ಮನೆಯಿಂದ ಹೊರಬಂದು ನೋಡಿದೆ ಮೊದಲ ದಿನ ಇರುಳಿನ ಮಳೆಗೆ ಭೂಮಿ ತೇವವಾಗಿತ್ತು. ಅದು ಮಳೆಯಂತೆ ಇಬ್ಬನಿಯ ರಸಧಾರೆ. ಮಲೆನಾಡು ಎಂದರೆ ಹಾಗೆ. ಅದು ಮಳೆಯೋ ಇಬ್ಬನಿಯೋ ನನ್ನಂಥವರಿಗೆ ಅರ್ಥವಾಗುವಾಗ ಪೂರ್ಣ ಒದ್ದೆಯಾದ ಅನುಭವ.
ನಾನು ಇದ್ದುದು ಮಲೆನಾಡ ಮಡಿಲಿನ ಒಂದು ಪುಟ್ಟ ನಗರ ಕೊಪ್ಪದ ನನ್ನ ಮಾವನ ಮನೆಯ ಅಂಗಳದಲ್ಲಿ. ಕೊಪ್ಪ ಎಂದರೆ ಶೃಂಗೇರಿಯಿಂದ ಒಂದು ಘಂಟೆಯ ಬಸ್ ಪ್ರಯಾಣದಷ್ಟು ದೂರ. ತೀರ್ಥಹಳ್ಳಿಗೂ ಅಷ್ಟೇ. ನನ್ನ ಮಟ್ಟಿಗೆ ಹೇಳುವುದಾದರೆ ಅತ್ಯಂತ ಸುಂದರ ನಗರ. ಯಾಕೆಂದರೆ ಅದು ನನ್ನ ಪತ್ನಿಯ ತವರೂರು. ಸ್ನೇಹ ಸಂಪನ್ನರು. ಸಹೃದಯಿಗಳು ಇರುವ ಮೇಲಾಗಿ ನನ್ನ ಪತ್ನಿಯ ಊರು. ಸುಂದರವಾಗದೇ ಇರಲು ಕಾರಣವು ಬೇಕಲ್ಲ.?.
ಅದು ಮುಂಜಾನೆಯ ಐದರ ಸಮಯ. ಮಲೆನಾಡಿನ ಮುಂಜಾವು ಎಂದರೆ ಅದೂ ವಿಶಿಷ್ಟ ಅನುಭವವನ್ನು ತರುತ್ತದೆ. ಸುತ್ತಲೂ ಇಬ್ಬನಿಯ ಹನಿ. ತಣ್ಣನೆಯ ವಾತಾವರಣ. ಆಗಿನ್ನೂ ಸೂರ್ಯೋದಯವಾಗಿರದೆ ನೀರವ ಮೌನದ ಗಾಡಾಂಧಕಾರ ಇದ್ದರೆ ಅಲ್ಲೊಂದು ಇಲ್ಲೊಂದು ಬೀದಿ ದೀಪಗಳು ಬೀಳುತ್ತಿರುವ ಮಂಜಿನ ನಡುವೆ ಉರಿಯುತ್ತ ತಮ್ಮ ಅಸ್ತಿತ್ವವನ್ನು ಸಾರಲು ಹರಸಾಹಸ ಪಡುತ್ತಿದ್ದವು.
