Saturday, November 23, 2013

ಕೇಕ್ ನಲ್ಲಿ ಕಂಡ ವೇದಾಂತ


ಒಂದು ಮಗುವಿನ ಹುಟ್ಟು ಹಬ್ಬ ಸಮಾರಂಭ. ಬಹಳಷ್ಟು ಜನ ಅಭ್ಯಾಗತರು ಆಗಮಿಸಿದ್ದರು. ಸಹಜವೆಂಬಂತೆ ಮಗುವಿನಿಂದ ತುಂಡರಿಸಲು ದೊಡ್ಡದಾದ ಕೇಕ್ ಒಂದನ್ನು ತಂದಿರಿಸಿದ್ದರು. ಕೇಕ್ ನೋಡಲು ಬಹಳ ಸುಂದರವಾಗಿತ್ತು. ಬಣ್ಣ ಬಣ್ಣದ ಹೂವಿನ ಆಕಾರದಲ್ಲಿ ಮಾಡಿದ ಕೇಕ್ ವೈವಿಧ್ಯಮಯ ರುಚಿಯನ್ನು ತನ್ನಲ್ಲಿ ಅಡಗಿಸಿತ್ತು. ಕೇಕ್ ನ ಒಂದೊಂದು ಅಂಗವೂ ಬೇರೆ ಬೇರೆ ಬಣ್ಣದಿಂದ ರುಚಿಯಿಂದ ಕೂಡಿತ್ತು.  ಈ ಕೇಕ್ ನಲ್ಲಿ ವೇದಾಂತವೇ? ಹೌದು ? ಮಗು ಅದನ್ನು ಕತ್ತರಿಸಿ ಒಬ್ಬೊಬ್ಬರಿಗೆ ಹಂಚಿದಾಗ, ಬಂದವರು ತಮಗೆ ಸಿಕ್ಕಿದ ತುಂಡನ್ನು ಸಂತೋಷದಿಂದ ಆಪ್ಯಾಯಮಾನವಾಗಿ ತಿನ್ನುವುದನ್ನು ಕಂಡಾಗ ನಿಗೂಢವಾದಂತೆ ಬಾಸವಾದ ವೇದಾಂತ ಒಂದು ಕಂಡ ಅನುಭವವಾಯಿತು.

ನಿಜಕ್ಕೂ ಪ್ರಕೃತಿ ಎಂದರೆ ಹೀಗೇನೆ. ಜೀವನದ ಹಿರಿದಾದ ತತ್ವಗಳು ಬಹಳ ಸರಳವಾಗಿ ಕಂಡು ಬರುತ್ತವೆ ಅದನ್ನು ಕಂಡುಕೊಳ್ಳುವ ಬಗೆಯಲ್ಲಿ ಉಂಟು.  ಆ ಒಂದು ಕೇಕ್ ಪೂರ್ಣವಾಗಿ ಭಗವಂತನ ರೂಪದಲ್ಲಿ. ಹೌದಲ್ಲ?. ಅದು ಹೇಗೆ? ಬಹಳ ಸರಳವಾಗಿದೆ.

