Thursday, January 19, 2017

ಬದುಕು ವ್ಯಾಪಾರವಾದಾಗ

ನಮ್ಮ ಮನೆಯ ರಸ್ತೆಯಲ್ಲಿ  ಈ ತುದಿಯಿಂದ ಆ ತುದಿಯವರೆಗೂ ಹಲವು ಅಂಗಡಿಗಳು ಮಂಡಿಗಳು, ತರಕಾರಿ ಗಾಡಿಗಳು,  ಖಾಸಗೀ ಕಛೇರಿಗಳು ಮದ್ಯದಂಗಡಿ ಹೋಟೇಲು ಹೀಗೆ ಹಲವು ವ್ಯವಾಹರಗಳ ಸ್ಥಳಗಳು ಇವೆ. ಈ ನಡುವಲ್ಲಿ ಒಂದೆರಡು ದೇವಸ್ಥಾನಗಳು. ಬೆಳಗ್ಗೆ ಎಲ್ಲ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಂತೆ ಈ ದೇವಸ್ಥಾನಗಳ ಬಾಗಿಲುಗಳು ತೆರೆಯಲ್ಪಡುತ್ತವೆ. ಹಲವು ಅಂಗಡಿಗಳಿಗೆ ಗ್ರಾಹಕರು ಸಾಮಾಗ್ರಿಗಳನ್ನು ಖರೀದಿಸಲು ಬರುವಂತೆ  ದೇವಸ್ಥಾನಗಳಿಗೂ ಭಕ್ತಾದಿಗಳು ಬರುತ್ತಾರೆ. ತಮ್ಮ ಕೆಲಸ ಮುಗಿಸಿ ತೆರಳುತ್ತಾರೆ. ಎಲ್ಲಾ ದಿನಗಳು ಇದು ಯಾಂತ್ರಿಕವೆಂಬಂತೆ ನಡೆದುಹೋಗುತ್ತಿರುತ್ತದೆ. ಅಂಗಡಿ ತೆರೆದಾಗ ಈ ದೇವಸ್ಥಾನದ ಬಾಗಿಲುಗಳು ತೆರೆದು ರಾತ್ರಿ ಅಂಗಡಿ ಮುಚ್ಚಿದಾಗ ಇಲ್ಲೂ ಅಷ್ಟೆ ಎಲ್ಲ ಬಾಗಿಲು ಮುಚ್ಚಿ ಬೀಗ ಜಡಿದು ಅರ್ಚಕರು ತೆರಳುತ್ತಾರೆ. ಅಂಗಡಿಗಳ ಮುಚ್ಚಿದ ಬಾಗಿಲುಗಳ ನಡುವೆ ದೇವಸ್ಥಾನದ ಬಾಗಿಲು ಮುಚ್ಚಿದುದನ್ನು ನೋಡಿದರೆ ಅಂಗಡಿಗೂ ದೇವಸ್ಥಾನಕ್ಕೂ ಯಾವುದೇ ವೆತ್ಯಾಸ ಕಾಣುವುದಿಲ್ಲ. ನನಗೇಕೋ ಈ ಬೆಂಗಳೂರಿನ ಬೀದಿಯಲ್ಲಿರುವ ದೇವಸ್ಥಾನವನ್ನು ನೋಡಿದರೆ ಭಯಭಕ್ತಿ ಹುಟ್ಟುವುದಿಲ್ಲ. ನಾನು ನಾಸ್ತಿಕನಲ್ಲ. ಹಾಗೆಂದು ನಾಸ್ತಿಕನನ್ನು ಪರಮ ನಾಸ್ತಿಕನನ್ನಾಗಿ ಮಾಡುವ ಈ ಬೀದಿಯ ವ್ಯವಹಾರಗಳನ್ನು ನಿತ್ಯ ಕಾಣುತ್ತೇನೆ. ಬೆಳಗ್ಗೆ  ಜನಸಂಚಾರ ತೊಡಗುವಾಗ ಕಛೇರಿ ಕಾರ್ಖಾನ ಇನ್ನಿತರ ಕೆಲಸದ ನಿಮಿತ್ತ ಜನರು ರಸ್ತೆಗಿಳಿವಾಗ  ದೇವಸ್ಥಾನದ ಬಾಗಿಲುಗಳು