Wednesday, January 14, 2026

ಸಂಸ್ಕೃತ ಮತ್ತು ಮನುವಾದ

ಎಡ್ವಿನ್  ಜೆರೋ  ಎಂಬ ಅಮೇರಿಕದ  ಓರ್ವ ಸಂಸ್ಕೃತ ವಿದ್ವಾಂಸ. ಚಿಕಾಗೋ ವಿಶ್ವವಿದ್ಯಾಲಯದ ಪ್ರೋಫೆಸರ್ ಒಂದು ಸಲ ಭಾರತಕ್ಕೆ ಬಂದಾಗ ಸಂಸ್ಕೃತದಲ್ಲಿ ಪ್ರವಚನ ಮಾಡುತ್ತಾರೆ.  ಆಶ್ಚರ್ಯವಾಗಬಹುದು,  ಅಮೇರಿಕದ ವ್ಯಕ್ತಿ ನಮ್ಮ ಸಂಸ್ಕೃತ ಭಾಷೆಯಲ್ಲಿ ಪ್ರವಚನ ಮಾಡುತ್ತಾರೆ ಎಂದರೆ ನಾವು ಅಭಿಮಾನ ಪಟ್ಟುಕೊಳ್ಳಬೇಕು. ಅವರು ಎದ್ದು ನಿಂತಾಗ ಅದ್ಭುತ ಕರತಾಡನ. ಯಾಕೆಂದರೆ ಒಬ್ಬ ವಿದೇಶಿ ಪ್ರಜೆಗೆ ಸಂಸ್ಕೃತದಲ್ಲಿ ಇರುವ ಆಸಕ್ತಿ.   ಎಡ್ವಿನ್ ಜೆರೋ   ಉಡುಪಿಗೆ ಬಂದಾಗ ಮಠಾಧೀಶರು ಅವರ ಸಂಸ್ಕೃತ ಭಾಷಣ ಕೇಳಿಸುವ ಆಸಕ್ತಿ ತೋರಿದರು. ಸಾವಿರಾರು ಜನರು ಸೇರಿದ,  ಬಹುಶಃ ಪರ್ಯಾಯ ಕಾರ್ಯಕ್ರಮ ಇರಬೇಕು, ಅಲ್ಲಿ  ಅವರ ಸಂಸ್ಕೃತ ಭಾಷಣ. ವಿಚಿತ್ರವೆಂದರೆ ಆ ಸಂಸ್ಕೃತ  ಭಾಷಣ  ಸೇರಿದ ಭಾರತೀಯರಿಗೆ ಅರ್ಥವಾಗಬೇಕಲ್ಲ? ವಿದ್ವಾಂಸ ಶ್ರೀ ಬನ್ನಂಜೆ ಗೋವಿಂದಾಚಾರ್ಯರು  ಅದನ್ನು ಭಾಷಾಂತರ ಮಾಡುವುದಕ್ಕೆ  ಬರಬೇಕಾಯಿತು. ಆಧ್ಯಾತ್ಮ ಚಿಂತಕ  ಶ್ರೀ ಬನ್ನಂಜೆ ಗೋವಿಂದಾಚಾರ್ಯರವರು ತಮ್ಮ ಪ್ರವಚನ ಒಂದರಲ್ಲಿ ಹೇಳಿದ ಘಟನೆ ಇದು.  ನಮ್ಮದೇ ದೇಶದ ಪುರಾತನ ಭಾಷೆ, ವಿದೇಶಿಯನೊಬ್ಬ ಹೇಳಿದಾಗ ಅದು ನಮಗೆ  ಅರ್ಥವಾಗಬೇಕಾದರೆ  ಅದನ್ನು ಅನುವಾದಿಸುವ ಅನಿವಾರ್ಯತೆ ಒದಗಿತು. ಕಾರಣ ಸಂಸ್ಕೃತ ಎಂದರೆ ನಮಗೆ ಅರ್ಥವಾಗದೇ ಇರುವ ಭಾಷೆಯಾಗಿದೆ.  