ಬೃಹದಾಕಾರದ ಕೇಕ್ ಕತ್ತರಿಸಿ ಒಬ್ಬೊಬ್ಬರಿಗೆ ಬೇರೆ ಬೇರೆ ರೂಪದಲ್ಲಿ ಹಂಚಿದಂತೆ ಭಗವಂತನ ದರ್ಶನವಾಗುವುದಿಲ್ಲವೆ. ಇಲ್ಲಿ ಕೇಕ್ ನ ತುಂಡು ಬೇರೆ ಬೇರೆ ರೂಪದಲ್ಲಿ ಸಿಕ್ಕಿದಾಗ ತಮ್ಮ ಕೈಗೆ ಸಿಕ್ಕಿದ್ದನ್ನು ಖುಷಿಯಿಂದ ಸ್ವೀಕರಿಸಿ ತೃಪ್ತಿಯಿಂದ ತಿಂದು ಆ ಸ್ವಾದವನ್ನು ಸವಿದಂತೆ. ಕೇಕ್ ನ ಅಲಂಕಾರದಲ್ಲಿದ್ದ  ಹೂವಿನ ಭಾಗ ಒಬ್ಬನಿಗೆ ಸಿಕ್ಕಿದರೆ ಅದರ ಎಲೆಯ ಭಾಗ ಇನ್ನೊಬ್ಬನಿಗೆ ಹಾಗೆ ಅಲ್ಲಿ ಚಿತ್ರಿಸಿದ ಹಣ್ಣು ಅಥವಾ ಇನ್ನೊಂದು ಬಗೆಯ ಹೂವು ಮತ್ತೊಬ್ಬನಿಗೆ. ಹೀಗೆ ದೊಡ್ಡದಾದ ಕೇಕ್ ನ ವಿವಿಧ ಅಂಗಗಳು ವಿವಿಧ ರೂಪದಲ್ಲಿ ಕೈ ಸೇರಿದಾಗ ಒಂದು ವೇದಾಂತ ಸರಳ ಸಿದ್ಧಾಂತ ಗೋಚರವಾಯಿತು. ವಿವಿಧ ಜಾತಿ ಪಂಗಡಗಳಿಗೆ ಬೇರೆ ಬೇರೆ ಮನೋಭಾವಕ್ಕೆ ಕಂಡು ಬರುವ ಭಗವಂತನಂತೆ ಆ ಕೇಕ್ ಕಂಡು ಬಂತು. ಭಗವಂತನೋಬ್ಬನೇ..ದೇವರೊಬ್ಬನೇ ರೂಪ ಹಲವು ಕಾಣುವ ಭಾವ ಹಲವು. ಅದು ಇಲ್ಲಿ ಭಾಸವಾಯಿತು. ನಮ್ಮ ಕೈಗೆ ಬಂದ ಕೇಕ್ ನ ತುಂಡನ್ನು ಸ್ವೀಕರಿಸಿದಂತೆ ಪೂರ್ಣ ಕೇಕ್ ನ ಸ್ವಾದವನ್ನು ಆ ಒಂದು ತುಂಡಿನಲ್ಲಿ ಅನುಭವಿಸುವುದಿಲ್ಲವೇ?

ಭಗವಂತನೂ ಇದೇ ರೂಪದಲ್ಲಿ ಪಡೆದು ನಾವು ಜೀವಿಸುತ್ತೇವೆ. ಒಬ್ಬನಿಗೆ ಹರನಾಗಿ ಇನ್ನೊಬ್ಬನಿಗೆ ಹರಿಯಾಗಿ.. ರಾಮನಾಗಿ ಕೃಷ್ಣನಾಗಿ  ಕುಮಾರನಾಗಿ ಗಣಪತಿಯಾಗಿ, ಅದೆಷ್ಟು ಬಗೆಯಲ್ಲಿ? ದಶಾವತಾರಿಯಾದ ಶ್ರೀಮನ್ನಾರಾಯಣ ಮೂಲತಃ ಒಂದುಭಾವ ರೂಪ ಹಲವು ಎಂದು ತೋರಿದನಲ್ಲವೇ. ಶಿವನಾದರೂ ತನ್ನ ಹಲವು ಬಗೆಯ ನಾಮಸದೃಶ ರೂಪದಿಂದ ಅನುಗ್ರಹಿಸುವುದಿಲ್ಲವೇ. ಮಂಜುನಾಥನಾಗಿ ರುದ್ರನಾಗಿ ಶಿವನಾಗಿ ಹೀಗೆ ಪರಮಾತ್ಮ ದರ್ಶನಕ್ಕೆ ರೂಪ ಹಲವು. ದೇವಿಯಾಗಿ ಲಕ್ಷ್ಮಿಯಾಗಿ ಶಾರದೆಯಾಗಿ ಅಂಬಿಕೆಯಾಗಿ ಮಹಾಮಾಯೆಯ ರೂಪ ಹಲವು. ಸರ್ವರೂಪವೂ ಮೂಲದಲ್ಲಿ ಒಂದಾಗಿ ನಮ್ಮ ಭಾವಕ್ಕೆ ಭಿನ್ನವಾಗಿ ಕಂಡಂತೆ. ಮನಕೊಬ್ಬ ಮನೆಗೊಬ್ಬ ದೇವರು. ಕೌಟುಂಬಿಕವಾಗಿ ಕಂಡುಕೊಳ್ಳುವ ವೈವಿಧ್ಯಮಯ ದೇವರರೊಬ್ಬನೇ.  ಒಬ್ಬರಿಗೆ ಕುಲದೇವರು ಸುಬ್ರಹ್ಮಣ್ಯನಾದರೆ ಇನ್ನೊಬ್ಬರಿಗೆ ಉಗ್ರನರಸಿಂಹ ಮತ್ತೊಬ್ಬರಿಗೆ ದುರ್ಗೆ..ವಿಷ್ಣು ರುದ್ರ ...ಅಹಾ ಈ ವೈವಿಧ್ಯಕ್ಕೆ ಏಣೆಯುಂಟೆ?

