Thursday, October 16, 2025

ನಮಗೊಂದೇ ಭಾಷೆ

  ಸಂಸ್ಕೃತ ಭಾಷೆ ಬ್ರಾಹ್ಮಣ ಭಾಷೆ ಅಂತ ಒಂದು ಯಾರೋ ಪುಣ್ಯಾತ್ಮನೊಬ್ಬ ಬರೆದಿರುವುದನ್ನು ಓದಿದೆ. ಬಹುಶಃ ವೈದಿಕ ಪೂಜಾವಿಧಾನಗಳಲ್ಲಿ ಇದರ ಬಳಕೆ ಹೆಚ್ಚು ಇರುವುದರಿಂದ ಮತ್ತು ಯಾರಿಗೂ ಸುಲಭದಲ್ಲೇ ಅರ್ಥವಾಗದೇ ಇರುವುದರಿಂದ ಒಂದು ರೀತಿಯ ಮತ್ಸರದಲ್ಲಿ ಹೀಗೆ ಅಪಾದಿಸುವುದುಂಟು. ಏನಿದ್ದರೂ ಬ್ರಾಹ್ಮಣರನ್ನು ದೂಷಿಸಿದರೆ ಯಾವ ಪರಿಣಾಮವೂ ಇರುವುದಿಲ್ಲ ಎಂಬ ನಿರ್ಭಯತ್ವದ ಭಾವ ಇದೆ.  ಕನ್ನಡದ ಬಗ್ಗೆ ಅಭಿಮಾನದಲ್ಲಿ ಹೀಗೆ ಹೇಳಿದರೆ ಆ ಅಭಿಮಾನ ತಪ್ಪು ಎನ್ನುವ ಹಾಗಿಲ್ಲ. ಆದರೆ ವಿವೇಚನೆಯಿಂದ ಕಂಡರೆ ಇದರ ಮಿಥ್ಯಾಂಶ ಅರಿವಿಗೆ ಬರುತ್ತದೆ. ಕನ್ನಡ ಶಬ್ದ ಕೋಶದಲ್ಲಿ ಅಥವಾ ನಾವು ಆಡುವ ಕನ್ನಡ ಭಾಷೆಯಲ್ಲಿ  ಸಂಸ್ಕೃತ ಶಬ್ದಗಳನ್ನು ತೆಗೆದು ಹಾಕಿದರೆ ಅಲ್ಲಿ ಎಷ್ಟು ಕನ್ನಡ ಶಬ್ದಗಳು ಉಳಿಯಬಹುದು ಅಂತ ನೋಡಿದರೆ ಕೆಲವೇ ಕೆಲವು ಉಳಿಯಬಹುದು. ಇದು ಕನ್ನಡ ಸಂಸ್ಕೃತ ವಿದ್ವಾಂಸರಒಬ್ಬರು ಹೇಳಿದ ಮಾತು. ಹಾಗಿದ್ದರೆ ಕೇವಲ ಸಂಸ್ಕೃತದ ದ್ವೇಷ ಮಾತ್ರ ಇಲ್ಲಿ ಕಾಣಬಹುದು. ನಮ್ಮ ಭಾಷೆ ಉಳಿಯಬೇಕಾದರೆ ಮತ್ತೊಂದು ಭಾಷೆಯನ್ನು ನಾಶ ಮಾಡಿ ಉಳಿಸಬಹುದು ಎಂದು ತಿಳಿದರೆ ಅದು ಮೂರ್ಖತನವಾದೀತು. ಭಾಷೆ ಉಳಿಯಬೇಕಿದ್ದರೆ ಅದನ್ನು ಪರಿಶುದ್ದವಾದ ಉಪಯೋಗದಲ್ಲಿ ಉಳಿಸುವ ಪ್ರಯತ್ನ ಮಾಡಬೇಕು. ತಮಿಳು ನಾಡಿನಲ್ಲಿ ಹಿಂದಿ ಭಾಷೆ ನಿಷೇಧ ಮಾಡುವ ಸಮಾಚಾರ ಕೇಳಿಬಂತು. ಇದು ಕೂಡ ಇದೇ ಮಾದರಿಯಾಗಿರುತ್ತದೆ. ಯಾರೋ ಭಾಷೆಯನ್ನು ಮಾತನಾಡುವ ವ್ಯಕ್ತಿಗಳು ಮಾಡಿದ್ದಕ್ಕೆ ಭಾಷೆಯನ್ನು ದ್ವೇಷಿಸುವುದಾದರೆ ಸ್ವತಃ ತಮಿಳು ಕೂಡ ದ್ವೇಷಕ್ಕೆ ಕಾರಣವಾಗಬಹುದು. 

ಬಳಕೆಯಲ್ಲಿ ಭಾಷೆ ಉಳಿಯಬೇಕು. ಆದರೆ ಇದೇ ಮಾತನ್ನು ಬೆಂಗಳೂರಿನ ಕನ್ನಡಕ್ಕೆ ಹೋಲಿಸಿದರೆ ವಿಚಿತ್ರವೆನಿಸುತ್ತದೆ. ಇಲ್ಲಿಯ ಭಾಷೆಯ ಬಳಕೆ ಹೇಗಿರುತ್ತದೆ ಎಂದರೆ " ನನಗೆ ಮನೆಯಲ್ಲಿ ಕುಕ್ಕಿಂಗ್ ಗೆ ಸಾಮಾನು ಮುಗಿದಿತ್ತು, ಹಾಗೆ ಬ್ಯಾಗ್ ಹಿಡಿದು ಮಾರ್ಕೆಟ್ ಗೆ ಹೋದೆ. ವೆಜಿಟೇಬಲ್ ಪರ್ಚೇಸ್ ಮಾಡಿದೆ. ಗ್ರೋಸರಿ ಪರ್ಚೇಸ್ ಮಾಡಿದೆ." ಹೀಗೆ ಇರುತ್ತದೆ. ಕೇವಲ ಕ್ರಿಯಾ ಪದಕ್ಕೆ ಮಾತ್ರ ಕನ್ನಡ ಸೀಮಿತವಾಗುತ್ತದೆ. ದಿನಸಿ ತರಕಾರಿ ಕೊಂಡುಕೊಂಡೆ ಅಂತ ಹೇಳದೆ ಆಡಿದ ಮಾತಿನಲ್ಲಿ ಕನ್ನಡವಲ್ಲದ ಯಾವೂದೋ  ಪಿರಂಗಿ ಭಾಷೆ ಉಪಯೋಗಿಸುವುದಕ್ಕೆ ಸಾಧ್ಯವಿದ್ದರೆ, ನಮ್ಮ ಭಾರತದದ ಹಿಂದಿ ಯಾಕೆ ಬೇಡವಾಗುತ್ತದೆ?  ಅಲ್ಲಿನ ವ್ಯಕ್ತಿಗಳು ಕಾರಣವೆ?  ಹಾಗೆ ವ್ಯಕ್ತಿಗಳನ್ನು ದ್ವೇಷಿಸುವುದಿದ್ದರೆ ಹಿಂದಿ ಮಾತನಾಡುವ ಮಂದಿಗಿಂತಲೂ ,  ಮೂರು ಶತಮಾನ ನಮ್ಮ ಸ್ವಾತಂತ್ರ್ಯವನ್ನು ಕಸಿದು ಗು್ಲಾಮರನ್ನಾಗಿ ಮಾಡಿದ ಇಂಗ್ಲೀಷರನ್ನು  ದ್ವೇಷಿಸುವುದರಲ್ಲಿ ಹೆಚ್ಚು ಅರ್ಥವಿದೆ.  ಇನ್ನು ಸಂಸ್ಕೃತದ ದ್ವೇಷವೂ ಅದೇ ರೀತಿ. ಯಾವುದೋ ಕಾಲದಲ್ಲಿ ಹೇಗೋ ಇತ್ತು ಎನ್ನುವುದಕ್ಕೆ ಈಗಿನ ಬ್ರಾಹ್ಮಣರನ್ನು ದ್ವೇಷಿಸಬೇಕು ಎನ್ನುವ ಕಾರಣದಿಂದ  ಸಂಸ್ಕೃತವೂ...ದ್ವೇಷಕ್ಕೆ ಕಾರಣವಾಗುತ್ತದೆ. ಹಾಗೆ ನೋಡಿದರೆ... ಬುದ್ದ ಮತ್ತು ಜೈನರು ಸಂಸ್ಕೃತವನ್ನು ಹೆಚ್ಚು ಬಳಕೆ ಮಾಡಿರುತ್ತಾರೆ. ಹಾಗಾಗಿ ಜೈನರನ್ನು ಬುದ್ದರನ್ನು ದ್ವೇಷಿಸಿದರೆ ನಮ್ಮ ದೇಶವನ್ನು ನಾವು ಅಭಿಮಾನ ಪ್ರೀತಿಯಿಂದ ಕಂಡಂತಾಗುವುದಿಲ್ಲ.  

