Wednesday, February 1, 2012

ಮುಂಜಾನೆಯ ಶಿಶು




ತಾಯಿ ತಾನು ಹೆತ್ತ ಮಗುವಿಗೆ ತಾನೇ ಬಯಸಿ ಪೂರ್ಣ ಮನಸ್ಸಿನಿಂದ ಎದೆಹಾಲನ್ನು ಕೊಡುವ ಸಮಯವೆಂದು, ಒಂದು ಇರುತ್ತದೆ. ಮಗು ಸ್ವತಃ ಹಠಮಾಡಿ ಅಥವಾ ಅತ್ತುಕರೆದಾಗ ಹಾಲನ್ನು ಕೊಡುವ ಸಮಯವೇ ಪ್ರತ್ಯೇಕ..   ಇದಲ್ಲದೆ ಬೇರೆ ಹಲವಾರು ಬಾರಿ ಬೇರೆ ಬೇರೆ ಕಾರಣಗಳಿಂದ ಹಾಲುಣಿಸಿದರೂ ಆಗ ಮೊದಲ ಅಪ್ಯಾಯ ಮಾನ ಲಭ್ಯವಾಗುವುದೇ ಇಲ್ಲ. ಆಗ ತಾಯಿಯ ಕ್ರಿಯೆಯಲ್ಲಿ ಯಾಂತ್ರಿಕತೆ ಬಿಂಬಿಸಲ್ಪಡುತ್ತದೆ. ಆದರೆ ಶಿಶುವಿಗೆ ತೃಪ್ತಿಯಾಗುವಷ್ಟು ಹಾಲನ್ನುಣಿಸಿ ಅದರಲ್ಲಿ ತಾಯಿ ಅನುಭವಿಸುವ ಸಂತೃಪ್ತಿ  ಮಾತ್ರವಲ್ಲ ತಾಯಿ ಮಗು ಜತೆಯಲ್ಲೇ ಅನುಭವಿಸುವ ಸಾನ್ನಿಧ್ಯ ಸುಖ ಅತ್ಯಂತ ವಿಶಿಷ್ಟ, ಮಗುವಿಗೆ ಬೇರೆ ಆಹಾರ ಎಷ್ಟೂ ಸಿಗಬಹುದು ಆದರೆ ಎದೆ ಹಾಲಿಗಿರುವ ಮಹತ್ವ ಬಹಳ ಶ್ರೇಷ್ಠ. ಯಾವುದೇ ಕಾರಣ ವಿರಲಿ ಮೊದಲ ಪರಿಹಾರ ಸ್ತನ್ಯಪಾನದಿಂದ. ಹಾಗಾಗಿ ತಾಯಿ ಸ್ವತಃ ಮನತುಂಬಿ ಮಮತೆಯಿಂದ ಹಾಲುಣಿಸುವ ಆ ವೇಳೆಯ ಮಹತ್ವ ಎಷ್ಟಿರಬಹುದು? ಮಗುವು ಆ ಹೊತ್ತಿನಲ್ಲಿ ಎಷ್ಟು ಸಾಧ್ಯವೋ ಆಷ್ಟು ಹೀರಿಕೊಳ್ಳಬೇಕು. ಇದು ಮಗುವಿನ ಪೋಷಣೆಯಲ್ಲೂ ಪ್ರಾಮುಖ್ಯವಾಗಿರುತ್ತದೆ. ಕರುಣೆದುಂಬಿ ಜನನಿಯ ಜೀವರಸ ಹೀರಿ ಪುನೀತವಾಗದ ಶಿಶುವಿದ್ದರೆ ಅದು ಪ್ರಕೃತಿಗೆ ವ್ಯತಿರಿಕ್ತವಾದದ್ದು. ಭಗವಂತನನ್ನು  ಪ್ರಕೃತಿರೂಪದಲ್ಲಿ ಕಂಡಾಗ ಪ್ರಕೃತಿಯೂ ಜನನಿ ಸಮಾನ. ಹಾಗಾಗಿ ಪ್ರತೀ ದಿನವು ಮನುಷ್ಯ ಶಿಶುವಾಗುತ್ತಾನೆ. ಶೈಶವದ ಬಾಲ್ಯಾವಸ್ಥೆಯಲ್ಲಿ  ಜನನಿಯ ಎದೆ ಹಾಲನ್ನು ಹೀರಿ ದಿನವಾರಂಭಿಸುತ್ತಾನೆ.