ಯಾವ ರೀತಿ ಗಾಢವಾದ ನಿದ್ದೆಯಲ್ಲಿ ಅಮರಿಕೊಂಡಿದ್ದರೂ ಬೆಳಗ್ಗೆ ನಾಲ್ಕುವರೆಗೆ ನನಗೆ ಎಚ್ಚರವಾಯಿತೆಂದರೆ ಮತ್ತೆ ನಿದ್ದೆ ಹತ್ತಿರ ಸುಳಿಯದು. ಇದು ರೂಢಿಯಾಗಿ ನಿದ್ರಾ ಹೀನನಾಗಿ ಹಾಸಿಗೆಯಲ್ಲಿರುವುದು, ಅದೂ ಮುಂಜಾನೆ ನನ್ನ ಜಾಯಮಾನಕ್ಕೆ ಒಗ್ಗಿಕೊಳ್ಳುವಂತಹುದಲ್ಲ. ಮನೆಯಲ್ಲಿ ಎಲ್ಲರೂ ಸಿಹಿನಿದ್ರೆಯ ವಶವಾಗಿದ್ದರೂ ನಾನು ಬಚ್ಚಲು ಹೊಕ್ಕು ತಣ್ಣೀರ ಸ್ನಾನ ಮುಗಿಸಿ ಪ್ರಾತಃ ಸಂಧ್ಯಾಕರ್ಮವನ್ನು ಪೂರೈಸಿ ಮನೆಯ ಎದುರಿನ ಅಂಗಳದಲ್ಲಿ ನಿಂತುಕೊಂಡು ಸುತ್ತಲು ಹಬ್ಭಿದ ಮೌನವನ್ನು ಏಕಾಂತವಾಗಿ ಆಸ್ವಾದಿಸುತ್ತಿದ್ದೆ. ಮನೆಯ ಎದುರಿನ ರಸ್ತೆಯ ಆ ತುದಿಯ ಅಂಚಿನಲ್ಲಿ ಒಂದಿಬ್ಬರು ಮೆಲುದನಿಯಲ್ಲಿ ಮಾತನಾಡುತ್ತ ಚಳಿಗೆ ಮುದುರಿಕೊಂಡು ಹೋಗುತ್ತಿದ್ದರು. ತುಸು ಹೊತ್ತಿನಲ್ಲಿ ಒಬ್ಬಾತ ಸೈಕಲು ಏರಿ ಅವಸರವಸರವಾಗಿ ಮನೆಯ ಎದುರಿನ ರಸ್ತೆಯಲ್ಲಿ ಹಾದು ಹೋದಂತಾಗಿ ಮತ್ತೆ ಸ್ವಲ್ಪ ಹೊತ್ತಿನಲ್ಲಿ ಹತ್ತಿರದಲ್ಲಿರುವ ಮಸೀದಿಯಿಂದ ಬಾಂಗ್ ಕೇಳಲಾರಂಭಿಸಿತು. ಬಹುಶಃ ಹೋದಾತ ವ್ಯಕ್ತಿ ಅದಕ್ಕೆ ಸಂಭಂಧ ಪಟ್ಟವನಿರಬೇಕು.
ಆಗ ಮಾವನ ಮನೆಯ ನೆಂಟ ನಾನು ಅಂತಹ ತರಾತುರಿಯ ಕೆಲಸಗಳಾವುದೂ ಇರಲಿಲ್ಲ. ಮೈ ಮನ ಜಡತನವನ್ನು ಹೊರಹಾಕುವ ಉತ್ಸಾಹದಲ್ಲಿತ್ತು. ಅಂಗಿ ಬನಿಯನು ಧರಿಸದ ಬರಿ ಮೈಗೆ ತಣ್ಣನೆಯ ಗಾಳಿ ಸೋಂಕಿ ಹಾಯೆನಿಸಿತು. ಬೆಂಗಳೂರಿನ ಕೃತ್ರಿಮ ಗಾಳಿಯಿಂದ ಜಡ್ಡಾಗಿದ್ದ ಮೈ ಮನ ಉಲ್ಲಸಿತವಾಯಿತು. ಬರಿ ಮೈಗೆ ಗಾಳಿ ಸೋಂಕಿ, ಎದೆಯೊಳಗೂ ಹೊರಗು ತಣ್ಣಗಿನ ಗಾಳಿಯ ಆಹ್ಲಾದ ಅನುಭವದ ಸುಖ ಅನನ್ಯವಾದುದು. ಮನೆಯ ಎದುರಲ್ಲೆ ನಿಲ್ಲಿಸಿದ ಕಾರಿನಿಂದ ಯೋಗ ಚಾಪೆಯನ್ನು ತೆಗೆದು ಅಂಗಳದಲ್ಲೇ ಹಾಸಿದೆ.