ಇದು ಕೇವಲ ಒಂದು ಸಂಸ್ಕೃತಿಗೆ ಸೀಮಿತವಾಗಿಯಲ್ಲ. ಹಿಂದು ಮುಸ್ಲಿಂ ಕ್ರೈಸ್ತ ಪ್ರಪಂಚದ ಎಲ್ಲ ಜೀವರಾಶಿಗೂ ವಿವಿಧತೆಯಲ್ಲಿ ಮೂಲ ಭಗವಂತನೋಬ್ಬನೇ? ಹುಟ್ಟುವಾಗ ಹುಟ್ಟಿದ ಜನ್ಮಗರ್ಭವನ್ನು ಅನುಸರಿಸಿ ನಮಗೆ ಸಿಗುವ ಭಗವಂತನ ರೂಪ ಬೇರೆ ಬೇರೆ. ಕೇಕ್ ನ ತುಂಡಿನಂತೆ. ಅದು ಹೂವಾಗಿ ಹಣ್ಣಾಗಿ ಎಲೆಯಾಗಿ ಎನೂ ಇಲ್ಲ ಬರಿ ತಿನಿಸಾಗಿ ಏನಾದರೇನೂ ಮೂಲರೂಪದ ಭಾವವೊಂದೇ? ಇಲ್ಲಿ ಹಿರಿತನದ ವಾದವಿಲ್ಲ. ಮೂಲ ರೂಪದ ತಿನಿಸನ್ನು ವಿವಿಧ ರೂಪದಲ್ಲಿ ಸವಿದಂತೆ ಪರಮಾತ್ಮ. ಇಲ್ಲಿ ನಮ್ಮ ಕೈಗೆ ಬಂದ ಕೇಕ್ ನ ಭಾಗವನ್ನು ನಾವೇಷ್ಟು ವಿಶ್ವಾಸದಿಂದ ಸವಿಯುತ್ತೇವೆ? ಇದು ನನ್ನದು ಎಂಬ ಭಾವದಲ್ಲಿ ಬಾಯಿಗಿರಿಸಿ ಮಧುರಾನುಭವವನ್ನು ಹೊಂದುತ್ತೇವೆ. ವಾಸ್ತವದಲ್ಲಿ ಭಗವಂತನ ತತ್ವವೂ ಇದಕ್ಕೆ ಭಿನ್ನವಾಗಿಲ್ಲ.

