ನಿದ್ದೆ ವಿಶ್ರಾಂತಿಯ ಸಂಕೇತ. ಆರೋಗ್ಯದ ಮೊದಲ ಲಕ್ಷಣ ನಿದ್ದೆ. ನಿದ್ದೆಯನ್ನು ವಿಶ್ರಾಂತಿ ಎಂದು ತಿಳಿದರೂ ಯೋಗ ಜೀವನದಲ್ಲಿ ಅದು ಪೂರ್ಣ ವಿಶ್ರಾಂತಿ ಎಂದಾಗುವುದಿಲ್ಲ. ವಿಶ್ರಾಂತಿ ಬೇಕು ಅಂತ ನಿದ್ದೆ ಮಾಡಿದರೆ ದೇಹ ಮನಸ್ಸು ಎರಡು ಸಕ್ರಿಯವಾಗಿರುತ್ತದೆ. ಒಂದು ವೇಳೆ ದೇಹ ವಿಶ್ರಮಿಸಿದರೂ ಮನಸ್ಸು ಸುಪ್ತವಾಗಿರುವುದಿಲ್ಲ ನಿದ್ದೆಯಲ್ಲೂ ಮನಸ್ಸು ಕನಸನ್ನು ಕಂಡು ಮನಸ್ಸು ಎಚ್ಚರವನ್ನೇ ಅನುಭವಿಸುತ್ತದೆ, ದುಃಖದಲ್ಲಿ ಮರುಗಿ ಸುಖದಲ್ಲಿ ನಕ್ಕು, ಭಯದಲ್ಲಿ ಗಾಬರಿಯನ್ನೂ ಅನುಭವಿಸುತ್ತದೆ. ನಿದ್ದೆ ಎಂಬುದು ದೇಹದ ಒಂದು ಕ್ರಿಯೆ. ಈ ನಿದ್ದೆ ಬೇಕಾದಾಗ ಬರುವುದೂ ಇಲ್ಲ. ಬರುವಾಗ ಬೇಡ ಅಂತ ತಳ್ಳಿ ಹಾಕುವುದಕ್ಕೂ ಆಗುವುದಿಲ್ಲ. ನಿದ್ದೆ ಸಕ್ರಿಯವಾಗಿದ್ದ ದೇಹಕ್ಕೆ ಒಂದು ವಿಶ್ರಾಂತಿಯ ಅವಕಾಶ.
ನಿದ್ದೆ ಎಂದರೆ ರಾತ್ರಿಯ ಸಹಚರ. ಆದರೆ ಹಲವು ಸಲ ಈ ಸಹಚರ ಬೇಕಾದಾಗ ಬರದೇ ಇರುವುದೇ ಹೆಚ್ಚು. ಈತ ಬರಬೇಕಾದರೆ ಸುಮ್ಮನೇ ಬರುವುದಿಲ್ಲ. ಹಲವು ಸಲ ಹಗಲಿನಲ್ಲಿ ಬಂದು ತೊಂದರೆ ಕೊಡುತ್ತದೆ. ಎಲ್ಲವನ್ನು ಮರೆಸುವ ನಿದ್ದೆ ಅಮೂಲ್ಯವೆನಿಸುವುದು ಅದು ಬರದೇ ಇದ್ದಾಗ. ಹಲವರಿಗೆ ನಿದ್ದೆ ಕೂಡ ಹಗಲು ಕನಸಿನಂತೆ. ಬರುವುದೇ ಇಲ್ಲ. ಇಂದು ಬಹುತೇಕರಿಗೆ ನಿದ್ರೆ ಎಂಬುದು ಹಗಲು ಕನಸು ! ಯಾಕೆ ಇದು ಕನಸಾಗುತ್ತದೆ. ಕನಸಿನಲ್ಲೂ ನಿದ್ದೆ ಸುಳಿಯುವುದಿಲ್ಲ ಯಾಕೆ? ಉದ್ರೇಕ ಉದ್ವೇಗ ಮಾನಸಿಕ ಒತ್ತಡ ನಿದ್ದೆಯ ದೊಡ್ಡ ವೈರಿಗಳು. ನಿದ್ದೆ ಬರಬೇಕಿದ್ದರೆ ಇವುಗಳಿಂದ ಹೊರಬರುವ ಪ್ರಯತ್ನ ಮಾಡಬೇಕು.
