ಬೆಂಗಳೂರಿನಿಂದ ಬೇರೆಲ್ಲಿಗಾದರೂ ಹೋಗಬಹುದು ಆದರೆ ಮಂಗಳೂರಿಗೆ
ಹೋಗುವುದು ಅಧ್ವಾನದ ವಿಚಾರವೇ ಆಗಿಬಿಟ್ಟಿದೆ. ಹರಿದು ಹರಿದು ಚಿಂದಿ ಸೀರೆಯಂತಾಗುವ ಶಿರಾಡಿ ಘಾಟಿ
ರಸ್ತೆಯನ್ನು ರಿಪೇರಿಯ ನೆವನದಲ್ಲಿ ಎರಡುವರ್ಷಕ್ಕೊಮ್ಮೆ ಮುಚ್ಚಿದಾಗ ಮಂಗಳೂರೆಂದರೆ ದೂರದ
ಅಂಡಮಾನ್ ದ್ವೀಪದ ಹಾಗೆ ಬೆಂಗಳೂರಿಗರಿಗೆ ಭಾಸವಾಗುತ್ತದೆ. ನೇರವಾಗಿ ಮಂಗಳೂರಿಗೆ ಹೋಗುವ
ರಸ್ತೆಗಳಲ್ಲಿ ಒಂದು ಚಾರ್ಮಾಡಿ ಘಾಟ್ ರಸ್ತೆ ಇನ್ನೊಂದು ಮೈಸೂರು ಮಡಿಕೇರಿ ರಸ್ತೆ. ಎರಡರಲ್ಲಿ
ಹೋದರೂ ನಿಗದಿತ ಸಮಯಕ್ಕೆ ಮುಟ್ಟುವ ಭರವಸೆಯೇ ಇರುವುದಿಲ್ಲ. ಅಥವಾ ನಿಗದಿತ ಸಮಯವನ್ನೇ ನಾವು
ದೂರವಿಟ್ಟು ಬಿಡಬೇಕಾಗುತ್ತದೆ. ಇದು ಒಂದರ್ಥದಲ್ಲಿ ಗಂಡನಾದವನು ತನ್ನ ಹೆಂಡತಿಯನ್ನು ಅಂಕೆಯಲ್ಲಿಟ್ಟುಕೊಂಡ
ಬಗ್ಗೆ ಕೊಚ್ಚಿಕೊಳ್ಳುವುದುಂಟು, “ ನಾನು ನನ್ನ ಹೆಂಡತಿಯನ್ನು ಹಾಕಿದ ಗೆರೆಯ ಒಳಗೆ
ನಿಲ್ಲಿಸುತ್ತೇನೆ.....” ವಿಪರ್ಯಾಸವೆಂದರೆ ಆ ಗೆರೆ ಎಲ್ಲಿ ಹಾಕಬೇಕೆಂದು ನಿರ್ಣಯಿಸುವುದು
ಹೆಂಡತಿ.! ಹಾಗೆ ಸಮಯಕ್ಕೆ ಊರಿಗೆ ತಲುಪಲಾಗದೇ ಇದ್ದರೆ ತಲುಪಿದ ಸಮಯವನ್ನೇ ನಿಗದಿಗೊಳಿಸುವುದು.
ನನಗೂ ಹೀಗೊಂದು ಅನುಭವ ಆದದ್ದು ಮಾತ್ರ ಮರೆಯಲಾಗದ
ಒಂದು ಪಯಣದ ಅನುಭವವನ್ನು ಬರೆದುಬಿಟ್ಟಿತು.