ನಿಜಕ್ಕಾದರೆ ಭಾಷೆಯನ್ನು ದ್ವೇಷಿಸುವುದಲ್ಲ. ಯಾವುದೋ ಭಾಷೆ ಉಪಯೋಗ ಶೂನ್ಯವಾಗಬೇಕಾದರೆ ಮೊದಲು ನಮ್ಮ ಭಾಷೆಯನ್ನು ಪರಿಶುದ್ದಿಗೊಳಿಸಬೇಕು. ಅದನ್ನೇ ಶುಭ್ರವಾಗಿ ಬಳಸಬೇಕು. ನಮ್ಮಲ್ಲಿರುವ ಕೆಟ್ಟಗುಣವನ್ನು ಕಳೆಯಬೇಕಾದರೆ ಉಳಿದ ವ್ಯಕ್ತಿಗಳನ್ನು ನಾವು ದ್ವೇಷಿಸಿ ದೂರ ಮಾಡುವುದರಲ್ಲಿ ನಮ್ಮ ಕೆಟ್ಟಗುಣ ಬದಲಾಗಲು ಸಾಧ್ಯವಿಲ್ಲ. ನಾನು ಬ್ಯಾಗ್ ಹಿಡಿದುಕೊಂಡು ಶಾಪಿಂಗ್ ಗೆ ಹೋದೆ ಅಂತ ಹೇಳುವಾಗ ಶುದ್ಧವಾದ ಕನ್ನಡಕ್ಕೆ ಯಾವ ನ್ಯಾಯ ಸಲ್ಲುತ್ತದೆ.? 

ಇತ್ತೀಚೆಗೆ ನನ್ನ ಮಗನ ಸಹಪಾಠಿಯೊಬ್ಬ ನನ್ನ ಲೇಖನಗಳನ್ನು ಓದಿ , ಆತ ಅಭಿಪ್ರಾಯ ಹೇಳಿದ. " ಸಾರ್, ನಿಮ್ಮ ಲೇಖನ ಚೆನ್ನಾಗಿದೆ. ಆದರೆ ಆ ಶಬ್ದಗಳು ನಿಮಗೆ ಎಲ್ಲಿ ಸಿಗ್ಗುತ್ತದೆ ? ಅರ್ಥ ಮಾಡಿಕೊಳ್ಳುವುದು ತುಂಬ ಕಷ್ಟ ವಾಗುತ್ತದೆ. " ನಾನೇನು ಕನ್ನಡ ವಿದ್ವಾಂಸನೇನೂ ಅಲ್ಲ. ನನಗೆ ತಿಳಿದ ಸೀಮಿತ ಜ್ಞಾನದಲ್ಲೇ ಬರೆದ ಕನ್ನಡವನ್ನು ಅರ್ಥವಿಸುವುದಕ್ಕೆ ಕಷ್ಟವಾಗುತ್ತದೆ ಎಂದಾದರೆ ಕನ್ನಡ ಕನ್ನಡವಾಗಿ ಉಳಿದಿದೆ ಎನ್ನುವುದಕ್ಕೆ ಯಾವ ಆಧಾರವಿದೆ? ನಮ್ಮ ಭಾಷೆ ಉಳಿಯಬೇಕು. ಅದು ಇನ್ನೊಂದು ಭಾಷೆಯ ನಾಶದಲ್ಲಿ ನಮ್ಮ ಭಾಷೆ ಉಸಿರಾಡಬಾರದು. ಅಥವಾ ಉಳಿದ ಭಾಷೆ ನಿರ್ನಾಮವಾದರೆ ನಮ್ಮ ಭಾಷೆ ಉಳಿಯುತ್ತದೆ ಎಂದು ಭಾವಿಸಿದರೆ ಅದು ಅರಣ್ಯದ ನ್ಯಾಯವಾಗುತ್ತದೆ. ಒಂದು ಗಿಡ ಬೆಳೆಯಬೇಕಾದರೆ ಸುತ್ತಮುತ್ತಲಿನ ಹಲವು ಗಿಡವನ್ನು ನಾಶ ಮಾಡಬೇಕು.  ಇದು ಕಾಡಿನ ನ್ಯಾಯ.  ಬೀದಿಯಲ್ಲಿದ್ದ ಎರಡು ಅಂಗಡಿಯಲ್ಲಿ ,ಮತ್ತೊಂದು  ಅಂಗಡಿ ಮುಚ್ಚಿದರೆ ತನ್ನ ಅಂಗಡಿಗೆ ಹೆಚ್ಚು ವ್ಯಾಪಾರವಾಗುತ್ತದೆ ಎಂದು ಬಯಸಿದರೆ ಅದು ಸಾಧುವಾಗಲಾರದು. ಬದಲಿಗೆ ನಮ್ಮ ಅಂಗಡಿಯಲ್ಲಿ ಜನೋಪಯೋಗಿಯಾಗುವಂತೆ ಪ್ರಾಮಾಣಿಕವಾಗಿ ವ್ಯಾಪಾರ ಮಾಡಬೇಕು. ಹೊರತು ಮತ್ತೊಂದು ಅಂಗಡಿ ಮುಚ್ಚಿಸುವುದಲ್ಲ. ಮತ್ತೊಬ್ಬನನ್ನು ಅರೆ ಹೊಟ್ಟೆ ಮಾಡಿ ನಾವು ಹೊಟ್ಟೆ ತುಂಬಿಸಿಕೊಂಡರೆ ಅದು ನ್ಯಾಯವಾಗುವುದಿಲ್ಲ. ಜಗಳ ಮಾಡಿ ಪರಸ್ಪರ ಬೈದಾಡಿಕೊಂಡು ಗೆಲ್ಲುವುದಕ್ಕೆ ಹೊರಟೆರೆ ಆ ಬೈಗುಳಗಳಲ್ಲಿ ಕೆಟ್ಟಭಾಷೆಯೇ ಬಳಕೆಯಾಗುತ್ತದೆ. ಅದು ಸುಸಂಸ್ಕೃತ ಭಾಷೆಯಾಗುವುದಿಲ್ಲ. 


