ಲೋಕದಲ್ಲಿ ಜ್ಞಾನ ಎಂಬುದು ಅತ್ಯಂತ ಮೌಲ್ಯಯುತವಾದದ್ದು. ಹುಟ್ಟಿದ ನವಜಾತ ಶಿಶು ಲೋಕವನ್ನು ಅರಿಯುವುದೇ ಆ ಜ್ಞಾನದ ಅರಿವಿನಿಂದ. ಅಳುವಾಗ ತಾಯಿ ಹಾಲು ಕೊಡುತ್ತಾಳೆ ಎಂಬ ಜ್ಞಾನವನ್ನು ಅದು ಮೊದಲಿಗೆ ಪಡೆಯುತ್ತದೆ. ಬೆಂಕಿ ಸ್ಪರ್ಶಿಸಿದರೆ ಬಿಸಿಯಾಗಿ ಸುಡುತ್ತದೆ ಎಂಬ ಅರಿವಿನಲ್ಲೂ ಜ್ಞಾನವಿದೆ. ಸಿಗುವ ಜ್ಞಾನ ಕಲುಷಿತವಾದರೆ ಆ ಅರಿವು ಕಲ್ಮಶವಾಗಿ ಜ್ಞಾನ ಅಪಮೌಲ್ಯವಾಗುತ್ತದೆ.
ಪ್ರಕೃತಿಯಲ್ಲಿ ಪ್ರತಿಯೊಂದು ವಿಷಯವೂ ಜ್ಞಾನವಾಗಿ ಪ್ರಕೃತಿ ಎಂಬುದು ಜ್ಞಾನ ನಿಧಿಯಾಗಿರುತ್ತದೆ. ಇದನ್ನು ಪಡೆಯುವುದು ಪ್ರತಿಯೊಂದು ಪ್ರಕೃತಿಯ ಅಂಗವಾದ ಜೀವಿಯ ಹಕ್ಕು. ಹೀಗಿದ್ದರೂ ಈ ಹಕ್ಕನ್ನು ನಾವು ಅದು ಹೇಗೆ ನಿಯಂತ್ರಿಸಬಹುದು. ಹಾಗೆ ನಿಯಂತ್ರಿಸುವುದು ನ್ಯಾಯ ಎಂದನಿಸುವುದಿಲ್ಲ. ಇದೀಗ ಹುಟ್ಟಿಕೊಂಡ ವಿವಾದವೂ ಅದಕ್ಕೇ ಸಂಭಂಧಿಸಿ ಜ್ಞಾನ ಎಂಬ ಬೆಳಕು ಮನುಷ್ಯನನ್ನು ಮತ್ತಷ್ಟು ಕತ್ತಲಿಗೆ ತಳ್ಳುವಹಾಗೆ ಭಾಸವಾಗುತ್ತದೆ. ಕತ್ತಲಿನಲ್ಲಿ ಯಾವುದನ್ನೂ ನೋಡಬೇಕಿದ್ದರೂ ಬೆಳಕಿನ ಆವಶ್ಯಕತೆ ಇದೆ. ಆ ಬೆಳಕು ಹಿಡಿದಾಗ ವಸ್ತು ಏನೆಂದು ಅರಿವಾಗುತ್ತದೆ. ಇಲ್ಲವಾದರೆ ವಸ್ತುವಿನ ಅರಿವಿಲ್ಲದೇ ಹೋಗುತ್ತದೆ. ವಸ್ತುವನ್ನು ಕಾಣುವುದಕ್ಕೆ ಹಿಡಿದ ಬೆಳಕಿಗೆ ಬಣ್ಣದ ಗಾಜಿನ ತೆರೆಯನ್ನು ಎಳೆದರೆ, ಕೆಂಪಾದರೆ ಆ ವಸ್ತುವೂ ಕೆಂಪಾಗಿ ಹಳದಿಯಾದರೆ ಹಳದಿಯಾಗಿ ಹೀಗೆ ಯಾವ ಬಣ್ಣ ಹಿಡಿದ್ದೇವೆಯೋ ಆ ಬಣ್ಣದಲ್ಲಿ ಗೋಚರಿಸಿ ವಸ್ತುವಿನ ನಿಜ ರೂಪ ಭ್ರಮೆಯನ್ನು ಹುಟ್ಟಿಸುತ್ತದೆ. ನಾವು ಶಿಕ್ಷಣಕ್ಕೆ ಹಿಡಿದ ಬಣ್ಣದ ಅ ತೆರೆಯನ್ನು ಸರಿಸಬೇಕಿದೆ.
