Sunday, June 28, 2015

ಅಂಡಮಾನಿಗೊಂದು ಪಯಣ....


ಬೆಂಗಳೂರಿನಿಂದ ಬೇರೆಲ್ಲಿಗಾದರೂ ಹೋಗಬಹುದು ಆದರೆ ಮಂಗಳೂರಿಗೆ ಹೋಗುವುದು ಅಧ್ವಾನದ ವಿಚಾರವೇ ಆಗಿಬಿಟ್ಟಿದೆ. ಹರಿದು ಹರಿದು ಚಿಂದಿ ಸೀರೆಯಂತಾಗುವ ಶಿರಾಡಿ ಘಾಟಿ ರಸ್ತೆಯನ್ನು ರಿಪೇರಿಯ ನೆವನದಲ್ಲಿ ಎರಡುವರ್ಷಕ್ಕೊಮ್ಮೆ ಮುಚ್ಚಿದಾಗ ಮಂಗಳೂರೆಂದರೆ ದೂರದ ಅಂಡಮಾನ್ ದ್ವೀಪದ ಹಾಗೆ ಬೆಂಗಳೂರಿಗರಿಗೆ ಭಾಸವಾಗುತ್ತದೆ. ನೇರವಾಗಿ ಮಂಗಳೂರಿಗೆ ಹೋಗುವ ರಸ್ತೆಗಳಲ್ಲಿ ಒಂದು ಚಾರ್ಮಾಡಿ ಘಾಟ್ ರಸ್ತೆ ಇನ್ನೊಂದು ಮೈಸೂರು ಮಡಿಕೇರಿ ರಸ್ತೆ. ಎರಡರಲ್ಲಿ ಹೋದರೂ ನಿಗದಿತ ಸಮಯಕ್ಕೆ ಮುಟ್ಟುವ ಭರವಸೆಯೇ ಇರುವುದಿಲ್ಲ. ಅಥವಾ ನಿಗದಿತ ಸಮಯವನ್ನೇ ನಾವು ದೂರವಿಟ್ಟು ಬಿಡಬೇಕಾಗುತ್ತದೆ. ಇದು ಒಂದರ್ಥದಲ್ಲಿ ಗಂಡನಾದವನು ತನ್ನ ಹೆಂಡತಿಯನ್ನು ಅಂಕೆಯಲ್ಲಿಟ್ಟುಕೊಂಡ ಬಗ್ಗೆ ಕೊಚ್ಚಿಕೊಳ್ಳುವುದುಂಟು, “ ನಾನು ನನ್ನ ಹೆಂಡತಿಯನ್ನು ಹಾಕಿದ ಗೆರೆಯ ಒಳಗೆ ನಿಲ್ಲಿಸುತ್ತೇನೆ.....” ವಿಪರ್ಯಾಸವೆಂದರೆ ಆ ಗೆರೆ ಎಲ್ಲಿ ಹಾಕಬೇಕೆಂದು ನಿರ್ಣಯಿಸುವುದು ಹೆಂಡತಿ.! ಹಾಗೆ ಸಮಯಕ್ಕೆ ಊರಿಗೆ ತಲುಪಲಾಗದೇ ಇದ್ದರೆ ತಲುಪಿದ ಸಮಯವನ್ನೇ ನಿಗದಿಗೊಳಿಸುವುದು. ನನಗೂ ಹೀಗೊಂದು  ಅನುಭವ ಆದದ್ದು ಮಾತ್ರ ಮರೆಯಲಾಗದ ಒಂದು ಪಯಣದ ಅನುಭವವನ್ನು ಬರೆದುಬಿಟ್ಟಿತು.
         
ಮೊನ್ನೆ ಮೊನ್ನೆ ವಾರಾಂತ್ಯಕ್ಕೆ ಬಿಡುವು ಮಾಡಿಕೊಂಡು ಶನಿವಾರ ಊರಿಗೆ ಹೊರಟೆ. ಊರಿಗೆ ಹೋಗುವುದಾದರೆ ರೈಲು ಪ್ರಯಾಣವನ್ನೇ ಹೆಚ್ಚಾಗಿ ಅವಲಂಬಿಸುವ ನನಗೆ ಮೊನ್ನೆ ಶನಿವಾರ ಬೆಂಗಳೂರು ಕೇಂದ್ರದಿಂದ ರಾತ್ರಿಯ ರೈಲು ಹತ್ತಿದೆ. ಇದಕ್ಕಾಗಿ ತಿಂಗಳ ಮೊದಲೆ ಸೀಟು ಕಾದಿರಿಸಿ ಹಾಯಾಗಿ ಪಯಣಿಸಬಹುದೆಂಬ ಲೆಕ್ಕಾಚಾರದಲ್ಲಿದ್ದೆ. ನಿಗದಿತ ಸಮಯಕ್ಕೆ ಹೊರಟ ರೈಲು ರಾಮನಗರ ಹತ್ತಿರ ತಲುಪುತಿದ್ದಂತೆ ನಮ್ಮ ಪಕ್ಕದ ಭೋಗಿಯಲ್ಲಿ ಕಲರವದೊಂದಿಗೆ ಕಿರುಚಾಟದೊಂದಿಗೆ ಒಂದಷ್ಟು ಗೊಂದಲ ಉಂಟಾಯಿತು. ಹೋಗಿ ನೋಡಿದಾಗ ಕಿಟಕಿ ಹತ್ತಿರ ಕುಳಿತ ಮಹಿಳೆಯೊಬ್ಬರು ತಲೆ ಒಡೆದು ಕುಳಿತಿದ್ದರು. ರಕ್ತಧಾರಾಕಾರವಾಗಿ ಹರಿಯುತ್ತಿತ್ತು. ಇನ್ನು ಕೆಲವು ಯುವಕರು ಅಲ್ಲಿ ಇಲ್ಲಿ ಗಾಯವಾದ ಯಾತನೆಯನ್ನು ಅನುಭವಿಸುತ್ತಿದ್ದರು. ನಡೆದದ್ದು ಇಷ್ಟೇ ..ರಾತ್ರಿ ಸಂಚರಿಸುತ್ತಿದ್ದ ರೈಲಿಗೆ ರೈಲು ಹಳಿಯ ಸಮೀಪದ ಸ್ಥಳೀಯ ಕಿಡಿಗೇಡಿಗಳು ಕಲ್ಲು ಎಸೆದಿದ್ದರು. ಎಸೆದ ಕಲ್ಲು ಮಹಿಳೆಗೆ ತೀವ್ರಸ್ವರೂಪದ ಗಾಯವನ್ನು ಮಾಡಿದ್ದರೆ ಇನ್ನು ಕೆಲವರಿ ಸಣ್ಣ ಪುಟ್ಟ ಗಾಯವನ್ನುಂಟು ಮಾಡಿತ್ತು. ಇಷ್ಟಾದುದೆ ತಡ ಧೋ ಎಂದು ಸುರಿವ ಮಳೆಗೆ ಕಿಟಕಿಯನ್ನು ಮುಚ್ಚಿದಂತೆ ಎಲ್ಲಾ ಭೋಗಿಗಳ ಕಿಟಿಕಿಗಳು ಬಂದ್ ಆಗಿಬಿಟ್ಟವು.

          ರಾತ್ರಿ ಕಲ್ಲು ಎಸೆಯುವ ಈ ಕಲ್ಲು ಹೃದಯದವರು ತಮ್ಮ ಮನೋರಂಜನೆಗೆ ಆಯ್ದುಕೊಂಡ ಮಾರ್ಗವನ್ನು ಕಂಡಾಗ ಅತ್ಯಂತ ಹೇಯವೆನಿಸಿತು. ಕಲ್ಲು ಎಸೆದವರು ಯಾರೋ? ಒಂದು ವೇಳೆ ನೀವು ಅದೇ ಊರಲ್ಲಿ ಅನ್ವೇಷಣೆಗೆ ತೊಡಗಿದರೆ ಆ ಊರಿನವರು ಒಬ್ಬರೂ ಬಾಯಿ ಬಿಡಲಾರರು. ಸಾಮಾನ್ಯವಾಗಿ ಅಂತಹ ಊರಲ್ಲಿ ಈ ರೀತಿಯ ಪುಂಡಾಟಿಕೆ ಮಾಡುವ ಪೋಕರಿಗಳ ಬಗ್ಗೆ ಊರಿನವರಿಗೂ ಅರಿವಿರುತ್ತದೆ. ಸ್ಥಳೀಯ ಪೋಲೀಸರಿಗೂ ತಿಳಿದಿರುತ್ತದೆ. ಆದರೇನೂ ಪ್ರಯೋಜನ. ಯಾರದೋ ಮನರಂಜನೆಗೆ ಯಾವುದೋ ಅಮಾಯಕರು ಬಡಪಾಯಿಗಳು ಬಲಿಯಾಗಿಬಿಡುತ್ತಾರೆ. ಪ್ರಯಾಣ ಸುಖಕರವಾಗಿರಲಿ ಎಂಬ ಹಾರೈಕೆ ಎಂಬ ಮಾತು ಹಾಸ್ಯಾಸ್ಪದವಾಗಿ ಅಣಕಿಸುತ್ತದೆ.