ರಾತ್ರಿ ಕಲ್ಲು ಎಸೆಯುವ ಈ ಕಲ್ಲು
ಹೃದಯದವರು ತಮ್ಮ ಮನೋರಂಜನೆಗೆ ಆಯ್ದುಕೊಂಡ ಮಾರ್ಗವನ್ನು ಕಂಡಾಗ ಅತ್ಯಂತ ಹೇಯವೆನಿಸಿತು. ಕಲ್ಲು
ಎಸೆದವರು ಯಾರೋ? ಒಂದು ವೇಳೆ ನೀವು ಅದೇ ಊರಲ್ಲಿ ಅನ್ವೇಷಣೆಗೆ ತೊಡಗಿದರೆ ಆ ಊರಿನವರು ಒಬ್ಬರೂ
ಬಾಯಿ ಬಿಡಲಾರರು. ಸಾಮಾನ್ಯವಾಗಿ ಅಂತಹ ಊರಲ್ಲಿ ಈ ರೀತಿಯ ಪುಂಡಾಟಿಕೆ ಮಾಡುವ ಪೋಕರಿಗಳ ಬಗ್ಗೆ
ಊರಿನವರಿಗೂ ಅರಿವಿರುತ್ತದೆ. ಸ್ಥಳೀಯ ಪೋಲೀಸರಿಗೂ ತಿಳಿದಿರುತ್ತದೆ. ಆದರೇನೂ ಪ್ರಯೋಜನ. ಯಾರದೋ
ಮನರಂಜನೆಗೆ ಯಾವುದೋ ಅಮಾಯಕರು ಬಡಪಾಯಿಗಳು ಬಲಿಯಾಗಿಬಿಡುತ್ತಾರೆ. ಪ್ರಯಾಣ ಸುಖಕರವಾಗಿರಲಿ ಎಂಬ
ಹಾರೈಕೆ ಎಂಬ ಮಾತು ಹಾಸ್ಯಾಸ್ಪದವಾಗಿ ಅಣಕಿಸುತ್ತದೆ.
ಗಾಯಗೊಂಡವರಿಗೆ ಚಿಕಿತ್ಸೆ
ಕೊಡುವುದಕ್ಕಾಗಿ ಇರಬೇಕು ಮೈಸೂರಲ್ಲಿ ರೈಲು ಒಂದು ಘಂಟೆ ವಿಳಂಬವಾದದ್ದು ಮಂಗಳೂರಿಗೆ ಮುಟ್ಟುವಾಗ
ಅದು ಎರಡು ಘಂಟೆಗೆ ವಿಸ್ತರಿಸಲ್ಪಟ್ಟಿತು. ಹೋಗಲಿ ಕ್ಷೇಮವಾಗಿ ಮುಟ್ಟಿದೆವಲ್ಲಾ ಎಂಬ
ನಿಟ್ಟುಸಿರಷ್ಟೇ ತೃಪ್ತಿಯ ದ್ಯೋತಕವಾಯಿತು. ಹೋಗುವಾಗ ಈ ರೀತಿಯ ಅನುಭವದಿಂದ ಅಲ್ಪತಲ್ಲಣ ಗೊಂಡರೆ
ಬರುವಾಗ ಆದ ಅನುಭವ ಇನ್ನೂ ಭೀಕರವಾಗಿತ್ತು.
