“ಇದನ್ನು
ವಾಸ್ತವದಲ್ಲಿನ ಸತ್ಯ ಕಥೆ ಎಂದು ಹೇಳುವುದಕ್ಕೆ ಅತೀವ ವಿಷಾದವಾಗುತ್ತದೆ.”
ಮಲಯಾಳಂ ಸಿನಿಮಾ ಒಂದರ ಹಾಸ್ಯ ಸನ್ನಿವೇಶ.
ಅದು ಮದುವೆಯಾದ ಗಂಡು ಹೆಣ್ಣಿನ ಮೊದಲರಾತ್ರಿ ಕಳೆದಿರುತ್ತದೆ. ಬೆಳಗ್ಗೆ ಗಂಡನಿಗೆ ಮೊದಲು ಎಚ್ಚರವಾಗುತ್ತದೆ. ಎಚ್ಚರಗೊಳ್ಳುತ್ತಲೇ ತಡಬಡಿಸಿ ಎದ್ದು
ಗಡಿಯಾರದಲ್ಲಿ ಸಮಯ ನೋಡುತ್ತಾನೆ. ಗಡಿಬಿಡಿಯಲ್ಲಿ ಅಲ್ಲೇ ಕಳಚಿಟ್ಟ ಅಂಗಿಯಿಂದ ಒಂದಷ್ಟು ಹಣವನ್ನು
ಕೈಯಲ್ಲಿ ತೆಗೆದು ಹತ್ತಿರದಲ್ಲೇ ಮಲಗಿದ ಹೆಂಡತಿಯ ಕೈಯಲ್ಲಿರಿಸುತ್ತಾನೆ. ಆಕೆ ಎದ್ದು ಕುಳಿತು ಎಲ್ಲಾ ಉಂಟಲ್ಲಾ? ಎಂದು ಮುಲುಗುಟ್ಟುತ್ತಾ ಆ ಹಣವನ್ನು ಕುಪ್ಪುಸದಲ್ಲಿ ಬಚ್ಚಿಡಲು ನೋಡುತ್ತಾಳೆ. ಅಷ್ಟೇ. ಕ್ಷಣದಲ್ಲಿ ಇಬ್ಬರಿಗೂ ತಾವು ಮಾಡಿದ ತಪ್ಪು
ಏನೆಂದು ಅರಿವಾಗುತ್ತಾ ಗಾಬರಿಯಲ್ಲಿ ಪರಸ್ಪರ ನೋಡಿಕೊಳ್ಳುತ್ತಾರೆ.
ಮನುಷ್ಯ ಸಂಬಂಧಗಳೇ ಹೀಗೆ. ಮನುಷ್ಯ ಅದರ
ಸಂಕೀರ್ಣತೆಯನ್ನು ವಿಶ್ವಾಸದ ಪರಿಧಿಯನ್ನು ಅರ್ಥ ಮಾಡಿಕೊಳ್ಳದೆ ಯಾವೂದೋ ಭಾವನೆಯಲ್ಲಿ
ಮರೀಚಿಕೆಯನ್ನು ಹಿಂಬಾಲಿಸುತ್ತಾನೆ. ಸಂಬಂಧಗಳ
ಅತೀ ಸೂಕ್ಷ್ಮ ಅಂತರಾಳದ ಅರ್ಥ ತಿಳಿಯದೇ ಇನ್ನೇಲ್ಲೋ ಅಲೆಯುತ್ತಾನೆ.
ನೋಡುವುದಕ್ಕೆ
ಇದು ಹಾಸ್ಯ ಸನ್ನಿವೇಶ, ಒಂದಿಷ್ಟು ಅಶ್ಲೀಲತೆ ಹೀಗೆ ಇನ್ನೇನೋ ಹೇಳಿ ಇದನ್ನು ತಳ್ಳಿ ಹಾಕಬಹುದು.