ಈ ದ್ವೇಷ ಎಂಬುದು ಕೇವಲ ಭಾಷೆಗೆ ಮಾತ್ರ ಸೀಮಿತವಾಗಿಲ್ಲ. ನಾವು ಬೆಳೆಯುವುದಕ್ಕೆ ಪ್ರಕೃತಿಯನ್ನು ನಾಶ ಮಾಡುತ್ತೇವೆ. ನಮ್ಮ ಧರ್ಮ ಉಳಿಸುವುದಕ್ಕೆ ಮತ್ತೊಂದು ಧರ್ಮವನ್ನು ದ್ವೇಷಿಸಿ ನಾಶ ಮಾಡುತ್ತೇವೆ. ಇತ್ತೀಚೆಗೆ ಒಬ್ಬರು ಮುಸ್ಲಿಂ ವ್ಯಕ್ತಿ ನನ್ನ ಬಳಿಗೆ ಬಂದಿದ್ದರು. ಅವರ ತೆರಿಗೆಗೆ ಮತ್ತು ಸರಕಾರಿ ಕೆಲಸಕ್ಕೆ ಸಂಭಂಧಿಸಿದ ಹಲವು ಕೆಲಸಗಳನ್ನು ನಾನೇ ಮಾಡಿಕೊಡುತ್ತೇನೆ. ನನ್ನ ಮೇಲೆ ಅದು ಯಾಕೋ ಅವರಿಗೆ ಅತೀವ ವಿಶ್ವಾಸ. ಒಂದು ಸಲ ಬಂದವರು ಹೇಳಿದರು, "ದೇವರನ್ನು ಭಕ್ತಿಯಿಂದ ನಂಬುವವರು ಮೋಸ ಮಾಡುವುದಿಲ್ಲ.  ನಿಮ್ಮಲ್ಲಿ ನನಗೆ ತುಂಬ ವಿಶ್ವಾಸ  ಇದೆ. " ಅವರು ದೇವರು ಅಂತ ಹೇಳಿದ ದೇವರು ಅದು ಒಬ್ಬನೇ.  ಅವರ ದೇವರು  ನನ್ನ ದೇವರು ಎಂಬ ಭೇದವಿಲ್ಲ.  ಇಲ್ಲಿ ನಂಬಿಕೆಯ ವಿಧ ಮಾತ್ರ ವೆತ್ಯಾಸ. ಮತ್ತೊಂದು ಧರ್ಮವನ್ನು ನಾಶ ಮಾಡಿ ನಮ್ಮ ಧರ್ಮವನ್ನು ಉಳಿಸುತ್ತೇವೆ ಎಂದು ತಿಳಿದರೆ ಅಲ್ಲಿ ದ್ವೇಷ ಮಾತ್ರ ಇರುತ್ತದೆ. ಎಲ್ಲಿ ದ್ವೇಷದ ಕಲ್ಮಶ ವಿರುತ್ತದೋ ಅಲ್ಲಿ ಪರಿಶುದ್ದತೆ ಇರುವುದಕ್ಕೆ ಸಾಧ್ಯವಿಲ್ಲ. ದೇವರ ಅಸ್ತಿತ್ವವೂ ಇರುವುದಿಲ್ಲ.  


ಪ್ರಾಣಿಗಳಲ್ಲಿ ಮನುಷ್ಯನಿಗೆ ಇರುವ ಮುಖ್ಯ ಪ್ರತ್ಯೇಕ ವೈಶಿಷ್ಟ್ಯವೆಂದರೆ ಮಾತಾಡುವ ಅರ್ಹತೆ. ಅದಕ್ಕೆ ಮುಖ್ಯ ಉಪಾಧಿ ಎಂದರೆ ಅದು ಭಾಷೆ. ಈ ಭಾಷೆ ದ್ವೇಷಕ್ಕೆ ಕಾರಣವಾಗುವುದಾದರೆ, ಆ ಅರ್ಹತೆಯನ್ನು ಕಲ್ಪಿಸಿದ ಭಗವಂತನ ಕಾರುಣ್ಯವನ್ನು ದೂಷಿಸಿದಂತೆ. ಈ ಅರ್ಹತೆಗೆ ನಾವು ಯೋಗ್ಯರಾಗಿರುವುದಿಲ್ಲ. ಮನುಷ್ಯನ ಜೀವನದ ಮೂಲ ಭೂತ ಆಧಾರವಾಗಿ ಭಗವಂತನನ್ನು ಕಾಣುವ ಓಂ ಕಾರ ಭಾಷೆ ಯಾವುದು? ಹೋಗಲಿ ಭಾಷಾಭಿಮಾನದ ಅತಿರೇಕದಲ್ಲಿ , ಗಣೇಶನನ್ನು ಕೂರಿಸಿ ಹೇಳುವ  "ಗಣಪತಿ ಬಪ್ಪ ಮೋರೆಯಾ "  ದ ಭಾಷೆ ಯಾವುದು?  ಇವುಗಳೆಲ್ಲ ನಮ್ಮ ದ್ವಂದ್ವ ನಿಲುವಿನ ಅಪಸವ್ಯಗಳು. ಸಸ್ಯಾಹಾರಿ ಮಾಂಸ ಬೇಡ ರಸ ಮತ್ರ ಆದೀತು ಅಂತ ಹೇಳುವ ನ್ಯಾಯ. ಯಾವುದೋ ಭಾಷೆಯ ಬಗ್ಗೆ ದ್ವೇಷದಲ್ಲಿ ವಿಮರ್ಶಿಸುವಾಗ ಮೊದಲು ನಮ್ಮ ಮಾತುಗಳನ್ನು ನಾವು ಪರಿಶುದ್ದಿಗೊಳಿಸಬೇಕು. ಇಷ್ಟಕ್ಕೂ ನಮಗೆ ಕೇವಲ ಮಾತನಾಡುವ ಅರ್ಹತೆ ಇದೆ, ಆದರೆ ಇದನ್ನು ಕಳೆದುಕೊಂಡ ಮೂಗನಿಗೆ ಯಾವ ಭಾಷೆ ...ಆತ ಕನ್ನಡದಲ್ಲೂ , ಅತ್ತ ತಮಿಳುನಾಡಿನಲ್ಲೂ ಆತನ ಭಾಷೆ ಒಂದೇ ಆಗಿರುತ್ತದೆ. ಮನಸ್ಸಿನಲ್ಲಿ ಕನ್ನಡವೋ ತಮಿಳೋ ಇರಬಹುದು..ಆದರೆ ಅದು ವ್ಯಕ್ತವಾಗುವುದು ಅರ್ಥವಾಗುವುದು ಎದುರು ಕೇಳುವವನ ಭಾಷೆಯನ್ನು ಅನುಸರಿಸಿರುತ್ತದೆ. ಅಲ್ಲಿ ಭಾಷಾಭೇದವೇ ಇರುವುದಿಲ್ಲ. ಭಾಷೆಯಿಂದ ನಾವು ವಿಶಾಲವಾಗಬೇಕು. ನಮ್ಮ ಜ್ಞಾನ ವೃದ್ದಿಗೆ ಅದು ಉಪಯೋಗಿಸಲ್ಪಡಬೇಕು. ಇಲ್ಲವಾದರೆ ನಾವು ನಮ್ಮ ಭಾಷೆಯಲ್ಲಿರುವುದನ್ನು ಮಾತ್ರವೇ ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಒಂದು ರೀತಿಯ ಬಾವಿಯೊಳಗಿನ ಮಂಡೂಕದ ಬದು. ನಮ್ಮ ಮಂಗಳೂರಿಗೆ ಹೋದರೆ ಇದನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಹಲವು ಭಾಷೆಗೆ ಸಹಕಾರಿಯಾಗಿ ಇಲ್ಲಿ ತುಳು ಭಾಷೆ ನೆಲದ ಭಾಷೆ. ಅದರಲ್ಲಿ ಕನ್ನಡವೂ ಇದೆ ಹಿಂದಿ ಕೊಂಕಣಿ ಇಂಗ್ಲೀಷ್ ಎಲ್ಲ ಇದ್ದರೂ ತುಳು ತನ್ನ ಸ್ವಂತಿಕೆಯನ್ನು ಬಿಟ್ಟಿಲ್ಲ. ಅದನ್ನೇ ಮಾತನಾಡಬೇಕು ಎಂದು ಅಲ್ಲಿ ದೌರ್ಜನ್ಯ ಮಾಡುವುದಿಲ್ಲ. ಜನ ನಮ್ಮದೇ ಭಾಷೆ ಅಂತ ಅಭಿಮಾನದಲ್ಲೇ ಮಾತನಾಡುತ್ತಾರೆ. ಅದು ತಿಳಿಯದವರಲ್ಲಿ ಹೃದಯದ ಆತ್ಮೀಯತೆ ಇರುವುದಿಲ್ಲ.  ಅಲ್ಲಿಯ ಸ್ನೇಹ ಆದರ ಬೇಕಾದರೆ ಯಾವುದೇ ಬಲವಂತ ವಿಲ್ಲದೇ ಆ ಭಾಷೆಯನ್ನು ಕಲಿತು ಅಲ್ಲಿನವರಾಗಿದ್ದರೆ ನಿಮಗೆ ಅರಿಯದೆ ಅಲ್ಲಿನವರ ಹೃದಯದಲ್ಲಿ ಸ್ಥಾನ ಪಡೆಯಬಹುದು. ಹೀಗೆ ಭಾಷೆ ಎಂಬುದು ಸ್ನೇಹಕ್ಕೆ ಕಾರಣವಾಗಬೇಕು.  ಎಷ್ಟು ಭಾಷೆ ಇದ್ದರೂ ನಮಗೊಂದೇ ಭಾಷೆ ಇರಬೇಕು. ಅದು ಮನುಷ್ಯತ್ವದಿಂದ ಕೂಡಿರಬೇಕು. 

