ಬಾಲ್ಯದಲ್ಲಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯ ಬಳಿ ಬಸ್ಸು ಇಳಿದು ಹಾಗೇ ಅಡ್ಡ ರಸ್ತೆಯಲ್ಲಿ ನಡೆದು ಬಂದರೆ ಗಾಬರಿಯಾಗುತ್ತಿದ್ದೆ. ವರ್ಷಕ್ಕೊಮ್ಮೆ ನಮ್ಮೂರಿನ ನೇಮ ಜಾತ್ರೆಗೆ ಸಂತೆ ಇಡುವಂತೆ ಇಲ್ಲಿ ದಿನಾ ಸಂತೆ ಇರುತ್ತದೆ. ಬಗೆ ಬಗೆಯ ಅಂಗಡಿಗಳು. ಸುಮ್ಮನೇ ನೋಡುತ್ತಾ ಹೋದರೆ ಸಾಕು, ಮಂಗಳೂರಿಗೆ ಅತಿಥಿಯಾಗಿ ಬಂದಿದ್ದೇನೋ ಎಂದು ಅನುಮಾನಿಸುವ ಹಾಗೆ ಏನು ಬೇಕು? ಏನು ಬೇಕು? ಎಂದು ಕೇಳುವ ಅಂಗಡಿಯವರು. ಇನ್ನು ಅಲ್ಲಿ ನಡೆದಾಡಲು ಜಾಗವಿಲ್ಲ, ಹಲವು ಸಲ ಎರಡು ಕೈಯಲ್ಲಿ ಚೀಲ ಹಿಡಿದುಕೊಂಡು ಹೊದರೆ ಆ ಕಡೆ ಈ ಕಡೆ ಓಡಾಡುವ ಮಂದಿಗಳ ಕಾಲಿಗೆ ಚೀಲ ತಾಗಿ ಸುತ್ತು ತಿರುಗುತ್ತಿತ್ತು. ಕೊನೆಯಲ್ಲಿ ಬಸ್ ಹತ್ತಿರ ಬಂದು ಸ್ವಲ್ಪ ಹೊತ್ತು ಚೀಲ ಎತ್ತಿ ಹಿಡಿದು ತಿರುಗಿಸಿದ ನಂತರ ಅದು ಪುನಃ ಸರಿಯಾಗುತ್ತಿತ್ತು. ಈ ರೀತಿಯಲ್ಲಿ ಜನಗಳು ನಮ್ಮೂರಿನ ಜಾತ್ರೆಯಲ್ಲೂ ಸೇರುತ್ತಿರಲಿಲ್ಲ. ಜನಗಳ ನಡುವೆ ನುಸುಳಿಬರುವ ಅಟೋರಿಕ್ಷಾ ಕಾರುಗಳು. ಮುಂದೆ ಬಂದರೆ ಮಂಗಳೂರಿನ ಪ್ರಖ್ಯಾತ ಸೆಂಟ್ರಲ್ ಮಾರುಕಟ್ಟೆ ಮತ್ತು ಭವಂತಿ ಸ್ಟ್ರೀಟ್. ಭವಂತಿ ಸ್ಟ್ರೀಟ್ ಹೇಳಿದರೆ ಎಷ್ಟು ಜನರಿಗೆ ತಿಳಿದಿದೆಯೋ ಗೊತ್ತಿಲ್ಲ. ಎಲ್ಲೋ ಕೆಲವು ಅಂಗಡಿಯ ಬೋರ್ಡ್ ಗಳಲ್ಲಿ ಇನ್ನೂ ಬರೆದುಕೊಂಡು ಉಂಟು. ಮಾರ್ಕೆಟ್ ಎಂದರೆ ಅದು ಭವಂತೀ ರಸ್ತೆ. ಭವಂತ...ಎಂದರೆ ಕೊಂಕಣಿಯಲ್ಲಿ ತಿರುಗಾಡು ಎಂಬ ಅರ್ಥವಿದೆ. ಇಲ್ಲಿ ಬಂದರೆ ಅದನ್ನೇ ಮಾಡಬೇಕಿರುವುದರಿಂದ ಇದಕ್ಕೆ ಭವಂತಿ ರಸ್ತೆ ಎನ್ನುವುದೂ ಅರ್ಥ ಪೂರ್ಣ. ಭವಂತಿ ರಸ್ತೆ ಅಂದರೆ ಜನ ಗಲಾಟೆ ಎಂದೇ ಅರ್ಥ. ಇದೇ ರೀತಿ ಬಾಲ್ಯದಲ್ಲಿ ಉರ್ವ ಮಾರಿಗುಡಿ ಜಾತ್ರೆಗೆ ಹೋಗಿ ಆ ಜನ ಸಂದಣಿ ನೂಕು ನುಗ್ಗಲು ನೋಡಿ ಹಿರಿಯರ ಕೈಯನ್ನು ಭದ್ರವಾಗಿ ಹಿಡಿದ್ದೆ.