ತೆರೆದು ಹತ್ತು ಘಂಟೆಯಾಗುತ್ತಿದ್ದಂತೆ ಬಾಗಿಲು ಮುಚ್ಚುತ್ತವೆ. ಆನಂತರ  ಸಾಯಂಕಾಲ ಪುನಃ ಜನರು ಕಛೇರಿ ಕಾರ್ಖಾನೆಗಳನ್ನು ಬಿಡುವಾಗ ಪುನಃ ತೆರೆದು ಯಥಾವತ್ ಜನಸಂಚಾರ ವಿರಳವಾಗುತ್ತಿದ್ದಂತೆ ಬಾಗಿಲು ಮುಚ್ಚಲ್ಪಡುತ್ತವೆ. ಹಾಗಾಗಿ ದೇವಸ್ಥಾನ ನೋಡುವಾಗ ಒಂದು ಅಂಗಡಿಯನ್ನು ನೋಡಿದ ಅನುಭವವಾಗುತ್ತದೆ. 

ವ್ಯಕ್ತಿಗೊಂದು ಜನಗಳಿಗೊಂದರಂತೆ ಈ ದೇವಸ್ಥಾನಗಳು. ಕೆಲವೊಮ್ಮೆ ಇದು ದೇವರಿಗಾಗಿ ಇರುವುದೋ ಮನುಷ್ಯರಿಗಾಗಿ ಇರುವುದೋ ಎಂಬ ಜಿಜ್ಜಾಸೆ ಬಹಳವಾಗಿ ಕಾಡುತ್ತದೆ. ನಮ್ಮೂರಿನ ಜನಸಂಚಾರವೇ ಇಲ್ಲದಲ್ಲಿ ಗುಳಿಗನ ಕಲ್ಲು ಅಥವಾ ಭೂತದ ಸ್ಥಾನಗಳು ಕಂಡುಬರುತ್ತವೆ.  ಇದು ದೇವರಿಗಾಗಿ ಅಥವಾ ಭೂತಕ್ಕಾಗಿಯೇ ನಿರ್ಮಾಣಗೊಂಡದ್ದು.  ಅಲ್ಲಿ ತಿಂಗಳಿಗೊಮ್ಮೆಯೋ ವರ್ಷಕೊಮ್ಮೆಯೋ ಸ್ವತಃ ಜನ ಸೇರಿಕೊಂಡು ಪೂಜೆ ಜಾತ್ರೆ ನೇಮಗಳನ್ನು ಆಚರಿಸುತ್ತಾರೆ. ಇಲ್ಲಿ ಜನ ಬಾರದೇ ಇದ್ದರೂ ಇದು ನೆರವೇರಿಯೇ ತೀರುತ್ತದೆ. ನಮ್ಮೂರಿನ ಹಲವು ದೇವಸ್ಥಾನಗಳು ಇವೆ. ಅಲ್ಲಿ ಭಕ್ತರ ಸಂಖ್ಯೆ ಬಹಳಷ್ಟು ವಿರಳ. ಮೂರು ಹೊತ್ತು ಬಾಗಿಲು ತೆಗೆದು ಘಂಟೆ ಬಾರಿಸಿ ಪೂಜೆ ನೆರವೇರುತ್ತದೆ. ಹೆಚ್ಚಿನ ದಿನ ಕೇವಲ ಅರ್ಚಕ ಮಾತ್ರವೇ ಇದ್ದರೂ ಆತ  ಬಂದು ಬಾಗಿಲು ತೆರೆದು ದೀಪ ಹಚ್ಚಿ ಅದೂ ಮೂರು ಹೊತ್ತು ಪೂಜೆ ಮಾಡಿ ರಾತ್ರಿ ಕೊನೆಯ ಪೂಜೆ ಮಾಡಿ ಬಾಗಿಲು ಹಾಕಿ  ಹೋಗಿಬಿಡುತ್ತಾರೆ. ಭಕ್ತರಿಗಾಗಿ ಯಾವ ಅರ್ಚಕನಾಗಲೀ ದೇವರಾಗಲೀ ಕಾಯುತ್ತಿರುವುದಿಲ್ಲ. ಯಾರು ಬಾರದೇ ಇದ್ದರೂ ಪೂಜೆ ಪುನಸ್ಕಾರಗಳು ನಡೆದೇ ನಡೆಯುತ್ತದೆ. ಇದಕ್ಕೆ ಸಾಕ್ಷಿ ಮೂರು ಹೊತ್ತು ಕೇಳುವ ಘಂಟಾನಾದ. 