                           


Monday, October 6, 2025

ಅಮ್ಮನ ಮಡಿಲೂ, ರಾಮನ ಅಳಿಲೂ,

 



ಅಮ್ಮ....ಮಕಾರದ ರೂಪಾಂತರದ ಎರಡಕ್ಷರದ ಶಬ್ದ. ಓಂಕಾರದ ಅಂತ್ಯದ ಮಕಾರಕ್ಕೂ ಅಮ್ಮದ ಮಕಾರಕ್ಕೂ ಪರಬ್ರಹ್ಮ ಸ್ವರೂಪದ ಸಾಮ್ಯತೆ ಇದೆ.  ಎರಡರಲ್ಲೂ ಎಲ್ಲಾ ಜೀವಜಾಲಕ್ಕೂ ಒಂದು ದಿವ್ಯವಾದ ಸಂಬಂಧವಿದೆ. ಈ ಸಂಬಂಧವಿಲ್ಲದ ಜೀವಿಗಳು ಭೂಮಿಯಲ್ಲಿ ಇರುವುದು ಸಾಧ್ಯವಿಲ್ಲ. ಅಮ್ಮನಂತಹ ಸ್ಥಾನ ಎಲ್ಲ ಜೀವಜಾಲದ ಮೂಲ ಪ್ರೇರಣೆ. ಇದನ್ನೇ ಮಾತೃ ಸಂಭಂಧ. ಇದುವೇ ಮೂಲ ಸಂಬಂಧ.  ಯಾವ ಜೀವದಲ್ಲಿ  ನೋಡಿದರೂ ಅಲ್ಲೊಂದು ಪ್ರೀತಿ ಪ್ರೇಮಕ್ಕಿಂತ ಅತೀತವಾಗಿ ಭಾವನಾತ್ಮಕ ಸಂಬಂಧವಿದೆ. ಅಮ್ಮನ ಶಿಕ್ಷೆ ರಕ್ಷೆಗೆ ಸಮನಾದ ಒಂದು ಭಾವಕ್ಕೆ ಆ ಕ್ರಿಯೆಗೆ ಸಮ ತೂಗಿಸಬಲ್ಲ   ಭಾವನೆ ಮತ್ತೊಂದು ಇರುವುದಕ್ಕೆ ಸಾಧ್ಯವಿಲ್ಲ.  ಹೆತ್ತ ಅಮ್ಮ ಮುದ್ದಿಸಿದಷ್ಟೇ ಸಲೀಸಾಗಿ ಹೊಡೆದು ಶಿಕ್ಷಿಸಬಲ್ಲಳು.  ಶಿಕ್ಷೆಕೊಟ್ಟರೂ ಅಲ್ಲಿ ದ್ವೇಷವಿಲ್ಲ. ಆ ಶಿಕ್ಷೆಯ ಮತ್ತೊಂದು ಪಕ್ಕದಲ್ಲಿ ರಕ್ಷೆಯೂ ಇರುತ್ತದೆ.   ಅಂ ಎನ್ನುವ ಅಂಕಾರವೇ ಆ ರೀತಿಯಲ್ಲಿರುತ್ತದೆ. ಅದನ್ನೆ ಮಮಕಾರ ಎನ್ನುವುದು. ಬಹುಶಃ ಯವುದೇ ಪ್ರಾಣಿಯೂ ಈ ಮಮಕಾರದ ಪರಿಧಿಯಿಂದ ಆಚೆಗೆ ಇರುವುದಕ್ಕೆ ಸಾಧ್ಯವಿಲ್ಲ. ಮಮ ಎಂದರೆ ನನ್ನದು ಎಂದರ್ಥ. ಹಾಗಾಗಿ ಅಮ್ಮನ ಪ್ರೀತಿಗೆ ಮತ್ತೂಂದು ಅನ್ವರ್ಥವೇ ಮಮಕಾರ. ಅಲ್ಲಿ ಇರುವ ನನ್ನದು ಎಂಬ ಪರಿಪೂರ್ಣ ಭಾವನೆ, ಆಕೆಯಲ್ಲಿರುವ ನನ್ನ ಕಂದ ನನ್ನ ದೇಹದ ಭಾಗ ಎಂಬ ಭಾವ ಬೇರೆ ಎಲ್ಲೂ ಕಾಣುವುದಕ್ಕೆ ಸಾಧ್ಯವಿಲ್ಲ. ಮನುಷ್ಯ ಬದುಕು ಕಟ್ಟಿಕೊಳ್ಳುವುದು ಈ ಮಮಕಾರವೆಂಬ ಸ್ವಾರ್ಥವಲ್ಲದ ನನ್ನದು ಎಂಬ ಭಾವನೆಯ ನೆರಳಲ್ಲಿ. ಬಹುಶಃ ಅಮ್ಮನ ಈ ’ನನ್ನದು’  ಎಂಬ ಭಾವನೆಯ ಪ್ರೇರಣೆ ಇಲ್ಲ ಎಂದು ಇರುತ್ತಿದ್ದರೆ ಈ ಜೀವಜಾಲದ ಪೋಷಣೆ ರಕ್ಷಣೆ ಸಾಧ್ಯವಿರುತಿರಲಿಲ್ಲ. ಅದು ಅಮ್ಮನ ನಿಸ್ವಾರ್ಥದ ಮಮಕಾರ. ಅಮ್ಮನ ಅಕ್ಕರೆಯ ಪ್ರೀತಿಯಲ್ಲಿ ಯಾವ ಸ್ವಾರ್ಥವೂ ಇರುವುದಿಲ್ಲ. ಸ್ವಾರ್ಥವಿದ್ದರೆ ಅದು ಅಮ್ಮನ ಪ್ರೀತಿ ಎಂದೆನಿಸುವುದೇ  ಇಲ್ಲ. ಜಗತ್ತಿನಲ್ಲಿ ಎಲ್ಲಾ ಪ್ರೀತಿಯಲ್ಲಿ ಸೂಕ್ಷ್ಮವಾಗಿಯಾದರೂ ಒಂದು ಸ್ವಾರ್ಥ ವಿರುತ್ತದೆ. ಆದರೆ ಅಮ್ಮನ ಪ್ರೀತಿಯಲ್ಲಿ...ಮಮಕಾರ ಬಿಟ್ಟು ಬೇರೆ ಸ್ವಾರ್ಥವಿರುವುದಕ್ಕೆ ಸಾಧ್ಯವಿಲ್ಲ. ಕಾರಣ.. ಇಷ್ಟೆ ತನ್ನ ದೇಹದ ಭಾಗದ ನೇರ ಸಂಭಂಧ ಅಮ್ಮನಿಗೆ  ಆ ಮಗುವಿನೊಂದಿಗೆ ಇರುತ್ತದೆ. 