ರಾತ್ರಿ ಒಂಭತ್ತರ ಸುಮಾರಿಗೆ
ಮಂಗಳೂರು ಕೇಂದ್ರದಿಂದ ಹೊರಡುವ ರೈಲಿಗಾಗಿ ಎಂಟೂ ಕಾಲಕ್ಕೆ ನಾನು ನಿಲ್ದಾಣದಲ್ಲಿದ್ದೆ. ಇದಕ್ಕೆ
ಮಿತ್ರ ಜಯಣ್ಣನ ಮನೆಯಿಂದ ಎಂಟಕ್ಕೇ ಹೋರಟಿದ್ದೆವು. ಜೋರಾಗಿ ಸುರಿಯುವ ಮಳೆಯ ಮಧ್ಯೆ ನಿಲ್ಧಾಣ
ಹೊಕ್ಕಾಗ ಯವಾಗಲೂ ಕೇಳುವ ರೈಲು ಹೊರಡುವ ಸೂಚನೆ ಕೇಳುತ್ತಿಲ್ಲ. ಅದರೆ ಸ್ವಲ್ಪ ಹೊತ್ತಿನಲ್ಲೇ
ಪ್ರಕಟಣೆಯೊಂದು ಹೊರಬಿದ್ದು ಮನಸ್ಸು ಗಲಿಬಿಲಿಗೊಂಡಿತ್ತು. ಒಂಭತ್ತಕ್ಕೆ ಹೊರಡುವ ರೈಲಿಗೆ
ಕಣ್ಣನ್ನೂರಿನಿಂದ ಬರುವ ರೈಲು ಅದಾಗಾಲೇ ಬಂದು ಕಾದುನಿಂತಿತ್ತು. ಆದರೆ ಕಾರವಾರದಿಂದ ಬರುವ ರೈಲು
ನಾಲ್ಕು ಘಂಟೆಯಷ್ಟು ತಡ ಎಂಬ ಸುದ್ದಿ ಸಿಕ್ಕಿದಾಗ ಎಲ್ಲರೂ ಅಘಾತಕ್ಕೆ ಒಳಗಾದರು ನಾಲ್ಕು ಘಂಟೆ
ಎಂದರೆ ಹನ್ನೆರಡು ಗಂಟೆ ನಲ್ವತ್ತು ನಿಮಿಷಕ್ಕೆ ಹೋರಡುವ ಸೂಚನೆ ಲಭ್ಯವಾಗಿತ್ತು. ಆದರೂ ಅದನ್ನು
ನಂಬುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಯಾಕೆಂದರೆ ಅದಿನ ಬೆಳಗ್ಗೆ ಬೆಂಗಳೂರಿನಿಂದ ಬಂದ ರೈಲು
ಕೂಡ ಐದು ಘಂಟೆ ತಡವಾಗಿ ಬಂದು ಕಾರವಾರಕ್ಕೆ ಹೋಗಿ ಪುನಃ ವಾಪಾಸು ಬರಬೇಕಿತ್ತು. ಆದರೆ ಆ ರೈಲು ಕಾರವಾರದಿಂದ ನಾನು ನಿಲ್ದಾಣ ಹೊಕ್ಕ ಸಮಯಕ್ಕೆ ಅಂದರೆ ಎಂಟು ಘಂಟೆಗೆ…!!!
ರಾಮ ರಾಮ…ಎಂಬ ಉದ್ಗಾರ ಅಲ್ಲದೇ ಬೇರೆನು ಹೇಳಲು ಸಾಧ್ಯ?
ಬಹಳಷ್ಟು ಜನ ಕುಟುಂಬ ಮಕ್ಕಳು ಲಗೇಜುಗಳೊಂದಿಗೆ ಪ್ಲಾಟ್ ಫಾರಂ ನಲ್ಲಿ ಹ್ಯಾಪ್ ಮೋರೆಯೊಂದಿಗೆ
ಕುಳಿತುಕೊಂಡಿದ್ದರು. ಅವರೆಲ್ಲ ಕಾರವಾರದಿಂದ ಬರುವ ರೈಲಿಗೆ ಕಾದಿರಿಸಿದ
ಕಾರಣ ಅಲ್ಲಿಯೇ ಕಾದುಕುಳಿತರೆ ಕಣ್ಣನ್ನೂರು ರೈಲಿಗೆ ಕಾದಿರಿಸಿದವರು ರೈಲಿನೊಳಗೆ ಮಲಗುವ ಸನ್ನಾಹ ಮಾಡುತ್ತಿದ್ದರು.
ಅದೇ ರೈಲಿನಲ್ಲಿ ನನ್ನ ಸೀಟ್ ಕಾದಿರಿಸಿದ್ದರಿಂದ
ನಾನು ಅದನ್ನೆ ಅನುಸರಿಸಿದೆ. ಬದಿಯ ಮೇಲಿನ ಸೀಟ್ ನನ್ನದಾಗಿತ್ತು.