ನಿದ್ದೆ ಜಡತ್ವದ ಸಂಕೇತ. ನಿದ್ದೆಯನ್ನು ಅಸುರೀ ಸ್ವಭಾವ ಎನ್ನುವುದುಂಟು. ಬೇಡದೇ ಇದ್ದಾಗ ಅಪರ ಹೊತ್ತಿನಲ್ಲಿ ನಿದ್ದೆ ಮಾಡುವುದು ಒಂದು ಶಾಪ ಎಂದು ಪರಿಗಣಿಸುತ್ತಾರೆ. ಹೀಗಿದ್ದರೂ ನಿದ್ದೆ ಬರಬೇಕಾದಾಗ ಬರದೇ ಇದ್ದರೆ ಮನುಷ್ಯ ದುರ್ವ್ಯಸನಗಳಿಗೆ ತುತ್ತಾಗುತ್ತಾನೆ. ವಾಸ್ತವದಲ್ಲಿ ಇದು ಮನಸ್ಸಿನ ಆತಂಕವೇ ಹೊರತು ದೇಹದ ಲಕ್ಷಣವಲ್ಲ. ಆರೋಗ್ಯವಂತ ದೇಹಕ್ಕೆ ನಿದ್ದೆ ಒಂದು ಸಹಜ ಕ್ರಿಯೆ.
ನಿದ್ದೆಗೆ ಸೂಕ್ತ ಸಮಯ ರಾತ್ರಿ. ಹಗಲು ನಿದ್ದೆ ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ. ಇದಕ್ಕೆ ಕಾರಣ ಹಲವಿದೆ. ಹಗಲಲ್ಲಿ ವಾತಾವರಣದಲ್ಲಿ ಆಮ್ಲಜನಕದ ಮಟ್ಟ ಕಡಿಮೆ ಇರುತ್ತದೆ. ನಿದ್ದೆಯಲ್ಲಿ ಸಹಜವಾಗಿ ದೀರ್ಘ ಉಸಿರು ಉಸಿರಾಡುವಾಗ ಸಾಕಷ್ಟು ಆಮ್ಲಜನಕ ಹೃದಯಕ್ಕೆ ಸೇರುವುದಿಲ್ಲ. ಹಾಗಾಗಿಯೇ ರಾತ್ರಿ ನಿದ್ದೆ ಮಾಡಿ ಎದ್ದಾಗ ಇರುವಷ್ಟು ಉತ್ಸಾಹ ಹಗಲು ನಿದ್ದೆ ಮುಗಿಸಿದಾಗ ಇರುವುದಿಲ್ಲ. ದೇಹ ಬಹಳಷ್ಟು ಸುಸ್ತಾದಂತೆ ಅನುಭವವಾಗುತ್ತದೆ. ಹಾಸ್ಯಕ್ಕೆ ಹೇಳುವುದುಂಟು ರಾತ್ರಿಯ ನಿದ್ದೆ ಪತ್ನಿಯಂತೆ ಬೇಕಾದಾಗ ಬಿಟ್ಟು ಬಿಡುತ್ತಾಳೆ, ಹಗಲಿನ ನಿದ್ದೆ ಮೋಹಿನಿಯಂತೆ ಒಂದು ಸಲ ಹಿಡಿದರೆ ಬಿಡುವುದೇ ಇಲ್ಲ. ಇದು ಕೇವಲ ಹಾಸ್ಯಕ್ಕೆ ಹೇಳುವುದು.
ನನ್ನ ಮಿತ್ರರೊಬ್ಬರು ಇದ್ದಾರೆ , ಯಾವಾಗ ಬೇಕೋ ಆವಾಗ ಎಲ್ಲೆಂದರಲ್ಲಿ ನಿದ್ದೆ ಮಾಡಬೇಕು ಎನ್ನಿಸಿದರೆ ಮೈ ಮರೆತು ನಿದ್ದೆ ಮಾಡಿಬಿಡುತ್ತಾರೆ. ಹಾಗಂತ ಅವರ ಆರೋಗ್ಯ ಸ್ಥಿರವಾಗಿದೆ ಎಂದಲ್ಲ, ಗಂಭೀರವಾದ ಆರೋಗ್ಯ ಸಮಸ್ಯೆ ಅವರನ್ನು ನಿತ್ಯ ಬಾಧಿಸುತ್ತದೆ. ಆದರೂ ನಿದ್ದೆಯ ವಿಚಾರದಲ್ಲಿ ಅವರದು ಸ್ಥಿರವಾದ ಚಟುವಟಿಕೆ. ನಮ್ಮ ಸಂಬಂಧಿಗಳು ಒಬ್ಬರಿದ್ದರು ಹತ್ತು ಪೆಟ್ರೋ ಮ್ಯಾಕ್ಸ್ ಸುತ್ತಲೂ ಉರಿಸಿಟ್ಟರು ಮಲಗಿದ ಕೆಲವೇ ಕ್ಷಣಗಳಲ್ಲಿ ಗಾಢನಿದ್ದೆಗೆ ಜಾರಿಬಿಟ್ಟು ಗೊರಕೆ ಎಳೆಯುತ್ತಿದ್ದರು. ನಿದ್ದೆ ಆರೋಗ್ಯದ ಲಕ್ಷಣವಾದರು ಮಿತಿ ಮೀರಿದರೆ ಅದು ಜಾಡ್ಯ ಆವರಿಸಿ ರೋಗವಾಗಿ ಬದಲಾಗುತ್ತದೆ.