        ವರ್ಷ ಋತುವಿನ ಬಿಡದ ಮಳೆ ಕಳೆದು ಶರದೃತುವಿಗೆ ನವರಾತ್ರಿಯ ಸಂಭ್ರಮ ಸ್ವಾಗತಿಸುವಾಗ ಅಬ್ಬ ಮಳೆಯಿಂದ ಬಿಡುಗಡೆಯಾದ ಅನುಭವ. ಪ್ರತೀ ಸಲವೂ ನವರಾತ್ರಿ ಬರುವಾಗ ಹಲವು ನಿರೀಕ್ಷೆಯ ಜತೆಗೆ ಊರಿಗೆ ಹೋಗುವ ಸಿದ್ದತೆಯೊಂದು ಇರುತ್ತದೆ. ಮೊದಲಿನಿಂದಲೂ ಮಳೆಕಳೆದು ಚಳಿಗಾಲಕ್ಕೆ ಸನಿಹವಾಗುವಾಗ ಈ  ನವರಾತ್ರಿಯನ್ನು ಹೊತ್ತು ಬರುವ ಈ ಶರದೃತು  ಎಂದರೆ ಒಂದು ಸಂಭ್ರಮ. ಹನಿ ಹನಿ ಮಂಜಿನಲ್ಲಿನ ಈ ಹಬ್ಬ ಅಂದಿಗೂ ಇಂದಿಗೂ ಅದೇ ಸೌಂದರ್ಯ.  ನಮ್ಮೂರಲ್ಲಿ ಉಳಿದೆಲ್ಲ ಹಬ್ಬಗಳು ಮನೆಯಲ್ಲಿ ಆಚರಿಸಿದರೆ...ನವರಾತ್ರಿಗೆ ಯಾವ ದೇವಸ್ಥಾನಕ್ಕೆ ಹೋಗುವುದು ಎಂದು ಯೋಚಿಸುತ್ತೇವೆ. ಯಾಕೆಂದರೆ ಎಲ್ಲಾ ಹಬ್ಬಗಳು ಒಂದೆರಡು ದಿನ ಇದ್ದರೆ ಈ ನವರಾತ್ರಿ ಒಂದು ಪಕ್ಷದಷ್ಟೂ ವಿಸ್ತರಿಸಿ ಪಾಡ್ಯದಿಂದ ಅರಳುವ ಚಂದ್ರನ ಜತೆಗೆ ಮನಸ್ಸೂ ಅರಳುತ್ತಾ ಸಾಗುತ್ತದೆ. ಒಂದು ರೀತಿಯಲ್ಲಿ ಮನಸ್ಸು ಮಳೆಯಲ್ಲಿ ತೊಯ್ದು ಶುದ್ದವಾದಂತೆ ಶುದ್ದ ಮನಸ್ಸಿನಲ್ಲಿ ದೈವ ಸಾನ್ನಿಧ್ಯ ನೆರವೇರುತ್ತದೆ.  ದೈವತ್ವದ ಈ  ಅನುಭವವಾಗಬೇಕಾದರೆ ಆ ಅವಧಿಯಲ್ಲಿ ಒಂದಾದರೂ ಕ್ಷೇತ್ರದರ್ಶನ ಮಾಡಬೇಕು ಎಂಬುದು ಹಲವರ ಹಂಬಲ. ಇಲ್ಲಿ  ಪ್ರತಿಯೊಬ್ಬರೂ ಪರಸ್ಪರ ಭೇಟಿಯಾಗುವಾಗ   ಈ ಸಲ ನವರಾತ್ರಿಗೆ ಎಲ್ಲಿಗೆ ಎಂದು ಕೇಳುವುದು ಸಹಜ.   ಆದರೆ ನನ್ನಲ್ಲಿ ಕೇಳುವಾಗ ಪ್ರಶ್ನೆಯೊಂದಿಗೆ ಉತ್ತರವೂ ಸಿದ್ಧವಾಗಿರುತ್ತದೆ. ಈ ಸಲ ನವರಾತ್ರಿಗೆ ಆವಳ ಮಠಕ್ಕೆ ಹೋಗುವುದಿಲ್ಲವಾ? ಉತ್ತರದ ಜತೆಗೆ ಪ್ರಶ್ನೆ ಬರುವುದು ಹೀಗೆ. ಯಾಕೆಂದರೆ ಈ ಮಠದ ಜತೆಗೆ ಇರುವ ಅವಿನಾಭಾವ ಸಂಬಂಧ ಎಂದರೆ ಅತಿಶಯವಲ್ಲ. 

ಆವಳ ಮಠ...ನಮ್ಮೂರಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ.  ನಮ್ಮೂರಿನಲ್ಲಿ ಹಲವು ದುರ್ಗಾ ಪರಮೇಶ್ವರಿ ದೇವಾಲಯಗಳಂತೆ ಇದು ಒಂದು. ಆದರೆ ನನಗೆ ಇದೆಲ್ಲಕ್ಕಿಂತ ಮಿಗಿಲಾದ ಸಂಭಂಧವೆಂದರೆ ಇದು ಬಾಲ್ಯದ ಹಲವು ನೆನಪುಗಳೊಂದಿಗೆ ಬೆಸುದುಕೊಂಡ ಪವಿತ್ರ ಕ್ಷೇತ್ರ. ಇಲ್ಲಿ ಭಕ್ತಿಯೊಂದಿಗೆ ಆ ನೆನಪುಗಳು ಮರುಕಳಿಸುವಾಗ ಹೃದಯ ಭಾರವಾಗುತ್ತದೆ. ಮತ್ತೆ ತರಲಾಗದ ನೆನಪುಗಳು ಅದು ಕೇವಲ ವೈಯಕ್ತಿಕ ಅನುಭವಕ್ಕೆ ಸೀಮಿತವಾಗುತ್ತದೆ. ಹೆಚ್ಚಾಗಿ ನನಗೆ ಜನಸಂದಣಿಯ ದೇವಸ್ಥಾನಗಳು ಭಕ್ತಿಯನ್ನು ಪ್ರಚೋದಿಸುವುದಿಲ್ಲ. ಅಲ್ಲಿ ಹೋದಾಗ ಭಕ್ತಿಯ ಜತೆಗೆ ಭಾವನೆಗಳು ಹಂಚಿ ಚದುರಿ ಹೋಗಿಬಿಟ್ಟು ಮನಸ್ಸು  ಖಾಲಿಯಾಗಿ ಕೇವಲ ಯಾಂತ್ರಿಕವಾಗುತ್ತದೆ. ಭಾವನೆಗಳು ಇಲ್ಲದಿದ್ದರೆ ನಂತರದ ಕ್ರಿಯೆಗಳು ಯಾಂತ್ರಿಕ. ಈ ಯಾಂತ್ರಿಕತೆಯಿಂದ ದೂರಾಗಿ ಸಹಜ ಅನುಭವವನ್ನು ತುಂಬಿಕೊಡುವ ಕ್ಷೇತ್ರವೆಂದರೆ ಅದು ಬಾಲ್ಯದಿಂದ ಬೆಸೆದುಕೊಂಡ ಆವಳ ದುರ್ಗಾಪರಮೇಶ್ವರಿ ದೇವಸ್ಥಾನ. ಇಲ್ಲಿನ ಪರಿಸರದ ಪ್ರತಿಯೊಂದು ಭಾಗದಲ್ಲೂ ಹಲವು ನೆನಪುಗಳಿವೆ.