ವಿಚಿತ್ರವೆಂದರೆ ಭಕ್ತರು ಬೆಂಗಳೂರಿನಲ್ಲಿ ಬಂದಾಗ ದೇವರಿಗೆ ಪೂಜೆ ಸಲ್ಲುತ್ತದೆ. ಭಕ್ತರ ಸಂಖ್ಯೆ ಕರಗುತ್ತಿದ್ದಂತೆ ದೇವರ ಪೂಜೆಯೂ ಮುಗಿಯಿತು. ವಾರಾಂತ್ಯದಲ್ಲಿ ಶನಿವಾರ ಭಾನುವಾರ ಅದು ತಿಥಿ ನಕ್ಶತ್ರ ದಿನಗಳು ಯಾವುದೇ ಇರಲಿ, ವಾರವಿಡೀ ಮುಚ್ಚಿರುವ ದೇವಸ್ಥಾನವು ಅ ದಿನವಿಡೀ ಬಾಗಿಲು ತೆರೆದು ಘಂಟೆಯ ದ್ವನಿ ಹೊರಡಿಸುತ್ತಿರುತ್ತದೆ.  ಇದು ಶನಿವಾರ ಭಾನುವಾರವಲ್ಲದ ರಜಾದಿನವಾದರೂ ಸರಿಯೇ. ವಿಚಿತ್ರವೆಂದರೆ  ಈ ರಜೆಗೆ ಜಾತಿಭೇದವಿಲ್ಲದ ಸರ್ವ ಧರ್ಮ ಸಮನ್ಯಯತೆ ಇದೆ.   ಮುಸ್ಲಿಂ ಕ್ರಿಸ್ಥು ಹಬ್ಬದಂದೂ ಉಳಿದ ರಜೆಯಂತೆ ದೇವಸ್ಥಾನದ ಬಾಗಿಲು ತೆರೆದು ಸರ್ವ ಧರ್ಮ ಸಮನ್ವಯ ಸಿದ್ದಾಂತವನ್ನು ಪ್ರತಿ ಪಾದಿಸುತ್ತದೆ. ಹಾಗಗಿ ಭಕ್ತರು ಬಂದಾಗ ತೆರೆದುಕೊಳ್ಳುವ ದೇವಸ್ಥಾನಗಳು ,  ಇದನ್ನು ನೋಡಿಯೇ ದೇವಸ್ಥಾನಕ್ಕೂ ಅಂಗಡಿಗೂ ವೆತ್ಯಾಸವೇ ತಿಳಿಯುವುದಿಲ್ಲ.  ಗಿರಾಕಿಗಳು ಇಲ್ಲದಾಗ ಗಿರಾಕಿಗಳಿಗೆ ಅಂಗಡಿ ಬಾಗಿಲ ಮುಂದೆ ಕಾದು ಕುಳಿತ ಅಂಗಡಿಯಾತನಂತೆ ಭಕ್ತರಿಲ್ಲದಾಗ ದೇವಸ್ಥಾನದ ಅರ್ಚಕನೂ ಬಾಗಿಲ ಮುಂದೆ ಭಕ್ತ ಗಿರಾಕಿಗಳಿಗೆ ಕಾದುನಿಂತಿರುತ್ತಾನೆ.   