ನನ್ನ ಬದುಕಿನಲ್ಲಿ ಕಳೆದು ಹೋದ ದೊಡ್ಡ ನಷ್ಟ  ಯಾವುದು ಅಂತ ನನ್ನಲ್ಲಿ ಕೇಳಿದರೆ,  ಬಾಲ್ಯದಲ್ಲಿ ಸಂಸ್ಕೃತ ಕಲಿಯುವ ಅವಕಾಶ ಮನೆಯಲ್ಲಿ ಅಥವಾ ಶಾಲೆಯಲ್ಲಿ ಇದ್ದರೂ ಅದನ್ನು ಕಲಿಯಲಾಗದೇ ಹೋದದ್ದು ನನ್ನ ಪಾಲಿಗೆ ದೊಡ್ಡ ನಷ್ಟ ಅಂತ ಈಗ ಅನಿಸುತ್ತದೆ. ಈಗೀಗ ಅದರ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ಉಂಟಾದರೂ ಅದನ್ನು ಪೂರೈಸುವುದಕ್ಕೆ ಅವಕಾಶ ಮತ್ತು ಮನೋಬಲ ಇಲ್ಲ.  ಸಂಸ್ಕೃತ ಅಂದರೆ ಈಗ ಅರ್ಥವಾಗದೇ ಇರುವುದು ಎಂದು ಪರ್ಯಾಯವಾಗಿ ಹೇಳಬಲ್ಲ ಅವಕಾಶ ಮಾತ್ರ ಇರುತ್ತದೆ. ನಮಗೆ ಅರ್ಥವಾಗಬೇಕಾದದ್ದು ಕಷ್ಟ ಪಟ್ಟು ಶ್ರಮ ವಹಿಸಿ ಅರ್ಥವಿಸಿಕೊಳ್ಳಬೇಕು ಎಂದು ಪರೋಕ್ಷವಾಗಿ ಸಾರಿದಂತೆ ಸಂಸ್ಕೃತ ಭಾಷೆ ನನಗೆ ಭಾಸವಾಗುತ್ತದೆ. ಯಾಕೆಂದರೆ  ಇದು ಕೇವಲ ಭಾಷೆಗೆ ಮಾತ್ರ ಸಂಭಂಧಿಸಿ ಹೇಳುವುದಲ್ಲ, ಭಾರತೀಯ ಸಂಸ್ಕೃತಿಯ ಎಲ್ಲಾ ಅಮೂಲ್ಯ ಅಂಶಗಳು ಜ್ಞಾನ ರೂಪವಾಗಿ ಸಂಸ್ಕೃತದಲ್ಲಿ ಅಡಗಿದೆ. ಹಾಗಾಗಿ ಈ ಜ್ಞಾನ ಲಭ್ಯವಾಗಬೇಕಾದರೆ ನಾವು ಕಷ್ಟ ಪಡಬೇಕು. ಇಚ್ಛಾಶಕ್ತಿ ತೋರಬೇಕು. ಈ ಪ್ರಯತ್ನ ಇಚ್ಛಾಶಕ್ತಿ ಇಲ್ಲದೇ ಇರುವುದರಿಂದ ಇಂದು ಹಲವು ಬುದ್ದಿ ಜೀವಿಗಳು ಹಲುಬುವಂತಾಗಿರುವುದು ನಮ್ಮ ಸನಾತನ ಧರ್ಮದ ದುರ್ದೈವ ಅಂತ ತಿಳಿಯಬೇಕು.   ಬಹುಶಃ ಭಾರತೀಯರು ತಮಗೆ ಅರ್ಥವಾಗದೇ ಇರುವುದನ್ನು ಏನೋ ಇದೆ ಅಂತ ನಂಬಿಬಿಡುತ್ತೇವೆ. ಸುಮ್ಮನೆ ಅಪಾಯ ಯಾಕೆ? ಯಾವುದೋ ನಂಬಿಕೆಯ ಮೇಲೆ ಪುನಃ ನಮ್ಮ ನಂಬಿಕೆಯ ಮಹಡಿಗಳನ್ನು ಕಟ್ಟುತ್ತೇವೆ.  ನಿಜವಾಗಿ ಸಂಸ್ಕೃತ ಎಲ್ಲರಿಗೂ ಅನಿವಾರ್ಯವಾಗಿ ಅರ್ಥವಾಗಬೇಕಾದ  ಭಾಷೆ. ಒಂದು ವೇಳೆ ಅದು ಎಲ್ಲರಿಗೂ ಅರ್ಥವಾಗುತ್ತಿದ್ದರೆ ಇಂದು ಸನಾತನ ಧರ್ಮ ಎದುರಿಸುವ ಹಲವಾರು ಸಮಸ್ಯೆಗಳು ಉದ್ಭವಿಸುತ್ತಿರಲೇ ಇಲ್ಲ ಅಂತ ಅನಿಸುತ್ತದೆ. 