ನಿದ್ದೆ ಬಾರದಿದ್ದರೆ ಹಲವರು ದುರ್ವ್ಯಸನಕ್ಕೆ ತುತ್ತಾಗುತ್ತಾರೆ. ನನಗೂ ಈ ಒಂದು ದುರ್ವ್ಯಸನ ಒಂದು ಕಾಲದಲ್ಲಿ ಬಾಧಿಸಿತ್ತು. ರಾತ್ರಿ ಮಲಗಬೇಕಾದರೆ, ಎಲೆ ಅಡಿಕೆ ಒಂದಷ್ಟು ತಂಬಾಕು ಹಾಕದಿದ್ದರೆ ನಿದ್ದೆಯೇ ಬರುತ್ತಿರಲಿಲ್ಲ. ಅದು ಇಲ್ಲದೇ ಇದ್ದರೆ ನಿದ್ದೆಯೇ ಬರುವುದಿಲ್ಲವೇನೋ ಎಂಬ ಆತಂಕದಲ್ಲಿ ಅದು ಬಿಡದೇ ಹಿಂಬಾಲಿಸಿ ಚಟವಾಗಿ ಬದಲಾಗಿತ್ತು. ಊರಲ್ಲಿ ಹೊರಗೆ ಸುತ್ತಾಡಿ ಕೆಲಸ ಮಾಡುವಾಗ ತನ್ನಷ್ಟಕ್ಕೆ ಅಂಟಿಕೊಂಡ ಚಟವದು. ಮಳೆಯಲ್ಲಿ ನೆನೆದು ಮಾಡುವಂತಹ ತೋಟದ ಗದ್ದೆಯ ಕೆಲಸದಲ್ಲಿ ಎಲೆ ಅಡಿಕೆ ಚರ್ವಣ ತುಂಬ ಆಹ್ಲಾದವನ್ನು ಕೊಡುತ್ತಿತ್ತು. ಅದು ಲಹರಿ ಎಂಬ ಭ್ರಮೆ ಎಂದು ಅರಿವಾಗಬೇಕಾದರೆ ಬಹಳಷ್ಟು ಸಮಯ ಬೇಕಾಯಿತು. ಯಾವಾಗ ಯೋಗಾಭ್ಯಾಸ ಆರಂಭವಾಯಿತೋ ನನ್ನ ಹಲವಾರು ದುರಭ್ಯಾಸಗಳೂ ದುಶ್ಚಟಗಳೂ ಅನಿವಾರ್ಯ ಅಲ್ಲವೆಂಬಂತೆ ಭಾಸವಾಗತೊಡಗಿತು. ಹಲವು ಜನಗಳು ಇದೇ ರೀತಿ ದುರಭ್ಯಾಸಕ್ಕೆ ಅಂಟಿಕೊಂಡುಬಿಡುತ್ತಾರೆ. ವಾಸ್ತವದಲ್ಲಿ ದುಶ್ಚಟದಿಂದಲೇ ಸಹಜವಾಗಿ ಬರುವ ನಿದ್ದೆ ದೂರಾಗಿ ಬಿಡುತ್ತದೆ. ನಿದ್ದೆ ಬರುವುದಿಲ್ಲ ಎಂದು ನಿದ್ದೆ ಮಾತ್ರೆ ತೆಗೆದುಕೊಂಡದ್ದೂ ಇದೆ. ಇಂತಹ ಸಂದರ್ಭಗಳಲ್ಲಿ ಮೈಮರೆತು ನಿದ್ದೆ ಬಂದರೂ ನಿಶೆಯಲ್ಲಿ ಮಾಡಿದ ನಿದ್ದೆ ಅದು ನಿದ್ದೆಯಾಗದೆ ಸಹಜವಾಗಿ ಬರಬೇಕಾದ ನಿದ್ದೆ ಶೇಖರಣೆಯಾಗಿ, ನಶೆ ಕಡಿಮೆಯಾದ ಮೇಲೆ ಆ ನಿದ್ದೆ ಮತ್ತೆ ಬರುತ್ತದೆ. ಮತ್ತು ಇದು ಬಿಡದೆ ಮತ್ತಷ್ಟು ಜಡತ್ವವನ್ನು ತರುತ್ತದೆ. ನಿಜಕ್ಕೂ ನಿದ್ದೆ ಬರುವುದಿಲ್ಲ ಎಂಬ ಭ್ರಮೆಯೇ ನಿದ್ದೆಯನ್ನು ದೂರ ಮಾಡುತ್ತದೆ. ದುಶ್ಚಟದಿಂದ ಒಂದಷ್ಟು ದಿನ ದೂರವಾಗಿ ಇಟ್ಟು ನೋಡಿ. ಒಂದೆರಡು ದಿನ ಕಷ್ಟವಾದರು ನಿದ್ದೆಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬುದು ಅರಿವಾಗುತ್ತದೆ. ದುಶ್ಚಟವೆಂದರೆ ಕೇವಲ ಮದ್ಯ ಧೂಮಪಾನ ತಂಬಾಕು ಸೇವನೆ ಎಂಬ ತಪ್ಪು ಕಲ್ಪನೆ ಹಲವರಿಗಿದೆ. ಚಹ ಕಾಫಿಯೂ ಅಕಾಲಿಕ ಆಹಾರ ಸೇವನೆಯೂ ದುಶ್ಚಟವಾಗುತ್ತದೆ. ಮನಸ್ಸು ಉದ್ರೇಕಗೊಂಡು ಸಿಟ್ಟಾಗುವುದು ಸಹ ದುಶ್ಚಟ ಎನಿಸಲ್ಪಡುತ್ತದೆ. ಒಂದಷ್ಟು ದಿನ ಚಹ ಕಾಫಿ ಸೇವನೆ ಬಿಟ್ಟು ನೋಡಿ ಇದರ ಅರಿವಾಗುತ್ತದೆ. ಚಹ ಕಾಫಿ ಮದ್ಯ ಧೂಮ ಪಾನ ಎಲ್ಲವು ಅನಿವಾರ್ಯ ವಸ್ತುಗಳಲ್ಲ. ಕೇವಲ ಭ್ರಮೆಯನ್ನು ಹುಟ್ಟಿಸುವ ಲಹರಿ ವಸ್ತುಗಳು.