          ಗಾಯಗೊಂಡವರಿಗೆ ಚಿಕಿತ್ಸೆ ಕೊಡುವುದಕ್ಕಾಗಿ ಇರಬೇಕು ಮೈಸೂರಲ್ಲಿ ರೈಲು ಒಂದು ಘಂಟೆ ವಿಳಂಬವಾದದ್ದು ಮಂಗಳೂರಿಗೆ ಮುಟ್ಟುವಾಗ ಅದು ಎರಡು ಘಂಟೆಗೆ ವಿಸ್ತರಿಸಲ್ಪಟ್ಟಿತು. ಹೋಗಲಿ ಕ್ಷೇಮವಾಗಿ ಮುಟ್ಟಿದೆವಲ್ಲಾ ಎಂಬ ನಿಟ್ಟುಸಿರಷ್ಟೇ ತೃಪ್ತಿಯ ದ್ಯೋತಕವಾಯಿತು. ಹೋಗುವಾಗ ಈ ರೀತಿಯ ಅನುಭವದಿಂದ ಅಲ್ಪತಲ್ಲಣ ಗೊಂಡರೆ ಬರುವಾಗ ಆದ ಅನುಭವ ಇನ್ನೂ ಭೀಕರವಾಗಿತ್ತು.
         
ಭಾನುವಾರ ಊರಲ್ಲಿ ತಂಗಿ ಸೋಮವಾರ ವಾಪಾಸಾಗುವುದಕ್ಕೆ ಮೊದಲೇ ಮುಂಗಡ ಟಿಕೇಟ್ ಮೊದಲೇ ಕಾಯ್ದಿರಿಸಿದ್ದೆ. ಸೀಟು ಕೂಡ ಖಾಯಂಗೊಂಡು ಒಂದು ರೀತಿಯ ನಿರಾಳತೆ ಆವರಿಸಿದ್ದು ಅದು ಕೆಲವು ಕ್ಷಣಗಳಿಗೆ ಮಾತ್ರ ಸೀಮಿತವಾಗಿತ್ತು ಮಾತ್ರ ವಿಪರ್ಯಾಸ.
          ರಾತ್ರಿ ಒಂಭತ್ತರ ಸುಮಾರಿಗೆ ಮಂಗಳೂರು ಕೇಂದ್ರದಿಂದ ಹೊರಡುವ ರೈಲಿಗಾಗಿ ಎಂಟೂ ಕಾಲಕ್ಕೆ ನಾನು ನಿಲ್ದಾಣದಲ್ಲಿದ್ದೆ. ಇದಕ್ಕೆ ಮಿತ್ರ ಜಯಣ್ಣನ ಮನೆಯಿಂದ ಎಂಟಕ್ಕೇ ಹೋರಟಿದ್ದೆವು. ಜೋರಾಗಿ ಸುರಿಯುವ ಮಳೆಯ ಮಧ್ಯೆ ನಿಲ್ಧಾಣ ಹೊಕ್ಕಾಗ ಯವಾಗಲೂ ಕೇಳುವ ರೈಲು ಹೊರಡುವ ಸೂಚನೆ ಕೇಳುತ್ತಿಲ್ಲ. ಅದರೆ ಸ್ವಲ್ಪ ಹೊತ್ತಿನಲ್ಲೇ ಪ್ರಕಟಣೆಯೊಂದು ಹೊರಬಿದ್ದು ಮನಸ್ಸು ಗಲಿಬಿಲಿಗೊಂಡಿತ್ತು. ಒಂಭತ್ತಕ್ಕೆ ಹೊರಡುವ ರೈಲಿಗೆ ಕಣ್ಣನ್ನೂರಿನಿಂದ ಬರುವ ರೈಲು ಅದಾಗಾಲೇ ಬಂದು ಕಾದುನಿಂತಿತ್ತು. ಆದರೆ ಕಾರವಾರದಿಂದ ಬರುವ ರೈಲು ನಾಲ್ಕು ಘಂಟೆಯಷ್ಟು ತಡ ಎಂಬ ಸುದ್ದಿ ಸಿಕ್ಕಿದಾಗ ಎಲ್ಲರೂ ಅಘಾತಕ್ಕೆ ಒಳಗಾದರು ನಾಲ್ಕು ಘಂಟೆ ಎಂದರೆ ಹನ್ನೆರಡು ಗಂಟೆ ನಲ್ವತ್ತು ನಿಮಿಷಕ್ಕೆ ಹೋರಡುವ ಸೂಚನೆ ಲಭ್ಯವಾಗಿತ್ತು. ಆದರೂ ಅದನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಯಾಕೆಂದರೆ ಅದಿನ ಬೆಳಗ್ಗೆ ಬೆಂಗಳೂರಿನಿಂದ ಬಂದ ರೈಲು ಕೂಡ ಐದು ಘಂಟೆ ತಡವಾಗಿ ಬಂದು ಕಾರವಾರಕ್ಕೆ ಹೋಗಿ ಪುನಃ ವಾಪಾಸು ಬರಬೇಕಿತ್ತು. ಆದರೆ ಆ ರೈಲು ಕಾರವಾರದಿಂದ ನಾನು ನಿಲ್ದಾಣ ಹೊಕ್ಕ ಸಮಯಕ್ಕೆ ಅಂದರೆ ಎಂಟು ಘಂಟೆಗೆ…!!! ರಾಮ ರಾಮಎಂಬ ಉದ್ಗಾರ ಅಲ್ಲದೇ ಬೇರೆನು ಹೇಳಲು ಸಾಧ್ಯ?

          ಬಹಳಷ್ಟು ಜನ ಕುಟುಂಬ ಮಕ್ಕಳು ಲಗೇಜುಗಳೊಂದಿಗೆ ಪ್ಲಾಟ್ ಫಾರಂ ನಲ್ಲಿ ಹ್ಯಾಪ್ ಮೋರೆಯೊಂದಿಗೆ ಕುಳಿತುಕೊಂಡಿದ್ದರು. ಅವರೆಲ್ಲ ಕಾರವಾರದಿಂದ ಬರುವ ರೈಲಿಗೆ ಕಾದಿರಿಸಿದ ಕಾರಣ ಅಲ್ಲಿಯೇ ಕಾದುಕುಳಿತರೆ ಕಣ್ಣನ್ನೂರು ರೈಲಿಗೆ ಕಾದಿರಿಸಿದವರು ರೈಲಿನೊಳಗೆ ಮಲಗುವ ಸನ್ನಾಹ ಮಾಡುತ್ತಿದ್ದರು.  ಅದೇ ರೈಲಿನಲ್ಲಿ ನನ್ನ ಸೀಟ್ ಕಾದಿರಿಸಿದ್ದರಿಂದ ನಾನು ಅದನ್ನೆ ಅನುಸರಿಸಿದೆ. ಬದಿಯ ಮೇಲಿನ ಸೀಟ್ ನನ್ನದಾಗಿತ್ತು. ಅಲ್ಲಿಯೂ ಗ್ರಹಚಾರ ಬಿಡಲಿಲ್ಲ. ಸ್ವಲ್ಪ ಹೊತ್ತಿನವರೆಗೆ ತಿರುಗುತ್ತಿದ್ದ ಫ್ಯಾನ್ ಎಲ್ಲ ಭೋಗಿಗಳಲ್ಲೂ ನಿಂತು ಬಿಟ್ಟಿತು. ಹೊರಗೆ ಮಳೆಯಾದರೂ ಕಿಟಿಕಿ ತೆರೆಯದೆ ಇರುವುದರಿಂದ ಒಳಗೆ ಸೆಕೆ ವಿಪರೀತವಾಗಿತ್ತು.  