ಅಲ್ಲಿಯೂ ಗ್ರಹಚಾರ ಬಿಡಲಿಲ್ಲ. ಸ್ವಲ್ಪ ಹೊತ್ತಿನವರೆಗೆ
ತಿರುಗುತ್ತಿದ್ದ ಫ್ಯಾನ್ ಎಲ್ಲ ಭೋಗಿಗಳಲ್ಲೂ ನಿಂತು ಬಿಟ್ಟಿತು. ಹೊರಗೆ
ಮಳೆಯಾದರೂ ಕಿಟಿಕಿ ತೆರೆಯದೆ ಇರುವುದರಿಂದ ಒಳಗೆ ಸೆಕೆ ವಿಪರೀತವಾಗಿತ್ತು. ನೀರವ ಮೌನದಲ್ಲಿ ಧ್ವನಿ ವರ್ಧಕದ ಪ್ರಕಟನೆಗಳಷ್ಟೇ
ಅಗಾಗ ಕೇಳುತ್ತಿತ್ತು. ಮತ್ತೆಲ್ಲ ಭೋಗಿ ಮೌನ ಆವರಿಸಿತ್ತು. ಆದರೆ ಅದು ಯಾರೋ ಪುಣ್ಯಾತ್ಮ ಪಕ್ಕದ ಸೀಟಿನವನು ಚಕ್ಕುಲಿಯೋ ಮತ್ತೆನೋ ಕುರುಕಲು ತಿಂಡಿ ತಿನ್ನುವ
ಕರ ಕರ ಸದ್ದು ಇಡೀ ಭೋಗಿಯನ್ನು ಅಪ್ಪಳಿಸಿದ ಅನುಭವ. ಈ ನಡುರಾತ್ರಿಯಲ್ಲೂ
ಅತನ ಚಪಲಕ್ಕೆ ಏನು ಹೇಳಬೇಕು. ತೊಟ್ಟೆಯೊಳಗಿನಿಂದ ಒಂದೊಂದು ಚಕ್ಕುಲಿ ತೆಗೆದು
ಬಾಯಿಗೆ ಹಾಕಿದಾಗಲೂ ಇದು ಕೊನೆಯದ್ದಾಗಿರಬಹುದು ಎಂದು ಮನಸ್ಸು ಲೆಕ್ಕಾಚಾರ ಹಾಕುತ್ತಿತ್ತು.
ಒಂದು ತಿಂದು ಖಾಲಿಯಾದಾಗ ಇನ್ನು ಇರಲಾರದು ಎಂದು ಬಗೆದರೆ ತೊಟ್ಟೆಯ ಚರ ಪರ ಸದ್ದಿನಿಂದ
ಇನ್ನೊಂದರ ಕರಕರ ಆರಂಭವಾಗುತ್ತಿತ್ತು. ಆದರೆ ಅದೆಷ್ಟು ಇತ್ತೋ ಬೇಗನೆ ಖಾಲಿಯಾಗಲಿಲ್ಲ.
ಮತ್ತೂ ಬಹಳಷ್ಟು ಹೊತ್ತು ಕರ ಕರ ಕರೆ ಕರೆಯಾಗುತ್ತಿತ್ತು. ಮನುಷ್ಯ ಶ್ವಾನಕ್ಕಿಂತಲೂ ಕಡೆಯಾಗುವ ಸಂದರ್ಭದಲ್ಲಿ
ಇದೂ ಒಂದು. ಮುಂಜಾನೆ
ಬೇಗನೇ ಎದ್ದುದರಿಂದಲೋ ಎನೋ ಅಂತೂ ಇಂತೂ ನಿದ್ದೆ ಚೆನ್ನಾಗಿಯೇ ಬಂತು. ಹನ್ನೆರಡು
ಘಂಟೆಗೆ ಟಿ. ಸಿ. ನಿಧಾನವಾಗಿ ಬಂದ. ಎಲ್ಲರ ಪ್ರಶ್ನೆಗಳ ಸುರಿಮಳೆಗೆ ಅವನಲ್ಲಿ ಉತ್ತರವೂ ಮೊದಲೇ ನಿಗದಿಯಾಗಿತ್ತು. “ಅರ್ಧಗಂಟೆಯಲ್ಲಿ ಆ ಟ್ರೈನ್ ಬರುತ್ತದೆ. ಆಮೇಲೆ ಹತ್ತು ನಿಮಿಷದಲ್ಲಿ
ಹೊರಡುತ್ತದೆ.”