ಸ್ವಾತಂತ್ರ್ಯ ನಂತರ ಆಂಗ್ಲರು ಹಾಕಿದ ಈ ಬಣ್ಣದ ತೆರೆಯನ್ನು ಅರ್ಥವಿಸುವುದಕ್ಕೆ ನಮಗೆ ಸಾಧ್ಯವಾಗದೇ ನಾವು ಯಾವುದೋ ಪಂಥಕ್ಕೆ ಅಂಟಿಕೊಂಡಂತೆ ಯಾವುದೋ ತತ್ವಕ್ಕೆ ಬದ್ದರಾದಂತೆ ಮುಖವಾಡವಾನ್ನು ತೊಟ್ಟು ಆ ಶಿಕ್ಷಣವನ್ನು ಇರಿಸಿದ್ದೇವೆ. ಹೀಗೆ ನಾವು ನಮ್ಮ ಮುಂದಿನ ಜನಾಂಗದ ಹಕ್ಕನ್ನು ಕಸಿಯುತ್ತಿದ್ದೇವೆ ಎಂದನಿಸುವುದಿಲ್ಲವೇ?
ನನಗೆ ಎಡ ಪಂಥೀಯದಲ್ಲೂ ಆಸಕ್ತಿ ಇಲ್ಲ, ಬಲಪಂಥೀಯ ಎನ್ನುವುದರಲ್ಲೂ ಆಸಕ್ತಿ ಇಲ್ಲ. ಜೀವನ ಕ್ರಮಗಳಿಗೆ ಹೀಗೆ ಪಂಥೀಯ ರೂಪವನ್ನು ಕೊಡುವುದು ಎಂದರೆ, ಜೀವನದ ಹಾದಿಯನ್ನು ಕ್ರಮಿಸುವುದರಲ್ಲಿ ಭಯ ಹುಟ್ಟಿಸುವಂತೆ ಭಾಸವಾಗುತ್ತದೆ. ಒಂದು ಅಭಿಪ್ರಾಯ ತಳೆದರೆ ನಾನು ಎಲ್ಲಿ ಬಲ ಪಂಥೀಯನೋ ಎಡಪಂಥಿಯನೋ ಆಗಿಬಿಡುತ್ತೇನೋ ಎನ್ನುವ ಆತಂಕವಿರುತ್ತದೆ. ಕೆಂಪು ಹಸಿರು ಕೇಸರಿ ಬಿಳಿ ಹೀಗೆ ಬಣ್ಣಗಳು ಯಾವುದೋ ಒಂದರ ಸಂಕೇತಗಳಾಗಿ ನಮಗೆ ಇಷ್ಟವಾದ ಬಣ್ಣದ ಬಗೆಗಿನ ಇಷ್ಟವನ್ನು ಪ್ರಕಟಿಸುವುದಕ್ಕೂ ಆತಂಕವಿರುತ್ತದೆ. ಇದು ಎಂತಹ ಶೋಚನೀಯ. ನಿಜಕ್ಕಾದರೆ ಈ ಬಣ್ಣಗಳು ಏನು ಮಾಡಿದವು?