ಹಿಂದುವಾಗಲಿ ಮುಸ್ಲಿಂ ನಾಗಲೀ ಇನ್ನಾವುದೇ ಜಾತಿಯಾಗಲೀ ಹೆಚ್ಚೇಕೆ ಈ ಜೀವರಾಶಿಯ ಒಂದು ಪ್ರಾಣಿಯಾಗಲಿ ಪಡೆಯುವ ಭಗವಂತನ ರೂಪ ಹಲವಿರಬಹುದು. ಆದರೆ ಮೂಲದಲ್ಲಿರುವ ಆ ಸ್ವಾದ ಅದೊಂದೇ. ಅದು ಪರಮಾತ್ಮ. ಇದನ್ನು ಅರಿಯದೇ ನಮ್ಮದು ಶ್ರೇಷ್ಠ ಎಂದು ನಮ್ಮ ಕೈಗೆ ಬಂದ ಕೇಕ್ ತುಂಡನ್ನು ನಾವು ಹೇಳಿಕೊಂಡು ಹೋಗುವುದು ಅರ್ಥಹೀನ. ಅಲ್ಲಿ ನಾವು ಅಪ್ಯಾಯ ಮಾನತೆಯಿಂದ ಬಾಯಿಗಿಟ್ಟು ರುಚಿಯನ್ನು ಸವಿದಂತೆ ಭಗವಂತ. ಲೋಕೋ ಭಿನ್ನ ರುಚಿ ಎಂಬಂತೆ ಹುಟ್ಟಿದಮೇಲಿನ ವಿವಿಧ ಭಾವಕ್ಕೆ ಅನುಸರಿಸಿ ಕಾಣುವ ಭಗವಂತನ ರೂಪವೂ ಹಲವು.

ವಿವಿಧತೆಯ ಭಾವ ಹಲವು ರೂಪ ಒಂದೇ ಎಂಬುದನ್ನು ಹಲವು ದೇವರನ್ನು ಪೂಜಿಸುವ ಹಿಂದುಗಳು ಮೊದಲೇ ಸ್ವೀಕರಿಸಿಯಾಗಿದೆ. ಹಿಂದುಗಳಲ್ಲಿ ಅದೆಷ್ಟು ದೇವರು ಎಂದು ಅದನ್ನು ನಿರ್ಲಕ್ಷ್ಯದಿಂದ ತಾತ್ಸಾರಿಸುವ ಹಾಗಿಲ್ಲ. ನಾಮ ರೂಪ ಹಲವು ಭಗವಂತನೊಬ್ಬನೇ ಎನ್ನುವ ಸಮಷ್ಟೀ ತತ್ವ ಪ್ರತಿಪಾದನೆ ಇಲ್ಲಿದೆ. ವೈಷ್ಣವವನೋ ಶೈವನೋ ಅಥವಾ ಇನ್ನಾವನೋ ಇಲ್ಲಿ ಹುಟ್ಟಿ ಬಂದ ಮೇಲೆ ಪಡೆದಂತಹ  ರೂಪ ಭಿನ್ನ. ಆ ಭಗವಂತ ತನ್ನ ರೂಪವನ್ನು ಪ್ರತೀ ಕೈಗೆ ಭಿನ್ನವಾಗಿ ದಯಪಾಲಿಸಿದ ಹಾಗೆ. ಕೇಕ್ ತುಂಡನ್ನು ನಮ್ಮ ಕೈ ಸ್ವೀಕರಿಸಿದ ಹಾಗೆ ಮತ್ತೆ ನಾವು  ಅದನ್ನೇ ನಂಬಿಕೊಂಡ ಹಾಗೆ ಭಗವಂತನನ್ನು ನಾವು ಅನುಸರಿಸಿತ್ತೇವೆ.  