ಅಂತೂ ಆ ರೈಲು ಒಂದು ಘಂಟೆಗೆ ಆಗಮಿಸಿ ಒಂದು ವರೆಗೆ ರೈಲು ತನ್ನ ಪ್ರಯಾಣ ಆರಂಭಿಸಿತು.
ನನಗೆ ನಿದ್ದೆ ಆವರಿಸಿದ್ದುದರಿಂದ ಇದು ಅರಿವಿಗೆ ಬರಲೇ ಇಲ್ಲ. ಎಚ್ಚರವಾದಾಗ ರೈಲು ಎಲ್ಲೋ ಸದ್ದಿಲ್ಲದೇ ನಿಂತ ಅನುಭವ. ಚಾಯ್ ವಾಲಾಗಳ
ಧ್ವನಿ. ಹಾಸನವೋ ಮತ್ತೊಂದೋ ಆಗಿರಬಹುದು ಎಂದು ಗ್ರಹಿಸಿ ಮೊಬೈಲ್ ನೋಡಿದೆ
ಘಂಟೆ ನಾಲ್ಕುವರೆಯಾಗಿತ್ತು. ನಿತ್ಯ ಮುಂಜಾನೆ ನಾನು ಎದ್ದೇಳುವ ಸಮಯ.
ಸಹಜವಾಗಿ ಎಚ್ಚರವಾಗಿತ್ತು. ಭೋಗಿಯೊಳಗೆ “ಮಲಗಿ ಮಲಗಿ…ಅಲ್ಲಿ ಮಲಗಿ …ಆ ಸೀಟು ಈ
ಸೀಟು” ಎಂಬ ಚರ್ಚೆ ಕೇಳುತ್ತಿತ್ತು.
ಬಹುಶಃ ಇಲ್ಲೆ ಹತ್ತಿದವರು ಇರಬೇಕು. ಹಾಸನದಲ್ಲಿ ಯಾರೂ
ಹತ್ತಿರಬಹುದು ಎಂದು ಯೋಚನೆ. ಅಷ್ಟರಲ್ಲಿ ಟಿ. ಸಿ. ಬಾವಲಿಯಂತೆ ಕರಿ ಕೋಟ್ ನೊಳಗಿನಿಂದ ತಲೆ ಹೊರಗೆ ಇಣುಕಿಸುತ್ತಾ
ಬಂದ. ಆತನಲ್ಲಿ ಕೇಳಿದೆ ಎಲ್ಲಿಗೆ ಬಂತು ರೈಲು. .ಆತನ ಉತ್ತರ ಕೇಳಿ ಹೌಹಾರಿದೆ…..ಅದು ಸುಬ್ರಹ್ಮಣ್ಯ ರೋಡು….
ಓಹ್…ಅದಾಗ ಐದು ಘಂಟೆ ಸಮಯ. ರೈಲು
ಅದಾಗ ತಾನೆ ಅಲ್ಲಿ ಬಂದು ನಿಂತಿತ್ತು..!!! ಛೇ ಅಲ್ಲಿ ಅದಕ್ಕಾಗಿ ಕಾದು
ಕುಳಿತ ಪ್ರಯಾಣಿಕರ ಪಾಡು ಹೇಗಿರಬಹುದು?