ಮಲಗಿದ ಕೂಡಲೇ ನಿದ್ದೆ ಬರದೇ ಇದ್ದರೆ ಏನೆಲ್ಲ ಯೋಚನೆಗಳು. ಕಳೆದ ದಿನಗಳು ಮುಂದೆ ಬರುವ ದಿನಗಳು ಯೋಚನೆಗಳಿಗೆ ಕೇಳಬೇಕೆ. ಈ ಯೋಚನೆಯ ನಡುವೆ ನಿದ್ದೆಗೆ ಜಾಗವೇ ಇಲ್ಲ. ಸಾಮಾನ್ಯವಾಗಿ ನಿದ್ದೆ ಬರುವುದಿಲ್ಲ ಎಂದಾಗ ದುಶ್ಚಟಗಳು ತನ್ನಿಂತಾನೇ ಇಷ್ಟವಾಗುತ್ತದೆ. ನಾವು ಇವುಗಳಿಂದಲೇ ನಿದ್ದೆ ಬರುತ್ತದೆ ಎಂದು ತಿಳಿಯುತ್ತೇವೆ. ಕೆಲವರಿಗೆ ನಿದ್ದೆ ಬರಬೇಕಾದರೆ ಏನಾದರೂ ಓದಬೇಕು. ನಾಲ್ಕು ಪುಟ ಓದಿದಕೂಡಲೇ ನಿದ್ದೆಗೆ ಜಾರಿಬಿಡುವವರಿದ್ದಾರೆ. ಶಾಲೆಗೆ ಹೋಗುವಾಗ ಪಾಠ ಓದುವಾಗ ಕೇಳುವಾಗ ನಿದ್ದೆ ಬರುವುದು ಸಹಜ. ನಂತರ ಬದುಕಿನಲ್ಲೂ ಅದೇ ಮುಂದುವರಿಯುತ್ತದೆ. ಓದಿ ನಿದ್ದೆ ತರಿಸುವುದು ಒಂದು ರೀತಿಯಲ್ಲಿ ಒಳ್ಳೆಯ ಹವ್ಯಾಸ ಎನ್ನಬಹುದು. ಆದರೆ ದುಶ್ಚಟಗಳು, ಅದರಲ್ಲಿ ಕೆಲವು ಗಂಭೀರವಾಗಿ ಇರುತ್ತವೆ, ಇನ್ನು ಕೆಲವು ಅದರ ಗಂಭೀರತೆಯನ್ನು ತೋರಿಸದೇ ಇದ್ದು ಮತ್ತೆ ಅದು ಗಂಭೀರವಾಗುತ್ತದೆ. ಯಾವುದೇ ಒಂದು ಹವ್ಯಾಸ ಚಟ ಅಂತ ಅನ್ನಿಸುವುದು ಅದು ಇಲ್ಲದೇ ಆಗುವುದಿಲ್ಲ ಎಂಬಂತಿರುವಾಗ. ಅದು ಎನೂ ಆಗಬಹುದು. ಕಾಫಿ ಚಹ ಸೇವನೆಯೂ ಒಂದು ದುಶ್ಚಟವಾಗುತ್ತದೆ. ಇವುಗಳೆಲ್ಲ ಲಹರಿ ವಸ್ತುಗಳು. ಲಹರಿ ವಸ್ತುಗಳು ಬದುಕಿಗೆ ಅನಿವಾರ್ಯವಲ್ಲ. ಹಲವರು ಅದನ್ನು ಒಪ್ಪಿಕೊಳ್ಳುವುದಿಲ್ಲ ಅಷ್ಟೆ. ದುಶ್ಚಟ ಎಂದು ಅರಿವಾಗಬೇಕಾದರೆ ಒಂದಷ್ಟು ಸಮಯ ಅದರಿಂದ ದೂರವಿದ್ದು ನೋಡಿದರೆ ಅರಿವಾಗುತ್ತದೆ.