ಆದರೆ ಮನುಷ್ಯ ಸಂಬಂಧಗಳು ಸಂಕೀರ್ಣವಾಗುತ್ತಾ ಶೂನ್ಯತೆಯತ್ತ ಸಂಚರಿಸುವುದು ನೋಡುವಾಗ ಗಂಭೀರ
ಚಿಂತನೆ ಮೊಳಕೆಯೊಡೆಯುತ್ತದೆ. ಸಂಬಂಧಗಳು
ಮನುಷ್ಯನ ಹುಟ್ಟಿನಿಂದ ನಂತರ ಅರ್ಥಕಂಡುಕೊಂಡು ಬೆಸೆಯಲ್ಪಡುತ್ತವೆ. ಮಾನಸಿಕ ಭಾವನೆಗಳನ್ನು
ಹೊಂದಿಕೊಂಡು ಇದು ಗಾಢವಾಗುತ್ತ ಹೋಗುತ್ತದೆ. ಸಂಬಂಧಗಳಲ್ಲಿ ಮೊದಲ ಸಂಬಂಧ ಬೆಸೆಯಲ್ಪಡುವುದು ತಾಯಿಯೊಂದಿಗಿನ
ಕರುಳ ಸಂಬಂಧ. ತಾಯಿ ಮಕ್ಕಳ ಸಂಬಂಧ ಅದು ಹುಟ್ಟಿನಿಂದ ಬಂದರೂ ನಂತರವೂ ಸಮಾನಾಂತರ ಸಂಬಂಧಗಳು
ನೆಲೆನಿಲ್ಲುವುದುಂಟು. ಎಲ್ಲವೂ ದೇಹದೊಂದಿಗೆ ಹುಟ್ಟಿಕೊಂಡ ಸಂಬಂಧಗಳು ದೇಹದೊಂದಿಗೆ ಅಂತ್ಯ ಕಂಡು
ಕೊಂಡು ಮಧ್ಯೆ ಒಂದಷ್ಟು ಬದುಕಿಗೆ ಅರ್ಥವನ್ನು ಕಲ್ಪಿಸುತ್ತವೆ. ಹೀಗೆ ಇರುವ ಸಂಬಂಧದ ಬಗೆಗಿನ
ಒಂದು ಕಥೆಯೇ ಈ ಲೇಖನ. ಮೇಲೆ ಹೇಳಿದಂತೆ ಇದೊಂದು
ಸತ್ಯಕಥೆಯಾಗಿರುವುದು ಬಹಳ ದೊಡ್ಡ ವಿಪರ್ಯಾಸ
ಆಕೆ
ಕುಟುಂಬದ ಅತ್ಯಂತ ಹಿರಿತಲೆಯ ವ್ಯಕ್ತಿ. ಈ
ಪಾತ್ರಕ್ಕೊಂದು ಹೆಸರು ಕಾಲ್ಪನಿಕ ಹೆಸರು
ಕಲ್ಪಿಸುವಾಗ ’ಗಂಗಮ್ಮ’ ಎಂದು ಮೊದಲು ಸ್ಮೃತಿ
ಪಟಲದಲ್ಲಿ ಅಮರಿಕೊಳ್ಳುತ್ತದೆ. ನನಗೇಕೋ ಹೆಣ್ಣು ಪಾತ್ರದ ಬಗ್ಗೆ ಹೆಸರು ಕಲ್ಪಿಸುವಾಗ ಪವಿತ್ರ
ಗಂಗೆಯ ಹೆಸರೇ ಮೊದಲಿಗೆ ಬರುವುದು. ಗಂಡು ಹೊರಗೆ ಅದೆಷ್ಟೊ ಅಪರಾಧಗಳನ್ನು ಮಾಡಿ ಮನೆಯೊಳಗೆ ಬಂದಾಗ
ಕ್ಷಮಯಾ ಧರಿತ್ರಿಯಂತೆ ಹತ್ತಿರ ಸೆಳೆದುಕೊಂಡು ಅಪರಾಧಗಳಿಗೆ ವಿಮೋಚನೆಯನ್ನು ಸೂಚಿಸುತ್ತಾಳೆ. ಅದು ತಾಯಿಯಾಗಿಯೋ
ಸತಿಯಾಗಿಯೋ ಮಗಳಾಗಿಯೋ ಪಾತ್ರಗಳು ಹಲವು ಆದರೆ ಕ್ರಿಯೆ ಒಂದೇ ಆಗಿರುತ್ತದೆ.
ಹಲವು
ಸಂಸಾರಗಳಲ್ಲಿ ಹೀಗೆ ಒಂದೊಂದು ಹಿರಿಯ
ವ್ಯಕ್ತಿತ್ವ ಇರುತ್ತದೆ. ಗುರಿ ಸಾಧನೆ ಅವರ ಬದುಕಿನ ದಾರಿಯಲ್ಲಿಲ್ಲ. ಆದರೆ ಸಾಧಿಸಬೇಕೆಂಬ
ಯಾವುದೇ ನಿರ್ದಿಷ್ಟ ಗುರಿ ಇಲ್ಲದೇ ಇದ್ದರೂ
ತಮ್ಮ ಸಾಧನೆಯಲ್ಲಿ ಗುರಿಯೊಂದು ಸಿದ್ದವಾಗಿಸುತ್ತಾರೆ. ಆ ಗುರಿಯೇ ಸಂಸಾರದಲ್ಲಿ ಇತರರಿಗೆ
ದಾರಿದೀಪವಾಗಿರುತ್ತದೆ. ಸಾಧಿಸಬೇಕು ಎಂಬ ಗುರಿಗಿಂತಲೂ ಬದುಕಿನ ದಾರಿಯಲ್ಲಿ ಸಾಗುವುದೇ
ದುಸ್ಸಾಹಸವಾಗಿಬಿಡುತ್ತದೆ. ಗಂಗಮ್ಮನ ವ್ಯಕ್ತಿತ್ವ ಈ ಮಾದರಿಯಲ್ಲಿ ರೂಪುಗೊಳ್ಳುತ್ತದೆ.
ಗಂಗಮ್ಮ
ಹುಟ್ಟಿ ಬೆಳೆದದ್ದು ಬಡ ಬ್ರಾಹ್ಮಣನ ಮಗಳಾಗಿ.
ಈಕೆಯಂತೆ ತಂದೆಗೆ ಹಲವು ಮಕ್ಕಳಿದ್ದರು. ಅಣ್ಣ ತಮ್ಮ ಅಕ್ಕ ತಂಗಿ. ಹೀಗೆ ಕುಟುಂಬ
ದೊಡ್ಡದೆ. ಆ ಕಾಲದಲ್ಲಿ ಇದು ಸಾಮಾನ್ಯ. ಬಡತನದಲ್ಲಿ ಮಕ್ಕಳ ಹೊಟ್ಟೆ ಹೊರೆಯುವುದೇ
ಕಷ್ಟವಾಗಿರುವಾಗ ಇನ್ನು ಹೆಣ್ಣು ಮಕ್ಕಳಿಗೆ ಮದುವೆ ಹೇಗೆ?