ನಮಗೆ ತಿಳಿಯದೇ ಇರುವುದರ ಮೇಲೆ ವ್ಯಾಖ್ಯಾನ ಮಾಡುವುದನ್ನು ಮೂರ್ಖತನ ಎನ್ನಬೇಕು. ಆ ಮೂರ್ಖತನಕ್ಕೆ ನಮ್ಮ ನಂಬಿಕೆಗಳು ಇಂದು ಬಲಿಯಾಗುತ್ತವೆ. ನಂಬಿಕೆ ಎಂದರೆ ವಿಶ್ವಾಸ. ಇಂದು ಅದೇ ವಿಶ್ವಾಸವನ್ನು ಕಳೆದುಕೊಳ್ಳಬೇಕು ಎನ್ನುವಂತಹ ಸ್ಥಿತಿ ಎದುರಾಗುತ್ತದೆ. ಯಾವುದೇ ಸಂಭಂಧಗಳ ಅಡಿಪಾಯ ಇರುವುದು ವಿಶ್ವಾಸದಲ್ಲಿ ಗಂಡ ಹೆಂಡತಿ ಇನ್ನಿತರ ಸಾಂಸಾರಿಕ, ಸಾಮಾಜಿಕ ಸಂಬಂಧಗಳು ನೆಲೆ ನಿಲ್ಲುವುದು ಈ ವಿಶ್ವಾಸದಲ್ಲಿ. ಆ ವಿಶ್ವಾಸ ಮೂಡುವುದು ಪರಸ್ಪರ ಅರಿವಿನಲ್ಲಿ ಈ ಅರಿವು ಇಲ್ಲದೇ ಕೆಲವೊಮ್ಮೆ ಏನೋ ತಿಳಿದುಕೊಂಡು ನಾವು ಪರಸ್ಪರ ವೈರವನ್ನು ಕಟ್ಟಿಕೊಳ್ಳುತ್ತೇವೆ. ಮಿತ್ರ ಮಿತ್ರರ ನಡುವೆ ಗಂಡ ಹೆಂಡಿರ ನಡುವೆ ಹೀಗೆ ಎಲ್ಲಾ ಸಂಭಂದಗಳ ನಡುವೆ ಈ ಅರಿವಿನ ಕೊರತೆ ನಂಬಿಕೆ ಸಂಭಂಧಗಳ ಮೇಲೆ ಘಾಸಿ ಮಾಡುತ್ತವೆ. ಅದೇ ಬಗೆಯಲ್ಲಿ ಇಂದು ನಮ್ಮ ಧರ್ಮದ ಅರಿವಿಲ್ಲದೇ ಧರ್ಮವನ್ನು ದ್ವೇಷಿಸುವ ಹಂತಕ್ಕೆ ಬರುತ್ತದೆ. ಧರ್ಮ ಮಾತ್ರವಲ್ಲ, ಅದಕ್ಕೆ ಸಂಬಂಧಿಸಿದ ಎಲ್ಲವೂ ಪ್ರಶ್ನಾರ್ಹವಾಗಿಬಿಡುತ್ತದೆ. ಅದರಲ್ಲಿ ಒಂದು ಭಗವದ್ಗೀತೆ. 