ಅಂಗಡಿಯಲ್ಲಿನ ಸಾಮಾನು ದರ ಪಟ್ಟಿಯಂತೆ, ಪಕ್ಕದಲ್ಲೆ ಒಂದು ಸೇವಾಫಲಕ ವೂ ಅಣಕಿಸುತ್ತಿರುತ್ತದೆ. ಕುಂಕುಮಾರ್ಚನೆಗೆ ಇಷ್ಟು, ರುದ್ರಾಭಿಷೇಕಕ್ಕೆ ಇಷ್ಟು...ಛೇ ಮನುಷ್ಯನ ಜೀವನ ಹೀಗೆಕೆ ವ್ಯಾವಹಾರಿಕವಾಗುತ್ತದೆ? ಅರ್ಥವಾಗುವುದಿಲ್ಲ. ಯಾವುದರಲ್ಲಿ ಮನುಷ್ಯ ತೃಪ್ತಿ ಎಂಬ ನಿಧಿಯನ್ನು ಅರಸುತ್ತಾನೆ? ಈ ನಿಧಿಯನ್ನು ಅರಸಿದಂತೆ ಅದೂ ಮತ್ತೂ ಮತ್ತೂ ಆಳಕ್ಕೆ ಇಳಿದು ಒಂದು ರೀತಿಯ ಅತೃಪ್ತಿಯ ಹೊಗೆ ಗಾಢವಾಗುತ್ತಾ ಇರುತ್ತದೆ. ಆಡಂಬರದಿಂದ   ದೇಹಕ್ಕೆ ವಸ್ತ್ರ ಧರಿಸಿದಷ್ಟೂ ನಗ್ನರಾಗುವಂತಹ ಪ್ರವೃತ್ತಿ.  ನಮ್ಮೂರಿನಲ್ಲಿ ಯಾರಿಲ್ಲದೇ ಇದ್ದರೂ ಮೂರು ಹೊತ್ತು ಮಳೆ ಇರಲಿ ಬಿಸಿಲಿರಲಿ ಪೂಜೆ ನಡೆಯುತ್ತಿರುತ್ತದೆ. ಸೂತಕವೋ ಮತ್ತೋಂದೋ ವಿಘ್ನ ಗಳು ಬಂದಾಗ ಬದಲೀ ಅರ್ಚಕರು ಬಂದು ಅದೊಂದು  ಅನಿವಾರ್ಯ ಕರ್ತವ್ಯದಂತೆ ನೆರವೇರಿಸಿ ಹೋಗುತ್ತಾರೆ. ದೇವರಿಗಾಗಿ ಪೂಜೆಯೇ ಭಕ್ತರಿಗಾಗಿಯೇ? ದೇವರ ಅಸ್ತಿತ್ವ ಭಕ್ತರಿಂದಲೇ ಅಂತ ಸಮಾಧಾನಿಸಿಕೊಳ್ಳಬೇಕು. 