ಮದುವೆಯ ಕನಸನ್ನು ಕಾಣೂವುದೂ ದುಸ್ಸಾಹಸ. ಆಗ ಗೋವ ಎಂದರೆ ಬ್ರಾಹ್ಮಣ ಹೆಣ್ಣುಮಕ್ಕಳಿಗೆ ಗಲ್ಪ್ ರಾಜ್ಯ ವಿದ್ದಂತೆ.
ಅದೇಕೋ ಅಲ್ಲಿ ಪುರೋಹಿತರಿಗೆ ಹೆಣ್ಣು
ಸಿಗುವುದು ದುರ್ಲಭ. ಆಗ ಅವರ ಕಣ್ಣು ಹಾಯುವುದು
ಇಲ್ಲಿಗೆ. ಗಂಗಮ್ಮನಂತಹ ಬಡ ಸಂಸಾರಗಳ ಹೆಣ್ಣುಗಳು ಪುರೋಹಿತರ ಮನೆಬೆಳೆಗುವ ಕಾಯಕಕ್ಕೆ ನೆರವಾಗುತ್ತವೆ. ಅದೇ ರೀತಿ ಗಂಗಮ್ಮನ
ಮದುವೆಯು ಪುರೋಹಿರೊಬ್ಬರೊಂದಿಗೆ ಧಾರ್ಮಿಕವಾಗಿ ನೆರವೇರಿಬಿಡುತ್ತದೆ. ಬಡತನದಲ್ಲಿ ಬೆಂದು ಹೋದ
ಹೆಣ್ಣು ಸುಂದರವಾಗಿಯೇ ಸಂಸಾರ ಆರಂಭಿಸುತ್ತಾಳೆ. ಬಡತನದ ಬೇಗೆ ಕಡಿಮೆಯಾಗಿ ಮೈಯಲ್ಲಿ ಚರ್ಮದ
ಜತೆಗೆ ಚಿನ್ನ ಬಣ್ಣ ಎಲ್ಲ ತುಂಬಿಕೊಳ್ಳುತ್ತದೆ. ಗೋವದಲ್ಲಿ ಪುರೋಹಿತರಿಗೆ ಸಾಕಷ್ಟು ಯಥೇಚ್ಛ
ಸಂಪಾದನೆ ಇರುವುದೇ ಇದಕ್ಕೆ ಕಾರಣ.
ಗಂಗಮ್ಮನ
ಅನುಕೂಲತೆ ಕಂಡು ಊರಲ್ಲಿ ಹಲವರು ಇಲ್ಲಿನ ಪುರೋಹಿತರ ಜಾತಕಕ್ಕೆ ಒತ್ತಾಸೆಯಾಗುತ್ತಾರೆ. ಇಲ್ಲಿಯೂ
ಗಂಗಮ್ಮ ಉದಾರಿಯಾಗಿ ವ್ಯವಹರಿಸುತ್ತಾಳೆ. ತನ್ನ ಸಂಬಂಧಿಗಳ, ಹಿತೈಷಿಗಳ ಹೆಣ್ಣು ಮಕ್ಕಳಿಗೆ ಅಲ್ಲಿ
ಬದುಕು ಕಟ್ಟಿಕೊಡುವ ಸತ್ಕಾರ್ಯಕ್ಕೆ ಮುಂದಾಗುತ್ತಾಳೆ. ಇದರಲ್ಲಿ ವೈಯಕ್ತಿಕ ಲಾಭವೇನೂ
ಇರುವುದಿಲ್ಲ. ಇಲ್ಲಿಯ ಬಡತನದ ಅನುಭವ ಒಂದೇ ಈ ಮಹತ್ಕಾರ್ಯಕ್ಕೆ ನಿಮಿತ್ತವಾಗುತ್ತದೆ.
