Sunday, March 3, 2013

ಅಪ್ಪ ಅಮ್ಮನೆಂಬ ಉದಾತ್ತ ಭಾವ



ನಿತ್ಯ ಸಂಧ್ಯೆಯಲ್ಲಿ ಒಂದು ಸಂಕಲ್ಪ ಮಂತ್ರವಿದೆ, ಮಮೋಪಾತ್ತ ದುರಿತಕ್ಷಯದ್ವಾರ ಪರಮೇಶ್ವರ ಪ್ರೀತ್ಯರ್ಥಂ.... ಎನ್ನುತ್ತಾ ಗಾಯತ್ರೀ ಜಪದ ಸಂಕಲ್ಪವನ್ನು ಮಾಡುತ್ತೇವೆ. ಅಂದರೆ ನಮ್ಮ ದುರಿತಗಳು ಕಷ್ಟಗಳು ಕ್ಷಯಿಸಲಿ ಎಂದು ಪರಮೇಶ್ವರನ ಪ್ರೀತಿಗಾಗಿ,,,ಎಂದರ್ಥ ಎಷ್ಟು ಜನ ಇದನ್ನು ಅರ್ಥವಿಸಿ ಹೇಳುತ್ತಾರೋ? ಒಟ್ಟು ಅರಿಯದ ಮಂತ್ರವಾಗಿ ಒಂದಷ್ಟು ವಟಗುಟ್ಟುತ್ತ ಹೇಳುತ್ತಾರೆ. ಅದೆಲ್ಲ ಇಲ್ಲಿ ಅಪ್ರಸ್ತುತ. ಇಲ್ಲಿ ಪ್ರಸ್ತುತವಾಗುವುದು , ಹಲವು ಸಲ ನಮ್ಮ ಉದಾತ್ತ ತತ್ವಗಳು ಎಷ್ಟು ಸರಳವಾಗಿ ಬಿಂಬಿಸಲ್ಪಟ್ಟಿದೆ ಎಂಬುದು, ಇದು ಬಹಳ ಆಶ್ಚರ್ಯವಾಗುತ್ತದೆ. ನಾವೇನು ಎಂದು ಅರಿವಾದರೂ ಮಕ್ಕಳು ಕಣ್ಣ ಮುಚ್ಚೆ ಆಡಿದಂತೆ ಅದರತ್ತ ಗಮನವೇ ಹರಿಸುವುದಿಲ್ಲ. ನಾವು ಮಗುವಾಗಿ ಅಮ್ಮನ ಮಡಿಲ ತುಂಬುವಾಗ ನಮ್ಮಮ್ಮ ನಮ್ಮನ್ನು ಅಪ್ಪನಿಗೆ ತೋರಿಸಿ ಮುದ್ದಿಸಿಬಿಡುತ್ತಾಳೆ. ಅಪ್ಪ ಅಮ್ಮನನ್ನೂ ಮಗುವನ್ನು ಒಟ್ಟಾಗಿ ಪ್ರೀತಿಯಿಂದ ನೋಡುತ್ತಾನೆ. ಲೋಕ ಸಂಬಂಧೀ ಉದಾತ್ತತೆ ಆರಂಭವಾಗುವುದು ಇಲ್ಲಿಂದಲೇ. ಈ ತ್ರಿಕೋನ ಸಂಬಂಧ ಹಲವು ವಿಧದಲ್ಲಿ ತತ್ವರೂಪದಲ್ಲಿ ಕಂಡು ಬರುತ್ತವೆ. ಇಲ್ಲವಾದರೆ ಪರಮೇಶ್ವರನ ಪ್ರೀತ್ಯರ್ಥ . ಗಾಯತ್ರೀ ಜಪ ಹೇಗಾಗಲು ಸಾಧ್ಯ?