ಕೈಗೆ ಬಂದ ಕೇಕ್ ತುಂಡನ್ನು ಸವಿದು ಅದರ ರುಚಿ ವರ್ಣಿಸುವುದಿಲ್ಲವೇ? ಈ ಭಾಗದ ರುಚಿ ಹೀಗಿದೆ. ಅಂತೇ ಇನ್ನೊಬ್ಬರಲ್ಲಿ ವಿಚಾರಿಸುತ್ತೇವೆ. ನಿಮ್ಮ ಕೈಗೆ ಸಿಕ್ಕಿದ ತುಂಡಿನ ರುಚಿ ಹೇಗೆ? ಕೆಲವೊಮ್ಮೆ ಅವರ ಕೈಯೊಳಗಿನ ತುಂಡಿನ ಕಿಂಚಿತ್ ಭಾಗವನ್ನೂ ನಾವು ಸವಿದೂ ನೋಡಿಬಿಡುತ್ತೇವೆ. ಜಾತಿ ಧರ್ಮದ ತಳ ಹದಿಯ ತತ್ವ ಇದೇ. ಮೂಲದಲ್ಲಿ ಒಂದೇ. ಎಲ್ಲವೂ ಕೈಯಿಂದ ಬಾಯಿಯೊಳಗೆ ನಾಲಗೆಗೆ ಬಿದ್ದ ಹಾಗೆ. ಸ್ವಾದದ ಅಭಿರುಚಿಯನ್ನು ಹೊಂದಿಕೊಂಡಿದೆ.

ಕೆಲವೊಮ್ಮೆ ಹೀಗೂ ಇರುತ್ತದೆ. ಈ ಕೇಕ್ ತುಂಡು ಹಂಚುವುದು, ಈ ಸಂಪ್ರದಾಯ ಇದೆಲ್ಲ ಮೂಢನಂಬಿಕೆ ಎಂದು ಈ ವೇದಾಂತದ ಹತ್ತಿರ ಕೆಲವರು ಸುಳಿಯುವುದೇ ಇಲ್ಲ. ತಾವು ಸವಿಯದೇ ಅದರ ಸ್ವಾದ ಇಷ್ಟೇ ಎಂದು ಲೆಕ್ಕ ಹಾಕಿ ಅಂದಾಜಿಸುವವರು ಇದ್ದಾರಲ್ಲವೇ? ಇನ್ನು ಕೆಲವರು “ ಕೇಕ್ ಸಸ್ಯಾಹಾರವಲ್ಲ” ಎಂದು ಅದನ್ನು ತಿನ್ನದೇ ಯುಕ್ತಿವಾದವನ್ನು ಹೇಳುವ ನಿರೀಶ್ವರವಾದಿಗಳೂ ಇರುತ್ತಾರೆ.

ಹೇಗೆ ಪೂರ್ಣವಾದ ಕೇಕ್ ನ್ನು  ನಾವು ಸವಿಯಲು ಸಾಧ್ಯವಿಲ್ಲವೋ ಅದರಂತೆ ಪೂರ್ಣವಾದ ಭಗವಂತನನ್ನು ಅರಿಯುವುದು ಸಾಧ್ಯವಾಗುವುದಿಲ್ಲ. ನಮ್ಮ ಅರಿವು ಏನಿದ್ದರೂ ನಮ್ಮ ಕೈಯೊಳಗೆ ಇದ್ದುದಕ್ಕೇ ಸೀಮಿತ.


Friday, November 8, 2013

ನಂಬಿಕೆಗೆ ಕೊನೆಯುಂಟೇ?