ಮೊನ್ನೆ ಮೊನ್ನೆ ಕಳೆದ ನವರಾತ್ರಿಯ ಕೊನೆಯ ಎರಡು ದಿನ ಅಲ್ಲಿಯೇ ಕಳೆಯುವ ಅವಕಾಶ ಒದಗಿಬಂತು. ಮೊದಲು ಬಹುತೇಕ ಕೇವಲ ಎಣ್ಣೇ ದೀಪದ ಬೆಳಕಿನಲ್ಲೇ ಕಳೆದು ಹೋಗುತ್ತಿದ್ದ ನವರಾತ್ರಿ ಈಗ ದೇವಸ್ಥಾನ ಮೂಲೆ ಮೂಲೆಯಲ್ಲೂ ವಿದ್ಯುದ್ದೀಪ ಝಗಮಗಿಸುತ್ತದೆ. ವಿಶಾಲವಾದ ದೇವಸ್ಥಾನದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಾದರೆ ಪುಟ್ಟ ಕೈ ದೀಪವನ್ನು ಹಿಡಿದು ಕೊಂಡು ಹೋಗುತ್ತಿದ್ದೆವು. ಹಲವು ಸಲ ಒಬ್ಬರೇ ಸುತ್ತಾಡುವುದಕ್ಕೆ ಭಯವಾಗುವಷ್ಟು ಕತ್ತಲೆ ಆವರಿಸಿರುತ್ತಿತ್ತು. ರಾತ್ರಿ ದೀಪದ ಬೆಳಕಿನಲ್ಲಿ ತರಕಾರಿ ಹೆಚ್ಚುವುದು ದೇವರ ಪ್ರಸಾದ ಸಿದ್ದ ಪಡಿಸುವ ಅನುಭವ ಈಗ ಊಹಿಸುವುದಕ್ಕೂ ಸಾಧ್ಯವಿಲ್ಲ.  ನನಗೆ ಇನ್ನೂ ನೆನಪಿದೆ ದೇವಸ್ಥಾನ ಸುತ್ತಲೂ ಗೋಡೆಗೆ ಅಂಟಿಸಿದ ಕಲ್ಲಿನ ದೀಪಕ್ಕೆ ಎಣ್ಣೆ ಬತ್ತಿ ಹಾಕಿ ಉರಿಸುತ್ತಿದ್ದೆವು. ಈಗ ಆಜಾಗದಲ್ಲಿ ವಿದ್ಯುತ್ ದೀಪ ಬೆಳಗುತ್ತದೆ.  

ಬಾಲ್ಯದಲ್ಲಿ ಎರಡು ವರ್ಷ ಇಲ್ಲಿ ದೇವರ ಸೇವೆ ಮಾಡಿದ್ದೆ. ಆಗ ದೇವಸ್ಥಾನದಲ್ಲಿ ಅಧುನಿಕ ಸೌಕರ್ಯ ಒಂದೂ ಇರಲಿಲ್ಲ. ಹೊರ ಜಗತ್ತಿಗೆ ಯಾವ ಸಂಪರ್ಕವೂ ಇಲ್ಲದ ಪ್ರದೇಶವಾಗಿತ್ತು ಮೈಲಿ . ದೂರದ ಬಾಯಾರು ಪದವಿನಲ್ಲಿ  ಬಸ್ಸು ಇಳಿದು ಅರ್ಧ ತಾಸು ನಡೆದುಕೊಂಡು  ದೇವಸ್ಥಾನಕ್ಕೆ ಬರಬೇಕಿತ್ತು. ಗುಡ್ಡ ತೋಟ ಗದ್ದೆ ದಾಟಿ ಹಸಿರಿನ ನಡುವೆ ಬರುವ ಒಂದು ಅನುಭವ ವಿಶೇಷವಾಗಿತ್ತು. ಆಗ ವಾಹನಗಳನ್ನು ಕಾಣುವುದಕ್ಕಲ್ಲ ಕೇವಲ  ಸದ್ದು ಕೇಳಬೇಕಾದರೆ ಅರ್ಧ ತಾಸು ನಡೆದು ಹೋಗಬೇಕಿತ್ತು. ಹೀಗಾಗಿ ಯಾವ ಸದ್ದು ಗದ್ದಲವಿಲ್ಲದ ಪರಿಸರವಾಗಿ ಒಂದು ರೀತಿಯ ಶಾಂತ ಪ್ರದೇಶವಾಗಿತ್ತು. ಈಗ ದೇವಸ್ಥಾನದ ಅಂಗಳದವರೆಗೂ ವಾಹನ ಬರುತ್ತದೆ. ಒಂದೂ ವಾಹನ ಕಾಣದ ಕಾಲ ಒಂದಾದರೆ, ಈಗ ನವರಾತ್ರಿಯಲ್ಲಿ  ಆಯುಧ ಪೂಜೆಗೆ ವಾಹನ ಸಾಲುಗಟ್ಟಿ ನಿಂತಿರುತ್ತದೆ.


ಬಾಲ್ಯದಲ್ಲಿ ಮನೆಯಿಂದ ದೂರವಾಗಿ ಒಂದೆರಡು ವರ್ಷ ಹಗಲು ರಾತ್ರಿ ಇಲ್ಲೇ ಕಳೆದಿದ್ದೆ. ದೇವರ ನೈವೇದ್ಯ ಬಿಟ್ಟರೆ ಬೇರೆ ಏನೂ ಇರುತ್ತಿರಲಿಲ್ಲ.ಆಗ ಪೂಜೆಗೆ ಇರುತ್ತಿದ್ದ ಗೋಪಣ್ಣನ ಜತೆ ಮೂರು ಹೊತ್ತು ಸ್ನಾನ ಮಾಡಿ ದೇವರ ಸೇವೆ ಮಾಡುತ್ತಿದ್ದೆ. ಮೂರು ಹೊತ್ತು ಗುಂಪೆ ಪರ್ವತದ ತಡಿಯಿಂದ ಹರಿದು ಬರುವ ತಣ್ಣೀರಿಗೆ ತಲೆಕೊಟ್ಟು ಸ್ನಾನ ಮಾಡುತ್ತಿದ್ದೆ .  ಈಗಲೂ ನಾನು ನಿತ್ಯ ತಣ್ಣೀರ ಸ್ನಾನ ಮಡುತ್ತಿದ್ದರೆ ಅದಕ್ಕೆ ಕಾರಣ ನಿತ್ಯವೂ ಇಲ್ಲಿ ಸ್ನಾನ ಮಡುತ್ತಿದ್ದ ತೀರ್ಥ ಸ್ನಾನವೇ ಕಾರಣ. 