ಗಾಯತ್ರೀ ಜಪದ ಸಂಕಲ್ಪದಲ್ಲಿ ಪರಮೇಶ್ವರನ ಪ್ರೀತಿ ಅಡಗಿರುವ ತಾತ್ಪರ್ಯ ಬಹಳ ಸರಳವೂ ವಿಚಿತ್ರವೂ ಆದ ಉದಾತ್ತತೆ. ಪರಮೇಶ್ವರ ಅಂದರೆ ಲೋಕದದ ತಂದೆ. ಜಗದೀಶ್ವರ. ಅವನ ಮಡದಿ ಅಂದರೆ ನಮ್ಮ ತಾಯಿ ಗಾಯತ್ರಿದೇವಿ. ಒಂದು ಕುಟುಂಬ ಚಿತ್ರದಲ್ಲೂ ಹಾಗೆ. ನಮ್ಮ ಅಮ್ಮನ ಸೆರಗು ಹಿಡಿದರೆ ಅಪ್ಪ ತನ್ನಿಂತಾನಾಗಿ ಒಲಿಯುತ್ತಾನೆ. ಅಮ್ಮನ ಒಲವು ಗಳಿಸುವುದು ಸುಲಭ. ಅಮ್ಮನ ಪ್ರೀತಿ ಹರಿಯುವ ತೊರೆಗೆ ಅಡೆತಡೆಗಳು ಇಲ್ಲ. ಸುತ್ತು ಬಳಸಿ ಈ ತೊರೆ ಹರಿಯುವುದಿಲ್ಲ. ನೇರವಾಗಿ ನಮ್ಮ ಹೃದಯಕ್ಕೆ ಹರಿಯುತ್ತದೆ. ಅಪ್ಪನ ಪ್ರೀತಿಗೆ ಇದೊಂದು ಉಪಾಧಿಯಾಗಿ ಕಂಡಾಗ ಒಂದು ಸಂತೃಪ್ತ ಕುಟುಂಬದ ಸಂಬಂಧ ಅರಿವಾಗುತ್ತದೆ. ಒಂದು ಕೌಟುಂಬಿಕ ಜೀವನದ ಸ್ಥಿರತೆ ಅಪ್ಪನೊದಗಿಸಿದರೆ ಅಮ್ಮ ಅದಕ್ಕೆ ಪೋಷಣೆಯಾಗುತ್ತಾಳೆ. ನಮ್ಮ ಮತ್ತು ಅಪ್ಪನ ನಡುವಿನ ಸಂಬಂಧ ಜೀವನದ ಭಗವತ್ ಸಂಬಂಧ ಇದ್ದ ಹಾಗೆ.

ಜೀವನದಲ್ಲಿ ಯಾವುದೇ ಉಪಾಸನೆ ಅದು ಭಗವಂತನ ಕಡೆಗೆ. ಉತ್ತಮ ಜೀವನವನ್ನು ಹೊಂದುವುದು ಉಪಾಸನೆ ಇದ್ದಂತೆ. ಉತ್ತಮ ಜೀವನಕ್ಕೆ ಹಲವು ಅನುಕೂಲಗಳು ನಮ್ಮಮುಂದಿರುತ್ತವೆ. ಅದು ಭಂಡವಾಳ ಇಲ್ಲದ ವ್ಯಾಪಾರದಂತೆ. ಭಂಡವಾಳ ಇದ್ದರೂ ಅದು ಅಂತರಂಗದ ಮನೋಭಾವ ಮಾತ್ರವೇ ಭಂಡವಾಳವಾಗಿರುತ್ತದೆ. ಒಂದು ಪರಿಶುದ್ದ ದೇಹ ಹೊಂದಿರುವುದಕ್ಕೆ ಕೆಲವೊಮ್ಮೆ ಕಷ್ಟವಾಗುತ್ತದೆ. ಅದು ಅಸಾಧ್ಯವೂ ಆಗಬಹುದು. ಆದರೆ ಒಂದು ಪರಿಶುದ್ದ ಮನಸ್ಸು ನಮ್ಮದಾಗುವುದಕ್ಕೆ ಯಾವುದೇ ಕಷ್ಟವಾಗುವುದಿಲ್ಲ. ನಮ್ಮ ಚಿಂತೆಗೆ ಪರರನ್ನು ಹೊಣೆಯಾಗಿಸದ ಮನಸ್ಸು ನಮ್ಮದಾಗಬೇಕು ತಾತ್ಪರ್ಯ ಒಂದು ಮನಸ್ಸು ಉತ್ತಮ ಜೀವನದ ಭಂಡವಾಳವಾಗಬಹುದು. ಅ ದ್ವಾರಾ ಭಗವಂತನ ಉಪಾಸನೆಯಲ್ಲಿ ತೊಡಗಬಹುದು. ನಾವು ನಮ್ಮಮ್ಮನನ್ನು ಪ್ರೀತಿಸುವುದು ಇಲ್ಲಿಯ ಪ್ರೀತಿಯ ಭಂಡವಾಳವನ್ನು ತೊಡಗಿಸಿ ಅಮ್ಮನ ಮಮತೆ ಗಳಿಸಿ ಅಪ್ಪನ ಒಲವನ್ನು ಸಂಪಾದಿಸುತ್ತೇವೆ. ಸಾಮಾನ್ಯವಾಗಿ ಅಪ್ಪ ಪರೋಕ್ಷವಾದ ಮಾರ್ಗದ ಗುರಿಯಾದರೆ ಅಮ್ಮ ನಮ್ಮ ರಸ್ತೆಗೆ ನೇರವಾಗಿ ನಿಂತಿರುತ್ತ ಅಪ್ಪನ ಮಾರ್ಗದ ರುಚಿಯನ್ನು ತೋರಿಸುತ್ತಾಳೆ. ಸಂಧ್ಯ ಕರ್ಮಗಳಾಗಲೀ ಇನ್ನಿತರ ನಿತ್ಯ ಧ್ಯಾನ ಆಹ್ನಿಕಗಳಾಗಲೀ ಇದೇ ತತ್ವದ ಮೇಲೆ ನಿಂತಿರುತ್ತದೆ. ಜೀವನ ಕ್ರಮದ ಭಿನ್ನತೆ ಇದ್ದರೂ ಇದರ ಮೂಲ ತತ್ವಭಾವವೂ ಒಂದೇ. ಅದೇ ಉದಾತ್ತವಾಗಿ ನಮ್ಮೆದುರು ನಿಂತಿದೆ.

