಡಿದ ಅಡುಗೆಯ
ಮಾಡುವ ವಿಧಾನ ಕೇಳಿ. ಅದನ್ನು ಹೇಳುವಲ್ಲಿ ಒಂದು ಉತ್ಸಾಹ ಆನಂದ ಇರುತ್ತದೆ.
ಹೇಗಿದ್ದರೂ ನಿಮಗೆ ತಿನ್ನುವಂತಹ ವಸ್ತುಗಳನ್ನು ನೀವೇ ಮಾಡಲು ಪ್ರಯತ್ನಿಸಿ ನೋಡಿ. ಮಿಕ್ಕರೆ
ಉಳಿದವರಿಗೆ ನೀಡಿ, ಕೊನೆ ಕೊನೆಗೆ ನೀವು ತಿನ್ನುವ ಪ್ರಮಾಣ ಕಡಿಮೆಯಾಗುತ್ತದೆ. ಉಳಿದವರಿಗೆ
ತಿನ್ನಿಸುವ ಬಯಕೆ ಜಾಗೃತವಾಗುತ್ತದೆ. ಅಡುಗೆ ಒಂದು ಅದ್ಭುತ ಹವಾಸವೂ ಹೌದು. ಆದರೆ ಹಲವು ಸಲ ಅದು
ಅನಿವಾರ್ಯವಾಗುವುದೂ ಸಹ ಇದೆ. ಉತ್ತಮ ಕೈಗುಣದ ಅಡುಗೆಯವರು ಮನೆಯೊಳಗಿದ್ದರೆ ಅದು ಮನೆಯ ಐಶ್ವರ್ಯ.
ಅಡುಗೆ ಕೇವಲ ಪಾಕಶಾಸ್ತ್ರವಲ್ಲ. ಅದೊಂದು ಷಡ್- ರಸಭರಿತ ಕಾವ್ಯ.