ನೀರವ ಮೌನದಲ್ಲಿ ಧ್ವನಿ ವರ್ಧಕದ ಪ್ರಕಟನೆಗಳಷ್ಟೇ ಅಗಾಗ ಕೇಳುತ್ತಿತ್ತು. ಮತ್ತೆಲ್ಲ ಭೋಗಿ ಮೌನ ಆವರಿಸಿತ್ತು. ಆದರೆ ಅದು ಯಾರೋ ಪುಣ್ಯಾತ್ಮ ಪಕ್ಕದ ಸೀಟಿನವನು ಚಕ್ಕುಲಿಯೋ ಮತ್ತೆನೋ ಕುರುಕಲು ತಿಂಡಿ ತಿನ್ನುವ ಕರ ಕರ ಸದ್ದು ಇಡೀ ಭೋಗಿಯನ್ನು ಅಪ್ಪಳಿಸಿದ ಅನುಭವ. ಈ ನಡುರಾತ್ರಿಯಲ್ಲೂ ಅತನ ಚಪಲಕ್ಕೆ ಏನು ಹೇಳಬೇಕು. ತೊಟ್ಟೆಯೊಳಗಿನಿಂದ ಒಂದೊಂದು ಚಕ್ಕುಲಿ ತೆಗೆದು ಬಾಯಿಗೆ ಹಾಕಿದಾಗಲೂ ಇದು ಕೊನೆಯದ್ದಾಗಿರಬಹುದು ಎಂದು ಮನಸ್ಸು ಲೆಕ್ಕಾಚಾರ ಹಾಕುತ್ತಿತ್ತು. ಒಂದು ತಿಂದು ಖಾಲಿಯಾದಾಗ ಇನ್ನು ಇರಲಾರದು ಎಂದು ಬಗೆದರೆ ತೊಟ್ಟೆಯ ಚರ ಪರ ಸದ್ದಿನಿಂದ ಇನ್ನೊಂದರ ಕರಕರ ಆರಂಭವಾಗುತ್ತಿತ್ತು. ಆದರೆ ಅದೆಷ್ಟು ಇತ್ತೋ ಬೇಗನೆ ಖಾಲಿಯಾಗಲಿಲ್ಲ. ಮತ್ತೂ ಬಹಳಷ್ಟು ಹೊತ್ತು ಕರ ಕರ ಕರೆ ಕರೆಯಾಗುತ್ತಿತ್ತುಮನುಷ್ಯ ಶ್ವಾನಕ್ಕಿಂತಲೂ ಕಡೆಯಾಗುವ ಸಂದರ್ಭದಲ್ಲಿ ಇದೂ ಒಂದು.     ಮುಂಜಾನೆ ಬೇಗನೇ ಎದ್ದುದರಿಂದಲೋ ಎನೋ ಅಂತೂ ಇಂತೂ ನಿದ್ದೆ ಚೆನ್ನಾಗಿಯೇ ಬಂತು. ಹನ್ನೆರಡು ಘಂಟೆಗೆ ಟಿ. ಸಿ. ನಿಧಾನವಾಗಿ ಬಂದ. ಎಲ್ಲರ ಪ್ರಶ್ನೆಗಳ ಸುರಿಮಳೆಗೆ ಅವನಲ್ಲಿ ಉತ್ತರವೂ ಮೊದಲೇ ನಿಗದಿಯಾಗಿತ್ತು. “ಅರ್ಧಗಂಟೆಯಲ್ಲಿ ಆ ಟ್ರೈನ್ ಬರುತ್ತದೆ. ಆಮೇಲೆ ಹತ್ತು ನಿಮಿಷದಲ್ಲಿ ಹೊರಡುತ್ತದೆ.”   
          ಅಂತೂ ಆ ರೈಲು ಒಂದು ಘಂಟೆಗೆ ಆಗಮಿಸಿ ಒಂದು ವರೆಗೆ ರೈಲು ತನ್ನ ಪ್ರಯಾಣ ಆರಂಭಿಸಿತು. ನನಗೆ ನಿದ್ದೆ ಆವರಿಸಿದ್ದುದರಿಂದ ಇದು ಅರಿವಿಗೆ ಬರಲೇ ಇಲ್ಲ. ಎಚ್ಚರವಾದಾಗ ರೈಲು ಎಲ್ಲೋ ಸದ್ದಿಲ್ಲದೇ ನಿಂತ ಅನುಭವ. ಚಾಯ್ ವಾಲಾಗಳ ಧ್ವನಿ. ಹಾಸನವೋ ಮತ್ತೊಂದೋ ಆಗಿರಬಹುದು ಎಂದು ಗ್ರಹಿಸಿ ಮೊಬೈಲ್ ನೋಡಿದೆ ಘಂಟೆ ನಾಲ್ಕುವರೆಯಾಗಿತ್ತು. ನಿತ್ಯ ಮುಂಜಾನೆ ನಾನು ಎದ್ದೇಳುವ ಸಮಯ. ಸಹಜವಾಗಿ ಎಚ್ಚರವಾಗಿತ್ತು. ಭೋಗಿಯೊಳಗೆಮಲಗಿ ಮಲಗಿಅಲ್ಲಿ ಮಲಗಿಆ ಸೀಟು ಈ ಸೀಟು”  ಎಂಬ ಚರ್ಚೆ ಕೇಳುತ್ತಿತ್ತು. ಬಹುಶಃ ಇಲ್ಲೆ ಹತ್ತಿದವರು ಇರಬೇಕು. ಹಾಸನದಲ್ಲಿ ಯಾರೂ ಹತ್ತಿರಬಹುದು ಎಂದು ಯೋಚನೆ. ಅಷ್ಟರಲ್ಲಿ ಟಿ. ಸಿ. ಬಾವಲಿಯಂತೆ ಕರಿ ಕೋಟ್ ನೊಳಗಿನಿಂದ ತಲೆ ಹೊರಗೆ ಇಣುಕಿಸುತ್ತಾ ಬಂದ. ಆತನಲ್ಲಿ ಕೇಳಿದೆ ಎಲ್ಲಿಗೆ ಬಂತು ರೈಲು. .ಆತನ ಉತ್ತರ ಕೇಳಿ ಹೌಹಾರಿದೆ…..ಅದು ಸುಬ್ರಹ್ಮಣ್ಯ ರೋಡು…. ಓಹ್ಅದಾಗ ಐದು ಘಂಟೆ ಸಮಯ. ರೈಲು ಅದಾಗ ತಾನೆ ಅಲ್ಲಿ ಬಂದು ನಿಂತಿತ್ತು..!!! ಛೇ ಅಲ್ಲಿ ಅದಕ್ಕಾಗಿ ಕಾದು ಕುಳಿತ ಪ್ರಯಾಣಿಕರ ಪಾಡು ಹೇಗಿರಬಹುದು?
          ರೈಲು ತಡವಾಗುತ್ತದೆ ಎಂದು ತಿಳಿದು ಮೊದಲೆ ಎರಡು ಪ್ಯಾಕೆಟ್ ಬಿಸ್ಕತ್ತು ಮತ್ತು ಎರಡು ಬಾಟಲ್ ನೀರು ತೆಗೆದು ಇರಿಸಿದ್ದೆ. ಎಂದಿನ ಮುಂಜಾನೆಯ ದಿನಚರಿಯಂತೆ ಒಂದು ಬಾಟಲ್ ನೀರು ಅಗಲೇ ಖಾಲಿಯಾಯಿತು. ಮುಖ ತೊಳೆದು ಬಿಸಿ ಬಿಸಿ ಬನ್ಸ್ ಇದು ಸುಬ್ರಹ್ಮಣ್ಯ್ ರೋಡ್ ಸ್ಪೆಶಲ್ ತಿಂದಾಯಿತು. ಆದರೂ ರೈಲು ಹೊರಡುವ ಸೂಚನೆ ಇಲ್ಲ. ಆರು ಘಂಟೆ ಕಳೆಯಿತು. ಬೆಂಗಳೂರಿನಿಂದ ಬರುವ ಟ್ರೈನ್ ಬಂದನಂತರ ಇದು ಬಿಡುವುದು ಎಂದು ಆಮೇಲೆ ತಿಳಿದುಬಂತು. ವಿಪರ್ಯಾಸವೆಂದರೆ ಅದೂ ನಿಗದಿತ ಸಮಯಕ್ಕಿಂತ ಒಂದು ಘಂಟೆ ತಡ. ಮೊದಲೇ ಮಣಭಾರ ಹೊತ್ತವನಿಗೆ ಹೆಗಲಲ್ಲಿ ಎರಡು ಚೀಲ ನೇತಾಡಿಸಿದ ಅನುಭವ.
          ಅಂತೂ ಏಳು ಘಂಟೆಯಷ್ಟು ಹೊತ್ತಿಗೆ ರೈಲಿಗೆ ಸಂಚಲನೆ ಉಂಟಾಗಿ ಹೊರಟಿತು. ಮತ್ತೆ ಎಲ್ಲರೂ ಲೆಕ್ಕಾಚಾರದಲ್ಲಿ ತೊಡಗಿದರು ಬೆಂಗಳೂರಿಗೆ ಎಷ್ಟು ಹೊತ್ತಿಗೆ ತಲುಪಬಹುದು?