ಮೊದಲು ಊರಲ್ಲಿ ಮಳೆಗೆ ಕೆಲಸ ಮಾಡುವಾಗ ತಾಂಬೂಲ ಚರ್ವಣ ಅಭ್ಯಾಸವಾಯಿತು. ಬರೀ ತಾಂಬೂಲವಾದರೆ ಅರೋಗ್ಯದಾಯಕ ಅಂಶಗಳಿದ್ದರೂ ಚಿಟಿಕೆ ತಂಬಾಕು ಸೇವಿಸುವಾಗ ಲಹರಿಯಾಗುತ್ತದೆ. ಮಳೆಯಲ್ಲಿ ಹೊಗೆಸೂಪ್ಪು ಹಾಕಿ ಎಲೆ ಅಡಿಕೆ ಜಗಿಯುವುದರಲ್ಲಿ ಒಂದು ಆಹ್ಲಾದತೆ ಇರುತ್ತದೆ. ಎಲ್ಲರೂ ಹೇಳುವಂತೆ ಅದರ ಮಜವೇ ಬೇರೆ. ಮೊದಲು ಎಲ್ಲಿಗಾದರೂ ಹೋದಾಗ ಬಸ್ಸು ಬಾರದೇ ಇದ್ದರೆ ಅಲ್ಲಿ ಚೀಲದಲ್ಲಿದ್ದ ತಾಂಬೂಲ ಪೆಟ್ಟಿಗೆಯನ್ನು ತೆರೆದು ತಾಂಬೂಲ ಹಾಕಿಕೊಳ್ಳುತ್ತಿದ್ದದ್ದು ರೂಢಿ. ಎಲೆ ಅಡಿಕೆ ತಿನ್ನುವುದು ಸಮಯ ಕಳೆಯುವ ಒಂದು ಹವ್ಯಾಸ. ಎಲ್ಲಿಗಾದರೂ ನೆಂಟರಾಗಿ ಅಥವ ಹೀಗೆ ಹೋದರೂ ನಾವು ತಾಂಬೂಲ ಅಭ್ಯಾಸ ವಿದ್ದರೆ, ಸತ್ಕಾರಕ್ಕೆ ಸುಲಭವಾದ ಒಂದು ವಿಧಾನ ಎಂದರೆ ಎಲೆ ಅಡಿಕೆಯ ಪೆಟ್ಟಿಗೆ ತಂದಿಡುವುದು. ಅದರಲ್ಲೂ ಎಲ್ಲಿಂದಲೋ ಕಷ್ಟ ಪಟ್ಟು ತಂದ ಕುಣಿಯ ಹೊಗೆಸೊಪ್ಪು ಇದೆ ಅಂತ ಸತ್ಕರಿಸುವವನು ಹೆಗ್ಗಳಿಕೆ ತೋರಿಸಿದರೆ ಒಂದಿಷ್ಟು ತಿಂದು ಗಾಳಿಯಲ್ಲಿ ತೇಲುವ ಅನುಭವ ಯಾರಿಗೆ ಬೇಡ? ತಂದ ಹೊಗೆಸೊಪ್ಪು ಚೆನ್ನಾಗಿದ್ದರೆ ಅದಕ್ಕಾಗಿ ಎಲೆ ಅಡಿಕೆ ಜಗಿಯುವ ಖಯಾಲಿಯೂ ಇರುತ್ತಿತ್ತು. ಹಸಿವಾದರೂ, ಹಸಿವಾಗುವುದಕ್ಕೂ ತಾಂಬೂಲ ಪರಿಹಾರವನ್ನು ಕಂಡುಕೊಳ್ಳುವವರಿದ್ದಾರೆ. ಸಂದರ್ಭಾನುಸಾರ ಇರುವವುಗಳು ಅನಿವಾರ್ಯ ಅನ್ನಿಸುವ ಸೀಮೆ ದಾಟಿದಾಗ ಬಿಡದ ಭೂತವಾಗಿ ಕಾಣುತ್ತದೆ. ಈ ಭೂತವನ್ನು ಉತ್ತಮ ಜೀವನ ಶೈಲಿಯಿಂದ ದೂರ ಮಾಡಬಹುದು.