ಹೀಗೆ ಪಂಥೀಯ ಧೋರಣೆಗಳು ಶಿಕ್ಷಣದಲ್ಲೂ ಪ್ರತಿಫಲಿಸಿ ಮಕ್ಕಳಿಗೆ ಸ್ವತಃ ಅದರ ಅರಿವಿರುವುದಿಲ್ಲ. ಅವರನ್ನು ಯಾವುದೋ ಪಂಥಕ್ಕೆ ತಳ್ಳಿಯಾಗಿರುತ್ತದೆ. ಪ್ರಾಥಮಿಕ ಶಾಲೆಯಲ್ಲಿ ನಾವು ಏನೋ ಓದಿರುತ್ತೇವೆ. ಅದರಂತೆ ಎಷ್ಟು ಜನ ಜೀವನ ಸವೆಸಿರಬಹುದು. ನಾಸ್ತಿಕ ಆಸ್ತಿಕ ಇವುಗಳು ಪ್ರಬುದ್ಧರಾಗುವಾಗ ಯೋಚಿಸಿ ಆಯ್ಕೆ ಮಾಡುವ ವಿಚಾರಗಳು. ಇಲ್ಲಿ ಒಂದನ್ನು ಮಾತ್ರ ತೋರಿಸುವ ಮೊಂಡುತನವಾದರೂ ಯಾಕೆ? ಅಥವಾ ಬಾಲ್ಯದಲ್ಲೇ ಈ ಭೇದ ಭಾವವನ್ನು ತುಂಬಿ ಮಾನಸಿಕವಾಗಿ ಅವರನ್ನು ಆತಂಕಿತರನ್ನಾಗಿ ಮಾಡುವ ಅಗತ್ಯವೆನಿದೆ? ಮಕ್ಕಳು ಬೆಂಕಿಯ ಬಗ್ಗೆಯೂ ಕಲಿಯಬೇಕು ನೀರಿನ ಬಗ್ಗೆಯೂ ಕಲಿಯಬೇಕು. ಈಜು ಬಾರದೆ ನೀರಿಗೆ ಹಾರಿದರೆ ಮುಳುಗುತ್ತದೆ ಎಂಬ ಜ್ಞಾನ ಬೇಡ ಎಂದು, ನೀರನ್ನು ತೋರಿಸದೇ ಇದ್ದರೆ ಸಾಧ್ಯವೇ? ಕಾಡಿನಲ್ಲಿ ಸಂಚರಿಸುವಾಗ ಕ್ರೂರ ಮೃಗಗಳಿರುತ್ತವೆ, ದರೋಡೆಕೋರರು ಕಳ್ಳರು ಇರುತ್ತಾರೆ ಎಂದು ಅವರನ್ನು ಕಾಡಿಗೆ ಹೋಗದಂತೆ ತಡೆಯುವುದಕ್ಕೆ ಸಾಧ್ಯವೇ? ನಮಗೆ ಬಾಲ್ಯದಲ್ಲಿ ಕಳ್ಳರು ದರೋಡೆಕೋರರು ಹೇಗಿರುತ್ತಾರೆ ಎಂಬ ಕಲ್ಪನೆಯೇ ಇರಲಿಲ್ಲ. ಮಕ್ಕಳಿಗೆ ಕಳ್ಳರ ಬಗ್ಗೆಯೂ ಕಳ್ಳತನದ ಬಗ್ಗೆಯೂ ಜ್ಞಾನವಿರಬೇಕು. ಅದು ಅಪರಾಧ ಎನ್ನುವ ಬಗ್ಗೆಯೂ ಜ್ಞಾನವಿರಬೇಕು. ಹಾಗಾಗಿ ಇಲ್ಲಿ ಕೇವಲ ನಾಸ್ತಿಕ ಅಥವಾ ಅಸ್ತಿಕ ಮಾತ್ರ ಬೇಕಾಗುವುದಲ್ಲ. ಸೂರ್ಯ ಚಂದ್ರರು ಮಣ್ಣಿನ ಮುದ್ದೆಗಳು ಅಂತ ತಿಳುವಳಿಕೆ ಹಚ್ಚುವ ಆವಶ್ಯಕತೆ ಇರುವುದಿಲ್ಲ. ಸೂರ್ಯ ಚಂದ್ರರೂ ಈ ಪ್ರಕೃತಿಯ ಒಂದು ಅಂಗ ಅಂತ ಭೋಧನೆಯಾದರೆ ಪ್ರಕೃತಿ ಧರ್ಮವನ್ನು ತಿಳಿಸಿದ ಹಾಗಾಗುತ್ತದೆ.