ಈ
ಕನ್ಯಾಮಣಿಗಳ ಮದುವೆಯೊಂದಿಗೆ ಹಲವು ಸಲ ಹಲವು ಸಮಸ್ಯೆಗಳಿಗೂ ಗಂಗಮ್ಮ ತಲೆಕೊಡುವುದು
ಅನಿವಾರ್ಯವಾಗುತ್ತದೆ. ಒಂದೇ ಕೈ ಯ ಬೆರಳೂ ವಿವಿಧ ಗಾತ್ರವಾಗಿರುವ ಈ ಸೃಷ್ಟಿಯಲ್ಲಿ ಎಲ್ಲರೂ ಒಂದೇ ತರನಾಗಿ
ಇರುವುದಕ್ಕೆ ಸಾಧ್ಯವೆ? ಹಾಗಾಗಿ ಹಲವು ಸಲ ತಂದ ಹೆಣ್ಣು ಮಕ್ಕಳಿಗೆ ಜೀವನಾಧಾರವನ್ನು ಕಲ್ಪಿಸುವ
ಜವಾಬ್ದಾರಿಯೂ ಗಂಗಮ್ಮನ ಹೆಗಲ ಮೇಲೆರುತ್ತದೆ. ಒಂದೆರಡು ಹೆಣ್ಣುಗಳು ಮದುವೆಯಾದ ನಂತರ
ಮಗುವಾಗುತ್ತಿದ್ದಂತೆ ಹಲವು ಕಾರಣಗಳಿಂದ ಗಂಡನ ಮನೆಯಿಂದ ತಳ್ಳಲ್ಪಡುತ್ತಾರೆ. ಅಂತಹ ಹಲವು ಹೆಣ್ಣು
ಮಕ್ಕಳನ್ನು ಬೀದಿಗೆ ಬೀಳದಂತೆ ಬೆಂಗಾವಲಾಗಿ ಗಂಗಮ್ಮ ಹೆಗಲು ಕೊಡುತ್ತಾಳೆ. ಜೀವನದ ಮಾರ್ಗ
ಕಲ್ಪಿಸುತ್ತಾಳೆ. ಮನೆಯಿಲ್ಲದೇ ಯಾರದೋ ಮನೆಯಲ್ಲಿ ಆಳಾಗಿ ದುಡಿಯುವ ಪ್ರಮೇಯ ಬಂದಾಗ ಅವರ
ಮಕ್ಕಳನ್ನು ಮನೆಗೆ ತಂದು ಸಲಹುತ್ತಾಳೆ. ತನ್ನ ಮಕ್ಕಳಲ್ಲಿ ಒಬ್ಬರಾಗಿ ಅವರನ್ನು
ಪೋಷಿಸುತ್ತಾಳೆ. ಹೀಗೆ ಯಾರದೊ ಮಕ್ಕಳಿಗೆ “ಆಯೀ....ಮೌಶಿ ...ನಾನೀ..” ಆಗಿಬಿಡುವ ಗಂಗಮ್ಮ, ಆ
ಪುಟ್ಟ ಮಕ್ಕಳಿಗೆ ಹೆತ್ತತಾಯಿಗಿಂತಲೂ ಹತ್ತಿರವಾಗಿ ಅನಿವಾರ್ಯವಾಗುತ್ತಾಳೆ. ಸಹಜವಾಗಿ ಆಕೆಯ ಕೈಯ ಆರೈಕೆಯಲ್ಲಿ ಬೆಳೆದ ಮಕ್ಕಳು ಅಮ್ಮನ
ಮಾತಿಗಿಂತಲೂ ಈ “ಆಯೀ” ಮಾತಿಗೆ ಹೆಚ್ಚು ಬೆಲೆಗೊಡುತ್ತಾರೆ. ಸಲುಗೆಯಿಂದ ಕಾಣುತ್ತಾರೆ. ಇದಕ್ಕೆ
ಯಾರ ಆಕ್ಷೇಪವೂ ಇಲ್ಲ. ಯಾಕಂದರೆ ಗಂಗಮ್ಮನಿಂದ ಉಂಡವರೇ ಹೆಚ್ಚು.
ಹೀಗೆ
ತನ್ನ ಆರೈಕೆಯಲ್ಲಿ ಬೆಳೆದ ಮಕ್ಕಳು ದೊಡ್ದವರಾಗುತ್ತಾರೆ. ಕೆಲವರಂತೂ ದೊಡ್ಡ ಆಫೀಸರ್ ಗಳಾಗಿ
ಕಾರಲ್ಲಿ ಭುರ್ರೋ ಎಂದು ಬರುವಾಗ ಗಂಗಮ್ಮನ ಕಣ್ಣು ಅರಳುತ್ತದೆ. ಮಕ್ಕಳಿಗೆ ಮಕ್ಕಳಾಗಿ ಗಂಗಮ್ಮ
ಹಿರಿಯಜ್ಜಿಯಾಗಿ ಸಂಸಾರದ ಹಿರಿಯ ಪೀಠವನ್ನು ಅಲಂಕರಿಸಿಯಾಗುತ್ತದೆ. ಇದರ ಜತೆಯಲ್ಲಿ ತನ್ನ ಸಂಸಾರವನ್ನು ಬೆಳೆಸಿಯಾಗಿರುತ್ತದೆ. ತನ್ನ ಮಗಳು
ಮಗಂದಿರು ಅವರ ಮಕ್ಕಳು ಹೀಗೆ ಗಂಗಮ್ಮನಿಗೆ ಮಗುವನ್ನು ಸಾಕುವುದು ಎಂದರೆ ಜನ್ಮ ಪರ್ಯಂತದ ಕಾಯಕವಾಗುತ್ತದೆ.
ಅದರಲ್ಲೆ ಗಂಗಮ್ಮನಿಗೆ ಸಂತೃಪ್ತಿ. ಆರಂಭದಲ್ಲಿ
ಹಿರಿಯಮ್ಮನ್ನ ಸ್ಥಾನ ಕೊನೆಯಲ್ಲಿ ಹಿರಿಯಜ್ಜಿಯ ಸ್ಥಾನ. ಎಲ್ಲದರಲ್ಲೂ ಗಂಗಮ್ಮ ತನ್ನ
ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾಳೆ.