ಭಗವದ್ಗೀತೆ ಎಂದಾಕ್ಷಣ ಮನುವಾದ ಎಂದು ನಿಂದಿಸುವ ಮನೋಭಾವ ನಿಜಕ್ಕೂ ಮೂರ್ಖತನ.  ಭಗವದ್ಗೀತೆ ಸರಳವಾಗಿ ಇದರ ಅರ್ಥ ನೋಡಿದರೆ ಭಗವಂತನ ಮಾತುಗಳು. ಅದು ಯಾವ ಧರ್ಮದಲ್ಲೂ ಇದ್ದೇ ಇರುವ ವಿಷಯ. ಅದು ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ.  ಅದನ್ನು ಒಂದು ಧರ್ಮದಲ್ಲಿ ಹೇಳಿದೆ ಎನ್ನುವುದು ಅದರ ವಿರೋಧಕ್ಕೆ ಕಾರಣವಾಗುವುದು ಸರಿಯಲ್ಲ.  ಅದನ್ನು ವಿರೋಧಿಸುವವಲ್ಲಿ  ಮನುವಾದದ ಅರಿವೂ ಇಲ್ಲ. ಭಗವದ್ಗೀತೆ ಅಂದರೆ ಏನು ಅಂತ ಗೊತ್ತಿರುವುದೂ ಇಲ್ಲ. ಭಗವದ್ಗೀತೆ  ಪಠ್ಯದಲ್ಲಿ ಸೇರಿಸ ಬೇಕೇ ? ಅಂತ ಹಲವು ಚರ್ಚೆಯಾಗುತ್ತದೆ.  ಇದರ ಪರವಾಗಿ ವಿರೋಧವಾಗಿ ಚರ್ಚೆ ಇದ್ದೇ ಇರುತ್ತದೆ. ಆದರೆ ಭಗವದ್ಗೀತೆ ಪಠ್ಯದಲ್ಲಿ ಸೇರಬೇಕೆ ಎನ್ನುವುದಕ್ಕಿಂತ ಅದು ಮನೆಯಲ್ಲಿ ಮೊದಲು  ಸೇರಬೇಕು ಎನ್ನುವುದು ಸೂಕ್ತ. ಯಾಕೆಂದರೆ ಭಗವದ್ಗೀತೆ ಬೇಕು..ಆದರೆ ಅದನ್ನು ತೆರೆದು ಓದಿದವರು ಎಷ್ಟು ಜನ? ಓದಿ ಉರು ಹೊಡೆದು ಬಾಯಿ ಪಾಠ ಒಪ್ಪಿಸುವುದಕ್ಕಷ್ಟೇ ಸೀಮಿತವಾದರೆ ಭಗವದ್ಬೀತೆಯ ತತ್ವಗಳ ಪರಿಣಾಮವೇನು? ಭಗವದ್ಗೀತೆಯಲ್ಲಿ ಹೀಗೆ ಇದೆ ಅಂತ ಯಾರೋ ಹೇಳಿದ್ದನ್ನು ನಂಬುವುದಿದ್ದರೆ ಅದು ಭಗವದ್ಗೀತೆಗೆ ಒಪ್ಪಿಸುವ ಗೌರವವಾಗುವುದಿಲ್ಲ. ಅದು  ಪ್ರಾಮಾಣಿಕತೆಯ ಅರ್ಥವನ್ನು ಕಲ್ಪಿಸುವುದಿಲ್ಲ. ಭಗವದ್ಗೀತೆ ಶಾಲೆಯ ಪಠ್ಯದಲ್ಲಿ ಬಳಕೆಗೆ ಬರುವುದಕ್ಕಿಂತ ಮನೆ ಮನೆಯಲ್ಲಿ ಮನ ಮನದಲ್ಲಿ ಬಂದರೆ ಶಾಲೆಯಲ್ಲಿ ಅದರ ಅವಶ್ಯಕತೆಯೇ ಇರುವುದಿಲ್ಲ. ಹಿಂದುಗಳ ಧರ್ಮ ಗ್ರಂಥ ಎನ್ನಿಸುವ  ಭಗವದ್ಗೀತೆ ಬಹು ಸಂಖ್ಯೆಯ ಹಿಂದುಗಳಿಗೆ (ನನ್ನನ್ನೂ ಸೇರಿಸಿ)  ಅದರ ಆಳ ಅರ್ಥವೇ ತಿಳಿದಿಲ್ಲ.  ವಿಪರ್ಯಾಸವೆಂದರೆ ಇಂದು ಭಾರತೀಯರಿಗಿಂತ ವಿದೇಶಿಯರು ಹಚ್ಚು ಅರ್ಥವಿಸಿದ್ದಾರೆ. 