“ಆಗಮಾರ್ಥಂತು ದೇವನಾಂ ಗಮನಾರ್ಥಂತು ರಾಕ್ಷಸಾಂ ಕುರುವೆ ಘಂಟಾರವಂ ತತ್ರ ದೇವತಾಹ್ವಾನ ಲಕ್ಷಣಂ”
ಇದು ಘಂಟಾನಾದದ ಬಗ್ಗೆ ಇರುವ ಒಂದು ನಂಬಿಕೆ. ದೇವರನ್ನು ಸ್ವಾಗತಿಸುವುದಕ್ಕೆ ಅಥವಾ ಘಂಟಾನಾದ ಮೊಳಗಿದಲ್ಲಿ ದೇವರ ಅಸ್ತಿತ್ವ ಮೂಡಿ ಅಲ್ಲಿದ್ದ ಕ್ಷುದ್ರ ಶಕ್ತಿಗಳು ಅಂದರೆ ರಕ್ಕಸರು ನಿರ್ಗಮನ ವಾಗುತ್ತಾರೆ. ಹಾಗಾಗಿ ಘಂಟಾರವ ಎಲ್ಲಿರುತ್ತದೋ ಅಲ್ಲಿ ದೇವರ ಆಗಮನವಾಗಿ ಅಸುರಿ ಶಕ್ತಿ ನಿರ್ಗಮನವಾಗುತ್ತದೆ. ಇದು ಉಪಾಸಕನ ಒಂದು ನಂಬಿಕೆ.. ಅವರವರ ಮನಸ್ಸಿನ ನಂಬಿಕೆ ಅವರವರ ಮನದೊಳಗೆ ಇರುತ್ತದೆ. ಇನ್ನೊಬ್ಬರ ಮೇಲೆ ಹೇರುವ ಅನಿವಾರ್ಯತೆ ನಿಜವಾದ ಉಪಾಸಕನಿಗೆ ಇರುವುದೇ ಇಲ್ಲ ಆದರೆ ಅಸುರೀ ಶಕ್ತಿ ಪಾರಮ್ಯ ಮೆರೆದು ಆಳುವುದಕ್ಕೆ ತೊಡಗಿತು ಎಂದಾಗ.. ಉದಾಹರಣೆಗೆ ಪುರಾಣದಲ್ಲಿ ಬರುವಂತೆ ಮಹಿಷ, ಹಿರಣ್ಯಾಕ್ಷ ಹಿರಣ್ಯ ಕಷ್ಯಪು ಮುಂತಾದ ಅಸುರರಿಗೆ ಘಂಟಾರವ ಕೇಳಿದಾಗ ಅಲ್ಲಿರಲಾಗದೆ ಪಲಾಯನ ಮಾಡುವ ಪ್ರಮೇಯ ಉಂಟಾಗುತ್ತಿತ್ತು. ಆ ಸಮಯದಲ್ಲಿ ಅವರ ಅಳ್ವಿಕೆಯಲ್ಲವೇ ಒಂದು ಶಾಸನವನ್ನು ಮಾಡಿದರೂ ಗಂಟೆ ಬಾರಿಸುವುದು ಶಾಸನಾತ್ಮಕವಾಗಿ ಅಪರಾಧ. ಘಂಟೆಯ ದ್ವನಿಯಲ್ಲೂ ತೊಂದರೆ ಅನುಭವಿಸುವವರು ರಕ್ಕಸರೇ ಅಲ್ಲವೇ? ಅವರ ಆಡಳಿತದಲ್ಲಿ ಘಂಟಾರವ ನಿಷೇಧಿಸಲ್ಪಡುತ್ತದೆ.
ಮನುಷ್ಯ ಹುಟ್ಟಿದ ಕೂಡಲೇ ಅವನ ಜತೆ ಒಂದು ನಂಬಿಗೆಯ ಒಂದು ತಂತುವು ಉತ್ಪತ್ತಿಯಾಗುತ್ತದೆ. ಸ್ವಾಭಾವಿಕವಾಗಿ  ಹುಟ್ಟಿದ ಕೂಡಲೆ ಮಗುವಿಗೆ ಮೊದಲ ದರ್ಶನ ತನ್ನ ತಾಯಿಯದ್ದು. ಆನಂತರ ತಂದೆಯದ್ದು. ಆದರೆ ಆ ತಂದೆಯನ್ನು ತೋರಿಸುವುದು ಹೆತ್ತ ಅಮ್ಮ. “ ನೋಡು ಇದು ನಿನ್ನ ಅಪ್ಪ” ಮಗುವು ಅಷ್ಟೆ ಅಲ್ಲಿಂದ ನಂಬುಗೆ ಎಂಬ ಭಾವವನ್ನು ಬೆಳೆಸುತ್ತದೆ.