ಆಗ ಒಂದು ಕ್ಷಣ ಅನಿಸಿತು, ಯೋಗ ಮಾಡುತ್ತ ಶವಾಸನವನ್ನು ಅಲ್ಲೆ ಮಾಡಿದರೆ? ಅತ್ತ ಇತ್ತ ಸುಳಿವ ಜನ ಕಂಡರೆ... ಮನೆಯ ಅಂಗಳದಲ್ಲಿ ಅಳಿಯಂದಿರು ಏಕೆ ಮಲಗಿದರಪ್ಪಾ? ಬೆಳ್ಳಂಬೆಳಗ್ಗೆ ಈ ಅಚಾನಕ್ ಆಗಿ ಈ ದೃಶ್ಯ ಕಂಡರೆ ಕೆಲವರಂತೂ ಗಲಿಬಿಲಿಗೊಳಗಾಗುವುದು ಸ್ಪಷ್ಟ. ಕಂಡರೆ ಕಾಣಲಿ ಎಂಬ ಉದಾಸೀ ಭಾವ. ಕಂಡರೇನು? ನನ್ನ ಮಟ್ಟಿಗೆ ಯೋಗದ ಮೊದಲ ಪಾಠವೇ ಅದು. ನಾವು ನಮಗಾಗಿ ಬದುಕಬೇಕು. ಪರರಿಗಿರುವ ಬದುಕು, ಅದು ಸಾರ್ವಜನಿಕವಾದ ಲೌಕಿಕ ಬದುಕು. ಇದು ಆಧ್ಯಾತ್ಮದ ಬದುಕು. ಯಾರು ಏನೆಂದರೂ ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಾದರೂ ಏನಿದೆ? . ಅಂತರ್ ಮುಖಿಯಾಗಿ ಪರಮಾತ್ಮನ ಸಾನ್ನಿಧ್ಯದ ಸುಖವನ್ನು ಅನುಭವಿಸುವಾಗ ಯಾರು ಏನೆಂದರೂ ಅದರ ಬಗ್ಗೆ ಪರಿವೆಯಿಲ್ಲ.
ನಿಧಾನವಾಗಿ ಮನೆ ಎದುರು ಪದ್ಮಾಸನದಲ್ಲಿ ಕುಳಿತವನೇ ಸಾವಧಾನವಾಗಿ ಕಣ್ಣು ಮುಚ್ಚಿ ದೀರ್ಘವಾದ ಶ್ವಾಸವನ್ನೆಳೆದೆ. ಹೊರಗಿನ ತಣ್ಣನೆಯ ಪರಿಶುದ್ದ ಗಾಳಿಯಲ್ಲಿದ್ದ ಚೈತನ್ಯ ಭರಿತ ಆಮ್ಲ ಜನಕ ಹೃದಯ ತುಂಬ ವ್ಯಾಪಿಸಿದಂತೆ .. ಅಹಾ ಎಂತಹ ಅನುಭವ. ಹಸಿವಿನಿಂದ ಹಪ ಹಪಿಸಿದ ಪ್ರಾಣಿಗಳಿಗೆ ಒಮ್ಮಿಂದೊಮ್ಮೆಲೇ ಆಹಾರವು ರಾಶಿ ರಾಶಿಯಾಗಿ ದೊರೆತಂತೆ ತೆಲೆಯಲ್ಲಿ, ಹೃದಯದಲ್ಲಿ, ಮೈತುಂಬೆಲ್ಲ ಹರಡಿದ ನರನಾಡಿಗಳು ಒಳನುಗ್ಗಿದ ಆಮ್ಲ ಜನಕವನ್ನು ಹೀರತೊಡಗಿದಂತೆ ಭಾಸವಾಯಿತು. ಶುಭ್ರವಾದ ಗಾಳಿಯ ಉಗ್ರಾಣವನ್ನೆ ತೆರೆದಿಟ್ಟ ಅನುಭವವಾಯಿತು. ಉಸಿರಾಟ ಒಂದು ...