ಮನುವನ್ನು ವಿರೋಧಿಸುವಾಗ "ಮನಸ್ಸು"  ಎಂದು ಹೇಳುವಲ್ಲಿ  ಮನು ಇದ್ದಾನೆ ಎಂಬುದನ್ನು ಮರೆಯುತ್ತಾರೆ.. ಮನಸ್ಸು ಇದ್ದವನು, ಅಂದರೆ ಮನುಷ್ಯ. ಮನಸ್ಸು ಮತ್ತು ಚಿಂತಿಸುವ ಶಕ್ತಿ ಇರುವುದು ಕೇವಲ ಮನುಷ್ಯನಿಗೆ ಮಾತ್ರ. ಪ್ರಾಣಿಗಳಿಗೆ ಇದು ಇರುವುದಿಲ್ಲ. ಮನುಷ್ಯ ಎಂದು ಉದ್ಗರಿಸುವುದರಲ್ಲೇ ಮನುವಾದವಿದೆ.  ಮನುಷ್ಯ ಎಂದು ಕರೆಯಲ್ಪಡುವುದರಲ್ಲೇ ಮನು ಇರಬೇಕಾದರೆ ಮನು ವಿರೋಧದಲ್ಲಿ ಒಂದು ಪೂರ್ವಾಗ್ರಹ ಇದೆ ಎಂಬುದು ಸ್ಪಷ್ಟ.  ಇದು ಕೇವಲ ಭಾರತೀಯರಿಗೆ ಮಾತ್ರ ಸೀಮಿತವಲ್ಲ. ಆಂಗ್ಲ ಭಾಷೆಯಲ್ಲಿ ಹೇಳುವ ಮ್ಯಾನ್ ಎಂಬುದು ಕೂಡ ಮನು ಶಬ್ದದ ರೂಪಾಂತರ. ಹೀಗೆ ಹತ್ತು ಹಲವು ಉದಾಹರಣೆಗಳು ಸಿಗುತ್ತವೆ. ಈ ಜಗತ್ತಿನ ಮೂಲ ರೂಪ ಇರುವುದೇ ಸನಾತನ ಧರ್ಮದಲ್ಲಿ.  ಮನುವನ್ನು ವಿರೋಧಿಸುವವರು ಮನುಷ್ಯರಾಗಿ ಇರುವುದಕ್ಕೆ ಸಾಧ್ಯವಿಲ್ಲ. ಬೇರೆ ಇನ್ನೇನೋ ಆಗಬೇಕು. ಮನುಷ್ಯನ ಜೀವನದ ಪ್ರತಿ ಹಂತದಲ್ಲೂ ಮನುವಾದದ ತತ್ವವಿದೆ. ಆದರೆ ಇದನ್ನು ತಿಳಿಯದೇ ಮನುವಾದ ಅಂತ ವಿರೋಧಿಸುತ್ತಾರೆ. ಹೆತ್ತವರನ್ನು ಅಪ್ಪ ಅಮ್ಮ ಎನ್ನುವಂತೆ ಮನುಷ್ಯನೊಳಗೆ ಮನು ಬೆಸೆದುಕೊಂಡಿದೆ.  ಭಾನುವಾರವನ್ನು ಸಂಡೆ ಎನ್ನುವುದಕ್ಕೂ ಸೋಮವಾರವನ್ನು ಮಂಡೇ ಎನ್ನುವಾಗ ಭಾನುವಾರ ಸೋಮವಾರದಲ್ಲಿ ಮನುವಾದ ಇದೆ ಎಂಬುದನ್ನು ಮರೆಯುತ್ತಾರೆ. 

ಮನುವಾದವನ್ನು ಎಂದರೆ ಮೌಢ್ಯ.   ಸರಿಯಾಗಿ ತಿಳಿಯದೆ ಅಧ್ಯಯನ ಮಾಡದವರು ಹೇಳುತ್ತಾರೆ. ಮೌಢ್ಯ ಎಂದರೆ ಯಾವುದನ್ನು ತಿಳಿಯದೇ ಅನುಸರಿಸಿ ಆಚರಿಸುತ್ತೇವೋ ಅದು ಮೌಢ್ಯವಾಗುತ್ತದೆ. ಸಂಸ್ಕೃತದಲ್ಲಿ ಏನು ಹೇಳಿದರೂ ಅದು ಮನುವಾದವಾಗುತ್ತದೆ, ಕೇಸರೀಕರಣವಾಗುತ್ತದೆ , ಮೌಢ್ಯವಾಗುತ್ತದೆ. ಸಂಸ್ಕೃತವನ್ನು ಕೇವಲ ಭಾಷೆಯಾಗಿ ನೋಡುತ್ತೇವೋ ಒಂದು ಧರ್ಮವಾಗಿ ಪರಿಗಣಿಸುತ್ತೇವೋ ಅರಿವಿಲ್ಲ. ಸಂಸ್ಕೃತ ಕೇವಲ ಭಾಷೆಯಲ್ಲ. ಅದರ ವೈಶಿಷ್ಟ್ಯಗಳು ಹಲವು. ಸ್ವಂತ ಲಿಪಿ ಇಲ್ಲದೇ ಇದ್ದರೂ ಹಲವು ಭಾಷೆಗಳಿಗೆ ಮೂಲಾಧಾರ ಸಂಸ್ಕೃತ ಭಾಷೆ. ಯಾಕೆಂದರೆ ಸಂಸ್ಕೃತ ಒದಗಿಸುವ ಜ್ಞಾನ. ಅದನ್ನು ನಮ್ಮ ಭಾಷೆಯ ಮೂಲಕ ಅರಿಯಬೇಕು. ವೇದ ಮಂತ್ರಗಳನ್ನು ಅಧ್ಯಯನ ಮಾಡಬೇಕಾದರೆ ನಮ್ಮ ಭಾಷೆಯಲ್ಲೇ ಬರೆದು ಅಧ್ಯಯನ ಮಾಡಬೇಕಿದೆ. 