ಯಾಕೆ ಅದಕ್ಕೆ ಅಮ್ಮನ ಮೇಲೆ ನಂಬಿಕೆ. ಅದು ಅದರ ಮನಸ್ಸಿನಲ್ಲಿ ಉಂಟಾಗುವ ಪ್ರೇರಣೆ. ಅಮ್ಮನನ್ನು ನಾನು ಹೇಗೆ ವಿಶ್ವಾಸದಿಂದ ಕಾಣಬಹುದೋ ಹಾಗೆ ಅಮ್ಮ ತೋರಿದ ವ್ಯಕ್ತಿ ನನ್ನ ಅಪ್ಪ.  ಈ ನಂಬಿಗೆ ಜೀವನ ಪರ್ಯಂತ ಉಳಿಯುತ್ತದೆ. ವಿಪರ್ಯಾಸವೆಂದರೆ ಭ್ರಾಂತಿಗೊಳಗಾದ ಪ್ರಪಂಚದಲ್ಲಿ  ಈ ನಂಬಿಕೆಯೂ ಮೂಢ ನಂಬಿಕೆ ಎಂದು ಕರೆಯಲ್ಪಟ್ಟರೆ ನಂಬಿಕೊಂಡು ಬಂದ ನಂಬಿಕೆಯನ್ನು ಹೇಗೆ ಹೊಸಕಿ ಹಾಕುವುದು?
ನಂಬಿಕೆ ವಿಶ್ವಾಸ ಅದು ಅಪರಾಧ ಎಂದು ಪರಿಗಣಿತವಾಗುವುದು ಯಾವಾಗ? ಆ ಭಾವನೆಯನ್ನು ಬಲವಂತವಾಗಿ ಹೇರಲ್ಪಟ್ಟಾಗ. ತನ್ನಮ್ಮ ಎಂದಂತೆ ಇವನು ತನ್ನಪ್ಪ ಎಂದು ಸ್ವತಃ  ನಂಬಿಕೊಳ್ಳುವುದು ಅದು ಅಪರಾಧವಾಗುವುದಿಲ್ಲ ಬದಲಾಗಿ ಇನ್ನೊಬ್ಬನಿಗೆ ಈ ನಂಬಿಕೆಯನ್ನು ಹೇರುವಾಗ... ಅವನ ನಂಬಿಕೆಯ ಬೇರನ್ನು ಅಲುಗಾಡಿಸುವಾಗ ಅದು ಅಪರಾಧವಾಗುತ್ತದೆ. ನಂಬಿಕೆಯ ಬೇರನ್ನು ಪ್ರಶ್ನಿಸುವಾಗ ಅದು ಅಪರಾಧವಾಗುತ್ತದೆ. ಈ ವೆತ್ಯಾಸದ ಸೂಕ್ಷ್ಮವನ್ನು ವಿದ್ಯಾವಂತರಾದವ ತನ್ನ ವಿದ್ವತ್ ಜ್ಞಾನದಿಂದ ಅರ್ಥೈಸಿಕೊಳ್ಳಬೇಕು.
“ನಾನು ದೇವರನ್ನು ನಂಬುತ್ತೇನೆ.  ನಾನು ಇಂತಹ ಶಕ್ತಿಯ ಅಸ್ತಿತ್ವದಲ್ಲಿ ವಿಶ್ವಾಸ ಇರಿಸಿದ್ದೇನೆ.” ಹೀಗೆ ದೇವರನ್ನು ನಂಬುವವನು ಅವನ ಪಾಡಿಗೆ ನಂಬಿಕೊಂಡರೆ ಅದನ್ನು ಎಷ್ಟೇ ಬಲವಂತವಾಗಿ ಶಿಕ್ಷಿಸಿ ಕಿತ್ತೆಸೆಯುವ ಪ್ರಯತ್ನ ಮಾಡಿದರೂ ಆ ಭಾವ ಅವನ ಮನದ ಮೂಲೆಯಲ್ಲಿ ಎಲ್ಲೋ ಇದ್ದೇ ಇರುತ್ತದೆ.  ಆದರೆ ಆತ ತಾನು ನಂಬಿಕೊಳ್ಳುತ್ತ ತನ್ನ ನಂಬಿಕೆಯನ್ನು ಪರರ ಮೇಲೆ ಹೇರಿದಾಗ ಅವನದ್ದು ಅಪರಾಧವಾಗುತ್ತದೆ. ಅಂತೆ ಈತನ ನಂಬಿಕೆಯನ್ನು ಬಲವಂತವಾಗಿ ಕಿತ್ತೆಸೆಯುವವನದ್ದು ಕೂಡ ಅಪರಾಧವಾಗುತ್ತದೆ. ಇದು ಸಾಮಾನ್ಯ ನ್ಯಾಯ. ಇದರ ಸೂಕ್ಷ್ಮ ವೇ ಅರ್ಥವಾಗದವನು ಇದನ್ನು ಮೂಢನಂಬಿಕೆ ಎಂದು ಕರೆದು ನಿಷೇಧಿಸಿದರೆ ಇದಕ್ಕೆ ಮೂರ್ಖತನ ಅಲ್ಲದೇ ಬೇರೆನು ಶಬ್ದವಿದೆ ಕರೆಯಲು?