ಧೋ…ಎಂದು ಒಂದೇ ಸವನೆ ಸುರಿಯುವ ಮಳೆಗೆ ರೈಲು  ಪರ್ವತದ ನಡುವೆ ಸದ್ದು ಮಾಡುತ್ತಾ ಕಣಿವೆ ಸುರಂಗಗಳನ್ನು ಹಾದು ಹೋಗುವುದನ್ನು ನೋಡುವುದೇ ಒಂದು ರೋಮಾಂಚನ.  ಸುಮಾರು ಮೂರು ವರೆ ಘಂಟೆಗಳ ಕಾಲ ಘಾಟಿ ಪ್ರದೇಶದಲ್ಲಿ ಸಂಚರಿಸಿದ ರೈಲು ಸಕಲೇಶ ಪುರ ತಲುಪುವಾಗ ಘಂಟೆ ಹತ್ತರ ಹತ್ತಿರವಾಗುತ್ತಿತ್ತು. ಎಲ್ಲರ ಹೊಟ್ಟೆಯೂ ಹಸಿದಿತ್ತು. ಸ್ಟೇಶನ್ ತಲುಪುತ್ತಿದ್ದಂತೆ ಬಹಳಷ್ಟು ಜನ ಧುಮುಕಿ ತಿಂಡಿ ಮಾರುವವರ ಹತ್ತಿರ ಧಾವಿಸತೊಡಗಿದರು. ಇದೊಂದು ರೀತಿ ನೆರೆ ಸಂತ್ರಸ್ತರಿಗೆ ಆಹಾರ ಒದಗಿಸಿದಂತೆ ಭಾಸವಾಯಿತು. ಒಬ್ಬನೇ ಒಬ್ಬ ತಿಂಡಿಮಾರುವವ ರೈಲನ್ನು ಏರಲಿಲ್ಲ.  ಪುನಃ ಸ್ವಸ್ಥಾನಕ್ಕೆ ಬರುವುದಕ್ಕೆ ರೈಲು ಇಲ್ಲವೆಂದೋ ಏನೋ, ಹಾಗಾಗಿ ಬಹಳಷ್ಟು ಜನ ಹೊಟ್ಟೆ ಹಸಿವನ್ನು ಅನಿವಾರ್ಯವಾಗಿ ಕಟ್ಟಿಕೊಳ್ಳಬೇಕಾಯಿತು. ನನ್ನಲ್ಲಿ ಬಿಸ್ಕತ್ತು  ಅದಾಗಲೇ ಖಾಲಿಯಾಯಿತು. ನೀರಿನ ಬಾಟಲ್ ಖಾಲಿಯಾಗಿ ನೀರೆಲ್ಲಿ ಸಿಗಬಹುದು ಎಂದು ಯೋಚಿಸುವಂತಾಯಿತು.
ಇನ್ನು ಹಾಸನಕ್ಕೆ ತಲುಪಿದಾಗ ನೀರು…ಸಿಕ್ಕರೆ ಸಾಕು ಎಂದುಕೊಂಡರೆ ಹಾಸನದಲ್ಲಿ ನಮ್ಮ ಭೋಗಿ ಬಹಳ ಮುಂದೆ ನಿಂತುಬಿಟ್ಟು ಇಳಿದು ಹೋಗಿ ತರುವಷ್ಟು ತಾಳ್ಮೆಯೂ ಇರಲಿಲ್ಲ. ಮೇಲಾಗಿ ಬ್ಯಾಗ್ ಲಗೇಜ್ ಭೋಗಿಯಲ್ಲಿ ಅನಾಥವಾಗಿ ಬಿಟ್ಟುಹೋಗುವುದಕ್ಕೆ ಧೈರ್ಯ ಬರಲಿಲ್ಲ. ಒಟ್ಟಿನಲ್ಲಿ ತಿಂಡಿಯೂ ಇಲ್ಲ ನೀರು ಇಲ್ಲ. ತಿಂಡಿಯಾದರೂ ತಿನ್ನಬೇಕು ಎಂದೆನಿಸಲಿಲ್ಲ. ಹೊರಗಿನ ತಿಂಡಿ ಅಷ್ಟು ಅನಿವಾರ್ಯವಾದಲ್ಲಿ ಮಾತ್ರವೇ ಸೇವಿಸುವವನು ನಾನು. ಆದರೆ ನೀರು. ಘಂಟೆಗೊಂದು ಬಾರಿ ಅರ್ಧಲೀಟರ್ ನೀರು ಕುಡಿಯುವ ನಾನು ನೀರಿಗಾಗಿ ಪರಿತಪಿಸಿದೆ ಎಂದೇ ಹೇಳಬಹುದು.
ಹೊಳೆ ನರಸೀಪುರು ಕೆ ಆರ್ ನಗರ ಹೀಗೆ ಒಂದೊಂದು ನಿಲ್ದಾಣದಲ್ಲೂ ತಿಂಡಿಮಾರುವವರು ಬರೇ ಮದ್ಧೂರು ವಡೆಯ ಪರಿಮಳವನ್ನು ಹಂಚುತ್ತಿದ್ದರು. ಮೈಸೂರು ನಿಲ್ದಾಣದಲ್ಲೂ ಭೋಗಿ ಬಹಳ ಮುಂದೆ ನಿಂತುಬಿಟ್ಟಿತು. ಸ್ವಲ್ಪ ಶ್ರಮ ವಹಿಸಿ ಬಹಳಷ್ಟು ದೂರ ಕುಡಿಯುವ ನೀರಿಗಾಗಿ ಅರಸುತ್ತಾ ಸಾಗಿದರೂ ಊಹುಂ ನೀರು ಸಿಗಲಿಲ್ಲ…ಮಳೆಯೂ ಸುರಿಯುವ ಕಾರಣ ಕಣ್ಣಿಗೆ ಗೋಚರಿಸುವ ನೀರು ಗಂಟಲಿಗೆ ಇಳಿಯದೇ ಹೋಯಿತು.
ಹಾಗೂ ಹೀಗೂ ಅದೇ ಅವಸ್ಥೆಯಲ್ಲಿ ಬೆಂಗಳೂರು ನಿಲ್ದಾಣ ತಲುಪಿದಾಗ ಸಂಜೆ ಘಂಟೆ ನಾಲ್ಕರ ಸಮಯ. ಮಗ ಬೈಕ್ ತಂದು ರೈಲ್ವೇ ನಿಲ್ದಾಣದಲ್ಲಿ ಕಾಯುತ್ತಿದ್ದ. ಹಾಗಾಗಿ ಲಗೇಜ್ ಹೆಗಲಿಗೇರಿಸಿ  ಅವಸರವಸರವಾಗಿ ಇಳಿದು ಹೋಗುವಾಗಲೂ ಬುಸುಗುಡುತ್ತಾ ನಿಂತುಕೊಂಡ ರೈಲು ಬಂಡಿಯನ್ನು ನೊಡಿದೆ. ಹಳಿಯ ಮೇಲೆ ನಿರಾಳವಾಗಿ ನಿಂತಂತೆ ಭಾಸವಾಯಿತು. ಮತ್ತೆ ಹತ್ತು ನಿಮಿಷದಲ್ಲಿ ಮಗನ ಬೈಕ್ ನಲ್ಲಿ ಮನೆ ತಲುಪಿದವನೆ ಸುಮಾರು ಐದಾರು ಲೋಟ ನೀರು ಗಟ ಗಟನೆ ಕುಡಿದರೂ ಮತ್ತೂ ಅತೃಪ್ತಿ ಕಾಡುತ್ತಿತ್ತು.   ಬೆಳಗ್ಗೆ ಹತ್ತು ಘಂಟೆಯ ನಂತರ ನೀರು ಅಹಾರವಿಲ್ಲದ ಪಯಣ ಮುಗಿಸಿಯಾಗಿತ್ತು. ಬಹುಷಃ ನನ್ನ ಯೋಗಾಭ್ಯಾಸದ ಫಲವೋ ಶರೀರದಲ್ಲಿ ಇನ್ನೂ ಉತ್ಸಾಹ ವಿದ್ದಂತೆ ಅನಿಸುತ್ತಿತ್ತು. ನಮ್ಮೂರು ಎಂದರೆ ನಮಗೆ ಅಂಡಮಾನಿಗೆ ಹೋದ ಅನುಭವವನ್ನು ತರುತ್ತದೆ. ಅತ್ತ ಬಸ್ ಪ್ರಯಾಣವೂ ಅಧ್ವಾನ. ಇತ್ತ ರೈಲು ಪ್ರಯಾಣವೂ ಅಧ್ವಾನ. ಮತ್ತೆ ಊರಿಗೆ ಹೋಗುವುದಾದರೂ ಹೇಗೆ? ಎಲ್ಲೋ ಇದ್ದ ಊರಿನ ನೆನಪನ್ನು ಆದಷ್ಟು ನೋವಿನಿಂದ ಹತ್ತಿಕ್ಕಿಕೊಳ್ಳಬೇಕು.