ಮನು ಎಂದಿಗೂ ಜಾತಿ ಅಥವಾ ಧರ್ಮಭೇದವನ್ನು ಹೇಳಲಿಲ್ಲ. ಮತ್ತೊಂದು ಧರ್ಮವನ್ನು ದಮನ ಅಥವಾ ನಾಶ ಮಾಡಿ ನಿನ್ನ ಧರ್ಮವನ್ನು ಉಳಿಸು ಎಂದು ಹೇಳಲಿಲ್ಲ. ಮನು ಪರಮಾತ್ಮನ ಬಗ್ಗೆ ಹೇಳಿರುತ್ತಾನೆ. ನಮ್ಮ ಹುಟ್ಟು ಸಾವಿನ ಕಾರಣವನ್ನು ವಿಶ್ಲೇಷಿಸಿ ಬೋಧಿಸಿರುತ್ತಾನೆ. ಪರಮಾತ್ಮನ ಬಳಿಗೆ ಸಾಗುವ ಈ ಜೀವನದ ಮುಖಗಳನ್ನು ತೋರಿಸಿರುತ್ತಾನೆ. ಲೌಕಿಕ ಜೀವನದ ಮಿಥ್ಯೆಗಳನ್ನು ಅದರ ಪರಿಣಾಮಗಳನ್ನು ಹೇಳಿರುತ್ತಾನೆ. ಆದರೆ ಲೌಕಿಕ ಜೀವನವೇ ಪರಮ ಸತ್ಯ ಎಂದು ತಿಳಿದು ಅದರಲ್ಲೇ ನರಳುವವರಿಗೆ ಈ ಸತ್ಯದ ಅರಿವಾಗುವುದಿಲ್ಲ. ಹಾಗಾಗಿ ಮನುವಾದ ಸನಾತನ ಧರ್ಮದ ಅರಿವನ್ನು ಪಡೆಯುವುದಕ್ಕೆ ಶ್ರಮವನ್ನೂ ಪಡೆಯುವುದಿಲ್ಲ. ಮನು ಪರಮಾತ್ಮನ ಬಳಿಗೆ ಸಾಗುವ ಆಧ್ಯಾತ್ಮಿಕ ದಾರಿಯ ಬಗ್ಗೆ ಚಿಂತಿಸುತ್ತಾನೆ. ಅಲ್ಲಿ ತಾತ್ಕಾಲಿಕವಾದ ಈ ದೇಹ ಮುಖ್ಯವಾಗುವುದಿಲ್ಲ. ದೇಹದ ಹಸಿವು ಕಾಮನೆಗಳು ಮುಖ್ಯವಾಗುವುದಿಲ್ಲ. ಆದರೆ ಲೌಕಿಕ ಜೀವನದ ಅಜ್ಞಾನದಲ್ಲೆ ಮುಳುಗಿರುವವರಿಗೆ ದೇಹ ಹಸಿವು ಕಾಮನೆಗಳೇ ಮುಖ್ಯವಾಗಿ ಅದರ ಪರಿಹಾರವೇ ಜೀವನ ಎಂದು ತಿಳಿದು ಬಿಡುತ್ತಾರೆ. ಇಲ್ಲಿ ಆಧ್ಯಾತ್ಮಿಕದ ಮೌಲ್ಯ ಎಂಬುದು ಕಬ್ಬಿಣದ ಕಡಲೆಯಾಗುತ್ತದೆ. ಹಾಗಾಗಿ ನಮಗೆ ತಿಳಿಯದೇ ಇರುವುದು ಮೌಢ್ಯವಾಗಿಬಿಡುತ್ತದೆ. 