ನಮ್ಮ ಹುಡುಗ ಒಂದು ದಿನ ಶಾಲೆಯಿಂದ ಬಂದವನು ಒಂದು ಪ್ರಶ್ನೆ ಕೇಳಿದ. ಮೂಲಭೂತವಾದ ಅಂದರೆ ಏನು? ಹಿಂದು ಧರ್ಮದಲ್ಲಿ ಮೂಲಭೂತವಾದವೇ ಇರುವುದು? ನಾಲ್ಕನೇ ತರಗತಿಯ ಹುಡುಗನ ಪ್ರಶ್ನೆಯ ಗಂಭೀರತೆ ಅವನಿಗೆ ಅರಿವಿಲ್ಲ. ಹೇಳಿ ಕಣ್ಣಿಗೆ ಬಟ್ಟೆಕಟ್ಟಿ ಬಿಟ್ಟ ಹಾಗಿರುವ ಶಿಕ್ಷಣದ ವ್ಯವಸ್ಥೆ ಇದು. ಹಿಂದು ಮೂಲಭೂತವಾಗುವುದು ಹೇಗೆ? ಮೂರ್ತಿ ಪೂಜೆ ಹೀಗೆ ಇನ್ನೇನೋ ಹೇಳಿ ಹಾದಿ ತಪ್ಪಿಸಿ ಒಂದು ಜೀವನ ಕ್ರಮವನ್ನು ಲೇವಡಿ ಮಾಡುವುದೆಂದರೆ ನಿನ್ನನ್ನು ಹೆತ್ತವರು ನಿನ್ನ ಅಪ್ಪ ಅಮ್ಮ ಅಲ್ಲ ಅಂತ ಹೇಳಿದ ಹಾಗೆ. ಭಗವದ್ಗೀತೆಯಲ್ಲಿ ಎಲ್ಲಿಯೂ ಮೂರ್ತಿ ಪೂಜೆ ಮಾಡು ಅಂತ ಹೇಳಿದ ಹಾಗಿಲ್ಲ. ಭಗವಂತನ ನಾಮ ಸ್ಮರಣೆ ಮಾಡು, ಸರ್ವವನ್ನು ಭಗವಂತನ ಹೆಸರಲ್ಲಿ ಮಾಡು ಎಂದು ಹೇಳಿದರೆ ಅದು ಹೇಗೆ ಮೂಲಭೂತವಾಗುತ್ತದೆ? ಮುಂಜಾನೆ ಎದ್ದು ಸೂರ್ಯನಿಗೆ ಅರ್ಘ್ಯ ಬಿಟ್ಟು ಜಪ ಮಾಡುವಾಗ ಎಲ್ಲಿ ಯಾವ ಮೂರ್ತಿ ಇರುತ್ತದೆ? ಇದರ ಅರಿವಿಲ್ಲದೇ ಒಟ್ಟು ಮೂಲಭೂತ ಅಂತ ಹೇಳುವಾಗ, ಇದರ ಆಚೆಗಿನ ಪಾರಮಾರ್ಥಿಕತೆಯಬಗ್ಗೆಯೂ ಪಾಠವಾಗಬೇಕಲ್ಲ? ಮಕ್ಕಳಿಗೆ ವಸ್ತುಸ್ಥಿತಿಯ ಪಾಠವಾಗಬೇಕು. ಅದು ಯಾವ ಪಂಥವೇ ಇರಲಿ. ಅವರು ಪ್ರೌಢರಾಗಿ ಯೋಚಿಸುವ ಹಂತಕ್ಕೆ ಬರುವಾಗ ಆಯ್ಕೆ ಅವರಿಗೆ ತೆರೆದಿಡಬೇಕು. ಹೊರತು ಒಂದು ಪಂಥದ ಮೇಲೆ ಕಪ್ಪು ಬಟ್ಟೆ ಹಾಸಿ ಇನ್ನೊಂದು ಪಂಥವನ್ನು ತೆರೆದಿಟ್ಟು ವಾಸ್ತವವನ್ನು ಮರೆಮಾಚುವುದಲ್ಲ. ಸತ್ಯವನ್ನೇ ಹೇಳಬೇಕು. ಭಗವಂತನ ನಾಮಸ್ಮರಣೆ ಮಾಡು. ಪ್ರಕೃತಿ ಧರ್ಮವನ್ನು ಪಾಲಿಸು....ಹೀಗೆ ಸಂಸ್ಕೃತದಲ್ಲಿ ಹೇಳಿದರೆ ಅದು ಯಾವುದೋ ಒಂದು ಧರ್ಮದ ಪರವಾಗುತ್ತದೆ. ಕೇವಲ ಸಂಸ್ಕೃತ ಎಂಬುದು ಮಾತ್ರವಲ್ಲ. ಹಲವು ಭಾಷೆಗೂ ಧರ್ಮದ ಬಣ್ಣವನ್ನು ಲೇಪಿಸಲಾಗುತ್ತದೆ. ನಾನು ಹೈಸ್ಕೂಲ್ ಓದುವಾಗ ನಮ್ಮ ಶಾಲೆಯಲ್ಲಿ ಒಬ್ಬರು ಮುಸ್ಲಿಂ ಮಾಸ್ತರು ಕನ್ನಡ ಭಾಷೆಗೆ ಇದ್ದರು. ಅವರ ಕನ್ನಡ ಪಾಠ ಕೇಳುವುದಕ್ಕೆ ಪುಣ್ಯ ಮಾಡಿರಬೇಕು. ಅದೆಷ್ಟು ಜನ ಅವರಿಂದ ಕನ್ನಡ ಕಲಿತು ಕನ್ನಡ ವಿದ್ವಾಂಸರಾಗಿರಬಹುದು ಇದನ್ನು ತಿಳಿವಾಗ ಭಾಷೆ ವಸ್ತ್ರ ಬಣ್ಣ ಇದು ಯಾವುದೋ ಜಾತಿ ಪಂಥದ ಸೂಚಕವಾಗುವುದು ನಮ್ಮ ಬುದ್ಧಿ ದಾರಿದ್ರ್ಯವನ್ನು ತೋರಿಸುತ್ತದೆ.