Friday, June 12, 2015

ಅಕ್ಕಿ ಹೆಕ್ಕುವ ಹಕ್ಕಿ


ಭಾನುವಾರದ ಒಂದು ಸಾಯಂಕಾಲದ ಹೊತ್ತು, ನನ್ನ ಲೆಕ್ಕದಲ್ಲಿ ಭಾನುವಾರದ ಸಾಯಂಕಾಲಕ್ಕೆ ಬಹಳ ಮಹತ್ವವಿದೆ. ಬೆಳಗಿನಿಂದಲೇ ಜಡತ್ವವನ್ನು ಮೈಮೇಲೆ ಅಪೋಶನ ಮಾಡಿ ಸೋಫಾದಲ್ಲಿ ಕುಕ್ಕರಿಸಿ ಟೀವಿಯ ರಿಮೋಟ್ ನ ಮೇಲೆ ಬೆರಳಿಂದ ತಡಕಾಡುತ್ತಾ ಬೇಡದೇ ಇದ್ದರೂ ಬೇರೇನೂ ಇಲ್ಲವೆಂಬಂತೆ ನೋಡಿದ ಮುಖವನ್ನೇ ಮತ್ತೂ ಮತ್ತೂ ನೋಡುವ ಗಂಡ ಹೆಂಡತಿಯಂತೆ ಟೀವಿಯನ್ನು ನೋಡುತ್ತಿರುವುದು. ಅದು ಭಾನುವಾರದ ಸಾಯಂಕಾಲ.  ನಿತ್ಯ ನಿಯಮದಂತೆ ಸಾಯಂಕಾಲದ ಅಂದೂ ಸಹ ಸಂಧ್ಯಾ ವಂದನೆಗೆ ಅಣಿಯಾಗುತ್ತೇನೆ. ಮೈ ಮನ ಶುಚಿಯಾಗಿ ಕವಳಿಗೆ ಸೌಟು ನೀರು ತೆಗೆದುಕೊಂಡು ಕುಳಿತಿರುತ್ತೇನೆ. ದೇಹ  ಸ್ನಾನ ಮಾಡಿ ಶುಚಿಯಾಗಿರುತ್ತದೆ. ಆದರೆ ಮನಸ್ಸು? ಶುಚಿಯಾಗಿದೆ ಎಂಬ ಭಾವನೆ ನನ್ನದು. ಆ ಶುದ್ದತೆಯ ನಂಬಿಕೆಯಲ್ಲಿ ತೀವ್ರವಾದ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಹೌದು. ಹೀಗೆ ಹೇಳುವುದರಲ್ಲಿ ಅಲ್ಪ ಮಟ್ಟಿನ ಪ್ರಾಮಾಣಿಕತೆ ಇದೆ. ಹೌದಲ್ಲವೇ? ನಾನು ನನ್ನ ಬಗ್ಗೆಯಾದರೂ ಪೂರ್ಣ ಪ್ರಾಮಾಣಿಕವಾಗಿರಬೇಕೆಂದು ಅಂದುಕೊಳ್ಳುತ್ತೇನೆ. ಅದನ್ನೂ ಸಹ ಪ್ರಾಮಾಣಿಕವಾಗಿ ನಂಬುವುದು ಕಷ್ಟವಾಗುತ್ತಿದೆ.! ಮೈ ಶುದ್ದವಾಗಿದೆ. ಮನಸ್ಸು ಶುದ್ದವಾಗಿಲ್ಲ ಎಂಬುದು ಮುಂದೆ ಮನಸ್ಸು ತಲ್ಲಣಗೊಂಡಾಗಲೇ ಅನಿಸುತ್ತದೆ.


ವಾಸ್ತವದಲ್ಲಿ ಸಂಧ್ಯಾವಂದನೆಯ ಮೊದಲ ಕ್ರಿಯೆಯೇ ಅಂತರಂಗ ಶುದ್ದಿ. ಅಭ್ಯಂತರ ಶುದ್ಧ್ಯರ್ಥೇ ಅಂತ ಮಂತ್ರಾಚಮನದ ಸಂಕಲ್ಪ ಮಾಡುವುದೇ ಅದಕ್ಕಾಗಿ. ಕೇವಲ ಕ್ರಿಯೆಯಿಂದ ಮಾತ್ರಾ ಅಭ್ಯಂತರ ಶುದ್ದಿಯಾಗುವಷ್ಟು ಕ್ರಿಯೆ ಪರ್ಯಾಪ್ತವಾಗುವುದಿಲ್ಲ. ಯಾಕೆಂದರೆ ಮನಸ್ಸು ಅಷ್ಟೊಂದು ಕೆಟ್ಟಿರುತ್ತದೆ.ಕೆಟ್ಟಮನಸ್ಸು ಅಂತರಂಗವನ್ನೆಲ್ಲ ಕೆಡಿಸಿಬಿಟ್ಟಿರುತ್ತದೆ. ಹಾಗೆ ಕೆಟ್ಟು ಹೋದದ್ದು ಒಂದು ಸಂಕಲ್ಪದ ಉದ್ದರಣೆಯಿಂದ ಶುದ್ದಿಯಾಗಬಹುದೇ? ಹೇಳಬಹುದು, ಸಂಕಲ್ಪ ಶುದ್ದಿಯಿದ್ದರೆ ಒಂದು ಕ್ಷಣದಲ್ಲಿ ಮನಸ್ಸು ಶುದ್ದವಾಗುತ್ತದೆ. ಆದರೆ ಇದು ನನ್ನ ಬದುಕಿನ ಶೈಲಿಗೆ ಅಸಂಭವ.
ಉದ್ದರಣೆ ಹೀರಿ ಆಚಮನ ಮಾಡಿ ಪ್ರಾಣಾಯಾಮ ಮಾಡುವಾಗ,  ಪೂರಕ ಕುಂಭಕ ರೇಚಕದಲ್ಲಿ ತೊಡಗುವ ಕ್ರಿಯೆಗೆ ಅಲ್ಲೇ ಇದ್ದ ಟೀವಿ ಸದ್ಧು ಅಡ್ಡಿಯಾಗುತ್ತದೆ. ಎಷ್ಟೆಂದರೂ ಪೂರಕ ರೇಚಕಾದಿಯಲ್ಲಿ ಮನಸ್ಸು ಕೇಂದ್ರಿಸಲ್ಪಡುವುದೇ ಇಲ್ಲ. ನೋವಾದ ಬೆರಳಿಗೆ ಮತ್ತೂ ಎಡವಿ ಎಡವಿ ನೋವಾದಂತೆ ಮನಸ್ಸು ಬೇರೆಲ್ಲವನ್ನು ಬಿಟ್ಟು ಟಿ.ವಿ.ಯತ್ತ ಓಡುತ್ತದೆ. ಅದನ್ನು ನೋಡುವವರತ್ತ ಮನಸ್ಸು ವ್ಯಗ್ರವಾಗುತ್ತದೆ. ಅಷ್ಟೇ ಮತ್ತೆ ಅಂತರಂಗದ ಗೋಡೆಯಲ್ಲಿ ಕೆಸರು ರಾಚಿ ಶುದ್ಧಿ ಎಂಬುದು ಪ್ರಶ್ನಾರ್ಥ ಚಿಹ್ನೆಯೊಳಗೆ ಮಾಯವಾಗುತ್ತದೆ. ಮನಸ್ಸಿನ ಶುದ್ದತೆಯ ಮೇಲೆ ಮೊದಲ ಪ್ರಹಾರವಾಗುವುದು ಟಿ ವಿ ಯ ಶಬ್ದದಿಂದಲೂ ಅಲ್ಲ, ಅದನ್ನು ನೋಡುವವರಿಂದಲೂ ಅಲ್ಲ ಅದಕ್ಕೆ ಮೊದಲ ಕಾರಣ ಮನಸ್ಸು ವ್ಯಾಪಿಸಿದ ಚಂಚಲತೆ. ಅದರಿಂದ ಉಂಟಾದ ವ್ಯಗ್ರಭಾವ. ಹಾಗಾಗಿ ಚಂಚಲತೆಯನ್ನು ನಂತರ ವ್ಯಗ್ರತೆಯನ್ನು ನಿವಾರಿಸಿಕೊಳ್ಳುವುದೇ ಮನಸ್ಸಿನ ಪರಿಶುದ್ದತೆಯ ಮೊದಲ ಮೆಟ್ಟಿಲು.  ಎಲ್ಲವನ್ನೂ ಶುದ್ದೀಕರಿಸಬಹುದು, ಆದರೆ ಪೂರ್ಣ ಚಿತ್ತಶುದ್ಧಿಯನ್ನು ಸಾಧಿಸುವುದು ಅಸಾಧ್ಯ. ಹಾಗಾಗಿ ಅದರ ಪ್ರಯತ್ನ ಮಾತ್ರ.