ಎರಡು ಹೀಗೆ ಅದೆಷ್ಟು ಬಾರಿ ದೀರ್ಘವಾಗಿ ಉಸಿರಾಡಿದರೂ ಇನ್ನು ಇನ್ನೂ ಉಸಿರಾಡಬೇಕೆಂಬ ಹಂಬಲ. ತಂಪಾದ ಹೃದಯ ಪ್ರಕೃತಿಯೊಂದಿಗೆ ಒಂದಾದ ಅನುಭವ. ಬರಿ ಎದೆಯ ಬಡಿತ ಮಾತ್ರವೇ ಕೇಳಿಸುತ್ತಿದೆ. ಹೊರಗೆ ಮೊದಲೇ ಮೌನ. ನಿಶ್ಯಭ್ದ ವಾತಾವರಣ ಪೂರ್ಣ ಸಹಕಾರ ಸಿಕ್ಕಿ ಶುಭ್ರವಾದ ಗಾಳಿಯ ಪ್ರವಾಹಕೆ ಹೃದಯ ತೆರೆದುಕೊಂಡಿತು. ಯಾವುದರ ಪರಿವೆಯೂ ಇಲ್ಲ. ಅಲುಗಾಡದೆ ಚಲನರಹಿತವಾಗಿ ನೆಟ್ಟಗೆ ಕುಳಿತಿದೆ ಶರೀರ. ಮನಸ್ಸು ನಿಧಾನವಾಗಿ ಒಂದೇ ಗುರಿಯತ್ತ ಚಲಿಸುತ್ತಿದೆ. ಉಸಿರು ಎದೆ ಬಡಿತವು ಸರ್ವಸ್ವವಾಗಿ ಎಲ್ಲವನ್ನೂ ಮರೆತ ಅನುಭವ. ಹೀಗೆ ಪ್ರಾಣಾಯಾಮದ ಮೊದಲ ಹಂತದಾಟಿದೊಡನೆ ಮನಸ್ಸಲ್ಲಿ ಪ್ರಮಾತ್ಮನ ಧ್ಯಾನ ಚಕ್ರ ಚಲನೆಯನ್ನು ಆರಂಭಿಸಿತು. ಯಾರೂ ಇಲ್ಲದ ನಿರ್ಜನ ಲೋಕದಲ್ಲಿ ಒಂಟಿಯಾಗಿ ವಿಹರಿಸಿದೆ.
ಮನಸ್ಸನ್ನು ಭಾವನೆಗಳಿಂದ ದೂರವಾಗಿಸಿ ಭಾವನಾರಹಿತವನ್ನಾಗಿಸಬೇಕು. ಅದಕ್ಕಾಗಿ ದೀರ್ಘವಾದ ಉಸಿರಾಟವನ್ನು ಸಾವಧಾನವಾಗಿ ಅರಂಭಿಸಿದೆ. ಮನಸ್ಸು ಎಕಾಗ್ರತೆ ಗಳಿಸುತ್ತಿದ್ದಂತೆ ಭಾವನಾರಹಿತ ಪ್ರಪಂಚ ತೆರೆದುಕೊಳ್ಳುತ್ತದೆ.ಹೊರಜಗತ್ತಿನ ಚಟುವಟಿಕೆಗಳು ಎಲ್ಲವು ಕ್ಷೀಣವಾಗುತ್ತ ಸುಪ್ತವಾದ ಸ್ಥಿತಿ ತಂದೊಡನೆ ದೇಹ ಸಂಬಂದಗಳು ಕಳಚಿದಂತಹ ಅನುಭವ. ಉಸಿರಿನ ಮೂಲ ಚೇತನವನ್ನು ಅರಸುತ್ತಾ ಪರಮಾತ್ಮನ ಇರವಿನ ಅನುಭವವಾಗುತ್ತದೆ.ಸುತ್ತಲಿನ ವಾತಾವರಣ ಅದೆಷ್ಟು ಅದ್ಭುತವಾಗಿ ಸಹಕರಿಸಿದ ಅನುಭವವಾಗುತ್ತಿದೆ. ತಣ್ಣನೆಯ ಗಾಳಿ.. ನಿಶ್ಯಭ್ದ ನೀರವ ಮೌನ.. ಸುಳಿಗಾಳಿಗೆ ಸಿಕ್ಕಿದ ತರಗೆಲೆ ಕಸ ಕಡ್ಡಿಗಳೆಲ್ಲವೂ ಒಂದೆ ಕಡೆ ಕೇದ್ರೀಕೃತವಾಗಿ ಊರ್ಧ್ವಮುಖಿಯಾಗಿ ಚಿಮ್ಮಿದಂತೆ ಅಂತರಾತ್ಮದ ಭಾವಗಳೆಲ್ಲವೂ ಒಂದೇ ಗುರಿಯತ್ತ ಚಿಮ್ಮಿದ ಅನುಭವ. ಕೇವಲ ನಾಸಿಕಾಗ್ರದಿಂದ ಉಸಿರಾಡಿದರೂ ಸಂಪೂರ್ಣ ದೇಹ ಯಾವುದೇ ಅಡೆತಡೆ ಇಲ್ಲದೆ ಶಕ್ತಿಯನ್ನು ಹೀರಿದ ಅನುಭವ.