ಬಾಲ್ಯದ ಶಿಕ್ಷಣದಲ್ಲಿ ಪುರಾಣ ಕಥೆಗಳನ್ನು ಓದಿದದವರು ದೊಡ್ಡವರಾಗುವಾಗ ಕೇವಲ ದೈವಭಕ್ತರಾಗಿಯೇ ಉಳಿಯುತ್ತಾರೆ ಎಂಬ ಭರವಸೆ ಇಡುವುದಕ್ಕೆ ಸಾಧ್ಯವೆ? ಪರಮ ಸಂಪ್ರದಾಯದ ಮನೆಯಿಂದ ಬಂದು ಪುರಾಣ ಓದಿದವರು ಎಷ್ಟೋ ಜನ ಯಾವ ದೇವರನ್ನು ನಂಬದ ನಾಸ್ತಿಕರಾಗಿ ಬದಲಾಗಿದ್ದಾರೆ. ದೇವರನ್ನೇ ನಂಬದವರು, ಜೀವನದ ಕಷ್ಟ ದುರಿತಗಳನ್ನು ಅನುಭವಿಸಿ ನಂತರ ವಯಸ್ಸು ಮಾಗಿದ ಮೇಲೆ ಜ್ಞಾನೋದಯವಾದಂತೆ ಪರಮ ಆಸ್ತಿಕರಾಗಿ ಬದಲಾಗಿದ್ದನ್ನು ಕಾಣಬಹುದು. ಹಾಗಾಗಿ ಎಡವೋ ಬಲವೂ ಎರಡರ ಜ್ಞಾನವೂ ಕೇವಲ ಶಿಕ್ಷಣ ಮತ್ತು ಜ್ಞಾನದ ರೂಪದಲ್ಲಿ ಮಕ್ಕಳಿಗೆ ನೀಡಬೇಕು. ಜ್ಞಾನ ಎಂಬುದು ಅರಿವು ಅದು ಲೋಕದ ಅರಿವಾಗಿ ಬದಲಾಗಬೇಕು. ಮುಂದೆ ಈ ಅರಿವು ಅವರಿಗೆ ಉತ್ತಮ ಸಮಾಜದಲ್ಲಿ ಬದುಕುವ ಅವಾಕಾಶವನ್ನು ನೀಡಬೇಕು. ಯಾವುದೇ ದ್ವೇಷ ಭಾವನೆಯನ್ನು ಪ್ರಚೋದಿಸದೆ ಸತ್ಪ್ರಜೆಗಳಾಗಿ ಬದುಕುವ ಪ್ರೇರಣೆಯನ್ನು ಕೊಡಬೇಕು. ಆಗಲೇ ಅದು ಉತ್ತಮ ಶಿಕ್ಷಣ ಎನಿಸಲ್ಪಡುತ್ತದೆ. ಯಾವ ಧರ್ಮದ ತಳಹದಿಯೂ ಉತ್ತಮ ಶಿಕ್ಷಣದ ಮೇಲೆಯೇ ನಿಂತಿದೆ. ಶಿಕ್ಷಣ ವಸ್ತು ಸ್ಥಿತಿಯನ್ನು ವಾಸ್ತವವನ್ನು ಮತ್ತು ಸತ್ಯವನ್ನೂ ತೋರಿಸುವ ಜ್ಞಾನದ ಮಾರ್ಗವಾಗಬೇಕು.