ನಮ್ಮ ಅಪ್ಪ ಅಮ್ಮ ನಮಗಾಗಿ ಏನೂ ಮಾಡಿಲ್ಲ. ಎಲ್ಲ ನಾವೇ ಮಾಡಿದ್ದೇವೆ ಎಂಬ ಭಾವ ಹಲವು ಸಲ ಕಾಡುತ್ತದೆ. ಪಿತೃ ಕರ್ಮ ಅನಿವಾರ್ಯವಾಗುವಾಗಲೂ ಈ ಭಾವದಿಂದ ಹೊರಗೆ ಬಾರದೇ ಟಿಕೇಟ್ ಇಲ್ಲದ ಕೌಂಟರ್ ಮುಂದೆ ನಿಂತಂತೆ ನಿಂತಿರುತ್ತೇವೆ. ಲೌಕಿಕ ಪ್ರಪಂಚದ ಭಾವ ಇದು. ಮಕ್ಕಳ ಶಾಲಾ ಅಳತೆ ಪಟ್ಟಿಯ ( ಸ್ಕೇಲ್ ನ) ಎರಡು ಭಾಗದಲ್ಲು ಸ್ವಲ್ಪ ಜಾಗ ಖಾಲಿ ಇದ್ದು ಆನಂತರ ಅಳತೆಗಳ ಮೌಲ್ಯ ಗುರುತಿಸಿದಂತೆ ಹುಟ್ಟಿದ ನಂತರದ ಬದುಕು ಅರಂಭದಲ್ಲೂ ಅಂತ್ಯದಲ್ಲೂ ಸ್ವಲ್ಪ ಜಾಗ ಖಾಲಿ. ಅ ಖಾಲಿಯಾದ ಜಾಗವೇ ಸ್ಥಾಯಿಯಾಗಿ ಅರಂಭದಲ್ಲು ಅಂತ್ಯದಲ್ಲೂ ಜೀವನದ ಎಲ್ಲವೂ ಆಗಿರುತ್ತದೆ ಎಂಬ ಅರಿವೇ ನಮಗಾಗುವುದಿಲ್ಲ. ಖಾಲಿಯಾದರೂ ಅಪ್ಪ ಅಮ್ಮ ಈ ಖಾಲಿಯಾದ ಸ್ಥಾನವಾದರೂ ಎಲ್ಲವೂ ಅಗಿರುತ್ತಾರೆ. ಖಾಲಿಯಿಂದ ಆರಂಭಿಸಿ ನಂತರ ಹಲವು ಸಂಭಂಧಗಳನ್ನು ಹುಟ್ಟಿಸುತ್ತ ಆ ಸಂಬಂಧಗಳೊಳಗೆ ಸುತ್ತಾಡಿ ಬಿಡುತ್ತೇವೆ. ಗತಿಸಿದ ಹಿರಿಯರ ಸಂಬಂಧವನ್ನು ಕಲ್ಪಿಸಿದರೆ ನಮ್ಮ ಸಂಭಂಧದ ಶೂನ್ಯತೆ ಅರಿವಾಗುತ್ತದೆ. ಆ ಜೀವ ಸಂಭಂಧ ಸಿಗದೆ ತಡಕಾಡುವಂತಾಗುವುದಿಲ್ಲವೇ. ಖಾಲಿಯಿಂದ ಆರಂಭವಾದ ಜೀವನದ ಅಳತೆ ಪಟ್ಟಿ ಮತ್ತೆ ಅದರಲ್ಲೇ ಮುಂದುವರಿಸುತ್ತೇವೆ. ನಿಮ್ಮ ಅಮ್ಮನನ್ನು ನೀವು ಪ್ರೀತಿಸುವಲ್ಲಿ ಅಪ್ಪನ ಸ್ವಾರ್ಥವೂ ಇದ್ದಲ್ಲಿ ಸುಂದರ ಕುಟುಂಬದ ಪರಿಕಲ್ಪನೆಯಾಗುತ್ತದೆ.