  ಪ್ರತಿ ನಿತ್ಯ   ನೈವೇದ್ಯಕ್ಕೆ ಸಿದ್ದ ಪಡಿಸುವುದು, ಪಂಚಕಜ್ಜಾಯಕ್ಕೆ ನೆರವಾಗುವುದು, ಅನ್ನ ನೈವೇದ್ಯಕ್ಕೆ ಬೆಂಕಿ ಹಾಕಿ ಅದನ್ನು ಅಣಿಗೊಳಿಸುವುದು, ದೇವರ ಪೂಜೆಗೆ ಹೂವು ಮತ್ತೀತರ ವಸ್ತುಗಳನ್ನು ಅಣಿಗೊಳಿಸುವುದು...ಹೀಗೆ ಆ ವಯಸ್ಸಿನಲ್ಲಿ ಸಾಧ್ಯವಾಗುವ ಕೆಲಸಗಳನ್ನು ಮಾಡುತ್ತಿದ್ದೆ. ಈಗ ಅಲ್ಲಿಗೆ ಹೋದಾಗ ಅಲ್ಲಿ ಕೇವಲ ಲಂಗೋಟಿ ತುಂಡು ಬೈರಾಸಿನಲ್ಲಿ  ಓಡಾಡಿದ ಆ ದಿನಗಳು ನೆನಪಾಗಿಬಿಡುತ್ತವೆ. ರಾತ್ರಿ ಎಷ್ಟೋ ಸಲ ನಾನು ಒಬ್ಬನೇ ಆ ದೇವಸ್ಥಾನದಲ್ಲಿ ಮಲಗಿದ್ದೆ. ಈಗ ಅದನ್ನು ಕಲ್ಪಿಸುವುದೂ ಕಷ್ಟವಾಗುತ್ತದೆ. ಯಾವ ಜನಸಂಚಾರವೂ ಇಲ್ಲದ ಆ ಕಾಲದಲ್ಲಿ ಅಲ್ಲಿ ಹಗಲು ಕಳೆಯುವುದೂ ಒಂದು ವಿಚಿತ್ರ ಅನುಭವ. ಮಧ್ಯಾಹ್ನದ ಪೂಜೆ ಮುಗಿಸಿ ಊಟಕ್ಕೆ ಚಟ್ನಿಯೋ ಸಾರು ಪಲ್ಯ ಸಿದ್ದ ಪಡಿಸಿ ಊಟ ಮಾಡುತ್ತಿದ್ದೆವು. ಆಗ ಭೀಮ ಗಾತ್ರದ ರುಬ್ಬುವ ಕಲ್ಲಿನಲ್ಲಿ ತೆಂಗಿನ ಕಾಯಿ ಅರೆದು ಅಡಿಗೆ ಮಾಡಿದ ಅನುಭವ,  ಈಗ ನನ್ನ ಹೊಟ್ಟೆಗೆ ಬೇಕಾದದ್ದನ್ನು ಮಾಡಿ ತಿನ್ನುವ ಸ್ವಾವಲಂಬೀ ಗುಣವನ್ನು ಬೆಳೆಸುವುದಕ್ಕೆ ಆಗಿನ ಆ  ಶಿಕ್ಷಣ ಕಾರಣವಾಗಿದೆ. ಈಗಲೂ ನನ್ನ ಹಸಿವಿಗೆ ನಾನೇ ಬೇಯಿಸಿ ತಿನ್ನುವ ಪ್ರವೃತ್ತಿ ಇದೆ. ಇದನ್ನು ಒದಗಿಸಿದ್ದು ಬಾಲ್ಯದ ನನ್ನ ಈ ದೇವಸ್ಥಾನದ ಜೀವನ. ಆಗ ಪೂಜೆಗಿದ್ದ ಗೋಪಣ್ಣ ಪ್ರೀತಿಯಿಂದ ಹೇಳಿ,  ಕೆಲವೊಮ್ಮೆ ಗದರಿ ಬೇಕಾದ ರೀತಿಯಲ್ಲಿ ನನ್ನಿಂದ ಕೆಲಸವನ್ನು ಮಾಡಿಸಿ ಒಂದು ರೀತಿಯಲ್ಲಿ ಆ ದೇವರಿಗೆ ನನ್ನಿಂದ ಒಂದಷ್ಟು ಸೇವೆ ಲಭ್ಯವಾಗುವ ಹಾಗೆ ಮಾಡಿದ್ದರು. ಈಗ ಅವರಿಲ್ಲ. ಆದರೆ ಅಲ್ಲಿಗೆ ಹೋದಾಗ ಆ ನೆನಪೆಲ್ಲ ಮರುಕಳಿಸುತ್ತದೆ. ದೇವಸ್ಥಾನ ಗೋಪುರದಲ್ಲಿ ಉಂಡದ್ದು ನಿದ್ದೆ ಮಾಡಿದ್ದು ಆಟ ಆಡಿದ್ದು ಕನಸು ಕಂಡದ್ದು  ಆ ದಿನಗಳನ್ನು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ. 


ಬೆಳಗ್ಗೆ ನಿದ್ದೆ ಬಿಟ್ಟು ಎದ್ದ ಕೂಡಲೇ ಸ್ನಾನ ಮಾಡಿ ದೇವಸ್ಥಾನದ ಒಳಗೆ ಹೋಗಿ ರುದ್ರ ಮಂತ್ರ ಪಠಿಸುವುದು, ನನ್ನಿಂದ ಆದ ಚಾಕರಿಯನ್ನು ಮಾಡುವುದು ಹೀಗೆ ಹಗಲು ಇರುಳೆನ್ನದೆ ಕಳೆದ ದಿನಗಳು ಇಂದು ದೇವರ ಭಕ್ತಿಯಲ್ಲದ ಇನ್ನೊಂದು ಬಾಂಧವ್ಯವನ್ನು ಸ್ಮರಣೆಗೆ ತರುತ್ತದೆ. ಮಧ್ಯಾಹ್ನದ ವಿಪರೀತ ಕಾಡುವ ಹಸಿವಿನಲ್ಲಿ ಅಲ್ಲಿ ಬಡಿಸಿದ  ನೈವೇದ್ಯ ಜತೆಗೆ ಚಟ್ನಿ ತಂಬುಳಿ ಸಾರಿನ ಸರಳವಾದ ಊಟ ಅದರ ರುಚಿ ಇನ್ನೂ ಮಾಸಿಲ್ಲ. ಈಗಲೂ ಹಸಿವಾಗುವಾಗ ಮಠದ ಊಟದ ರುಚಿ ನೆನಪಿಗೆ ಬಂದು ಅದಕ್ಕೆ ಸರಿಸಾಟಿಯಾದ ಆಹಾರ ಮತ್ತೊಂದು ಇಲ್ಲ ಎಂಬ ಭಾವನೆ ಬರುತ್ತದೆ. ಮಠದ ಬಾಲ್ಯದ ಜೀವನದ ನೆನಪಿಗಾಗಿ ಈಗಲೂ ಬಾಳೆಕಾಯಿ ಪಲ್ಯ,  ಚಟ್ನಿ ತಂಬುಳಿ ಮಾಡಿ ಊಟ ಮಾಡುತ್ತೇನೆ.  ಮೊದಲು ಮಠದಲ್ಲಿ ಒಂದು ತರಕಾರಿಯನ್ನೂ ಆಂಗಡಿಯಿಂದ ತರುತ್ತಿದ್ದ ಸಂಭವ ಇರುತ್ತಿರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ತೋಟಕ್ಕೆ ಹೋಗಿ ಅಲ್ಲಿದ್ದ ಬಾಳೆಕಾಯಿ ಅಥವ ಸೊಪ್ಪು ತರಕಾರಿ ತಂದು ಅಡುಗೆ ಮಾಡಿ ಊಟ ಮಾಡುತ್ತಿದ್ದೆವು. ಆಲುಗಡ್ಡೆ ಟೊಮೆಟೊ ಕಂಡ ನೆನಪೇ ಇರುತ್ತಿರಲಿಲ್ಲ. ಈಗ ನವರಾತ್ರಿ ಇದಿಲ್ಲದೆ ಅಡುಗೆಯೇ ಇಲ್ಲ ಎಂಬಂತಹ ಬದಲಾವಣೆ ಆಗಿ ಹೋಗಿದೆ. ನಿಜಕ್ಕೂ ಆಗಿನ ದೇವಸ್ಥಾನದ ಆ ಊಟ ಅಮೃತ ಸದೃಶ.  ಯಾವ ಕಲ್ಮಶವೂ ಇಲ್ಲದ ಪರಿಶುದ್ದ ಆಹಾರ. 


ದೇವಾಲಯ ಈಗ ಆಧುನಿಕತೆಯ ಸ್ಪರ್ಶದಲ್ಲಿ ನಳನಳಿಸುತ್ತದೆ. ಮೊದಲು ಇದ್ದ ಸೆಗಣಿ ಸಾರಿಸಿದ ನೆಲ ಮಣ್ಣಿನ ವಾಸನೆ ಈಗ ಇಲ್ಲ. ಎಲ್ಲೆಂದರಲ್ಲಿ ನಳ್ಳಿ ತಿರುಗಿಸಿದರೆ ನೀರು , ಅಧುನಿಕ ಅಡುಗೆ ಪಾತ್ರೆ ಸಜ್ಜೀಕರಣ ಇವುಗಳ ನಡುವೆ ಹಳೆಯ ನೈವೇದ್ಯದ ಘಂ ಎನ್ನುವ ಸುವಾಸನೆ ಕಳೆದು ಹೋಗಿದೆ. ಆದರೆ ಆ ನೆನಪುಗಳು ಇನ್ನೂ ಹಸಿರಾಗಿಇದೆ. ಇಂದಿನ ತಲೆಮಾರಿಗೆ ಅದನ್ನು ವರ್ಣಿಸಿದರೂ ಅರ್ಥವಾಗದ ಆನುಭವಗಳ ಮಾರ್ದವತೆ ಕೇವಲ ಕಥೆಯ ಸನ್ನಿವೇಶಗಳಂತೆ ಭಾಸವಾಗಬಹುದು. 