ನಮ್ಮಲ್ಲಿ ಅದ್ಭುತವಾದ ಸಕಲ ಜ್ಞಾನವೂ ಇದೆ. ಆದರೆ ಅದು ನಮಗೆ ತಿಳಿಯದ ಸಂಸ್ಕೃತ ಭಾಷೆಯಲ್ಲಿ ಅಡಕವಾಗಿದೆ. ಅದೇ ಸಂಸ್ಕೃತ ಭಾಷೆಗೆ ಸ್ವಂತ ಲಿಪಿ ಇಲ್ಲ. ಉಳಿದ ಭಾಷೆಯ ಮೂಲಕವೇ ಇಲ್ಲಿ ಪ್ರವೇಶ ಮಾಡಬೇಕು. ಲಿಪಿ ಜ್ಞಾನಕ್ಕೆ ಕೇವಲ ಪೂರಕವೇ ಹೊರತು ಅದು ಅನಿವಾರ್ಯವಲ್ಲ. ಹಾಗಾಗಿ ವೇದ ಮಂತ್ರಗಳು ಮೌಖಿಕವಾಗಿ ಉಪದೇಶಿಸಲ್ಪಡುತ್ತಿತ್ತು. ಅಲ್ಲಿ ಲಿಪಿಯ ಅವಶ್ಯಕತೆಯೇ ಇರಲಿಲ್ಲ. ಕ್ರಮೇಣ ಅದಕ್ಕೆ ಲಿಪಿ ಬಳಕೆಯಾಗಿ ಉಳಿದ ಭಾಷೆಯಲ್ಲೂ ಪ್ರಕಟಗೊಂಡಿತು. ಮನುಷ್ಯ ಹುಟ್ಟುವಾಗ ಮೊದಲು ಭಾಷೆಯನ್ನು ಕಲಿಯುತ್ತಾನೆ. ಆಗ ಲಿಪಿಯ ಅವಶ್ಯಕತೆಯೇ ಇರುವುದಿಲ್ಲ. ಹೆತ್ತಮ್ಮ ಬಾಯ್ದೆರೆಯಾಗಿಯೆ ಮಾತಿನಿಂದ ಮಗುವಿಗೆ ಭಾಷೆಯನ್ನು ಕಲಿಸುತ್ತಾಳೆ. ಅದರಂತೆ ಸಂಸ್ಕೃತ ಎಂಬುದು ಲಿಪಿ ಇಲ್ಲದೆ ಮಾತೃ ಸ್ವರೂಪದ ಭಾಷೆಯಾಗುತ್ತದೆ. ಇಂತಹ ಸಂಸ್ಕೃತ ಭಾಷೆ ತನ್ನ ಗರ್ಭದಲ್ಲಿ ಈ ಜಗತ್ತಿನ ಆದಿ ಅಂತ್ಯದ ಜ್ಞಾನವನ್ನು ಹುದುಗಿಸಿಕೊಂಡಿದೆ. 

ಪ್ರಾಚೀನ ಕಾಲದಲ್ಲಿ ವೇದ ಉಪನಿಷತ್ತುಗಳೊಂದಿಗೆ ಅದರ ಸಾರವನ್ನು ಅರ್ಥವನ್ನೂ ಬೋಧಿಸಲಾಗುತ್ತಿತ್ತು. ಮಾತ್ರವಲ್ಲ ಸಂಸ್ಕೃತ ಸಾಮಾನ್ಯ ಭಾಷೆಯಾಗಿ ಬಳಕೆಯಲ್ಲಿತ್ತು. ಹಾಗಾಗಿ ಏನು ಉಲ್ಲೇಖಿಸಲ್ಪಡುತ್ತಿದೆಯೋ ಅದು ಎಲ್ಲರಿಗೂ ಮನನವಾಗುತ್ತಿತ್ತು. ಕ್ರಮೇಣ ಅನ್ಯ ಭಾಷೆಯ ಬಳಕೆಯಿಂದ ಮೂಲ ಆದರ ಸಾರವನ್ನು ತಿಳಿಯುವ ಅನಿವಾರ್ಯತೆ ದೂರವಾಗಿ ಸಂಸ್ಕೃತ ಎಂಬುದು ಯಾರೂ ಸ್ಪರ್ಶಿಸದ ಭಾಷೆಯಾಗಿ ಅಮೂಲ್ಯ ಜ್ಞಾನ ಸಂಪತ್ತು ರಹಸ್ಯವಾಗಿ ಅವಿತು ಹೋಯಿತು. 