 ಕಣ್ಣಿಗೆ ಪ್ರತ್ಯಕ್ಷ ಕಾಣುವ ಪ್ರಕೃತಿ ಭಗವಂತ ರೂಪ. ಹಾಗಾಗಿ ಇದನ್ನು ತಾಯಿಗೆ ಹೋಲಿಸುತ್ತೇವೆ. ಶ್ರೇಷ್ಠವಾದದ್ದು ನಮ್ಮ ಜೀವನಾಡಿಯಾಗಿ ಜೀವನಕ್ಕೆ ರೂಪ ಕೊಡುವಂತಹುದು ಯಾವುದೇ ಆಗಿರಲಿ ನಾವು ಅದನ್ನು ಜನನಿಯ ಸ್ಥಾನದಲ್ಲೆ ಕಾಣುತ್ತೇವೆ.  ಅದು ನಮ್ಮ ಸಂಸ್ಕಾರ. ಅತೀ ಶ್ರೇಷ್ಠವಾದ ವಸ್ತುವನ್ನು ಹೋಲಿಸಲು ಸುಲಭವಾದ ಉಪಮೆ ಎಂದರೆ ಅದು ಮಾತೃ ಸ್ಥಾನ. ಪ್ರತಿಯೊಂದು ಜೀವರಾಶಿಯನ್ನೂ ಮಕ್ಕಳಾಗಿ ಸಲಹುವ ಪ್ರಕೃತಿ   ಮಹಾತಾಯಿಯಾಗಿಬಿಡುತ್ತಾಳೆ. ಪ್ರಕೃತಿಯಲ್ಲಿ ತಾಯಿಯನ್ನು ಕಂಡಾಗ ಪ್ರಕೃತಿಗೆ ಪೂರಕವಾದ ಭಾವನೆಗಳೇ ಪ್ರಚೋದಿಸಲ್ಪಡುತ್ತವೆ. ಹಸಿದ ಹೊಟ್ಟೆಗೆ ಆಹಾರದಂತೇ ನೊಂದ ಮನಕೆ ಸಾಂತ್ವಾನ ನೀಡುವ ಪ್ರಕೃತಿ ಮಾತೆ ಮುಂಜಾನೆ ಸುಂದರವಾಗಿ ಕಂಗೊಳಿಸುವಾಗ ಪೂರ್ಣವಾದ ದಿನವೊಂದು ನಮ್ಮ ಮುಂದಿಡುತ್ತಾಳೆ.