ತಾಂಬೂಲ ಸೇವನೆ ಅಷ್ಟೊಂದು ಗಂಭೀರ ಹವ್ಯಾಸ ಅಲ್ಲ ಅಂತ ಅನಿಸಿದರೂ ನನಗೆ ಅದೆಷ್ಟು ಗಂಭೀರ ಅಂತನ್ನಿಸಿದ್ದು ಅದು ಇಲ್ಲದೇ ಆಗುವಾಗ. ರಾತ್ರಿ ಪ್ರಯಾಣವಿದ್ದರಂತೂ ಒಂದೆರಡು ಬಾರಿ ಇದನ್ನು ಸೇವಿಸಿಯಾಗುತ್ತದೆ. ರಾತ್ರಿ ಮಲಗುವಾಗ ಒಂದಷ್ಟು ತಂಬಾಕಿನ ನಶೆ ಏರಿಸಿ ಎಲ್ಲವನ್ನೂ ಮರೆತಂತೆ ಅನುಭವವಾಗಿ ನಿದ್ದೆ ಬರುತ್ತದೆ ಎಂಬ ಕ್ಷುಲ್ಲಕ ಭ್ರಮೆಯಲ್ಲಿದ್ದೆ. ಈ ಚಟ ಹಲವಾರು ತೊಂದರೆಯನ್ನೇ ಕೊಡುವಷ್ಟು ರೀತಿಯಲ್ಲಿ ಅಂಟಿಕೊಂಡಿದ್ದರೂ ಇದು ಒಂದಲ್ವ ಎಂದು ತಾತ್ಸಾರದಿಂದ ಒಂದಾದರೂ ಚಟವಿರಲಿ ಎಂದು ಅಂಟಿಸಿಕೊಂಡೇ ಇದ್ದೆ. ಈ ಚಟದಿಂದಾಗಿ ಹೋದಲ್ಲೆಲ್ಲ ಒಂದಷ್ಟು ತೊಂದರೆಯನ್ನು ಅನುಭವಿಸಿದ್ದಿದೆ. ಈಗಲೂ ಇದೊಂದು ಚಟ ಎಷ್ಟು ಸುಂದರ ಎನಿಸಿಬಿಡುತ್ತದೆ. ಇಲ್ಲಿ ಬೆಂಗಳೂರಲ್ಲಿ ಒಳ್ಳೆ ಹೊಗೆಸೊಪ್ಪು ಸಿಗುವುದಿಲ್ಲ ಎಂದು, ಊರಿಗೆ ಹೋದಾಗಲೆಲ್ಲ, ಹೊಗೆಸೊಪ್ಪು ಕಟ್ಟಿ ತರುತ್ತಿದ್ದೆ. ರಾತ್ರಿ ಇದು ಇಲ್ಲದೇ ಇದ್ದರೆ ನಿದ್ದೆಯೇ ಬರುವುದಿಲ್ಲ ಎಂಬ ಭ್ರಮೆಯಲ್ಲೇ ಸೇವನೆ ಮಾಡುತ್ತಿದ್ದದ್ದು ಎಷ್ಟೊಂದು ಭಯಾನಕ ಅಂತ ಅನ್ನಿಸುತ್ತದೆ. ಇದು ಯಾವುದೋ ಕಾರಣಕ್ಕೆ ಅಂಟಿಕೊಂಡಿತ್ತು. ಹಲವು ಸಲ ಬೆಳಗ್ಗೆ ಎದ್ದಾಗ ಬಾಯಿ ದುರ್ಗಂಧ ಬರುತ್ತದೆ ಎಂದುಕೊಂಡು ತನಗೆ ತಾನೆ ಕಾರಣ ಕಂಡುಕೊಳ್ಳುತ್ತಿದ್ದೆ.
ತಾಂಬೂಲ ಸೇವನೆ ಅಷ್ಟೊಂದು ಗಂಭೀರವಲ್ಲ ಎಂದುಕೊಂಡು ಬಹಳ ವರ್ಷ ಇದನ್ನು ಬಿಡದೇ ಅಂಟಿಸಿಕೊಂಡಿದ್ದೆ. ಆದರೆ ಯಾವಾಗ ಯೋಗಾಭ್ಯಾಸ ತೊಡಗಿಸಿ ಅದಕ್ಕಾಗಿ ಜೀವನ ಶೈಲಿಯನ್ನು ಬದಲಿಸುವ ಪ್ರೇರಣೆಯಾಯಿತೊ ಈ ಚಟಗಳೆಲ್ಲ, ಸಂಬಂಧವೇ ಇಲ್ಲದ ನೆಂಟರಂತೆ ಜಾಗ ಖಾಲಿ ಮಾಡಿದವು. ಯೋಗ ಜೀವನ ಶೈಲಿ ಎಂದರೆ ಹಾಗೆ ದೇಹಕ್ಕೆ ಅನಪೇಕ್ಷಿತವಾದದ್ದು ದೂರ ಇಡುವಂತೆ ಪ್ರೇರೇಪಣೆ ಮಾಡುತ್ತಾ ಇರುತ್ತದೆ. ನಮ್ಮ ಮನಸ್ಸಿನಲ್ಲಿ ನಾವು ಪರಿಪೂರ್ಣರಲ್ಲ ಎಂಬ ಭಾವನೆಯನ್ನು ಹಲವು ಅಭ್ಯಾಸಗಳು ಪ್ರಚೋದಿಸುತ್ತವೆ. ಅದರಲ್ಲೂ ಯೋಗಾಭ್ಯಾಸ ನಮ್ಮನ್ನು ಪರಿಪೂರ್ಣತೆಯತ್ತ ಕೊಂಡೊಯ್ಯುತ್ತದೆ. ಸದಾ ನಾವು ಪರಿಪೂರ್ಣರಲ್ಲ ಎಂಬ ಭಾವನೆಯೇ ಯೋಗಾಭ್ಯಾಸಕ್ಕೆ ಮುಖ್ಯ ಪ್ರೇರಣೆ. ಈ ಭಾವನೆ ಇದ್ದಾಗ ಮಾತ್ರ ಅಭ್ಯಾಸ ಪರಿಪೂರ್ಣವಾಗುತ್ತದೆ. ಯೋಗ ಜೀವನ ಶೈಲಿ ಅವಶ್ಯವಿಲ್ಲದೇ ಇದ್ದದ್ದನ್ನು ನಮ್ಮಿಂದ ಕಿತ್ತು ಹಾಕುತ್ತದೆ. ಅದಕ್ಕೆ ನಾವು ಎಷ್ಟು ಒಪ್ಪಿಸಿಕೊಳ್ಳುತ್ತೇವೆ ಅದನ್ನು ಹೊಂದಿಕೊಂಡಿರುತ್ತದೆ.