ಇದರಲ್ಲಿ ಚಂಚಲತೆಯನ್ನಾದರೂ ಮೆಟ್ಟಿನಿಲ್ಲಬಹುದೇನೋ ಆದರೆ ಈ ಚಂಚಲ ಸ್ವಭಾವ ಬೇರು ಬಿಟ್ಟಂತಹ ವ್ಯಗ್ರತೆ ನಿವಾರಣೆ ಕಷ್ಟವಾಗುತ್ತದೆ. ಹೌದು ಆಗ ನನಗೆ ಅರ್ಥವಾಗುತ್ತದೆ ಡೊಂಕು ಇರುವುದು ಬಾಹ್ಯದಲ್ಲಿ ಅಲ್ಲ ನನ್ನ ಅಂತರಂಗದಲ್ಲಿ ಎಂದು. ’ಹಾಲು’  ಅದಕ್ಕೆ ಆಕಾರವಿಲ್ಲ. ಅದನ್ನೇ ಅಮೃತ ಎಂದರೆ, ಅದು ಯಾವ ಪಾತ್ರೆಗೆ ಹಾಕುತ್ತದೋ ಆ ಪಾತ್ರೆಯ ಆಕಾರವನ್ನು ತಾಳುತ್ತದೆ. ಪಾತ್ರ ಶುದ್ದವಿದ್ದರೆ ಹಾಲು ಅಮೃತವಾಗುತ್ತದೆ. ಇಲ್ಲವಾದರೆ ಮೃತ ಪಾತ್ರವಾಗುತ್ತದೆ.
ಕೈಯಲ್ಲಿ ಹಾಲಿದೆ. ಪಾತ್ರೆಯೂ ಇದೆ. ಈಗ ಆ ಪಾತ್ರೆಯನ್ನು ಶುದ್ಧೀಕರಿಸುವ ಪ್ರಯತ್ನದಲ್ಲಿ ಸಾಗುತ್ತಿದ್ದೇನೆ ಎನಿಸುತ್ತದೆ. ಹೊರಗಿನ ಸದ್ದು ಚಿತ್ತವನ್ನು ಸೆಳೆಯುವುದಿಲ್ಲ. ಮನಸ್ಸು ಅತ್ತ ಹರಿಯುವುದಿಲ್ಲ. ಹಾಗಾಗಿ ಪಾತ್ರೆ ಶುದ್ದವಾಗುತ್ತದೆ. ಮನಸ್ಸು ಬದಲಾಗುತ್ತದೆ. ಈ ಅದಮ್ಯ ವಿಶ್ವಾಸವೇ ಮೊದಲ ಪ್ರಚೋದನೆ. ಪ್ರಚೋದನೆಗೆ ಅನುಸಾರವಾಗಿ ಮನಸ್ಸು ಬದಲಾಗುತ್ತದೆ.  
ಬದಲಾಗುವ  ಮನೋಭಾವಕ್ಕೆ ಕಾರಣ ನನ್ನ ಯೋಗಾಭ್ಯಾಸ.   ಅಭ್ಯಾಸ ಪಕ್ವವಾಗುತ್ತಾ ಸಾಗಿದಂತೆ ಮನಸ್ಸೂ ಬದಲಾಗುತ್ತದೆ. ಅಥವಾ ಬದಲಾಗಲೇ ಬೇಕು. ಇಲ್ಲವಾದರೆ, ಅದರ ಬಗೆಗಿನ ಬದ್ದತೆ ಮತ್ತು ಶ್ರಧ್ದೆಯ ಕೊರತೆ ಎಂದೆ ಎನಿಸಲ್ಪಡುತ್ತದೆ. ಈಗ ಅನ್ನಿಸುತ್ತದೆ ಬಹಳಷ್ಟು ಬದಾಲಾಯಿಸಿಕೊಂಡಿದ್ದೇನೆ. ಅದೇಕೋ ಆ ಬದಲಾವಣೆಯಲ್ಲಿ ಅದೇನೋ ಪ್ರಾಪ್ತಿಸಿಕೊಂಡ ತೃಪ್ತಿ. ಈ ಮೊದಲು ದೈವ ಪ್ರಾರ್ಥನೆಗೆ ಕುಳಿತರೆ ನಾಲಿಗೆ ಮಂತ್ರಿಸುತ್ತದೆ ದೇಹಾಂಗಗಳು ಸಕ್ರಿಯವಾದರೂ ಮನಸ್ಸು ಸುತ್ತಲಿನ ಪ್ರಪಂಚದೊಂದಿಗೆ ಕ್ರೋಧದಿಂದ ಪ್ರತಿಕ್ರಿಯಿಸುತ್ತದೆ. ನನ್ನ ಪೂಜೆಗೋ ಧ್ಯಾನಕ್ಕೋ ಅಡ್ದಿಯಾಗುವ ಟೀ. ವಿ. ಮತ್ತೀತರ ಚಟುವಟಿಕೆಗಳತ್ತ ಮನಸ್ಸು ಹರಿಹಾಯ್ತದೆ. ಪರಿಣಾಮ ಆ ಪವಿತ್ರ ಕ್ರಿಯೆಯಲ್ಲಿ ತಾದಾತ್ಮ್ಯವನ್ನು ಹೊಂದಬೇಕಾದ ಮನಸ್ಸು ಮತ್ತಷ್ಟು ವ್ಯಗ್ರಗೊಂಡು ಕ್ರಿಯಾ ಭಾಗದ ಫಲಶ್ರುತಿಯನ್ನು ಪ್ರಶ್ನಿಸುತ್ತದೆ. ಉತ್ತರವರಸಿ ಮನಸ್ಸು ಚಂಚಲವಾಗುತ್ತದೆ.  ಹೌದಲ್ಲಾ... ಯಾಂತ್ರಿಕತೆಯಿಂದ ಆಚರಿಸುವ ಸಂಧ್ಯಾ ಜಪತಪಗಳ ಉದ್ದೇಶವಾದರೂ ಏನು? ಆದುದರಿಂದ ಮನಸ್ಸು ಖಾಲಿಯಾಗಿ ಬದಲಾಗಬೇಕು.
ಘಂಟಾನಾದದ ಮೂಲದಲ್ಲಿ ಯಾವ ಮಧುರ ಧ್ವನಿ ಉಂಟಾಯಿತೆಂದರೆ ಆ ಮಧುರತೆಯೇ ಮತ್ತೆ ಮತ್ತೆ ಅಲೆಯಾಗಿ ಮಾರ್ದನಿಸಲ್ಪಡುತ್ತದೆ. ಅದು ಬಿಟ್ಟು ಅದೇ ಘಂಟೆಯಿಂದ ಕರ್ಕಶತೆಯನ್ನು ಹೊರಡಿಸಿದರೆ  ಆ ಧ್ವನಿ ಅಲ್ಲೇ ಸಾಯುತ್ತದೆ. ನಮ್ಮ ಮನಸ್ಸಿನ ಗಂಟೆ ಯಾವ ಧ್ವನಿ ಹೊರಡಿಸುವುದೋ ಅದೇ ಮಾರ್ದನಿಸುತ್ತದೆ. ಮನಸ್ಸಿನ ಭಾವ ಏನಿದೆಯೋ ಅದೇ ಪ್ರತಿಫಲಿಸಲ್ಪಡುತ್ತದೆ. ಆಗ ಅರ್ಥವಾಗುತ್ತದೆ ಶಾಂತಿ ಎಂಬುದು ನಮ್ಮ ಮನದಲ್ಲೇ ಮೊದಲು ಹುಟ್ಟಬೇಕು. ನಾವು ಕ್ರೋಧದಿಂದ ವರ್ತಿಸಿದಾಗ ಅದೇ ಮುಖ ಪ್ರತಿಫಲಿಸಲ್ಪಡುತ್ತದೆ. ಆಗ ಶಾಂತವಾಗುವ ಯತ್ನ ಮಾಡುತ್ತೇನೆ. ಬಾಹ್ಯವನ್ನು ನಿರ್ಲಿಪ್ತತೆಯಿಂದ ಎದುರಿಸುತ್ತೇನೆ. ನನ್ನ ದೇಹ ಮನಸ್ಸು ಧ್ಯಾನಕ್ಕೆ ಸಹಕರಿಸಿ ಏಕಾಗ್ರತೆಯತ್ತ ತಿರುಗುತ್ತೇನೆ. ಈಗ ಅನ್ನಿಸುತ್ತದೆ ನಾನು ಬದಲಾಗಿದ್ದೇನೆ.  ಮನಸ್ಸು ಬದಲಾಗಿದೆ. ಹೌದು, “ ಹಿಂಸೆ ಅದು ಯಾವುದೇ ಆಗಿರಲಿ ದೈಹಿಕ ಅಥವಾ ಮಾನಸಿಕ,  ಅದರ ರಕ್ತ ಮೊದಲು ಅಂಟಿಕೊಳ್ಳುವುದು ನಮ್ಮ ಕೈಗೆ.!! “  ಈ ಸುಲಭ ತತ್ವ ಸ್ಪುರಣೆಯಾಗುತ್ತದೆ. ಹೊರಗಿನ ಗದ್ದಲಗಳಿಗೆ ಮನಸ್ಸು ಮಧುರತೆಯನ್ನೇ ಸೃಷ್ಟಿಸುತ್ತದೆ. ದೇವಾಲಯದ ಸುತ್ತಲೂ ಗೌಜಿ ಗದ್ದಲಗಳು ತುಂಬಿದಾಗಲೂ ಗಂಟಾಧ್ವನಿ ಮಧುರ ನಾದವನ್ನು ಸೃಷ್ಟಿಸಿದಂತೆ ಮನಸ್ಸು ಶಾಂತವಾಗಿರುತ್ತದೆ.