ಎಲ್ಲವೂ ವ್ಯಾಪಾರೀಕರಣವಾಗುವಾಗ  ನಮಗೆ ಸಿಗುವ ಶಾಂತಿ ಸಮಾಧಾನಗಳೂ ವ್ಯಾಪಾರಿಕರಣವಾಗಿ ಬೆಲೆ ನಿಗದಿಯಾಗಿಬಿಡುತ್ತದೆ. ಊರಲ್ಲಿ ಯಾವ ಹೊತ್ತಿಗೆ ಬೇಕಾದರೂ ಬೆಟ್ಟದ ತುದಿಯಲ್ಲಿ ನಿರಮ್ಮಳವಾಗಿ ಪ್ರಕೃತಿಯನ್ನು ನೋಡುತ್ತಾ ಶಾಂತಿ ನೆಮ್ಮದಿಯನ್ನು ಯಥಾ ಸಾಧ್ಯ ಪಡೆಯಬಹುದು. ಆದರೆ ನಗರದಲ್ಲಿ ರಸ್ತೆಗಿಳಿದರೆ ಈ ಬಗೆಯ ವ್ಯಾಪಾರಗಳು, ಹೋಗಲಿ ಶುದ್ದ ವಾಯುವಾದರೂ ಅನುಭವಿಸುವ ಎಂದು ಉದ್ಯಾವನದೆಡೆಗೆ ಹೋಗಿ ಕುಳಿತರೆ ಅದಕ್ಕೂ ಸಮಯ ನಿಗದಿಯಾಗಿರುತ್ತದೆ. ಮೀರಿದರೆ ಕಾವಲುಗಾರ ಸೀಟಿ ಹೊಡೆದು ಎಚ್ಚರಿಸುತ್ತಾನೆ. ಜಗತ್ತು ವಿಶಾಲವಾದಷ್ಟು ಮತ್ತೂ ಸಂಕುಚಿತವಾದಂತೆ, ಸಂಕುಚಿತ ಎಂದು ಭಾವಿಸಿ ಕೈಚಾಚಿದರೆ ಎಲ್ಲವೂ ನಮ್ಮಿಂದ ದೂರಾಗಿ ಅಂತರವನ್ನು ಹೆಚ್ಚಿಸಿದಂತೆ ಜಗತ್ತು ಮತ್ತು ವಿಶಾಲವಾದ ಅನುಭವವನ್ನು ತರುತ್ತದೆ. 

3 comments:

  1. ಒಂದು ಕಡೆ ನಾಸ್ತಿಕನಲ್ಲ ಎಂದು ಹೇಳಿಕೊಂಡಿದ್ದೀರಿ... ಮುಂದಕ್ಕೆ ಹೋದಂತೆ ಪ್ರಬಂಧದಲ್ಲಿ ಸಿನಿಕತನದ ಹೊಗೆ ತಟ್ಟುತ್ತದೆ. ಲೇಖನದಲ್ಲಿ ಸದಭಿರುಚಿಯ ಕೊರತೆ ಕಂಡು ಬಂತು. ದೇವಸ್ಥಾನಗಳಲ್ಲಿ ವ್ಯಾಪಾರೀಕರಣವೆಂದರೇನು? ಭಕ್ತಾದಿಗಳು ಬಂದಾಗ ದೇವಳದ ಬಾಗಿಲು ಮುಚ್ಚಿರಬೇಕೇ? ಹಗಲಲ್ಲಿ ಬಾಗಿಲು ತೆರೆಯದೇ ಇನ್ನು ಯಾವಾಗ ತೆರೆಯಬೇಕು? ಭಕ್ತಿಯೋ ಇನ್ನೇನೋ ದೇವಳಕ್ಕೆ ಯಾರಾದರೂ ಹೋಗಿ ಪೂಜೆಪುನಸ್ಕಾರ ನಡೆಸಿದರೆ ನಾವೇಕೆ ಪ್ರಶ್ನಿಸಬೇಕು?