ಸಂಸ್ಕೃತದಲ್ಲಿ  ಏನು ಹೇಳಿದರೂ ಅದು ಪರಮಾತ್ಮನ ಕುರಿತಾದ ಭಾವನೆಯನ್ನು ತರುತ್ತದೆ.  ಸಂಸ್ಕೃತ ಎಂದರೆ ಅದು ದೇವಭಾಷೆ.  ಮನುಷ್ಯರಾಗಿ ದೇವರನ್ನು ಅರಿಯಬೇಕು. ಹಾಗಾಗಿ ಇದು  ಸಂಸ್ಕೃತ ಜನ ಸಾಮಾನ್ಯರಿಗೂ ಅರಿವಾಗುವ ಭಾಷೆಯಾಗಬೇಕಿದೆ. ವೇದ ಮಂತ್ರಗಳು ಏನು ಹೇಳುತ್ತವೆಯೋ ಅದು ಪ್ರತಿಯೊಬ್ಬರಿಗೂ ತಿಳಿಯಬೇಕಿದೆ. ಹಾಗಿದ್ದಲ್ಲಿ ಈ ಮನುವಾದವನ್ನು ತಿರಸ್ಕರಿಸುವ ಮಂದ ಬುದ್ದಿ ದೂರವಾಗಬಹುದು. ವೇದ ಮಂತ್ರಗಳು ಕೇವಲ ಉರು ಹೊಡೆದು ಪಾಠ ಒಪ್ಪಿಸುವ ಬದಲಿಗೆ ಅದರ ಅರಿವನ್ನು ಅಲ್ಲಿರುವ ಜ್ಞಾನವನ್ನೂ ತಿಳಿಸಬೇಕಿದೆ. ನಮಗೆ ಅರ್ಥವಾಗದ ಭಾಷೆಯಲ್ಲಿ ದೇವರ ಮುಂದೆ ನಿಂತು ಏನೋ ಹೇಳುತ್ತೇವೆ. ನಾವು ಏನು ಹೇಳುತ್ತೇವೆ ಏನು ಮಾಡುತ್ತೇವೆ ಎಂಬುದೇ  ನಮಗೇ ಅರಿವಿರುವುದಿಲ್ಲ. ನಾವು ಏನು ಹೇಳುತ್ತೇವೆ ಎಂದು ನಮಗೆ ಅರಿವಿಲ್ಲದಿರುವಾಗ ಭಗವಂತನನ್ನು ಅರಿಯುವುದೆಲ್ಲಿಂದ ಬಂತು. ಹಾಗಾಗಿ ಅರಿಯದೇ ಮಾಡುವ ಕ್ರಿಯೆಗಳು ಕೇವಲ ಮೌಢ್ಯವಾಗಿಬಿಟ್ಟಿತು. 

ನಾನು ನನ್ನಿಂದ ಎಂಬುದು ಮನುಷ್ಯನಲ್ಲಿರುವ ಅಹಂ ಅಂದರೆ ಅಹಂಕಾರವಾಗಿರುತ್ತದೆ. ಅಹಂ ಎಂಬ ಭಾವನೆಯಲ್ಲಿ ಏನು ಮಾಡಿದರೂ ಅದು ಮೂರ್ಖತನವಾಗುತ್ತದೆ.  ನನ್ನ ದೇವರು ನನ್ನ ದೇವಾಲಯ ನನ್ನದು ...ಎನ್ನುವಲ್ಲಿ ಅಹಂ ಇದೆ. ಈ ಅಹಂಕಾರವನ್ನು ತೊರೆಯಬೇಕು. ಆಗ ಸಂಸ್ಕೃತ ಮತ್ತು ಅದರಲ್ಲಿ ಜ್ಞಾನದ ಅರಿವಾಗುತ್ತದೆ. ಮನುವಾದ ಎಂದು ಅವಹೇಳನ ಮಾಡುವಲ್ಲಿ ಅಹಂಕಾರವಿದೆ. ಈ ಪೂರ್ವಾಗ್ರಹವನ್ನು ಬಿಟ್ಟು ಯೋಚಿಸಿದಲ್ಲಿ ಮನುವಾದದ ನಿಜವಾದ ಅರ್ಥ ಅರಿವಾಗಬಹುದು.