ಸೆಂಟ್ರಲ್ ಮಾರ್ಕೆಟ್ ನ ಒಂದು ಭಾಗದಲ್ಲಿ ನಗರದ ಖ್ಯಾತ ಸಿನಿಮಾ ಮಂದಿರವಾದ ರೂಪವಾಣಿ ಚಿತ್ರಮಂದಿರವಿದೆ. ಅಲ್ಲಿ ಅಷ್ಟು ಗಲಾಟೆ ಇದ್ದರೂ ಸಿನಿಮಾ ಮಂದಿರದೊಳಗೆ ನುಗ್ಗಿದರೆ ಎಲ್ಲವೂ ಮಾಯ. ಮಾರ್ಕೆಟ್ ನ ಮತ್ತೊಂದು ಬದಿಯಲ್ಲಿ ಲೇಡಿಗೋಶನ್ ಸರಕಾರಿ ಆಸ್ಪತ್ರೆ. ನನ್ನಮ್ಮ ಐದು ದಶಕದ ಹಿಂದೆ ನನ್ನನ್ನು ಹೆತ್ತಿರುವುದು ಇದೇ ಆಸ್ಪತ್ರೆಯಲ್ಲಿ! ಹಾಗಾಗಿ ಜನ್ಮದಲ್ಲೇ ಕೇಂದ್ರ ಮಾರುಕಟ್ಟೆಯ ಹತ್ತಿರದ ಸಂಬಂಧಂತೆ ಭಾಸವಾಗುತ್ತದೆ. ಬಾಲ್ಯದಲ್ಲಿ ಅಮ್ಮನ ಕೈ ಹಿಡಿದುಕೊಂಡು ಹೋಗುತ್ತಿದ್ದ ನೆನಪಿನಂತೆ, ಸೋದರಮಾವನ ಸೈಕಲ್ ನ ಮುಂದಿನ ರಾಡ್ ಮೇಲೆ ಕಾಲು ಆಚೆ ಈಚೆ ಹಾಕಿ ಕುಳಿತು ಸುತ್ತಾಡಿದ ನೆನಪು ಇನ್ನೂ ಇದೆ. ಸೆಂಟ್ರಲ್ ಮಾರ್ಕೆಟ್ ಅಂದರೆ ಕೇಂದ್ರ ಮಾರುಕಟ್ಟೆ ಒಂದು ರೀತಿಯ ನೆನಪುಗಳಿಗೂ ಕೇಂದ್ರವಾಗಿಬಿಡುತ್ತದೆ. ಅಂದಿನ ಕಾಲದಲ್ಲಿ ಈ ಮಾರುಕಟ್ಟೆ ಬೆರಗಿನ ತಾಣ. ಇಲ್ಲಿ ಸಿಗದಿರುವುದು ಜಗತ್ತಿನ ಯಾವ ಮೂಲೆಯಲ್ಲೂ ಇಲ್ಲ ಎಂಬ ಅಚಲವಾದ ನಂಬಿಕೆ. ಭಾನುವಾರ ಹೋದರೆ ...ಅಂಗಡಿಗಳು ಮುಚ್ಚಿರುತ್ತವೆ, ಆದರೆ ಸುತ್ತ ಮುತ್ತ ಬೀದಿ ತುಂಬ ಬೀದಿ ಬದಿಯ ವ್ಯಾಪಾರಿಗಳ ಬಗೆ ಬಗೆಯ ಅಂಗಡಿಗಳು. ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ವಸ್ತುಗಳು. ಸ್ಟೀಲ್ ಪ್ಲಾಸ್ಟಿಕ್ ವಸ್ತುಗಳಿಂದ ಹಿಡಿದು ಬಗೆ ಬಗೆಯ ಬಟ್ಟೇ ಉಡುಪುಗಳು.ಮಾರುಕಟ್ಟೆಯ ಒಳಗೆ ಹೋದರೆ....ಅಬ್ಬಾ ನಮ್ಮೂರ ಗೂಡಂಗಡಿಯಲ್ಲಿ ಒಂದು ಬಾಸ್ಕೆಟ್ ಟೊಮೆಟೊ ಬಟಾಟೆ ತೊಂಡೆಕಾಯಿ ಇಟ್ಟ ತರಕಾರಿ ಅಂಗಡಿಯನ್ನೇ ದೊಡ್ಡದು ಎಂದು ತಿಳಿದುಕೊಂಡರೆ ಇಲ್ಲಿ ಕಂಡ ಟೋಮೆಟೋ ರಾಶಿ ನೋಡಿ ಹೌ ಹಾರಿದ್ದೇನೆ. ಆದರೆ ಬೆಂಗಳೂರಿನ ಕೆ ಆರ್ ಮಾರುಕಟ್ಟೆ ನೋಡಿದ ಮೇಲೆ ಅದು ಬದಲಾಗಿರುವುದು ಬೇರೆ ವಿಚಾರ. ಅದರಲ್ಲೂ ನೆಲಮಂಗಲದ ಬಳಿಯ ದಾಬಸ್ ಪೇಟೆಯ ದೊಡ್ಡ ತರಕಾರಿ ಮಾರುಕಟ್ಟೇ ಇಪ್ಪತ್ತನಾಲ್ಕು ಗಂಟೆಯೂ ತೆರೆದಿರುವುದು ನೋಡಿ ನಮ್ಮ ಈ ಸೆಂಟ್ರಲ್ ಮಾರುಕಟ್ಟೆ ಏನೂ ಅಲ್ಲ ಅಂತ ಆಗಿತ್ತು. ಆದರೂ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಒಂದು ಕಾಲದ ಬೆರಗಿನ ತಾಣ ಎಂದರೆ ತಪ್ಪಾಗಲಾರದು.