ಇದು ವರೆಗೆ ನಿದ್ದೆ ಬರುವುದಿಲ್ಲ ಎಂದುಕೊಂಡು ಅಂಟಿಸಿಕೊಂಡಿದ್ದ ದುಶ್ಚಟ ಒಂದು ರೀತಿಯಲ್ಲಿ ಯೋಗ ಜೀವನಕ್ಕೂ ಸವಾಲಾದಂತೆ ಜೀವಂತವಾಗಿತ್ತು. ಸಾಲ ಕೊಟ್ಟ ನೆಂಟನಂತೆ ಅದು ಬಿಟ್ಟು ಹೋಗುವುದಿಲ್ಲ. ಆದರೆ ಒಂದು ಸತ್ಯ ನಿದ್ದೆ ಬರುವುದಿಲ್ಲ ಎಂದುಕೊಂಡು ದುಶ್ಚಟಕ್ಕೆ ಅವಲಂಬಿತನಾಗಿರುವುದು ಮೂರ್ಖತನ. ಭಗವಂತ ಈ ಭೂಮಿಯಲ್ಲಿ ಹುಟ್ಟಿಸುತ್ತಾನೆ. ಸದಾ ಜಗತ್ತಿನ ಅರಿವಿನೊಂದಿಗೆ ಬದುಕುವುದಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತಾನೆ. ಆದರೆ ದುಶ್ಚಟದಲ್ಲಿ ನಾವು ಕ್ಷಣಿಕವಾದರೂ ಈ ಜಗತ್ತಿನ ಅರಿವಿನಿಂದ ದೂರಾಗುವುದಕ್ಕೆ ಬಯಸುತ್ತೇವೆ.
ನನಗೂ ತಾಂಬೂಲ ಚರ್ವಣದಿಂದ ಹೊರಬರುವ ಮನಸ್ಸಾಯಿತು. ವಾಸ್ತವದಲ್ಲಿ ಯೋಗಾಭ್ಯಾಸಕ್ಕೆ ಮುಂಜಾನೆ ನಾಲ್ಕು ಗಂಟೆ ಏಳುವ ಕ್ರಮದಿಂದ ಮತ್ತು ನಿತ್ಯ ಪ್ರಾಣಾಯಾಮ ಮಾಡುವುದರಿಂದ ನಿದ್ದೆಯ ಸಮಸ್ಯೆ ಇರಲೇ ಇಲ್ಲ. ಮಲಗಿದ ಕೂಡಲೇ ನಿದ್ದೆ ಆವರಿಸುತ್ತಿತ್ತು. ಮತ್ತೇಕೆ ತಾಂಬೂಲ. ಮೂವತ್ತು ವರ್ಷಗಳಿಂದ ಜತೆಯಾಗಿ ಇದ್ದ ಒಂದು ಹವ್ಯಾಸವನ್ನು ಒಂದು ದಿನ ಬಿಟ್ಟು ಬಿಟ್ಟೆ. ಅದು ಕೆಟ್ಟ ಹವ್ಯಾಸ ಎಂದನಿಸಿದ್ದು ಅದು ಬಿಟ್ಟ ಮೇಲೆ. ಮುಂಜಾನೆ ಬೇಗನೆ ಏಳುವ ಕಾರಣ ಸಾಯಂಕಾಲ ಏಳು ಘಂಟೆಗೆ ಊಟ ಮುಗಿಸಿಬಿಡುತ್ತಿದ್ದೆ. ಎಂಟು ಗಂಟೆಯಾಗಬೇಕಿದ್ದರೆ ನಿದ್ದೆ ಒತ್ತಿ ಒತ್ತಿ ಬರುತ್ತದೆ. ಒಂಭತ್ತು ಗಂಟೆಗೆ ಮತ್ತೆ ಇರುವುದಕ್ಕೆ ಸಾಧ್ಯ ವಿಲ್ಲ ಎಂದು ಕೊಂಡು ಮಲಗಿದರೆ ಕ್ಷಣದಲ್ಲೇ ನಿದ್ದೆ ಆವರಿಸಿ ಬಿಡುತ್ತದೆ. ಯಾವ ತಾಂಬೂಲ ನಶೆಯ ಅಗತ್ಯವಿಲ್ಲದೇ ನಿದ್ದೆ ಆವರಿಸುವುದು ಮಾತ್ರವಲ್ಲ ಆ ನಿದ್ದೆಯ ಒಂದು ಸ್ವಾದ ಅದರ ಅನುಭವ ಅತ್ಯಂತ ವಿಶಿಷ್ಟವಾಗಿ ಕಂಡಿತ್ತು. ಬಹಳ ಸಮಯವಾಯಿತು ಇದೀಗ ಎಲ್ಲಾ ದುಶ್ಚಟಗಳಿಂದ ದೂರವಾಗಿದ್ದೆನೆ. ಸಿಹಿನಿದ್ದೆ ಎನೆಂದು ಅನುಭವವಾಗಿದೆ. ಮೊದಲೆಲ್ಲ ನಿದ್ದೆ ಎಂದರೆ ಬಾಡಿಗೆಯ ಮನೆಯಂತೆ. ಎಷ್ಟು ಅಂದವಿದ್ದರೂ ಅದು ನನ್ನದಲ್ಲ ಎಂಬ ಭಾವನೆ ಚುಚ್ಚುತ್ತಾ ಇರುವಂತೆ, ನಿದ್ದೆ ನನ್ನದಲ್ಲ ಎಂಬ ಭಾವನೆ. ಅದಕ್ಕೂ ಬಾಡಿಗೆ ಇದೆ. ಈಗ ನಿದ್ದೆ ಯಾವ ಬಾಡಿಗೆಯೂ ಕೊಡದೆ ನನ್ನದಾಗುತ್ತದೆ. ನನ್ನ ಸ್ವಂತ ವಸ್ತುವಿನ ಅನುಭವವನ್ನು ಕೊಡುತ್ತದೆ. ನನಗೆ ಬೇಕು ಎಂದಾಗ ಬಂದು ಬೇಡ ಎಂದಾಗ ಬಿಟ್ಟುಕೊಟ್ಟು ಆತ್ಮೀಯ ಮಿತ್ರನಂತೆ ವರ್ತಿಸುತ್ತದೆ. ಯೋಚಿಸಿ ನಿದ್ದೆ ಬಾರದಿರುವುದಕ್ಕೆ ನಿದ್ದೆ ಕಾರಣವಲ್ಲ, ನಮ್ಮ ದೇಹವೂ ಕಾರಣವಲ್ಲ. ನಮ್ಮ ಮನಸ್ಸೇ ನಿದ್ದೆಯ ಮೊದಲ ವೈರಿ.
ಕಲ್ಮಶಗಳು, ಜೀವನದ ಒಂದು ಅಂಗ. ದುಶ್ಚಟಗಳು ಪರಿಸರದ ಭಾಗವಾಗಿ ಕೆಲವೊಮ್ಮೆ ಅಂಟಿಕೊಂಡು ಬಿಡುತ್ತವೆ. ದುಶ್ಚಟಗಳಿಂದ ದೂರವಾಗುವುದು ಹೊಸ ಲೋಕದ ಮುಖವನ್ನು ಕಂಡಂತೆ. ಕಮಲ ಕೆಸರಲ್ಲಿ ಹುಟ್ಟಿದರೂ ಅದು ಹೊರಗೆ ಬಂದ ಮೇಲೆ ಕೆಸರಿನಿಂದ ದೂರವಾಗಿ ಶುಭ್ರವಾದ ಅನುಭವವನ್ನು ನೀಡುತ್ತದೆ. ಕಮಲದಂತೆ ನಮ್ಮ ಬದುಕನ್ನು ರೂಪಿಸಿ ಪರಿಶುದ್ದತೆಯತ್ತ ಸಾಗುವುದೇ ಜೀವನದ ಲಕ್ಷ್ಯ. ಅರಳಿದ ಕಮಲ ತನ್ನ ಎಲ್ಲಾ ದಿಕ್ಕುಗಳಿಗೆ ದಳಗಳನ್ನು ಹರಡಿಸಿದಂತೆ ದುರ್ವ್ಯಸನದಿಂದ ಹೊರಬಂದಾಗ ಬದುಕಿನ ಅವಕಾಶಗಳಿಗೆ ಕೈಚಾಚಿ ವಶಪಡಿಸುವ