ಒಬ್ಬರು ಗಣಪತಿಯನ್ನು ಸ್ತುತಿಸಬಹುದು ಮತ್ತೊಬ್ಬ ಕೃಷ್ಣನನ್ನೋ ಈಶ್ವರನನ್ನೋ ಅಥವಾ ಸುಬ್ರಹ್ಮಣ್ಯನನ್ನು ಹೀಗೆ ಅವರವರ ಮನಸ್ಸಿಗೆ ಇಷ್ಟವಾದಂತೆ ದೇವರನ್ನು ಇಷ್ಟ ದೈವ ಎಂದು ಸ್ತುತಿಸಬಹುದು. ಎಲ್ಲವೂ ಒಂದೇ ಎಂಬ ಭಾವ ನಿಜವಾಗುವುದು ಈ ಎಲ್ಲ ಸ್ಥಾನಗಳು ಭಗವಂತ ಸಾನ್ನಿಧ್ಯದ ಉಪಾಧಿಗಳು ಎಂದು ತಿಳಿಯುವಾಗ . ನಮ್ಮ ಆತ್ಮವನ್ನು ಸದಾ ಜಾಗ್ರತವಾಗಿರಿಸುವಲ್ಲಿ ಮತ್ತು ಭಗವಂತನ ಗಮ್ಯವನ್ನು ಸೇರುವಲ್ಲಿ ಎಲ್ಲವೂ ಸಹಕರಿಸುತ್ತವೆ. ನಿತ್ಯ ಭಗವಂತನ ಸ್ಮರಣೆಯನ್ನು ಮಾಸದಂತೆ ಈ ಸ್ಥಾನಗಳಲ್ಲಿ ಅರಿಕೆಯನ್ನು ನಾವು ಮಾಡುವುದಷ್ಟೇ.

ನನ್ನಮ್ಮನಲ್ಲೂ ಅಷ್ಟೇ, ಅಮ್ಮನನ್ನು ಕಂಡಲ್ಲಿ ಅಪ್ಪನನ್ನು ಕಂಡ ಅನುಭವ. ಪಂಚ ಭೂತಗಳಿಂದ ಆವೃತವಾದ ಈ ಶರೀರಕ್ಕೆ ಅಮ್ಮ ಒಂದು ರಹದಾರಿಯಂತೆ. ಆ ಅಮ್ಮನ ಸ್ಥಾನ ಪೂಜನೀಯವಾಗಿ ಅಪ್ಪನನ್ನು ಸ್ಮರಿಸುವುದು. ಅಪ್ಪ ಜತೆಗಿಲ್ಲ ಆ ಭಗವಂತನೇ ಜನಕನಾಗಿ ಅದಕ್ಕೆ ಅಮ್ಮ ಪೂರಕವಾದ ಮಾರ್ಗವಾಗಿಬಿಡುತ್ತಾಳೆ. ಅಮ್ಮನಲ್ಲಿ ದೈವತ್ವವನ್ನು ಕಾಣುವ ಬಗೆಯಿದು.