ಹೀಗೆ
ಎಲ್ಲರ ಸಂಸಾರದ ಬೇರಾಗಿ ಆ ಬೇರು ಬೆಳೆದು ಬಿಳಲಾಗಿ ಗಂಗಮ್ಮನಿಗೆ ವೃದ್ದಾಪ್ಯ ಅಮರಿಕೊಂಡು
ಬಿಡುತ್ತದೆ. ಮೊದಲಿನಂತೆ ದೇಹದಲ್ಲಿ ಚೈತನ್ಯ ವಿಲ್ಲದೇ ಇದ್ದರೂ ಗಂಗಮ್ಮ ಸುಧಾರಿಸುವ ಕೆಲಸಕ್ಕೆ
ಎಲ್ಲ ಹೆಣ್ಣು ಮಕ್ಕಳೂ ಬೆರಗಾಗಬೇಕು. ವೃದ್ದಾಪ್ಯದ ಸಹಜತೆಯಂತೆ ರಕ್ತದ ಒತ್ತಡ ಸಕ್ಕರೆ ಖಾಯಿಲೆ
ಗಂಗಮ್ಮನನ್ನು ಕಾಡುತ್ತವೆ. ಅದಕ್ಕಾಗಿ ಚಿಕಿತ್ಸೆ ತೆಗೆದುಕೊಳ್ಳುವಾಗ ಗಂಗಮ್ಮನಿಗೆ
ಅನ್ನಿಸುವುದುಂಟು ಈ ಮಕ್ಕಳ ಪೋಷಣೆಯಲ್ಲಿ ತನ್ನನ್ನು ನಾನು ಮರೆತೆನೇ ಎಂದು.
ಹೀಗೆ
ಬೆಳೆದು ನಿಂತ ಸಂಸಾರವೃಕ್ಷ ಕಾಣುವಾಗ ಗಂಗಮ್ಮ ಸಂತಸ ಪಡುತ್ತಾಳೆ. ಬಾಲ್ಯದ ಕಡು ಬಡತನ
ನೆನಪಾಗುತ್ತದೆ. ಅಲ್ಲಿಂದ ಇಲ್ಲಿವರೆಗೆ ಸಾಗಿಬಂದ ಬದುಕನ್ನು ಹಿಂತಿರುಗಿ ನೋಡುತ್ತಾಳೆ. ಹೀಗಿರುವಾಗಲೇ
ಒಂದು ಬರಸಿಡಿಲು ಗಂಗಮ್ಮನ ತಾಯಿಬೇರನ್ನೇ ಅಲುಗಾಡಿಸಿಬಿಡುತ್ತದೆ. ಭದ್ರವಾಗಿ ಆಳಕ್ಕೆ ಇಳಿದ
ಬೇರಿಗೂ ಅಭದ್ರತೆಯ ಬಿಸಿ ತಟ್ಟುತ್ತದೆ.
ಅದೊಂದು ದಿನ ಯಾವೂದೋ ಚಿಕಿತ್ಸೆಗಾಗಿ ರಕ್ತ ಪರೀಕ್ಷೆಗೆ
ರಕ್ತ ನೀಡಿ ಗಂಗಮ್ಮ ಮನೆಗೆ ಬರುತ್ತಾಳೆ. ಅದರ ಮರುದಿನ ಮಗ ರಿಪೋರ್ಟ್ ತಂದು ಸೊಸೆಯೊಂದಿಗೆ ಗುಸು
ಗುಸು ಮಾತನಾಡುತ್ತಿರುವುದು ಗಮನಕ್ಕೆ ಬರುತ್ತದೆ. ಗಂಗಮ್ಮ ಗಂಭೀರವಾಗಿ ಯೋಚಿಸಲಿಲ್ಲ. ಆದರೆ ಆಕೆ
ಗಂಭೀರವಾಗುವ ಘಳಿಗೆ ಅದಾಗಲೇ ಬಂದಿತ್ತು. ಕೊನೆಯಲ್ಲಿ ಮಗ ಬಂದು ಭಾರವಾದ ಧ್ವನಿಯಲ್ಲಿ
ಉಸುರುತ್ತಾನೆ. ಹೆಚ್ ಐ ವಿ ಪಾಸಿಟಿವ್ ಇದೆ. ಗಂಗಮ್ಮನಿಗೆ ಹಾಗಂದರೆ ಏನೆಂದು ಮೊದಲು ತಿಳಿದೇ
ಇರಲಿಲ್ಲ. ಅದೊಂದು ಮಾರಕ ರೋಗದ ಚಿಹ್ನೆಯೆಂದು ಆನಂತರ ತಿಳಿಯಿತು.
ಅರಂಭದಲ್ಲಿ
ಒಂದು ರೀತಿಯ ನಿರ್ಲಕ್ಷ್ಯದಿಂದಲೇ ಗಂಗಮ್ಮ ಕಂಡಳು. ಬದುಕಿನಲ್ಲಿ ಅನುಭವಿಸುವಂತಹುದೆಲ್ಲ
ಅನುಭವಿಸಿಯಾಗಿದೆ. ಇನ್ನು ಹೋಗುವ ಕಾಲಕ್ಕೆ ಅನುಭವಿಸದೆ ವಿಧಿಯಿಲ್ಲ. ಬಂದದ್ದನ್ನು ಎದುರಿಸುವ
ಧೈರ್ಯದಲ್ಲೇ ಇದ್ದಳು. ತಾನು ಆತ್ಮ ಸ್ಥೈರ್ಯ ತಂದುಕೊಂಡರೂ ತನ್ನ ಮನೋಬಲವನ್ನು ಹಿಂಡುವ ಘಟನೆಗಳು
ಒಂದೊಂದಾಗಿ ಘಟಿಸಿದಾಗ ಗಂಗಮ್ಮ ಅಧೀರಳಾದಳು.
ಮಗ
ಒಂದು ವೈದ್ಯರ ಸಲಹೆ ಕೇಳಿಬಂದಿದ್ದರೆ, ಸೊಸೆ ಇನ್ನೊಂದು ವೈದ್ಯೆಯ ಸಲಹೆ ಕೇಳಿ ಬಂದಳು. ಒಬ್ಬೊರು
ಒಂದೊಂದು ವೈದ್ಯರ ಸಲಹೆ ತಂದು ಅದನ್ನು ಪ್ರಯೋಗಕ್ಕೆ ತಂದರು. ಎಲ್ಲದರ ಮತಿತಾರ್ಥ
ಒಂದೇ....ಗಂಗಮ್ಮ ಮನೆ ಮಂದಿಗೆ ಅಸ್ಪೃಶ್ಯಳಾಗಿಬಿಟ್ಟಳು. ಇದು ಕೇವಲ ಒಂದು ದಿನದೊಳಗೆ ನಡೆದಾಗ
ಗಂಗಮ್ಮನ ಮುಂದೆ ಬರೀ ಕತ್ತಲು ಹಬ್ಬಿದ ಅನುಭವ. ಆದರೂ ಮಗಳ ಮನೆಯಿದೆಯಲ್ಲವ ಎಂಬ ಒಂದು ಆಶಾಕಿರಣ.
ಮಗನೂ ಮೆಲ್ಲನೆ ಮಗಳ ಮನೆಗೆ ಸಾಗ ಹಾಕಿದ.
ಆದರೆ ಮಗಳ
ಮನೆಯಲ್ಲಿ ಒಂದು ರೀತಿಯ ಸಮಾಧಾನಕರ ವಾತಾವರಣ. ಎಷ್ಟೆಂದರೂ ನನ್ನಂತೆ ಹೆಣ್ಣು, ಮೇಲಾಗಿ ನನ್ನ
ಮಗಳು. ನನ್ನ ಖಾಸಗೀತನದಿಂದ ಹಿಡಿದು ಎಲ್ಲವನ್ನು ಬಲ್ಲವಳು ಆಕೆ. ಗಂಗಮ್ಮ ತುಸು ಸಮಾಧಾನ
ಹೊಂದಿದಳು. ಆದರೆ ಅದು ಕೇವಲ ಒಂದು ರಾತ್ರಿ ಕಳೆಯುವಲ್ಲಿಗೆ ಸೀಮಿತವಾಯಿತು.
ಮುಂಜಾನೆ ಎಲ್ಲರೂ
ಏಳುವ ಮೊದಲು ವಾಡಿಕೆಯಂತೆ ನಿದ್ದೆ ಬಿಟ್ಟು ಏಳುತ್ತಾಳೆ. ಅದು ಹಳೆಯ ಮನೆ. ಮನೆಯಿಂದ
ದೂರದಲ್ಲಿರುವ ಬಚ್ಚಲ ಮನೆಗೆ ಹೋಗುವಲ್ಲೇ ಮೊದಲ
ದಿನ ತಾನು ಊಟಮಾಡಿದ ನೀರು ಕುಡಿದ ತಟ್ಟೆ ಲೋಟಗಳು ಪ್ರತ್ಯೇಕವಾಗಿರಿಸಿದ್ದಾಳೆ. ಕಣ್ಣಿಗೆ ಕತ್ತಲು ಕವಿದಂತಾಯಿತು. ಮತ್ತೆ ಒಂದಂಗುಲ
ಕದಲುವ ಮನಸ್ಸಾಗಲಿಲ್ಲ. ಕದಲಿದರೆ....ಅದೂ ಅಪರಾಧವಾಗಿಬಿಟ್ಟರೆ....... ಆ ಘಳಿಗೆಯಿಂದ ಒಂದೊಂದೆ
ನಿಬಂಧನೆಗಳು ಪ್ರಯೋಗಕ್ಕೆ ಬಂದವು. ಸಮಾಧಾನದಲ್ಲಿ ಮಗಳು ಹೇಳಿದರೂ ಅದು ಕರ್ಣ ಕಠೋರದ ದ್ವನಿಯಂತೆ
ಇರಿಯುತ್ತಿತ್ತು. ತನ್ನ ಕೈಯ ಪೋಷಣೆಯಲ್ಲಿ ಬೆಳೆದ ಮೊಮ್ಮಕ್ಕಳು ಹತ್ತಿರ ಬರುವುದಿಲ್ಲ. ಎಲ್ಲರೂ
ಅವ್ಯಕ್ತ ದೂರವನ್ನು ಕಾಯುತ್ತಿರುವಂತೆ ಭಾಸವಾಗುತ್ತಿದ್ದಂತೆ ಮತ್ತದು ವಾಸ್ತವದ ಸತ್ಯವಾಯಿತು.
ಅರ್ಧ ದಿನ
ಕಳೆಯುವಷ್ಟರಲ್ಲಿ ಬದುಕಿನ ಬಹುಪಾಲನ್ನು ಕಳೆದೆನೋ ಅನ್ನಿಸಿತು. ಅದಷ್ಟರಲ್ಲೇ “ ನೀನು ಯಾವಾಗ
ಬರುತ್ತಿ?” ಎಂದು ತನ್ನ ಪ್ರೀತಿಯ ಮಗಳು
ತಮ್ಮನಿಗೆ ಕರೆ ಮಾಡಿ ಕೇಳಿದ್ದಳು ಅದು ಯಾಕೆ
ಎಂದು ಅರ್ಥವಿಸದಷ್ಟು ನಿಗೂಢ ಸತ್ಯವಲ್ಲ. ಸ್ವಾಭಿಮಾನಿಯಾಗಿ ಎಲ್ಲಾದರೂ ಎದ್ದು ಹೋಗಲೇ ಎಂದು
ಯೋಚಿಸಿದರೂ ತನ್ನ ಮಕ್ಕಳನ್ನು ಬಿಟ್ಟು ಹೋಗುವುದರಲ್ಲಿ ಅರ್ಥವಿಲ್ಲ ಎನಿಸಿತು. ತನ್ನ ಮತ್ತು
ಮಕ್ಕಳ ಕರುಳ ಸಂಬಂಧ ಅಷ್ಟಕ್ಕೇ ಸೀಮಿತವಾಗಬಹುದೇ? ಸಾಧ್ಯವಿಲ್ಲ.