ನಮ್ಮ ಮನೆಯಲ್ಲಿ ನಾವೊಂದು ನಿಯಮ ಮಾಡಿರುತ್ತೇವೆ. ನಮ್ಮ ಮನೆಯಲ್ಲವೇ. ....ಚಪ್ಪಲಿ ಹಾಕಿ ಒಳಗೆ ಬರಬಾರದು. ಮನೆಯೊಳಗೆ ಉಗುಳ ಬಾರದು. ಮನೆಯಲ್ಲಿ ನಾವು ಹೀಗೆಯೇ ಆಹಾರವನ್ನು ಸೇವಿಸುವುದು. ಅದು ಮನೆಯಲ್ಲಿ ಇರುವ ಎಲ್ಲ ಮಂದಿಯೂ ಒಪ್ಪಿಕೊಂಡು ಸಹಬಾಳ್ವೆಯನ್ನು ನಡೆಸುವಾಗ ಮನೆಯ ಹೊರಗಿದ್ದವನು ಅದನ್ನು ಅಕ್ಷೇಪಿಸುವುದು ಸಾಧ್ಯವಾಗುತ್ತದೆಯೇ? ಅವನು ಆ ಮನೆಯೊಳಗೆ ಪ್ರವೇಶಿಸಬೇಕಾದರೆ ಚಪ್ಪಲಿ ಕಳಚಿಯೇ ಪ್ರವೇಶಿಸಬೇಕು. ಅದು ಅವನ ಅಗತ್ಯವನ್ನು ಸಂಬಂಧಿಸಿ ಇರುತ್ತದೆ. ಹೊರತಾಗಿ ಆ ಮನೆಯ ನಿಯಮ ಅದು ಕಾನೂನು ಬಾಹಿರ ಎಂದರೆ ಏನನ್ನಬೇಕು? ಸಾರ್ವಜನಿಕ ನ್ಯಾಯಕ್ಕೂ ಒಂದು ಪರಿಧಿ ಎಂಬುದು ಇದೆಯಲ್ಲ? ಆ ಪರಿಧಿಯನ್ನು ಮೀರಿದಾಗ ಅದು ಸ್ವಾತಂತ್ರ್ಯ ಹರಣವಾಗುತ್ತದೆ. ಸರ್ವಾಧಿಕಾರವಾಗುತ್ತದೆ. ನಮ್ಮಹಸು ನಮಗೆ ಅಮೃತವನ್ನೇ ಕೊಡುತ್ತದೆ. ಅದು ನಮ್ಮ ನಂಬುಗೆ. ಅದು ವಿಷವನ್ನೇ ಕಕ್ಕುತ್ತದೆ ಎಂದು ಹೇಳೀದರೆ..ಹೇಳುವವರು ಹೇಳಲಿ ನಮ್ಮ ನಂಬಿಕೆ ನಮ್ಮ ಮನದ ಮೂಲೆಯಲ್ಲಾದರೂ ನಂಬಿಕೊಂಡು ಬರುತ್ತೇವೆ. ಇದುವೇ ಜೀವನದ ಅಂತರಂಗ ಸತ್ಯ.