ಮೊನ್ನೆ ಮೊನ್ನೆ ಹೀಗೆ ನಡೆದಾಡುತ್ತಾ ಹಂಪನ್ ಕಟ್ಟೆ ಸಿಗ್ನಲ್ ನಿಂದ ಮಾರುಕಟ್ಟೆ ರಸ್ತೆಯಲ್ಲಿ ಇಳಿದೆ. ಯಾಕೋ ರಸ್ತೆ ಬಹಳ ಇಕ್ಕಟ್ಟಾದಂತೆ ಅನಿಸಿತು. ರಸ್ತೆ ಚಿಕ್ಕದಾಗಿದೆಯೋ ಇಲ್ಲ ನನ್ನ ದೃಷ್ಟಿ ದೊಡ್ಡದಾಗಿದೆಯೋ ಅಂತ ಅನಿಸತೊಡಗಿತ್ತು. ಹೊಂಡ ಗುಂಡಿಗಳು ನೋಡಿ ರಸ್ತೆ ಇಲ್ಲವೇ ಇಲ್ಲವೇನೋ ಅನ್ನಿಸುತ್ತಿತ್ತು. ಎಲ್ಲ ನಗರಗಳಂತೆ ಮಂಗಳೂರು ಅಷ್ಟೆ ಅಂತ ತಿಳಿದು ಮುಂದೆ ಮುಂದೆ ಬಂದು ಸೆಂಟ್ರಲ್ ಮಾರುಕಟ್ಟೆಯ ಬಳಿ ಬಂದರೆ ....ಎಲ್ಲ ಬಟಾ ಬಯಲಿನಂತೆ. ಮೊದಲು ಅಂಗಡಿಯ ಬಾಗಿಲಲ್ಲಿ ಹೋಗಿನಿಂತರೂ ಕಾಣದ ಅಂಗಡಿ ಮುಂಗಟ್ಟುಗಳು ದೂರದಿಂದಲೇ ಕಾಣುತ್ತವೆ. ಕಾರಣ ಇಷ್ಟೆ ಸೆಂಟ್ರಲ್ ಮಾರ್ಕೆಟ್ ಸಂಪೂರ್ಣ ಧರಾಶಾಯಿಯಾಗಿದೆ. ಕೆಲವು ಸಮಯಗಳ ಹಿಂದೆ ಮಾರುಕಟ್ಟೆ ಒಳಗೆ ನುಗ್ಗಿ ತರಕಾರಿ ತಂದ ಆ ಕಟ್ಟಡ ಈಗ ನೆನಪು ಮಾತ್ರ. ಚಿತ್ರದಲ್ಲಿ ತೋರಿಸುವುದಕ್ಕಷ್ಟೇ ಸಾಧ್ಯ.