ಅದೇ ದಿನ ಬಂದ
ಮಗನೊಡನೆ ಪುನಃ ಮನೆಗೆ ಬಂದಳು. ಆದರೆ ಮನೆಯ ಅಡುಗೇ ಮನೆ ಎಂದು ಕೆಲವು ಕಡೆಗೆ ಹೋಗದಂತೆ ಸೊಸೆ
ನಯವಾಗಿ ಹೇಳಿದಳು. ಎಲ್ಲಿ ಕುಳಿತರೆ ತಪ್ಪು ಎಲ್ಲಿ ನಿಂತರೆ ತೊಂದರೆ ಯೋಚಿಸುವಷ್ಟೂ ಶಕ್ತಿ
ಇಲ್ಲದಂತಹಾ ಪರಿಸ್ಥಿತಿ. ಇದನ್ನೆಲ್ಲ ಮಕ್ಕಳಿಗಾಗಿ ಸಹಿಸಬಹುದೇನೋ ಆದರೆ ಮೊನ್ನೆ ಮೊನ್ನೆ
ಹುಟ್ಟಿದ ಮೊಮ್ಮಗು ದೂರದಲ್ಲೇ ವಿಚಿತ್ರವನ್ನು ನೋಡುವಂತೆ ನಿಂತಿತ್ತು. ತಾಯಿ ಅದಕ್ಕೂ ತರಬೇತಿ
ಕೊಟ್ಟಿದ್ದಳು. ಸೊಸೆ ತನ್ನ ತವರುಮನೆಯ ಹಾಗು ಇತರ ಸಂಬಂಳು ದೂರ ಮಾಡುವ ಬಗ್ಗೆ ಚುಚ್ಚಿ ಮಾತನಾಡ ತೊಡಗಿದಳು.
ಈ ನಡುವೇ ಯಾರೋ
ಸಲಹೆ ಕೊಟ್ಟಿದ್ದರು. ಸ್ಪರ್ಶನ ಬಟ್ಟೆ ಮುಂತಾದವುಗಳಲ್ಲಿ
ಹೆಚ್ ಐ ವಿ
ಹರಡುವುದಿಲ್ಲ. ಅದು ಕೇವಲ ರಕ್ತದಲ್ಲಿ ಮಾತ್ರ ಹರಡುತ್ತದೆ. ಆದರೆ
ಅದನ್ನು ಕೇಳಿ ಸುಮ್ಮನಿರುವ ಧೈರ್ಯ ಯಾರಿಗೂ ಬರಲಿಲ್ಲ. ಇದೇ ರೀತಿ ದಿನವೆರಡು ಕಳೆಯಿತು. ಯಾರಿಗೂ
ಬೇಡವಾದ ಬದುಕು ಬದುಕಿರುವುದರಲ್ಲಿ ಅರ್ಥವೇನಿದೆ ಎಂದು ಹಲವು ಸಲ ಯೋಚಿಸಿದಳು. ಹೀಗೆ ನಂತರ ಒಂದು
ಮಧ್ಯಾಹ್ನ ಆಸ್ಪತ್ರೆಯಿಂದ ಕರೆಬಂತು.
ಮಗನೊಂದಿಗೆ
ಆಸ್ಪತ್ರೆ ಸೇರಿದಾಗ ವೈದ್ಯರು ಹೊಸತೊಂದು ರಿಪೋರ್ಟ್ ಹಿಡಿದು ಕುಳಿತಿದ್ದರು. ಹೆಚ್ ಐ ವಿ
ಪರೀಕ್ಷೆಯಲ್ಲಿ ಮೊದಲು ಪ್ರಾಥಮಿಕ ಪರೀಕ್ಷೆ ಇರುತ್ತದೆ. ಅದನ್ನು ಹೆಚ್ ಐ ವಿ ಎಲಿಸಾ ಎಂದು
ಕರೆಯುತ್ತಾರೆ. ಆನಂತರ ಹೆಚ್ ಐ ವಿ ಇದೆ ಎಂದು ಬಂದರೆ ನಂತರ ಪುನಹ ಮತ್ತೊಂದು ಪರೀಕ್ಷೆಯನ್ನು
ಮಾಡಲಾಗುತ್ತದೆ. ಈಗ ಆ ಪರೀಕ್ಷೆಯ ವರದಿ ವೈದ್ಯರ ಕೈಯಲ್ಲಿತ್ತು. ವಿಚಿತ್ರವೆಂದರೆ ಅದರಲ್ಲಿ ಹೆಚ್
ಐ ವಿ ನೆಗೆಟಿವ್ ಎಂದು ಬಂದಿತ್ತು. ಮಾತ್ರವಲ್ಲ ಎಲ್ಲವೂ ನಾರ್ಮಲ್ ಎಂದು ಬಂದಿತ್ತು. ಗಂಗಮ್ಮನಿಗೆ ಭಾವನೆ ನಿಯಂತ್ರಿಸುವುದಕ್ಕೆ
ಸಾಧ್ಯವಾಗಲಿಲ್ಲ. ಬರುವ ದುಃಖದಲ್ಲಿ ಕಪಾಳಕ್ಕೆ ಹೊಡೆದು ಬಿಡುವಷ್ಟು ಉದ್ವೇಗ ಉಂಟಾದರೂ ತಡೆ