ನಾನು ನಕ್ಕರೆ ಆ ನಗುವನ್ನು ನಾನು ಮೊದಲು ಅನುಭವಿಸುತ್ತೇನೆ. ಹಾಗಾಗಿ ನನ್ನ ನಗುವಿಗೂ ಅಳುವಿಗೂ ಬೇರೆಯವರು ನಿಮಿತ್ತ ಮಾತ್ರ ಆದರೆ ನಿರ್ಣಾಯಕರಲ್ಲ. ಎರಡನ್ನೂ ನನ್ನ ಮನಸ್ಸು ನಿರ್ಣಯಿಸುತ್ತದೆ. ಪರರನ್ನು ಅವಲೋಕಿಸುವಾಗ ನಾವು ನಮ್ಮನ್ನು ಮರೆತು ಬಿಡುತ್ತೇವೆ. ಆ ಅವಲೋಕನ ಬಿಟ್ಟುಬಿಡುವುದೆಂದರೆ ವಾಸನಾ ಪ್ರಪಂಚದಿಂದ ದೂರವಾದ ಹಾಗೆ. ಸುತ್ತ ಮುತ್ತಲನ್ನು ಯೋಚಿಸದೇ ಇರುವಾಗ ಮನಸ್ಸು ಕೆಲಸವಿಲ್ಲದೆ ಖಾಲಿಯಾಗುತ್ತದೆ. ವಾಸ್ತವದಲ್ಲಿ ನಾವು ನಮ್ಮ ಬಗ್ಗೆ ಯೋಚಿಸುವುದಕ್ಕಿಂತಲೂ ಹೆಚ್ಚು ಪರರ ಬಗ್ಗೆ ಯೋಚಿಸುತ್ತೇವೆ. ನಮ್ಮ ಮನಸ್ಸು ತಲ್ಲಣಿಸುವುದಕ್ಕೆ ಮುಖ್ಯವಾದ ಕಾರಣ ಇದು. ನಾನು ನನ್ನ  ಬಗ್ಗೆ ಯೋಚಿಸಿದಾಗ  ನನ್ನ ಮನಸ್ಸು ನನಗೇ ಮೀಸಲಾಗಿರುವ ಅನುಭವವಾಗುತ್ತದೆ.  ಎಲ್ಲ ಕೆಲಸವನ್ನು ಮುಗಿಸಿ ನಿರಾಳ ಮನಸ್ಸಿನ ಮನದನ್ನೆ ಪಕ್ಕದಲ್ಲಿ ಬಂದು ಕುಳಿತಂತೆ. ನಿಜವಾಗಿಯೂ ಅವಾಗ ನನ್ನ ಮನಸ್ಸು ಅದು ಕೇವಲ ನನ್ನದೇ ಅಗಿರುತ್ತದೆ.

ಯೋಗಾಭ್ಯಾಸವೆಂದರೆ ದೂರದ ಪವಿತ್ರ ಕ್ಷೇತ್ರಕ್ಕೆ ಪಯಣಿಸಿದ ಹಾಗೆ. ಈ ಪಯಣದಲ್ಲಿ ಮನೆಯಿಂದ ಕಾಲುನಡಿಗೆಯಲ್ಲಿ ಹೊರಡುತ್ತೇವೆ. ಆರಂಭದಲ್ಲಿ ಬಹಳ ನಿಧಾನ. ದೂರದ ಗಮ್ಯ ತಲಪುವ ಮೊದಲು ಹಲವಾರು ವಾಹನವನ್ನು ಹತ್ತಿ ಇಳಿಯುತ್ತೇವೆ. ಬಗೆ ಬಗೆಯ ಅನುಭವ ನಮ್ಮದಾಗುತ್ತದೆ. ಯೋಗಾಭ್ಯಾಸವೂ ಮೊದ ಮೊದಲು ನಿಧಾನವಾಗಿ ತೊಡಗಿಸಿ ನಂತರ ಗುರಿಯತ್ತ ದೃಷ್ಟಿ ನೆಡಬೇಕು ಕಾಣದೇ ಇದ್ದ ಕ್ಷೇತ್ರದ ಬಗ್ಗೆ ಬಗೆ ಬಗೆಯ ಕಲ್ಪನೆ ಮಾಡಿ ಮುಂದೆ ಹೋದಂತೆ ಇಲ್ಲಿ ಗುರಿಯ ಬಗ್ಗೆ ನಿರ್ದಿಷ್ಟ ಕಲ್ಪನೆ ಬರುವುದಿಲ್ಲ. ಗುರಿ ಸಿದ್ಧಿಸುವುದಿಲ್ಲ ಎಂದು ಪಯಣ ನಿಲ್ಲುವುದಿಲ್ಲ. ಹಲವು ವಾಹನದಲ್ಲಿ ಹತ್ತಿಳಿದ ಅನುಭವದಂತೆ ಈ ಯೋಗ ಪಯಣದಲ್ಲಿ ದಿನವೂ ಒಂದೊಂದು ಅನುಭವ ನಮ್ಮದಾಗುತ್ತದೆ. ಇಲ್ಲಿ ಮಾಡುವ ಕ್ರಿಯೆಗಿಂತ  ಶ್ರದ್ಧೆಯೇ ಪ್ರಾಮುಖ್ಯವಾಗುತ್ತದೆ.
ಒಂದಷ್ಟು ವರ್ಷದ ಹಿಂದಿನ ಬದುಕನ್ನು ಸಿಂಹಾವಲೋಕನ ಮಾಡುತ್ತೇನೆ. ಬದಲಾದ ಬದುಕಿನಲ್ಲಿ ಹೊಸತೊಂದು ಮಾಧುರ್ಯವನ್ನು ಗುರುತಿಸುತ್ತೇನೆ. ಬಹಳಷ್ಟು ಬದಲಾಗಿದ್ದೇನೆ ಅನ್ನಿಸುತ್ತದೆ. ಬಸ್ಸು ಹತ್ತಿ ಕುಳಿತಮೇಲೆ ಬಳಿಯಲ್ಲಿದ್ದ ಸಹ ಪ್ರಯಾಣಿಕರನ್ನು ಪರಿಚಯಿಸಿಕೊಂಡಂತೆ ಸುತ್ತಲಿನ ಪರಿಸರವನ್ನು ಮನಸ್ಸಿನಿಂದ ನನ್ನದಾಗಿಸುವ ಪ್ರಯತ್ನ ಮಾಡುತ್ತೇನೆ.
ನಿತ್ಯದ ಅನ್ನಾಹಾರದಂತೆ ಯೋಗಾಭ್ಯಾಸ ಬದುಕಿನಲ್ಲಿ ಮಿಳಿತಗೊಳ್ಳಬೇಕು. ಆಗ ಬದುಕನ್ನು ಸವಿಯಾಗಿ ಅನುಭವಿಸುವುದಕ್ಕೆ ಸಾಧ್ಯವಾಗುತ್ತದೆ. ನಮ್ಮ ಮನಸ್ಸು ನಮ್ಮ ಅಂಗಾಂಗ ಹೀಗೆ ಒಂದು ತಾದಾತ್ಮ್ಯ ಬೆಳೆಯುತ್ತದೆ.