ರೈಲು ತಡವಾಗುತ್ತದೆ ಎಂದು ತಿಳಿದು ಮೊದಲೆ ಎರಡು ಪ್ಯಾಕೆಟ್ ಬಿಸ್ಕತ್ತು ಮತ್ತು ಎರಡು ಬಾಟಲ್
ನೀರು ತೆಗೆದು ಇರಿಸಿದ್ದೆ. ಎಂದಿನ ಮುಂಜಾನೆಯ ದಿನಚರಿಯಂತೆ ಒಂದು ಬಾಟಲ್
ನೀರು ಅಗಲೇ ಖಾಲಿಯಾಯಿತು. ಮುಖ ತೊಳೆದು ಬಿಸಿ ಬಿಸಿ ಬನ್ಸ್ ಇದು ಸುಬ್ರಹ್ಮಣ್ಯ್
ರೋಡ್ ಸ್ಪೆಶಲ್ ತಿಂದಾಯಿತು. ಆದರೂ ರೈಲು ಹೊರಡುವ ಸೂಚನೆ ಇಲ್ಲ.
ಆರು ಘಂಟೆ ಕಳೆಯಿತು. ಬೆಂಗಳೂರಿನಿಂದ ಬರುವ ಟ್ರೈನ್ ಬಂದನಂತರ
ಇದು ಬಿಡುವುದು ಎಂದು ಆಮೇಲೆ ತಿಳಿದುಬಂತು. ವಿಪರ್ಯಾಸವೆಂದರೆ ಅದೂ ನಿಗದಿತ
ಸಮಯಕ್ಕಿಂತ ಒಂದು ಘಂಟೆ ತಡ. ಮೊದಲೇ ಮಣಭಾರ ಹೊತ್ತವನಿಗೆ ಹೆಗಲಲ್ಲಿ ಎರಡು
ಚೀಲ ನೇತಾಡಿಸಿದ ಅನುಭವ.
ಅಂತೂ ಏಳು ಘಂಟೆಯಷ್ಟು ಹೊತ್ತಿಗೆ ರೈಲಿಗೆ ಸಂಚಲನೆ ಉಂಟಾಗಿ ಹೊರಟಿತು. ಮತ್ತೆ ಎಲ್ಲರೂ ಲೆಕ್ಕಾಚಾರದಲ್ಲಿ ತೊಡಗಿದರು ಬೆಂಗಳೂರಿಗೆ ಎಷ್ಟು ಹೊತ್ತಿಗೆ ತಲುಪಬಹುದು?
ಧೋ…ಎಂದು ಒಂದೇ ಸವನೆ ಸುರಿಯುವ
ಮಳೆಗೆ ರೈಲು ಪರ್ವತದ ನಡುವೆ ಸದ್ದು ಮಾಡುತ್ತಾ ಕಣಿವೆ
ಸುರಂಗಗಳನ್ನು ಹಾದು ಹೋಗುವುದನ್ನು ನೋಡುವುದೇ ಒಂದು ರೋಮಾಂಚನ. ಸುಮಾರು ಮೂರು ವರೆ ಘಂಟೆಗಳ ಕಾಲ ಘಾಟಿ ಪ್ರದೇಶದಲ್ಲಿ ಸಂಚರಿಸಿದ
ರೈಲು ಸಕಲೇಶ ಪುರ ತಲುಪುವಾಗ ಘಂಟೆ ಹತ್ತರ ಹತ್ತಿರವಾಗುತ್ತಿತ್ತು. ಎಲ್ಲರ ಹೊಟ್ಟೆಯೂ ಹಸಿದಿತ್ತು.