ಹಿಡಿದಳು. ವೈದ್ಯರ ಕೊಠಡಿಯಿಂದ ಹೊರಬಂದವಳೆ ಆಸ್ಪತ್ರೆಯ ಹೊರಬಂದು ಆಕಾಶ ನೋಡುತ್ತ ನಿಂತು
ಬಿಟ್ಟಳು. ಈ ಎರಡು ದಿನದಲ್ಲಿ ಅದೆಂತಹಾ ಘಳಿಗೆಗಳನ್ನು ಕಂಡಿದ್ದಳು. ಯಾರಿಗೆಲ್ಲ ತನ್ನ ರಕ್ತ
ಮಾಂಸ ಹಂಚಿ ಬೆಳೆಸಿದ್ದೆನೋ ಅವರು ಸತ್ವ ಪರೀಕ್ಷೆಯಲ್ಲಿ ಬೆತ್ತಲಾಗಿ ಹೋಗಿದ್ದರು. ಆದರೂ ಏನೂ ಮಾಡಲಾಗದ ಬಂಧನ ಆಕೆಗಿದೆ. ಇಷ್ಟೆಲ್ಲ
ಅವಗಣಿಸಲ್ಪಟ್ಟರೂ ಈಗ ಅವರ ಜತೆಗೇ ಬದುಕುವ ಅನಿವಾರ್ಯತೆ ಆಕೆಯದ್ದು. ಮಾರಕ ರೋಗ ತನಗಿಲ್ಲ ಎಂಬ
ಸಂತೋಷವೇ ಆ ಅನಿವಾರ್ಯತೆಯನ್ನು ಎದುರಿಸುವ
ಬಲವನ್ನು ಕೊಟ್ಟಿತು.
ಕಟು
ಸತ್ಯದ ಈ ಕಥೆಯನ್ನು ಯಾವುದೇ ರಂಜನೆಗಾಗಿ ಹೇಳಿರುವುದಲ್ಲ. ಮನುಷ್ಯ ತಾನು ಬದುಕಿರುವಾಗ ಬಂಧು ಬಳಗ
ಎಂದು ಒಂದು ಕಾಲ್ಪನಿಕ ಭದ್ರತೆಯಲ್ಲಿರುತ್ತಾನೆ. ಆದರೆ ಆ ಭದ್ರತೆ ಅದೆಷ್ಟು ಕ್ಷುಲ್ಲಕ
ಎಂದನಿಸುವುದಕ್ಕೆ ಈ ಕಥೆ ಸಾಕು. ಮನುಷ್ಯ ಸಂಭಂಧದ ಮಿಥ್ಯೆಯಲ್ಲೇ ಬದುಕುತ್ತಾನೆ. ದೇಹದೊಂದಿಗೆ
ಅಂತ್ಯವಾಗುವ ಜಗದ ಈ ಸಂಬಂಧಗಳಿಂದ
ಬಂಧಿಸಲ್ಪಡುತ್ತಾನೆ. ತಂದೆ ತಾಯಿ ಗಂಡ ಹೆಂಡತಿ ಮಕ್ಕಳು ಹೀಗೆ ಸಂಭಂಧಗಳ ಮೂಲ ತತ್ವ ಏನು? ಅದನ್ನು
ತಿಳಿಯದೇ ಯಾವೂದೋ ಸಾಧನೆಗಾಗಿ ಇನ್ನೇಲ್ಲೋ ಅಲೆಯುತ್ತಿರುತ್ತಾನೆ. ಸಂಭಂಧಗಳ ಮೂಲ ಭಾವನೆ
ಅರ್ಥವಾಗುವಾಗ ನಾವು ದ್ವೇಷ ಅಸೂಯೆಯಿಂದ ನಾವಾಗಿಯೇ ದೂರ ಹೋಗಿಬಿಡುತ್ತೇವೆ. ನಾನು ನನ್ನದು ಬಂಧು
ಬಳಗ ಎಂದು ತಿಳಿಯುವಲ್ಲಿ ಕಟು ಸತ್ಯ ವನ್ನು ಮರೆತುಬಿಡುತ್ತೇವೆ. ಇಲ್ಲಿ ಮನುಷ್ಯನ ಸ್ಥಾನ ಏನು
ಎಂದು ತಿಳಿಯುವುದಕ್ಕಾಗಿ ಮಾತ್ರ ಈ ಕಥೆ ಕಥೆಯಾಗಲಿ ಎಂಬುದೊಂದೇ ಆಶಯ.
ಸ್ಥಿತ
ಪ್ರಜ್ಜತೆ ನಾವು ಕಲಿಯದಿದ್ದರೆ ಪರಿಸ್ಥಿತಿ ತಾನಾಗಿ ಕಲಿಸುತ್ತದೆ. ಆವಾಗ ಸಮಯ ಮಾತ್ರ
ಮೀರಿಹೋಗಿರುತ್ತದೆ. ಈ ಸಂಕೀರ್ಣತೆ ಅರ್ಥವಾದಲ್ಲಿ
ಈ ಕಥೆ ಸಾರ್ಥಕವಾದಂತೆ.