    ReplyDelete
    Replies
    1. ಆಸ್ತಿಕ ಮತ್ತು ನಾಸ್ತಿಕ ಪದದ ಅರ್ಥವೇ ತಿಳಿಯದಂತೆ ತಾವುಗಳು ಮಾತನಾಡಿರುತ್ತೀರಿ. ನಾನು ನಾಸಿಕನಲ್ಲ ಎಂದರೆ ದೇವರಿಲ್ಲ ಎಂದು ವಾದಿಸುವವನಲ್ಲ. ನಮ್ಮ ಭಕ್ತಿ ನಂಬಿಕೆಗಳು ಅವುಗಳು ನಮ್ಮೊಳಗಿನ ವ್ಯವಹಾರವಾಗಿರಬೇಕೆ ಹೊರತು ಹೊರಗಿನ ವಾಣಿಜ್ಯ ವ್ಯವಹಾರವಾಗುವುದರಲ್ಲಿ ಖೇದವಿದೆ. ಭಕ್ತರು ಬಂದಾಗ ಪೂಜೆ ಮಾಡುವುದೆಂದರೆ ಇಲ್ಲಿ ಭಕ್ತಿ ಒಂದು ವ್ಯಾಪಾರವಾಯಿತಲ್ಲವೇ? ನಮ್ಮ ಭಕ್ತಿ ಪ್ರಕಟನೆಗಾಗಿ ಕಾದಿರುವವ ಅರ್ಚಕರು. ಇದೆಲ್ಲ ಏನನ್ನು ತೋರಿಸುತ್ತದೆ. ನಮ್ಮೂರಿನ ದೇವಾಲಯಗಳಲ್ಲಿ ಭಕ್ತರಿಗಾಗಿ ಅರ್ಚಕರು ಕಾದು ಕುಳಿತಿರುವುದಿಲ್ಲ. ಮೂರು ಹೊತ್ತಿನ ಪೂಜೆಗೂ ಶಾಸ್ತ್ರಾನುಸಾರವಾಗಿ ಒಂದು ಸಮಯ ನಿಗದಿಯಾಗಿರುತ್ತದೆ. ಅದರಂತೆ ಯಾರೂ ಭಕ್ತರಿಲ್ಲದಿದ್ದರೂ ಅಲ್ಲಿ ಭಗವಂತನ ಸಾನ್ನಿಧ್ಯ ಇದೆ ಎಂಬ ನಂಬಿಕೆಯಲ್ಲಿ ಪೂಜೆ ನಡೆದು ಹೋಗುತ್ತದೆ. ಒಂದು ಹೊತ್ತು ಮಹಾಪೂಜೆಯಾಗಿ ಮಹಾ ಮಂಗಳಾರತಿಯಾಗಿ ಮಂತ್ರ ಪುಷ್ಮ ಸಮಪರ್ಪಣೆಯಾದ ಮೇಲೆ ಪ್ರಾರ್ಥನೆ (ಇದೆಲ್ಲ ಮಂತ್ರೋಕ್ತವಾಗಿಯೇ ಇರುತ್ತದೆ) ಸಲ್ಲಿಕೆಯಾದ ಮೇಲೆ ಪ್ರಸಾದ ವಿತರಣೆಯಾಗುತ್ತದೆ. ಯಾರಿಲ್ಲದೇ ಇದ್ದರೆ ಪ್ರಸಾದ ವಿತರಣೆಯೊಂದು ಆಗುವುದಿಲ್ಲ. ಒಂದು ವೇಳೆ ಇದೆಲ್ಲ ಆದ ನಂತರ ಹೊತ್ತು ಮೀರಿ ಯಾವುದೇ ಒಬ್ಬ ಭಕ್ತ ಬಂದಲ್ಲಿ ಅವನಿಗಾಗಿ ಗರ್ಭಗುಡಿ ಬಾಗಿಲು ತೆರೆಯಲ್ಪಡುವುದಿಲ್ಲ. ತೀರ್ಥ ಪ್ರಸಾದ ವಿತರಣೆಯಾಗುತ್ತದೆ. ಆದರೆ ಇಲ್ಲಿ ಆಗುವುದೇನು? ಯಾರು ಯಾವ ಹೊತ್ತಿನಲ್ಲಿ ಹೋದರು ಪೂಚೆ ಪುನಸ್ಕಾರ ಇತ್ಯಾದಿಗಳು ಆಗುತ್ತವೆ. ಮುಚ್ಚಿದ ಬಾಗಿಲು ತೆರೆದು ದೇವರನ್ನು ಎಬ್ಬಿಸಿ ಪುನಃ ಪೂಜೆ ಮಾಡಿದ್ದನ್ನು ಪ್ರಸಾದ ವಿತರಣೆ ಮಾಡಿದ್ದನ್ನು ಸ್ವತಃ ಕಂಡಿದ್ದೇನೆ. ಇದೆಲ್ಲ ತೀರ ವ್ಯಾವಹಾರಿಕದಂತೆ ಅನಿಸಿತ್ತುದೆ. ಇದು ಸಿನಿಕತನ ಹೇಗಾದೀತು?