ಸ್ಟೇಶನ್ ತಲುಪುತ್ತಿದ್ದಂತೆ ಬಹಳಷ್ಟು ಜನ ಧುಮುಕಿ ತಿಂಡಿ ಮಾರುವವರ ಹತ್ತಿರ ಧಾವಿಸತೊಡಗಿದರು. ಇದೊಂದು
ರೀತಿ ನೆರೆ ಸಂತ್ರಸ್ತರಿಗೆ ಆಹಾರ ಒದಗಿಸಿದಂತೆ ಭಾಸವಾಯಿತು. ಒಬ್ಬನೇ ಒಬ್ಬ ತಿಂಡಿಮಾರುವವ ರೈಲನ್ನು
ಏರಲಿಲ್ಲ. ಪುನಃ ಸ್ವಸ್ಥಾನಕ್ಕೆ ಬರುವುದಕ್ಕೆ ರೈಲು
ಇಲ್ಲವೆಂದೋ ಏನೋ, ಹಾಗಾಗಿ ಬಹಳಷ್ಟು ಜನ ಹೊಟ್ಟೆ ಹಸಿವನ್ನು ಅನಿವಾರ್ಯವಾಗಿ ಕಟ್ಟಿಕೊಳ್ಳಬೇಕಾಯಿತು.
ನನ್ನಲ್ಲಿ ಬಿಸ್ಕತ್ತು ಅದಾಗಲೇ ಖಾಲಿಯಾಯಿತು. ನೀರಿನ
ಬಾಟಲ್ ಖಾಲಿಯಾಗಿ ನೀರೆಲ್ಲಿ ಸಿಗಬಹುದು ಎಂದು ಯೋಚಿಸುವಂತಾಯಿತು.
ಇನ್ನು ಹಾಸನಕ್ಕೆ ತಲುಪಿದಾಗ
ನೀರು…ಸಿಕ್ಕರೆ ಸಾಕು ಎಂದುಕೊಂಡರೆ ಹಾಸನದಲ್ಲಿ ನಮ್ಮ ಭೋಗಿ ಬಹಳ ಮುಂದೆ ನಿಂತುಬಿಟ್ಟು ಇಳಿದು ಹೋಗಿ
ತರುವಷ್ಟು ತಾಳ್ಮೆಯೂ ಇರಲಿಲ್ಲ. ಮೇಲಾಗಿ ಬ್ಯಾಗ್ ಲಗೇಜ್ ಭೋಗಿಯಲ್ಲಿ ಅನಾಥವಾಗಿ ಬಿಟ್ಟುಹೋಗುವುದಕ್ಕೆ
ಧೈರ್ಯ ಬರಲಿಲ್ಲ. ಒಟ್ಟಿನಲ್ಲಿ ತಿಂಡಿಯೂ ಇಲ್ಲ ನೀರು ಇಲ್ಲ. ತಿಂಡಿಯಾದರೂ ತಿನ್ನಬೇಕು ಎಂದೆನಿಸಲಿಲ್ಲ.
ಹೊರಗಿನ ತಿಂಡಿ ಅಷ್ಟು ಅನಿವಾರ್ಯವಾದಲ್ಲಿ ಮಾತ್ರವೇ ಸೇವಿಸುವವನು ನಾನು. ಆದರೆ ನೀರು. ಘಂಟೆಗೊಂದು
ಬಾರಿ ಅರ್ಧಲೀಟರ್ ನೀರು ಕುಡಿಯುವ ನಾನು ನೀರಿಗಾಗಿ ಪರಿತಪಿಸಿದೆ ಎಂದೇ ಹೇಳಬಹುದು.
ಹೊಳೆ ನರಸೀಪುರು ಕೆ ಆರ್
ನಗರ ಹೀಗೆ ಒಂದೊಂದು ನಿಲ್ದಾಣದಲ್ಲೂ ತಿಂಡಿಮಾರುವವರು ಬರೇ ಮದ್ಧೂರು ವಡೆಯ ಪರಿಮಳವನ್ನು ಹಂಚುತ್ತಿದ್ದರು.