ಹಲವು ಸಲ ಭಗವಂತನ ಸ್ಥಾನವನ್ನೂ ಭಗವಂತನೇ ಬದುಕಿನಲ್ಲಿ ಕಲ್ಪಿಸಿಕೊಡುತ್ತಾನೆ. ಮೊದಲಾಗಿ ಹೆತ್ತವ್ವೆ ನಂತರ ತಂದೆ. ಇವುಗಳಲ್ಲದೇ ಕೆಲವೊಮ್ಮೆ ದೈವ ಕಲ್ಪ ಬೇರೆಬಗೆಯಲ್ಲಿ ಆಗುವುದುಂಟು. ಅದನ್ನು ಗುರುತಿಸುವ ಕಣ್ಣಿರಬೇಕು. ನನ್ನ ಮಡದಿಯ ಸ್ಥಾನವನ್ನು ತುಂಬಿಸಿದ ನನ್ನತ್ತೆ. ವಾಸ್ತವದಲ್ಲಿ ಅತಿಶಯ ಅನ್ನಿಸಿದರೂ, ಗಂಭೀರನಾಗಿ ಹೇಳಬಲ್ಲೆ ಭಾವದಿಂದಲೂ ಕಲ್ಪದಿಂದಲೂ ನನ್ನ ಶ್ರೇಯಸ್ಸನ್ನು ಬಯಸಿದ್ದಲ್ಲದೇ ಬೇರೇನೂ ಇಲ್ಲ. ಈ ಸ್ವಾರ್ಥ ಪ್ರಪಂಚದಲ್ಲಿ ಹಲವು ವ್ಯಕ್ತಿತ್ವ ದರ್ಶನವಾಗುವುದುಂಟು. ಅದನ್ನೆಲ್ಲ ಕಣ್ಣಾರೆ ಕಂಡಾಗ ನಿಜವಾಗಿ ಅನ್ನಿಸುತ್ತದೆ ನನ್ನತ್ತೆ ಜಗನ್ಮಾತೆ. ಹೀಗೆ ಭಗವಂತ ಎರಡು ಸ್ಥಾನಗಳನ್ನು ಹೆತ್ತವ್ವೆಯ ರೂಪದಲ್ಲಿ ಮತ್ತು ಅತ್ತೆಯ ರೂಪದಲ್ಲಿ ತೋರಿಸಿಕೊಟ್ಟಾಗ ಅನಿಸುವುದು ಅವರಿಗಾಗಿ ನಾನೇನು ಮಾಡಬಲ್ಲೆ? ನನ್ನ ದುಗುಡ ದುಮ್ಮಾನಗಳನ್ನು ಬದಿಗಿರಿಸಿ ನನ್ನ ನಿಜರೂಪವನ್ನಷ್ಟೇ ತೋರಬಲ್ಲೇ. ಐಹಿಕ ಜಗತ್ತಿನ ಈ ಪ್ರಾಪಂಚಿಕ ಸಂಪತ್ತನ್ನು ನನ್ನ ಮೂಲಕ ಬಯಸದ ಆ ಮನಸ್ಸು.. ಭಗವಂತನೂ ಅದೇ ಎಲ್ಲವೂ ಅವನದೇ ಆಗಿರುವಾಗ ಅವನು ಬಯಸುವುದೇನು ಬಂತು. ಅದಕ್ಕಾಗಿ ಅತ್ತೆ ಮನೆಗೆ ಹೋದರೆ ಬೇರೆಲ್ಲೂ ಹೋಗದೆ ಅಲ್ಲೆ ಪಟ್ಟಾಗಿ ಕುಳಿತು ಬಿಡುತ್ತೇನೆ. ಇದ್ದ ಅಷ್ಟು ಹೊತ್ತು ಜತೆಯಾಗಿ ಕಳೆಯುವ ಯತ್ನ ಮಾಡುತ್ತೇನೆ. ಯಾಕೆ? ಹೆತ್ತವ್ವೆಯ ಸಾನ್ನಿಧ್ಯ ನಿತ್ಯ ಮನೆಯಲ್ಲಿ ದೊರಕುತ್ತದೆ. ಹಾಗಾಗಿ ಈ ಸ್ಥಾನ ಸಿಗುವಾಗ ಅದರಿಂದ ವಂಚಿತನಾಗಲಾರೆ. ಈ ಭಗವತ್ಕಲ್ಪ ಸ್ಥಾನಗಳು ಭಗವಂತನ ಹಾದಿಯನ್ನು ಸ್ಪಷ್ಟಗೊಳಿಸುತ್ತವೆ.

ಪರಮೇಶ್ವರನ ಪ್ರೀತಿಗಾಗಿ ಗಾಯತ್ರೀ ಜಪ ಹೇಗೆ ಪ್ರಸ್ತುತವಾಗುವುದೋ ಹಾಗೆ ಉದಾತ್ತ ತತ್ವಗಳು ಜೀವನದುದ್ದಕ್ಕೂ ತಾರೆಗಳಂತೆ ಗೋಚರಿಸುತ್ತ ಇರುತ್ತದೆ. ನಮ್ಮ ಗಮನ ಅತ್ತ ಹರಿಸಬೇಕು ಆಷ್ಟೇ.




No comments:

Post a Comment