ಪ್ರಾಣಾಯಾಮ ಮಾಡುತ್ತಿದ್ದಷ್ಟೂ ಹೊತ್ತು ಸುಂದರ ಸರೋವರದಲ್ಲಿ ತೇಲಿದಂತೆ, ನಂತರ ದೇಹವನ್ನು ಶಿಥಿಲವಾಗಿಸಿ ಭೂಮಿ ಮೇಲೆ ಹರಡಿದಾಗ ಗಾಳಿಯಲ್ಲಿ ತೇಲಾಡುತ್ತ ಆದ್ಯಂತವಿಲ್ಲದ ಲೋಕದಲ್ಲಿ ವಿಹರಿಸಿದ ಅನುಭವ.
ಮಲೆನಾಡ ಯೋಗ ಪ್ರಥಮ ಬಾರಿಗೆ ಅಹ್ಲಾದನೆಯ ಅನುಭವ ನೀಡಿತು. ತಣ್ಣನೆಯ ಶುಭ್ರವಾದ ಹವಾಮಾನ, ಗಾಢವಾದ ಕತ್ತಲಿನ ಮೌನ . ಬೆಂಗಳೂರಲ್ಲಿ ಕನಸೇ ಸರಿ. ಸೂರ್ಯೊದಯವಾಗಿ ಬೆಳಕು ಹರಿದಂತೆ ಸುತ್ತಲಿನ ವಾತಾವರಣ ನಿಧಾನವಾಗಿ ಬದಲಾಗತೊಡಗಿತು. ಹಗಲು,ಇರುಳು, ಕೆಟ್ಟದ್ದು ಒಳಿತು ಮನುಷ್ಯನ ಜತೆಯಲ್ಲೇ ಹುಟ್ಟಿಕೊಳ್ಳುತ್ತವೆ ಎಂಬುದರ ಸಂಕೇತವೋ ಎಂಬಂತೆ ದೂರದಲ್ಲಿ ಎಲ್ಲೋ ಕಟ್ಟಿನಿಂತ ನೀರು ಕದಡಿದಂತಾಗಿ ಸೊಳ್ಳೆಗಳು ಮುತ್ತಲಾರಂಭಿಸಿ ಏಕಾಗ್ರತೆಗೆ ತೋದರೆಯನ್ನುಂಟು ಮಾಡತೊಡಗಿತು.ಪುರಾಣದಲ್ಲಿ ಧರ್ಮರಾಯ ಸ್ವರ್ಗಾರೋಹಣ ಮಾಡುವಾಗ ಕಣ್ಣಿಗೆ ಬೆಂಕಿಯ ಕಿಡಿಯೊಂದು ತಾಗಿತಂತೆ.ಕುರುಕ್ಷೇತ್ರ ಯುದ್ದದಲ್ಲಿ ದ್ರೋಣರು ಹತರಾಗುವ ಸಂದರ್ಭದಲ್ಲಿ ಸುಳ್ಳನ್ನು ಆಡಿದುದಕ್ಕೆ ಈ ಬಗೆಯಾಯಿತು ಎಂದು ಪ್ರತೀತಿಯಿದೆ. ಈ ಕಥೆ ನೆನಪಾಯಿತು. ಆದರು ಮಲೆನಾಡ ಯೋಗ ಸ್ವರ್ಗಾನುಭವ ನೀಡಿದ್ದು ಮರೆಯಲಾಗದ ಅನುಭವಾಯಿತು. ಯೋಗ ನಿದ್ರಯನ್ನು ಬಿಟ್ಟೆದ್ದಾಗ ತಿಂಗಳಲ್ಲಿ ಒಂದು ಬಾರಿಯಾದರು ಮಾವನ ಮನೆಯ ಉಪಚಾರಕ್ಕಲ್ಲದಿದ್ದರೂ ಈ ಅಮೃತ ಸದೃಶವಾದ ಯೋಗಾನುಭವ ಪಡೆಯಲು ಬರಬೇಕೆನೆಸಿತು. ಆ ಮಧುರಾನುಭವದ ಗುಂಗಿನಲ್ಲಿರುವಾಗಲೇ ಬಿಸಿ ಬಿಸಿ ಅಕ್ಕಿರೋಟ್ಟಿಯ ಪರಿಮಳದೊಂದಿಗೆ, ಬೆಳಗಿನ ಉಪಾಹಾರಕ್ಕೆ ಅತ್ತೆಯವರ ಕರೆ ಕೇಳಿಸಿತು. ಬೆಳಗ್ಗಿನ ಉಪಾಹಾರವೇ ನನ್ನ ಮಟ್ಟಿಗೆ ಪ್ರಧಾನ ಆಹಾರವಾಗಿ ಬದಲಾಗಿ ಹೋಗಿದೆ. ಈಗೀಗ ಮಧ್ಯಾಹ್ನ ಮತ್ತು ರಾತ್ರೆ ಸೇವಿಸುವ ಆಹಾರದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.