ಮೈಸೂರು ನಿಲ್ದಾಣದಲ್ಲೂ ಭೋಗಿ ಬಹಳ ಮುಂದೆ ನಿಂತುಬಿಟ್ಟಿತು. ಸ್ವಲ್ಪ ಶ್ರಮ ವಹಿಸಿ ಬಹಳಷ್ಟು ದೂರ
ಕುಡಿಯುವ ನೀರಿಗಾಗಿ ಅರಸುತ್ತಾ ಸಾಗಿದರೂ ಊಹುಂ ನೀರು ಸಿಗಲಿಲ್ಲ…ಮಳೆಯೂ ಸುರಿಯುವ ಕಾರಣ ಕಣ್ಣಿಗೆ
ಗೋಚರಿಸುವ ನೀರು ಗಂಟಲಿಗೆ ಇಳಿಯದೇ ಹೋಯಿತು.
ಹಾಗೂ ಹೀಗೂ ಅದೇ ಅವಸ್ಥೆಯಲ್ಲಿ
ಬೆಂಗಳೂರು ನಿಲ್ದಾಣ ತಲುಪಿದಾಗ ಸಂಜೆ ಘಂಟೆ ನಾಲ್ಕರ ಸಮಯ. ಮಗ ಬೈಕ್ ತಂದು
ರೈಲ್ವೇ ನಿಲ್ದಾಣದಲ್ಲಿ ಕಾಯುತ್ತಿದ್ದ. ಹಾಗಾಗಿ ಲಗೇಜ್ ಹೆಗಲಿಗೇರಿಸಿ ಅವಸರವಸರವಾಗಿ ಇಳಿದು ಹೋಗುವಾಗಲೂ ಬುಸುಗುಡುತ್ತಾ
ನಿಂತುಕೊಂಡ ರೈಲು ಬಂಡಿಯನ್ನು ನೊಡಿದೆ. ಹಳಿಯ ಮೇಲೆ ನಿರಾಳವಾಗಿ ನಿಂತಂತೆ ಭಾಸವಾಯಿತು. ಮತ್ತೆ
ಹತ್ತು ನಿಮಿಷದಲ್ಲಿ ಮಗನ ಬೈಕ್ ನಲ್ಲಿ ಮನೆ ತಲುಪಿದವನೆ ಸುಮಾರು ಐದಾರು ಲೋಟ ನೀರು ಗಟ ಗಟನೆ
ಕುಡಿದರೂ ಮತ್ತೂ ಅತೃಪ್ತಿ ಕಾಡುತ್ತಿತ್ತು. ಬೆಳಗ್ಗೆ ಹತ್ತು ಘಂಟೆಯ ನಂತರ ನೀರು ಅಹಾರವಿಲ್ಲದ ಪಯಣ
ಮುಗಿಸಿಯಾಗಿತ್ತು. ಬಹುಷಃ ನನ್ನ ಯೋಗಾಭ್ಯಾಸದ ಫಲವೋ ಶರೀರದಲ್ಲಿ ಇನ್ನೂ ಉತ್ಸಾಹ ವಿದ್ದಂತೆ
ಅನಿಸುತ್ತಿತ್ತು. ನಮ್ಮೂರು ಎಂದರೆ ನಮಗೆ ಅಂಡಮಾನಿಗೆ ಹೋದ ಅನುಭವವನ್ನು ತರುತ್ತದೆ. ಅತ್ತ ಬಸ್
ಪ್ರಯಾಣವೂ ಅಧ್ವಾನ. ಇತ್ತ ರೈಲು ಪ್ರಯಾಣವೂ ಅಧ್ವಾನ. ಮತ್ತೆ ಊರಿಗೆ ಹೋಗುವುದಾದರೂ ಹೇಗೆ? ಎಲ್ಲೋ
ಇದ್ದ ಊರಿನ ನೆನಪನ್ನು ಆದಷ್ಟು ನೋವಿನಿಂದ ಹತ್ತಿಕ್ಕಿಕೊಳ್ಳಬೇಕು.
No comments:
Post a Comment