ಯೋಗಾಭ್ಯಾಸ ಬಹಳ ಸರಳವಾಗಿ ತೊಡಗಿಸಬೇಕು. ಆರಂಭದಲ್ಲಿ ಶ್ರದ್ದೆಯ ಪ್ರಾಣಾಯಾಮ ಸಾಕಾಗುತ್ತದೆ. ಪ್ರಾಣಾಯಾಮ ಎಂದಕೂಡಲೇ ಹಲವರು ಮೂಗು ಮುರಿಯುತ್ತಾರೆ. ಒಂದು ರೀತಿಯ ಔದಾಸಿನ್ಯ. ಭಾರ ಎತ್ತುವುದೋ ಓಡುವುದೋ ಅಥವಾ ಏನೆಲ್ಲ ಕಸರತ್ತು ಇವಿಷ್ಟನ್ನೇ ನಂಬುವ  ಇವರಿಗೆ ಪ್ರಾಣಾಯಾಮ ಎಂದರೆ ಒಂದು ಆಗದ ವ್ಯವಹಾರ. ಬದುಕಿನ ಪ್ರತೀ ಘಳಿಗೆಯೂ ಅದೆಷ್ಟೋ ಉಸಿರನ್ನು ಉಸಿರಾಡುತ್ತೇವೆ.  ನಮ್ಮ ಗಮನ ಹರಿಸಿ, ಕ್ರಮ ಬದ್ದವಾಗಿ ಉಸಿರಾಡುವುದೇ ಪ್ರಾಣಾಯಾಮ.ಇದು ಬಹಳ ಸರಳ ಸಿದ್ದಾಂತ. ಇಲ್ಲಿ ಶ್ರದ್ಧೆಯೊಂದೇ ಮಂತ್ರವಾಗಬೇಕು. ಹುಟ್ಟಿದ ಮಗುವಿಗೆ ಆರಂಭದಲ್ಲಿ ಕೇವಲ ಎದೆಹಾಲು ಮಾತ್ರ ಆಹಾರವಾದಂತೆ ಆರಂಭದಲ್ಲಿ ಪ್ರಾಣಾಯಾಮ ಮಾತ್ರ ಅಹಾರ. ಆರಂಭದಲ್ಲಿ ದೇಹ ಒಗ್ಗುವುದಿಲ್ಲ. ಆದರೆ ನಿಧಾನವಾಗಿ ಹೊಂದಿಕೊಳ್ಳುತ್ತದೆ. ಪ್ರಾಣಾಯಾಮ ಯಾರೂ ಮಾಡಬಹುದಾದ ಮಾಡಲೇಬೇಕಾದ ಒಂದು ಕ್ರಿಯೆ. ಒಂದಿಷ್ಟು ಆಸನಗಳ ಮೂಲಕ ದೇಹವನ್ನು ಸ್ಥಿರಗೊಳಿಸಿದರೆ ಇದರ ಪರಿಣಾಮ ಬಹಳಷ್ಟು ಪ್ರಭಾವಿಯಾಗಿರುತ್ತದೆ.
ನಾವು ತಿಂದದ್ದು ಜೀರ್ಣವಾಗದೇ ಹೊಟ್ಟೆಯಲ್ಲಿ ಉಳಿದುಕೊಂಡರೆ ಸಂಕಟವಾಗುತ್ತದೆ. ಎಷ್ಟು ತಿನ್ನುತ್ತೇವೋ ಅಷ್ಟು ವಿಸರ್ಜನೆಯಾಗಲೇ ಬೇಕು. ಪೂರ್ಣವಾದ ಸೇವನೆ ಪೂರ್ಣವಾದ ವಿಸರ್ಜನೆ ಇದು ಜೀವ ಚಕ್ರ. ಅದರಂತೇ ಉಸಿರಾಟವೂ ನಡೆದರೆ ದೈಹಿಕ ಕ್ರಿಯಗಳೂ ಪರಿಪೂರ್ಣವಾಗುತ್ತದೆ.  ದೀರ್ಘವಾದ ಉಸಿರಾಟದಲ್ಲಿ ಪೂರ್ಣವಾಗಿ ಆಮ್ಲಜನಕವನ್ನು ಹೀರಿ ನಂತರ ಅಷ್ಟೇ ಪ್ರಮಾಣದಲ್ಲಿ ಅಂಗಾರಾಮ್ಲವನ್ನು ಬಿಡಬೇಕು. ಸಹಜವಾಗಿ ನಮ್ಮ ಉಸಿರಾಟದಲ್ಲಿ ಈ ಸಂತುಲನೆ ಇರುವುದಿಲ್ಲ. ಹೀರಿದ ವಾಯು ಬಿಡುವ ಮೊದಲೇ ಮತ್ತೊಂದು ಉಸಿರಿನ ವಾಯುವನ್ನು ಹೀರಿಬಿಡುತ್ತೇವೆ. ಇದು ಕ್ರಮ ಬದ್ದ ಉಸಿರಾಟವಲ್ಲ. ಪ್ರಾಣಾಯಾಮದಿಂದ ಸಂತುಲನೆಯ ಉಸಿರಾಟ ಸಾಧ್ಯವಾಗುತ್ತದೆ.

ಯೋಗಾಭ್ಯಾಸದ ಮತ್ತೊಂದು ಅಂಗ ಶವಾಸನ. ನನ್ನಲ್ಲಿ ಪ್ರತೀ ದಿನ ಹೊಸತನದ ಹುರುಪನ್ನು ಪ್ರಚೋದಿಸುವ ಪ್ರಕ್ರಿಯೆ ಇದು. ಅಂಗಾಂಗಗಳೆಲ್ಲವನ್ನು ಸಡಿಲವಾಗಿಸಿ ನೆಲದ ಮೇಲೆ ವಿರಮಿಸಿದರೆ ಪ್ರತಿಘಳಿಗೆಯೂ ದುಡಿಯುವ ದೇಹ ನಮ್ಮದಾದಂತೆ ಭಾಸವಾಗುತ್ತದೆ. ಆರಂಭದಲ್ಲಿ ಮನಸ್ಸು ಎತ್ತಲೋ ಓಡಿದರೂ ದೇಹ ವಿರಮಿಸುವಾಗ ಮನಸ್ಸೂ ಸ್ಪಂದಿಸುತ್ತಾ ನಿರಾಳತೆಯನ್ನು ವಿಶ್ರಾಂತಿಯನ್ನು ದೇಹದೊಂದಿಗೇ ಅನುಭವಿಸುತ್ತದೆ. ಶವಾಸನದಲ್ಲಿ ಉಸಿರಿನ ಲಯಕ್ಕೆ ಎದೆಬಡಿತದ ತಾಳಕ್ಕೆ ಧಮನಿ ಧಮನಿಯಲ್ಲಿ ಹರಿಯುವ ರಕ್ತ ಒಂದು ಮಧುರ ಅನುಭವದೊಂದಿಗೆ ಹೊಸತೊಂದು ಅನುಭವದತ್ತ ಹೊಸ ಸಮಯದತ್ತ ಕೊಂಡೊಯ್ಯುತ್ತದೆ. ಮನಸ್ಸನ್ನು ಚಂಚಲಗೊಳಿಸುವುದು ಯೋಚನೆಗಳು. ಆ ಯೋಚನೆಗಳು ನಿಧಾನವಾಗಿ ದೂರವಾಗುತ್ತದೆ. ಯೋಚನೆಗಳು ದೂರಾದಮೆಲೆ ಮನಸ್ಸು ಹಗುರವಾಗಿ ಸ್ಥಿರವಾಗಿರುತ್ತದೆ. ಯೋಚನೆಗಳತ್ತ ಮನಸ್ಸು ಚಲಿಸುವುದು ಸಾಮಾನ್ಯ. ಯಾವ ಯೋಚನೆಯೂ ಇಲ್ಲದಾಗ ಮನಸ್ಸು ಹಲವು ಸಲ ಪರಿಭ್ರಮಿಸುವುದುಂಟು.  ಶವಾಸನ ಮನಸ್ಸಿನಲ್ಲಿ ತುಂಬಿದ್ದ ಯೋಚನೆಗಳನ್ನು ಒಂದೊಂದಾಗಿ ದೂರಾಗಿಸುತ್ತ ಮನಸ್ಸಿನ ಭ್ರಮಣವನ್ನು ಕಡಿಮೆಗೊಳಿಸುತ್ತದೆ. ಯೋಚನೆಗಳಿಂದ ಮನಸ್ಸನ್ನು ಬೇರೆಯಾಗಿಸುವುದು ಕಷ್ಟ. ಆದರೆ ಮನಸ್ಸಿನಿಂದ ಯೋಚನೆಗಳನ್ನು ದೂರಾಗಿಸಿ ಹೊಸ ಯೋಚನೆಗಳು ಸುಳಿಯದಂತೆ ಶವಾಸನ ಪ್ರಚೋದಿಸುತ್ತದೆ. ಅಕ್ಕಿಯಿಂದ ಕಲ್ಲನ್ನು ಹೆಕ್ಕುವುದಕ್ಕೂ, ಕಲ್ಲಿನಿಂದ ಅಕ್ಕಿಯನ್ನು ಹೆಕ್ಕುವುದಕ್ಕೂ  ವೆತ್ಯಾಸವಿದೆಯಲ್ಲವೆ?  ಬಾನಾಡಿ ಪಕ್ಷಿಯಂತೆ ಕಲ್ಲಿನಿಂದ ಅಕ್ಕಿಯನ್ನು ಹೆಕ್ಕಬೇಕು. ಅದು ಬದುಕಿನಲ್ಲಿ ಸಹನೆಯನ್ನು ಜಾಗೃತವಾಗಿಸಿ  ನಿರೀಕ್ಷೆಯನ್ನು ಹುಟ್ಟಿಸುತ್ತದೆ.