ಈ ಮಧುರ ಯೋಗಾನುಭವದೊಂದಿಗೆ ತಿಂಡಿಯನ್ನು ಸೇವಿಸುವಾಗ ತಿಂಗಳಿಗೊಮ್ಮೆಯಾದರೂ ಈ ಅನುಭವ ಪಡೆಯುವ ಆಶೆಯಾಗಿದೆ ಎಂದಾಗ ಅರಳಿದ ಅತ್ತೆಯವರ ಮುಖ ಇನ್ನು ಕಣ್ಣೆದುರು ನಿಂತ ಹಾಗೆ ಭಾಸವಾಗುತ್ತಿದೆ.
ಕೆಲವೊಮ್ಮೆ ಈ ಯೋಗದ ಬಗ್ಗೆ ಒರೆಯುವುದು ಅತಿಯಾಯಿತೇನೋ ಅನ್ನಿಸುವುದಿದೆ. ಆದರೂ ಮಧುರಾನುಭವವನ್ನು ನಿರಂತರವಾಗಿ ನೀಡುವ ಈ ಯೋಗಾನುಭವದ ಪ್ರಭಾವ ಎಲ್ಲವನ್ನೂ ಮೀರಿ ನಿಂತಂತೆ ಹೊಸ ಆಯಾಮವನ್ನು ತಂದಾಗ, ತಲೆನೋವು ಇದು ಸಾಮಾನ್ಯವಾಗಿ ಎಲ್ಲರನ್ನೂ ಬಾಧಿಸುವ ಕಾಯಿಲೆ, ನೆಗಡಿ ಮುಂತಾದ ಸಾಮಾನ್ಯ ಖಾಯಿಲೆಯಿಂದ ತೊಡಗಿ ಹಲವು ಮಹಾ ವ್ಯಾಧಿಗಳನ್ನು ಬೇಕೆಂದೇ ಪಡೆದು ಜೀವಿಸುವವರನ್ನು ಕಂಡಾಗ ಈ ಅನುಭವ ಅನಪೇಕ್ಷಿತವಾಗಿ ವ್ಯಕ್ತವಾಗುತ್ತದೆ. ತುಸುವಾದರೂ ತಲೆನೋವು ಖಾಯಿಲೆಗಳು ಇಲ್ಲವಾದರೆ ಬದುಕುವುದಾದರೂ ಹೇಗೆ? ಹಾಗಾಗಿ ಅವನ್ನು ಬೇಕೆಂದೇ ಪಡೆದು ಜೀವಿಸುವವರನ್ನು ಕಂಡಾಗ ಭಗವಂತ ಅನುಗ್ರಹಿಸಿದ ವರವನ್ನು ಪಡೆಯದೆ ಶಾಪವನ್ನೇ ಆಗ್ರಹ ಪೂರ್ವಕವಾಗಿ ಪಡೆಯುತ್ತಿರುವುದು ಹಾಸ್ಯಾಸ್ಪದವಾಗಿ ಕಾಣುವುದು. ಹೊಟ್ಟೆಯ ಹಸಿವೆ ಎಂಬ ರೋಗಕ್ಕೆ ಅನ್ನಾಹಾರದ ರೂಪದಲ್ಲಿ ಔಷಧವಾಗಿ ತಪ್ಪದೆ ಸೇವಿಸುವ ನಾವು ನಮ್ಮ ಕಲುಷಿತ ಜೀವನ ಶೈಲಿಯನ್ನು ಬದಲಿಸಬೇಡವೆ? ದಿನದ ಕೆಲವು ನಿಮಿಷಗಳನ್ನಾದರೂ ಪ್ರತಿಯೋರ್ವ ಇದಕ್ಕೆ ಮೀಸಲಿಟ್ಟರೆ ಸಾಕು ವ್ಯಾಧಿರಹಿತ ದೇಹ ನಮ್ಮದಾಗುವುದು.