  ಪೂರ್ಣವಾದ ದಿನವೊಂದನ್ನು ಒಂದು ಮಾನವ ಜೀವಮಾನ ಎಂದು ಕಲ್ಪಿಸಿದರೆ ದಿನದ ಹಲವು ಯಾಮಗಳಲ್ಲಿ ಮನುಷ್ಯ ಜೀವನವನ್ನೇ ಕಾಣಬಹುದು.  ನಿದ್ರಾಪೊರೆಯನ್ನು ಹರಿದು ಹೊರಬಂದಾಗ ಹೊಸ ಜನ್ಮವೆತ್ತಿದ ಮಗುವಿನಂತೆ,  ಮುಂಜಾನೆಯ ಆ ಘಳಿಗೆ ಬಾಲ್ಯಾವಸ್ಥೆಯಾದರೆ,  ಬೆಳಗಿನ ನಸು ಬಿಸಿಲಿನ ದಿನದ ಮುಖ್ಯ ಚಟುವಟೆಕೆಗೆ ಕಾರ್ಯೊನ್ಮುಖವಾಗುವ ಹೊತ್ತು ಯೌವನ ನಂತರ ಸಮಯ ಕಳೆಯುತ್ತಿದ್ದಂತೆ ವೃದ್ದಿ ಹೊಂದಿ ಬಿಡುತ್ತೇವೆ. ಸೂರ್ಯಾಸ್ತಮಾನವಾಗಿ ದಿನ ಮುಗಿದಂತೆ ನಾವು ವೃಧ್ಧರಾಗಿ ನಿದ್ರಾವಸ್ಥೆಗೆ ಜಾರಿಬಿಡುತ್ತವೆ. ಒಂದು ಜೀವನಾಂತ್ಯದಂತೆ  ಇಲ್ಲು ನಿದ್ರಾವಸ್ಥೆಯೇ ಸಂಕೇತವಾಗಿಬಿಡುತ್ತದೆ.    ಹಾಗಾದರೆ  ನಮ್ಮ ತಾಯಿಯ ಮುಖವನ್ನು ನಾವು ಕಾಣುವ  ಮತ್ತು ಒಂದಾಗುವ ಘಳಿಗೆ ಒಂದಿರಬೇಕಲ್ಲ. ಅದು ಮುಂಜಾನೆ. ಆವಾಗಲೇ ಪ್ರಕೃತಿ ಮಾತೆಯ ಸುಂದರ ಹಾಗು ಶಾಂತ ಮುಖವನ್ನು ನೋಡುವುದಕ್ಕೆ ಸಾಧ್ಯ. ಉದಿಸುವ ಸೂರ್ಯ ಮುಖವಾಗಿ ಮಮತೆಯಿಂದ ಮೈದಡವಲು ಬರುತ್ತಾಳೆ. ಆ ಮೈದಡವುವಿಕೆಯ ಅರಿವಾಗಬೇಕು ಅಷ್ಟೇ.
ಶಿಶುವಿಗೆ ಸ್ತನ್ಯ ಪಾನ ಜೀವನಕ್ಕೆ ಹೇಗೆ ಅಮೃತ ಸೇಚನವನ್ನು ಮಾಡುತ್ತದೋ ಅದೇ ಬಗೆಯಲ್ಲಿ ಪ್ರಕೃತಿಯಲ್ಲಿ ಆಮೃತವಾಗಿ ವಾತಾವರಣದ ಆಮ್ಲ ಜನಕ. ಮುಂಜಾನೆ ಪ್ರಕೃತಿ ತಾಯಿಯಾಗಿ  ಹೃದಯತುಂಬಿ ಉಣಿಸಲು ಬರುತ್ತಾಳೆ.  ನಿದ್ರಿಸಿದ ಮಗುವನ್ನು ಮೆಲುವಾಗಿ ಮೈದಡವಿ ಎಚ್ಚರಿಸಲು ಯತ್ನಿಸುತ್ತಾಳೆ. ಆ ಕರೆಯ ಅರಿವಾಗಿ ಮಗು ಎದ್ದರೆ ಹೊಟ್ಟೆತುಂಬ ಅಮೃತ ರೂಪದ ಹಾಲನ್ನು  ಅಂದರೆ ಆಮ್ಲಜನಕವನ್ನು ಉಣಿಸುತ್ತಾಳೆ. ಒಂದುವೇಳೆ ಆ ಮಗು ನಿದ್ದೆ ಬಿಟ್ಟೇಳದೆ ಇದ್ದರೆ, ಎದ್ದಾಗ ನೋಡೋಣವೆಂದು ಆ ಕಡೆ ಸರಿದು ತನ್ನ ನಿತ್ಯಕಾಯ್ಕದಲ್ಲಿ ಮಗ್ನವಾಗುತ್ತಾಳೆ. ನಂತರ. ಹೊತ್ತು ಕಳೆದಂತೆ ಅನ್ಯಕಾರ್ಯದಲ್ಲಿದ್ದಾಗ ಹಾಲುಣಿಸಿದರೂ ಸಿಗಬೇಕಾದ ಸಂತೃಪ್ತಿ ಆಲ್ಲಿ ಮೂಡುವುದೇ ಇಲ್ಲ. ಎಲ್ಲವೂ ಅವಸರದಲ್ಲಿ ಯಾಂತ್ರಿಕವಾಗಿಬಿಡುತ್ತದೆ.