ಮಂಗಳೂರು ಮಾರುಕಟ್ಟೆ , ಕೇವಲ ಮಂಗಳೂರಿನವರಿಗೆ ಬದುಕು ಕೊಟ್ಟಿರುವುದಲ್ಲ. ಇಲ್ಲಿಂದ ಸಂಪರ್ಕ ದಕ್ಷಿಣಕ್ಕೆ ದೂರದ ಕಾಸರಗೋಡು, ಅಂತೆ ಉತ್ತರಕ್ಕೆ ಉಡುಪಿ ಕುಂದಾಪುರತನಕದ ಜನಜೀವನದಲ್ಲಿ ಮಂಗಳೂರು ಮಾರುಕಟ್ಟೆ ತನ್ನ ಗಹನವಾದ ಸಂಭಂಧವನ್ನು ಬೆಳೆಸಿದೆ. ಈಗ ಆ ಸಂಭಂಧಗಳು ವಿಚ್ಛೇದನ ಪಡೆದಂತೆ ಕೇಂದ್ರ ಮಾರುಕಟ್ಟೆ ಧರಾಶಾಯಿಯಾಗಿ ಜಾಗತೀಕರಣದ ಭೂಕಂಪಕ್ಕೆ ಕುಸಿದು ಬಿದ್ದಂತೆ ಭಾಸವಾಗುತ್ತದೆ. ಇನ್ನು ಹೊಸ ಕಟ್ಟಡ ತಲೆ ಎತ್ತಬಹುದು. ಆದರೂ ಮೊದಲಿನಂತೆ ಜನ ಮಾರುಕಟ್ಟೆಯ ಜತೆ ಸಂಭಂಧವನ್ನು ವ್ಯವಹಾರವನ್ನು ಬೆಳೆಸಿಕೊಳ್ಳಬಹುದು ಎಂಬುದನ್ನು ನಂಬುವುದಕ್ಕಿಲ್ಲ. ಮೊದಲು ಸೊಂಟಕ್ಕೆ ಹಣದ ಪುಟ್ಟ ಚೀಲ ಸಿಕ್ಕಿಸಿಕೊಂಡು, ಅಥವಾ ಜೇಬು ತುಂಬ ದುಡ್ಡು ಇಟ್ಟುಕೊಂಡು ಬರುತ್ತಿದ್ದ ಜನಗಳು ಇನ್ನು ಅದೇ ರೀತಿ ಬರಬಹುದೇ? ಅನುಮಾನ. ಯಾಕೆಂದರೆ, ಮೊಬೈಲ್ ಅಥವಾ ಎಟಿಎಂ ಕಾರ್ಡ್ ಹಿಡಿದು ಸೂಪರ್ ಮಾರುಕಟ್ಟೆಗೆ ಹೋಗುವ ಈ ಪೀಳಿಗೆಯಲ್ಲಿ ಸೆಂಟ್ರಲ್ ಮಾರುಕಟ್ಟೆ ಜನ ಜೀವನದಿಂದ ಎಂದೋ ದೂರಾಗಿ ಹೋಗಿದೆ. ಮಂಗಳೂರಲ್ಲಿ ಇಪ್ಪತ್ತು ವರ್ಷದ ಮೊದಲು ಒಂದೆರಡು ಸೂಪರ್ ಮಾರುಕಟ್ಟೆ ಇದ್ದರೂ ಜನಗಳು ಅಲ್ಲಿಗೆ ಹೋಗುತ್ತಿದ್ದುದು ಕಡಿಮೆ. ಯಾಕೆಂದರೆ ಏನಾದರೂ ಉಳಿಯಬೇಕಿದ್ದರೆ ಕೇಂದ್ರ ಮಾರುಕಟ್ಟೆಗೆ ಹೋಗುವುದನ್ನು ರೂಢಿಸಿಕೊಂಡಿದ್ದರು. ಈಗ ಸೂಪರ್ ಮಾರುಕಟ್ಟೆ ಸಂಸ್ಕೃತಿ ರಕ್ಕಸ ಗಾತ್ರದ, ಸುಸಜ್ಜಿತ ಮಾಲ್ ಗಳು ಕೇಂದ್ರ ಮಾರುಕಟ್ಟೆಯ ಆವಶ್ಯಕತೆಯನ್ನು ದೂರ ಮಾಡಿದೆ. ಹಾಗಾಗಿ ಕೇಂದ್ರ ಮಾರುಕಟ್ಟೆಯ ಮೊದಲಿನ ಚುರುಕುತನ, ಚಟುವಟಿಕೆ ಆ ಅತ್ಮೀಯ ವ್ಯವಹಾರಗಳು ಇನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಮನುಷ್ಯ ತನ್ನ ಆಕಾರ ವೇಷಭೂಷಣ ಜೀವನ ಶೈಲಿಯನ್ನು ಬದಲಾಯಿಸಿದಂತೆ ಕೇಂದ್ರ ಮಾರುಕಟ್ಟೆಯು ಬದಲಾಗಬಹುದು. ಆದರೂ ಹಳೆಯ ನೆನಪುಗಳು ಆ ಆತ್ಮೀಯ ವ್ಯವಹಾರಗಳು ಬಡತನದಲ್ಲೂ ಕಾಣುವ ಸುಖದುಃಖ ದುಮ್ಮನಗಳೊಂದಿಗಿನ ಭಾವನಾತ್ಮಕ ಸಂಬಂಧಗಳು ಇನ್ನು ಕೇವಲ ನೆನಪು ಎಂಬುದಂತು ಸತ್ಯ.