ಪ್ರತೀ ಸಲ ನವರಾತ್ರಿ ಬರುವಾಗ ಇಲ್ಲಿ ಒಂದೆರಡು ದಿನವಾದರೂ ಇದ್ದು ದೇವರ ಸೇವೆಯ ಜತೆಗೆ ಹಿಂದಿನ ನೆನಪುಗಳಿಗೆ ಒಂದಷ್ಟು ತೀರ್ಥ ಸಿಂಪಡಿಸಿ ಅದನ್ನು ಹಸಿರಾಗಿ ಇರುವಂತೆ ಮಾಡುವ ನಿರೀಕ್ಷೆ ಇರುತ್ತದೆ.  ಆದರೆ ಅದು ಸಾಧ್ಯವಾಗುವುದಿಲ್ಲ. ಆದರೂ ಈ ಬಾರಿ ಎರಡು ದಿನ ದೇವರ ಸೇವೆಯಲ್ಲಿ ಕಳೆದೆ.  ಮರುಭೂಮಿಯ ಓಯಸಿಸ್ ನ  ನೀರಹನಿಯ ಅನುಭವಗಳಂತೆ ಒಂದಷ್ಟು ಹಳೆಯ ನೆನಪುಗಳು ಹಾದು ಹೋಯಿತು. ಅಮ್ಮನ ಎದೆಹಾಲಿನ ನೆನಪು ಬದುಕಿನಾದ್ಯಂತೆ ಇರುವಂತೆ  ಈ ಅಮ್ಮನ ಮಡಿಲಿನ ನೆನಪುಗಳು ಎದೆಹಾಲಿನ ಮಾರ್ದವತೆಯನ್ನು ಒದಗಿಸಿದವು. 


ಎರಡು ದಿನ ಸಮೀಪ ಸಂಬಂಧಿ ಶ್ರೀ ಲಕ್ಷ್ಮೀನಾರಾಯಣ ಭಟ್ಟರ ಮನೆಯಲ್ಲಿ ಉಳಿದುಕೊಂಡಿದ್ದೆ. ಮನೆಯ ಹತ್ತಿರವೇ ನಾಗಬನ ಇದ್ದು ಒಂದು ರೀತಿಯಲ್ಲಿ ಅರಣ್ಯದ ವಾತಾವರಣ ಕಲ್ಪಿಸಿತ್ತು. ನಾನು ಉಳಿದುಕೊಳ್ಳುವ ಜಾಗದಲ್ಲಿ ಮುಂಜಾನೆಯ ಶಾಂತ ಪರಿಸರದದ ಮೌನವನ್ನು ಅನುಭವಿಸುವುದಕ್ಕೆ ಬಯಸುವವನು. ಅದಕ್ಕೆ ಇಲ್ಲಿ ಮುಕ್ತ ಅವಕಾಶವಿತ್ತು. ಮುಂಜಾನೆ ನಾಲ್ಕು ಘಂಟೆಗೆ ಎದ್ದು ಸಂಧ್ಯಾವಂದನೆಗೆ ಕುಳಿತಾಗ ಆ ಮೌನವೇ ಭಗವಂತನ ರೂಪದಲ್ಲಿ ಪ್ರತ್ಯಕ್ಷವಾದಂತೆ ಭಾಸವಾಯಿತು. ಭಗವಂತನಿಗೆ ರೂಪವಿಲ್ಲ ಭಾವವಿಲ್ಲ, ಗುಣವಿಲ್ಲ...ಆದರೆ ಇಲ್ಲಿ ಸುತ್ತಲ ಪರಿಸರದ ಮೌನವೇ ದೈವದ ಅರಿವನ್ನು ಒದಗಿಸಿ ಭಗವಂತನ ಅಸ್ತಿತ್ವವನ್ನು ಹೃದಯಕ್ಕೆ ರವಾನಿಸಿತ್ತು.  ನಾನು ಎಲ್ಲೇ ಉಳಿದುಕೊಂಡರೂ ಮುಂಜಾನೆ ಯೋಗಾಭ್ಯಾಸಕ್ಕೆ ಅನುಕೂಲವನ್ನು ಮೊದಲು ಬಯಸುತ್ತೇನೆ. ಮನೆಯ ಮೇಲೆ ಅದಕ್ಕೆ ಮುಕ್ತವಾದ ವಾತಾವರಣ , ನಿಜಕ್ಕೂ ನಾನು  ಆ ಮನೆಯವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ನನಗೆ ಮುಕ್ತವಾಗಿ ಸರ್ವಸ್ವತಂತ್ರವಾಗಿ ಇರುವುದಕ್ಕೆ, ನನ್ನದೇ ಮನೆ ಎನ್ನುವ ಭಾವನೆ ಬರುವುದಕ್ಕೆ ಸಹೃದಯದ ಸೌಕರ್ಯವನ್ನು ಒದಗಿಸಿದ್ದರು. 


ಮನೆಯಲ್ಲಿ ನಿತ್ಯ ಕರ್ಮದ ರೂಪದಲ್ಲಿ ಮಾಡುವ ದೇವರ ಪೂಜೆ ಪುನಸ್ಕಾರಗಳು ಸಂಧ್ಯಾವಂದನೆ ನಿತ್ಯ ವಿಧಿಗಳು ನಿತ್ಯದ ಬದುಕಿಗೆ ಚೈತನ್ಯವನ್ನು ಒದಗಿಸಿದರೆ, ಹೀಗೆ ಅಲಭ್ಯವಾದ ಅವಕಾಶಗಳು ಸಿಕ್ಕಿ ಒಂದು ದೇವಸ್ಥಾನದಲ್ಲಿ ಉಳಿದುಕೊಂಡು ಅಲ್ಲಿಯವನಾಗಿ ಇರುವುದು ವರ್ಷದಾದ್ಯಂತೆ ಚೈತನ್ಯವನ್ನು ಒದಗಿಸುತ್ತವೆ. ಯಾವುದೇ ಮಾನಸಿಕ ಒತ್ತಡವಿಲ್ಲದೆ ಸರ್ವವೂ ದೇವರ ಕ್ರಿಯೆಯಲ್ಲಿ ದೇವರಿಗೆ ಸಮರ್ಪಿಸುವುದು ನಿಷ್ಕಾಮ ಕರ್ಮಕ್ಕೆ ಪ್ರೇರಣೆಯಾಗುತ್ತದೆ. ದೈವಕಾರ್ಯದಲ್ಲಿ ಯಾವ ವೃತ್ತಿಯನ್ನಾಗಲಿ ಭೇದವಿಲ್ಲದೆ ಶುದ್ದ ವೈರಾಗ್ಯದಿಂದ ಮಾಡುವಾಗ ಅಲ್ಲೊಂದು ಆತ್ಮ ತೃಪ್ತಿ ಇರುತ್ತದೆ. ಆವಳದ ಈ ದೇವಸ್ಥಾನದಲ್ಲಿ ಎರಡು ದಿನ  ಅದನ್ನು ಯಥೇಚ್ಛವಾಗಿ ಅನುಭವಿಸಿದೆ. ಎರಡು ದಿನ ಅಮ್ಮನ ಮಡಿಲಲ್ಲಿ ರಾಮನ ಅಳಿಲಾದ ಧನ್ಯತೆಯನ್ನು ಹೊತ್ತು ವಿದಾಯವನ್ನು ಹೇಳಿ ಅಲ್ಲಿನ ಅರ್ಚಕರು ನನಗಾಗಿ ಹೃದಯ ತುಂಬಿ ಪ್ರಾರ್ಥಿಸುವಾಗ ಒಂದು ಘಳಿಗೆ ನನಗೆ ಧನ್ಯತೆಯಲ್ಲಿ ಮಾತು ಹೊರಡದೆ ಹೃದಯ ಭಾರವಾಯಿತು. ಇನ್ನೂ ಮುಂದಕ್ಕೆ ಇದಕ್ಕಿಂತಲ್ಲೂ ಹೆಚ್ಚು ಸೇವೆಯನ್ನು ಒದಗಿಸುವ ಚೈತನ್ಯ ಲಭ್ಯವಾಗಲಿ ಎಂಬ ಮನದಾಶೆ ಮನದಾಳದಲ್ಲಿ ಸ್ಥಿರವಾಗಿ ಬೇರುಬಿಟ್ಟಿತು.