ಪ್ರಕೃತಿ ಹೃದಯ ತುಂಬಿದ ಅಮ್ಮನಾಗುವಾಗ ಓಂ... ಓಂ.. ಎಂದು  ಓಂಕಾರ ರೂಪಿಂದ  ಅಮ್ಮಾ ಎಂದು ಕರೆಯುವ ಮಗುವು ನಾವಾಗಬೇಕು. ಮುಂಜಾನೆಯ ಧ್ಯಾನ ಮತ್ತು ಯೋಗ ಪ್ರಕೃತಿಯ ಮುಂದೆ ನಮ್ಮನ್ನು ಮಗುವಾಗಿಸುತ್ತದೆ.ಎಲ್ಲವನ್ನು ಮರೆತು ಮಗುವಿನ ಮನಸ್ಸನ್ನು ರೂಪಿಸಲು ಯೋಗದಿಂದ ಮಾತ್ರ ಸಾಧ್ಯ. ಅಮ್ಮನಿಂದ ಮೊದಲು ಎಚ್ಚರವಾಗಿ ಧ್ಯಾನ ಮುದ್ರೆಯಲ್ಲಿ ಕುಳಿತು ಏಕೋಭಾವದಿಂದ ಓಂಕಾರದಿಂದ  ಅಮ್ಮಾ... ಎಂದಾಗ ಆ ಮಾತೆ ಹೃದ್ಯದುಂಬಿ ಮಮತೆಯ ಅಮೃತವರ್ಷವನ್ನೆ ಸುರಿಸಿಬಿಡುತ್ತಾಳೆ.   ನಮ್ಮೆಲ್ಲಾ ನೋವು ದುಮ್ಮಾನಗಳಿಗೆ ಮಮತೆಯಿಂದ ಮೈದಡವಿ ಸಾಂತ್ವಾನ ನೀಡುತ್ತಾಳೆ. ಮೈಮನಗಳಿಗಾದ ಗಾಯಗಳನ್ನು ಮೃದುವಾಗಿ ಸ್ಪರ್ಶಿಸಿ ಮಧುರವಾದ ಅನುಭವವನ್ನು ನೀಡುತ್ತಾಳೆ. ಆದರೆ ಹೊತ್ತು ಮೀರಿದಂತೆ ಅಮ್ಮನಿಗೂ ಸಮಯವಿಲ್ಲ. ಆ ಕರುಣಾಮೃತವನ್ನು ಸವಿಯುವುದಕ್ಕೆ ನಮಗೂ ಅವಕಾಶವಿರುವುದಿಲ್ಲ. ಮುಂಜಾನೆ ಅಮ್ಮನ ಮುಖ ದರ್ಶನವಾಗುವ ಮೊದಲೇ ಅಂದರೆ ಸೂರ್ಯ ಉದಿಸುವ ಮೊದಲೇ ಎದ್ದು ಅಮ್ಮನ ಬರವನ್ನು ಕಾಯಬೇಕು. ಏಕೋಭಾವದಿಂದ ಕಪಟವರಿಯದ ಮಗುವಿನಂತೆ ಶಾಂತ ಚಿತ್ತದಿಂದ ಅಮ್ಮಾ.... ಎಂದು ಕರೆಯೋಣ. ನಮ್ಮ ಅಮ್ಮ ಮಮತೆಯಿಂದ ಮಡಿಲಲ್ಲಿ ಮಲಗಿಸಿ ಉಣಿಸುವ ಆ ಎದೆಹಾಲನ್ನು ಹೀರಬೇಕು ಎಷ್ಟು ಸಾಧ್ಯವೋ ಅಷ್ಟು.  ಮುಂಜಾನೆಯ ಅಮೃತಪಾನಕ್ಕೆ ನಾವು ಶಿಶುವಾಗೋಣ.


No comments:

Post a Comment