      Delete
    2. ನಿಮ್ಮ ವಿಚಾರ ನನಗೆ ಒಪ್ಪಿಗೆ. ಆದರೂ ಉತ್ತರ ಭಾರತದ ದೇವಾಲಯಗಳಲ್ಲಿ ನಡೆಯುವಂಥಾ ವ್ಯಾಪಾರೀಕರಣ ನಮ್ಮ ದ.ಭಾರತದ ದೇವಳಗಳಲ್ಲಿ ನಡೆಯುವುದಿಲ್ಲ. ನಾನು ಹೆಚ್ಚಾಗಿ ದೇವಸ್ಥಾನಗಳಿಗೆ ಹೋಗುವವನಲ್ಲ, ಆದರೂ ಕೆಲವೂಮ್ಮೆ ದೂರದಿಂದ ಬಂದಂತಹ ಭಕ್ತರಿಗೆ ದೇವರ ದರ್ಶನವಾಗದಿದ್ದರೆ ಅದಕ್ಕೆಂದೇ ಬಂದವರಿಗೆ ನಿರಾಶೆಯಾಗೂದಿಲ್ಲವೇ? ಅವರಿಗೋಸ್ಕರ ಪೂಜೆ ಆರತಿ ಮಾಡದಿದ್ದರೆ ಬೇಡ. ಕನಿಷ್ಠ ದರ್ಶನವನ್ನಾದರೂ ಮಾಡಿಸಬಹುದಲ್ಲವೇ? ಹಿಂದೊಮ್ಮೆ ಗುಜರಾತಿನ ಇಬ್ಬರನ್ನು ನಮ್ಮ ಒಂದು ಪ್ರಸಿದ್ಧ ದೇವಸ್ಥಾನಕ್ಕೆ ಕರಕೊಂಡು ಹೋಗಿದ್ದೆ. ಸಮಯ ಮೀರಿ ಹೋಗಿತ್ತು. ಅಲ್ಲಿನ ಒಬ್ಬ ಅರ್ಚಕ ಮಹಾನುಛಾವರು ಪೂಜಾಕಾರ್ಯಕ್ರಮಗಳನ್ನು ನಡೆಸಲಿಲ್ಲ, ಆದರೆ ದೇವಳದ ಮಹತ್ವ , ಕಾರಣೀಕ ಹಾಗೂ ಭಕ್ತಿಯ ಬಗ್ಗೆ ಚನ್ನಾಗಿ ಮಾತನಾಡಿದರು. ಆ ಗುಜರಾತಿಗಳು ' ಹಮಾರೇ ಮಂದಿರೋಂಮೆ ಇತನಾ ಅಚ್ಛಾ ವಿಚಾರ್ ನಹೀಂ ಮಿಲತೇ ಹೆಂ. .ಆಪಕೇ ಯಹ ಮಹಾಶಯ ನೇ ಬಹುತ್ ಅಚ್ಛೀ ಬಾತ್ ಕಹೀ. ಧನ್ಯವಾದ್ ಆಪಕಾ.' ಎಂದು ಬಹಳವೇ ಪ್ರಶಂಸೆಯನ್ನು ವ್ಯಕ್ತ ಪಡಿಸಿದರು. ದೇವಸ್ಥಾನಗಳ ಪುರೋಹಿತರ ಬಗ್ಗೆ ನನಗೂ ಆ ದಿನಗಳಲ್ಲಿ ಬಹಳವೇನೂ ಅಭಿಮಾನವಿರಲಿಲ್ಲ. ಆ ನಿರ್ದಿಷ್ಠ ಘಟನೆ ನಂತರ ವಿಚಾರದಲ್ಲಿ ಕೊಂಚ ಪರಿವರ್ತನೆ ಮಾಡಿಕೊಳ್ಳಬೇಕಾಯಿತು. ಎಲ್ಲ ದೇವಸ್ಥಾನಗಳ ಮುಖ್ಯಸ್ಥರು ಖದೀಮರಿರುವುದಿಲ್ಲ.. ಒಳ್ಳೆಯವರೂ ಸಿಗುತ್ತಾರೆ........

      Delete